ಮಾಸ್ತಿಯವರ ಮೊಸರಿನ ಮಂಗಮ್ಮ

Date: 23-10-2024

Location: ಬೆಂಗಳೂರು


"ಮಾಸ್ತಿಯವರೇನು ಕನ್ನಡ ಸಾಹಿತ್ಯದಲ್ಲಿ ಮೊದಲ ಕಥೆಗಾರರಲ್ಲದಿದ್ದರೂ, ಇವರಷ್ಟು ಉತ್ತಮ ಕಥೆಗಳನ್ನು ಬರೆದವರು ತೀರ ವಿರಳ ಎಂದೇ ಹೇಳಬಹುದು. ಕನ್ನಡ ಕಥಾ ಬ್ರಹ್ಮ, ಸಣ್ಣ ಕಥೆಗಳ ಪಿತಾಮಹ, ಕಥೆಗಾರ ಅಣ್ಣ, ಎಂಬಂತಹ ಮಾತುಗಳು ಇವರು ಕುರಿತಾಗಿ ರೂಢಿಯಲ್ಲಿವೆ," ಎನ್ನುತ್ತಾರೆ ವಾಣಿ ಭಂಡಾರಿ. ಅವರು ತಮ್ಮ "ಅಂತರ್ ದೃಷ್ಟಿ" ಅಂಕಣದಲ್ಲಿ ಜಿ.ಎಚ್. ನಾಯಕ ಅವರ ಸಂಪಾದಿತ ಕೃತಿಯಿಂದ ಆಯ್ದ ‘ಮಾಸ್ತಿಯವರ ಮೊಸರಿನ ಮಂಗಮ್ಮ' ಕಥೆ ಬಗ್ಗೆ ವಿವರಿಸಿದ್ದಾರೆ.

ಕನ್ನಡ ಭಾಷೆಯ ಸಮೃದ್ಧತೆಗೆ ಹಲವಾರು ಕವಿಗಳ ಶ್ರಮ ತ್ಯಾಗ ಬದುಕಿನ ಸಾರ್ಥಕತೆ ಇದೆ. ರಾಷ್ಟ್ರದಿಂದ ಅಂತಾರಾಷ್ಟ್ರೀಯ ಮಟ್ಟದಲ್ಲೂ ತಮ್ಮನ್ನು ತಾವು ಗುರುತಿಸಿಕೊಂಡು ಮಾಸ್ತಿ ಎಂದರೆ ಕನ್ನಡದ ಆಸ್ತಿ ಎಂಬಷ್ಟರ ಮಟ್ಟಿಗೆ ಮನೆ ಮಾತಾದ ಜ್ಞಾನಪೀಠ ಪುರಸ್ಕೃತ ಕವಿಗಳು. ಮಾಸ್ತಿ ವೆಂಕಟೇಶ್ ಅಯ್ಯಂಗಾರ್ ರಂತಹ ಸೃಜನಶೀಲ ಮನಸ್ಸುಗಳಿಂದ ಕನ್ನಡ ಸಾಹಿತ್ಯ ಪರಂಪರೆ ಶ್ರೀಮಂತಗೊಂಡಿದೆ. ಕಡು ಕಷ್ಟದಲ್ಲೇ ತಮ್ಮ ಸ್ವಂತ ಪ್ರತಿಭೆಯಿಂದಲೇ ಓದಿ ಅಸಿಸ್ಟೆಂಟ್ ಕಮಿಷನರ್ ಆಗಿ ನೇಮಕಗೊಂಡವರು. ಮಾಸ್ತಿಯವರು ಊರೂರು ಸುತ್ತುತ್ತಾ ತಮ್ಮ ಜೀವನದಲ್ಲಿ ಅನುಭವದ ಕಣಜವನ್ನು ಭರ್ತಿ ಮಾಡಿಕೊಂಡವರು.

“ಸಣ್ಣ ಕಥೆಗಳು ಎಂದರೆ ಮಾಸ್ತಿ; ಮಾಸ್ತಿ ಎಂದರೆ ಸಣ್ಣ ಕಥೆಗಳು”, ಎನ್ನುವಷ್ಟರ ಮಟ್ಟಿಗೆ ಇವರು ಜನಜನಿತರಾಗಿ “ಸಣ್ಣ ಕಥೆಗಳ ಜನಕ” ಎಂಬ ಬಿರುದಿಗೆ ಭಾಜನರಾದವರು 1910-11 ರ ಸುಮಾರಿಗೆ “ರಂಗನ ಮದುವೆ” ಎಂಬ ಮೊದಲ ಸಣ್ಣ ಕಥೆಯನ್ನು ಬರೆದರು. ಮಾಸ್ತಿಯವರು ಸುಮಾರು 90 ಕಥೆಗಳು 14 ಸಂಪುಟಗಳಲ್ಲಿ ಪ್ರಕಟವಾಗಿದೆ. ಮಾಸ್ತಿಯವರೇನು ಕನ್ನಡ ಸಾಹಿತ್ಯದಲ್ಲಿ ಮೊದಲ ಕಥೆಗಾರರಲ್ಲದಿದ್ದರೂ, ಇವರಷ್ಟು ಉತ್ತಮ ಕಥೆಗಳನ್ನು ಬರೆದವರು ತೀರ ವಿರಳ ಎಂದೇ ಹೇಳಬಹುದು. ಕನ್ನಡ ಕಥಾ ಬ್ರಹ್ಮ, ಸಣ್ಣ ಕಥೆಗಳ ಪಿತಾಮಹ, ಕಥೆಗಾರ ಅಣ್ಣ, ಎಂಬಂತಹ ಮಾತುಗಳು ಇವರು ಕುರಿತಾಗಿ ರೂಢಿಯಲ್ಲಿವೆ. ಇವರ ಪ್ರಮುಖ ಕಥೆಗಳಲ್ಲಿ ಕೆಲವು “ನಿಜಗಲ್ಲಿನ ರಾಣಿ”, "ಒಂದು ಹಳೆಯ ಕಥೆ”, “ಕಾಮನ ಹಬ್ಬದ ಒಂದು ಕಥೆ”, “ಮೊಸರಿನ ಮಂಗಮ್ಮ”, “ಜೋಗ್ಯಾರ ಅಂಜಪ್ಪನ ಕೋಳಿ ಕಥೆ”, “ ವೆಂಕಟಶಾಮಿಯ ಪ್ರಣಯ”, “ಕಲ್ಮಡಿಯ ಕೋಣ”, ಮೊದಲಾದವು ಶ್ರೇಷ್ಠ ಕಥೆಗಳಾಗಿದ್ದು “ಸುಬ್ಬಣ್ಣ” ದಂತಹ ನೀಳ್ಗತೆ ಜಗತ್ತಿನ ಅತ್ಯುತ್ತಮ ಕಥೆಗಳ ಪಂಕ್ತಿಯಲ್ಲಿ ಕೂರುತ್ತದೆ. ಸುಬ್ಬಣ್ಣ ಕಥೆಯು ಜರ್ಮನ್, ಇಂಗ್ಲಿಷ್, ತೆಲುಗು, ತಮಿಳು, ಮಲಯಾಳಂ, ಮರಾಠಿ, ಭಾಷೆಗಳಿಗೂ ಅನುವಾದ ಗೊಂಡಿರುವುದು ಈ ಕಥೆಯ ಪ್ರೌಢಿಮೆಯನ್ನು ತಿಳಿಸುತ್ತದೆ.‌ ಕಥೆಗಳಷ್ಟೇ ಬರೆಯದೆ ಶಿಖರ ಪ್ರಾಯವೆನಿಸಿದ ಎರಡು ಕಾದಂಬರಿಗಳು ಇವರ ಕೊಡುಗೆ ಒಂದು “ಚೆನ್ನಬಸವ ನಾಯಕ” ಇನ್ನೊಂದು “ಚಿಕ್ಕವೀರರಾಜೇಂದ್ರ” ಈ ಕಾದಂಬರಿಗೆ ಜ್ಞಾನಪೀಠ ಪ್ರಶಸ್ತಿಯು 1983 ರಲ್ಲಿ ಲಭಿಸಿತು.

ಇವರ ಮುಖ್ಯ ಕಥೆಗಳಲ್ಲಿ ಒಂದಾದ “ಮೊಸರಿನ ಮಂಗಮ್ಮ” ಒಂದು ಸಾಧಾರಣ ಜನ ಜೀವನದ ವಾಸ್ತವಿಕ ಮಗ್ಗುಲಿನಲ್ಲಿ ನಿತ್ಯವೂ ಕಾಣುವಂತಹ ಚಿತ್ರಣದ ಸುತ್ತ ಸುಳಿಯುವ ಘಟನಾವಳಿಗಳೇ ಈ ಕಥೆಯ ಆಧಾರ ಸ್ತಂಭ. ನೇರವಾಗಿ ಹೇಳಬೇಕೆಂದರೆ “ಮನೆ ಮನೆ ಕತೆಯೇ ಮೊಸರಿನ ಮಂಗಮ್ಮ. ಮೊಸರು ಹಾಕುವ ಕಾಯಕವು ಒಂದು ನೆಪವಷ್ಟೇ ಲೇಖಕರಿಗೆ. ಅವರು ಕೇವಲ ಮೊಸರನ್ನು ಮನೆಮನೆಗೆ ಹಾಕಿಸುವುದರ ಜೊತೆಗೆ ಮನೆ ಮನಸ್ಸಿನ ಕಳವಳ ನೋವು,ತಲ್ಲಣಗಳನ್ನು ಶಿಷ್ಟ ಮಧ್ಯಮ ವರ್ಗದ ಮಹಿಳೆಯೊಬ್ಬಳಲ್ಲಿ ಅರಹುವ ಒಂದು ಪ್ರಕ್ರಿಯೆ ಅಷ್ಟೇ. ಮೊಸರು ಒಂದು ಪ್ರತಿಮಾ ರೂಪ ಈ ಕಥೆಯನ್ನು ತೆರೆದಿಡಲು. ಮೊಸರನ್ನು ವರ್ತ್ನೆಯಂತೆ ಮನೆಗಳಿಗೆ ಹಾಕುವ ಕಾಯಕದಲ್ಲಿ ನಿರತಳಾದ ಮಂಗಮ್ಮ ತನ್ನ ಮನೆಯಲ್ಲಿ ನಡೆಯುತ್ತಿರುವ ಘಟನೆಗಳನ್ನು ಮೊಸರು ತೆಗೆದುಕೊಳ್ಳುವ ಯಜಮಾನಿ ಹತ್ತಿರ ಹೇಳಿಕೊಂಡು ಹಗುರಾಗುವ ಒಂದು ಚಿತ್ರಣ. ಮಂಗಮ್ಮನ ಸೊಸೆ ನಂಜಮ್ಮ ತನ್ನ ಮಗುವಿಗೆ ತಾನು ಹೊಡೆಯುತ್ತಿದ್ದ ಸಂದರ್ಭದಲ್ಲಿನ ಚಿತ್ರಣದಿಂದ ಮಂಗಮ್ಮ ಬೇರೆ ಮನೆ ಮಾಡಿಕೊಂಡು ಬದುಕುವುದು, ಮಂಗಮ್ಮ ನ ಹತ್ತಿರ ಹಣ ಇರುವುದನ್ನು ಕಂಡ ರಂಗಪ್ಪ ಎಂಬಾತ ಊರಿನವನೆ ಇವಳ ಹತ್ತಿರ ಸಲುಗೆ ಬೆಳೆಸಲು ಪ್ರಯತ್ನಿಸಿ ವಿಫಲವಾಗುವುದು, ಮಗ ಸೊಸೆಯನ್ನು ಅಗಲಿ ಒಂಟಿತನ ಕಾಡುವಿಕೆ, ನಾಲ್ಕಾರು ದಿನದಾಚೆ ಮೊಮ್ಮಗ ಮಂಗಮ್ಮನ ಜೊತೆಯಲ್ಲಿಯೇ ಇರುವೆ ಎಂದು ಉಳಿದುಕೊಳ್ಳುವಿಕೆ, ಹೀಗೆ ಒಂದಾದ ಮೇಲೊಂದು ಜರಗುವ ಘಟನೆಗಳಿಗೆ ಮೊಸರು ತೆಗೆದುಕೊಳ್ಳುವ ಯಜಮಾನಿ ಮೂಕ ಪ್ರೇಕ್ಷಕಿಯಂತೆ ಮಂಗಮ್ಮ ಮನೆಯ ಕಥೆಯನ್ನು ಕೇಳಿಸಿಕೊಳ್ಳುವುದು, ಮಾಸ್ತಿಯವರು ಶಿಷ್ಟ ವರ್ಗದ ಮಹಿಳೆಯು ಕೇವಲ ಇಲ್ಲಿ ಪ್ರತಿಮಾ ರೂಪಕವಾಗಿ ಕಂಡುಬರುವುದು ಮತ್ತು ಮಂಗಮ್ಮಳ ವಿಚಾರವಾಗಿ ಯಾವ ತಾತ್ವಿಕವಾದ ನಿಲುವಿಗೆ ಬರದಿರುವುದು ಹಾಗೂ ಇಂತಹ ಘಟನೆಗಳು ವಾಸ್ತವಿಕ ಬದುಕಿಗೆ ಹತ್ತಿರವಾಗಿದ್ದರೂ ಸಹ ಅನುಭವ ಜನ್ಮವಾಗಿಸಿ ನುಂಗುವುದು ಮಾತ್ರ ಮಂಗಮ್ಮನಂತಹ ಕೂಲಿ ಕಾರ್ಮಿಕಳೆ ಎಂಬುದು ನಿರ್ವಿವಾದ. “ದೊಡ್ಡವರು ಮಾತು ಒಲೆ ಮುಂದೆ; ಬಡವರ ಮಾತು ಊರ ಮುಂದೆ” ಎಂಬ ಗಾದೆಯ ರೀತಿಯಂತೆ ಮಂಗಮ್ಮನಂಥವರ ಬಾಳು ಅಗಸೆ ಬಾಗಿಲಿಗೆ ತೋರಣದಂತೆ.

ಈ ಕಥೆಯಲ್ಲಿ ಮಾಸ್ತಿಯವರು ಒಂದಕ್ಕೊಂದು ಪೂರಕ ಎಂಬಂತೆ ಒಂದೊಂದು ಸಂಗತಿಗಳನ್ನು ಒಂದರೊಳಗೊಂದು ತೋರಿಸಿ ಪಾತ್ರಗಳ ಲಯತಪ್ಪದಂತೆ ಜೋಡಿಸುವುದು ಕಥೆಯ ತಾಂತ್ರಿಕ ಸೂಕ್ಷ್ಮ ಕಲೆ ಎನ್ನಬಹುದು. ಆದರೆ ಕಥೆಯಲ್ಲಿ ಬರುವ ಪಾತ್ರಗಳಲ್ಲಿ, ಪಾತ್ರಗಳ ನಿರೂಪಕಗಳು ಅವಳೇ ಹಾಗೂ ನಿರೂಪಿಸುವವರು ಅವಳೇ ಕೇವಲ ಹೂಂಗುಡುವ ಪಾತ್ರ ಮಾತ್ರ, ಸಹೃದಯರೆ ಎಂಬಂತೆ ಭಾಸವಾಗುತ್ತದೆ. ಮಾಸ್ತಿಯವರು ಹೊಸದಾಗಿ ಏನನ್ನು ಹೇಳಲು ಹೊರಟ್ಟಿಲ್ಲ. ಇರುವುದನ್ನು ಇದ್ದಂತೆ ಪರಂಪರಾಗತ ಮೌಲ್ಯಗಳ ಚಿತ್ರಗಳನ್ನು ಅನಾವರಣ ಗೊಳಿಸಿದ್ದಾರೆ. ಈ ಕಥೆಯಲ್ಲಿ ಮೂಡಿಬರುವ ಇದರ ಭಾಷ ಶೈಲಿ ತೀರ ಸರಳ. ಒಮ್ಮೊಮ್ಮೆ ಕಥೆಯ ತಂತ್ರವು ಶಿಥಿಲ ಎನಿಸದೆ ಇರದು. ಜಾಳು ಜಾಳು ಎನಿಸುವುದು. ಸಾಮಾನ್ಯ ಕೌಟುಂಬಿಕ ಮತ್ತು ಸಾಮಾಜಿಕ ಪರಿಸ್ಥಿತಿಗಳು ಮನುಷ್ಯನ ಅಸಹಾಯಕತೆಯ ತೀವ್ರತೆಯನ್ನು ಕಥೆ ದ್ವನಿಸುತ್ತದೆ. ಮಾಸ್ತಿಯವರು ತಮ್ಮ ಕಥಾತಂತ್ರದಲ್ಲಿ ಎಂದೋ, ಎಲ್ಲೋ, ನಡೆದ ಘಟನೆ ಅಥವಾ ನಡೆಯುತ್ತಿರುವ ಪ್ರಸಂಗವನ್ನು ಯಾವುದೇ ಆತಂಕವಿರದೆ ಸೋಪಾಜ್ಞತೆಯಿಂದ ನಿರಾತಂಕವಾಗಿ ಹೇಳಿರುವುದು ಅವರ ಕತಾತಂತ್ರದ ಒಂದು ಭಾಗ. ಆ ತಂತ್ರಕ್ಕೆ ಸಂಬಂಧಿಸಿದಂತೆ ಪಾತ್ರಗಳ ತೂಕ ಮಾತು ಸರಳವಾಗುವಿಕೆಯು ಇಲ್ಲದಿಲ್ಲ. ಹಾಗಂತ “ಪ್ರತಿಯೊಂದು ಕಥೆಯ ಗುಣಗಳನ್ನು ಲೆಕ್ಕಹಾಕಿ ಇಷ್ಟೇ ಶ್ರೇಷ್ಠ ಕಥೆಗಳು ಉಳಿದವು ಸಾಮಾನ್ಯವಾದವುಗಳು ಎಂದು ಬೆಲೆ ಕಟ್ಟವುದು ಯೋಗ್ಯವಾಗಲಾರದು. (ಕೀರ್ತಿನಾಥ ಕುರ್ತುಕೋಟೆ-ಯುಗ ಧರ್ಮ ಹಾಗೂ ಸಾಹಿತ್ಯ ದರ್ಶನ) ಹೀಗೆ ಹೇಳಿರುವುದು ಸಹ ಅಕ್ಷರಶಃ ಸತ್ಯವೇ. ಇವರ ಒಟ್ಟು ಕಥೆಗಳ ಒಳನೋಟವು ಭಿನ್ನ ಮಾದರಿಯ ಸ್ವರೂಪವನ್ನು ತೆರೆದಿಡುತ್ತವೆ.

ಇಲ್ಲಿ ಬಹಳ ಮುಖ್ಯವಾಗಿ ಮಂಗಮ್ಮನ ಸೊಸೆ ನಂಜಮ್ಮನ ಮನೋಭಾವಕ್ಕೆ ತಕ್ಕಂತೆ ಹೆಸರು ಸಹ ಅಂತರ್ಗತವಾಗಿಸಿರುವುದು ಮಾಸ್ತಿಯವರ ದೂರದೃಷ್ಟಿ. ನಂಜಮ್ಮಳ ಒಳನೋಟ ಹೀಗರ ದಿಟ್ಟಿಸಬಹುದು. ಮಂಗಮ್ಮಗಳಿಂದ ಯಜಮಾನಿಕೆಯನ್ನು ಮೊಸರು ಮಾರಿ ಹಣ ಸಂಪಾದಿಸಿ ನಾಲ್ಕಾರು ಕಾಸು ಕೈಯಲ್ಲಿ ಓಡಾಡುವುದು ದಾಸ್ಯದಿಂದ ಮುಕ್ತಗೊಳಿಸಿ ಕೊಂಡು ಸ್ವತಂತ್ರವಾಗಿ ಬದುಕುವ ಹಂಬಲಿಕೆ ಬಲಾಢ್ಯತೆಯ ಹಿನ್ನೋಟವೇ ಹಣ. ಅದರ ಹಿಂದಿನ ಶ್ರಮ ಮೊಸರು ಮಾರುವಿಕೆ ಇಂತಹ ಮೊಸರು ಮಾರುವಿಕೆಯ ಅಧಿಪತ್ಯ ನಂಜಮ್ಮನ ಕೈಗೆ ಬಂದರೆ ಸಾಮಾಜಿಕ ಸ್ಥಿತಿ ಸುಧಾರಿಸುವುದು ಜೊತೆಗೆ ಮಂಗಮ್ಮನ ಪುಡಿಗಾಸು ಊರು ನಾಯಿ ನರಿ ಪಾಲಾಗುವುದನ್ನು ತಪ್ಪಿಸಲು ತನ್ನದೇ ಆದ ಅರ್ಥ, ಸ್ತರ,ಪ್ರೀತಿ,ಗಿಟ್ಟಿಸಿಕೊಂಡು ಬಲಾಢ್ಯಳಾಗುವ ಆಕೆಯ ಹಿಂದಿನ ತಯಾರಿ ಮತ್ತು ಮುಂದಿನ ಯೋಚನೆ ಬಹುಶಃ ಯಾವ ಓದು ಬರಹ ಕಲಿತವರಿಗೂ ಕೂಡ ಆ ಕ್ಷಣಕ್ಕೆ ಹೊಳೆಯದಿರುವ ಸಂಗತಿ.ಇಂತಹ ಚಿಂತನೆಯನ್ನು ನಂಜಮ್ಮನ ಮಗನ ಮೂಲಕ, ಆತನನ್ನು ಮಂಗಮ್ಮನ ಮನೆಗೆ ಠಿಕಾಣಿ ಹೂಡಲು ಮಾಡುವ ತಂತ್ರವು ಈ ಕಥೆಯ ಜೀವಾಳ ಎಂದು ಓದುಗರಿಗೆ ನಿಧಾನವಾಗಿ ಅರ್ಥವಾಗುವಿಕೆಯೇ ಈ ಕಥೆಯ ಕಥಾತಂತ್ರದ ಸಂವಿಧಾನ. ಸಂಭಾಷಣೆ ತೀರ ಸಹಜವೆಂಬಂತೆ ನಿರೂಪಿತವಾಗುವ ಸಂಗತಿ ಕಥೆಯ ಸಂದರ್ಭಗಳನ್ನು ಮೆಲಕು ಹಾಕಿಸುತ್ತದೆ.

“ಮಾಸ್ತಿಯವರ ಎಲ್ಲಾ ಕೃತಿಗಳಲ್ಲಿ ಸರಳತೆಗೆ ಮೊದಲ ಆದ್ಯತೆ, ಸರಳತೆ ಮಾಸ್ತಿಯ ಕೃತಿಗಳ ಗುಣವೂ ಹೌದು; ದೋಷವು ಹೌದು!. ಸರಳತೆಯಿಂದ ಮಾಸ್ತಿಯವರ ಅನುಪಮವಾದ ಶಬ್ದ ಚಿತ್ರಗಳನ್ನು ಸೃಷ್ಟಿಸಿರುವುದುಂಟು. ಜಾಳಾದ ನಿರೂಪಣೆ ನೀಡಿರುವುದುಂಟು. ಆದರೆ ಸರಳವಾದ ಶೈಲಿಯಲ್ಲಿ ಮಾಸ್ತಿಯವರು ಸೋತಿರುವುದಕ್ಕಿಂತ ಗೆದ್ದಿರುವುದು ಹೆಚ್ಚು ಸಾಧಾರಣ ಮಾತುಗಳಿಂದ ಅಸಾಧಾರಣ ಚಿತ್ರ ನಿರ್ಮಿಸುವ ಕಲೆ ಮಾಸ್ತಿಯವರದು ಅವರ ಶೈಲಿ ಅವರಿಗೆ ವಿಶಿಷ್ಟವಾದುದು”.(ಸಾಲುದೀಪ)

ಹೀಗೆ ಮೊಸರಿನ ಮಂಗಮ್ಮ ನಮ್ಮೆಲ್ಲರ ಒಳಗೆ ಹೋಗಿ ಮತ್ತೆ ಮತ್ತೆ ಕಾಡುತ್ತಾಳೆ. ಎಲ್ಲರ ನೋವಿಗೆ ಜೊತೆಗೂಡುತ್ತಾಳೆ. ಕೆಲವರ ಮನೆಯ ದೋಸೆ ತೂತಾದರೆ ಇನ್ನೂ ಕೆಲವರ ಮನೆಯ ಒಲೆನೆ ತೂತಾಗಿರುವುದುಂಟು.ಇಂತಹ ವಾಸ್ತವಿಕ ಬದುಕಿನ ನೈಜ ಚಿತ್ರಣ ಮನೆಯ ಮಾತಾಗದೆ ಮನಸಿನ ದನಿಯಾಗಿ, ಜೊತೆಗೆ ಒಂಟಿ ಹೆಣ್ಣೊಬ್ಬಳು ಒಂಟಿಯಾಗಿ ಜೀವಿಸುತ್ತಿದ್ದಾಳೆ ಎಂದರೆ ಮುದಿನಾಯಿಗೂ ಕೂಡ ಬೆದೆ ಬರುವುದಕ್ಕೆ ಇಲ್ಲಿ ಚಿತ್ರಿತಗೊಂಡ ರಂಗಣ್ಣನಂತಹ ಪಾತ್ರವು ಸಮಕಾಲೀನ ಸನ್ನಿವೇಶಕ್ಕೂ ಕನ್ನಡಿಯಾಗುತ್ತದೆ. ಮಂಗಮ್ಮ ಅಥವಾ ‌ನಂಜಮ್ಮ, ರಂಗಣ್ಣನಂತವರು ಹಾಗೂ ತೆರೆಮರೆಯಲ್ಲಿ ಹೆಸರಿರದ ಹಾಲು ಹಾಕಿಸಿಕೊಳ್ಳುವ ಮನೆಯ ಯಾಜಮಾನಿ ಸಹ ಸಮಾಜದ ಕೆಲವು ಮುಖಗಳಷ್ಟೆ. ಅಂತಹ ಮುಖಗಳನ್ನು ಪಾತ್ರದೊಂದಿಗೆ ಸಂಕೇತಗಳನ್ನು ನೀಡುವುದರ ಮೂಲಕ ನಮಗೆ ಪರಿಚಯಿಸುತ್ತಾರೆ ಮಾಸ್ತಿಯವರು.

ವಾಣಿ ಭಂಡಾರಿ
ಶಿವಮೊಗ್ಗ

MORE NEWS

ಯಾರು ಅರಿಯದ ವೀರನ ತ್ಯಾಗ

31-10-2024 ಬೆಂಗಳೂರು

"ಮಲೆನಾಡಿನ ದಟ್ಟ ಕಾನನದ ನಡುವೆ ತುಂಗೆಯ ತಟದಲ್ಲಿ ಜನಿಸಿದ ಕುವೆಂಪುರವರು ಕುಪ್ಪಳ್ಳಿ ಎಂಬ ಊರಿನಿಂದ ಅಂತಾರಾಷ್ಟ್ರೀ...

ತಾಯ್ಮಾತಿನ ಶಿಕ್ಶಣ: ಎಲ್ಲಿತನಕ

26-10-2024 ಬೆಂಗಳೂರು

"ಸಣ್ಣ ಸಣ್ಣ ಬಾಶೆಗಳ ಮತ್ತು ಬುಡಕಟ್ಟು ಬಾಶೆಗಳ ಪಾಲಕರಲ್ಲಿ ಅವರ ಬಾಶೆಗಳೆ ಅವರನ್ನು ಹಿಂದಿಕ್ಕುತ್ತಿವೆ ಎಂಬುದು ಕಾ...

ಯಡ್ರಾಮಿ ಸಂತೆಯಲಿ ಕಂಡ ರೇಣುಕೆಯ ಮುಖ

25-10-2024 ಬೆಂಗಳೂರು

"ಆ ಮಧುರ ನೆನಪುಗಳು ನನ್ನೊಳಗೆ ನೂರು ತಾಜ್ ಮಹಲುಗಳನ್ನು ನಿರ್ಮಿಸಿವೆ. ನನ್ನೆದೆಯ ತಿದಿಯಲಿ ದೇಹಿ ಉಸಿರಿನ ದೀಪ ಮುಡ...