ಎಂ.ಎಲ್.ಶ್ರೀಕಂಠೇಶಗೌಡರೆಂಬ ಅನುವಾದಕ 

Date: 13-03-2021

Location: .


ಷೇಕ್ಸ್ ಪಿಯರ್ ಸೇರಿದಂತೆ ಅನೇಕ ಇಂಗ್ಲಿಷ್ ನಾಟಕಗಳನ್ನು ಕನ್ನಡದ ಜಾಯಮಾನಕ್ಕೆ ಒಗ್ಗಿಕೊಳ್ಳುವಂತೆ ಅನುವಾದಿಸಿದ ಪ್ರಮುಖರಲ್ಲಿ ಎಂ.ಎಲ್. ಶ್ರೀಕಂಠೇಶಗೌಡರು ಹೆಸರು ಮೇಲುಸ್ತರದಲ್ಲಿದೆ. ಜಾತಿಯಿಂದ ಶೂದ್ರರಿದ್ದೂ, ಸಾಹಿತ್ಯಕ ವಲಯದಲ್ಲಿ ಹತ್ತು ಹಲವು ಅವಮಾನಗಳನ್ನೂ ಸಹಿಸಿಕೊಂಡೂ, ಇಂಗ್ಲಿಷ್ ಸಾಹಿತ್ಯವನ್ನು ಕನ್ನಡಮಯವಾಗಿಸಿದ ಕೀರ್ತಿ ಇವರಿಗೆ ಸಲ್ಲುತ್ತದೆ. ಇವರ ಬದುಕು-ಸಾಹಿತ್ಯಕ ಸಾಧನೆ ಕುರಿತು ಲೇಖಕಿ ತಾರಿಣಿ ಶುಭದಾಯಿನಿ ಅವರು ತಮ್ಮ ‘ಅಕ್ಷರ ಸಖ್ಯ’ ಅಂಕಣದಲ್ಲಿ ವಿವರಿಸಿದ ಅರ್ಥಪೂರ್ಣ ಬರಹವಿದು.

ಎಂ.ಎಲ್. ಶ್ರೀಕಂಠೇಶಗೌಡರು(1852-1926) ಆರಂಭಕಾಲದ ಅನುವಾದಕರು. ಸ್ವತಂತ್ರ ಕೃತಿಗಳನ್ನು ಅವರು ರಚನೆ ಮಾಡಿರುವವರಾದರೂ ಅವುಗಳಿಗಿಂತ ಗೌಡರ ಅನುವಾದಗಳೇ ಹೆಚ್ಚು ಪ್ರಚಲಿತವಾಗಿರುವುದರಿಂದ ಅವು ಹಿನ್ನೆಲೆಗೆ ಸರಿದಿವೆ. ಇಂಗ್ಲಿಷ್ ಶಿಕ್ಷಣದ ಕಡೆ ಒಲವು ಬೆಳೆಯುತ್ತಿದ್ದ ಸಮಯದಲ್ಲಿ ಅನುವಾದಕ್ಕಿರುವ ಮಹತ್ವವನ್ನು ಮನಗಂಡು ಕನ್ನಡದಲ್ಲಿ ಷೇಕ್ಸ್‌ಪಿಯರ್ ಹಾಗೂ ಇಂಗ್ಲಿಷಿನ ಅನೇಕ ಬರಹಗಾರರ ಕೃತಿಗಳನ್ನು ಕನ್ನಡಿಸಿ ಕೊಟ್ಟಿದ್ದು ಶ್ರೀಕಂಠೇಶಗೌಡರ ಹಿರಿಮೆ, ಹತ್ತೊಂಬತ್ತು ಮತ್ತು ಇಪ್ಪತ್ತನೇ ಶತಮಾನದ ಸಂಧಿಕಾಲದಲ್ಲಿ ಶ್ರೀಕಂಠೇಶಗೌಡರು ಆಧುನಿಕ ಕನ್ನಡದ ಸಂದರ್ಭವನ್ನು ಸೃಷ್ಟಿಸುತ್ತಿದ್ದ ಅನೇಕ ಬಗೆಯ ಪಲ್ಲಟಗಳಿಗೆ ಸಾಕ್ಷಿಯಾಗಿ ಬದುಕಿದ್ದವರು. ತಮಗರಿವಿಲ್ಲದಂತೆ ಹೊಸಗನ್ನಡದ ಅರುಣೋದಯಕ್ಕೆ ನಾಂದಿ ಹಾಡಿದ ಲೇಖಕರಲ್ಲಿ ಗೌಡರು ಪ್ರಮುಖರು. ಹಳೆ ಮೈಸೂರು ಪ್ರಾಂತ್ಯಕ್ಕೆ ಸೇರಿದ ಗೌಡರು, ರಾಜರ ಆಳ್ವಿಕೆ ಹಾಗೂ ವಸಾಹತುಶಾಹಿ ಆಡಳಿತಗಳೆರಡಕ್ಕೂ ಸಾಕ್ಷಿಯಾದ ಕಾಲಕ್ಕೆ ಸೇರಿದ್ದು, ಅವರ ಬರಹಗಳಿಗೆ ಇನ್ನಷ್ಟು ಮಹತ್ವ ದೊರೆಯುವಂತೆ ಮಾಡಿದೆ.
ಇಂಗ್ಲಿಷ್ ಶಿಕ್ಷಣ ನಾಡಿನಾದ್ಯಂತ ಪಸರಿಸುತ್ತಿರುವ ಸಂದರ್ಭದಲ್ಲಿ ಅದರ ಲಾಭ ಪಡೆದ ಶ್ರೀಕಂಠೇಶರು ಲಾ ಮಾಡಲು ತೊಡಗಿದರು. ಹಳೆ ಮೈಸೂರು ಸೀಮೆಯಲ್ಲಿ ಹುಟ್ಟಿದ ಅವರ ತಂದೆ ಬ್ರಿಟಿಷ್ ಆಡಳಿತಾಂಗದಲ್ಲಿ ಉನ್ನತ ಹುದ್ದೆಯಲ್ಲಿ ಕೆಲಸ ಮಾಡಿದ ಹಿನ್ನೆಲೆಯಲ್ಲಿ ಅವರ ಮೊಮ್ಮಗನಾದ ಶ್ರೀಕಂಠೇಶಗೌಡರು ಇಂಗ್ಲಿಷ್ ಶಿಕ್ಷಣಕ್ಕೆ ತೆರೆದುಕೊಂಡಿದ್ದು ಸ್ವಾಭಾವಿಕವೇ ಆಗಿತ್ತು. ವಕೀಲಿ ಶಿಕ್ಷಣವನ್ನು ಪಡೆದುಕೊಳ್ಳಲು ಮದರಾಸಿಗೆ ಹೋದ ಸಂದರ್ಭದಲ್ಲಿ ಅವರಿಗೆ ಬ್ರಿಟಿಷ್ ಉನ್ನತಾಧಿಕಾರಿಗಳ ಸಂಸರ್ಗ ಒದಗಿಬಂತು. ಅದು ಅವರನ್ನು ಇಂಗ್ಲಿಷ್ ಓದಿಗೆ ತೆರೆದುಕೊಳ್ಳಲು ಅನುವು ಮಾಡಿಕೊಟ್ಟಿತು. ಅಲ್ಲದೆ, ಅಂದಿನ ನ್ಯಾಯಾಲಯದ ಕಾರ್ಯಕಲಾಪಗಳೆಲ್ಲ ನಡೆಯುತ್ತಿದ್ದುದು ಇಂಗ್ಲಿಷ್‌ನಲ್ಲಿ ಆದ್ದರಿಂದ ಅವರ ಇಂಗ್ಲಿಷ್ ಭಾಷೆಯ ಬಳಕೆ ಸುಲಲಿತವಾಯಿತು. ಆಗಿನ ಕಾಲದ ಶಿಷ್ಟವರ್ಗವು ಕನ್ನಡವನ್ನು ನಿರ್ಲಕ್ಷಿಸುತ್ತಿದ್ದುದನ್ನು ಕಂಡ ಗೌಡರು, ತಾವು ತಮ್ಮ ಮಾತೃಭಾಷೆಯ ಬಗೆಗೆ ಗಮನ ಹರಿಸಬೇಕೆಂದು ನಿರ್ಧಾರ ಮಾಡಿದರು. ಇದು ಅವರನ್ನು ಜನರೆಡೆಗೆ ಎಳೆದು ತಂದಿತು.
ಶ್ರೀಕಂಠೇಶಗೌಡರ ಬರಹಗಳಿಗೆ ಚಾರಿತ್ರಿಕವಾದ ಮಹತ್ವ ಇರುವುದಕ್ಕೆ ಕಾರಣಗಳೆಂದರೆ ಅವರು ಜಾತಿಯಿಂದ ಶೂದ್ರರಾಗಿದ್ದು ಆ ದಿನಮಾನಗಳಲ್ಲಿ ಅಕ್ಷರಾಭ್ಯಾಸ ಕಾಣದ ಸಮುದಾಯದ ಲೇಖಕರಾಗಿ ಹೊರಹೊಮ್ಮಿದ್ದು ಹಾಗೂ ಕನ್ನಡದ ಅನುವಾದಕರಾಗಿ ಅನುವಾದಗಳ ಬಗ್ಗೆ ತಮ್ಮ ಅಭಿಪ್ರಾಯ ಮಂಡಿಸುವ ಮೂಲಕ ಅನುವಾದ ಮೀಮಾಂಸೆಗೆ ಕಾಣಿಕೆಯನ್ನು ಕೊಟ್ಟಿರುವುದು. ನಾಟಕಗಳ ಬಗ್ಗೆ ಅತೀವವಾದ ಆಸಕ್ತಿ ಹೊಂದಿದ್ದ ಶ್ರೀಕಂಠೇಶಗೌಡರು, ‘ಶ್ರೀಕಂಠೇಶ್ವರ ನಾಟಕ ಸಭಾ’ ಎಂಬ ಸಂಸ್ಥೆಯನ್ನು ಸ್ಥಾಪಿಸಿ ನಾಟಕಗಳನ್ನು ಆಡಿಸುತ್ತಿದ್ದರು. ರಂಗಭೂಮಿಯ ತಾಲೀಮಿನಿಂದ ಅವರಿಗೆ ಕನ್ನಡದ ಮಟ್ಟುಗಳು, ಆಡುನುಡಿಗಳು ಕರಗತವಾಗಿದ್ದವು. ಇಂಗ್ಲಿಷಿನ ಶಿಕ್ಷಣವು ಅವರ ನಾಟಕಗಳ ಬಗೆಗೆ ಇನ್ನಷ್ಟು ಆಸಕ್ತಿಯನ್ನು ಹೆಚ್ಚಿಸಿತೆಂದೇ ಹೇಳಬಹುದು. ಷೇಕ್ಸ್‌ಪಿಯರ್ ಕೃತಿಗಳ ಅನುವಾದ ಹಾಗೂ ಅನೇಕ ಹೊಸ ಪ್ರಕಾರಗಳಾದ ನಾವೆಲು, ವ್ಯಕ್ತಿಚಿತ್ರ, ಜೀವನಚರಿತ್ರೆಗಳನ್ನು ರೂಢಿಸಿಕೊಟ್ಟು ಕನ್ನಡದ ಹಿರಿಮೆಯನ್ನು ಹೆಚ್ಚಿಸಿದರು.
ಕನ್ನಡದ ಸಂದರ್ಭದಲ್ಲಿ ಹಳೆಮೈಸೂರು ಭಾಗದಲ್ಲಿ ರಾಜರ ಆಳ್ವಿಕೆಯು ಇಂಗ್ಲಿಷ್ ವಿದ್ಯಾಭ್ಯಾಸಕ್ಕೆ ಪ್ರೋತ್ಸಾಹಿಸಿದ್ದ ಕಾರಣ ಆ ಪ್ರಾಂತ್ಯದಲ್ಲಿ ಭಾಷಾಂತರದ ಚಟುವಟಿಕೆಗಳು ಗರಿಗೆದರಿದವು. ಸಂಸ್ಕೃತ ನಾಟಕಗಳ ಅನುವಾದಗಳ ಪಂಡಿತ ಪರಂಪರೆಯ ಜೊತೆಗೆ ಇಂಗ್ಲಿಷ್ ನಾಟಕಗಳ ಅನುವಾದಗಳು ನಡೆದವು. ಹತ್ತೊಂಬತ್ತನೆಯ ಶತಮಾನದ ಕೊನೆಭಾಗದಲ್ಲಿ ಆಸಕ್ತರಾದ ಆನಂದರಾವ್, ಜಯರಾವ್, ಸುಬ್ಬರಾವ್ ಮತ್ತು ಶ್ರೀಕಂಠೇಶಗೌಡರೇ ಮೊದಲಾದವರು ಕೂಡಿ ‘ಗ್ರಾಜುಯೇಟ್ ಟ್ರೇಡಿಂಗ್ ಅಸೊಸಿಯೇಶನ್’ ಎಂಬ ಪ್ರಕಟಣಾ ಸಂಸ್ಥೆಯನ್ನು ಆರಂಭಿಸಿ ಸಂಸ್ಕೃತ, ಇಂಗ್ಲಿಷ್ ಹಾಗೂ ಯುರೋಪಿಯನ್ ಸಾಹಿತ್ಯಗಳನ್ನು ಭಾಷಾಂತರಿಸತೊಡಗಿದರು. ಆದರೆ ಇಂಗ್ಲಿಷಿನ ಭಾಷಾಂತರ ಕೃತಿಗಳಿಗೇ ಈ ಸಂಸ್ಥೆ ಹೆಚ್ಚಿನ ಮನ್ನಣೆ ನೀಡಿತು. ಇಲ್ಲಿಂದ ಪ್ರಕಟಗೊಂಡ ಕೃತಿಗಳು ಇಂಗ್ಲಿಷ್/ಯುರೋಪಿಯನ್ ಕ್ಲಾಸಿಕಲ್ ಸಾಹಿತ್ಯ ಕೃತಿಗಳು ಹಾಗೂ ವಿಜ್ಞಾನ ಮತ್ತು ವಿಚಾರ ಸಾಹಿತ್ಯ ಕೃತಿಗಳು ಮುಂಚೂಣಿಯಲ್ಲಿದ್ದವು.

ಜಾತಿ ಪ್ರಶ್ನೆ: ಶ್ರೀಕಂಠೇಶಗೌಡರು ಶೂದ್ರವರ್ಗಕ್ಕೆ ಸೇರಿದ್ದರಿಂದ ಅವರ ಕೃತಿಗಳನ್ನು ನಾಶಪಡಿಸಲಾಯಿತು ಎನ್ನುವ ಅಭಿಪ್ರಾಯವನ್ನು ಅವರ ಕೃತಿ ಸಂಗ್ರಹಿಸಿ, ಸಂಪಾದಿಸಿದ ಹ.ಕ.ರಾಜೇಗೌಡರು ವ್ಯಕ್ತಪಡಿಸುತ್ತಾರೆ. ಮೇಲ್ಜಾತಿ ಪಂಡಿತವರ್ಗವು ಸಂಸ್ಕೃತದ ಮೇಲೆ ಹಿಡಿತ ಸಾಧಿಸಿದ್ದಂತೆಯೇ ವಸಾಹತುಶಾಹಿ ಸಂಪರ್ಕದಿಂದ ಇಂಗ್ಲಿಷ್ ಭಾಷೆಯ ಕಲಿತು ಅದರ ಮೇಲೆಯೂ ಪ್ರಭುತ್ವವನ್ನು ಸಾಧಿಸಿದ್ದವು. ಹೀಗೆ ಇಂಗ್ಲಿಷ್ ಕಲಿತ ಉನ್ನತ ಜಾತಿಯ ವರ್ಗವು ದುಭಾಷಿಗಳಾಗಿ ಭಾಷಾಂತರಕಾರರಾಗಿ ಸರ್ಕಾರದ ಉನ್ನತ ವಲಯಗಳಲ್ಲಿ ಕೆಲಸ ಪಡೆದುಕೊಳ್ಳತೊಡಗಿದರು. ಇಂಗ್ಲಿಷಿನ ಪ್ರಭಾವದಿಂದ ಕೆಲವು ಪಠ್ಯಗಳನ್ನು ಭಾಷಾಂತರಿಸುವ ಅವಕಾಶಗಳು ಒದಗಿ ಬಂದವು. ಕನ್ನಡದ ಮೊದಲ ಭಾಷಾಂತರಕಾರರಾಗಿದ್ದ ಎಸ್.ಜಿ.ನರಸಿಂಹಾಚಾರ್ಯರು, ಬಿ.ರಾಮರಾವ್ ಮುಂತಾದವರು ಸರ್ಕಾರದ ಇಲಾಖೆಗಳಲ್ಲಿ ಭಾಷಾಂತರಕಾರರಾಗಿ ದುಡಿದವರು. ಇವರೇ ಮುಂದೆ ಕನ್ನಡದ ಭಾಷಾಂತರಕಾರರಾಗಿ ಹೆಸರಾದವರು. ಈ ಉನ್ನತವರ್ಗವು ಆರಂಭಿಸಿದ ಭಾಷಾಂತರ ಕಾರ್ಯವನ್ನು ಆನಂತರದ ತಲೆಮಾರುಗಳು ಅನುಸರಿಸಲಾರಂಭಿಸಿದವು. ಹತ್ತೊಂಬತ್ತನೆಯ ಶತಮಾನದಲ್ಲಿ ಪಠ್ಯಪುಸ್ತಕಗಳಿಗಾಗಿ ರಂಗಭೂಮಿಗಾಗಿ ಭಾಷಾಂತರಗಳಾಗುತ್ತಿದ್ದವು. ಆ ಭಾಷಾಂತರಗಳನ್ನು ಮಾಡುತ್ತಿದ್ದವರು ಬಹುಪಾಲು ಮೇಲ್ಜಾತಿಯವರೇ ಆಗಿರುತ್ತಿದ್ದರು. ಷೇಕ್ಸ್‌ಪಿಯರ್ ನಾಟಕಗಳ ರುಚಿ ಹತ್ತಿದ ಸಂದರ್ಭದಲ್ಲಿ ಅವುಗಳನ್ನು ಕನ್ನಡಕ್ಕೆ ತಂದ ಭಾಷಾಂತರಕಾರರು ಮೇಲ್ಜಾತಿಯವರೇ ಆಗಿದ್ದರು. ನವನವೀನ ಪ್ರಕಾರಗಳನ್ನು ಕನ್ನಡಕ್ಕೆ ಭಾಷಾಂತರ ಮಾಡುವ ಆಸಕ್ತಿ ತೋರಿಸಿದ್ದು ಇದೇ ವರ್ಗವೇ.
ಹಳೇಮೈಸೂರು ಪ್ರಾಂತ್ಯದಲ್ಲಿ ಹತ್ತೊಂಬತ್ತನೇ ಶತಮಾನದ ಉತ್ತರಾರ್ಧದಲ್ಲಿ ಭುಗಿಲೆದ್ದ ಜಾತಿ ಅಸಮಾಧಾನಗಳು ಬ್ರಾಹ್ಮಣ-ಬ್ರಾಹ್ಮಣೇತರರ ಸಂಘರ್ಷಕ್ಕೆ ಕಾರಣವಾಯಿತು. ಇಂತಹದೊಂದು ಚಾರಿತ್ರಿಕ ಸಂದರ್ಭದಲ್ಲಿ ಶ್ರೀಕಂಠೇಶಗೌಡರಂತಹ ಭಾಷಾಂತರಕಾರರನ್ನು ವಿಶೇಷವಾಗಿ ಗಮನಿಸಬೇಕೆನಿಸುತ್ತದೆ. ಮೇಲ್ಜಾತಿಯವರೇ ಪ್ರಬಲವಾಗಿದ್ದ ವಿದ್ಯಾಭ್ಯಾಸ ಮತ್ತು ಸಾಹಿತ್ಯ ಕ್ಷೇತ್ರಗಳಲ್ಲಿ ಶ್ರೀಕಂಠೇಶಗೌಡರ ಪ್ರವೇಶ ಅಚ್ಚರಿ ಮೂಡಿಸುತ್ತದೆ. ನಾಟಕಗಳ ರಚನೆ ಮತ್ತು ಆಡಿಸುವ ಬಗೆಗೆ ಬಹಳ ಆಸಕ್ತಿ ಹೊಂದಿದ್ದ ಶ್ರೀಕಂಠೇಶಗೌಡರು, ತಮ್ಮ ಅಭಿರುಚಿಗನುಗುಣವಾಗಿ ಭಾಷಾಂತರಗಳನ್ನು ಮಾಡತೊಡಗಿದರು. ಅವರು ಎತ್ತಿಕೊಂಡಿದ್ದು ಷೇಕ್ಸ್‌ಪಿಯರ್ ನಾಟಕಗಳ ಅನುವಾದವನ್ನು. ಮ್ಯಾಕ್‌ಬೆತ್ (ಪ್ರತಾಪ ರುದ್ರದೇವ), ‘ಎ ಮಿಡ್ ಸಮ್ಮರ್ ನೈಟ್ಸ್ ಡ್ರೀಮ್ಸ್’ (ಪ್ರಮೀಳಾರ್ಜುನೀಯಂ) ಮುಂತಾದವುಗಳು ಅವರಿಗೆ ಹೆಸರು ತಂದುಕೊಟ್ಟವು. ವರದಾಚಾರ್ಯರ ಕಂಪೆನಿಯು ಪ್ರತಾಪರುದ್ರದೇವ ನಾಟಕವನ್ನು ರಂಗದಲ್ಲಿ ಆಡಿ ಅದನ್ನು ಬಹು ಜನಪ್ರಿಯಗೊಳಿಸಿತ್ತು. ರಾಜಾಶ್ರಯವಿಲ್ಲದೆ ತಾವೊಬ್ಬರೆ ತಮ್ಮ ಅಭಿರುಚಿಯನ್ನು ನೆಚ್ಚಿ ಭಾಷಾಂತರ ಮಾಡಿದ ಶ್ರೀಕಂಠೇಶಗೌಡರಿಗೆ ಅದು ಏಕಮೇವ ಸಾಹಸವಾಗಿತ್ತು. ತಮ್ಮ ದಾರಿಯನ್ನು ತಾವೇ ಕಂಡುಕೊಳ್ಳಬೇಕಾದ ಅನಿವಾರ್ಯವಿತ್ತು. ಕನ್ನಡದಲ್ಲಿ ಬರೆಯಲು ಒಲ್ಲದೆ ಇಂಗ್ಲಿಷಿನಲ್ಲಿಯೇ ಬರೆಯುತ್ತಿದ್ದ ಕವಿ ಕುವೆಂಪು ಕನ್ನಡದಲ್ಲಿ ಬರೆಯಲು ಆರಂಭಿಸಿದ ಹೊಸದರಲ್ಲಿ ಅನುಭವಿಸಿದ ಸಾಂಸ್ಕೃತಿಕ ಕೀಳರಿಮೆ ಮತ್ತು ಬರೆದುದಕ್ಕೆ ಮಾನ್ಯತೆ ಇದೆಯೋ ಇಲ್ಲವೋ ಎನ್ನುವ ಆತಂಕಗಳನ್ನು ಶ್ರೀಕಂಠೇಶಗೌಡರು ತಮ್ಮ ಭಾಷಾಂತರಗಳ ಸಮಯದಲ್ಲಿಯೇ ಕಂಡುಕೊಂಡಿದ್ದರು. ಷೇಕ್ಸ್‌ಪಿಯರನ ನಾಟಕಗಳಲ್ಲದೆ ಹೆನ್ರಿ ಫೀಲ್ಡಿಂಗನ ಸಿಲಿಕಾನ್ ಸಮ್ಮರ್ ಕೃತಿಯನ್ನು ‘ಕನ್ಯಾವಿತಂತ” ಎಂದೂ ಮೇರಿ ಎಡ್‌ವರ್ಡ್ಸ್ ಅವರ ಲಿಟಲ್ ಮರ್ಚೆಂಟ್ಸ್ ಕೃತಿಯನ್ನು ‘ಚಿಕ್ಕ ಬಣಜಿಗರು’ ಎಂಬ ಕೃತಿಯನ್ನೂ ಶ್ರೀಕಂಠೇಶಗೌಡರು ಭಾಷಾಂತರಿಸಿದ್ದರು.
ಶ್ರೀಕಂಠೇಶಗೌಡರು ತಮ್ಮ ಅನುವಾದಗಳ ಆರಂಭದಲ್ಲಿಯೇ ಸರಸ್ವತಿಗೆ ಒಂದು ಬಿನ್ನಹವನ್ನು ಮಾಡಿಕೊಳ್ಳುತ್ತಾರೆ. ಅದು ಹೀಗಿದೆ:
ವಾಣ ಯೆ ಕರ್ಣಾಟಕದೊಳ್
ರಾಣ ಯೆ ಸೋಜಿಗವೆ ಪೇಳೆ ಕಬ್ಬವ ಗೌಡಂ//
ಜಾಣರಿದೋದಿರಿ ನೀವ್ ಬಿ/
ನ್ನಾಣವ ಕಾಣುವಿರಿದರೊಳ್ ಮನ್ನಿಸಿ ತಪ್ಪಂ//

ಶೂದ್ರನೊಬ್ಬ ಸಾಹಿತ್ಯದ ಕೆಲಸಕ್ಕೆ ಕೈಹಾಕಿರುವ ಬಗೆಗೆ ಆಶ್ಚರ್ಯ ಹಾಗೂ ಹೆಮ್ಮೆಯ ಮಾತುಗಳು ಇಲ್ಲಿವೆ. ಇವು ಕುವೆಂಪು ತಮ್ಮ ಆರಂಭದ ಕವಿತೆಯಲ್ಲಿ ಬರೆದುಕೊಂಡಂತೆ ಕಾಡಿನ ಕವಿಯು ನಾ ಎಂದು ಹೇಳುವುದಕ್ಕೆ ಸಮನಾಗಿದೆ. ಅಕ್ಷರಾಭ್ಯಾಸವನ್ನು ಮಾಡದ ಸಮುದಾಯದಿಂದ ಬಂದ ಶ್ರೀಕಂಠೇಶಗೌಡರು, ತಮ್ಮ ಭಾಷಾಂತರಗಳಿಂದ ತಮಗರಿವಿಲ್ಲದಂತೆ ಜಾತಿಯ ರಾಜಕಾರಣದಲ್ಲಿ ಸಿಲುಕಿದ್ದಾರೆ. ಶ್ರೀಕಂಠೇಶಗೌಡರ ಅನೇಕ ಪುಸ್ತಕಗಳು ಉಪಲಬ್ಧವಿಲ್ಲದಿರುವುದು; ಉಪಲಬ್ಧವಿದ್ದ ಹಲವು ಪುಸ್ತಕಗಳಲ್ಲಿ ಲೇಖಕರ ಹೆಸರು, ವಿವರಗಳಿರುವ ಪುಟಗಳನ್ನು ಈರ್ಷ್ಯೆಯಿಂದಲೊ ಅಥವಾ ಕುತ್ಸಿತ ಮನೋಭಾವದಿಂದಲೋ ಕಿತ್ತು ಹಾಕಿರುವುದನ್ನು ಅವರ ಪುಸ್ತಕಗಳನ್ನು ಸಂಪಾದನೆ ಮಾಡಿದ ಹ.ಕ.ರಾಜೇಗೌಡರು ವಿವರಿಸಿದ್ದಾರೆ. ಅವರು ಸಂಪಾದಿಸಿದ ಪುಸ್ತಕಗಳ ಮೇಲೆ ಬರೆದಿದ್ದ ಅನಾಮಧೇಯ ವಾಕ್ಯಗಳು ಜಾತ್ಯಂಧತೆಯ ಕುರುಹುಗಳಾಗಿ ತೋರಿದವು ಎಂದಿದ್ದಾರೆ. ಸುಮಾರು ಎಪ್ಪತ್ತು ಎಂಬತ್ತು ವರ್ಷಗಳ ಹಿಂದೆಯೇ ಶೂದ್ರನೊಬ್ಬ ಅಥವಾ ಶ್ರೀಕಂಠೇಶಗೌಡರ ಮಾತಿನಲ್ಲಿಯೇ ಹೇಳಬೇಕೆಂದರೆ ಗೌಡನೊಬ್ಬ ಕಾವ್ಯ ಬರೆದುದು ಈ ಜನರಿಗೆ ಮೊದಲು ಸೋಜಿಗವಾಗಿ ಅನಂತರ ಅಸೂಯೆಯಾಗಿ, ಕಡೆಗೆ ಆತನ ಹೆಸರನ್ನೇ ಅಳಿಸಿಬಿಡುವ ಪ್ರವೃತ್ತಿಗೆ ಪ್ರೇರೇಪಣೆಯಾಗಿರಬೇಕು (ಶ್ರೀಕಂಠೇಶಗೌಡರ ಕೃತಿಗಳು, xxvi). ಇದರಿಂದ ತಿಳಿಯುವುದೇನೆಂದರೆ ಶ್ರೀಕಂಠೇಶರಂತಹ ಭಾಷಾಂತರಕಾರರು ಒಂದು ಅಸ್ಮಿತೆಯನ್ನು ಕಂಡುಕೊಳ್ಳಲು ಹೆಣಗಬೇಕಾದ ಜಾತಿರಾಜಕಾರಣದ ಸ್ವರೂಪ ಹಿರಿದಾಗಿತ್ತು ಎನ್ನುವುದು.
ಸ್ವತಃ ಶ್ರೀಕಂಠೇಶಗೌಡರು ಜಾತಿ ಪ್ರಶ್ನೆಯನ್ನು ನಿರ್ವಹಿಸಬೇಕಾಗಿ ಬರುವುದು ಷೇಕ್ಸ್‌ಪಿಯರ್‌ನ ‘ಎ ಮಿಡ್ ಸಮ್ಮರ್ ನೈಟ್ಸ್ ಡ್ರೀಮ್ಸ್’ ನಾಟಕದ ಸಾಮಾನ್ಯರನ್ನು ಕನ್ನಡದ ಸಮಾಜಕ್ಕೆ ಒಗ್ಗಿಸುವ ಸಂದರ್ಭದಲ್ಲಿ. ಶ್ರೀಕಂಠೇಶಗೌಡರು, ಈ ನಾಟಕವನ್ನು ರೂಪಾಂತರಿಸಿ ‘ಪ್ರಮೀಳಾರ್ಜುನೀಯಂ’ ಎಂದು ಮಾಡಿದ್ದಾರೆ. ನಾಟಕದೊಳಗೆ ಬರುವ ನಾಟಕವನ್ನು ಆಡಲು ಸಾಮಾನ್ಯರು ಬರುವುದನ್ನು ಸ್ಥಳೀಯ ಜಾತಿಗಳಿಗೆ ಹೊಂದಿಸುತ್ತಾರೆ. ಮಡಿವಾಳ, ಕ್ಷೌರಿಕ, ಆಚಾರಿ ಹೀಗೆ ಅನೇಕ ಸ್ಥಳೀಯ ಜಾತಿಗಳಲ್ಲಿ ಸಾಮಾನ್ಯರು ಮೈದಳೆದು ಬರುತ್ತಾರೆ. ಶ್ರೀಕಂಠೇಶಗೌಡರ ಪ್ರಮೀಳಾರ್ಜುನೀಯಂ ನಾಟಕಾನುವಾದದಲ್ಲಿ ಬರುವ ಸಾಮಾನ್ಯರು ತಮ್ಮ ಜಾತಿ ನಿಶ್ಚಿತತೆಗಳನ್ನು ಢಾಳಾಗಿಯೇ ತೋರ್ಪಡಿಸುತ್ತಾರೆ. ಪ್ರತಿ ಪಾತ್ರಧಾರಿಯು ತನ್ನ ಮತ್ತು ಇನ್ನೊಬ್ಬನ ಜಾತಿಯನ್ನು ನಿಸ್ಸಂಕೋಚವಾಗಿ ಉಲ್ಲೇಖಿಸುವನು. ನಾಟಕದ ರಿಹರ್ಸಲ್ ಮಾಡುತ್ತಿದ್ದ ಕ್ಷೌರದ ನಾಗಪ್ಪ ಹಾಡಿದಾಗ ಮಾಯಾಚಾರಿ ಪ್ರಶಂಸಿಸುವುದು, ಎಷ್ಟಾದರೂ ವಾಲಗ ಊದಿದ ಬಾಯಿ!(ಶ್ರೀಕಂಠೇಶಗೌಡ, 2009-133). ಮಡಿವಾಳ ಮಾಚಯ್ಯನು ಕೆರೇಲಿ ಒಗೆಯುವ ಅಗಸನಿಗಿಲ್ಲದ ನೀರು ತಲೆಕೆರೆಯೊ ಹಜಾಮನ ಬಟ್ಟಲಲ್ಲಿದೆಯೇನು?( ಅದೇ, ಪು.133). ಎನ್ನುತ್ತಾನೆ. ಮೂಲ ಷೇಕ್ಸ್‌ಪಿಯರ್ ನಾಟಕದಲ್ಲಿ ಸಾಮಾನ್ಯರು ತಾವು ಅನುಸರಿಸುತ್ತಿದ್ದ ವೃತ್ತಿಗನುಸಾರವಾಗಿ ಕೀಳು ಎನ್ನುವುದನ್ನು ತಮ್ಮ ಸ್ವಭಾವದಲ್ಲಿ ಹಾಗೂ ಧೋರಣೆಯಲ್ಲಿ ತೋರಿಸಿದರೆ, ಭಾರತೀಯ ಸಂದರ್ಭದಲ್ಲಿ ಅದು ಜಾತಿಗೆ ಪರಿವರ್ತನೆಗೊಳ್ಳುತ್ತದೆ. ಮುಖ್ಯವಾಹಿನಿಯ ಲಹರಿಯನ್ನೆ ಅನುಸರಿಸಿ ಶ್ರೀಕಂಠೇಶಗೌಡರು ತಮ್ಮ ಧೋರಣೆಯನ್ನು ಮಾಡಿಕೊಂಡಿದ್ದಾರೆ ಎನ್ನುವುದು ಸ್ಪಷ್ಟ.

ಭಾಷೆಯ ತಾಕಲಾಟ : ಶ್ರೀಕಂಠೇಶಗೌಡರು ಪ್ರತಾಪರುದ್ರ ನಾಟಕಾನುವಾದದ ಸಂದರ್ಭದಲ್ಲಿ ಬರೆದ ಮುನ್ನುಡಿಯಲ್ಲಿ ಭಾಷಾಂತರವಾಗಬೇಕಾದ ಕನ್ನಡದ ಬಗೆಗೆ ವಿವೇಚನೆ ಮಾಡಿದ್ದಾರೆ. .. ಪದ್ಯಭಾಗವನ್ನು ಮಾತ್ರ ಸರಳ ರಗಳೆಯಲ್ಲಿ ಭಾಷಾಂತರಿಸಿ ಉಳಿದ ಗದ್ಯವನ್ನು ಹೊಸಗನ್ನಡದಲ್ಲಿ ಅನುವಾದಿಸುವ ಪ್ರಯತ್ನವನ್ನು ಮಾಡಿದ್ದಾರೆ. ಮುದ್ದಣನ ಸಮಕಾಲೀನರಾದ ಶ್ರೀಕಂಠೇಶರು, ತಮ್ಮ ಭಾಷಾಂತರದ ಕಾರ್ಯದಲ್ಲಿ ಕನ್ನಡವನ್ನು ಹೊಸದಾಗಿ ಕಟ್ಟಿಕೊಳ್ಳಬೇಕಾದ ಅನಿವಾರ್ಯ ಸ್ಥಿತಿಯನ್ನು ಪರಿಶೀಲಿಸಿದ್ದಾರೆ. ಸಂಸ್ಕೃತ-ಕನ್ನಡ ಮತ್ತು ಕನ್ನಡ-ಇಂಗ್ಲಿಷುಗಳ ನಡುವಿನ ಅನುಸಂಧಾನ ಏರ್ಪಡುವ ವೇಳೆ ಏನೆಲ್ಲ ಸಂಕಷ್ಟಗಳು ಎದುರಾಗಬಹುದೆಂಬ ಪರಿಣಾಮವನ್ನು ಸಹ ಅವರು ಅವಲೋಕಿಸಿದ್ದಾರೆ. ಶ್ರೀಕಂಠೇಶಗೌಡರು ತಮ್ಮ ಪೀಠಿಕೆಯಲ್ಲಿ ಭಾಷಾಂತರ ಕಾಲದ ಕಷ್ಟಗಳನ್ನು ವಿವರಿಸುವಾಗ ಕನ್ನಡ ಭಾಷಾಂತರಕಾರರ ಸಂಸ್ಕೃತ ಅವಲಂಬನೆಯನ್ನು ಕುರಿತು ಹೇಳಿರುವ ಮಾತುಗಳನ್ನಿಲ್ಲಿ ಗಮನಿಸಬಹುದು:
..ಕನ್ನಡ ಸಂಸ್ಕೃತಗಳೆರಡರಲ್ಲೂ ಇಲ್ಲದ ವಿಷಯಗಳೂ ಶಬ್ದಗಳೂ, ಶಬ್ದ ಪ್ರಯೋಗಚಾತುರ್ಯವೂ, ವಾಕ್ಯಬಂಧನ ಕಾವ್ಯ ಬಂಧನಗಳ ರೀತಿಯೂ, ಲಕ್ಷಣ ಅಲಂಕಾರಗಳೂ, ಕವಿತಾ ಚಮತ್ಕಾರಗಳೂ ಹಿಂದುಸ್ತಾನಿ ಇಂಗ್ಲಿಷ್ ಮುಂತಾದ ಇತರ ಭಾಷೆಗಳಿಂದ ತೆಗೆದುಕೊಂಡು ಕನ್ನಡವನ್ನು ರಸವತ್ತಾಗಿ ಮಾಡಿದರೇತಕ್ಕೆ ಆಕ್ಷೇಪಣೆ? ಅನ್ನದಂತಿರುವ ಕನ್ನಡಕ್ಕೆ ಕನ್ನಡದಲ್ಲೇ ರುಚಿ ಸಾಲದು. ಅದನ್ನು ರಸವತ್ತಾಗಿ ಮಾಡುವುದಕ್ಕಾಗಿ ಸಾರು ತುಪ್ಪದಂತೆ ಸಂಸ್ಕೃತವನ್ನು ಬೆರೆಸಲುದ್ಯೋಗಿಸಿ ಹೊಂದಲಿ ಹೊಂದದೆ ಇರಲಿ, ಅವಶ್ಯಕವಿರಲಿ ಇಲ್ಲದೇ ಇರಲಿ, ಸಂಸ್ಕೃತ ಶಬ್ದಗಳನ್ನು ಕನ್ನಡಕ್ಕೆ ಬೆರೆಸುತ್ತ ಕಡೆಗೆ ಅನ್ನವನ್ನು ಬಿಟ್ಟೇ ಬಿಟ್ಟು, ಬರೀ ಸಾರು ತುಪ್ಪವನ್ನೇ ಕುಡಿಕುಡಿದು ಭೋಜನವಾಯಿತೆಂದು ಬಾಯಿ ಸವರುತ್ತಿರುವುದು ಭೋಜನವೋ? ಬಾತಾಕಾನಿತನವೋ?(ಶ್ರೀಕಂಠೇಶಗೌಡ, 2009, 8).
ಶ್ರೀಕಂಠೇಶಗೌಡರ ವಿಶ್ಲೇಷಣೆಯನ್ನು ಭಾಷಾಭಿಮಾನಿಯೊಬ್ಬರು ವಿದ್ಯಾದಾಯಿನಿ ಪತ್ರಿಕೆಯಲ್ಲಿ ಒಪ್ಪದೆ ತಕರಾರನ್ನು ಎತ್ತಿದ್ದಾರೆ. ಆಗ ಉಲ್ಬಣಗೊಂಡಿದ್ದ ಜಾತಿಪ್ರಶ್ನೆಯೇ ಇದಕ್ಕೆ ಕಾರಣವಿರಬಹುದು. ಭಾಷಾಂತರಕಾರರು ತಮ್ಮ ಭಾಷಾಂತರದಲ್ಲಿ ಒಂದು ಶಿಷ್ಟಭಾಷೆಯನ್ನು ಬಳಸುವಂತೆ ಒತ್ತಡ ಹೇರುವುದು ಪ್ರಾಯಶಃ: ಇದೇ ಕಾರಣಕ್ಕಾಗಿ ಎಂದು ಊಹಿಸಬಹುದು. ಇಲ್ಲಿ ಶಿಷ್ಟ ಎಂದರೆ ಉನ್ನತ ಜಾತಿ/ವರ್ಗಗಳಲ್ಲಿ ಪ್ರಚಲಿತವಿರುವ ಗೌರವಾನ್ವಿತವಾದ ಭಾಷೆ ಎಂದಿರಬೇಕು. ಶ್ರೀಕಂಠೇಶಗೌಡರು ತಮ್ಮ ಭಾಷಾಂತರದ ಕೃತಿಯಾದ ಪ್ರತಾಪರುದ್ರದೇವದ ಪೀಠೀಕೆಯಲ್ಲಿ ಸಂಸ್ಕೃತ ಪರಂಪರೆಯಲ್ಲಿ ಕನ್ನಡ ಸಾರಸ್ವತವು ಅಡಗಿಕೊಂಡಿದ್ದು ಅದರಲ್ಲಿಯೇ ಇರಬೇಕೆನ್ನುವ ಪ್ರಮೇಯವನ್ನು ಅವರು ಪ್ರಶ್ನಿಸಿಕೊಂಡು ಇಂಗ್ಲಿಷ್ ಭಾಷಾಂತರಗಳನ್ನು ಸಮರ್ಥಿಸಿಕೊಂಡಿದ್ದಾರೆ. ಸಂಸ್ಕೃತದ ಪ್ರಾಚೀನತೆ ಮತ್ತು ಇಂಗ್ಲಿಷಿನ ಆಧುನಿಕತೆಗಳನ್ನು ಮುಖಾಮುಖಿಯಾಗಿಸಿ ಸೂಕ್ಷ್ಮವಾಗಿ ಇಂಗ್ಲಿಷಿನ ಆಧುನಿಕತೆ ಸ್ವಾಗತಾರ್ಹ ಎನ್ನುವ ದನಿಯನ್ನು ಹೊರಡಿಸಿದ್ದಾರೆ.

ಸ್ತ್ರೀಪಾತ್ರಗಳೂ ಸಂಸ್ಕೃತಿ ಪ್ರಶ್ನೆಯೂ: ಸ್ವಾತಂತ್ರ್ಯಪ್ರಜ್ಞೆ ಮೊಳೆಯುತ್ತಿದ್ದ ಹೊಸ ರಾಷ್ಟ್ರೀಯತೆಯ ಕಲ್ಪನೆಯಲ್ಲಿ ಹೆಣ್ಣಿನ ಪ್ರಶ್ನೆ ಮಹತ್ವದ್ದಾಗಿತ್ತು. ಆಕೆಯ ಶೀಲವು ನೇರವಾಗಿ ರಾಷ್ಟ್ರದ ಮರ್ಯಾದೆಗೆ ಸೇರಿದುದಾಗಿತ್ತು. ಇಂತಹ ಸಂದರ್ಭದಲ್ಲಿ ಶ್ರೀಕಂಠೇಶಗೌಡರು. ಇಂತಹ ಸಂದರ್ಭದಲ್ಲಿ ಮೈಸೂರು ಪ್ರಾಂತ್ಯದಿಂದ ಬಂದ ಶ್ರೀಕಂಠೇಶಗೌಡರ ಷೇಕ್ಸ್‌ಪಿಯರ್ ನಾಟಕಾನುವಾದಗಳು ಪಿತೃಪ್ರಧಾನತೆಯನ್ನು ಹೇಗೆ ವಿವರಿಸಿಕೊಂಡವು ಎಂಬುದನ್ನು ಗಮನಿಸಬಹುದು.
ಶ್ರೀಕಂಠೇಶಗೌಡರು ತಮ್ಮ ಭಾಷಾಂತರಗಳಲ್ಲಿ ಮಾಡಿಕೊಂಡ ಬದಲವಾಣೆಗಳು ಆ ಕಾಲದ ಪಿತೃಪ್ರಧಾನ ಸಾಮಾಜಿಕ ಸಂರಚನೆಗೆ ಒತ್ತುಕೊಟ್ಟು ಆದಂತವು ಎನ್ನುವುದಕ್ಕೆ ಸಾಕಷ್ಟು ಪುರಾವೆಗಳು ಅವರ ಭಾಷಾಂತರದಲ್ಲಿ ದೊರೆಯುತ್ತವೆ. ಅದರಲ್ಲಿ ಮುಖ್ಯವಾಗಿ ಅವರು ಭಾಷಾಂತರಿಸಿದ ಷೇಕ್ಸ್‌ಪಿಯರನ ಮಿಡ್ ಸಮ್ಮರ್ ನೈಟ್ಸ್ ಡ್ರೀಮ್ಸ್ ನಾಟಕ-ಪ್ರಮೀಳಾರ್ಜುನೀಯಂ (1896). ಈ ನಾಟಕವು ಒಂದು ರೂಪಾಂತರದ ಉದಾಹರಣೆಯಾಗಿದೆ. ಮೂಲನಾಟಕದ ಕಥಾಹಂದರದ ಮೂಳೆಗಳನ್ನು ಉಳಿಸಿಕೊಂಡು ಭಾಷಾಂತರಕಾರರು ತಾವು ನೋಡಿದ, ಕಲ್ಪಿಸಿದ ಸಮಾಜದ ಮೌಲ್ಯಗಳ ಆಧಾರದ ಮೇಲೆ ಸಂದರ್ಭ ಹಾಗೂ ಪಾತ್ರಗಳನ್ನು ಸೃಷ್ಟಿಸುತ್ತಾರೆ. ಶ್ರೀಕಂಠೇಶಗೌಡರ ನಾಟಕವು ಒಂದು ಪ್ರಮೀಳಾ ರಾಜ್ಯವನ್ನು ಮೊದಲಿಗೇ ಕಟ್ಟಿಕೊಡುತ್ತದೆ. ಪ್ರಮೀಳಾ ಮತ್ತು ಅರ್ಜುನರಿಬ್ಬರ ಕಥೆಯನ್ನೂ ಪೌರಾಣ ಕ ಕಥಾಹಂದರಕ್ಕೆ ಕಲ್ಪಿಸಲಾಗಿದ್ದು ಈ ಹಿಂದೆ ಭಾರತ ದೇಶದಲ್ಲಿ ಪ್ರಮೀಳಾ ರಾಜ್ಯಗಳು ಅಸ್ತಿತ್ವದಲ್ಲಿದ್ದವು ಎನ್ನುವ ಆಧಾರ ಪಡೆದುಕೊಳ್ಳುತ್ತಾರೆ. ಪ್ರಸ್ತುತ ಮಹಿಳಾ ರಾಜ್ಯವು ಕೇರಳದಲ್ಲಿ(ಮಲಯಾಳದಲ್ಲಿ?) ನಡೆಯುತ್ತದೆ. ಇಲ್ಲಿ ಪ್ರಮೀಳಾ ರಾಜ್ಯವು ಪುರಾಣ ಸಾದೃಶ್ಯಗಳಿಂದ ನಿರ್ಮಾಣವಾಗಿದ್ದರೂ ಸದ್ಯ ಭಾರತದಲ್ಲಿ ಮಾತೃಪ್ರಧಾನ ಪದ್ಧತಿ ಇರುವ ಮಲಯಾಳ ದೇಶವನ್ನು ಆಯ್ಕೆ ಮಾಡಿಕೊಳ್ಳಲಾಗಿದೆ. ಪುರುಷರಾಜನು ತೀರ್ಮಾನಿಸುವ ಪ್ರೇಮಕಥೆಯಲ್ಲಿ ವಿನಾಕಾರಣ ಸ್ತ್ರೀರಾಜ್ಯದ ಅಧಿಪತಿಯಾಗಿ ಪ್ರಮೀಳೆಯನ್ನು ಭಾಷಾಂತರಕಾರರು ತರುವುದರಲ್ಲಿಯೇ ಅಪಹಾಸ್ಯವಿದೆ ಎಂದು ಅಧ್ಯಯನಗಳು ತಿಳಿಸುತ್ತವೆ(ನೋಡಿ, ಹೆಚ್ಚಿನ ಮಾಹಿತಿಗೆ, ಉಷಾ.ಎಂ, ಭಾಷಾಂತರ ಮತ್ತು ಲಿಂಗ ರಾಜಕಾರಣ). ಮಹಿಳಾ ರಾಜ್ಯ ಹಾಗೂ ಮಹಿಳೆಯ ಆಯ್ಕೆಯ ಪ್ರೇಮಗಳನ್ನು ಭಾಷಾಂತರಿತ ನಾಟಕ ಒಂದು ಬಗೆಯ ಹಾಸ್ಯದಲ್ಲಿಯೇ ನೋಡುತ್ತಾ ಹೋಗುವುದನ್ನು ಸೂಕ್ಷ್ಮವಾಗಿ ಗಮನಿಸಬಹುದು. ಇದೇ ನಾಟಕದಲ್ಲಿ ಬರುವ ಇನ್ನೊಂದು ಪ್ರಸಂಗ-ನಾಟಕದೊಳಗಿನ ನಾಟಕವನ್ನು ಆಡಲು ಜನಸಾಮಾನ್ಯರು ಸಿದ್ಧರಾಗುವುದು. ಮೂಲ ನಾಟಕದಲ್ಲಿ ಪೈರಮಸ್ ಮತ್ತು ಥಿಸ್ಬೆ ಎಂಬ ದುರಂತ ನಾಟಕವನ್ನು ಆಡಿದರೆ ಇಲ್ಲಿ ಶ್ರೀಕಂಠೇಶಗೌಡರು ರೊಮಿಯೊ ಜೂಲಿಯೆಟ್ ನಾಟಕದ ದುರಂತ ಭಾಗವನ್ನು ಎತ್ತಿಕೊಂಡು ಸೇರಿಸುತ್ತಾರೆ. ರಾಮವರ್ಮ್ ಮತ್ತು ಲೀಲಾವತಿ ಇಲ್ಲಿ ಪ್ರೇಮಿಗಳಲ್ಲ; ದಂಪತಿಗಳೇ. ರೊಮಿಯೊಗಾಗಿ ಮದ್ದನ್ನು ಕುಡಿದ ಲೀಲಾವತಿ ಸತ್ತಂತೆ ಮಲಗಿರುವುದನ್ನು ಕಂಡು ಅವಳು ಸತ್ತಳೆಂದು ಭಾವಿಸಿ ರಾಮವರ್ಮನು ತಾನೂ ವಿಷ ಕುಡಿಯುವನು. ಲೀಲಾವತಿ ತಾನು ವಿಧವೆಯಾದೆ ಎನ್ನುವುದನ್ನು ಗ್ರಹಿಸಿ ಇನ್ನೇನು ಗತಿ? ಎಂದರೆ ಪೂಜ್ಯಪಾದನು ಅವಲಕ್ಕಿ ಮೊಸರು ಎನ್ನುವನು(ಶ್ರೀಕಂಠೇಶಗೌಡ, 2009, 191). ಇದು ಮುಂದುವರೆದು ವಿಧವೆಯರ ಜೀವನದ ಬಗೆಗೆ ಅಪಹಾಸ್ಯದ ಹಾಡನ್ನು ಲೀಲಾವತಿ ಸ್ವತ: ಹಾಡುವಂತೆ ಮಾಡಲಾಗಿದೆ. ಈ ಎಲ್ಲ ಅಂಶಗಳನ್ನು ಗಮನಿಸಿದರೆ, ಭಾಷಾಂತರಕಾರರ ದೃಷ್ಟಿ ಪಿತೃಪ್ರಧಾನತೆಯ ದೃಷ್ಟಿಯನ್ನು ಎತ್ತಿಹಿಡಿಯುವಂತಿದೆ ಎಂದು ಹೇಳಬಹುದು. ನಿರ್ಮಲವಾದ ಪ್ರೇಮವು ಗೆಲ್ಲುವ ಮೂಲಕ ಪ್ರೇಮಕ್ಕೆ ಜಯ ಎನ್ನುವ ಬದುಕಿನ ಸತ್ಯವನ್ನು ಮೂಲನಾಟಕ ಹೇಳಲು ಬಯಸಿದರೆ, ಇತ್ತ ಭಾಷಾಂತರವು ಒಂದು ಪ್ರಹಸನವನ್ನು ಅಧಿಕ ಪ್ರಸಂಗದ ಪ್ರಹಸನದಿಂದ ಕೋರ್ಟುಶಿಪ್ಪು, ಪ್ರೇಮ ಪ್ರಸಂಗಗಳ ಮೂಲಕ ರೂಢಿಗೆ ಬರುತ್ತಿದ್ದ ಹೊಸ ಜೀವನ ಶೈಲಿಯನ್ನು ಜಾಡಿಸಿದೆ.
ಶ್ರೀಕಂಠೇಶಗೌಡರು ಮಾರ್ಪಾಟು ಮಾಡಿಕೊಳ್ಳುವ ರೀತಿ-ಅವರ ಪ್ರಕಾರ ಓಢ್ರ ಮಹಾರಾಜ(ಡಂಕನ್)ನನ್ನು ಎದುರುಗೊಳ್ಳುವುದಕ್ಕೆ ಬರುವ ಚಂದ್ರವಲ್ಲಿ(ಲೇಡಿ ಮ್ಯಾಕ್‌ಬೆತ್) ಕ್ರಮವು ಕನ್ನಡ ಸಂಸ್ಕೃತಿಗೆ ಒಪ್ಪುವಂತದ್ದಲ್ಲ. ಏಕೆಂದರೆ ನಮ್ಮ ಸ್ತ್ರೀಯರು ಅಂತಃಪುರವನ್ನು ಬಿಟ್ಟು ಹೊರಕ್ಕೆ ಬರುವುದಿಲ್ಲ ಎನ್ನುವ ಪ್ರತೀತಿ. ಆದರೆ ಇಲ್ಲಿ ಶ್ರೀಂಕಠೇಶಗೌಡರು ಅದಕ್ಕೆ ಅವಕಾಶವನ್ನು ಕಲ್ಪಿಸಿದರೂ ಇಲ್ಲಿಯ ಸಭ್ಯತೆಯ, ಶಿಷ್ಟಾಚಾರದ ನಿಯಮಗಳನ್ನೇ ಪಾಲಿಸುವಂತೆ ಮಾಡುತ್ತಾರೆ. ಮೂಲದಲ್ಲಿರುವುದು ಲೇಡಿಮ್ಯಾಕ್‌ಬೆತ್ತಳು ಡಂಕನ್ನನ್ನು ಎದುರುಗೊಳ್ಳುವುದು ಸರಿಯಾಗಿರಬಹುದು. ಆದರೆ, ಕನ್ನಡ ನಾಟಕದಲ್ಲಿಯೂ ಅದೇ ರೀತಿ ಇರುವುದು ಆಕ್ಷೇಪಣೆಗೆ ಕಾರಣವಾಗಿರುವುದು. ನಮ್ಮ ದೇಶದಲ್ಲಿ ಅಂತಹ ಸ್ತ್ರೀಯರು ಅಂತಃ:ಪುರವನ್ನು ಬಿಟ್ಟು ಹೊರಕ್ಕೆ ಬರುವುದಿಲ್ಲ. ಇದು ಶ್ರೀಕಂಠೇಶಗೌಡರ ತಿಳಿವಳಿಕೆ. ಆದರೆ ಸ್ವಾತಂತ್ರ್ಯ ಹೋರಾಟ ಕಾಲದಲ್ಲಿಯೇ ಇದ್ದ ಝಾನ್ಸಿರಾಣಿ , ಕಿತ್ತೂರು ಚನ್ನಮ್ಮ ಅವರ ವ್ಯಕ್ತಿತ್ವಗಳನ್ನು ಶ್ರೀಕಂಠೇಶಗೌಡರು ಗಮನಿಸದಂತೆ ಸ್ತ್ರೀಯರ ಸಾರ್ವಜನಿಕವಾಗಿ ಭಾಗವಹಿಸುವುದನ್ನು ತಳ್ಳಿಹಾಕಿದ್ದಾರೆ. ಚಂದ್ರವಲ್ಲಿ ಓಢ್ರರಾಜನನ್ನು ಎದುರುಗೊಂಡರೂ ಅವನು ಅವಳನ್ನು ತಂಗೀ ಎಂದು ಸಂಬೋಧಿಸುವ ಮೂಲಕ ಇಂಗ್ಲಿಷ್ ಆತಿಥ್ಯ ಪ್ರಸಂಗದ ಮುಜುಗರವನ್ನು ಕಡಿಮೆ ಮಾಡಿಕೊಳ್ಳಲಾಗಿದೆ. ಲೇಡಿ ಮ್ಯಾಕ್‌ಬೆತ್ ಪಾತ್ರವು ಶಿಷ್ಟಾಚಾರವನ್ನು ಪ್ರತಿನಿಧಿಸುವ ನಿಟ್ಟಿನಲ್ಲಿ ಯಾವ ಪ್ರಯೋಜನಕ್ಕೂ ಬಾರದು. ಮೂಲತ: ಆ ಪಾತ್ರವು ತನ್ನ ಮಾತುಗಳಲ್ಲೇ ಆಡಿತೋರುವ ದುಷ್ಟತನದ ಅಧಿಕಪ್ರಸಂಗದಿಂದ ಹೆಣ್ಣುತನವನ್ನು ಸಂಪೂರ್ಣ ಈವಿಲ್ ಹಂತಕ್ಕೆ ಒಯ್ಯುತ್ತದೆ. ಆದುದರಿಂದಲೇ ಅವಳನ್ನು ನಾಲ್ಕನೇ ಮಾಟಗಾತಿ ಎಂದು ಇಂಗ್ಲಿಷ್ ವಿಮರ್ಶೆಗಳು ಕರೆಯುವುದು.
ಹೀಗೆ ಶ್ರೀಕಂಠೇಶಗೌಡರು ಮೂಲನಾಟಕಗಳೊಳಗೆ ಪ್ರವೇಶಿಸುವುದು ಅದರ ಮೂಲಕ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸುವುದು ಒಂದು ವಿಪರೀತದ ಸಂಗತಿ ಎಂದು ಅವರು ಭಾವಿಸುವುದಿಲ್ಲ. ಅದನ್ನು ತಾವು ತಿದ್ದಬೇಕಾದ ಅವಶ್ಯ ಸಂಗತಿ ಎಂದು ಭಾವಿಸುತ್ತಾರೆ ಎನ್ನುವುದು ಇಲ್ಲಿ ಗಮನಿಸಬೇಕಾದ ಅಂಶ.


ಶ್ರೀಕಂಠೇಶಗೌಡರ ಷೇಕ್ಸ್‌ಪಿಯರ್ ಅನುವಾದಗಳು : ಶ್ರೀಕಂಠೇಶಗೌಡರು ಚರಿತ್ರೆಯಲ್ಲಿ ದಾಖಲಾದುದು ತಮ್ಮ ಷೇಕ್ಸ್‌ಪಿಯರ್ ಅನುವಾದಗಳಿಗಾಗಿ. ಗೌಡರ ಕಾಲದಲ್ಲಿ ಅನುವಾದಗಳು ಬರುತ್ತಿದ್ದುದು ಸಂಸ್ಕೃತ ಭಾಷಾಸಾಹಿತ್ಯದಿಂದ. ಸಂಸ್ಕೃತ ಪಂಡಿತೋತ್ತಮರು ಮಾಡಿದ ಅನುವಾದಗಳಾದರೋ ಜನಸಾಮಾನ್ಯರಿಗೆ ರುಚಿ ಹುಟ್ಟಿಸುವುದಕ್ಕಿಂತ ಭಯ ಹುಟ್ಟಿಸುತ್ತಿದ್ದುದೇ ಹೆಚ್ಚು. ಜಾನಪದ ರಂಗಭೂಮಿ ಆಟಗಳಾದ ಯಕ್ಷಗಾನ, ಬಯಲಾಟ ಮುಂತಾದವುಗಳಲ್ಲಿ ತೃಪ್ತರಾಗಿದ್ದ ನಾಡಿಗರನ್ನು ಷೇಕ್ಸ್‌ಪಿಯರ್ ಸೆಳೆದಿದ್ದು ಇಂಗ್ಲಿಷ್ ಕಲಿತವರ ಆಸಕ್ತಿಯ ಶ್ರಮದಿಂದಲೇ. ಬೇರೆಲ್ಲ ಬರಹಗಾರರಿಗಿಂತ ಷೇಕ್ಸ್‌ಪಿಯರ್ ನಮ್ಮ ನಾಡಿಗರನ್ನು ಆಕರ್ಷಿಸಲು ಕಾರಣ ಎಂದರೆ ಅವನ ಲೋಕವು ಸಾರ್ವತ್ರಿಕವಾದ ಮಾನವ ಜಗತ್ತಿನ ಸಂಗತಿಗಳನ್ನು ನಾಟಕವಾಗಿಸುವುದು ಎನ್ನಬಹುದು. ಷೇಕ್ಸ್‌ಪಿಯರ್ ಹಾಗೂ ಕಾಳಿದಾಸನನ್ನು ಅಕ್ಕಪಕ್ಕ ಇಟ್ಟು ನೋಡುವ ಮೂಲಕ ಷೇಕ್ಸ್‌ಪಿಯರ್ ಭಾರತದ ಕಾಳಿದಾಸನಾಗಿ ಒಳಪ್ರವೇಶಿಸಿದ. ಆದರೆ ಹತ್ತೊಂಬತ್ತನೆಯ ಶತಮಾನದ ಸಂವೇದನೆಯು ಭಾರತೀಯ ಲೇಖಕರಿಗೆ ಷೇಕ್ಸ್‌ಪಿಯರ್‌ನ ಇಂಗ್ಲಿಷ್ ಸಂಸ್ಕೃತಿಯನ್ನು ಭಾರತೀಯ ಸಂಸ್ಕೃತಿಯ ಜೊತೆಗೆ ಹೋಲಿಸಿ ನೋಡುವ ಪ್ರವೃತ್ತಿಯನ್ನು ಬೆಳೆಸಿತು. ಅದರ ಫಲವಾಗಿ ಷೇಕ್ಸ್‌ಪಿಯರ್ ಕನ್ನಡಕ್ಕೆ ಬರುವಾಗ ಅನೇಕ ರೂಪಾಂತರಗಳ ಪಾಕಗಳಲ್ಲಿ ಬರಬೇಕಾಯಿತು. ವೈವಿಧ್ಯಮಯವಾದ ಸ್ವೀಕರಣ ಪ್ರಕ್ರಿಯೆಗಳು ನಡೆದವು; ಮರುಕಟ್ಟುವಿಕೆಗಳು ನಡೆದವು. ಷೇಕ್ಸ್‌ಪಿಯರ್ ನಾಟಕಗಳು ಕನ್ನಡದಲ್ಲಿ ರೂಪಾಂತರಗೊಂಡ ಉತ್ತಮ ಉದಾಹರಣೆಯಾಗಿ ಗೌಡರ ರಚನೆಗಳನ್ನು ನೋಡಬಹುದು.
ಶ್ರೀಕಂಠೇಶಗೌಡರು ತಮ್ಮ ಷೇಕ್ಸ್‌ಪಿಯರ್ ಅನುವಾದಗಳನ್ನು ಕನ್ನಡದ ನೆಲಕ್ಕೆ ಒಗ್ಗಿಸುವ ರೀತಿಯನ್ನು ಕಂಡುಕೊಂಡರು. ಯಕ್ಷಗಾನ, ಬಯಲಾಟಗಳಂತಹ ನಾಟಕ ಪ್ರಕಾರಗಳನ್ನು ನೋಡಿಬಲ್ಲವರಾದ ಗೌಡರಿಗೆ ಷೇಕ್ಸ್‌ಪಿಯರ್‌ನನ್ನು ಕನ್ನಡಕ್ಕೆ ಕರೆದುಕೊಳ್ಳುವುದು ತೀರಾ ಹೊಸ ಸಾಹಸದಂತೇನು ತೋರಿದಂತಿಲ್ಲ. ಇರುವ ಸಂಸ್ಕೃತಿಯ ಹಾಸಿನಲ್ಲಿಯೇ ಷೇಕ್ಸ್‌ಪಿಯರ್‌ನನ್ನು ಓದುವುದನ್ನು ಮಾತ್ರ ಅವರು ಬಯಸುತ್ತಿಲ್ಲ. ತಮ್ಮ ಕನ್ನಡದ ಜನತೆಗೆ ಅವನನ್ನು ಹೇಗೆ ಕೊಡಬೇಕು ಎನ್ನುವುದು ಅವರನ್ನು ಆವರಿಸಿತ್ತು ಎನ್ನಿಸುತ್ತದೆ. ಆ ಕಾರಣದಿಂದ ವೃತ್ತಿರಂಗಭೂಮಿ ಆಡುತ್ತಿದ್ದ ನಾಟಕಗಳ ಶೈಲಿಯಲ್ಲಿ ಷೇಕ್ಸ್‌ಪಿಯರ್‌ನನ್ನು ಅನುವಾದಿಸಿದರು. ರೋಮಿಯೋ ಜೂಲಿಯೆಟ್ ನಾಟಕವನ್ನು ಅವರೆಂದುಕೊಂಡಂತೆ ಭಾರತೀಯ ಸಂಸ್ಕೃತಿಗೆ ತಕ್ಕಂತೆ ರಾಮವರ್ಮ ಲೀಲಾವತಿ ಎಂದು ಅನುವಾದಿಸಿದರು. ಅದು ವರದಾಚಾರ್ಯರ ಕಂಪೆನಿಯಲ್ಲಿ ಬಹುಯಶಸ್ವಿಯಾದ ಪ್ರಯೋಗವಾಗಿತ್ತು. ಹಾಗೆಯೇ ಎ ಮಿಡ್ ಸಮ್ಮರ್ ನೈಟ್ಸ್ ಡ್ರೀಮ್ಸ್ ನಾಟಕವನ್ನು ‘ಪ್ರಮೀಳಾರ್ಜುನೀಯಂ’ ಎಂದೂ ಮ್ಯಾಕ್‌ಬೆತ್ ಅನ್ನು ‘ಪ್ರತಾಪರುದ್ರದೇವ’ ಎಂದು ಅನುವಾದಿಸಿದರು.
ಷೇಕ್ಸ್‌ಪಿಯರ್‌ನನ್ನು ಅನುವಾದಿಸಲು ಅವರಿಗಿದ್ದ ಭಕ್ತಿ ಗೌರವವು ಮಿಗಿಲಾದುದೇ! ಏಕೆಂದರೆ ಷೇಕ್ಸ್‌ಪಿಯರ್ ಆಳುವ ಆಂಗ್ಲರ ಸಂಸ್ಕೃತಿಯವನಲ್ಲವೇ? ಅವರೇ ತಮ್ಮ ನಾಟಕಗಳ ಪ್ರಸ್ತಾವನೆಯಲ್ಲಿ ಹೇಳಿಕೊಳ್ಳುವಂತೆ; ಇನ್ನೂರ ನಲವತ್ತು ಕೋಟಿ ಪ್ರಜೆಗಳಿಂದ ಕೂಡಿದ ಭರತಖಂಡದ ಸಾಮ್ರಾಜ್ಯಕ್ಕಿಂತಲೂ ಅತಿಶಯವಾದ, ಆ ಕವಿರಾಜಸಾರ್ವಭೌಮನಾದ, ಷೇಕ್ ಸ್ಪೀರ್ (ಅವರ ಭಾಷೆಯಲ್ಲಿ ಷೇಕ್ಸ್‌ಪಿಯರ್) ಇಂತಾ ಇಂಗ್ಲೀಷ್ ಭಾಷೆಯ ಅನುಕೂಲಗಳು ಸಾಲದೆ ಇದ್ದ ನಿರ್ಬಂಧಗಳನ್ನೆಲ್ಲ ಉಲ್ಲಂಘಿಸಿ ಮನಸ್ವಿ ಬರೆದದ್ದೂ ಛಂದಸ್ಸಿಗೂ, ವ್ಯಾಕರಣಕ್ಕೂ, ಶಬ್ದಾರ್ಥಕ್ಕೂ, ವಿರುದ್ಧವಾಗಿರುವುದೆಂದು ಹೇಳಲು ಪಂಡಿತರಿಗೆ ಶಕ್ತಿ ಸಾಲದೆ ಅವನು ಬರೆದದ್ದೇ ಛಂದಸ್ಸು ಅವನು ಬರೆದದ್ದೇ ವ್ಯಾಕರಣವೆಂದು.. ವಿಜಾತೀಯವಾದ ಗಂಭೀರತೆಯೂ, ಕಾವ್ಯರಸವೂ, ಉಳ್ಳ ಉತ್ತಮ ಕಾವ್ಯವನ್ನು ಭಾಷಾಂತರಿಸಲು ಈ ಬಡ ಕನ್ನಡದ ಪ್ರಾಸ, ಗಣ, ಮಾತ್ರೆ, ಛಂದಸ್ಸಿನ ಕತ್ತರಿಗೆ ಸಿಕ್ಕಿ ಒದ್ದಾಡಲೇಬೇಕಾದ ಕರ್ಣಾಟಕದ ಸುಂಡಗಳು ಪ್ರಯತ್ನಿಸುವ ಸಂದರ್ಭದಲ್ಲೇ ಆ ವಿಸೂಯಸ್ ಪರತ್ವವು ತನ್ನ ಜ್ವಾಲಾವದನದಲ್ಲಿ ಆ ಸಾಮತಿಯನ್ನು ಘರ್ಜನಂಗೈಯುತ್ತಿರುವುದು. ಹೀಗೆ ಕನ್ನಡದ ಅಸಹಾಯಕತೆಯನ್ನು ಮುಂದು ಮಾಡುವುದು ಆ ಕಾಲದಲ್ಲಿ ಅನಿವಾರ್ಯವೇ ಆಗಿತ್ತೇನೊ. ಆದರೆ ಇಷ್ಟೆಲ್ಲಾ ಮಹತ್ವವುಳ್ಳ ಷೇಕ್ಸ್‌ಪಿಯರ್‌ನನ್ನು ಯಾಕಾಗಿ ರೂಪಾಂತರಿಸಿದರೋ? ಎಂಬ ಪ್ರಶ್ನೆ ಮೂಡುತ್ತದೆ. ಷೇಕ್ ಸ್ಫೀರ್ ನಲ್ಲಿರುವ ಸ್ವಾರಸ್ಯ ಕಾಳಿದಾಸನಲ್ಲಿಲ್ಲವೆಂದು ಒಪ್ಪುವ ಶ್ರೀಕಂಠೇಶರು ತಮ್ಮಲ್ಲೇ ಒಂದು ಉಚ್ಚ-ನೀಚ ಸಂಸ್ಕೃತಿಗಳ ಮಾದರಿಯನ್ನು ಒಪ್ಪಿಕೊಂಡಿದ್ದಾರೆ. ಆದರೆ ಷೇಕ್ಸ್‌ಪಿಯರ್ ರಂಗಕ್ಕೆ ಬರುವಾಗ ಅದನ್ನು ನೋಡುವವರು ಇಲ್ಲಿನ ಪ್ರೇಕ್ಷಕರು ತಾನೆ? ಹಾಗಾಗಿ ಅವರು ಅವನ ನಾಟಕಗಳನ್ನು ಇಲ್ಲಿನ ಜಾಯಮಾನಕ್ಕೆ ತಕ್ಕಂತೆ ಮಾರ್ಪಾಟು ಮಾಡಿಕೊಂಡರು. ಇನ್ನೊಂದು ಸಂಸ್ಕೃತಿಯನ್ನು ತಮ್ಮ ಭಾಷೆ, ಸಂಸ್ಕೃತಿಗಳಲ್ಲಿ ನಿರೂಪಿಸುವ ಕೆಲಸ ಕಷ್ಟದ್ದು ಎನ್ನಿಸದಂತೆ ತಮ್ಮ ಕಥೆಯನ್ನಾಗಿಸಿಕೊಂಡೇ ಹೇಳಲು ಉಪಕ್ರಮಿಸಿದರು. ಹೀಗೆ ಭಿನ್ನ ಸಂಸ್ಕೃತಿಗಳಲ್ಲಿ ಇನ್ನೊಬ್ಬ ನಾಟಕಕಾರನನ್ನು ಕಾಣುವುದು ಆಮೇಲೆ ರಂಗಭೂಮಿಯ ಸೃಜನಶೀಲತೆಯನ್ನೇ ಹೆಚ್ಚಿಸಿದವು. ಕನ್ನಡದ ನಾಟಕಗಳನ್ನಾಗಿಸಿದ ಶ್ರೀಕಂಠೇಶರ ಕ್ರಿಯೆಯು ಕನ್ನಡದಲ್ಲಿ ಕ್ರಿಯಾಶೀಲವಾಗಿಯೇ ಮುಂದುವರೆಯಿತು ಎನ್ನವುದಕ್ಕೆ ಕುವೆಂಪು ಅವರ ‘ರಕ್ತಾಕ್ಷಿ’ ನಾಟಕ ಸಾಕ್ಷಿಯಾಯಿತು.

ಆಕರ
ರಾಜೇಗೌಡ, ಹ.ಕ(ಸಂ). ಶ್ರೀಕಂಠೇಶಗೌಡರ ಕೃತಿಗಳು. ಮೈಸೂರು: ಬೆಳಕೆರೆ ಪ್ರಕಾಶನ, ೨೦೦೯

ಈ ಅಂಕಣದ ಹಿಂದಿನ ಬರಹಗಳು

ಬೇಂದ್ರೆ ಅನುವಾದಗಳ ಅನುಸಂಧಾನ

ಕನ್ನಡ ಭಾಷಾಂತರ ಮತ್ತು ಪ್ರದೇಶಗಳು

‘ಕನ್ನಡ ಶಾಕುಂತಲ’ಗಳು: ಒಂದು ವಿಶ್ಲೇಷಣೆ

ಕನ್ನಡ ಭಾಷಾಂತರ ಮತ್ತು ಪ್ರದೇಶಗಳು

ಗಾಂಧಿ, ಅನುವಾದ ಮತ್ತು ಕನ್ನಡಾನುವಾದದೊಳಗೆ ಗಾಂಧಿ

ಇಂಗ್ಲಿಷ್ ಗೀತಗಳ ಪಯಣ

ಷೇಕ್ಸ್‌ಪಿಯರ್‌ ಮೊದಲ ಅನುವಾದಗಳು: ಕನ್ನಡಕ್ಕೆ ಹೊಲಿದುಕೊಂಡ ದಿರಿಸುಗಳು

MORE NEWS

ಕಲಬುರ್ಗಿ ಜಿಲ್ಲಾ ಪ್ರಥಮ ತತ್ವಪದ ಸಾಹಿತ್ಯ ಸಮ್ಮೇಳನ

24-04-2024 ಬೆಂಗಳೂರು

"ಕಡಕೋಳ ಮಠಾಧೀಶರು ಮತ್ತು ತತ್ವಪದಗಳ ಮಹಾ ಪೋಷಕರಾದ ಷ. ಬ್ರ. ಡಾ. ರುದ್ರಮುನಿ ಶಿವಾಚಾರ್ಯರು ಸಮ್ಮೇಳನದ ಸರ್ವಾಧ್ಯಕ...

ಸಂಶೋಧನೆಯಲ್ಲಿ ಆಕರಗಳ ಸಂಗ್ರಹ, ವಿಂಗಡಣೆ ಮತ್ತು ಪೂರ್ವಾಧ್ಯಯನ ಸಮೀಕ್ಷೆ

23-04-2024 ಬೆಂಗಳೂರು

"ಒಂದನ್ನು ಬಿಟ್ಟು ಇನ್ನೊಂದನ್ನು ಚಿಂತಿಸಲಾಗದು. ಅಲ್ಲದೆ; ಶೀರ್ಷಿಕೆ ಆಖೈರು ಮಾಡಿಕೊಳ್ಳುವುದಕ್ಕೆ ನಾವು ಅವಸರ ಮಾಡ...

ಪರಿಘಾಸನ ಮತ್ತು ಅರ್ಧ ಚಕ್ರಾಸನ 

16-04-2024 ಬೆಂಗಳೂರು

"ಪರಿಘಾಸನ ಆಸನವು ) ಪಿತ್ತ ಜನಕಾಂಗ ಮತ್ತು ಮೇದೋಜೀರಕ ಚೈತನ್ಯಗೊಳ್ಳುವಂತೆ ಮಾಡುತ್ತದೆ. ಹಾಗೆಯೇ ‘ಅರ್ಧ ಚಕ್...