ಮದುವೆಯ ಕಥಾ ಪ್ರಸಂಗ : ಅಂತರ್ ಧರ್ಮೀಯ ವಿವಾಹ ಕಥನ


ವಾಸ್ತವವಾದ ವಸ್ತುವನ್ನೊಳಗೊಂಡಿರುವ ‘ಮದುವೆ ಕಥಾ ಪ್ರಸಂಗ’ ಕಾದಂಬರಿಯ ಥೆಯ ಕ್ರಿಯೆಯು ಒಂದೇ ಮಟ್ಟದಲ್ಲಿ ಸಾಗುವುದಿಲ್ಲ. ವಸ್ತುವಿಗೆ ಸಂಬಂಧಪಟ್ಟ ಬೇರೆ ಬೇರೆ ಘಟನೆಗಳನ್ನು ಕಥೆಯಾಗಿ ಪೋಣಿಸಿರುವ ಕಾರಣ ಅದು ಆಕರ್ಷಕವಾಗಿ ಸಾಗುತ್ತದೆ. ಕ್ರಿಯಾಪ್ರಧಾನವಾಗಿ ಮಧ್ಯಮವರ್ಗದವರ ಬದುಕಿನ ಕಥೆಯನ್ನು ಬಿಚ್ಚಿಡುವ ಈ ಕಾದಂಬರಿಯಲ್ಲಿ ಹಲವಾರು ಪಾತ್ರಗಳಿವೆ. ಗೋವಿಂದ ಭಟ್ಟ, ರಮಾನಂದ ಮತ್ತು ಸ್ವಾತಿ ಈ ಮೂರು ಪಾತ್ರಗಳು ಮೂರು ತಲೆಮಾರುಗಳನ್ನು ಪ್ರತಿನಿಧಿಸುತ್ತವೆ ಎನ್ನುತ್ತಾರೆ ಸಿ. ಎಸ್. ಭೀಮರಾಯ (ಸಿಎಸ್ಬಿ). ಅವರು ಮಾಧವ ಕುಲಕರ್ಣಿ ಅವರ ಮದುವೆಯ ಕಥಾ ಪ್ರಸಂಗ ಕೃತಿ ಕುರಿತು ವಿಮರ್ಶೆ ಇಲ್ಲಿದೆ...

ಮದುವೆಯ ಕಥಾ ಪ್ರಸಂಗ
ಲೇ: ಪ್ರೊ. ಮಾಧವ ಕುಲಕರ್ಣಿ
ಪುಟ: 212

ಬೆಲೆ: 190
ಪ್ರಕಾಶನ: ಶ್ರೀರಾಮ ಪ್ರಕಾಶನ, ಮಂಡ್ಯ

ಪ್ರೊ. ಮಾಧವ ಕುಲಕರ್ಣಿ ಸಮಕಾಲೀನ ಕನ್ನಡ ಸಾಹಿತ್ಯದ ಮಹತ್ವದ ಕಥೆಗಾರ,ಅನುವಾದಕ, ಕಾದಂಬರಿಕಾರ ಮತ್ತು ವಿಮರ್ಶಕರು. ಅವರು ಇಂಗ್ಲಿಷ್ ಮತ್ತು ಕನ್ನಡ ಭಾಷೆ-ಸಾಹಿತ್ಯಗಳನ್ನು ಆಳವಾಗಿ ಅಧ್ಯಯನ ಮಾಡಿದವರು. ಮಾಧವ ಕುಲಕರ್ಣಿ ಈವರೆಗೆ ನಲವತ್ತಕ್ಕೂ ಹೆಚ್ಚಿನ ಮೌಲಿಕ ಕೃತಿಗಳನ್ನು ಪ್ರಕಟಿಸಿದ್ದಾರೆ.

‘ಮದುವೆಯ ಕಥಾ ಪ್ರಸಂಗ’ ಪ್ರೊ. ಮಾಧವ ಕುಲಕರ್ಣಿಯವರ ಮೂರನೆಯ ಕಾದಂಬರಿ. ಈ ಕಾದಂಬರಿ ಮೂವತ್ತೆಂಟು ಅಧ್ಯಾಯಗಳನ್ನು ಒಳಗೊಂಡಿದೆ. ಇದು ‘ತರಂಗ’ ವಾರಪತ್ರಿಕೆಯಲ್ಲಿ (2020) ಧಾರಾವಾಹಿಯಾಗಿ ಪ್ರಕಟವಾಗಿದೆ. ಗೋವಿಂದ ಭಟ್ಟ ಎಂಬ ಪಾತ್ರದ ಸುತ್ತ ಹೆಣೆಯಲಾಗಿರುವ ಈ ಕಾದಂಬರಿ ವರ್ತಮಾನದ ಸಾಮಾಜಿಕ, ಧಾರ್ಮಿಕ, ರಾಜಕೀಯ ಮತ್ತು ಸಾಂಸ್ಕೃತಿಕ ವಿದ್ಯಮಾನಗಳನ್ನು ಕಥೆಗೆ ಪೂರಕವಾಗುವಂತೆ ದಾಖಲಿಸುತ್ತದೆ. ಈ ಕಾದಂಬರಿಯು ವಿಭಿನ್ನ ಧರ್ಮೀಯರ ಕುಟುಂಬಗಳ ಕಥೆಗಳನ್ನು ಒಳಗೊಂಡಿದ್ದು, ಅಂತರ್‌ ಜಾತೀಯ, ಅಂತರ್‌ ಧರ್ಮೀಯ ಮತ್ತು ಅಂತರ್‌ ವರ್ಗೀಯ ವಿವಾಹಗಳ ಮೂರು ಮಾದರಿಗಳನ್ನು ಚಿತ್ರಿಸಲು ಪ್ರಯತ್ನಿಸುತ್ತದೆ. ಬ್ರಾಹಣ ರಮಾನಂದನ ಮಗಳಾದ ಶಾಂತಿ, ಜೈನ ಶಾಂತಿನಾಥನ ಮಗನಾದ ಯತೀಂದ್ರ, ಶೂದ್ರ ಹುಂಡಿಗೌಡನ ಮಗನಾದ ಸೋಮಶೇಖರ ಮತ್ತು ನಾಯಕ ಜನಾಂಗದ ಜವರಯ್ಯನ ಮಗಳಾದ ಶಾಂತಿಯರ ಅಂತರ್‌ಧರ್ಮೀಯ ವಿವಾಹಕ್ಕೆ ಜಾತಿ ಮತ್ತು ಧರ್ಮದ ಗೋಡೆಗಳು ಉಂಟುಮಾಡುವ ಆತಂಕಗಳ ಮೂಲಕ ‘ಮದುವೆ ಕಥಾ ಪ್ರಸಂಗ’ ಕಾದಂಬರಿ ವಿಶಿಷ್ಟವಾಗಿದೆ. ಹೆಚ್ಚಿನ ಒತ್ತು ರಮಾನಂದನ ಕುಟುಂಬದ ಮೇಲೆ ಬಿದ್ದಿದೆ. ಗೋವಿಂದ ಭಟ್ಟ ಕೌಟುಂಬಿಕ ಮತ್ತು ಸಾಮಾಜಿಕ ಜೀವನಕ್ಕೆ ಸಂಬಂಧಿಸಿದ ತನ್ನೆಲ್ಲ ಕರ್ತವ್ಯಗಳನ್ನು ನಿಷ್ಠೆಯಿಂದ ಮತ್ತು ನ್ಯಾಯಯುತವಾಗಿ ಪೂರೈಸಿ ಬದುಕನ್ನು ಮುಗಿಸುವುದರ ಚಿತ್ರಣ ಈ ಕಾದಂಬರಿಯಲ್ಲಿದೆ. ಕಾದಂಬರಿಯು ಗೋವಿಂದ ಭಟ್ಟನ ವಿಶಿಷ್ಟ ಅನುಭವಗಳನ್ನು ವರ್ಣಿಸುವಂತೆ ಆ ಕಾಲದ ಗದುಗಿನ ನಾಟಕ ಕಂಪನಿ ಮತ್ತು ಹಿಂದಿ ಸಿನಿಮಾಗಳ ಕುರಿತು ಅವನ ಆಸಕ್ತಿಯನ್ನು ಓದುಗರ ಮುಂದೆ ತೆರೆದಿಡುತ್ತದೆ. ಗೋವಿಂದ ಭಟ್ಟ, ರಮಾನಂದ, ಅಲಕಾವತಿ, ಸ್ವಾತಿ, ನಾಸೀರ್, ಮಣಿಬೆಹೆನ್, ಹುಂಡಿಗೌಡ, ಸೋಮಶೇಖರ, ಜವರಯ್ಯ ಮತ್ತು ಶಾಂತಿಯರ ಬದುಕಿನ ಕಥೆಯೇ ವಿಸ್ತಾರವಾಗಿ ನಿರೂಪಿತವಾಗಿದೆ. ಹಾಗೆ ನೋಡಿದರೆ ಆಯ್ದ ಪಾತ್ರಗಳ ಕಥೆಯನ್ನು ವಿಸ್ತಾರವಾಗಿ ಹೇಳುವುದೇ ಕಾದಂಬರಿ ಎಂಬ ಸರಳ ವ್ಯಾಖ್ಯಾನಕ್ಕೆ ಉತ್ತಮ ನಿದರ್ಶನ ಈ ಕೃತಿ.

ಗೋವಿಂದ ಭಟ್ಟ ಎಂಬತ್ತನೇ ವರ್ಷದವರೆಗೆ ಗದುಗಿನಲ್ಲಿ ವಾಸಿಸುವುದು, ಹೆಂಡತಿ ರುಕ್ಮಿಣಿಬಾಯಿಯೊಂದಿಗೆ ಗದುಗಿನ ಕಂಪನಿ ನಾಟಕ ಮತ್ತು ಹಿಂದಿ ಸಿನಿಮಾಗಳನ್ನು ನೋಡುವ ಹವ್ಯಾಸ ಬೆಳೆಸಿಕೊಂಡಿರುವುದು, ಧಾರ್ಮಿಕ ಕಾರ್ಯಗಳನ್ನು ನೆರವೇರಿಸುವುದು, ರಮಾನಂದ ಸ್ವಯಂ ನಿವೃತ್ತಿ ಪಡೆದು ಬ್ಯಾಂಕಿನ ನೌಕರಿಯಿಂದ ಬಿಡುಗಡೆ ಪಡೆಯುವುದು, ಗೋವಿಂದ ಭಟ್ಟ ಗದಗ ತೊರೆದು ಮೈಸೂರಿಗೆ ಬರುವುದು, ಗೋವಿಂದ ಭಟ್ಟ ಮೈಸೂರಿನಲ್ಲಿ ವೈದಿಕ ವೃತ್ತಿ ಶುರು ಮಾಡುವುದು, ಮಣಿಬೆಹನ್ ಗೋವಿಂದ ಭಟ್ಟನ ಹತ್ತಿರ ಜಾತಕ ಕೇಳಲು ಬರುವುದು, ರಮಾನಂದ ಮತ್ತು ಅಲಕಾವತಿ ಮಗಳು ಸ್ವಾತಿಗೆ ವಿದ್ಯಾಭ್ಯಾಸ ಮಾಡಿಸುವುದು, ಸ್ವಾತಿಗೆ ಯತೀಂದ್ರನ ಪರಿಚಯವಾಗುವುದು, ಸ್ವಾತಿ ವಿದೇಶಕ್ಕೆ ಹೋಗುವುದು, ಪ್ರೊ. ರಂಗನಾಥ ಗೋವಿಂದ ಭಟ್ಟನೊಂದಿಗೆ ಪುರೋಹಿತ ವೃತ್ತಿಯ ಕುರಿತು ಚರ್ಚಿಸುವುದು, ನಾಸೀರ್ ಮಣಿಬೆಹನ್‌ಳೊಂದಿಗೆ ಸಂಸಾರ ಮಾಡಲು ಇಂಗ್ಲೆಂಡಿನಿಂದ ಭಾರತಕ್ಕೆ ಬರುವುದು, ಪ್ರೊ. ನಾರಾಯಣಪ್ಪ ಬರವಣಿಗೆ ಪ್ರಾರಂಭಿಸುವುದು, ಮಹಾರಾಜಾ ಕಾಲೇಜಿನ ಕೆಲವು ಪ್ರಾಧ್ಯಾಪಕರು ‘ಸಮಾಜದಲ್ಲಿಯ ಸಮಾನತೆ’ ಕುರಿತಂತೆ ಹಲವಾರು ವರ್ಗದ ವಂಚಿತ ವಿದ್ಯಾರ್ಥಿಗಳಿಗೆ ಬೋಧನೆ ಮಾಡುವುದು ಮತ್ತು ಅದಕ್ಕೆ ಸಂಬಂಧಿಸಿದ ಪುಸ್ತಕಗಳನ್ನು ಓದಲು ಪ್ರೇರೇಪಿಸುವುದು, ಇಂಥ ಪ್ರೇರಣೆಯಿಂದಾಗಿಯೇ ಕೆಲವು ವಿದ್ಯಾರ್ಥಿಗಳು ಸೇರಿಕೊಂಡು ‘ಸಮಾನತೆಯ ವೇದಿಕೆ’ಯನ್ನು ಸ್ಥಾಪಿಸುವುದು, ವಿದ್ಯಾರ್ಥಿಗಳು ಈ ವೇದಿಕೆಯ ಮೂಲಕ ಚರ್ಚೆ ಮತ್ತು ಪ್ರತಿಭಟನೆಯ ಜಾಥಾಗಳನ್ನು ಹಮ್ಮಿಕೊಳ್ಳುವುದು, ಸ್ವಾತಿ ಕೆನಡಾದಿಂದ ಭಾರತಕ್ಕೆ ಬರುವುದು, ಯತೀಂದ್ರ ಸ್ವಾತಿಯನ್ನು ಮದುವೆಯಾಗುವುದು, ಹುಂಡಿಗೌಡ ಬಡ್ಡಿ ವ್ಯವಹಾರ ಮಾಡುವುದು, ಜವರಯ್ಯನ ಮಗಳು ಶಾಂತಿ ಹುಂಡಿಗೌಡನ ಮಗ ಸೋಮಶೇಖರನನ್ನು ಪ್ರೀತಿಸುವುದು, ಹುಂಡಿಗೌಡ ತನ್ನ ಮಗ ಸೋಮಶೇಖರ ಬೇರೆ ಜಾತಿಯ ಹುಡುಗಿಯನ್ನು ಮದುವೆಯಾಗದಂತೆ ತಡೆಯುವುದು, ಯತೀಂದ್ರನ ತಂದೆ ಶಾಂತಿನಾಥ ಮತ್ತು ತಾಯಿ ಪ್ರಭಾವತಿ ರಮಾನಂದನ ಮನೆಗೆ ಬರುವುದು, ಹುಂಡಿಗೌಡ ಮಗ ಸೋಮಶೇಖರನನ್ನು ಮನೆಬಿಟ್ಟು ಹೊರಹಾಕುವುದು, ಸೋಮಶೇಖರ ಮತ್ತು ಶಾಂತಿಯ ಮದುವೆಯ ಮುಹೂರ್ತ ನಿರ್ಧರಿಸುವುದು, ಸೋಮಶೇಖರ ಶಾಂತಿಯನ್ನು ಮದುವೆಯಾಗುವುದು, ಸೋಮಶೇಖರ ಮತ್ತು ಶಾಂತಿಯರ ಮದುವೆಯಲ್ಲಿ ಆಗಂತುಕರ ಗುಂಪಿನಿಂದ ಗಲಾಟೆ ನಡೆಯುವುದು, ಗೋವಿಂದ ಭಟ್ಟನನ್ನು ತಳ್ಳುವುದು, ಗೋವಿಂದ ಭಟ್ಟರ ತಲೆಯು ಮಂಟಪದ ಕಂಬಕ್ಕೆ ತಾಗುವುದು, ನಂತರ ಅವರ ತಲೆಯಿಂದ ರಕ್ತ ಸುರಿಯಲು ಪ್ರಾರಂಭವಾಗುವುದು, ತಿರುಪತಣ್ಣ ಪೊಲೀಸರಿಗೆ ಫೋನ್ ಮಾಡುವುದು, ಪೊಲೀಸರು ಬಂದೊಡನೆ ಗಲಾಟೆ ತಹಬಂದಿಗೆ ಬರುವುದು, ಗೋವಿಂದ ಭಟ್ಟನನ್ನು ಆಸ್ಪತ್ರೆಗೆ ಸೇರಿಸುವುದು, ಚಿಕಿತ್ಸೆ ಫಲಕಾರಿಯಾಗದೆ ಗೋವಿಂದ ಭಟ್ಟ ಉಸಿರು ನಿಲ್ಲಿಸುವುದು ಇತ್ಯಾದಿ ವಾಸ್ತವ ಘಟನೆಗಳನ್ನು, ಅವುಗಳ ಹಿನ್ನೆಲೆ, ಕಾರಣ ಮತ್ತು ಪರಿಣಾಮಗಳನ್ನು ಅತ್ಯಂತ ಕುತೂಹಲಕಾರಿ ರೀತಿಯಲ್ಲಿ ವಿಸ್ತಾರವಾಗಿ ಲೇಖಕರು ಈ ಕಾದಂಬರಿಯಲ್ಲಿ ಕಟ್ಟಿಕೊಡಲು ಪ್ರಯತ್ನಿಸಿದ್ದಾರೆ. ಈ ಸಂದರ್ಭಗಳ ಚಿತ್ರಣದಲ್ಲಿ ಮಾಧವ ಕುಲಕರ್ಣಿಯವರ ಕಲೆಗಾರಿಕೆ ಎದ್ದು ಕಾಣುತ್ತದೆ.

ಗೋವಿಂದ ಭಟ್ಟ ಈ ಕಾದಂಬರಿಯ ಮುಖ್ಯ ಪಾತ್ರ. ಗೋವಿಂದ ಭಟ್ಟ ಸಂಪ್ರದಾಯ ಮತ್ತು ಆಧುನಿಕ ದೃಷ್ಟಿಕೋನವನ್ನು ಮೇಳೈಸಿಕೊಂಡ ಎಂಬತ್ತು ವರ್ಷದ ವ್ಯಕ್ತಿ. ಈ ಪಾತ್ರ ಕನ್ನಡ ಕಾದಂಬರಿ ಪರಂಪರೆಯಲ್ಲಿಯೇ ಒಂದು ಅನನ್ಯ ಮತ್ತು ವಿಶಿಷ್ಟ ಸೃಷ್ಟಿ. ಗೋವಿಂದ ಭಟ್ಟ ಹೆಂಡತಿ ರುಕ್ಮಿಣಿಬಾಯಿಯನ್ನು ತನ್ನ ಅರವತ್ತನೆಯ ವಯಸ್ಸಿನಲ್ಲಿ ಕಳೆದುಕೊಂಡವನು. ಗೋವಿಂದ ಭಟ್ಟ ಅಪರಕರ್ಮಗಳಿಂದ ಹಿಡಿದು, ಮದುವೆ, ಮುಂಜಿವೆ, ಹೋಮ, ಹವನ, ಸತ್ಯನಾರಾಯಣ ಪೂಜೆ, ಶ್ರಾದ್ಧ, ಪಕ್ಷ, ಭಾಗವತ ಪುರಾಣ, ನವಗ್ರಹ ಶಾಂತಿ ಎಂದು ಬಿಡುವಿಲ್ಲದಂತೆ ಜೀವನ ಸಾಗಿಸಿದವನು. ಗೋವಿಂದ ಭಟ್ಟ ಬ್ರಾಹ್ಮಣರು ನಿರ್ವಹಿಸುವ ಪುರೋಹಿತ ವೃತ್ತಿಯ ಕುರಿತು ಪ್ರೊ. ರಂಗನಾಥನಿಗೆ ಹೇಳುವ ಮಾತುಗಳನ್ನು ಗಮನಿಸಿ: “ಯಾವುದೇ ಕೆಲಸ ಮಾಡಿದರೂ ಪ್ರತಿಫಲ, ಅಪೇಕ್ಷಿಸಲಿ, ಬಿಡಲಿ ಒಂದೇ ಬರ್ತದೆ. ಹೊಲದಲ್ಲಿಯ ಕಳೆ ಕಿತ್ತರೂ ಕೂಲಿ ಕೊಡ್ತಾರೆ, ಮಂತ್ರ ಹೇಳಿ ಪೂಜೆ ಮಾಡ್ಸಿದ್ರೆ, ದಕ್ಷಿಣೆ ಕೊಡ್ತಾರ. ಅಲ್ಲಿ ಅದಕ್ಕೆ ಕೂಲಿ ಅಂದ್ರು. ಇಲ್ಲಿ ದಕ್ಷಿಣೆ ಅಂದ್ರು. ಏನು ವ್ಯತ್ಯಾಸ ಹೇಳ್ರಿ?” ಈ ಪ್ರಶ್ನೆಗೆ ರಂಗನಾಥರಿಗೆ ತಕ್ಷಣ ಉತ್ತರ ಹೊಳೆಯಲಿಲ್ಲ. ನಂತರ ತಮ್ಮ ಧ್ವನಿ ಸ್ವಲ್ಪ ಬದಲಿಸಿ ಕೇಳಿದರು, “ಹೊಲದಲ್ಲಿ ಅವ್ನು ದುಡಿತಾನೆ, ಕೂಲಿ ಕೊಡ್ತಾರೆ. ಇಲ್ಲಿ ದುಡಿತವೇ ಇಲ್ಲದೆ ದಕ್ಷಿಣೆ ಬರುತ್ತೆ, ಇದಕ್ಕೇನು ಹೇಳ್ತೀರಾ?” “ಮಂತ್ರ ಹೇಳಿ ಪೂಜೆ ಮಾಡ್ಸೋದು ಒಂದು ದುಡಿತವಲ್ಲವೇ? ನಾವಾಗಿ ಸಿಕ್ಕ ಸಿಕ್ಕ ಮನೆಗೆ ನುಗ್ಗಿ ಪೂಜೆ ಮಾಡ್ಸಿ ಹಣ ವಸೂಲಿ ಮಾಡ್ತಿದ್ರೆ ಅದು ಶೋಷಣೆ. ನಾವೇನು ಯಾರಿಗೂ ಇಷ್ಟೇ ಕೊಡಬೇಕಂತ ಕೇಳೋಲ್ಲ. ಅವರು ಸಂತೋಷದಿಂದ ಕೊಟ್ರೆ ತಗೋತೀವಿ. ಕೊಡದಿದ್ರ ಹಂಗ ಬರ್ತೀವಿ. ಎಷ್ಟೋ ಕಡೆ ಒಂದು ರೂಪಾಯಿನೂ ತಗೊಳ್ದೆ ಮದುವೆ ಮಾಡ್ಸಿದೀನಿ” (ಪುಟ-75). ಗೋವಿಂದ ಭಟ್ಟನ ಈ ಮಾತುಗಳನ್ನು ವೈಚಾರಿಕ ಮನೋಭಾವದ ರಂಗನಾಥ ಒಪ್ಪಿಕೊಳ್ಳುವುದಿಲ್ಲ. ಪೂಜೆ ಮತ್ತು ದೈಹಿಕಶ್ರಮ ಒಂದೇ ತರಹ ಅಂತ ಒಪ್ಪಿಕೊಳ್ಳುವುದಾದರೂ ಹೇಗೆ...? ಎಂಬ ರಂಗನಾಥನ ಪ್ರಶ್ನೆಗೆ ಸಮರ್ಪಕ ಉತ್ತರ ಗೋವಿಂದ ಭಟ್ಟನಿಂದ ಬರುವುದಿಲ್ಲ. ಪೂಜೆ ಮಾಡಲು ಹೆಚ್ಚಿನ ಶ್ರಮ ಬೇಕಿಲ್ಲ. ಆದರೆ ಕೂಲಿ ಮಾಡಲು ಹೆಚ್ಚಿನ ಶಕ್ತಿ ಮತ್ತು ಶ್ರಮ ಅಗತ್ಯ. ಪೂಜೆಯ ನೆಪದಲ್ಲಿ ಮುಗ್ಧ ಜನರನ್ನು ಶೋಷಣೆ ಮಾಡುವುದು ಅನೇಕ ಶತಮಾನಗಳಿಂದಲೂ ಮುಂದುವರೆಯುತ್ತಿರುವುದು ವಿಚಿತ್ರ ಸಂಗತಿ.

ವಾಸ್ತವವಾದ ವಸ್ತುವನ್ನೊಳಗೊಂಡಿರುವ ‘ಮದುವೆ ಕಥಾ ಪ್ರಸಂಗ’ ಕಾದಂಬರಿಯ ಥೆಯ ಕ್ರಿಯೆಯು ಒಂದೇ ಮಟ್ಟದಲ್ಲಿ ಸಾಗುವುದಿಲ್ಲ. ವಸ್ತುವಿಗೆ ಸಂಬಂಧಪಟ್ಟ ಬೇರೆ ಬೇರೆ ಘಟನೆಗಳನ್ನು ಕಥೆಯಾಗಿ ಪೋಣಿಸಿರುವ ಕಾರಣ ಅದು ಆಕರ್ಷಕವಾಗಿ ಸಾಗುತ್ತದೆ. ಕ್ರಿಯಾಪ್ರಧಾನವಾಗಿ ಮಧ್ಯಮವರ್ಗದವರ ಬದುಕಿನ ಕಥೆಯನ್ನು ಬಿಚ್ಚಿಡುವ ಈ ಕಾದಂಬರಿಯಲ್ಲಿ ಹಲವಾರು ಪಾತ್ರಗಳಿವೆ. ಗೋವಿಂದ ಭಟ್ಟ, ರಮಾನಂದ ಮತ್ತು ಸ್ವಾತಿ ಈ ಮೂರು ಪಾತ್ರಗಳು ಮೂರು ತಲೆಮಾರುಗಳನ್ನು ಪ್ರತಿನಿಧಿಸುತ್ತವೆ. ಗೋವಿಂದ ಭಟ್ಟನೊಂದಿಗೆ ರಮಾನಂದ, ಅಲಕಾವತಿ, ಸ್ವಾತಿ, ಜವರಯ್ಯ, ದ್ಯಾವಕ್ಕ, ಶಾಂತಿ, ಪ್ರೊ. ರಂಗನಾಥ, ರೋಸ್, ಪ್ರೊ. ನಾರಾಯಣಪ್ಪ, ಕಲಾವತಿ, ಹುಂಡಿಗೌಡ, ರಾಜಮ್ಮ, ಸೋಮಶೇಖರ, ಮಣಿಬೆಹನ್, ನಾಸೀರ್, ಶಾಂತಿನಾಥ, ಪ್ರಭಾವತಿ, ಯಂತೀAದ್ರ ಮೊದಲಾದ ಪಾತ್ರಗಳು ಜೀವಂತ ವ್ಯಕ್ತಿಗಳಂತೆ ವಿಹರಿಸಿ ಕಾದಂಬರಿಗೆ ಒಂದು ವಾಸ್ತವ ನೆಲೆಗಟ್ಟನ್ನು ತಂದುಕೊಟ್ಟಿವೆ. ಉತ್ತರ ಕರ್ನಾಟಕ ಮತ್ತು ದಕ್ಷಿಣ ಕರ್ನಾಟಕದ ಜನರ ನೈಜ ಜೀವನ, ಸಂಪ್ರದಾಯ, ಆಚರಣೆ, ನಂಬಿಕೆಗಳ ಚಿತ್ರಣವನ್ನು ಈ ಕಾದಂಬರಿಯು ತೋರಿಸುತ್ತದೆ, ಈ ಕಾದಂಬರಿಯಲ್ಲಿನ ಕಥಾನಾಯಕರ ಮತ್ತು ನಾಯಕಿಯರ ಪೋಷಕರು ತಮ್ಮ ಮಕ್ಕಳು ಸಂತೋಷದ ಬದಲು ಸಮಾಜ ಮತ್ತು ಅದರ ಸಂಪ್ರದಾಯ ಮತ್ತು ಆಚರಣೆಗಳ ಬಗ್ಗೆ ಹೆಚ್ಚು ಯೋಚಿಸಿದ್ದು ಕಂಡುಬರುತ್ತದೆ.

ಕಥೆಯ ಕೇಂದ್ರ ವ್ಯಕ್ತಿಯಾಗಿ ಗೋವಿಂದ ಭಟ್ಟ ವ್ಯಾಪಿಸಿದ್ದರೂ ವ್ಯಕ್ತಿತ್ವ ಹುಡುಕಿಕೊಳ್ಳುವ ಪ್ರಯತ್ನದಲ್ಲಿ ರಮಾನಂದನ ಮಗಳು ಸ್ವಾತಿ, ಶಾಂತಿನಾಥನ ಮಗ ಯತೀಂದ್ರ, ಹುಂಡಿಗೌಡನ ಮಗ ಸೋಮಶೇಖರ ಮತ್ತು ಜವರಯ್ಯನ ಮಗಳು ಶಾಂತಿ ಹೊಸ ಪೀಳಿಗೆಯ ಪ್ರತಿನಿಧಿಗಳಂತೆ ಲೌಕಿಕ ಲೆಕ್ಕಾಚಾರವನ್ನೂ ಮೀರಿ ಭಾವನಾತ್ಮಕ ಅಸ್ತಿತ್ವಕ್ಕೆ ನಡೆಸುವ ಶೋಧನೆ ಮಹತ್ವದ್ದಾಗಿದೆ. ಯತೀಂದ್ರ ಮತ್ತು ಸ್ವಾತಿ, ಸೋಮಶೇಖರ ಮತ್ತು ಶಾಂತಿ ಪರಸ್ಪರ ಆಕರ್ಷಿತರಾದ ಪ್ರೇಮಿಗಳು. ಮದುವೆಯಾಗಬೇಕೆಂಬುದು ಅವರ ಪ್ರಬಲ ಆಸೆ. ಅವರ ಈ ಆಸೆಗೆ ಅನೇಕ ಅಡ್ಡಿ-ಆತಂಕಗಳು ಬರುತ್ತವೆ. ಆದರೆ ಅವರು ಅವೆಲ್ಲವುಗಳನ್ನು ಧೈರ್ಯದಿಂದ ಎದುರಿಸುತ್ತಾರೆ. ಜವರಯ್ಯ ಮತ್ತು ದ್ಯಾವಕ್ಕನ ಮಗಳಾದ ಶಾಂತಾಳ ಪಾತ್ರ ಇಲ್ಲಿ ಗಮನಾರ್ಹವಾಗಿದೆ. ಪ್ರತಿಕೂಲ ಪರಿಸ್ಥಿತಿಯಲ್ಲಿಯೂ ತನ್ನ ಧ್ಯೇಯವನ್ನು ಸಾಧಿಸಿ ತೋರಿಸಿದ ಶಾಂತಾ ಈ ಕಾದಂಬರಿಯಲ್ಲಿ ಎದ್ದು ಕಾಣುತ್ತಾಳೆ. ತನ್ನ ಸಂಯಮವನ್ನು ಯಾವ ಕಾರಣದಿಂದಲೂ ಸಡಿಲಿಸಿಕೊಳ್ಳದ ಆಕೆಯಂಥವರಿಂದ ಮಾತ್ರ ಸಾಮಾಜಿಕ ಬದಲಾವಣೆ ಸಾಧ್ಯವೆಂಬುದನ್ನು ಕುಲಕರ್ಣಿಯವರಿಲ್ಲಿ ಧ್ವನಿಸುವ ಹಾಗಿದೆ.

ಭಾರತದಲ್ಲಿ ಅಂತರ್‌ ಜಾತಿ-ಅಂತರ್‌ ಧರ್ಮೀಯ ವಿವಾಹಗಳು ನಡೆಯುವುದು ಸುಲಭವಲ್ಲ. ಆದರೆ ಈಗ ಭಾರತವು ಸ್ವಲ್ಪಮಟ್ಟಿಗೆ ಬದಲಾಗುತ್ತಿದೆ. ಇತ್ತೀಚಿನ ದಿನಗಳಲ್ಲಿ ಆಧುನಿಕ ಶಿಕ್ಷಣ, ನಗರೀಕರಣ, ಉದ್ಯೋಗ ಮತ್ತು ಆರ್ಥಿಕ ಹಿನ್ನೆಲೆಗಳಿಂದಾಗಿ ಭಾರತದಲ್ಲಿ ಅಂತರ್‌ ಜಾತಿ-ಅಂತರ್‌ ಧರ್ಮೀಯ ವಿವಾಹಗಳು ಜರುಗುತ್ತಿರುವುದು ಆಶಾದಾಯಕ ಸಂಗತಿ. ಜಾತಿ ಮತ್ತು ಧರ್ಮಗಳ ಬಗ್ಗೆ ಪೂರ್ವಾಗ್ರಹಗಳ ಹೊರತಾಗಿಯೂ ಪ್ರೇಮ ವಿವಾಹಗಳನ್ನು ಸ್ವೀಕರಿಸಲು ಪೋಷಕರು ಕಲಿಯುತ್ತಿದ್ದಾರೆ. ಜಾತಿ ಮತ್ತು ಧರ್ಮಗಳ ವೈಷಮ್ಯದ ಸಮಸ್ಯೆಗಳು ಕೇವಲ ಮದುವೆಗೆ ಮಾತ್ರ ಸೀಮಿತವಾಗಿರದೆ ಅವು ನಮ್ಮ ಸಮಾಜದ ಇತರ ಎಲ್ಲ ಕ್ಷೇತ್ರಗಳಿಗೂ ವ್ಯಾಪಿಸಿವೆ. ಈ ವಾಸ್ತವವನ್ನು ಪ್ರೊ. ಮಾಧವ ಕುಲಕರ್ಣಿಯವರು ಈ ಕಾದಂಬರಿಯಲ್ಲಿ ಸಹಜವಾಗಿ ಎತ್ತಿತೋರಿಸಿದ್ದಾರೆ. ಗಂಭೀರವಾದ ಸಾಮಾಜಿಕ ಮತ್ತು ಸಾಂಸ್ಕೃತಿಕ ಸಮಸ್ಯೆಗಳನ್ನು ಎತ್ತಿ ತೋರಿಸುವುದಲ್ಲದೆ, ಆ ಸಮಸ್ಯೆಗಳನ್ನು ಕಿತ್ತೊಗೆಯುವ ಮಾರ್ಗವನ್ನೂ ‘ಮದುವೆಯ ಕಥಾ ಪ್ರಸಂಗ’ ಕಾದಂಬರಿಯ ಆವರಣ ಅಧಿಕ ಕಲಾತ್ಮಕವಾಗಿದೆ. ಸರಳ ಭಾಷೆ ಹಾಗೂ ಸುಂದರ ನಿರೂಪಣೆ ಅದಕ್ಕೆ ಮೆರಗು ತಂದುಕೊಟ್ಟಿವೆ.

ಧರ್ಮ-ಸಂಸ್ಕೃತಿ, ಸಮಾಜ-ವ್ಯಕ್ತಿಗತ ನೆಲೆಗಳಲ್ಲಿ, ಸಮುದಾಯದ ಸಂದರ್ಭದಲ್ಲಿ, ವ್ಯಕ್ತಿ ಮತ್ತು ವ್ಯವಸ್ಥೆಯ ಇತಿಮಿತಿಗಳಲ್ಲಿ, ವ್ಯಕ್ತಿಯ ಅಸ್ಮಿತೆ ಮತ್ತು ಸ್ವಾತಂತ್ಯ್ರಗಳನ್ನು ಶೋಧಿಸುವ ‘ಮದುವೆಯ ಕಥಾ ಪ್ರಸಂಗ’ ಯಶಸ್ಸಿರುವುದು ಅದರ ಜೀವಪರವಾದ ಆಶಯ ಮತ್ತು ನಿರ್ಧಾರಗಳಲ್ಲಿ. ಗಟ್ಟಿಯಾದ ಜೀವನಾನುಭವ ದ್ರವ್ಯವನ್ನು ತನ್ನ ಬೆನ್ನಿಗಿಟ್ಟುಕೊಂಡಿರುವ ಕಾದಂಬರಿ ಅನುಭವಗಳನ್ನು ಪೂರ್ವಾಗ್ರಹವಿಲ್ಲದೆ ಕಟ್ಟಿಕೊಡುವ ರೀತಿಯಲ್ಲೇ ಹೊಸತನವಿದೆ, ಮುಕ್ತತೆಯಿದೆ. ಹುಂಡಿಗೌಡನಂಥವರ ಶೋಷಣೆಯ ಹಿಂದಿನ ಸಾಮಾಜಿಕ ಕ್ರೌರ್ಯ, ಬಡ್ಡಿ ವ್ಯವಹಾರ ಮತ್ತು ಚೀಟಿ ವ್ಯವಹಾರಗಳನ್ನು ಎದುರಿಸುವಲ್ಲಿ ತೋರುವ ಸಮಚಿತ್ತತೆ, ಪ್ರಶಾಂತತೆ, ನೈತಿಕ ಸ್ಥೈರ್ಯ, ಅರಳುವ ಬದುಕಿಗೆ ಆಸರೆಯಾಗಿ ನಿಲ್ಲುವ ಮನೋಭಾವ ಇವೆಲ್ಲ ಜೀವಪರವಾದದ್ದು, ಇತ್ಯಾತ್ಮಕವಾದದ್ದು. ಆಶಯ ಮತ್ತು ಜೀವನದೃಷ್ಟಿಗಳಲ್ಲಿನ ಈ ಪಕ್ವ ಬೆಳವಣಿಗೆ ವಸ್ತುವಿನ ನಿರ್ವಹಣೆಯಲ್ಲೂ ಕಾಣುತ್ತದೆ. ಆಶಯ, ಉದ್ದೇಶ ಮತ್ತು ಗ್ರಹಿಕೆಗಳಂತೆ ಕಥನ ಶೈಲಿಯೂ ನೇರ ಹಾಗೂ ಸಹಜ. ಪಾತ್ರಗಳು ಮತ್ತು ಸನ್ನಿವೇಶಗಳು ಅವುಗಳನ್ನು ನಿರೂಪಿಸುವ ಭಾಷೆ ಸಹಜವಾಗಿದೆ. ತೀವ್ರವಾದದ್ದನ್ನು ಮತ್ತು ಅಂತರ್‌ಧರ್ಮೀಯ ವಿವಾಹದಂತಹ ಸ್ಫೋಟಕವಾದುದ್ದನ್ನು ಹೇಳುವಾಗಲೂ ಭಾಷೆ ರಾಗೋದ್ರೇಕದಿಂದ ದುಮುದುಮಿಸುವುದಿಲ್ಲ, ವಿಕಾರಗೊಳ್ಳುವುದಿಲ್ಲ. ಆಕ್ರೋಶ ಮತ್ತು ಆರ್ಭಟಗಳಿಲ್ಲದ ಮೆಲುದನಿಯ ನಿರೂಪಣೆಯಲ್ಲಿ ಮಾಧವ ಕುಲಕರ್ಣಿಯವರು ಬಳಸುವ ಭಾಷೆ ಓದುಗರ ಅಂತಃಕರಣ ತಲುಪುವಷ್ಟು ಪರಿಣಾಮಕಾರಿಯಾಗಿದೆ. ಜಾತಿಯಾಧಾರಿತ ಸಾಮಾಜಿಕ ಅಸಮಾನತೆ ಹಾಗೂ ಶೋಷಣೆಯನ್ನು ನಿವಾರಿಸುವ ಮುಖ್ಯ ಧ್ಯೇಯದ ಹಿನ್ನೆಲೆಯಲ್ಲಿ ಈ ಕೃತಿ ಕನ್ನಡ ಕಾದಂಬರಿಗಳ ಸಾಲಿನಲ್ಲಿ ಮಹತ್ವದ ಸ್ಥಾನ ಪಡೆಯುತ್ತದೆ.

ಸಿ.ಎಸ್.ಭೀಮರಾಯ (ಸಿಎಸ್ಬಿ) ಅವರ ಲೇಖಕ ಪರಿಚಯಕ್ಕಾಗಿ ಇಲ್ಲಿ ಕ್ಲಿಕ್ಕಿಸಿ...
ಮಾಧವ ಕುಲಕರ್ಣಿ ಅವರ ಲೇಖಕ ಪರಿಚಯ...
ಮದುವೆಯ ಕಥಾ ಪ್ರಸಂಗ ಕೃತಿ ಪರಿಚಯಕ್ಕಾಗಿ ಇಲ್ಲಿ ಕ್ಲಿಕ್ಕಿಸಿ...

MORE FEATURES

ಪೂರ್ಣಿಮಾ ಮಾಳಗಿಮನಿ ಕಂಡ `ಗಿಣಿಬಾಗಿಲು' 

28-03-2024 ಬೆಂಗಳೂರು

"ಸಪ್ನ ಬುಕ್ಸ್ ಪ್ರಕಟಿಸಿದ ಹರೀಶ್ ಕೇರ ಅವರ ವಿಶಿಷ್ಟವಾದ ಶೀರ್ಷಿಕೆ ಇರುವ ಈ ಕೃತಿಯಲ್ಲಿನ ಒಂದೊಂದು ಅಧ್ಯಾಯವೂ ಒಂದ...

ಹೋರಾಡಲು ಹಂಬಲಿಸುವವರಿಗೆ ಈ ಕೃತಿ ಮುಖ್ಯವಾಗಬಲ್ಲದು

27-03-2024 ಬೆಂಗಳೂರು

'ಸಮಾನತೆಯನ್ನಾಧರಿಸಿದ ಸಮಾಜ, ಜನಪರ ರಾಜಕೀಯದ ಜನತಂತ್ರ ಹಾಗೂ ಭಾವೈಕ್ಯ, ಬಹುಮುಖಿ ಸಂಸ್ಕೃತಿಯ ಉಳಿವಿಗಾಗಿ ಹೋರಾಡುತ್...

ಆರ್ಟ್ ಸಿನಿಮಾವನ್ನು ಅರ್ಥಮಾಡಿಕೊಳ್ಳುವುದೂ ಒಂದು ಆರ್ಟ್

27-03-2024 ಬೆಂಗಳೂರು

'ಸಿನಿಮಾವೊಂದು ಕಲೆ, ಪ್ರಭಾವಿ ಮಾಧ್ಯಮ ಎಂದುಕೊಂಡವರಿಗೆ ಕಲಾತ್ಮಕ ಸಿನಿಮಾಗಳು ಹಬ್ಬದೂಟದಂತೆ' ಎನ್ನುತ್ತಾರೆ ವೀ...