ಮಹಿಳೆಯರ ಹಕ್ಕುಗಳು ಮತ್ತು ಸಂವಿಧಾನ ಕಟ್ಟುವಿಕೆ : ಒಂದು ನೋಟ

Date: 15-10-2021

Location: ಬೆಂಗಳೂರು


‘ಇಂದು ಮಹಿಳಾ ಹಕ್ಕುಗಳ ಗುರುತಿಸುವಿಕೆಗೆ ಮೂಲ ಶಕ್ತಿ ಎಂದೇ ಹೇಳಬಹುದಾದ ಅನುಚ್ಛೇದ 15 (3)[ii] ರ ಚರ್ಚೆ ಸೋಜಿಗ ಎಂದೇ ಹೇಳಬಹುದು’ ಎನ್ನುತ್ತಾರೆ ವಕೀಲರಾದ ಮೈತ್ರೇಯಿ ಹೆಗಡೆ. ಅವರ ಅವಳ ಕಾನೂನು ಅಂಕಣದಲ್ಲಿ ಮೊದಲ ಬಾರಿಗೆ ಮಹಿಳೆಯರ ಹಕ್ಕುಗಳು ಮತ್ತು ಸಂವಿಧಾನ ಕಟ್ಟುವಿಕೆಯ ಕುರಿತು ವಿಶ್ಲೇಷಿಸಿದ್ದಾರೆ.

ಸಂವಿಧಾನದ ರಚನೆ ಅನ್ನೋದು ಭಾರತದ ಮಟ್ಟಿಗೆ ರಾಜಕೀಯವಾಗಿ ಮತ್ತು ಕಾನೂನಿನ ದೃಷ್ಟಿಯಲ್ಲಿ ಒಂದು ಹೊಸ ಹುಟ್ಟು. ಎಲ್ಲವನ್ನೂ ಹೊಸತಾಗಿ ಶುರು ಮಾಡಲು ದೇಶಕ್ಕೆ ಸಿಕ್ಕ ಒಂದು ಚಿನ್ನದ ಅವಕಾಶ. ಇನ್ನೇನು ನಮಗೆ ನಾವೇ ದೊರೆಗಳು, ಬ್ರಿಟಿಷ್ ಆಡಳಿತದಲ್ಲಾದ ಅನ್ಯಾಯಕ್ಕೆ, ಅಸಮಾನತೆಗೆ ಇತಿಶ್ರೀ ಹಾಡಲಿದ್ದೇವೆ ಎಂದು ಎಲ್ಲರೂ ಸಂಭ್ರಮಪಟ್ಟ ಸಂದರ್ಭ. ಅಂತಹ ಅದಮ್ಯವಾದ ಸಂತೋಷ ಮತ್ತು ಹೆಮ್ಮೆಯನ್ನು ಸಂವಿಧಾನ ರಚನೆಯ ಸಂದರ್ಭದಲ್ಲೂ ಅಡಿಗಡಿಗೆ ಕಾಣಬಹುದು. ಸಂವಿಧಾನ ಕಟ್ಟುವಾಗ, ಆ ಸಂತಸದೊಂದಿಗೇ ಎಲ್ಲ ಅಸಮಾನತೆಗಳನ್ನು ಹೋಗಲಾಡಿಸುವ ಯತ್ನವಾಗುತ್ತದೆ. ಅಂತಹ ಅಸಮಾನತೆಯನ್ನು ಎಲ್ಲ ರಂಗಗಳಲ್ಲಿ ಶತಮಾನಗಳಿಂದ ಅನುಭವಿಸಿದ ಒಂದು ಗುಂಪು ಮಹಿಳೆಯರದು. ಮಹಿಳೆಯರೆಲ್ಲರೂ ಒಂದೇ ರೀತಿ ಕಷ್ಟ ಅನುಭವಿಸಿದರು ಎನ್ನಲಾಗದಿದ್ದರೂ, ಒಟ್ಟಾರೆಯಾಗಿ ಹಲವು ಕ್ಷೇತ್ರಗಳಲ್ಲಿ ಮಹಿಳೆಯರು ಹಿನ್ನಡೆ ಅನುಭವಿಸಿದ್ದಾರೆ. ಇದು ಭಾರತ ಮಾತ್ರವಲ್ಲ, ಮುಂದುವರಿದ ರಾಷ್ಟ್ರಗಳೂ ಒಳಗೊಂಡು ಜಗತ್ತಿನ ಹಲವು ದೇಶಗಳ ವಿಚಾರದಲ್ಲಿ ಇದು ನಿಜ. ಭಾರತದ ಸಂವಿಧಾನ ರಚನಾಕಾರರಲ್ಲಿ ಈ ಬಗ್ಗೆ ಇದ್ದ ವಿಚಾರಗಳನ್ನು ಇಣುಕಿ ನೋಡುವ ಪ್ರಯತ್ನ ಈ ಲೇಖನ.

ಇಡೀ ಸಂವಿಧಾನ ರಚನಾ ಸಭೆಯ ಚರ್ಚೆಗಳನ್ನು ಮಹಿಳೆಯರ ಬಗ್ಗೆ ಇಲ್ಲವೇ ಲಿಂಗ ತಾರತಮ್ಯದ ಬಗ್ಗೆ ಎಲ್ಲೆಲ್ಲಿ ಚರ್ಚೆಯಾಗಿದೆ ಎಂಬುದನ್ನು ಹುಡುಕಿ ಕಲೆಹಾಕಿದಾಗ ಮುಖ್ಯವಾಗಿ ಕಂಡಿದ್ದು ಮೂರು ವಿಚಾರಗಳು. ಮೊದಲನೆಯದೆಂದರೆ, ಸಭೆಯಲ್ಲಾದ ಒಟ್ಟೂ ಚರ್ಚೆಯನ್ನು ನೋಡಿದರೆ ಬಹಳ ಕಡಿಮೆ ಪ್ರಮಾಣದಲ್ಲಿ ಮಹಿಳೆಯರ ಭಾಗವಹಿಸುವಿಕೆ. ಎರಡನೆಯದಾಗಿ, ಸಂವಿಧಾನ ರಚನೆಯಾದ ಮರುದಿನದಿಂದಲೇ ಮಹಿಳೆಯರಿಗೆಲ್ಲ ಸಮಾನತೆ ದೊರಕುತ್ತದೆ ಎಂಬ ಅತಿವಿಶ್ವಾಸದ ಛಾಯೆ. ಮೂರನೆಯದಾಗಿ, ಕೆಲ ಸಂವಿಧಾನ ರಚನಾಕಾರರಿಗೆ ಇದ್ದ ಮಹಿಳೆಯರ ಬಗೆಗಿದ್ದ ಸಂಕುಚಿತ ಅಭಿಪ್ರಾಯಗಳು. ಈ ಮೂರೂ ವಿಚಾರಗಳನ್ನು ಸ್ವಲ್ಪ ವಿವರವಾಗಿ ನೋಡೋಣ.

ಮಹಿಳೆಯರ ಪ್ರಾತಿನಿಧ್ಯ:
ಸಂವಿಧಾನ ರಚನಾ ಸಭೆಯ 389 ಸದಸ್ಯರಲ್ಲಿ ಕೇವಲ ಹದಿನೈದು ಮಹಿಳೆಯರು ಇದ್ದು, ಅವರಲ್ಲಿ ಕೇವಲ ಹತ್ತು ಜನರು ಮಾತ್ರ ಚರ್ಚೆಯಲ್ಲಿ ಭಾಗವಹಿಸುತ್ತಾರೆ. ಒಟ್ಟೂ ಚರ್ಚೆಯ ಶೇಕಡಾ 2 ರಷ್ಟು ಮಾತ್ರ ಮಹಿಳೆಯರ ಪಾತ್ರ. ಅತಿ ಹೆಚ್ಚಿನದಾಗಿ ಮಾತನಾಡಿದವರು ಶ್ರೀಮತಿ ಜಿ. ದುರ್ಗಾಬಾಯಿ ಮತ್ತು ಅತಿ ಕಡಿಮೆ ಮಾತನಾಡಿದವರು ಶ್ರೀಮತಿ ಅಮ್ಮು ಸ್ವಾಮಿನಾಥನ್ ಅವರು.[i] ಇದು ಯಾಕೆ ಮಹಿಳೆಯರ ಹಕ್ಕುಗಳ ಬಗೆಗೆ ಆಗುವ ಚರ್ಚೆಗಳು ಮೊಟಕಾಗಿದೆ ಎಂಬುದಕ್ಕೆ ಉತ್ತರವೂ ಆಗಿರಬಹುದು.

ಮಹಿಳಾ ಸಮಾನತೆಯ ಬಗೆಗಿನ ಅತಿಯಾದ ಆತ್ಮವಿಶ್ವಾಸ:
ಇಂದು ಮಹಿಳಾ ಹಕ್ಕುಗಳ ಗುರುತಿಸುವಿಕೆಗೆ ಮೂಲ ಶಕ್ತಿ ಎಂದೇ ಹೇಳಬಹುದಾದ ಅನುಚ್ಛೇದ 15 (3)[ii] ರ ಚರ್ಚೆ ಸೋಜಿಗ ಎಂದೇ ಹೇಳಬಹುದು. ಆ ಸಂದರ್ಭದಲ್ಲಿ, ಶ್ರೀ ಸರ್ದಾರ್ ವಲ್ಲಭಾಯಿ ಪಟೇಲ್ ಅವರು, ಅಸಮಾನತೆಯನ್ನು ಹೋಗಲಾಡಿಸಬೇಕು ಎಂಬುದು ಸಂವಿಧಾನದ ಆಶಯವಾದರೂ ದೇಶದ ಪರಿಸ್ಥಿತಿಯನ್ನು ಪರಿಗಣಿಸಿ, ಮಹಿಳೆಯರಿಗೆ ಮತ್ತು ಮಕ್ಕಳಿಗೆ ವಿಶೇಷ ಸವಲತ್ತುಗಳನ್ನು ಕೊಡಲು ಅವಕಾಶ ಕಲ್ಪಿಸುವುದು ಅನಿವಾರ್ಯವಾಗಿದೆ ಎಂದು ಒಂದೇ ವಾಕ್ಯದಲ್ಲಿ ಹೇಳಿ ಮುಗಿಸುತ್ತಾರೆ.[iii] ಈ ವಿಶೇಷ ಸವಲತ್ತುಗಳು ಎಂದರೇನು? ಅವುಗಳಿಗೆ ಮಿತಿ ಇರಬೇಕೆ, ಇದ್ದರೆ ಎಂತಹುದಿರಬೇಕು ಎಂಬ ಚರ್ಚೆ ಕಾಣುವುದಿಲ್ಲ. ಮಹಿಳೆಯರ ಸಮಸ್ಯೆ ಚರ್ಚೆಯಾಗಿದ್ದು ಅಂತ ಹೇಳುವುದಾದರೆ ದೇವದಾಸಿ ಪದ್ಧತಿ ಅಥವಾ ಮಾನವ ಸಾಗಣೆ ಇಂತಹ ವಿಚಾರಗಳು,[iv] ಅದೂ ಈ ಅನುಚ್ಛೇದದ ಸಂದರ್ಭದಲ್ಲಲ್ಲ. ಇಂತದೊಂದು ಚರ್ಚೆ ಇಲ್ಲದಿರುವುದು ಮಹಿಳೆಯರ ಸಮಸ್ಯೆಗಳಿಗೆ ಹೇಗೆ ಸಂವಿಧಾನ ಉತ್ತರವಾಗಬೇಕು ಎಂಬ ಪರಿಕಲ್ಪನೆಯ ಬಗ್ಗೆ ನಮ್ಮ ರಚನಾಕಾರರಿಗೆ ಇದ್ದ ಅಸ್ಪಷ್ಟತೆಯನ್ನು ಸೂಚಿಸುತ್ತದೆ. ಅಥವಾ ಆ ಸಮಸ್ಯೆಗಳು ಸಂವಿಧಾನದಿಂದ ತಾನಾಗಿಯೇ ಪರಿಹಾರವಾಗುತ್ತದೆ ಎಂಬ ನಂಬಿಕೆಯೂ ಇರಬಹುದು. ಅಥವಾ ಮಹಿಳೆಯರ ಸಮಸ್ಯೆಗಳು ಅಂದು ಅಷ್ಟು ಪ್ರಾಮುಖ್ಯತೆಯನ್ನು ಹೊಂದಿರದ ಕಾಲವಾಗಿತ್ತೇನೋ.

ಅಲ್ಲದೆ, ಮಹಿಳೆಯರಿಗೆ ಸಂಸತ್ತಿನಲ್ಲಿ ಮೀಸಲಾತಿ ಬೇಡವೇ ಬೇಡವೆಂದು ಒಕ್ಕೊರಲಿನಿಂದ ಹೇಳಿದ ಮಹಿಳಾ ಪ್ರತಿನಿಧಿಗಳು ಅದನ್ನೊಂದು ಹೆಮ್ಮೆಯ ಸಂಕೇತವಾಗಿಸಿದ್ದರು. ಶ್ರೀಮತಿ ರೇಣುಕಾ ರೇ ಅವರು "ಯಾವಾಗ ದೇಶದ ಸ್ವಾತಂತ್ರ್ಯಕ್ಕಾಗಿ ಕಷ್ಟಪಟ್ಟು ಹೋರಾಡಿದ ಪುರುಷರು ಅಧಿಕಾರಕ್ಕೆ ಬರುತ್ತಾರೆಯೋ, ಆಗ ಮಹಿಳೆಯರಿಗೆ ಸ್ವಾತಂತ್ರ್ಯ ಮತ್ತು ಅವರ ಹಕ್ಕುಗಳು ದೊರಕಿಯೇ ದೊರಕುತ್ತವೆ. ಅದರ ಪುರಾವೆ ನಮಗೀಗಲೇ ದೊರೆತಿದೆ. ವಿಜಯಲಕ್ಷ್ಮಿ ಪಂಡಿತ್ ಅವರನ್ನು ದೇಶದ ರಾಯಭಾರಿಯಾಗಿ ನೇಮಿಸಲು ಪುರುಷರಿಗೆ ಯಾವುದೇ ಮೀಸಲಾತಿಯ ಆಮಿಷವನ್ನು ಒಡ್ಡಬೇಕಾಗಿ ಬರಲಿಲ್ಲ... ಅವರು ಮಹಿಳೆ ಅನ್ನುವುದು ಅವರ ನೇಮಕಾತಿಗೆ ಯಾವುದೇ ಅಡ್ಡಿಯನ್ನೂ ಮಾಡಲಿಲ್ಲ... ಅವರ ಸಾಮರ್ಥ್ಯದಿಂದಲೇ ಅವರಿಗೆ ಜಗತ್ತಿನ ಬಲಶಾಲಿಯಾದ ಶಕ್ತಿಗಳಲ್ಲೊಂದಾದ ಈ ಭೂಮಿಯಲ್ಲಿ ಅವರಿಗೆ ಈ ನೇಮಕಾತಿ ದೊರಕಿದೆ. ಇದು ನಮ್ಮ ಸ್ಥಾನವನ್ನು ನಮಗೆ ತೋರಿಸಿಕೊಟ್ಟಿದೆ ಮತ್ತು ಮಹಿಳೆಯರು ಈ ವಿಚಾರಕ್ಕೆ ಹೆಮ್ಮೆ ಪಡುತ್ತಾರೆ. ಮುಂದಿನ ದಿನಗಳಲ್ಲಿ, ಕೇವಲ ಅಪರೂಪವಾದ ಸಾಮರ್ಥ್ಯವಿರುವ ಮಹಿಳೆಯರು ಮಾತ್ರವಲ್ಲ, ಪುರುಷರಿಗೆ ಸಮನಾದ ಸಾಮರ್ಥ್ಯವಿರುವ ಎಲ್ಲ ಮಹಿಳೆಯರಿಗೂ ಜವಾಬ್ದಾರಿಯುತವಾದ ಸ್ಥಾನಗಳು ದೊರಕಲಿವೆ ಎಂಬ ಆತ್ಮವಿಶ್ವಾಸ ನನ್ನದು. ಸಾಮರ್ಥ್ಯವನ್ನು ಮಾತ್ರ ಅಳತೆಗೋಲಾಗಿಸಿದರೆ ಮಾತ್ರ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರಿಗೆ ಮುಂದೆ ಬಂದು ಕೆಲಸ ಮಾಡಲು ಅವಕಾಶಗಳು ಸಿಗುತ್ತವೆ ಎಂದು ನಮಗೆ ಅನ್ನಿಸುತ್ತದೆ." ಎಂದಿದ್ದರು.[v]

ಅದೇ ದಿನದ ಚರ್ಚೆಯಲ್ಲಿ, ಶ್ರೀ ವಲ್ಲಭಾಯಿಯವರು ಅಸ್ಸಾಮಿನ ಜನತೆ ವಿಶೇಷವಾದ ಸವಲತ್ತು ಕೇಳಿದ್ದರ ಕುರಿತು ಮಾತನಾಡುತ್ತಾ, ಮಹಿಳೆಯರು ಮೀಸಲಾತಿ ಕೇಳದೆ ಇರುವುದನ್ನು ಬಹಳವಾಗಿ ಹೊಗಳಿ, ಗಂಡಸರು ಮಹಿಳೆಯರನ್ನು ನೋಡಿ ಕಲಿಯಬೇಕು ಎಂದು ಹೇಳುತ್ತಾರೆ. ಇಲ್ಲಿ ಮತ್ತೊಂದು ಬೇಸರದ ಸಂಗತಿ ಎಂದರೆ, ಅಸ್ಸಾಮಿನ ಸಾಮಾನ್ಯ ಜನತೆಯ ಗುಂಪಿನಲ್ಲಿ ಮಹಿಳೆಯರನ್ನು ಲೆಕ್ಕಿಸದೆ ಇರುವುದು.

ದೇಶದ ಬಾವುಟವನ್ನು ಸ್ವೀಕರಿಸಿದ ದಿನದಂದು ಶ್ರೀಮತಿ ಸರೋಜಿನಿ ನಾಯ್ಡುರವರು ದೇಶದಲ್ಲಿ ಲಿಂಗ ಭೇದವೇ ಇಲ್ಲದ ಸಮಯದತ್ತ ನಾವು ಕಾಲಿಡುತ್ತಿದ್ದೇವೆ ಎಂದೆಂದರು.[vi] ಹೊಸ ಸಂವಿಧಾನದ ಅಡಿಯಲ್ಲಿ, ಇನ್ನು ಅಸಮಾನತೆಗೆ ಅವಕಾಶವಿಲ್ಲ, ಅದಕ್ಕಿಂತ ಇನ್ನೇನು ಸಮಾಧಾನ ಬೇಕು ಎಂಬರ್ಥದಲ್ಲಿ ಶ್ರೀಮತಿ ಬೇಗಂ ಅಜ್ಹೀಜ್ ರಸೂಲ್ ಅವರು ಮಾತಾಡಿದ್ದು ಓದಿದರೆ,[vii] ವಿವರವಾಗಿ ಹೆಣ್ಣು ಎದುರಿಸುವ ಸವಾಲುಗಳ ಬಗ್ಗೆ ಮಾತನಾಡುವುದಕ್ಕಿಂತ, ಎಲ್ಲವೂ ಸರಿಯಾಗುತ್ತದೆ ಎಂಬ ಉಮೇದಿನ ಧಾಟಿಯನ್ನೇ ಎಲ್ಲರೂ ಬಯಸುತ್ತಿದ್ದರು ಅನಿಸುತ್ತದೆ. ಇಪ್ಪತ್ತನೇ ಶತಮಾನದ ಅರ್ಧಕ್ಕೆ ಬಂದಿರುವ ಸಮಯದಲ್ಲಿ ಲಿಂಗದ ಆಧಾರದ ಮೇಲೆ ಇನ್ನು ತಾರತಮ್ಯ ನಡೆಯುತ್ತದೆ ಎಂದು ನನಗನ್ನಿಸುವುದಿಲ್ಲ ಎಂದು ಹೇಳಿದ ಶ್ರೀ ಸೈಯದ್ ಅಬ್ದುಲ್ ರವೂಫ್ ಅವರ ಮಾತುಗಳೂ ಇವೇ ಭಾವವನ್ನು ಧ್ವನಿಸುತ್ತವೆ.[viii]

ಮೇಲೆ ಹೇಳಿದ ಮನೋಭಾವ ಅಂದು ಮಹಿಳಾವಾದವಾಗಲಿ, ಮಹಿಳಾ ಕೇಂದ್ರಿತ ರಾಜಕಾರಣವಾಗಲಿ ಮುಖ್ಯವಾಹಿನಿಗೆ ಬರದೇ ಇರುವುದರಿಂದಲೂ ಆಗಿರಬಹುದು. ಅಷ್ಟೇ ಅಲ್ಲದೆ, ಮಹಿಳೆಯರು ಬೇರೆ ಬೇರೆ ರಾಜಕೀಯ - ಸಾಮಾಜಿಕ ಗುಂಪುಗಳಲ್ಲಿ ಹರಿದು ಹೋಗಿದ್ದು, ಮತ, ಜಾತಿ ಅಥವಾ ಉದ್ಯೋಗ ಆಧಾರಿತ ಗುಂಪುಗಳ ರೀತಿಯಲ್ಲಿ ಸಂಘಟಿತರಾಗಿ, ಅವರದ್ದೇ ಆದ ಒಂದು ಕನಸನ್ನು ಹೊಂದದೆ ಇರುವುದರಿಂದ ಕೂಡಾ ಆಗಿರಬಹುದು. ಹಾಗೆ ನೋಡಿದರೆ, ಇಂದಿಗೂ ಈ ಚಿತ್ರಣ ಒಂದು ಮಟ್ಟಕ್ಕೆ ಹಾಗೆಯೇ ಇದೆ. ಒಬ್ಬ ಶ್ರೀ ರೋಹಿಣಿ ಕುಮಾರ್ ಚೌಧರಿ ಎಂಬುವವರು ಮಾತ್ರ, ಈ ಸಭೆಯಲ್ಲಿರುವ ಮಹಿಳೆಯರಿಗೆ ಗಂಡಸರ ಮೇಲೆ ಇಷ್ಟು ನಂಬಿಕೆ, ಹೊರಗಿರುವ ಮಹಿಳೆಯರಿಗಿಲ್ಲ, ಅವರು ಗಂಡಸರ ಸಾರಥ್ಯದಲ್ಲಿ ನಂಬಿಕೆ ಕಳೆದುಕೊಂಡಿದ್ದಾರೆ, ಹಾಗಾಗಿ ಮಹಿಳೆಯರಿಗೆ ಸಂಸತ್ತಿನಲ್ಲಿ ಮೀಸಲಾತಿ ಕೊಡಬೇಕು ಎಂದು ಆಗ್ರಹಿಸುತ್ತಾರೆ.[ix] ಆದರೆ ಆ ಸಲಹೆಗೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ ಶ್ರೀಮತಿ ರೇಣುಕಾ ರೇ ಅವರು ಭಾರತದ ಮಹಿಳೆಯರು ಎಂದಿಗೂ ಮೀಸಲಾತಿಯನ್ನು ಸಹಿಸುವುದೇ ಇಲ್ಲ ಎಂದು ಘೋಷಿಸಿದರು.[x]

ಸಭೆಯ ಮೊದಲನೇ ಅವಧಿ ಮುಗಿದು, ಎರಡನೇ ಅವಧಿ ಶುರುವಾಗ ಮೊದಲಿದ್ದ ಮಹಿಳೆಯರ ಜಾಗದಲ್ಲಿ, ಮತ್ತೆ ಮಹಿಳೆಯರನ್ನೇನೂ ನೇಮಿಸಿರಲಿಲ್ಲ. ಕನಿಷ್ಠ ಅಷ್ಟು ಖಾತರಿ ಮಹಿಳೆಯರ ಸೀಟುಗಳಿರಬೇಕೆಂದು ಶ್ರೀಮತಿ ಪೂರ್ಣಿಮಾ ಬ್ಯಾನರ್ಜಿಯವರು ಹೇಳಿದ್ದು[xi] ಓದಿದರೆ, ಉಮೇದನ್ನು ಸಾವಕಾಶವಾಗಿ ನಿಜ-ಚಿತ್ರಣ ಆವರಿಸಿಕೊಳ್ಳಲು ಶುರು ಮಾಡಿತು ಎನ್ನಬಹುದೇನೋ. ಶ್ರೀಮತಿ ಪೂರ್ಣಿಮಾರವರ ಚಿಂತೆಗೆ ಶ್ರೀ ಹೆಚ್. ವಿ. ಕಾಮತ್ ರವರು ಸರಕಾರ ನಡೆಸುವುದೆಂದರೆ ಬುದ್ದಿಯ ನಿರ್ಧಾರಗಳಿಗೆ ಮನಸಿನ ನಿರ್ಧಾಗಳಿಗಿಂತ ಹೆಚ್ಚಿನ ಒತ್ತು ಕೊಡಬೇಕಾಗುತ್ತದೆ, ರಾಜಕೀಯ ತತ್ವಶಾಸ್ತ್ರಜ್ಞರ ಅಭಿಪ್ರಾಯದ ಪ್ರಕಾರ ಮಹಿಳೆಯರು ಹೆಚ್ಚು ಮನಸಿನ ಮಾತುಗಳಿಗೆ ಬೆಲೆ ಕೊಡುತ್ತಾರೆ ಎಂದೂ, ಅದಕ್ಕೆ ಹಾಗೆ ಮನಸಿನ ಮಾತುಗಳಿಗೆ ಹೆಚ್ಚಿನ ಬೆಲೆ ಕೊಡುವವರು ಎಷ್ಟು ನಾವು ಬಯಸಿದರೂ ಸರಕಾರ ಕಟ್ಟುವಲ್ಲಿ ಮೇಲೆ ಬರಲಾರರು ಎನ್ನುತ್ತಾರೆ.[xii] ಸಂವಿಧಾನ ಸಭೆಯಲ್ಲಿ ಮಹಿಳೆಯರ ಪ್ರಾತಿನಿಧ್ಯಕ್ಕೆಂದೇ ವಿಶೇಷವಾಗಿ ಬೇರೆ ಏನೂ ಮಾಡಬೇಕಾಗಿಲ್ಲ, ಅಧ್ಯಕ್ಷರು ಎಲ್ಲವನ್ನೂ ಅರ್ಥಮಾಡಿಕೊಂಡು ಹೆಚ್ಚಿನ ಮಹಿಳೆಯರಿಗೆ ಮುಂದಿನ ದಿನಗಳಲ್ಲಿ ಅವಕಾಶ ಕೊಡುತ್ತಾರೆಂಬ ನಂಬಿಕೆ ನನಗಿದೆ ಎಂದು ಡಾ. ಬಿ. ಆರ್ ಅಂಬೇಡ್ಕರ್ ಅವರು ಈ ಚರ್ಚೆಯನ್ನು ಮುಗಿಸುತ್ತಾರೆ.[xiii] ಇಲ್ಲಿಯೂ, ಮಹಿಳೆಯರ ಪ್ರಾತಿನಿಧ್ಯವೆನ್ನುವುದು ತನ್ನಿಂದ ತಾನೇ ಆಗುತ್ತದೆ ಎಂದೂ, ಎಲ್ಲರೂ ಇದರ ಬಗ್ಗೆ ಸಹಜವಾಗಿ ಗಮನ ಕೊಟ್ಟೇ ಕೊಡುತ್ತಾರೆಂಬ ಅತಿಯಾದ ವಿಶ್ವಾಸ ಕಾಣುತ್ತದೆ ಎಂದರೆ ತಪ್ಪಾಗಲಾರದು.

ಮಹಿಳೆಯರ ಬಗೆಗಿನ ಸಂಕುಚಿತ ಅಭಿಪ್ರಾಯಗಳು:
ಬಡತನದಿಂದಾಗಿ ಒಬ್ಬ ವ್ಯಕ್ತಿಯ ವಯಸ್ಸಿಗೆ ಮತ್ತು ಶಕ್ತಿಗೆ ಮೀರಿ ಕೆಲಸ ಮಾಡುವಂತಹ ಸಂದರ್ಭವನ್ನು ಉಂಟು ಮಾಡದಂತೆ ಸರಕಾರದ ನೀತಿಗಳಿರಬೇಕು ಎಂಬ ಚರ್ಚೆ ನಡೆಯುತ್ತಿರಬೇಕಾದರೆ, ಲಿಂಗವನ್ನೂ ವಯಸ್ಸು ಮತ್ತು ಶಕ್ತಿಯ ಜೊತೆಗೆ ಸೇರಿಸಬೇಕು ಎಂದು ಶ್ರೀ ಲಕ್ಷ್ಮೀನಾರಾಯಣ ಸಾಹು ಅವರು ಸೂಚಿಸುತ್ತಾರೆ.[xiv] ಅದಕ್ಕೆ ಅವರು ಕೊಡುವ ಕಾರಣವೆಂದರೆ, ಇಲ್ಲದಿದ್ದರೆ ಮಹಿಳೆಯರು ಹಗಲು - ರಾತ್ರಿಯೆನ್ನದೆ ಗಣಿಗಳಲ್ಲಿ ದುಡಿದು ಅವರ ಕುಟುಂಬ ಜೀವನ ಹಾಳಾಗುತ್ತದೆ ಎಂದು. ಶ್ರೀ ದಾಮೋದರ ಸ್ವರೂಪ ಸೇಥ್ರವರು ಬಾಲ ಕಾರ್ಮಿಕತೆಯ ಕುರಿತು ಮಾತನಾಡುವಾಗ ಮಹಿಳೆಯರನ್ನು 'ತಿಳಿಯಾದ ಮತ್ತು ಮೃದುವಾದ' ಲಿಂಗಿಗಳು ಎಂದು ಕರೆಯುತ್ತಾರೆ.[xv] ಸೇನೆಯಲ್ಲೂ ಮಹಿಳೆಯರನ್ನು ಸೇರಿಸಿಕೊಳ್ಳಬೇಕು ಎಂದು ಕೋರ್ಟು ಹೇಳಿರುವ ಇವತ್ತಿನ ದಿನಗಳಲ್ಲಿ, ಎಲ್ಲ ರೀತಿಯ ಕೆಲಸಗಳನ್ನೂ ಮಾಡುವ ಅವಕಾಶ ಹೆಣ್ಣಿಗೆ ಇರಬೇಕು ಎಂಬ ಸಿದ್ಧಾಂತ ಬೆಳೆದು ಬರುತ್ತಿದೆ. ಅನುಜ್ ಗಾರ್ಗ್ ಕೇಸಿನಲ್ಲಿ ವಿವರಿಸಿದ, 'ಕಾಪಿನ ಹೆಸರಲ್ಲಿ ಕಟ್ಟಳೆ' (Romantic Paternalism) ಎಂಬ ಪರಿಕಲ್ಪನೆಯನ್ನು ಕೋರ್ಟುಗಳು ಇಂದು ಅಸಂವಿಧಾನಿಕವೆಂದು ಹೇಳಿದೆ. ಆಶ್ಚರ್ಯವೆಂದರೆ, ಸಭೆಯ ಹಲವು ಸದಸ್ಯರ ಮಾತುಗಳನ್ನು ಓದಿದಾಗ ಈ ಆಶಯಗಳಿಗೆ ತದ್ವಿರುದ್ಧವಾದ ಮನೋಭಾವ ಕಾಣುತ್ತದೆ. ರೆವರೆಂಡ್ ಜೆರೋಮ್ ಡಿಸೋಜರವರು ಕುಟುಂಬದ ಪಾವಿತ್ರ್ಯತೆಯನ್ನು ಸಂವಿಧಾನ ರಕ್ಷಿಸಬೇಕು ಎಂದು ಹೇಳುತ್ತಾ ಒಂದು ಹೆಣ್ಣಿನ ಪಾತ್ರವನ್ನು ಕುಟುಂಬಕ್ಕೆ ಮೀಸಲಾಗಿಸುವಂತಹ ವಿಚಾರಗಳನ್ನು ಹಂಚಿಕೊಂಡಿದ್ದು ಓದಿದರೆ ಇದು ಇನ್ನೂ ಸ್ಪಷ್ಟವಾಗುತ್ತದೆ.[xvi] ಆದರೆ ಡಿಸೋಜಾರವರ ಆ ಕಲ್ಪನೆ ಅಂತಿಮವಾದ ಸಂವಿಧಾನದಲ್ಲಿ ಜಾಗ ಪಡೆಯಲಿಲ್ಲ.

ಅಸ್ಪೃಶ್ಯತೆಯ ಆಚರಣೆಯನ್ನು ಅಸಂವಿಧಾನವೆಂದು ಹೇಳುವ ಅನುಚ್ಛೇದದ ಚರ್ಚೆಯ ಸಮಯದಲ್ಲಿ ಶ್ರೀ ಕೆ. ಟಿ. ಷಾ ಅವರು ಅಸ್ಪೃಶ್ಯತೆ ಎನ್ನುವುದಕ್ಕೆ ಒಂದು ವ್ಯಾಖ್ಯಾನ ಅತ್ಯಗತ್ಯವೆಂದೂ, ಇಲ್ಲವಾದಲ್ಲಿ ಹಲವಾರು ರೀತಿಯ ಅಸ್ಪೃಶ್ಯತೆಯ ನಡುವೆ ಗೊಂದಲಗಳಾಗುತ್ತವೆ ಎಂದೆನ್ನುತ್ತಾ, "ನಮಗೆಲ್ಲ ಗೊತ್ತು, ಕೆಲ ಸಂದರ್ಭದಲ್ಲಿ ಮಹಿಳೆಯರನ್ನೂ ಅಸ್ಪೃಶ್ಯರು ಎಂದು ಪರಿಗಣಿಸಲಾಗುತ್ತದೆ" ಎಂದರು.[xvii] ನ್ಯಾಯಾಧೀಶರ ವಯಸ್ಸಿನ ಅರ್ಹತೆಯ ಬಗ್ಗೆ ಚರ್ಚೆ ನಡೆಯುವಾಗ ಶ್ರೀ ರೋಹಿಣಿ ಕುಮಾರ್ ಚೌಧರಿಯವರು ಒಬ್ಬ ಮಹಿಳೆ ಇಂಗ್ಲೆಂಡಿನ ರಾಣಿಯಾಗಬಹುದು ಎಂದರೂ ವಯಸ್ಸನ್ನು ಬಹಿರಂಗಪಡಿಸಲು ಇಷ್ಟಪಡುವುದಿಲ್ಲ ಎಂದು ಹೇಳುತ್ತಾರೆ.[xviii] ಇದು ಅವರು ಹಾಸ್ಯಕ್ಕಾಗಲ್ಲದೆ, ಗಂಭೀರವಾಗಿ ಹೇಳಿದಂತೆಯೇ ತೋರುತ್ತದೆ. ಮಾತಿನ ನಡುವಿನಲ್ಲಿ ಬರುವಂತಹ ಇಂತಹ ಅನಿಸಿಕೆಗಳು ಯಾವ ರೀತಿಯಲ್ಲಿ ಮಹಿಳೆಯರ ಸಂಗತಿಗಳ ಕುರಿತು ಯೋಚನೆಯಿತ್ತು ಎನ್ನುವುದಕ್ಕೆ ಒಳನೋಟ ಕೊಡುತ್ತವೆ. ಶ್ರೀ ರೋಹಿಣಿ ಕುಮಾರ್ ಚೌಧರಿ ಮತ್ತು ಶ್ರೀ ಲೋಕನಾಥ ಮಿಶ್ರಾರವರು ಮಹಿಳೆಯರು ಎಲ್ಲ ಕ್ಷೇತ್ರಗಳಲ್ಲೂ ಪುರುಷರಿಗೆ ಸ್ಪರ್ಧೆ ಒಡ್ಡಿದರೆ ಅದು ಒಳಿತಲ್ಲ ಎಂಬರ್ಥದಲ್ಲಿ ಸೂಚಿಸಿದ್ದೂ ಉಂಟು.[xix]

ಭಾರತದಲ್ಲಿ ಹಲವು ಕಾನೂನುಗಳು ಇವತ್ತಿಗೂ ಲಿಂಗಭೇದ ಮಾಡುತ್ತವೆ, ಬಹಳ ಇತ್ತೀಚೆಗ ಸುಪ್ರೀಂ ಕೋರ್ಟ್ ಮಹಿಳೆಯರನ್ನು ಗಂಡನ ಆಸ್ತಿಯಂತೆ ಪರಿಕಲ್ಪಿಸಿದ್ದ, ಪುರುಷರನ್ನು ಮಾತ್ರ ಶಿಕ್ಷಿಸುತ್ತಿದ್ದ ವ್ಯಭಿಚಾರದ ಶಿಕ್ಷೆಯ ಕಾನೂನನ್ನು ಹೊಡೆದು ಹಾಕಿತು. ಇವತ್ತಿಗೂ, ಅತ್ಯಾಚಾರ ಎಂಬುದರ ವ್ಯಾಖ್ಯಾನದಲ್ಲಿ ಒಬ್ಬ ಗಂಡಿನ ಮೇಲಾಗುವ ಅತ್ಯಾಚಾರ ಒಳಪಟ್ಟಿಲ್ಲ. ಕೌಟುಂಬಿಕ ಹಿಂಸೆ ಎನ್ನುವುದೂ ಪುರುಷರ ಮೇಲಾಗುವ ಹಿಂಸೆಯನ್ನೊಳಗೊಂಡಿಲ್ಲ. ಮಹಿಳೆಯರಿಗೆ ಹಲವು ಕ್ಷೇತ್ರಗಳಲ್ಲಿ ಕೆಲಸ ಮಾಡಲು ಇದ್ದ ಅಡೆ- ತಡೆಗಳನ್ನು ಒಂದೊಂದಾಗಿ ಕೋರ್ಟುಗಳು ತೊಡೆದು ಹಾಕುತ್ತಿವೆ. ಆದರೂ ಒಂದು ಕುಟುಂಬದಲ್ಲಿ ತೀರ್ಮಾನ ತೆಗೆದುಕೊಳ್ಳುವ ಹಕ್ಕು, ತಾನೇನು ಉಡಬೇಕು - ಯಾರನ್ನು ಮದುವೆ ಮಾಡಿಕೊಳ್ಳಬೇಕು ಎಂಬಂತಹ ಮೂಲಭೂತವಾದ ಹಕ್ಕುಗಳು ಮಹಿಳೆಯೊಬ್ಬಳಿಗೆ ಸಿಕ್ಕುವ ಐಷಾರಾಮವಾಗಿಯೇ ಉಳಿದಿದೆ. ಅತಿಯಾದ/ ಅನಗತ್ಯ ಕಾಳಜಿ ಮತ್ತು ಸ್ವಾತಂತ್ರ್ಯ ಇಲ್ಲದ ಎರಡು ದಿಕ್ಕಿನ ಅನ್ಯಾಯಗಳಿಗೆ ತುತ್ತಾಗಿದ್ದಾಳೆ ಹೆಣ್ಣು. ಇಂತಹ ತ್ರಿಶಂಕು ಸ್ಥಿತಿ ಯಾಕೆ ಬಂತು ಎನ್ನುವುದಕ್ಕೆ ಉತ್ತರ ನಮ್ಮ ಸಂವಿಧಾನ ಸಭೆಯ ಚರ್ಚೆಗಳು.

ಒಂದು ಸಮಾಜ ತನ್ನ ಹಳೆಯ ಪೊರೆಗಳನ್ನು ಕಳಚಿ, ಹೊಸತನವನ್ನು ಅಪ್ಪಿಕೊಳ್ಳುವ ಘರ್ಷಣೆಯ ಕಾಲ ಶುರುವಾಗಿತ್ತು ಆಗ. ಅದರದ್ದೇ ಆದ ಎಲ್ಲ ಅನಾನುಕೂಲತೆಗಳು ಅಲ್ಲಿವೆ. ಆದರೆ, ಒಂದು ವಿಚಾರವನ್ನು ನಾವು ಮರೆಯಾಬಾರದು, ಇಷ್ಟೆಲ್ಲಾ ಪೂರ್ವಾಗ್ರಹ ಪೀಡಿತ ಮತ್ತು ತಳವಿಲ್ಲದ ಹೆಮ್ಮೆಯಿಂದ (ಮಹಿಳೆಯರ ವಿಚಾರದಲ್ಲಿ), ರಚಿಸಿದ ಸಂವಿಧಾನದ ಆಧಾರದಲ್ಲಿಯೇ ಇವತ್ತಿಗೂ ಮಹಿಳೆಯರ ಸ್ವಾತಂತ್ರ್ಯಕ್ಕೆ ದಿನವೂ ಹೊಸ ಆಕಾರ ಮತ್ತು ಹೊಸ ಎತ್ತರ ದೊರಕುತ್ತಿರುವುದು. ಅದಕ್ಕೆ ಕಾರಣ, ಬಾಕಿ ಎಲ್ಲ ವಿಚಾರಗಳಲ್ಲಿ, ಎಂದರೆ ಸಮಾನತೆ, ನ್ಯಾಯಾಲಯಗಳಿಗಿರುವ ಸ್ವಾತಂತ್ರ್ಯ, ಸಂವಿಧಾನ ವಿಕಾಸ ಹೊಂದಲಿಕ್ಕಿರುವ ಅವಕಾಶ ಮುಂತಾದವುಗಳು ಒಳಗೊಂಡ ಒಂದು ಒಳ್ಳೆಯ ತಳಹದಿ ಇರುವ ಸಂವಿಧಾನವನ್ನು ರಚಿಸಿದ್ದು ಎಂದರೆ ತಪ್ಪಾಗಲಾರದು.

[i]ಸಂವಿಧಾನ ರಚನಾ ಸಭೆಯ ಅಂಕಿ ಅಂಶಗಳ ವಿಶ್ಲೇಷಣೆ, ಸಂಪೂರ್ಣ ಮಾಹಿತಿ ಇಲ್ಲಿ ಲಭ್ಯವಿದೆ: https://prsindia.org/policy/vital-stats/analysis-constituent-assembly-debates

[ii] ಈ ಅನುಚ್ಛೇದದ ಪ್ರಕಾರ, ಅನುಚ್ಛೇದ 15 ರಲ್ಲಿ ಯಾವುದೇ ಸಂದರ್ಭದಲ್ಲಿ ಮತ, ಜನಾಂಗ, ಜಾತಿ, ಲಿಂಗ ಅಥವಾ ಹುಟ್ಟಿದ ಸ್ಥಳದ ಆಧಾರದ ಮೇಲೆ ತಾರತಮ್ಯ ಮಾಡಬಾರದೆಂದಿದ್ದರೂ, ಅದು ಮಹಿಳೆಯರು ಮತ್ತು ಮಕ್ಕಳ ಸಲುವಾಗಿ ಯಾವುದೇ ರೀತಿಯ ವಿಶೇಷವಾದ ಸವಲತ್ತುಗಳನ್ನು ಒದಗಿಸಲು ಅಡ್ಡಿಯಾಗಬಾರದು ಎಂದು ಹೇಳಿದೆ.

[iii] ಸರ್ದಾರ್ ವಲ್ಲಭಾಯಿ ಪಟೇಲ್, ಸಂವಿಧಾನ ರಚನಾ ಸಭೆ - ಸಂಪುಟ III, ಮಂಗಳವಾರ, 29.04.1947.
[iv] ಸಂವಿಧಾನ ರಚನಾ ಸಭೆ - ಸಂಪುಟ VII, ಶುಕ್ರವಾರ, 03.12.1948
[v]ಶ್ರೀಮತಿ ರೇಣುಕಾ ರೇ, ಸಂವಿಧಾನ ರಚನಾ ಸಭೆ - ಸಂಪುಟ IV, ಶುಕ್ರವಾರ, 18.07.1947
[vi] ಶ್ರೀಮತಿ ಸರೋಜಿನಿ ನಾಯ್ಡು, ಸಂವಿಧಾನ ರಚನಾ ಸಭೆ - ಸಂಪುಟ IV, ಮಂಗಳವಾರ, 22.07.1947
[vii] ಶ್ರೀಮತಿ ಬೇಗಂ ಅಜ್ಹೀಜ್ ರಸೂಲ್, ಸಂವಿಧಾನ ರಚನಾ ಸಭೆ - ಸಂಪುಟ VI, ಸೋಮವಾರ, 08.11.1948
[viii] ಶ್ರೀ ಸೈಯದ್ ಅಬ್ದುಲ್ ರವೂಫ್, ಸಂವಿಧಾನ ರಚನಾ ಸಭೆ - ಸಂಪುಟ VII, ಸೋಮವಾರ, 29.11.1948
[ix] ರೋಹಿಣಿ ಕುಮಾರ್ ಚೌಧರಿ, ಸಂವಿಧಾನ ರಚನಾ ಸಭೆ - ಸಂಪುಟ VII, ಮಂಗಳವಾರ, 09.11.1948
[x] ಶ್ರೀಮತಿ ರೇಣುಕಾ ರೇ, ಸಂವಿಧಾನ ರಚನಾ ಸಭೆ - ಸಂಪುಟ VII, ಮಂಗಳವಾರ, 09.11.1948
[xi] ಶ್ರೀಮತಿ ಪೂರ್ಣಿಮಾ ಬ್ಯಾನರ್ಜಿ, ಸಂವಿಧಾನ ರಚನಾ ಸಭೆ - ಸಂಪುಟ-X, ಮಂಗಳವಾರ, 11.10.1949
[xii] ಶ್ರೀ ಹೆಚ್. ವಿ. ಕಾಮತ್, ಸಂವಿಧಾನ ರಚನಾ ಸಭೆ - ಸಂಪುಟ-X, ಮಂಗಳವಾರ, 11.10.1949
[xiii] ಡಾ. ಬಿ. ಆರ್ ಅಂಬೇಡ್ಕರ್, ಸಂವಿಧಾನ ರಚನಾ ಸಭೆ - ಸಂಪುಟ-X, ಮಂಗಳವಾರ, 11.10.1949
[xiv] ಶ್ರೀ ಲಕ್ಷ್ಮೀನಾರಾಯಣ ಸಾಹು, ಸಂವಿಧಾನ ರಚನಾ ಸಭೆ - ಸಂಪುಟ VII, ಸೋಮವಾರ, 22.11.1948
[xv] ಶ್ರೀ ದಾಮೋದರ ಸ್ವರೂಪ ಸೇಥ್, ಸಂವಿಧಾನ ರಚನಾ ಸಭೆ - ಸಂಪುಟ VII, ಶುಕ್ರವಾರ, 03.12.1948
[xvi] ರೆವರೆಂಡ್ ಜೆರೋಮ್ ಡಿಸೋಜ, ಸಂವಿಧಾನ ರಚನಾ ಸಭೆ - ಸಂಪುಟ- VII, ಸೋಮವಾರ, 22.11.1948
[xvii] ಶ್ರೀ ಕೆ. ಟಿ. ಷಾ, ಸಂವಿಧಾನ ರಚನಾ ಸಭೆ - ಸಂಪುಟ- VII, ಸೋಮವಾರ, 29.11.1948
[xviii] ಶ್ರೀ ರೋಹಿಣಿ ಕುಮಾರ್ ಚೌಧರಿ, ಸಂವಿಧಾನ ರಚನಾ ಸಭೆ - ಸಂಪುಟ- VIII, ಮಂಗಳವಾರ, 24.05.1949
[xix] ಶ್ರೀ ರೋಹಿಣಿ ಕುಮಾರ್ ಚೌಧರಿ ಮತ್ತು ಶ್ರೀ ಲೋಕನಾಥ ಮಿಶ್ರಾ, ಸಂವಿಧಾನ ರಚನಾ ಸಭೆ - ಸಂಪುಟ-XI, ಮಂಗಳವಾರ, 22.11.1949

 

MORE NEWS

ಪರಿಘಾಸನ ಮತ್ತು ಅರ್ಧ ಚಕ್ರಾಸನ 

16-04-2024 ಬೆಂಗಳೂರು

"ಪರಿಘಾಸನ ಆಸನವು ) ಪಿತ್ತ ಜನಕಾಂಗ ಮತ್ತು ಮೇದೋಜೀರಕ ಚೈತನ್ಯಗೊಳ್ಳುವಂತೆ ಮಾಡುತ್ತದೆ. ಹಾಗೆಯೇ ‘ಅರ್ಧ ಚಕ್...

ಲೋಕಸಭಾ ಚುನಾವಣೆಗಳ ಸುತ್ತಮುತ್ತ ಒಂದು ಸುತ್ತು

15-04-2024 ಬೆಂಗಳೂರು

"ಪರಸ್ಪರ ರೋಚಕ ನಿಂದನೆಗಳು. ಕ್ಷೇತ್ರವಾರು ಚಕ್ಕರಗುಳ್ಳಿ ಇಡುವ ಚತುರ ವಿವರಗಳು. ಹೊಸ ಹೊಸ ಬೈಗುಳಗಳು. ಮಾಧ್ಯಮಗಳಿಗ...

ಉಪವಿಷ್ಟಕೋನಾಸನ ಮತ್ತು ಪವನಮುಕ್ತಾಸನ

09-04-2024 ಬೆಂಗಳೂರು

"ಉಪವಿಷ್ಟಕೋನಾಸನ ಯೋಗಾಸನವು ಮನಸ್ಸನ್ನು ಶಾಂತಗೊಳಿಸುತ್ತದೆ ಮತ್ತು ಮಾಂಸಗಳ ತೂಕವನ್ನು ಕಡಿಮೆಗೊಳಿಸುತ್ತದೆ. ಪವನಮು...