ಮಗುವ ತುಟಿಯಿಂದ ಜಾರಿದ ಜೊಲ್ಲು ಹರಳುಗಟ್ಟಿ ವಜ್ರಗಳಾಗಿದ್ದವು

Date: 18-04-2023

Location: ಬೆಂಗಳೂರು


“ಒಂದು ರೆಪ್ಪೆ ಅಲುಗಾಡದಂತೆ ಅನಿಮಿಷರಾಗುವ ಬಿಡುಗಣ್ಣಿನ ಆಟ ಆಡುತ್ತಾ ಕಣ್ಣೊಳಗಿನ ತೇವ ಆರಿಸಿಕೊಳ್ಳುತ್ತಾ ತಡೆಯಲಾಗದೆ ಕಣ್ಣನ್ನು ಉಜ್ಜಿ ಉಜ್ಜಿ ಕಡೆಗೆ ಉರಿಯೂತ ಎಲ್ಲವೂ ಆಗಿ, ಇನ್ನೊಮ್ಮೆ ಈ ಆಟ ಆಡಬಾರದು ಎಂದುಕೊಳ್ಳುತ್ತಿದ್ದೆವಲ್ಲಾ ತೇಜೂ, ಅದೆಷ್ಟು ಹೊತ್ತಿನ ಶಪಥವೇ,” ಎನ್ನುತ್ತಾರೆ ಅಂಕಣಗಾರ್ತಿ ಪಿ. ಚಂದ್ರಿಕಾ. ಅವರು ತಮ್ಮ ನಡೆಯದ ಬಟ್ಟೆ ಅಂಕಣದಲ್ಲಿ ‘ಮಗುವ ತುಟಿಯಿಂದ ಜಾರಿದ ಜೊಲ್ಲು ಹರಳುಗಟ್ಟಿ ವಜ್ರಗಳಾಗಿದ್ದವು’ ಎನ್ನುವ ವಿಚಾರವನ್ನು ಕಟ್ಟಿಕೊಟ್ಟಿದ್ದಾರೆ.

ನಕ್ಕ ಶ್ಯಾಮು, `ಹೌದೇ ತೇಜೂ, ಅವತ್ತು ಎಷ್ಟು ತಲೆ ಕೆಡಿಸಿಕೊಂಡಿದ್ದೆ ಗೊತ್ತಾ ಹಕ್ಕಿಗಳನ್ನು ಹಾರಿಸಲಿಕ್ಕೆ. ನಂಬಿಕೆ ಮತ್ತು ವಾಸ್ತವದ ಮಧ್ಯೆ ಎಂಥಾ ದೊಡ್ದ ಕಂದಕ ಇದೆ ಎಂದು ಗೊತ್ತಾಗಿದ್ದು ಅಂದೇ. ಆದರೆ ಅದರ ಮಧ್ಯೆ ನಾವೇ ಪರಿಹಾರವನ್ನು ಕಂಡುಕೊಳ್ಳುತ್ತೇವಲ್ಲ, ಅದು ಹೊಳೆಯುವುದು ಹೇಗೆ? ಅವತ್ತೂ ನನ್ನಲ್ಲಿ ಹಕ್ಕಿ ಹಾರೇ ಹಾರುತ್ತದೆ ಎಂಬ ಮುಗ್ಧ ಭರವಸೆ ಇತ್ತು. ಹಾರಿಸುತ್ತೇನೆ ಎನ್ನುವ ಆತ್ಮವಿಶ್ವಾಸವೂ ಇತ್ತು. ದಾರಿ ಮಾತ್ರ ಬೇಕಿತ್ತು. ಆಗ ನೆರವಿಗೆ ಬಂದವೇ ಈ ದಾರಗಳು. ಅದೃಷ್ಟದ ಬಾಗಿಲುಗಳು ತೆರೆದವೇನೋ ಎನ್ನುವಂತೆ ನಾನು ಶ್ರದ್ಧೆಯಿಂದ ಅವುಗಳನ್ನು ಹಕ್ಕಿಗಳಿಗೆ ಪೋಣಿಸಿದ್ದೆ. ಅವು ಹಾರಿದರೆ ನಾನು ಹಾರಿದಂತೆ ಎನ್ನಿಸಿಬಿಟ್ಟಿತ್ತು. ಆ ಹಕ್ಕಿಗಳ ಮೇಲೆ ಹಳದಿಯ ರಂಗನ್ನು ಸವರುತ್ತಿದ್ದರೆ ಕಡು ಹಸಿರು ಬಣ್ಣ ತೆಳುವಾಗುತ್ತಾ ಹೋಗಿತ್ತು. ಹೀಗೆ ಆಕಾರ ತಳೆದ ಆ ಗಿಳಿಗಳು ಕಣ್ಣು ಪಿಳುಕಿಸುತ್ತಿದ್ದವು ಎನ್ನುವ ಭ್ರಮೆ ಹುಟ್ಟಿಸುತ್ತಿದ್ದವು.

ಭ್ರಮೆ ಎಂಥಾ ಪದ ಅದು ತೇಜೂ. ನಮ್ಮ ಲೋಕವನ್ನು ಸೃಷ್ಟಿಸಿಕೊಂಡು ಆನಂದದ ಅಲೆಯೊಂದರ ಮೇಲೆ ಅನಾಯಾಸವಾಗಿ ತೇಲಿಹೋಗುತ್ತೇವಲ್ಲಾ! ಅನುಭೂತಿಯ ಅನಂತಕ್ಕೆ ವಿನಮ್ರತೆಯಿಂದ ಸೇರಿಹೋಗುತ್ತೇವಲ್ಲಾ!! ಆ ಭಿನ್ನ ಜಗತ್ತಿನಲ್ಲಿ ನಾನೆಲ್ಲಿದ್ದೇನೆ? ಹೇಗಿದ್ದೇನೆ? ಎಂದು ಹುಡುಕಿಕೊಳ್ಳುತ್ತೇವಲ್ಲಾ. ಅಬ್ಬಾ ಎಂಥಾದ್ದೇ ಅದು, ಕೊನೆಯ ದಾರಿ ಎನ್ನುವ ಹಾಗೆ ತಿರುವಿಗೆ ಬಂದು ನಿಂತಾಗ ದಾರಿಗಳಿಲ್ಲದ, ಆದರೆ ನಡೆದದ್ದೆಲ್ಲವೂ ದಾರಿಗಳೇ ಆಗಬಲ್ಲ ಸಾಧ್ಯತೆಯ ಅನಂತ ಬಯಲು ಎದುರಾಗಿ `ನಾನು ಹೀಗೆ ನಿಂತು ಎಷ್ಟೋ ಕಾಲವಾಗಿದೆ. ಈಗ ಬಂದಿದ್ದೀಯಲ್ಲೆ ಹುಡುಗಿ, ನನ್ನ ಸಂಧಿಸುವ ಈ ಕ್ಷಣ ವೃಕ್ಷದಲ್ಲಿ ಒಂದು ಹೂವರಳುತ್ತದೆ. ದಿಟ್ಟಿಸಿ ನೋಡುವೆಯಾದರೆ ಅದು ಹೂವಲ್ಲ ಕಣ್ಣು, ಸಂಧಿಸುವ ನಿನ್ನ ಕಣ್ಣಿಗಾಗಿ ಅವು ಕಾಯುತ್ತಲಿವೆ. ಗುರುತಿಸಬಲ್ಲೆಯಾ ಪ್ರೀತಿ ರಕ್ಷಿಸುವ ಅವನ್ನು? ಕೇಳಿಕೋ ಒಮ್ಮೆ, ಕೊನೆಯಿರದ ಸಾವಿರದ ಬಾಗಿಲುಗಳು ಒಂದೊಂದೆ ಒಂದೊಂದೇ ತೆರೆಯುತ್ತಾ ಹೋಗುತ್ತದೆ. ಕೊನೆಯ ಬಾಗಿಲು ತೆರೆಯಿತು ನೋಡು, ಅತಂತ್ರವಾಗಿದ್ದ ಎಲ್ಲವೂ ಪಾರಮ್ಯದ ಕಡೆಗಿನ ಲಕ್ಷ್ಯವೇನೋ ಎನ್ನುವಂತೆ ಒಟ್ಟಾಗು ಎನ್ನುತ್ತದೆ’. ಎಷ್ಟೋ ಸಲ ಯೋಚಿಸಿದ್ದೇನೆ ತೇಜೂ ಬಯಲು ಹೇಳಿದ ಮಾತುಗಳು ಜಗತ್ತಿನಲ್ಲಿ ಇದ್ದ ಬದ್ದ ಶಕ್ತಿಯನ್ನೆಲ್ಲಾ ನನ್ನಲ್ಲಿ ನೆಲೆಸುವಂತೆ ಮಾಡಿತೇ ಎಂದು.

ಈಗಲೂ ಭ್ರಮೆ ಎನ್ನುವ ಪದ ನನ್ನೊಳಗೆ ಹುಟ್ಟು ಹಾಕುವ ಸಂಚಲನೆ ಎಂಥಾದ್ದು ಗೊತ್ತಾ- ರೆಪ್ಪೆಗೂ ನೋವಾಗುತ್ತೆ ಎನ್ನಿಸುವಂತೆ. ಈ ಕಣ್ಣರೆಪ್ಪೆಗೆ ಎಂದಾದರೂ ಒಂಟಿತನ ಕಾಡಿದ್ದಿದೆಯಾ? ಸಿಕ್ಕರೆ ಅಂಥಾ ಜೊತೆ ಸಿಗಬೇಕು. ನನಗನ್ನಿಸುವುದು ಜಗತ್ತು ತನ್ನ ರೂಪಿಸಿದ ಆ ಶಕ್ತಿಗೆ ಆದರಪೂರ್ವಕವಾಗಿ ನಮಸ್ಕರಿಸಿದಾಗ ಹುಟ್ಟಿದವೇ ಈ ರೆಪ್ಪೆಗಳು. ಯಾವುದು ಯಾವುದನ್ನು ಹಿಂಬಾಲಿಸುತ್ತವೆ ಹೇಳು? ಕಣ್ಣು ಮುಚ್ಚಿದಾಗ ಕಾಣುವ ಕತ್ತಲೆಯೂ ಕತ್ತಲೆಯಲ್ಲ. ಹೊರಗೆ ಏನು ನಡೆಯುತ್ತದೆ ಅದೆಲ್ಲವೂ ನೆರಳು ನೆರಳಾಗಿ, ಕೆಲವೊಮ್ಮೆ ಇರುವುದಕ್ಕಿಂತ ಪ್ರಖರವಾಗಿ ಗೋಚರಿಸುತ್ತವೆ. ಬಿಸಿಲಿಗೆ ಒಡ್ಡಿದ ಕಿಟಕಿಯೊಂದನ್ನು ಸುಮ್ಮನೆ ದಿಟ್ಟಿಸಿ ಕಣ್ಣುಮುಚ್ಚು, ಆಗ ಅದು ಬಿಲಿಸಿಗೆ ಒಡ್ಡಿದ ಕಂಬಿಯನ್ನು ಕಾಣಿಸುತ್ತೋ, ಇಲ್ಲಾ ಬಿಸಿಲೇ ಕಂಬಿಯಾಗುತ್ತದೋ. ಇದನ್ನು ಕಣ್ಣೊಡಲಲಿ ಹಿಡಿಯಲು ಬೇಕಿರುವುದು ಈ ರೆಪ್ಪೆಗಳು. ಇವಕ್ಕೆ ಎಂಥಾ ನೋವು ಅಂತೀಯಾ! ಅಸ್ಪಷ್ಟವಾದದ್ದನ್ನು ಸ್ಪಷ್ಟ ಮಾಡುವಾಗ ಲೋಲುಪತೆಯೊಂದು ಇರುತ್ತದಲ್ಲಾ, ಹಾಗೇ ಸ್ಪಷ್ಟವಾಗಿ ಕಂಡಿದ್ದನ್ನು ಅಸ್ಪಷ್ಟ ಮಾಡುವಾಗಲೂ ಕೂಡ್ತಾ. ನಾವದರಲ್ಲಿ ಮಗ್ನರಾಗುತ್ತಾ, ಸುಖದಲ್ಲಿ ತೇಲುತ್ತಾ, ವಿನೋದ ಎನ್ನುವ ಹಾಗೆ ನಮ್ಮೊಳಗೆ ನಾವೇ ನಗುತ್ತಾ, ಜಗದ ಲೀಲೆಗೆ ಎದುರಾದಾಗ ಈಗ ತಾನೆ ಹುಟ್ಟಿದ ಮಗುವಾಗುತ್ತೇವೆ. ಅಂದು ನನಗೆ ಜಗತ್ತೇ ಬೇಡ ಎಂದು ಹೊರಟುಬಿಟ್ಟಿದ್ದೆನಲ್ಲಾ, ಆಗ ನನ್ನ ಕಾಡಿದ್ದು ಯಾವುದು ಗೊತ್ತಾ? ಚಂದ್ರನೂ ಅಲ್ಲ, ಹನಿಯೂ ಅಲ್ಲ. ಆ ಒಂದು ಪುಟ್ಟ ಶೂ. ಅದ್ಯಾಕೆ ಕಾಡಿತ್ತು ಆ ಪರಿ? ಅದನ್ನು ನೋಡದೆ ಹೋದರೆ ನನ್ನ ಜೀವವೆ ಹೊರಟು ಹೋಗುತ್ತೆ ಎಂದು ಹಂಬಲಿಸಿ‘ ವಾಪಾಸಾಗಿದ್ದೆನಲ್ಲಾ. ಅದನ್ನೆನಾದರೂ ನನ್ನೊಂದಿಗೆ ತೆಗೆದುಕೊಂಡು ಹೋಗಿಬಿಟ್ಟಿದ್ದಿದ್ದರೆ ನಾನು ಮತ್ತೆ ಇಲ್ಲಿಗೆ ಬರುತ್ತಲೆ ಇರಲಿಲ್ಲವಾ?

ಒಂದು ರೆಪ್ಪೆ ಅಲುಗಾಡದಂತೆ ಅನಿಮಿಷರಾಗುವ ಬಿಡುಗಣ್ಣಿನ ಆಟ ಆಡುತ್ತಾ ಕಣ್ಣೊಳಗಿನ ತೇವ ಆರಿಸಿಕೊಳ್ಳುತ್ತಾ ತಡೆಯಲಾಗದೆ ಕಣ್ಣನ್ನು ಉಜ್ಜಿ ಉಜ್ಜಿ ಕಡೆಗೆ ಉರಿಯೂತ ಎಲ್ಲವೂ ಆಗಿ, ಇನ್ನೊಮ್ಮೆ ಈ ಆಟ ಆಡಬಾರದು ಎಂದುಕೊಳ್ಳುತ್ತಿದ್ದೆವಲ್ಲಾ ತೇಜೂ, ಅದೆಷ್ಟು ಹೊತ್ತಿನ ಶಪಥವೇ. ಒಂದು ಮಾವಿನಕಾಯಿ, ಒಂದಿಷ್ಟು ನೇರಳೆ ಹಣ್ಣು ಅಥವಾ ಸೀಬೆ ಹೀಗೆ ಯಾವುದೂ ನಮ್ಮ ಮುಂದೆ ಕೂತು ಆಮಿಷ ಒಡ್ಡುತ್ತಿದ್ದರೆ ಮತ್ತೆ ಪಂದ್ಯಕ್ಕೆ ಅಣಿಯಾಗುತ್ತಿದ್ದೆವು. ಈಗಲೂ ಹಾಗೆ ಅಲ್ಲವಾ? ಏನೂ ವ್ಯತ್ಯಾಸವಿಲ್ಲ ವಯಸ್ಸು ಏರಿದೆ ಎನ್ನುವುದನ್ನು ಬಿಟ್ಟರೆ.

ಒಂದು ಏಕಾಂತದ ಜೀವನಕ್ಕೆ ಎಂಥಾ ತಲ್ಲಣವಿರುತ್ತದೆ ಎಂದು ಅರಿವಾಗಿತ್ತು ಅಂದು. ಚಂದ್ರ ಹನಿಯನ್ನು ತನ್ನೊಂದಿಗೆ ಅವನ ಮನೆಗೆ ಕರೆದೊಯ್ದಿದ್ದ. ಕೋರ್ಟು ಹೇಳಿತ್ತು, ಇನ್ನು ಮುಂದೆ ವಾರಾಂತ್ಯಗಳಲ್ಲಿ ಮಗಳು ಅಪ್ಪನ ಜೊತೆಗೂ ಇರಬಹುದು ಎಂದಾಗ ಹನಿ ತುಂಬಾ ಸಣ್ಣವಳೇನಾಗಿರಲಿಲ್ಲ. ಯಾರ ಮೇಲೂ ಹಕ್ಕು ಸ್ಥಾಪನೆ ಮಾಡಬಾರದು ಎನ್ನುವುದು ನನ್ನ ನಿಲುವು. ಆದರೆ ಚಂದ್ರನನ್ನು ನನ್ನ ಕಬ್ಜಾಗೆ ತೆಗೆದುಕೊಳ್ಳದೆ ಉಳಿದೆನಲ್ಲ, ಹಾಗೆ ಅವಳನ್ನೂ ಬಿಟ್ಟುಬಿಡಲು ಮನಸ್ಸು ಒಪ್ಪಲೇ ಇಲ್ಲ. ಮನೆ ತುಂಬಾ ಬಣ ಬಣ ಅನ್ನಿಸಿದಾಗ, ಹನಿ ಶಾಶ್ವತವಾಗಿ ನನ್ನಿಂದ ದೂರವಾಗಿಬಿಟ್ಟರೆ ಉಳಿಯುವ ಬದುಕಿನ ಮೌನಕ್ಕೆ ಯಾರು ಹೊಣೆ? ಎನ್ನಿಸಿಬಿಟ್ಟಿತ್ತು. ಚಂದ್ರ ಅಂಥಾ ಕ್ರೂರಿ ಆಗಲಾರ ಅನ್ನುವುದೂ ಗೊತ್ತಿದ್ದರೂ ಆ ಒಂದು ಕ್ಷಣ ಎದುರಾದರೆ ಹೇಗೆ? ಹೀಗೆ ಯೋಚನೆ ಮಾಡುವುದು ನನ್ನ ಸಮಸ್ಯೆಯೇ ಹೊರತು ಜಗತ್ತಿನದ್ದಲ್ಲ. ಇದಕ್ಕೆ ಚಂದ್ರನಾದರೂ ಹೇಗೆ ಹೊಣೆಯಾದಾನು? ನನಗಿದ್ದಷ್ಟೇ ಪ್ರೀತಿ ಹನಿಯ ಮೇಲೆ ಅವನದ್ದೂ ಅಲ್ಲವಾ?

ಅಷ್ಟು ಹೊತ್ತಿನ ನನ್ನ ನೋವಿಗೆ ಉತ್ತರ ಎನ್ನುವಂತೆ ಹನಿ ರಕ್ತಸಿಕ್ತ ಗರ್ಭಚೀಲದಿಂದ ಪುಳಕ್ಕೆನೆ ಜಾರಿದಾಗಿನ ಅನುಭವವನ್ನು ಏನಂತ ಹೇಳಲಿ? ಮಗು ಭೂಮಿಗೆ ಬಂದ ಹಿಂದೆಯೇ ಚಿಮ್ಮಿದ ಕರಣೆ ಕರಣೆಯಾದ ರಕ್ತ ನನ್ನ ಯೋನಿಗಳನ್ನು ಮತ್ತಷ್ಟು ಬಿಸಿ ಮಾಡಿತ್ತು. ಮಗು ಹೊರಗೆ ಬರುವಾಗ ಅದಕ್ಕೆ ತಡೆಯಾಗಬಾರದೆಂದು ನರ್ಸುಗಳಿಬ್ಬರು ತೊಡೆ ಮಡಚದ ಹಾಗೆ ಒತ್ತಿ ಹಿಡಿದಿದ್ದರಲ್ಲ, ಅಲ್ಲೊಂದು ನೋವು ಸುಳಿಯಾಗುತ್ತಿತ್ತು. ನನಗೆ ಈಗಲೂ ಅನ್ನಿಸುವುದು ಒಂದು ಮರಕ್ಕೂ ಇಂಥಾದ್ದೇ ನೋವಿರುತ್ತದಾ? ಹಣ್ಣೊಂದು ತೊಟ್ಟು ಕಳಚುವಾಗ ಅದೂ ಹೀಗೆ ಸಂಕಟವನ್ನು ಅನುಭವಿಸಿರುತ್ತಾ? ಕಳಚಿದ ಹಣ್ಣಿನ ಗುರುತು, ಕತ್ತರಿಸಿದ ಯೋನಿಯ ಕೆಳಭಾಗ ಹೊಲಿದು ಕೂಡಿ ಗಾಯ ಮಾದಿದ್ದರೂ ಕತ್ತರಿಸಿದ ನೆನಪನ್ನು ಮರಳಿಸುವ ಹಾಗೆ ಆಗಾಗ ಚುಳ್ಳೆನ್ನುತ್ತದೆಯಲ್ಲಾ ಹಾಗೆ ಅನ್ನಿಸುತ್ತದೆಯಾ? ತೊಟ್ಟು ಕಳಚಿದ ಹಣ್ಣು ಕೂಡಾ ಮಗು ಹೊರಗೆ ಬಂದ ನಂತರ ಉಳಿಸುವ ನಿರಾಳತೆಯನ್ನು ಉಳಿಸುತ್ತದೆಯಾ?- ಮರದೆದೆಯನ್ನು ಹಗುರಾಗಿಸಿ.

ನಾನು ನೋವು ತಿನ್ನುತ್ತಾ ಮಲಗಿದ್ದಾಗ `ಐ ಆಮ್ ಸಾರಿ ಶ್ಯಾಮು’ ಎಂದು ನನ್ನ ಕೈಹಿಡಿದು ಚಂದ್ರ ಅತ್ತುಬಿಟ್ಟಿದ್ದ. ಅವನಿಗಿದ್ದ ಗಂಡಸು ಎನ್ನುವ ಅಹಂ ಕರಗಿದ್ದನ್ನು ನಾನು ನೋಡಿದ್ದೆ ಅವತ್ತು. ಅಷ್ಟು ನೋವಿನ ನಡುವೆಯೂ ನಾನು ಪೇಲವವಾಗಿ ನಕ್ಕಾಗ ಅವನು ಮತ್ತಷ್ಟು ಕುಂದಿದ್ದ. `ನಿನಗೆ ಇಷ್ಟು ನೋವಾಗುತ್ತೆ ಅಂತ ಗೊತ್ತಿದ್ದಿದ್ದರೆ...’ ಎಂದು ಮಿಕ್ಕ ಮಾತುಗಳ ಗಂಟಲಾಳದಲ್ಲಿ ಉಳಿಸಿಕೊಂಡಿದ್ದ. ನೋವಿನಲ್ಲೂ ನನ್ನೊಳಗೆ ತುಂಟತನ ತಲೆ ಎತ್ತಿತ್ತು, `ಹೇಳು ಚಂದ್ರ ಗೊತ್ತಿದ್ದಿದ್ದರೆ ನನ್ನ ಮುಟ್ಟುತ್ತಿರಲಿಲ್ಲವಾ?’ ಎಂದೆ. ಅವನ ಮುಖದಲ್ಲಿ ಕಸಿವಿಸಿ ಕಾಣಿಸಿತು. `ಪ್ಲೀಸ್ ಶ್ಯಾಮು ಸುಮ್ಮನಿದ್ದು ಬಿಡು. ಮಾತಾಡಿ ಮತ್ತಷ್ಟು ಪಾಪಪ್ರಜ್ಞೆ ಕಾಡುವ ಹಾಗೆ ಮಾಡಬೇಡ’ ಎಂದಿದ್ದ. `ಹೊಸ ಹುಟ್ಟಿಗಾಗಿ ಪ್ರತಿಕ್ಷಣವೂ ಜಗತ್ತು ಕಾಯುತ್ತದೆ. ನಾನೂ ನೀನೂ ಭೂಮಿಗೆ ಬಂದಾಗಲೂ ಇದೇ ನಡೆದದ್ದು. ಹುಟ್ಟಿಗಾಗಿ ನೋಯುವುದರಲ್ಲಿ ಸುಖವಿದೆ. ಅದಕ್ಕಾಗಿ ಗಿಲ್ಟ್ ಬೇಡ ಚಂದ್ರಾ’ ಎಂದಿದ್ದೆ. ಪಾಪ ಅವನು ನಿಜಕ್ಕೂ ದಣಿದಿದ್ದ. ಹನಿಯನ್ನು ಎತ್ತಿ ಆಡಿಸುವಾಗಲೆಲ್ಲಾ, `ಅಂದು ನೀನು ಹೇಳಿದ ಮಾತು ಸತ್ಯ ಶ್ಯಾಮು. ಈ ಆನಂದಕ್ಕೆ ನೀನೆಷ್ಟು ಕಷ್ಟ ಪಡಬೇಕಾಯಿತಲ್ಲಾ’ ಎನ್ನುತ್ತಿದ್ದ.

ನಾನು ಗರ್ಭಿಣಿ ಅಂತ ಗೊತ್ತಾದ ದಿನ ನನ್ನೊಳಗೆ ಒಂದು ಬೆರಗು ಮೂಡಿತ್ತು. ಇದ್ಯಾವುದು ನನ್ನೊಳಗೆ ಹೀಗೆ ಪ್ರವೇಶಿಸಿದ್ದು? ಬಾಳೆ ಗರ್ಭವನ್ನು ಸೀಳಿಕೊಂಡು ಗೊನೆಯೊಂದು ಬೆಳೆಯುವ ಹಾಗೆ ಹನಿ ನನ್ನೊಡಲಲ್ಲಿ ಇದ್ದಳಾ? ಅರೆ ಮಾತುಗಳು ಆಕಾರ ಪಡಕೊಳ್ಳಲಾರದೆ ಹೀಗೆ ಒದ್ದಾಡುವಾಗ ಶ್ರುತಗೊಂಡದ್ದು ಯಾವುದು? ಸ್ಖಲನಗೊಂಡ ವೀರ್ಯವನ್ನು ನನ್ನೊಡಲು ಧರಿಸಿದಾಗ ಒಳಗಿನಿಂದ ಚಿಮ್ಮಿದ್ದು ಆನಂದವಾ? ಸಮಾಧಾನವಾ? ಇಡೀ ದೇಹ ರಿಲ್ಯಾಕ್ಸ್ ಆಗುವಾಗ ಎಲ್ಲವನ್ನೂ ಮರೆತು ನಿದ್ದೆ ಆವರಿಸಿತ್ತು. ಅದು ಮೈ ಮರೆವಾ? ಏನೆಂದು ಗುರುತಿಸಲಿ ಅದನ್ನು! ಯಾವ ಸುಖಕ್ಕೆ ಅದು ಸಮ!! ನಾನು ಬಯಸಿ ಪಡೆದದ್ದೆ ಅದು ಅಥವಾ ತಾನಾಗೇ ದಕ್ಕಿದ್ದೆ? ಇಲ್ಲ, ಇಲ್ಲ, ಇದ್ಯಾವುದೂ ಅಲ್ಲ ನನ್ನ ಬೆರಗಿನ ಕಾರಣ. ನಾನು ಎರಡಾಗುವುದು ಸಾಧ್ಯವಾಗುತ್ತಿದೆಯಲ್ಲಾ ಅದು. ಅನಾದಿಯಿಂದಲೂ ಕಾಲ ಎಲ್ಲವನ್ನೂ ಮಾಡುತ್ತಲೇ ಬರುತ್ತಿದೆ. ನನ್ನನೂ ಮಾಡಿತು, ಈಗ ನನ್ನೊಡಲನ್ನು ತುಂಬಿ ಇನ್ನೇನನ್ನೋ ಮಾಡುತ್ತಿದೆ. ಅಂದರೆ ಕಾಲಕ್ಕೂ ನನಗಿರುವಂಥಾ ಎಕ್ಸೈಟ್‌ಮೆಂಟುಗಳಿವೆಯಾ? ತಣ್ಣಗೆ ಕಾಣುವ ನದಿಯಾಳದಲ್ಲಿ ಸುಳಿಗಳಿದ್ದ ಹಾಗೆ ಅದು ಕಾಣುತ್ತಿಲ್ಲವಾ? ಅಥವಾ ಮನುಷ್ಯರಾದ ನಮಗೆ ಮಾತ್ರ ಈ ಭಾವನೆಗಳು ಎಂದುಕೊಂಡುಬಿಟ್ಟಿದ್ದೇವಾ? ಎರಡಾಗುವ ಯಾವ ಜೀವಕ್ಕೂ ರೂಪಾಂತರಗೊಳ್ಳಬಲ್ಲ ಇನ್ನೊಂದೇ ವಸ್ತುವಿನ ಧ್ಯಾನಕ್ಕೆ ಸಿಗುವ ಫಲವಾ ಇದು? ಅಥವಾ ಹುಟ್ಟಿಸಬಲ್ಲೆ ಎನ್ನುವ ಅಹಮ್ಮಾ- ಏನೆನ್ನಲಿ? ಹೆಣ್ಣಿಗೆ ಮಾತ್ರವೆ ಇರುವ ಸಾಧ್ಯತೆ ಇದು. ನಿಜವೆಂದರೆ ಹನಿ ಹುಟ್ಟಿದ ಮೇಲೆ ನನ್ನ ದೇಹ ಕೇಂದ್ರೀಕೃತವಾಗುತ್ತ ಹೋಗಿತ್ತು. ಚಂದ್ರನೊಡನೆ ವಿರಮಿಸುವಾಗ ವಿಚಿತ್ರ ಅನುಭವ -ಸುಖವೆಲ್ಲಾ ದೇಹದ ತುಂಬಾ ಹರಡಿ ಹೋದಂತೆ. ಅದೇ ಹನಿ ಹುಟ್ಟಿದ ಮೇಲೆ ನನ್ನ ವ್ಯಕ್ತಿತ್ವವೆಲ್ಲವೂ- ಮಗುವಿನ ಹಸಿವೆ ನೀಗಿಸುವುದು ಅಂತ ಮಾತ್ರವಲ್ಲ ಅದೂ ನನ್ನ ವ್ಯಕ್ತಿತ್ವದ ಘನತೆ ಎನ್ನುವ ಹಾಗೆ- ಸ್ತನಗಳಲ್ಲಿ ಕೇಂದ್ರವಾಯಿತೇನೂ ಎನ್ನಿಸಿತ್ತು. ಆಗ ಬರೆದದ್ದೆ `ಕುಬುಸ’ ಸೀರೀಸ್. ಬೌಸ್ ತುಂಬಾ ಫೆಮಿನೈನ್ ಅನ್ನಿಸತೊಡಗಿದಾಗ ಜಗತ್ತಿನ ಎಲ್ಲವೂ ಅಲ್ಲೇ ಕೇಂದ್ರವಾಗುತ್ತಾ ಹೋಯಿತು. ಹಾಲಿನ ಹಸಿ ವಾಸನೆ ಆರದ, ಸದಾ ಜಿನುಗುತ್ತಲೆ ಇರುವ ಸ್ತನಗಳ ತೊಟ್ಟು ಜಗತ್ತಿನ ಸತ್ಯವನ್ನೇ ಛೇಧಿಸುವ ಶಕ್ತಿಯಾಗಿತ್ತು. ಜೀವವೊಂದು ನನ್ನ ಮೇಲೆ ಅವಲಂಬಿತವಾಗಿದ್ದೆ ಅದರ ಮೂಲಕ. ನಿನಗೆ ನೀನೊಬ್ಬಳೇ ಸೋಲಿಸಬಲ್ಲವಳು, ಗೆಲ್ಲಿಸುವವಳೂ ಕೂಡಾ, ಯಾರದು ನನ್ನ ಕಿವಿಯಲ್ಲಿ ಉಸಿರಿದ್ದು?! ಸಿಕ್ಕ ಸಿಕ್ಕ ಬಟ್ಟೆಯನ್ನು ಇಷ್ಟ ಬಂದ ಹಾಗೆ ಕತ್ತರಿಸಿ ಬೌಸಿನ ಆಕಾರಕ್ಕೆ ತಂದು ಅದರ ಮೇಲೆ ಜಗತ್ತಿನ ಸಮಸ್ತವನ್ನೂ ಬರೆದುಬಿಡುತ್ತಿದ್ದೆ. `ಏನ್ ಮಾಡ್ತಾ ಇದೀಯ?’ ಎಂದು ಚಂದ್ರ ಕೇಳಿದ್ದಕ್ಕೆ, ಅಚ್ಚರಿಯಿಂದ `ಪ್ರತಿಕ್ಷಣವೂ ನನ್ನೆಡೆಗೆ ಧಾವಿಸುತ್ತಿದೆ ನೋಡು’ ಎಂದಿದ್ದೆ. ಒಂದರ ಮೇಲೊಂದರಂತೆ ಬರೆಯುತ್ತಾ ಹೋದೆ- ತಾಯ್ತನಕ್ಕೆ ನಾನೊಬ್ಬಳೆ ಅಭಿವ್ಯಕ್ತಿ ನೀಡುವ ಹಾಗೆ- ಹರಿದು, ಪಿಸಿದ, ಹೊಸದಾದ ಎಲ್ಲ ಬಟ್ಟೆಗಳೂ ನನ್ನ ಕ್ಯಾನ್ವಾಸ್ ಆಗಿಬಿಟ್ಟಿದ್ದವು. ಕ್ಷೋಭೆಯಿಲ್ಲದೆ ಉಳಿಯಬೇಕೆಂದರೆ ಮಗುವಾಗಬೇಕು.

ಮಗುವಾಗುವುದೆಂದರೆ ಸ್ತನಗಳ ಮೇಲೆ ಆಧಾರವಾಗುವುದು. ನಾನೀಗ ಜಗತ್ತಿನ ಮೂಲಭೂತ ಸಂಗತಿಯ ಚಿತ್ರಿಸುತ್ತಿರುವೆ ನೋಡಿ ಎನ್ನುತ್ತಿದ್ದರೆ ನನ್ನೆದುರು ಎಲ್ಲರೂ ತಿಣುಕತೊಡಗಿದ್ದರು - ನನ್ನ ಹಾಗೆ ಹೇಳುವವರೇ ಯಾರೂ ಇಲ್ಲ ಎನ್ನುವ ಹಾಗೆ. ಹಿಮದ ಸರಳುಗಳ ಮಧ್ಯೆ ಘನೀಕರಿಸುವ ನನ್ನ ಕೈಗಳ ಬಿಸುಪು ಉರಿಯ ನಡುವೆ ಬೇಯಲೂ ಬಲ್ಲದು ಎನ್ನುವ ತಿಳುವಳಿಕೆ ನನಗೂ ಇತ್ತು. ಒಂದೇ ಕ್ಷಣ ಸ್ವಯಂ ಅನುಭವದ ಈ ವಿಸ್ತಾರವಾದ ಜಗತ್ತು ನನ್ನೊಳಗಿನ ಆತ್ಮಬಲ. ಏಕಪ್ರಕಾರವಾಗಿ ನಡೆಯುತ್ತಲೇ ಇದ್ದ ಜಗತ್ತಿಗೆ ಇಲ್ಲೊಂದು ಹೊರಳು ದಾರಿಯಿದೆ ಅದು ನನ್ನದೇ ನಡೆ ಎಂದು ತೋರಿಸುತ್ತಿದ್ದವಲ್ಲ ಆ ಚಿತ್ರಗಳು, ಅದರೆದುರು ಚಂದ್ರ ಕೂಡಾ ಮಂಕಾಗಿಬಿಟ್ಟಿದ್ದ. ನನ್ನ ಆ ಸೀರೀಸ್ ಎಂಥಾ ಕ್ರೇಜ್ ಹುಟ್ಟಿ ಹಾಕಿತ್ತು ಗೊತ್ತಾ? ರೈಸಿಂಗ್ ಸ್ಟಾರ್ ಎನ್ನುವ ತಲೆಬರಹದಡಿಯಲ್ಲಿ ಪತ್ರಿಕೆಗಳು ಬರೆದಿದ್ದವು. ಹುಡುಗಿಯೊಬ್ಬಳು ಕೇದಗೆಯ ಪೊದೆಯಲ್ಲಿ ಹೂವನು ಹುಡುಕಿ ಹೊರಡುವ ಆ ಚಿತ್ರದಲ್ಲಿ ಹಾವೊಂದು ಅವಳ ಕೈ ಮೇಲೆ ಆಡುತ್ತಿದೆ ಆದರೆ ಅದರ ಅರಿವು ಅವಳಿಗೇ ಇಲ್ಲ. ಜಗತ್ತೆ ಫ್ರೀಜ್ ಆಗಿದೆ ಎನ್ನುವ ಹಾಗೆ ಆ ಚಿತ್ರವನ್ನು ಕುಬುಸದ ಮೇಲೆ ಬರೆದ ಆ ದಿನಗಳಲ್ಲಿ ಹೆಣ್ಣಿನ ಅಭಿವ್ಯಕ್ತಿಯ ಬಗ್ಗೆ ತುಂಬಾ ದೊಡ್ಡ ಚರ್ಚೆಗಳು ನಡೆದವು. ಸಾಧ್ಯತೆಯ ಬಗ್ಗೆ ಎಕ್ಕ್÷್ಸಪ್ಲೋರ್ ಆಗದ ಹೆಣ್ಣ ಜಗತ್ತಿನ ಬಗ್ಗೆ ಮಾತುಗಳಾಗಿ ಇದ್ದಕ್ಕಿದ್ದ ಹಾಗೆ ನಾನು ಮುನ್ನೆಲೆಗೆ ಬಂದುಬಿಟ್ಟೆ. ಮುನ್ನೆಲೆಗೆ ಬರಬೇಕು ಎನ್ನುವುದು ನನ್ನ ಆಭೀಪ್ಸೆ ಆಗಿರಲಿಲ್ಲ, ಎಂದೂ ನಾನು ಹಾಗೆ ಯೋಚಿಸಲೂ ಇಲ್ಲ. ತುಂಬಾ ಜನ ನೀನು ನಿಜಕ್ಕೂ ಅದ್ಭುತ ಎಂದರು. ಇನ್ನು ಕೆಲವರು ಇದ್ಯಾವ ಹುಚ್ಚುತನ, ನಾಳೆ ಇನ್ಯಾವುದರ ಮೇಲೋ ಬರೆದರೆ ಅದನ್ನು ಒಪ್ಪಿಕೊಳ್ಳಬೇಕಾಗುತ್ತೆ, ನಾವು ಸಪೋರ್ಟ್ ಮಾಡಲ್ಲ ಅಂದರು. ಇನ್ನು ಕೆಲವರು ಇದು ತೋರಿಕೆಯದ್ದು, ಫೆಮಿನೈನ್ ಎಕ್ಸ್ ಪ್ರಷನ್ ಅಂದರೆ ಇದಲ್ಲ ಎಂದರು. ಆದರೆ ಈ ಸಾಧ್ಯತೆ ನನ್ನ ಒಳಗಿನ ಸಮಸ್ತಕ್ಕೂ- ನಾನೆ ಕಂಡುಕೊಂಡ ಉತ್ತರ- ಜಗತ್ತಿನ ಜೊತೆಗಿನ ಸೇತುವೆಯಾಗಿತ್ತು. ಗಾಯದ ಹೆಪ್ಪುದುರುವಂತೆ ಉದುರಿದ ನನ್ನ ಚಿತ್ರಗಳು ಹೊಸದಾಗಿ ಹುಟ್ಟುವುದರ ಕಡೆಗೆ ನೋಡುವಾಗಲೇ ಹನಿ ಪುಟ್ಟ ಹೆಜ್ಜೆಗಳನ್ನು ಇಡಲಿಕ್ಕೆ ಶುರು ಮಾಡಿದ್ದು. ನಾನು ಅವಳಿಗಾಗಿ ಜಗತ್ತಿನ ಅತ್ಯಂತ ಅದ್ಭುತವಾದ ಆ ಪುಟ್ಟ ಶೂಗಳನ್ನು ತಂದದ್ದು. ತಿದಿಯೊತ್ತುವ ಪುಪ್ಪಸಗಳಂತೆ ಅವನ್ನು ಎದೆಗೊತ್ತಿಕೊಂಡಿದ್ದೇನೆ. ಆಗ ಎದೆ ಸ್ತಬ್ಧವಾಗಿ ನನಗಿಂತಲೂ ಈ ಶೂಸುಗಳೇ ಮೊದಲು ಹುಟ್ಟಿದವೇನೋ ಅನ್ನಿಸಿಬಿಟ್ಟಿತ್ತು.

ನನ್ನ ಜೀವನದಲ್ಲಿ ಎಂದಾದರೂ ತಾತ್ವಿಕವಾದ ಪ್ರಶ್ನೆಗಳನ್ನು ಕೇಳಿಕೊಂಡಿದ್ದೇನಾ? ಎಂದರೆ ಸಾಧ್ಯವೇ ಇಲ್ಲ. ನನ್ನ ಅನುಭವದ ಜಗತ್ತು ಹೇಳುವ ಪಾಠಗಳೆಡೆಗೆ ನನ್ನ ಗಮನ. ಜಾತ್ರೆಯಲ್ಲಿ ಕೊಂಡ ಬೇರೆ ಬೇರೆ ಬಣ್ಣದ ಕನ್ನಡಕಗಳ- ಗುಂಡಗಿನ ರಟ್ಟಿನ ಸುರಳಿಗೆ ಬಣ್ಣದ ಕಾಗದಗಳನ್ನು ಅಂಟಿಸಿರುತ್ತಿದ್ದರು - ನಾನೂ ನೀನೂ ಅವುಗಳನ್ನು ಎಕ್ಸ್ ಚೇಂಜ್ ಮಾಡಿಕೊಂಡು ಜಗತ್ತನ್ನು ನೋಡುತ್ತಿದ್ದೆವಲ್ಲಾ! ಹಂಚಿಕೊಳ್ಳುವುದು ಎನ್ನುವುದಕ್ಕೆ ದೊಡ್ದ ಅರ್ಥ ಸಿಕ್ಕಿದ್ದು ಅಲ್ಲೇ. ಯಾಕೋ ಈಗಲೂ ಆ ಪುಟ್ಟ ಜಗತ್ತು ನನ್ನ ಸೆಳೆಯುತ್ತಲೆ ಇರುತ್ತದೆ. ಮತ್ತೆ ನಾವಿಬ್ಬರೂ ಪುಟ್ಟ ಶ್ಯಾಮೂ ಪುಟ್ಟ ತೇಜೂ ಆಗಿಬಿಟ್ಟರೆ- ಬೊಂಬಲಕಡಿ ಜಂಬ ಎನ್ನುತ್ತಾ -ಆ ಅದೃಷ್ಟಕ್ಕೆ ಎಣೆ ಎಲ್ಲಿಯದು!

ಈ ಜಗತ್ತೆ ಹೀಗೆ, ಇಲ್ಲಿ ನಾನೊಬ್ಬಳೆ ಅಲ್ಲ ನನ್ನ ಥರದ ಅನೇಕರ, ಅನೇಕದ್ದರ ಅಭೀಪ್ಸೆಗಳು, ನಿರೀಕ್ಷೆಗಳು ಇವೆ ಎನ್ನುವುದು ಗೊತ್ತಾಗಲಿಕ್ಕೆ ತುಂಬಾ ಸಮಯ ಬೇಕಾಯಿತು. ನಿಧಿಯಂತೆ ಕಾಪಾಡಿಕೊಂಡ ಅವುಗಳೆಲ್ಲವನ್ನು ಹಾಗೆ ಬಚ್ಚಿಟ್ಟುಕೊಂಡೆ. ಬೆಳೆಯುವ ಮಗು ನಾನು ದೊಡ್ಡವಳಾದೆ ಎನ್ನುವ ಸಂಭ್ರಮಕ್ಕೆ ಬಿದ್ದರೆ, ನಾವು ಡಿಪ್ರೆಷನ್‌ಗೆ ಹೋಗುತ್ತೇವೆ. ಕಳೆದು ಹೋದ ಆ ಜಗತ್ತು ಮಾಯಾವಿಯಂತೆ ಬೆನ್ನಟ್ಟುತ್ತಲೆ ಇದೆ. ನಾವು ಗುರಿ ಇಲ್ಲದ ಅಲೆಮಾರಿಗಳಂತೆ ನಿರಂತರ ಅದರ ಬೆನ್ನು ಬೀಳುತ್ತೇವೆ. ಹೀಗನ್ನಿಸಿದಾಗಲೆಲ್ಲಾ ಹನಿಗೆ ನಾನು ತೆಗೆದುಕೊಟ್ಟಿದ್ದ ಟಿವಿಯ ಮೇಲೆ ಷೋ ಪೀಸಿನಂತೆ ಇಟ್ಟಿದ್ದ ಮೊದಲ ಶೂಗಳನ್ನು ತೆಗೆದುಕೊಳ್ಳುತ್ತೇನೆ. ನೀರು ಚೆಲ್ಲದ ಹಾಗೆ ಹೀರುತ್ತಿದ್ದ ಪುಟ್ಟ ಕೊಳವೆಯ ಲೋಟ, ಅವಳ ಪುಟ್ಟ ಪುಟ್ಟ ಬಟ್ಟೆಗಳು... ಹೀಗೆ ನನ್ನ ಸುತ್ತಾ ಸಣ್ಣ ಪುಟ್ಟ ವಸ್ತುಗಳನ್ನು ಹರಡಿಕೊಂಡು ಕುಳಿತು ಬಿಡುತ್ತೇನೆ.

ನನ್ನ ಚಂದ್ರನ ಸಂಬಂಧ ಲೋಕದ ಕಣ್ಣಿಗೆ ಕೊನೆಯಾಗುತ್ತೆ ಅಂದಾಗ ನನಗಾಗಿ ಇನ್ನು ಇಲ್ಲೇನು ಉಳಿದಿದೆ ಅನ್ನಿಸಿ ಹೊರಟು ಬಿಟ್ಟಾಗ ನನ್ನ ಮತ್ತೆ ಇಲ್ಲಿಗೆ ಕರೆತಂದದ್ದು ಹನಿಯ ಇದೇ ಪುಟ್ಟ ಶೂಗಳು. ಅದರಲ್ಲಿ ಕೈ ಆಡಿದಾಗಲೆಲ್ಲಾ ಆವರಿಸಿಕೊಳ್ಳುವ ಮಗುವಿನ ಪಾದದ ಮೃದುತ್ವ, ತಟ್ಟಡಿಯ ನೆನಪುಗಳು ಯಾವ ಯಾವ ಕಾರಣಕ್ಕೋ ಒಳಗಿಂದ ಎದ್ದು ಬಂದು ಹರಟುತ್ತಾ ಕೂರುತ್ತವೆ. ಇವ್ಯವೂ ನಿಜವಲ್ಲ, ವಾಸ್ತವಕ್ಕೆ ಹಿಂದಿರುಗಬೇಕು ಎಂದುಕೊಳ್ಳುವಾಗ ಮೊದಲ ಬಾರಿಗೆ ಭ್ರಮನಿರಸನವಾದ ಹಾಗೆ ನೋವಿಗೆ ಬೀಳುತ್ತೇನೆ. ಆಗ ನಾವಿಬ್ಬರೂ ಬಾಲ್ಯದಲ್ಲಿ ಹಾಡುತ್ತಿದ್ದ, `ರೆಪ್ಪೆಗೂ ನೋವಾಗದ ಹಾಗೆ ನೋಡಿಕೊಳ್ಳುವೆ ನಿನ್ನ ಪುಟ್ಟ ಹಕ್ಕಿ ಬಾ ನನ್ನ ಮಡಿಲಲ್ಲಿ ಮಲಗಿಕೋ’ ಎಂದು ಕರೆಯುತ್ತಿದ್ದೆವಲ್ಲಾ! ಅದನ್ನು ಹಾಡಬೇಕು ಅನ್ನಿಸಿದಾಗೆಲ್ಲಾ ಆಂತರ್ಯದ ಕ್ಷಣಗಳು ಸಾಕ್ಷಾತ್ಕರಗೊಳ್ಳುತ್ತದೆ. ಅದು ಹುಡುಕಾಟವಾಗಬೇಕು- ಹನಿಯಾಗಲೀ, ಚಂದ್ರನಾಗಲೀ ನನ್ನ ಹುಡುಕಾಟದ ಭಾಗಗಳೇ. ಅವರು ವ್ಯಕ್ತಿಗಳಾ ಎಂದರೆ ಬರಿಯ ವ್ಯಕ್ತಿಗಳಲ್ಲ, ಕಲ್ಪನೆಯಾ ಎಂದರೆ ಅವರು ನನ್ನ ಕಲ್ಪನೆಯ ಮೂಸೆಯಲ್ಲಿ ಜನ್ಮ ತಳೆದವರಲ್ಲ-ವಾಸ್ತವವಾಗಿರುವವರು. ತಂಗಾಳಿಯಂತೆ ಇರುವನ್ನು ಸಾರುತ್ತಾ ನನ್ನ ಸುತ್ತಲೆ ಇರುತ್ತಾರೆ. ಯಾವುದನ್ನು ಮರೆಯಲಿ? ನನ್ನದೇ ಕೂದಲು ಗಾಳಿಯಲ್ಲಿ ತೇಲಿ ಬರುತ್ತದೆ. ಅರೆ ನಾನೆಲ್ಲಿ ಬಾಚಿಕೊಂಡೆ ಎಂದು ಜ್ಞಾಪಿಸಿಕೊಳ್ಳಲು ಶುರು ಮಾಡುತ್ತೇನೆ. ಊಹುಂ ಬಾಚಿಕೊಳ್ಳದೆ ಕೂದಲು ನನ್ನ ತಲೆಯಿಂದ ಜಾರಿ ಹೋಗಿದ್ದು ಹೇಗೆ ತೇಜೂ. ಎಲ್ಲಕ್ಕಿಂತ ಮಿಗಿಲಾಗಿ ಆ ಕೂದಲು ಊಟದಲ್ಲಿ ಸಿಕ್ಕಿದ್ದು ಹೇಗೆ! ನಾನು ಪ್ರತಿ ಸಲ ಶೂಗಳನ್ನು ಇಟ್ಟುಕೊಂಡು ಕುಳಿತಾಗ ಹನಿ ತನ್ನ ತೋಳುಗಳಿಂದ ನನ್ನ ಬಳಸಿ ನಗ್ತಾಳೆ, `ನಾನಿಲ್ಲೇ ಇದ್ದೀನಲ್ಲಮ್ಮಾ ಈ ಶೂ ನಿನಗೆ ಏನು ಕೊಡುತ್ತದೆ’ ಎಂದು. ಅವಳ ಕೆನ್ನೆಯನ್ನು ಸವರುತ್ತೇನೆ, `ಹನಿ ಎದುರು ನೀನಿದೀಯ, ಆದರೆ ನೀನು ಎನ್ನುವ ಭಾವ ಇದೆಯಲ್ಲ ಅದು ಕೊಡುವ ಸುಖ ನಿನಗೆ ಕೊಡಲು ಸಾಧ್ಯವಿಲ್ಲ’ ಎಂದು. ಅವಳಿಗೆ ಅರ್ಥವಾಗುತ್ತೋ ಬಿಡುತ್ತೋ ಗೊತ್ತಿಲ್ಲ. ಅವಳು ನಕ್ಕಳು. ನನ್ನ ಕೆನ್ನೆಯ ಗುಳಿ ಅವಳ ಕೆನ್ನೆಯಲ್ಲು ಕಂಡಾಗ, `ಹನಿ ಎಲ್ಲಾ ಚಂದ್ರನ ಹಾಗೆ’ ಎಂದುಕೊಳ್ಳುವ ನನಗೆ ನನ್ನನ್ನೇ ಕಂಡಂತಾಗಿ ನೆಮ್ಮದಿ ಅನ್ನಿಸುತ್ತೆ.

ಯಾವುದೂ ಒಂದು ದಿನಕ್ಕೆ ಒಂದು ಕ್ಷಣಕ್ಕೆ ಆಗುವುದಲ್ಲ. ಎಷ್ಟೋ ಸಲ ಗಂಡ ಹೆಂಡತಿ ಎನ್ನುವುದನ್ನೂ ಮರೆತು, ತಂತ್ರ ಪ್ರತಿ ತಂತ್ರ ರೂಪಿಸುವ ಬದ್ಧ ವೈರಿಗಳ ಹಾಗೆ ಇದ್ದುಬಿಡುತ್ತೇವಲ್ಲಾ ಹಠಮಾರಿಗಳಂತೆ, ಇದು ಎಲ್ಲರ ಅನುಭವ ಕೂಡಾ. ಸ್ವಲ್ಪ ಯೋಚನೆ ಮಾಡಿದರೆ ನಮಗೇ ಅರ್ಥ ಆಗುತ್ತೆ. ಆದರೆ ಪ್ರತಿಸಲವೂ ಅರ್ಥವೇ ಆಗದವರಂತೆ ನಡೆದುಕೊಂಡುಬಿಡುತ್ತೇವೆ. ಎಲ್ಲ ಗಂಡ ಹೆಂಡಿರ ಮಧ್ಯೆ ಆಗುವಂತೆ ನಮ್ಮ ಮಧ್ಯೆಯೂ ಇದು ಆಗಿಬಿಟ್ಟಿತಾ? ಉಸಿರು ಒಂದು ಕ್ಷಣ ಸ್ತಬ್ಧವಾಯಿತು ಎಂದುಕೊಳ್ಳುತ್ತೇವೆ - ಸಾವೂ ಒಂದು ಪಯಣ ಎನ್ನುವುದನ್ನು ಮರೆತು. ಅದು ಅಲ್ಲ, ಕ್ಷಣ ಕ್ಷಣಕ್ಕೂ ಅದು ತನ್ನ ಗುರಿ ಸ್ತಬ್ಧಗೊಳ್ಳುವತ್ತ ದಾವಿಸುತ್ತದೆ ಶ್ರದ್ಧಾಪೂರ್ವಾಕವಾಗಿ. ನನ್ನ ಚಂದ್ರನ ಸಂಬಂಧ ಒಂದು ದಿನಕ್ಕೆ ಹೀಗೆ ಮುಗಿಯಿತು ಎಂದು ಗೆರೆಕೊರೆದಂತೆ ಹೇಳಲಾಗುವುದಿಲ್ಲ. ಸಂಬಂಧ ಬೆಳೆಯುವುದು ಹೇಗೆ ಪ್ರಕ್ರಿಯೆಯೋ, ಮುಗಿಯುವುದೂ ಕೂಡಾ. ಹಾಗೆ ಘೋಷಿಸಿದ ಕ್ಷಣ ಬಿಡುಗಡೆಯಾಗುತ್ತದೆ. ಹಾಗನ್ನಿಸಿದಾಗ ನನ್ನ ನರಗಳು ಬಿಗಿದಿದ್ದವು. ನೆರಳೂ ಕೂಡದ ಸ್ಥಿತಿಯ ಬಗ್ಗೆ ಹೇಳಬೇಕಲ್ಲವೆ? ಹಾ ಅದು ಶುರುವಾದದ್ದು ಎಲ್ಲಿಂದ? ಹೆಣ್ಣಿನ ನಗ್ನ ಚಿತ್ರವನ್ನು ಚಂದ್ರ ಬರೆದಾಗ ಅದಕ್ಕೆ ಪ್ರತಿಯಾಗಿ ಗಂಡಸಿನ ನಗ್ನ ಚಿತ್ರ ಬರೆದೆನಲ್ಲವೇ! ಇಲ್ಲ ತೇಜೂ ಅದನ್ನು ಬರೆದದ್ದು ಅವನು ಬರೆದ ಅನ್ನುವುದಕ್ಕಲ್ಲ. ನಗ್ನತೆಗೆ ಹೊಸ ವ್ಯಾಖ್ಯಾನವನ್ನು ಕೊಡಬೇಕು ಅನ್ನಿಸಿ ಮಾತ್ರ.

ನನಗೆ ಚೆನ್ನಾಗಿ ನೆನಪಿದೆ - ಮಾತಿಗೆ ಪ್ರಯತ್ನ ಪಡುತ್ತಿದ್ದ ಪುಟ್ಟ ಹನಿಯ ತುಟಿಯಿಂದ ಸೋರಿದ ಜೊಲ್ಲು, ಸೂರ್ಯನಿಗೆದುರಾಗಿ ವಜ್ರದಂತೆ ಫಲಿಸಿದಾಗ, `ಚಂದ್ರಾ ನೋಡು ಬಾ ಇದೆಂಥಾ ಸಂಕಲ್ಪ ಶಕ್ತಿ, ಸೂರ್ಯ ಮಗುವಿನ ಜೊಲ್ಲನ್ನು ವಜ್ರ ಮಾಡುತ್ತಿದ್ದಾನೆ, ಈ ಕ್ಷಣ ಅವನೂ ಸುಖಿ’ ಎಂದಿದ್ದೆ ಹುಚ್ಚಿಗೇ ಹುಟ್ಟಿದ್ದೆನೇನೋ ಎನ್ನುವಂತೆ. ಆಗ ತಲ್ಲಣಿಸಿದ್ದ ಚಂದ್ರನ ಮುಖ ನನಗೆ ಈಗಲೂ ನೆನಪಿದೆ. ಈಗಲೂ...

- ಪಿ. ಚಂದ್ರಿಕಾ

MORE NEWS

ಕಲಬುರ್ಗಿ ಜಿಲ್ಲಾ ಪ್ರಥಮ ತತ್ವಪದ ಸಾಹಿತ್ಯ ಸಮ್ಮೇಳನ

24-04-2024 ಬೆಂಗಳೂರು

"ಕಡಕೋಳ ಮಠಾಧೀಶರು ಮತ್ತು ತತ್ವಪದಗಳ ಮಹಾ ಪೋಷಕರಾದ ಷ. ಬ್ರ. ಡಾ. ರುದ್ರಮುನಿ ಶಿವಾಚಾರ್ಯರು ಸಮ್ಮೇಳನದ ಸರ್ವಾಧ್ಯಕ...

ಸಂಶೋಧನೆಯಲ್ಲಿ ಆಕರಗಳ ಸಂಗ್ರಹ, ವಿಂಗಡಣೆ ಮತ್ತು ಪೂರ್ವಾಧ್ಯಯನ ಸಮೀಕ್ಷೆ

23-04-2024 ಬೆಂಗಳೂರು

"ಒಂದನ್ನು ಬಿಟ್ಟು ಇನ್ನೊಂದನ್ನು ಚಿಂತಿಸಲಾಗದು. ಅಲ್ಲದೆ; ಶೀರ್ಷಿಕೆ ಆಖೈರು ಮಾಡಿಕೊಳ್ಳುವುದಕ್ಕೆ ನಾವು ಅವಸರ ಮಾಡ...

ಪರಿಘಾಸನ ಮತ್ತು ಅರ್ಧ ಚಕ್ರಾಸನ 

16-04-2024 ಬೆಂಗಳೂರು

"ಪರಿಘಾಸನ ಆಸನವು ) ಪಿತ್ತ ಜನಕಾಂಗ ಮತ್ತು ಮೇದೋಜೀರಕ ಚೈತನ್ಯಗೊಳ್ಳುವಂತೆ ಮಾಡುತ್ತದೆ. ಹಾಗೆಯೇ ‘ಅರ್ಧ ಚಕ್...