ಮಕ್ಕಳ ಸಾಹಿತ್ಯ ಖುಷಿ ಕೊಡುತ್ತಲೇ ಭಾಷಾ ಪರಿಣತಿ ನೀಡುತ್ತದೆ: ಟಿ.ಎಸ್.‌ ನಾಗರಾಜ ಶೆಟ್ಟಿ


ನಮ್ಮ ಮಕ್ಕಳಿಗೆ ಸವಿಯಾದ ಮಕ್ಕಳ ಸಾಹಿತ್ಯವನ್ನು ಒದಗಿಸುತ್ತ ಅವರನ್ನು ಕನ್ನಡದತ್ತ ಕೊಂಡೊಯ್ಯಬೇಕಾಗಿದೆ. ಅದು ಮಕ್ಕಳಿಗೆ ಖುಷಿ ಕೊಡುತ್ತಲೇ ಭಾಷಾ ಪರಿಣತಿ ನೀಡುತ್ತದೆ ಎನ್ನುತ್ತಾರೆ ಲೇಖಕ ಟಿ.ಎಸ್.‌ ನಾಗರಾಜ ಶೆಟ್ಟಿ . ಇವರು ತಮ್ಮ ನರಿಯಣ್ಣನ ಅಂಗಡಿ ಪುಸ್ತಕ ದಲ್ಲಿ ʻಮೊದಲ ಮಾತುʼ ಶೀರ್ಷಿಕೆಯಡಿ ಬರೆದ ಸಾಲುಗಳು ನಿಮ್ಮ ಓದಿಗಾಗಿ...

ಪೋಷಕರ ಬಯಕೆಯಂತೆ ಇಂಗ್ಲಿಷಿನ ವ್ಯಾಮೋಹಕ್ಕೆ ಸಿಲುಕಿರುವ ಮಕ್ಕಳನ್ನೂ, ಹರಕು ಮುರುಕು ಇಂಗ್ಲಿಷಿನಲ್ಲಿ ಮಾತನಾಡುತ್ತಿರುವ ಮಕ್ಕಳನ್ನೂ ಕಂಡಾಗ ಮುಂದೆ ಇವರೆಲ್ಲ ಬೆಳೆದ ಮೇಲೆ ಕನ್ನಡವನ್ನು ಮಾನ್ಯ ಮಾಡುವರೇ, ನಮ್ಮ ಭಾಷೆಗೆ ಗೌರವ ಸಲ್ಲಿಸುವರೇ ಎನ್ನುವ ಅನುಮಾನ ಮೂಡುತ್ತದೆ. ಜೊತೆಯಲ್ಲೇ ಇನ್ನು ಕನ್ನಡ ಉಳಿದು ಬೆಳೆಯುವುದಾದರೂ ಹೇಗೆ ಎನ್ನುವ ಆತಂಕವೂ ಕಾಡುತ್ತದೆ. ಇಲ್ಲಿ ಯೂನಿಸೆಫ್ ಘೋಷಿಸಿರುವ ಮಾತೊಂದು ನೆನಪಾಗುತ್ತದೆ:

“ಮುಂದಿನ ಶತಮಾನದಲ್ಲಿ ಜನತೆ ಶಾಂತಿ ಸಮೃದ್ಧಿಯಿಂದ ಬಾಳಬೇಕಾದರೆ ಮಕ್ಕಳ ಸಾಹಿತ್ಯ ಒಂದೇ ಪಥ ಪ್ರದರ್ಶನ. ಮನಸ್ಸಿಗೆ ನೆಮ್ಮದಿ ನೀಡುವ ಮೂಲ ಮಂತ್ರ.”

ಇದನ್ನರಿತು ಇನ್ನಾದರೂ ನಮ್ಮ ಮಕ್ಕಳಿಗೆ ಸವಿಯಾದ ಮಕ್ಕಳ ಸಾಹಿತ್ಯವನ್ನು ಒದಗಿಸುತ್ತ ಅವರನ್ನು ಕನ್ನಡದತ್ತ ಕೊಂಡೊಯ್ಯಬೇಕಾಗಿದೆ. ಅದು ಮಕ್ಕಳಿಗೆ ಖುಷಿ ಕೊಡುತ್ತಲೇ ಭಾಷಾ ಪರಿಣತಿ ನೀಡುತ್ತದೆ. ಕನ್ನಡದಲ್ಲಿ ಅವರು ನುರಿತ ನಂತರ ಎಷ್ಟು ಭಾಷೆಗಳನ್ನು ಬೇಕಾದರೂ ಕಲಿಯಲು ಅನುವು ಮಾಡಿಕೊಡುತ್ತದೆ ಎನ್ನುವುದನ್ನು ನಾವೆಲ್ಲ ಮರೆಯುವಂತಿಲ್ಲ. ಇಂಗ್ಲಿಷ್ ಕಲಿಯಲು ಇಷ್ಟು ಆತುರ ಸಲ್ಲ. ಇವತ್ತು ಮಕ್ಕಳ ಸಾಹಿತ್ಯದ ಅಗತ್ಯತೆ ಎಷ್ಟಿದೆ ಎಂದು ತಿಳಿಸಲು ಈ ಮಾತುಗಳನ್ನು ಪ್ರಸ್ತಾಪಿಸಬೇಕಾಯಿತು.

- ಟಿ.ಎಸ್.‌ ನಾಗರಾಜ ಶೆಟ್ಟಿ

****

ಕೃತಿಯಲ್ಲಿನ ಕೆಲವು ಕವನಗಳು...

ನವಿಲು ಗರಿ

ಗರಿ ಗರಿ ಗರಿ ಗರಿ ನವಿಲುಗರಿ
ಮಿರಿ ಮಿರಿ ಮಿಂಚುವ ನವಿರುಗರಿ
ಗೆರೆ ಗೆರೆ ಗೆರೆ ಗೆರೆ ನವಿಲುಗರಿ
ನನ್ನಯ ಮೆಚ್ಚಿನ ಹೊಳಪುಗರಿ

ಅಣ್ಣನು ಕೊಟ್ಟ ಈ ಗರಿಯನ್ನು
ಹೊತ್ತಗೆಯೊಳಗಡೆ ಮುಚ್ಚುವೆನು
ಗುಟ್ಟಲಿ ಅವನು ಹೇಳಿದ ಹಾಗೆ
ಮರಿಯನು ಹಾಕಲು ಮೆಚ್ಚುವೆನು

ಗರಿಮರಿಯದನು ಯಾರಿಗೆ ಕೊಡಲಿ
ಎನ್ನುತ ನಾನು ಯೋಚಿಸಿದೆ
ಜಗಳದ ರಾಮಗೆ ಕೊಡುವುದೆ ಇಲ್ಲ
ಮೋಸದ ಸೋಮಗೆ ಈವುದು ಸಲ್ಲ

ಕಡಲೆ ಬೆಲ್ಲ ಕೊಡುವನು ಭೀಮ
ಆದರೆ ಏನು ಜಂಬದ ಕೋಳಿ
ಕೊಡುವುದು ಏಕೆ ಚಂದುವಿಗಿದನು
ಹೊಟ್ಟೆಯ ಕಿಚ್ಚಿನ ಮೊಟ್ಟೆಯ ಕೋಳಿ

ಕಂಕುಳ ಮಗುವನು ಬಿಗಿಯಲಿ ಹಿಡಿದು
ಹುಡುಕಿದರಂತೆ ಊರಿನ ತುಂಬ
ಮನೆಯಲೆ ಇಲ್ಲವೆ ಮೆಚ್ಚಿನ ತಂಗಿ
ನನ್ನಯ ಮುದ್ದಿನ ಚಂದದ ಬಿಂಬ

ಅವಳಿಗೆ ಕೊಡುವೆನು ಆ ಗರಿಯನ್ನು
ಮುತ್ತನು ಕೊಡುವಳು ಅವಳೆನಗೆ
ಪುಕ್ಕಟೆ ಕೊಟ್ಟಂತಾಗುವುದಿಲ್ಲ
ಗರಿಮರಿ ಮನೆಯನು ಬಿಡುವುದೆ ಇಲ್ಲ!

****

ಮಸಾಲೆ ದೋಸೆ

ದೋಸೆ ದೋಸೆ ಮಸಾಲೆ ದೋಸೆ
ಹೆಂಚಿನ ಮೇಲೆ ಚುಯ್ ಚುಯ್ ದೋಸೆ
ಅಮ್ಮನು ಹುಯ್ಯುವ ಹೂವಿನ ದೋಸೆ
ಅಚ್ಚು ಮೆಚ್ಚಿನ ತುಪ್ಪದ ದೋಸೆ

ಹಿಟ್ಟನು ಸೌಟಲಿ ಸರ್್ರನೆ ಹುಯ್ಯಲು
ಕರ್ರನೆೆ ಹೆಂಚಲಿ ಬೆಳ್ಳಿಯ ದೋಸೆ
ಕಂಡರೆ ಕುಣಿವುದು ಅಪ್ಪನ ಮೀಸೆ
ತಂಗಿಗು ನನಗು ಬಲು ಆಸೆ

ಮಿರುಗುವ ಬಿಸಿ ಬಿಸಿ ಪಲ್ಯದ ದೋಸೆ
ಬೇಗನೆ ತಿಂದರೆ ಬುದ್ದಿಯ ಕಲಿಸೆ
ತೆಕ್ಕನೆ ನಾಲಗೆ ಸುಡುವ ದೋಸೆ
ಮೆಲ್ಲನೆ ಮೆಲುವ ದುಂಡನೆ ದೋಸೆ

ಕಷ್ಟಪಟ್ಟು ಎಷ್ಟೇ ತಿಂದರು
ಇಷ್ಟ ತೀರದ ಪುಷ್ಟಿಯ ದೋಸೆ
ಹೊಟ್ಟೆಮೀರಿ ಬಕ ಬಕ ತಿಂದರೆ
ಅರಗದೆ ಕರಗದೆ ಕಾಡುವ ದೋಸೆ

ದೋಸೆ ದೋಸೆ ಮಸಾಲೆ ದೋಸೆ
ಹೆಂಚಿನ ಮೇಲೆ ಚುಯ್ ಚುಯ್ ದೋಸೆ
ಅಮ್ಮನು ಹುಯ್ಯುವ ಹೂವಿನ ದೋಸೆ
ಅಚ್ಚು ಮೆಚ್ಚಿನ ತುಪ್ಪದ ದೋಸೆ

****

MORE FEATURES

ತುಳುನಾಡಿನ ದೈವಾರಾಧನೆಯ ಒಳ, ಹೊರಗಿನ ವಿಚಾರಗಳನ್ನು ಈ ಕೃತಿ ದಾಖಲಿಸಿದೆ

24-04-2024 ಬೆಂಗಳೂರು

"ಇದನ್ನು ಪುಸ್ತಕ ಅನ್ನುದಕ್ಕಿಂತಲೂ ದೈವಗಳ ಬಗ್ಗೆ ಭಕ್ತಿ , ಪ್ರೀತಿ ಇರುವವರ ಮನೆಯಲ್ಲಿರಲೆಬೇಕಾದ ಅಧ್ಬುತವಾದ ಗ್ರಂ...

ಸಾಮಾಜಿಕ ನ್ಯಾಯದ ಪ್ರಜ್ಞೆಯಾಗಿ ಡಾ. ರಾಜ್ ಕುಮಾರ್

24-04-2024 ಬೆಂಗಳೂರು

ಕನ್ನಡ ರಂಗಭೂಮಿ ಮತ್ತು ಚಿತ್ರರಂಗ ಕಂಡ ಮೇರು ಕಲಾವಿದ ಡಾ.ರಾಜ್ ಕುಮಾರ್. ನಟಸಾರ್ವಭೌಮ, ವರನಟ ಡಾ.ರಾಜ್ ಕುಮಾರ್ ತಮ್ಮ ಚಿ...

ಉಪನಿಷತ್ತುಗಳನ್ನು ವಿಮರ್ಶಾತ್ಮಕ ನೆಲೆಯಲ್ಲಿ ಕಾಣುವ ಪ್ರಯತ್ನವೇ ಈ ಕೃತಿ

23-04-2024 ಬೆಂಗಳೂರು

‘ಉಪನಿಷತ್ತುಗಳನ್ನು ಪರಿಚಯಿಸುವ ಪುಸ್ತಕವೇ ಆದರೂ ವಿಮರ್ಶಾತ್ಮಕ ನೆಲೆಯಲ್ಲಿ ಅವನ್ನು ಕಾಣುವ ಪ್ರಯತ್ನವಾಗಿದೆ. ನಿಗ...