ಪರಿಷತ್‌ ಅಧ್ಯಕ್ಷ ಮನು ಬಳಿಗಾರ ರಾಜೀನಾಮೆಗೆ ಕೆ. ನೀಲಾ ಆಗ್ರಹ

Date: 05-02-2020

Location: ಕಲಬುರಗಿ


ಕಲಬುರಗಿ (ಶ್ರೀವಿಜಯ ಪ್ರಧಾನ ವೇದಿಕೆ):

ಆಳುವ ವರ್ಗದ ಅಡಿಯಾಳಿನಂತೆ ವರ್ತಿಸಿ ಪರಿಷತ್ತಿನ ಸ್ವಾಯತ್ತತೆಗೆ ಧಕ್ಕೆ ಉಂಟು ಮಾಡಿರುವ ಅಧ್ಯಕ್ಷ ಮನು ಬಳಿಗಾರ ರಾಜೀನಾಮೆ ನೀಡಬೇಕು ಎಂದು ಕೆ. ನೀಲಾ ಅವರು ಆಗ್ರಹಿಸಿದರು.

ಕಲ್ಯಾಣ ಕರ್ನಾಟಕ: ಅಂದು ಇಂದು ಮುಂದು’ ಗೋಷ್ಠಿಯಲ್ಲಿ ಪ್ರಬಂಧ ಮಂಡಿಸಿದ ಅವರು ’ಪರಿಷತ್ತಿನ ಅಧ್ಯಕ್ಷರು ಶೃಂಗೇರಿ ಸಮ್ಮೇಳನಕ್ಕೆ ತೆರಿಗೆ ಹಣವನ್ನು ನೀಡಲಿಲ್ಲ. ಸಮ್ಮೇಳನದ ಅಧ್ಯಕ್ಷರನ್ನು ಆಯ್ಕೆ ಮಾಡಿದ ಚುನಾಯಿತ ಜಿಲ್ಲಾ ಘಟಕದ ಆಯ್ಕೆಯ ಪರವಾಗಿ ನಿಲ್ಲಲಿಲ್ಲ. ಹಾಗೆಯೇ ಆಳುವ ವರ್ಗದ ಪರವಾಗಿ ನಿಂತು ಸಮಜಾಯಿಷಿ ನೀಡಬೇಕಿರಲಿಲ್ಲ’ ಎಂದು ಅವರು ಅಭಿಪ್ರಾಯಪಟ್ಟರು.

ಆಳುವ ವರ್ಗ ಅಧಿಕಾರ ನಡೆಸಬೇಕೇ ಹೊರತು ಪರಿಷತ್ತಿನ ಆಯ್ಕೆಯಲ್ಲಿ ಹಸ್ತಕ್ಷೇಪ ಮಾಡಬಾರದು. ಸರ್ವಾಧಿಕಾರಿಯಂತೆ ವರ್ತಿಸುವುದನ್ನು ತೀವ್ರವಾಗಿ ಖಂಡಿಸುತ್ತೇನೆ ಎಂದು ಹೇಳಿದರು.

ಪೆಟ್ರೋಲ್‌ ಬಾಂಬ್‌ ಹಾಕುತ್ತೇವೆ ಎಂದು ಬೆದರಿಸುವವರನ್ನು ಬಂಧಿಸಿ ಕ್ರಮ ತೆಗೆದುಕೊಳ್ಳಬೇಕಿತ್ತು. ಬದಲಿಗೆ ಫ್ಯಾಸಿಸ್ಟ್‌ ಧೋರಣೆಯನ್ನು ಖಂಡಿಸುವುದಾಗಿ ತಿಳಿಸಿದರು. ನೀಲಾ ಅವರ ಮಾತಿಗೆ ಸಭೆಯಲ್ಲಿದ್ದ ಜನರಿಂದ ಪೂರಕ ಪ್ರತಿಕ್ರಿಯೆ ವ್ಯಕ್ತವಾಯಿತು. ಭಾರೀ ಕರತಾಡನದ ಮೂಲಕ ನೀಲಾ ಅವರ ನಿಲುವನ್ನು ಸಭಿಕರು ಬೆಂಬಲಿಸಿದರು.

ತಮ್ಮ ಪ್ರಬಂಧ ಆರಂಭಿಸುವ ಮುನ್ನ ನೀಲಾ ಅವರು ’ಕವಿತೆ ವಾಚಿಸಿದ್ದಕ್ಕಾಗಿ ಕವಿಯ ಮೇಲೆ ಪೊಲೀಸರು ಪ್ರಕರಣ ದಾಖಲಿಸಿದ್ದು ಸರಿಯಲ್ಲ. ಹಾರುವ ಹಕ್ಕಿಗೆ ಬಂಧನ ಹಾಕುವ ಹಾಗಿಲ್ಲ. ಕೂಡಲೇ ಸರ್ಕಾರವು ಪ್ರಕರಣವನ್ನು ಹಿಂತೆಗೆದುಕೊಳ್ಳಬೇಕು’ ಎಂದು ಆಗ್ರಹಿಸಿದರು.

ಬೀದರ್‌ ಶಾಹೀನ್‌ ಶಾಲೆಯ ಪ್ರಕರಣವನ್ನು ಪ್ರಸ್ತಾಪಿಸಿದ ಅವರು ’ಪೊಲೀಸರು ಐದೈದು ಬಾರಿ ವಿಚಾರಣೆ ನಡೆಸಿದ್ದಾರೆ. ಪೊಲೀಸರ ನಡವಳಿಕೆ ಮತ್ತು ಸರ್ಕಾರದ ನಿಲುವನ್ನು ತೀವ್ರವಾಗಿ ಖಂಡಿಸುವುದಾಗಿ ಹೇಳಿದರು.

ನಾಡಿನ ಸೌಹಾರ್ದ ಪರಂಪರೆಯನ್ನು ಉಳಿಸಲು ಹೋರಾಡಬೇಕು ಎಂದ ಅವರು ’ಹೆಸರು ಬದಲಾದರೆ ಬದುಕು ಬದಲಾಗುವುದಿಲ್ಲ. ದೇಶದಾದ್ಯಂತ ಹೆಸರು ಬದಲಾಯಿಸುವ ಹುಚ್ಚು ಹರಡುತ್ತಿದೆ’ ಎಂದರು.

ಅಧ್ಯಕ್ಷತೆ ವಹಿಸಿದ್ದ ಮಾಜಿ ಸಂಸದ ಬಸವರಾಜ ಪಾಟೀಲ ಸೇಡಂ ಅವರು ಪ್ರತಿಕ್ರಿಯಿಸಿ ’ಕಲ್ಯಾಣ ಕರ್ನಾಟಕ ಎಂದು ಹೆಸರು ಬದಲಾಯಿಸಿದ’ ರಾಜ್ಯ ಸರ್ಕಾರವನ್ನು ಅಭಿನಂದಿಸಿದರು.

ಕಲ್ಯಾಣ ಕರ್ನಾಟಕ ಎಂದು ಹೆಸರು ಬದಲಾಯಿಸುವದರ ಪರವಾಗಿ ಶ್ರೇಷ್ಠ ವಿದ್ವಾಂಸ ಎಸ್‌.ಎಲ್‌. ಭೈರಪ್ಪ, ದಿ. ಚಿದಾನಂದಮೂರ್ತಿ, ಗೊ.ರು. ಚೆನ್ನಬಸಪ್ಪ ಹಾಗೂ ಸಿದ್ಧೇಶ್ವರ ಸ್ವಾಮಿಗಳು ಅಭಿಪ್ರಾಯ ವ್ಯಕ್ತಪಡಿಸಿದ್ದರು’ ಎಂದು ಹೇಳಿದರು. ಹೆಸರು ಆತ್ಮಾಭಿಮಾನದ ಪ್ರತೀಕ ಎಂದರು.

ಗೋಷ್ಠಿಯಲ್ಲಿ ೩೭೧ಜೆ ವಿಧಿ ತಿದ್ದುಪಡಿಗೆ ಸಂಬಂಧಿಸಿದಂತೆ ಪ್ರಬಂಧ ಮಂಡಿಸಿದ ಪತ್ರಕರ್ತ ಶ್ರೀನಿವಾಸ ಸಿರನೂರಕರ್‌ ಅವರು ’ಮಾನವ ಸಂಪನ್ಮೂಲ ಅಭಿವೃದ್ಧಿಗೆ ಪ್ರತ್ಯೇಕ ಮಂಡಳಿ ರಚಿಸುವ ಅಗತ್ಯವಿದೆ’ ಎಂದು ಅಭಿಪ್ರಾಯಪಟ್ಟರು.

ಹಿರಿಯ ವಿದ್ವಾಂಸ ವೀರಣ್ಣ ದಂಡೆ ಅವರು ಕಲ್ಯಾಣ ಕರ್ನಾಟಕದ ಪರಂಪರೆಯ ಮಹತ್ವ ವಿವರಿಸಿದರೆ ಅಮರೇಶ ಯತಗಲ್‌ ಅವರು ಇತಿಹಾಸ ಮತ್ತು ಪರಂಪರೆ ಕುರಿತ ವಿವರಗಳನ್ನು ಹಂಚಿಕೊಂಡರು.

 

MORE NEWS

ನಾಳೆಯಿಂದ ಮೂರು ದಿನಗಳ ಕಾಲ ಹಾವೇರಿಯಲ್ಲಿ ಅಕ್ಷರ ಜಾತ್ರೆ

05-01-2023 ಬೆಂಗಳೂರು

86ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೆಳನಕ್ಕೆ ಹಾವೇರಿ ಸಜ್ಜಾಗಿದೆ. ಮೂರು ವರ್ಷಗಳ ನಂತರ ನಡೆಯುತ್ತಿರುವ ಮೂರು&n...

ಭಾರತ ಅಖಂಡವಾಗಿ ಉಳಿಯಲಿ- ಎಚ್‌ಎಸ್‌ವಿ ಆಶಯ

07-02-2020 ಕಲಬುರಗಿ

ಕಲಬುರಗಿ (ಶ್ರೀವಿಜಯ ಪ್ರಧಾನ ವೇದಿಕೆ) ಭಾರತವನ್ನು ಎರಡಾಗಿ ಒಡೆಯದೆ ಅಖಂಡವಾಗಿ ಉಳಿಸುವುದು ಎಲ್ಲರ ಕರ್ತವ್ಯ ಎಂದು ಸಮ...

ಹಾವೇರಿಯಲ್ಲಿ 86ನೇ ಕನ್ನಡ ಸಾಹಿತ್ಯ ಸಮ್ಮೇಳನ

06-02-2020 ಕಲಬುರಗಿ

ಕಲಬುರಗಿ: ಹಾವೇರಿಯಲ್ಲಿ ಅಖಿಲ ಭಾರತ 86ನೇ ಕನ್ನಡ ಸಾಹಿತ್ಯ ಸಮ್ಮೇಳನ ನಡೆಸಲು ಕನ್ನಡ ಸಾಹಿತ್ಯ ಪರಿಷತ್ತಿನ ಕಾರ್ಯಕಾರಿ ಸ...