ಲೌಕಿಕ ವ್ಯವಹಾರ ನಂತರದ ವಿರಾಮದಲ್ಲೇ ನನ್ನ ಬರವಣಿಗೆ....!


ಲೇಖಕಿ ಉಷಾ ನರಸಿಂಹನ್ ಅವರು ಮೂಲತಃ ಮಂಡ್ಯ ಜಿಲ್ಲೆಯ ಶಿವನಸಮುದ್ರದವರು. ಹಾಸನದಲ್ಲಿ ಪ್ರಾಥಮಿಕ ವಿದ್ಯಾಭ್ಯಾಸ, ನಂತರದ ವಿದ್ಯಾಭ್ಯಾಸವನ್ನು ಮೈಸೂರು ಮತ್ತು ತುಮಕೂರಿನಲ್ಲಿ ಪೂರ್ಣಗೊಳಿಸಿದರು. ಬಿಎಸ್ಸಿ ಪದವೀಧರರು. ಮೊದಲಿನಿಂದಲೂ ಸಾಹಿತ್ಯ ಸಂಗೀತ, ಲಲಿತಕಲೆಗಳಲ್ಲಿ ಆಸಕ್ತಿಯ ಜೊತೆ ಕಾವ್ಯ , ಕತೆ, ಕಾದಂಬರಿ, ನಾಟಕ ಗೀತರೂಪಕ, ಚಿತ್ರಕತೆ, ಸಂಭಾಷಣೆ, ಸಾಕ್ಷಚಿತ್ರ ಕ್ಷೇತ್ರಗಳಲ್ಲಿ ಸೃಜನಾತ್ಮಕವಾಗಿ ತೊಡಗಿಸಿಕೊಂಡಿದ್ದಾರೆ. ಅವರ ‘ಕಂಚುಗನ್ನಡಿ’ ಕೃತಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿಯಿಂದ 2019ನೇ ಸಾಲಿನ ಅತ್ಯುತ್ತಮ ಕೃತಿ ಬಹುಮಾನ ಲಭಿಸಿದೆ. ಈ ಹಿನ್ನೆಲೆಯಲ್ಲಿ, ಬುಕ್ ಬ್ರಹ್ಮ ನಡೆಸಿದ ವಿಶೇಷ ಸಂದರ್ಶನ ಇಲ್ಲಿದೆ.

ಬುಕ್ ಬ್ರಹ್ಮ: ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪಡೆದ ಸಂದರ್ಭದಲ್ಲಿ ನಿಮ್ಮ ಪ್ರತಿಕ್ರಿಯೆ?

ಉಷಾ ನರಸಿಂಹನ್ : ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿಯನ್ನು ನನ್ನ ಸಾಹಿತ್ಯಯಾನದ ಮೈಲಿಗಲ್ಲು ಅಂತ ಭಾವಿಸಿದ್ದೇನೆ.ಈ ತರಹ ಗುರುತಿಸಿಕೊಳ್ಳೋದು ನನ್ನ ಆತ್ಮವಿಶ್ವಾಸವನ್ನು ಹೆಚ್ಚುಮಾಡಿದೆ. ಹಾಗೇ ನನ್ನ ಜವಾಬ್ದಾರಿಯನ್ನು ಕೂಡ. ಮುಂದಿನ ದಿನಗಳಲ್ಲಿ ನಾನು ಬರೆಯಬೇಕು ಅಂದುಕೊಂಡಿರುವ ಕನಸುಗಳ ಮಾತೃಕೆಯಾಗಿ ಈ ಪ್ರಶಸ್ತಿ ಕೆಲಸ ಮಾಡುತ್ತಿದೆ.

ಬುಕ್ ಬ್ರಹ್ಮ: ಸಾಹಿತ್ಯ ಕ್ಷೇತ್ರವನ್ನು ಆಯ್ಕೆ ಮಾಡಿಕೊಳ್ಳಲು ಕಾರಣ?

ಉಷಾ ನರಸಿಂಹನ್ : ಒಂದು ಕಾಲದಲ್ಲಿ ರಂಗಭೂಮಿ ನನ್ನ ಆದ್ಯತೆ ಮತ್ತು ಹಂಬಲವಾಗಿತ್ತು. ನನ್ನ ಕುಟುಂಬ ಸಂದರ್ಭ ಮತ್ತು ವೈಯಕ್ತಿಕ ಕಾರಣಗಳಿಂದ ನಾನು ಆ ಕ್ಷೇತ್ರದಲ್ಲಿ ತೊಡಗಿಸಿಕೊಳ್ಳಲಾಗಲಿಲ್ಲ. ಬಾಲ್ಯದಲ್ಲಿ ನೋಡಿದ್ದ ಗುಬ್ಬಿವೀರಣ್ಣ ಕಂಪನಿ ನಾಟಕಗಳು, ನಂತರದ ದಿನಗಳಲ್ಲಿ ನೋಡಿದ ಸಮುದಾಯ ತಂಡದ ನಾಟಕಗಳು ಬಹುಶಃ ಅಂತಹ ಹಂಬಲವನ್ನು ಹುಟ್ಟುಹಾಕಿತ್ತು. ಯಾವಾಗ ಆ ದಾರಿಯಲ್ಲಿ ಮುಂದುವರೆಯಲಾಗಲಿಲ್ಲವೋ ನನ್ನೊಳಗಿನ ಚೇತನ ಯಾವುದಾದರು ಕಲಾಪ್ರಕಾರಕ್ಕೆ ತುಡಿಯುತ್ತಿತ್ತು. ಚಿಕ್ಕಂದಿನ ಚೆಂದಮಾಮ, ಪ್ರಜಾಮತ ಓದು, ಅಪ್ಪ ಹೇಳುತ್ತಿದ್ದ ಅರೇಬಿಯನ್ ನೈಟ್ಸ್ ಕತೆಗಳು ನನ್ನೊಳಗಿನ ಕಥಾಕ್ಷಿತಿಜವನ್ನು ವಿಸ್ತರಿಸಿತ್ತು. ಕನ್ನಡ ಭಾಷೆ ಅಂದರೆ ನನ್ನ ಭಾವಜಗತ್ತು...ಭಾಷೆಭಾವಗಳ ಅನುಸಂಧಾನ ಕಲ್ಪನೆಯ ಆಯಾಮಗಳನ್ನು ತಂತಾನೆ ಹುಡುಕಿಕೊಂಡು ನನ್ನನ್ನೊಬ್ಬಳು ಸೃಜನಶೀಲ ಲೇಖಕಿಯಾಗಿಸಿತು. ನನ್ನ ಮೊದಲ ಕವಿತೆಯನ್ನು ಹದಿನಾಲ್ಕನೇ ವರ್ಷದಲ್ಲಿ ಬರೆದೆ. ಹೈಸ್ಕೂಲು ದಾಟುವುದರೊಳಗೆ ಸಣ್ಣ ಕತೆಗಳನ್ನು ಬರೆಯುತ್ತಿದ್ದೆ. ಕಾಲೇಜು ಮ್ಯಾಗಝೈನ್ಗಳಲ್ಲಿ ಪ್ರಕಟವಾಗುತ್ತಿತ್ತು. 21ನೇ ವಯಸ್ಸಿಗೆ ಮದುವೆಯಾಗಿ ಸುಮಾರು 25 ವರ್ಷ ಕಾಲ ಅಜ್ಞಾತದಲ್ಲಿದ್ದೆ. ಬರೆದರೂ ಎಲ್ಲೂ ಕಳಿಸದೆ ನನ್ನ ಪಾಡಿಗೆ ನಾನು...ನಲವತ್ತಾರನೆ ವಯಸ್ಸಿನಲ್ಲಿ ಮೊದಲ ಪುಸ್ತಕ ಪ್ರಕಟಿಸಿದೆ. ನಂತರ ಹಿಂತಿರುಗಿ ನೋಡಲಿಲ್ಲ. ಈವರೆಗೂ 17ಪುಸ್ತಕ ಬಂದಿದೆ. ಈಗ ನಂಗನ್ನಿಸ್ಸೋದು...ಬಹುಶಃ ನಾನು ಲೇಖಕಿಯಾಗಿದ್ದೆ ಸರಿ.

ಬುಕ್ ಬ್ರಹ್ಮ: ಸಾಹಿತ್ಯಿಕ ಪಯಣದಲ್ಲಿ ನೀವು ಹೆಮ್ಮೆ ಪಡುವ ವಿಚಾರ ಯಾವುದು?

ಉಷಾ ನರಸಿಂಹನ್ : ಸಾಹಿತ್ಯ ತಂದುಕೊಟ್ಟಿರುವ ಹಲವು ಸವಲತ್ತುಗಳಲ್ಲಿ ಮೊದಲಿಗೆ ಹೇಳಬೇಕಾದ್ದು ಸಿಕ್ಕಿರುವ ಪ್ರೀತಿ ಅಭಿಮಾನ. ಓದುಗರ ಪ್ರೀತಿ ಒಂದು ಕಡೆಯಾದರೆ ನಾನ್ಯಾರನ್ನು ಯಾವ ಸಾಹಿತಿಗಳನ್ನು ಬೆರಗಿನಿಂದ ನೋಡುತ್ತಿದ್ದೆನೋ ಅವರೆಲ್ಲ ನನ್ನ ಸಂಪರ್ಕಕ್ಕೆ ಬಂದರು. ಆ ಕುರಿತು ನನಗೆ ಹೆಮ್ಮೆ ಇದೆ. ಸಾಹಿತ್ಯ ಯಾನದಲ್ಲಿ ಕೆಲವು ಯಶಸ್ಸುಗಳು ಅಯಾಚಿತವಾಗಿ ಸಿಕ್ಕಿದೆ. ಹತ್ತು ಹನ್ನೆರೆಡು ವರ್ಷಗಳಲ್ಲಿ 17 ಪುಸ್ತಕಗಳು ಬಂದಿದೆ. ಸೋಜಿಗವೆಂದರೆ ಬಹುತೇಕ ನಾನು ಬರೆದ ಎಲ್ಲ ಪುಸ್ತಕಗಳಿಗೆ ಪ್ರಶಸ್ತಿ ಪುರಸ್ಕಾರಗಳು ಬಂದಿದೆ. ನನ್ನ ಮೊದಲ ಮತ್ತು ಎರಡನೇ ಕಾದಂಬರಿಗಳಿಗೆ ಮಾಸ್ತಿ ಕಾದಂಬರಿ ಪುರಸ್ಕಾರ, ಮೊದಲ ಕಥಾಸಂಕಲನಕ್ಕೆ ಸುಶೀಲಾಶೆಟ್ಟಿ ಸ್ಮಾರಕ ಬಹುಮಾನ, ಹರಿವನೀರು ಕೊರೆವಬಂಡೆ, ತಾವರೆದೇಟು ಸಂಕಲನಗಳಿಗೆ ಸುಧಾಮೂರ್ತಿ, ತ್ರಿವೇಣಿ ದತ್ತಿನಿಧಿ ಬಹುಮಾನ, ಪರ್ಷಿಯಾ ಪರಿಮಳ ಕಾದಂಬರಿಗೆ ಎಚ್.ವಿ. ಸಾವಿತ್ರಮ್ಮ ದತ್ತಿನಿಧಿ ಬಹುಮಾನ, ಕಂಚುಗನ್ನಡಿ ನಾಟಕಕ್ಕೆ ಮುಂಬೈ ಮೈಸೂರು ಅಸೋಸಿಯೇಷನ್ ಬಹುಮಾನ, ಶಿವಮೊಗ್ಗ ಕರ್ನಾಟಕ ಸಂಘದ ಕೆ.ವಿ.ಸುಬ್ಬಣ್ಣ ಪ್ರಶಸ್ತಿ...ಹೀಗೆ ಹತ್ತು ವರ್ಷಗಳಲ್ಲಿ 18 ಕ್ಕೂ ಹೆಚ್ಚು ಬಹುಮಾನಗಳು ಬಂದಿದೆ. ಒಂದೇ ಪುಸ್ತಕಕ್ಕೆ ಹಲವಾರು ಪ್ರಶಸ್ತಿಗಳು ಬಂದು ಸಂತೋಷ- ಆತ್ಮವಿಶ್ವಾಸ ತಂದಿದೆ. ಪ್ರಶಸ್ತಿಗಳು ಮಾತ್ರ ಸಾಹಿತ್ಯದ ಮಾನದಂಡವೆಂದು ಭಾವಿಸಿಲ್ಲವಾದರೂ ಒಂದಿಷ್ಟು ಹೆಮ್ಮೆ ಆಗಿದೆ. ತಾಯಿ ತನ್ನ ಮಗುವಿನ ಅಂಬೆಗಾಲಿಡುವ, ಮೊದಲ ಹೆಜ್ಜೆ ಹಾಕುವ, ಮೊದಲ ತೊದಲು ನುಡಿಯಾಡಿದಾಗ ಆಗುವ ಸಂತೋಷಕ್ಕೂ, ಇದಕ್ಕೂ ಹೆಚ್ಚೇನು ಅಂತರವಿಲ್ಲ.

ಬುಕ್ ಬ್ರಹ್ಮ: ಯಾವ ಲೇಖಕರ ಕೃತಿಗಳು ನಿಮ್ಮನ್ನು ಹೆಚ್ಚು ಪ್ರೇರೇಪಿಸುತ್ತವೆ ಅಥವಾ ಕಾಡುತ್ತವೆ. ?

ಉಷಾ ನರಸಿಂಹನ್ : ನನ್ನನ್ನು ಕಡೆದು ಕಟ್ಟಿದ ಬಹಳಷ್ಟು ಕತೆಗಾರರು ಇದ್ದಾರೆ. ನಾನು ಹೈಸ್ಕೂಲಿಗೆ ಬರುವ ವೇಳೆಗಾಗಲೇ ಭೈರಪ್ಪನವರ ಪುಸ್ತಕಗಳು ನನ್ನ ಕೈಯಲ್ಲಿತ್ತು. ಹಗುರ ಧಾಟಿಯ ಕೌಟುಂಬಿಕ ನೆಲೆಯ ಕಾದಂಬರಿಗಳನ್ನು ದಾಟಿ ಗಂಭೀರ ವೈಚಾರಿಕ ಕೃತಿಗಳಲ್ಲಿ ನನ್ನ ರುಚಿ ಅಭಿರುಚಿ ಬೆಳೆಯಿತು. ಭೈರಪ್ಪನವರ ಗೃಹಭಂಗ ಓದಿ ವಾರಕಾಲ ತಳಮಳಿಸಿದ್ದೇನೆ. ನನ್ನನ್ನು ತೀವ್ರವಾಗಿ ಕಾಡಿದ್ದು ಮಾಸ್ತಿಯವರ ಸಣ್ಣ ಕತೆಗಳು ಮತ್ತು ಕಾದಂಬರಿಗಳು. ಹಾಗೆ ಶಿವರಾಮ ಕಾರಂತರ ಕಾದಂಬರಿಗಳು ನನ್ನನ್ನು ತೀವ್ರವಾಗಿ ಕಾಡಿದೆ. ನನಗೆ ಪ್ರೇರಣೆ ನೀಡಿದ್ದೆಂದರೆ ನಾಗತಿಹಳ್ಳಿ ಚಂದ್ರಶೇಖರ್ ಅವರ ಸಣ್ಣ ಕತೆಗಳು.1985ನೇ ಇಸವಿಯಲ್ಲಿ ಪ್ರಜಾವಾಣಿ ಭಾನುವಾರದ ಪುರವಣಿಯಲ್ಲಿ ಅವರ ‘ನನ್ನಪ್ರೀತಿಯ ಹುಡುಗನಿಗೆ’ ಅನ್ನುವ ಕತೆ ಓದಿ ಬೆರಗಾಗಿದ್ದೆ. ಕತೆ ಹೊಸದೆನ್ನಿಸದಿದ್ದರೂ ಕತೆಗಾರಿಕೆ ಸ್ವೋಪಜ್ಞತೆಯಿಂದ ಕೂಡಿತ್ತು. ಹೃದಯಕ್ಕೆ ಆಪ್ತವಾಗಿ ಪ್ರಾಮಾಣಿಕವಾದ ಬರವಣಿಗೆ. ಹೀಗೂ ಕತೆ ಬರೆಯಬಹುದೆಂಬ ಸಂಚಲನವನ್ನು ನನ್ನೊಳಗೆ ಉಂಟು ಮಾಡಿತು. ಆಗಿಂದ ನಾನು ತಾಜಾಕಲಮಿನಲ್ಲಿ ಬರೆಯತೊಡಗಿದೆ.

ಬುಕ್ ಬ್ರಹ್ಮ: ಇದನ್ನು ನಾನು ಬರೆಯಬೇಕಿತ್ತು ಎನಿಸುವಂತಹ ಕೃತಿ ಯಾವುದು?

ಉಷಾ ನರಸಿಂಹನ್ : ಮಾಸ್ತಿಯವರ ಕೃತಿಗಳ ಕುರಿತು ಹೇಳಿದೆನಲ್ಲ. ನನ್ನನ್ನು ಆವರಿಸಿಕೊಂಡ ಕತೆಗಳವು. ಚಿಕವೀರ ರಾಜೇಂದ್ರ ಓದಿದಾಗ ಈ ಕಾದಂಬರಿಯನ್ನು ನಾನು ಬರೆಯಬೇಕಿತ್ತು ಅನ್ನುವ ಹಂಬಲದ ಸೆಳಕೊಂದು ಹಾದುಹೋಯ್ತು. ನನ್ನನ್ನು ಯಾವತ್ತು ಸೆಳೆಯುವ ಕ್ಷೇತ್ರವೆಂದರೆ ಪುರಾಣೇತಿಹಾಸಗಳು. ಮಾಸ್ತಿಯವರ ನಿಜಗಲ್ಲಿನ ರಾಣಿ ನನಗೆ ಪಠ್ಯವಾಗಿತ್ತು. ಅದನ್ನು ರಂಗರೂಪಕ್ಕೆ ತರಬೇಕು ಅನ್ನಿಸಿತ್ತು. ಅಷ್ಟರಲ್ಲಿ ಬೇರೆಯವರು ತಂದುಬಿಟ್ಟಿದ್ದರು. ಚಿಕವೀರ ರಾಜೇಂದ್ರ ಕಾದಂಬರಿಯನ್ನು ಮಾಸ್ತಿಯವರು ನಿರ್ವಹಿಸಿರುವ ರೀತಿ, ಅನುದ್ವಿಗ್ನ ಬರವಣಿಗೆ, ಕೊಡಗಿನ ಅರಸೊತ್ತಿಗೆಯ ಪತನ, ಅದಕ್ಕೆಕಾರಣಗಳು, ಅದರ ಹಂತಗಳು, ಕಾದಂಬರಿಕಾರರು ಕತೆಯಿಂದ ಅಂತರ ಕಾಯ್ದುಕೊಂಡು ಸಾಕ್ಷೀಪ್ರಜ್ಞೆಯಾಗಿರುವುದು...ಕತೆಯ ಓದುವಿಕೆಯ ನಂತರವು ಕಾಡಿತ್ತು. ಐತಿಹಾಸಿಕ ಕಥನವೊಂದನ್ನು ಹೇಗೆ ನಿರ್ವಹಿಸಬೇಕೆಂಬ ಪ್ರಾಥಮಿಕ ಬೋಧೆ ನನಗಾಯ್ತು. ಇವತ್ತಿಗೂ ಚಿಕವೀರ ರಾಜೇಂದ್ರ ನನ್ನ ಹೃದಯಕ್ಕೆ ಹತ್ತಿರವಾದ ಕೃತಿ. ಇದನ್ನು ನಾನು ಬರೆಯಬೇಕಿತ್ತು ಅನ್ನಿಸಿದ ಹಾಗೇ ಇಂತಹದನ್ನು ನಾನು ಬರೆಯಬೇಕೆಂಬ ಉಮೇದು ನನ್ನಲ್ಲಿ ಮೂಡಿತು. ಪರ್ಷಿಯಾ ಪರಿಮಳ ಎಂಬ ಕಾದಂಬರಿಗೆ ಇದು ಪ್ರೇರಣೆ ನನ್ನಲ್ಲಿ ಮೂಡಿತು.

ಬುಕ್ ಬ್ರಹ್ಮ: ನಿಮ್ಮ ಸಾಹಿತ್ಯಿಕ ಬದುಕಿನ ಮೂಲ ಧ್ಯೇಯವೇನು?

ಉಷಾ ನರಸಿಂಹನ್ : ಯಾವುದೇ ತಾತ್ವಿಕತೆ ಅಥವಾ ಅಜೆಂಡಾಗಳನ್ನು ಇಟ್ಟುಕೊಂಡು ಬರೆಯುವವಳಲ್ಲ ನಾನು. ಸ್ತ್ರೀವಾದ, ದಲಿತ, ಬಂಡಾಯ ಇವೇ ಮುಂತಾದ ಆಶಯಗಳನ್ನು ಕಟ್ಟುವುದೇ ಬರವಣಿಗೆ ಅಂತ ನಾನು ಭಾವಿಸಿಲ್ಲ. ನಾನು ಬದುಕನ್ನು ಪರಿಭಾವಿಸುವ ರೀತಿ, ಬದುಕು ನನ್ನನ್ನು ಪ್ರಭಾವಿಸಿರುವ ಪರಿಯೇ ನನ್ನ ಕಥನಗಳ ಮೂಲದ್ರವ್ಯ ಮತ್ತು ಬೆಳಸು. ನಾನು ಸ್ತ್ರೀಯಾಗಿರುವ ಕಾರಣ ಮಹಿಳಾಪರ ನಿಲುವುಗಳು ನನ್ನ ಬರವಣಿಗೆಗೆ ಸಹಜವಾಗಿದೆ. ನನ್ನ ಈವರೆಗಿನ ಎಲ್ಲ ಕಾದಂಬರಿಗಳ ಕೇಂದ್ರ ಮಹಿಳೆಯೇ. ಈಗ ಅಕಾಡೆಮಿ ಗೌರವಕ್ಕೆ ಪಾತ್ರವಾಗಿರುವ ‘ಕಂಚುಗನ್ನಡಿ’ ನಾಟಕವೂ ಅಹಲ್ಯೆಯ ಸುತ್ತ ಪರಿಭ್ರಮಿಸುತ್ತದೆ. ಸ್ತ್ರೀಯಾತ್ಮಕ ಒಳತೋಟಿಗಳು ಒಳನೋಟಗಳಾಗಿವೆ. ಜೀವಪರತೆ ಸಹಜವಾಗಿ ಬರವಣಿಗೆಗೆ ದಕ್ಕಿದೆ. ಅಹಲ್ಯೆಯನ್ನು ಆ ಕಾಲದ ಚೌಕಟ್ಟಿನಿಂದ ಹೊರತಂದು ವರ್ತಮಾನಕ್ಕೆ ಸಂವಾದಿಯಾಗಿಸಿದ್ದೇನೆ. ಹೊಸ ಆಲೋಚನೆಯ ಪರಿಕ್ರಮಕ್ಕೆ ಒಡ್ಡಿದ್ದೇನೆ. ಬದುಕಿಗೆ ಬದ್ಧವಾಗಿ ಬರೆದಿದ್ದರೂ ದಯೆ, ಕರುಣೆ, ಲಿಂಗಸಮಾನತೆಯ ಆಶಯಗಳು ಪಡಿಮೂಡಿದೆ.

ಬುಕ್ ಬ್ರಹ್ಮ: ಸಾಹಿತ್ಯದಿಂದ ನಿಮ್ಮ ಬದುಕಿನಲ್ಲಾದ ಮಹತ್ವದ ಬದಲಾವಣೆಗಳೇನು ?

ಉಷಾ ನರಸಿಂಹನ್ : ಸಾಹಿತ್ಯ ಅಂದರೆ ಅದು ನನ್ನ ಅಧ್ಯಾತ್ಮ, ಆತ್ಮವಿಕಾಸದ ಮಾರ್ಗ. ಧರ್ಮಗ್ರಂಥಗಳ ಓದಿನಿಂದ ತೋರಬಹುದಾದ ಬದುಕಿನ ಪಕ್ವಮಾರ್ಗಗಳು ಸಾಹಿತ್ಯದಿಂದ ಅನಾಯಾಸ ದಕ್ಕಿಬಿಡುತ್ತದೆ. ವಿಚಾರಭಾರದಿಂದ ಕೂಡಿದ ಸೂಕ್ತಿಸುಧೆಗಳು ಗ್ರಹಿಸಲು ಅನುಷ್ಠಾನಗೊಳಿಸಲು ಒಂದಿಷ್ಟು ಬೌದ್ಧಿಕ ಕಸರತ್ತು ಬೇಕಾಗುತ್ತೆ. ಸಾಹಿತ್ಯ ಹಾಗಲ್ಲ, ಲಘುವಾಗಿ ಬಗೆಬಗೆಯಾಗಿ ಬದುಕಿನ ಸಂಧರ್ಭಗಳನ್ನು ನಮ್ಮ ಮುಂದಿಡುತ್ತಾ ಸಮಚಿತ್ತ ದಿವ್ಯಕ್ಕೆ ನಮ್ಮನ್ನು ದೂಡುತ್ತದೆ. ರಾಮಾಯಣ ಮಹಾಭಾರತದ ವನವಾಸ ಪ್ರಸಂಗಗಳು, ರಾಜಮಹಾರಾಜರು ಚಕ್ರವರ್ತಿಗಳನ್ನು, ರಾಣಿಯರಾಗಿ ಮೆರೆದವರನ್ನು ಬದುಕು ಎಂತೆಂತಹ ನಿಕಷಕ್ಕೊಡ್ಡುತ್ತದೆ ಎಂದು ಸಲೀಸಾಗಿ ಹೇಳಿಬಿಡುತ್ತದೆ! ಸಾಹಿತ್ಯದ ಶಕ್ತಿ ಮತ್ತು ಸಾಧ್ಯತೆಗಳು ಅಗಾಧವಾದದ್ದು. ಬದುಕಿನ ಯಾವುದೇ ಸನ್ನಿವೇಶಕ್ಕೆ ಪರಿಹಾರ ಸಾಹಿತ್ಯದ ಒಂದಲ್ಲ ಒಂದು ಕಡೆ ದೊರಕುತ್ತದೆ. ಅದಕ್ಕಿಂತ ಉತ್ತಮ ಟೀಚರ್ ಇಲ್ಲವೇ ಇಲ್ಲ. ಚಿಕ್ಕಂದಿನಲ್ಲಿ ಓದಿದ್ದ ತ.ರಾ.ಸು.ಅವರ ಸಿಡಿಲಮೊಗ್ಗು ಕಾದಂಬರಿಯ 'ನಿನಗಾಗಿ ರೂಪಿತವಾಗಿರುವ ಬದುಕು ಇಲ್ಲದಿದ್ದರೆ ಇರುವ ಬದುಕನ್ನು ನಿನಗಾಗಿ ರೂಪಿಸಿಕೋ' ಎನ್ನುವ ಸಂಭಾಷಣೆಯೊಂದು ನನ್ನನ್ನು ಧ್ಯೇಯವಾಕ್ಯದಂತೆ ಪೊರೆದು ಪೋಷಿಸಿದೆ. ಬದುಕಿನ ಹಲವು ಸಂಕಷ್ಟಗಳನ್ನು ಮೌನವಾಗಿ ಎದುರಿಸಿದ್ದೇನೆ. ಅಂತಹ ಆತ್ಮಬಲವನ್ನು ಸಾಹಿತ್ಯ ತಂದುಕೊಟ್ಟಿದೆ.

ಬುಕ್ ಬ್ರಹ್ಮ: ನಿಮ್ಮ ಬದುಕಿನಲ್ಲಿ ಬರವಣಿಗೆಯ ಪಾತ್ರ ?

ಉಷಾ ನರಸಿಂಹನ್ : ಬರವಣಿಗೆ ಅಂದರೆ ನನ್ನ ಲೌಕಿಕದ ನಂತರದ ವಿರಾಮ. ನನ್ನೊಳಗನ್ನು ಬಗೆದು ನೋಡುವ ವಿಧಿಯದು. ನಾನೊಬ್ಬಳು ವ್ಯಾಪಾರಿ ಮತ್ತು ಗೃಹಿಣಿ. ಗೃಹಕೃತ್ಯದ ಜೊತೆಗೇ ವೃತ್ತಿಗೂ ನ್ಯಾಯ ಸಲ್ಲಿಸಬೇಕು. ನಾನು. ಇದೆಲ್ಲದರ ನಡುವೆ ನನ್ನ ಸುಖದ ಸೆಲೆಗಳು ಸಾಕ್ಷಾತ್ಕಾರವಾಗುವುದು ಓದು ಮತ್ತು ಬರವಣಿಗೆಯಲ್ಲಿ. ಸಾಧಾರಣವಾಗಿ ರಾತ್ರಿಯ ನೀರವ ಏಕಾಂತಗಳು ನನ್ನ ಕಥನಕಾಲ. ಶಾಂತಿ, ಸುಖ, ಭಾವಸಂತುಲನಗಳಂಥ ಸೌಖ್ಯಾರಾಮಗಳನ್ನು ಒದಗಿಸುವುದು ನನ್ನ ಬರವಣಿಗೆ. ನಾನು ಪೂರ್ಣಪ್ರಮಾಣದ ಬರಹಗಾರ್ತಿಯಲ್ಲದಿದ್ದರೂ, ನನ್ನ ಭಾವಕೇಂದ್ರವನ್ನು ಆಳುತ್ತಿರುವುದು, ತನ್ಮೂಲಕ ಬದುಕನ್ನು ಹದ ತಪ್ಪದಂತೆ ಇಟ್ಟಿರುವುದು ಬರವಣಿಗೆಯೆ.

ಕಂಚುಗನ್ನಡಿ ಪುಸ್ತಕದ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ:

MORE FEATURES

'ಪ್ರೇಮಾಯತನ' ಒಲವ ಕವಿತೆಗಳ ಹೂಗುಚ್ಛವಾಗಿದೆ

24-04-2024 ಬೆಂಗಳೂರು

"ಇತ್ತೀಚಿನ ದಿನಗಳಲ್ಲಿ ನಮ್ಮ ಯುವಜನತೆ 'ಪ್ರೀತಿ' ಯನ್ನು ಅರ್ಥೈಸಿಕೊಳ್ಳುವಲ್ಲಿ ವಿಫಲರಾಗುತಿದ್ದಾರೆ. ಪ್...

ತುಳುನಾಡಿನ ದೈವಾರಾಧನೆಯ ಒಳ, ಹೊರಗಿನ ವಿಚಾರಗಳನ್ನು ಈ ಕೃತಿ ದಾಖಲಿಸಿದೆ

24-04-2024 ಬೆಂಗಳೂರು

"ಇದನ್ನು ಪುಸ್ತಕ ಅನ್ನುದಕ್ಕಿಂತಲೂ ದೈವಗಳ ಬಗ್ಗೆ ಭಕ್ತಿ , ಪ್ರೀತಿ ಇರುವವರ ಮನೆಯಲ್ಲಿರಲೆಬೇಕಾದ ಅಧ್ಬುತವಾದ ಗ್ರಂ...

ಸಾಮಾಜಿಕ ನ್ಯಾಯದ ಪ್ರಜ್ಞೆಯಾಗಿ ಡಾ. ರಾಜ್ ಕುಮಾರ್

24-04-2024 ಬೆಂಗಳೂರು

ಕನ್ನಡ ರಂಗಭೂಮಿ ಮತ್ತು ಚಿತ್ರರಂಗ ಕಂಡ ಮೇರು ಕಲಾವಿದ ಡಾ.ರಾಜ್ ಕುಮಾರ್. ನಟಸಾರ್ವಭೌಮ, ವರನಟ ಡಾ.ರಾಜ್ ಕುಮಾರ್ ತಮ್ಮ ಚಿ...