ಮಕ್ಕಳೊಂದಿಗೆ ಮೊದಲ ಹೆಜ್ಜೆ


ಯಂತ್ರಗಳು-ತಂತ್ರಜ್ಞಾನದ ಅಬ್ಬರದಲ್ಲಿ ಮಕ್ಕಳ ಸಾಹಿತ್ಯ ರಚನೆ ಕಡಿಮೆಯಾಗುತ್ತಿರುವ ಪ್ರಸಕ್ತ ದಿನಗಳಲ್ಲಿ ಈ ಸಾಹಸದೆಡೆಗೆ ಹೆಜ್ಜೆ ಹಾಕುತ್ತಿರುವ ವಿರಳ ಬರಹಗಾರರ ಪೈಕಿ ಎಡೆಯೂರು ಪಲ್ಲವಿ ಒಬ್ಬರು. ಮಕ್ಕಳಲ್ಲಿ ಪರಿಸರ ಪ್ರಜ್ಞೆ, ನೀತಿ ಬೋಧನೆ ಹೀಗೆ ಸೂಕ್ಷ್ಮ, ನವಿರಾದ ಭಾವಗಳನ್ನು ಸ್ಫುರಿಸುವ ತಮ್ಮ ಸಾಹಿತ್ಯದ ಜೀವಾಳವಾಗಿಸಿಕೊಂಡಿರುವ ಈ ಲೇಖಕಿಯ ‘ಭೂಮ್ತಾಯಿ ಅಜ್ಜಿ ಆದ್ಲಾ?’ ಮಕ್ಕಳ ಕಥಾ ಸಂಕಲನ ಕುರಿತು ಹಿರಿಯ ಸಾಹಿತಿ ನಾಗೇಶ್ ಹೆಗಡೆ ಅವರು ಬರೆದ ಮುನ್ನುಡಿ ಇಲ್ಲಿದೆ.

“ಮಕ್ಕಳು ದೊಡ್ಡವರಿಗಾಗಿ ಕತೆ ಬರೆಯುವುದಕ್ಕಿಂತ ದೊಡ್ಡವರು ಮಕ್ಕಳಿಗಾಗಿ ಕತೆ ಬರೆಯೋದೆ ಕಷ್ಟ” ಎಂದು ರಸ್ಕಿನ್‌ ಬಾಂಡ್‌ ಹೇಳಿದ್ದರು. ರಸ್ಕಿನ್‌ ಬಾಂಡ್‌ ಎಂದರೆ ಬ್ರಿಟಿಷ್‌ ಅಪ್ಪ-ಅಮ್ಮನಿಗೆ ಜನಿಸಿ ಭಾರತದಲ್ಲೇ ಬೆಳೆದ ಕತೆಗಾರ. ಅವರು ಬರೆದ ಮಕ್ಕಳ ಕತೆಗಳಿಗೆ ದೊಡ್ಡ ದೊಡ್ಡ ಪ್ರಶಸ್ತಿಗಳು ಸಿಕ್ಕಿವೆ. ಪದ್ಮಭೂಷಣ ಪ್ರಶಸ್ತಿಯೂ ಲಭಿಸಿದೆ.

ಅವರಿಗೇ ಕಷ್ಟ ಎನಿಸಿದ ಕೆಲಸವನ್ನು ಈ ಪುಸ್ತಕದಲ್ಲಿ ಎಡೆಯೂರು ಪಲ್ಲವಿ ತೀರ ಸಲೀಸೆಂಬಂತೆ ಕೈಗೆತ್ತಿಕೊಂಡಿದ್ದಾರೆ. ಈ ಕತೆಗಳಲ್ಲಿನ ಬಹಳಷ್ಟು ಘಟನೆಗಳು ಶಾಲೆಯಲ್ಲಿ ಅಥವಾ ಮನೆಯಲ್ಲಿ ಆರಂಭವಾಗುತ್ತವೆ. ಆದರೆ ಮುಂದೆ ಪ್ರಕೃತಿಯ ಮಡಿಲಲ್ಲಿ ಕತೆಗಳು ಬೆಳೆಯುತ್ತವೆ.

ನಿಜ ಜೀವನದಲ್ಲೂ ಹಾಗೇ ತಾನೆ? ಮಕ್ಕಳ ಪ್ರಪಂಚವೆಲ್ಲ ಬಹುತೇಕ ಮನೆಯಲ್ಲೊ ಸ್ಕೂಲಲ್ಲೊ ಸುತ್ತುತ್ತಿರುತ್ತದೆ. ಆದರೆ ಅವರ ಕಲ್ಪನಾ ಲೋಕವೆಲ್ಲ ಕಾಡಿನಲ್ಲೊ, ನೀರಿನಲ್ಲೊ ಆಕಾಶದಲ್ಲೋ ಸುತ್ತುತ್ತಿರುತ್ತವೆ. ಕತೆಗಾರ್ತಿ ಪಲ್ಲವಿ ತನ್ನ ಬಹುತೇಕ ಎಲ್ಲ ಕತೆಯಲ್ಲೂ ಪರಿಸರದ ಸಂರಕ್ಷಣೆಯ ನೀತಿಪಾಠಗಳನ್ನು ನೇಯ್ದಿದ್ದಾರೆ. ಇಂದಿನ ಮಕ್ಕಳಿಗೆ ಪರಿಸರ ಅದು ಅತ್ಯಗತ್ಯವಾಗಿ ಬೇಕಾದ ಜ್ಞಾನ. ಅದನ್ನು ಈಗೀಗ ಪಠ್ಯಪುಸ್ತಕಗಳಲ್ಲಿ ಪಾಠಗಳಾಗಿ ಸೇರಿಸಲಾಗಿದೆಯಾದರೂ ಮಕ್ಕಳಿಗೆ ಕಡ್ಡಾಯ ಪಾಠದ ರೂಪದಲ್ಲಿ ಅಥವಾ ಹೋಮ್‌ವರ್ಕ್‌ ಶಿಕ್ಷೆಯ ರೂಪದಲ್ಲಿ ಪರಿಸರ ಜ್ಞಾನವನ್ನು ಅರೆದು ಕುಡಿಸುವುದಕ್ಕಿಂತ ಕತೆಯ ರೂಪದಲ್ಲಿ ಹೀಗೆ ನವಿರಾಗಿ ಹೇಳುವುದೇ ಮೇಲು.

ಹತ್ತು ವರ್ಷಕ್ಕಿಂತ ಕಿರಿಯ ಮಕ್ಕಳು ತಾವಾಗಿ ಓದಲು ಇಲ್ಲಿನ ಅನೇಕ ಕತೆಗಳು ತುಸು ಕ್ಲಿಷ್ಟ ಎನ್ನಿಸಬಹುದು. ಎಳೆ ಮಕ್ಕಳಿಗೆಂದು ವಾಕ್ಯ ರಚನೆ ಮಾಡುವಾಗ ಕಠಿಣ ಪದಗಳು ಇರಬಾರದು, ಉದ್ದುದ್ದ ವಾಕ್ಯ ಇರಬಾರದು, ಮಗುವಿನ ಕಲ್ಪನೆಗೆ ಎಟಕುವಷ್ಟೇ ಇರಬೇಕು ಇತ್ಯಾದಿ ನಿಯಮಗಳು ಇಲ್ಲಿ ತುಸು ಸಡಿಲವಾಗಿವೆ. ಅನುರಾಗ ಮೂಡುವುದು, ಗಾಂಧರ್ವ ವಿವಾಹ ಆಗುವುದು ಇವನ್ನೆಲ್ಲ ಅರ್ಥ ಮಾಡಿಕೊಳ್ಳಲು ಹಿರಿಯರ ನೆರವು ಬೇಕಾದೀತು. ಪರವಾಗಿಲ್ಲ. ಇದನ್ನು ಅಜ್ಜ-ಅಜ್ಜಿ, ಅಪ್ಪ-ಅಮ್ಮ-ಅಣ್ಣ-ಅಕ್ಕ ಅಥವಾ ಶಿಕ್ಷಕರು ಮಗುವಿಗೆ ಓದಿ ಹೇಳಬಹುದು. ಆ ನೆಪದಲ್ಲಿ ಹಿರಿಯರನ್ನೂ ಮಕ್ಕಳ ಕಥಾಲೋಕಕ್ಕೆ ಎಳೆದು ತರುವ ಉದ್ದೇಶ ಇಲ್ಲಿ ಸಫಲವಾಗುತ್ತದೆ. ಕಲಾವಿದ ಗುಜ್ಜಾರ್‌ ಅವರ ಚಿತ್ರಗಳು ಆಕರ್ಷಕವಾಗಿವೆ. ಮಗುವನ್ನು ತೊಡೆಯ ಮೇಲೆ ಕುಳ್ಳಿರಿಸಿಕೊಂಡು ಈ ಚಿತ್ರಗಳನ್ನು ತೋರಿಸುತ್ತ ಕತೆಗಳನ್ನು ಇನ್ನಷ್ಟು ರಂಜನೀಯವಾಗಿ ಹೇಳಬಹುದಾಗಿದೆ.

ಮಕ್ಕಳಿಗಾಗಿ ಇಂಥದ್ದೊಂದಿಷ್ಟು ಕತೆಗಳನ್ನು ಹೆಣೆಯಬೇಕು ಎಂಬ ಲೇಖಕಿಯ ಬಯಕೆ ಇಲ್ಲಿ ಸಾಕಾರಗೊಂಡಿದೆ. ಅದು ಅತ್ಯಂತ ಮಹತ್ವದ ಸಂಗತಿ. ಇಂದಿನ ಕಾಲದಲ್ಲಿ ಮಕ್ಕಳಿಗಾಗಿ ಕತೆ ಬರೆಯಬೇಕು ಎಂಬ ಆಸಕ್ತಿಯೇ ಕಡಿಮೆ ಆಗುತ್ತಿದೆ. ಹೇಗಿದ್ದರೂ ರೆಡಿಮೇಡ್‌ ಕತೆಗಳು ನಾನಾ ಮಾಧ್ಯಮಗಳ ಮೂಲಕ ಸಲೀಸಾಗಿ ಸಿಗುತ್ತಿವೆ. ಮಗುವಿನ ಕೈಗೆ ಮೊಬೈಲ್‌ ಹಿಡಿಸಿ ಅದರಲ್ಲಿ ಅದ್ಯಾವುದೋ ಕತೆಯ ವಿಡಿಯೊ ದೃಶ್ಯಗಳನ್ನು ಕೊಟ್ಟು ಕೂರಿಸಿ ತಮ್ಮ ಕೆಲಸದಲ್ಲಿ ತೊಡಗಿಕೊಳ್ಳುವ ಅಮ್ಮಂದಿರು ಎಲ್ಲೆಡೆ ಸಿಗುತ್ತಾರೆ. ಅಂಥ ವಿಡಿಯೊ ದೃಶ್ಯಗಳಲ್ಲಿ ಮಕ್ಕಳ ಕಲ್ಪನಾಶಕ್ತಿ ಬೆಳೆಯುವ ಯಾವ ಸಾಧ್ಯತೆಯೂ ಇರುವುದಿಲ್ಲ. ಕೇವಲ ಪರದೆಗೆ ಅಂಟಿಕೊಳ್ಳುವ ಚಟ ಮಾತ್ರ ಬೆಳೆಯುತ್ತದೆ. ಇಲ್ಲಿ ಹಾಗಲ್ಲ. ಭೂಮಿಗೆ ಬಂದು ಸಿಕ್ಕಿ ಹಾಕಿಕೊಂಡ ಚಂದ್ರ ಕೊನೆಗೆ ಒಂದು ಮಾಯಾ ಬಟ್ಟಲಿನ ಮೂಲಕ ಮೇಲಕ್ಕೇರುವ ಕತೆಯನ್ನು ಓದುತ್ತಿದ್ದರೆ ಮಗು ತನ್ನದೇ ಕಲ್ಪನೆಯಲ್ಲಿ ಚಂದ್ರನ ಜೊತೆಗೆ ತಾನೂ ಮೇಲೇರುತ್ತದೆ. ಅದೇ ದೃಶ್ಯವನ್ನು ಮಗು ಒಂದು ವಿಡಿಯೊ ಗ್ರಾಫಿಕ್‌ ಚಿತ್ರದ ಮೂಲಕ ನೋಡಿದರೆ ಮಗುವಿನ ಕಲ್ಪನೆಗೆ ಯಾವ ಅವಕಾಶವೂ ಉಳಿಯುವುದಿಲ್ಲ. ಹಾಗೆ ಮಗುವನ್ನು ಸಿದ್ಧ ಸೂತ್ರದ ಮೂಲಕ ಕೊಂಡೊಯ್ಯುವುದಕ್ಕಿಂತ ಕತೆಯನ್ನು ಓದುವುದು ಎಷ್ಟೋ ಪಾಲು ಮೇಲು.

ಮಕ್ಕಳ ಕೈಹಿಡಿದು ಕತೆಗಳ ಲೋಕಕ್ಕೆ ಹೆಜ್ಜೆ ಹಾಕಿಸುವ ಈ ಯತ್ನದಲ್ಲಿ ಪಲ್ಲವಿ, ಸ್ವತಃ ಮೊದಲ ಹೆಜ್ಜೆ ಇಟ್ಟಿದ್ದಾರೆ. ಅವರ ಹೆಜ್ಜೆ ದೃಢವಾಗಲಿ; ಅವರು ಬೆಳೆಯುತ್ತ ಹೋದಂತೆ ಮಕ್ಕಳ ಜಗತ್ತಿನಲ್ಲಿ ಎಳೆಯರಾಗಿಯೇ ಉಳಿಯಲಿ ಎಂದು ಹಾರೈಸುತ್ತೇನೆ.

MORE FEATURES

‘ಕಾವ್ಯ ಕವಿಯ ಆಶಯಗಳನ್ನೂ ಮೀರಿದ್ದು...

16-01-2021 ಬೆಂಗಳೂರು

ಕವಿ ಡಾ.ಆರನಕಟ್ಟೆ ರಂಗನಾಥ ಅವರ ಕವನ ಸಂಕಲನ ‘ಕಾರುಣ್ಯದ ಮೋಹಕ ನವಿಲುಗಳೆ ' ಕೃತಿ ಬಿಡುಗಡೆಗೆ ಸಿದ್ಧವಾಗಿದೆ....

ಕಾಲ ಸಂವೇದನೆಗಳ ಸಶಕ್ತ ಕವಿತೆಗಳು ‘...

11-01-2021 .

ಪ್ರತಿ ಸಂಗತಿಯನ್ನು ಸೂಕ್ಷ್ಮವಾಗಿ ಗ್ರಹಿಸಿ, ವಸ್ತುಸ್ಥಿತಿಯನ್ನು ಅರಿತು ಧನಾತ್ಮಕವಾಗಿ ಕಾಣುವ ಗುಣದ ಕಾವ್ಯಗಳನ್ನು ಹೆಣೆ...

ಕವಿತೆಗೆ ಹೊಸನುಡಿ: ಲೂಯಿಸ್ ಗ್ಲಿಕ್...

09-01-2021 ಬೆಂಗಳೂರು

ಕಾವ್ಯಕ್ಕಾಗಿ ನೊಬೆಲ್ ಪ್ರಶಸ್ತಿ ಪಡೆದ ಅಮೆರಿಕಾದ ಕವಯತ್ರಿ ಲೂಯಿಸ್ ಗ್ಲಿಕ್ ಅವರ ಕವಿತೆಗಳನ್ನು ಕವಯತ್ರಿ ಜ.ನಾ. ತೇಜಶ್ರ...

Comments