ಮಸಾನ್: ’ಸ್ಥಾಪಿತ ಮೌಲ್ಯಗಳ ದಾಟುವಿಕೆ’

Date: 24-08-2020

Location: ಬೆಂಗಳೂರು


ಲೇಖಕ- ಪ್ರಾಧ್ಯಾಪಕ ಡಾ. ಸುಭಾಷ ರಾಜಮಾನೆ ಅವರು ನವಿಲನೋಟ ಅಂಕಣದಲ್ಲಿ ವಿಭಿನ್ನ ಚಿತ್ರ ’ಮಸಾನ್‌’ ಚಿತ್ರದ ಬಗ್ಗೆ ಚರ್ಚಿಸಿದ್ದಾರೆ.

 

"ಜಿಂದಗಿ ಕ್ಯಾ ಹೈ ಅನಾಸಿರ ಮೇ-ಎ-ತರತೀಬ್
ಮೌತ್ ಕ್ಯಾ ಹೈ ಇನ್ಹಿ ಅಜ್ಝಾ ಕಾ ಪರೆಶಾನ್ ಹೋನಾ"

ಇವು ಫರಿದಾಬಾದ್‌ನ ಪ್ರಖ್ಯಾತ ಉರ್ದು ಕವಿಯಾದ ಬ್ರಿಜ್ ನಾರಾಯಣ ’ಚಕ್‌ಬಸ್ತ್’ ಅವರ ಗಜಲ್‌ನ ಸಾಲುಗಳಿವು. ಕನ್ನಡದಲ್ಲಿ "ಜೀವನ ಎಂಬುದು ದಾಳಿಂಬೆಯೊಳಗಿನ ಬೀಜದ ದಳಗಳಂತೆ; ಸಾವು ಎಂಬುದು ಅದೇ ದಾಳಿಂಬೆಯ ಬೀಜದ ದಳಗಳನ್ನು ತೆಗೆದು ಹೊರ ಚೆಲ್ಲಿದಂತೆ" ಎಂದರ್ಥ. ನೀರಜ್ ಘಾಯ್ವನ್ ನಿರ್ದೇಶನದ ’ಮಸಾನ್’ (2015) ಎಂಬ ಹಿಂದಿ ಚೊಚ್ಚಿಲ ಸಿನಿಮಾದ ಟೈಟಲ್ ಕಾರ್ಡ್ ಬೀಳುವ ಪೂರ್ವದಲ್ಲಿಯೇ ಈ ಗಜಲ್‌ನ ಸಾಲುಗಳನ್ನು ಕೋಟ್ ಮಾಡಲಾಗಿದೆ. ಮನುಷ್ಯನ ಜೀವನ್ಮರಣದ ನಿಗೂಢತೆ ಮತ್ತು ಕ್ಷಣಿಕತೆಯ ಅರ್ಥವನ್ನು ಶೋಧಿಸುವ ಈ ಸಿನಿಮಾದ ಆಶಯವನ್ನು ಈ ಗಜಲ್ ಅರ್ಥಪೂರ್ಣವಾಗಿ ಧ್ವನಿಸುತ್ತದೆ. ಈ ಸಿನಿಮಾದಲ್ಲಿ ಪಾತ್ರಗಳ ಮುಗ್ಧತೆ, ಜೀವನೋತ್ಸಾಹ, ಮೊದಲ ಪ್ರೇಮದ ರೋಮಾಂಚನದಂತಹ ಅತ್ಯಂತ ಸಾಮಾನ್ಯವಾದ ಸಂಗತಿಗಳಿವೆ; ಇದರೊಳಗೆ ಸಾವು ನೋವುಗಳಂತಹ ಅನಿರೀಕ್ಷಿತ ಆಘಾತಗಳಿವೆ; ಆದರೆ ’ಮಸಾನ್’ ಸಿನಿಮಾದ ಕ್ಯಾನ್ವಾಸ್‌ನಲ್ಲಿ ಇವು ಮನುಷ್ಯ ಬದುಕಿನ ಸಂಕೀರ್ಣತೆಯನ್ನು ವಿಭಿನ್ನವಾದ ಶೈಲಿಯಲ್ಲಿ ಶೋಧಿತವಾಗಿವೆ.
’ಮಸಾನ್’ ಎಂದರೆ ಹಿಂದಿಯಲ್ಲಿ ’ಸ್ಮಶಾನ್’ ಎಂಬುದರ ಸ್ಥಳೀಯ ಆಡುನುಡಿಯ ಸಂಕ್ಷಿಪ್ತ ರೂಪವಾಗಿದೆ. ಚಿತ್ರದ ಶೀರ್ಷಿಕೆಯು ಮನುಷ್ಯ ಬದುಕಿನ ಹುಟ್ಟು ಸಾವುಗಳ ಚಕ್ರಕ್ಕೆ ಅನ್ವರ್ಥವಾಗಿದೆ. ಇಡೀ ಸಿನಿಮಾ ಕತೆಯು ಭಾರತದ ಸನಾತನ ಮೌಲ್ಯಗಳ ಪ್ರತೀಕ ಮತ್ತು ಹಿಂದೂಗಳ ಪವಿತ್ರ ಯಾತ್ರಾ ಕೇಂದ್ರವಾಗಿರುವ ಬನಾರಸ್‌ನಲ್ಲಿ ನಡೆಯುತ್ತದೆ. ಗಂಗಾನದಿಯ ದಡದಲ್ಲಿರುವ ಈ ಬನಾರಸ್ ಪಟ್ಟಣದಲ್ಲಿ ಸಂಪ್ರದಾಯಸ್ಥ ಹಿಂದೂಗಳು ಜೀವಬಿಡಲು ಇಚ್ಚಿಸುತ್ತಾರೆ. ಇಹದ ಜೀವನ ಯಾತ್ರೆಯನ್ನು ಮುಗಿಸಿದವರ ಹೆಣಗಳನ್ನು ಸುಡುವ ಇಲ್ಲಿಯ ಹರಿಶ್ಚಂದ್ರ ಘಾಟವು ಸಿನಿಮಾದಲ್ಲಿ ಒಂದು ಪಾತ್ರವಾಗಿದೆ. ಇಲ್ಲಿ ಹೆಣಗಳನ್ನು ಸುಡುವ ಕಾಯಕದಲ್ಲಿ ನಿರತವಾಗಿರುವ ತಳ ಸಮುದಾಯದವರ (ಡೋಮ) ಕೆಂಡದಂತಹ ವಾಸ್ತವತೆಯಿದೆ; ಜಾತಿ ಕಟ್ಟುಪಾಡುಗಳಿಂದ ಬಿಡುಗಡೆಯಾಗಲು ಹವಣಿಸುವ ಹೊಸ ತಲೆಮಾರಿನ ತರುಣ-ತರುಣಿಯರು ಇಲ್ಲಿದ್ದಾರೆ. ಆಧುನಿತೆಯ ಭಾಗವಾಗಿ ಬಂದಿರುವ ಇಂಟರ್‌ನೆಟ್, ಯುಟ್ಯೂಬ್, ಫೇಸಬುಕ್‌ದಂತಹ ಸಮಾಜಿಕ ಜಾಲ ತಾಣಗಳು ನೇರವಾಗಿ ಯುವ ಪೀಳಿಗೆಯಲ್ಲಿ ಮಾಹಿತಿ ಮತ್ತು ಅರಿವಿನ ಆಸ್ಫೋಟವನ್ನುಂಟು ಮಾಡಿರುವುದು ನಿಜ. ಅವು ಕಾಲೇಜಿನ ಹದಿಹರೆಯದ ಮನಸ್ಸುಗಳನ್ನು ಉದ್ದೀಪಿಸುತ್ತವೆ. ದೈಹಿಕವಾಗಿ ಆಕರ್ಷಿತರಾಗುವ ಗಂಡು ಹೆಣ್ಣುಗಳ ನಡುವೆ ಹೊಸ ಸಂಬಂಧಗಳನ್ನು ಬೆಸೆಯುತ್ತವೆ. ಇದರ ಪರಿಣಾಮದ ಸಾಧ್ಯತೆಗಳನ್ನು ಸಹ ’ಮಸಾನ್’ ಚಿತ್ರವು ಸೂಕ್ಷ್ಮವಾಗಿ ಮುಖಾಮುಖಿ ಮಾಡಿದೆ.
’ಮಸಾನ್’ ಸಿನಿಮಾ ಎರಡು ವಿಭಿನ್ನವಾದ ಪ್ರೇಮ ಕತೆಗಳ ಮೂಲಕ ಬಿಚ್ಚಿಕೊಳ್ಳುತ್ತದೆ. ಮೊದಲಿಗೆ ಸ್ಪರ್ಧಾತ್ಮಕ ಪರೀಕ್ಷಾ ತರಬೇತಿ ಕೇಂದ್ರದಲ್ಲಿ ರಿಸೆಪ್ಸೆನಿಸ್ಟ್‌ಳಾಗಿ ಕಾರ್ಯ ನಿರ್ವಹಿಸುತ್ತಿದ್ದ ದೇವಿ (ರಿಚಾ ಚಡ್ಡಾ) ಲ್ಯಾಪ್‌ಟಾಪ್‌ನಲ್ಲಿ ನಗ್ನ ವೀಡಿಯೊ ಚಿತ್ರವೊಂದನ್ನು ನೋಡಿ ಒಂದು ನಿರ್ಧಾರಕ್ಕೆ ಅಣಿಯಾದಂತೆ ಮನೆಯಿಂದ ಹೊರಡುವುದರೊಂದಿಗೆ ಸಿನಿಮಾ ಆರಂಭವಾಗುತ್ತದೆ. ವಯಸ್ಸಿಗೆ ಬಂದಿರುವ ದೇವಿ ತನ್ನ ಸಹಪಾಠಿಯಾದ ಪಿಯುಷ್ ಎಂಬ ಹುಡುಗನೊಂದಿಗೆ ಲೈಂಗಿಕ ಅನುಭವವನ್ನು ಪಡೆಯಲು ಇಚ್ಚಿಸುತ್ತಾಳೆ. ಸಿನಿಮಾದ ಆರಂಭಿಕ ದೃಶ್ಯದಲ್ಲಿಯೇ ಬೆಚ್ಚಿಬೀಳಿಸುವ ಘಟನೆಯೊಂದು ಜರುಗುತ್ತದೆ. ಇವರಿಬ್ಬರೂ ಲಾಡ್ಜ್‌ನ ಕೋಣೆಯೊಂದರಲ್ಲಿ ಸಮಾಗಮದಲ್ಲಿರುವಾಗ ಪೊಲೀಸರು ದಿಢೀರೆಂದು ಒಳಗೆ ಪ್ರವೇಶಿಸುತ್ತಾರೆ; ಗಾಬರಿ ಬಿದ್ದ ಹುಡುಗ ಓಡೋಗಿ ಬಾಥ್ ರೂಮ್‌ನೊಳಗೆ ಅವಿತುಕೊಳ್ಳುತ್ತಾನೆ; ಆತ್ಮಹತ್ಯೆ ಮಾಡಿಕೊಳ್ಳಲು ಯತ್ನಿಸುತ್ತಾನೆ. ಇತ್ತ ಅರೆ ನಗ್ನವಾಗಿರುವ ದೇವಿಯನ್ನು ಪೊಲೀಸ್ ಇನ್ಸ್‌ಪೆಕ್ಟರ್ ತನ್ನ ಮೊಬೈಲಿನಲ್ಲಿ ವೀಡಿಯೊ ಮಾಡುತ್ತಾನೆ. ಈ ಘಟನೆಯೇ ದೇವಿಯ ಕತೆಯನ್ನು ಮುನ್ನಡೆಸುತ್ತದೆ; ಆಕೆಯ ಬದುಕಿನ ಹಲವು ತಿರುವುಗಳಿಗೆ ಕಾರಣವಾಗುತ್ತದೆ; ಹೊಸ ನಿರ್ಧಾರಗಳಿಗೆ ನಾಂದಿಯಾಗುತ್ತದೆ. ಆದರೆ ಇದರ ಸಾಮಾಜಿಕ ಪರಿಣಾವನ್ನು ಆಕೆಯ ತಂದೆ ವಿದ್ಯಾಧರ ಪಾಠಕ್ (ಸಂಜಯ್ ಮಿಶ್ರಾ) ಅನುಭವಿಸಬೇಕಾಗುತ್ತದೆ.
ಈ ಪೋಲಿಸ್ ಅಧಿಕಾರಿಯು ತನ್ನ ಮೊಬೈಲಿನಲ್ಲಿ ವೀಡಿಯೋ ಮಾಡಿರುವುದನ್ನು ಪ್ರಸ್ತಾಪಿಸಿ ಮಗಳ ಮಾನಾಪಮಾನದ ಪ್ರಶ್ನೆಯನ್ನೆತ್ತಿ ಕೇಸ್ ಮುಚ್ಚಿಹಾಕಲು ವಿದ್ಯಾಧರನಿಂದ ಮೂರು ತಿಂಗಳಲ್ಲಿ ಮೂರು ಲಕ್ಷ ರೂಪಾಯಿಗಳನ್ನು ನೀಡಬೇಕೆಂದು ಬ್ಲ್ಯಾಕ್‌ಮೇಲ್ ಮಾಡುತ್ತಾನೆ. ಗಂಗಾನದಿಯ ದಡದಲ್ಲಿ ಶವ ಸಂಸ್ಕಾರದ ಪೂಜಾ ಸಾಮಾನುಗಳನ್ನು ಮಾರುವ ದೇವಿಯ ಅಪ್ಪ ಅಲ್ಲಿ ಇಲ್ಲಿ ಸಾಲ ಮಾಡಿ ದುಡ್ಡನ್ನು ಹೊಂದಿಸಲು ಪರದಾಡುತ್ತಾನೆ. ಆದರೆ ದುಡ್ಡಿನ ವಸೂಲಿಗೆ ಬೇತಾಳನಂತೆ ಬೆನ್ನು ಬೀಳುವ ಪೊಲೀಸ್ ಇನ್ಸ್‌ಪೆಕ್ಟರ್‌ನ ಭ್ರಷ್ಟತೆಯು ಸಾಮಾಜಿಕ ವ್ಯವಸ್ಥೆಯ ಇನ್ನೊಂದು ಕರಾಳ ಮುಖವನ್ನು ತೆರೆದಿಡುತ್ತದೆ. ಇತ್ತೀಚೆಗೆ ಭಾರತೀಯ ಬೇರೆ ಬೇರೆ ಭಾಷೆಯ ಕೆಲವು ಸಿನಿಮಾಗಳು ಪ್ರಧಾನವಾಗಿ ಪೊಲೀಸ್ ವ್ಯವಸ್ಥೆಯ ಹಿಂಸೆ, ಕ್ರೌರ್ಯ, ಭ್ರಷ್ಟತೆ, ವೈಫಲ್ಯಗಳನ್ನು ಹಲವು ರೀತಿಯಲ್ಲಿ ನಿರೂಪಿಸಿವೆ. ಮರಾಠಿ ಭಾಷೆಯ ಚೈತನ್ಯ ತಮ್ಹಾನೆ ನಿರ್ದೇಶನದ ಮೊದಲ ಚಿತ್ರವಾದ ’ಕೋರ್ಟ’(2014) ಕ್ರಾಂತಿ ಗೀತೆಗಳ ಹಾಡುಗಾರನಾದ ವಯಸ್ಸಾದ ಸಾಮಾನ್ಯ ವ್ಯಕ್ತಿಯೊಬ್ಬನ ಮೇಲೆ ಪೊಲೀಸರು ಸುಳ್ಳು ಆಪಾದನೆಗಳ ಸರಮಾಲೆಯನ್ನು ಸೃಷ್ಟಿಸುವುದನ್ನು ಹಾಗೂ ಇಡೀ ನ್ಯಾಯಾಂಗ ವ್ಯವಸ್ಥೆಯ ಲೋಪದೋಷಗಳನ್ನು ಈ ಸಿನಿಮಾ ಯಾವ ಅಬ್ಬರವಿಲ್ಲದೆ ತಣ್ಣಗೆ ಅನಾವರಣ ಮಾಡಿದೆ. ವೆಟ್ರಿಮಾರನ್ ನಿರ್ದೇಶನದ ’ವಿಸರನೈ’ (2015) ಎಂಬ ತಮಿಳು ಚಿತ್ರವು ಪೊಲೀಸ್ ವ್ಯವಸ್ಥೆಯ ಭೀಕರವಾದ ಕ್ರೌರ್ಯ ಮತ್ತು ಭ್ರಷ್ಟತೆಯು ಅಪರಾಧವನ್ನೆ ಮಾಡಿರದ ನಾಲ್ಕು ಜನ ಬಡ ಕೂಲಿ ಕಾರ್ಮಿಕರನ್ನು ಹೇಗೆಲ್ಲ ಬಲಿ ಪಡೆಯುತ್ತದೆ ಎಂಬುದನ್ನು ನೈಜವಾಗಿ ಕಟ್ಟಿಕೊಟ್ಟಿದೆ. ತಮಿಳಿನ ಮತ್ತೊಂದು ಚಿತ್ರವಾದ ಅನುಚಣ್ ನಿರ್ದೇಶನದ ’ಕಿರುಮಿ’ (2015) ಕೂಡ ಪೊಲೀಸ್ ವ್ಯವಸ್ಥೆಯ ಭ್ರಷ್ಟತೆಯನ್ನು ಇನ್ನೊಂದು ಬಗೆಯಲ್ಲಿ ತೆರೆದಿಡುತ್ತದೆ. ಇಲ್ಲಿ ಪೊಲೀಸರು ಸ್ಥಳೀಯವಾಗಿ ಮಾಹಿತಿ ನೀಡುವ ಏಜೆಂಟರನ್ನು ನೇಮಿಸಿಕೊಂಡು ಮತ್ತು ತಮ್ಮ ಅಧಿಕಾರವನ್ನು ಬಳಸಿಕೊಂಡು ಲಾಭಕೋರತನದ ದಂಧೆಯನ್ನಾಗಿ ಮಾಡಿಕೊಂಡಿರುವುದನ್ನು ಸಿನಿಮಾ ಬಯಲಿಗೆಳೆಯುತ್ತದೆ. ಕನ್ನಡದ ದುನಿಯಾ ಸೂರಿಯ ’ಕೆಂಡಸಂಪಿಗೆ’ (2015) ಕೂಡ ಪೊಲೀಸ್ ವ್ಯವಸ್ಥೆಯ ಇನ್ನೊಂದು ಅಗೋಚರ ಮುಖವನ್ನು ತೋರಿಸುವ ಕಥಾನಕವನ್ನು ಹೊಂದಿತ್ತು.
’ಮಸಾನ್’ ಚಿತ್ರದಲ್ಲಿ ದೇವಿಗೆ ತಾನು ಅಪಮಾನಿತಳಾಗಿದ್ದೇನೆ ಎನ್ನುವ ಬೇಸರವೆನೋ ಇದೆ; ಆದರೆ ಮದುವೆಯ ಪೂರ್ವದಲ್ಲಿಯೇ ಲೈಂಗಿಕ ಅನುಭವವನ್ನು ಪಡೆಯುವುದು ಒಂದು ನೈತಿಕ ಪ್ರಶ್ನೆಯಾಗಿ ಅವಳನ್ನು ಕಾಡುವುದಿಲ್ಲ. ಪಿಯುಷ್ ಎಂಬ ಹುಡುಗ ಆತ್ಮಹತ್ಯೆ ಮಾಡಿಕೊಂಡರೂ ದೇವಿಗೆ ಅಂತಹ ಗಾಢವಾದ ಪಶ್ಚಾತ್ತಾಪವೇನೂ ಇಲ್ಲ. ಮಗಳ ಕೃತ್ಯದಿಂದ ಆಕೆಯ ಅಪ್ಪ ನೊಂದುಕೊಂಡಂತೆ ಕಂಡರು ಸಹ ಅದೇನು ಗಹನವಾದ ಅಪರಾಧವೇನಲ್ಲ ಎಂಬುದು ಅವರಿಬ್ಬರ ಸಂಬಂಧದಲ್ಲಿ ತಿಳಿಯುತ್ತದೆ. ಅಪ್ಪನಾಗಿ ವಿದ್ಯಾಧರ ತನ್ನ ಮಗಳ ಹೊಣೆಗಾರಿಕೆಯ ಬಗ್ಗೆ ಹೆಚ್ಚು ಜಾಗೃತನಾಗುತ್ತಾನೆ. ಆದರೂ ದೇವಿ ತನಗಾದ ಅವಮಾನವನ್ನು ತನ್ನ ಅಪ್ಪ ಮತ್ತು ಸಮಾಜದ ದೃಷ್ಟಿಯಲ್ಲಿ ನೋಡುತ್ತ ಒಳ್ಳೆಯ ಉದ್ಯೋಗ ಹಾಗೂ ಉನ್ನತ ಶಿಕ್ಷಣ ಪಡೆಯುವತ್ತ ಮುಂದೆ ಹೆಜ್ಜೆ ಇಡುವುದರಲ್ಲಿಯೇ ಆಕೆಯ ಹೆಗ್ಗಳಿಕೆಯಿದೆ. ಪುರುಷರ ಬಗ್ಗೆ ಆಕೆಯ ನಿಲುವುಗಳು ಬದಲಾಗುತ್ತವೆ. ಹೊಸ ಜೀವನಾನುಭವದ ನೋಟದಲ್ಲಿ ತನ್ನ ಅಸ್ಮಿತೆಯ ಹುಡುಕಾಟದಲ್ಲಿ ತೊಡಗಿಕೊಳ್ಳುತ್ತಾಳೆ. ಇದು ಹೊಸ ಕಾಲದ ಹುಡುಗಿಯೊಬ್ಬಳ ಸ್ವತಂತ್ರವಾದ ಮತ್ತು ದಿಟ್ಟವಾದ ನಡೆಯನ್ನು ತೋರಿಸುತ್ತದೆ.
’ಮಸಾನ್’ದಲ್ಲಿ ದೇವಿಯ ಕತೆಯೊಂದಿಗೆ ಸಮಾನಾಂತರವಾಗಿಯೇ ನಿರೂಪಿತವಾಗಿರುವ ಮತ್ತೊಂದು ಕತೆಯಿದೆ. ಅದು ಹೆಣಗಳನ್ನು ಸುಡುವ ಕೆಳಜಾತಿಗೆ ಸೇರಿದ ದೀಪಕ (ವಿಕ್ಕಿ ಕೌಶಲ್) ಎಂಬ ಇಂಜಿನಿಯರಿಂಗ್ ವಿದ್ಯಾರ್ಥಿಯದ್ದು. ದೀಪಕ ಮತ್ತು ಶಾಲು (ಶ್ವೇತಾ ತ್ರಿಪಾಠಿ) ನಡುವೆ ಅಂಕುರವಾಗುವ ಪ್ರೇಮವು ಯಾವುದೇ ಕಾಲೇಜು ಹುಡುಗ ಹುಡುಗಿಯರ ಬದುಕಿನಲ್ಲಿ ನಡೆಯಬಹುದಾದಷ್ಟು ಸಹಜವಾಗಿದೆ. ಇವರ ಪ್ರೇಮ ಕತೆಯು ದೇವಿಯ ದುಡುಕಿನ ಸ್ವಭಾವಕ್ಕಿಂತ ಭಿನ್ನವಾಗಿದೆ. ದೀಪಕ ಮತ್ತು ಶಾಲು ಜೋಡಿಯು ಸಹಜವಾದ ಮತ್ತು ಮನೋಜ್ಞವಾದ ಅಭಿನಯದಿಂದ ತೆರೆಯ ಮೇಲೆ ಮೋಡಿ ಮಾಡಿದೆ. ಪರಸ್ಪರ ಅವರಿಬ್ಬರ ಸಂಭಾಷಣೆ, ಭೇಟಿ, ಏಕಾಂತದ ಸ್ಪರ್ಶ, ಮೊದಲ ಚುಂಬನ-ಇವೆಲ್ಲವೂ ವಾಸ್ತವಕ್ಕೆ ತೀರ ಹತ್ತಿರವಾಗಿವೆ.
ಹೋಟೆಲ್‌ನಲ್ಲಿ ಎದುರು ಬದುರಾಗಿ ಕುಳಿತಿರುವ ಒಂದು ಸನ್ನಿವಶದಲ್ಲಿ ದೀಪಕ ತನ್ನ ಹುಡುಗಿಯ ಹವ್ಯಾಸಗಳನ್ನು ಕುರಿತು ಕೇಳುತ್ತಾನೆ. ತಕ್ಷಣಕ್ಕೆ ಶಾಲು ಗಜಲ್‌ಗಳನ್ನು ಆಲಿಸುವುದು ಎಂದು ಹೇಳಿ ಮಿರ್ಜಾ ಗಾಲೀಬ್‌ನ ಹೆಸರನ್ನು ಹೇಳುತ್ತಾಳೆ. ಆ ಕ್ಷಣದಲ್ಲಿ ದೀಪಕನ ಮುಖದಲ್ಲಿ ಏಕಕಾಲದಲ್ಲಿ ಹಲವು ಭಾವಗಳು ಮೂಡಿ ಮರೆಯಾಗುತ್ತವೆ. ಮಿರ್ಜಾ ಗಾಲೀಬ್ ಯಾರೆಂಬುದು ಗೊತ್ತಿಲ್ಲದಿರುವ ಕೀಳರಿಮೆಯು ಅವನ ಮುಖದಲ್ಲಿ ವ್ಯಕ್ತವಾಗುತ್ತದೆ. ಇನ್ನೊಂದು ಸಲ ತನ್ನೊಳಗೆ ಸುಪ್ತವಾಗಿದ್ದ ಕೆಳಜಾತಿಯವನೆಂಬ ಆತನ ಕೀಳರಿಮೆ ಸ್ಪೋಟಗೊಂಡು ತನ್ನ ಹುಡುಗಿಗೆ ಹಿಗ್ಗಾಮುಗ್ಗಾ ಬೈಯುತ್ತಾನೆ. ಶಾಲು ಉನ್ನತ ಜಾತಿಗೆ ಸೇರಿದವಳಾಗಿದ್ದು ಮದುವೆಗೆ ತನ್ನ ಕುಟುಂಬದವರು ಒಪ್ಪುವುದಿಲ್ಲವೆಂದು ಗೊತ್ತಿದ್ದರು ಕೂಡ ದೀಪಕನೊಂದಿಗೆ ಬಾಳ್ವೆ ನಡೆಸಲು ಸಿದ್ಧಳಾಗಿರುತ್ತಾಳೆ. ಇದು ಹೊಸ ಪೀಳಿಗೆ ಜಾತಿಯಂತಹ ಜಡ ವ್ಯವಸ್ಥೆಯಿಂದ ಬಿಡುಗಡೆ ಹೊಂದಲು ಬಯಸುತ್ತಿರುವುದರ ಸಂಕೇತವಾಗಿದೆ.
ಈ ಹಂತದಲ್ಲಿಯೇ ದೀಪಕನ ಬದುಕಿನಲ್ಲಿ ಒಂದು ದುರಂತ ಸಂಭವಿಸುತ್ತದೆ. ತಮ್ಮ ಕುಲ ಕಸುಬಾದ ಹೆಣಗಳನ್ನು ಸುಡುವ ಕೆಲಸಕ್ಕೆ ಅಂದು ಹೋಗಿದ್ದಾಗ ಅಲ್ಲಿಗೆ ಬಂದ ಶವದ ಬೆರಳಲ್ಲಿದ್ದ ಉಂಗುರವನ್ನು ತದೇಕ ಚಿತ್ತದಿಂದ ನೋಡುತ್ತಾನೆ. ಸುಡುತ್ತಿರುವ ಬೆಂಕಿಯ ಜ್ವಾಲೆಗಳು ಆತನನ್ನೆ ಆಹುತಿ ಪಡೆದಂತೆ ನಿಶ್ಚಲನಾಗುತ್ತಾನೆ. ನಡಗುವ ಕೈಯಿಂದಲೇ ಆ ಶವದ ಮುಖದ ಮೇಲಿರುವ ಬಿಳಿಯ ಬಟ್ಟೆಯನ್ನು ನಿಧಾನವಾಗಿ ಸರಿಸುತ್ತಾನೆ. ತನ್ನ ಬಾಳ ಸಂಗಾತಿಯಾಗಲು ಒಪ್ಪಿದ್ದ ಶಾಲುಳ ಶವವನ್ನು ಕಂಡು ಸ್ತಬ್ಧನಾಗಿಬಿಡುತ್ತಾನೆ. ತನ್ನ ಕಣ್ಣ ಮುಂದೆಯೇ ಬೂದಿಯಾಗಿ ಹೋದ ಶಾಲುಳ ಎದುರಿನಲ್ಲೆ ಬದುಕಿನ ಅರ್ಥವೇನು ಎಂಬ ಪ್ರಶ್ನೆ ಆತನ ಎದೆಯಲ್ಲಿ ಕೊರೆಯುತ್ತದೆ. ಉರಿದು ಹೋದ ಆ ಬೂದಿಯಲ್ಲಿ ಆಕೆಯ ಬೆರಳ ಉಂಗುರ ಮಾತ್ರ ಆಕೆಯ ನೆನೆಪಿನ ಧ್ಯೋತಕವಾಗಿ ಬಿದ್ದಿರುತ್ತದೆ. ದೀಪಕ ಅದನ್ನು ಸುಡುವ ಕೆಂಡದ ಬೂದಿಯಿಂದ ಹೆಕ್ಕಿ ಎತ್ತಿಕೊಳ್ಳುತ್ತಾನೆ. ಮಡುಗಟ್ಟಿದ ಆತನ ಕಣ್ಣೀರ ಕಟ್ಟೆ ಒಡೆದಾಗ ಪ್ರೇಕ್ಷಕರ ಕಣ್ಣಾಲಿಗಳು ಒದ್ದೆಯಾಗದಿರುವುದಿಲ್ಲ.
ಸಿನಿಮಾದ ಕೊನೆಯ ದೃಶ್ಯವಂತು ಸಾಂಕೇತಿಕವೂ ಅರ್ಥಪೂರ್ಣವೂ ಆಗಿದೆ. ದೇವಿಯು ತನಗೆ ರೈಲ್ವೆ ಇಲಾಖೆಯಲ್ಲಿ ಸಿಕ್ಕಿದ್ದ ಸರಕಾರಿ ಕೆಲಸವನ್ನು ಬಿಟ್ಟು ಹೆಚ್ಚಿನ ಅಧ್ಯಯನಕ್ಕೆ ಒಂಟಿಯಾಗಿ ಅಲಹಾಬಾದ್‌ಗೆ ತೆರಳುತ್ತಾಳೆ. ದೀಪಕ ಕೂಡ ಉದ್ಯೋಗವನ್ನು ಅರಸಿಕೊಂಡು ಅಲಹಾಬಾದ್‌ಗೆ ಹೊರಡುತ್ತಾನೆ. ತನ್ನ ಪ್ರೇಯಸಿಯ ಉಂಗುರವನ್ನು ಹೊಳೆಯಲ್ಲಿ ಬಿಸಾಕುತ್ತಾನೆ; ಮತ್ತೆ ಮರುಕ್ಷಣವೇ ಹೊಳೆಗೆ ಜಿಗಿದು ಮುಳುಮುಳುಗಿ ಅದನ್ನು ಹುಡುಕುತ್ತಾನೆ; ಅದು ತನ್ನ ಪ್ರೇಯಸಿಯಂತೆಯೇ ಶಾಶ್ವತವಾಗಿ ಕಣ್ಮರೆಯಾಗುತ್ತದೆ. ದೇವಿಯು ತಾನು ಇಷ್ಟ ಪಟ್ಟಿದ್ದ ಹುಡುಗ ಅಂದು ಕೊಟ್ಟಿದ್ದ ಕಿರುಕಾಣಿಕೆಯನ್ನು ತೆರೆದು ನೋಡದೆ ನದಿಯಲ್ಲಿ ತೇಲಿ ಬಿಡುತ್ತಾಳೆ. ಇದೇ ಗಂಗೆಯ ತೀರದಲ್ಲಿ ಇವರಿಬ್ಬರ ಪರಿಚಯವಾಗುತ್ತದೆ. ಇಬ್ಬರು ಸಹ ತಮ್ಮ ಗತಿಸಿದ ಪ್ರಿಯತಮ ಹಾಗೂ ಪ್ರಿಯತಮೆಯರ ಹಳೆಯ ನೆನಪುಗಳಿಂದ ಬಿಡುಗಡೆಯಾಗಲು ಹಂಬಲಿಸುವುದನ್ನು ಸಿನಿಮಾದ ಈ ದೃಶ್ಯಗಳು ಮನಗಾಣಿಸುತ್ತವೆ. ಇಬ್ಬರು ದೋಣಿಯಲ್ಲಿ ತ್ರಿವೇಣಿ ಸಂಗಮದತ್ತ ಪಯಣಿಸುತ್ತಾರೆ. ಹೀಗೆ ಎರಡೂ ಕತೆಗಳು ಕೊನೆಯ ಬಿಂದುವಿನಲ್ಲಿ ಸಂಗಮಿಸುತ್ತವೆ. ಹಾಗೆ ನೋಡಿದರೆ ಸಾವು ಕ್ಷಣಿಕ; ಜೀವನವೇ ನಿರಂತರ ಎಂಬ ತತ್ವವನ್ನು ಸಾರಿ ಹೇಳುವಂತಿದೆ ಈ ಸಿನಿಮಾ.
ನೀರಜ್ ಘಾಯ್ವನ್ ಅವರು ಈ ಮೊದಲು ಅನುರಾಗ್ ಕಶ್ಯಪ್ ಅವರ ’ಗ್ಯಾಂಗ್ಸ್ ಆಫ್ ವಸ್ಸೆಯ್‌ಪುರ್’ ಸಿನಿಮಾದ ಎರಡೂ ಭಾಗಗಳಿಗೆ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡಿದ್ದರು. ನಿರ್ದೇಶಕನೊಬ್ಬನ ಮೊದಲ ಚಿತ್ರವೇ ಅಂತರರಾಷ್ಟ್ರೀಯ ಪ್ರತಿಷ್ಠಿತ ಕ್ಯಾನ್ಸ್ ಚಲನಚಿತ್ರೋತ್ಸವದಲ್ಲಿ ಎರಡು ಪ್ರಶಸ್ತಿಗಳನ್ನು ಪಡೆದುಕೊಂಡಿತು. ಆ ಸಂದರ್ಭದಲ್ಲಿ ನೀರಜ್ ಘಾಯ್ವನ್ ಅವರು ತಮ್ಮ ಸಿನಿಮಾ ಕುರಿತು ಪತ್ರಿಕೆಯೊಂದರಲ್ಲಿ ಹೀಗೆ ಹೇಳಿಕೊಂಡಿದ್ದರು: "ಇದೊಂದು ಪಲಾಯನದ ಬಗ್ಗೆ ಇರುವ ಸಿನಿಮಾ; ಸಾಂಪ್ರದಾಯಿಕತೆಯಂದ ಪಲಾಯನ; ಸಮಾಜಿಕ-ಸಾಂಸ್ಕೃತಿಕ ಇಕ್ಕಟ್ಟುಗಳಲ್ಲಿ ಸಿಲುಕಿಕೊಂಡಿರುವ ಭಾರತದಂತಹ ಸಣ್ಣ ಪಟ್ಟಣದಲ್ಲಿರುವ ಪಾತ್ರಗಳು ತಮ್ಮ ಅಸ್ತಿತ್ವಕ್ಕಾಗಿ ಹೋರಾಡುತ್ತವೆ. ನೈತಿಕ ಬಿಕ್ಕಟ್ಟುಗಳಿಂದ ಬಿಡುಗಡೆ ಪಡೆಯಲು ಹಾತೊರೆಯುತ್ತವೆ. ನಾನು, ಸಣ್ಣ ಪಟ್ಟಣಗಳಲ್ಲಿರುವ ಯುವ ಜನಾಂಗದ ಕುರಿತ ಕತೆಯನ್ನು ಅತ್ಯಂತ ಪ್ರಾಮಾಣಿಕವಾದ ನೆಲೆಯಲ್ಲಿ ಹೇಳಲು ಬಯಸಿದ್ದೆ." ಆದರೆ ’ಮಸಾನ್’ ಪಲಾಯನವಾದಿ ಪಾತ್ರಗಳ ಸಿನಿಮಾ ಅಲ್ಲವೇ ಅಲ್ಲವೆಂದು ಹೇಳಬಹುದು. ಯಾಕೆಂದರೆ ಯಾವ ಪಾತ್ರಗಳು ಕೂಡ ಬದುಕಿನ ಸಮಸ್ಯೆ, ತೊಂದರೆ, ಜಾತಿ, ಸಂಪ್ರದಾಯಗಳಿಗೆ ಬೆನ್ನು ತಿರುಗಿಸಿ ಓಡುವುದಿಲ್ಲ; ಆಧುನಿಕತೆ ತಂದೊಡ್ಡಿರುವ ಹೊಸ ಸವಾಲುಗಳನ್ನು ಸ್ಥೈರ್ಯದಿಂದ ಎದುರಿಸುತ್ತವೆ. ಸ್ಥಾಪಿತ ಮೌಲ್ಯಗಳ ದಾಟುವಿಕೆಯ ಕುರುಹುಗಳಿವೆ. ಆದ್ದರಿಂದಲೇ ’ಮಸಾನ್’ ಮಹತ್ವದ ಸಿನಿಮಾ ಎನಿಸಿದೆ.

*

MORE NEWS

ಪರಿಘಾಸನ ಮತ್ತು ಅರ್ಧ ಚಕ್ರಾಸನ 

16-04-2024 ಬೆಂಗಳೂರು

"ಪರಿಘಾಸನ ಆಸನವು ) ಪಿತ್ತ ಜನಕಾಂಗ ಮತ್ತು ಮೇದೋಜೀರಕ ಚೈತನ್ಯಗೊಳ್ಳುವಂತೆ ಮಾಡುತ್ತದೆ. ಹಾಗೆಯೇ ‘ಅರ್ಧ ಚಕ್...

ಲೋಕಸಭಾ ಚುನಾವಣೆಗಳ ಸುತ್ತಮುತ್ತ ಒಂದು ಸುತ್ತು

15-04-2024 ಬೆಂಗಳೂರು

"ಪರಸ್ಪರ ರೋಚಕ ನಿಂದನೆಗಳು. ಕ್ಷೇತ್ರವಾರು ಚಕ್ಕರಗುಳ್ಳಿ ಇಡುವ ಚತುರ ವಿವರಗಳು. ಹೊಸ ಹೊಸ ಬೈಗುಳಗಳು. ಮಾಧ್ಯಮಗಳಿಗ...

ಉಪವಿಷ್ಟಕೋನಾಸನ ಮತ್ತು ಪವನಮುಕ್ತಾಸನ

09-04-2024 ಬೆಂಗಳೂರು

"ಉಪವಿಷ್ಟಕೋನಾಸನ ಯೋಗಾಸನವು ಮನಸ್ಸನ್ನು ಶಾಂತಗೊಳಿಸುತ್ತದೆ ಮತ್ತು ಮಾಂಸಗಳ ತೂಕವನ್ನು ಕಡಿಮೆಗೊಳಿಸುತ್ತದೆ. ಪವನಮು...