‘ಮರಳಿ ಮನೆಗೆ..’ 1987ರ ಗುಲ್ಬರ್ಗ ಸಾಹಿತ್ಯ ಸಮ್ಮೇಳನ ವರದಿ

Date: 28-01-2020

Location: ಬೆಂಗಳೂರು


ಹಿರಿಯ ಪತ್ರಕರ್ತ ದಿನೇಶ್‌ ಅಮೀನ್‌ ಮಟ್ಟು ಅವರು ಮೂರು ದಶಕಗಳ ಹಿಂದೆ (1987) ಗುಲ್ಬರ್ಗದಲ್ಲಿ ನಡೆದ ಅಖಿಲ ಭಾರತ 58ನೇ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಭಾಗವಹಿಸಿ ’ಮುಂಗಾರು’ ಪತ್ರಿಕೆಗಾಗಿ ವರದಿ ಮಾಡಿದ್ದರು. ಸಿದ್ದಯ್ಯ ಪುರಾಣಿಕ ಅವರ ಅಧ್ಯಕ್ಷತೆಯಲ್ಲಿ ನಡೆದ ಸಮ್ಮೇಳನದ ವಿಶ್ಲೇಷಣಾತ್ಮಕ ಬರೆಹ - ಲೇಖನಗಳನ್ನು ಜೊತೆಗೆ ಈಗಿನ ಟಿಪ್ಪಣಿಯೂ ಇದೆ.

 

ರಾಜಕಾರಣಿಗಳು ನಾಚುವಂತೆ ಮಾಡಿರುವ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರ ಅಧಿಕಾರದ ಹಪಾಹಪಿ ಮತ್ತು ಸರ್ಕಾರದ ಮುಂದೆ ಮಂಡಿ ಊರಿರುವ ಗುಲಾಮಗಿರಿ ನಡವಳಿಕೆ ಬಗ್ಗೆ ವ್ಯಾಪಕ ಟೀಕೆ-ಟಿಪ್ಪಣಿಗಳು ವ್ಯಕ್ತವಾಗುತ್ತಿರುವ ಹಿನ್ನೆಲೆಯಲ್ಲಿ ಸಾಹಿತ್ಯ ಸಮ್ಮೇಳನವನ್ನು ಬಹಿಷ್ಕರಿಸಬೇಕೆಂಬ ಕೂಗು ಕೇಳಿ ಬರುತ್ತಿದೆ. ಈ ನಡುವೆ ಬಹಿಷ್ಕರಿಸುವುದು ಬೇಡ, ವೇದಿಕೆಯಲ್ಲಿಯೇ ಪ್ರತಿಭಟಿಸುವ ಎಂಬ ಇನ್ನೊಂದು ರಾಜಿಸೂತ್ರದಂತಿರುವ ಮೆಲು ದನಿಯೂ ಕೇಳತೊಡಗಿದೆ.
ಕನ್ನಡ ಸಾಹಿತ್ಯ ಪರಿಷತ್ ನ ಇತಿಹಾಸದಲ್ಲಿ ಬಹಿಷ್ಕಾರ-ಮರಳಿ ಪ್ರವೇಶದ ಪ್ರಹಸನಗಳು ಹೊಸತೇನಲ್ಲ. 1987ರ ಗುಲ್ಬರ್ಗ ಸಾಹಿತ್ಯ ಸಮ್ಮೇಳನದಲ್ಲಿಯೂ ಇಂತಹದ್ದೊಂದು ಚರ್ಚೆ ನಡೆದಿತ್ತು. ಆ ಸಮ್ಮೇಳನವನ್ನು ಪತ್ರಕರ್ತನಾಗಿ ಮುಂಗಾರು ಪತ್ರಿಕೆಗಾಗಿ ವರದಿ ಮಾಡಿದ್ದೆ. ಅದರ ಒಂದು ಕಂತು ‘’ಮರಳಿ ಮನೆಗೆ ಬಂದ ಬಂಡಾಯ’’.ಅದರ ಯಥಾವತ್ ರೂಪ ಇಲ್ಲಿದೆ:

ಮರಳಿ ಮನೆಗೆ ಬಂಡಾಯ:

‘’ಪ್ರತಿಷ್ಠಾಪಿತ ಮೌಲ್ಯಗಳು ಜಡವಾಗಿ ಪ್ರತಿಗಾಮಿಯಾಗಿ ಬದುಕನ್ನು ಆವರಿಸಿಕೊಂಡಾಗ ಅವುಗಳ ವಿರುದ್ಧ ಹೋರಾಡುವುದೇ ಬಂಡಾಯ. ಇದು ಸಾಹಿತ್ಯದಲ್ಲಿ ಅಭಿವ್ಯಕ್ತಿಗೊಂಡಾಗ ಅದೇ ಬಂಡಾಯ ಸಾಹಿತ್ಯ’’ -ಹೀಗೆಂದು ಒಂದು ಕಾಲದಲ್ಲಿ ಬಂಡಾಯ ಚಳುವಳಿಯ ಸ್ಥಾಪಕರಲ್ಲೊಬ್ಬರಾಗಿದ್ದ ಪ್ರೊ.ಚಂದ್ರಶೇಖರ ಪಾಟೀಲ್ ಹೇಳಿದ್ದರು.
‘’’ಯಾವ ವೇದಿಕೆಯನ್ನು ಪ್ರತಿಷ್ಠಾಪಿತ ಮೌಲ್ಯಗಳ ಪೀಠ ಎಂದು ಟೀಕಿಸಿದ್ದರೋ, ಯಾವ ವ್ಯಕ್ತಿಗಳನ್ನು ಪ್ರತಿಗಾಮಿಗಳೆಂದು ಜರೆದಿದ್ದರೋ, ಅದೇ ವೇದಿಕೆಯಲ್ಲಿ ಅದೇ ವ್ಯಕ್ತಿಗಳ ಜನಪರ ನಿಲುವಿನ ಬಗ್ಗೆ ಸರ್ಟಿಫಿಕೇಟ್ ಕೊಡಲು ಸಾಹಿತಿ ಚಂದ್ರಶೇಖರ ಪಾಟೀಲರು ಸಮ್ಮೇಳನದ ಮೊದಲ ದಿನವೇ ಬಂದಿದ್ದರು.
ರಾಜ್ಯದ ಸಾಹಿತ್ಯ, ಸಮಾಜ ಮತ್ತು ರಾಜಕೀಯವನ್ನು ಕಾಳಜಿಯಿಂದ ಗಮನಿಸುತ್ತಾ ಬಂದ ಕೆಲವರಿಗಾದರೂ ಬಂಗಾರದ ಬಣ್ಣದ ಹೊದಿಕೆಯ ಆಮಂತ್ರಣ ಪತ್ರಿಕೆಯಲ್ಲಿ ಬಂಡಾಯ ಸಾಹಿತಿಗಳ ಹೆಸರುಗಳನ್ನು ಓದಿ ಆಘಾತವಾಗಿರಬಹುದು.
ಸಮ್ಮೇಳನದಲ್ಲಿ ಚಂಪಾ, ರಂಜಾನ್ ದರ್ಗಾ, ಚೆನ್ನಣ್ಣ ವಾಲೀಕಾರ ಅವರು ಸುಳಿದಾಡಿದಾಗೆಲ್ಲ ಜನರ ಗುಸುಗುಸು ಕೇಳುತ್ತಿತ್ತು. ಕೆಲವು ನೇರವಾಗಿಯೇ ಬಂಡಾಯ ಮರಳಿ ಮನೆಗೆ ಬಂದು ತಲುಪಿದ ಬಗ್ಗೆ ಪ್ರಶ್ನಿಸಿಯೂ ಇದ್ದರು.
ಇದಕ್ಕೆಲ್ಲ ಮೊದಲ ಸ್ಪಷ್ಟೀಕರಣ ಬಂದದ್ದು ಡಾ.ಚೆನ್ನಣ್ಣ ವಾಲೀಕಾರ ಅವರಿಂದ. ‘’’ಬಸವಣ್ಣನವರ ವಚನಗಳಲ್ಲಿ ಆರ್ಥಿಕ ವಿಚಾರಗಳು’’ ಎಂಬ ಪ್ರಬಂದವನ್ನು ಮಂಡಿಸಲು ಅವರು ಎದ್ದು ನಿಂತಾಗ ಕೆಂಪು ಅಂಗಿ ತೊಟ್ಟಿದ್ದ ವಾಲೀಕಾರ ಇನ್ನಷ್ಟು ಕೆಂಪಾಗಿದ್ದರು. ‘’ ನಾವು ಬಂಡಾಯದ ಗೆಳೆಯರಾದ ಚಂಪಾ, ರಂಜಾನ್ ದರ್ಗಾ ಮೊದಲಾದವರು ಸಮ್ಮೇಳನದಲ್ಲಿ ಕಾಣಿಸಿಕೊಂಡಾಗ ಜನರ ಗುಸುಗುಸು ಪ್ರಶ್ನೆ ಕೇಳಿ ಬಂದಿತ್ತು. ಅದಕ್ಕೆಲ್ಲ ಬಂಡಾಯ ಸಂಘಟನೆಯ ಪರವಾಗಿ ಸ್ಪಷ್ಟೀಕರಣ ನೀಡುವೆ’’ ಎಂದು ವಾಲೀಕಾರರು ಬೆವರೊರೆಸುತ್ತಾ ಮಾತಿಗಾರಂಭಿಸಿದ್ದರು.
‘’ 1979ರಲ್ಲಿ ಧರ್ಮಸ್ಥಳದ ಸಾಹಿತ್ಯ ಸಮ್ಮೇಳನದಲ್ಲಿ ದಲಿತ ಸಾಹಿತ್ಯ ಗೋಷ್ಠಿ ನಡೆಸಬೇಕೆಂದು ಕೇಳಿಕೊಂಡಾಗ ‘’ ದಲಿತ,ಬಲಿತ, ಕಲಿತ’’ ಎಂದು ಪರಿಷತ್ ನ ಅಧ್ಯಕ್ಷ ಹಂಪ ನಾಗರಾಜಯ್ಯ ಲೇವಡಿ ಮಾಡಿದ್ದರು. ಅದನ್ನು ಪ್ರತಿಭಟಿಸಿ ನಾವು ಪರ್ಯಾಯವಾಗಿ ಬಂಡಾಯ ಸಾಹಿತ್ಯ ಸಮ್ಮೇಳನ ನಡೆಸಿದ್ದೆವು.ಅದರ ನಂತರ ಸಾಹಿತ್ಯ ಪರಿಷತ್ ನಲ್ಲಿ ಬಹಳಷ್ಟು ಬದಲಾವಣೆಗಳಾಗಿದ್ದು ಮುಖ್ಯವಾಗಿ ಅದರ ಜನಪರ ನಿಲುವು ನಮಗೆ ತೃಪ್ತಿ ನೀಡಿದೆ. ಈಗ ನನ್ನ ಗುಡಿಸಲಿನ ಜನ ಬಂಡಿ ಹೊಡೆಯುವ ಜನ ಕೂಡಾ ಸಮ್ಮೇಳನಕ್ಕೆ ಬರುತ್ತಿದ್ದಾರೆ. ನಮ್ಮ ಸಂಘಟನೆ ಕೂಡಾ ಉಳಿದವರು ಗುರುತಿಸುವಷ್ಟು ಗಟ್ಟಿಯಾಗಿ ಬೆಳೆದು ನಿಂತಿದೆ.
ಈ ದೃಷ್ಟಿಯಿಂದ ಮತ್ತೆ ಸಾಹಿತ್ಯ ಪರಿಷತ್ ನ ಕಾರ್ಯಕ್ರಮಗಳಲ್ಲಿ ಭಾಗವಹಿಸಬೇಕೆಂದು ದಾವಣಗೆರೆಯ ಬಂಡಾಯ ಚಳುವಳಿಯ ರಾಜ್ಯಮಟ್ಟದ ಸಮಾವೇಶದಲ್ಲಿ ತೀರ್ಮಾನ ಕೈಗೊಳ್ಳಲಾಗಿತ್ತು . ಇಲ್ಲಿನ ವಿಚಾರ ಗೋಷ್ಠಿಯಲ್ಲಿ ಬಾಬಾಸಾಹೇಬ್ ಅಂಬೇಡ್ಕರ್ ಅವರನ್ನು ನಿರ್ಲಕ್ಷಿಸಿದ್ದಕ್ಕಾಗಿ ಧಿಕ್ಕಾರ ಹೇಳಿ ಈ ಪ್ರಬಂದ ಮಂಡಿಸುತ್ತೇನೆ’’ ಎಂದು ಭಾವೋದ್ವೇಗದಿಂದ ಏದುಸಿರು ಬಿಡುತ್ತಾ ವಾಲೀಕಾರ್ ತಮ್ಮ ದೀರ್ಘ ವಿವರಣೆ ನೀಡಿ ಮಾತು ಆರಂಭಿಸಿದ್ದರು.
ಆ ಕ್ಷಣದಲ್ಲಿ ‘’ನಿಮ್ಮ ಈ ಒಡಂಬಡಿಕೆ ತಾತ್ಕಾಲಿಕವೋ, ಶಾಶ್ವತವೋ? ಎಂಬ ಪ್ರಶ್ನೆಯೊಂದು ಪ್ರೇಕ್ಷಕರೊಬ್ಬರಿಂದ ತೂರಿಬಂದಿತ್ತು. ‘’ ಪರಿಷತ್ ಜನಪರ ಧೋರಣೆ ಮುಂದುವರಿಸಿಕೊಂಡು ಹೋದರೆ ಭಾಗವಹಿಸುತ್ತೇವೆ, ಇಲ್ಲದಿದ್ದರೆ ಬಹಿಷ್ಕರಿಸುತ್ತೇವೆ’’ ಎಂದು ವಾಲಿಕಾರ್ ಉತ್ತರಿಸಿದ್ದರು.

ಮರುದಿನ ಪ್ರೇಕ್ಷಕರ ಸಾಲಿನಲ್ಲಿ ಕುಳಿತಿದ್ದ ವಾಲೀಕಾರ್ ಅವರನ್ನು ನಾನು ಮಾತಿಗೆಳೆದಾಗ ತೀರಾ ಮುಗ್ಧರಂತೆ ಕಂಡ ಅವರು ನೀಡಿದ್ದ ಉತ್ತರಗಳು ಕೂಡಾ ಬಾಲಿಷವಾಗಿತ್ತು. ’’ಮೊನ್ನೆಮೊನ್ನೆ ವರೆಗೆ ಜನವಿರೋಧಿಯಾಗಿದ್ದ ಸಾಹಿತ್ಯ ಪರಿಷತ್ ಹಠಾತ್ತನೆ ನಿಮಗೆ ಜನಪರವಾಗಿ ಕಾಣಲು ಕಾರಣವೇನು? ಎಂಬ ಪ್ರಶ್ನೆಗೆ ಅವರು ‘’ ತನಗೆ ಪ್ರಾಸ ಬಳಸುವ ಹುಚ್ಚಿರುವುದರಿಂದ ದಲಿತ..ಬಲಿತ..ಕಲಿತ.. ಎಂಬ ಮಾತು ಆಡಿದ್ದಾಗಿ ಹಂಪನಾ ಅವರೇ ಸ್ಪಷ್ಟೀಕರಣ ನೀಡಿದ್ದರು’’ ಎಂಬ ಹಾಸ್ಯಾಸ್ಪದ ವಿವರಣೆ ನೀಡಿದ್ದರು.
ವಿಪರ್ಯಾಸವೆಂದರೆ ಧರ್ಮಸ್ಥಳ ಸಾಹಿತ್ಯ ಸಮ್ಮೇಳನದಲ್ಲಿ ದಲಿತ ಸಾಹಿತ್ಯಗೋಷ್ಠಿಯನ್ನು ನಡೆಸಲು ನಿರಾಕರಿಸಿದ್ದ ಪರಿಷತ್ ಕೊನೆಗೆ ಅದನ್ನು ಆಯೋಜಿಸಿದ್ದರು. ಆದರೆ ಗುಲ್ಬರ್ಗ ಸಾಹಿತ್ಯ ಸಮ್ಮೇಳನದಲ್ಲಿ ದಲಿತ ಸಾಹಿತ್ಯ ಗೋಷ್ಠಿಯೇ ಇರಲಿಲ್ಲ, ಮಾತ್ರವಲ್ಲ, ಬಂಡಾಯ ಸಾಹಿತ್ಯಕ್ಕೆ ಪ್ರೇರಕ ಶಕ್ತಿಯಾಗಿರುವ ಅಂಬೇಡ್ಕರ್, ಲೋಹಿಯಾ ಅವರನ್ನೂ ಕಡೆಗಣಿಸಿದ್ದರು.
‘’ ಇದು ಸಾಹಿತ್ಯ ಪರಿಷತ್ ನ ಜನವಿರೋಧಿ ಧೋರಣೆ ಎಂದು ನಿಮಗನಿಸಲಿಲ್ಲವೇ? ಎಂಬ ನನ್ನ ಪ್ರಶ್ನೆಗೆ ಉತ್ತರಿಸಿದ ವಾಲಿಕಾರ್ ‘’’ಸಾಹಿತ್ಯ ಪರಿಷತ್ ನ ಧೋರಣೆಯನ್ನು ಖಂಡಿಸಿ ಧಿಕ್ಕಾರ ಹಾಕಿದೆನಲ್ಲಾ’’ ಎಂದು ತಮ್ಮ ಅಮೋಘ ಪ್ರತಿಭಟನೆಯನ್ನು ಉಲ್ಲೇಖಿಸಿದ್ದರು. ಅವರ ಮಾತುಗಳು ‘’ ಬಂಡಾಯ ಸಾಹಿತ್ಯವೆಂದರೆ ಕೇವಲ ಘೋಷಣೆ-ಧಿಕ್ಕಾರಗಳ ಪ್ರಲಾಪ’’ ಎಂಬ ಬಂಡಾಯದ ವಿರೋಧಿಗಳ ಟೀಕೆಯನ್ನು ಸಮರ್ಥಿಸುವಂತಿತ್ತು.
ಧಿಕ್ಕಾರ ಕೂಗುವುದೇ ಪ್ರತಿಭಟನೆಯಾದರೆ ಧರ್ಮಸ್ಥಳ ಸಾಹಿತ್ಯ ಸಮ್ಮೇಳನದಲ್ಲಿಯೇ ಆ ಕೆಲಸ ಮಾಡಬಹುದಿತ್ತಲ್ಲಾ, ಅದಕ್ಕಾಗಿ ಪ್ರತ್ಯೇಕ ಸಮ್ಮೇಳನ ಯಾಕೆ ನಡೆಸಿದ್ದೀರಿ? ಎಂಬ ಪ್ರಶ್ನೆಗೆ ಅವರಲ್ಲಿ ಉತ್ತರ ಇರಲಿಲ್ಲ.

ಮುನ್ನುಡಿ:

ಧರ್ಮಸ್ಥಳದಲ್ಲಿ ನಡೆದ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಬಹಿಷ್ಕರಿಸಿದ್ದ ಬಂಡಾಯ ಸಾಹಿತಿಗಳು ಗುಲ್ಬರ್ಗ ಸಾಹಿತ್ಯ ಸಮ್ಮೇಳನಕ್ಕೆ ಮರು ಪ್ರವೇಶ ಮಾಡಿದ್ದರು. ಈ ಬಗ್ಗೆ ಮೊದಲು ಚೆನ್ನಣ್ಣ ವಾಲೀಕಾರ್ ಸ್ಪಷ್ಟನೆ ನೀಡಿದ್ದರೆ, ನಂತರದ ಸರದಿ ಪ್ರೊ.ಚಂದ್ರಶೇಖರ ಪಾಟೀಲ್ ಅವರದ್ದು.

ಚಂಪಾ ಅವರು ಸಮ್ಮೇಳನದ ಕವಿಗೋಷ್ಠಿಯ ಅಧ್ಯಕ್ಷತೆ ವಹಿಸಿದ್ದರು. ಒಂದು ಗಂಟೆಯ ತನ್ನ ಸುದೀರ್ಘ ಭಾಷಣವನ್ನು ಅವರು ಸ್ಪಷ್ಟೀಕರಣದೊಂದಿಗೆ ಪ್ರಾರಂಭಿಸಿದ್ದರು.

(ಹಳೆಯ ವರದಿಯ ಯಥಾವತ್ ರೂಪ)

‘’..ಈ ಸಾಹಿತ್ಯ ಸಮ್ಮೇಳನಲ್ಲಿ ಬಂಡಾಯದ ಗೆಳೆಯರು ಭಾಗವಹಿಸಿದ್ದನ್ನು ಈಗಾಗಲೇ ಕೆಲವು ಗೆಳೆಯರು ಪ್ರಶ್ನಿಸಿದ್ದಾರೆ. ಚೆನ್ನಣ್ಣ ವಾಲೀಕಾರ್ ಅವರು ಅವರಸರದಲ್ಲಿ ಸ್ಪಷ್ಟೀಕರಣ ನೀಡಿದ್ದಾರೆ. ಅವರು ಹೇಳದೆ ಬಿಟ್ಟಿರುವ ಕೆಲವು ಮಾತುಗಳ ಜೊತೆಯಲ್ಲಿ ನನ್ನಮಾತುಗಳನ್ನು ಸೇರಿಸಿ ಅಭಿಪ್ರಾಯ ನೀಡುತ್ತೇನೆ’’ ಎಂದು ಮಾತಿಗಾರಂಭಿಸಿದ್ದರು.
….ದಲಿತ ಸಾಹಿತ್ಯದ ಬಗ್ಗೆ ಹಂಪನಾ ಮಾಡಿದ ಲೇವಡಿಯೊಂದೇ ಧರ್ಮಸ್ಥಳ ಸಾಹಿತ್ಯ ಸಮ್ಮೇಳನದ ಬಹಿಷ್ಕಾರಕ್ಕೆ ಕಾರಣ ಅಲ್ಲ. ಆಗಲೇ ಸವಕಲಾಗಿ ಹೋಇದ್ದ ಜೀವ ವಿರೋಧಿ ಧೋರಣೆಯ ಜಾತಿವಾದಿ ಗೋಪಾಲಕೃಷ್ಣ ಅಡಿಗರನ್ನು ಸಮ್ಮೇಳನದ ಅಧ್ಯಕ್ಷರನ್ನಾಗಿ ಆರಿಸಿದ್ದ ಬಗ್ಗೆಯೂ ನಮ್ಮ ವಿರೋಧ ಇತ್ತು…’’ ಎಂದು ಹೊಸ ಕಾರಣವೊಂದನ್ನು ಚಂಪಾ ಹೇಳಿ ಎಲ್ಲರನ್ನು ಚಕಿತಗೊಳಿಸಿದರ.
…ತಾನು ‘’ ಹಿಂದೂ’’ ‘’ಬ್ರಾಹ್ಮಣ’’ ಎಂದು ಟೈಟಲ್ ಹಚ್ಚಿಕೊಂಡು ಕವನ ಬರೆಯುತ್ತಿದ್ದ ಅಡಿಗರನ್ನು ಆ ಸಮ್ಮೇಳನದ ಅಧ್ಯಕ್ಷತೆಗೆ ಆಯ್ಕೆ ಮಾಡಿದಾಗ ಇಡೀ ಪರಿಷತ್ ಪ್ರತಿಗಾಮಿಗಳ ಜಾತಿವಾದಿಗಳ ಸಂಕೇತವಾಗಿ ನಮಗೆ ಕಂಡದ್ದರಿಂದ ಆ ಸಮ್ಮೇಳನದಿಂದ ದೂರ ಸರಿಯ ಬೇಕಾಯಿತು…
…ನಂತರದ ದಿನಗಳಲ್ಲಿ ಸಾಹಿತ್ಯ ಪರಿಷತ್ ನ ನಿಲುವುಗಳಲ್ಲಿ ಬದಲಾವಣೆಯಾಗಿದೆ, ನಾವಿರದಿದ್ದರೂ ಸಮ್ಮೇಳನದ ಗೋಷ್ಠಿಗಳ್ಲಲಿ ದಲಿತ ಸಾಹಿತ್ಯಕ್ಕೆ ಸ್ಥಾನ ಕೊ್ಟ್ಟಿದ್ದರು. ಮುಖ್ಯವಾಗಿ ಕನ್ನಡ ಸಾಹಿತ್ಯ ಪರಿಷತ್ ಜಾತಿವಾದಿಗಳು ಮತ್ತು ಮೂಲಭೂತವಾದಿಗಳ ಕಪಿಮುಷ್ಠಿಯಿಂದ ಹೊರಗೆ ಬಂತೈತಿ ಎಂದನಿಸಿದೆ’’.. ಎಂದು ಚಂಪಾ ಅವರು ವಕೀಲರ ವಾದದ ಶೈಲಿಯಲ್ಲಿ ಸ್ಪಷ್ಟೀಕರಣ ನೀಡಿದ್ದರು.
ಬಂಡಾಯದ ನಾವು ಈಗ ಸೈದ್ಧಾಂತಿಕವಾಗಿ ಗಟ್ಟಿಯಾಗಿದ್ದೇವೆ. ಯಾವ ವೇದಿಕೆಗೆ ಹೋದರೂ ನಮ್ಮನ್ನು ನಾವು ಸಮರ್ಥಿಸಿಕೊಳ್ಳಬಲ್ಲೆವು. ಈ ಎಲ್ಲ ವಿಚಾರಗಳನ್ನು ದಾವಣಗೆರೆಯಲ್ಲಿ ನಡೆದಿದ್ದ ರಾಜ್ಯ ಮಟ್ಟದ ಬಂಡಾಯ ಸಮ್ಮೇಳನದಲ್ಲಿ ಚರ್ಚಿಸಿದ ನಂತರವೇ ಸಾಹಿತ್ಯ ಸಮ್ಮೇಳನದಲ್ಲಿ ಭಾಗವಹಿಸಬೇಕೆಂಬ ನಿರ್ಣಯ ಕೈಗೊಳ್ಳಲಾಗಿತ್ತು. ಆ ನಿರ್ಣಯಕ್ಕೆ ಬದ್ಧರಾಗಿ ನಾವಿಲ್ಲಿ ಬಂದಿದ್ದೇವೆ’’ ಎಂದು ಚಂಪಾ ಅವರು ‘’ ಮರಳಿ ಮನೆಗೆ’’ ಬಂದ ನಿಲುವನ್ನು ತರ್ಕಬದ್ಧವಾಗಿ ಸಮರ್ಥಿಸಿಕೊಂಡರು.
ಚಂಪಾ ಅವರ ಈ ಸ್ಪಷ್ಟೀಕರಣವನ್ನು ಚೆನ್ನಣ್ಣ ವಾಲೀಕಾರ್ ಸಂಪೂರ್ಣವಾಗಿ ಒಪ್ಪಿರಲಿಲ್ಲ. ಈ ಬಗ್ಗೆ ಅವರನ್ನು ಪ್ರಶ್ನಸಿದಾಗ ‘’ ಅದು ಚಂಪಾ ಅವರ ವೈಯಕ್ತಿಕ ನಿಲುವು, ಬಂಡಾಯದ್ದಲ್ಲ. ಚಂಪಾ ಅವರಿಗೆ ಮೈ ಕ್ ಸಿಕ್ಕಿದರೆ ಈ ರೀತಿ ಮಾತನಾಡಿ ವಿಷಯಾಂತರ ಮಾಡುತ್ತಾರೆ. ಅವರಿಗೆ ವೈಯಕ್ತಿಕ ವಿಚಾರಗಳನ್ನು ಎಳೆದು ತರುವ ಚಟ ಇದೆ’’ ಎಂದು ಚುಚ್ಚಿದರು.

ಚಂಪಾ ಒಂದು ವಿವಾದಕ್ಕೆ ತೆರೆಎಳೆದ ನಂತರ ಲಂಕೇಶ್ ಬಗ್ಗೆ ಪ್ರಸ್ತಾಪಿಸಿ ಮತ್ತೊಂದು ವಿವಾದಕ್ಕೆ ಚಾಲನೆ ನೀಡಿದರು.
‘’..ಪಾಳೆಯಗಾರ ಲಂಕೇಶ್ ಎಂಬ ನನ್ನ ಪತ್ರಕರ್ತ ಗೆಳೆಯ ಇತ್ತೀಚೆಗೆ ನನ್ನ ಬಗ್ಗೆ ಟೀಕೆ-ಟಿಪ್ಪಣಿ ಬರೆದು ಹಂಪನಾ ಅವರನ್ನು ಉಳಿಸಲು ಹೆಗಡೆಯವರ ಬಳಿ ನಾನು ನಿಯೋಗ ಹೋಗಿದ್ದೆ ಎಂಬ ಅಪ್ಪಟ ಸುಳ್ಳು ಬರೆದಿದ್ದರು. ಈ ಬಗ್ಗೆ ಗೆಳೆಯನಾಗಿದ್ದ ನನ್ನಿಂದ ಸತ್ಯ ಸಂಗತಿಯನ್ನು ತಿಳಿದುಕೊಳ್ಳುವ ಸೌಜನ್ಯವೂ ಅವರು ತೋರಿಲ್ಲ’’ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ತನ್ನ ಭಾಷಣದಲ್ಲಿ ಲಂಕೇಶ್ ಅವರನ್ನು ಅನಗತ್ಯವಾಗಿ ಎಳೆದು ತಂದ ಚಂಪಾ ‘’ ಒಂದು ಕಾಲದಲ್ಲಿ ನಾವಿಬ್ಬರೂ ಮಿತ್ರರಾಗಿದ್ದೆವು. ಆದರೆ ಲಂಕೇಶ್ ಕ್ರಮೇಣ ರಾಮಕೃಷ್ಣ ಹೆಗಡೆಯವರ ಭಟ್ಟಂಗಿಯಾಗಿ, ಅವರ ವಂದಿ ಮಾಗಧರ ಪಾಲಿಗೆ ಸೇರುತ್ತಿರುವುದನ್ನುಗಮನಿಸಿ ಆತನ ಎದೆಗೆ ಝಾಡಿಸಿ ಹೊರಬಂದೆ’’ ಎಂದು ತಮ್ಮ ಐತಿಹಾಸಿಕ ಸಂಬಂಧ ಮುರಿದು ಬಿದ್ದ ಕತೆ ಬಿಚ್ಚಿಟ್ಟರು.
ಅಷ್ಟರಲ್ಲೇ ತೃಪ್ತರಾಗದ ಚಂಪಾ ‘’’ಜನತಾ ಪಕ್ಷವನ್ನು ಬೆಂಬಲಿಸಿದ ತಪ್ಪಿಗೆ ಪ್ರಾಯಶ್ಚಿತ ರೂಪದಲ್ಲಿ ಲಂಕೇಶ್ ಅವರು ಆತ್ಮಶುದ್ದಿಗೆಂದು ಉಪವಾಸ ಕೈಗೊಂಡಿದ್ದರು. ಆತ್ಮಶುದ್ದಿ ಬಯಸುವವರು ಆತ್ಮ ಮಲಿನಗೊಂಡವರು ಮಾತ್ರ. ಅಂತಹ ಮಲಿನ ಅತ್ಮಕ್ಕೆ ಎಲ್ಲರ ಪರವಾಗಿ ಶಾಂತಿಕೋರುತ್ತೇನೆ’’ ಎಂದು ಚಂಪಾ ಅವರು ತನ್ನೊಳಗಿನ ದ್ವೇಷವನ್ನೇಲ್ಲ ಕಾರಿಬಿಟ್ಟರ.
ಕವಿಗೋಷ್ಠಿಯ ಅಧ್ಯಕ್ಷತೆಯನ್ನು ಚಂಪಾ ವೈಯಕ್ತಿಕ ನಿಂದೆಗೆ ಬಳಸಿಕೊಂಡ ಬಗ್ಗೆ ಪ್ರೇಕ್ಷಕರು ಆಕ್ಷೇಪ ವ್ಯಕ್ತಪಡಿಸಿದರು. ಕೆಲವು ನೇರವಾಗಿ ತರಾಟೆಗೆ ತೆಗೆದುಕೊಂಡು. ಕೊನೆಗೆ ಚಂಪಾ ಕಾವ್ಯದ ಬಗ್ಗೆ ಮಾತನಾಡಿ ತಮ್ಮ ಹಳೆಕವನವೊಂದನ್ನು ಓದಿ ಭಾಷಣ ಮುಗಿಸಿದರು.
( ಆ ದಿನದ ಚಂಪಾ ಅವರ ಮಾತುಗಳು, ಒಲವು-ನಿಲುವುಗಳು ಏನೇ ಇರಲಿ, ಮುಂದೊಂದು ದಿನ ಅಧ್ಯಕ್ಷರಾಗಿ ಸಾಹಿತ್ಯ ಪರಿಷತ್ತನ್ನೇ ಕೈಗೆ ತೆಗೆದುಕೊಂಡ ಚಂಪಾ, ಆಗಿನ ಸರ್ಕಾರಕ್ಕೆ ಸವಾಲು ಹಾಕಿ ಸಮ್ಮೇಳನ ನಡೆಸಿದ್ದು ಮಾತ್ರ ಐತಿಹಾಸಿಕ)

ದಿನೇಶ್‌ ಅಮೀನ್‌ ಮಟ್ಟು

ಹಿರಿಯ ಪತ್ರಕರ್ತರು

MORE NEWS

ನಾಳೆಯಿಂದ ಮೂರು ದಿನಗಳ ಕಾಲ ಹಾವೇರಿಯಲ್ಲಿ ಅಕ್ಷರ ಜಾತ್ರೆ

05-01-2023 ಬೆಂಗಳೂರು

86ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೆಳನಕ್ಕೆ ಹಾವೇರಿ ಸಜ್ಜಾಗಿದೆ. ಮೂರು ವರ್ಷಗಳ ನಂತರ ನಡೆಯುತ್ತಿರುವ ಮೂರು&n...

ಭಾರತ ಅಖಂಡವಾಗಿ ಉಳಿಯಲಿ- ಎಚ್‌ಎಸ್‌ವಿ ಆಶಯ

07-02-2020 ಕಲಬುರಗಿ

ಕಲಬುರಗಿ (ಶ್ರೀವಿಜಯ ಪ್ರಧಾನ ವೇದಿಕೆ) ಭಾರತವನ್ನು ಎರಡಾಗಿ ಒಡೆಯದೆ ಅಖಂಡವಾಗಿ ಉಳಿಸುವುದು ಎಲ್ಲರ ಕರ್ತವ್ಯ ಎಂದು ಸಮ...

ಹಾವೇರಿಯಲ್ಲಿ 86ನೇ ಕನ್ನಡ ಸಾಹಿತ್ಯ ಸಮ್ಮೇಳನ

06-02-2020 ಕಲಬುರಗಿ

ಕಲಬುರಗಿ: ಹಾವೇರಿಯಲ್ಲಿ ಅಖಿಲ ಭಾರತ 86ನೇ ಕನ್ನಡ ಸಾಹಿತ್ಯ ಸಮ್ಮೇಳನ ನಡೆಸಲು ಕನ್ನಡ ಸಾಹಿತ್ಯ ಪರಿಷತ್ತಿನ ಕಾರ್ಯಕಾರಿ ಸ...