ಮಲೆಯಾಳಂ ಸಿನಿಮಾವೆಂಬ ಸುಂದರಿ ಕುಟ್ಟಿ..

Date: 30-10-2021

Location: ಬೆಂಗಳೂರು


ನಮ್ಮ ನಡುವೆ ನಿತ್ಯವೂ ಕಾಣುವ ಬಂಧ ಹಾಗೂ ವಲಯಗಳ ಸಹಜವಾದ ಹಾವಭಾವನ್ನು ಸೂಕ್ಶ್ಮವಾಗಿ ಗಮನಿಸಿದರೆ, ನಮ್ಮ ನಡುವಿರುವ ಅದೆಷ್ಟೋ ವಸ್ತುಗಳು ಕತೆಗಳಾಗಬಹುದು. ಇನ್ನೆಷ್ಟೋ ಸಹಜ ಆಡು ಮಾತುಗಳು, ಸಂಭಾಷಣೆಗಳಾಗಬಹುದು. ಪ್ರಾದೇಶಿಕ ಭಾಷಾ ಸೊಗಡಿನ ಸೇರ್ಪಡೆಯು ‘ಚೆರ್ರಿ ಟಾಪ್ ಆನ್ ದ ಕ್ರೀಮ್’ ನಂತೆ. ಸಹಜ ನಡೆನುಡಿ, ಹಾವಭಾವದ ವ್ಯಕ್ತಿಯೊಬ್ಬ ಸಿನೆಮಾದಲ್ಲಿ ಖುದ್ದು ಒಂದು ಪಾತ್ರವಾಗಿ ಮಿಂಚಿ ಬೆಳಗುವ ಭಾಗ್ಯವೂ ಸಿದ್ಧವಿರುತ್ತದೆ ಎನ್ನುತ್ತಾರೆ ಲೇಖಕ ಸಂತೋಷ್ ಅನಂತಪುರ. ಅವರ ಅನಂತಯಾನ ಅಂಕಣದಲ್ಲಿ ಮಲೆಯಾಳಂ ಸಿನಿಮಾ, ನಟ- ನಟಿಯರು, ಅಲ್ಲಿನ ಸಿನಿಮಾದ ಸಹಜತೆ ಹಾಗೂ ಸಾಧ್ಯತೆಗಳು ಸೇರಿದಂತೆ ಹಲವು ವಿಚಾರಗಳ ಬಗ್ಗೆ ವಿಶ್ಲೇಷಿಸಿದ್ದಾರೆ.

ಮಲೆಯಾಳಂ ಸಿನೆಮಾವೆಂಬ ಸುಂದರಿ ಕುಟ್ಟಿ
-1-

ಸಿನೆಮಾದ ಸಹಜತೆ ಮತ್ತು ಸಾಧ್ಯತೆಗಳು

ನೀರು, ಗಾಳಿ, ಆಹಾರ ಎಷ್ಟು ಮುಖ್ಯವೋ ಅಷ್ಟೇ ಮುಖ್ಯ ಸಂವಹನ ಕೂಡ. ಸಂವಹನ ಕ್ಷೇತ್ರದಲ್ಲಿಂದು ನಡೆಯುತ್ತಿರುವ ಹಲವು ವಿಧದ ಸಂವಹನಾವಿಷ್ಕಾರಗಳು ಯಾರನ್ನೂ ಏಕಾಂಗಿಯನ್ನಾಗಿಸಿಲ್ಲ. ಮನೋಧರ್ಮಕ್ಕೆ ಅನುಗುಣವಾಗಿ ವ್ಯಕ್ತಿಯು ಸಂವಹನ ಮಾಧ್ಯಮಗಳನ್ನು ಆಯ್ದುಕೊಳ್ಳುತ್ತಾನೆ. ಅಂತವುಗಳ ಸಾಲಿನಲ್ಲಿ ಸಿನಿಮಾವು ಅತ್ಯಂತ ಪ್ರಭಾವಶಾಲಿಯಾದ ಒಂದು ಸಂವಹನಾ ಮಾಧ್ಯಮ.

ಸಿನಿಮಾ ಒಂದು ಕಲೆ. ಸಿನಿಮಾ ನೋಡಿದ ಕೂಡಲೇ ನಮಗೆ ಅರಿವಾಗುವುದು ಅದರಲ್ಲಿ ಮೂಡುವ ಸ್ಪಷ್ಟತೆ ಹಾಗೂ ನೈಜತೆ. ಹಾಗಾದರೆ ಸಿನಿಮಾಕ್ಕೂ ವಾಸ್ತವಕ್ಕೂ ಏನೂ ವ್ಯತ್ಯಾಸವಿಲ್ಲವೇ? ಇದ್ದರೆ ಯಾವ ರೀತಿಯದ್ದು? ಅನ್ನೋ ಪ್ರಶ್ನೆಯ ಕುರಿತಾಗಿ ಯೋಚಿಸಬೇಕು. ಸಿನಿಮಾ ವಾಸ್ತವದಿಂದ ದೂರ ನಿಲ್ಲುತ್ತದೆ ಎನ್ನುವ ಮಾತು ಒಪ್ಪುವಂತದ್ದೇ. ಪ್ರತಿ ಸಿನಿಮಾದಲ್ಲೂ ವಾಸ್ತವ ಮತ್ತು ಕಲ್ಪನೆಯ ಅಂಶಗಳಿರುತ್ತವೆ. ಇವೆರಡರ ನಡುವಿನ ವ್ಯತ್ಯಾಸಗಳನ್ನು ಮೊದಲು ಅರಿತುಕೊಳ್ಳಬೇಕು. ನೈಜವಾದದ್ದನ್ನು ಒಪ್ಪಿಕೊಳ್ಳುವ ಹಾದಿಯಲ್ಲಿ ವ್ಯತ್ಯಾಸಗಳನ್ನು ಗಮನಿಸುವ ಗೋಜಿಗೆ ಹೋಗದೆ, ಆ ವ್ಯತ್ಯಾಸಗಳನ್ನೇ ಒಪ್ಪಿ ಅಪ್ಪಿಕೊಂಡು ಬಿಡುತ್ತೇವೆ. ಹಾಗೊಂದು ವೇಳೆ ಒಪ್ಪಿಕೊಂಡದ್ದೇ ಆದಲ್ಲಿ ಆ ವ್ಯತ್ಯಾಸಗಳೇ ಸಿನಿಮಾದ ಮೂಲ ಅಂಶಗಳು ಅನ್ನೋದನ್ನು ಕೂಡಾ ಒಪ್ಪಿಕೊಳ್ಳಬೇಕಾಗುತ್ತದೆ. ಹಾಗಾಗಿ Cinema is nothing but make belief ಅನ್ನೋದರ ಅರಿವಿರಬೇಕು.

ನೈಜ ಜಗತ್ತನ್ನು ಕಂಡು ನೋಡಿ ಅನುಭವಿಸುತ್ತೇವೆ. ಸಿನಿಮಾ ಎನ್ನುವುದು ಚಿತ್ರಿಸಲ್ಪಟ್ಟದ್ದು. ವಾಸ್ತವವನ್ನು ಕ್ಯಾಮರಾವು ಚಿತ್ರೀಕರಿಸುತ್ತದೆ. ಕಲಾತ್ಮಕ ಕೃತಿ ಸೃಷ್ಟಿಯ ನಿರ್ಮಾಣ ಸಾಧ್ಯತೆಯನ್ನು ಚಿತ್ರೀಕರಣವು ಹುಟ್ಟಿಸುವುದರಿಂದಲೇ ಸಿನಿಮಾವು ಚಿತ್ರಕಲೆ, ಸಾಹಿತ್ಯ, ನೃತ್ಯ ಹಾಗೂ ಸಂಗೀತ ಮುಂತಾದ ಇತರ ಕಲೆಗಳನ್ನು ಹೋಲುವುದು. ಆದರೆ ಸಿನಿಮಾ ಒಂದು ಕಲಾತ್ಮಕ ಮಾಧ್ಯಮವಾಗಬಲ್ಲ ಸಾಧ್ಯತೆಯನ್ನು ಅಲ್ಲಗಳೆಯುವವರೂ ಇದ್ದಾರೆ. ಅವರ ಪ್ರಕಾರ ಸಿನಿಮಾ ಒಂದು ಕಲೆ ಆಗಲಾರದು. ಕಾರಣ ಸಿನಿಮಾ ವಾಸ್ತವದ ನಕಲು ಮಾಡುವುದನ್ನು ಬಿಟ್ಟು ಮತ್ತೇನನ್ನೂ ಸಾಧಿಸಲಾರದು ಎನ್ನುವುದಾಗಿದೆ. ಆ ಪಂಥದವರೆಲ್ಲರೂ ತಮ್ಮ ಸಮರ್ಥನೆಗೆ ಚಿತ್ರಕಲೆಯ ಜತೆ ಸಿನಿಮಾವನ್ನು ಹೋಲಿಸಿ ನೋಡುತ್ತಾರೆ. ಚಿತ್ರಕಲೆಯಲ್ಲಿ ಮೊದಲು ವಾಸ್ತವಿಕತೆ ಕಲಾವಿದನ ಕಣ್ಣುಗಳಿಂದ ಗ್ರಹಿಸಲ್ಪಟ್ಟು, ಆನಂತರ ನರವ್ಯೂಹದ ಮೂಲಕ, ಮುಂದಕ್ಕೆ ಕೈಗಳ ಮೂಲಕ, ಕೊನೆಗೆ ಕುಂಚದ ಮೂಲಕ ಕಲೆಯಾಗಿ ರೂಪಾಂತರ ಹೊಂದುತ್ತದೆ. ಆದರೆ ಸಿನಿಮಾದಲ್ಲಿನ ಸಾಧ್ಯತೆಗಳೇ ಬೇರೆ. ಇಲ್ಲಿನ ಸಾಧ್ಯತೆಗಳೆಲ್ಲವೂ ಯಾಂತ್ರಿಕವಾದದ್ದು. ಹಾಗೆ ನೋಡಿದರೆ ಈ ಹೇಳಿಕೆಗಳು ಯಾವುವೂ ಸಿನಿಮಾ ಕಲೆಯಲ್ಲ ಎಂಬುದನ್ನು ಸಮರ್ಥಿಸುವುದಿಲ್ಲ. ಹಾಗಿರಲು ಸಿನಿಮಾ ಮತ್ತು ಛಾಯಾಗ್ರಹಣವು ಯಾಂತ್ರಿಕವಾಗಿ ವಾಸ್ತವವನ್ನು ನಕಲು ಮಾಡುತ್ತವೆ. ನಿರ್ದೇಶಕನ ಕಣ್ಣುಗಳು ವಾಸ್ತವತೆಯನ್ನು ಯಾಂತ್ರೀಕೃತಗೊಳಿಸಿ ಕಲಾತ್ಮಕವಾದ ಒಂದು ಪ್ರಕಾರವನ್ನು ಹೊರ ತರುವಲ್ಲಿ ಸಫಲವಾಗುತ್ತವೆ. ಹಾಗಾಗಿ ಸಿನೆಮಾವನ್ನು ಕಲೆ ಎನ್ನಬಹುದು.

ನಾನು ಕಂಡ ಹಲವು ಪ್ರಾದೇಶಿಕ ಭಾಷಾ ಚಿತ್ರಗಳಲ್ಲಿ ನೈಜತೆಯಿಂದ ಕೂಡಿದ ಮತ್ತು ವಾಸ್ತವಕ್ಕೆ ಅತೀ ಸಮೀಪವಿರುವ ಪ್ರಾದೇಶಿಕ ಭಾಷಾಚಿತ್ರವೆಂದರೆ ಅದು ‘ಮಲೆಯಾಳಂ ಚಲನಚಿತ್ರ’ಗಳು. ಸಿನಿಮಾ ಒಂದು ಕಲೆ ಎಂಬುದಕ್ಕೆ ಮಲೆಯಾಳಂ ಚಿತ್ರಗಳಷ್ಟು ಉತ್ತಮ ಉದಾಹರಣೆ ಬೇರೊಂದಿಲ್ಲ. ಇಲ್ಲಿನ ಪ್ರತಿಯೊಂದು ಚಿತ್ರವೂ ಪ್ರೇಕ್ಷಕ ಸಮೂಹದ ಮೇಲೆ ತನ್ನದೇ ಆದ ಛಾಪನ್ನು ಮೂಡಿಸುತ್ತದೆ. ಜನ ಸಾಮಾನ್ಯನ ಬದುಕನ್ನು ಅವಲಂಬಿಸಿರುವ ಮಲೆಯಾಳಂ ಸಿನೆಮಾ ಕಥೆಗಳು, ಪ್ರೇಕ್ಷಕರನ್ನು ಏಕಕಾಲದಲ್ಲಿ ರಸಾಸ್ವಾದನೆಗೆ ಗುರಿಯಾಗಿಸುವುದರ ಜೊತೆಗೆ ತಮ್ಮೊಂದಿಗೆ ಬೆರೆಸಿಕೊಳ್ಳುವುದಲ್ಲದೆ, ಕಥೆಯೊಳಗೂ ಒಳಗೂಡಿಸಿಕೊಳ್ಳುತ್ತದೆ. ಇದರಿಂದಾಗಿ ಪ್ರೇಕ್ಷಕ ಮತ್ತು ಸಿನಿಮಾಗಳ ನಡುವೆ ಹೆಚ್ಚಿನ ಆರೋಗ್ಯಕರ ಬಾಂಧ್ಯವ್ಯವನ್ನು ಮಲೆಯಾಳಂ ಪ್ರದೇಶದಲ್ಲಿ ತೆರೆ ಕಾಣುವ ಸಿನೆಮಾಗಳಲ್ಲಿ ಕಾಣಬಹುದು.

***

ಇತರ ಭಾಷಾ ಚಿತ್ರಗಳಲ್ಲಿ ಮಲೆಯಾಳಂ ಸಿನೆಮಾದಲ್ಲಿರುವಂತಹ ಕೆಲವು ಸಾಧ್ಯತೆಗಳನ್ನು ನೋಡಿದ್ದೇವೆ. ಕೆಲವೊಂದು ಸಿನೆಮಾಗಳು ನಿಜವಾಗಿಯೂ ಚೆನ್ನಾಗಿಯೇ ಇರುತ್ತವೆ. ಆದರೆ ವಾಣಿಜ್ಯ ಉದ್ದೇಶಕ್ಕೋಸ್ಕರ ಹಾಡು-ಹೊಡೆತಗಳ ಮಸಾಲೆಗಳನ್ನು ತುರುಕಿ ಚಿತ್ರದ ಹರಿವನ್ನು ಕೊಂದು ಬಿಡುತ್ತಾರೆ. ಪ್ರತಿಯೊಂದು ವಿಷಯಕ್ಕೂ, ವಸ್ತುವಿಗೂ ಒಂದು ಚಲನೆ ಇರುತ್ತದೆ. ಅದರ ನಡೆಯನ್ನು ಗಮನಿಸಿ ಅದರೊಂದಿಗೆ ಸಾಗುವ ಚಾಣಾಕ್ಷತನ ಮುಖ್ಯವಾಗಬೇಕು. ಅದಕ್ಕೂ ಮೊದಲು ಸರಳವಾದದ್ದು ಸುಂದರವಲ್ಲ ಎನ್ನುವ ಭ್ರಮೆಯಿಂದ ಮೊದಲು ಹೊರ ಬರಬೇಕು. ಅದ್ಯಾವುದೋ ಆಡಂಬರದ ಹಿಂದೆ ಬಿದ್ದು ಹೊಡಿ-ಬಡಿ-ಬಾಡಿ ತೋರಿಸುವ ಟಿಪಿಕಲ್ ಸಿನೆಮಾಗಳನ್ನು ನಿರ್ಮಿಸುವುದರ ಹಿಂದೆ ಕೇವಲ ವಾಣಿಜ್ಯ ಉದ್ದೇಶ ಮಾತ್ರವಿರುತ್ತದೆ.

ನಮ್ಮ ನಡುವೆ ನಿತ್ಯವೂ ಕಾಣುವ ಬಂಧ ಹಾಗೂ ವಲಯಗಳ ಸಹಜವಾದ ಹಾವಭಾವನ್ನು ಸೂಕ್ಶ್ಮವಾಗಿ ಗಮನಿಸಿದರೆ, ನಮ್ಮ ನಡುವಿರುವ ಅದೆಷ್ಟೋ ವಸ್ತುಗಳು ಕತೆಗಳಾಗಬಹುದು. ಇನ್ನೆಷ್ಟೋ ಸಹಜ ಆಡು ಮಾತುಗಳು ಸಂಭಾಷಣೆಗಳಾಗಬಹುದು. ಪ್ರಾದೇಶಿಕ ಭಾಷಾ ಸೊಗಡಿನ ಸೇರ್ಪಡೆಯು ‘ಚೆರ್ರಿ ಟಾಪ್ ಆನ್ ದ ಕ್ರೀಮ್’ ನಂತೆ. ಸಹಜ ನಡೆನುಡಿ, ಹಾವಭಾವದ ವ್ಯಕ್ತಿಯೊಬ್ಬ ಸಿನೆಮಾದಲ್ಲಿ ಖುದ್ದು ಒಂದು ಪಾತ್ರವಾಗಿ ಮಿಂಚಿ ಬೆಳಗುವ ಭಾಗ್ಯವೂ ಸಿದ್ಧವಿರುತ್ತದೆ. ನಮ್ಮ ಸುತ್ತಲೂ ಇರುವ ಮತ್ತು ಅವ್ಯಾವುದನ್ನೂ ನೋಡುವ ಹಾಗೂ ತಿಳಿಯುವ ಗೋಜಿಗೆ ಹೋಗದೆ; ಇನ್ನೇನನ್ನೋ ಹುಡುಕಿಕೊಂಡು ಅದೆಲ್ಲಿಯೂ ಸಲ್ಲದೆ ಆಗಿಹೋಗುವ ದರ್ದು ಯಾಕೆ ಬೇಕು?

ಈ ನಿಟ್ಟಿನಲ್ಲಿ ಪ್ರೇಕ್ಷಕ ತನ್ನ ಅಭಿರುಚಿಯನ್ನು ಬದಲಾಯಿಸಿಕೊಳ್ಳುವ ತುರ್ತಿದೆ. ಪ್ರೇಕ್ಷಕರ ರುಚಿ ಕೆಟ್ಟದ್ದೇ ಆಗಿದ್ದರೆ ಲಾಭದ ನಿರೀಕ್ಷೆಯಲ್ಲಿರುವ ನಿರ್ಮಾಪಕರು ಉತ್ತಮ ಚಿತ್ರಗಳನ್ನು ನೀಡಲಾರರಷ್ಟೆ. ಅಂತಹ ಮಹಾನುಭಾವರು ತುಂಬಾ ವಿರಳರು. ಹಾಗೆಂದ ಮಾತ್ರಕ್ಕೆ ಸಿನಿಮಾ ರಂಗದವರು ತಮ್ಮ ಜವಾಬ್ದಾರಿಯಿಂದ ನುಣುಚಿ ಕೊಳ್ಳಲೂಬಾರದು. ತಮ್ಮ ಲಾಭಾಂಶವನ್ನು ಒಂದು ಮಿತಿಗೆ ಸೀಮಿತಗೊಳಿಸಿ ‘ಕಲಾತ್ಮಕ ವಾಣಿಜ್ಯ’ತಳಿಯ ಚಿತ್ರಗಳನ್ನೇಕೆ ನಿರ್ಮಿಸಬಾರದು? ಆ ಮೂಲಕ ಸತತವಾಗಿ ವೀಕ್ಷಕರಿಗೆ ಹೊಸ ಅಭಿರುಚಿಯನ್ನು ಉಣ ಬಡಿಸಿದರೆ; ಕ್ರಮೇಣ ಅವರು ಹೊಸತನಕ್ಕೆ, ಹೊಸರುಚಿಗೆ ಒಗ್ಗಿಕೊಂಡು ಪ್ರಬುದ್ಧರಾಗುವ ಅವಕಾಶವಿದೆ.

ಕನ್ನಡ ಸಿನಿರಂಗದಲ್ಲಿ ಬಡಿಸಿದ ಹೊಸರುಚಿಯನ್ನು ಪ್ರೇಕ್ಷಕ ಹೇಗೆ ಚಪ್ಪರಿಸಿದ ಎನ್ನುವುದಕ್ಕೆ “ರಕ್ಷಿತ್ ಶೆಟ್ಟಿ-ರಿಷಬ್ ಶೆಟ್ಟಿ-ರಾಜ್ ಬಿ ಶೆಟ್ಟಿ” ಎಂಬ ಶೆಟ್ಟಿತ್ರಯರು ಜೀವಂತ ಉದಾಹರಣೆಯಾಗಿ ನಮ್ಮ ಮುಂದಿದ್ದಾರೆ. ಅವರು ಉಣಿಸಿದ ಪಾಕಕ್ಕೆ ಜನ ಹುಚ್ಛೆದ್ದು ಉಂಡು ಸವಿದದ್ದು ಇದೀಗ ಇತಿಹಾಸ. ಸಾಲದ್ದಕ್ಕೆ “ಅನೂಪ್ ಭಂಢಾರಿ” ಯೂ ಸೇರಿಕೊಂಡು ರುಚಿಯ ಮಹತ್ತನ್ನು ಇನ್ನಷ್ಟು ಹೆಚ್ಚಿಸಿದರು. ಇಂತಹ ನವೀನ ಪಾಕಗಳು ಕನ್ನಡ ಸಿನೆಮಾರಂಗದಲ್ಲಿ ಬೇಕಿತ್ತು. ಅದೀಗ ಲಭ್ಯವಿದೆ ಅಷ್ಟಕ್ಕೇ- 'ಮೊಗಾಂಬೋ ಖುಷ್ ಹುವಾ'.

***

-2-

'ಕಲಾತ್ಮಕ ವಾಣಿಜ್ಯ' ಚಿತ್ರವೆಂಬ ಸೂತ್ರಪಾತ್

ಚಲನಚಿತ್ರಗಳು ಸಂಸ್ಕೃತಿಯನ್ನು ಪೋಷಿಸುವಂತಿರಬೇಕು. ಸಾಮಾನ್ಯವಾಗಿ ಬದುಕಲ್ಲಿ ನಡೆಯದ ಅಂಶಗಳಿಗೆ ಒತ್ತು ನೀಡುವುದು, ಶಾಸನ-ಪ್ರಭುತ್ವ, ಜಾತಿ-ಮತದ ಲೇವಡಿ ಇತರ ಋಣಾತ್ಮಕ ಅಂಶಗಳು ಸಾಮಾಜಿಕ ಬದುಕನ್ನು ಕಲುಷಿತಗೊಳಿಸುತ್ತವೆ. ಆದರೆ ಪರಿಷ್ಕಾರ ಮತ್ತು ಸಾಧ್ಯತೆಗಳನ್ನು ಬಳಸಿಕೊಂಡು ನಾವು ಬೆಳೆದ ಹಾಗೆ ನಮ್ಮ ಚಿಂತನೆಗಳೂ ಬೆಳೆದು ಪ್ರಬುದ್ಧಗೊಂಡು ಆರೋಗ್ಯವಂತ ಸಮಾಜ ನಿರ್ಮಾಣಕ್ಕೆ ಸಿನಿಮಾಗಳು ಪೂರಕವಾಗಬೇಕು.

ಒಂದು ಮಹತ್ತರವಾದ ವಿಚಾರವೆಂದರೆ; ಸಿನಿಮಾದಲ್ಲಿ ಸಂಗೀತ ಹಾಗೂ ಸಾಹಿತ್ಯದ ಹದವಾದ ಮಿಶ್ರಣವಿಲ್ಲದಿರುವುದು. ಕೆಟ್ಟ ಸಾಹಿತ್ಯ ಮತ್ತು ಸದ್ದುಗದ್ದಲದ ಸಂಗೀತ ಬಹುತೇಕ ಎಲ್ಲಾ ಚಿತ್ರಗಳಲ್ಲಿ ಕಂಡು ಬರುವ ಸಾಮಾನ್ಯ ಸಂಗತಿ. ಶಬ್ದಗಳ ತುರುಕುವಿಕೆಯ ಸಾಹಿತ್ಯ ರಚನೆಯಿಂದಾಗಲಿ, ಸದ್ದುಗದ್ದಲದ ಸಂಗೀತದಿಂದಾಗಲಿ ಎರಡೂ ವಿಚಾರಗಳಿಗೆ ನ್ಯಾಯ ದೊರಕಲಾರದು. ಇವೆರಡೂ ಸಮರಸವಾಗಿ ಬೆರೆತರೇನೇ ಅಂತರಂಗಕ್ಕೆ ನಾಟಲು, ಹೃದಯ-ಮನಸ್ಸು ಮಿಡಿಯಲು ಸಾಧ್ಯ.

ಯಾವುದೇ ನಿರ್ಮಾಪಕ-ನಿರ್ದೇಶಕನಿಗೆ ಇರುವ ಸಮಸ್ಯೆ ಮತ್ತು ಸವಾಲು ಎಂದರೆ-ತನ್ನ ಮಾಧ್ಯಮದ ಸಾಧ್ಯತೆಯನ್ನು ದುಡಿಸಿಕೊಳ್ಳುವುದು ಹೇಗೆ? ಎಂಬುದು. ಇದರಲ್ಲಿ ಮಾಧ್ಯಮಕ್ಕಷ್ಟೇ ನಿರ್ದೇಶಕನ ಗಮನ ಸೀಮಿತವಾದರೆ ಅದು ‘ಕಲಾತ್ಮಕ ಚಿತ್ರ’ ಎಂದೆನಿಸಿಕೊಳ್ಳುತ್ತದೆ ಮತ್ತು ಜನಸಾಮಾನ್ಯರನ್ನು ತಟ್ಟುವಲ್ಲಿ ಅದು ವಿಫಲವಾಗುತ್ತದೆ. ಬದಲಿಗೆ ವೀಕ್ಷಕರ ಕಡೆಗಷ್ಟೇ ಗಮನ ಹರಿಸಿದರೆ ಅಂತಹ ಚಿತ್ರ ನೂರಕ್ಕೆ ನೂರು ‘ವಾಣಿಜ್ಯ ಚಿತ್ರ’ ಎಂದೆನಿಸಿಕೊಳ್ಳುತ್ತದೆ. ಆದರೆ ಒಂದು ಕಲಾ ಮಾಧ್ಯಮವಾಗಿ ಅಂತಹ ಸಿನೆಮಾಗಳು ಸೋಲುತ್ತವೆ. ಇಂತಹ ಕ್ಲಿಷ್ಟ ಸಂದರ್ಭದಲ್ಲಿ ಕೆಲವು ಶ್ರೇಷ್ಠ ಮಲೆಯಾಳೀ ನಿರ್ದೇಶಕರು ಈ ಸಮಸ್ಯೆಗೆ ಪರಿಹಾರವೋ ಎಂಬಂತೆ ಒಂದು ಸುವರ್ಣ ಮಾಧ್ಯಮವನ್ನು ಕಂಡುಕೊಂಡಿದ್ದಾರೆ. ಅಂದರೆ ಚಿತ್ರವೊಂದು ಕಮರ್ಷಿಯಲ್ ಚಿತ್ರಗಳ ಚೌಕಟ್ಟಿನೊಳಗೇ ಇದ್ದುಕೊಂಡು ಹೇಗೆ ಅರ್ಥಪೂರ್ಣ ಆಗಬಹುದು ಅನ್ನೋದನ್ನು ಕೆಲವೊಂದಿಷ್ಟು ಚಿತ್ರಗಳ ಮೂಲಕ ಮಾಡಿ ತೋರಿಸಿದ್ದಾರೆ.

ಚಲನಚಿತ್ರ ರಂಗದಲ್ಲಿ ಇದೊಂದು ಗಮನಾರ್ಹ ಬೆಳವಣಿಗೆ. ಈ ರೀತಿಯ ಬೆಳವಣಿಗೆ ಇತರ ಭಾಷಾ ಚಿತ್ರರಂಗದಲ್ಲಿ ಕಾಣ ಸಿಗುವುದಿಲ್ಲ. ಮಾಧ್ಯಮದ ಸಾಧ್ಯತೆಯನ್ನು ಚೆನ್ನಾಗಿ ದುಡಿಸಿಕೊಳ್ಳದಿರುವುದು ಮತ್ತು ವೀಕ್ಷಕರ ನಾಡಿ ಮಿಡಿತವನ್ನು ಅರಿಯುವಲ್ಲಿ ವಿಫಲವಾದುದೇ ಇದಕ್ಕೆ ಮುಖ್ಯ ಕಾರಣ. ಜೊತೆಗೆ ಪ್ರೇಕ್ಷಕ ವರ್ಗವು ತನ್ನ ಅಭಿರುಚಿಯನ್ನು ಬದಲಾಯಿಸಿಕೊಳ್ಳದೇ ಇರುವುದು ಕೂಡಾ ಅಷ್ಟೇ ಪ್ರಮುಖ ಕಾರಣವೂ ಕೂಡ. ಹಾಗೊಂದು ವೇಳೆ ಬದಲಾಯಿಸಿಕೊಂಡರು ಎಂದಾದರೆ ಉತ್ತಮ ಅಭಿರುಚಿಯ 'ಕಲಾತ್ಮಕ ವಾಣಿಜ್ಯ' ಚಿತ್ರಗಳು ಮೂಡುತ್ತವೆ. ಉದಾಹರಣೆಯಾಗಿ 1989ರಲ್ಲಿ ಕೇರಳದಾದ್ಯಂತ ಜನಪ್ರಿಯವಾದ `ಕಿರೀಟಂ' ಚಿತ್ರದಲ್ಲಿ ನಿರ್ದೇಶಕ ‘ಸಿಬಿ ಮಲೆಯಿಲ್’ ಕಮರ್ಷಿಯಲ್ ಸಿನಿಮಾದ ಎಲ್ಲಾ ಆಕರ್ಷಣೆಗಳನ್ನು ಬಳಸಿಕೊಂಡು ಒಂದು ಗಂಭೀರ ಸತ್ವವನ್ನು ಪ್ರತಿಪಾದಿಸುವಲ್ಲಿ ಯಶಸ್ವಿಯಾಗುತ್ತಾರೆ. ಉದ್ದಕ್ಕೂ ಈ ಚಿತ್ರದಲ್ಲಿ ಬಿಂಬಿಸುವ ಗುಣಾತ್ಮಕ ಅಂಶಗಳ ಸಂಘರ್ಷವು ರೋಚಕ ನಿರ್ಣಾಯಕ ಘಟ್ಟದಲ್ಲಿ ಆಸ್ಫೋಟಗೊಳ್ಳುತ್ತದೆ. ಉತ್ತಮ ಹಿಡಿತದಿಂದ ಕೂಡಿದ ಈ ಸಿನೆಮಾವು ಒಂದು ಕಡೆಯಿಂದ ಸಾಮಾನ್ಯ ಪ್ರೇಕ್ಷಕನಿಗೂ, ಇನ್ನೊಂದು ಕಡೆಯಿಂದ ‘ಕಲಾಚಿತ್ರಪ್ರೇಮಿ’ಗಳಿಂದಲೂ ಮೆಚ್ಚುಗೆ ಗಳಿಸಿಕೊಳ್ಳುವಲ್ಲಿ ನಿರ್ದೇಶಕ ಯಶಸ್ವಿಯಾಗುತ್ತಾನೆ. ಯಾವುದೇ ಕಥಾವಸ್ತುವನ್ನು ಅತ್ಯಂತ ನಾಜೂಕಾಗಿ ಹೆಣೆದು ನಿರ್ವಹಿಸುವುದರ ಜೊತೆಗೆ ವಿವಾದಾತ್ಮಕವಾಗಬಹುದಾದ ಕಥಾವಸ್ತುವನ್ನು ಸೂಕ್ಷ್ಮ ಗ್ರಹಿಕೆಗಳೊಂದಿಗೆ ಹೇಳಿ ತೋರಿಸಿ, ಸಂಕೀರ್ಣವಾಗಿ ನಿರೂಪಿಸುವ ಕಲಾತ್ಮಕತೆಯನ್ನು ಮೈಗೂಡಿಸಿಕೊಂಡಿದ್ದಾರೆ, ನಿರ್ದೇಶಕ ‘ಸಿಬಿ ಮಲೆಯಿಲ್’. ಇದು ಒಂದು ಚಿತ್ರದ ಮತ್ತು ಉದ್ಯಮದ ಬೆಳವಣಿಗೆಗೆ ಚೇತೋಹಾರಿಯಾದ ಅಂಶ.

`ಕಿರೀಟಂ' ಸಿನೆಮಾದ ಸರಣಿಯಲ್ಲಿ ಹೊರಬಂದ ಇತರ ‘ಕಲಾತ್ಮಕ ವಾಣಿಜ್ಯ’ ಚಿತ್ರಗಳಾದ `ಭರತಂ', `ಉತ್ಸವ ಪಿಟ್ಟನ್ನಾಳ್', `ತನಿಯಾವರ್ತನಂ', `ಮೂನಾಪಕ್ಕಂ', `ಚಿತ್ರಂ', `ಹಿಸ್ ಹೈನಸ್ ಅಬ್ದುಲ್ಲ', `ಆಕಾಶ ಧೂತಂ'- ಹೀಗೆ ಇನ್ನೂ ಹಲವು ಸಿನಿಮಾಗಳನ್ನು ಗಮನಿಸಿದಾಗ ಮಲೆಯಾಳಂ ನಿರ್ದೇಶಕರು ಹೊಸ ಹಾದಿಯನ್ನು ತುಳಿಯುವ ಮೂಲಕ ಜನರನ್ನು ಮತ್ತೆ ಚಿತ್ರಮಂದಿರಗಳತ್ತ ಆಕರ್ಷಿಸುವಲ್ಲಿ ಅಂದು ಯಶಸ್ವಿಯಾಗಿದ್ದರು. ಅಂತಹ ನಿರ್ದೇಶಕರ ಪಟ್ಟಿಯಲ್ಲಿ- ‘ಫಾಜಿಲ್, ಸಿಬಿ ಮಲೆಯಿಲ್, ದಿ. ಭರತನ್, ದಿ. ಜಯರಾಜ್, ಸತ್ಯನ್ ನಂದಿಕ್ಕಾಡ್, ಬಾಲಚಂದ್ರ ಮೆನನ್, ರಾಜಸೇನನ್, ನಟ-ನಿರ್ದೇಶಕ ಶ್ರೀನಿವಾಸ್, ಐ.ವಿ. ಶಶಿ, ರಂಜಿತ್‘ಮತ್ತಿತರರ ಪಾತ್ರ ಬಹುದೊಡ್ಡದಾದುದು.

ಒಟ್ಟಿನಲ್ಲಿ ವಾಸ್ತವತೆ, ಸಂಸ್ಕೃತಿ ಮತ್ತು ಮಲೆಯಾಳಂ ಸಿನಿರಂಗವು ಅನ್ಯೋನ್ಯವಾಗಿ ಪರಸ್ಪರ ಕೊಡು-ಕೊಳ್ಳುವಿಕೆಯ ಮುಖೇನ ಸಾಗುತ್ತಿದೆ. ಇಂತಹ ಬದಲಾವಣೆಗಳನ್ನು ಭಾರತೀಯ ಚಲನಚಿತ್ರ ರಂಗದ ಪ್ರಗತಿಯ ಸಂಕೇತಗಳು ಎಂದೂ ಕರೆಯಬಹುದಾಗಿದೆ. 80 ಮತ್ತು 90ರ ದಶಕದ ನಡುವೆ ಮೂಡಿ ಬಂದ ‘ಕಲಾತ್ಮಕ ವಾಣಿಜ್ಯ ಚಿತ್ರ’ಗಳು ಪ್ರಾಯಶಃ ನಂತರದ ದಿನಗಳಲ್ಲಿ ಕಡಿಮೆಯಾಗುತ್ತಾ ಬಂದು ಪಕ್ಕಾ ಕಮರ್ಷಿಯಲ್ ಚಿತ್ರಗಳಿಗೆ ಸೀಮಿತಗೊಂಡಿತು. 2010ರಲ್ಲಿ ಹೊರಬಂದ ಮೇಧಾವಿ ಕಲಾವಿದ ‘ಮಮ್ಮುಟ್ಟಿ’ ಅಭಿನಯದ, ‘ಶಾಜಿ ಎನ್. ಕರುಣ್’ ನಿರ್ದೇಶನದ `ಕುಟ್ಟಿ ಸ್ರಾಂಕ್' ನಂತಹ ಉತ್ತಮ ಚಿತ್ರದುದ್ದಕ್ಕೂ ಕಾಪಾಡಿಕೊಂಡು ಬಂದಿರುವ ಆ ನೈಜತೆ, 1950ರ ಕೊಚ್ಚಿ ಪ್ರಾಂತ್ಯದ ಪರಿಸರ, ವೇಷಭೂಷಣ, ಆಡುಭಾಷೆಯ ಶೈಲಿ, ಆ ಕಾಲಘಟ್ಟದ ಸಮಾಜ ಮತ್ತು ‘ಮಮ್ಮುಟ್ಟಿ’ಯ ಅದ್ಭುತ ಅಭಿನಯವು ಹಲವು ಪ್ರಶಸ್ತಿಗಳನ್ನು ತನ್ನ ಬಗಲಿಗೆ ಹಾಕಿಕೊಂಡರೂ ಅದು ಚಿತ್ರಮಂದಿರಗಳಲ್ಲಿ ಓಡುವುದು ಬಿಡಿ, ನಿಲ್ಲಲೂ ಆಗಲಿಲ್ಲ.

‘ಮಮ್ಮುಟ್ಟಿ’ಯ ಹಾಸ್ಯಭರಿತ ಅಭಿನಯದ `ಪ್ರಾಂಚಿಯೇಟನ್ ಅಂಡ್ ದ ಸೆಂಟ್' ಸಿನಿಮಾವು ಪಕ್ಕಾ ತ್ರಿಶೂರ್ ಪ್ರಾಂತ್ಯದ ಮಲೆಯಾಳಂ ಭಾಷೆಯಲ್ಲಿ ಮೂಡಿ, ಅದು ಕೊಟ್ಟ ಸುಖ ವಿಸ್ಮಯವೇ ಸರಿ. ಸಿನಿ ರಸಿಕರು ‘ರಂಜಿತ್’ ನಿರ್ದೇಶನಕ್ಕೆ ಸಲಾಂ ಹೊಡೆಯುವಂತೆ ಮಾಡಿದ್ದಲ್ಲದೆ ‘ಪ್ರಾಂಚಿಯೇಟನುಂ…’ ಚಿತ್ರವೂ ಜನಪ್ರಿಯವಾಯಿತು. ‘ಮಮ್ಮುಟ್ಟಿ ನಗಿಸಲೂ ಬಲ್ಲರು’ ಎಂಬುದನ್ನು ತೋರಿಸಿಕೊಟ್ಟ ಸಿನಿಮಾ ಅದು. ಹಾಗೊಮ್ಮೆ ಕಂಡುಕೊಂಡ ಸುವರ್ಣ ಸೇತುವೊಂದು ಕ್ರಮೇಣವಾಗಿ ಮರೆಯಾಗಿ ಮತ್ತೆ ಅದೇ ಹಾದಿಗೆ ಮಲೆಯಾಳಂ ಚಿತ್ರರಂಗವು ಹೊರಳಿ ಮರಳುತ್ತಿದೆ ಎನ್ನುವುದು ಖುಷಿಯ ವಿಚಾರ. ಕೆಲವೊಂದು ಸಿನೆಮಾಗಳು ಉತ್ತಮ ಲಕ್ಷಣಗಳನ್ನು ಹೊಂದದಿದ್ದರೂ, ಸಿನಿಮಾ ಒಂದು ಕಲೆ ಎಂಬುದನ್ನು ಪ್ರತಿಪಾದಿಸುವಂತಿವೆ ಈಗಿನ ಮಲೆಯಾಳಂ ಸಿನೆಮಾಗಳು. ಅಷ್ಟರಮಟ್ಟಿಗೆ ಮಲೆಯಾಳಂ ಚಿತ್ರರಂಗವು ಸೇಫ್ ಮೋಡ್ ನಲ್ಲಿ!

`ದೇವಾಸುರಂ' ನಂತಹ ಚಿತ್ರವು ದೇವ ಮತ್ತು ಅಸುರ ಗುಣಗಳಿರುವ ನಾಯಕನ ಸಂಕೀರ್ಣತೆಯನ್ನು ಪ್ರಬಲವಾಗಿ ಅಭಿವ್ಯಕ್ತಿಸುವಲ್ಲಿ ಸಫಲವಾಗಿದೆ. ಪರಿಪೂರ್ಣ ನಟನೆಂದೇ ಖ್ಯಾತಿವೆತ್ತ 'ಮೋಹನ್‌ಲಾಲ್‌' ನ ರಾಜಸ ಗುಣವು ಮೇಳೈಸಿದ್ದನ್ನು ನೋಡಿಯೇ ಸವಿಯಬೇಕು. ನಿರ್ದೇಶಕ ‘ಐ.ವಿ.ಶಶಿ’ ನಟನನ್ನು ಕಥಾವಸ್ತುವಿಗೆ ಸರಿಯಾಗಿ ದುಡಿಸಿಕೊಂಡಿರುವ ಬಗೆ ಶ್ಲಾಘನೀಯ. ‘ರಂಜಿತ್’ ಅವರ ಸಂಭಾಷಣೆಯಂತೂ ಬ್ರಿಲಿಯಂಟ್. ಅದು ‘ಕಲಾತ್ಮಕ ವಾಣಿಜ್ಯ’ ಚಿತ್ರದ ಸಾಲಿನಲ್ಲಿ ಬರುವ ಸಿನಿಮಾ. ಮೋಹನ್‌ ಲಾಲ್‌ನ `ದೇವಾಸುರ'ದ ಮುಂದುವರಿದ ಭಾಗವಾಗಿ `ರಾವಣ ಪ್ರಭು' ಸಿನಿಮಾವು ಕಲಾತ್ಮಕತೆಯನ್ನು ಬದಿಗಿಟ್ಟು ಪಕ್ಕಾ ಕಮರ್ಷಿಯಲ್ ಚಿತ್ರವಾಗಿ ‘ಸವಾರಿ ಗಿರಿಗಿರಿ’ಯಾಗಿ ಹೊರಬಂತು. ಅವರ `ನರಸಿಂಹ' ಚಿತ್ರವಂತೂ ಸಾಕ್ಷಾತ್ ರಜನಿಕಾಂತ್ ಅವರನ್ನೇ ಮಲೆಯಾಳಂ ಚಿತ್ರರಂಗಕ್ಕೆ ಆಹ್ವಾನ ಮಾಡಿಕೊಂಡ೦ತಿತ್ತು. ಆದರೆ `ಮೋನೆ ದಿನೇಶಾsss...', ಅಲ್ಲೂ ಮಣ್ಣಿನ ಸಹಜತೆಯನ್ನು ಸಂಪೂರ್ಣವಾಗಿ ಬಿಟ್ಟು ಆ ಸಿನಿಮಾವು ನಡೆದಿಲ್ಲ ಎನ್ನುವ ಸಂತಸವೂ ಜೊತೆಯಲ್ಲಿದೆ. ‘ತಿಲಕನ್-ಮೋಹನ್ ಲಾಲ್’, ‘ಕನ್ನಡದ ಭಾರತಿ- ಮೋಹನ್ ಲಾಲ್’,’ಜಗತಿ ಶ್ರೀಕುಮಾರ್-ಮೋಹನ್ ಲಾಲ್’ ಅವರ ಕೆಮೆಸ್ಟ್ರಿಯು ಈ ಸಿನೆಮಾದಲ್ಲಿ ಅದ್ಭುತವಾಗಿ ಮೂಡಿ ಬಂದಿದೆ. ಕಲಾವಿದನಿಗೆ ಕಲಾವಿದ ಹೇಗೆ ಹೆಗಲು ಕೊಡುತ್ತಾನೆ ಎನ್ನುವುದಕ್ಕೆ ಈ ಚಿತ್ರದಲ್ಲಿ 'ಮಮ್ಮುಟ್ಟಿ' ಯ ಪ್ರವೇಶವನ್ನು ನೋಡಿದರೆ ಅರ್ಥವಾಗುತ್ತದೆ. ಅಂತಹ ಮಧುರ ಬಾಂಧವ್ಯ 'ಮಮ್ಮುಕ್ಕ-ಲಾಲೇಟನ್' ನಡುವೆ ಇಂದಿಗೂ ಇದೆ. ಚಿತ್ರರಂಗದ ಆರೋಗ್ಯಕರ ಬೆಳವಣಿಗೆಗೆ ಇದು ಅವಶ್ಯ.

‘ಆರಾನ್ ತಂಬುರಾನ್' ನಂತಹ ಪಕ್ಕಾ ಕಮರ್ಷಿಯಲ್ ಚಿತ್ರವೂ ಮಲೆಯಾಳಂ ಮಣ್ಣಿನ ಸಂಸ್ಕೃತಿಯನ್ನು, ಸೊಗಡನ್ನು ಎತ್ತಿ ಹಿಡಿಯುವಲ್ಲಿ ಸಫಲವಾಗಿದೆ ಎನ್ನಲಡ್ಡಿಯಿಲ್ಲ-'ಶಂಭೋ ಮಹಾದೇವ'. ‘ಮೋಹನ್‌ಲಾಲ್’ ಎಂಬ ಮೆಗಾಸ್ಟಾರ್ ಕೇವಲ ಚಡ್ಡಿಯಲ್ಲಿ 'ಆಡ್‌ತೋಮ'ನಾಗಿ ಅಭಿನಯಿಸಿ ಚಿತ್ರದ ಹೆಸರಿಗೆ ತಕ್ಕಂತೆ `ಸ್ಪಟಿಕಂ'ವನ್ನಾಗಿಸಿದ್ದು ಇತಿಹಾಸ. 'ಭದ್ರನ್' ನಿರ್ದೇಶನದ ಈ ಚಿತ್ರವು ಮತ್ತೊಮ್ಮೆ ‘ತಿಲಕನ್-ಮೋಹನ್ ಲಾಲ್’, ‘ನಡುಮುಡಿ ವೇಣು-ಮೋಹನ್ ಲಾಲ್’ ರ ಅಸಾಧಾರಣ ಕೆಮೆಸ್ಟ್ರಿಯನ್ನು ತೋರಿಸಿಕೊಟ್ಟಿತು. `ಮಣಿಚಿತ್ರ ತಾಳ್' ಕೂಡ ಇದೇ ಸಾಲಿನಲ್ಲಿ ಬರುತ್ತದೆ. ಈ ಚಿತ್ರವು ನಂತರ ಕನ್ನಡ, ತಮಿಳು, ತೆಲುಗು, ಹಿಂದಿ ಭಾಷೆಯಲ್ಲೂ ಮೂಡಿ ಬಂದಿದೆಯಾದರೂ ಒರಿಜನಲ್ ಚಿತ್ರದ ಸೌಂದರ್ಯವನ್ನು ಇತರ ಯಾವ ಭಾಷಾ ಚಿತ್ರದಲ್ಲೂ ಕಾಣಲು ಸಾಧ್ಯವಾಗಲಿಲ್ಲ.

***

-3-

ಗಡಿನಾಡ ಭಾಷೆ, ಸಿನೆಮಾ ಮತ್ತು ಸಂಗೀತ

ಎಳವೆಯಲ್ಲಿ ಹಲವು ಮಲೆಯಾಳಂ ಸಿನಿಮಾಗಳನ್ನು ನೋಡಿ ಇಷ್ಟಪಟ್ಟಿದ್ದೇನೆ. ಕಾಸರಗೋಡಿನಂತಹ ಗಡಿನಾಡ ಪ್ರದೇಶದಲ್ಲಿ ವಿರಳವಾಗಿ ಕಾಣಸಿಗುವ ಕನ್ನಡ ಸಿನಿಮಾಗಳನ್ನು ಬಿಡದೇ ನೋಡಿದ್ದೇನೆ. ಆದರೆ ಅಲ್ಲಿ ಎಲ್ಲೂ ನನಗೆ ಮಲೆಯಾಳಂ ಸಿನಿಮಾದ ರುಚಿ ಸಿಕ್ಕಿಲ್ಲ. ಮನೆ ಮಾತು ತುಳುವಾಗಿ, ಅಟ್ಟದ ಮಾತು ಕನ್ನಡವಾಗಿ, ವ್ಯಾವಹಾರಿಕ ಭಾಷೆ ಮಲೆಯಾಳಂ ಆಗಿ ತ್ರಿಭಾಷಿ-ಚತುರ್ಭಾಷಿ-ಬಹುಬಾಷಿಗಳಾಗಿಯೂ ಬದುಕನ್ನು ಸವೆಯುವ ನಮಗೆ- ಕನ್ನಡದ ಬಗ್ಗೆ ಅತಿಯಾದ ಅಭಿಮಾನ, ಪ್ರೇಮ.

ನನ್ನ ಅಸಾಧ್ಯವಾದ ಕನ್ನಡ ಅಭಿಮಾನ-ಪ್ರೇಮವು ವಿರಳವಾಗಿ ಚಿತ್ರಮಂದಿರಕ್ಕೆ ಬರುವ ಎಲ್ಲಾ ಕನ್ನಡ ಸಿನಿಮಾಗಳನ್ನು ಬಿಡದೆ ನೋಡುವಂತೆ ನನ್ನನ್ನು ಪ್ರೇರೇಪಿಸಿದ್ದು ಸುಳ್ಳಲ್ಲ. ಕನ್ನಡದ ಕಣ್ಮಣಿ ವರನಟ ‘ಡಾ. ರಾಜಕುಮಾರ್’ ಅವರ ಚಿತ್ರವಂತೂ ಅಲ್ಲಿಗೆ ಬರುವುದು ಎಂದರೆ ಸ್ವರ್ಗವೇ ಧರೆಗಳಿದಂತೆ. ಮಲೆಯಾಳಂ ಸಿನಿಮಾಗಳಲ್ಲಿ ನಾನು ಕಂಡ ಆ ವಾಸ್ತವಿಕತೆ, ಸಮಾಜಕ್ಕೆ ತಲುಪಿಸಬೇಕಾದ ಸಂದೇಶವನ್ನು ಕನ್ನಡ ಸಿನಿಮಾದಲ್ಲಿ ಕಂಡದ್ದು ‘ಅಣ್ಣಾವ್ರ’ ಸಿನಿಮಾದಲ್ಲಿ. ಮತ್ತೂ ಮುಂದಕ್ಕೆ ಬಂದರೆ ಅದನ್ನು ‘ಅನಂತನಾಗ್-ಶಂಕರನಾಗ್’ ಸಿನಿಮಾಗಳಲ್ಲಿ ಕಾಣಬಹುದಾಗಿತ್ತು. ಡಾ.ರಾಜಕುಮಾರ್ ಸಿನಿಮಾಗಳು ನಮ್ಮ ಕಡೆ ತೆರೆ ಕಾಣದಿದ್ದಾಗ, ನೆರೆಯ ಮಂಗಳೂರಿಗೆ ಹೋಗಿ ವರನಟನನ್ನು ಕಣ್ತುಂಬಾ ನೋಡಿ ಆಸ್ವಾದಿಸಿದ್ದಿದೆ. ನಮ್ಮ ಕಡೆಗಂತೂ ಹಳೆಯದಾದ ಪ್ರಿಂಟ್ ಉಳ್ಳ ಅಣ್ಣಾವ್ರ ಸಿನಿಮಾ ಬರುತ್ತಿತ್ತು. ಅಂತಹ ಸಂದರ್ಭದಲ್ಲಿ ಹಳ್ಳಿಗೆ ಹಳ್ಳಿಯೇ, ಮನೆಗೆ ಮನೆಯೇ ಒಟ್ಟಿಗೆ ಎದ್ದು ಹೊರಟು, ಬರೋಬ್ಬರಿ ಮೂರು ಗಂಟೆಗಳ ಕಾಲ ಸಿನೆಮಾ ನೋಡಿ ಖುಷಿಪಡುತ್ತಿದ್ದ ಕಾಲವೊಂದಿತ್ತು.

ಆದರೀಗ ಅಂತಹ ಸನ್ನಿವೇಶವನ್ನು ಕಲ್ಪಿಸಲೂ ಸಾಧ್ಯವಿಲ್ಲ. ಮೊದಲನೆಯದ್ದು ಬದಲಾದ ಅಭಿರುಚಿ, ಎರಡನೆಯದ್ದು ಕ್ಷೀಣಿಸಿದ ಕನ್ನಡ ಪ್ರೇಕ್ಷಕ ವರ್ಗ, ಮೂರನೆಯದ್ದು ಹೃದಯಕ್ಕೂ ಭಾವಕ್ಕೂ ತಟ್ಟಬಲ್ಲ ಕನ್ನಡ ಚಿತ್ರಗಳ ಕೊರತೆ. `ಆಡಿಸಿ ನೋಡು ಬೀಳಿಸಿ ನೋಡು ಉರುಳಿ ಹೋಗದು' ಎಂಬಂತಿದ್ದ ಅಲ್ಲಿನ ಪ್ರೇಕ್ಷಕ ವರ್ಗವನ್ನು ತನ್ನ ಜೊತೆಯಲ್ಲಿ ಇರಿಸಿಕೊಂಡು, ಬೆಳೆಸಿಕೊಳ್ಳುವಲ್ಲಿ ಕನ್ನಡ ಚಿತ್ರೋದ್ಯಮವು ವಿಫಲವಾಯಿತು. ಹೀಗಿರಲು ಸಹಜವಾಗಿಯೇ ಗಡಿನಾಡಿನ ಕನ್ನಡ ಪ್ರೇಮಿಗಳು ಮನರಂಜನೆಗಾಗಿ ಮಲೆಯಾಳಂ ಸಿನಿಮಾವನ್ನು ಆಶ್ರಯಿಸಿಕೊಂಡರು. ಮಲೆಯಾಳಂ ಸಿನಿರಂಗವು ಕೊಟ್ಟ ಮತ್ತು ಕೊಡುತ್ತಿರುವ ವಾಸ್ತವ ನೆಲೆಗಟ್ಟಿನ ಚಿತ್ರಗಳು ಕನ್ನಡ ಪ್ರೇಕ್ಷಕರ ಆಲೋಚನಾ ಧಾಟಿಯನ್ನು ಬದಲಾಯಿಸಿ ಮಲೆಯಾಳಂ ಸಿನಿಮಾದತ್ತ ಹೊರಳುವಂತೆ ಮಾಡಿದ ಶ್ರೇಯಸ್ಸು ಮಲೆಯಾಳಂ ಸಿನಿರಂಗದ್ದು. ಅಂತಹ ಪ್ರಬುದ್ಧತೆಯನ್ನು ಮಲ್ಲು ಸಿನಿ ಕ್ಷೇತ್ರವು ನೀಡಿದೆ ಎಂದರೆ ತಪ್ಪಾಗಲಾರದು.

ಗಡಿ ಪ್ರದೇಶದಲ್ಲಿ ಕನ್ನಡ ಸಿನಿಮಾವು ಕಡಿಮೆ ಪ್ರಮಾಣದಲ್ಲಿ ಓಡುತ್ತಿತ್ತು. ಈಗಂತೂ ಕೇಳಲೇಬೇಡಿ. ಇದ್ದ ಚಿತ್ರಮಂದಿರಗಳು ‘ಶಾದಿ ಮಹಲ್, ಶಾಪಿಂಗ್ ಕಾಂಪ್ಲೆಕ್ಸ್’ ಗಳಾಗಿ ಬಿಟ್ಟಿವೆ. ಮಿಕ್ಕಂತೆ ಎಲ್ಲಾ ಮನರಂಜನೆಗಳು ಅಂಗೈ ಅರಮನೆಯಲ್ಲೇ ದೊರಕುವುದರಿಂದ ಚಿತ್ರ ಮಂದಿರಕ್ಕೆ ಹೋಗಿ ನೋಡಿ ಅನುಭವಿಸುವ ಖುಷಿ ಈಗ ಯಾರಲ್ಲೂ ಇಲ್ಲ. ಹಾಗೂ ಹೀಗೂ ಒಂಚೂರು ಕನ್ನಡ ಭಾಷೆ ಇಂದಲ್ಲಿ ಉಳಿದಿದ್ದರೆ ಅದು- ‘ಯಕ್ಷಗಾನ, ಹರಿಕಥೆ, ಸಂಗೀತ, ಸಾಹಿತ್ಯ’ದ ಮಟ್ಟಿಗೆ ಮತ್ತು ಆ ಕ್ಷೇತ್ರದ ಮೂಲಕ ಕಾರ್ಯ ನಿರ್ವಹಿಸುವ ಮಂದಿಯಿಂದ ಮಾತ್ರ. ಒಂದು ಭಾಷೆಯ ಅಸ್ತಿತ್ವಕ್ಕೂ ಅದರ ಅಳಿವು-ಉಳಿವಿಗೂ ಸಿನೆಮಾ ಕಾರಣವಾಗುತ್ತದೆ ಎಂಬುದಕ್ಕೆ ಗಡಿನಾಡ ಪ್ರದೇಶಗಳೇ ಜೀವಂತ ಸಾಕ್ಷಿ.

‘ಕಾಸರಗೋಡು’ಲ್ಲಿರುವ ಕನ್ನಡಿಗರು ಅವರವರ ಮನೆಯಲ್ಲಿ-‘ತುಳುವರಾಗಿ, ಕೊಂಕಣಿಗರಾಗಿ, ಹವ್ಯಕರಾಗಿ, ಕರಾಡರಾಗಿ ಕೊನೆಗೆ ಮಲೆಯಾಳಿ’ ಗಳಾಗಿಯೂ ಕನ್ನಡವನ್ನು ಇಂದಿಗೂ ಉಳಿಸಿದ್ದಾರೆ ಮತ್ತು ಕನ್ನಡಲ್ಲೇ ಉಸಿರಾಡುತ್ತಾರೆ ಎನ್ನುವುದು ಅಭಿಮಾನದ ವಿಷಯ. ಹೆಚ್ಚೆಚ್ಚು ಮಲೆಯಾಳಂ ಸಿನಿಮಾದ ಬಗ್ಗೆ ಲೇಖಕ ಬರೆಯುತ್ತಿರುವುದರ ಹಿಂದಿನ ಸತ್ಯವನ್ನು ಕನ್ನಡ ಚಿತ್ರರಂಗವು ಅರಿತು ಸ್ಪಂದಿಸಿದ್ದರೆ; ಪ್ರಾಯಶಃ ಗಡಿನಾಡ ಪ್ರದೇಶದಲ್ಲಿ ಕನ್ನಡ ಭಾಷೆಯು ತನ್ನ ಉಳಿವನ್ನು ಕಂಡುಕೊಳ್ಳುವುದರ ಜೊತೆಗೆ ಕನ್ನಡ ಸಂಸ್ಕೃತಿಯನ್ನೂ ಬೆಳೆಸಿ ಪೋಷಿಸಿದ ಪುಣ್ಯ ಪ್ರಾಪ್ತಿಯಾಗುತ್ತಿತ್ತು !

***

ಸದಭಿರುಚಿಯ ಚಿತ್ರ ನಿರ್ಮಾಣ ಆಗಬೇಕಾದುದು ಬಹು ಮುಖ್ಯವಾದದ್ದು. ಒಂದು ಒಳ್ಳೆಯ ಕಥಾ ಹಂದರವುಳ್ಳ ಸಿನಿಮಾವನ್ನು ನಮ್ಮ ಮಣ್ಣಿಗನುಗುಣವಾಗಿ ನಿರ್ಮಿಸಲು ಯಾಕೆ ನಮ್ಮಿಂದ ಸಾಧ್ಯವಾಗುತ್ತಿಲ್ಲ? ಹೇಳಬೇಕೆಂದರೆ- ಆಯಾ ಮಣ್ಣಿಗೆ ಒಂದು ಗುಣ, ಸಂಸ್ಕೃತಿ ಅಂತ ಇರುತ್ತದೆ. ಅದರಿಂದ ವಿಮುಖವಾಗಿ ನಡೆದರೆ ಸ್ವೀಕಾರ ಗುಣ ಕಡಿಮೆಯಾಗುತ್ತಾ ಹೋಗುತ್ತದೆ. ‘ಮಲೆಯಾಳಂ’ ಮಣ್ಣಿನ ಗುಣ, ಸಂಸ್ಕೃತಿಗೆ ಅದೆಷ್ಟೇ ಸುಂದರವಾದ ಪಾಪ್, ರಾಪ್ ಗಳನ್ನು ತಂದರೂ ಅದಲ್ಲಿ ಮಿಳಿತಗೊಳ್ಳುವುದಿಲ್ಲ. ಆ ಮಣ್ಣಿಗೆ ಶಾಸ್ತ್ರೀಯ ಸಂಗೀತದ ನೆಲೆಗಟ್ಟೇ ಬುನಾದಿ. ಜತೆಗೆ ಒಂದಷ್ಟು ಅಲ್ಲಿನ ಜನಪದ ಅಂಶಗಳೂ. ಇವುಗಳ ಆಧಾರದ ಮೇಲೆ ಸಂಯೋಜಿಸಿದ ಹಾಡುಗಳು ಜನರಿಗೆ ತೀವ್ರ ಸ್ವರೂಪದಲ್ಲಿ ತಟ್ಟುತ್ತವೆ. ಅದು ಅವರ ಸಂಸ್ಕೃತಿಗೆ ಪೂರಕವಾಗಿರುವುದರಿಂದಲೇ ಸುಲಭವಾಗಿ ಸ್ವೀಕರಿಸಲೂ ಅವರಿಂದ ಸಾಧ್ಯವಾಗುತ್ತದೆ.

'ದಕ್ಷಿಣಾಮೂರ್ತಿ ಸ್ವಾಮಿ, ದೇವರಾಜನ್ ಮಾಸ್ಟರ್, ಬಾಬುರಾಜ್ ಅಲಿಯಾಸ್ ಬಾಬುಕ್ಕ, ವಿದ್ಯಾಧರ ಮಾಸ್ಟರ್, ರವೀಂದ್ರನ್ ಮಾಸ್ಟರ್' ಅವರ ಸಂಯೋಜನೆಗಳನ್ನು ಎಷ್ಟು ಸಲ ಕೇಳಿ ಸುಖಿಸಿದರೂ ಕಡಿಮೆಯೇ. ಅದೇ ರೀತಿ, 'ಜೊನ್ಸನ್ ಮಾಸ್ಟರ್, ಜಯಚಂದ್ರನ್, ಶರತ್, ಎಂ.ಜಿ.ರಾಧಾಕೃಷ್ಣನ್, ಔಸ್ ಅಪ್ಪಚ್ಚನ್' - ಹೀಗೆ ಹಲವು ಪ್ರತಿಭಾನ್ವಿತ ಸಂಗೀತ ನಿರ್ದೇಶಕರು ಮಲೆಯಾಳಂ ಸಿನೆಮಾ ಸಂಗೀತಕ್ಕೆ ತಮ್ಮ ಕಾಣ್ಕೆಯನ್ನು ನೀಡಿದ್ದಾರೆ. ‘ದಕ್ಷಿಣಾಮೂರ್ತಿ ಸ್ವಾಮಿ ಮತ್ತು ದೇವರಾಜನ್ ಮಾಸ್ಟರ್’ ಇಬ್ಬರೂ `ಖರಹರಪ್ರಿಯ' ರಾಗದಲ್ಲಿ ಸಂಯೋಜಿಸಿದಷ್ಟು ಹಾಡುಗಳನ್ನು ಬೇರೆ ಯಾರೂ ಮಾಡಿರಲು ಸಾಧ್ಯವಿಲ್ಲ ಅನ್ನೋದಕ್ಕಿಂತಲೂ-ಉಳಿದ ಸಂಗೀತ ನಿರ್ದೇಶಕರಿಗೆ ಆ ರಾಗದಲ್ಲಿ ಹೊಸತನ್ನು ಸೃಷ್ಟಿಸಲು ಏನೇನೂ ಉಳಿದಿಲ್ಲ ಅಂತಲೇ ಹೇಳಬಹುದು.

ಕನ್ನಡ ಮಣ್ಣಿಗೂ ಶಾಸ್ತ್ರೀಯ ಸಂಗೀತ ಮತ್ತು ಜನಪದ ಅಂಶಗಳ ಬುನಾದಿಯೇ ನೆಲೆಗಟ್ಟು-‘ಜಿ.ಕೆ. ವೆಂಕಟೇಶ್, ವಿಜಯ್ ಭಾಸ್ಕರ್, ರಾಜನ್ ನಾಗೇಂದ್ರ, ರಂಗರಾವ್, ಉಪೇಂದ್ರ ಕುಮಾರ್-ಹಂಸಲೇಖ-ಮನೋಮೂರ್ತಿ’ ಹಾಗೂ ಮತ್ತಿತರ ಘಟಾನುಘಟಿ ಸಂಗೀತ ನಿರ್ದೇಶಕರು ಕನ್ನಡ ಸಿನಿಮಾ ಸಂಗೀತವನ್ನು ಶ್ರೀಮಂತಗೊಳಿಸಿದ್ದಾರೆ. ಅಷ್ಟೇ ಯಾಕೆ, ‘ಕಾಳಿಂಗ ರಾವ್, ಮೈಸೂರು ಅನಂತ ಸ್ವಾಮಿ, ಸಿ ಅಶ್ವತ್, ಪದ್ಮಚರಣ್, ಜಯಶ್ರೀ ಅರವಿಂದ್, ಶಂಕರ್ ಶಾನುಭಾಗ್, ಪ್ರವೀಣ್.ಡಿ. ರಾವ್’ ಮುಂತಾದವರು ರಾಗ ಸಂಯೋಜಿಸಿ ಅನೇಕ ಇಂಪಾದ ಭಾವಗೀತೆಗಳನ್ನೂ ಕೊಟ್ಟಿದ್ದಾರೆ. ಇಂದಿಗೂ ನಾವು ಅವುಗಳನ್ನೇ ಕೇಳಿ ಖುಷಿ ಪಡಬೇಕೇ ವಿನಃ ಹೊಸತೇನಿದೆ? ಎಂದು ಹುಡುಕುವ ಅಗತ್ಯ ಒದಗಿ ಬರುವುದಿಲ್ಲ. ಒಂದೊಮ್ಮೆ ಇದ್ದರೂ ಅದು ಆಧುನಿಕತೆ ಎಂಬ ಭ್ರಮಾತ್ಮಕ ಜಗತ್ತಿನೊಳಗೆ ಉರುಳಾಡುವಂತಹ ಸಂಯೋಜನೆಗಳಾಗಿರುತ್ತವೆ. ಅತ್ತ ಮಲೆಯಾಳಂ ಮಣ್ಣಿನಲ್ಲಿ ಕಲೆ-ಸಂಸ್ಕೃತಿಯನ್ನು ಶ್ರೀಮಂತಗೊಳಿಸುವ ಕಾರ್ಯವು ಇನ್ನೂ ನಡೆಯುತ್ತಲೇ ಇದ್ದರೆ, ನಮ್ಮಲ್ಲದು ಗಣನೀಯವಾಗಿ ಕುಸಿದು ಹೋಗಿದೆ.

ಸಾಹಿತ್ಯಕ್ಕೆ ಒತ್ತು ನೀಡಿ, ಅದರ ಭಾವಸಾರವನ್ನು ಹೀರಿ ಸಂಯೋಜಿಸಲ್ಪಟ್ಟ ಹಾಡುಗಳು ಮತ್ತು ಅಷ್ಟೇ ಭಾವ ತೀವ್ರತೆಯಿಂದ ಅವುಗಳನ್ನು ಹಾಡುವ ಕಂಠಸಿರಿಗೆ ಒದಗುವ ಹೃದಯ ಸ್ಪರ್ಶಿ ಕ್ಷಣಗಳಿಗೆ ಸಾಕ್ಷಿಯಾಗುವ ಭಾಗ್ಯ ಕೇಳುಗರದ್ದು. ಆಯಾ ಮಣ್ಣಿಗೆ ಒಂದು ಗೇಯವಿರುತ್ತದೆ ಮತ್ತು ಅದರದ್ದೇ ಆದ ರಾಗವಿರುತ್ತದೆ. ಅದನ್ನು ಅರಿತುಕೊಂಡರೆ ಸಹಜವಾಗಿಯೇ ನ್ಯಾಯ ದೊರೆಯುತ್ತದೆ. ಯಾಕೆ ಹಾಗೆ ಇಲ್ಲವೆಂದು ಕೇಳಿದರೆ, "ಸಾರ್, ಜನ ಚೇಂಜ್ ಕೇಳ್ತಾ ಇದ್ದಾರೆ'' ಎಂಬ ಸಿದ್ದೌಷಧ ಉತ್ತರ. ಬದಲಾವಣೆ ಸಹಜ ಪ್ರಕ್ರಿಯೆ. ಅದು ಆಗಬೇಕಾದದ್ದೇ. ಆದರೆ ಹೇಗೆ? ಎನ್ನುವುದು ಚಿಂತಿಸಬೇಕಾಗಿರುವ ವಿಷಯ.

ಸಿನಿ ಭಾಷೆಯ ಪ್ರಯೋಗದಲ್ಲೂ ‘ಚೇಂಜ್’ ಅಡಕವಾಗಿದೆ. ನಮ್ಮ ಶಬ್ದಗಳೇ ನಮ್ಮವರ ಬಾಯಲ್ಲಿ ಮರೆಯಾಗುತ್ತಿರುವ ಕಷ್ಟಕಾಲದಲ್ಲಿ ಅದೆಲ್ಲಿಂದಲೋ ಹೆಕ್ಕಿ ತಂದ ಶಬ್ದಗಳನ್ನು ಅಲ್ಲಿ ಇಲ್ಲಿ ತುರುಕಿ, ಅಲ್ಲಿಯೂ, ಇಲ್ಲಿಯೂ,ಎಲ್ಲಿಯೂ ಸಲ್ಲದಂತಾದ ಸ್ಥಿತಿ ನಮ್ಮದು. ಪ್ರಯೋಗ, ಬದಲಾವಣೆ ಎಲ್ಲವೂ ಬೇಕು. ಆದರೆ ಅದಕ್ಕೊಂದು ಚೌಕಟ್ಟಿರಬೇಕು. ಇತಿ-ಮಿತಿಗಳೊಳಗೆ ನಮ್ಮೆಲ್ಲರಿಗೂ ಇರುವ ಮತ್ತು ಇರಬೇಕಾದ ಸಾಮಾಜಿಕ ಜವಾಬ್ದಾರಿಯನ್ನು ದೃಷ್ಟಿಯಲ್ಲಿಟ್ಟುಕೊಂಡು ಅಂತಹ ಪ್ರಯೋಗಗಳು ನಡೆಯಿತೆಂದರೆ ಅದಕ್ಕೊಂದು ಅರ್ಥ. ಇಲ್ಲವಾದಲ್ಲಿ ಅನರ್ಥ.

***

ನೇಟಿವಿಟಿ ಅಂತ ನಾವು ಏನನ್ನು ಕರೆಯುತ್ತೇವೆಯೋ, ಅದಿಂದು ನಿಜಾರ್ಥದಲ್ಲಿ ನಮ್ಮೊಂದಿಗೆ ಇಲ್ಲ. ಬೆಂಗಳೂರಿನಲ್ಲಿ ನಾವು ಎಂತಹ ನೇಟಿವಿಟಿಯನ್ನು ಕಾಣಬಹುದು? ಬೆಂಗಳೂರಿನ ಮಣ್ಣಿನ ಸೊಗಡು ನಿಜವಾದುದೇ? ಇದು ಕರುನಾಡಿನ ಬೆರಗೇ? ಖಂಡಿತಾ ಅಲ್ಲ. ಬೆಂಗಳೂರಿನ ನೇಟಿವಿಟಿಗೆ ಅನುಗುಣವಾಗಿ ಚಿತ್ರ ನಿರ್ಮಾಣಕ್ಕೆ ಹೊರಟರೆ ಅದು ನೇಟಿವಿಟಿಯನ್ನು ಪೊರೆಯುವ ಕಾಯಕವಾಗುವುದಾದರೂ ಹೇಗೆ? ಬೆಂಗಳೂರಿನ ಕಾಸ್ಮೋ ಸಂಸ್ಕೃತಿಯು ನಿಜದ ಮಣ್ಣಿನ ವಾಸನೆಯನ್ನು ಒಳಗೊಂಡಿರುವಂತದ್ದಲ್ಲ. ಆದರೂ ಅದನ್ನೇ ಸಹ್ಯವೆನಿಸಿ ಕೊಳ್ಳಬೇಕಾದ ಸ್ಥಿತಿಯ ನಿರ್ಮಾಣವಾಗಿದೆ. ಹಾಗಿರಲು ಉದ್ಯಮವು ಕೇವಲ ಬೆಂಗಳೂರನ್ನು ಮಾತ್ರ ಗಮನದಲ್ಲಿಟ್ಟುಕೊಂಡು ಸಿನೆಮಾ ತೆಗೆದರೆ ಅದು ನಮ್ಮತನಕ್ಕೆ ನಾವು ಮಾಡುವ ದೊಡ್ಡ ಅಪಚಾರ.

ಕಾಸ್ಮೋ ನಗರ ಎನ್ನುವುದೊಂದು ಬೇರೆಯದ್ದೇ ಆದ ‘ಪ್ಲೊಟ್’. ಅದು ಎಲ್ಲಾ ಕಡೆಗಳಿಗೂ ಅನ್ವಯವಾಗುವುದಿಲ್ಲ. ಕಾಸ್ಮೋ ನಗರದ ಮಂದಿ ಹೇಳುವ 'ನಮ್ಮದು' ಎನ್ನುವಂತದ್ದು ಅಲ್ಲಿ ಯಾವುದೂ ಇರುವುದೇ ಇಲ್ಲ. ಎಲ್ಲದರ ಮಿಶ್ರಣದ ಹೊಸ ವರ್ಗ,ಸಂಸ್ಕೃತಿಯದು. ಅದಕ್ಕೆ ಹಿಂದಿಲ್ಲ, ಮುಂದಿಲ್ಲ. ಇರುವುದು ಇಂದು ಮಾತ್ರ. ದೇಶದ ಎಲ್ಲಾ ಕಾಸ್ಮೋ ನಗರಗಳ ಹಣೆಬರಹವೂ ಇಷ್ಟೇ. ಬೆಂಗಳೂರಿಗೆ ಬಂದರೆ, ಎನ್ನಡಾ? ಎಕ್ಕಡಾ? ಎಲ್ಲಿದೆ ಕನ್ನಡ? ಕಣ್ಣರಳಿಸಿ ನೋಡಿದರೆ ಕನ್ನಡ ಗಡಗಡ!

ಯಾವ ರೀತಿ ಮುಕ್ತ ಮಾರುಕಟ್ಟೆಯು ನಮ್ಮನ್ನಿಂದು ಹೊಸಕಿ ಹಾಕಿದೆ ಎಂಬುದರ ಅರಿವು ಎಲ್ಲರಿಗೂ ಚೆನ್ನಾಗಿಯೇ ಇದೆ. ನಿತ್ಯ ‘ಚೇಂಜ್’ ಬಯಸುವ ನಮ್ಮ ಜನಕ್ಕೆ, ಆ ‘ಚೇಂಜ್’ನಿಂದ ಆಗುವ ನಷ್ಟದ ಪ್ರಮಾಣವನ್ನು ಕಲ್ಪಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಹಾಗಂತ ಕೇಳಿದ್ದೆಲ್ಲವನ್ನೂ ಕೊಡುವ ಕಾಮಧೇನು ಆಗುವ ಮೊದಲು ಒಮ್ಮೆಯಾದರೂ ಚಿಂತಿಸಬೇಕಲ್ಲವೇ? ಸ್ಪರ್ಧಿಯನ್ನು ಹಿಂದಿಕ್ಕುವ ಭರದಲ್ಲಿ, ಮಾರುಕಟ್ಟೆಯಲ್ಲಿ ಯದ್ವಾತದ್ವಾ ಮನಸ್ಸಿಗೆ ತೋಚಿದ್ದನ್ನು ಗೀಚಿ, ಹಾಡಿ-ಕತೆ ಕಟ್ಟಿ ಆಡಿ ಸಂಸ್ಕೃತಿಯ ಆಶಯವನ್ನು ಮೂಲೆ ಗುಂಪಾಗಿಸುವುದಿದೆಯೆಲ್ಲಾ ಅದು ಆರೋಗ್ಯಕರ ಲಕ್ಷಣವಲ್ಲ. ಆದರೀಗ ಮಲೆಯಾಳಿ ದೇಶದಲ್ಲೂ ಸಣ್ಣ ಪ್ರಮಾಣದಲ್ಲಿ ' ಚೇಂಜ್ 'ನ ಗಾಳಿ ಬೀಸುತ್ತಿರುವುದು ಒಳ್ಳೆಯ ಲಕ್ಷಣವಾಗಿ ಕಾಣುತ್ತಿಲ್ಲ. ಆದರೆ ಒಂದು ಸಮಾಧಾನ- ಎಲ್ಲವನ್ನೂ ಕಳಚಿಟ್ಟು ಹೊಸತರತ್ತ ಹೋಗದೆ.. ಈಗಾಗಲೇ ಎದ್ದಿರುವ ಬುನಾದಿಯ ಮೇಲೆ ಹೊಸತನದ ರಸಪಾಕಗಳ ಸೃಷ್ಟಿಯಲ್ಲಿ ಮಲೆಯಾಳಿ ನಿರ್ದೇಶಕರು ಮತ್ತು ಕಲಾವಿದರು ಮುಳುಗಿದ್ದಾರೆ. ಪರಿಣಾಮ ಮಣ್ಣಿನ ಜೊತೆಗಿನ ನಂಟನ್ನು ಸಂಪೂರ್ಣವಾಗಿ ಕಡಿದುಕೊಂಡಿಲ್ಲ ಎಂಬುದೇ ಸಂತಸ, ಸಮಾಧಾನದ ವಿಚಾರ.

***

-4-

ಸಹಜ ನಟನೆಯ ಮಲೆಯಾಳಿ ಕಲಾವಿದರು

ಮಲೆಯಾಳಂ ಸಿನಿಮಾದಲ್ಲಿ ಗಮನಿಸಬೇಕಾದ ಇನ್ನೊಂದು ಅಂಶವೆಂದರೆ ಅಲ್ಲಿ ಎಲ್ಲೂ ಹಾಸ್ಯ ಕಲಾವಿದ ಚಿತ್ರಕಥೆಯ ಚೌಕಟ್ಟಿನ ಹೊರಗೆ ನಿಲ್ಲುವುದಿಲ್ಲ. ಚಿತ್ರದುದ್ದಕ್ಕೂ ಹಾಸ್ಯವನ್ನು ತುರುಕಬೇಕೆಂದೇ ತುರುಕುವುದಿಲ್ಲ. ಅದು ನಮ್ಮ-ನಿಮ್ಮ ನಡುವೆ ನಡೆಯುವ ಸಹಜವಾದ ಹಾಸ್ಯ, ವಿನೋದ, ವಿಡಂಬನೆಗಳೆಲ್ಲವೂ ಘಟನಾವಳಿಗಳನ್ನು ಮತ್ತೆಮತ್ತೆ ನೆನಪಿಸುವಷ್ಟು ಹಗುರವೂ ನೈಜವೂ ಆಗಿರುತ್ತದೆ. ನಾಯಕ ಪಾತ್ರದಷ್ಟೇ ತೂಕವಿರುವವರು ಅಲ್ಲಿನ ಹಾಸ್ಯ ನಟರು. ಸಾಲದ್ದಕ್ಕೆ ಅವರು ‘ಕ್ಯಾರೆಕ್ಟರ್ ಪಾತ್ರ’ಗಳಲ್ಲೂ ಮಿಂಚಿ ಹೊಳೆಯುತ್ತಾರೆ. ಅಂತವರಲ್ಲಿ- 'ಜಗದಿ ಶ್ರೀಕುಮಾರ್, ಇನೋಸೆಂಟ್, ತಿಲಕನ್, ನೆಡುಮುಡಿ ವೇಣು, ಸಿದ್ದಿಕ್, ಸಾಯಿಕುಮಾರ್, ದಿಲೀಪ್, ಜಗದೀಶ್, ಮುಖೇಶ್, ಸುರೇಶ್‌ಗೋಪಿ’-ಅಂತಹ ಪ್ರಬಲ ಕಲಾವಿದರು ತಮ್ಮ ವಿಶೇಷ ಪ್ರತಿಭೆಯ ಮೂಲಕ ಜನ ಮಾನಸದಲ್ಲಿ ಸದಾ ಉಳಿಯುವಂಥವರು. ಯಾವುದೇ ಪಾತ್ರಕ್ಕೂ ಜೀವತುಂಬಿ ನ್ಯಾಯ ಒದಗಿಸಬಲ್ಲ ಕಲಾವಿದರವರು. ಇಂತಹದ್ದೇ ಪಾತ್ರಕ್ಕೆ ಇಂಥವರೇ ಬೇಕೆಂಬ ಚಾಲ್ತಿ ಅಲ್ಲಿಲ್ಲ. ಯಾರು ಏನೂ ಆಗಬಹುದಾದ ಸಾಧ್ಯತೆ, ಪರಿಣತಿ ಅಲ್ಲಿನ ಕಲಾವಿದರಲ್ಲಿದೆ.

ಒಬ್ಬ 'ಪಪ್ಪು' ಎಂಬ ರೈಲ್ವೇ ಪೋರ್ಟರ್ ತನ್ನ ವಿಶಿಷ್ಟ ಸ್ವರ ಮತ್ತು ಮ್ಯಾನರಿಸಂ ಮೂಲಕ ಹಾಸ್ಯ ಕಲಾವಿದನಾಗಿ ಹೊರ ಹೊಮ್ಮಿದ್ದು…'ಇಂದ್ರನ್ಸ್' ಎಂಬ ದರ್ಜಿಯು ತನ್ನ ಶರೀರ ಮತ್ತು ಶಾರೀರದ ಮೂಲಕವೇ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟು ಹಾಸ್ಯ ಮತ್ತು ಗಂಭೀರ ಪಾತ್ರಗಳ ಮೂಲಕ ಸ್ಥಾಪಿತವಾದದ್ದೆಲ್ಲವನ್ನೂ ನೋಡಿದರೆ- ಕಲೆ ಬದುಕಿನ ಒಂದು ಅವಿಭಾಜ್ಯ ಅಂಗವೆನ್ನುವುದು ವೇದ್ಯವಾಗುತ್ತದೆ. ಆ ಕಾರಣಕ್ಕೆ ನಾವೆಲ್ಲರೂ ಕಲಾವಿದರೇ ಆಗಿದ್ದೇವೆ. ನಮ್ಮ ನಡೆ-ನುಡಿಯಲ್ಲಿ ಕಂಡು ಬರುವ ನಿತ್ಯ ಬದುಕಿನ ಅಷ್ಟೂ ಆಗು ಹೋಗುಗಳೇ ಅಲ್ಲಿ ಪರದೆಯ ಮೇಲೆ ಹೊಮ್ಮುತ್ತವೆ. ಆದ್ದರಿಂದಲೇ ಅದನ್ನು ಸ್ವೀಕರಿಸಲು ಪ್ರೇಕ್ಷಕನಿಗೆ ಸುಲಭ ಸಾಧ್ಯವಾಗುವುದು. ಅದು ಸೋತಿತೆಂದಾದರೆ ಮುಲಾಜಿಲ್ಲದೆ ಪ್ರೇಕ್ಷಕ ಆ ಚಿತ್ರವನ್ನು ತಿರಸ್ಕರಿಸಬಲ್ಲ. ಅಂತಹ ಚಿಂತನೆ, ರಸಾಸ್ವಾದನೆಯ ಕಲೆಯನ್ನು ಮಲೆಯಾಳಿ ಪ್ರೇಕ್ಷಕ ಆಹ್ವಾನಿಸಿಕೊಂಡಿದ್ದಾನೆ.

ರಸ ಸೃಷ್ಟಿಯಲ್ಲಿ ಕನ್ನಡ ಉದ್ಯಮವನ್ನು ಮಲೆಯಾಳಂ ಉದ್ಯಮಕ್ಕೆ ಹೋಲಿಸಿದರೆ ನಾವು ಬಹಳಷ್ಟು ಹಿಂದಿದ್ದೇವೆ. ನಮ್ಮಲ್ಲಿ ಆ ತರದ ಸೃಷ್ಟಿ ಕ್ರಿಯೆಗಳು ಜರುಗುವುದೇ ಅಪರೂಪ. ಉತ್ತಮ ಕಥೆಗಳನ್ನು ಆರಿಸಿ, ಕಥಾ ಹಂದರವನ್ನು ಸೃಷ್ಟಿಸಿ ‘ಗಿರೀಶ್ ಕಾಸರವಳ್ಳಿ, ಪಿ. ಶೇಷಾದ್ರಿ, ಬಿ. ಸುರೇಶ್,ಲಿಂಗದೇವರು’ ಅವರಂತಹ ಪ್ರತಿಭಾವಂತ ನಿರ್ದೇಶಕರು ಕೊಟ್ಟ ಸಿನಿಮಾಗಳು ‘ಕಲಾತ್ಮಕ ಚಿತ್ರ’ಗಳು ಎಂದೆನಿಸಿಕೊಳ್ಳುತ್ತವೆ. ಮಿಕ್ಕ ಹಾಗೆ ‘ನಾಗಾಭರಣ, ಚೈತನ್ಯ ಕಾರೆಹಳ್ಳಿ, ಅಗ್ನಿ ಶ್ರೀಧರ್, ಸುಮನಾ ಕಿತ್ತೂರು’ ಅಂಥವರು ಕಲಾತ್ಮಕ ಚಿತ್ರಕ್ಕೆ ಒಂದಷ್ಟು ಮಸಾಲೆಯನ್ನು ಬೆರೆಸಿ ‘ಕಲಾತ್ಮಕ ವಾಣಿಜ್ಯ’ ಚಿತ್ರಗಳನ್ನು ನಿರ್ಮಿಸುತ್ತಾರೆ. ‘ಯೋಗರಾಜ್ ಭಟ್, ಸೂರಿ, ತೂಗುದೀಪ’ ಮತ್ತಿತರರು ಪಕ್ಕಾ ಕಮರ್ಷಿಯಲ್ ಚಿತ್ರಗಳನ್ನು ಕೊಡುತ್ತಾರೆ.

ರುಚಿಗೆ ತಕ್ಕಂತೆ ಯಾವ ತರಹದ ಅಡುಗೆಯನ್ನಾದರೂ ಮಾಡಬಹುದು. ನಮ್ಮ ರುಚಿಯ ಅರಿವು ನಮಗಿರಬೇಕಷ್ಟೆ. ನಮ್ಮ ರಾಜ್ಯದ ಬೌಗೋಳಿಕ ಪರಿಸರದ ರುಚಿಗಳನ್ನೇ ಆಯ್ದುಕೊಂಡರೂ ಅದ್ಭುತ ರಸಪಾಕವನ್ನು ಕನ್ನಡ ಚಿತ್ರೋದ್ಯಮ ಸೃಜಿಸಬಹುದು. ಅದಕ್ಕೆ ಪ್ರಿಸರ್ವೇಟಿವ್ಸ್ ಹಾಕದೆ, ಬೇಗ ಹೊಟ್ಟೆ ತುಂಬಲಿ ಎಂದು ಅಡುಗೆ ಸೋಡ ಬೆರೆಸದೆ, ಕಣ್ಣಿಗೆ ಹಬ್ಬವಾಗಿಸಲು ಬಣ್ಣಗಳನ್ನು ಚೆಲ್ಲದೆ, ನಮ್ಮ ಮನೆಯ ಊಟವನ್ನು ನಮ್ಮವರು ನಮ್ಮದೇ ಆಚಾರ-ವಿಚಾರದಲ್ಲಿ ಯಾವಾಗ ಉಣಬಡಿಸುತ್ತಾರೆ? ಎಂದು ಕಾದು ನೋಡುವ ಸ್ಥಿತಿ ಎದುರಾಗಿದೆ.

ಪ್ರತಿಯೊಂದು ಬಂಧವೂ ಕೃತಕವಾಗುತ್ತಿರುವ ಈ ಹೊತ್ತಲ್ಲಿ; ಪ್ರಬಲ ಸಂವಹನ ಮಾಧ್ಯಮವಾದ ಸಿನಿಮಾವು ಸಹಜತೆಯನ್ನು ಮೈಗೂಡಿಸಿಕೊಂಡು, ಮನೋರಂಜನೆಯನ್ನೂ ಬಗಲಲ್ಲಿ ಇಟ್ಟುಕೊಂಡು, ನೈಜತೆಯಿಂದ, ಕಾಳಜಿಯಿಂದ, ಎಲ್ಲಕ್ಕಿಂತ ಮಿಗಿಲಾಗಿ ಸಾಮಾಜಿಕ ಜವಾಬ್ದಾರಿಯಿಂದ ವರ್ತಿಸಬೇಕಾದ ಅಗತ್ಯ ಹೆಚ್ಛೇ ಇದೆ. ಪಾತ್ರವನ್ನು ಅನುಭವಿಸಿ ಅಭಿವ್ಯಕ್ತಿಸುವುದು ಇದೆಯಲ್ಲಾ, ಅದು ಕಲಾವಿದರಲ್ಲಿ ಇರಬೇಕಾದ ಮುಖ್ಯವಾದ ಗುಣಪ್ರತಿಭೆ. ಕಲಾವಿದ ಒಂದು ಬ್ರ‍್ಯಾಂಡ್ ಇಮೇಜ್‌ಗೆ ತಗುಲಿ ಹಾಕಿಕೊಳ್ಳದೇ ತನ್ನಲ್ಲಿರುವ ಪ್ರತಿಭೆಯನ್ನು ಸಾಣೆಗೆ ಹಚ್ಚುತ್ತಲೇ ಇರಬೇಕು. ಆಗ ಮಾತ್ರ ನಟ/ನಟಿಯರ ಪ್ರತಿಭೆಯು ಪ್ರಕಾಶಿಸಿ ಬೆಳಗಲು ಸಾಧ್ಯ. ಇಂದು ಸಿನಿಮಾವನ್ನು ಒಂದು ಕಲಾ ಮಾಧ್ಯಮವೆಂದು ಪರಿಗಣಿಸಿದರೆ; ಅಂತಹ ಒಂದು ಸಾಧ್ಯತೆಯನ್ನು ಇಲ್ಲೂ ಕಾಣಬಹುದು. ಇಲ್ಲ, ಅದು ಕೇವಲ ಮನೋರಂಜನೆಯ ಸರಕು ಎಂದಾದಲ್ಲಿ- ಅಭಿನಯದ ಲವಲೇಶವೂ ಗೊತ್ತಿಲ್ಲದ.. ಮುಖದ ಮಾಂಸ ಖಂಡಗಳಲ್ಲೂ ಭಾವರಸವನ್ನು ಸೃಷ್ಟಿಸಲು ತಿಳಿಯದ.. ಕಾಲಕ್ಕೆ ತಕ್ಕಂತೆ ತಮ್ಮನ್ನು ತಾವು ಅಪ್ ಡೇಟ್ ಮಾಡಿಕೊಳ್ಳಲರಿಯದ ನಟ-ನಟಿಯರೇ ನಿಜವಾದ ಕಲಾವಿದರೆಂದು ಕರೆಸಿಕೊಂಡು ಬಿಡುತ್ತಾರೆ.

***

ಸಿದ್ದ ಸೂತ್ರಗಳ ಬಂಧನಗಳಿಂದ ಹೊರ ಚಾಚಿಕೊಂಡು ಚಿಂತಿಸುವ ಹಾದಿಯು ಹೊಸ ಮಾದರಿಯ ಸಿನೆಮಾಗಳ ನಿರ್ಮಾಣಕ್ಕೆಕಾರಣವಾಯಿತು ಎನ್ನಲಡ್ಡಿಯಿಲ್ಲ. ಕಾಲಕ್ಕನುಗುಣವಾಗಿ ಸ್ಪಂದಿಸಿ ಬೆರೆಯುವ ಮಲೆಯಾಳಂ ಸಿನಿಮಾಗಳು ನಿರ್ಮಾಣವಾಗುತ್ತಿರುವುದು ಸಂತಸದ ವಿಚಾರ. ಸ್ಟಾರ್ಡಮ್ ನ ಮಣಭಾರವಿಲ್ಲದ ಸಿನಿಮಾ ರಂಗವದು. ಹಾಗಾಗಿ ಅಲ್ಲಿನ ಕಲಾವಿದರ ದೇಹಭಾಷೆಯು ತುಂಬಾ ಗುಣಾತ್ಮಕವಾಗಿದೆ. ಪ್ರಪಂಚಕ್ಕೆ ತಮ್ಮನ್ನು ತಾವು ತೆರೆದುಕೊಂಡ ರೀತಿ, ಹೊಸ ಮಾದರಿಯ ಚಿಂತನೆ, ಜಾಗತಿಕ ಸಿನಿಮಾದಲ್ಲಿನ ಪರಿಷ್ಕಾರಗಳು ಮತ್ತು ಜಗತ್ತು ಸಿನೆಮಾ ಎಂಬ ಕಲೆಯನ್ನು ದುಡಿಸಿಕೊಳ್ಳುವ ಮೋಡಿಯ ಬೆರಗಿಗೆ ಮರುಳಾಗಿ, ಆ ಎತ್ತರಕ್ಕೆ ಬೆಳೆಯುವ ಮನಸ್ಸು ಮಲೆಯಾಳಂ ಸಿನೆಮಾ ಲೋಕದ್ದಾಗಿದೆ. ಇಂತಹ ವಾತಾವರಣವನ್ನು ಇತರ ಭಾಷಾ ಚಿತ್ರಗಳಲ್ಲಿ ಈ ಪ್ರಮಾಣದದಲ್ಲಿ ಕಾಣುವುದಿಲ್ಲ. ಕಣ್ಣೆದುರೇ ಇರುವ ಜೀವಂತ ಉದಾಹರಣೆಯನ್ನು ನೋಡಿಯೂ ಕಲಿಯಲಾಗದ್ದಕ್ಕೆ ಯಾರನ್ನೆಂದು ದೂಷಿಸುವುದು?

ಕನ್ನಡದ ಮಣ್ಣಿನಲ್ಲಿ ಬಗೆಬಗೆಯ ಸತ್ವಪೂರ್ಣ ಕತೆಗಳನ್ನು ಕಟ್ಟಿಕೊಡಬಲ್ಲ ಅದೆಷ್ಟು ವಸ್ತುಗಳಿಲ್ಲ! ಹೊಸ ಪ್ರಯೋಗಗಳಿಗೆ ಒಡ್ಡಿಕೊಳ್ಳುವ ಮನಸ್ಸು ಕನ್ನಡ ಸಿನೆಮಾ ರಂಗಕ್ಕಿಲ್ಲ ಎನ್ನಬಹುದೇ? ಇದ್ದಿದ್ದರೆ ನಾವು ಯಾವತ್ತೋ ಮಲೆಯಾಳಂ ಸಿನಿರಂಗದ ಜೊತೆಯಲ್ಲಿ ಪೈಪೋಟಿ ಮಾಡುತ್ತಿದ್ದೆವು. ಸಿನೆಮಾವನ್ನು ನಾವು ಪ್ರೀತಿಸುವ, ನೋಡುವ, ಅರಿಯುವ ಮತ್ತು ಉಸಿರಾಡುವ ಬಗೆ ಬದಲಾಗಬೇಕು. ದುರಾದೃಷ್ಟ ಹಾಗಾಗುತ್ತಿಲ್ಲ. ಸುಖಾ ಸುಮ್ಮನೆ ಕೋಟಿಗಟ್ಟಲೆ ಹಣ ಸುರಿದು ನಿರ್ಮಿಸುವ ಸಿನೆಮಾದ ದುಡ್ಡಿನಲ್ಲಿ, ಕಡಿಮೆ ಬಜೆಟಿನ ಉತ್ತಮ ಕತಾ ಹಂದರವುಳ್ಳ, ಸಮಾಜಕ್ಕೆ ಥಟ್ಟನೆ ನಾಟುವಂತಹ ನಾಲ್ಕಾರು ಸಿನೆಮಾಗಳನ್ನು ನಿರ್ಮಿಸಬಹುದು. ಅದಕ್ಕೂ ಮೊದಲು ಸಿನೆಮಾ ಕುರಿತಂತೆ ನಮ್ಮ ಯೋಚನೆ ಬದಲಾಗಬೇಕಿದೆ.

ಪ್ರತಿಯೊಂದು ಬಿಕ್ಕಟ್ಟು ಕೂಡಾ ಹೊಸ ಅವಕಾಶಗಳನ್ನು ತೆರೆದಿಡುತ್ತವೆ ಎನ್ನುವ ಮಾತಿಗೆ ಮಲಯಾಳಂ ಸಿನೆಮಾ ಲೋಕವು ಸಾಕ್ಷಿಯಾಗಿದೆ. ಕೋವಿಡ್ ಮಹಾಮಾರಿಯು ಇತರ ಭಾಷಾ ಚಿತ್ರಕ್ಕೆ ಬಾಧೆ ಎನಿಸಿದರೂ, ಮಲೆಯಾಳಂ ಸಿನೆಮಾ ಕ್ಷೇತ್ರಕ್ಕೆ ಮಾತ್ರ ನವ ನವೀನ ಆಸ್ಪದಗಳನ್ನು ತೆರೆದಿಟ್ಟಿತು. ಯಾರಿಗೂ ಎಣಿಸಲೂ ಆಗದ ರೀತಿಯ ಕಥಾ ಹಂದರವುಳ್ಳ ಸಿನೆಮಾಗಳು ತೆರೆ ಕಂಡವು. ಇರುವ ಅವಕಾಶ, ಸಂಪನ್ಮೂಲಗಳನ್ನಷ್ಟೇ ಬಳಸಿಕೊಂಡು ಫ್ರೆಶ್ ಎನಿಸುವ ಸಿನೆಮಾಗಳು ಎದ್ದು ನಿಂತವು. ಅಷ್ಟೇ ಪ್ರೀತಿಯಿಂದ ಜನರೂ ಭಾಷೆಯ ಬೇಲಿ ಹಾರಿ ಅವುಗಳನ್ನು ಬಿಗಿದಪ್ಪಿಕೊಂಡರು.

ಇಲ್ಲಿ ಹೊಸಬರು ತಮ್ಮನ್ನು ತಾವು ಕ್ಯಾರೆಕ್ಟರ್ ರೋಲ್ ಗೆ ಒಡ್ಡಿಕೊಳ್ಳುವ ರೀತಿ ಇದೆ ನೋಡಿ ಅದು ಅಮೋಘವಾದುದು. ಮಾಹಿತಿ ತಂತ್ರಜ್ಞಾನವು ತೆರೆದಿಟ್ಟ ಲೋಕದೊಳಕ್ಕೆ ಹೊಕ್ಕಿ, ಬೇಕಾದುದನ್ನು ಹೆಕ್ಕಿ, ಕಂಡು ತಿಳಿದ ಪ್ರಸಕ್ತ ಮಲೆಯಾಳಂ ಸಿನಿ ಇಂಡಸ್ಟ್ರಿಯು ಬೆಳೆದು ನಿಂತ ಪರಿಗೆ ಮಾರು ಹೋಗದವರಿಲ್ಲ. ಸೀಮಾತೀತವಾಗಿ ಜನರು ಹೊಸ ಮಲೆಯಾಳಂ ಸಿನಿಮಾಗಳಿಗೆ ಕಾಯುತ್ತಿರುವುದನ್ನು ಕಂಡರೆ ಭಾಷೆ ಒಂದು ಅಡ್ಡಿಯಾಗದೆ ‘ಮೋಲಿವುಡ್’ ಅದೆಂತಹ ಛರಿಷ್ಮಾವನ್ನು ಸಿನಿ ವೀಕ್ಷಕರ ಮೇಲೆಸೆದಿದೆ ಎನ್ನುವುದರ ಅರಿವಾಗುತ್ತದೆ. ಇದು ಚಿತ್ರರಂಗ, ಕಲಾವಿದ ಹಾಗೂ ಪ್ರೇಕ್ಷಕರ ಮಹಾನ್ ಗೆಲುವೆಂದೇ ಪರಿಗಣಿಸುತ್ತೇನೆ. ಇಂತಹ ವಾತಾವರಣ ಇತರ ಭಾಷಾ ಚಿತ್ರಗಳಲ್ಲಿ ಪ್ರತ್ಯೇಕವಾಗಿ ನಮ್ಮ ಕನ್ನಡದಲ್ಲೂ ಬರಲಿ ಎಂಬ ಆಶಯ ತಪ್ಪಲ್ಲ ತಾನೆ ?!

ಅಂದ ಹಾಗೆ ನೀವು ನೋಡಲೇ ಬೇಕಾದ ಮಲೆಯಾಳಂ ಸಿನೆಮಾಗಳು-"ಅಯ್ಯಪ್ಪನೂಮ್ ಕೊಶಿಯೂಮ್, ದ ಗ್ರೇಟ್ ಇಂಡಿಯನ್ ಕಿಚನ್, ಜೋಜಿ, ಆರಿಕ್ಕಾರಿಯಾಮ್, ಕುಂಬಲಂಗಿ ನೈಟ್ಸ್, ಜಲ್ಲಿಕಟ್ಟ್, ದೃಶ್ಯ೦ 1&2, ನಿಝಲ್, ಸ್ಪಿರಿಟ್, ಇಂಡಿಯನ್ ಮನಿ, ಸುಜಾತೆಯುಮ್ ಸೂಫಿಯುಮ್, ಎಡಾ, ಟ್ರಾನ್ಸ್, ನಾಯಾಟ್ಟ್, ಮಲಿಕ್, ಕೋಲ್ಡ್ ಕೇಸ್, #ಹೋಮ್, ಕುರುತಿ, ಸಾರಾ'ಸ್, ಆಣುಮ್ ಪೆಣ್ಣುಮ್, ಹೆಲೆನ್,ಸಾಜನ್ ಬೇಕರಿ, ಅನ್ವೇಷಣಂ, ಜೋಸೆಫ್, ರೆಡ್ ವೈನ್, ವೈರಸ್, ಕೆಟ್ಟಿಯೋಳಾನ್ ಮಲಖಾ,ಅಂಬಿಳಿ, ಇಟ್ಟಿಮಾಣಿ: ಮೇಡ್ ಇನ್ ಚೈನಾ, ಡ್ರೈವಿಂಗ್ ಲೈಸೆನ್ಸ್, ಸೀ ಯು ಸೂನ್,ಎಂಡೆ ಉಮ್ಮಂಡೆ ಪೇರ್,ಆರ್ಟಿಸ್ಟ್, ಕೊಝಿಪ್ಪೋರು, ಮಧುರ ನಾರಂಗಾ, ಕಾಪ್ಪಿರಿ ತುರುತ್, ಪರೀತ್ ಪಾಂಡರಿ, ಪಾಟಿಂಡೇ ಪಲಾಜ್ಹಿ, ಗೀತಾಂಜಲಿ, ತೊಟ್ಟಪ್ಪನ್, ನ್ಯಾನ್ ಪ್ರಕಾಶನ್, ನಂಬರ್ ೧, ಪ್ರೀಸ್ಟ್, ಉಯರೇ, ಫ್ರೀಡಂ ಅಟ್ ಮಿಡ್ನೈಟ್, ಅಂಗಮಾಲಿ ಡೈರೀಸ್, ಎಂಡ್ರೋಯಿಡ್ ಕುಂಜಪ್ಪನ್, ಕಣ್ಣೇಕಾಣೆ"-ಮಲೆಯಾಳಂ ಸಿನೆಮಾದ ರುಚಿಯನ್ನು ಆಸ್ವಾದಿಸಿರಿ.

ಹೇಯ್, ಚುಮ್ಮಾ...ಶಂಭೋ ಮಹಾದೇವ!

ಲೇಖಕ ಸಂತೋಷ್ ಅನಂತಪುರ ಅವರ ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಕ್ಲಿಕ್ಕಿಸಿ..

MORE NEWS

ಪರಿಘಾಸನ ಮತ್ತು ಅರ್ಧ ಚಕ್ರಾಸನ 

16-04-2024 ಬೆಂಗಳೂರು

"ಪರಿಘಾಸನ ಆಸನವು ) ಪಿತ್ತ ಜನಕಾಂಗ ಮತ್ತು ಮೇದೋಜೀರಕ ಚೈತನ್ಯಗೊಳ್ಳುವಂತೆ ಮಾಡುತ್ತದೆ. ಹಾಗೆಯೇ ‘ಅರ್ಧ ಚಕ್...

ಲೋಕಸಭಾ ಚುನಾವಣೆಗಳ ಸುತ್ತಮುತ್ತ ಒಂದು ಸುತ್ತು

15-04-2024 ಬೆಂಗಳೂರು

"ಪರಸ್ಪರ ರೋಚಕ ನಿಂದನೆಗಳು. ಕ್ಷೇತ್ರವಾರು ಚಕ್ಕರಗುಳ್ಳಿ ಇಡುವ ಚತುರ ವಿವರಗಳು. ಹೊಸ ಹೊಸ ಬೈಗುಳಗಳು. ಮಾಧ್ಯಮಗಳಿಗ...

ಉಪವಿಷ್ಟಕೋನಾಸನ ಮತ್ತು ಪವನಮುಕ್ತಾಸನ

09-04-2024 ಬೆಂಗಳೂರು

"ಉಪವಿಷ್ಟಕೋನಾಸನ ಯೋಗಾಸನವು ಮನಸ್ಸನ್ನು ಶಾಂತಗೊಳಿಸುತ್ತದೆ ಮತ್ತು ಮಾಂಸಗಳ ತೂಕವನ್ನು ಕಡಿಮೆಗೊಳಿಸುತ್ತದೆ. ಪವನಮು...