ಕಲಬುರಗಿ ಅಂದ್ರ ಏನನ್ಕೊಂಡೀರಿ: ಮರಾಟಿಯ ಹುಟ್ಟಿನ ನೆಲೆಯ ನೆಲ

Date: 01-02-2020

Location: ಕಲಬುರಗಿ


ದ್ರಾವಿಡ ಮತ್ತು ಇಂಡೊ-ಆರ್‍ಯನ್ ಎನ್ನುವ ಎರಡು ಪ್ರದಾನ ಬಾಶಾಮನೆತನಗಳು ಸುಮಾರು ಎರಡು ಸಾವಿರ ವರುಶಗಳಿಗೂ ಬಹುಹಿಂದೆ ಇಂದಿನ ಬಾರತದ ಉತ್ತರ ಮತ್ತು ದಕ್ಶಿಣ ಬಾಗಗಳಲ್ಲಿ ಬಳಕೆಯಲ್ಲಿದ್ದವು. ಒಕ್ಕಲುತನ ಹೆಚ್ಚು ಬೆಳೆಯುತ್ತಿದ್ದಂತೆ ಶಿಲಾಯುಗ ಕಳೆದುಹೋಗಿ ನಾಗರಿಕತೆ ಬೆಳೆಯಿತು. ಕ್ರಮೇಣ ರಾಜಕೀಯ ವ್ಯವಸ್ತೆ ಬೆಳೆಯಿತು. ಮೊದಮೊದಲಿಗೆ ವಸ್ತು ವಿನಿಮಯ ಪದ್ದತಿ ಇದ್ದಿತು ಮತ್ತು ಪಶುಗಳು ಆಸ್ತಿಯಾಗಿ ಪರಿಗಣನೆಗೆ ಒಳಗಾಗಿದ್ದವು. ಕ್ರಮೇಣ ಲೋಹ ಆಸ್ತಿಯಾಗಿ ಪರಿಗಣನೆಗೆ ಒಳಗಾಯಿತು. ಡೆಕ್ಕನ್ ಬಂಗಾರ ಮೊದಲಾಗಿ ಹಲವು ಲೋಹಗಳಿಗೆ ಅದಾಗಲೆ ಹೆಸರಾಗಿದ್ದಿತ್ತು. ಶಿಲಾಯುಗದ ಕೊನೆಕೊನೆಯಲ್ಲಿ ಕ್ರಿಶ್ಣಾ ಪಾತ್ರದಲ್ಲಿ ಲೋಹವನ್ನು ಬಳಸಿದ್ದಕ್ಕೆ ಸಾಕಶ್ಟು ದಾಕಲೆಗಳು ದೊರೆಯುತ್ತವೆ. ಈ ಕಾರಣದಿಂದಾಗಿ ಉತ್ತರದ ಶಯಿವ, ಬವುದ್ದ, ಜಯ್ನ ಮೊದಲಾದ ಮತಪಂತಗಳು ಮತ್ತು ಮವುರ್‍ಯ ಮೊದಲಾದ ರಾಜಮನೆತನಗಳು ದಕ್ಕನದ ಕಡೆ ಹೆಚ್ಚು ಆಸ್ತೆ ವಹಿಸಿದವು ಮತ್ತು ಇಲ್ಲಿಗೆ ಬಂದವು. ಹೀಗೆ ಉತ್ತರದಿಂದ ಬಂದವರು ಪ್ರಾಕ್ರುತದೊಂದಿಗೆ ಬಂದರು.

ಶಯಿವ ಕನ್ನಡವೆ ಆಯಿತು, ಬವುದ್ದ ಪಾಲಿಯಾಗಿಯೆ ಉಳಿಯಿತು. ಜಯ್ನ ಮಾತ್ರ ಬಿನ್ನವಾಗಿ ಪ್ರಾಕ್ರುತ ಬಾಶೆಯೊಂದಿಗೆ ಈ ಬಾಗದಲ್ಲಿ ಬಹುಕಾಲ ಬದುಕಿದರು. ಶಾಸ್ತ್ರ, ಕಾವ್ಯ, ಪುರಾಣಾದಿ ಕಾರಣಕ್ಕೆ ಸಂಸ್ಕ್ರುತ ಕನ್ನಡದೊಂದಿಗೆ ನಂಟನ್ನು ಬೆಳೆಸಿಕೊಂಡಿದ್ದಿತು. ಬಹುಹಿಂದೆ ಈ ಕಡೆ ಬಂದ ಬಾಗವತವೂ ಇದಕ್ಕೆ ಹೆಚ್ಚು ಕೊಡುಗೆ ಕೊಟ್ಟಿದೆ. ವಯಿದಿಕ ಸಂಸ್ಕ್ರುತ, ಅದರ ಮುಂದುವರಿಕೆಯಾದ ಲವುಕಿಕ ಸಂಸ್ಕ್ರುತ, ಅದರ ಮುಂದುವರಿಕೆಯಾದ ಜಯ್ನರ ಪ್ರಾಕ್ರುತ ಇವೆಲ್ಲವೂ ಬಿನ್ನ ಕಾರಣಕ್ಕೆ ಕನ್ನಡದೊಂದಿಗೆ ನಂಟನ್ನು ಬೆಳೆಸಿಕೊಂಡವು. ಆ ವೇಳೆಗೆ ಅಂದರೆ ಬಹುಶಾ ಕ್ರಿಸ್ತಶಕದ ಎಡಬಲದ ವೇಳೆಗೆ ಕನ್ನಡ ಬಾಶೆ ದೊಡ್ಡ ಪ್ರಮಾಣದಲ್ಲಿ ಸಂಸ್ಕ್ರುತಿ ಮತ್ತು ನಾಗರಿಕತೆಗಳನ್ನು ಬೆಳೆಸಿಕೊಂಡಿದ್ದಿತು. ಹೀಗಾಗಿ ಸಂಸ್ಕ್ರುತ ಮತ್ತು ಪ್ರಾಕ್ರುತಗಳು ಕನ್ನಡದೊಂದಿಗೆ ದೊಡ್ಡ ಪ್ರಮಾಣದಲ್ಲಿ ಕೊಡುತಗೊಳುವ ನಂಟನ್ನು ಬೆಳೆಸಿಕೊಂಡವು. ಈ ವ್ಯವಹಾರ ಬದುಕಿನ ಮತ್ತು ಸಮಾಜದ ಎಲ್ಲ ಆಯಾಮಗಳನ್ನೂ ಆವರಿಸಿಕೊಂಡಿತು. ಪ್ರಾಕ್ರುತ ಕನ್ನಡದ ವ್ಯಾಪಕ ಪ್ರಬಾವಕ್ಕೆ ಒಳಗಾಯಿತು. ಸಂಸ್ಕ್ರುತ ನಿರಂತರ ಏಳುಬೀಳುಗಳನ್ನು ಕಾಣುತ್ತಿದ್ದಿತು. ಹಾಗಾಗಿ ಬಹುಹಿಂದಿನ ದ್ರಾವಿಡದ ಪ್ರಬಾವದ ಹೊರತಾಗಿ ನೇರವಾಗಿ ಕನ್ನಡದ ಪ್ರಬಾವವನ್ನು ಕಡಿಮೆ ಗುರುತಿಸಲು ಸಾದ್ಯ. ಆದರೆ ಪ್ರಾಕ್ರುತ ವಿಪರೀತ ಪ್ರಬಾವಕ್ಕೆ ಒಳಗಾಯಿತು. ಕನ್ನಡವೂ ಪ್ರಾಕ್ರುತದಿಂದ ಸಾಕಶ್ಟನ್ನು ಪಡೆದುಕೊಂಡಿತು. ಇದರಿಂದಾಗಿ ಪ್ರಾಕ್ರುತ ಇಡಿಯಾಗಿ ತನ್ನ ಸ್ವರೂಪವನ್ನೆ ಬದಲಿಸಿಕೊಂಡಿತು. ಹೀಗೆ ಕನ್ನಡ-ಪ್ರಾಕ್ರುತಗಳು ಪರಸ್ಪರ ಬೆರೆತ ಪ್ರದೇಶ ಕರ್‍ನಾಟಕ-ಮಹಾರಾಶ್ಟ್ರ. ಕನ್ನಡ ಬಾಶೆಯ ರಚನೆ ಮತ್ತು ಪ್ರಾಕ್ರುತದ ಪದಗಳು ಪರಸ್ಪರ ಬೆರೆತ ಬಾಶಾಬಗೆಯೊಂದು ಈ ಪ್ರದೇಶದಲ್ಲಿ ಅಂದರೆ ಇಂದಿನ ಮಹಾರಾಶ್ಟ್ರ, ಉತ್ತರ ಕರ್‍ನಾಟಕದಲ್ಲಿ ಬಳಕೆಯಾಗತೊಡಗಿದ್ದಿತು. ಹೀಗೆ ಬೆಳೆದ ಬಾಶಾಬಗೆ ಮಹಾರಾಶ್ಟ್ರ ಪ್ರದೇಶದಲ್ಲಿ ಬಳಕೆಯಲ್ಲಿ ಇದ್ದದ್ದರಿಂದ ಇದನ್ನು ಮಹಾರಾಶ್ಟ್ರಿ ಪ್ರಾಕ್ರುತ ಎಂದು ಕರೆಯಲಾಯಿತು.

ಮುಂದೆ ಇದು ಮರ್‍ಹಾಟಿ ಪ್ರಾಕ್ರುತ ಎಂದಾಗಿ ಈಗ ಮರಾಟಿ ಎಂದಾಗಿದೆ. ಅಂದರೆ ಮರಾಟಿ ಬೆಳೆಯುವಲ್ಲಿ ಕನ್ನಡದ ಪಾತ್ರ ಬಹು ಮಹತ್ವದ್ದು. ಆದ್ದರಿಂದಲೆ ಮರಾಟಿ ಬಾಶೆಯ ರಚನೆ ಕನ್ನಡದ ರಚನೆಯ ಹಾಗೆ ಇದೆ. ಅಂದರೆ ಮರಾಟಿ ವ್ಯಾಕರಣ ಹೆಚ್ಚು ಕನ್ನಡ ವ್ಯಾಕರಣದ ಹಾಗಿದೆ. ಮರಾಟಿ ಪದಕೋಶ ಪ್ರಾಕ್ರುತ-ಸಂಸ್ಕ್ರುತ ಆಗಿದೆ. ಈ ಬೆಳವಣಿಗೆಯಲ್ಲಿ ಕಲಬುರಗಿಯ ಮಳಕೇಡ ಮೊದಲಾದ ಹಲವು ಕೇಂದ್ರಗಳು ಮಹತ್ವದ ಪಾತ್ರ ವಹಿಸಿವೆ. ಮರಾಟಿಯ ಹಳೆಯ ದಾಕಲೆ ಬಹುದೂರದ ಶ್ರವಣಬೆಳಗೊಳದ ಬಾಹುಬಲಿಯ ಕಾಲಿನ ಮೇಲೆ ಇದೆ. ಮರಾಟಿ ಹಳೆಯ ಕ್ರುತಿಯಾದ ಗ್ಯಾನೇಶ್ವರಿ-ಗ್ನಾನೇಶ್ವರಿಯನ್ನು ಅರ್‍ತ ಮಾಡಿಕೊಳ್ಳುವುದಕ್ಕೆ ಕನ್ನಡದ ಅರಿವು ಅವಶ್ಯ. ತುಳಜಾಪುರದ ಅಂಬಾಬವಾನಿ ಆಳಂದದಾಕೆ, ಆಳಂದದಿಂದ ತುಳಜಾಪುರಕ್ಕೆ ಆಕೆ ಹೋಗುತ್ತಾಳೆ. ಇಂದು ಮರಾಟಿ ಮಾತನಾಡುವ ಅನೇಕ ಸಮುದಾಯಗಳು ಕನ್ನಡದಿಂದ ಮರಾಟಿಗೆ ಹೋದವು. ಇಂದು ಮರಾಟಿ ಮಾತನಾಡುವ ಪಂಡರಾಪುರದ ವಿಟ್ಟಲ, ಸೊಲ್ಲಾಪುರದ ಸಿದ್ದರಾಮ ಮೊದಲಾದ ದೇವರುಗಳು ಒಂದೊಮ್ಮೆ ಅಲ್ಲದೆ ಇಂದಿಗೂ ಕನ್ನಡ ಮಾತನಾಡುವವರೆ ಆಗಿದ್ದಾರೆ. ಹೀಗೆ ಮರಾಟಿಯ ಬೆಳವಣಿಗೆಯಲ್ಲಿ ಕಲಬುರಗಿ ಪರಿಸರ ತನ್ನದೆ ಪಾತ್ರವನ್ನು ವಹಿಸಿದ್ದಿತು.

-ಡಾ. ಬಸವರಾಜ ಕೋಡಗುಂಟಿ

MORE NEWS

ನಾಳೆಯಿಂದ ಮೂರು ದಿನಗಳ ಕಾಲ ಹಾವೇರಿಯಲ್ಲಿ ಅಕ್ಷರ ಜಾತ್ರೆ

05-01-2023 ಬೆಂಗಳೂರು

86ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೆಳನಕ್ಕೆ ಹಾವೇರಿ ಸಜ್ಜಾಗಿದೆ. ಮೂರು ವರ್ಷಗಳ ನಂತರ ನಡೆಯುತ್ತಿರುವ ಮೂರು&n...

ಭಾರತ ಅಖಂಡವಾಗಿ ಉಳಿಯಲಿ- ಎಚ್‌ಎಸ್‌ವಿ ಆಶಯ

07-02-2020 ಕಲಬುರಗಿ

ಕಲಬುರಗಿ (ಶ್ರೀವಿಜಯ ಪ್ರಧಾನ ವೇದಿಕೆ) ಭಾರತವನ್ನು ಎರಡಾಗಿ ಒಡೆಯದೆ ಅಖಂಡವಾಗಿ ಉಳಿಸುವುದು ಎಲ್ಲರ ಕರ್ತವ್ಯ ಎಂದು ಸಮ...

ಹಾವೇರಿಯಲ್ಲಿ 86ನೇ ಕನ್ನಡ ಸಾಹಿತ್ಯ ಸಮ್ಮೇಳನ

06-02-2020 ಕಲಬುರಗಿ

ಕಲಬುರಗಿ: ಹಾವೇರಿಯಲ್ಲಿ ಅಖಿಲ ಭಾರತ 86ನೇ ಕನ್ನಡ ಸಾಹಿತ್ಯ ಸಮ್ಮೇಳನ ನಡೆಸಲು ಕನ್ನಡ ಸಾಹಿತ್ಯ ಪರಿಷತ್ತಿನ ಕಾರ್ಯಕಾರಿ ಸ...