ಮಹಿಳೆಯರ ಬದುಕಿಗೆ ಹೊಸ ಆಯಾಮ ನೀಡಿದ ವಚನ ಚಳವಳಿ

Date: 10-10-2022

Location: ಬೆಂಗಳೂರು


ವಚನಕಾರರು ತಮ್ಮೊಂದಿಗಿದ್ದ ವಚನಕಾರ್ತಿಯರಿಗೆ ಹಾಗೂ ಇತರ ಮಹಿಳೆಯರಿಗೆ ಮಹತ್ವದ ಸ್ಥಾನ ನೀಡಿದ್ದಾರೆ. ಅವರು ಪ್ರಾರಂಭಿಸಿದ ಚಳವಳಿಯಲ್ಲಿ ಅನೇಕ ವಚನಕಾರ್ತಿಯರು ಬೆಳೆದು ನಿಂತಿದ್ದಾರೆ. ಪುರುಷರಿಗೆ ಸರಿಸಮಾನವಾಗಿ ಅಷ್ಟೇ ಅಲ್ಲ, ಕೆಲವು ಸಂದರ್ಭಗಳಲ್ಲಿ ಅನೇಕ ಪುರುಷರಿಗೆ ಈ ಮಹಿಳೆಯರು ಮಾರ್ಗದರ್ಶನ ಮಾಡಿದ್ದಾರೆ ಎನ್ನುತ್ತಾರೆ ಲೇಖಕ ಬಸವರಾಜ ಸಬರದ. ಅವರು ತಮ್ಮ ಶರಣರ ಸಾಮಾಜಿಕ ಸಿದ್ಧಾಂತಗಳು ಅಂಕಣದಲ್ಲಿ ವಚನ ಚಳವಳಿ ಹೇಗೆ ಮಹಿಳೆಯರ ಬದುಕಿಗೆ ಹೊಸ ಆಯಾಮ ನೀಡಿತು ಎಂಬುದನ್ನು ವಿವರಿಸಿದ್ದಾರೆ.

ಇಂದ್ರಿಯ ನಿಗ್ರಹವ ಮಾಡಿದಡೆ ಹೊಂದುವವು ದೋಷಂಗಳು:
ಮುಂದೆ ಬಂದು ಕಾಡುವುವು ಪಂಚೇಂದ್ರಿಯಂಗಳು!
ಸತಿಪತಿರತಿಸುಖವ ಬಿಟ್ಟರೆ ಚಂಗಳೆಯರು?”
- ಬಸವಣ್ಣ (ವ:638)

ಎಂದು ಬಸವಣ್ಣ, ಸಕಲ, ಪುರಾತರನ್ನು ಸಾಕ್ಷಿಯಾಗಿ ನಿಲ್ಲಿಸಿ ಪ್ರಶ್ನೆ ಕೇಳಿದರೆ “ಭಕ್ತನ ಮನ ಹೆಣ್ಣಿನೊಳಗಾದಡೆ ವಿವಾಹವಾಗಿ ಕೂಡುವುದು” (ಸಿ.ರಾ.ವ:292) ಎಂದು ಸಿದ್ಧರಾಮ ಸ್ಪಷ್ಟಪಡಿಸುತ್ತಾನೆ.
“ಆ ದೇವ ಬಂದೆಡೆ ಈ ದೇವಿಯ ಸಂಭ್ರಮ ನೋಡಾ!
ಈ ದೇವಿ ಹೋದಡೆ ಆ ದೇವನ ಮನೋವ್ಯಾಕುಲ ನೋಡಾ!”
- ಸಿದ್ಧರಾಮ (ವ:1178)

ಎನ್ನುವ ಸಿದ್ಧರಾಮನ ವಚನದಲ್ಲಿ ಸತಿ-ಪತಿಗಳ ಸಮನ್ವಯ ಭಾವದ ಮೂಲಕ ಲಿಂಗಾಂಗದ ಸಾಮರಸ್ಯವಡಗಿರುವುದನ್ನು ಕಾಣಬಹುದಾಗಿದೆ.

“ಈ ದೇವಿಯಿಲ್ಲದಿರ್ದಡೆ ಆ ದೇವ ಸೈರಿಸನು,
ಆ ದೇವನಿಲ್ಲದಿರೆ ಈ ದೇವಿ ಸೈರಿಸಳು”
- ಸಿದ್ಧರಾಮ (ವ:1178)

ಎಂಬಂತಹ ಆತನ ನುಡಿಯಲ್ಲಿ ಗಂಡು-ಹೆಣ್ಣಿನ ಸಾಮಿಪ್ಯದ ಮೂಲಕ, ಲಿಂಗಾಂಗದ ಸಂಬಂಧವನ್ನು ವಿವರಿಸಲಾಗಿದೆ.

ಇದೇ ವಿಚಾರವನ್ನು ದಾಸಿಮಯ್ಯ ಮತ್ತು ನಗೆಯಮಾರಿತಂದೆ ವಚನಕಾರರು ತಮ್ಮ ವಚನದಲ್ಲಿ ಇನ್ನೂ ಸ್ಪಷ್ಟವಾಗಿ ನಿರೂಪಿಸಿದ್ದಾರೆ.

“ಹೆಣ್ಣು ಕಂಡು ಹೆಚ್ಚಿ ಹೆಕ್ಕಳಬಡುವಂತೆ
ಕಣ್ಣಿಟ್ಟು ನೋಡಿರೋ ಶಿವಲಿಂಗದೇವನ”
- (ಸ.ಪು.ವ.ಸಂಗ್ರ ಪು:328)

ಎಂದು ಹೇಳಿದ ದಾಸಿಮಯ್ಯ ಶಿವಲಿಂಗದೇವನ ಕಡೆ ಗಮನಸೆಳೆದರೆ; ನಗೆಯ ಮಾರಿತಂದೆಯು ಹೆಣ್ಣು-ಹೊನ್ನು-ಮಣ್ಣಿನ ಮೇಲಣ ಮೋಹ ಹಿಂಗಬೇಕಾದರೆ ಏನು ಮಾಡಬೇಕೆಂಬುದನ್ನು ವಿವರಿಸಿದ್ದಾನೆ.

“ಹೆಣ್ಣಿನ ಮೇಲಿನ ಮೋಹ ಯೋನಿ ಕಂಡಾಗ ದಣಿಯಿತ್ತು
ಹೊನ್ನಿನ ಮೇಲಿನ ಮೋಹ ಕೂಡಿ ಭಿನ್ನವಾಗಲಾಗಿಯೇ ದಣಿಯತ್ತು
ಮಣ್ಣಿನ ಮೇಲಿನ ಮೋಹ ಅರಿಗಳ ಮುರಿದು
ಹರವರಿಯಾದಾಗಲೆ ದಣಿಯಿತ್ತು
ಇವನೊಂದುವ ಕಾಣವ ಮೋಹ ಎಂದಿಗೂ ಬಿಡದು
ಇದರ ಸಂದನಳಿದು ಹೇಳಾ, ಆತರವೈರಿ ಮಾರೇಶ್ವರಾ”
- ನಗೆಮಾರಿತಂದೆ (ಸ.ಪು.ವ:11)

ತುಂಬಾ ಸರಳವಾದ ಮಾತುಗಳಲ್ಲಿ ನಗೆಮಾರಿತಂದೆ ನೇರವಾಗಿಯೇ ಸತ್ಯಸಂಗತಿಯನ್ನು ಬಿಚ್ಚಿಟ್ಟಿದ್ದಾನೆ. ಹೆಣ್ಣು-ಹೊನ್ನು-ಮಣ್ಣುಗಳನ್ನು ಅನುಭಿವಿಸದೆ ಅದರ ಮೋಹ ಬಿಡದೆಂದು ಸ್ಪಷ್ಟವಾಗಿ ಹೇಳಿದ ಈ ವಚನಕಾರ, ಇವುಗಳನ್ನೆಲ್ಲ ಬಿಟ್ಟಿದ್ದೇವೆಂದು ಹೇಳಿ ವಿಕೃತ ಚಟುವಟಿಕೆಗಳಲ್ಲಿ ತೊಡಗುವ ಸನಾತನಿಗಳನ್ನು ಕಂಡು ಟೀಕಿಸಿದ್ದಾನೆ. ಇದೇ ಮಾತನ್ನು ಮುಂದುವರಿಸಿ ಮೋಳಿಗಯ್ಯನೆಂಬ ವಚನಕಾರ ಹೀಗೆ ಹೇಳುತ್ತಾನೆ.

“ಹೆಣ್ಣು ಹೊರಗಣದೆಂದು, ಹೊನ್ನು ಹೊರಗಣದೆಂದು,
ಮಣ್ಣು ಹೊರಗಣದೆಂದು
ಸುಭೋಧೆಯ ಇದಿರಿಗೆ ಹೇಳಿ, ದುರ್ಬೋಧೆಯಲ್ಲಿ ತಾವು ನಡೆವುತ್ತಿಹ
ದುರ್ಗುಣಿಗಳ ಕಂಡು ನಾಚಿಕೆಯಾಯಿತ್ತು ನಿಃಕಳಂಕಮಲ್ಲಿಕಾರ್ಜುನ”
(ಸ.ಪು.ವ.ಸಂ.1)

ಇಂತಹ ವಚನಗಳ ಮೂಲಕ ಸ್ಪಷ್ಟವಾಗುವ ಅಂಶವೆಂದರೆ, ಸಹಜವಾದ ನೈಸರ್ಗಿಕ ಸುಖ-ಭೋಗಗಳನ್ನು ಸರಿಯಾದ ರೀತಿಯಲ್ಲಿ ಪಡೆಯಬೇಕೇ ಹೊರತು, ಅವುಗಳನ್ನು ತೊರೆದು ಬಿಟ್ಟಿದ್ದೇವೆಂದು ಹೇಳಿ ಮೋಸಮಾಡಬಾರದೆಂದು ತಿಳಿಯುವುದಾಗಿದೆ.

ಹೆಣ್ಣಿನ ಬಗೆಗಿರುವ ಗಂಡಿನ ವ್ಯಾಮೋಹ, ಹಾಗೂ ಗಂಡಿನ ಬಗೆಗಿರುವ ಹೆಣ್ಣಿನ ವ್ಯಾಮೋಹ ಇವು ನೈಸರ್ಗಿಕ ಹಾಗೂ ಸಹಜವಾದವುಗಳಾಗಿವೆ. ಶರಣರು ಇಂತಹ ವ್ಯಾಮೋಹವನ್ನು ಅಲ್ಲಗಳೆಯಲಿಲ್ಲ. ಆದರೆ ಇವುಗಳಿಗಾಗಿ ಹೊಡೆದಾಡುವವರನ್ನು ಅವರು ಮನ್ನಿಸಲಿಲ್ಲ.

“ಹೆಣ್ಣು ಹೊನ್ನು ಮಣ್ಣಿಗೆ ಹೊಡೆದಾಡುವನ್ನಬರ
ಅವರು ಹಿರಿಯರು ಎಂತಪ್ಪರೋ?”
- (ಸ.ಪು.ವ.ಪು:322)

ಎಂದು ಘಟ್ಟಿವಾಳಯ್ಯ ಪ್ರಶ್ನಿಸಿದರೆ ಇದನ್ನೇ ಚೆನ್ನಬಸವಣ್ಣ ಮತ್ತೊಂದು ರೀತಿಯಲ್ಲಿ ಪ್ರಶ್ನಿಸುತ್ತಾನೆ.

“ಹೆಣ್ಣ ಬಿಟ್ಟಡೇನು ಹೊನ್ನಿನಾಸೆ ಉಳ್ಳನ್ನಬರ?
ಅಲ್ಲಿಗೆ ಹಿರಿಯತನ ಸಾಲದು”
- (ಜೆ.ಬ.ವ:1307)

ಎಂದು ಹೇಳಿರುವ ಚೆನ್ನಬಸವಣ್ಣ, ಪರಸ್ತ್ರೀಯರ ಬಗೆಗೆ ತುಂಬ ಗೌರವವುಳ್ಳ ವಚನಕಾರನಾಗಿದ್ದಾನೆ.

“ಶಿವಲಿಂಗವ ನೋಡುವ ಕಣ್ಣಿನಲ್ಲಿ
ಪರಸ್ತ್ರೀಯ ನೋಡಿದಡೆ ಅಲ್ಲಿ ಲಿಂಗವಿಲ್ಲ”ವೆಂದು
- (ಚೆ.ಬ.ವ:1307)

ಸ್ಪಷ್ಟಪಡಿಸಿದ್ದಾನೆ. ಇದನ್ನೆ ಬಸವಣ್ಣ “ಛಲಬೇಕು ಶರಣಂಗೆ ಪರಸತಿಯನೊಲ್ಲೆನೆಂಬ” ಎಂದು ವಿಶ್ಲೇಷಿಸಿದ್ದಾನೆ. ಹೀಗೆ ಶರಣರು ರತಿಸುಖವನ್ನು ತಿರಸ್ಕರಿಸುವುದಿಲ್ಲ. ಆದರೆ ಅದನ್ನು ಸತಿಯಲ್ಲಿ ಮಾತ್ರ ಕಂಡುಕೊಳ್ಳುತ್ತಾರೆ. ಭಾರತೀಯ ಕೌಟುಂಬಿಕ ಚೌಕಟ್ಟಿನೊಳಗಡೆ ಆ ಮೋಹ-ವ್ಯಾಮೋಹಗಳನ್ನು ಈಡೇರಿಸಬೇಕೆಂದು ಹೇಳಿದ್ದಾರೆ.

“ರತಿಯಿಂದ ರತ್ನ ಗತಿಯಿಂದ ವಾದ್ಯ
ಸದ್ಗತಿಯಿಂದ ಮುಕ್ತಿ ನಿರ್ಗತಿಯಿಂದ ವಿರಕ್ತಿ”

ಎಂದು ಹೇಳಿದ ಅಂಬಿಗರ ಚೌಡಯ್ಯನ ವಚನದಲ್ಲಿಯೂ ಕೂಡ ರತಿಗೆ ಮಹತ್ವದ ಸ್ಥಾನ ದೊರಕಿದೆ. ಹೆಣ್ಣು-ಗಂಡು ಸರಿಸಮಾನರೆಂದು ಸಾರುವ ಚೌಡಯ್ಯ ಇನ್ನೊಂದು ವಚನದಲ್ಲಿ ಬಹುಮುಖ್ಯವಾದ ಪ್ರಶ್ನೆಯನ್ನು ಎತ್ತುತ್ತಾನೆ. ಎಲ್ಲರೂ `ಶರಣಸತಿ ಲಿಂಗಪತಿ’ ಎಂದು ಒಪ್ಪಿಕೊಂಡು ಬಂದರೆ, ಶರಣನೇ ಏಕೆ ಸತಿಯಾಗಬೇಕು. ಲಿಂಗವೇ ಏಕೆ ಪತಿಯಾಗಬೇಕು? ಮತ್ತೆ ಇವೆರಡೂ ಸತಿ-ಪತಿಗಳಾದದ್ದು ಯಾವಾಗ? ಎಂದು ಪ್ರಶ್ನಿಸುವ ಚೌಡಯ್ಯ `ಶರಣಸತಿ ಲಿಂಗಪತಿ’ ಎಂಬ ಮಾತು ಮೊದಲಿಗೆ ಮೋಸವೆಂದು ಸ್ಪಷ್ಟಪಡಿಸುತ್ತಾನೆ. ಹೀಗೆ ಅನೇಕ ವಚನಕಾರರು ಆ ವಚನ ಚಳವಳಿಯಲ್ಲಿದ್ದುಕೊಂಡೇ ಅಲ್ಲಿಯ ಕೆಲವು ಗೆರೆಗಳನ್ನು ದಾಟಲು ಪ್ರಯತ್ನಿಸಿದ್ದಾರೆ. ಸತಿ-ಪತಿ ಸಮಾನರೆಂದು ಢಕ್ಕೆಯ ಬೊಮ್ಮಣ್ಣ ತನ್ನ ವಚನವೊಂದರಲ್ಲಿ ಹೇಳಿದ್ದಾನೆ. ವಚನಕಾರ್ತಿಯರ ಬಗೆಗೆ, ಅದರಲ್ಲೂ ಅಕ್ಕಮಹಾದೇವಿಯನ್ನು ಕುರಿತು ಅನೇಕ ವಚನಕಾರರು ಗೌರವಯುತ ನುಡಿಗಳನ್ನಾಡಿದ್ದಾರೆ. `ಎನ್ನ ಹೆತ್ತತಾಯಿ ಮಹದೇವಿಯಕ್ಕನ ನಿಲುವು ನೋಡಯ್ಯ ಪ್ರಭುವೆ’ ಎಂದು ಬಸವಣ್ಣ ಹೇಳಿದರೆ `ನಿಜಪದವನೈದಿದ ಮಹಾದೇವಿಯಕ್ಕನ ಶ್ರೀಪಾದಕ್ಕೆ ನಮೋ ನಮೋ ಎಂಬೆನು’ ಎಂದು ಚೆನ್ನಬಸವಣ್ಣ ನಮಿಸಿದ್ದಾನೆ. `ಮಹಾದೇವಿಯಕ್ಕನ’ ನಿಲವಿಂಗೆ ಶರಣೆಂದು ಶುದ್ಧನಾದೆನು’ ಎಂದು ಸಿದ್ಧರಾಮ ಹೇಳಿದರೆ `ಗುಹೇಶ್ವರ ಲಿಂಗದಲ್ಲಿ ಸ್ವಯಂಲಿಂಗವಾದ ಮಹಾದೇವಿಯಕ್ಕಗಳ ನಿಲವಿಂಗೆ ಶರಣೆನುತಿರ್ದೆನು” ಎಂದು ಅಲ್ಲಮಪ್ರಭುವೇ ಶರಣೆಂದಿದ್ದಾನೆ.

ಹೀಗೆ ವಚನಕಾರರು ತಮ್ಮೊಂದಿಗಿದ್ದ ವಚನಕಾರ್ತಿಯರಿಗೆ ಹಾಗೂ ಇತರ ಮಹಿಳೆಯರಿಗೆ ಮಹತ್ವದ ಸ್ಥಾನ ನೀಡಿದ್ದಾರೆ. ಅವರು ಪ್ರಾರಂಭಿಸಿದ ಚಳವಳಿಯಲ್ಲಿ ಅನೇಕ ವಚನಕಾರ್ತಿಯರು ಬೆಳೆದು ನಿಂತಿದ್ದಾರೆ. ಪುರುಷರಿಗೆ ಸರಿಸಮಾನವಾಗಿ ಅಷ್ಟೇ ಅಲ್ಲ, ಕೆಲವು ಸಂದರ್ಭಗಳಲ್ಲಿ ಅನೇಕ ಪುರುಷರಿಗೆ ಈ ಮಹಿಳೆಯರು ಮಾರ್ಗದರ್ಶನ ಮಾಡಿದ್ದಾರೆ. ಕೆಲವು ವಚನಕಾರ್ತಿಯರು ತುಂಬ ಮಹತ್ವದ ಪ್ರಶ್ನೆಗಳನೆತ್ತಿ ಅಂದಿನ ಚರ್ಚೆಗೆ ಅರ್ಥವಂತಿಕೆಯನ್ನು ತಂದುಕೊಟ್ಟಿದ್ದಾರೆ. ಆಯ್ದಕ್ಕಿ ಲಕ್ಕಮ್ಮ, ನೀಲಮ್ಮ, ಲಿಂಗಮ್ಮ ಈ ಮುಂತಾದ ವಚನಕಾರ್ತಿಯರು ತಮ್ಮ ಪತಿಗಳಿಗೆ ಮಾರ್ಗದರ್ಶನ ಮಾಡಿದ್ದಾರೆ. ಕಾಳವ್ವೆ, ಗೊಗ್ಗವ್ವೆ, ಕದಿರರೆಮ್ಮವ್ವೆ, ರಾಯಮ್ಮ, ಅಕ್ಕಮ್ಮ ಈ ಮುಂತಾದವರೆಲ್ಲಾ ಬಹುಮುಖ್ಯವಾದ ಪ್ರಶ್ನೆಗಳನ್ನು ಕೇಳಿದ್ದಾರೆ. ಮುಕ್ತಾಯಕ್ಕ, ಮಹಾದೇವಿಯಕ್ಕ, ಸೂಳೆಸಂಕವ್ವೆಯಂತಹ ವಚನಕಾರ್ತಿಯರು ಸ್ವಾಭಿಮಾನವನ್ನು ಒಂದು ಮಹತ್ವದ ಮೌಲ್ಯವನ್ನಾಗಿಸಿದ್ದಾರೆ.

ಈ ವಚನಕಾರ್ತಿಯರು ಮಹಿಳೆಯರ ಬಗೆಗೆ ಹೆಚ್ಚು ಮಾತನಾಡದಿದ್ದರೂ ಆಯಾ ಸಂದರ್ಭಗಳಲ್ಲಾಡಿದ ಕೆಲವು ನುಡಿಗಳು ತುಂಬ ಮುಖ್ಯವಾಗಿವೆ.

“ಮಡದಿಯೆನಲಾಗದು ಬಸವಂಗೆ ಎನ್ನನು
ಪುರುಷನೆನಲಾಗದು ಬಸವನೆನಗೆ”
ಎಂದು ಹೇಳುವ ಬಸವಣ್ಣನ ಸತಿ ನೀಲಲೋಚನೆ ಸತಿ-ಪತಿಗಳಿಗೆ ಸಂಬಂಧಿಸಿದ ಸಾಧ್ಯತೆಗಳನ್ನು ಹೆಚ್ಚು ವಿಸ್ತರಿಸಿದ್ದಾಳೆ.

“ಹೊನ್ನು ಬಿಟ್ಟು ಲಿಂಗವನೊಲಿಸಬೇಕೆಂಬರು
ಹೊನ್ನಿಂಗೆಯೂ ಲಿಂಗಕ್ಕೆಯೂ ವಿರುದ್ಧವೆ?
ಹೆಣ್ಣು ಬಿಟ್ಟು ಲಿಂಗವನೊಲಿಸಬೇಕೆಂಬರು
ಹೆಣ್ಣೆಂಗೆಯೂ ಲಿಂಗಕ್ಕೆಯೂ ವಿರುದ್ಧವೆ?”

- (ಸ.ವ.ಸಂ.5,ವ-771)

ಎಂದು ಪ್ರಶ್ನಿಸುವ ಗಜೇಶಮಸಣಯ್ಯಗಳ ಪುಣ್ಯಸ್ತ್ರೀಯ ಈ ವಚನದಲ್ಲಿ ಮಹಿಳೆಗೆ ಸಂಬಂಧಿಸಿದಂತೆ ಮುಖ್ಯವಾದ ವಿಷಯವಡಕವಾಗಿದೆ. ಹೆಣ್ಣು-ಹೊನ್ನು-ಮಣ್ಣುಗಳನ್ನು ಬಿಟ್ಟು ಲಿಂಗವನೊಲಿಸಬೇಕೆಂದು ಹೇಳುವವರನ್ನು ನೇರವಾಗಿ ಪ್ರಶ್ನಿಸಿದ ಈ ವಚನಕಾರ್ತಿ ಇವುಗಳನ್ನು ಬಿಟ್ಟರೆ ಲಿಂಗವೇ ಇಲ್ಲವೆಂದು ಸ್ಪಷ್ಟಪಡಿಸುವುದರ ಮೂಲಕ ಹೆಣ್ಣಿನ ಎತ್ತರವನ್ನು ಪ್ರಕಟಿಸಿದ್ದಾಳೆ.

ಇಷ್ಟೆಲ್ಲಾ ವಚನಕಾರ್ತಿಯರು ಧಾರ್ಮಿಕ ಸಾಮಾಜಿಕ ಕ್ಷೇತ್ರದಲ್ಲಿ ಇಷ್ಟೊಂದು ಎತ್ತರಕ್ಕೆ ಏರಲು ಆ ಕಾಲದ ಶರಣರು ಮುಖ್ಯ ಕಾರಣರಾಗಿದ್ದಾರೆ. ಬಸವಣ್ಣ ಮುಂತಾದ ವಚನಕಾರರು ಎಲ್ಲ ಕ್ಷೇತ್ರಗಳಲ್ಲೂ ಮಹಿಳೆ ಸ್ವತಂತ್ರವಾಗಿ ಬೆಳೆಯುವ ಸಾಧ್ಯತೆಯನ್ನು ಹೆಚ್ಚಿಸಿದ್ದಾರೆ. ಹೀಗೆ ಮಹಿಳೆಯರು ಸಾಂಸ್ಕøತಿಕವಾಗಿ ಬೆಳೆದುನಿಂತಿರುವುದು ಚರಿತ್ರೆಯ ಬಹುಮುಖ್ಯ ಸಂಗತಿಯಾಗುತ್ತದೆ.

ಹೆಣ್ಣನ್ನು ಭಾರತೀಯ ಸಂಸ್ಕೃತಿಯಲ್ಲಿ ಎರಡು ಅತಿಗಳ ಮೂಲಕ ಕಾಣಲಾಗಿದೆ. ಹೆಣ್ಣು ಇಲ್ಲಿ ದೇವತೆಯಾಗಿದ್ದಾಳೆ. ಇಲ್ಲವೆ ರಾಕ್ಷಸಿಯಾಗಿದ್ದಾಳೆ. ಇವೆರಡೂ ಭಯಕ್ಕೆ ಮೂಲವಾಗಿರುವುದರಿಂದ ಹೆಣ್ಣು ಇಲ್ಲಿ ಭಯದ ಮೂಲವಾಗಿದ್ದಾಳೆ. ಇವೆರಡು ಅತಿಗಳನ್ನು ಮೀರಿ ಹೆಣ್ಣನ್ನು ಇಲ್ಲಿ ಹೆಣ್ಣಾಗಿ ಕಂಡಿರುವ ಸಂದರ್ಭಗಳು ತೀರ ಅಪರೂಪವಾಗಿವೆ. 12ನೇ ಶತಮಾನದ ವಚನಕಾರರು ಮಾತ್ರ ಹೆಣ್ನನ್ನು ಹೆಣ್ಣಾಗಿ ಕಂಡಿದ್ದಾರೆ. ತಾಯಿಯೆಂದು ಗೌರವಿಸಿದ್ದಾರೆ. ಮಾತೆಯೆಂದು ನಮಿಸಿದ್ದಾರೆ, ಸತಿಯೆಂದು ಸಮಾನ ಸ್ಥಾನ ಕೊಟ್ಟಿದ್ದಾರೆ. ಸನಾತನ ಸಂಸ್ಕøತಿಯಲ್ಲಿ ಹೆಣ್ಣು ಭಯವಾಗಿ ಕಾಡಿದರೆ, ಶರಣಸಂಸ್ಕøತಿಯಲ್ಲಿ ಹೆಣ್ಣು ಮನುಷ್ಯಳಾಗಿ ಎತ್ತರದ ಸ್ಥಾನವನ್ನು ತಲುಪಿದ್ದಾಳೆ. ಶತಮಾನಗಳಿಂದ ಆಧ್ಯಾತ್ಮ ಕ್ಷೇತ್ರಕ್ಕೆ ಅಪರಿಚಿತಳಾದ ಹೆಣ್ಣು ಇಲ್ಲಿ ಅನುಭವಮಂಟಪದ ಸಾಧಕಳಾಗಿದ್ದಾಳೆ. ಧಾರ್ಮಿಕ ಕ್ಷೇತ್ರದಿಂದ ಅಸ್ಪೃಶ್ಯಳಾದ ಹೆಣ್ಣು ಇಲ್ಲಿ ಉನ್ನತಮಟ್ಟದ ಕೇಂದ್ರವಾಗಿದ್ದಾಳೆ. ಧಾರ್ಮಿಕ ಕ್ಷೇತ್ರದಿಂದ ಅಸ್ಪøಶ್ಯಳಾದ, ಹೆಣ್ಣು ಇಲ್ಲಿ ಅನುಭವಮಂಟಪದ ಪ್ರಮುಖ ಅಂಗವಾಗಿದ್ದಾಳೆ. ದಾಂಪತ್ಯಸುಖದಿಂದ ವಂಚಿತಳಾದ ಹೆಣ್ಣು ಇಲ್ಲಿ ಸಂತೃಪ್ತಿಯ ಜೀವನ ನಡೆಸಿದ್ದಾಳೆ. ಶತಮಾನಗಳಿಂದ ಅದೃಶ್ಯಳಾದ ಹೆಣ್ಣು ಇಲ್ಲಿ ಮುಂಚೂಣಿಯಲ್ಲಿ ನಿಂತಿದ್ದಾಳೆ. ಸಾಮಾಜಿಕವಾಗಿ ಮೌನವಾಗಿದ್ದ ಹೆಣ್ಣು ಇಲ್ಲಿ ಮನದೆರೆದು ಮಾತನಾಡಿದ್ದಾಳೆ. ಅಸಮಾನತೆಯ ವ್ಯವಸ್ಥೆಯನ್ನು ಪ್ರತಿಭಟಿಸಿದ್ದಾಳೆ. ಪತಿಯ ಗುಲಾಮಳಾಗಿದ್ದ ಹೆಣ್ಣು ಇಲ್ಲಿ ಪತಿ, ತಪ್ಪಿ ನಡೆದಾಗ ತಿದ್ದಿ ಮುನ್ನಡೆಸಿದ ಮಾರ್ಗದರ್ಶಕಳಾಗಿದ್ದಾಳೆ. ಹೀಗೆ ವಚನಸಂಸ್ಕøತಿಯಲ್ಲಿ ಹೆಣ್ಣು ಮಾಯೆಗೆ ಬದಲಾಗಿ ಮಾತೆಯಾಗಿದ್ದಾಳೆ. ಭವಿಗೆ ಬದಲಾಗಿ ಭಕ್ತೆಯಾಗಿದ್ದಾಳೆ. ಅಬಲೆಗೆ ಬದಲಾಗಿ ಸಬಲೆಯಾಗಿದ್ದಾಳೆ. ದಾಸಿಗೆ ಬದಲಾಗಿ ಸಂಗಾತಿಯಾಗಿದ್ದಾಳೆ. ಗುಲಾಮಳಿಗೆ ಬದಲಾಗಿ ಮಾನವಳಾಗಿದ್ದಾಳೆ. ಮಹಿಳೆಗೆ ಯಾವ ಧರ್ಮದಲ್ಲೂ ಸಿಗಲಾರದ ಸಮಾನ ಸ್ಥಾನಮಾನಗಳು ಶರಣಧರ್ಮದಲ್ಲಿ ದೊರಕಿವೆ. ಯಾವ ಕಾಲಕ್ಕೂ ಸಿಕ್ಕಿರದ ಗೌರವ 12ನೇ ಶತಮಾನದ ವಚನಚಳವಳಿಯ ಸಂದರ್ಭದಲ್ಲಿ ಸಿಕ್ಕಿದೆ. ಹೀಗಾಗಿ ವಚನಚಳವಳಿ ಮಹಿಳೆಯರ ಬದುಕಿಗೆ ಒಂದು ಹೊಸ ಆಯಾಮ ನೀಡಿದೆ.

5. ಮುಖ್ಯಾಂಶಗಳು
1. ಸಾಮಾಜಿಕನ್ಯಾಯವೆಂಬುದು ಶರಣರ ಸಮಾನತೆಯ ಸಿದ್ಧಾಂತವಾಗಿದ್ದು ವರ್ಣಸಮಾನತೆ-ವರ್ಗಸಮಾನತೆ-ಲಿಂಗಸಮಾನತೆಯನ್ನು ತಂದ ಶ್ರೇಯಸ್ಸು ಶರಣರದಾಗಿದೆ.
2. ಚಾತುರ್ವರ್ಣ ವ್ಯವಸ್ಥೆಯನ್ನು ವಿರೋಧಿಸಿದ ಶರಣರು ಅಸ್ಪøಶ್ಯರಿಗೆ, ದಲಿತರಿಗೆ ದನಿಯಾಗಿದ್ದಾರೆ.
3. ಮಾದಾರ ಚೆನ್ನಯ್ಯನನ್ನು ಗೋತ್ರಪುರುಷನೆಂದು ಕರೆದಿರುವುದು, ಅಸ್ಪøಶ್ಯರ ಕೀಳರಿಮೆಯನ್ನು ಕಿತ್ತೊಗೆಯುತ್ತದೆ.
4. ಕುಲ ಹದಿನೆಂಟು ಜಾತಿಗಳು ಒಂದೇ ಎಂದು ಸಾರಿದ ಶರಣರು, ಮನುಷ್ಯನಿಗೆ ಹುಟ್ಟು ಮುಖ್ಯವಲ್ಲ ಸಾಧನೆ ಮುಖ್ಯವೆಂದು ಹೇಳಿದ್ದಾರೆ.
5. ದಲಿತರ ಆಹಾರಪದ್ಧತಿಯ ಬಗೆಗೆ ಶರಣರಲ್ಲಿ ಗೌರವವಿದೆ.
6. ಮಧುವರಸನ ಮಗಳನ್ನು ಹರಳಯ್ಯನ ಮಗನೊಂದಿಗೆ ಮದುವೆ ಮಾಡಿಸಿದ್ದು ಶರಣರು ಮಾಡಿದ ದೊಡ್ಡ ಕ್ರಾಂತಿಯಾಗಿದೆ.
7. ಅಸ್ಪøಶ್ಯ-ಕೆಳಜಾತಿಗಳಿಂದ ಬಂದವರು ಶರಣರಾದದ್ದು, ವಚನಗಳನ್ನು ರಚಿಸಿದ್ದು, ಅನುಭವಮಂಟಪದಲ್ಲಿ ಭಾಗವಹಿಸಿದ್ದು ಚಾರಿತ್ರಿಕ ದಾಖಲೆಯಾಗಿದೆ.
8. ವೇಶ್ಯಯರು ಪುಣ್ಯಸ್ತ್ರೀಗಳಾಗಿ ಬೆಳೆದು ಶರಣೆಯರಾಗಿ ವಚನ ರಚಿಸಿದ್ದು, ಆಧ್ಯಾತ್ಮದೆತ್ತರಕ್ಕೇರಿದ್ದು ಭಾರತದಲ್ಲಿಯೇ ಮೊದಲ ಪ್ರಯತ್ನವಾಗಿದೆ.
9. ಅರಸೊತ್ತಿಗೆಯೆಂಬುದು ಪ್ರಜೆಗಳ ಪರವಾಗಿರಬೇಕೆಂದು ಹೇಳಿದ ಶರಣರು, ಅಹಂಭಾವದ ಅರಸನಿಗಿಂತ ಅಂತಃಕರಣದ ಭಕ್ತರೇ ದೊಡ್ಡವರೆಂದು ಹೇಳಿದ್ದಾರೆ.
10. ಶರಣರು, ದೃಷ್ಟಿಯಲ್ಲಿ ರಾಜ ಮತ್ತು ರಾಜಾಡಳಿತವೆಂಬುದು ಒಂದು ಮಾಧ್ಯಮವಾಗಿದೆ.
11. ಸಿರಿಗರಬಡಿದ ಶ್ರೀಮಂತರಿಗಿಂತ, ವಿನಯಸಂಪನ್ನರಾದ ಬಡವರೇ ಲೇಸೆಂದು ಹೇಳಿದ್ದಾರೆ.
12. ಹೆಣ್ಣು ಮಾಯೆಯಲ್ಲ, ಮನದ ಮುಂದಣ ಆಸೆಯೇ ಮಾಯೆಯೆಂದು ಹೇಳಿದ್ದಾರೆ.
13. ಶತಮಾನಗಳಿಂದ ಶೋಷಣೆಯಾಗಿದ್ದ ಸ್ತ್ರೀಗೆ ಸಮಾನತೆಯ ಸ್ಥಾನ ನೀಡಿದ್ದಾರೆ.
14. ಲಿಂಗರಾಜಕಾರಣದ ಹುನ್ನಾರಗಳನ್ನು ತಿಳಿಸಿ, ಮಹಿಳೆಯರಲ್ಲಿ ಜಾಗೃತಿಯನ್ನುಂಟು ಮಾಡಿ ಮಹಾಸಾಧಕಿಯರು ಬೆಳೆದುನಿಲ್ಲಲು ಕಾರಣರಾಗಿದ್ದಾರೆ.
15. ಸತಿ-ಪತಿಗಳೊಂದಾದ ಭಕ್ತಿ ಹಿತವಪ್ಪುದು ಶಿವಂಗೆ ಎಂದು ಹೇಳಿ ಮಹಿಳಾ ಸಮಾನತೆಗೆ ಕಾರಣರಾಗಿದ್ದಾರೆ.
16. “ಹೆಣ್ಣು ಸಾಕ್ಷತ್ ಕಪಿಲಸಿದ್ಧ ಮಲ್ಲಿಕಾರ್ಜುನ” ಎಂದು ಹೇಳುತ್ತಾ ಹೆಣ್ಣುಮಕ್ಕಳಿಗೆ ಗೌರವಸ್ಥಾನ ನೀಡಿದ್ದಾರೆ.

ಈ ಅಂಕಣದ ಹಿಂದಿನ ಬರಹಗಳು:
ಹೆಣ್ಣು ಮಾಯೆಯಲ್ಲ… ಜನಿತಕ್ಕೆ ತಾಯಾಗಿ ಹೆತ್ತಳು ಮಾಯೆ
ಹೆಣ್ಣಿನ ಸಮಾನತೆಗೆ ಮಿಡಿದ ವಚನ ಚಳವಳಿ
ಶರಣರ ಸಮಾನತೆ ಹಾದಿಯಲ್ಲಿ ಶ್ರಮಜೀವಿಗಳ ಸಮೂಹವೇ ಹಾಲಹಳ್ಳ
ಶರಣರ ಅಂತಃಕರಣದಲ್ಲಿ ಸಮ ಸಮಾಜದ ಕನಸು
ವಚನಕಾರರು ಮತ್ತು ಜಾತಿ ವಿರೋಧಿ ಹೋರಾಟ
ವರ್ಣವ್ಯವಸ್ಥೆಯ ವಿರುದ್ಧ ಶರಣರ ದನಿ
ಅಸಮಾನತೆಯ ವಿರುದ್ಧದ ಚಳವಳಿಯಾದ ಬಸವಧರ್ಮ
ಶರಣರ ದಾಸೋಹ ತತ್ವ - ಹಲವು ಆಯಾಮಗಳು
ಆಚಾರವೇ ಲಿಂಗವಾಗುವ,, ಅನುಭಾವವೇ ಜಂಗಮವಾಗುವ ನಿಜ ದಾಸೋಹ
ಶರಣರ ಪಾಲಿಗೆ ಕಡ್ಡಾಯ ಮಾತ್ರವಾಗಿರದೆ, ಕೈಲಾಸವೂ ಆಗಿದ್ದ ಕಾಯಕ
ಕಾಯಕವೇ ನಿಜ ವ್ರತವೆಂದು ನಂಬಿದ್ದ ಶರಣರು
ಶರಣರ ಕಾಲದ ಮನರಂಜನೆಯ ಕಾಯಕಗಳು
ಶರಣರ ಕಾಲದಲ್ಲಿ ಕಾಯಕಕ್ಕೆ ಬಂದ ಹೊಸ ಆಯಾಮ

ಎಲ್ಲರ ದುಡಿಮೆಗೂ ಗೌರವ ನೀಡಿದ್ದ ವಚನ ಚಳವಳಿ
ವೃತ್ತಿಪ್ರತಿಮೆಯು ಆಧ್ಯಾತ್ಮದ ಪರಿಭಾಷೆಯಾಗುವ ಪರಿ
ಶರಣರ ಕಾಯಕ ಮೀಮಾಂಸೆ: ಸಮಾನತೆಯೆಡೆಗಿನ ಅಸ್ತ್ರ
ಶರಣರ ಸಾಮಾಜಿಕ ಸಿದ್ಧಾಂತವಾದ ‘ಕಾಯಕ’ದ ಉದ್ದೇಶ
ಶರಣರ ಸಾಮಾಜಿಕ ಸಿದ್ಧಾಂತ ‘ಕಾಯಕ’ದ ಮಹತ್ವ
ಷಟ್‍ಸ್ಥಲಗಳ ರೂಪ-ಸ್ವರೂಪ
ಶರಣಧರ್ಮದಲ್ಲಿ ‘ಐಕ್ಯಸ್ಥಲ’ದ ಮಹತ್ವ

ಶರಣಧರ್ಮದಲ್ಲಿ ‘ಪ್ರಸಾದಿಸ್ಥಲ’ದ ಮಹತ್ವ
ಶರಣಧರ್ಮದಲ್ಲಿ ‘ಗಣಾಚಾರ’ದ ಮಹತ್ವ
ಶರಣಧರ್ಮದಲ್ಲಿ ‘ಮಹೇಶ್ವರಸ್ಥಲ’
ಶರಣಧರ್ಮದಲ್ಲಿ ‘ಭಕ್ತಸ್ಥಲ’ ಮಹತ್ವ
ಶರಣಧರ್ಮದಲ್ಲಿ ‘ಷಟ್‍ ಸ್ಥಲಗಳ’ ಮಹತ್ವ
ಶರಣಧರ್ಮದಲ್ಲಿ ‘ಭೃತ್ಯಾಚಾರ’ದ ಮಹತ್ವ
ಶರಣಧರ್ಮದಲ್ಲಿ ‘ಶಿವಾಚಾರ’ದ ಮಹತ್ವ
ಶರಣಧರ್ಮದಲ್ಲಿ 'ಸದಾಚಾರ'ದ ಮಹತ್ವ
ಶರಣಧರ್ಮದ ಪ್ರಾಣ ಪಂಚಾಚಾರಗಳು
ಅಷ್ಟಾವರಣಗಳ ತೌಲನಿಕ ವಿವೇಚನೆ
ಅಷ್ಟಾವರಣಗಳಲ್ಲಿ ಪಾದೋದಕ, ಪ್ರಸಾದ ಹಾಗೂ ಮಂತ್ರಗಳ ಮಹತ್ವ
ಶರಣ ಧರ್ಮದ ತಾತ್ವಿಕ ನೆಲೆಗಳು
ಶರಣರ ದೇವಾಲಯ
ಶರಣರ ದೇವರು
ಶರಣರ ಧರ್ಮ
ಶರಣರ ವಚನಗಳಲ್ಲಿ ‘ಬಸವಧರ್ಮ’ದ ನೀತಿ ಸಂಹಿತೆಗಳು

MORE NEWS

ಪರಿಘಾಸನ ಮತ್ತು ಅರ್ಧ ಚಕ್ರಾಸನ 

16-04-2024 ಬೆಂಗಳೂರು

"ಪರಿಘಾಸನ ಆಸನವು ) ಪಿತ್ತ ಜನಕಾಂಗ ಮತ್ತು ಮೇದೋಜೀರಕ ಚೈತನ್ಯಗೊಳ್ಳುವಂತೆ ಮಾಡುತ್ತದೆ. ಹಾಗೆಯೇ ‘ಅರ್ಧ ಚಕ್...

ಲೋಕಸಭಾ ಚುನಾವಣೆಗಳ ಸುತ್ತಮುತ್ತ ಒಂದು ಸುತ್ತು

15-04-2024 ಬೆಂಗಳೂರು

"ಪರಸ್ಪರ ರೋಚಕ ನಿಂದನೆಗಳು. ಕ್ಷೇತ್ರವಾರು ಚಕ್ಕರಗುಳ್ಳಿ ಇಡುವ ಚತುರ ವಿವರಗಳು. ಹೊಸ ಹೊಸ ಬೈಗುಳಗಳು. ಮಾಧ್ಯಮಗಳಿಗ...

ಉಪವಿಷ್ಟಕೋನಾಸನ ಮತ್ತು ಪವನಮುಕ್ತಾಸನ

09-04-2024 ಬೆಂಗಳೂರು

"ಉಪವಿಷ್ಟಕೋನಾಸನ ಯೋಗಾಸನವು ಮನಸ್ಸನ್ನು ಶಾಂತಗೊಳಿಸುತ್ತದೆ ಮತ್ತು ಮಾಂಸಗಳ ತೂಕವನ್ನು ಕಡಿಮೆಗೊಳಿಸುತ್ತದೆ. ಪವನಮು...