‘ಮರಳಿ ಯತ್ನವ ಮಾಡು' ಎನ್ನುತ್ತಾ ಉತ್ಸಾಹ ತುಂಬುವ ಆಪ್ತರ ಪತ್ರಗಳು

Date: 18-11-2021

Location: ಬೆಂಗಳೂರು


ನಾಡಿನ ಪತ್ರಿಕೋದ್ಯಮ ಮತ್ತು ಸಾಹಿತ್ಯಿಕ ವಲಯದ ಹಲವು ಮಹತ್ವದ ವಿಚಾರಗಳನ್ನು ತಮ್ಮ ಪತ್ರಗಳ ಮೂಲಕ ನಮ್ಮಮುಂದಿಡಲಿದ್ದಾರೆ ಹಿರಿಯ ಪತ್ರಕರ್ತ, ಲೇಖಕ ಜಿ.ಎನ್. ರಂಗನಾಥರಾವ್. ಅವರ ‘ಪತ್ರತಂತು ಮಾಲಾ’ ಅಂಕಣದಲ್ಲಿ ನಾಡಿನ ಹಿರಿಯ ಲೇಖಕರು ಬರೆದ ಪತ್ರ ಸಂವಾದಗಳನ್ನು ದಾಖಲಿಸಿದ್ದಾರೆ.

ಮೇ2-92
ಮೈಸೂರು

‘ಸುಧಾ’ ಪತ್ರಿಕೆಯ ಸನ್ಮಾನ್ಯ ಸಂಪಾದಕರಲ್ಲಿ ಎಸ್.ವಿ.ಪರಮೇಶ್ವರ ಭಟ್ಟನ ನಮಸ್ಕಾರಗಳು. ಬೆಂಗಳೂರಿನ ಸಾಹಿತ್ಯ ಪರಿಷತ್ತಿನಲ್ಲಿ ನಡೆದ ನನ್ನ ಸನ್ಮಾನ ಸಮಾರಂಭ ಕುರತು ನೀವು ಬರೆದ ಸಂಪಾದಕೀಯ ಸೊಗಸಾಗಿತ್ತು, ನಾನು ಮಾತ್ರವಲ್ಲ ನನ್ನ ನೆಂಟರೂ ಇಷ್ಟರೂ ಮನೆಮಂದಿಯೆಲ್ಲ ಓದಿ ಮೆಚ್ಚಿಕೊಂಡರು.

ಮತ್ತೊಮ್ಮೆ ನೀವು ನನ್ನನ್ನು ಸನ್ಮಾನಿಸಿದಂತೆ ಆಯಿತು. ಕವಿಗೆ ಜಾಹಿರಾತು ಬೇಕು ಎನ್ನುವುದು ನನ್ನ ಮತ. ಅದರಲ್ಲಿಯೂ ಪತ್ರಕರ್ತರ ಪ್ರೋತ್ಸಾಹ ಅವರಿಗೆ ತೀರಾ ಅಗತ್ಯ. ಸುಧೆಯಂತಹ ‘ಸುಧಾ’ ಪತ್ರಿಕೆಯ ಸಂಪಾದಕಿಯಕ್ಕೆ ನಾನು ಕೃತಜ್ಞನಾಗಿದ್ದೇನೆ.ನನ್ನ ಅಭಿನಂದನೆಗಳನ್ನು ದಯವಿಟ್ಟು ಸ್ವೀಕರಿಸಿ. ನಿಮ್ಮ ಪ್ರೋತ್ಸಾಹವನ್ನು ಸದಾ ಬಯಸುತ್ತಿದ್ದೇನೆ. ಅದರಲ್ಲಿಯೂ ಸಾಲು ದೀಪಗಳನ್ನು ಕುರಿತ ನಿಮ್ಮ ಟೀಕೆ ರೋಚಕವಾಗಿದ್ದಿತು.

ಇಂತು ನಮಸ್ಕಾರಗಳು,
ಎಸ್.ವಿ.ಪರಮೇಶ್ವರ ಭಟ್ಟ

***********
ಮಂಗಳೂರು
21-5-90

ಪ್ರಿಯ ಜಿ,ಎನ್.ರಂಗನಾಥ ರಾವ್ ಅವರಿಗೆ,
ನಮಸ್ಕಾರ

ನಿಮ್ಮ ಪತ್ರ ಕೈಸೇರಿತು.ನನ್ನ ವಿಳಾಸ ಬದಲಾಗಿದೆ. ನನ್ನ ಸಹಕಾರ,ಸ್ನೇಹ `ಸುಧಾ' ಮತ್ತು `ಮಯೂರ',`ಪ್ರಜಾವಾಣಿ'ಗೆ ಎಂದೂ ಇದೆ. `ಸುಧಾ'ಸಹಕಾರದೊಂದಿಗೆ ಬೆಳೆದು ಬಂದ ಲೇಖಕ ನಾನು ಎನ್ನುವುದನ್ನು ಯಾವತ್ತೂ ಮರೆಯಲಾರೆ. ಇತ್ತೀಚೆಗೆ ಬ್ಯಾಂಕಿನ ಕೆಲಸಗಳ ಒತ್ತಡದಿಂದಾಗಿ ಹೆಚ್ಚು ಬರೆಯಲಾಗುತ್ತಿಲ್ಲ.ಕಾದಂಬರಿಯೊಂದನ್ನು ಬರೆಯುತ್ತಿದ್ದೇನೆ. ಸ್ವಲ್ಪ ಸಮಯದಲ್ಲೇ ಕಥೆಯೊಂದನ್ನು ಬರೆದು ನಿಮಗೆ ಕಳುಹಿಸಿಕೊಡುತ್ತೇನೆ.

ಸುಧಾ ಈಗ ಚೆನ್ನಾಗಿ ಬರುತ್ತಿದೆ.ಆಕಾರ,ಪ್ರಿಂಟ್,ಲೇಖನಗಳು ಚೆನ್ನಾಗಿವೆ. ವರ್ಷಕ್ಕೆ ಒಂದು ಯಾ ಎರಡು ಉತ್ತಮ ಕಾದಂಬರಿಗಳು ಧಾರಾವಾಹಿಯಾಗಿ ಬರುವುದು ಸಾಧ್ಯವಾದರೆ,ಒಳ್ಳೆಯ ಪುಸ್ತಕಗಳ ಒಂದು ರಿವ್ಯೂ ಅಂಕಣ(ವಿಮರ್ಶೆಯಲ್ಲ)ಬರುವುದು ಸಾಧ್ಯವಾದರೆ ಜನಪ್ರಿಯ ಕಾದಂಬರಿಗಳ ಜೊತೆಗೆ ಒಳ್ಳೆಯ ಕೃತಿಗಳನ್ನು ಪರಿಚಯಿಸುವುದು,ಅಭಿರುಚಿ ಬೆಳೆಸುವುದು ಸುಧಾ ಓದುಗರಿಗೆ ಸಾಧ್ಯವೇನೋ ಅನ್ನಿಸುತ್ತದೆ. ನಿಮ್ಮ ಸಂಪಾದಕತ್ವ,ಮಾರ್ಗದರ್ಶನದಲ್ಲಿ ಸುಧಾ ಇನ್ನಷ್ಟು ಬೆಳೆಯುತ್ತದೆನ್ನುವ ದೃಢ ನಂಬಿಕೆ ನನಗಿದೆ.

ಶುಭಾಶಯಗಳೊಂದಿಗೆ
ನಿಮ್ಮ ಮಿತ್ರ್ರ,
ಫಕೀರ ಮುಹಮ್ಮದ್ ಕಟ್ಪಾಡಿ
*********
ಶ್ಯಾಮಸುಂದರ ಬಿದರಕುಂದಿ
29 ಮೇ 1992

ಧಾರವಾಡ

ಪ್ರಿಯ ರಂಗನಾಥ ರಾಯರೆ,
ವಂದನೆಗಳು,

ಫ್ರಾಂಜ್ ಕಾಫ್ಕಾನ ‘ಮೆಟಮಾರ್ಫೊಸಿಸ್' ನ ನೀವು ಅನುವಾದಿಸಿ ಹಲವು ವರ್ಷಗಳೇ ಆಗಿವೆ. ನನಗದು ಎಲ್ಲೂ ಲಭ್ಯವಾಗಿಲ್ಲ. ಸದ್ಯ,"ನವ್ಯ ಕಾದಂಬರಿಗಳ ಕುರಿತು" ನಾನು ಬರೆಯುತ್ತಿರುವ ಮಹಾಪ್ರಬಂಧದಲ್ಲಿ ಕನ್ನಡಕ್ಕೆ ಅನುವಾದಗೊಂಡ ಮಾಡ್ರನ್ ನಾವೆಲ್ ಗಳನ್ನು ಕುರಿತು ಒಂದಿಷ್ಟು ಬರೆಯಬೇಕಾಗಿದೆ. ಅನ್ಯ, ದುರ್ಗ, ಹಳದಿ ಮೀನು ಹಾಗೂ ಮೆಟಮಾರ್ಫಸಿಸ್ ನಾಲ್ಕೇ ಕಾದಂಬರಿಗಳು. ಉಳಿದವು ಸಿಕ್ಕಿವೆ. ನಿಮ್ಮ ಅನುವಾದ ಪುಸ್ತಕ ಸಿಕ್ಕಿಲ್ಲ. ದಯವಿಟ್ಟು ಅದನ್ನು ಕಳಿಸಿಕೊಟ್ಟು ಸಹಕರಿಸುವಿರಾ? ನೀವೇ ಪ್ರಕಾಶಕರಾಗಿದ್ದರೆ ಒಳ್ಳೆಯದೇ. ಕೂಡಲೇ ಅಂಚೆ ಮೂಲಕ ಕಳಿಸಿರಿ. ಹಣವನ್ನು ಎಂ.ಒ.ಮಾಡುತ್ತೇನೆ.

ವಿಳಾಸ ಸದ್ಯದ್ದು ಮೇಲ್ಕಂಡಂತಿದೆ.
ಧನ್ಯವಾದಗಳು
ನಿಮ್ಮವ,
ಶ್ಯಾಮಸುಂದರ ಬಿದರಕುಂದಿ

***********
ಕನ್ನಡ ವಿಶ್ವವಿದ್ಯಾಲಯ
ಹಂಪಿ-583221

ಡಾ.ಚಂದ್ರಶೇಖರ ಕಂಬಾರ
ಕುಲಪತಿಗಳು

ದಿನಾಂಕ 25-7-92

ಪ್ರಿಯ ಜಿ.ಎನ್.ರಂಗನಾಥ ರಾವ್ ಅವರಿಗೆ, ನೀವು `ಸುಧಾ'ದಲ್ಲಿ "ಜಲರಾಯ" ಪ್ರಿಂಟ್ ಮಾಡಿದ್ದನ್ನು ನೋಡಿ ಸಂತೋಷಭರಿತನಾದೆ. ನಿಮ್ಮ ವೈಯಕ್ತಿಕ ಕಾಳಜಿ, ಉತ್ಸಾಹಕ್ಕಾಗಿ ಯದ್ವಾತದ್ವಾ ಕೃತಜ್ಞನಾಗಿದ್ದೇನೆ. ದಯವಿಟ್ಟು ಈ ಕಡೆ ಬಾ ಮಾರಾಯ. ಬೆಂಗಳೂರಿಗೆ ಬಂದಾಗ ನಾನು ದೂರವಾಣಿ ಮೂಲಕ ಸಂಪರ್ಕಿಸುತ್ತೇನೆ.
ಇನ್ನೊಮ್ಮೆ ಕೃತಜ್ಞತೆಗಳೊಂದಿಗೆ,

ನಿಮ್ಮ,
ಚಂದ್ರಶೇಖರ ಕಂಬಾರ

*************
ಟಿ.ಎಸ್.ಸತ್ಯನ್
ಮೈಸೂರು
20 ಏಪ್ರಿಲ್ 1993

ಪ್ರಿಯ ಶ್ರೀ ರಂಗನಾಥ ರಾಯರಿಗೆ
ನಮಸ್ಕಾರಗಳು

ಕಥಕ್ಕಳಿಯ 20 ವರ್ಣಪಾರದರ್ಶಿಕೆಗಳು ಮತ್ತು ಊಟಿ ರೈಲಿನ 10 ವ.ಪಾ.ದ.ಗಳು ನನ್ನ ಕೈ ಸೇರಿವೆ.ಧನ್ಯವಾದಗಳು. ನಿಮ್ಮೊಡನೆ ದೂರವಾಣಿಯಲ್ಲಿ ಮಾತನಾಡಿದ್ದು ಸಂತೋಷ ತಂದಿತು. ನಿಮ್ಮ ಮಗ ಬಹಳ ಚುರುಕಾಗಿರುವುದು ಅವನ ಧ್ವನಿಯಿಂದಲೇ ತಿಳಿಯುತ್ತೆ.ಅವನಿಗೆ ನನ್ನ ಆಶೀರ್ವಾದಗಳು.

ಇಂತಿ ನಿಮ್ಮ ವಿಶ್ವಾಸಿ
ಸತ್ಯನ್

********
ಬಿ.ಆರ್.ಲಕ್ಷ್ಮಣ ರಾವ್
ಚಿಂತಾಮಣಿ
18-11-93

ಪ್ರಿಯ ಶ್ರೀ ಜಿ.ಎನ್.ಆರ್ ಅವರಿಗೆ,
ಸ್ನೇಹ ವಂದನೆಗಳು, ನಿಮ್ಮ ಪತ್ರ. ನಿಮ್ಮ ‘ಸ್ನೇಹ'ದ ಅಂತಸ್ತು ಇನ್ನೊಂದು ಪಟ್ಟು ಹೆಚ್ಚಿರುವುದು ತಿಳಿದು ಸಂತೋಷವಾಗಿದೆ. 21ರ ‘ಸ್ನೇಹ ಕೂಟ'ಕ್ಕೆ ಆಹ್ವಾನಿಸಿದ್ದೀರಿ, ಧನ್ಯವಾದಗಳು. ಅತ್ಯಂತ ಸಂತೋಷದಿಂದ ಬರುತ್ತಿದ್ದೆ. ಆದರೆ ಈ ಶನಿವಾರ (20ಕ್ಕೆ ನಾನು ಶಿವಮೊಗ್ಗೆಗೆ ಹೋಗಬೇಕಾಗಿದೆ.ನನ್ನ ಅತ್ತೆ (ಹೆಂಡತಿಯ ತಾಯಿ) ಹಿಂದಿನ ಬುಧವಾರ ತೀರಿಕೊಂಡರು.ಈ ಭಾನುವಾರ ಶ್ರಾಧ್ಧ,ನಂತರ ವೈಕುಂಠ.

ಇನ್ನೊಮ್ಮೆ ‘ವಿಶೇಷ ಕೂಟಕ್ಕೆ’ ‘ಸ್ನೇಹ’ಕ್ಕೆ ಖಂಡಿತ ಬರ್ತೇನೆ.ನಿಮ್ಮ ಕುಟುಂಬಕ್ಕೆ ಸಕಲ ಶುಭಾಶಯಗಳನ್ನು ಹಾರೈಸುತ್ತೇನೆ.

ನಿಮ್ಮ ಪ್ರೀತಿಯ,
ಬಿ.ಆರ್.ಲಕ್ಷ್ಮಣ ರಾವ್.

**********
ಎಂ.ಕೆ.ಶ್ರೀಧರ್
ಸಂಸ್ಕೃತ ಹಿರಿಯ ಉಪನ್ಯಾಸಕ,
ನ್ಯಾಶನಲ್ ಕಾಲೇಜು
ಬೆಂಗಳೂರು

ಭಾನುವಾರ 26-1-95
ಸನ್ಮಾನ್ಯರೆ,

ಇಂದು ಮುಂಜಾನೆ `ಪ್ರಜಾವಾಣಿ'ದಿನಪತ್ರಿಕೆಯಲ್ಲಿತಮಗೆ "ಸಂದೇಶ ಪತ್ರಿಕೋದ್ಯಮ"ಪ್ರಶಸ್ತಿಯನ್ನು ಸಂದೇಶ ಪ್ರತಿಷ್ಠಾನದವರು ಪ್ರಕಟಿಸಿರುವ ಸುದ್ದಿ ಮಾಹಿತಿಯನ್ನು ಓದಿ ಬಹಳ ಸಂತೋಷವಾಯಿತು. ಪ್ರಶಸ್ತಿ ವಿಜೇತರಾದ ತಮ್ಮನ್ನು ಹೃತ್ಪೂರ್ವಕವಾಗಿ ಅಭಿನಂದಿಸುತ್ತೇನೆ. ಕಳೆದ ಮೂರು ದಶಕಗಳಿಂದ ತಾವು ಪತ್ರಿಕೋದ್ಯಮಕ್ಕೆ,ನಾಡು-ನುಡಿಗೆ ಸಲ್ಲಿಸಿರುವ ಅಪೂರ್ವ ಕೊಡುಗೆಗಾಗಿ ಈ ಪ್ರಶಸ್ತಿ ಸಂದಿರುವುದು ಬಹಳ ಉುಚಿತವೂ, ಸಮರ್ಪಕವೂ ಆಗಿದೆ.ಈ ಪ್ರಶಸ್ತಿಯಿಂದಾಗಿ `ಸುಧಾ',`ಪ್ರಜಾವಾಣಿ'ಬಳಗಕ್ಕೂ,ಪ್ರಿಂಟರ್ಸ್‍ಮೈಸೂರು ಲಿಮಿಟೆಡ್ ಬಳಗದ ಚಿನ್ನದ ಕಿರೀಟಕ್ಕೆ ಮತ್ತೊಂದು ಗರಿಯ ಸೇರ್ಪಡೆಯಾಗಿದೆ ಎಂದರೆ ಅತಿಶಯೋಕ್ತಿಯಲ್ಲವೆಂದು ನಾನ ಭಾವಿಸುತ್ತೇನೆ.

ನ್ಯಾಶನಲ್ ಕಾಲೇಜು ಅಧ್ಯಾಪಕರ ಪರವಾಗಿ, ಅಖಿಲ ಕರ್ನಾಟಕ ಸಂಸ್ಕೃತ ಪರಿಷತ್ತಿನ ಕಾರ್ಯಕಾರಿ ಸಮಿತಿಯ ಹಾಗೂ ಎಲ್ಲ ಸಂಸ್ಕೃತ ಬಂಧುಗಳ ಪರವಾಗಿ ತಮಗೆ ಮತ್ತುಮ್ಮೆ ನನ್ನ ಹಾರ್ದಿಕ ಶುಭಾಶಯಗಳು,

ವಂದನೆಗಳೊಂದಿಗೆ,
ತಮ್ಮ ವಿಶ್ವಾಸಿ
ಎಂ.ಕೆ.ಶ್ರೀಧರ್
26-11-95

********

ಸಂಗಮೇಶ ಗುಜಗೊಂಡ
ಉಪನ್ಯಾಸಕ
ಪ್ರಥಮ ದರ್ಜೆ ಕಾಲೇಜು
ಮೂಡಲಗಿ
ಬೆಳಗಾವಿ
27-11-95

ಮಾನ್ಯರೆ,

ವಂದನೆಗಳು,ಅಭಿನಂದನೆಗಳು.
ಕನ್ನಡ ಪತ್ರಿಕೋದ್ಯಮಕ್ಕೆ ಅನುಪಮ ಸೇಮೆ ಸಲ್ಲಿಸಿದ ತಯಮಗೆ `ಸಂದೇಶ ಪತ್ರಿಕೋದ್ಯಮ ಪ್ರಶಸ್ತಿ-95' ಸಂದಿರುವುದು ಸಂತಸದ ಸಂಗತಿ. ಈ ಮೂಲಕ ಸಂದೇಶ ಮಾಧ್ಯಮ ಪ್ರತಿಷ್ಠಾನದ ಘನತೆಯು ಹೆಚ್ಚಿದೆ.ಈ ಸಂದರ್ಭದಲ್ಲಿ ನಿಮಗೆ ಹಾರ್ದಿಕ ಅಭಿನಂದನೆ ಹೇಳುತ್ತ,ನಾಡು-ನುಡಿಗೆ ನಿಮ್ಮಿಂದ ಇನ್ನೂ ಹೆಚ್ಚು ಸೇವೆ ಸಲ್ಲುವಂತಾಗಲಿ ಎಂದು ಬಯಸುತ್ತೇನೆ.

ನಿಮ್ಮವ,
ಸಂಗಮೇಶ ಗುಜಗೊಂಡ

**********
ಶೇಷನಾರಾಯಣ
ಬೆಂಗಳೂರು

29-11-95

ಶ್ರೀ ರಂಗನಾಥ ರಾವ್,
1995ನೇ ಸಾಲಿನ ಸಂದೇಶ ಮಾಧ್ಯಮ ಪ್ರಶಸ್ತಿ ತಮಗೆ ದೊರೆತಿರುವುದಕ್ಕಾಗಿ ತಮ್ಮ ಹಿತೈಷಿಯಾದ ನನಗೆ ತಂಬ ಸಂತೋಷವಾಗಿದೆ.ಈ ಸಂದರ್ಭದಲ್ಲಿ ತಮ್ಮನ್ನು ನಾನು ಹೃತ್ಪೂರ್ವಕವಾಗಿ ಅಭಿನಂದಿಸುತ್ತೇನೆ. ನಮಸ್ಕಾರಗಳೊಂದಿಗೆ,

ಇಂತಿ ನಿಮ್ಮ
ಶೇಷನಾರಾಯಣ

‘ಮರಳಿ ಯತ್ನವ ಮಾಡು' ಎನ್ನುವಂಥ ನಿತ್ಯಕರ್ಮಗಳ ಮಧ್ಯೆ ಬರುವ ಇಂಥ ಪತ್ರಪ್ರಶಸ್ತಿಗಳು ಪತ್ರಕರ್ತರಿಗೆ ಒಂದು ಪುನರ್ನವಿಕ ಟಾನಿಕ್ ಇದ್ದಂತೆ.

ಈ ಅಂಕಣದ ಹಿಂದಿನ ಬರಹಗಳು:
ಹೊಸ ರಚನೆಗೆ ಪ್ರೇರಕವಾಗುವ ಪತ್ರಗಳು
ಸಂಪಾದಕತ್ವದ ಹೊಣೆ ಮತ್ತು ಆಪ್ತರ ಕಾತರಗಳು

ಆಪ್ತರ ಚರ್ಚೆ ಮತ್ತು ಅನುಸಂಧಾನ:
ಸಂಬಂಧಗಳ ಪೋಣಿಸುವ ಕಥನ ತಂತುಗಳ ಮಾಲೆ:
ಹೊಸ ಸಂವೇದನೆಗಳ ಸಂದರ್ಭದಲ್ಲಿ ಸಂಪಾದಕನಾದವನು ಧೈರ್ಯಮಾಡಬೇಕಾಗುತ್ತದೆ: ಜಿ.ಎನ್. ರಂಗನಾಥರಾವ್

 

MORE NEWS

ಪರಿಘಾಸನ ಮತ್ತು ಅರ್ಧ ಚಕ್ರಾಸನ 

16-04-2024 ಬೆಂಗಳೂರು

"ಪರಿಘಾಸನ ಆಸನವು ) ಪಿತ್ತ ಜನಕಾಂಗ ಮತ್ತು ಮೇದೋಜೀರಕ ಚೈತನ್ಯಗೊಳ್ಳುವಂತೆ ಮಾಡುತ್ತದೆ. ಹಾಗೆಯೇ ‘ಅರ್ಧ ಚಕ್...

ಲೋಕಸಭಾ ಚುನಾವಣೆಗಳ ಸುತ್ತಮುತ್ತ ಒಂದು ಸುತ್ತು

15-04-2024 ಬೆಂಗಳೂರು

"ಪರಸ್ಪರ ರೋಚಕ ನಿಂದನೆಗಳು. ಕ್ಷೇತ್ರವಾರು ಚಕ್ಕರಗುಳ್ಳಿ ಇಡುವ ಚತುರ ವಿವರಗಳು. ಹೊಸ ಹೊಸ ಬೈಗುಳಗಳು. ಮಾಧ್ಯಮಗಳಿಗ...

ಉಪವಿಷ್ಟಕೋನಾಸನ ಮತ್ತು ಪವನಮುಕ್ತಾಸನ

09-04-2024 ಬೆಂಗಳೂರು

"ಉಪವಿಷ್ಟಕೋನಾಸನ ಯೋಗಾಸನವು ಮನಸ್ಸನ್ನು ಶಾಂತಗೊಳಿಸುತ್ತದೆ ಮತ್ತು ಮಾಂಸಗಳ ತೂಕವನ್ನು ಕಡಿಮೆಗೊಳಿಸುತ್ತದೆ. ಪವನಮು...