ಮಾಯಾಮೃಗವೆಲ್ಲಿ... ತೆರೆ - ಒಂಬತ್ತು

Date: 06-06-2021

Location: ಬೆಂಗಳೂರು


ಕನ್ನಡ ಚಿತ್ರರಂಗದಲ್ಲಿ ಸದಭಿರುಚಿ ಚಿತ್ರಗಳ ನಿರ್ದೇಶನದ ಮೂಲಕ ಪರಿಚಿತರಿರುವ ಪಿ.ಶೇಷಾದ್ರಿ ಅವರು ‘ಅಕ್ಕರದ ತೆರೆ’ ಅಂಕಣದಲ್ಲಿ ಮಾಯಾಮೃಗ ಧಾರವಾಹಿಯ ಶೀರ್ಷಿಕೆ ಗೀತೆ ರೂಪುಗೊಂಡ ಬಗೆಯನ್ನು ವಿವರಿಸಿದ್ದಾರೆ.

 

ಮಾಯಾಮೃಗ, ಮಾಯಾಮೃಗ, ಮಾಯಾಮೃಗವೆಲ್ಲಿ
ಶರವೇಗದಿ ಚಲಿಸುತ್ತಿದೆ ಮಾಯಮೃಗವೆಲ್ಲಿ

ಬಾಂದಳದಲಿ ಮೆರೆಯುತ್ತಿದೆ ಮಾಯಾಮೃಗ ಚರ್ಮ
ಏನಿರಬಹುದೋ ಕಾಣೆನು ಈ ಚೆಲುವಿನ ಮರ್ಮ

ಬಲು ದೂರದಿ ಹೊಳೆಯುತ್ತಿದೆ ಬಾನ್ನೀಲಿಯ ಕೆಳಗೆ
ಹೊಳೆಯುತ್ತಿವೆ ಕಣ್ಣಂತೂ ಬಿಡಿ ವಜ್ರದ ಹಾಗೆ

ಬಾನ್ನೀಲಿಯ ತಿವಿಯುತ್ತಿದೆ ಆ ಮೃಗಗಳ ಕೊಂಬು
ಜರತಾಯಿಯ ಹೊದಿಸಿದ ಮೈ ಈ ಮಾತನು ನಂಬು

ಮಾಯಾಮೃಗ, ಮಾಯಾಮೃಗ, ಮಾಯಾಮೃಗವೆಲ್ಲಿ
ಶರವೇಗದಿ ಚಲಿಸುತ್ತಿದೆ ಮಾಯಾಮೃಗವೆಲ್ಲಿ...

(ಡಾ.ಕೆ.ಎಸ್.ನರಸಿಂಹಸ್ವಾಮಿ)

ಈ ಹಾಡನ್ನು ಕೇಳದವರು ವಿರಳ.
ಸುಮಾರು ಇಪ್ಪತ್ತು ವರ್ಷಗಳ ಹಿಂದೆ ಬೆಂಗಳೂರು ದೂರದರ್ಶನದಲ್ಲಿ ಪ್ರಸಾರವಾಗುತ್ತಿದ್ದ ‘ಮಾಯಾಮೃಗ’ ಧಾರಾವಾಹಿಯ ಶೀರ್ಷಿಕೆ ಗೀತೆ ಇದು. ಇದನ್ನು ಬರೆದವರು ಮೈಸೂರು ಮಲ್ಲಿಗೆಯ ಪ್ರಖ್ಯಾತ ಕವಿ ಕೆ.ಎಸ್.ನರಸಿಂಹಸ್ವಾಮಿಯವರು. ಇದಕ್ಕೆ ಸಂಗೀತ ಸಂಯೋಜಿಸಿದ್ದವರು ಸಿ.ಅಶ್ವಥ್. ಈ ಇಬ್ಬರೂ ಇಂದು ನಮ್ಮ ಮಧ್ಯೆ ಇಲ್ಲ. ಆದರೆ ಅವರ ಸಾಹಿತ್ಯ ಮತ್ತು ಧ್ವನಿ ಮಾತ್ರ ಶಾಶ್ವತ.

ಮಾಯಾಮೃಗ ಧಾರಾವಾಹಿ ಪ್ರಾರಂಭವಾಗುವ ಕೆಲವು ವರ್ಷಗಳ ಮುಂಚೆ ಕೆ.ಎಸ್.ನರಸಿಂಹಸ್ವಾಮಿ ಅವರನ್ನು ಕುರಿತು ಒಂದು ಸಾಕ್ಷ್ಯಚಿತ್ರವನ್ನು ವಾರ್ತಾ ಇಲಾಖೆಗಾಗಿ ತಯಾರಿಸಿದ್ದೆವು. ಇದನ್ನು ನಿರ್ದೇಶಿಸಿದವರು ಟಿ.ಎನ್.ಸೀತಾರಾಮ್. ಅದರ ಸಾಹಿತ್ಯದ ಬರವಣಿಗೆ ನನ್ನದಾಗಿತ್ತು. ಜೊತೆಗೆ ನಿರ್ದೇಶನ ವಿಭಾಗದಲ್ಲೂ ಕೆಲಸ ಮಾಡಿದ್ದೆ. ಹಾಗಾಗಿ ಬೆಂಗಳೂರು ದಕ್ಷಿಣದ ಕತ್ರಿಗುಪ್ಪೆ ವಾಟರ್ ಟ್ಯಾಂಕ್‌ನ ಬಲಬದಿಗಿದ್ದ ನರಸಿಂಹಸ್ವಾಮಿಯವರ ಮನೆಗೆ ಹೋಗಿ ಬರುವ ಬಳಕೆ ಚನ್ನಾಗಿತ್ತು. ಮನೆಯಲ್ಲಿ ವೃದ್ಧರಿಬ್ಬರೇ. ಅವರ ಶ್ರೀಮತಿ ವೆಂಕಮ್ಮನವರು ಹೋದಾಗಲೆಲ್ಲ ಅದ್ಭುತವಾದ ಕಾಫಿ ಕೊಡುತ್ತಿದ್ದರು. ಬಂದವರ ಜೊತೆ ಮಾತೆಲ್ಲಾ ವೆಂಕಮ್ಮನವರದ್ದು, ಪದ್ಯದ ನಿಶ್ಯಬ್ದ ಧ್ಯಾನ ಮಾತ್ರ ನರಸಿಂಹಸ್ವಾಮಿಗಳದ್ದು!
ದೂರದರ್ಶನಕ್ಕಾಗಿ ದೈನಂದಿನ ಧಾರಾವಾಹಿಯನ್ನು ಮಾಡುವ ಯೋಜನೆ ರೂಪಿತವಾದಾಗ ನಾನು, ಸೀತಾರಾಮ್ ಮತ್ತು ನಾಗೇಂದ್ರ ಶಾ ಮತ್ತೆ ಜೊತೆಯಾದೆವು. ಈ ಹಿಂದೆ ‘ಕತೆಗಾರ’ ಧಾರಾವಾಹಿಯಲ್ಲಿ ಒಟ್ಟಿಗೇ ಕೆಲಸ ಮಾಡಿದ್ದರಿಂದ ನಮ್ಮ ನಡುವೆ ಹೊಂದಾಣಿಕೆ ಚನ್ನಾಗಿತ್ತು. ‘ಮಾಯಾಮೃಗ’ ಧಾರಾವಾಹಿಯ ಶೀರ್ಷಿಕೆ ಗೀತೆಯ ವಿಚಾರ ಬಂದಾಗ ಯಾರಿಂದ ಬರೆಸುವುದು ಎಂದು ಯೋಚಿಸಿ ಕೊನೆಗೆ ನರಸಿಂಹಸ್ವಾಮಿಯವರ ಕೈನಲ್ಲಿ ಏಕೆ ಬರೆಸಬಾರದು ಎಂದುಕೊಂಡೆವು. ಆದರೆ, ಅಷ್ಟು ದೊಡ್ಡ ಕವಿಯನ್ನು ಧಾರಾವಾಹಿಗೆ ಶೀರ್ಷಿಕೆ ಗೀತೆ ಬರೆದುಕೊಡಿ ಎಂದು ಕೇಳುವುದು ಹೇಗೆ? ಕೇಳಿದರೂ ಅವರು ಬರೆದುಕೊಡುತ್ತಾರೆಯೇ?

ಪದ್ಯವನ್ನು ತಮಗಿಷ್ಟ ಬಂದ ಸಮಯದಲ್ಲಿ, ಲಹರಿಯಲ್ಲಿ ಬರೆಯುವುದು ಕವಿಯ ಸ್ವಾತಂತ್ರ್ಯ. ಆದರೆ ಸಿನಿಮಾ ಅಥವಾ ಧಾರಾವಾಹಿಯ ವಿಚಾರ ಬಂದಾಗ ಸಾಮಾನ್ಯವಾಗಿ ಗೀತೆಯ ವಸ್ತುವನ್ನು ನಿರ್ದೇಶಕ ಸೂಚಿಸುತ್ತಾನೆ. ಅದರಂತೆ ಸಾಹಿತ್ಯ ರಚನೆಯಾಗುತ್ತದೆ. ತದನಂತರ ಅದಕ್ಕೆ ರಾಗ ಸಂಯೋಜನೆ ಮಾಡಲಾಗುತ್ತದೆ. ಇದು ರೂಢಿಯಲ್ಲಿದ್ದ ವಿಧಾನ. ಕೆಲವು ಅಪರೂಪದ ಸಂದರ್ಭಗಳಲ್ಲಿ ಈಗಾಗಲೇ ಬರೆದಿರುವ ಪದ್ಯಗಳಿಗೆ ರಾಗ ಸಂಯೋಜನೆ ಮಾಡಿ ಚಲನಚಿತ್ರಗಳಲ್ಲಿ ಬಳಸಿಕೊಂಡಿರುವ ಸನ್ನಿವೇಶಗಳು ಇಲ್ಲದಿಲ್ಲ. ಇದೇ ಅಂಕಣದಲ್ಲಿ ನಾನು, ನಾವು ಈ ಹಿಂದೆ ನಮ್ಮ ‘ಕತೆಗಾರ’ ಧಾರಾವಾಹಿಗೆ ಪು.ತಿ.ನರಸಿಂಹಾಚಾರ್ ಅವರ ‘ವೆತೆಗಳ ಕಳೆಯುವ ಕತೆಗಾರ...’ ಪದ್ಯವನ್ನು ಬಳಸಿಕೊಂಡ ಹಿನ್ನೆಲೆಯನ್ನು ಬರೆದಿದ್ದೇನೆ.

ವೆತೆಗಳ ಕಳೆಯುವ ಕತೆಗಾರ

ಚಲನಚಿತ್ರ ಕ್ಷೇತ್ರ ಈ ಹಿಂದೆ ಅನೇಕ ಸಲ ನರಸಿಂಹಸ್ವಾಮಿಯವರ ಕೆಲವು ಕವನಗಳನ್ನು ಸಿನಿಮಾಕ್ಕೆ ಬಳಸಿಕೊಂಡಿದ್ದಾರೆ. ಅವು ಅತ್ಯಂತ ಯಶಸ್ವಿಯಾಗಿವೆ ಕೂಡ. ಅಲ್ಲದೆ ಅವರ ಅನೇಕ ಭಾವಗೀತೆಗಳಿಗೆ ಮೈಸೂರು ಅನಂತಸ್ವಾಮಿ, ಅಶ್ವಥ್ ಮುಂತಾದವರು ರಾಗ ಸಂಯೋಜನೆ ಮಾಡಿ ಧ್ವನಿ ನೀಡಿ ಖ್ಯಾತಗೊಳಿಸಿದ್ದಾರೆ ಕೂಡ. ಆದರೆ ಕೆ.ಎಸ್.ನ. ನನಗೆ ತಿಳಿದಂತೆ ಎಂದೂ ಬೇರೆಯವರ ಸೂಚಿಸುವ ವಸ್ತುಗಳಿಗೆ ಪದಗಳನ್ನು ಜೋಡಿಸಿದ ಉದಾಹರಣೆ ಇಲ್ಲ.

ಆದರೆ ನಾವು ಈ ಹಿಂದೆ ಮಾಡಿದ್ದ ಸಾಕ್ಷ್ಯಚಿತ್ರದ ಮಾಡಿದ ಪರಿಚಯದ ಹಿನ್ನೆಲೆಯಲ್ಲಿ ಒಂದು ಮಾತು ಕೇಳಿಬಿಡೋಣ, ಅವರು ಆಗೋಲ್ಲ ಎಂದರೂ ಪರವಾಗಿಲ್ಲ ಎಂದುಕೊಂಡು ನಾನು ಟಿ.ಎನ್.ಸೀತಾರಾಮ್, ನಾಗೇಂದ್ರ ಶಾ ಅವರ ‘ಮೈಸೂರು ಮಲ್ಲಿಗೆ’ ಮನೆಗೆ ಹೋದೆವು. ಬಾಗಿಲು ತೆರೆದ ವೆಂಕಮ್ಮನವರು ಎಂದಿನ ಪರಿಚಯದಂತೆ ಕುಶಲೋಪರಿ ಮಾತಾಡಿ ನರಸಿಂಹಸ್ವಾಮಿಯವರನ್ನು ಕರೆಯಲು ಒಳಗೆ ಹೋದರು. ಕೆ.ಎಸ್.ನ. ಬಂದರು. ನಾನು ಕಂಡಂತೆ ಅವರು ಯಾವಾಗಲೂ ಒಂದು ಬಿಳಿ ಜುಬ್ಬಾ ಧರಿಸಿ, ಅಡ್ಡಪಂಚೆ ಉಡುತ್ತಿದ್ದರು. ಜುಬ್ಬದ ಜೇಬಿನಲ್ಲಿ ನಶ್ಯದ ಡಬ್ಬಿ ಇರುತ್ತಿತ್ತು. ಇನ್ನೊಂದು ಕೈಯಲ್ಲಿ ಮೂಗೊರೆಸಿಕೊಳ್ಳಲು ಸಣ್ಣ ಕರವಸ್ತ್ರ ಇರುತ್ತಿತ್ತು. ದಪ್ಪ ಗಾಜಿನ ಕನ್ನಡಕ ಹಿಂದೆ ಶೋಧಿಸುವ ಕಣ್ಣುಗಳು, ಜೊತೆಗೆ ಗಂಭೀರವದನ.

ಏನು ಬಂದದ್ದು?’ ಎಂದರು
ವೆಂಕಮ್ಮನವರೂ ಬಾಗಿಲ ಬಳಿಯೇ ನಿಂತು ನಮ್ಮ ಮಾತಿಗೆ ಕಿವಿಯಾದರು.
ನಾವು ಬಂದಿದ್ದ ಕಾರಣ ತಿಳಿಸಿದೆವು.
ನರಸಿಂಹಸ್ವಾಮಿಯವರು ಒಂದು ಕ್ಷಣವೂ ಯೋಚಿಸಲಿಲ್ಲ.
‘ನನ್ ಕೈಲಿ ಬರೆಯೋಕೆ ಆಗಲ್ಲಪ್ಪ’ ಎಂದುಬಿಟ್ಟರು.
ನಮಗೆ ನಿರಾಸೆಯಾಯಿತು. ಸುಮ್ಮನೇ ಕುಳಿತೆವು.
ವೆಂಕಮ್ಮನವರು ‘ಕಾಫಿ ತರತೀನಿ’ ಎಂದರು.
ನಾವು ಬೇಡ ಎಂದು ಪೆಚ್ಚಾಗಿ ಕುಳಿತೆವು. ನಮ್ಮ ನಿರಾಶೆಯನ್ನು ಕಂಡ ವೆಂಕಮ್ಮನವರು ನಿಧಾನವಾಗಿ ಹೇಳಿದರು. ‘ಪಾಪ, ಆ ಹುಡುಗ್ರು ಏನೋ ಕೇಳ್ತಿವೆ, ನಾಲ್ಕು ಸಾಲು ಬರೆದುಕೊಡಬಾರದೆ?’
ಪತ್ನಿಯ ಮಾತನ್ನು ಮೀರಿದ ಗಂಡಸು ಈ ಲೋಕದಲ್ಲುಂಟೆ?
ನರಸಿಂಹಸ್ವಾಮಿಯವರು ಸ್ವಲ್ಪ ಹೊತ್ತು ಸುಮ್ಮನಿದ್ದರು. ನಂತರ ನಿಧಾನವಾಗಿ, ‘ಏನು ನಿಮ್ಮ ಚಿತ್ರದ ಕತೆ?’ ಎಂದು ಕೇಳಿದರು.

ಇದೊಂದು ಮಧ್ಯಮವರ್ಗದ ಮೂರು ಹೆಣ್ಣುಮಕ್ಕಳ ಮನೆ ಮನೆಯ ಕತೆ. ಅವರ ಸಂಭ್ರಮ, ಸಂಕಟ, ತಲ್ಲಣಗಳನ್ನು ತೋರಿಸುವ ಸಾಂಸಾರಿಕ ಕುಟುಂಬದ ಸುತ್ತ ಕತೆ ಹೆಣೆದಿದ್ದೇವೆ. ಇದರ ಶೀರ್ಷಿಕೆ ‘ಮಾಯಾಮೃಗ’ ಎಂದು ಇಟ್ಟಿದ್ದೇವೆ ಎಂದೆವು.

‘ಮಾಯಾಮೃಗವೇ!?’ ಈಗ ನರಸಿಂಹಸ್ವಾಮಿಯವರ ಕಿವಿಗಳು ನೆಟ್ಟಗಾದವು.
‘ಹೌದು ಸಾರ್. ಮಾಯಾಮೃಗ ಅಂತ. ನಾವೆಲ್ಲರೂ ಬದುಕಿನಲ್ಲಿ ಈ ಮಾಯಾಮೃಗದ ಹಿಂದೇನೇ ಹೋಗತಿರತೀವಿ. ಆದ್ರೆ ಅಟ್ಟಿಸಿಕೊಂಡು ಹೋದ ಯಾರಿಗೂ ಮಾಯಾಮೃಗ ಯಾರಿಗೂ ಸಿಗೋದೇ ಇಲ್ಲ. ಅಕಸ್ಮಾತ್ ಸಿಕ್ಕರೂ ಆ ಚಿನ್ನದ ಜಿಂಕೆ ಮಾರೀಚನೆಂಬ ರಾಕ್ಷಸನಾಗಿರುತ್ತೆ... ಎಂದೆಲ್ಲ ಸ್ವಲ್ಪ ಹೆಚ್ಚೇ ಮಾತಾಡಿದೆವು.

‘ಪದ್ಯದಲ್ಲಿ ಎಷ್ಟು ಸಾಲು ಇರಬೇಕು?’
‘ಪಲ್ಲವಿ ಮತ್ತು ಎರಡು-ಮೂರು ಚರಣಗಳಿದ್ದರೆ ಸಾಕು ಸಾರ್.;
‘ಸರಿ..’
‘ಆದರೆ...’
‘ಏನು ಆದರೆ?’
‘ಮಾಯಾಮೃಗ ಅನ್ನೋ ಹೆಸರು ಯಾವುದಾದರೂ ಒಂದು ಸಾಲಿನಲ್ಲಿ ಮೂರು ಸಲವಾದರೂ ಬರಬೇಕು ಸಾರ್’

ಈಗ ನರಸಿಂಹಸ್ವಾಮಿಯವರು ನಮ್ಮತ್ತ ತೀಕ್ಷ್ಣವಾಗಿ ನೋಡಿದರು.
ಈ ಚಿಲ್ಟಾರಿಗಳು ನನ್ನಂತಹ ಕವಿಗೇ ನಿರ್ದೇಶನ ಮಾಡಲು ಹೊರಟಿದ್ದಾರಲ್ಲಾ ಅನ್ನುವಂತಿತ್ತು ಆ ನೋಟ. ನಮ್ಮ ಕಂಡೀಷನ್ ಕೇಳಿ ಅವರಿಗೆ ಏನನ್ನಿಸಿತೋ ಏನೋ, ನಿಧಾನವಾಗಿ ಹೇಳಿದರು.
‘ಅಲ್ಲಪ್ಪಾ, ನನ್ನ ಅಷ್ಟೊಂದು ಪದ್ಯಗಳಿವೆ, ಅದರಲ್ಲೇ ಯಾವುದಾದರೂ ಒಂದನ್ನ ಬಳಸಿಕೊಂಡರೆ ಆಗೋಲ್ವೆ?’
‘ನಿಮ್ಮ ಎಲ್ಲಾ ಪದ್ಯಗಳನ್ನೂ ಓದಿದ್ದೀವಿ. ಅದರಲ್ಲಿ ನಮಗೆ ಯಾವುದೂ ಗೊತ್ತಾಗಲಿಲ್ಲ ಸಾರ್. ನೀವೇ ಅದರ ಕೆಲವು ಸಾಲುಗಳನ್ನು ಇದಕ್ಕೆ ಹೊಂದಿಸಿಕೊಟ್ಟರೂ ಆಗುತ್ತೆ’

ನರಸಿಂಹಸ್ವಾಮಿಯವರು ಮಾತಾಡಲಿಲ್ಲ.

ಜುಬ್ಬದ ಜೇಬಿನಲ್ಲಿದ್ದ ನಶ್ಯದ ಡಬ್ಬಿಯಿಂದ ಒಂದು ಚಿಟಿಕೆ ನಶ್ಯ ತೆಗೆದು ಮೂಗಿಗೇರಿಸಿ, ಅದರ ಸ್ವಾದವನ್ನು ಅನುಭವಿಸಿ, ಕರವಸ್ತ್ರದಿಂದ ಮೂಗನ್ನು ಉಜ್ಜಿಕೊಂಡರು. ನಾವು ಕುಳಿತೇ ಇದ್ದೆವು. ನರಸಿಂಹಸ್ವಾಮಿಯವರು ಏನೋ ನೆನಪಿಸಿಕೊಂಡವರಂತೆ ಎದ್ದು ಒಳಗೆ ಹೋದರು. ನಾವು ವೆಂಕಮ್ಮನವರತ್ತ ನೋಡಿದೆವು. ಅವರು ನಮ್ಮತ್ತ ಎರಡು ಹೆಜ್ಜೆ ಹಾಕಿ ಬಂದು, ಮೆಲ್ಲನೆ, ‘ಬರೆದುಕೊಡ್ತಾರೆ ಬಿಡಿ’ ಎಂದು ಭರವಸೆಯ ಮಾತಾಡಿದರು.

‘ಅಲ್ಲಾ, ಸಾರ್ ಒಳಗೆ ಹೋದರಲ್ಲಾ, ಈಗಲೇ ಬರೆದುಕೊಡ್ತಾರಾ?’ ಎಂದು ಮಾಯಾಮೃಗ ಕೈಗೆ ಸಿಕ್ಕ ಆಶೆಯ ಮಾತಾಡಿದೆವು. ‘ಇರಿ, ಇರಿ’ ಎಂದು ಸಂಜ್ಞೆ ಮಾಡಿದ ವೆಂಕಮ್ಮನವರು ಒಳಗೆ ಕತ್ತು ಹಾಕಿ, ‘ಈ ಹುಡುಗ್ರು ಕಾಯೋದಾ?’ ಎಂದು ಕೇಳಿದರು.

‘ಬೇಡ, ಬೇಡ. ಒಂದೆರಡು ದಿನ ಬಿಟ್ಟು ಬರಲಿ’ ಎಂದು ಒಳಗಿನಿಂದ ಕೆ.ಎಸ್.ನ. ಹೇಳಿದರು. ವೆಂಕಮ್ಮ ನಮ್ಮ ಮುಖ ನೋಡಿದರು. ನಾವು ಎದ್ದು ನಿಂತು ಕೈ ಮುಗಿದೆವು. ‘ಕಾಫಿ ಕೊಡ್ಲಾ?’ ವೆಂಕಮ್ಮನವರು ಮತ್ತೊಮ್ಮೆ ಕೇಳಿದರು. ನಾವು ಬೇಡ ಎಂದು ಹೇಳಿ ಅಲ್ಲಿಂದ ಹೊರಬಿದ್ದೆವು.

ಮುಂದೇನಾಯಿತು?

ಇದನ್ನು ಹೇಳುವ ಮುಂಚೆ ನಿನ್ನೆ ತಾನೇ ‘ಮಾಯಾಮೃಗ’ ಧಾರಾವಾಹಿ ಭೂಮಿಕಾ ಟಾಕೀಸ್ ಹೆಸರಿನ ಯು ಟ್ಯೂಬ್ ಚಾನಲ್‌ನಲ್ಲಿ ಬಿಡುಗಡೆಯಾಗಿದೆ. ಧಾರಾವಾಹಿಯನ್ನು ನೋಡಿ, ಅದಕ್ಕೆ ಮುಂಚೆ ಬರುವ ಮಾಯಾಮೃಗದ ಶೀರ್ಷಿಕೆ ಗೀತೆಯನ್ನು ತಪ್ಪದೆ ಕೇಳಿ. ಗೊತ್ತು. ನೀವು ಕೇಳಿಯೇ ಕೇಳುತ್ತೀರಿ.


(ಸಶೇಷ)

 

MORE NEWS

ಕಲಬುರ್ಗಿ ಜಿಲ್ಲಾ ಪ್ರಥಮ ತತ್ವಪದ ಸಾಹಿತ್ಯ ಸಮ್ಮೇಳನ

24-04-2024 ಬೆಂಗಳೂರು

"ಕಡಕೋಳ ಮಠಾಧೀಶರು ಮತ್ತು ತತ್ವಪದಗಳ ಮಹಾ ಪೋಷಕರಾದ ಷ. ಬ್ರ. ಡಾ. ರುದ್ರಮುನಿ ಶಿವಾಚಾರ್ಯರು ಸಮ್ಮೇಳನದ ಸರ್ವಾಧ್ಯಕ...

ಸಂಶೋಧನೆಯಲ್ಲಿ ಆಕರಗಳ ಸಂಗ್ರಹ, ವಿಂಗಡಣೆ ಮತ್ತು ಪೂರ್ವಾಧ್ಯಯನ ಸಮೀಕ್ಷೆ

23-04-2024 ಬೆಂಗಳೂರು

"ಒಂದನ್ನು ಬಿಟ್ಟು ಇನ್ನೊಂದನ್ನು ಚಿಂತಿಸಲಾಗದು. ಅಲ್ಲದೆ; ಶೀರ್ಷಿಕೆ ಆಖೈರು ಮಾಡಿಕೊಳ್ಳುವುದಕ್ಕೆ ನಾವು ಅವಸರ ಮಾಡ...

ಪರಿಘಾಸನ ಮತ್ತು ಅರ್ಧ ಚಕ್ರಾಸನ 

16-04-2024 ಬೆಂಗಳೂರು

"ಪರಿಘಾಸನ ಆಸನವು ) ಪಿತ್ತ ಜನಕಾಂಗ ಮತ್ತು ಮೇದೋಜೀರಕ ಚೈತನ್ಯಗೊಳ್ಳುವಂತೆ ಮಾಡುತ್ತದೆ. ಹಾಗೆಯೇ ‘ಅರ್ಧ ಚಕ್...