ಲೋಕೋಪಕಾರಿಯ ಪಾತ್ರದಲ್ಲಿ ಲೋಹದ ಹಕ್ಕಿ

Date: 16-09-2021

Location: ಬೆಂಗಳೂರು


ಮೂಲತಃ ಉಡುಪಿ ಜಿಲ್ಲೆಯ ಮರವಂತೆಯವರಾದ ಯೋಗೀಂದ್ರ ಮರವಂತೆ ಅವರು ಇಂಗ್ಲೆಂಡ್‌ನ ಬ್ರಿಸ್ಟಲ್‌ ನಗರದಲ್ಲಿ ‘ಏರ್‌ ಬಸ್’ ವಿಮಾನ ಕಂಪನಿ’ಯಲ್ಲಿ ವಿಮಾನಶಾಸ್ತ್ರ ತಂತ್ರಜ್ಞರು. ಅವರು ತಮ್ಮ ಏರೋ ಪುರಾಣ ಅಂಕಣದಲ್ಲಿ ಈ ಬಾರಿ ಲೋಕೋಪಕಾರಿಯಲ್ಲಿ ಬಳಕೆಯಾಗುವ ವಿಮಾನಗಳ ಕುರಿತು ವಿಶ್ಲೇಷಿಸಿದ್ದಾರೆ.

ವಿಮಾನವೊಂದರ ಫೋಟೋ, ಪತ್ರಿಕೆಯ ಮುಖಪುಟದಲ್ಲೋ ವಾರ್ತೆಯ ಮುಖ್ಯಾಂಶದಲ್ಲೋ ಕಾಣಿಸಿದರೆ ನಡೆಯಬಾರದ ಸಂಗತಿ ನಡೆದಿದೆ ಎಂದು ಅರ್ಥ. ಮತ್ತೆ ಆ ಸಂಗತಿ, ವಿಮಾನವೊಂದು ದುರಾದೃಷ್ಟವಷಾತ್ ಅಪಘಾತವಾದ ಅಥವಾ ಹಾರಾಟದ ನಡುವೆ ಕಾಣೆಯಾದಂತಹ ಕಳವಳಕಾರಿ ಘಟನೆ ಆಗಿರುವ ಸಾಧ್ಯತೆಯೇ ಹೆಚ್ಚು. ಇನ್ನು ಕಾಲಕಾಲಕ್ಕೆ "ಹೊಸತಲೆಮಾರಿನ" ಅಥವಾ "ಕ್ರಾಂತಿಕಾರಕ" ಎಂದು ಕರೆಯಲ್ಪಡುವ ವಿಮಾನಗಳು ವಿಮಾನ ಸಂತತಿಯಲ್ಲಿ ಹುಟ್ಟುವ ವಿನ್ಯಾಸಗೊಳ್ಳುವ ಹಂತದಲ್ಲೂ ಎಲ್ಲ ಕಡೆ ಚರ್ಚೆ ಆಗುವುದು ಇದೆ, ಆದರೆ ಅಂತಹ ಸುದ್ದಿಗಳು ದೇಶದ ಪ್ರಮುಖ ಪತ್ರಿಕೆಗಳ ಮುಖಪುಟದಲ್ಲಿ ಮತ್ತೆ ಮತ್ತೆ ಜಾಗ ಪಡೆಯುವ ಸಾಧ್ಯತೆ ಇಲ್ಲ. ಕಳೆದ ಆಗಸ್ಟ್ ತಿಂಗಳ ಮಧ್ಯದಿಂದ ಕೊನೆಯವರೆಗೂ ಜಗತ್ತಿನಾದ್ಯಂತ ಮುದ್ರಣ ಪತ್ರಿಕೆಗಳಲ್ಲಿ, ಸಾಮಾಜಿಕ ಮಾಧ್ಯಮಗಳಲ್ಲಿ ವಿಮಾನದ ಒಳಗಿನ ಹೊರಗಿನ ಚಿತ್ರಗಳು ನಿರಂತರವಾಗಿ ಕಾಣಿಸಿಕೊಂಡಿವೆ. ನಿಲ್ದಾಣದ "ರನ್ ವೆ" ಅಲ್ಲಿ ಓಡುತ್ತಿರುವ ಒಂಟಿ ವಿಮಾನ ಮತ್ತು ಅದನ್ನು ಸುತ್ತುವರಿದು ಜೊತೆಗೇ ಓಡುತ್ತಿರುವ, ಹತ್ತುವ ತರಾತುರಿಯಲ್ಲಿರುವ ಸಾವಿರಾರು ಜನರು, ಇನ್ನು ವಿಮಾನದ ಒಳನೋಟದ ಚಿತ್ರದಲ್ಲಿ ಮಿಸುಕಾಡಲೂ ಸ್ಥಳ ಇರದಂತೆ ಕಿಕ್ಕಿರಿದು ತುಂಬಿರುವ, ಸರಿಯಾದ ಆಸನ ವ್ಯವಸ್ಥೆ ಇಲ್ಲದೆ ಕುಳಿತ ಹಲವು ನೂರು ಅಸಹಾಯಕ ಯಾತ್ರಿಗಳು, ಹಾರುವ ಹಂತದಲ್ಲಿರುವ ವಿಮಾನದ ರೆಕ್ಕೆಯನ್ನು ಯಾರೋ ಏರಿದ್ದು ಉದುರಿ ಬಿದ್ದುದು ಹೀಗೆ ವಿಮಾನಗಳ ಮಟ್ಟಿಗೆ ತೀರಾ ಅಪರೂಪ ಎನಿಸುವ ಘಟನಾವಳಿಗಳ ಕುರಿತಾದ ಸುದ್ದಿಚಿತ್ರ ಅದು. ವಿಮಾನವೊಂದು ಇಂತಹ ಸಂದಿಗ್ಧ ಸನ್ನಿವೇಶದಲ್ಲಿ ಭಾಗವಹಿಸಬೇಕಾಗುವುದು ನಿತ್ಯ ನಡೆಯುವ ಸಾಮಾನ್ಯ ವಿಷಯ ಅಲ್ಲ. ಹೀಗೆ ನಾವು ಕಂಡ ಆ ಎಲ್ಲ ಚಿತ್ರಗಳು ಯಾರೂ ಊಹಿಸುವಂತೆ ಇತ್ತೀಚಿಗೆ ಕಾಬೂಲಿನ ವಿಮಾನ ನಿಲ್ದಾಣದಿಂದ ಜಗತ್ತಿನ ದಿಕ್ಕು ದೆಸೆಗಳಿಗೆ ಆಶ್ರಯ ರಕ್ಷಣೆ ಅರಸಿ ಹೊರಟವರದ್ದು, ಮತ್ತು ಅವರೆಲ್ಲರ ಆಸೆ ಕಾತರ ಭರವಸೆಗಳ ಭಾರ ಹೊರುವ ಪ್ರಯತ್ನ ಮಾಡಿದ ವಿಮಾನಗಳದ್ದು.

ಕಾಬೂಲ್ ವಿಮಾನ ನಿಲ್ದಾಣದಿಂದ ಆಗಸ್ಟ್ ತಿಂಗಳ ಕೊನೆಯ ಎರಡು ವಾರಗಳಲ್ಲಿ ನಾಲ್ಕು ನೂರಕ್ಕಿಂತ ಹೆಚ್ಚು ಅಂತಾರಾಷ್ಟ್ರೀಯ ವಿಮಾನ ಪ್ರಯಾಣಗಳು ಆಗಿವೆ, ಒಂದು ಲಕ್ಷದ ಇಪ್ಪತ್ತು ಸಾವಿರಕ್ಕಿಂತ ಹೆಚ್ಚು ಜನರನ್ನು ಬೇರೆ ಬೇರೆ ದೇಶಗಳಿಗೆ ಸಾಗಿಸಲಾಗಿದೆ . ಒಂದೇ ದಿನದಲ್ಲಿ ಬೇರೆ ಬೇರೆ ದೇಶಗಳ ಮಿಲಿಟರಿಗಳಿಗೆ ಸೇರಿದ ಹಲವು ವಿಮಾನಗಳು ಕಾಬೂಲ್ ನಿಲ್ದಾಣದಿಂದ ಹಾರಿದ ದಾಖಲೆ ಇದಾಗಿದೆ. ಕೆಲವು ವಿಮಾನಗಳಂತೂ ತಾವು ಇಳಿದ ನಿಲ್ದಾಣದ ಟಾರು "ರನ್ ವೇ " ಮೇಲೆ ಎಂಜಿನ್ ನಿಲ್ಲಿಸದೇ, ಚಾಲನೆಯಲ್ಲೇ ಇದ್ದು ಜನರನ್ನು ತುಂಬಿಸಿಕೊಂಡು ತುರ್ತಾಗಿ ಜನರನ್ನು ತುಂಬಿಸಿಕೊಂಡು ಮರಳಿ ಹೋಗಿವೆ. ಸಂಕಷ್ಟದಲ್ಲಿ ಇರುವವರನ್ನು ಸುರಕ್ಷಿತ ಸ್ಥಳಕ್ಕೆ ಮುಟ್ಟಿಸುವ ಇಂತಹ ಕಾರ್ಯಾಚರಣೆಗೆ "ಸ್ಥಳಾಂತರ" ಅಥವಾ "ತೆರವುಗೊಳಿಸುವ" ಪ್ರಕ್ರಿಯೆ (Evacuation) ಎಂದು ಕರೆಯುತ್ತಾರೆ. ಈ ಬಗೆಯ ಕಾರ್ಯಾಚರಣೆಯನ್ನು ಅಫಘಾನಿಸ್ತಾನದಲ್ಲಿ ಉಂಟಾಗಿರುವಂತಹ ತೀವ್ರ ರಾಜಕೀಯ ವೈಫಲ್ಯ, ಅರಾಜಕ ಸಂದರ್ಭಗಳಲ್ಲಿ ಮಾತ್ರ ಅಲ್ಲದೆ ಪ್ರಕೃತಿ ವಿಕೋಪದಂತಹ ಬಿಕ್ಕಟ್ಟಿನಲ್ಲಿ ಅಧಿಕ ಸಂಖ್ಯೆಯಲ್ಲಿ ಜನ ಸಿಲುಕಿಕೊಂಡಿದ್ದು ಅಂತಹವರನ್ನು ಬಚಾವು ಮಾಡಲು, ಸುರಕ್ಷಿತ ಜಾಗಕ್ಕೆ ಸಾಗಿಸಲು ಕೂಡ ಬಳಸಲಾಗುತ್ತದೆ. ಇಂತಹ ಸವಾಲಿನ ಬೇಡಿಕೆಯ ಕಠಿಣ ಸಂದರ್ಭಗಳಲ್ಲಿ ಹೆಚ್ಚಾಗಿ ಮಿಲಿಟರಿ ಸಾಗಾಟದ ಮಾದರಿಯ ವಿಮಾನಗಳು ಬಳಸಲ್ಪಡುತ್ತವೆ. ವಿಮಾನಗಳ ವಂಶದಲ್ಲಿ, ಜನರನ್ನು ಒಂದು ಊರು ದೇಶದಿಂದ ಇನ್ನೊಂದಕ್ಕೆ ಮುಟ್ಟಿಸುವ ನಾಗರಿಕ ವಿಮಾನಗಳು ಹಾಗು ದೇಶ ರಕ್ಷಣೆಯಲ್ಲಿ ಬಳಸಲ್ಪಡುವ ಮಿಲಿಟರಿ ವಿಮಾನಗಳು ಎಂದು ಸರಳವಾಗಿ ವಿಭಾಗ ಇದೆ. ಇನ್ನು ಮಿಲಿಟರಿ ವಿಮಾನಗಳ ಸಂತತಿಯಲ್ಲಿ, ಯುದ್ಧದ ಮೂಲಕ ಶತ್ರುಗಳನ್ನು ನಾಶಮಾಡಲು ಬಳಸುವ ವಿಮಾನಗಳು (ಬಾಂಬರ್ ) ಹಾಗು ಸಾಗಾಣಿಕೆಯಲ್ಲಿ ಬಳಸಲ್ಪಡುವ ವಿಮಾನಗಳೆಂಬ ಎರಡು ಮುಖ್ಯ ವಿಧಗಳಿವೆ.

ನಾಗರಿಕ ಸೇವೆಯಲ್ಲಿ ನಿತ್ಯ ತೊಡಗಿಸಿಕೊಳ್ಳುವ ವಿಮಾನಗಳಿಗಿಂತ ಈ ಮಿಲಿಟರಿ ಕಾರ್ಯಾಚರಣೆಯಲ್ಲಿ ಭಾಗಿಯಾಗುವ ವಿಮಾನಗಳು ತುಂಬಾ ಭಿನ್ನವಾಗಿರುತ್ತವೆ. ಅವುಗಳ ರೂಪ, ಆಕಾರ, ಸಾಮರ್ಥ್ಯ, ಹೊರನೋಟ, ಒಳಚಿತ್ರ ಎಲ್ಲವೂ ನಾವು ಒಂದು ಊರಿನಿಂದ ಇನ್ನೊಂದಕ್ಕೆ ಹೋಗಲು ಬಳಸುವ ನಾಗರಿಕ ವಿಮಾನಗಳಂತಲ್ಲ. ಅಥವಾ ಯುದ್ಧದ ಸಂದರ್ಭದಲ್ಲಿ ಬಾಂಬುಗಳನ್ನು ಸುರಿಸುವ ವಿಮಾನಗಳಂತೆಯೂ ಅಲ್ಲ. ಅಫಘಾನ್ ಜನರ ವರ್ಗಾಯಿಸುವಿಕೆಗೆ ಬಳಸಲ್ಪಟ್ಟ ವಿಮಾನಗಳಲ್ಲಿ ಪತ್ರಿಕೆಯಲ್ಲಿ ಹೆಚ್ಚು ಕಾಣಿಸಿಕೊಂಡ ಚಿತ್ರ ಅಮೆರಿಕದ ಸಿ-17 ಮಾದರಿಯ ವಿಮಾನಗಳು. ಕಳೆದ ಇಪ್ಪತ್ತು ವರ್ಷಗಳಿಂದ ಸೇವೆಯಲ್ಲಿರುವ ಈ ಮಾದರಿಯ ವಿಮಾನದ ನಿರ್ಮಾತೃ ಅಮೆರಿಕದ ಬೋಯಿಂಗ್ ಸಂಸ್ಥೆ. ಅಫಘಾನ್ ಕಾರ್ಯಾಚರಣೆಯಲ್ಲಿ ಪ್ರಮುಖ ಪಾತ್ರ ವಹಿಸಿದ ಈ ವಿಮಾನ ಆಗಸ್ಟ್ ಹದಿನೈದರಂದು ನಡೆದ ಒಂದು ಪ್ರಯಾಣದಲ್ಲಂತೂ ಎಂಟುನೂರಕ್ಕಿಂತ ಹೆಚ್ಚು ಜನರನ್ನು ಹೊರ ಸಾಗಿಸಿದೆ.

ವಿಮಾನವೊಂದರ ವೈವಿಧ್ಯಮಯ ಬಳಕೆಗಳಲ್ಲಿ ನಾಗರಿಕ ಯಾನ, ಸರಕು ಸಾಗಾಟ, ಯುದ್ಧ, ಬೇಹುಗಾರಿಕೆ ಇತ್ಯಾದಿಗಳನ್ನು ಪಟ್ಟಿ ಮಾಡಬಹುದು ಮತ್ತೆ ಆ ಎಲ್ಲ ಕೆಲಸಗಳೂ ವಿಮಾನಗಳ ಹುಟ್ಟು ಇರುವಿಕೆ ಉಪಯೋಗಗಳ ಭಾಗವೇ ಆದರೂ ವಿಮಾನಗಳಿಗೆ ಅತ್ಯಂತ ಕೃತಕೃತ್ಯತೆಯನ್ನು ನೀಡುವುದು, ಅಪಾಯದಲ್ಲಿರುವವರನ್ನು ಸಂಕಷ್ಟದಲ್ಲಿರುವವರನ್ನು ಸುರಕ್ಷಿತ ಸ್ಥಳಕ್ಕೆ ವರ್ಗಾಯಿಸುವ ಕಾರ್ಯಾಚರಣೆ ಇರಬೇಕು. ಯುದ್ಧವೊಂದು ನಡೆಯುವ ಸಮಯದಲ್ಲಿ ಮುನ್ನೆಲೆಯಲ್ಲಿರುವ ತನ್ನ ದೇಶದ ಸೇನೆಗೆ ಅಗತ್ಯವಾದ ಸಲಕರಣೆ ಆಯುಧ ಸರಕುಗಳನ್ನು ಮುಟ್ಟಿಸುವ, ಶತ್ರು ರಾಷ್ಟ್ರವನ್ನು ಸೋಲಿಸಲು ಹಿನ್ನೆಲೆಯಿಂದ ಬಲ ಒದಗಿಸುವ ಕಾರ್ಯದಲ್ಲಿ ತೊಡಗುವ ವಿಮಾನಗಳಿಗೆ ಜಾಗತಿಕ ಬಿಕ್ಕಟ್ಟಿನ ಸಂದರ್ಭಗಳಲ್ಲಿ ರಾಜ್ಯ ದೇಶಗಳ ಗಡಿ ಮೀರಿ ಮಾನವೀಯ ನೆಲೆಯಲ್ಲಿ ದುಡಿಯುವ ಹೊಣೆಯೂ ಇರುತ್ತದೆ. ನಾಗರಿಕ ವಿಮಾನ ತಯಾರಿಕೆಯಲ್ಲಿ ಜಗತ್ತಿನಲ್ಲಿ ಅತಿ ದೊಡ್ಡವು ಎನಿಸಿದ ಅಮೆರಿಕದ ಬೋಯಿಂಗ್ ಹಾಗು ಯೂರೋಪಿನ ಏರ್ಬಸ್ ಗಳು ಮಿಲಿಟರಿ ಸಾಗಾಟಕ್ಕೆ ಹೊಂದುವಂತಹ ವಿಮಾನ ಮಾದರಿಗಳನ್ನೂ ತಯಾರಿಸುತ್ತವೆ. ಮತ್ತೆ ಅಂತಹ ವಿಮಾನಗಳನ್ನು ಜಗತ್ತಿನ ಬೇರೆ ಬೇರೆ ದೇಶಗಳು ಖರೀದಿಸಿ ಬಳಸುತ್ತವೆ. ಭಾರತದ ಬಳಿ ಸಿ-17 ಮಾದರಿಯ ಹನ್ನೊಂದು ವಿಮಾನಗಳು ಇವೆ. ನಾಗರಿಕ ವಿಮಾನಗಳಿಗೆ ಇಲ್ಲದ ಕೌಶಲ ಹಾಗು ಸಾಮರ್ಥ್ಯ ಈ ಸೇನಾ ಸಾಗಾಟದ ವಿಮಾನಗಳಿಗೆ ಇರುತ್ತವೆ. ಹಾಗಂತ ನಾಗರಿಕ ವಿಮಾನಗಳಲ್ಲಿ ಇರುವ ಆಸನ ವ್ಯವಸ್ಥೆ ಊಟ ಉಪಚಾರದ ಸೌಕರ್ಯ ವಿರಾಮದ ಸೌಲಭ್ಯಗಳು ಈ ಮಿಲಿಟರಿ ವಿಮಾನಗಳಲ್ಲಿ ಇರುವುದಿಲ್ಲ. ಇವು ಹತ್ತಿ ಇಳಿಯಲು ಸಮತಟ್ಟಾದ ಉದ್ದದ "ರನ್ ವೆ "ಬೇಕಾಗಿಲ್ಲ. ಪ್ರತಿಕೂಲ ಸಂದರ್ಭದಲ್ಲಿ ಮಣ್ಣು ರಸ್ತೆಯ ಮೇಲೋ ಹುಲ್ಲು ಹಾಸಿನ ಮೇಲೆ ಇವು ಹತ್ತಿ ಇಳಿಯಬಲ್ಲವು. ಅತಿ ಎತ್ತರದಲ್ಲಿ, ತೀರಾ ತಗ್ಗಿನಲ್ಲಿ ಹಾರಬಲ್ಲವು. ಎತ್ತರದ ಹಾರಾಟದಿಂದ ತಕ್ಷಣ ಇಳಿಯುವ ಅಗತ್ಯ ಇದ್ದರೆ ಮೂಗು ಕೆಳಗೆ ಮಾಡಿಕೊಂಡು ವೇಗವಾಗಿ ನೆಲದತ್ತ ಧುಮುಕಬಲ್ಲವು. ಆಹಾರ, ಬಟ್ಟೆಗಳ ಅತಿದೊಡ್ಡ ಗಾತ್ರದ ಮೂಟೆಗಳನ್ನು, ಯುದ್ಧ ಸಾಮಗ್ರಿ ,ಸೇನಾವಾಹನಗಳನ್ನು ತನ್ನೊಳಗೆ ಇರಿಸಿಕೊಂಡು ಹಾರಿ ಮುಟ್ಟಿಸಬೇಕಾದಲ್ಲಿಗೆ ಮುಟ್ಟಿಸಬಲ್ಲವು. ಹಲವು ನೂರು ಸೈನಿಕರನ್ನೋ ಅಥವಾ ಜನರನ್ನೋ ಒಂದು ಕಡೆಯಿಂದ ಇನ್ನೊಂದು ಕಡೆಗೆ ಕ್ಷಿಪ್ರವಾಗಿ ಸಾಗಿಸಬಲ್ಲವು. ಬೋಯಿಂಗ್ ನ ಸಿ-17, ಏರ್ಬಸ್ ನ A400M, ಲಾಕ್ಹೀಡ್ ಕಂಪೆನಿಯ ಹರ್ಕುಲ್ಯೂಸ್ ಗಳು ಈ ಬಗೆಯ ವಿಮಾನಕ್ಕೆ ಜನಪ್ರಿಯ ಉದಾಹರಣೆಗಳು. ಚೈನಾ ಹಾಗು ರಷ್ಯಾ ಗಳಲ್ಲಿ ಅವರದೇ ನಿರ್ಮಾಣದ "ಸ್ವದೇಶಿ" ಮಿಲಿಟರಿ ಸಾರಿಗೆ ವಿಮಾನಗಳು ಇವೆ. ಮತ್ತೆ ಈ ಸಂತತಿಯ ಹಲವು ವಿಮಾನಗಳು ಇತ್ತೀಚಿನ ಅಫಘಾನ್ ಜನತೆರವು ಕಾರ್ಯಾಚರಣೆಯಲ್ಲಿ ಸಕ್ರಿಯವಾಗಿ ಭಾಗವಹಿಸಿವೆ. ಇಂತಹ ಮಿಲಿಟರಿ ಸಾಗಾಟದ ವಿಮಾನಗಳು ನಾಗರಿಕ ವಿಮಾನಗಳಂತೆ ದೈನಂದಿನ ಬದುಕಿನ ಭಾಗ ಅಂತ ಅನಿಸದಿದ್ದರೂ ಅಪರೂಪಕ್ಕೆ ಆಕಸ್ಮಿಕವಾಗಿ ಎದುರಾಗುವ ವಿಷಮ ಸಂದರ್ಭಗಳಲ್ಲಿ ತಮ್ಮ ಅಗತ್ಯವನ್ನು ಮಹತ್ವವನ್ನು ತೋರಿಸುತ್ತವೆ. ಯಾವ ದೇಶದ ಬಳಿ ಎಷ್ಟು ಈ ಮಾದರಿಯ ವಿಮಾನಗಳಿವೆ ಎನ್ನುವುದು ಆಯಾ ದೇಶದ ಮಿಲಿಟರಿ ಹಾಗು ರಾಜಕೀಯ ಶಕ್ತಿಯ ಸಂಕೇತವೂ ಆಗಿದೆ.

ಮಿಲಿಟರಿ ಸಾಗಾಣಿಕೆಯ ವಿಮಾನಗಳನ್ನು ಬಳಸಿ ಜನರನ್ನು ಸ್ಥಳಾಂತರಗೊಳಿಸುವ ಕಾರ್ಯಾಚರಣೆಗೆ ದೀರ್ಘ ಇತಿಹಾಸ ಇದೆ. ಇಂತಹ ಕಾರ್ಯಾಚರಣೆಯ ಕುರಿತು ಪ್ರತಿ ದೇಶವೂ ಅಲ್ಲಲ್ಲಿನ ಬಿಕ್ಕಟ್ಟುಗಳನ್ನು, ಆ ಸಂದರ್ಭದಲ್ಲಿ ವಿಮಾನಗಳ ನೆರವಿನಲ್ಲಿ ನಡೆದ ಸಾಗಾಟ ಸ್ಥಳಾಂತರಗಳ ಪಟ್ಟಿ ಮಾಡಬಹುದು. 1990ರಲ್ಲಿ ಇರಾಕ್ ಕುವೈಟ್ ನ ಮೇಲೆ ದಾಳಿ ಮಾಡಿ, ಗಲ್ಫ್ ಯುದ್ಧದ ನಡೆದಾಗ ಕುವೈಟ್ ಅಲ್ಲಿದ್ದ ಭಾರತೀಯರನ್ನು ವಾಪಾಸು ಕರೆದುಕೊಂಡು ಬಂದ ಪ್ರಸಂಗ, ಯುದ್ಧ ಅಶಾಂತಿಗಳ ಇತಿಹಾಸದಲ್ಲಿ ದಾಖಲಾದ ಸಾಹಸ ಮಾತ್ರವಲ್ಲದೇ ವಿಮಾನಗಳ ಚರಿತ್ರೆಯಲ್ಲಿಯೂ ಒಂದು ಸ್ಮರಣೀಯ ಘಟನೆ. ಬಿಕ್ಕಟ್ಟಿನ ಸಂದರ್ಭದಲ್ಲಿ ಜನಸಮುದಾಯದ ತುರ್ತು ಸ್ಥಳಾಂತರಕ್ಕೆ ಅಥವಾ ದೊಡ್ಡ ಸಂಖ್ಯೆಯ ಜನರ ತೆರವಿಗೆ ಮಿಲಿಟರಿ ವಿಮಾನಗಳ ಬಳಕೆ ಹೆಚ್ಚು ಸೂಕ್ತವಾದರೂ, 1990ರ ಘಟನೆಯಲ್ಲಿ ಭಾರತದ ಮಿಲಿಟರಿ ವಿಮಾನಕ್ಕೆ ಕುವೈಟ್ ಆಕಾಶಮಾರ್ಗವನ್ನು ತಲುಪಲು ಬಳಸಲು ಅನುಮತಿ ಪಡೆಯುವುದು ವಿಳಂಬ ಆಗುತ್ತಿತ್ತು. ಈ ಅನುಮತಿಗೆ ಕಾದಿದ್ದರೆ ಕುವೈಟ್ ಅಲ್ಲಿ ಇದ್ದ ಭಾರತೀಯರ ಜೀವ ಜೀವನಗಳಿಗೆ ಇನ್ನೂ ಹೆಚ್ಚು ಕಷ್ಟ ಒದಗುತ್ತಿತ್ತು. ಹಾಗಾಗಿ ಆ ಸಂದರ್ಭದಲ್ಲಿ ಮಿಲಿಟರಿ ವಿಮಾನಗಳ ಬಳಕೆಯ ಬದಲಿಗೆ, ಅನುಮತಿ ಪಡೆಯಲು ಸುಲಭವಾಗುವ ನಾಗರಿಕ ವಿಮಾನಗಳನ್ನು ಜನತೆರವಿಗೆ ಬಳಸಲಾಯಿತು. 1990ರ ಆಗಸ್ಟ್ ತಿಂಗಳಿನಿಂದ ಅಕ್ಟೋಬರ್ ತನಕ ಇಂಡಿಯನ್ ಏರ್ಲೈನ್ಸ್ ಸಂಸ್ಥೆಯ ನಾಗರಿಕ ವಿಮಾನಗಳನ್ನು ಬಳಸಿ ಸುಮಾರು ಒಂದು ಲಕ್ಷದ ಎಪ್ಪತ್ತು ಸಾವಿರ ಜನರನ್ನು ಭಾರತಕ್ಕೆ ಸುರಕ್ಷಿತವಾಗಿ ಕರೆತರಲಾಯಿತು. ಬಿಕ್ಕಟ್ಟಿನ ಸಂದರ್ಭದಲ್ಲಿ ಜನಸಮೂಹವನ್ನು ಸಾಗಿಸುವ ವಿಶಿಷ್ಟ ಸಾಮರ್ಥ್ಯದ ಜೊತೆಗೆ ವಿಮಾನಗಳು ಜನೋಪಯೋಗಿ ವಸ್ತುಗಳನ್ನು ತಲುಪಿಸುವ ಕೆಲಸವನ್ನೂ ಮಾಡುತ್ತಲೇ ಬಂದಿವೆ. ಕೋವಿಡ್ ಬಿಕ್ಕಟ್ಟಿನ ಸಂದರ್ಭದಲ್ಲಿ ಟನ್ ಗಟ್ಟಲೆ ಸುರಕ್ಷತಾ ಸಲಕರೆಣೆಗಳು, ಔಷಧಗಳು, ಲಸಿಕೆಗಳು ಒಂದು ದೇಶದಿಂದ ಇನ್ನೊಂದು ದೇಶಕ್ಕೆ ವಿಮಾನಗಳ ಮೂಲಕ ತಲುಪಿವೆ. ಇನ್ನು ಪ್ರವಾಹ ಚಂಡಮಾರುತಗಳಂತಹ ಪ್ರಾಕೃತಿಕ ವಿಪತ್ತಿನ ಸಮಯದಲ್ಲಿ ಜನತೆರವಿನಲ್ಲಿ ಸಹಕರಿಸಿದ, ಬರಗಾಲ ಪೀಡಿತ ಪ್ರದೇಶಗಳಿಗೆ, ಆರೋಗ್ಯ ಆರ್ಥಿಕ ಸಂಕಷ್ಟವನ್ನು ಅನುಭವಿಸುತ್ತಿರುವ ಪ್ರಾಂತ್ಯಗಳಿಗೆ ಅಗತ್ಯವಾದ ಸರಕುಗಳನ್ನು ಸಾಗಿಸಿ ಉಪಕರಿಸಿದ ಹಲವು ದೃಷ್ಟಾಂತಗಳು ವಿಮಾನಗಳ ಇತಿಹಾಸದಲ್ಲಿ ಮತ್ತೆ ಮತ್ತೆ ಸಿಗುತ್ತವೆ. ನಾಗರಿಕಯಾನದಲ್ಲಿ ಟಿಕೇಟು ಪಡೆದವರನ್ನು ದೂರದ ಊರು ದೇಶ ತಲುಪಿಸುವ ಸಾಮಾಜಿಕ ವ್ಯಾವಹಾರಿಕ ಹೊಣೆಗಾರಿಕೆ ಮತ್ತೆ ಯುದ್ಧದ ಹೊತ್ತಲ್ಲಿ ರಕ್ಷಣಾ ಜವಾಬ್ದಾರಿ ಹೊರುವ ವಿಮಾನಗಳು ಬಿಕ್ಕಟ್ಟಿನ ಸಂದರ್ಭಗಳಲ್ಲಿ ಲೋಕೋಪಕಾರಿಯಾಗಿಯೂ ಹಾರಿ ಇಳಿಯುತ್ತವೆ.

ಈ ಅಂಕಣದ ಹಿಂದಿನ ಬರಹಗಳು
ಆಕಾಶದ ರಾಣಿಯೂ ಕನಸಿನ ಹಕ್ಕಿಯೂ.....
ಅಸಲಿ ವಿಮಾನಗಳು ಮತ್ತು ನಕಲಿ ಹಕ್ಕಿಗಳು

ವಿಮಾನ ನಿಲ್ದಾಣಕ್ಕೆ ಸ್ವಾಗತ

ವಿಮಾನ ಸಂತತಿಯ ಶಬ್ದ ಬಣ್ಣ ಚಿತ್ರಗಳು

ಒಂದು ಆಕಾಶ ಹಲವು ಏಣಿಗಳು

ಆಗಸದ ಬಂಡಿಗಳ ಅಂಗರಚನಾಶಾಸ್ತ್ರ

ಕಟ್ಟಿಗೆಯ ಆಟಿಕೆಗಳು ಲೋಹದ ಹಕ್ಕಿಯಾದ ಅಧ್ಯಾಯ

ಗಗನಯಾನದ ದೈತ್ಯ ಹೆಜ್ಜೆಗಳು

 

 

MORE NEWS

ಕಲಬುರ್ಗಿ ಜಿಲ್ಲಾ ಪ್ರಥಮ ತತ್ವಪದ ಸಾಹಿತ್ಯ ಸಮ್ಮೇಳನ

24-04-2024 ಬೆಂಗಳೂರು

"ಕಡಕೋಳ ಮಠಾಧೀಶರು ಮತ್ತು ತತ್ವಪದಗಳ ಮಹಾ ಪೋಷಕರಾದ ಷ. ಬ್ರ. ಡಾ. ರುದ್ರಮುನಿ ಶಿವಾಚಾರ್ಯರು ಸಮ್ಮೇಳನದ ಸರ್ವಾಧ್ಯಕ...

ಸಂಶೋಧನೆಯಲ್ಲಿ ಆಕರಗಳ ಸಂಗ್ರಹ, ವಿಂಗಡಣೆ ಮತ್ತು ಪೂರ್ವಾಧ್ಯಯನ ಸಮೀಕ್ಷೆ

23-04-2024 ಬೆಂಗಳೂರು

"ಒಂದನ್ನು ಬಿಟ್ಟು ಇನ್ನೊಂದನ್ನು ಚಿಂತಿಸಲಾಗದು. ಅಲ್ಲದೆ; ಶೀರ್ಷಿಕೆ ಆಖೈರು ಮಾಡಿಕೊಳ್ಳುವುದಕ್ಕೆ ನಾವು ಅವಸರ ಮಾಡ...

ಪರಿಘಾಸನ ಮತ್ತು ಅರ್ಧ ಚಕ್ರಾಸನ 

16-04-2024 ಬೆಂಗಳೂರು

"ಪರಿಘಾಸನ ಆಸನವು ) ಪಿತ್ತ ಜನಕಾಂಗ ಮತ್ತು ಮೇದೋಜೀರಕ ಚೈತನ್ಯಗೊಳ್ಳುವಂತೆ ಮಾಡುತ್ತದೆ. ಹಾಗೆಯೇ ‘ಅರ್ಧ ಚಕ್...