ಮಳೆಕವಿಯ ನವಿರು ಪ್ರೇಮದ ಧ್ಯಾನ 


"ಪ್ರೀತಿಯನು ಚೆಂದವಾಗಿ, ಒಪ್ಪವಾಗಿ, ನವಿರಾಗಿ, ಅತೀ ಸರಳವಾಗಿ, ಎದೆಯೊಳಗೆ ನಮ್ಮ ಅರಿವಿಗೆ ಬಾರದಂತೆ ಉಳಿದು ಹೋಗಲು ಬರೆಯಲು ಸಾಧ್ಯವೇ ಅನಿಸಿದಾಗ ನೀವು ಜಯಂತ್ ನೆನಪಿಸಿಕೊಂಡರೆ ಅದೇ ಉತ್ತರ. " ಎನ್ನುತ್ತಾರೆ ಸದಾಶಿವ್ ಸೊರಟೂರು. ಅವರು ಸಾಹಿತಿ ಜಯಂತ್ ಕಾಯ್ಕಿಣಿ ಅವರ ಬಗ್ಗೆ ಬರೆದ ಲೇಖನ ನಿಮ್ಮ ಓದಿಗಾಗಿ...


ನನಗಷ್ಟೇ ನೀನು ಕೊಡುವಾಗ ಪಾಠ
ಹೃದಯಾನೇ ನನ್ನ ಗುರುದಕ್ಷಿಣೆ
ತುಟಿ ಕಚ್ಚಿ ಆಹಾ ಬರೆವಾಗ ನೀನು
ನನಗಂತು ಬೇಕು ಹಿತರಕ್ಷಣೆ..

ಹಿತವಾದ ಸಂಗೀತದೊಂದಿಗೆ ಈ ಸಾಲುಗಳನ್ನು ಕೇಳಿಸಿಕೊಂಡವರು ತಾವು ಹಾಯ್ದು ಬಂದ ಪ್ರೀತಿ ನೆನಪಿಸಿಕೊಂಡು ತುಂಟ ನಗೆ ಬೀರುತ್ತಾರೆ. ಪ್ರೀತಿಸುವವರು ತಮ್ಮ‌ ಪ್ರೀತಿಯ ಪ್ರಾರ್ಥನೆ ಗೀತೆಯಂತೆ ಗುನುಗಿ ಕೊಳ್ಳುತ್ತಾರೆ. ಪ್ರೀತಿಸದ ಮನಸುಗಳು ಒಂದು ಹಿಡಿ ಪ್ರೀತಿಗಾಗಿ ಎದ್ದು ನಿಲ್ಲುತ್ತವೆ. ಇಂತಹ ನೂರೆಂಟು ಸಾಲುಗಳಲಿ ನೀವು ನುಗ್ಗಿ ಹೋದರೆ ಕ್ಷೇಮವಾಗಿ ಖಾಲಿ ಹೃದಯದಿಂದ ವಾಪಸು ಬರಲು ಸಾಧ್ಯವಿಲ್ಲ. ಇಂತಹ ನೂರೆಂಟು ಸಾಲುಗಳನು ಕೊಟ್ಟು ಅಪಾಯಕ್ಕೆ ತಳ್ಳಿದವರು ನಮ್ಮ‌ ಕನ್ಮಡದ ಹೆಮ್ಮೆಯ ಮಳೆ ಕವಿ ಜಯಂತ್. ಅದಿರಲಿ ಈ ಮುಂದಿನ ಸಾಲುಗಳನು ಓದಿಕೊಳ್ಳಿ.‌

ಕಂಗಳಲಿ ಕನಸಿನ ಕುಲುಮೆ
ಹೊಳೆಯುತಿದೆ ಜೀವದ ಒಲುಮೆ
ಬೆಳಕಲ್ಲಿ ನೋಡು ಆದರೆ
ಮೈಯೆಲ್ಲಾ ಚಂದ್ರನ ಗುರುತು
ಹೆಸರೆಲ್ಲೋ ಹೋಗಿದೆ ಮರೆತು
ನಾನ್ಯಾರು ಹೇಳು ಆದರೆ..

ಇದನ್ನು ಸಿನೆಮಾದಲ್ಲಿ ನೋಡಿದರೆ ಅದೊಂದು ಚಿತ್ರಗೀತೆ. ಚಿತ್ರನೋಡದೆ ಕೇಳಿದರೆ ಭಾವಗೀತೆ. ಹೇಳದೆ ಕೇಳದೆ ಓದಿದರೆ ಪ್ರಿಯಕರ ಬರೆದ ಪ್ರೇಮಪತ್ರ. ಅವನು ಅವಳು‌ ಪಕ್ಕ ಪಕ್ಕ ಕೂತು ಆಡಿಕೊಂಡರೆ ಅದು ಹೃದಯದ ಪಿಸು ಮಾತು. ಪ್ರೀತಿಯನು ಇಷ್ಟೊಂದು ಚೆಂದವಾಗಿ, ಒಪ್ಪವಾಗಿ, ನವಿರಾಗಿ, ಅತೀ ಸರಳವಾಗಿ, ಎದೆಯೊಳಗೆ ನಮ್ಮ ಅರಿವಿಗೆ ಬಾರದಂತೆ ಉಳಿದು ಹೋಗಲು ಬರೆಯಲು ಸಾಧ್ಯವೇ ಅನಿಸಿದಾಗ ನೀವು ಜಯಂತ್ ನೆನಪಿಸಿಕೊಂಡರೆ ಅದೇ ಉತ್ತರ.

ಸರ್, ಮಧುರಗೀತೆಗಳ ಯುಗ ಚಿ. ಉದಯಶಂಕರ್, ಆರ್.ಎನ್. ಜಯಗೋಪಾಲ್ ಅವರ ಕಾಲಕ್ಕೇ ಮುಗಿದುಹೋಯ್ತು ಅಲ್ಲವಾ’ ಎಂದು ಒಮ್ಮೆ ಯಾರೊ ಗೀತಪ್ರಿಯ ಅವರನ್ನು ಪ್ರಶ್ನಿಸಿದಾಗ ಗೀತಪ್ರಿಯ ತಕ್ಷಣವೇ ಹೇಳಿದರು: `ಈಗಲೂ ಒಳ್ಳೊಳ್ಳೆಯ ಹಾಡುಗಳು ಬರ್ತಾ ಇವೆ. ಅದರಲ್ಲೂ ಜಯಂತ್ ಕಾಯ್ಕಿಣಿ ಬರೀತಾರಲ್ಲ? ಅವರ ಹಾಡುಗಳು ವೆರೀ ಗುಡ್ ಅನ್ನುವಷ್ಟು ಚನ್ನಾಗಿರ್ತವೆ. ಅವರು ಬಳಸುವ ಒಂದೊಂದು ಪದದಲ್ಲೂ ಜೀವ ಇರುತ್ತೆ. ತೂಕ ಇರುತ್ತೆ. ಪ್ರೀತಿ ಇರುತ್ತೆ. ಬೆರಗಿರುತ್ತೆ. ಲಾಲಿತ್ಯ ಇರುತ್ತೆ. ಇಡೀ ಸನ್ನಿವೇಶದ ತೀವ್ರತೆಯನ್ನು ಹೆಚ್ಚಿಸುವಂಥ ಶಕ್ತಿ ಜಯಂತ್ ಕಾಯ್ಕಿಣಿಯವರ ಹಾಡುಗಳಿಗಿರುತ್ತೆ. ಅನುಮಾನವೇ ಬೇಡ. ಕನ್ನಡ ಸಿನಿಮಾ ಸಾಹಿತ್ಯಕ್ಕೆ ಒಂದು ಹೊಸ ಉಡುಗೆ ತೊಡಿಸಿದವರು ಜಯಂತ ಕಾಯ್ಕಿಣಿ. ಗೀತ ಸಾಹಿತ್ಯಕ್ಕೆ ಹೊಸತು ಎಂಬಂಥ ಪದಗಳನ್ನೂ, ಸಾಲುಗಳನ್ನೂ ಬಳಸಿ ಗೆದ್ದದ್ದು ಕಾಯ್ಕಿಣಿಯವರ ಹೆಚ್ಚುಗಾರಿಕೆ' ಎಂದಿದ್ದರು.

ಬರೀ ತಾವು ಬರೆದ ಸಾಲುಗಳಿಂದಲೇ ಹೃದಯಗಳು ಪ್ರೀತಿಯನು‌ ಕನವರಿಸುವಂತೆ ಮಾಡಿದವರು ಅವರು.
ಅವರದು ಕುಸುರಿ ಕೆಲಸ. ದೊಡ್ಡದು ಕೆತ್ತುವುದು ಸುಲಭ. ಕುಸುರಿಯೇ ಕಷ್ಟ. ಅವರು ಪ್ರೀತಿಯನ್ನು ವರ್ಣಿಸಲು ಹೋಗುವುದಿಲ್ಲ ಅದರ ಮೇಲೆ ಚೆಂದದ ಕಸೂತಿ ಹಾಕುತ್ತಾರೆ. ಅಲ್ಲಿ ನಿಮಗೊಂದು ಹೊಸ ನೋಟ ದಕ್ಕುತ್ತದೆ. ಥಟ್ಟನೆ ಹೇಳಿದಂತೆ ಕಂಡರು ತಡೆದು ಹೇಳುವುದು ಅವರ ಶೈಲಿ. ಆಗಷ್ಟೇ ಮಿಂದು ಬಂದ ಹಸಿ ತರುಣಿಯಂತಹ ಸಾಲುಗಳು ನಮ್ಮನ್ನು ಸೆಳೆಯದೆ ಇರುವುದಾದರೂ ಹೇಗೆ? ಅವುಗಳಿಗೆ ವಶವಾಗದೆ ಉಳಿಯುವುದಾದರೂ ಹೇಗೆ? ಈ ಕೆಳಗಿನ ಸಾಲುಗಳನು ಸುಮ್ಮನೆ ಓದಿ ನೋಡಿ.

ಪ್ರತಿಸಲ ಬಾಗಿಲ ಸದ್ದಿಗೆ ಎದೆಯಲಿ ಸ್ಪಂದನ..
ತೆರೆದರೆ ಬೀಸುವ ಗಾಳಿಯೂ ಹೇಳಿದೆ ಸಾಂತ್ವನ..
ಓ... ನನ್ನ ವಿರಹವು ನಿನ್ನಿಂದ ಇನ್ನೂ ಚೆಂದ..
ವಿವರಿಸಲಾರೆ ಎಲ್ಲ ನಾ ದೂರದಿಂದ..
ನೆನಪನ್ನು ರಾಶಿಹಾಕಿ ಎಣಿಸುತ್ತಾ ಕೂರಲೇನು..
ಕನ್ನಡಿಯಲಿ ನಾ ಹುಡುಕಲೆ ನಗುವೊಂದನು.. ಒರೆಸುವ ಮುನ್ನವೇ..

ಈ ಸಾಲುಗಳನು ಕೇಳಿಸಿಕೊಂಡ ಮೇಲೆ ನಾವು ಅದರಿಂದ ಬಚಾವಾಗುವಾದರೂ ಹೇಗೆ? ಪ್ರೀತಿಸಿದವರೇ ಬಿಳಿಸಿಕೊಂಡು ಹೋದ ಪದಗಳನ್ನು ಹೆಕ್ಕಿ ಹೆಕ್ಕಿ ಜೋಡಿಸಿ ನವಿರುಗೊಳಿಸಿದ್ದಾರೊ ಎನ್ನುವ ಭಾವ ಯಾರಿಗಾದರೂ ಕಾಡದೆ ಇರದು.ಅವರ ಹಾಡಿನಲ್ಲಿ ಧೋರಣೆಗಳಿಲ್ಲ. ವಾದಗಳಿಲ್ಲ, ವಿಚಾರದ ಹೇರಿಕೆ ಇಲ್ಲ. ಪ್ರೀತಿಯ ವ್ಯಾಖ್ಯಾನಗಳಿಲ್ಲ. ಒಪ್ಪಿಸಿಕೊಳ್ಳಿ ಎಂಬ ಹಠವಿಲ್ಲ. ಬರೀ ಪ್ರೀತಿ ತನ್ನ ಪಾಡಿಗೆ ತಾನಿದ್ದು ನಿಮ್ಮನ್ನು ಆಕ್ರಮಿಸುತ್ತದೆ. ಗಾಳಿಯೊಂದು ಮೆಲ್ಲಗೆ ಬೀಸಿ ನೆಲಕ್ಕೆ ಬಿದ್ದ ಹೂವೊಂದುನ್ನು ಮಾತಾಡಿಸಿ ನವೀರಾಗಿ ಬೆನ್ನು ಸವರಿ ಹೋಗುವಂತೆ ಅವರ ಹಾಡಿನ ಸಾಲುಗಳು ಎದೆಯನು ಸವರಿ ಹೋಗುತ್ತವೆ. ಮರದಿಂದ ಕಳಚಿದ ಎಲೆಯೊಂದು ಗಾಳಿಯೊಂದಿಗೆ ಪಿಸುಗುಡುತ್ತಾ ನೆಲಸೇರುವಂತೆ ಕಾಡುತ್ತವೆ.

ನೀರಲ್ಲಿ ಸಣ್ಣ ಅಲೆಯೊಂದು ಮೂಡಿ, ಚೂರಾದ ಚಂದ್ರನೀಗ, ಇಲ್ಲೊಂದು ಚೂರು ಅಲ್ಲೊಂದು ಚೂರು ಒಂದಾಗಬೇಕು ಬೇಗ..

ಪ್ರೇಮದ ನವಿರು ಮಾತ್ರವಲ್ಲದೆ ಅದರ ವಿರಹವನ್ನು, ಚಡಪಡಿಕೆಯನ್ನು, ತುಂಟತನವನ್ನು, ಏಕಾಂತವನ್ನು, ಒಂಟಿತನವನ್ನು ತಮ್ಮದೆ ಶೈಲಿಯ ಪದ ಚಮತ್ಕಾರದಲ್ಲಿ ಹೊಸೆದು ಕಾಡುವರು. ಅವರ ಹಾಡಿನ ಸಾಹಿತ್ಯದಲ್ಲಿ ಗಂಭೀರತೆಯೇ ಇಲ್ಲ ಎನ್ನುವವರಿದ್ದಾರೆ. ಅದು ನೀಟಾಗಿ ಪ್ಯಾಂಟು‌ಶರ್ಟ್ ಟೈ ಹಾಕಿಕೊಂಡು ಮಾಡುವ ನೌಕರಿಯಲ್ಲ. ಅಮ್ಮನ ಹಾಲು ಕುಡಿದು ಆಡಿಕೊಂಡಿರುವ ಕಂದಮ್ಮ. ಅವರ ಹಾಡುಗಳಲ್ಲಿ ಗಂಭೀರತೆ ಇಲ್ಲ ಎನ್ನುವವರು ಈ ಸಾಲುಗಳನ್ನು ಕೇಳಿಸಿಕೊಂಡು ನೋಡಿ..

ಅಪರಿಚಿತ ತಿರುವಿನ ದಾರಿ
ಅಪರಿಮಿತ ಕನಸಿನ ಬೆನ್ನೇರಿ

ಬದುಕಿನ ಬಣ್ಣವೇ ಬದಲಾದರೆ ಅದು ಪ್ರೇಮವೇ
ಬಡವನ ಕಣ್ಣಲಿ ಬೆಳಕಾದರೆ ಅದು ಪ್ರೇಮವೇ

ಏಕಾಂತದಿ ಕೈಗನ್ನಡಿ ಹಿಡಿದಾಗ ನೀನು
ಆಗಂತುಕ ಎದುರಾಗುವ
ಕಂದೀಲಿನ ಬೆಳಕಲ್ಲಿ ಸರಿಯಾಗಿ ನೋಡು
ನಿನ್ನಾಳದ ಬಹುರೂಪವ

ನಮಗೇನು ಅಲ್ಲ ಇದು ಅನಿಸಿದ್ದರಲ್ಲಿ ಮತ್ತೇನು ವಿಶೇಷವಾದದ್ದನ್ನು ತೋರಿಸಿ ಸದ್ದಿಲ್ಲದೆ ನಮ್ಮ ಎದೆಗೆ ದಾಟಿಸಿ ಸುಮ್ಮನೆ ಕೂತು ಬಿಡುವ ಅವರು ಪ್ರೀತಿಯನ್ನು ಮನಸಿನೊಳಗಿನ‌ ಧ್ಯಾನದ ಮೂಲಕ ನೋಡುತ್ತಾರೆ. ಅವರ ಯಾವ ಸಾಲುಗಳಲ್ಲೂ ಬಲವಂತವಿಲ್ಲ. ಅವು ದುಂಬಾಲು ಬೀಳುವುದಿಲ್ಲ. ಸರಳ ರೂಪಕಗಳಿವೆ, ಸಂಕೀರ್ಣತೆ ಇಲ್ಲ.‌ ಹೊಸ ಭಾವವಿದೆ ಹಳೆಯದರ ಗೊಡವೆ ಇಲ್ಲ. ಅವೇ ಅವೇ ಉಪಮೆಗಳು ಬಂದು ಕಾಡುವುದಿಲ್ಲ. ಅದು ಸತ್ವದ ಬಗ್ಗೆ ತಕರಾರು ಎತ್ತುವುವುದಿಲ್ಲ, ತತ್ವದ ಭಾಷಣಗಳಿಲ್ಲ.. ಹುಡುಗಿಯೊಬ್ಬಳ ಥಟ್ಟನೆ ಕೊಡುವ ಮುತ್ತಿನಂತಿರುತ್ತದೆ. ಅವರ ಹಾಡುಗಳಲ್ಲಿ ಮೆಲೊಡಿ ಬರೀ ನಾದದ್ದಲ್ಲ ಅರ್ಥದ್ದೂ‌ ಕೂಡ. ಈಗಿನ ಕಾಲದ ಅಬ್ಬರ ಸಂಗೀತದ ನಡುವೆ ಕಳೆದುಹೋಗುತ್ತಿರುವ ಸಿನೆಮಾ ಸಾಹಿತ್ಯದ ಮಧ್ಯೆ‌ ನಿಮ್ಮನ್ನು ಸಾವಕಾಶವಾಗಿ ಕೂರಿಸಿ ಎದೆಯೊಳಗೆ ಹಿತವಾಗಿ ಪ್ರತಿ ಅಕ್ಷರವನ್ನು ನುಗ್ಗಿಸುತ್ತವೆ ಅವರ ಹಾಡುಗಳು.‌ ಪದಪದವೂ ಸ್ವಚ್ಛ, ಸಮೃದ್ಧ ಮತ್ತು ಸುಂದರ.

ಹಾಡಿಗೆ ಕೇವಲ ವೇದನೆ, ಸಂವೇದನೆ ಇದ್ದರಷ್ಟೆ ಸಾಲದು. ಅದು ನಿಮ್ಮನ್ನು ಗುನುಗಲು ಹಚ್ಚಬೇಕು. ಅದಕ್ಕೆ ಸ್ವರಜ್ಞಾನ, ಲಯಬದ್ಧತೆ, ಅಂತ್ಯಪ್ರಾಸ ಮತ್ತು ಅರ್ಥ ಕೂಡಿಸುವ ಪ್ರತಿಭೆ ಅತೀ ಮುಖ್ಯ. ಎಷ್ಟೊ ಹಾಡುಗಳ ಮೊದಲ ಸಾಲಿಗೆ ಎರಡನೆ ಸಾಲಿಗೆ ಸಂಬಂಧವೇ ಇರುವುದಿಲ್ಲ. ಆದರೆ ಜಯಂತ್ ಅವರು ಇಡೀ ಒಂದು ಹಾಡು ಕೂಡು ಕುಟುಂಬದಂತೆ, ಒಂದು ಫ್ಯಾಮಿಲಿ ಫ್ಯಾಕು. ಅಲ್ಲಿ ಎಲ್ಲವೂ ಸಿಕ್ಕುತ್ತದೆ. ಕಿವಿಗೂ ಇಂಪು ಮನಸ್ಸಿನ ತಣ್ಣನೆಯ ಅನುಭವ, ಎದೆಯೊಳಗೆ ಸಣ್ಣಗೆ ಮಳೆ. ಪ್ರತಿಯೊಬ್ಬ ಪ್ರೇಮಿಯೂ ಹಾಡಿನ ಸಾಲುಗಳನ್ನು ಕೇಳಿಕೊಂಡಾಗ ಇದು ನನಗಾಗಿಯೇ ಬರೆಯಲ್ಪಟ್ಟಿದ್ದು ಅಂದುಕೊಳ್ಳುತ್ತಾನೆ ಮತ್ತು ಅದನ್ನು ತನ್ನ ಪ್ರೀತಿಯೊಂದಿಗೆ ಸಮೀಕರಿಸಿಕೊಳ್ಳುತ್ತಾನೆ. ಅದರಲ್ಲಿ‌ ಇನ್ನೇನು ಗಾಢವಾದದ್ದು ಇದೆ ಅನಿಸುವುದಿಲ್ಲ ನನ್ನದೆ ಎದೆ ಹಾಡನು ಯಾರೊ ಬರೆದುಕೊಟ್ಟಂತೆ ಗುನುಗಿಕೊಳ್ಳುತ್ತಾನೆ. ಅದು ಜಯಂತ್ ಅವರ ಹಾಡಿನ ತಾಕತ್ತು.

ಕವಿಯೂ ಚಿತ್ರಗೀತೆ ರಚನೆಕಾರರೂ ಆಗಿಹೋದವರಲ್ಲಿ ಬಹಳ ಕಡಿಮೆ ಜನ. ಜಯಂತ್ ಅದ್ಬುತ ಸಾಹಿತಿ‌ ಕೂಡ ಆಗಿರುವುದು ಅವರ ಸಿನೆಮಾ ಹಾಡುಗಳಿಗೆ ಮತ್ತಷ್ಟು ಚೆಂದ ಕಂಡಿವೆ. ಅದ್ಬುತ ಕವಿತೆಗಳಂತಿವೆ.

ಚಿಗುರಿದ ಕನಸು ಚಿತ್ರ ಓ ಆಜಾರೆ ಹಾಡಿನಿಂದ ಶುರುವಿಟ್ಟುಕೊಂಡು ಇಂದಿಗೂ ನಿರಂತರವಾಗಿ ಹೃದಯದ ಮೇಲೆ ಹಿತವಾದ ದಾಳಿ ಮಾಡುತ್ತಾ ಹಾಡು ಕೇಳುವ ಕ್ಷಣಗಳನ್ನು ಮಧುರವಾಗಿರಿಸಿರುವ ಜಯಂತ್ ಅವರ ಈ ಸಿಹಿದಬ್ಬಾಳಿಕೆ ಸದಾ ಜಾರಿಯಲ್ಲಿರಲಿ ಎಂದು ಕೇಳುಗರು ಆಶಿಸುತ್ತಾರೆ. ಕನ್ನಡ ಪ್ರೇಮಗೀತೆಗಳಿಗೆ ಒಂದು ಹೊಸ ಆಯಾಮ ಕೊಟ್ಟ ಜಯಂತ್ ಅವರ ಈ ಕುರಿತಾದ ವಿನಮ್ರತೆ ಅವರ ಹಾಡಿನಷ್ಟೇ ಮಧುರ ಮತ್ತು ಸರಳ 'ನನ್ನದೇನು‌ ಇಲ್ಲ, ಹಾಡು ಬರೆಯಲು ನಿರ್ಧೇಶಕ ಸಿನೆಮಾದಲ್ಲಿ ಒಂದು ಸನ್ನಿವೇಶ ಕೊಡ್ತಾನೆ, ಸಂಗೀತಗಾರ ಟ್ಯೂನ್ ಕೊಡ್ತಾನೆ. ನನ್ನದೇನು ನಾಲ್ಕು ಸಾಲು ಸೇರಿಸುವುದಷ್ಟೆ' ಅನ್ನುವ ಅವರ ಈ ಮಾತು ಅವರ ಹಾಡಿನಷ್ಟೇ ನಮಗೆ ಇಂಪು.

ಅವರು ಬರೆದ ನೂರಾರು ಹಾಡುಗಳಲ್ಲಿ ಎಲ್ಲಾ ಸಾಲುಗಳು ಅದ್ಬುತವೇ. ಅದರಲ್ಲಿ ಕೆಲವು ಸಾಲುಗಳನ್ನು ನಿಮಗಾಗಿ ಹೆಕ್ಕಿ ತಂದಿದ್ದೀನಿ.

ಹೂ ಅರಳುವ ಸದ್ದನು ನಿನ್ನ ನಗೆಯಲಿ ಕೇಳಬಲ್ಲೆ/ ನೀ ಸನಿಹಕೆ ಬಂದರೆ ಹೃದಯದ ಗತಿಯೇನು/ ನೆನಪಿನ ಹೂಗಳ ಬೀಸಣಿಕೆ ನೀ ಬರುವ ದಾರಿಯಲಿ / ಮನಸಿನ ಹಸಿ ಬಣ್ಣಗಳಲ್ಲಿ, ನೀನೆಳೆವ ರೇಖೆಗಳಲ್ಲಿ ನಾ ಮೂಡಬೇಕು ಆದರೆ../ ಒಂಟಿ ಇರುವಾಗ ಕುಂಟು ನೆಪ ತೋರಿ ಬಂದ ಕನಸೆಲ್ಲ ನಿನ್ನದೇ/ ಕನಸನು ಗುಣಿಸುವಂಥ, ನೆನಪನು ಎಣಿಡುವಂಥ ಹೃದಯದ ಗಣಿತ ನೀನು/ ಗಾಳಿಯೇ ನೋಡು ಬಾ, ದೀಪದಾ‌ ನರ್ತನ/ ಕನಸಿನಾ ಕುಲುಮೆಗೆ ಉಸಿರನು ಊದುತಾ, ಕಿಡಿ ಹಾರುವುದು ಇನ್ನು ಖಚಿತ/ ನಿನ್ನ ನೃತ್ಯಕೆ ಸಿದ್ಧವಾಗಿದೆ ಅಂತರಂಗದಾ ರಂಗಸಜ್ಜಿಕೆ /ಸೆರೆ ಸಿಕ್ಕಾಗ ಬೇಕಿಲ್ಲ ‌ಜಾಮೀನು, ಸರಸಕ್ಕೀಗ ನಿಂದೇನೆ ಕಾನೂನು/ ಬಿಸಿಯೇ ಇರದ ಉಸಿರು ನಾನು ನೀನು ಇರದೆ

ಕಣ್ಣಲ್ಲೇ ಇದೆ ಎಲ್ಲಾ ಕಾಗದ, ನೀನೆ ನನ್ನಯ ಅಂಚೆಪೆಟ್ಟಿಗೆ
ಏನೇ ಕಂಡರೂ ನೀನೆ ಜ್ಞಾಪಕ, ನೀನೆ ಔಷಧಿ ನನ್ನ ಹುಚ್ಚಿಗೆ

ನಿಂತಲ್ಲೇ ಒಂದು ಮಿಂಚು ತಾಗಿದೆ, ಒಂದಲ್ಲ ಒಂದು ಆಸೆ ಮೂಡಿದೆ, ಇಂದಲ್ಲ ನಾಳೆ ಏನೋ ಕಾದಿದೆ.

ಕನಸಂತು ಈಗ ಚಿರಪರಿತ ಊರು
ಹುಚ್ಚಾದರೆ ಪೂರ್ತಿ ಹೊಣೆಗಾರರು ಯಾರು?

ನಿನ್ನ ಮನದ ಕವಿತೆ ಸಾಲ ಪಡೆದ ನಾನು ಸಾಲಗಾರ,
ಕನ್ನ ಕೊರೆದು ದೋಚಿಕೊಂಡಾ ನೆನಪುಗಳಿಗೆ ಪಾಲುದಾರ.

ಅನುಮಾನವೇ ಇಲ್ಲದೆ ಕನಸಿನಲಿ ಮೆಲ್ಲಗೆ ಬರಬಹುದೇ
ಅಲೆಮಾರಿಯ ಹೃದಯದ ಡೇರೆಯಲಿ ನೀನು ಇರಬಹುದೇ?

ಚೆಂದದ ರೂಪಕಗಳ ದಂಡಕಾರಣ್ಯದಲ್ಲಿ ನಿಮ್ಮನ್ನು ನುಗ್ಗಿಸಿ, ಅಲೆಲ್ಲಾ ಅಲೆದಾಡಿಸಿ, ಪ್ರೇಮದ ಮಳೆ ಸುರಿಸಿ ನಿಮ್ಮನ್ನು ನೆನೆಸಿ, ನೀವು ಗಡಗಡ ನಡುಗುವಾಗ ಮತ್ತೊಂದು ತುಂಟ ಸಾಲುಗಳಿಂದ ನಿಮ್ಮನ್ನು ಬೆಚ್ಚಗಾಗಿಸಿ, ಪ್ರೇಮದ ಹುಚ್ಚನ್ನು ಸದಾ ಜಾರಿಯಲ್ಲಿಡುವ ಅವರ ಈ ಮೋಡಿಗೆ ಪ್ರೇಮಿಗಳೆಂದು ಕ್ಷಮಿಸುವುದಿಲ್ಲ. ಸಾವಕಾಶವಾಗಿ ಕೂತು ಯೋಚಿಸಿ ಹೇಳಿ. ನಿಮಗೆ ಎಲ್ಲಾದರೂ ಸಿಕ್ಕಿವಿಯೇ ಇದಕ್ಕಿಂತ ಐಶಾರಾಮಿ ಸಾಲುಗಳು?

-ಸದಾಶಿವ್ ಸೊರಟೂರು

 

MORE FEATURES

ಅನುಭವವೆನ್ನುವ ಆಸ್ವಾದವನ್ನು ಮೀರಿಸುವ ಅನುಭೂತಿ ‘ಅಪ್ಪ ಕಾಣೆಯಾಗಿದ್ದಾನೆ’ : ದಯಾ ಗಂಗನಘಟ್ಟ

03-02-2023 ಬೆಂಗಳೂರು

''ಬಿಳೀ ಸುಣ್ಣದ ಗೋಡೆಯ ಮೇಲೆ ಬಿಸಿಲು ಕೋಲೊಂದು ನೆರಳನ್ನು ಚಿತ್ತಾರವಾಗಿ ಹರಡುವಂತೆ ಬೇಲೂರು ರಘುನಂದನ್ ರವರ ಕಥ...

ನಿರಂತರ ‘ನೃತ್ಯ ಸಂಭ್ರಮ’

03-02-2023 ಬೆಂಗಳೂರು

''ಕರ್ನಾಟಕ ಸಂಗೀತ ಪಿತಾಮಹರೆನಿಸಿರುವ ಪುರಂದರ ದಾಸರು ಸಂಗೀತ ಕಲಿಕೆಗೆ ಹಾಕಿಕೊಟ್ಟಿರುವ ಮಾರ್ಗವನ್ನು ಅನುಸರಿಸಿ...

ಭಾವನೆಗಳೊಂದಿಗೆ ಬಾಂಧವ್ಯ ಬೆಸೆಯುವ ಕಲೆ ‘ಕಥಾಗತ’ : ಸದ್ಯೋಜಾತ ಭಟ್ಟ

03-02-2023 ಬೆಂಗಳೂರು

''ಕಥಾಗತವನ್ನು ಓದುತ್ತಾ ಹೋದಂತೆ ಇಂದಿನ ಕಾಲಮಾನದಿಂದ ಆಕಾಲಕ್ಕೆ ಕೊಂಡೊಯ್ಯುವ ಕಲೆ ನವೀನ್ ಅವರು ಸಿದ್ಧಿಸಿಕೊಂಡ...