ಮಕ್ಕಳ ಕವಿತೆಯನ್ನು ಅನುವಾದಿಸುವುದು ಕಷ್ಟದ ಕೆಲಸ- ಆನಂದ ಪಾಟೀಲ 


“ಇಂಗ್ಲೀಷ್‌ ಚೆನ್ನಾಗಿ ಬರುವ ರಮೇಶ ತೈಲಂಗ ತಮ್ಮ ಆಡು ನುಡಿ ಹಿಂದಿಯಲ್ಲೇ ಅಕ್ಕರೆಯಿಂದ ಕೆಲಸಮಾಡುತ್ತಿದ್ದಾರೆ. ಹಿಂದಿ ಲೇಖಕರನ್ನು ಆದಷ್ಟು ದೊಡ್ಡ ಅವಾರಕ್ಕೆ ಪರಿಚಯಿಸಬೇಕೆನ್ನುವ, ಇತರ ಭಾಷೆಗಳ ಲೇಖಕರನ್ನು ಸಂಪರ್ಕಿಸುವ ವಿರಳವಾದ, ಆದರೆ ಅಗತ್ಯದ ಪ್ರಯತ್ನವನ್ನು ಮಾಡುತ್ತಲೇ ಇದ್ದಾರೆ” ಎನ್ನುತ್ತಾರೆ ಲೇಖಕ ಆನಂದ ಪಾಟೀಲಾ ಅವರು. ಇವರು ತಮ್ಮ ʻನನ್ನ ಪ್ರಿಯವು ಈ ಪುಟ್ಟರ ಪದಗಳುʼ ಕೃತಿಯಲ್ಲಿ ಬರೆದ ಸಾಲುಗಳು ನಿಮ್ಮ ಓದಿಗಾಗಿ...

ರಮೇಶ ತೈಲಂಗ (ಇದು ಅವರು ಬರವಣಿಗೆಗೆ ಬಳಸಿಕೊಳ್ಳುತ್ತಿರುವ ಹೆಸರು. ಪೂರ್ತಿ ಹೆಸರು ರಮೇಶ ಕುಮಾರ ಶೈಲಂಗ) ಫೇಸ್‌ಬುಕ್ಕಿನಲ್ಲಿ ನನಗೆ ಸಿಕ್ಕ ಒಬ್ಬ ಅಪರೂಪದ, ಬಲು ಉತ್ಸಾಹಿ ಮಕ್ಕಳ ಸಾಹಿತ್ಯ ಪ್ರೇಮಿ, ಅವರ ಈ ಚುರುಕು ಚಟುವಟಿಕೆಯ ಪರಿಚಯವಾಗುವ ಹೊತ್ತಿಗೆ ಅವರು 70 ದಾಟಿದರು. ಈಗವರು 75 ಪೂರೈಸುತ್ತಿದ್ದಾರೆ. ಈ ವಯಸ್ಸಿನಲ್ಲಿ, ಅದೂ ಮಕ್ಕಳ ಸಾಹಿತ್ಯದ ಬಗೆಗೆ ಬರೀ ಅಲಕ್ಷದ ವಾತಾವರಣವೇ ಇರುವಾಗ ಮಕ್ಕಳ ಜಗತ್ತಿನಲ್ಲಿಯೇ ಇಷ್ಟೊಂದು ಲವಲವಿಕೆ ತೋರುವವರು ಕಂಡುದು ನನಗೆ ಬಲು ಅಚ್ಚರಿಯ ಸಂಗತಿಯಾಗಿದ್ದು, ನಿಜ. 'World of Children's Literature, Art & Culture ಎನ್ನುವ ವೇದಿಕೆಯನ್ನು (ಅದರ ಹಿಂದಿ ಅವತರಣಿಕೆಯೊಂದಿಗೆ ಪ್ರತ್ಯೇಕವಾಗಿಯೂ) ಬಹು ಸಮಯದಿಂದ ನಡೆಸಿಕೊಂಡು ಬರುತ್ತಿರುವವರು. ಈ ಪುಸ್ತಕವನ್ನು ರೂಪಿಸುತ್ತಿರುವಾಗ ಫೇಸ್ ಬುಕ್ಕಿನಲ್ಲಿ ಇದ್ದಕಿದ್ದಹಾಗೆ ಮೈಯಲ್ಲಿ ಭೂತ ಹೊಕ್ಕವರಹಾಗೆ ಅವರು ಹಿಂದಿಯೇತರ ಭಾಷೆಗಳವರ ಮಾಹಿತಿಯನ್ನು ನೀಡುವ, ಸಂಪರ್ಕಿಸುವ ಮತ್ತಷ್ಟು ಕೆಲಸಕ್ಕೆ ಕೈಹಾಕಿದ್ದರು. ಅದರ ಜೊತೆಗೆ ಒಂದು ಮೆಸೇಜ್ ಹಾಕಿದ್ದರು. ಅದು: ನನ್ನದೀಗ ಒಂದೇ ಉದ್ದೇಶ. ನಮ್ಮ ಭಾಷೆಗಳ (ಭಾರತೀಯ) ಮಕ್ಕಳ ಸಾಹಿತ್ಯವನ್ನು ಹಿಂದಿಗೆ, ಸಾಧ್ಯವಾದರೆ ಇಂಗ್ಲಿಷಿಗೆ ತಂದುಕೊಳ್ಳುತ್ತ ಏಕೀಕೃತ ವೇದಿಕೆಯಲ್ಲಿ ಕಂಡುಕೊಳ್ಳುವುದು, ಇದು ಓದಿಗೆ/ಅನುವಾದಕ್ಕೆ/ಚರ್ಚೆಗೆ, ಸರಿಯಾದ ಸಂಪನ್ಮೂಲಗಳಿಲ್ಲ, ಬೆಂಬಲವಿಲ್ಲ. ಎನ್ನುವುದು ಗೊತ್ತು, ಸದ್ಯ ಸಾಮಾಜಿಕ ಜಾಲತಾಣಗಳು ಆಸರೆ ಇದಕ್ಕೆ ಇಂಥದೊಂದು ಕೆಲಸ ಬಲು ಭಗೀರಥ ಪ್ರಯತ್ನವೇ. ಆದರೆ ಪ್ರಾರಂಭ ಮಾಡುವುದು ತೀರ ಅಗತ್ಯ. ಅದಕ್ಕೀಗ ನಾನು ಶ್ರೀಕಾರ ಹಾಕಿದ್ದೇನೆ. ನಿದ್ದೆಯಲ್ಲಿರುವವರನ್ನು ಎಚ್ಚರಿಸಬೇಕು. ನಿಮ್ಮಂಥವರ ಹಾರೈಕೆಯಿಂದ 70 ದಾಟಿದ ವಯಸ್ಸಿನಲ್ಲಿ ಮತ್ತೆ ಉತ್ಸಾಹಿತನಾಗಿದ್ದೇನೆ. ಮಕ್ಕಳ ಸಾಹಿತ್ಯ ಹಿಡಿದುಕೊಂಡು ಭಾರತೀಯ ವಿವಿಧತೆಯಲ್ಲಿ ಏಕತೆಗಾಗಿ ಶ್ರಮಿಸುವ ಕೆಲಸವನ್ನು ಮಾಡುತ್ತೇನೆ, ಸಾಧ್ಯಾಸಾಧ್ಯತೆಗಳು ಏನೇ ಇರಲಿ, ಇಂಥ ಪ್ರಯತ್ನ ನಮ್ಮೆಲ್ಲ ಭಾಷಾ ವಲಯಗಳಲ್ಲೂ ಜೊತೆಜೊತೆಗೇ ಆಗಬೇಕು, ಇದು ಒಟ್ಟಾರೆ ಭಾರತೀಯ ಪರಿಸರದ ಎಂದಿನ ಅಗತ್ಯ. ದೊಡ್ಡವರ ಸಾಹಿತ್ಯದಲ್ಲೂ ಇದು ಅಷ್ಟಾಗಿ ಸಾಧ್ಯವಾಗಿಲ್ಲ, ಮಕ್ಕಳ ಸಾಹಿತ್ಯದಲ್ಲಂತೂ ಅಂಬೆಗಾಲು, ಆದರೆ, ದೊಡ್ಡವರ ಸಾಹಿತ್ಯಕ್ಕೆ ಅವರವರ ಭಾಷಾ ವಲಯಗಳಲ್ಲಿ ವಿಸ್ತಾರದ ಕ್ಯಾನವಾಸ್‌ ಸಾಧ್ಯವಾಗಿದೆ. ಆದರೆ ಮಕ್ಕಳ ಸಾಹಿತ್ಯ ಕಡೆಗಣನೆಯಿಂದ ತುಸುವೇ ಕ್ರಮಿಸಿದ್ದು, ಅದಕ್ಕೆ ಈ ವಿಭಿನ್ನ ಭಾಷಾವಲಯದ ಸಂಪರ್ಕ ತೀರ ಅಗತ್ಯವಾಗಿದೆ.

ಕನ್ನಡಕ್ಕೆ ಹೋಲಿಸಿದರೆ ಹಿಂದಿ ಮಕ್ಕಳ ಸಾಹಿತಿಗಳು ಒಂದಿಷ್ಟು ಸುದೈವಿಗಳು. ಅವರ ಭಾಷೆ 5-6 ರಾಜ್ಯಗಳ ವ್ಯಾಪ್ತಿಯಲ್ಲಿ ಹರಡಿಕೊಂಡಿರುವುದರಿಂದ ದೊಡ್ಡ ಸಂಖ್ಯೆಯಲ್ಲಿ ಈ ರಂಗದಲ್ಲಿ ತೊಡಗಿಕೊಂಡಿರುವವರು, ಸಿಗುತ್ತಾರೆ. ಅನೇಕ ಮಕ್ಕಳ ಪತ್ರಿಕೆಗಳೂ ಹಿಂದಿಯಲ್ಲಿ, ಹಾಗಾಗಿ ಅವರದೇ ಆದ ಪ್ರತ್ಯೇಕತೆ ಸಾಧ್ಯವಾಗಿದೆ. ಹಾಗೆಂದು ಅಲ್ಲಿ ಭಾರತೀಯ ಇತರೆಲ್ಲ ಭಾಷಾ ವಲಯದಿಂದ ಭಿನ್ನವಾಗಿ ಮಕ್ಕಳ ಸಾಹಿತ್ಯಕ್ಕೆ ಮಾನ್ಯತೆ ಸಿಗುತ್ತಿದೆ ಎಂದೇನೂ ಅಲ್ಲ. ದೊಡ್ಡವರ ಸಾಹಿತ್ಯದ ಲೋಕ ಮಕ್ಕಳ ಸಾಹಿತ್ಯವನ್ನು 'ಅದರಲ್ಲೇನಿದೆ?' ಎನ್ನುವ ಉಪೇಕ್ಷಾ ಮನೋಭಾವನೆಯಲ್ಲೇ ಇದೆ. ದೊಡ್ಡವರ ಲೋಕದಲ್ಲಿ ಹೆಸರು ಮಾಡಿಕೊಂಡು ಮಕ್ಕಳಿಗಾಗಿ ಚೂರು ಪಾರು ಬರೆದರೂ ಅದು ಇನ್ನಿಲ್ಲದಂತೆ ಗೌರವಿಸಲ್ಪಡುವುದು ಕೂಡ ನಡೆಯುತ್ತಿದೆ. ಈ ಎಲ್ಲ ವಿಪರ್ಯಾಸಗಳ ನಡುವೆ ಹಿಂದಿಯ ಜನ ತಮ್ಮ ಸಂಖ್ಯಾ ಬಾಹುಳ್ಯದ ಕಾರಣದಿಂದ ತಮ್ಮದೇ ಆದ ಪ್ರತ್ಯೇಕ ವಲಯ ಮಾಡಿಕೊಂಡು ತಮಗೆ ತಾವೇ ಸಾಕಷ್ಟು ಪ್ರೋತ್ಸಾಹಕರ ವಾತಾವರಣ ನಿರ್ಮಿಸಿಕೊಂಡಿದ್ದಾರೆ. ಭಾರತೀಯ ಇಂಗ್ಲಿಷ್ ಮಕ್ಕಳ ಸಾಹಿತ್ಯದ ವಲಯದವರು ತಮ್ಮಷ್ಟಕ್ಕೇ ಅದೇನೋ ತಮ್ಮದೆ ಪ್ರತಿಷ್ಠೆ ಎನ್ನುವಂತೆ ಪ್ರಾದೇಶಿಕ ಭಾಷಾವಲಯಗಳ ಕಡೆಗೆ ಹೊರಳಿಯೂ ನೋಡದೆ ತಮ್ಮೊಳಗೇ ಮುಳುಗಿರುವುದು ಇದ್ದೇ ಇದೆ. ದೆಹಲಿ, ಮುಂಬೈ, ಅಮೃತಸರ, ಮುಂತಾಗಿ ಅನೇಕ ಶಹರಗಳಲ್ಲಿ ಇರುವ ಹಿಂದಿ ಬರಹಗಾರರನ್ನು ಹೊರಳಿಯೂ ನೋಡದೆ ಭಾಷೆಯ ಕಾರಣದಿಂದ, ದೊಡ್ಡ ದೊಡ್ಡ ಪ್ರಕಾಶಕರನ್ನು ಆಶ್ರಯಿಸಿಕೊಂಡು ಎಲ್ಲ ವೇದಿಕೆಗಳಲ್ಲಿ ಕಾಣಿಸಿಕೊಳ್ಳುತ್ತಲೇ ಇದ್ದಾರೆ. ಇಂಗ್ಲಿಷ್ ಚೆನ್ನಾಗಿ ಬರುವ ರಮೇಶ ತೈಲಂಗ, ತಮ್ಮ ಆಡು ನುಡಿ ಹಿಂದಿಯಲ್ಲೇ ಅಕ್ಕರೆಯಿಂದ ಕೆಲಸ ಮಾಡುತ್ತಿದ್ದಾರೆ. ಹಿಂದಿ ಲೇಖಕರನ್ನು ಆದಷ್ಟು ದೊಡ್ಡ ಆವಾರಕ್ಕೆ ಪರಿಚಯಿಸಬೇಕೆನ್ನುವ, ಇತರ ಭಾಷೆಗಳ ಲೇಖಕರನ್ನು ಸಂಪರ್ಕಿಸುವ ವಿರಳವಾದ, ಆದರೆ ಅಗತ್ಯದ ಪ್ರಯತ್ನವನ್ನು ಮಾಡುತ್ತಲೇ ಇದ್ದಾರೆ. ಈಚೆಗೆ ಕನ್ನಡದ ನಮ್ಮ ಗೆಳೆಯರ ಬಳಗದ ವೆಬಿನಾರಿನಲ್ಲಿ ಭಾಗವಹಿಸುತ್ತ ಇಂಥ ಪರಸ್ಪರ ಭಾರತೀಯ ಸಂಪರ್ಕದ ಅಗತ್ಯದ ಕುರಿತು ಅವರು ಮಾತನಾಡಿದ್ದರು.

ರಮೇಶ ತೈಲಂಗ ಅವರು ಮಧ್ಯಪ್ರದೇಶದ ತಿಕಮಘರ್‌ನಲ್ಲಿ ಹುಟ್ಟಿದವರು. ಈಗ ಮುಂಬೈಯಲ್ಲಿ ವಾಸವಾಗಿದ್ದಾರೆ. ಹಿಂದಿ ಮತ್ತು ಸಮಾಜಶಾಸ್ತ್ರದಲ್ಲಿ ಗ್ವಾಲ್ಲೀರದ ಜವಾಲಿ ವಿಶ್ವವಿದ್ಯಾಲಯದಿಂದ ಸ್ನಾತಕೋತ್ತರ ಶಿಕ್ಷಣ ಪೂರೈಸಿರುವ ಅವರು, ಇಂಡಸ್ಟ್ರಿಯಲ್ ರಿಲೇಷನ್ಸ್ ಹಾಗೂ ಮ್ಯಾನೇಜಮೆಂಟ್‌ನಲ್ಲಿ ಡಿಪ್ಲೋಮಾ ಕೂಡಾ ಮಾಡಿದವರು. ದೆಹಲಿಯ ಎಚ್ ಟಿ ಮೀಡಿಯಾದಲ್ಲಿ ತಮ್ಮ ವೃತ್ತಿ ಜೀವನ ನಡೆಸಿದ್ದಲ್ಲದೆ, 'ಮುಕ್ತವಾಣಿ' ಮಕ್ಕಳ ಪತ್ರಿಕೆಗಾಗಿ ಗೌರವ ಸಂಪಾದಕರಾಗಿಯೂ ಸೇವೆ ಸಲ್ಲಿಸಿದವರು. 'ಕ್ರಿಯೇಟಿವ್ ಮೀಡಿಯಾ ಪೀಪಲ್ಸ್ ಗ್ರೂಪ್' ಮುಖ್ಯ ಕಾರ್ಯಕಾರಿ ಅಧಿಕಾರಿಯಾಗಿ ಕೂಡಾ ಸೇವೆ ಸಲ್ಲಿಸುತ್ತ ಬಂದಿದ್ದಾರೆ. ಸಾಕಷ್ಟು ಬರವಣಿಗೆಯನ್ನು ಮಾಡಿರುವ ಅವರು ಮಕ್ಕಳ ಸಾಹಿತ್ಯದಲ್ಲಿಯೇ ವಿಶೇಷದ ಅಕ್ಕರೆ ಉಳ್ಳವರು, ಅದರಲ್ಲೂ ಕವಿತೆಯಲ್ಲೇ ಅವರಿಗೆ ಒಲವು. ಇಲ್ಲಿಯವರೆಗೆ ಒಂಬತ್ತು ಕವಿತಾ ಸಂಕಲನಗಳನ್ನು ಪ್ರಕಟಿಸಿದ್ದಾರೆ. ಅಲ್ಲದೆ 'ಬಾಲ ಭಾರತಿ' ಬಾಲ ಪತ್ರಿಕೆಯಲ್ಲಿ, ಇನ್ನೊಬ್ಬ ಉತ್ಸಾಹಿ ಲೇಖಕ ದೇವೆಂದ್ರ ಕುಮಾರ ಅವರ ಜೊತೆ ಸೇರಿ ವಿಶ್ವದ ಹಲವಾರು ಕ್ಲಾಸಿಕ್ ಕೃತಿಗಳನ್ನು ಪರಿಚಯಿಸುವ ಕಾರ್ಯ ಮಾಡಿದ್ದಾರೆ. ಜೆ. ಎಮ್. ಬೆರಿಯ ಸುಪ್ರಸಿದ್ಧ 'ಪೀಟ‌ ಪ್ಯಾನ್‌' ಕೃತಿಯನ್ನೂ ಅವರು ಹಿಂದಿಗೆ ತಂದುದಾಗಿದೆ. ಈಗಾಗಲೇ ಅನೇಕ ಪ್ರತಿಷ್ಠಿತ ಪುರಸ್ಕಾರಗಳು ಬಂದಿದ್ದು, ಹಿಂದಿ ಅಕಾಡೆಮಿಯಿಂದ ಅವರಿಗೆ ಎರಡು ಸಲ ಪುರಸ್ಕಾರ ಬಂದಿದೆ. ಸೂಚನಾ ಮತ್ತು ಪ್ರಸಾರಣಾ ಮಂತ್ರಾಲಯದಿಂದ ಮಕ್ಕಳ ಕವಿತಾ ಸಂಗ್ರಹ 'ಹರೀ ಭರೀ ಧರತಿ' ಕೃತಿಗೆ 'ಭಾರತೇಂದು ಹರಿಶ್ಚಂದ್ರ ಪುರಸ್ಕಾರ', ಹಾಗೂ ಕೇಂದ್ರ ಸಾಹಿತ್ಯ ಅಕಾಡೆಮಿ 'ಬಾಲ ಸಾಹಿತ್ಯ ಪುರಸ್ಕಾರ' (2013) ಬಂದಿದೆ.

1964ರಷ್ಟು ಮೊದಲಿನಿಂದಲೇ ಮಕ್ಕಳ ಸಾಹಿತ್ಯದ ಬರವಣಿಗೆಯಲ್ಲಿ ಆಸೆಗೊಂಡಿರುವ ಅವರ ರಚನೆಗಳು ಹಿಂದಿಯ ಹೆಸರುವಾಸಿ ಪರಾಗ, ನಂದನ, ಬಾಲ ಭಾರತಿ, ಸುಮನ ಸೌರಭ, ಬಾಲ ವಾಟಿಕಾ ಅಲ್ಲದೆ ಸುದ್ದಿ ಪತ್ರಿಕೆಗಳ ವಾರದ ಕಾಲಮ್ಮುಗಳಲ್ಲಿ ಬಹು ಸಮಯದಿಂದ ಪ್ರಕಟವಾಗುತ್ತ ಬಂದಿವೆ. 'ಉಡನ್ ಖಟೋಲೆ ಆ', 'ಏಕ ಚಪಾತಿ, 'ಕನೇರ ಕೆ ಫೂಲ್', 'ಇಕ್ಯಾವನ್ ಬಾಲಗೀತ', 'ಟಿಜಿ ಓ ಟಿಜಿ' 'ಲದ್ದೂ ಮೋತೀಚೂರ್ ಕೆ' ಮುಂತಾಗಿ ಕವಿತಾ ಸಂಕಲನಗಳು ಪ್ರಕಟಗೊಂಡಿದ್ದು, 'ಹಿಂದೀ ಕೆ ನಯೆ ಬಾಲಗೀತ' ಎನ್ನುವ ಪ್ರಾತಿನಿಧಿಕ ಸಂಕಲನವನ್ನು ದೇವೆಂದ್ರ ಕುಮಾರ ಹಾಗೂ ಪ್ರಕಾಶ ಮನು ಅವರ ಸಹಯೋಗದಲ್ಲಿ ಸಂಪಾದಿಸಿದ್ದಾರೆ ಕೂಡ.

ಅನುವಾದವಾಗಿ ನಿಮ್ಮ ಕೈಯಲ್ಲಿರುವ ಈ ಸಂಕಲನ ರಮೇಶ ಅವರಿಗೆ ಕೇಂದ್ರ ಸಾಹಿತ್ಯ ಅಕಾಡಿಮಿಯಿಂದ ಬಾಲ ಸಾಹಿತ್ಯ ಪುರಸ್ಕಾರ ತಂದುಕೊಟ್ಟ 'ಮೇರೆ ಪ್ರಿಯ ಬಾಲಗೀತ'ವೇ ಆಗಿದೆ.

ನನ್ನ ಇಲ್ಲಿನ ಅನುವಾದ ಕುರಿತು ಎರಡು ಮಾತು: ಮಕ್ಕಳ ಕವಿತೆಯನ್ನು ಅನುವಾದಿಸುವುದು ಬಹು ಕಷ್ಟದ ಕೆಲಸ. ಅದನ್ನು ಕನ್ನಡಕ್ಕೆ ತರುವುದರ ಜೊತೆಗೆ ಕನ್ನಡದ ಮಕ್ಕಳಿಗೆ ತಕ್ಕುದಾಗಿ ತಲುಪಿಸುವ ಸಾಹಸ ಮಾಡಬೇಕಾಗುತ್ತದೆ. ಗದ್ಯದ ಸಂದರ್ಭದಲ್ಲಿ ಇದಷ್ಟು ಸವಾಲಿನ ಕೆಲಸವಾಗಲಿಕ್ಕಿಲ್ಲ. ಅದರಲ್ಲೂ ಇನ್ನೊಂದು ಭಾಷೆಯ ಜಾಯಮಾನ, ಅಲ್ಲಲ್ಲಿನ ಪ್ರಾದೇಶಿಕ ಸಾಂಸ್ಕೃತಿಕ ವಿಭಿನ್ನತೆಗಳನ್ನು ಇನ್ನೊಂದೇ ಆದ ಸಾಂಸ್ಕೃತಿಕ, ಭಾಷಾ ವಲಯದ ಮಕ್ಕಳಿಗೆ ಮುಟ್ಟಿಸುವುದು ಬಲು ಬಲು ಕಷ್ಟದ ಕೆಲಸ. ನಾನು ಸಾಧ್ಯವಾದ ಪ್ರಾಮಾಣಿಕ ಪ್ರಯತ್ನ ಮಾಡಿದ್ದೇನೆ. ದೊಡ್ಡವರಿಗೆ ಇಲ್ಲಿನ ಸರಕನ್ನು ಮುಟ್ಟಿಸುವುದು ಅಷ್ಟು ಸವಾಲಿನದಲ್ಲ. ಹಿಂದಿಯ ಲಯಗಳಿಗೆ ಪ್ರತಿಯಾಗಿ ನಾನು ಕನ್ನಡದಲ್ಲಿ ಸಾಧ್ಯವಾಗುವ ಲಯಗಳನ್ನು, ಅಲ್ಲಲ್ಲಿ ಆಡುಮಾತಿನ ಶೈಲಿಯನ್ನು ಬಳಸಿಕೊಂಡಿದ್ದೇನೆ. ರಮೇಶ ಅವರು ತಮ್ಮ ಪರಿಸರದ ಮಕ್ಕಳ ಆಟದ ಹಾಡುಗಳ ಲಯಗಳನ್ನು, ಆಟದ ಕೆಲವೆಲ್ಲ ಶಾಕ ಬಳಕೆಗಳನ್ನು ಅನೇಕ ಸಲ ತಂದಿರುವುದಿದೆ. ಇಲ್ಲಿನ ಕವಿತೆಗಳೆಲ್ಲ ಸುಮಾರಾಗಿ 10 ವರ್ಷ, ಅದಕ್ಕಿಂತ ಚಿಕ್ಕವರ ಗ್ರಹಿಕೆಗೆ ನಿಲುಕುವುವಾಗಿವೆ. ಈ ಪುಟ್ಟರ ಅನುಭವ ಪ್ರಪಂಚದ ಸಂಗತಿಗಳೇ ಇಲ್ಲೆಲ್ಲ ಹರಡಿಕೊಂಡಿವೆ. ಅಲ್ಲದೆ ಅಗತ್ಯವಾಗಿ ಅಂತ ಭಾವಿಸಿಕೊಂಡಹಾಗೆ ಹಾಡಿನ ಲಯಗಳನ್ನೇ ಅವರು ಬಳಸಿಕೊಂಡಿದ್ದಾರೆ. ಶೀರ್ಷಿಕೆ 'ಮೇರೆ ಪ್ರಿಯ ಬಾಲಗೀತ' ಎನ್ನುವುದೇ ಅದನ್ನು ಹೇಳುತ್ತದೆ. ಇಲ್ಲಿನ ರಚನೆಗಳನ್ನು ನೋಡಿದಾಗ ಬಾಲ್ಯದ ಸ್ವಚ್ಛಂದತೆ, ಆಟಗುಳಿತನ, ಮೋಜು ಇಲ್ಲಿ ಹೆಚ್ಚಾಗಿ ಕಾಣಿಸಿವೆ. ತೈಲಂಗ ಅವರಿಗೆ ಮಕ್ಕಳ ಈ ಸ್ವತಂತ್ರ ಆನಂದದ ಲೋಕ ತುಂಬ ಪ್ರಿಯವಾದುದು ಎನ್ನುವುದು ತಟಕ್ಕನೆ ತಿಳಿಯುತ್ತದೆ.

ಕನ್ನಡದ ಹಾಗೆ ಹಿಂದಿಯಂಥ ವಿಸ್ತಾರದ ವಲಯದಲ್ಲೂ ಮಕ್ಕಳ ಪುಸ್ತಕಗಳು ಚಿತ್ರಗಳನ್ನು ಹೊಂದಲು ಪ್ರಯಾಸ ಪಡುವ ಪ್ರಮೇಯವೇ ಇದೆ. ಪ್ರಸ್ತುತ ಸಂಕಲನದಲ್ಲಿ ಪರವಾಯಿಲ್ಲ ಎನ್ನುವ ಹಾಗೆ ರೇಖಾ ಚಿತ್ರಗಳು ಪಟಪಟದಲ್ಲೂ ಕಾಣಿಸುತ್ತವೆ.

ನಗನಿಸಿದಹಾಗೆ ಈ ಅನುವಾದದ ಹೆಸರಿನಲ್ಲಿ, ಆದಷ್ಟು ಮೂಲದ ರಚನೆಗಳಲ್ಲಿನ ಬಾಲ ಭಾವಕೋಶವನ್ನು ತಲುಪಿಸುವ ಪ್ರಯತ್ನ ಮಾಡಿದ್ದೇನೆ. ಅಲ್ಲಿನವೇ ಕಲ್ಪನೆಗಳನ್ನು ತರುವುದು ಕಷ್ಟ ಸಾಧ್ಯ, ಕನ್ನಡದ ಸಂದರ್ಭದಲ್ಲಿ ಬೇರೇನೋ ಬೇಕೆನಿಸತೊಡಗುತ್ತದೆ. ಅಲ್ಲದೆ ಅಲ್ಲಿನ ಸಾಂಸ್ಕೃತಿಕ ವಾತಾವರಣ, ಅದರ ಛಾಪಿನ ಭಾಷಾ ಬಳಕೆಗಳು ಇವನ್ನೆಲ್ಲ ಕನ್ನಡದ ಓದುಗರಿಗಾಗಿ ಕನ್ನಡದ ಪರಿಸರಕ್ಕೆ ಸರದೂಗಿಸುವುದೂ ತೀರ ಅಗತ್ಯವಾಗುತ್ತದೆ. ಹಾಗೆ ಮಾಡುವಾಗ ಕೆಲವೆಲ್ಲ ರಚನೆಗಳು ಮೂಲದ ರಚನೆಗಿಂತ ಹೆಚ್ಚಿನ ವಿಸ್ತಾರವನ್ನು ಸುಲಭದಲ್ಲಿ ಪಡೆದುಬಿಡಬಹುದು ಎನಿಸಿದಾಗ, ಹಾಗೆ ಮಾಡಿದ್ದೇನೆ. ಅಂತೂ ಅಲ್ಲಿನ ಯಾವ ಸಂಗತಿಗಳೂ ಮೊಟಕಾಗದಂತೆ ಎಚ್ಚರಿಕೆ ವಹಿಸಲು ನೋಡಿದ್ದೇನೆ.

ತೈಲಂಗರ ಈ ಸಂಕಲನ ೨೦೧೦ರಲ್ಲಿ ಪ್ರಕಟವಾದುದು. ೧೬೩ ಪದ್ಯಗಳ ಬಲು ದೊಡ್ಡ ಕಟ್ಟು ಇದು. ಹಾಗಿದ್ದೂ ಈಗ ಸಾಕಷ್ಟು ಸಮಯ ಗತಿಸಿರುವುದರಿಂದ ಇಂದಿನ ಅವರ ಬರವಣಿಗೆ ಹೊಸತಿಗೆ ಬದಲಾವಣೆಗೆ ತುಡಿಯುತ್ತಿದೆ. ಅಂತೂ ಹಿಂದಿ ವಲಯದಲ್ಲಿ ಒಂದು ನಿರ್ದಿಷ್ಟ ಅವಧಿಯಲ್ಲಿ ಗುರುತಿಸಲ್ಪಟ್ಟಿರುವ ಸಂಕಲನವನ್ನು ಕನ್ನಡಕ್ಕೆ - ಮುಟ್ಟಿಸುತ್ತಿದ್ದೇನೆ.

ಈ ಸಂಕಲನವನ್ನು ನೋಡಿದಾಗ ತೀರ ವಿಶೇಷದ ಬರವಣಿಗೆ - ಅಂತೇನೂ ನನಗೆ ಅನಿಸಲಿಲ್ಲ. ಕನ್ನಡದಲ್ಲಿ ಈ ಬಗೆಯ ಬರವಣಿಗೆ ಮೊದಲ, ಎರಡನೆಯ ಘಟ್ಟದಲ್ಲಿ ಸಾಕಷ್ಟು ಕಾಣಿಸಿಯಾಗಿದೆ. ಕನ್ನಡದಲ್ಲಿ ಮೂರನೆಯ ಘಟ್ಟ ಎನ್ನುವುದರಲ್ಲಿ ಸಾಕಷ್ಟು ಹೊಸ ತುಡಿತ ಕಾಣುತ್ತದೆ. ರಮೇಶ ಅವರ ಈ ಸಂಕಲನದ ಹೊತ್ತಿಗಿನ ನನ್ನ ಕವಿತೆಗಳು ಸಾಕಷ್ಟು - ಬೇರೆಯದನ್ನು ಹೇಳುತ್ತಿವೆ. ಹಿಂದಿಯ ಹಲವೆಲ್ಲ ಕೃತಿಗಳನ್ನು ನಾನು ಅವಲೋಕಿಸಿದ್ದೇನೆ. ಹಿರಿಯ ಕವಿ ಪ್ರಕಾಶ ಮನು ಅವರ ಸಮಗ್ರ ಸಂಕಲನವನ್ನೂ ಕೂಡ ಹಿಂದಿಯಲ್ಲಿ ಬಹು ಸಂಖ್ಯೆಯಲ್ಲಿ ಕವಿಗಳು ಕಾಣಸಿಗುತ್ತಾರೆ. ಹಾಗಾಗಿ ತಟಕ್ಕನೆ ಒಂದಾವುದೋ ನಿರ್ಧಾರಕ್ಕೆ ಬರಲಾಗುವುದಿಲ್ಲ, ಇರಲಿ.

ಈ ಸಂಕಲನದ ಹೊದಿಕೆಯ ಒಳ ಮಡಿಕೆಯಲ್ಲಿ (ಬಹುಶಃ ಅದು ಪ್ರಕಾಶಕರು ವ್ಯಕ್ತಪಡಿಸಿದುದು) ಕಾಣುವ ಕೆಲ ಮಾತುಗಳನ್ನು ನೋಡಬಹುದು : 'ರಮೇಶ ಅವರು ಒಂದಿಷ್ಟು ಹೆಚ್ಚೇ ಸವಾಲುಗಳನ್ನು ಎದುರಿಗಿಟ್ಟುಕೊಳ್ಳುತ್ತಾರೆ. ಒಂದು ವಿಧದ ಕವಿತೆಯಲ್ಲಿ ಇನ್ನೊಂದೇ ಆದ ವಿಧವನ್ನು ತರಲು ಹಿಂದೆಮುಂದೆ ನೋಡುವುದಿಲ್ಲ. ಅವರು ಬಳಸಿಕೊಳ್ಳುವ ಪ್ರತಿಮಾ ವಿಧಾನ ವಿರಳ ಮಾದರಿಯದು. ತಮ್ಮ ಬಾಲಗೀತಗಳಲ್ಲಿ ಅವರು ಪರಂಪರೆಯಿಂದ ಸ್ವೀಕರಿಸುವುದರೊಂದಿಗೆ ಸಮಕಾಲೀನ ಸ್ಪಂದನಕ್ಕೂ ಇಳಿಯುತ್ತಾರೆ. ಕಾರಣಕ್ಕೆ ಅವರು ಬಹುಶಃ ಇದೇ ಸಮಕಾಲೀನ ಬಾಲ ಕವಿತೆಯಲ್ಲಿ ತಮ್ಮದೇ ಆದ ವಿಶೇಷತೆಯನ್ನು ತರುತ್ತಾರೆ. ಬಹು ಮುಖ್ಯವಾಗಿ ಮಕ್ಕಳ ಸಾಹಿತ್ಯವನ್ನು ಗಂಭೀರವಾಗಿ ಭಾವಿಸಿರುವ, ಈ ಇಳಿ ವಯಸ್ಸಿನಲ್ಲಿಯೂ ಅತ್ಯುತ್ಸಾಹದಿಂದ ತೊಡಗಿಕೊಂಡಿರುವ, ವಿಸ್ತಾರದ ಓದಿಗೆ, ಚರ್ಚೆಗೆ ತೆರೆದುಕೊಂಡಿರುವ ರಮೇಶ ಅವರ ಆಸಕ್ತಿಯನ್ನ ಇಟ್ಟುಕೊಂಡೇ ನಾನು ಅವರ ಈ ಸಂಕಲನವನ್ನು ಅನುವಾದಿಸಲು ಬಯಸಿದ್ದು, ಹಿಂದಿಯಲ್ಲಿ ಹೇಗೆಲ್ಲ ಬರುತ್ತಿದೆ ಎನ್ನುವ ಒಂದು ಪರಿಚಯವಂತೂ ಇಲ್ಲಿ ಖಂಡಿತ ಸಾಧ್ಯವಾಗುತ್ತದೆ.

- ಆನಂದ ಪಾಟೀಲ

MORE FEATURES

ಇತ್ತೀಚೆಗೆ ಮನುಷ್ಯನು ಬಹಳಷ್ಟು ಸ್ವಾರ್ಥಿಯಾಗುತ್ತಿದ್ದಾನೆ: ಜಿ.ಎಸ್. ಗೋನಾಳ

18-04-2024 ಬೆಂಗಳೂರು

'ಭೂಮಿ, ಆಕಾಶ, ಸೂರ್ಯ, ಚಂದ್ರ, ಗಾಳಿ, ಬೆಳಕು, ನೀರು, ಗಿಡಮರಗಳು, ಪ್ರಾಣಿ, ಪಕ್ಷಿಗಳ ನಿಸ್ವಾರ್ಥದ ಸೇವೆಯನ್ನು ಮರೆ...

'ಮರ ಬರೆದ ರಂಗೋಲಿಯ ರಂಗಿನೋಕುಳಿ'

18-04-2024 ಬೆಂಗಳೂರು

'ಭಾರತದಲ್ಲಿ ಪ್ರಥಮ ಬಾರಿಗೆ ಹೈಕು ಪರಿಚಯಿಸಿದವರು ಡಾ. ರವೀಂದ್ರನಾಥ್ ಟ್ಯಾಗೋರ್ ರವರು. ಜಪಾನಿನ ಪ್ರಸಿದ್ಧ ಹೈಕು ಕವ...

ಛಾಯಾಗ್ರಹಣ ಕೂಡ ಒಂದು ಕಲಾ ಮಾಧ್ಯಮ: ಡಿ.ಜಿ. ಮಲ್ಲಿಕಾರ್ಜುನ

17-04-2024 ಬೆಂಗಳೂರು

“ಛಾಯಾಗ್ರಹಣ ಕೂಡ ಒಂದು ಕಲಾ ಮಾಧ್ಯಮ. ಸೃಜನಶೀಲ ಮನಸ್ಥಿತಿ, ಕಲಾವಿದನೊಬ್ಬನ ಕಣೋಟ ಇದ್ದರಷ್ಟೇ ಉತ್ತಮ ಛಾಯಾಚಿತ್ರಗ...