ಯುವ ಬರಹಗಾರ ಅನಂತ ಅವರ ನೂತನ ಕವನ ಸಂಕಲನ ‘ಮೂರನೆಯವಳು’. ಈ ಕೃತಿಗೆ ಹಿರಿಯ ಕವಯತ್ರಿ ಎಂ.ಆರ್. ಕಮಲ ಅವರು ಬರೆದ ಮೆಚ್ಚುಗೆಯ ನುಡಿಗಳು ಇಲ್ಲಿವೆ.
ಅನಂತ ಅವರ ಹೆಚ್ಚಿನ ಕವನಗಳು ಸ್ತ್ರೀ ಕೇಂದ್ರಿತವಾದವು. ಹೆಣ್ಣಿನ ಅಂತರಂಗವನ್ನು ಹೊಕ್ಕು, ಅವಳ ಸೂಕ್ಷ್ಮ, ಸಂಕೀರ್ಣ ಅನುಭವಗಳನ್ನು ತನ್ನದಾಗಿಸಿಕೊಳ್ಳುತ್ತಾ.. ಸಮಸ್ಯೆಗಳನ್ನು ಅರ್ಥಮಾಡಿಕೊಂಡು ಅಭಿವ್ಯಕ್ತಿಸುವ ರೀತಿಯಲ್ಲಿ ಇಲ್ಲಿಯ ಕವಿತೆಗಳಿವೆ. ಹೆಣ್ಣನ್ನು ಅನೇಕ ಬಗೆಯಲ್ಲಿ ಶೋಷಣೆಗೆ ಗುರಿ ಮಾಡುತ್ತಿರುವ ಪುರುಷ ಪ್ರಧಾನ ಸಮಾಜವನ್ನು ಟೀಕಿಸುವ, ಪ್ರಶ್ನಿಸುವ ಕವಿಯ ಒಳಕುದಿ ಹೆಚ್ಚಿನ ಬಾರಿ ನಿಗಿ ನಿಗಿಸುವ ಕೆಂಡದಂತೆ ಪ್ರಜ್ವಲಿಸಿ ನೇರವಾಗಿಯೇ ಎದೆಯನ್ನು ಸುಡುತ್ತದೆ. ಹೊರಗಿನ ಸಂಗತಿಗಳಿಂದ ವಿಚಲಿತನಾದ ಕವಿ ಬೇಕೆಂದೇ ಈ ಹಾದಿಯನ್ನು ಆಯ್ಕೆ ಮಾಡಿಕೊಳ್ಳುವುದನ್ನು ಪರಂಪರೆಯಲ್ಲಿ ಕಾಣುತ್ತಲೇ ಬಂದಿದ್ದೇವೆ.
ಹೊರಗಿನ ಚೆಲ್ಲಾಪಿಲ್ಲಿಯಾದ ಲೋಕದಿಂದಲೇ ಅನಂತ ಅವರ ಕವಿತೆಗಳ ರೂಪಕಗಳು ಹುಟ್ಟಿಕೊಂಡಿವೆ. ಹೆಣ್ಣೊಬ್ಬಳು ಕಲ್ಲು, ಬಂಡಿ, ಹೂವು, ಬುಟ್ಟಿ, ನಳ, ತಂತಿ, ನೇಗಿಲು ಹೀಗೆ ಉಪಯೋಗಕ್ಕೆ ಬರುವ ಭೌತಿಕ ವಸ್ತುಗಳಾಗಿ ಕಾಣುತ್ತಾಳೆ ಎನ್ನುವುದನ್ನು ಮಾರ್ಮಿಕವಾಗಿ ಹೇಳುತ್ತಾರೆ. ಹೆಣ್ಣನ್ನು ಭೋಗದ ವಸ್ತು ಎಂದು ಪರಿಗಣಿಸಿರುವುದನ್ನು 'ಭೋಜನ'ದ ರೂಪಕದ ಮೂಲಕ ಕವಿಯು ಹೇಳುವುದು ವಿಶಿಷ್ಟವಾಗಿದೆ. ಇಡೀ ಕಪ್ಪು ಜನಾಂಗವನ್ನು ವರ್ಣ ರಾಜಕಾರಣಕ್ಕಾಗಿ ಶೋಷಣೆಗೆ ಗುರಿಪಡಿಸಿದ್ದನ್ನು ಹೇಳುವಾಗ ಮಹತ್ವದ ಆಫ್ರಿಕನ್-ಅಮೇರಿಕನ್ ಕವಯತ್ರಿ ಆಲೀಸ್ ವಾಕರ್ ಇಂತಹದ್ದೇ ರೂಪಕಕ್ಕೆ ಮೊರೆ ಹೋಗುವುದನ್ನು ನಾವಿಲ್ಲಿ ನೆನೆಯಬಹುದು.
'ನೀನು ನೀಗ್ರೋ ಹುಡುಗಿಯೇ?'
'ಹೌದು'
'ಅದೊಂದು ರೀತಿಯ ಆಹಾರವಿರಬಹುದಲ್ಲವೇ?'
'ಹೌದು'
'ಬಿಳಿಯ ನಿನ್ನನ್ನು ತಿನ್ನುತ್ತಿದ್ದನಲ್ಲವೇ?'
'ಹೌದು!'
ಮಾತೃ ಪ್ರಧಾನ ಮೌಲ್ಯಗಳ ಹುಡುಕಾಟ ಅನಂತ ಅವರ ಕಾವ್ಯದ ಮೂಲ ಸೆಲೆ. ಇಡೀ ಜಗತ್ತನ್ನು ನಡೆಸುವ ಮಾತೃ ಶಕ್ತಿಯೊಂದು ತನ್ನನ್ನು ಕೈ ಹಿಡಿದು ಪೊರೆಯುತ್ತಿದೆ ಎನ್ನುವ ನೆಲೆಯಿಂದಲೇ ಇಲ್ಲಿಯ ಕವಿತೆಗಳು ರೂಪುಗೊಂಡಿವೆ. ತಾಯಿಯೆಂದರೆ ಬೇರೆಯಲ್ಲ.. ಹೆಣ್ಣೆಂದರೆ ಬೇರೆಯಲ್ಲ. ಅಕ್ಕ, ತಂಗಿ, ಮಗಳು, ಹೆಂಡತಿ, ಗೆಳತಿ ಹೀಗೆ ವಿವಿಧ ಪಾತ್ರಗಳನ್ನು ನಿರ್ವಹಿಸುತ್ತಿರುವ ಹೆಣ್ಣು ತನ್ನ ಸೈರಣೆ, ಕರುಣೆ, ಮಮತೆ, ಸಹನೆಗಳಿಂದ ಮೃಗವಾಗಿರುವ ಮನುಷ್ಯನನ್ನು ಸಹನೆಯಿಂದ ತಿದ್ದಿ ತೀಡುವಳು ಎಂಬ ಅಚಲ ನಂಬಿಕೆ ಕವಿಗಿದೆ.
ಕಸಿವಿಸಿ ಮತ್ತು ಮುಜುಗರವನ್ನು ಹುಟ್ಟಿಸಿ ಸಮಾಜಕ್ಕೆ 'ಶಾಕ್' ನೀಡುವಂತೆ ಕವಿ ಸುತ್ತಲಿನ ಸೋಗಲಾಡಿತನವನ್ನು ಕೊಂಚ ಹಸಿಬಿಸಿಯಾಗೇ ಬಯಲಿಗೆಳೆಯುವ ಪ್ರಯತ್ನವನ್ನು ಮಾಡಿದ್ದಾರೆ. ಈ ಸಂಗ್ರಹದಲ್ಲಿ, ಪ್ರೇಮ ಕವಿತೆಗಳಿಗೆ ಬಳಸಿರುವ ಭಾಷೆ ರಮ್ಯ ಶೈಲಿಯಲ್ಲಿದ್ದಂತೆ ತೋರುತ್ತದೆ. ಜಾನಪದ ಶೈಲಿ, ಕಥನ ಕವನದ ಧಾಟಿಯೂ ಕೆಲವು ಕವಿತೆಗಳಲ್ಲಿ ಕಾಣುತ್ತದೆ. ಹೊಸ ಕವಿಗಿರುವ ತವಕ, ಅತ್ಯುತ್ಸಾಹದ ಜೊತೆಗೆ ಕಾವ್ಯ ಕಟ್ಟುವುದರ ಬಗೆಗಿನ ಶ್ರದ್ಧೆ ಅನಂತ ಅವರಿಗೆ ಹೆಚ್ಚಲಿ ಎಂದು ಆಶಿಸುತ್ತೇನೆ.
ಲೇಖಕಿ ಉಷಾ ನರಸಿಂಹನ್ ಅವರು ಮೂಲತಃ ಮಂಡ್ಯ ಜಿಲ್ಲೆಯ ಶಿವನಸಮುದ್ರದವರು. ಹಾಸನದಲ್ಲಿ ಪ್ರಾಥಮಿಕ ವಿದ್ಯಾಭ್ಯಾಸ, ನಂತರದ ವಿ...
ಲೇಖಕ ಲಕ್ಷ್ಮಣ ಬಾದಾಮಿ ಅವರ ‘ಒಂದು ಚಿಟಿಕೆ ಮಣ್ಣು’ ಕತಾಸಂಕಲನಕ್ಕೆ ಕರ್ನಾಟಕ ಸಾಹಿತ್ಯ ಅಕಾಡೆಮಿಯಿಂದ 201...
ಮಕ್ಕಳ ಮನಸ್ಸಿಗೆ ಮುದವೆನಿಸುವಂತಹ ಕಥೆಗಳಿರುವ ‘‘ಗೊಂಬೆಗೊಂದು ಚೀಲ’ ಸಂಕಲನವನ್ನು ಪ್ರಶಂಸಿಸಿರುವ ಸ...
©2021 Bookbrahma.com, All Rights Reserved