ಮರಾಠಿ ಸಿನಿಮಾ ‘ನಟ ಸಮ್ರಾಟ್: ಮನುಷ್ಯ ಸಂಬಂಧದ ಬಿಕ್ಕಟ್ಟುಗಳ ಕತೆ’

Date: 28-10-2020

Location: .


ಮರಾಠಿ ಬರಹಗಾರ, ಚಲನಚಿತ್ರ ನಿರ್ದೇಶಕ ಮಹೇಶ್ ಮಾಂಜರೇಕರ್ ಅವರು ತಮ್ಮ ‘ನಟ ಸಮ್ರಾಟ್’ (2016) ಚಲನಚಿತ್ರದ ಮೂಲಕ ಮನುಷ್ಯನಲ್ಲಿರುವ ಸದ್ಗುಣ-ಕೇಡು ಎರಡನ್ನೂ ಬಿಂಬಿಸಿ, ಕೌಟುಂಬಿಕ ಬಿಕ್ಕಟ್ಟನ್ನು ಬಿಚ್ಚಿಟ್ಟಿದ್ದಾರೆ. ಕುಸುಮಾಗ್ರಜರ ‘ನಟ ಸಮ್ರಾಟ್’ (1970) ನಾಟಕಾಧಾರಿತ ಈ ಕಥೆಯು ಗಣಪತ್ ರಾಂಚಂದ್ರ ಬೆಲ್ವಲ್‍ಕರ್ ಎಂಬ ರಂಗ ಕಲಾವಿದನ ಜೀವನ ಕೇಂದ್ರಿತವಾಗಿದೆ. ಈ ನಾಟಕವು ಶೇಕ್‌ಸ್‌ಪಿಯರ್ನ ಕಿಂಗ್ ಲಿಯರ್ ನಾಟಕದ ರೂಪಾಂತರವೇ ಆಗಿದೆ. ಪ್ರಾಧ್ಯಾಪಕ - ಲೇಖಕ ಡಾ. ಸುಭಾಷ್ ರಾಜಮಾನೆ ಅವರು ತಮ್ಮ ನವಿಲನೋಟ ಅಂಕಣದಲ್ಲಿ ಈ ಎರಡೂ ನಾಟಕಗಳಲ್ಲಿ ಕಾಣಸಿಗುವ ಮನುಷ್ಯ ಸಂಬಂಧಗಳ ನಿರರ್ಥಕತೆಯನ್ನು ವಿಶ್ಲೇಷಿಸಿದ್ದಾರೆ


ವಿಲಿಯಮ್ ಶೇಕ್ಸ್‍ಪಿಯರ್‌ನ ನಾಟಕಗಳು ಜಗತ್ತಿನ ನೂರಾರು ಭಾಷೆಗಳಿಗೆ ತರ್ಜುಮೆಗೊಂಡಿವೆ. ಭಾರತದ ಬೆಂಗಾಲಿ, ಕನ್ನಡ, ಗುಜರಾತಿ, ಹಿಂದಿ, ಮರಾಠಿ ಸೇರಿದಂತೆ ಹಲವು ಭಾಷೆಗಳಿಗೆ ಆತನ ನಾಟಕಗಳು ಹತ್ತೊಂಬತ್ತನೆಯ ಶತಮಾನದ ಮಧ್ಯ ಭಾಗದಿಂದಲೇ ಅನುವಾದ ಹಾಗೂ ರೂಪಾಂತರಗೊಳ್ಳಲು ಆರಂಭವಾದವು. ಹರಚಂದ್ರ ಘೋಷ್ ಅವರು ‘ದಿ ಮರ್ಚಂಟ್ ಆಫ್ ವೆನಿಸ್’ ನಾಟಕವನ್ನು ಬಂಗಾಳಿಗೆ (1852) ಅನುವಾದಿಸಿದರು. ಪಂಜಾಬಿ ನಾಟಕದ ಆದ್ಯರಾದ ಪ್ರೊ. ವಿ. ಸಿ. ನಂದಾ ಅವರು ‘ದಿ ಮರ್ಚಂಟ್ ಆಫ್ ವೆನಿಸ್’ನ್ನು ಆಧರಿಸಿಯೇ ‘ಶಾಮುಶಾ’ ನಾಟಕವನ್ನು ಬರೆದರು. ಡೆಪ್ಯುಟಿ ಚೆನ್ನಬಸಪ್ಪನವರು ಶೇಕ್ಸ್‍ಪಿಯರ್‌ನ ‘ಕಾಮಿಡಿ ಆಫ್ ಎರರ್ಸ್ ನಾಟಕ’ವನ್ನು ‘ನಗದವರನ್ನು ನಗಿಸುವ ಕಥೆ’ (1871) ಎಂದು ರೂಪಾಂತರಿಸಿ ಮೊದಲು ಕನ್ನಡಕ್ಕೆ ತಂದವರಾಗಿದ್ದಾರೆ. ನಂತರದಲ್ಲಿ ಶ್ರೀಕಂಠೇಶ ಗೌಡ, ಬಸವಪ್ಪ ಶಾಸ್ತ್ರಿ, ಡಿ. ವಿ. ಗುಂಡಪ್ಪ, ಮಾಸ್ತಿ ವೆಂಕಟೇಶ ಅಯ್ಯಂಗಾರ್, ಕುವೆಂಪು, ಕೆ.ಎಸ್. ಭಗವಾನ್, ರಾಮಚಂದ್ರ ದೇವ, ಪಿ.ವಿ. ನಾರಾಯಣ, ನಿಸಾರ್ ಅಹಮದ್, ಕೆ.ವಿ. ಅಕ್ಷರ ಮೊದಲಾದವರು ಶೇಕ್ಸ್‍ಪಿಯರ್ ನಾಟಕಗಳನ್ನು ಕನ್ನಡ ಭಾಷಿಕ ಲಯಕ್ಕೆ ಒಗ್ಗಿಸುತ್ತಲೇ ಬಂದಿದ್ದಾರೆ.

ಆಧುನಿಕ ಮರಾಠಿ ನಾಟಕ ರಂಗವು ಶೇಕ್ಸ್‍ಪಿಯರ್‌ನ ನಾಟಕಗಳ ರೂಪಾಂತರದ ಮೂಲಕವೇ ಪ್ರಾರಂಭವಾಯಿತೆಂದು ಹೇಳಲಾಗುತ್ತದೆ. ವಾಸುದೇವ ಬಾಲಕೃಷ್ಣ ಕೇಳ್ಕರ್, ಗೋಪಾಲ್ ಗಣೇಶ್ ಅಗರ್‍ಕರ್, ಜಸ್ಟಿಸ್ ಗೋವಿಂದರಾವ್ ಕಾನೀತಕರ್, ಕುಸುಮಾಗ್ರಜ ಮೊದಲಾದವರು ಶೇಕ್ಸ್‍ಪಿಯರ್‌ನ ನಾಟಕಗಳನ್ನು ಅನುವಾದ ಹಾಗೂ ರೂಪಾಂತರಗಳ ಮೂಲಕ ಮರಾಠಿ ಭಾಷೆಗೆ ತಂದಿದ್ದಾರೆ. ಖಾಡಿಲ್ಕರ್ ಅವರಂತಹ ಪ್ರಖ್ಯಾತ ನಾಟಕಕಾರರ ತಂತ್ರವು ‘ಶೇಕ್ಸ್‍ಪಿರಿಯನ್ ತಂತ್ರ’ ಎಂದೇ ಜನನಿತವಾಗಿದೆ. ಅಷ್ಟರಮಟ್ಟಿಗೆ ಶೇಕ್ಸ್‍ಪಿಯರ್, ಮರಾಠಿ ನಾಟಕಕಾರರ ಮೇಲೆ ಹೆಚ್ಚು ಪ್ರಭಾವ ಬೀರಿದ್ದಾನೆ. ಹೀಗೆ ಕಳೆದ ಸುಮಾರು ನೂರೈವತ್ತು ವರುಷಗಳಲ್ಲಿ ಶೇಕ್ಸ್‍ಪಿಯರ್ ನಾಟಕಗಳು ಭಾರತದ ಬೇರೆ ಬೇರೆ ಭಾಷೆಗಳಲ್ಲಿ ಮರು ಹುಟ್ಟನ್ನು ಪಡೆದಿವೆ. ಆಯಾ ಭಾಷೆಯ ನಾಟಕಗಳು ಶೇಕ್ಸ್‍ಪಿಯರಿನ್ ತಂತ್ರಗಳಿಂದ ಪ್ರಭಾವಿತವಾಗಿರುವುದಕ್ಕೆ ಸಾಕಷ್ಟು ಪುರಾವೆಗಳಿವೆ. ಭಾರತದ ದೇಶೀಯ ಭಾಷೆಗಳು ಶೇಕ್ಸ್‍ಪಿಯರ್ ನಾಟಕಗಳನ್ನು ಯಥಾವತ್ತಾಗಿ ಸ್ವೀಕರಿಸದೆ ತಮ್ಮ ಭಾಷೆ, ಸಾಹಿತ್ಯ, ಸಂಸ್ಕೃತಿಯಲ್ಲಿ ಸೃಜನಶೀಲವಾಗಿ ಹೊಸ ರಕ್ತ ಮಾಂಸದೊಂದಿಗೆ ನಾವೀಣ್ಯತೆಯನ್ನು ಪಡೆದುಕೊಂಡಿವೆ.

ಮರಾಠಿಯಲ್ಲಿ ವಿಷ್ಣು ವಾಮನ ಶಿರವಾಡಕರ್ (1912-1999) ಅವರು ‘ಕುಸುಮಾಗ್ರಜ’ ಕಾವ್ಯ ನಾಮದಿಂದ ಕತೆ, ಕವಿತೆ, ಕಾದಂಬರಿ, ನಾಟಕ, ಕಾದಂಬರಿಗಳನ್ನು ಬರೆದಿದ್ದಾರೆ. ಅವರು ಜ್ಞಾನಪೀಠ ಪುರಸ್ಕೃತ ನಾಟಕಕಾರರಾಗಿ ಹೆಚ್ಚು ಜನಪ್ರಿಯರಾಗಿದ್ದಾರೆ. ಅವರು ಆಸ್ಕರ್ ವೈಲ್ಡ್, ಮೋಲಿಯೇರ್, ಮೌರಿಸ್ ಮ್ಯಾಟರ್‍ಲಿಂಕ್ ಹಾಗೂ ಶೇಕ್ಸ್‍ಪಿಯರ್‌ನಂತಹ ಪಾಶ್ಚಾತ್ಯ ಲೇಖಕರ ನಾಟಕಗಳನ್ನು ತಮ್ಮ ಆಡುನುಡಿಯಾದ ಮರಾಠಿಗೆ ರೂಪಾಂತರಿಸಿದರು. ಅವರು ‘ಮ್ಯಾಕ್‍ಬೆತ್’, ‘ಒಥೆಲೋ’, ‘ಕಿಂಗ ಲಿಯರ್’ಗಳಂತಹ ದುರಂತ (ಗಂಭೀರ/ರುದ್ರ) ನಾಟಕಗಳನ್ನೇ ಆರಿಸಿಕೊಂಡು ರೂಪಾಂತರಿಸಿದ್ದು ಮರಾಠಿ ರಂಗಭೂಮಿಗೆ ಹೊಸ ಚೈತನ್ಯವನ್ನು ನೀಡಿದೆ. ಕುಸುಮಾಗ್ರಜರ ‘ನಟ ಸಮ್ರಾಟ್’ (1970) ನಾಟಕವು ‘ಕಿಂಗ್ ಲಿಯರ್’ ನಾಟಕದ ರೂಪಾಂತರವೇ ಆಗಿದೆ. ಇದಕ್ಕೆ 1974ರಲ್ಲಿ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಕೂಡ ಸಂದಿದೆ. ಈ ನಾಟಕವು ಕಳೆದ ನಾಲ್ಕು ದಶಕಗಳಿಂದಲೂ ಮರಾಠಿ ರಂಗಭೂಮಿಯ ಮೇಲೆ ರಾರಾಜಿಸುತ್ತ ಬಂದಿದೆ. ಮಹೇಶ್ ಮಾಂಜರೇಕರ್ ಅವರ ನಿರ್ದೇಶನದಲ್ಲಿ ಹಾಗೂ ನಾನಾ ಪಾಟೇಕರ್‌ರ ಮುಖ್ಯ ಭೂಮಿಕೆಯಲ್ಲಿ ‘ನಟ ಸಮ್ರಾಟ್’ (2016) ಸಿನಿಮಾ ಹೊಸ ದಾಖಲೆಯನ್ನು ನಿರ್ಮಿಸಿದೆ. ಇದು ಪ್ರಸ್ತುತ ಮರಾಠಿ ಸಿನಿಮಾ ರಂಗದಲ್ಲಿ ಅತಿ ಹೆಚ್ಚು ದುಡ್ಡನ್ನು ಬಾಚಿದ ಚಿತ್ರವಾಗಿದೆ. ಮುಖ್ಯವಾಹಿನಿಯ ಬಾಲಿವುಡ್‍ನ ಮಂದಿ ಈ ಚಿತ್ರದ ಕಡೆಗೆ ಚಕಿತರಾಗಿ ನೋಡುವಂತಾಗಿದೆ. ನಾಟಕ ಕೃತಿಯೊಂದು ಹೆಚ್ಚು ಹೆಚ್ಚು ಜನರನ್ನು ತಲುಪುವ ಜನಪ್ರಿಯ ಸಿನಿಮಾ ಆಗಿರುವುದು ಹಿಂದಿ ಸಿನಿಮಾಗಳ ಭರಾಟೆಯ ಎದುರಲ್ಲಿ ಮರಾಠಿ ಚಿತ್ರಗಳಿಗೆ ಹೊಸ ಜೀವದಾನ ಸಿಕ್ಕಂತಾಗಿದೆ.

‘ನಟ ಸಮ್ರಾಟ್’ ಸಿನಿಮಾ ಪ್ರಧಾನವಾಗಿ ಗಣಪತ್ ರಾಂಚಂದ್ರ ಬೆಲ್ವಲ್‍ಕರ್ (ನಾನಾ ಪಾಟೇಕರ್) ಎಂಬ ರಂಗಭೂಮಿ ಕಲಾವಿದನ ಜೀವನ ಕೇಂದ್ರಿತ ಕತೆಯಾಗಿದೆ. ಆತ ಕಳೆದ ನಲ್ವತ್ತು ವರ್ಷಗಳಿಂದ ರಂಗಭೂಮಿಯ ಜನಪ್ರಿಯ ತಾರೆಯಾಗಿ ಮೆರೆದವನು; ಕೀರ್ತಿಯ ಉತ್ತುಂಗದಲ್ಲಿದ್ದಾಗ ನಟನೆಯಿಂದ ನಿವೃತ್ತನಾದವನು; ಅಭಿಮಾನಿಗಳಿಂದ ‘ನಟ ಸಾರ್ವಭೌಮ’ನೆಂದು ಕರೆಯಿಸಿಕೊಂಡು ಬೀಗಿದವನು; ಇಂತಹ ಸಾಧನೆಯ ಗಣಪತ್ ನೇರವಾದ ನಡೆ ನುಡಿಯ ಪ್ರಾಮಾಣಿಕ ಮನುಷ್ಯನೂ ಹೌದು. ಆದರೆ ಆತ ತನಗೆ ಅನಿಸಿದ್ದನ್ನು ಯಾವ ಮುಲಾಜಿಲ್ಲದೆ ಎಂತಹದೆ ಸನ್ನಿವೇಶ-ಸಂದರ್ಭದಲ್ಲೂ ಹೇಳದೆ ಬಿಡಲಾರ. ಇಂತಹ ನೇರ ಹಾಗೂ ನಿಷ್ಠುರ ಸ್ವಭಾವದಿಂದ ಗಣಪತ್ ಫಜೀತಿಗೆ ಬೀಳುತ್ತಾನೆ. ದುಡುಕಿನ ನಿರ್ಧಾರಗಳಿಂದ ದಿವಾಳಿಯಾಗಿ ಬೀದಿಗೆ ಬೀಳುತ್ತಾನೆ. ತಾನು ಮುದ್ದಿನಿಂದ ಬೆಳೆಸಿದ ಮಕ್ಕಳಿಂದ ಅಹಿತಕರ ಆಪಾದನೆಯನ್ನು ಹೊತ್ತು ಅವರಿಂದ ದೂರವಾಗಬೇಕಾಗುತ್ತದೆ. ಮಕ್ಕಳ ಎದುರಲ್ಲಿ ಅವಮಾನದಿಂದ ತತ್ತರಿಸುವ ಗಣಪತ್ ತಾನೇ ಅವರಿಂದ ಕಣ್ಮರೆಯಾಗಿ ಬದುಕಲು ಇಚ್ಚಿಸುತ್ತಾನೆ. ವಾಸ್ತವವಾಗಿ ನೋಡಿದರೆ ಗಣಪತ್‍ನ ವ್ಯಕ್ತಿತ್ವ ತುಂಬ ಸಂಕೀರ್ಣವಾದದ್ದು. ಮೇಲ್ನೋಟಕ್ಕೆ ಆತನ ದುರಂತಕ್ಕೆ ಅವನೇ ಕಾರಣೀಭೂತನಂತೆ ಕಾಣುತ್ತದೆ. ಆದರೆ ನಿಜವಾಗಿಯು ಮನುಷ್ಯನಲ್ಲಿರುವ ಒಳಿತು ಮತ್ತು ಕೇಡಿನ ನಡುವಿನ ಸಂಘರ್ಷವನ್ನು ತೆರೆದು ತೋರಿಸುವುದೇ ಸಿನಿಮಾದ ಮುಖ್ಯ ಆಶಯವಾಗಿದೆ. ಮೂಲ ಕೃತಿಯಾದ ‘ಕಿಂಗ್ ಲಿಯರ್’ನಲ್ಲಿ ಈ ಪ್ರವೃತ್ತಿಯ ಶೋಧವಿದೆ. ‘ನಟ ಸಮ್ರಾಟ್’ನಲ್ಲಿ ಗಣಪತ್ ಒಬ್ಬ ರಂಗಭೂಮಿ ಕಲಾವಿದನಾಗಿರುವುದರಿಂದ ಆತನ ಪಾತ್ರಕ್ಕೆ ಇನ್ನು ಹಲವು ಆಯಾಮಗಳು ಸೇರಿಕೊಂಡು ಅವನ ದುರಂತಕ್ಕೆ ಎಣೆಯಿಲ್ಲದ ಆಳ ಪ್ರಾಪ್ತವಾಗಿದೆ.

‘ಕಿಂಗ್ ಲಿಯರ್’ನಲ್ಲಿ ಲಿಯರ್ ದೊರೆ ತನ್ನ ಇಳಿ ವಯಸ್ಸಿನಲ್ಲಿ ತನ್ನ ಮೂರು ಜನ ಹೆಣ್ಣು ಮಕ್ಕಳಿಗೆ ತನ್ನನ್ನು ಎಷ್ಟು ಪ್ರೀತಿಸುತ್ತೀರಿ? ಎಂದು ಕೇಳುತ್ತಾನೆ. ಅವರಿಗೆ ರಾಜ್ಯವನ್ನು ಪಾಲು ಮಾಡಿಕೊಟ್ಟು ದಿವಾಳಿಯಾಗುತ್ತಾನೆ; ಮತಿ ಭ್ರಾಂತನಾಗಿ ಮಾನಸಿಕ ಅಸ್ವಸ್ಥತೆಯಿಂದ ತೊಳಲಾಡುತ್ತಾನೆ. ‘ನಟ ಸಮ್ರಾಟ್’ನ ಗಣಪತ್ ತನ್ನ ಮಕ್ಕಳ ಮುಂದೆ ತನ್ನನ್ನು ಎಷ್ಟು ಪ್ರೀತಿಸುತ್ತೀರೆಂಬ ಕೃತಕ ಹಾಗೂ ಮೂರ್ಖ ಪ್ರಶ್ನೆಯೊಂದನ್ನು ಕೇಳುವುದಿಲ್ಲ. ಗಣಪತ್ ತನ್ನ ಜೀವಮಾನದಲ್ಲಿ ಸಂಪಾದಿಸಿದ್ದ ಆಸ್ತಿ ಪಾಸ್ತಿಯನ್ನೆಲ್ಲ ತನ್ನ ಇಬ್ಬರು ಮಕ್ಕಳಿಗೆ ಹಂಚಿಕೆ ಮಾಡಿ, ಅದರ ವಿಲ್ ಪತ್ರವನ್ನು ಅವರ ಕೈಗೊಪ್ಪಿಸುವುದು ಆತನ ಮೂರ್ಖತನದ ಪರಮಾಧಿಯಾಗಿ ಕಾಣುತ್ತದೆ. ಜೀವನದ ಅನುಭವವೇ ಇಲ್ಲದ ಬೆಪ್ಪನಾಗಿ ಗೋಚರಿಸುತ್ತಾನೆ. ಆದರೆ ಆತ ತನ್ನ ಸಕಲ ಸಂಪತ್ತನ್ನು ಕೊಟ್ಟಿದ್ದು ತನ್ನ ಮಕ್ಕಳಿಗೆ ತಾನೆ? ಮಹಾಭಾರತದ ಕರ್ಣನಂತೆ ದಾನ ಕೇಳಿ ಬಂದವರಿಗೆ ಜೀವವನ್ನು ಪಣಕ್ಕಿಟ್ಟು ಕೊಟ್ಟವನೇನು? ತನ್ನ ಮಕ್ಕಳ ಮೇಲಿನ ಅತಿಯಾದ ವ್ಯಾಮೋಹ ಮತ್ತು ಅವರ ಒಳಿತನ್ನು ಬಯಸುವುದರ ದ್ಯೋತಕವೇ ಆಗಿದೆ. ಆದರೆ ಆತ ಬೆಳ್ಳಗಿರುವುದೆಲ್ಲ ಹಾಲು ಎಂದೇ ನಂಬುವಾತ. ನೂರಾರು ನಾಟಕದ ಪಾತ್ರಗಳನ್ನು ತನ್ನ ಮೈಯೊಳಗೆ ಆವಾಸಿಕೊಂಡು ರಂಗದ ಮೇಲೆ ಅಭಿನಯಿಸುತ್ತಿದ್ದ ಗಣಪತ್‍ಗೆ ಮನುಷ್ಯ ಸ್ವಭಾವದ ಪರಿಜ್ಞಾನ ಇರಲಿಲ್ಲವೇ? ವಯಸ್ಸಾದಂತೆ ಮನುಷ್ಯನ ಬುದ್ಧಿ ಮಂಕಾಗುತ್ತದೆಯೇ? ‘ನಟ ಸಮ್ರಾಟ್’ ಸಿನಿಮಾ ನೋಡಿದಾಗ ಇಂತಹ ಪ್ರಶ್ನೆಗಳು ಮನಸ್ಸನ್ನು ಬಾಧಿಸುತ್ತವೆ.

ಭಾರತೀಯ ಭಾಷೆಗಳಿಗೆ ಶೇಕ್ಸ್‍ಪಿಯರ್ ನಾಟಕಗಳ ಅನುವಾದ/ರೂಪಾಂತರಗಳಿಗೆ ದೀರ್ಘವಾದ ಚರಿತ್ರೆಯೇ ಇದೆ. ಆದರೆ ಭಾರತೀಯ ಸಿನಿಮಾರಂಗಕ್ಕೆ, ಇಪ್ಪತ್ತನೆಯ ಶತಮಾನದವರೆಗೂ ಶೇಕ್ಸ್‍ಪಿಯರ್ ನಾಟಕಗಳ ಅಳಡಿಕೆ ಆಗದಿರುವುದು ಒಂದು ಅಚ್ಚರಿಯ ಸಂಗತಿಯಾಗಿದೆ. ಹಾಗೆ ನೋಡಿದರೆ ಭಾರತೀಯ ಸಿನಿಮಾದ ಆರಂಭಿಕ ಘಟ್ಟದಲ್ಲಿ ಬಹುತೇಕ ನಾಟಕಗಳೇ ಸಿನಿಮಾ ಮಾಧ್ಯಮಕ್ಕೆ ನೇರವಾಗಿ ರೂಪಾಂತರವಾಗಿವೆ. ಭಾರತದಲ್ಲಿ ದುಂಡಿರಾಜ್ ಗೋವಿಂದ ಪಾಲ್ಕೆ ಅವರ ನಿರ್ದೇಶನದ ಮೊದಲ ಸ್ವದೇಶಿ ನಿರ್ಮಿತ ಸಿನಿಮಾ ‘ರಾಜಾ ಹರಿಶ್ಚಂದ್ರ’ (1913) ಮೂಲತಃ ಒಂದು ನಾಟಕವೇ ಆಗಿತ್ತು. ಅರ್ದೇಶಿರ್ ಇರಾನಿಯವರ ಭಾರತದ ಮೊಟ್ಟ ಮೊದಲ ವಾಕ್ಚಿತ್ರ ‘ಆಲಂ ಆರಾ’ (1931) ಜೋಸೆಫ್ ಡೇವಿಡ್‍ರ ಜನಪ್ರಿಯ ರಂಗನಾಟಕವನ್ನೇ ಆಧರಿಸಿತ್ತು. (ಇದರ ಸಂಭಾಷಣೆಯನ್ನು ಬರೆದವರು ಕುಸುಮಾಗ್ರಜರೇ) ಕನ್ನಡದಲ್ಲೂ ಮೊದ ಮೊದಲ ವಾಕ್ಚಿತ್ರಗಳಲ್ಲಿ ಒಂದಾದ ‘ಸದಾರಮೆ’ಯು (1935) ಗುಬ್ಬಿ ವೀರಣ್ಣನವರ ನಾಟಕ ಕಂಪನಿಯ ಅತ್ಯಂತ ಜನಪ್ರಿಯ ನಾಟಕದ ರೂಪಾಂತರವೇ ಆಗಿತ್ತು. ಆ ಕಾಲಘಟ್ಟದಲ್ಲಿ ಹಲವು ಜನಪ್ರಿಯ ರಂಗನಾಟಕಗಳೇ ಹೊಸ ಆಕರ್ಷಣೆಯ ಕೇಂದ್ರವಾಗಿದ್ದ ಸಿನಿಮಾ ಮಾಧ್ಯಮಕ್ಕೆ ಹೊರಳತೊಡಗಿದ್ದವು.

ಈ ಹಿನ್ನೆಲೆಯಲ್ಲಿ ರಹಮತ್ ತರೀಕೆರೆ ಅವರು ತಮ್ಮ ‘ಅಮೀರ್‍ಬಾಯಿ ಕರ್ನಾಟಕಿ’ (2012) ಕೃತಿಯಲ್ಲಿ ಇಂತಹ ರೂಪಾಂತರದ ಸ್ವರೂಪವನ್ನು ಕುರಿತು-“ರಂಗನಾಟಕಗಳು ಹೀಗೆ ಟಾಕಿಗಳಾಗಿ ಹೊಸಹುಟ್ಟು ಪಡೆಯಲಾರಂಭಿಸಿದಾಗ, ಆಯಾ ನಾಟಕಗಳಲ್ಲಿದ್ದ ಹಾಡುಗಳೇ ಸಿನಿಮಾದಲ್ಲೂ ಹಾಡುಗಳಾದವು; ಆ ನಾಟಕದಲ್ಲಿದ್ದ ಸಂಭಾಷಣೆಗಳೇ ಸಿನಿಮಾದಲ್ಲಿ ಮುಂದುವೆರೆದವು; ನಾಟಕ ಕಂಪನಿಯ ಮಾಲೀಕರು ಸಿನಿಮಾಗಳ ತಯಾರಕರಾಗಿಯೊ ನಿರ್ದೇಶಕರಾಗಿಯೊ ಬದಲಾಗತೊಡಗಿದರು; ನಾಟಕದ ನಟರು ಸಿನಿಮಾ ನಟರಾಗಿ ಪರಿವರ್ತನೆಗೊಂಡರು. ನಾಟಕ ಕಂಪನಿ ನಡೆಸುವುದಕ್ಕೆ ಬೇಕಾಗಿರುವಂತೆ ಸಿನಿಮಾ ಮಾಡುವುದಕ್ಕೂ ಬಂಡವಾಳದ ಅಗತ್ಯವಿತ್ತು. ಆದರೆ ನಾಟಕ ಕಂಪನಿಗಳಿಗಿಂತ ಹೆಚ್ಚು ಬಂಡವಾಳ ಮತ್ತು ತಂತ್ರಜ್ಞಾನದ ನೆರವನ್ನು ಸಿನಿಮಾ ಬೇಡುತ್ತಿತ್ತು. ಇದುವೇ ಅದರ ಪ್ರಚಂಡ ಜನಪ್ರಿಯತೆಗೆ ಕೀಲಿಕೈಯಾಗಿತ್ತು. ರಂಗಭೂಮಿ ಪ್ರಾದೇಶಿಕ ಭಾಷೆಯಲ್ಲಿದ್ದು ಪ್ರದೇಶ ಸೀಮಿತವಾದರೆ, ಸಿನಿಮಾ (ಅದರಲ್ಲೂ ಹಿಂದಿ ಸಿನಿಮಾ) ದೇಶದಾದ್ಯಂತ ಚಲಿಸಬಲ್ಲುದಾಗಿತ್ತು. ಅದೊಂದು ಸರ್ವಶಕ್ತ, ಸರ್ವಾಂತರ್ಯಾಮಿ ಕಲೆ ಮತ್ತು ಪರ್ಯಾಯ ಉದ್ಯಮವಾಗಿ ಎಲ್ಲರ ಅನುಭವಕ್ಕೆ ಬರತೊಡಗಿತ್ತು” ಎಂದು ಹೇಳುತ್ತಾರೆ. ಆದರೆ ರಂಗನಾಟಕಗಳು ಯಥಾವತ್ತಾಗಿ ಸಿನಿಮಾ ಮಾಧ್ಯಮಕ್ಕೆ ಜಿಗಿಯಲಿಲ್ಲ. ಯಾಕೆಂದರೆ ಒಂದು ಸಾಹಿತ್ಯ ಕೃತಿಯು ದೃಶ್ಯ ಮಾಧ್ಯಮಕ್ಕೆ ನೇರವಾಗಿ ರೂಪಾಂತರಗೊಳ್ಳುವುದಿಲ್ಲ. ಆ ಮಾಧ್ಯಮದ ಅಗತ್ಯವಿರುವಷ್ಟು ರೀತಿಯಲ್ಲಿ ಮಾತ್ರವೇ ಬದಲಾವಣೆಗೆ ಒಳಪಡುತ್ತದೆ.

ಶೇಕ್ಸ್‍ಪಿಯರ್ ನಾಟಕಗಳು ಜಗತ್ತಿನ ಯಾವುದೇ ಭಾಷೆಯ ಸಿನಿಮಾ ಮಾಧ್ಯಮಕ್ಕೆ ಯಥಾವತ್ತಾಗಿ ಅಳಡಿಕೆಯಾಗಿರುವ ಸಾಧ್ಯತೆಗಳೇ ಇರುವುದಿಲ್ಲ. ಭಾರತೀಯ ಸಿನಿಮಾರಂಗಕ್ಕೆ ಶೇಕ್ಸ್‍ಪಿಯರ್‌ನ ನಾಟಕಗಳು ಯಾಕೆ ಬರಲಿಲ್ಲ ಎಂಬ ಪ್ರಶ್ನೆ ಸಹಜವಾಗಿಯೇ ಕಾಡುತ್ತದೆ. ಇಪ್ಪತ್ತೊಂದನೆಯ ಶತಮಾನದ ಹೊಸ ಸಹಸ್ರಮಾನದ ಕಾಲಘಟ್ಟದಲ್ಲಿ ವಿಶಾಲ್ ಭಾರದ್ವಾಜ್ ಅವರು ಹಿಂದಿಯಲ್ಲಿ ಶೇಕ್ಸ್‍ಪಿಯರ್‌ನ ದುರಂತ ನಾಟಕಗಳಾದ ‘ಮ್ಯಾಕ್‍ಬೆತ್’ನ್ನು ‘ಮಕ್‍ಬೂಲ್’ (2004) ಹೆಸರಲ್ಲಿ, ‘ಒಥೆಲೋ’ವನ್ನು ‘ಒಂಕಾರ್’ (2006) ಶೀರ್ಷಿಕೆಯಲ್ಲಿ ಹಾಗೂ ‘ಹ್ಯಾಮ್ಲೆಟ್’ನ್ನು ‘ಹೈದರ್’ (2014) ಎಂದು ಸಿನಿಮಾ ಮಾಧ್ಯಮಕ್ಕೆ ಅಳವಡಿಸಿದ್ದಾರೆ. ವಿಶಾಲ್ ಭಾರದ್ವಾಜ್ ಅವರ ಈ ತ್ರಿವಳಿ ಚಿತ್ರಗಳು ಮೂಲ ಕೃತಿಗಳನ್ನೆ ಮರೆಸುವಷ್ಟರ ಮಟ್ಟಿಗೆ ಭಾರತೀಕರಣಗೊಂಡಿವೆ. ಇದೇ ಕಾರಣಕ್ಕೆ ಅವು ಕಮರ್ಷಿಯಲ್ ಚಿತ್ರಗಳಂತೆ ಜನಪ್ರಿಯವಾಗಿವೆ. ಇವುಗಳಲ್ಲಿ ಭಾರತದ ಸಮಕಾಲೀನ ಹಾಗೂ ದೀರ್ಘಕಾಲೀನ ಗಡಿ ಸಮಸ್ಯೆಗಳಲ್ಲಿ ಒಂದಾದ ಕಾಶ್ಮೀರ ಬಿಕ್ಕಟ್ಟಿನ ಸ್ವರೂಪವನ್ನು ಹಿನ್ನೆಲೆಯಲ್ಲಿಟ್ಟುಕೊಂಡು ನಿರ್ಮಿತವಾದ ‘ಹೈದರ್’ ಹೆಚ್ಚು ಯಶಸ್ವಿ ಚಿತ್ರವಾಗಿದೆ.

ಜಪಾನಿನ ಅಕಿರಾ ಕುರೊಸಾವಾನಂತಹ ದೊಡ್ಡ ನಿರ್ದೇಶಕ ಕೂಡ ಶೇಕ್ಸ್‍ಪಿಯರ್ ಕೃತಿಗಳ ಪ್ರಭಾವದಿಂದ ತಪ್ಪಿಸಿಕೊಳ್ಳಲಾಗಲಿಲ್ಲ. ಕುರೊಸಾವಾ ‘ಮ್ಯಾಕ್‍ಬೆತ್’ ನಾಟಕವನ್ನು ‘ಥ್ರೋನ್ ಆಫ್ ಬ್ಲಡ್’ (1957) ಎಂದು ಮತ್ತು ‘ಕಿಂಗ್ ಲಿಯರ್’ ನಾಟಕವನ್ನು ‘ರ್ಯಾನ್’(1985) ಎಂಬ ಶೀರ್ಷಿಕೆಯಲ್ಲಿ ತೆರೆಗೆ ಅಳವಡಿಸಿದ. ‘ರ್ಯಾನ್’ನಲ್ಲಿ ಜಪಾನಿನ ಇಚಿಮೋಂಜಿ ಮನೆತನದ ಹಿಡೆಟೋರಾ ಎಂಬ ಇಳಿವಯಸ್ಸಿನ ಯುದ್ಧವೀರ ತನ್ನ ಮೂರು ಜನ ಗಂಡು ಮಕ್ಕಳಿಗೆ ರಾಜ್ಯವನ್ನು ಹಂಚಿಕೆ ಮಾಡಿ ಕೊಟ್ಟಿದ್ದರಿಂದ ಅದು ಅರಾಜಕತೆಗೆ ದಾರಿಯಾಗುವುದನ್ನು ಸಮರ್ಥವಾಗಿ ನಿರೂಪಿತವಾಗಿದೆ. ಕುರೊಸಾವಾ ಅದರಲ್ಲಿ ವೈಭವದ ಯುದ್ಧ ದೃಶ್ಯಗಳ ಮೂಲಕ ಮನುಷ್ಯರು ಪರಸ್ಪರ ತಮ್ಮ ತಮ್ಮಲ್ಲೇ ಹೊಡೆದಾಡಿಕೊಂಡು ನಾಶವಾಗುವುದನ್ನು ತೋರಿಸುತ್ತಾನೆ. ಕೊಲೆ, ಸುಲಿಗೆ, ಯುದ್ಧಗಳು ಮಾನವ ಲೋಕವನ್ನು ವಿನಾಶದ ಅಂಚಿಗೆ ತಳ್ಳುತ್ತದೆ ಎಂಬುದನ್ನು ಖಾತ್ರಿಪಡಿಸುತ್ತಾನೆ. ಭೂಮಿಯ ಮೇಲಿನ ಮನುಷ್ಯ ಜೀವನವು ಅಂತ್ಯವಿಲ್ಲದ ಯಾತನೆಗಳ ಕಂತೆ ಎಂಬುದನ್ನಾಗಿ ದರ್ಶಿಸುತ್ತಾನೆ.

‘ನಟ ಸಮ್ರಾಟ್’ನಲ್ಲಿ ಗಣಪತ್‍ನ ಬಾಲ್ಯ ಸ್ನೇಹಿತ ಹಾಗೂ ವೃತ್ತಿ ಬದುಕಿನಲ್ಲಿ ಸಹ ನಟನಾದ ರಾಮ್ ಭಾಹು (ವಿಕ್ರಮ ಗೋಖಲೆ) ತನ್ನ ಮಾಗಿದ ಅಭಿನಯದಿಂದ ಪ್ರೇಕ್ಷರ ಗಮನ ಸೆಳೆಯುತ್ತಾನೆ. ಗಣಪತ್ ಮತ್ತು ರಾಮ್-ಇವರಿಬ್ಬರ ಒಡನಾಟದಲ್ಲಿರುವ ಸಲುಗೆ, ಚೇಷ್ಟೆ, ಬಿಚ್ಚು ಮಾತು, ತಮ್ಮನ್ನು ತಾವು ಗೇಲಿ ಮಾಡಿಕೊಳ್ಳುವ ಉದಾರತೆ ಸಿನಿಮಾದ ವಿಶಿಷ್ಟ ಭಾಗವಾಗಿದೆ. ಕುಸುಮಾಗ್ರಜರ ಕತ್ತಿಯಂತೆ ಹರಿತವಾದ ಕಾವ್ಯಾತ್ಮಕ ಹಾಗೂ ರೂಪಕದ ಭಾಷೆಯು ಮರಾಠಿ ನಾಟಕದ ಉತ್ತುಂಗ ಶಿಖರವೇ ಆಗಿದೆ. ನೋಡುಗರನ್ನು ಆವರಿಸಿಕೊಳ್ಳುವ ಅದರ ಕಾವ್ಯಾತ್ಮಕ ಗುಣ ಸಿನಿಮಾದಲ್ಲೂ ಅಳವಟ್ಟಿದೆ. ಆದ್ದರಿಂದ ಗಣಪತ್ ಬೆಲ್ವಲ್‍ಕರ್‌ನ ವಾಕ್ ಪ್ರವಾವದ ಕೋಡಿಯೇ ಹರಿದಂತೆ ಭಾಸವಾಗುತ್ತದೆ.

ಸಿನಿಮಾದ ಕೊನೆಯ ಸನ್ನಿವೇಶವು ಮಾರ್ಮಿಕವೂ ದುರಂತವೂ ಆಗಿದೆ. ಅದ್ದರಿಂದಲೇ ಹೆಚ್ಚು ಕಾಲ ಮನದಾಳಕ್ಕೆ ಇಳಿದು ನೆನಪಿನಲ್ಲಿ ಉಳಿಯುತ್ತದೆ. ಹೆಂಡತಿಯನ್ನು ಕಳೆದುಕೊಂಡ ಮತ್ತು ತನ್ನ ಮಕ್ಕಳಿಂದ ದೂರವಾಗಿದ್ದ ಗಣಪತ್ ಪಾಳುಬಿದ್ದ ರಂಗಭೂಮಿಯ ಮೇಲೆ ತನ್ನ ನೆನಪಿನ ಬುತ್ತಿಯನ್ನು ಬಿಚ್ಚಿಡುತ್ತಾನೆ. ಆತ ತನ್ನ ಜೀವಮಾನದಲ್ಲಿ ಆಡಿದ ನಾಟಕಗಳ ಪಾತ್ರಗಳಾದ ಮ್ಯಾಕ್‍ಬೆತ್, ಬ್ರೂಟಸ್, ಒಥೆಲೋ ಮೊದಲಾದವರನ್ನು ಕೊಲೆಗಡುಕರೆಂದು ಕೂಗಿ ಕರೆಯುವುತ್ತಾನೆ. ಈ ಪಾತ್ರಗಳು ತನ್ನೆದುರಿಗೆ ನಿಂತಿವೆ ಎಂದು ಭಾವಿಸಿಕೊಂಡು ತನ್ನ ಎದೆಯಾಳದ ಭಗ್ನತೆಯನ್ನು ತೆರೆದಿಡುತ್ತಾನೆ. ಅದೇ ಗಳಿಗೆಯಲ್ಲಿ ಆತನ ಮಕ್ಕಳು ಕುಟುಂಬ ಸಮೇತರಾಗಿ ಅಲ್ಲಿಗೆ ಬಂದಾಗ ಅವರೆಲ್ಲ ನಿಜವಾದ ಕೊಲೆಗಡುಕರಂತೆ ಗೋಚರಿಸುತ್ತಾರೆ. ಇಂತಹ ಮುಖಾಮುಖಿಯಲ್ಲಿ ಮನುಷ್ಯ ಸಂಬಂಧಗಳ ನಿರರ್ಥಕತೆಯು ಫಕ್ಕನೆ ಮಿಂಚಿ ಮರೆಯಾದಂತೆ ಭಾಸವಾಗುತ್ತದೆ. ಅಂತಸ್ತು, ಪ್ರತಿಷ್ಠೆಯ ವ್ಯಾಮೋಹಕ್ಕೆ ಬಿದ್ದ ಆಧುನಿಕ ಕಾಲದ ಮಕ್ಕಳು ಆಗ ಪರಿತಪಿಸುತ್ತಾರೆ.

ಮರಾಠಿ ಚಿತ್ರೋದ್ಯಮ ನಾಟಕಗಳ ಕಡೆಗೆ ಹೊರಳುತ್ತಿರುವಂತೆ ಕಾಣುತ್ತಿದೆ. ಸುಬೋಧ ಭಾವೆ ನಿರ್ದೇಶನದ ಚೊಚ್ಚಿಲ ಚಿತ್ರ ‘ಕಟ್‍ಯಾರ್ ಕಾಳಜಾತ ಘುಸಲಿ’ (2015) ಮೂಲತಃ ಪುರುಷೋತ್ತಮ ದರ್ವ್‍ಹೇಕರ್ ಅವರ ಸಂಗೀತ ನಾಟಕವೇ (ರಚನೆ 1967) ಆಗಿದೆ. ಈ ಸಿನಿಮಾ ಸಂಗೀತ ಪ್ರಧಾನವಾಗಿದ್ದು ಭಾರತೀಯ ಎರಡು ಕ್ಲಾಸಿಕಲ್ ಘರಾಣಾಗಳ ನಡುವಿನ ತಿಕ್ಕಾಟವನ್ನು ತೆರೆದಿಡುತ್ತದೆ. ಕನ್ನಡದಲ್ಲಿ ಇತ್ತೀಚೆಗೆ ಪರ್ವತವಾಣಿ ಅವರ ‘ಹಗ್ಗದ ಕೊನೆ’ (1962) ನಾಟಕವು ಇದೇ ಶೀರ್ಷಿಕೆಯಲ್ಲಿ ದಯಾಲ್ ಪದ್ಮನಾಭನ್‍ರ ನಿರ್ದೇಶನದಲ್ಲಿ ಮೂಡಿ ಬಂದಿದೆ. ಕೈದಿಯೊಬ್ಬನ ಜೀವನ ವೃತ್ತಾಂತವನ್ನು ಚಿತ್ರಿಸುವ ‘ಹಗ್ಗದ ಕೊನೆ’ (2014) ಸಿನಿಮಾ ಬೆಂಗಳೂರು ಎಂಟನೆಯ ಅಂತರರಾಷ್ಟ್ರೀಯ ಚಿತ್ರೋತ್ಸವದಲ್ಲಿ ಗಮನ ಸೆಳೆದಿತ್ತು. ಮರಾಠಿಯಂತೆ ಕನ್ನಡದಲ್ಲೂ ಇಂತಹ ಪ್ರಯತ್ನಗಳು ನಡೆಯಬೇಕಿದೆ.

ಕುರೊಸಾವಾ ‘ರ್ಯಾನ್’ ಚಿತ್ರವನ್ನು ಮನುಷ್ಯ ಜೀವನದ ವಿಚಿತ್ರವಾದ ತೊಳಲಾಟದ ಪರಿಯನ್ನು ಮತ್ತು ಯುದ್ಧದ ಭೀಕರತೆಯನ್ನು ತೋರಿಸುತ್ತಲೇ ಅದರ ನಿರಾಕರಣೆಯನ್ನಾಗಿ ಮಾರ್ಪಡಿಸಿಕೊಂಡಿದ್ದಾನೆ. ‘ನಟ ಸಮ್ರಾಟ್’ ಸಿನಿಮಾ ಕೌಟುಂಬಿಕ ಬಿಕ್ಕಟ್ಟನ್ನು ಬಿಚ್ಚಿಡುವ ಫ್ಯಾಮಿಲಿ ಡ್ರಾಮಾ ಆಗಿ ಪರಿವರ್ತಿತವಾಗಿದೆ. ಒಟ್ಟಾರೆಯಾಗಿ ಈ ಸಿನಿಮಾ ಆಧುನಿಕತೆಯ ದುರಾಸೆಯ ಮೋಹಕ್ಕೆ ಬಲಿ ಬಿದ್ದವರನ್ನು ಅಣಕಿಸುವಂತಿದೆ. ಮನುಷ್ಯನಾದವ ಅಧಿಕಾರ, ಯಜಮಾನಿಕೆಗಳನ್ನು ಕಳೆದುಕೊಂಡಾಗ ವಿಚಿತ್ರವಾಗಿ ನಡೆದುಕೊಳ್ಳುತ್ತಾನೆ. ಲೋಕದಲ್ಲಿ ಕೀರ್ತಿ ಶನಿಗೆ ಅಂಟಿಕೊಂಡವನು ಜಾರಿ ಪ್ರಪಾತಕ್ಕೆ ಬಿದ್ದಾಗ ಅವನ ಮನಸ್ಸೆಂಬ ಸರೋವರ ಕದಡಿ ಹೋಗುತ್ತದೆ. ‘ನಟ ಸಮ್ರಾಟ್’ ನೋಡಿದಾಗ ಮನಸ್ಸು ಅಲ್ಲೋಲ ಕಲ್ಲೋಲವಾಗುತ್ತದೆ.

 

MORE NEWS

ಪರಿಘಾಸನ ಮತ್ತು ಅರ್ಧ ಚಕ್ರಾಸನ 

16-04-2024 ಬೆಂಗಳೂರು

"ಪರಿಘಾಸನ ಆಸನವು ) ಪಿತ್ತ ಜನಕಾಂಗ ಮತ್ತು ಮೇದೋಜೀರಕ ಚೈತನ್ಯಗೊಳ್ಳುವಂತೆ ಮಾಡುತ್ತದೆ. ಹಾಗೆಯೇ ‘ಅರ್ಧ ಚಕ್...

ಲೋಕಸಭಾ ಚುನಾವಣೆಗಳ ಸುತ್ತಮುತ್ತ ಒಂದು ಸುತ್ತು

15-04-2024 ಬೆಂಗಳೂರು

"ಪರಸ್ಪರ ರೋಚಕ ನಿಂದನೆಗಳು. ಕ್ಷೇತ್ರವಾರು ಚಕ್ಕರಗುಳ್ಳಿ ಇಡುವ ಚತುರ ವಿವರಗಳು. ಹೊಸ ಹೊಸ ಬೈಗುಳಗಳು. ಮಾಧ್ಯಮಗಳಿಗ...

ಉಪವಿಷ್ಟಕೋನಾಸನ ಮತ್ತು ಪವನಮುಕ್ತಾಸನ

09-04-2024 ಬೆಂಗಳೂರು

"ಉಪವಿಷ್ಟಕೋನಾಸನ ಯೋಗಾಸನವು ಮನಸ್ಸನ್ನು ಶಾಂತಗೊಳಿಸುತ್ತದೆ ಮತ್ತು ಮಾಂಸಗಳ ತೂಕವನ್ನು ಕಡಿಮೆಗೊಳಿಸುತ್ತದೆ. ಪವನಮು...