ಮಹಿಳಾ ಆತ್ಮಕಥೆಗಳೆಂಬ ಅಂತರಂಗದ ಪುಟಗಳು

Date: 04-03-2022

Location: ಬೆಂಗಳೂರು


ಹೆಣ್ಣಿನ ಅನುಭವ ಎಂದಾಗ ಅದು ಏಕರೂಪದ್ದಲ್ಲ. ಆದಾಗ್ಯೂ ತಾಯ್ತನದ ಜೀವಪೋಷಕ ಮೌಲ್ಯಗಳ ಅಭಿವ್ಯಕ್ತಿಯಲ್ಲಿ ಒಂದು ಸಾಮಾನ್ಯ ವಿನ್ಯಾಸವೇರ್ಪಡುತ್ತದೆ. ಇಂಥ ಹಲವು ಆತ್ಮಕಥನಗಳ ಒಟ್ಟಂದ ಓದು ಮಹಿಳಾಚರಿತ್ರೆಯ ಬಿಡಿಪುಟಗಳಂತೆ ಭಾಸವಾಗುತ್ತದೆ ಎನ್ನುತ್ತಾರೆ ಲೇಖಕಿ ಗೀತಾ ವಸಂತ. ಅವರು ತಮ್ಮ ತೆರೆದಷ್ಟೂ ಅರಿವು ಅಂಕಣದಲ್ಲಿ ಮಹಿಳಾ ಆತ್ಮಕಥನಗಳ ಕುರಿತು ವಿಶ್ಲೇಷಿಸಿದ್ದಾರೆ.

“ಅಮೇಜಾನ್ ದಾಟಬಹುದು ಈ ಅನುದಿನ ಅಂತರಗಂಗೆಯನ್ನು ದಾಟುವುದು ಹೇಗೆ”? ಎಂಬ ಎ.ಕೆ.ರಾಮಾನುಜನ್ ಅವರ ಪ್ರಶ್ನೆ ನಮ್ಮೆಲ್ಲರ ಒಡಲ ಪ್ರಶ್ನೆಯೂ ಹೌದು. ದೈಹಿಕ ಸಾಹಸ, ಬೌದ್ಧಿಕ ವಿಸ್ತಾರಗಳಲ್ಲಿ ತೊಡಗುವುದಕ್ಕಿಂತ ಅಂತರಗಂಗೆಯಂಥ ಒಳಹರಿವನ್ನು ಅರಿಯುವುದು ದೊಡ್ಡ ಸವಾಲು. ಮೇಲ್ಪದರದ ಎಲ್ಲ ಕಣ್ಕಟ್ಟುಗಳನ್ನು ಕಳಚಿಕೊಂಡು ಒಳಗೆ ತಿಳಿಯಾಗುವ ‘ತಿಳಿ’ವನ್ನು ‘ಕಾಣು’ವದು ನಿಜಕ್ಕೂ ಸಾಹಸ. ಎಷ್ಟೋ ದಾಖಲಾಗದ ಮಾತುಗಳು ಚರಿತ್ರೆಯಲ್ಲಿ ಹೂತುಹೋಗಿರುವಾಗ ಅವಕ್ಕೆಲ್ಲ ಧ್ವನಿಯಾಗುವ, ಅಕ್ಷರಗಳಲ್ಲಿ ಮೂಡಿಸುವ ಕಲ್ಪನೆಯೇ ಹೆಣ್ಣಿನ ಪಾಲಿಗೆ ಒಂದು ಅದ್ಭುತ ಸಾಧ್ಯತೆ. ಆದರೆ ಹೊರಗಣ ಬೆಳಕಿಗೆ ಒಳಗನ್ನು ತೆರೆದಿಟ್ಟು ಬೆತ್ತಲಾಗುವುದು ಅಷ್ಟು ಸುಲಭದ ಕೆಲಸವಲ್ಲ. ತನ್ನ ಪ್ರತಿಮೆಯನ್ನು ತಾನೇ ಭಂಜಿಸಿ ಹೊರನಡೆಯುವ ಈ ನಡೆ ಅತ್ಯಂತ ದಿಟ್ಟವಾಗಿರ ಬೇಕಾಗುತ್ತದೆ. ಅದಕ್ಕಾಗಿಯೇ ಮಹಿಳಾ ಆತ್ಮಕಥನಗಳ ಸಂಖ್ಯೆ ಯಾವಾಗಲೂ ಬೆರಳೆಣಿಕೆಯದ್ದಾಗಿರುತ್ತದೆ. ಅದರಲ್ಲೂ ಬರೆಯದ ಎಷ್ಟೋ ಉಮ್ಮಳಗಳು, ಪ್ರಶ್ನೆಗಳು, ಕನವರಿಕೆಗಳು ಸಾಲುಗಳ ಮೌನದಲ್ಲಿ ಅವಿತುಕೊಂಡಿರುತ್ತವೆ.

ಆತ್ಮಕಥನಗಳು ಅನುಭವನಿಷ್ಠವಾದವು. ಅವು ತೀರ ವೈಯಕ್ತಿಕವೇ ಆದರೂ ಹೆಣ್ಣಿನ ಅನುಭವಗಳಲ್ಲಿ ಒಂದು ಸಾರ್ವತ್ರಿಕ ಧ್ವನಿ ತನಗೇ ಅರಿವಿಲ್ಲದೇ ಬಿಚ್ಚಿಕೊಳ್ಳುತ್ತದೆ. ಅಲ್ಲಿ ತಲೆಮಾರುಗಳು ಏಕೀಭವಿಸುತ್ತವೆ. ಹೆಣ್ಣಿನ ಅನುಭವ ಎಂದಾಗ ಅದು ಏಕರೂಪದ್ದಲ್ಲ. ಆದಾಗ್ಯೂ ತಾಯ್ತನದ ಜೀವಪೋಷಕ ಮೌಲ್ಯಗಳ ಅಭಿವ್ಯಕ್ತಿಯಲ್ಲಿ ಒಂದು ಸಾಮಾನ್ಯ ವಿನ್ಯಾಸವೇರ್ಪಡುತ್ತದೆ. ಇಂಥ ಹಲವು ಆತ್ಮಕಥನಗಳ ಒಟ್ಟಂದ ಓದು ಮಹಿಳಾಚರಿತ್ರೆಯ ಬಿಡಿಪುಟಗಳಂತೆ ಭಾಸವಾಗುತ್ತದೆ. ಹೆಚ್ಚಾಗಿ ಆತ್ಮಕಥನಗಳನ್ನು ಬರೆದವರು ಸಮಾಜದ ವಿವಿಧ ರಂಗಗಳಿಗೆ ತೆರೆದುಕೊಂಡ ಹೆಂಗಳೆಯರು. ಇಂಥವರಲ್ಲಿ ಒಂದು ದಿಟ್ಟ ಆತ್ಮಾವಲೋಕನದ ಕ್ರಮ ಹಾಗೂ ಅಭಿವ್ಯಕ್ತಿ ಕ್ರಮವೊಂದು ರೂಪುಗೊಂಡಿರುತ್ತದೆ. ಲೇಖಕಿಯರು, ರಂಗಭೂಮಿ ಕಲಾವಿದೆಯರು, ಚಿತ್ರನಟಿಯರು, ಸಂಗೀತ-ನೃತ್ಯ ಕಲಾವಿದೆಯರು, ಚಳವಳಿಗಳಲ್ಲಿ ತೊಡಗಿಕೊಂಡಿರುವವರೇ ಹೆಚ್ಚಾಗಿ ಆತ್ಮಕಥನಗಳನ್ನು ಬರೆದಿದ್ದಾರೆ. ಅಭಿವ್ಯಕ್ತಿ ಕಾಣದ ಲೋಕವೂ ಇಲ್ಲಿ ದಾಖಲಾದಾಗ ಮತ್ತಷ್ಟು ಸಮಗ್ರತೆಯೊದಗಬಹುದು. ಹೆಣ್ಣಿನ ಪಾತ್ರಗಳು ಬದಲಾಗುತ್ತಿರುವ ಇಂದಿನ ಸಂದರ್ಭದಲ್ಲಿ ವಿಜ್ಞಾನ, ತಂತ್ರಜ್ಞಾನ ಉದ್ದಿಮೆ, ಕೃಷಿ, ಸೈನ್ಯ, ಆಡಳಿತ, ರಾಜಕಾರಣ ಮುಂತಾದ ರಂಗಗಳಲ್ಲಿ ದುಡಿಯುವ ಮಹಿಳೆಯರ ಒಳಗಿನ ಸಂಕಥನಗಳು ನಮ್ಮ ಜ್ಞಾನ-ಅನುಭವ ವಲಯಗಳನ್ನೇ ಹಿಗ್ಗಿಸಿ ನಿಲ್ಲಿಸಬಹುದು.

ತನ್ನ ಕತೆಯನ್ನು ತಾನೇ ಹೆಣೆಯುತ್ತ ಹೋಗುವಾಗ ಅದರಲ್ಲೊಂದು ಅಂತರ ಕಾಯ್ದುಕೊಂಡು ಹೇಳುತ್ತ ಹೋಗುವ ವಿನ್ಯಾಸ ಒಂದಾದರೆ, ಆ ಕಥನದಲ್ಲಿ ತೀವ್ರವಾಗಿ ಕರಗುತ್ತ ತನ್ನ ದಟ್ಟಛಾಯೆಯನ್ನು ಮೂಡಿಸುವ ವಿನ್ಯಾಸ ಇನ್ನೊಂದು. ಇದು ಸ್ವಭಾವದ ಭಿನ್ನತೆಯಿರಬಹುದಾದಂತೆ, ಸನ್ನಿವೇಶ, ಸಂದರ್ಭಗಳ ಭಿನ್ನತೆಯೂ ಇರಬಹುದು. ಯಾವಾಗಲೂ ಏನನ್ನು ಹೇಳಬೇಕು, ಏನನ್ನು ಹೇಳಬಾರದು? ಎಂಬ ಒಂದು ಚೌಕಟ್ಟನ್ನು ವ್ಯಕ್ತಿ ತನಗೆ ತಾನೇ ಹಾಕಿಕೊಂಡಿರುತ್ತಾನೆ/ಳೆ. ಅದರಲ್ಲೂ ಹೆಣ್ಣು ‘ಹೆಣ್ಣಾಗಿ’ ರೂಪಿಸಲ್ಪಟ್ಟವಳು. ಅವಳ ದೇಹ-ಮನಸ್ಸುಗಳ ಜೊತೆ ಹೆಣ್ತನದ ಸಿದ್ದಪಡಿಯಚ್ಚುಗಳು ಭೇದಿಸಲಾಗದಂತೆ ಸುತ್ತುವರೆದುಬಿಟ್ಟಿವೆ. ಭಯ, ಲಜ್ಜೆಗಳನ್ನು ಮೀರಿ ಅಭಿವ್ಯಕ್ತಿಸುವುದೇ ಅವಳಿಗೆ ಒಂದು ಹೋರಾಟ. ತನ್ನದಲ್ಲದ ಪಾತ್ರವನ್ನು ಬದುಕುತ್ತಿದ್ದವಳು ಏಕಾಏಕಿ ಚಿಪ್ಪೊಡೆದು ಹೊರಬಂದಾಗ ಉಂಟಾಗುವ ದಿಗ್ಭ್ರಾಂತಿಗೆ ಭಾಷೆಯೊಂದನ್ನು ಕಟ್ಟಿಕೊಳ್ಳುವುದೂ ಕೂಡ ಅವಳಿಗೆ ಸವಾಲು. ಅಧಿಕಾರ ಸಂಬಂಧಗಳಲ್ಲಿ ಅಧೀನ ನೆಲೆಯಲ್ಲಿ ಬದುಕುತ್ತಿರುವ ಅವಳ ಅವಲಂಬಿತ ಬದುಕು ಕೂಡ ಎಷ್ಟೋ ಸಲ ಅವಳ ಅಭಿವ್ಯಕ್ತಿಯನ್ನು ನಿಯಂತ್ರಿಸುತ್ತಿರುತ್ತದೆ. ತನ್ನ ಅಭಿವ್ಯಕ್ತಿಗೆ ಬೇಕಾದ ಸ್ಪೇಸ್ ಅನ್ನು ನಿರ್ಮಿಸಿಕೊಳ್ಳುವುದು ಕೂಡ ಅವಳಿಗೆ ಸುಲಭವಲ್ಲ. ವರ್ಜೀನಿಯಾ ವುಲ್ಫ್ ಹೇಳುವಂತೆ ‘ತನ್ನದೇ ಸಮಯ’ ಹಾಗೂ ‘ತನ್ನದೇ ಸ್ಥಳ’ ಎಂಬುದು ಅವಳಿಗೆ ಮರೀಚಿಕೆಯೇ.

ಆತ್ಮಕತೆ ಬರೆಯುವಾಗ ಇನ್ನೊಂದು ಸವಾಲಿದೆ ಅದು ಪ್ರಾಮಾಣಿಕತೆಯನ್ನು ಉಳಿಸಿಕೊಂಡು ಬರೆಯುವ ವಸ್ತುನಿಷ್ಠತೆಯ ಸವಾಲು. ಅಲ್ಲದೇ ಹಾಗೆ ಬರೆದ ಮೇಲೆ ಮತ್ತೆ ಕುಟುಂಬ, ಸಮಾಜಗಳನ್ನು ಎದುರಿಸಬೇಕಾದ ವಾಸ್ತವದ ಸವಾಲು. ಏಕೆಂದರೆ ಬದುಕು ಎಂಬುದು ಸಂಬಂಧಗಳ ಸಂಕೀರ್ಣ ಹೆಣೆಗೆ ಇಲ್ಲಿ ‘ಅವಳ ಬದುಕು’ ಅವಳೊಬ್ಬಳದೇ ಅಲ್ಲ. ಅದು ಹಲವರೊಂದಿಗೆ, ಹಲವು ಸಂಗತಿಗಳೊಂದಿಗೆ ತಳಕು ಹಾಕಿಕೊಂಡಿರುತ್ತದೆ. ಬೇರೆಯವರಿಗೆ ನೋವಾಗದಂತೆ, ಅಪಾಯವಾಗದಂತೆ ನಿಭಾಯಿಸುವ ಸವಾಲು ಬಲುದೊಡ್ಡದು. ಕತೆ, ಕವಿತೆಗಳಂತೆ ರೂಪಕಗಳಲ್ಲಿ ಮಾತನಾಡುವ ತಂತ್ರದ ಗೂಡಿನಿಂದ ಹೊರಬಂದು ಬಯಲಾಗುವ ಅನಿವಾರ್ಯತೆಯಲ್ಲಿ ಬಹುದೊಡ್ಡ ಧೀಃಶಕ್ತಿಯನ್ನು ಧಾರೆಣೆ ಮಾಡಬೇಕಾಗಿ ಬರುತ್ತದೆ. ಅಂಥಶಕ್ತಿ ಸಾಧ್ಯವಾಗಿರುವುದು ಕೆಲವರಿಗೆ ಮಾತ್ರ.

ಆತ್ಮಕಥನವೆಂಬ ವಿಶಿಷ್ಟ ಸಾಹಿತ್ಯ ಪ್ರಕಾರವು ಪರಿಚಯವಾಗುವುದರ ಮೊದಲೇ ಆತ್ಮನಿವೇದನೆಯ ಹಲವು ಉತ್ಕಟ ಮಾದರಿಗಳು ನಮ್ಮ ಚರಿತ್ರೆಯಲ್ಲಿ ದಾಖಲಾಗಿ ಹೋಗಿವೆ. ‘ನೊಂದ ನೋವ ನೋಯದವರೆತ್ತ ಬಲ್ಲರು’? ಎಂದು ಪ್ರಶ್ನಿಸುವ ಅಕ್ಕನ ಮಾತಿನ ಹಿಂದೆ ಹಲವು ಗತ ಕಥನಗಳಿವೆ. ‘ಸೂತಕ’ ವೆಂದು ನಿರಾಕರಿಸಲ್ಪಟ್ಟ ದೇಹದ ಘನತೆಯನ್ನು ಎತ್ತರಿಸಿದ ಮಹಿಳೆ ಆಕೆ.

ಶಬ್ದಲಜ್ಜೆಯನ್ನು ಮೀರಿ ‘ಕೂಟ’ದ ಅನುಭವಗಳನ್ನೇ ಹಸಿಹಸಿಯಾಗಿ ಕಟ್ಟಿ ಯೌಗಿಕ ಐಕ್ಯದ ಸ್ಥಿತಿಯನ್ನು ಕಟ್ಟಿಕೊಟ್ಟ ದಿಟ್ಟೆ ಆಕೆ. ಅಂಥ ಅನೇಕ ವಚನಕಾರ್ತಿಯರ ಅಭಿವ್ಯಕ್ತಿಯಿಂದ ಕನ್ನಡದ ಪ್ರಜ್ಞೆ ವಿಸ್ತಾರಗೊಂಡದ್ದು ಸುಳ್ಳಲ್ಲ. ಮುಂದೆ ಭಕ್ತಿಪಂಥವು ಕೂಡ ಆತ್ಮನಿವೇದನೆಯ ಉತ್ಕಟ ಮಾದರಿಯೊಂದನ್ನು ಒದಗಿಸಿತು. ಹೆಣ್ಣು ತನ್ನ ಒಳಗನ್ನು ಹುಡುಕಿಕೊಳ್ಳುವುದು ಒಂದು ಬಗೆಯಾದರೆ, ಅವಳು ತನ್ನ ಒಳಗಣ್ಣಿನಿಂದ ಹೊರಗನ್ನು ನೋಡುವುದು ಇನ್ನೊಂದು ಬಗೆ. ಒಂದು ಆತ್ಮಶೋಧವಾದರೆ, ಇನ್ನೊಂದು ಲೋಕಮೀಮಾಂಸೆ. ಹೆಣ್ಣು ಕಣ್ಣಿನಮೀಮಾಂಸೆ ಅದು. ಹೆಣ್ಣಿನ ನಿರೂಪಣೆಗಳಲ್ಲಿ ಈ ಅಂಶಕೂಡ ಪ್ರಧಾನವಾಗಿ ಗಮನಿಸುವಂತಹುದು. ಲೋಕ ಒಪ್ಪುವ ‘ಹದಿಬದೆಯಧರ್ಮ’ ವನ್ನು ಉಪದೇಶಿಸುತ್ತಲೇ ಹೆಣ್ಣಿನ ಅಸ್ಮಿತೆಯ ಕುರಿತಾದ ಪ್ರಶ್ನೆಗಳನ್ನು ಸಂಚಿಹೊನ್ನಮ್ಮನಂಥವಳಿಗೆ ಕೇಳುವುದು ಸಾಧ್ಯ ಎಂಬುದು ಹೆಣ್ಣು ಅರಿವಿನ ಹೊಸಮುಖಗಳನ್ನು ತೋರಿಸುತ್ತದೆ.

ಕನ್ನಡದಲ್ಲಿ ಹೆಣ್ಣಿನ ಆತ್ಮಕಥನಗಳು ಬರಲು ಎಪ್ಪತ್ತರ ದಶಕದವರೆಗೆ ಕಾಯಬೇಕಾಯಿತು. ಸ್ತ್ರೀವಾದಿ ಆಲೋಚನಾ ಕ್ರಮವೊಂದು ರೂಪುಗೊಳ್ಳುವ ಮೂಲಕ ‘ಸ್ತ್ರೀ ಸಂವೇದನೆ’ಯ ಆಂತರಿಕ ಹುಡುಕಾಟ ಹಾಗೂ ಸ್ವಾತಂತ್ರ್ಯ - ಸಮಾನತೆಗಾಗಿ ಬಾಹ್ಯ ಹೋರಾಟಗಳೆರಡೂ ಮೇಳೈಸುವುದು ಸಾದ್ಯವಾಯಿತು. “ವಾಸಂತಿ ಪಡುಕೋಣೆಯವರ ‘ಜೀವನ ಹೋರಾಟ’ (1977) ಎನ್ನುವ ಆತ್ಮಕತೆ ಕನ್ನಡದ ಮೊದಲ ಮಹಿಳಾ ಆತ್ಮಕತೆ ಎನಿಸುತ್ತದೆ” (ಪು.94 ಕನ್ನಡದಲ್ಲಿ ಮಹಿಳಾ ಆತ್ಮಕತೆ..) 2008ರಲ್ಲಿ ಪ್ರಕಟವಾದ ‘ಮುಂತಾದ ಕೆಲ ಪುಟಗಳು’ ಎಂಬುದು ಸರಸ್ವತಿಬಾಯಿ ರಾಜವಾಡೆಯವರ ಆತ್ಮಕತೆಯ ನಿರೂಪಣೆ. ಲೇಖಕಿ ವೈದೇಹಿ ಇದನ್ನು ನಿರೂಪಿಸಿದ್ದಾರೆ. ನವೋದಯದ ಆರಂಭದ ಲೇಖಕಿಯರಲ್ಲಿ ಒಬ್ಬರಾದ ಸರಸ್ವತಿಬಾಯಿಯವರ ಈ ಕಥನ ಅವರ ಬದುಕಿನ ಕಾಲದ ದೃಷ್ಟಿಯಿಂದ ನೋಡಿದರೆ ಹಳೆಯದು. ವೈದ್ಯೆಯಾಗಿ ಅದರಲ್ಲೂ ಸ್ತ್ರೀರೋಗ ತಜ್ಞೆಯಾಗಿ, ಚಳವಳಿಗಳಲ್ಲೂ ಸಾಹಿತ್ಯ ರಚನೆಯಲ್ಲೂ ಪೂರ್ಣವಾಗಿ ತೊಡಗಿಕೊಂಡ ಡಾ. ಅನುಪಮಾ ನಿರಂಜನರ ‘ನೆನಪು ಸಿಹಿ - ಕಹಿ’ ಹೊಸಕಾಲದ ಮಹಿಳೆಯನ್ನು ದರ್ಶನ ಮಾಡಿಸುವ ಗಮನಾರ್ಹ ಕೃತಿ. ‘ಹೆಣ್ಣಿನ ದೃಷ್ಟಿಯಲ್ಲಿ ಈ ಶತಮಾನ’ ಪಾರ್ವತಮ್ಮ ಮಹಲಿಂಗಶೆಟ್ಟಿಯವರ ಆತ್ಮಕತೆ. (ಆಕೆ ಮಾಜಿಮುಖ್ಯಮಂತ್ರಿ ನಿಜಲಿಂಗಪ್ಪನವರ ಮಗಳು) ಇಪ್ಪತ್ತನೆಯ ಶತಮಾನದ ಮಹಿಳೆಯರ ಕೌಟುಂಬಿಕ, ಸಾಮಾಜಿಕ, ಆರ್ಥಿಕ ಪರಿಸ್ಥಿತಿಗಳನ್ನು ವಿವರವಾಗಿ ದಾಖಲಿಸುವ ಈ ಕೃತಿ ಒಂದು ದೃಷ್ಟಿಕೋನ ನಿರ್ಮಾಣಮಾಡುವ ಪ್ರಯತ್ನಕ್ಕಾಗಿ ಗಮನಾರ್ಹವೆನಿಸುತ್ತದೆ.

ಇನ್ನು ಅಕ್ಷರ ಸಂಸ್ಕೃತಿಯ ಅರಿವಿಲ್ಲದ ಜಾಜಿ ತಿಮ್ಮಯ್ಯ ಎಂಬ ಜೇನುಕುರುಬ ಆದಿವಾಸಿ ಮಹಿಳೆಯ ಆತ್ಮಕತೆ ಹೆಣ್ಣುಬದುಕಿನ ಹೊಸದೊಂದು ಮಗ್ಗಲನ್ನು ಪರಿಚಯಿಸಿದ ಕೃತಿ. ಇದನ್ನು ರವೀಂದ್ರ ಭಟ್ಟ ಐನಕೈ ಅವರು ನಿರೂಪಿಸಿದ್ದಾರೆ. ಹೆಣ್ಣಿನ ಅಬಲತ್ವದ ಸಾಂಸ್ಕೃತಿಕ ಸಿದ್ಧ ಪರಿಭಾಷೆಯನ್ನು ನಿರಾಕರಿಸಿ ನೆಲದ ಸಂಸ್ಕೃತಿಯು ಸಬಲ ಹೆಣ್ಣಿನ ಸಂಕೇತವಾಗಿ ನಮ್ಮ ಮುಂದೆ ಬಂದದ್ದು ಈ ಕಥನದ ವೈಶಿಷ್ಟ್ಯ. ಜೇನುಕುರುಬರಲ್ಲಿ ಮಹಿಳೆ ಅಬಲೆಯಲ್ಲ. ಆದಿವಾಸಿಗಳಿಗೆ ಪುನರ್ವಸತಿ ಭೂಮಿ ಪಡೆಯುವ ಹೋರಾಟದಲ್ಲಿ ಆಕೆ ತೋರಿದ ನಾಯಕತ್ವದ ಗುಣ ಬರೀ ‘ರಾಜಕೀಯ’ ಮೌಲ್ಯವಲ್ಲ. ಅದು ಪರಿಸರದೊಂದಿಗೆ ತನ್ನನ್ನು ತಾದಾತ್ಮ್ಯಗೊಳಿಸಿಕೊಂಡ ಪ್ರಾಕೃತಿಕ ಗುಣವಾಗಿಯೂ ಕಾಣುತ್ತದೆ. ದು. ಸರಸ್ವತಿಯವರ “ಈಗೇನ ಮಾಡೀರಿ”? ಎಂಬ ಅನುಭವ ಕಥನ ಚಿವುಟಿದಷ್ಟೂ ಚಿಗುರುವ ಹೆಣ್ಣಿನ ಆತ್ಮಶಕ್ತಿಯ ಸೂಕ್ಷ್ಮತೆಯನ್ನು ಪರಿಚಯಿಸುವಂತಹುದು ಮಹಿಳಾ ಚಳುವಳಿಗಳ ಭಾಗವಾಗಿ ಬೆಳೆದ ದು.ಸರಸ್ವತಿಯವರ ಬರಹ ಸಮಾಜದ ಕಾಣದ ಮುಖಗಳನ್ನು ಅನಾವರಣಗೊಳಿಸುವ ಕೃತಿ. ವ್ಯಕ್ತಿಯಾಗಿ ವಿಷಮ ಪರಿಸ್ಥಿತಿಗಳನ್ನು ದಿಟ್ಟವಾಗಿ ಎದುರಿಸುವ ಕ್ರಮವೊಂದನ್ನು ಇದು ಕಟ್ಟಿಕೊಡುತ್ತದೆ. ಇಂಥ ವಿಭಿನ್ನ ಹಿನ್ನೆಲೆ ಹಾಗೂ ಮನೋಧರ್ಮಗಳ ಆತ್ಮಕಥನಗಳು ಮಹಿಳಾ ಪ್ರಜ್ಞೆಯ ಹಿಗ್ಗುವಿಕೆಯನ್ನು ಸಾಕ್ಷೀಕರಿಸುತ್ತವೆ.

ಕರ್ನಾಟಕ ಲೇಖಕಿಯರ ಸಂಘವು ಹೊರತಂದ ‘ಲೇಖ-ಲೋಕ’ ಮಾಲಿಕೆ ಮಹಿಳಾ ಆತ್ಮಕಥನಗಳಿಗೆ ಪ್ರೇರಣೆ ನೀಡಿದ ವಿನೂತನ ಪ್ರಯತ್ನ. ಇದರಲ್ಲಿ ಅನೇಕ ಲೇಖಕಿಯರು ತಮ್ಮ ಆತ್ಮಕಥನದ ಭಾಗಗಳನ್ನು ಬಗೆದಿಟ್ಟರು. “ಚೌಕಟ್ಟನ್ನು ಅಲುಗಿಸಿ ಬದುಕಲು ಹೊರಟಾಗ ಉಂಟಾಗುವ ತಳಮಳ, ಉದ್ವಿಗ್ನತೆ, ಉಭಯ ಸಂಕಟಗಳು ತಾಕಲಾಟಗಳನ್ನು ನನ್ನ ತಲೆಮಾರಿನ ಹಲವು ಲೇಖಕಿಯರು ಅನುಭವಿಸಿದ್ದೇವೆ. ಈ ದಿಕ್ಕಿನಲ್ಲಿ ಎದುರಾಗುವ ಸಮಸ್ಯಾ ಪ್ರವಾಹ ಹತ್ತೂ ದಿಕ್ಕಿನಿಂದ ಮುತ್ತುವ ಸಾವಿರ ಪ್ರಶ್ನೆಗಳು, ಜೀವಸತ್ವವನ್ನು ಅರೆದು ನೋಡುವ ಸಂದರ್ಭಗಳು, ಒಮ್ಮೊಮ್ಮೆ ಉತ್ತರವೇ ಕಾಣದ ಹತಾಶೆಗಳು, ಸುಳಿಗಳು ಇವೆಲ್ಲ ಮಹಿಳಾ ಸಾಹಿತ್ಯದ ಆತ್ಮಕಥಾನಕಗಳಲ್ಲಿ ಸಶಕ್ತವಾಗಿ ಹೊಕ್ಕಾಗ ಕನ್ನಡ ಸಾಹಿತ್ಯದ ಆಯಾಮಗಳು ನಿಶ್ಚಯವಾಗಿ ಹಿಗ್ಗುತ್ತವೆ” ಎಂದು ವಿಜಯಾ ದಬ್ಬೆಯವರು ಅದರ ಆಶಯದಲ್ಲಿ ಪ್ರಸ್ತಾಪಿಸಿದ್ದರು. ಅನೇಕ ಲೇಖಕಿಯರ ಬದುಕಿನ ಹೋರಾಟದ, ಸಂವೇದನೆಯ ದ್ರವ್ಯ ಇಲ್ಲಿ ದಾಖಲಾಗಿದೆ. ಕರ್ನಾಟಕ ಲೇಖಕಿಯರಸಂಘ ಈ ಮಹತ್ವದ ಕಾರ್ಯವನ್ನು ಕೈಗೊಂಡಿದೆ.

ಪಕ್ಕದ ಮರಾಠಿ ಭಾಷೆಗೆ ಹೋಲಿಸಿದರೆ ಕನ್ನಡದಲ್ಲಿ ಮಹಿಳಾ ಆತ್ಮಕಥನಗಳು ಸಂಖ್ಯೆಯಲ್ಲಿ ಹಾಗೂ ಮುಕ್ತ ಅಭಿವ್ಯಕ್ತಿಯಲ್ಲಿ ಕಡಿಮೆ ಎಂಬ ಅಭಿಪ್ರಾಯವನ್ನು ಕೊಂಚ ಬದಲಿಸುವಂತೆ ಈ ಶತಮಾನದಲ್ಲಿ ಆತ್ಮಕಥನಗಳ ಸಂಖ್ಯೆ ಹೆಚ್ಚುತ್ತ ಹೋಗಿದ್ದು ಗಮನಾರ್ಹ. ಇಲ್ಲಿ ಪ್ರತಿಭಾ ನಂದಕುಮಾರ್ ಅವರ ‘ಅನುದಿನದ ಅಂತರಗಂಗೆ’, ಉಮಾಶ್ರೀ ಅವರ ‘ಬೆಂಕಿ ಬೆಡಗು’, ಶಶಿಕಲಾ ವಸ್ತ್ರದ ಅವರ ‘ಇದ್ದೇನಯ್ಯಾ ಇಲ್ಲದಂತೆ’, ಭಾರ್ಗವಿಯವರ ‘ನಾನು ಭಾರ್ಗವಿ’, ವಿಜಯಾರವರ ‘ಕುದಿ ಎಸರು’, ಬಿ.ಜಯಶ್ರೀ ಅವರ ‘ಕಣ್ಣಾ ಮುಚ್ಚೇ.... ಕಾಡೇ ಗೂಡೇ..’, ಇಂದಿರಾ ಲಂಕೇಶ್ ಅವರ ‘ಹುಳಿಮಾವಿನ ಮರ ಮತ್ತು ನಾನು...’,

ಇವು ನನ್ನ ಓದಿಗೆ ಸಿಕ್ಕವು. ಸ್ವತಂತ್ರ ಬರಹಗಳಿರುವಂತೆ ಇತರರು ನಿರೂಪಿಸಿದ ಬರಹಗಳೂ ಇಲ್ಲಿವೆ.
ಮುಂತಾದ ಕೆಲಪುಟಗಳು
ಕನ್ನಡ ನವೋದಯದ ಸಂದರ್ಭದಲ್ಲಿ ಮಹಿಳೆಯರಿಗೆ ಒಲಿದದ್ದು ಕಥನ. ತಮ್ಮ ಒಡಲ ಸಂಕಟವನ್ನು, ಉರಿಪ್ರಶ್ನೆಗಳನ್ನು ಯಾವುದೋ ಪಾತ್ರದಲ್ಲಿರಿಸಿ ಹೇಳುವ ಒಂದು ಮಾಯಾದಂಡದಂತೆ ಕತೆಗಳು ಆವರಿಸಿದ್ದ ಕಾಲ. ಪುರುಷರದೇ ಪಾರಮ್ಯವಿದ್ದ ಅಂದಿನ ಸಾಹಿತ್ಯ ಲೋಕವು ಹೆಣ್ಣುಮಕ್ಕಳನ್ನು ಬರೆಯಲು ಪ್ರೋತ್ಸಾಹಿಸಿತಾದರೂ ಅವರ ಸ್ವತಂತ್ರ, ಪ್ರಗಲ್ಭ ವ್ಯಕ್ತಿತ್ವವನ್ನು ಒಪ್ಪಿಕೊಳ್ಳಲು ಸಿದ್ಧವಿರಲಿಲ್ಲ. ಸರಸ್ವತಿಬಾಯಿ ರಾಜವಾಡೆ ಕುರಿತು ಆ ಕಾಲದ ಪ್ರಮುಖ ಸಾಹಿತಿಗಳೊಬ್ಬರು. “ ಆ ಹೆಂಗಸು ಇನ್ನೂ ಇದೆಯೇ”? ಎಂದು ಕೇಳಿದ ಪ್ರಶ್ನೆ ಈ ಅಸಹನೆಗೆ ಮಾತು ಬಂದಂತಿದೆ. “ಆ ಗಂಡಸು ಇನ್ನೂ ಇದೆಯೇ”? ಎಂದು ನಾವು ಕೇಳಲು ಸಾಧ್ಯವೇ? ಎಂದು ತಪ್ತಧ್ವನಿಯಲ್ಲಿ ‘ಗಿರಿಬಾಲೆ’ (ಕಾವ್ಯನಾಮ) ಪ್ರಶ್ನಿಸುತ್ತಾರೆ. ಆ ಕಾಲದ ಪ್ರಸಿದ್ಧ ಲೇಖಕರು, ವಿಮರ್ಶಕರೆನಿಸಿಕೊಂಡವರು ಮಹಿಳೆಯರ ಬರಹಗಳನ್ನು ಸಮಗ್ರ ಸಾಹಿತ್ಯ ನಿರ್ಮಿತಿಯ ಭಾಗವೆಂಬಂತೆ ಗ್ರಹಿಸಿ ಒಪ್ಪಿಕೊಲ್ಳಲಿಲ್ಲ. ಅಲ್ಲೊಂದು ಇಲ್ಲೊಂದು ಸಹಾನುಭೂತಿಯ ಮಾತಿಗೇ ಅವರ ಬೆಂಬಲ ಪರಿಮಿತವಿತ್ತು. ತಮ್ಮ ಕಾಲದ ಸಂಗತಿಗಳ ಬಗೆಗೆ ವಸ್ತುನಿಷ್ಠವಾಗಿ, ನಿರ್ಭಯವಾಗಿ ಬರೆದ ರಾಜವಾಡೆ ಮಠದ ಸ್ವಾಮಿಗಳ ಕುರಿತೂ ವಿಡಂಬಿಸುತ್ತಾರೆ. ಆ ಕಾಲದಲ್ಲಿ ಇದು ಸಾಂಪ್ರದಾಯಿಕ ಆವರಣದಲ್ಲಿ ಬದುಕುವ ಸ್ತ್ರೀ ಎತ್ತಿಟ್ಟ ಅಪ್ಪಟ ಕ್ರಾಂತಿಕಾರಕ ಹೆಜ್ಜೆ. ಸಮಾಜದ ‘ಸಂಕುಚಿತ ನಡೆ’ಗಳನ್ನು ಅಂಜಿಕೆ ಹಿಂಜರಿಕೆಗಳ ಎಗ್ಗಿಲ್ಲದೆ ಅನಾವರಣಗೊಳಿಸಿದರು. ಆ ಅರ್ಥದಲ್ಲಿ ಅವರೊಬ್ಬ ಪ್ರಗತಿಶೀಲಮಹಿಳೆ. “ಎರಡು ದಶಕಗಳ ಕಾಲ ಕನ್ನಡ ಸಾಹಿತ್ಯಕ್ಕೆ ಸ್ತ್ರೀ ಧ್ವನಿ ಕೂಡಿಸಿದಾಕೆ ಸ್ತ್ರೀಯರ ಪ್ರಗತಿಗಾಗಿಯೇ ಒಂದು ಪತ್ರಿಕೆಯನ್ನು ಹೊರಡಿಸಿದಾಕೆ, ಆಶು ರಚನೆಕಾರ್ತಿ, ಮಕ್ಕಳಿಗಾಗಿ ಬರೆದರು, ಕಾಲಂ ಬರೆದರು, ಹರಿಕಥೆ ಮಾಡಿ, ಹಾಡಿ, ಹಾಡಿಸಿ, ವೀಣೆ ನುಡಿಸಿ, ನಾಟಕ ರಚಿಸಿ, ಆಡಿಸಿ, ನಟಿಸಿ ಒಟ್ಟಿನಲ್ಲಿ ಕಲೆ ಹಾಗೂ ಸಾಹಿತ್ಯ ಲೋಕದಲ್ಲಿ ಮಿಂಚಿದಾಕೆ” (ಪು. 13 ಮುಂತಾದ ಕೆಲಪುಟಗಳು)

ಬಾಲ್ಯದ ಹಸಿವು ಅವಮಾನಗಳ ಕಡುಕಷ್ಟಕಾಲ ದಾಟಿ, ಗಂಡನ ಮನೆಯೆಂಬ ಶ್ರೀಮಂತ ಜೈಲಿನಲ್ಲಿ ಬಂಧಿಯಾದ ಸರಸ್ವತಿ ಗಂಡನ ಸಂಗ್ರಹದಲ್ಲಿದ್ದ ಪುಸ್ತಕಗಳಲ್ಲಿ ಬಿಡುಗಡೆ ಅರಸಿದ್ದೇ ಅವರ ಜೀವನದ ತಿರುವಿಗೆ ಕಾರಣವಾಯ್ತು. ಸಾಹಿತ್ಯ ಸರಸ್ವತಿಯ ಹುಟ್ಟು ಅಲ್ಲಿ ಕಾದಿತ್ತು. ಹೆಂಡತಿಯನ್ನು ಯಾರೊಂದಿಗೂ ಮಾತನಾಡಗೊಡದ, ಬೀಗಹಾಕಿ ಹೊರಗೆ ಹೋಗುವ ಗಂಡನ ಕ್ರೌರ್ಯದ ಹಿಂದಿನ ಅಸಹಾಯಕತೆಯನ್ನು ಅವರು ಸೂಕ್ಷ್ಮವಾಗಿ ವಿವರಿಸುತ್ತಾರೆ. “ನಿನ್ನ ಗಂಡ ಮುದುಕ” ಎಂದು ಅವರು ಅಂದರೆ? ಎಂದು ಕೇಳುವಲ್ಲಿ “ಪಾಪಕ್ಕೆ ಬಲಿಯಾಗಬೇಡ” ಎಂದು ಅಂಗಲಾಚುವಲ್ಲಿ ಸುಂದರಿಯಾದ ಉಜ್ವಲ ವ್ಯಕ್ತಿತ್ವದ ಹೆಂಡತಿಯನ್ನು ಗೆರೆದಾಟದಂತೆ ಕಟ್ಟಿಹಾಕುವ ಗಂಡಸಿನ ಅಸಹಾಯ ತಳಮಳ ವ್ಯಕ್ತವಾಗುತ್ತದೆ. ಡೆಪ್ಯುಟಿ ಕಮಿಷನರ್ ಆಗಿ ಅತ್ಯುನ್ನತ ಹುದ್ದೆಯಲ್ಲಿದ್ದು, ಅಪಾರವಾಗಿ ಓದಿಕೊಂಡಿದ್ದ ಗಂಡನೇ ಈ ಭಾವಕ್ಕೆ ಬಲಿಯಾಗುವುದನ್ನು ತಣ್ಣಗೆ ಗಮನಿಸುವ ಸರಸ್ವತಿ ‘ನಿಮ್ಮ ವಿದ್ಯೆಗೆ ಧಿಕ್ಕಾರ’ ಎಂದು ಪ್ರತಿಭಟಿಸಲೂ ಮರೆಯುವುದಿಲ್ಲ. ಇದನ್ನೆಲ್ಲ ಹೇಳುವಾಗ ಒಂದು ತಣ್ಣನೆಯ ಆತ್ಮವಿಮರ್ಶೆಯ ಧ್ವನಿ ಅವರಲ್ಲಿದೆ. ಗಂಡನ ಮರಣಾ ನಂತರ ಬರವಣಿಗೆಯಲ್ಲಿ ತೊಡಗಿ ತಮ್ಮ ಪ್ರಭಾವವನ್ನು ಆ ಕಾಲದ ಮೇಲೆ ಛಾಪಿಸಿದ, ಸುಪ್ರಭಾತ ಎಂಬ ಮಹಿಳಾ ಪ್ರಧಾನ ಪತ್ರಿಕೆಯನ್ನೂ ನಡೆಸಿ ಮೈಲುಗಲ್ಲು ಸ್ಥಾಪಿಸಿದ ಸರಸ್ವತಿಯವರು ಕೊನೆಗೆ ‘ಇದೆಲ್ಲ ಹುಡುಗಾಟವೆಂದೇ ತೋರುತ್ತದೆ’ ಎಂದು ತಮ್ಮ ಪಕ್ವತೆಯ ಕೊನೆದಿನಗಳಲ್ಲಿ ನುಡಿಯುತ್ತಾರೆ. ತಮ್ಮ ಮನೆತನಕ್ಕೆ ಕೊಡುಗೆಯಾಗಿ ಬಂದಿದ್ದ ಶಾರದಾ ವಿಗ್ರಹವನ್ನು ಸ್ಥಾಪಿಸಿ ಆ ತಾಯಿಯ ಹೃದಯದಲ್ಲಿ ತಾದಾತ್ಮ್ಯಗೊಂಡಂತೆ ಬದುಕಿ ತೆರಳುತ್ತಾರೆ. ಅವರ ಈ ರೂಪಾಂತರ, ಆಧ್ಯಾತ್ಮಿಕ ಮನೋಧರ್ಮದ ಪ್ರಕಾಶ ಎಲ್ಲವನ್ನೂ ವೈದೇಹಿಯವರು ನಿರೂಪಿಸಿದ ರೀತಿ ಗಹನವಾದುದು. ‘ಸ್ತ್ರೀಪರ ದೃಷ್ಟಿ’ ಗೆ ಇರಬಹುದಾದ ಹಲವು ಆಯಾಮಗಳನ್ನು ನಿರೂಪಿಸುವ ಈ ಆತ್ಮಕಥನದ ನಿರೂಪಣೆ ಹೃದ್ಯವಾಗಿದೆ.

ನೆನಪು ಸಿಹಿ ಕಹಿ
ವೃತ್ತಿ-ಪ್ರವೃತ್ತಿಗಳಿಂದ ಕಟ್ಟಿಕೊಂಡ ಸಾಮಾಜಿಕ ವ್ಯಕ್ತಿತ್ವ ಸ್ತ್ರೀಯರ ಪಾಲಿಗೂ ಸಾಧ್ಯವಾಗುತ್ತ ಹೋದಂತೆ ವೃತ್ತಿ ಹಾಗೂ ಸಂಸಾರ ಎರಡನ್ನೂ ನಿಭಾಯಿಸುವ ತೀವ್ರ ಒತ್ತಡ ತೊಳಲಾಟಗಳ ಹೊಸ ಸವಾಲುಗಳು ಹೆಣ್ಣು ಮಕ್ಕಳನ್ನೂ ಆವರಿಸತೊಡಗಿದವು. ಅದನ್ನು ಛಲದಿಂದ ಗೆದ್ದ ಹುಟ್ಟು-ಹೋರಾಟಗಾರ್ತಿ ಡಾ. ಅನುಪಮಾ ನಿರಂಜನರ ವ್ಯಕ್ತಿತ್ವದ ಹಲವು ಕವಲುಗಳು ‘ನೆನಪು ಸಿಹಿ ಕಹಿ’ ಯಲ್ಲಿ ಹರಡಿಕೊಂಡಿವೆ. “1982ರಲ್ಲಿ ಎರಡನೆಯ ಬಾರಿಗೆ ಕ್ಯಾನ್ಸರ್‍ಗೆಂದು ನನಗೆ ಶಸ್ತ್ರಚಿಕಿತ್ಸೆಯಾದಾಗ ನೋವು, ದುಗುಡಗಳಿಂದ ನಾನು ಬಸವಳಿದಿದ್ದೆ. ಹೆಚ್ಚುದಿನ ಬದುಕುವುದಿಲ್ಲ ಎಂಬ ಗ್ರಹಿಕೆಯಿತ್ತು. ಜೀವನದುದ್ದಕ್ಕೂ ಹೆಜ್ಜೆ-ಹೆಜ್ಜೆಗೂ ಹೋರಾಟವೇ ನನಗೆದುರಾಗಿತ್ತು. ವೈದ್ಯೆಯಾಗಿ, ಸಾಹಿತಿಯಾಗಿ, ಪತ್ನಿಯಾಗಿ ಮಾತೆಯಾಗಿ ನಾನು ಉಂಡ ಸಿಹಿಕಹಿಗಳನ್ನು ನಾಲ್ಕು ಜನರ ಜೊತೆ ಹಂಚಿಕೊಂಡರೆ ನನ್ನ ಉಳಿದ ಬಾಳು ಸಹ್ಯವಾಗಬಹುದೇನೋ ಎಂದು ತೋರಿತು..” (4 ನೆನಪು ಸಿಹಿಕಹಿ). ಎಂದು ಕೃತಿಯ ಆರಂಭದಲ್ಲಿ ಅನುಪಮಾ ಬರೆದುಕೊಳ್ಳುತ್ತಾರೆ. ಬಾಲ್ಯದ ಬಡತನ, ಓದಿನಗೀಳು, ಯೌವನದ ಜಾತಿ ಮೀರಿದ ಪ್ರೇಮ, ತುಂಬ ಬದ್ಧತೆಯಿಂದ ಮಾಡಿದ ವೈದ್ಯಕೀಯ ವಿದ್ಯಾಭ್ಯಾಸ ಎಲ್ಲದರಲ್ಲೂ ತೀವ್ರವಾಗಿದ್ದರು ಅನುಪಮಾ. ಹೊಸಹೆಣ್ಣಿನ ಆಗಮನವಾಗುವುದು ಅಷ್ಟು ಸುಲಭವಲ್ಲ. ಕೋಶವೊಡೆದು ಬಂದ ಕಂಬಳಿ ಹುಳುವಿನಂತೆ ಅಗಾಧ ಹೋರಾಟ, ಸೈರಣೆಗಳ ಬದುಕು ಅವರದು. ನಿರಂಜನರ ಅದ್ಭುತ ಸಾಂಗತ್ಯ ಅವರ ಚಿಂತನೆಗಳ ದಿಕ್ಕನ್ನು ವಿಸ್ತರಿಸುತ್ತಾ ಹೋಯಿತು. ಆ ಸಾಂಗತ್ಯದ ಬುದ್ಧತೆ ಕೊನೆಯವರೆಗೂ ಉಳಿದುಕೊಳ್ಳುವ ರೀತಿ ಒಂದು ಮಾದರಿಯಾಗಿ ಕಾಣುತ್ತದೆ. ಸಾಮಾಜಿಕ ಕಳಕಳಿಯ ಸಂಘಟಕಿ, ಹೋರಾಟಗಾರ್ತಿಯ ವಿಕಾಸಕ್ಕೆ ಕೂಡ ನಿರಂಜನರು ಪ್ರೇರಣೆಯಾಗುತ್ತಾರೆ. ಆದರೆ, ಬರವಣಿಗೆಯ ವಿಷಯಕ್ಕೆ ಬಂದಾಗ ಪುರುಷನಿಗೆ ಸಿಗುವ ‘ಬಿಡುವು’ ಆ ತಾದಾತ್ಮ್ಯ, ಗೃಹಿಣಿತ್ವದಲ್ಲಿ ಹೂತ ಹೆಣ್ಣಿಗೆ ಅಸಾಧ್ಯ. ಅಧ್ಯಯನದ ಸಿದ್ಧತೆಗೆ ಬೇಕಾದ ಕಾಲ ನಿರಂಜನರಿಗೆ ಒದಗಿದಂತೆ ತನಗೆ ಒದಗಲಿಲ್ಲ ಎಂದು ಅನುಪಮಾ ಗುರುತಿಸಿಕೊಳ್ಳುತ್ತಾರೆ. ವೈದ್ಯೆಯಾಗಿ, ಗೃಹಿಣಿಯಾಗಿ, ತಾಯಿಯಾಗಿ, ಸಾಮಾಜಿಕ ಕಳಕಳಿಯುಳ್ಳ ಮಹಿಳೆಯಾಗಿ ಹಲವು ಅವತಾರಗಳನ್ನು ಒಂದೇ ಬದುಕಿನಲ್ಲಿ ನಿಭಾಯಿಸುವ ಅಗಾಧ ಒತ್ತಡಕ್ಕೆ ಅವರು ಒಳಗಾಗುತ್ತಾರೆ. ಈ ಮಧ್ಯೆ ತಮ್ಮ ಬರವಣಿಗೆ ಸೊರಗಿತು ಎಂಬ ಹಳಹಳಿಕೆಯೊಂದು ಉಳಿದುಹೋಗುತ್ತದೆ.

ನಿರಂಜನರ ಮಾರ್ಕ್ಸ್ ವಾದಿ ತಿಳುವಳಿಕೆ, ಪ್ರಗತಿಶೀಲ ಆಲೋಚನೆಗಳೊಂದಿಗೆ ಎಪ್ಪತ್ತರ ದಶಕದ ಸ್ತ್ರೀವಾದಿ ಚಿಂತನೆಗಳು ತಮ್ಮ ಬರವಣಿಗೆಯ ದಿಕ್ಕನ್ನು ಬದಲಾಯಿಸಿದ ಹಂತಗಳನ್ನು ಈ ಆತ್ಮಕಥನ ದಾಖಲಿಸಿರುವುದು ಮಹಿಳಾ ವೈಚಾರಿಕತೆಯ ವಿಕಾಸದ ಕಥನದಂತೆಯೂ ಭಾಸವಾಗುತ್ತದೆ. ಸಮಾಜಶಾಸ್ತ್ರೀಯ ಒಳನೋಟಗಳು, ಸಂಸ್ಕೃತಿ ರಾಜಕಾರಣದ ಭಂಜನೆ ಇವೆಲ್ಲವನ್ನು ಅವರು ಸಾಧ್ಯವಾಗಿಸಿಕೊಳ್ಳುತ್ತ ನಡೆಯುತ್ತಾರೆ. ಪುರಾಣ ಲೋಕದ ಮೊದಲ ಬಂಡಾಯಗಾರ್ತಿ ‘ಮಾಧವಿ’ಯನ್ನು ಕಾದಂಬರಿಯ ವಸ್ತುವಾಗಿಸಿಕೊಳ್ಳುವ ಮೂಲಕ ಸ್ತ್ರೀವಾದದೆಡೆ ಅವರು ನಡೆದು ಬರುತ್ತಾರೆ. ಚಿಕ್ಕಂದಿನಿಂದಲೂ ಲಿಂಗತಾರತಮ್ಯವನ್ನು ಪ್ರತಿರೋಧಿಸುತ್ತಲೇ ಬಂದ ಅವರ ಪ್ರವೃತ್ತಿಗೆ ವೈಚಾರಿಕ ಖಾಚಿತ್ಯ ದೊರಕುತ್ತ ಹೋಗುತ್ತದೆ. ತನ್ನ ಹೆಣ್ಣುಮಕ್ಕಳನ್ನು ಮೇಧಾವಿಗಳಾಗಿ, ಸ್ವತಂತ್ರ ಪ್ರವೃತ್ತಿಯ ತರುಣಿಯರನ್ನಾಗಿ ರೂಪಿಸುವಲ್ಲೂ ಹೊಸ ಕಾಲದ ತಾಯಿಯಾಗಿ ಅವರು ಹೊರಹೊಮ್ಮಿರುವುದು ಈ ಕಥನದ ಪ್ರೇರಣಾದಾಯಕ ಅಂಶ. ಅವರ ವೃತ್ತಿಕೂಡ ಅವರಿಗೆ ವಿವಿಧ ಹಿನ್ನೆಲೆಯ ಹೆಣ್ಣುಗಳ ಬವಣೆಗಳನ್ನು ಪರಿಚಯಿಸುತ್ತ ಅವರ ಗ್ರಹಿಕೆಗಳನ್ನು ಹಿಗ್ಗಿಸುತ್ತಲೇ ಹೋಗುತ್ತದೆ.

ಕಿಚ್ಚಿಲ್ಲದ ಬೇಗೆಯಲ್ಲಿ ಮೂಡಿದ ಆತ್ಮಕಥನಗಳು
ಕಿಚ್ಚಿಲ್ಲದ ಬೀಗೆಯಲ್ಲಿ ಬೆಂದೆನವ್ವಾ... ಸುಖವಿಲ್ಲದೆ ಧಾವತಿಗೊಂಡೆನವ್ವಾ..ನೆಂಬ ಅಕ್ಕಮಹಾದೇವಿಯ ಅಳಲು ಮರದೊಳಗಣ ಕಿಚ್ಚಿನಂತೆ ಹೆಣ್ಣು ಜೀವಗಳನ್ನು ಸುಡುತ್ತಲೇ ಬಂದಿರುವುದು ಒಡಲ ಸತ್ಯ. ಎಷ್ಟೋ ಮಹಿಳೆಯರು ಇಂಥ ಕೆಂಡದುಂಡೆಗಳನ್ನು ಒಳಗೇ ಬಚ್ಚಿಟ್ಟು ಹೊರಗಿನ ಕಥನವನ್ನಷ್ಟೇ ಹೇಳಲು ಸಾಧ್ಯವಾಗಿದೆ. ಹಾಗೆ ಹೇಳದಿರಲು ನೂರು ಕಾರಣಗಳಿರುತ್ತವೆ. ವಿಜಯಮ್ಮ ಅವರ ಆತ್ಮಕಥೆ ‘ಕುದಿ ಎಸರು’ ಹಾಗೂ ಪ್ರತಿಭಾವ ನಂದಕುಮಾರ್ ಅವರ ಆತ್ಮಕಥೆ ‘ಅನುದಿನದ ಅಂತರಗಂಗೆ’ ಕೃತಿಗಳು ಒಳಗಿನ ಸತ್ಯಗಳನ್ನು ಹೇಳುವ ದಿಟ್ಟತನದಿಂದಾಗಿ ಅನನ್ಯವೆನಿಸುತ್ತವೆ. ಇದಕ್ಕೆ ಇನ್ನೊಂದು ಸೇರ್ಪಡೆ ಶಶಿಕಲಾ ವಸ್ತ್ರದ ಅವರ ‘ಇದ್ದೇನಯ್ಯಾ ಇಲ್ಲದಂತೆ’ ಎಂಬ ಆತ್ಮಕಥನ. ಇವರೆಲ್ಲ ಬದುಕಿನಲ್ಲಿ ಘಾಸಿಗೊಂಡ ಮಹಿಳೆಯರು. ತಮ್ಮ ಗಾಯಗಳಿಗೆ ತಾವೇ ಮದ್ದು ಕಟ್ಟಿಕೊಂಡವರು. ತಮ್ಮ ಅದಮನೀಯ ಚೈತನ್ಯವನ್ನು ಕಾಪಿಟ್ಟುಕೊಂಡು ದಮನಿಸುವ ಒಳ-ಹೊರಗಿನ ಲೋಕದ ಜತೆ ಸೆಣಸಿದವರು. ಸಿದ್ಧ ನೈತಿಕ ಚೌಕಟ್ಟುಗಳನ್ನು ದಾಟಿ ಎದೆಯದನಿಗೆ ಕಿವಿಯಾಗಿ ಬದುಕಿದವರು. ತಮ್ಮ ಬದುಕಿನ ಪರಧಿಗಳನ್ನು ವಿಸ್ತರಿಸಿಕೊಂಡ ಛಲಗಾರ್ತಿಯರು. ಇವೆಲ್ಲ ಅವರ ಹೊರಗೀನ ರೇಖಾಚಿತ್ರವಾದರೆ ಒಳಗಿನ ರಕ್ತ, ಮಾಂಸ ತುಂಬಿದ ಅನುಭವ ಲೋಕವಿದೆಯಲ್ಲ! ಅದು ಖಂಡಿತ ನಮ್ಮನ್ನು ಕಲಕಿ ಬಿಡುತ್ತದೆ. ಎದೆ ಝಲ್ಲೆನ್ನುವಂತೆ ಮಾಡುತ್ತದೆ. ಹೆಣ್ಣು ದೇಹ, ಅದಕ್ಕಂಟಿದ ತಾಯ್ತನ, ದೇಹ ಮನಸ್ಸಿನ ವಿಚಿತ್ರ ಸಿಕ್ಕುಗಳು, ಎಲ್ಲವನ್ನೂ ದಾಟುವಲ್ಲಿ ಅವರು ತೋರಿದ ಸಾಹಸ, ಅದರ ಒಳಗೆಲ್ಲೋ ಮರ್ಮರಿಸುವ ಭಾಷೆಯಿಲ್ಲದ ಸಂಕಟ, ಎಲ್ಲವನ್ನೂ ಅನುಭವಗಳ ಹಸಿತನದಲ್ಲಿ ಕಟ್ಟುವ ಸೃಜನಶೀಲತೆಯಿಂದಾಗಿ ಇವು ಭಿನ್ನವಾಗಿ ನಿಲ್ಲುತ್ತವೆ. ಹೆಣ್ಣಿನ ಬದುಕಿನ ಬಂಧನ ಹಾಗೂ ಬಿಡುಗಡೆ ಈ ಎರಡೂ ಅಂಚುಗಳ ನಡುವೆ ಅವರ ಬದುಕಲ್ಲಿ ಬರುವ ಪುರುಷರ ಪಾತ್ರ ದೊಡ್ಡದು. ಗಂಡು - ಹೆಣ್ಣಿನ ಸಂಬಂಧದ ವಿನ್ಯಾಸಗಳು ಅವರ ಭಾವನಾತ್ಮಕ ಬದುಕನ್ನು ಕಟ್ಟಿನಿಲ್ಲಿಸುತ್ತವೆ. ಅಲ್ಲಿನ ಅಧಿಕಾರ ಸಂಬಂಧಗಳ ಆ ಮೂಲಕ ಹುಟ್ಟುವ ಹಿಂಸೆ ಅವರ ಮನೋಲೋಕವನ್ನು ಧ್ವಂಸಗೊಳಿಸುತ್ತದೆ. ಯಾಕೆಂದರೆ ಹೆಣ ್ಣನ ಪಾಲಿಗೆ ಸಂಬಂಧಗಳು ನಿಜಕ್ಕೂ ದೊಡ್ಡವು. ಪ್ರೀತಿಯ ಹುಡುಕಾಟದಲ್ಲಿ, ಸಿಕ್ಕ ಪ್ರೀತಿಯನ್ನು ಗಾಢವಾಗಿ ಅನುಭವಿಸುವಲ್ಲಿ, ಪ್ರೀತಿಯೇ ತಾನಾಗಿ ಧಗಧಗಿಸುವಲ್ಲಿ ಅವಳ ಪ್ರಾಣಶಕ್ತಿ ಮಿಳಿತವಾಗಿರುತ್ತದೆ. ಇಂಥ ಉತ್ಕಟ ಕಥನಗಳು ಮೂಡಿಸುವ ಹೆಣ್ಣಿನ ಬಿಂಬ ಬೇರೆಯದೇ ಬರೆಯದು ಏಕೆಂದು ‘ಹೆಣ್ಣು’ ಎಂಬ ಅಸ್ಮಿತೆ ಪ್ರಧಾನವಾಗಿ ಅವಳ ದೇಹದಿಂದ ದೊರಕಿದ್ದು ಮಹಿಳಾ ಆತ್ಮಕಥೆಗಳ ಈ ಒಳಚಲನೆ ಹಾಗೂ ಒಳಗಿನ ಗೂಢಗಳನ್ನು ಬಗೆದು ಬಯಲಾಗಿ ಮತ್ತೆ ಹೊರಗೆ ಹರಿಯುವುದು ಬಹುದೊಡ್ಡ ಅನುಭವ ಲೋಕವೊಂದನ್ನು ಕಟ್ಟಿಕೊಡುತ್ತದೆ. ಪಾವಿತ್ರ್ಯ, ಪಾತಿವ್ರತ್ಯ್ರಗಳ ಹಂಗು ಹರಿದು ತನ್ನೊಳಗಿನ ಮೊರೆತಗಳಿಗೆ ದನಿಯಾಗುವ ಹೊಸ ದಾರಿಗಳನ್ನು ನಿರ್ಮಿಸಿಕೊಂಡು ಮುಂಚಲಿಸುತ್ತದೆ

ಕುದಿ ಎಸರು
ಅನುಭವದ ಸಂಕೀರ್ಣತೆ ಹಾಗೂ ಸಮಗ್ರತೆಗಳ ಅರಿವಿಲ್ಲದಿದ್ದರೆ ಆತ್ಮಕಥಾನಕ ಒಂದೋ ಗೋಳು ತೋಡಿಕೊಳ್ಳುವಿಕೆಯಾಗುತ್ತದೆ. ಅಥವಾ ಪಾಶ್ರ್ವಿಕ ನೋಟದ ಪೂರ್ವಗ್ರಹಗಳ ನಿರೂಪಣೆಯಾಗಿಬಿಡುತ್ತದೆ. ವಿಜಯಮ್ಮ ತಮ್ಮ ‘ಕುದಿಎಸರಿ’ನಲ್ಲಿ ಅಂಥ ಎಚ್ಚರವನ್ನು ಇರಿಸಿಕೊಂಡಿದ್ದಾರೆ. ಗಂಡನ ಹಿಂಸೆಯನ್ನು ತಣ್ಣಗಿನ ಧ್ವನಿಯಲ್ಲಿ ನಿರೂಪಿಸುವಾಗಲೂ ವ್ಯಕ್ತಿ ಏಕೆ ಕ್ರೂರಿಯಾಗುತ್ತಾನೆ? ಅವನಲ್ಲಿ ಹಿಂಸೆ ಹೇಗೆ ಮೊಳೆಯುತ್ತದೆ? ಎಂಬ ಪ್ರಶ್ನೆಗಳನ್ನು ಆಳವಾಗಿ ಎದುರಿಸಲು ಬಯಸುತ್ತಾರೆ. ಅಂದಿನ ಘಟನೆಗಳನ್ನು ತಾನು ಇನ್ನೂ ಸರಿಯಾಗಿ ಅರ್ಥಮಾಡಿಕೊಂಡು ನಿರ್ವಹಿಸ ಬಹುದಿತ್ತೇನೋ ಎಂಬ ಪ್ರಾಮಾಣಿಕ ಆತ್ಮವಿಮರ್ಶೆ ಅವರ ಬರಹದ ಸ್ಥಾಯಿಯಾಗಿದೆ. ಸಂಬಂಧಗಳು ವಿಕಾಸಗೊಳ್ಳುವಾಗ ಸಂಘರ್ಷವೂ ಅನಿವಾರ್ಯವೇನೋ! ಭಿನ್ನ ಕೌಟುಂಬಿಕ, ಸಾಮಾಜಿಕ, ಸಾಂಸ್ಕೃತಿಕ ಪರಿಸರದಲ್ಲಿ ಬೆಳೆದ ಗಂಡು-ಹೆಣ್ಣುಗಳು ಸಾಮರಸ್ಯದ ಹದವರಿತು ಕರಗುವುದು ಅಷ್ಟು ಸುಲಭವಲ್ಲ. ಒಣ ಪ್ರತಿಷ್ಠೆ, ಪಿತೃಪ್ರಧಾನ ಮೌಲ್ಯಗಳ ಅಧಿಕಾರ ರಚನೆ, ಅದರಿಂದ ಒದಗಿದ ಪುರುಷ ಅಹಂ ಎಲ್ಲ ಸೇರಿ ಸಂಬಂಧದಲ್ಲಿ ಹಿಂಸೆಯ ಆಯಾಮ ಪ್ರವೇಶಿಸಿ ಬಿಡುತ್ತದೆ. ‘ಪೌರುಷ’ದ ಸಿದ್ದ ಕಲ್ಪನೆಯನ್ನೇ ಬದುಕಬೇಕಾದ ಪುರುಷ ಕೂಡ ಅದನ್ನು ಸ್ಥಾಪಿಸಲಾಗದ ಹತಾಶಸ್ಥಿತಿಯಲ್ಲಿ ಹಿಂಸ್ರಮೃಗದಂತಾಗುತ್ತಾನೆ. ಈ ಎಲ್ಲವನ್ನೂ ಮಾನವೀಯವಾಗಿ ಗ್ರಹಿಸುವ ಕಣ್ಣು ‘ಕುದಿ ಎಸರಿ’ ನಲ್ಲಿದೆ. ಬೌದ್ಧಿಕತೆ, ಸಿದ್ಧಾಂತಗಳ ಪರಿಚಯವಿದ್ದರೂ ವಿಜಯಮ್ಮ ಅದರಾಚೆ ಬದುಕನ್ನು ‘ಕಾಣುವ’ ಪರಿ ಪಕ್ವವಾದುದು.

ಗಂಡ ಬಿಟ್ಟವಳು ಎಂಬ ಪಟ್ಟಹೊರಲು ಹೆದರಿ ಎಷ್ಟೋ ಮಹಿಳೆಯರು ಕೌಟುಂಬಿಕ ಹಿಂಸೆಯಲ್ಲಿ ಕರಗಿ ಇಲ್ಲವಾಗುತ್ತಾರೆ. ಆದರೆ ಮದುವೆಯ ಚೌಕಟ್ಟಿನಿಂದ ಹೊರಬಂದ ವಿಜಯಮ್ಮ ಒಳಗಿನ ಪ್ರತಿಭೆ ಪ್ರಕಾಶಗೊಳ್ಳುವುದೇ ಆಮೇಲಿನಿಂದ ನಾಶವಾಗಿ ಹೋಗಬಹುದಾಗಿದ್ದ ಬದುಕನ್ನು ಅತ್ಯಂತ ಕ್ರಿಯಾಶೀಲವಾಗಿ ಕಟ್ಟಿಕೊಂಡಿದ್ದು ಅವರ ಬದುಕಿನ ಘನತೆಯನ್ನು ಹೆಚ್ಚಿಸಿತು. ಆರ್ಥಿಕ ಅವಲಂಬನೆಯೆಂಬ ಸೆರೆಮನೆಯನ್ನು ಒಂದು ಸಲ ದಾಟಿದರೆ ನೂರು ದಾರಿಗಳು, ನೂರು ಸಾಧ್ಯತೆಗಳು ತೆರೆದು ಕೊಳ್ಳಬಲ್ಲವು ಎಂಬುದಕ್ಕೆ ವಿಜಯಮ್ಮ ನಿದರ್ಶನ. ಸ್ವತಂತ್ರ, ದುಡಿಯುವ ಹೆಣ್ಣನ್ನು, ವಿವಾಹದಾಚೆಯೂ ಘನೆತೆಯಿಂದ ಬದುಕುವ ಅವಳ ಸಾಧ್ಯತೆಯನ್ನು ಒಪ್ಪಿಕೊಳ್ಳಲು ಅಂದಿನ ಸಮಾಜದ ಮನಸ್ಥಿತಿ ಪಕ್ವವಾಗಿರಲಿಲ್ಲ. ಆದರೆ, ವಿಜಯಮ್ಮನಂಥವರ ಹೋರಾಟ ಇಂದು ಅಂಥ ಮನಸ್ಥಿತಿಯ ನಿರ್ಮಾಣಕ್ಕೆ ಅಡಿಗಲ್ಲಾಗಿರುವುದು ಸುಳ್ಳಲ್ಲ. ರಂಗಭೂಮಿ, ಸಾಹಿತ್ಯ, ಸಿನಿಮಾ, ಪತ್ರಿಕೋದ್ಯಮ ಹೀಗೆ ಹಲವು ರಂಗಗಳಲ್ಲಿ ವಿಸ್ತರಿಸಿಕೊಂಡಿರುವ ವಿಜಯಮ್ಮನ ಅನುಭವ ಕಥನ ‘ಸ್ವಯಂ ವಿಕಾಸದ’ ಒಂದು ಮಾದರಿ. ಕುದಿಯುವುದು ನೋವಿನ ಅನುಭವವಾದರೂ ಕುದಿಯದೇ ಅನ್ನವಾಗಲಾಗದು ಎಂಬುದೂ ಸತ್ಯ ಇಂಥ ಸತ್ಯದರ್ಶನಕ್ಕಾಗಿ ಕುದಿ ಎಸರು ಗಮನಾರ್ಹವಾದ ಆತ್ಮಕಥನ.

ಇದ್ದೇನಯ್ಯಾ ಇಲ್ಲದಂತೆ : ನಾವೇ ಕಟ್ಟಿಕೊಂಡ ಸೊಕಾಲ್ಡ್ ಸಂಸ್ಕೃತಿಯಲ್ಲಿ ವಿವಾಹದ ಭಾಗವಾಗಿ ಮಾತ್ರ ತಾಯ್ತನವು ಸ್ವೀಕಾರಾರ್ಹವೂ ಪವಿತ್ರವೂ ಎನಿಸುತ್ತದೆ. ತಾಯಿಯಾಗಬೇಕೆಂಬ ಜೀವದ, ದೇಹದ ಹಂಬಲವು ಮತ್ತೆ ಮತ್ತೆ ವಿಷಮ ವಿವಾಹಗಳ ಸುಳಿಯಲ್ಲಿ ತೊಳಲಾಡಿಸುವ ಕಥನ ಶಶಿಕಲಾ ಅವರ ‘ಇದ್ದೇನಯ್ಯಾ ಇಲ್ಲದಂತೆ’.

“ಬರವಣಿಗಿ ಅನ್ನೋದು ಹ್ಯಾಂಗ ಬೌದ್ಧಿಕ - ಮಾನಸಿಕ ಸೃಷ್ಟಿನೊ ಹಂಗೇ ತಾಯ್ತನ ಕೂಡ ದೈಹಿಕ ಪರಿಪೂರ್ಣತೆಯ ಪಕ್ವ ಸೃಜನಶೀಲತೆಗೆ ಸಾಕ್ಷಿ ಅಲ್ಲೇನು? ಪರಿಪೂರ್ಣ ಹೆಣ್ತನ ಆದ ತನಗಿ ಅದು ತಾಯ್ತನದಿಂದ ಯಾಕ ಧನ್ಯ ಅಗ್ಬಾರ್ದು?” (179, ಇದ್ದೇನಯ್ಯಾ..) ತಾಯಿಯಾಗಿ ಇಡೀ ಜೀವ ಅರಳುವ, ಮಗುವಿನ ಗುಲಾಬಿ ಮೃದು ಪಾದಗಳ ಸ್ಪರ್ಷದಲ್ಲಿ ಭಾವ ಅರಳುವ ಕ್ಷಣಗಳನ್ನು ಉತ್ಕಟವಾಗಿ ಹಂಬಲಿಸಿದವರು ಶಶಿಕಲಾ. ತಾಯ್ತನವೊಂದೇ ಹೆಣ್ತನದ ಅಂತಿಮ ಗುರಿಯೇನು? ತಾಯ್ತನದ ಭಾವಕ್ಕೆ ಸ್ವಂತ ಮಕ್ಕಳೇ ಆಗಬೇಕೇನು? ಅದು ಮನಸ್ಸಿನ ಬಯಕೆಯಾ? ದೇಹದ್ದಾ? ಹಲವು ಪ್ರಶ್ನೆಗಳನ್ನು ಇಲ್ಲಿ ಬೌದ್ಧಿಕವಾಗಿ ಕೇಳಲು ಅವಕಾಶವಿದೆ. ಆದರೆ ನಮ್ಮ ವಿಮರ್ಶಾಪ್ರಜ್ಞೆ ವ್ಯಕ್ತಿಯ ಅನುಭವದ ಅಧಿಕೃತತೆಯನ್ನು ನಿರಾಕರಿಸಲಾಗದು. ತರ್ಕ ಮೀರಿ ಹರಿವ ಸೆಳೆತಗಳನ್ನು ನಿರುದ್ವಿಗ್ನವಾಗಿ ಶಶಿಕಲಾ ತಮ್ಮ ಆತ್ಮಕಥನದಲ್ಲಿ ಕಟ್ಟಿಕೊಡುತ್ತಾರೆ.

ಆತ್ಮಸಂಗಾತಕ್ಕೆ ನೀನೆನಗುಂಟು ಎಂದು ಹಲುಬುವ ಅಕ್ಕನ ಸಾಂಗತ್ಯದ ತಹತಹ ಹೆಣ್ಣು ಜೀವಕ್ಕೆ ಸಹಜವೇನೋ ಎಂಬಂತೆ ಶಶಿಕಲಾರ ಬರಹದಲ್ಲಿ ಪೂರ್ಣ ಪ್ರೇಮದ ಹುಡುಕಾಟವಿದೆ. ವಿವಾಹದಲ್ಲಿ ಎಂದೂ ಅರಳದ ಹೆಣ್ತನ, ಜೀವಕ್ಕೆ ಹತ್ತಿರಾಗುವ ಗೆಳೆತನದ ಭಾವವಿಲ್ಲದ ವ್ಯವಹಾರಿಕ ಸಂಬಂಧ, ಹಿಂಸೆಗೆ ತಿರುಗುವ ಅಧಿಕಾರ ಸಂಬಂಧಗಳಲ್ಲಿ ಘಾಸಿಯಾಗುವ ನಾಜೂಕು ಮನಸಿನ ಕಥನವಿದು. ಮದುವೆಯ ನಾಜೂಕು ಮೋಸ, ಒರಟು ತಿರಸ್ಕಾರ, ಬಳಸಿಕೊಂಡು ಬಿಸಾಡಿದರೆಂಬ ತಳಮಳದ ತಪ್ರಭಾವದಲ್ಲಿ ನರಳುವ ಸೆರಗಿನ ಕೆಂಡದಂಥ ದುಃಖದ ಕಥನವಿದು. “ಸಾಸಿವಿಯಷ್ಟು ಸುಖಕ್ಕ ಸಾಗರದಷ್ಟು ದುಃಖಾ ಅನುಭವಿಸೂದು” (ಪು.173, ಇದ್ದೇನಯ್ಯಾ..) ನಿತ್ಯಸತ್ಯವೇ ಆಗಿಬಿಡುತ್ತದೆ. ಪದೇ ಪದೇ ಪ್ರೀತಿಯ ಭ್ರಮೆಗಳು, ವಂಚನೆಗೊಳಗಾದೆ ಎಂಬ ಭಾವದ ಹಿಂದೆ ವಿವಾಹದ ಹಿಂದಿನ ಹುಸಿಭ್ರಮೆಗಳು ಬಯಲಾಗುತ್ತಾ ಹೋಗುತ್ತವೆ. ಗಂಡನನ್ನು ‘ಅರೆಗಂಡ’ ಎಂದು ಸಂಬೋಧಿಸುವಲ್ಲಿ ಶಶಿಕಲಾ ಅವರ ಹಲವು ಭಾವಗಳು ಹೆಪ್ಪುಗಟ್ಟಿದಂತಿವೆ. ಹೆಂಡತಿಗೆ ಪ್ರತಿಭೆ, ಸ್ವತಂತ್ರ ವ್ಯಕ್ತಿತ್ವ ಗಳಿರುವುದು ಗಂಡಸಿನ ಅಹಂ ಅನ್ನು ಮಗ್ಗಲುಮುಳ್ಳಾಗಿ ಚುಚ್ಚುತ್ತಿರುತ್ತದೆ. ಅವಳನ್ನು ನಿಯಂತ್ರಿಸುವುದರಲ್ಲಿಯೇ ಅವನ ಪುರುಷತ್ವ ತೃಪ್ತವಾಗುತ್ತದೆ. ಗಂಡಸಿನ ಈ ಪೊಗರನ್ನು ಎಳಸುತನವನ್ನಾಗಿ ಕಾಣುವ ತಾಯ್ತನದ ಪಕ್ವನೋಟ ಈ ಆತ್ಮಕಥನದಲ್ಲಿ ನುಡಿಯಾಗಿದೆ. “ಪ್ರತಿಭಾವಂತ, ಸ್ವಾಭಿಮಾನಿ ಹೆಣ್ಣನ್ನು ಬಾಳಿಸುವ ಧಾರಣ ಶಕ್ತಿಯೇ ಅವನಲ್ಲಿರಲಿಲ್ಲ ಅವನದೇನು ತಪ್ಪು”? (ಪು-240 ಇದ್ದೇನಯ್ಯಾ..) ಎಂದು ‘ಅರೆಗಂಡನ’ ಅರೆಬರೆತನವನ್ನು ಅಳೆಯುವ ಹೆಣ್ಣು ದೃಷ್ಟಿ ಇಲ್ಲಿ ಮೂಡಿದೆ. ಗಂಡು ಎಂದೆಂದೂ ಅಪೂರ್ಣ ತಳಮಳದ ಮುದ್ದೆ ಅವನಿಂದ ಪೂರ್ಣ ಪ್ರೇಮದ ಸ್ಥಿತಿ ಸಿಗಲಾರದೆಂಬ ಅರಿವಿನಲ್ಲೂ ನೀಲಕ್ಕ ತಾಯ್ತನದಲ್ಲಿ ಅದನ್ನು ಪಡೆಯುವ ಗೀಳಿಗೆ ಒಳಗಾಗುತ್ತಾಳೆ. ಮಗು ಒಡಲಲ್ಲಿ ಮಿಸುಕುವ, ಅದರ ಗುಲಾಬಿ ಮೈಯನ್ನು ಸ್ಪರ್ಷಿಸುವ ಐಂದ್ರಿಕ ಬಯಕೆ ದೇಹ ಪ್ರಜ್ಞೆಗಳ ಭಾಗವಾಗಿ ತರ್ಕಮೀರಿದ ಸಂಗತಿಯಾಗಿ ಬಿಡುತ್ತದೆ. ಇದನ್ನು ಎಲ್ಲ ಹೆಣ್ಣುಗಳಿಗೂ ಸಾಮಾನ್ಯೀಕರಿಸಲಾಗದಿದ್ದರೂ ಇದು ಆ ಕ್ಷಣದ, ಆ ಮೈಯ ಉತ್ಕಟ ತುಡಿತ. ಕೊನೆಗೂ ಈ ಅರೆಗಂಡರಿಂದ ತನ್ನನ್ನು ಕಳಚಿಕೊಂಡು ಮುಕ್ತವಾದ ಪ್ರಜ್ಞೆಯಲ್ಲಿ ಶಶಿಕಲಾ ಅವರು ‘ಇದ್ದೇನಯ್ಯಾ ಇಲ್ಲದಂತೆ’ ಎಂಬ ನಿಲುವಲ್ಲಿ ವಿರಮಿಸುತ್ತಾರೆ.

ಅನುದಿನದ ಅಂತರಗಂಗೆ
ಪ್ರತಿಭಾನಂದಕುಮಾರ್ ಅವರ ‘ಅನುದಿನದ ಅಂತರಗಂಗೆ’ ಕನ್ನಡ ಮಹಿಳಾ ಆತ್ಮಕಥನಗಳಿಗೆ ಲವಲವಿಕೆಯ, ದಿಟ್ಟತನದ ಹೊರಳನ್ನು ಒಂದು ಚೈತನ್ಯದ ಜಿಗಿತವನ್ನು ತಂದುಕೊಟ್ಟಿತು. ಪ್ರತಿಭಾ ತಮಗೊಂದು ಸ್ಪೇಸ್‍ಬೇಕು ಎಂದು ಹೋರಾಡುವುದಿಲ್ಲ. ಅವರ ವ್ಯಕ್ತಿತ್ವವೇ ಲಿಬರೇಟೆಡ್ ಆದುದು. ಅಡೆತಡೆಗಳನ್ನೆಲ್ಲ ಕೊಚ್ಚಿ ಧುಮಿಕಿ ಹರಿಯುವ ನೀರಿನಂಥದ್ದು ನವನವೋನ್ಮೇಶಶಾಲಿತ್ವಕ್ಕೆ ಭಾಷ್ಯ ಬರೆವಂತೆ ಬದುಕಿದ ಪ್ರತಿಭಾ, ಅದಕ್ಕಾಗಿ ಅಪಾರ ನೋವುಂಡರೂ ಸ್ವಾತಂತ್ರ್ಯದ ಒರತೆಯನ್ನು ಬತ್ತಲು ಬಿಡದವರು. ಈ ಅನುದಿನದ ಅಂತರಗಂಗೆಯ ಹರಿವು ಕನ್ನಡಮಟ್ಟಿಗೆ ಹೊಸತು ದೇಹ-ಆತ್ಮ, ಪ್ರೇಮ-ಕಾಮ, ಒಳಗೆ-ಹೊರಗೆ ಎಂಬ ವಿಭಜನೆಯಿಲ್ಲದಂತೆ ಅಖಂಡ ಸಂಭ್ರಮ - ಸಂಕಟಗಳನ್ನು ದಾಟಿಸುವ ಬಗೆಯಿಂದಾಗಿ ಇದು ನವನವೋನ್ಮೇಶಶಾಲಿಯಾಗಿ ತೋರುತ್ತದೆ. “ಪ್ರೀತಿಯೆಂಬುದು ನಡುಹೊಕ್ಕಳ ನಾಭಿ ಮೂಲದಿಂದ ಹೊರಳಿ ಬಂದು ಹುಟ್ಟುತ್ತದೆ” ಯೆಂಬ ಮಾರ್ಕವೆಜ್‍ನ ನುಡಿಯನ್ನು ಅನುರಣಿಸುವಂತೆ ಈ ಕೃತಿಯಲ್ಲಿ ಒಂದು ಕಂಪನವಿದೆ. ಇಡೀ ಬದುಕು ಪ್ರೀತಿಯ ಹುಡುಕಾಟದ ಒಂದು ಪಯಣದಂತಿದೆ. ಪ್ರೀತಿಗಾಗಿ ತಹತಹ, ಪ್ರೀತಿಯ ನಿರಾಕರಣೆಯ ತಲ್ಲಣ, ತೀರ ಫಿಸಿಕಲ್ ಆದ ಸಂಭ್ರಮ ಇವೆಲ್ಲ ಹಸಿಯಾಗಿ ಉಕ್ಕುವ ಹಸಿರಿನಷ್ಟೇ ನೈಜವಾಗಿವೆ. ಹೆಣ್ಣುಗಂಡಿನ ಅಖಂಡ ಐಕ್ಯದ ಹಂಬಲ ಯಾವಾಗಲೂ ಒಂದು ತಪನೆಯ ಸ್ಥಿತಿ. ಆಧ್ಯಾತ್ಮದಲ್ಲೂ ಸರಿಯೇ ಲೌಕಿಕದಲ್ಲೂ ಸರಿಯೇ. ಆದರೆ ಗಂಡಸು ಅದನ್ನು ‘ತನಗೆ ಬೇಕಾದ ಹಾಗೆ ಮಾತ್ರ’ ಪಡೆಯುವ ಲೌಕಿಕನಾಗಿಬಿಟ್ಟಾಗ ಅಪೂರ್ಣತೆಯ ಭಾವದಲ್ಲಿ ಹೆಣ್ಣು ತಳಮಳಗೊಳ್ಳುತ್ತಾ ಹೋಗುತ್ತಾಳೆ. ಅಂಥ ಭಾವತೀವೃತೆಯಲ್ಲಿ ಅದ್ದಿದ ಬರಹ ಬೌದ್ಧಿಕ ವಾದಗಳನ್ನು ಮರೆಮಾಡುತ್ತದೆ. ಪ್ರೀತಿಗಾಗಿ ಬೇಡುವ, ಸೋಲುವ ಘಳಿಗೆಗಳಲ್ಲಿ ಆ ಕ್ಷಣದ ಕಾವು ಅವರಿಗೆ ಮುಖ್ಯವಾಗುತ್ತದೆಯೇ ಹೊರತೂ ತಾನು ‘ಬಾಗಬಾರದು’ ಎಂದು ಹಠವಲ್ಲ. ಪ್ರೇಮದ ಪರಿಭಾಷೆ ಬೌದ್ಧಿಕ ಪರಿಭಾಷೆಗಿಂತ ಭಿನ್ನ ಎಂಬ ಅರಿವು ಈ ಆತ್ಮ ಕಥಾನಕದ ತುಂಬ ನಿನದಿಸುತ್ತದೆ. ದೇಹದ ಮಿಡಿತ, ರೋಮಾಂಚನಗಳು ಪ್ರಜ್ಞೆಯ ಭಾಗವೂ ಆಗಿ ಇಡೀ ವ್ಯಕ್ತಿತ್ವವನ್ನು ಆವರಿಸಿ ಜ್ವಲಿಸುವ ತೀವ್ರಾನುಭವ ಇಲ್ಲಿನ ವಿಶೇಷ.

ಪ್ರತಿಭಾರ ಬರವಣಿಗೆಯಲ್ಲಿ ಒಂದು ತುಂಟತನವಿದೆ. ಅದು ಅರಾಜಕವಾದ ತುಂಟತನ. ಪ್ರೀತಿ ಎಂಬ ಉತ್ಕಟಭಾವ ಶಾಶ್ವತ ಸ್ಥಿತಿಯಲ್ಲ ಕಾಲೂರಿದ ನೆಲದಲ್ಲೇ ಸಂಭವಿಸುವ ಆ ಸ್ವರ್ಗೀಯ ಭಾವ ಸಿಕ್ಕಿತು ಎನಿಸಿದ ಕ್ಷಣಗಳನ್ನು ಚಿಟ್ಟೆ ಹಿಡಿಯುವ ಓಡುವ ಮುಗ್ಧ ಹುಡುಗಿಯಂತೆ ಹಿಡಿಯಲು ಸಂಭ್ರಮಿಸುವ ವ್ಯಕ್ತಿತ್ವವೊಂದು ಇಲ್ಲಿ ಮಾತಾಡಿದಂತಿದೆ. ಕ್ಷಣಭಂಗುರತೆಯಲ್ಲಿಯೇ ಬದುಕಿನ ಸೌಂದರ್ಯವಿದೆ ಎಂಬ ಫಿಲಾಸಫಿಯನ್ನು ಮೆಲ್ಲನೆ ಉಸುರುವ ಈ ಕಥನ ಆ ಕಾರಣಕ್ಕಾಗಿಯೇ ಚಲನಶೀಲವೂ ತಾಜಾ ಸಂವೇದನೆಯದೂ ಆಗಿ ಕಾಣುತ್ತದೆ. ವಿವಾಹದ ಚೌಕಟ್ಟಿನಲ್ಲಿ ಬದುಕುತ್ತಲೇ ಅದರಾಚೆಗೂ ಪ್ರೀತಿಗಾಗಿ ಹಂಬಲಿಸುವ ಜೀವ, ನಿಷ್ಠೆ, ಪಾತಿವ್ರತ್ಯದ ಗೆರೆಗಳನ್ನು ತೀರ ಸಹಜವಾಗಿ ದಾಟಿ ಬಿಡುತ್ತದೆ. ಆದರೆ ಈ ಹಂಬಲ ಬರಿಯ ದೈಹಿಕವಾಂಛೆಯಲ್ಲ ಎಂಬ ಅರಿವನ್ನು ಸಮಾಜಕ್ಕೆ ಕಾಣಿಸಲಾಗುವುದಿಲ್ಲ. “ಹೆಣ್ಣಿನ ಪ್ರೀತಿ ಎಂದರೆ ಸಂಭೋಗ ಎಂದು ತಿಳಿಯುವ ಇವರ ಮುಂದೆ ಏನು ಹೇಳುವುದು? ನನ್ನ ಪ್ರೀತಿಯ ಪರಿಕಲ್ಪನೆಯನ್ನು ಇವರಿಗೆ ಅರ್ಥಮಾಡಿಸುವುದು ಹೇಗೆ? ಮೂವತ್ತು ವರ್ಷದ ನಾನು ನನಗಿಂತ ಡಬಲ್ ವಯಸ್ಸಾದ ಅವರನ್ನು ಇಷ್ಟಪಟ್ಟಿದ್ದು ಸೆಕ್ಸ್ ಗಾಗಿ ಎಂದು ತಿಳಿಯುವವರಿಗೆ ಹೇಗೆ ಅರ್ಥವಾಗುತ್ತದೆ”? (ಪು-198, ಅನುದಿನದ..) “ದಾಟುವ ಮಾತಿರಲಿ ನನ್ನ ಅಂತರಗಂಗೆಯಲ್ಲಿ ಸದಾ ಅಲ್ಲೋಲ ಕಲ್ಲೋಲ.. ತೇಲಲೂ ಆಗದ ಮುಳುಗಲೂ ಆಗದ ಕಳವಳ. ಪಾತಾಳಗರಡಿ ಹಾಕಿದರೂ ಸಿಗದ ಸಾವಿರಾರು ಅವಶೇಷಗಳು...” (ಪು-20, ಅನುದಿನದ ..) ಇಂಥ ತೀವ್ರಸ್ಪಂದನೆ ಹೆಣ್ಣಿನ ಮನದ ನಿಗೂಢ ಆಳಗಳನ್ನು ಅದರ ಬಯಕೆಗಳನ್ನು ಶೋಧಿಸುವ ಕ್ರಮದಿಂದಾಗಿ ಪ್ರಖರವಾಗಿದೆ.

ತಾಯ್ತನವನ್ನು ಸ್ವೀಕರಿಸುವ ರೀತಿಯಲ್ಲಿ ಕೂಡ ಪ್ರತಿಭಾರ ಅನುಭವಗಳು ಸಿದ್ಧಮಾನದಂಡಗಳನ್ನು ನಿರಾಕರಿಸುತ್ತವೆ. ಅದು ಅಪ್ಪಟ ದೈಹಿಕ ಅನುಭವ. ಅದರಾಚೆಗೆ ವಿಜೃಂಭಿಸುವುದೇನು ಇಲ್ಲವೆಂಬ ಸಹಜತೆ ಸೋಕುವಂತೆ ಅದನ್ನವರು ನಿರೂಪಿಸುತ್ತಾರೆ. “ನಾನೆಂದೆ ಒಂದು ಮಗುವನ್ನು ಹೆರುವುದು Most thrilling experience ಕಿರುಚುವುದು ಅಗತ್ಯವೇ ಇಲ್ಲ. ನನ್ನ ದೇಹದಲ್ಲಿ ಆಗುತ್ತಿದ್ದ ಪ್ರಕ್ರಿಯೆಗಳು ನನಗೆ ಗೊತ್ತಾಗುತ್ತಿತ್ತು Wondrfull ಇದನ್ನು ನಾನೇ ಸೃಷ್ಟಿಸಿದೆನಾ? ಎಂಬ ಅಚ್ಚರಿ!. ಹೊಲಿಗೆ ಹಾಕುವಾಗ ‘ಎಂಬ್ರಾಯಡರಿ ಮಾಡುತ್ತಿದ್ದೇವೆ’ ಎಂಬ ವೈದ್ಯರ ತಮಾಷೆಗೆ ‘ಒಳ್ಳೆ ಡಿಸೈನ್ ಮಾಡಿ’ ಎಂಬ ತುಂಟತನದ ಅಲೆಅಲೆ ನಗು ಪ್ರತಿಭಾರದು. ಲೇಬರ್ ವಾರ್ಡಿನ ಹುಟ್ಟು-ಸಾವಿನ ನಿಗೂಢ ಮೌನವನ್ನು ತುಂಬ ಸಹಜವಾಗಿ ಸ್ವೀಕರಿಸುವ ಮಾದರಿಯದು. ಇದೇ ಸಹಜತೆ ಪ್ರತಿಭಾರನ್ನು ಪಾಪಪ್ರಜ್ಞೆ, ಕೀಳರಿಮೆಗಳಿಂದ ಸದಾ ಹೊರಗೆ ಉಳಿಸುತ್ತದೆ.

‘ತನ್ನ ಕವನಗಳೇ ತನ್ನ ಆತ್ಮಕತೆ’ ಎಂದುಕೊಂಡಿದ್ದ ಪ್ರತಿಭಾ ಬರಹದಷ್ಟೇ ತೀವ್ರವಾಗಿ ಬದುಕಿದವರು ಸತ್ಯವನ್ನು ಮುಚ್ಚಿಟ್ಟು ಸುಳ್ಳುಗಳ ಮೇಲೆ ಬರೆವ ಅಲಂಕಾರಿಕ ಬರಹ ಆತ್ಮಕಥನದಲ್ಲಿ ಸಾಧ್ಯವಿಲ್ಲ. “ಸುಳ್ಳು ಹೇಳುವುದಾದರೂ ಯಾರಿಗೆ? ನನಗೆ ನಾನೇ ಸುಳ್ಳು ಹೇಳಿಕೊಳ್ಳು ಸಾದ್ಯವೇ”? ಎಂದು ಪ್ರಶ್ನಿಸಿಕೊಳ್ಳುವ ಪ್ರತಿಭಾ ಪೊರೆಕಳಚಿಕೊಳ್ಳುತ್ತ ಸತ್ಯಾನ್ವೇಷಣೆಗೆ ತೊಡಗುತ್ತಾರೆ. ನನ್ನನ್ನು ಅಳೆಯುವ ಮಾನದಂಡಗಳೇ ಚಿಕ್ಕದಾಗಿದ್ದರೆ ಅದು ನನ್ನ ಸಮಸ್ಯೆಯೇ? ಎಂದು ಕೇಳಿಕೊಳ್ಳುವಲ್ಲಿ ಸದಾ ಚೌಕಟ್ಟಿನಾಚೆ ಚಿಗುರುವ ಅವರ ಬದುಕಿನ ದಾಹ ತೆರೆದುಕೊಳ್ಳುತ್ತದೆ. ಇಷ್ಟೆಲ್ಲಾ ವಿಶೃಂಬಲವಾಗಿ ಬದುಕಿ ಬರೆಯುವಾಗಲೂ ಪ್ರತಿಭಾ ಅದೇ ಸಾಂಸಾರಿಕ ಚೌಕಟ್ಟಿನೊಳಗೇ ವಾಸ್ತವವಾಗಿ ಇದ್ದರು ಎಂಬುದೇ ಸೋಜಿಗ, ಅದೇ ಅಡಿಗೆ ಪೂಜೆ, ಒಳಹೊರಗಿನ ಕತ್ತೆ ದುಡಿತ, ಮಕ್ಕಳ ಪೋಷಣೆ, ಗಂಡನ ಪೊಸೆಸಿವ್‍ನೆಸ್, ಹಿಂಸೆ, ಕ್ರೌರ್ಯ, ಪ್ರೇಮ ಕಾಮಗಳ ಸುಳಿಯಲ್ಲಿ ಇದ್ದೂ ಅದನ್ನು ದಾಟುವ ಚೈತನ್ಯವನ್ನು ಪ್ರೇಮದ ಉನ್ಮಾದದಲ್ಲಿಯೇ ಪಡೆಯುತ್ತಾರೆ. ಪೆಟ್ಟುತಿಂದು ನರಳುವ, ರಾತ್ರಿಗಳನ್ನು ಮನೆಹೊರಗೆ ಒಂಟಿಯಾಗಿ ಕಳೆಯುವ ಪ್ರೀತಿ-ಹಿಂಸೆಗಳ ದ್ವಂದ್ವಾತ್ಮಕ ಸಂಬಂಧಗಳನ್ನು ನಿಭಾಯಿಸುತ್ತ ಸಾಗುವ ಆಂತರಿಕ ಹೋರಾಟ ದಿಟ್ಟವಾಗಿದೆ. ಆದರೆ ಲೋಕಕ್ಕೆ ‘ಗಟ್ಟಿಹೆಂಗಸು’ ಎಂದು ಕಾಣುವವಳ ಒಳಗಿನ ಏಕಾಂತ, ನಿಟ್ಟುಸಿರುಗಳನ್ನು ಸೂಕ್ಷ್ಮವಾಗಿ ಕೇಳಿಸುವ ಪರಿಯಿಂದಾಗಿ ಅನುದಿನದ ಅಂತರಗಂಗೆ ಹೆಣ್ಣಿನ ಅಂತರಂಗದ ಅನೂಹ್ಯ ಹರಿವಿನ ದಾಖಲೆಯಾಗಿದೆ.

ಬೆಂಕಿ ಬೆಡಗು
ಅಕ್ಷರಗಳು ಹೆಣ್ಣಿಗೆ ಧ್ವನಿ ನೀಡಿದಂತೆಯೇ ರಂಗಭೂಮಿ ಮಾಧ್ಯಮವು ಅವಳಿಗೆ ಅಭಿವ್ಯಕ್ತಿ ಶಕ್ತಿಯನ್ನು ನೀಡಿತು. ಮನೆಯ ಹೊಸ್ತಿಲಿಂದಾಚೆ ಸಾರ್ವಜನಿಕವಾಗಿ ರಂಗದ ಮೇಲೆ ಕಾಣಿಸಿಕೊಳ್ಳುವ ಅನುಭವವೇ ಅವಳ ಪಾಲಿಗೆ ರೋಚಕವಾದುದು. ಪ್ರದರ್ಶನ ಕಲೆಗಳಲ್ಲಿ ಇರುವ ಮುಕ್ತತೆ ದೇಹಭಾಷೆಯ ಅಭಿವ್ಯಕ್ತಿ, ಮಾತಿನ ಪ್ರಖರತೆ, ನೃತ್ಯ - ಸಂಗೀತಗಳ ವ್ಯಕ್ತಿತ್ವಕ್ಕೆ ಒಂದು ಸ್ಪಷ್ಟತೆ, ಗಟ್ಟಿತನವನ್ನು ತಂದುಕೊಡುವಲ್ಲಿ ಸಹಕಾರಿಯಾಗುತ್ತವೆ. ಮುಂದುವರೆದು ಸಿನಿಮಾ ಕ್ಷೇತ್ರಕ್ಕೂ ಇದನ್ನು ಅನ್ವಯಿಸಬಹುದು. ಆದರೂ ಏಕಕಾಲಕ್ಕೆ ಈ ರಂಗದಲ್ಲಿರುವ ಹಣ, ಜನಪ್ರಿಯತೆ, ಅತಿರಂಜಿತ ಭ್ರಮಾಧೀನ ಪರಿಸರದ ಸೃಷ್ಟಿಯಿಂದಾಗಿ ಅಲ್ಲೊಂದು ಶೋಷಕ ವ್ಯವಸ್ಥೆ ಹುಟ್ಟಿಕೊಂಡು ಹೆಣ್ಣು ಅದಕ್ಕೆ ಬಲಿಯಾಗುವುದೂ ಇಲ್ಲದಿಲ್ಲ. ಅಲ್ಲಿಯೂ ಹೆಣ್ಣು ದೇಹವನ್ನು ‘ಸರಕಾ’ಗಿಯೇ ನೋಡುವ ಬಂಡವಾಳಶಾಹಿ ದೃಷ್ಟಿಕೋನ ಹೆಣ್ಣಿನ ಘನತೆಯನ್ನೂ, ಅಸ್ಮಿತೆಯನ್ನೂ ನಿರಾಕರಿಸಬಹುದಾದ ಅಪಾಯ ಇದ್ದೇ ಇದೆ. ಈ ಎಲ್ಲವುಗಳ ಮಧ್ಯೆ ರಂಗದಲ್ಲಿ ಮಿನುಗುತಾರೆಗಳೆನಿಸುವ ಹೆಣ್ಣುಗಳ ಖಾಸಗಿ ಬದುಕು ಅಲ್ಲಿನ ಬವಣೆಗಳು, ಅವಮಾನ ಹೋರಾಟಗಳು ನೇಪಥ್ಯದ ಕರಾಳ ಮುಖಗಳನ್ನು ದರ್ಶನ ಮಾಡಿಸುತ್ತವೆ. ಈ ಹಿನ್ನೆಲೆಯಲ್ಲಿ ಉಮಾಶ್ರೀಯವರ ‘ಬೆಂಕಿ ಬೆಡಗು’ ಆತ್ಮಕಥನ ಗಮನಾರ್ಹವಾದುದು. ಇತ್ತೀಚೆಗೆ ಬಂದ ಬಿ.ಜಯಶ್ರೀಯವರ ‘ಕಣ್ಣಾಮುಚ್ಚೆ ಕಾಡೇಗೂಡೆ’ ಸಹ ಪ್ರಖರವಾದುದು. ಉಮಾಶ್ರೀ ಆತ್ಮಕಥನವನ್ನು ಬಿ.ಗಣಪತಿಯವರು ನಿರೂಪಿಸಿದ್ದಾರೆ. ಈ ಇಬ್ಬರೂ ಮಹಿಳೆಯರು ನಟನೆಯಲ್ಲಿ ಸಾಧಿಸಿದ ಉತ್ಕೃಷ್ಟತೆಯ ಜೊತೆಗೆ ಸಾಮಾಜಿಕ ವ್ಯಕ್ತಿತ್ವವನ್ನು ಬೆಳೆಸಿಕೊಂಡವರು ರಾಜಕಾರಣಕ್ಕೂ ಪ್ರವೇಶಿಸಿ ತಮ್ಮನ್ನು ಸಂಘಟನೆ - ಆಡಳಿತದ ನೆಲೆಗಳಲ್ಲಿ ವಿಸ್ತರಿಸಿಕೊಂಡವರು. ವೃತ್ತಿ ಬದುಕು, ಕುಟುಂಬ, ಮದುವೆ, ತಾಯ್ತನಗಳ ಸಿಕ್ಕುಗಳಲ್ಲಿ ತೊಳಲಾಡುತ್ತಲೇ ಅದನ್ನು ದಾಟಿ ತಮ್ಮನ್ನು ಕಟ್ಟಿಕೊಂಡವರು.

ಗಂಡಸರ ಬದುಕಿನಲ್ಲೂ ಬದುಕಿಗಾಗಿ ಹೋರಾಡುವ ಸಂಕಷ್ಟಗಳು ಬರುತ್ತವೆ. ಆದರೆ ಹೋರಾಡುವ ಹೆಣ್ಣು ಕ್ಷಣ ಕ್ಷಣಕ್ಕೂ ಸಮಾಜ, ಕುಟುಂಬವನ್ನು ಒಪ್ಪಿಸುತ್ತ, ಅವರ ಮುಂದೆ ತನ್ನ ಸಾಚಾತನವನ್ನೂ ಪಾವಿತ್ರ್ಯವನ್ನೂ ದೃಢೀಕರಿಸುತ್ತ ಅಗ್ನಿದಿವ್ಯಗಳನ್ನು ಹಾಯಬೇಕಾಗುತ್ತದೆ. ಅವರ ಸಾಧನೆಗಳಿಗಿಂತ ಚಾರಿತ್ರ್ಯದ ಪ್ರಶ್ನೆ ಮುಖ್ಯವಾಗುತ್ತದೆ. ಬದುಕಿನ ಅನಿವಾರ್ಯತೆಗಾಗಿ ರಂಗಭೂಮಿಯನ್ನು ವೃತ್ತಿಯಾಗಿಸಿಕೊಂಡ ಉಮಾಶ್ರೀ ಶ್ರೇಷ್ಠ ಅಭಿನೇತ್ರಿಯಾಗಿ ಬೆಳೆಯುವ ದಾರಿಯಿದೆಯಲ್ಲ ಅದು ಕೆಂಡದ ಹಾದಿಯೇ ಸರಿ.

“ನನ್ನ ಕಣ್ಣೆದುರು ಇದ್ದುದು ಎರಡೇ - ಒಂದು ಬದುಕು ಇನ್ನೊಂದು ನನ್ನ ನಿಶ್ಚಿತ ಗುರಿ ಮುಟ್ಟೋದು. ಅದಕ್ಕೆ ನಾನು ಯಜುಮಾರ್ಗದಲ್ಲಿ ಸಾಗಿದ್ದೇನೆ ಎಂಬ ದೃಢವಿಶ್ವಾಸ, ಒಬ್ಬ ಹೆಣ್ಣುಮಗಳು ದುಡಿದು ಕಷ್ಟಪಟ್ಟು ಬದುಕುವ ಹಠದಿಂದ ಮುನ್ನುಗ್ಗಿದಾಗಲೂ ಈ ಸಮಾಜ ಸಂಶಯದಿಂದ ನೋಡಿ ವ್ಯಭಿಚಾರಿ, ಸೂಳೆ ಅನ್ನೋ ಪಟ್ಟಕಟ್ಟೋ ನಿಷ್ಕರುಣೆ ಸಮಾಜವಿದು. ಈ ಸಮಾಜಕ್ಕೆ ಹೃದಯವಂತಿಕೆಗಿಂತ ಹೃದಯ ಶೂನ್ಯತೆಯೇ ಹೆಚ್ಚು ಆವರಿಸಿಕೊಂಡಿದೆ” (ಪು-62, ಬೆಂಕಿ ಬೆಡಗು).

ಗೃಹಿಣಿ, ಸೂಳೆ ಎಂಬ ಕಪ್ಪು ಬಿಳುಪಿನ ವಿಭಜನೆಯ ನಡುವೆ ಬದುಕಿಗಾಗಿ ಹೊಸ್ತಿಲು ದಾಟಿದ ಹೆಣ್ಣುಗಳ ನಿಜ ಬದುಕು ಸಂಕಟಕಗಳ ಬೆಂಕಿಯಲ್ಲಿ ಸುಟ್ಟು ಸುಟ್ಟೇ ಗಟ್ಟಿ ಮಡಕೆಯಾಗುತ್ತದೆ. ತಂದೆತಾಯಿಯಿಲ್ಲದ ತಬ್ಬಲಿ ಉಮಾಶ್ರೀ ಸಾಕು ತಾಯಿಯೂ ಶತ್ರುವಿನಂತಾಗಿ ಹೋದಾಗ ಉಂಟಾದ ದಿಗ್ಭ್ರಮೆಯಲ್ಲಿ ಸ್ತಬ್ಧಳಾಗುತ್ತಾಳೆ. ದುಡಿಯದ ಕುಡುಕಗಂಡ, ಅರ್ದೃತೆಯೇ ಇಲ್ಲದ ಶುಷ್ಕ ಸಂಬಂಧ, ಬಸಿರು ಬಾಣಂತನಗಳ ದಿಕ್ಕೇಡಿತನ, ಕಾಡುವ ಅಪಾರ ಹಸಿವು ಮಕ್ಕಳ ಭವಿಷ್ಯ.. ಇದಕ್ಕೆಲ್ಲ ಒಂಟಿಯಾಗಿ ಎದೆಕೊಟ್ಟು ನಿಲ್ಲಲ್ಲೇ ಬೇಕಾದ ಅನಿವಾರ್ಯ ಪರಿಸ್ಥಿತಿಯಲ್ಲಿ ಮುಗ್ಧೆ ಗಯ್ಯಾಳಿಯಾಗಿ ಬದಲಾಗುತ್ತಾಳೆ. ಉಳಿವಿನ ಪ್ರಶ್ನೆ ಎದುರಾದಾಗ ತನ್ನೊಳಗೇ ಅರಿವಿಗೆ ಬಾರದಂತೆ ಗುಪ್ತವಾಗಿದ್ದ ದೈತ್ಯಶಕ್ತಿ ಛಕ್ಕನೆ ಎದ್ದು ಬರುತ್ತದೆ. ಹಸಿವಿನಿಂದ ಅಲೆದ, ಯಾರ್ಯಾರದೋ ಮನೆಗಳಲ್ಲಿ ಆಶ್ರಯಪಡೆದ ಉಮಾಶ್ರೀ ಹೊಟ್ಟಿ ತುಂಬಿಸುವ ಏಕೈಕ ಉದ್ದೇಶದಿಂದ ರಂಗನಟಿಯಾದವರು. ತಮ್ಮ ನೈತಿಕತೆಯ ಕುರಿತು ತೇಲಿಬರುವ ಮಾತುಗಳನ್ನು ಕೇಳದಂತೆ ಅವಡುಗಚ್ಚಿ ನಿಂತು ಸಂಸಾರದ ಹೊಟ್ಟೆಹೊರೆದವರು. ತಮ್ಮನ್ನು ತಾವು ಕಾಪಾಡಿಕೊಳ್ಳು ‘ಬಜಾರಿ’ಯ ಅವತಾರ ತಾಳಿದವರು ಆಯ್ಕೆಗಳೇ ಇಲ್ಲದ ಬದುಕಿನಲ್ಲಿ ಸಿಕ್ಕ ಆಸರೆ ಭದ್ರಮಾಡಿಕೊಳ್ಳುವುದಷ್ಟೇ ಗುರಿಯಾಗಿರುತ್ತದೆ. ಹಾಗೆ ಚಿತ್ರರಂಗಕ್ಕೂ ಪಾದಾರ್ಪಣೆ ಮಾಡಿದ ಉಮಾಶ್ರೀಯ ಕಣ್ಣ ಮುಂದೆ ಇದ್ದದ್ದು ತನ್ನ ಅಸ್ತತ್ವದ ಭಾಗಗಳೇ ಆದ ಮಕ್ಕಳ ಶಿಕ್ಷಣ ಹಾಗೂ ಭವಿಷ್ಯ. ಆದ್ದರಿಂದ ತನ್ನ ‘ಇಮೇಜ್’ ಕುರಿತು ಯೋಚಿಸುವ ಅವಕಾಶಗಳು ಆಕೆಯ ಮುಂದೆ ಇರಲೇ ಇಲ್ಲ. ‘ಚಿತ್ರರಂಗದ ಅಭಿರುಚಿಯನ್ನೇ ಕೆಡಿಸಿದ ನಟಿ’ ಎಂಬ ನೆಗೆಟಿವ್ ಇಮೇಜಿನ ಭಾರ ಹೊರುವಾಗಲೂ ತಾಯ್ತನದ ಹೊಣೆಗಾರಿಕೆಯನ್ನು ನುಣುಚಿಕೊಳ್ಳಲಾಗದ ಅನಿವಾರ್ಯತೆ. ಗಂಡಬಿಟ್ಟವಳು ಎಂಬ ಅವಮಾನ, ತಿರಸ್ಕಾರಗಳಲ್ಲಿ ಖಾಸಗಿ ಬದುಕು ಪ್ರೀತಿಯಿಲ್ಲದೇ ನರಳುತ್ತಿರುವಾಗ ಸೇಫರ್ ಸೈಡಿನಲ್ಲಿ ಕುಳಿತವರು ಮಾಡುವ ಟೀಕೆಗಳಿಗೆ ಕಿವಿಗೊಡುವ ಸಾದ್ಯತೆಗಳೇ ಉಮಾಶ್ರೀಯವರಿಗೆ ಇರಲಿಲ್ಲ. “ನನ್ನ ಬಾಳ್ವೆಯ ಕಟುವಾತವದ ಝಳದ ಮಧ್ಯೆ ಆ ದಿನಗಳಲ್ಲಿ ನನ್ನ ಅಭಿನಯದ ಅಪೇಕ್ಷೆ - ನಿರಪೇಕ್ಷೆಗಳ ಮಧ್ಯೆ ಗೆರೆ ಎಳೆದುಕೊಳ್ಳಲಾರದಷ್ಟು ಅಸಹಾಯಕಳಾಗಿಬಿಟ್ಟಿದ್ದೆ ನಾನಂದು ಒಪ್ಪಿಮಾಡುತ್ತಿದ್ದ ಪಾತ್ರಗಳ ತೂಕ, ಅದರ ಭಾಷೆ, ಭಾವಗಳ ಸಾಮಾಜಿಕ ಪರಿಣಾಮ ಯಾವುದನ್ನೂ ಯೋಚಿಸಿದಷ್ಟು ಮುಗ್ಧೆಯಾಗಿದ್ದೆ. ಇನ್ನೊಂದು ಪಾತ್ರ ಬಿಟ್ಟುಕೊಟ್ಟರೆ ಬೀದಿಪಾಲಾಗಿ ಬಿಡುತ್ತೇನೇನೋ ಎಂಬ ಗಾಢ ಭಯದಲ್ಲಿದ್ದೆ ಹೀಗಾಗಿ ಬಂದ ಅವಕಾಶಗಳಿಗೆಲ್ಲಾ ಪಾತ್ರಗಳಾಗುತ್ತಾ ಹೋದೆ”(ಪು-13 ಬೆಂಕಿ ಬೆಡಗು) ದ್ವಂದ್ವಾರ್ಥದ ಸಂಭಾಷಣೆ, ಅಂಗಾಂಗ ಪ್ರದರ್ಶನ, ಅಶ್ಲೀಲ ದೇಹ ಭಾಷೆಗಳಿಗೆ ಸೀಮಿತವಾದ ನಟಿ ಎಂಬ ಇಮೇಜಿನ ಹಿಂದೆ ಧಗಧಗಿಸುವ ಹಸಿವು ಅತಂತ್ರತೆಯ ಸಂಕಟಹೊತ್ತ ಸ್ವಾಭಿಮಾನೀ ಜೀವ ಇರುವುದು ಲೋಕಕ್ಕೆ ಕಾಣುವುದಿಲ್ಲ. ಗಂಡಸಿನ ವಿಷಯದಲ್ಲಿ ರಸಿಕತೆಯಾಗಬಹುದಾದದ್ದು ಹೆಣ್ಣಿನ ವಿಷಯದಲ್ಲಿ ಅಶ್ಲೀಲತೆ, ಅಪವಿತ್ರತೆಯಾಗಿಬಿಡುತ್ತದೆ. ಅಂಥ ಅಶ್ಲೀಲತೆಯನ್ನು ಬಯಸುವ ‘ಗಂಡು ಅಭಿರುಚಿ’ ಹೆಣ್ಣನ್ನು ಅಲ್ಲಿ ದೂಡಿ ತನ್ನನ್ನು ಸಂಭಾವಿತರ ಸ್ಥಾನದಲ್ಲಿ ಪ್ರತಿಷ್ಠಾಪಿಸಿಕೊಂಡು ಬಿಡುತ್ತದೆ.

ಇಂಥ ಅತಂತ್ರ ಬದುಕಿನಲ್ಲೂ ಒಡಲಾಳದ ಸಾಕವ್ವ ಗುಲಾಬಿ, ಪುಟ್ನಂಜಿ ಎಲ್ಲರೂ ಉಮಾಶ್ರೀಯೊಳಗೆ ಇದ್ದರು!. ಅದ್ಭುತ ಪಾತ್ರಗಳಿಗೆ ಕಸುವು ತುಂಬಬಲ್ಲ ವ್ಯಕ್ತಿತ್ವ ಉಮಾಶ್ರೀಯ ಒಳಗೆ ಸುಪ್ತವಾಗಿತ್ತು. ಅವಕಾಶ ಒದಗಿದಾಗ ಛಕ್ಕನೆ ಪ್ರಕಾಶಿಸಿತು. ಶ್ರೇಷ್ಠನಟಿಯಾಗಿ ರಾಷ್ಟ್ರ ಪ್ರಶಸ್ತಿ ಪಡೆಯುವವರೆಗೆ ಅವಳ ಬದುಕಿನ ಘಟನೆಗಳು ಹಾಗೂ ಆ ಅನುಭವಗಳಲ್ಲಿಯೇ ಗಟ್ಟಿಯಾದ ವ್ಯಕ್ತಿತ್ವದ ನಿಜ ವಿಕಾಸ ನಿಜಕ್ಕೂ ಅಚ್ಚರಿ ಹುಟ್ಟಿಸುತ್ತದೆ. ಅಕ್ಷರಶಃ ಬೀದಿಪಾಲಾಗಿದ್ದ ಬದುಕನ್ನು ಎತ್ತಿನಿಲ್ಲಿಸಿ ಉಮಾಶ್ರೀ ಬೆಳೆದ ಬಗೆ ನಿಜಕ್ಕೂ ಒಂದು ಮಾದರಿ. ‘ಬೆಂಕಿ - ಬೆಡಗು’ ಬಣ್ಣದ ಲೋಕದ ಮಹಿಳೆಯ ಬದುಕಿನ ಝಳವನ್ನು ಅನುಭವವಾಗಿ ತಾಕಿಸುವ ಬರಹ.

ನಾನು ಭಾರ್ಗವಿ
ರಂಗಭೂಮಿಯಲ್ಲಿ ಅರಳಿದ ಭಾರ್ಗವಿನಾರಾಯಣರವರ ‘ನಾನು ಭಾರ್ಗವಿ’ ಎಂಬ ಶೀರ್ಷಿಕೆಯೇ ಆತ್ಮವಿಶ್ವಾಸದ ಧ್ವನಿಯಾಗಿದೆ. ಸುಶಿಕ್ಷಿತ ಮಧ್ಯಮವರ್ಗದ ಮಹಿಳೆಯೊಬ್ಬಳು ಕುಟುಂಬದ ಪರಧಿಯೊಳಗಿದ್ದುಕೊಂಡೇ ತನ್ನ ವ್ಯಕ್ತಿತ್ವವನ್ನೂ, ಅನುಭವ ಲೋಕವನ್ನೂ ಛಲದಿಂದ ಹಿಗ್ಗಿಸಿಕೊಂಡ ಕಥನವಿದು. ಅರ್ಧಶತಮಾನಗಳಷ್ಟು ಹಿಂದೆಯೇ I Connot handle marriage ಎಂದು ಭಾವಿಸಬಲ್ಲ ಪ್ರಬುದ್ಧೆಯೂ, ಪ್ರಗತಿಪರಳೂ ಆಗಿದ್ದವರು ಭಾರ್ಗವಿ. ಮದುವೆಗೆ ಅನಿವಾರ್ಯವಾದ ಸಮರ್ಪಣಾ ಭಾವ, ಖಾಸಗಿ ಸ್ಪೇಸ್ ಅನ್ನು ಧಾರೆಯೆರೆದು ಬಿಡಬೇಕಾದ ಅನಿವಾರ್ಯತೆ ಎರಡೂ ಸ್ವಂತಿಕೆಯಿಂದ ಜ್ವಲಿಸುವ ಹೆಣ್ಣು ಮಕ್ಕಳಿಗೆ ಸಾಧ್ಯವಾಗುವುದಿಲ್ಲ. ಹೆಣ್ಣಿಗಿರಬೇಕೆಂದು ಸಮಾಜವು ಅಪೇಕ್ಷಿಸುವ ಲಜ್ಜೆ, ವಿಧೇಯತೆ, ನಾಜೂಕು, ಸೌಂದರ್ಯಪ್ರಜ್ಞೆ ಇವುಗಳು ತನ್ನಲ್ಲಿಲ್ಲ ಎಂದು ಗುರುತಿಸಿಕೊಂಡ ಭಾರ್ಗವಿ ಈ ಎಲ್ಲ ‘ಮಿತಿ’ಗಳೊಂದಿಗೆ ಒಪ್ಪಿಕೊಂಡ ನಾಣಿಯವರ ಪ್ರೇಮವನ್ನು ನಿರಾಕರಿಸಲಾಗದೆ ಮದುವೆಯೆಂಬ ವ್ಯವಸ್ಥೆಯೊಳಗೆ ಪ್ರವೇಶಿಸಿದರು. ಆದರೆ ತಮ್ಮ ಸ್ವಂತಿಕೆಯನ್ನು ಖಾಸಗಿ ಸ್ಪೇಸ್‍ನ್ನು ಅದಕ್ಕೆ ಬಲಿಕೊಡದಂತೆ ಸಂಸಾರವನ್ನು ನಿಭಾಯಿಸಿ ಗೆದ್ದರು. ಮದುವೆ ಎಂಬುದೇ ಹೆಣ್ಣಿನ ಪಾಲಿಗೆ ಒಂದು ವೇಗ ನಿಯಂತ್ರಕವಿದ್ದಂತೆ. ಎಷ್ಟೋ ಸಲ ಗೃಹಿಣಿತ್ವದ ಏಕತಾನತೆ ಸೃಜನಶೀಲತೆಯನ್ನು ಕೊಲ್ಲುವುದಿದೆ. ಎಲ್ಲವನ್ನೂ ಎಲ್ಲರನ್ನೂ ಒಪ್ಪಿಸಿ, ಮೆಚ್ಚಿಸಿ ಬದುಕಬೇಕಾದ ಅವಲಂಬನೆಯ ಅನಿವಾರ್ಯತೆ ಉಗುಳಲಾಗದೆ ನುಂಗಲೂ ಆಗದೆ ಬದುಕನ್ನು ತಳಮಳದ ಪಾತ್ರೆಯಾಗಿಸಿ ಬಿಡುವುದಿದೆ. ಬಯಸಿ ಪಡೆದ ಸಾಂಗತ್ಯದಲ್ಲೂ ಕಸಿವಿಸಿಗಳಿರುತ್ತವೆ. ಅಲ್ಲಿಯೂ ಪುರುಷ ಗೊತ್ತಿದ್ದೋ ಗೊತ್ತಿಲ್ಲದೆಯೋ ಅಸೂಕ್ಷ್ಮವಾಗಿ ನಡೆದುಕೊಂಡು ಬಿಡುತ್ತಾನೆ. ತೀರ ಮನಸ್ಸು ಹಂಬಲಿಸುವಾಗ ಸಾಂತ್ವನ, ಪ್ರೀತಿಯೆಂಬುದು ಮರೀಚಿಕೆಯಾಗಿ ಬಿಡುತ್ತದೆ. ‘ಹೇಳಿಕೊಳ್ಳಲು ದೊಡ್ಡದಲ್ಲ ಆದರೆ ನುಂಗಿಕೊಳ್ಳಲು ಚಿಕ್ಕದೂ ಅಲ್ಲ ಎಂಬಂಥ ಕರಕರೆಗಳು. ಇದನ್ನೆಲ್ಲ ಸೂಕ್ಷ್ಮವಾಗಿ ನೋಡುವ ಸೂಜಿಯಂಥ ನೋಟ ಆ ಆತ್ಮಕಥನಕ್ಕೆ ದಕ್ಕಿದೆ. ಇಂಥ ಅನುದಿನದ ಕಲರವವನ್ನು ಯಾವ ಕಹಿಯಿಲ್ಲದೆ ಭಾರ್ಗವಿ ಬರೆದು ದಾಟುತ್ತಾರೆ. ಕೆಲವೊಮ್ಮೆ ತಮಾಷೆಯಲ್ಲೋ ವ್ಯಂಗ್ಯದಲ್ಲೋ ದಾಟಿಸುತ್ತಾರೆ. ಅದರೆ ಅಂಥ ಕ್ಷಣಗಳನ್ನು ಅಲ್ಲಿಯೇ ನಿಂತು ಹಿಗ್ಗಿಸಿ ನೋಡಿದರೆ ಒಂದು ವಿಷಾದದ ಮಂದ್ರ ಆಲಾಪ ಕೇಳಿಸದೇ ಹೋಗದು.!

ನೌಕರಸ್ಥ ಹೆಣ್ಣು ಆಗಷ್ಟೇ ಹುಟ್ಟಿಕೊಳ್ಳುತ್ತಲಿದ್ದ ಕಾಲವದು. ಭಾರ್ಗವಿಯವರಿಗೆ ಸಣ್ಣ ಸರ್ಕಾರಿ ಕೆಲಸ. ದುಡಿಯುವುದು ಜೀವನಕ್ಕೆ ಅನಿವಾರ್ಯ ಎಂಬ ಸಾಮಾನ್ಯ ಮಧ್ಯಮವರ್ಗದ ಬಿಗಿಯಾದ ಬದುಕು ಅಡಿಗೆ ಮನೆ, ಹಬ್ಬ ಹರಿದಿನ, ಪೂಜೆ, ನೆಂಟರಿಷ್ಟರು, ಅತ್ತೆ, ಮಾವ ಹೀಗೆ ಎಲ್ಲವಕ್ಕೂ ಸೈಯೆನಿಸಿಕೊಂಡು ಹೊರಗೂ ಸೈಯೆನಿಸಿಕೊಳ್ಳುತ್ತ ಅನಿವಾರ್ಯತೆ. ಈ ನಡುವೆ ನಾಟಕದ ಗೀಳು, ತಾಲೀಮು. ಇಷ್ಟೆಲ್ಲ ಜಂಜಡಗಳ ಮಧ್ಯೆ ಬರುವ ಬಸಿರು! ಹೆಣ್ಣಿನ ದೇಹವು ನಿರಾಕರಿಸಲಾಗದ ಅನಿವಾರ್ಯತೆ ಪದೇ ಪದೇ ಗರ್ಭನಿವಾರಿಸಿಕೊಂಡು ಬರುವುದು, ಹೆರಿಗೆಗಾಗಿ ಆಸ್ಪತ್ರೆಗೆ ದಾಖಲಾಗುವುದು ಮಾಮೂಲಿಯಾಗಿಬಿಡುತ್ತದೆ. ಗಂಡ ಈ ವಿಷಯದಲ್ಲಿ ನಿರ್ಲಿಪ್ತ. ಇವೆಲ್ಲ ಹೆಂಗಸರ ಜುಜುಬಿ ಸಂಗತಿಗಳು ಎಂಬಂತೆ!. ಒಂದು ಸಲವಂತೂ ತಾನೇ ಆಸ್ಪತ್ರೆಗೆ ದಾಖಲಾಗಿ ಹೆತ್ತಾಗಲೂ ಯಾರೂ ನೋಡಲು ಬರಲಾಗದಂಥ ಅನಿವಾರ್ಯ ಪರಿಸ್ಥಿತಿ. ಸಾಂಗತ್ಯವೆಂಬುದು ಸದಾ ಇಬ್ಬಾಯ ಅಲಗು.

“ಮನುಷ್ಯನಿಗೆ ಎಲ್ಲ ಸಮಸ್ಯೆಗಳಿಂದ ಸ್ವಲ್ಪ ಹೊತ್ತಾದರೂ ಮುಕ್ತಿ ಬೇಕಿದ್ದರೆ ಒಂದಲ್ಲ ಒಂದು ಹವ್ಯಾಸದ ಅವಶ್ಯಕತೆ ಇದೆ. ಓದು-ಕ್ರೀಡೆ-ಬರವಣ ಗೆ, ನಾಟ್ಯ, ನಾಟಕ ಎಂಥದ್ದೋ ಒಂದು ಮನಸ್ಸು ಸಮಚಿತ್ತವಾಗಿ ಸಂತೋಷವಾಗಿ ಇರಬೇಕಾದ್ರೆ ತನಗಾಗಿ ತನ್ನ ಸಂತೋಷಕ್ಕಾಗಿ ಸ್ವಲ್ಪ ಸಮಯವನ್ನು ಕಾದಿರಿಸಲೇಬೇಕು” (ಪು-316 ನಾನುಭಾರ್ಗವಿ) ಹೆಣ್ಣು ತನ್ನನ್ನು ತಾನೇ ಸಾಕ್ಷಾತ್ಕರಿಸಿಕೊಳ್ಳುವ ಕ್ಷಣಗಳಿಗಾಗಿ ಹಂಬಲಿಸುವ ಅಮೂರ್ತ ಹಂಬಲಕ್ಕೆ ಈ ಮಾತುಗಳು ಸಾಕ್ಷಿಯಾಗುತ್ತವೆ. ಇದು ಸ್ವಾರ್ಥವಲ್ಲ ಬದಲಿಗೆ ‘ಹೇರಿದ’ ವ್ಯಕ್ತಿತ್ವದಿಂದ ಬಿಡುಗಡೆ ಪಡೆವ ಜೀವದ ಸಹಜ ಬಯಕೆ. ಇದನ್ನೆಲ್ಲ ಯಾವ ಬೌದ್ಧಿಕ ಭಾರವಿಲ್ಲದೆ ಭಾವನಾತ್ಮಕ ಆವೇಶವಿಲ್ಲದೆ ಹರಟೆ ಹೊಡೆದಷ್ಟೇ ಸಲೀಸಾಗಿ ಭಾರ್ಗವಿ ನಿರೂಪಿಸುತ್ತಾ ಹೋಗುತ್ತಾರೆ. ತುಂಬುಕುಟುಂಬ, ಉದ್ಯೋಗ, ಮಕ್ಕಳಪಾಲನೆ, ಗೃಹಿಣಿತ್ವದ ಜವಾಬ್ದಾರಿಗಳೊಂದಿಗೇ ನಡುವೆ ತನ್ನನ್ನು ಕಂಡುಕೊಳ್ಳುವ, ತನ್ನೊಡನೆ ತಾದಾತ್ಮ್ಯಗೊಳ್ಳುವ ಕ್ಷಣಗಳನ್ನು ಉಳಿಸಿಕೊಳ್ಳುವ ಮಧ್ಯಮವರ್ಗದ ಮಹಿಳೆಯ ಆತ್ಮನಿವೇದನೆಯಾಗಿ ‘ನಾನು ಭಾರ್ಗವಿ’ ಗೆಲ್ಲುತ್ತದೆ.

ಪ್ರಸಿದ್ಧ ಲೇಖಕರ ಪತ್ನಿಯರಾಗಿ ತಮ್ಮ ಸಂಗಾತಿಯ ಕುರಿತು ಮಾತನಾಡುತ್ತಲೇ ತಮ್ಮ ಬದುಕಿನ ಮೌನವನ್ನು ಮಾತಿಗಿಳಿಸಿದವರು ಇಂದಿರಾ ಲಂಕೇಶ್ ಮತ್ತು ರಾಜೇಶ್ವರಿ ತೇಜಸ್ವಿ. ‘ಹುಳಿಮಾವಿನಮರ ಮತ್ತು ನಾನು’ ಹಾಗೂ ‘ನನ್ನ ತೇಜಸ್ವಿ. ಕನ್ನಡಕ್ಕೆ ಬಂದ ಅಪರೂಪದ ಬರಹಗಳು. ಸೃಜನಶೀಲ ತಳಮಳಗಳುಳ್ಳ ಪ್ರಸಿದ್ಧರ ಪತ್ನಿಯರಿಗೆ, ಅವರು ನಿಭಾಯಿಸದೆ ಬಿಟ್ಟ ಲೌಕಿಕ ಸಂಗತಿಗಳನ್ನು ನಿಭಾಯಿಸುವ ಅನಿವಾರ್ಯತೆಯಿರುತ್ತದೆ. ವ್ಯವಹಾರಿಕ ಜಾಣ್ಮೆ ಮಕ್ಕಳ ಜವಾಬ್ದಾರಿ, ಹೆಚ್ಚೇ ಹೊರಬೇಕಾಗುತ್ತದೆ. ಎರಡೂ ಭಿನ್ನ ಮನೋಧರ್ಮದ ಕಥನಗಳಾದರೂ ಹಲವು ಸಮಾನಾಂತರ ಎಳೆಗಳು ಇಲ್ಲಿವೆ. ಗಂಡಸರು ಬರೆದ ಆತ್ಮಕಥನಗಳಲ್ಲಿ ಹೆಂಡತಿ, ಮಕ್ಕಳ ಉಲ್ಲೇಖ ಅನುಷಂಗಿಕವಾಗಿ ಮಾತ್ರ ಬಂದರೆ, ಹೆಂಗಸರ ಆತ್ಮಕಥನಗಳಲ್ಲಿ ಕುಟುಂಬ, ಗಂಡ, ಮಕ್ಕಳ ಜಗತ್ತು ಬಹುಪಾಲು ಆವರಿಸಿಕೊಂಡಿರುತ್ತದೆ. ವಿವಾಹಾದಾಚೆಯ ಸಂಬಂಧಗಳು ಗಂಡಸಿನ ಅನುಭವದ ವಿಸ್ತರಣೆಯಂತೆ ಕಂಡುಬಂದರೆ, ಹೆಂಗಸಿನ ಅಪರಾಧವಾಗಿ ಗ್ರಹಿಸಲ್ಪಡುತ್ತವೆ. ಇವೆಲ್ಲ ಇಂದಿಗೂ ಮಹಿಳೆಯರು ಮುಕ್ತವಾಗಿ ತಮ್ಮ ಒಳಗನ್ನು ಬಿಚ್ಚಿಡಲಾರರೇನೋ ಎಂಬ ಅನಿಸಿಕೆ ಉಳಿದುಬಿಡುತ್ತದೆ.

‘ಮಹಿಳೆ’ ಎಂಬುದು ಏಕಸ್ವರವಲ್ಲ. ಅದು ಬಹುಸ್ವರಗಳ ಮೇಳಧ್ವನಿ. ಭಿನ್ನ ಅನುಭವ, ಭಿನ್ನ ಪರಿಸರಗಳ ಹಿನ್ನೆಲೆಯಲ್ಲಿ ಅವರ ಸಂಕಟ- ಸಂಭ್ರಮಗಳ ಲೋಕವೂ ಭಿನ್ನವೇ ಈ ಎಲ್ಲ ಆತ್ಮಕಥನಗಳಲ್ಲಿ ಅವರ ಸಾಂಸ್ಕೃತಿಕ - ಸಾಮಾಜಿಕ ಲೋಕವೂ ತನ್ನೆಲ್ಲ ವಿವರಗಳೊಂದಿಗೆ ಬಿಚ್ಚಿಕೊಂಡಿರುವುದು ಅಧ್ಯಯನ ಯೋಗ್ಯ. ಅಡಿಗೆ, ಉಡುಗೆ, ತೊಡುಗೆ ಎಲ್ಲವನ್ನೂ ಸಂಭ್ರಮಿಸುವ ಮಹಿಳೆಯರು ಬದುಕಿಗಂಟಿದವರು. ವಿಷಮ ಪರಿಸ್ಥಿತಿಯಲ್ಲೂ ಬದುಕನ್ನು ಉತ್ಕಟವಾಗಿ ಪ್ರೀತಿಸಬಲ್ಲವರು. ಬದುಕಿನ ಸೂತ್ರ ಸಂಬಂಧಗಳ ಹೆಣೆಗೆ ಹರಿದು ಹೋಗದಂತೆ ಬಿಗಿದು ಕಟುವ ತಾದಾತ್ಮ್ಯವುಳ್ಳವರು. ಚಿವುಟಿದಷ್ಟು ಚಿಗುರುವ ಕಸುವುಳ್ಳವರು ತಾವು ಮುರಿದುಹೋಗುತ್ತಿರುವಾಗಲೂ ಹೆತ್ತ ಮಕ್ಕಳನ್ನು ಎತ್ತಿನಿಲ್ಲಿಸುವ ಜೀವಪರರು. ಕೊನೆಗೂ ಇದೆಲ್ಲದರ ಆಚೆ, ನಾವು ಅವರ ಕುರಿತು ಬರೆಯಬಲ್ಲ ಭಾಷ್ಯಗಳ ಆಚೆ ಅವರು ರಕ್ತ, ಮಾಂಸ ತುಂಬಿರುವ ಅಪ್ಪಟ ಮನುಷ್ಯರು. ಕನ್ನಡದಲ್ಲಿ ಪ್ರಕಟಗೊಂಡ ಮಹಿಳಾ ಆತ್ಮಕಥನಗಳು ಇವೆಲ್ಲ ಸಂಗತಿಗಳನ್ನೂ ನಿರೂಪಿಸಿವೆ. ಇನ್ನೂ ಪ್ರಕಟಗೊಳ್ಳದ ಎಷ್ಟೋ ಆತ್ಮಕಥನಗಳು ಎದೆಯೊಳಗೇ ಹೊರಳುತ್ತಿರಬಹುದು. ಅವು ಸಾಕಾರಗೊಳ್ಳಲಿ ಎಂಬುದು ಆಶಯ.

ಈ ಅಂಕಣದ ಹಿಂದಿನ ಬರೆಹಗಳು:
ನಾದದ ನದಿಯೊಂದು ನಡೆದ್ಹಾಂಗ
ನದಿಗೆ ನೆನಪಿನ ಹಂಗಿಲ್ಲ
ಶಬ್ದದೊಳಗಿನ ನಿಶ್ಯಬ್ದವನ್ನು ಸ್ಫೋಟಿಸುವ ಕಥನ
ಮೊಲೆ ಮುಡಿಗಳ ಹಂಗು
ನೆಲದಕಣ್ಣಿನ ಕಾರುಣ್ಯ: ನೋವೂ ಒಂದು ಹೃದ್ಯ ಕಾವ್ಯ
ಫಣಿಯಮ್ಮ ಎಂಬ ಹೊಸ ಪುರಾಣ:
‘ಹಾರುವ ಹಕ್ಕಿ ಮತ್ತು ಇರುವೆ...’ ಅನನ್ಯ ನೋಟ
ಹೊತ್ತು ಗೊತ್ತಿಲ್ಲದ ಕಥೆಗಳು
ಹೊಳೆಮಕ್ಕಳು : ಅರಿವಿನ ಅಖಂಡತೆಗೆ ತೆಕ್ಕೆಹಾಯುವ ಕಥನ
ಕನ್ನಡ ಚಿಂತನೆಯ ಸ್ವರೂಪ ಹಾಗೂ ಮಹಿಳಾ ಸಂವೇದನೆಗಳು
ಸಾಹಿತ್ಯ ಸರಸ್ವತಿ ಬದುಕಿನ ‘ಮುಂತಾದ ಕೆಲ ಪುಟಗಳು’...
ಹೋದವರು ಹಿಂದಿರುಗಿ ಬರಲು ಹಾದಿಗಳಿಲ್ಲ
ನಿಗೂಢ ಮನುಷ್ಯರು: ತೇಜಸ್ವಿಯವರ ವಿಶ್ವರೂಪ ದರ್ಶನ
ಕನಕನ ಕಿಂಡಿಯಲ್ಲಿ ಮೂಡಿದ ಲೋಕದೃಷ್ಟಿ
ವಿಶ್ವಮೈತ್ರಿಯ ಅನುಭೂತಿ : ಬೇಂದ್ರೆ ಕಾವ್ಯ
ಕಾರ್ನಾಡರ ಯಯಾತಿ- ಕಾಲನದಿಯ ತಳದಲ್ಲಿ ಅಸ್ತಿತ್ವದ ಬಿಂಬಗಳ ಹುಡುಕಾಟ
ಹರಿವ ನದಿಯಂಥ ಅರಿವು : ಚಂದ್ರಿಕಾರ ಚಿಟ್ಟಿ
ಕಾಲುದಾರಿಯ ಕವಿಯ ಅ_ರಾಜಕೀಯ ಕಾವ್ಯ

MORE NEWS

ಪರಿಘಾಸನ ಮತ್ತು ಅರ್ಧ ಚಕ್ರಾಸನ 

16-04-2024 ಬೆಂಗಳೂರು

"ಪರಿಘಾಸನ ಆಸನವು ) ಪಿತ್ತ ಜನಕಾಂಗ ಮತ್ತು ಮೇದೋಜೀರಕ ಚೈತನ್ಯಗೊಳ್ಳುವಂತೆ ಮಾಡುತ್ತದೆ. ಹಾಗೆಯೇ ‘ಅರ್ಧ ಚಕ್...

ಲೋಕಸಭಾ ಚುನಾವಣೆಗಳ ಸುತ್ತಮುತ್ತ ಒಂದು ಸುತ್ತು

15-04-2024 ಬೆಂಗಳೂರು

"ಪರಸ್ಪರ ರೋಚಕ ನಿಂದನೆಗಳು. ಕ್ಷೇತ್ರವಾರು ಚಕ್ಕರಗುಳ್ಳಿ ಇಡುವ ಚತುರ ವಿವರಗಳು. ಹೊಸ ಹೊಸ ಬೈಗುಳಗಳು. ಮಾಧ್ಯಮಗಳಿಗ...

ಉಪವಿಷ್ಟಕೋನಾಸನ ಮತ್ತು ಪವನಮುಕ್ತಾಸನ

09-04-2024 ಬೆಂಗಳೂರು

"ಉಪವಿಷ್ಟಕೋನಾಸನ ಯೋಗಾಸನವು ಮನಸ್ಸನ್ನು ಶಾಂತಗೊಳಿಸುತ್ತದೆ ಮತ್ತು ಮಾಂಸಗಳ ತೂಕವನ್ನು ಕಡಿಮೆಗೊಳಿಸುತ್ತದೆ. ಪವನಮು...