‘MAKING OF ಬಂಗಾರದ ಮನುಷ್ಯ’ ಸಾಧನೆ ಬೆನ್ನಟ್ಟಿದ ಯಶಸ್ವಿ ನಿರೂಪಣೆ


ಕನ್ನಡ ಸಿನಿಮಾ ಗಗನಮಂಡಲದಲ್ಲಿ ಧ್ರುವತಾರೆಯಂತಿದ್ದ ಬಂಗಾರದ ಮನುಷ್ಯ’ ಸಿನಿಮಾದ ಸಾಧನೆಯ ಶ್ರಮವನ್ನು ಲೇಖಕ ದೇವಶೆಟ್ಟಿ ಮಹೇಶ ಅವರು ತಮ್ಮ ‘MAKING OF ಬಂಗಾರದ ಮನುಷ್ಯ’ ಕೃತಿಯಲ್ಲಿ ದಾಖಲಿಸಿದ್ದು, ಈ ಕುರಿತು ಪತ್ರಕರ್ತ ವೆಂಕಟೇಶ ಮಾನು ಅವರು ವ್ಯಕ್ತಪಡಿಸಿದ ಅಭಿಪ್ರಾಯವಿದು;

ಕನ್ನಡ ಸಿನಿಮಾ ರಂಗದಲ್ಲಿ ‘ಬಂಗಾರದ ಮನುಷ್ಯ’ ತನ್ನ ಕಲಾತ್ಮಕ ನಟನೆ, ಸಂಗೀತ, ಸಂಕಲನ, ಕಥೆ ವಸ್ತಾಲಂಕಾರ ಹೀಗೆ ವೈವಿಧ್ಯಮಯ ಕಾರಣಗಳಿಗಾಗಿ (1972-73) ಐದು ಪ್ರಶಸ್ತಿಗಳನ್ನು ತನ್ನದಾಗಿಸಿಕೊಂಡಿದೆ. ಗಮನಾರ್ಹದ ಸಂಗತಿ ಎಂದರೆ, ಈ ಸಿನಿಮಾಕ್ಕೆ 40 ವರ್ಷ ಸಂದರೂ, ಅದರ ಘನತೆ ಎಂಬ ಮುಖದ ಮೇಲೆ ವೃದ್ಧಾಪ್ಯದ ಗೆರೆಗಳಿಲ್ಲ; ಇಂದೂ ‘ಪ್ರದರ್ಶನವಿದೆ’ ಎಂದರೆ, ಗಲ್ಲಾ ಪೆಟ್ಟಿಗೆಗೇನೂ ಹಾನಿ ಇಲ್ಲ. ಸತತ ಎರಡು ವರ್ಷ ಕಾಲ ನಿರಂತರ ಪ್ರದರ್ಶನ ಖ್ಯಾತಿಯ ಈ ಸಿನಿಮಾ ಕೇವಲ ಕನ್ನಡ ಸಿನಿಮಾ ಲೋಕವಷ್ಟೇ ಅಲ್ಲ; ಇಡೀ ಭಾರತೀಯ ಸಿನಿಮಾ ರಂಗದಲ್ಲೂ ಅಚ್ಚಳಿಯದ ಛಾಪು ಮೂಡಿಸಿದ್ದು ಈಗ ಇತಿಹಾಸ….!

ಈ ಸಿನಿಮಾ, ವರ್ತಮಾನದೊಂದಿಗೆ ಭವಿಷ್ಯದುದ್ದಕೂ ತನ್ನ ಆಕರ್ಷಣೆ ಉಳಿಸಿಕೊಳ್ಳುತ್ತದೆ ಎಂಬುದು ಪ್ರೇಕ್ಷಕರ ಅಭಿಮಾನದ ಜೊತೆ ಭರವಸೆ. ಮಾತ್ರವಲ್ಲ; ಲೇಖಕ ದೇವಶೆಟ್ಟಿ ಮಹೇಶ ಅವರ ‘MAKING OF ಬಂಗಾರದ ಮನುಷ್ಯ’ ಕೃತಿ ರೂಪುಗೊಂಡಿದ್ದು, ಇದೇ ಆಶಯದ ಹಿನ್ನೆಲೆಯಲ್ಲಿ. ಸಿನಿಮಾದ ಚಿತ್ರೀಕರಣಕ್ಕೆ ಸಾಕ್ಷಿಯಾದವರ ಪೈಕಿ ಇಂದು ಕೆಲವೇ ಕೆಲವು ಕಲಾವಿದರು ಬದುಕಿದ್ದಾರೆ. ಅವರಿಗೆ ಸಂಪರ್ಕಿಸಿ, ಸಿನಿಮಾ ಚಿತ್ರೀಕರಣದ ವಿಶಿಷ್ಟಾಂಶಗಳು ಅಂದರೆ ನಡೆದ ಅಪರೂಪದ ಹಾಗೂ ಅನಾಹುತಗಳ ಪ್ರಸಂಗಗಳು, ಇಡೀ ಚಿತ್ರ ತಂಡದ ನೋವು-ಭೀತಿ-ತಲ್ಲಣಗಳಿಗೆ ಅಕ್ಷರ ರೂಪು ನೀಡಿದ್ದ ಶ್ರಮದ ದ್ಯೋತಕವಾಗಿ ಈ ಕೃತಿ ಮೂಡಿದೆ.

ಸುಮಾರು 88 ಪುಟಗಳ (ಬೆಲೆ: 100 ರೂ.) ಈ ಕೃತಿಯು ಶಶಾಂಕ ಪ್ರಕಾಶನದ ಕೊಡುಗೆ. ‘ಬಂಗಾರದ ಮನುಷ್ಯ’ ಸಿನಿಮಾದ ಜೀವಂತಿಕೆಗೆ ಈ ಕೃತಿಯು ಮತ್ತಷ್ಟು ಸಂಚಲನ ನೀಡುವಂತಿದೆ. ಸಿನಿಮಾದ ಅತ್ಯಂತ ಸ್ಮರಣೀಯ ದೃಶ್ಯಗಳ ಚಿತ್ರಗಳನ್ನು ಒಳಗೊಂಡಿರುವ ಕೃತಿಯು, ಸಿನಿಮಾ ಕುರಿತು ಮತ್ತೆ ಮತ್ತೆ ಮಾತನಾಡಿ ಸಂಭ್ರಮಿಸುವಂತೆ ಮಾಡುತ್ತದೆ.  ‘MAKING OF ಬಂಗಾರದ ಮನುಷ್ಯ’ ಕೃತಿಯ ಹುಟ್ಟು, ಅದರ ಪ್ರಕಟಿತ ಅಸ್ತಿತ್ವವು ಓದುಗರಲ್ಲಿ ಮಹತ್ವ ಪಡೆಯುತ್ತದೆ. 

ಸಾಧಾರಣವೇ ಸಾಧನೆಯಾದಾಗ….!
‘ಸಾಧನೆ’ ಎಂದು ಗುರುತಿಸುವ ಮೊದಲು ಯಾವುದೇ ಒಂದು ಸಣ್ಣ ಚಟುವಟಿಕೆಯು ಸಹ ಸಾಧಾರಣವೇ ಆಗಿರುತ್ತದೆ. ಅದು ಸಾಧನೆಯಾಗಿ ಪರಿವರ್ತನೆಯಾದಾಗ, ಈ ಚಟುವಟಿಕೆಯ ಹುಟ್ಟು, ಸಾಗಿದ ಹಾದಿ, ಏಳು-ಬೀಳುಗಳ ದಣಿವು, ಅನುಭವಿಸಿದ ನೋವು-ಹತಾಶೆ-ನಿರಾಶೆ...ಹೀಗೆ ಇತಿಹಾಸದ ವಿಶ್ಲೇಷಣೆ ನಡೆದು; ದಾಖಲೆಯಾಗುತ್ತದೆ. ನಂತರ ಚರ್ಚೆಗೆ ಗ್ರಾಸವಾಗಿ, ಆ ಸಣ್ಣ ಚಟುವಟಿಕೆಯ ಹಿಂದಿನ ಶ್ರಮವು ‘ಇಡೀ ಮನುಕುಲದ ಮೌಲ್ಯ’ವಾಗಿ ಗಮನ ಸೆಳೆಯುತ್ತದೆ. ಒಟ್ಟಾರೆ, ಈ ಪ್ರಕ್ರಿಯೆಯು ಸಣ್ಣ ಸಾಧನೆಯೇನೂ ಅಲ್ಲ. ಈ ಹಂತದಲ್ಲಿ,  ‘MAKING OF ಬಂಗಾರದ ಮನುಷ್ಯ’ ಮೂಲಕ ಲೇಖಕ ದೇವಶೆಟ್ಟಿ ಮಹೇಶ ಅವರು ಮಾಡಿದ್ದು ಇದನ್ನೇ…!

‘ಬಂಗಾರದ ಮನುಷ್ಯ’ ಸಿನಿಮಾ (1972ರ ಮಾರ್ಚ್ 31ರಂದು ಬಿಡುಗಡೆ) ಒಂದು ವರ್ಷ ಪೂರ್ಣ ಧರ್ಮಸ್ಥಳ, ಚಿಕ್ಕಮಗಳೂರು, ಚಿಕ್ಕಬಳ್ಳಾಪುರ, ನಂದಿಬೆಟ್ಟ ಹೀಗೆ ಚಿತ್ರೀಕರಣಗೊಂಡಿತ್ತು. 3.50 ಲಕ್ಷ ರೂ.ಗಳ ಆರಂಭದ ಬಜೆಟ್ 12.50 ಲಕ್ಷ ರೂ.ಗಳಿಗೆ ತಲುಪಿತ್ತು. ವರ್ಷದ 365 ದಿನವೂ ಚಿತ್ರೀಕರಣದ್ದೇ ಮಾತು-ಕೆಲಸ. ಟಿ.ಕೆ. ರಾಮರಾವ್ ಅವರ ಕಾದಂಬರಿ ಆಧರಿತ ಈ ಕಥಾ ವಸ್ತುವನ್ನು ಆಯ್ದುಕೊಂಡಿರದಿದ್ದರೆ ‘ಗಂಡುಗಲಿ ಕುಮಾರ ರಾಮ’ ಸೆಟ್ ಏರುತ್ತಿತ್ತು, ‘ಬಂಗಾರದ ಮನುಷ್ಯ’ನ ಆಯ್ಕೆ ಹೇಗಾಯಿತು? ಹೀಗೆ ವಿಷಯ ಮಂಡನೆಯಲ್ಲಿ ವೇಗ ಪಡೆದುಕೊಳ್ಳುವ ಕೃತಿಯ ಬರಹವು, ಸಣ್ಣ ಸಣ್ಣ ಹಾಗೂ ಆಕರ್ಷಕ ಅಧ್ಯಾಯಗಳಡಿ  (ನಾಲ್ಕು ಐದು ವಾರದ ಚಿತ್ರ, ಬಂಗಾರದ ಮನುಷ್ಯ ಸಿನಿಮಾನೇ ಆಗ್ತಿರಲಿಲ್ಲ, ರಾಜ್ ಗೆ 45, ಭಾರತಿಗೆ 35 ಸಾವಿರ ರೂ. ಸಂಭಾವನೆ, ಸಿದ್ಧಲಿಂಗಯ್ಯ ಸಹಿತಿ 4 ಜನರು ಸಾಯುತ್ತಿದ್ದರು, ಕೋಳಿ ಸ್ವರ್ಗಾರೋಹಣ ಸಂಘ ಕಟ್ಟಿದ್ದರು ಕ್ಲೈಮ್ಯಾಕ್ಸ್ ಚೇಂಜ್ ಮಾಡಬೇಕು, ದಕ್ಷಿಣ ಭಾರತ ಚಿತ್ರರಂಗಗಳೇ ಬೆವರಿ ಬೆಂಡಾದವಲ್ಲ...ಹೀಗೆ) ಬಂಗಾರದ ಮನುಷ್ಯ ಚಲನಚಿತ್ರ ರೂಪುಗೊಂಡ ಬಗೆ, ಸಾಗಿದ ಹಾದಿ, ಪಟ್ಟ ಶ್ರಮ, ಅನುಭವಿಸಿದ ನೋವು ಎಲ್ಲವನ್ನೂ ಸಂಕ್ಷಿಪ್ತವಾದರೂ ಸುಂದರವಾಗಿ  ಕಟ್ಟಿಕೊಡಲಾಗಿದೆ.

‘ಸಾಧಾರಣ ಸಿನಿಮಾ’ ಎಂಬ ಉದಾಸೀನ
‘ಸಾಧಾರಣ ಸಿನಿಮಾ’ ಎಂದೇ ಖರೀದಿದಾರರ ನಿರ್ಲಕ್ಷ್ಯ, ಮಾಧ್ಯಮಗಳ ಉದಾಸೀನತೆ ಮಧ್ಯೆಯೂ ಸಿನಿಮಾ ತೆರೆಕಂಡಿದ್ದು, ಒಂದು ವಾರದವರೆಗೂ ಬೆರಳೆಣಿಕೆಯಷ್ಟೇ ಪ್ರೇಕ್ಷಕರಿರುವುದು, ಇಡೀ ಸಿನಿಮಾ ತಂಡ ಕಂಗೆಡುವುದು; ಈ ಮಧ್ಯೆಯೂ, ಪರಸ್ಪರರಲ್ಲಿ ವಿಶ್ವಾಸದ ಎಳೆ ಹಿಡಿದೇ ಉಸಿರಾಡುತ್ತಿದ್ದ ಇಡೀ ತಂಡದ ದಯನೀಯ ಸ್ಥಿತಿ...ಇಂತಹ ಪ್ರಸಂಗಗಳ ವಿವರಣೆಯು ಬರಹಕ್ಕೆ ಸಂಚಲನ ಮೂಡಿಸಿದೆ. 

ಜೊತೆಗೆ, ಈ ಸಿನಿಮಾ ಶೂಟಿಂಗ್ ಅವಧಿಯ ಕೊಡುಗೆ ಎಂದೇ ಪರಿಗಣಿಸಬಹುದಾದ ಕೆಲವು ಮಹತ್ವದ ಹಾಗೂ ವಿರಳ-ಅಪರೂಪದ ವಿದ್ಯಮಾನಗಳನ್ನು ದಾಖಲಿಸಿದೆ. ಹಾಸ್ಯನಟ ಬಾಲಕೃಷ್ಣ ಅವರು ಶೂಟಿಂಗ್ ಮುಗಿಯುವವರೆಗೂ ಉತ್ತಮ ಅಭಿನೇತ್ರಿ ಎಂಬ ಕಾರಣಕ್ಕೆ ಪ್ರೋತ್ಸಾಹದಾಯಕವಾಗಿ ನಟಿ ಭಾರತಿ ಅವರಿಗೆ ದಿನಂಪ್ರತಿ 1 ರೂ. ಕೊಡುತ್ತಿದ್ದರು. ನಾಯಕ ನಟ ರಾಜ್ ಅವರ ಸರಳತನ, ಸಹಪಂಕ್ತಿ ಭೋಜನ, ನಿರ್ಮಾಪಕ ಕೆಸಿಎನ್ ಗೌಡರು ತಂಡದ ಕಲಾವಿದರೆಡೆಗೆ ತೋರುವ ಉದಾರತನ, ‘ಬಾಳ ಬಂಗಾರ ನೀನು ಹಣೆಯ ಸಿಂಗಾರ ನೀನು…..’ ಎಂಬ ಹಾಡು ಒಂದು ತಿಂಗಳು ಕಾಲ ಚಿತ್ರೀಕರಣಗೊಳಿಸಲಾಗಿತ್ತು. ‘ಆಗದು ಎಂದು ಕೈಲಾಗದು ಎಂದು…’ ಹಾಡಿನ ಚಿತ್ರೀಕರಣದ ವೇಲೆ ದೊಡ್ಡ ಗಾತ್ರದ ಕಲ್ಲೊಂದು ರಾಜ್ ಹಾಗೂ ನಿರ್ದೇಶಕ ಸಿದ್ದಲಿಂಗಯ್ಯ ಅವರತ್ತ ಸಿಡಿದು, ಸ್ವಲ್ಪದರಲ್ಲೇ ಅಪಾಯ ತಪ್ಪಿದ್ದು, ಒಂದೇ ಒಂದು ವಾರದಲ್ಲಿ ಹುಣಸೂರು ಕೃಷ್ಣಮೂರ್ತಿ ಅವರು ಸಿನಿಮಾಕ್ಕೆ ಸಂಭಾಷಣೆ ಬರೆದಿದ್ದರು. ಈ ಸಿನಿಮಾ ಉಂಟು ಮಾಡಿದ ಪರಿಣಾಮವಾಗಿ,  ಸ್ಟೀಲ್ ತಟ್ಟೆಯಲ್ಲಿ ರಾಜ್ ಅವರ ಮುಖದ ಬಿಂಬ ಮೂಡಿಸಿದ ದೃಶ್ಯದಿಂದ ಜನರು ಸ್ಟೀಲ್ ತಟ್ಟೆಗಳನ್ನು ಖರೀದಿಸಲು ಆರಂಭಿಸಿದ್ದು, ಸುಶಿಕ್ಷಿತ ಯುವಕರು ಹಳ್ಳಿಗೆ ಹೋಗಿ ಕೃಷಿ ಅವಲಂಬಿಸಿದ್ದು, ಈ ಸಿನಿಮಾ ಪ್ರದರ್ಶನವು  25ನೇ ವಾರ ಪೂರ್ಣಗೊಳಿಸಿದಾಗ ಆಯೋಜಿಸಲಾಗಿದ್ದ ಸಮಾರಂಭದ ವೇದಿಕೆಯತ್ತ ಧಾವಿಸಲು ಸ್ವತಃ ನಿರ್ದೇಶಕ ಸಿದ್ಧಲಿಂಗಯ್ಯ ಅವರು ಪಡುವ ಹರಸಾಹಸ...ಇಂತಹ ವಿದ್ಯಮಾನಗಳನ್ನು ಲೇಖಕರು ದಾಖಲಿಸಿದ್ದು, ಈ ಕೃತಿಯು ವಿಭಿನ್ನ ನೆಲೆಯಲ್ಲಿ ನಿಲ್ಲುವಂತೆ ಮಾಡುತ್ತದೆ ಮಾತ್ರವಲ್ಲ; ಕನ್ನಡ ಸಿನಿಮಾ ಸಾಹಿತ್ಯದಲ್ಲಿ ತನ್ನ  ಅಸ್ತಿತ್ವದ ವಿಭಿನ್ನತೆಯನ್ನು ಸಾಬೀತುಪಡಿಸುತ್ತದೆ. 

ಪ್ರೇಕ್ಷಕರ ಮೆಚ್ಚುಗೆಯೇ ಮಾನದಂಡ 
ಒಂದು ಸಿನಿಮಾದ ಯಶಸ್ಸಿಗೆ ಹತ್ತು ಹಲವು ಮಾನದಂಡಗಳಿರಬಹುದು. ಆದರೆ, ಅಂತಿಮವಾಗಿ ಅದು ಪ್ರೇಕ್ಷಕರ ಮೆಚ್ಚುಗೆಯನ್ನೇ ಅವಲಂಬಿಸಿರುತ್ತದೆ ಎಂಬುದು ‘ಬಂಗಾರದ ಮನುಷ್ಯ’ ಸಿನಿಮಾ ಕನ್ನಡಿ ಹಿಡಿಯುತ್ತದೆ. ಸಿನಿಮಾ ಖರೀದಿದಾರರು, ಮಾಧ್ಯಮಗಳು, ಸೆನ್ಸಾರ್ ಮಂಡಳಿ ಇವು ಬಾಹ್ಯ ಕಾರಣಗಳು. ಆಂತರಿಕ ಹಾಗೂ ಪ್ರಬಲ ಕಾರಣವೆಂದರೆ; ಪ್ರೇಕ್ಷಕರ ಮೆಚ್ಚುಗೆ. ‘ಉಪಕಾರ ಮಾಡಿದವರಿಗೆ ಅಪಕಾರದ ಆರೋಪ ಮಾಡಬಾರದು’ ಎಂಬ ಮೌಲ್ಯ, ಪ್ರೇಕ್ಷಕರ ಭಾವಕೊಶದ ವರೆಗೂ ‘ಬಂಗಾರದ ಮನುಷ್ಯ’ ತಲುಪಿದ್ದು. ಈ ಸಾಮಾಜಿಕ ನೀತಿಗೆ ಪೋಷಕಾಂಶವಾಗಿ ನಟನೆ, ಸಂಗೀತ-ಹಾಡು, ಚಿತ್ರಕಥೆ ಪೂರಕವಾಗಿವೆ ಎಂಬುದು. ಹೀಗೆ ‘ಬಂಗಾರದ ಮನುಷ್ಯನ ಹೆಚ್ಚುಗಾರಿಕೆಯನ್ನು ಸೂಕ್ಷ್ಮವಾಗಿ, ಆದರೆ ಸ್ಪಷ್ಟವಾಗಿಸಿದ್ದು ಈ ಕೃತಿಯ ವೈಶಿಷ್ಟತೆ. ವಿಷಯ ನಿರೂಪಣೆಯಲ್ಲೂ ಪ್ರಾಮಾಣಿಕ ಅಭಿವ್ಯಕ್ತಿ ಸಾಧ್ಯವಾಗಿದೆ. 

ಕನ್ನಡ ಸಿನಿಮಾ ನಾಯಕ-ನಟ/ನಟಿಯರ ಕುರಿತು ಹಲವು ಪುಸ್ತಕಗಳಿರಬಹುದು. ಆದರೆ, ಒಂದು ಸಿನಿಮಾವನ್ನು ಅದರ ಸಾಧನೆಯ ಶ್ರಮದ ಬೆನ್ನಟ್ಟಿ ನಿರೂಪಿಸುವ ಈ ಕೃತಿ, ಕನ್ನಡ ಸಿನಿಮಾ ರಂಗದಲ್ಲಿ ಹೊಸದು ಎಂದೇ ಹೇಳಬೇಕು. ಒಂದು ಸಿನಿಮಾ ಸಾಧನೆಯ ಹಿಂದಿನ ಶ್ರಮದ ವಿವಿಧ ಸ್ವರೂಪಗಳ ಅಧ್ಯಯನಕ್ಕೂ ಈ ಕೃತಿ, ಉತ್ತಮ ಆಕರವೂ ಆಗಿದೆ. 

MORE FEATURES

ಬೊಗಸೆಯಲ್ಲಿ ವಿಷಮ ಕಾಲಘಟ್ಟದ ನೆನಪುಗಳು

20-04-2024 ಬೆಂಗಳೂರು

“ದೇಹಕ್ಕೆ ಗಾಯವಾದರೆ ಮೌನವಾಗಿದ್ದರೂ ವಾಸಿಯಾಗುತ್ತದೆ. ಆದರೆ, ದೇಶಕ್ಕೆ ಗಾಯವಾದಾಗ ಮೌನವಾಗಿದ್ದಷ್ಟು ಜಾಸ್ತಿಯಾಗು...

ಕಮಲಾದಾಸ್ ಭಾರತೀಯ ಸಾಹಿತ್ಯ ಜಗತ್ತಿನಲ್ಲಿಯೇ ಖ್ಯಾತ ಹೆಸರು

20-04-2024 ಬೆಂಗಳೂರು

'ನಿನಗೆ ನನ್ನ ಅನುಮತಿ ಬೇಕಾಗಿಲ್ಲ. ನೀನು ನನ್ನ ಯಾವ ಕತೆಯನ್ನಾದರೂ ಅನುವಾದಿಸಿ ಪತ್ರಿಕೆಗಳಿಗೆ ಕಳಿಸ್ಕೊ' ಎಂದ...

ಸಾಹಿತ್ಯದ ಗಂಭೀರ ಅಧ್ಯಯನದಲ್ಲಿ ತೊಡಗಿಕೊಂಡಿದ್ದವರಿಗೆ ಈ ಗ್ರಂಥ ಉಪಯುಕ್ತ

20-04-2024 ಬೆಂಗಳೂರು

‘ಈ ವಿಮರ್ಶಾ ಗ್ರಂಥವು ಡಾ. ಪೂರ್ಣಿಮಾ ಶೆಟ್ಟಿ ಇವರ ಅಪಾರ ಓದನ್ನು ಮಾತ್ರ ತೋರಿಸುವುದಲ್ಲದೆ ಅವರಿಗೆ ವಿವಿಧ ಸಾಹಿತ...