ಮೆಲುಕು ಹಾಕಿದಷ್ಟೂ ಹೊಸ ರುಚಿ`ಬಿಂಗ್ ಲಾಂಗ್ ಮತ್ತು ಲಂಬನಾಗ್’


ವರ್ಷಗಳ ಹಿಂದೆ ಬರೆದ ಈ ಕೃಷಿಕಥನಗಳು ಬೇಗನೆ ಸುವಾಸನೆ ಕಳೆದುಕೊಳ್ಳುವಂಥದ್ದೇ ಅಲ್ಲ. ಮತ್ತು ಫಿಲಿಪ್ಪೈನ್ಸಿಗೆ ಹೋಗಿರುವಾಗ ಅಲ್ಲಿ ನಡೆಸಿದ ಪ್ರತ್ಯೇಕ ಅಧ್ಯಯನವೇ ಈ ಎಲ್ಲಾ ಬಿಡಿ ಲೇಖನಗಳಿಗೂ ಬಂಡವಾಳ. ಸಾಮಾನ್ಯವಾಗಿ ಇಂಥ ಲೇಖನ ಬರೆಯಹೊರಟವರು ಕಂಡುಕೊಳ್ಳುವ ಸುಲಭ ದಾರಿಯೊಂದಿದೆ. ಗೂಗಲ್ ಮಾವನಿಂದ ಎರವಲು ಪಡೆಯುವುದು, ಆದರೆ ಬಾಲು ಅಂಥ ಸುಲಭದ ದಾರಿ ಹಿಡಿದೇ ಇಲ್ಲ. ಇದರಲ್ಲಿರುವ ಎಲ್ಲ ಬರಹಗಳೂ ಅವರದೇ ಅಧ್ಯಯನಾಧಾರಿತ ಎನ್ನುತ್ತಾರೆ ಲೇಖಕ ಶ್ರೀಪಡ್ರೆ. ಅವರು ಲೇಖಕ ಬಾಲಚಂದ್ರ ಸಾಯಿಮನೆ ಅವರ ಬಿಂಗ್ ಲಾಲ್ ಮತ್ತು ಲಂಬನಾಗ್ ಕೃತಿಗೆ ಬರೆದ ಮುನ್ನುಡಿ ನಿಮ್ಮ ಓದಿಗಾಗಿ....

ಬಲಿತ ಕಾಯಿ ಬೇಗ ಹಣ್ಣಾಗುತ್ತದೆ. ಆದರೆ ಐಡಿಯಾಗಳು ಅದೆಷ್ಟೇ ಗಟ್ಟಿ ಇದ್ದರೂ ಕೆಲವೊಮ್ಮೆ ಮಾಗಿ ಎಲ್ಲರಿಗೂ ಸವಿಯಲು ಸಿಗಲು ಒಂದಷ್ಟು 'ಸಿಹಿ ಸಮಯ' ತೆಗೆದುಕೊಳ್ಳುವುದಿದೆ. ಈ ಕೃತಿ ಕಂಡಾಗ ನನಗನಿಸಿದ ಭಾವನೆಯೇ ಮೇಲಿನದು. ನನಗಿನ್ನೂ ನೆನಪಿದೆ. ಬಾಲು ಅವರ ಲೇಖನಕ್ಕೆ ಅಲ್ಪಸ್ವಲ್ಪ ಮೇಕಪ್ ಮಾಡಿ ಆದ ಮೇಲೆ ಹಲವು ಸಲ ಅವರಲ್ಲಿ ಹೇಳಿದ್ದಿದೆ. "ಇದೊಂದು ಪುಸ್ತಕವಾಗಿ ಬರಬೇಕು ಬಾಲು" ಅಂತ ಅದೇಕೋ ತುಂಬು ಮುಜುಗರದ ಈ ಗೆಳೆಯರು ಆ ಮಾತನ್ನು ಕೇಳಿಯೂ ಕೇಳದವರಂತೆಯೇ ಇದ್ದರು.ಈಗ ಪಾವನಾ ಪರಿಸರ ಟ್ರಸ್ಟ್ ಈ ಸಂಕಲನವನ್ನು ಹೊರತರುತ್ತಿರುವುದು ನನಗೆ ತುಂಬ ಸಂತಸ ತಂದಿದೆ.

ಸರಿಯಾಗಿ ಒಂದು ದಶಕದ ಹಿಂದೆ ನಾವು ಮೂವರು ಗೆಳೆಯರು ಶ್ರೀಲಂಕಾಕ್ಕೆ ಹೋಗಿದ್ದೆವು. ಹಲಸಿನ ಅಭಿವೃದ್ಧಿಯ ಬಗ್ಗೆ ಅಧ್ಯಯನ ನಡೆಸುವುದು ಉದ್ದೇಶವಾಗಿತ್ತು. ನಾನು, ಬಾಲು ಮತ್ತು ವಯನಾಡಿನ ಸುನೀಶ್. ಆ ಫಲಪ್ರದ ಪ್ರವಾಸದ ನೆನಪು ಮರೆಯಲು ಸಾಧ್ಯವೇ ಇಲ್ಲ.

ಬಾಲಚಂದ್ರ ಹೆಗಡೆ ಸಾಯಿಮನೆ ಅನ್ನೋ ಉದ್ದದ ಹೆಸರು ನಮಗೀಗ ಫಕ್ಕನೆ ನೆನಪಿಗೆ ಬರುವುದಿಲ್ಲ. ಗೆಳೆಯರೆಲ್ಲರಿಗೂ ಅವರು ಬಾಲುವೇ, ಬಾಲುವಿನೊಳಗೆ ಒಬ್ಬ ಉತ್ತಮ ಅಧ್ಯಯನಕಾರ ಇರುವುದು ನಮಗೆ ಮೊದಲೇ ಗೊತ್ತಾಗಿತ್ತು. ನೆನಪು ಸರಿಯಾದರೆ, ಅವರು ನಮ್ಮ ಆ ಪ್ರವಾಸದ ಹೊತ್ತಿಗೆ ಇಪ್ಪತ್ತಕ್ಕೂ ಹೆಚ್ಚು ದೇಶ ಕಂಡಿದ್ದರು. ಅಲ್ಲಿಂದ ಹತ್ತುಹಲವು ಹೊಸ ವಿಚಾರ ಹೊತ್ತು ತಂದಿದ್ದರು. ಆಮೇಲೆ ಎಷ್ಟು ದೇಶಗಳಿಗೆ ಹೋಗಿದ್ದಾರೋ, ನನಗೆ ಲೆಕ್ಕ ತಪ್ಪಿದೆ.

ವರ್ಷಗಳ ಹಿಂದೆ ಬರೆದ ಈ ಕೃಷಿಕಥನಗಳು ಬೇಗನೆ ಸುವಾಸನೆ ಕಳೆದುಕೊಳ್ಳುವಂಥದ್ದೇ ಅಲ್ಲ. ಮತ್ತು ಫಿಲಿಪ್ಪೈನ್ಸಿಗೆ ಹೋಗಿರುವಾಗ ಅಲ್ಲಿ ನಡೆಸಿದ ಪ್ರತ್ಯೇಕ ಅಧ್ಯಯನವೇ ಈ ಎಲ್ಲಾ ಬಿಡಿ ಲೇಖನಗಳಿಗೂ ಬಂಡವಾಳ. ಸಾಮಾನ್ಯವಾಗಿ ಇಂಥ ಲೇಖನ ಬರೆಯಹೊರಟವರು ಕಂಡುಕೊಳ್ಳುವ ಸುಲಭ ದಾರಿಯೊಂದಿದೆ. ಗೂಗಲ್ ಮಾವನಿಂದ ಎರವಲು ಪಡೆಯುವುದು, ಆದರೆ ಬಾಲು ಅಂಥ ಸುಲಭದ ದಾರಿ ಹಿಡಿದೇ ಇಲ್ಲ. ಇದರಲ್ಲಿರುವ ಎಲ್ಲ ಬರಹಗಳೂ ಅವರದೇ ಅಧ್ಯಯನಾಧಾರಿತ. ಆ ಕಾರಣಕ್ಕಾಗಿಯೇ ಇವೆಲ್ಲವೂ ಎಕ್ಸ್‌ಕ್ಲೂಸಿವ್‌ಗಳೇ.ಬಾಲು ಅವರಲ್ಲಿ ಯಾವುದೇ ವಿಷಯವನ್ನು ಆಳವಾಗಿ, ಕೃಷಿಕ ದೃಷ್ಟಿಕೋನದಿಂದ ನೋಡುವ ಸಾಮರ್ಥ್ಯ ಇದೆ. 'ಮನೆಮನೆಗಳಲ್ಲಿ ತೆಂತಾ ಎಣ್ಣೆ' ಎಂಬ ಫಿಲಿಪ್ಪೈನ್ಸಿನ ಈ ಲೇಖನ ಗಮನಿಸಿ:

"... ಆದರೆ ಹಿಂದಿನ ಮನೆಯವರ ಉತ್ಪಾದನೆ ನಿಂತಿರಲಿಲ್ಲ. ನಾನು ಹೋಗಿದ್ದು ಭಾನುವಾರ, ಎಲ್ಲೆಡೆ ರಜೆ, ನೆರೆಮನೆಯ ಕಾರ್, ಶೆಡ್ಡಿನಲ್ಲಿ ಇನ್ನೊಂದು ತಂತಾ ಘಟಕ. ಎಲದಿಯೊ ಅವರ ಎರಡೆಕರೆ ತೆಂಗಿನ ತೋಟ ನೋಡಿ ಬರುವಾಗ 'ಇವರೂ ತೆಂತಾ ತಯಾರಿಸುತ್ತಾರೆ' ಅಂತ ಕನಿಷ್ಠ ಎಂಟು ಮನೆಗಳನ್ನಾದರೂ ತೋರಿಸಿದರು. ಆಗಲೇ ಗೊತ್ತಾಗಿದ್ದು, ಈ ಕೈಗಾರಿಕೆ ಇಲ್ಲಿ ಎಷ್ಟು ವ್ಯಾಪಕ ಅಂತ. ಜತೆಜತೆಗೆ ಮನಸ್ಸಿನಲ್ಲಿ ಒಂದು ಪ್ರಶ್ನೆ. ಇಷ್ಟೆಲ್ಲ ಮಾರುಕಟ್ಟೆ ಇರುವಾಗಲೂ ಆ ದಲ್ಲಾಳಿ ಏಕೆ ಎರಡು ತಿಂಗಳಿಂದ ಬಂದಿಲ್ಲ. ಎಂಥಾ ವಿಪರ್ಯಾಸ ನೋಡಿ. ವೀಸೀಓ (ತೆಂತಾ ಎಣ್ಣೆ)ಗೆ ಹೊರಗೆ ಒಳ್ಳೆ ಮಾರುಕಟ್ಟೆ, ರಫ್ತು ಆವಕಾಶ – ಎಲ್ಲವೂ ಇವೆ. ಇಲ್ಲಿ, ದಲ್ಲಾಳಿಗಳ ಕಪಿಮುಷ್ಟಿ, ಚಿಕ್ಕಚಿಕ್ಕ ವೀಸೀಓ ಘಟಕಗಳ ಬಾಗಿಲು ಮುಚ್ಚಿಸುವಷ್ಟು ಶಕ್ತ."

ಫಿಲಿಪ್ಪೈನ್ಸ್ ಮತ್ತು ಎರಡು ಬಾರಿ ಚೀನಾ ಭೇಟಿಯ ಕತೆಗಳು ಇಲ್ಲಿವೆ. ಚೀನಾದಲ್ಲಿ ನಡೆಯುವ ಕೃಷಿಸಂಬಂಧಿ ವಿಚಾರಗಳು ಹೊರಜಗತ್ತಿಗೆ ತಿಳಿಯುವುದೇ ಇಲ್ಲ. ಏನಾದರೂ ವಿಷಯ ಹೊರಗೆ ಬಂದರೂ, ಅದು ಫಕ್ಕನೆ ವಾಸ್ತವವೋ ಅಲ್ಲವೋ ಗೊತ್ತಾಗುವುದೂ ಇಲ್ಲ ಎನ್ನಿ. ಅಲ್ಲಿ ಓಡಾಡಿ ಮಾಹಿತಿ ಸಂಗ್ರಹ ಮಾಡುವುದು ದೇಶದ ನಿಯಮಗಳು ಮತ್ತು ಭಾಷೆಯ ಕಾರಣದಿಂದ ತುಂಬ ಕಷ್ಟ ಅಂತಲ್ಲಿಂದಲೂ ಬಾಲು, ಈವರೆಗೆ ನಮ್ಮ ಕೃಷಿಕ ಸಮುದಾಯಕ್ಕೆ ತಿಳಿಯದ ಆದೆಷ್ಟೋ ಪ್ರೇರಕ ಮಾಹಿತಿ ಹಿಂಡಿಕೊಂಡು ಬಂದಿದ್ದಾರೆ.

ಉದಾಹರಣೆಗೆ ಅಡಿಕೆಯಿಂದ ಔಷಧ, ಅಡಿಕೆ ಮರದಿಂದ ಪೀಠೋಪಕರಣ ಮಾಡುವ ವಿಚಾರವನ್ನೇ ತೆಗೆದುಕೊಳ್ಳಿ. ಅವರು ಅಡಿಕೆ ಪ್ರಿಯರು ಸರಿ, ಆದರೆ ಅವರದನ್ನು ಮೆಲ್ಲುವ ರೀತಿ ನೋಡಿ, ಅಡಿಕೆ ತೀರಾ ಎಳೆಯದಿದ್ದಾಗ ಅದರ ಸಿಪ್ಪೆಯನ್ನೂ ಸೇರಿಸಿ ಬೇಯಿಸಿ ಏನೋ ಪಾಕ ಮಾಡಿಕೊಂಡು ಸವಿಯುತ್ತಾರೆ. ಮೇಲ್ನೋಟಕ್ಕೆ ನಮಗದು ಅಡಿಕೆ ಸಿಪ್ಪೆ ತಿನ್ನುವಂತೆಯೇ ಅನಿಸುತ್ತದೆ!.

ಚೀನಾ ಭೇಟಿಯಲ್ಲಿ ಸಾಕಷ್ಟು ಮಾಹಿತಿಗಳ ಮೂಟೆ ಹೊತ್ತು ಬರಬೇಕೆಂದು ತಿಂಗಳುಗಳಿಂದ ಪೂರ್ವತಯಾರಿ ಮಾಡಿದ್ದರು. ಶ್ಯಾವಿಗೆ ತುಂಡು ಚೆಲ್ಲಿದಂತೆ ಕಾಣುವ ಅಲ್ಲಿನ ಚಿತ್ರಲಿಪಿ ನಮಗೆ ಇನಿತೂ ಅರ್ಥವಾಗುವುದಿಲ್ಲ. ಆದರೆ ಬಾಲು ಅದನ್ನು ಸ್ವಲ್ಪಸ್ವಲ್ಪ ಅರ್ಥ ಮಾಡಿಕೊಳ್ಳಬಲ್ಲವರು. ಅವರಿಗೆ ಕೆಲವು ಚೀನಾದ ಗೆಳೆಯರ ಬಳಗವಿದೆ. ಹೋಗುವ ಮೊದಲೇ ಅವರೊಡನೆ ಮಿಂಚಂಚೆ ಮೂಲಕ ತನಗೆ ಬೇಕಾದ ಮಾಹಿತಿ ಏನು, ಎಲ್ಲಿಗೆ ಹೋಗಬೇಕು ಇತ್ಯಾದಿ ವಿವರಗಳನ್ನು ಸಂಗ್ರಹಿಸಿದ್ದಾರೆ.
ಇಷ್ಟೆಲ್ಲ ಮಾಡಿದರೂ ಕೆಲವೊಮ್ಮೆ ಭಾಷೆಯ ಕಾರಣದಿಂದ ಅಲ್ಲಿನ ಸಂಪನ್ಮೂಲ ವ್ಯಕ್ತಿಗಳೆದುರು ಪೂರ್ತಿ ಸೋತದ್ದಿದೆ. ಉದಾಹರಣೆಗೆ, ಒಂದು ಸಲ ಇವರ ಸಹಾಯಕ್ಕೆ ಬಂದ ಗೆಳತಿ ಎರಡು ದಿನಗಳ ನಂತರ ಮನೆಗೆ ಹೋಗಬೇಕಾಯಿತು. ಇವರ ಮಾಹಿತಿ ಸಂಗ್ರಹ ಇನ್ನೂ ಮುಗಿದಿರಲಿಲ್ಲ. "ನಾನು ಕೇಳಲಿರುವ ಪ್ರಶ್ನೆಗಳನ್ನೆಲ್ಲಾ ಇಂಗ್ಲಿಷಿನಲ್ಲಿ ಬರೆದುಕೊಟ್ಟು ಹೋಗಿ" ಎಂದು ಬಾಲು ಆ ಗೆಳತಿಯೊಡನೆ ಹೇಳಿ ಪ್ರಶ್ನೆಗಳ ಪಟ್ಟಿ ಮಾಡಿಸಿಕೊಂಡರು.

ಕೊನೆಗೂ ಆ ಪ್ರಶ್ನೆಗಳನ್ನೆಲ್ಲಾ ಒಯ್ದು ಸಂಪನ್ಮೂಲ ವ್ಯಕ್ತಿಯೆದುರು ಇಟ್ಟಾಗ ಈ ಇಂಗ್ಲಿಷ್ ಆತನಿಗೆ ಒಂದಿನಿತೂ ಅರ್ಥವೇ ಆಗಲಿಲ್ಲ!

ಚೀನಾದಲ್ಲಿ ಅಡಿಕೆಯನ್ನು ಹುಡುಹುಡುಕಿ ಕೊನೆಗೂ ಅದರ ಉದ್ದಿಮೆದಾರರನ್ನು ಭೇಟಿಯಾಗಿ ಸಾಕಷ್ಟು ವಿವರ - ಚಿತ್ರಗಳನ್ನು ಅವರು ಹೊತ್ತು ತಂದಿದ್ದಾರೆ. ಈ ಕೆಳಗಿನ ಝಲಕ್ ಓದಿ.

"ಎಲ್ಲೆಡೆ ಅಡಿಕೆ ಸಿಪ್ಪೆಪ್ರಿಯರಿಗಾಗಿ ಹುಡುಕುತ್ತಲೇ ಇದ್ದೆ. ಅದೆಷ್ಟೋ ಚೀನೀಯರನ್ನು ಕೇಳಿದೆ. ಕೊನೆಗೂ ಲಿನಾನ್ ಪಟ್ಟಣದಲ್ಲಿ ಹುಡುಕುತ್ತಿದ್ದಾಗ ಒಂದು ಅಂಗಡಿಯವ 'ಇದೆ' ಎನ್ನುತ್ತಾ ಒಂದು ಪ್ಯಾಕ್ ಎದುರೊಡ್ಡಿದ. ಅಲ್ಲಿನ ಭಾಷಾ ಸಮಸ್ಯೆ ಮತ್ತಿತರ ಅಡ್ಡಿ-ಆತಂಕಗಳ ನಡುವೆ ದೊಡ್ಡದೊಂದು ಯುದ್ಧ ಗೆದ್ದಷ್ಟು ಸಂಭ್ರಮವಾಯಿತು. ಬಿಚ್ಚಿ ನೋಡಿದೆ. ಅದರಲ್ಲಿದ್ದದ್ದು ಅಡಿಕೆಯಲ್ಲ ನಮ್ಮೂರಲ್ಲಿ ಕೊಳೆರೋಗದಿಂದಾಗಿ ತಾನಾಗಿಯೇ ಉದುರಿಬಿದ್ದ ಎಳೆ ಅಡಿಕೆಯನ್ನು ಬೇಯಿಸಿದ ಹಾಗಿತ್ತು. ಕಂದು ಬಣ್ಣದ ಲೇಪನವಿದ್ದ ಸಿಪ್ಪೆಗಳಲ್ಲಿ ತೊಟ್ಟಿನ ಅಂಶವೂ ಇತ್ತು. ಒಳಗಿನ ತಿರುಳು (ಅಡಿಕೆ) ತೀರಾ ಕಡಿಮೆ ಅಥವಾ ಇರಲೇ ಇಲ್ಲ. ಒಳತಿರುಳು ದ್ರವರೂಪದಿಂದ ಗಟ್ಟಿಗಟ್ಟುವ ಮುನ್ನವೇ ಇವರು ಸಂಸ್ಕರಣೆ ಮಾಡಿರುತ್ತಾರೆ. ಹಾಗಾಗಿ ಇವರು ಅಡಿಕೆಯ ಹೆಸರಿನಲ್ಲಿ ತಿನ್ನುವುದು ಹೆಚ್ಚುಕಮ್ಮಿ ಸಿಪ್ಪೆ ಮಾತ್ರ! ಮೂಸುವುದಕ್ಕೆ ಮುನ್ನವೇ ಹೊಗೆ ವಾಸನೆಯನ್ನೂ ಮೀರುವ ಘಾಟು.

"ನ್ಯೂಯಾರ್ಕ್ ಟೈಮ್ಸ್ ನಮ್ಮ ಕುತೂಹಲ ಕೆರಳಿಸಿದ್ದು, ಈ ಉತ್ಪನ್ನದ ಬಗ್ಗೆಯೇನು ಅನಿಸಿ ಪಿಚ್ಚೆನಿಸಿತು."

ಮೇಲಿನ ವಿವರಣೆಯನ್ನು ಓದಿದ ನಂತರ ಮೆಲುಕು ಹಾಕಿ, ಅಲ್ಲಿನ ವಿಷಯಸಂಗ್ರಹದ ಆತಂಕಗಳ ನಡುವೆಯೂ ಕಷ್ಟಪಟ್ಟು ಕಾಣಸಿಕ್ಕ ಅಡಿಕೆಯನ್ನು ಹೇಗೆ ಓದುಗರ ಕಣ್ಣಿಗೆ ಕಟ್ಟುವಂತೆ, ಒಂದು ವೇಳೆ ಪಟಗಳೇ ಇಲ್ಲದಿದ್ದರೂ ಅರ್ಥವಾಗುವಂತೆ ವಿವರಿಸಿದ್ದಾರೆ.

ಲೇಖಕರನ್ನು ಬಹುವಾಗಿ ಸೆಳೆದ ಫಿಲಿಪ್ಪೈನ್ಸಿನ 'ಟುಕ್ ಟುಕ್' ಬಗ್ಗೆ ಓದಿ. "ದೇಸೀ ಎಂದ ಮೇಲೆ ವೈವಿಧ್ಯ ಇದ್ದೇ ಇರುತ್ತದಲ್ಲವೇ? ಒಂದರಂತೆ ಇನ್ನೊಂದು ಇದ್ದಿದ್ದನ್ನು ನೋಡಿಯೇ ಇಲ್ಲ. ಅಷ್ಟು ವೈವಿಧ್ಯ! ಚಿತ್ರವಿಚಿತ್ರ ರೂಪಗಳು. ಯಮಹಾ, ಕವಾಸಕಿ, ಹೋಂಡಾ ಹೀಗೆ ಎಲ್ಲ ಕಂಪನಿಗಳ ಬೈಕ್‌ಗಳೂ ಅಲ್ಲಿ ಇವೆ. ಜೋಡಣೆಯಿಲ್ಲದ ಬರೀ ಬೈಕನ್ನು ನೋಡಿದ್ದೇ ಅಪರೂಪ. ಎಲ್ಲಕ್ಕೂ ಇಂಥ ಒಂದು ಪಕ್ಕದ ಗಾಡಿ!.

"ಬೈಕಿಗೆ ಇಡೀ ಗೂಡಂಗಡಿ ಜೋಡಿಸಿದ್ದನ್ನು ನೋಡಿದೆ. ಬೇಕೆಂದಾಗ, ಬೇಕಾದಲ್ಲಿ ನಿಲ್ಲಿಸಿ ವ್ಯಾಪಾರ. ತರಕಾರಿ ಮಾರುವವರು, ಹಳೆ ಕಬ್ಬಿಣ – ಪೇಪರ್ ಮಾರುವವರು, ಹೀಗೆ ಎಲ್ಲರದ್ದೂ ತಂತಮ್ಮ ಅಗತ್ಯಕ್ಕೆ ತಕ್ಕಂತೆ ಮಾರ್ಪಡಿಸಿದ ಟುಕ್ ಟುಕ್, ಸೈಕಲಿಗೆ ಕೂಡಾ ಈ ವ್ಯವಸ್ಥೆ ಮಾಡಿಕೊಂಡವರಿದ್ದಾರೆ. ಗಾಡಿಯಲ್ಲಿ ಮಗುವನ್ನು ಮಲಗಿಸಿಕೊಂಡು ಹೊಲಕ್ಕೆ ಸೈಕಲ್ ತುಳಿದುಕೊಂಡು ಹೋಗುವ ರೈತ ಮಹಿಳೆಯರೂ ಇದ್ದಾರೆ. ನನಗನಿಸುತ್ತದೆ, ಈ ಪಿನೋಯರಷ್ಟು ಬೈಕನ್ನು ಇಷ್ಟೊಂದು ಮಾರ್ಪಾಡು ಮಾಡಿ ಬೇರೆಬೇರೆ ಉದ್ದೇಶಗಳಿಗೆ ಜಗತ್ತಿನಲ್ಲೇ ಇನ್ನಾರೂ ಬಳಸಿರಲಾರರು. ಮೋಟಾರ್‌ಬೈಕಿನ ಗರಿಷ್ಠಸಾಧ್ಯ ಬಳಕೆಗೆ ಒಂದು ಪ್ರಶಸ್ತಿ ಇದ್ದರೆ ಅದು ನಿಸ್ಸಂಶಯವಾಗಿಯೂ ಇವರಿಗೆ ಸಲ್ಲಬೇಕು.

"ನಾಲ್ಕು ಹಂದಿ, ಎಂಟತ್ತು ಬಾಳೆ ದಿಂಡುಗಳು, ಸಾಲದ್ದಕ್ಕೆ ಮೂರು ಜನರನ್ನೂ ಹೊತ್ತು ಸಾಗುವ ಟುಕ್ ಟುಕ್ ನೋಡಸಿಕ್ಕಿತ್ತು. ಬೈಕಿನ ಮೇಲೆ ಮೂವರು, ಪಕ್ಕದ ಗಾಡಿಯಲ್ಲಿ ನಾಲ್ಕು ಜನರು 'ಸಲೀಸಾಗಿʼ ಕುಳಿತುಕೊಂಡು ಹೋಗುವುದಂತೂ ಇಲ್ಲಿ ಸಾಮಾನ್ಯ".
ಈ ʼಟುಕ್ ಟುಕ್' ಕೃಷಿಕಸ್ನೇಹಿ ಗಾಡಿ ಆಗಬಹುದೆಂದು ಬಾಲು ಶಿರಸಿಗೆ ಮರಳಿದ ಮೇಲೆ ಬೈಕಿಗೆ ಈ ಥರದ ಮಾರ್ಪಾಡು ಮಾಡಿಸಿಕೊಂಡು ತೋಟದಲ್ಲಿ ಬಳಸುತ್ತಿದ್ದರು.

'ಮಣ್ಣಿಗೆ ಮರಳಿದ ನೆಮ್ಮದಿ ವೀರರು' ಎಂಬ ಅಭ್ಯುದಯ ನುಡಿಚಿತ್ರದ ಕೆಳಗಿನ ಭಾಗ ಓದಿ ನೋಡಿ.
"ಹೂ ಶೂ ತಮ್ಮ ಅನುಭವನ್ನು ಹೇಳಿಕೊಳ್ಳುವುದು ಹೀಗೆ: “ಮೊದಲು ಹಣ ಇರಲಿಲ್ಲ. ಹಣ ಹುಡುಕಿ ಊರು ಬಿಟ್ಟು ಹೊರಟೆವು. ಹಣ ಮಾಡಿ ಹಿಂತಿರುಗಿ ಬಂದಾಗ ಊರಿಗೆ ಊರೇ ಖಾಲಿಯಾಗಿತ್ತು. ಖಾಲಿಯಾಗಿದ್ದು ಊರು ಮಾತ್ರ ಅಲ್ಲ. ಇಲ್ಲಿನ ಸಂಸ್ಕೃತಿ, ಸ್ಥಳೀಯ ಜ್ಞಾನ ಎಲ್ಲವೂ. ಈಗ ಆ ಅರಿವನ್ನು ಮೂಡಿಸುವುದು ಒಂದು ದೊಡ್ಡ ಚಾಲೆಂಜ್.

"ಹೂ ಶೂ ಮಾಡಿದ ಮೊದಲ ಕೆಲಸ ರಸ್ತೆ ಮಾಡಿದ್ದು. ತಮ್ಮ ಸ್ವಂತ ಖರ್ಚಿನಲ್ಲಿ ಊರಿನ ರಸ್ತೆ ಅಭಿವೃದ್ಧಿ ಪಡಿಸಿದರು. ನಂತರ ಸರಕಾರದ ಸಹಾಯವೂ ದೊರೆತಿತು. ಇಡೀ ಊರಿಗೆ ಈಗ ಸಿಮೆಂಟ್ ರಸ್ತೆ ನಿರ್ಮಾಣವಾಗಿದೆ.

ಊರಿನಲ್ಲೊಂದು ಅತಿಥಿಗೃಹ ಕಟ್ಟಿದ್ದಾರೆ. ಊರಿಗೆ ಯಾರೇ ಅತಿಥಿಗಳು ಬಂದರೂ ಅಲ್ಲಿ ಉಳಿದು ಹಳ್ಳಿಯ, ಮರೆತು ಹೋದ ಹಳ್ಳಿಯ ಬದುಕಿನ ನೆನಪ ಮಾಡಿಕೊಳ್ಳಬಹುದು. ಅಲ್ಲಿ ಇದ್ದಷ್ಟೂ ಕಾಲ ನಾನು ಉಳಕೊಂಡಿದ್ದು ಈ 'ಹಳ್ಳಿ ಮರುದರ್ಶನ ಗೃಹ'ದಲ್ಲೇ!".

ಅವರಿವರು ʼಹೇಳಿದ್ದಷ್ಟನ್ನೇ' ಬರೆದುಕೊಂಡು ಪ್ರಕಟಿಸುವುದೇ ಪತ್ರಿಕೋದ್ಯಮ ಎಂದು ಹಲವರು ನಂಬಿ ಅದನ್ನೇ ಆಚರಿಸುವ ಕಾಲಘಟ್ಟವಿದು. ಇದಕ್ಕೆ ತುಂಬ ವ್ಯತಿರಿಕ್ತವಾಗಿ ಬಾಲು ಅವರ ಪ್ರತಿ ಬರಹಗಳಲ್ಲೂ ಅಂತರ್ ದೃಷ್ಟಿ ಇದ್ದೇ ಇರುತ್ತದೆ. ಈ ಕಾರಣದಿಂದಲೇ ಇವು ಓದುಗರಿಗೆ ತುಂಬ ಹೊಸ ಅನುಭವ, ಪ್ರೇರಣೆಗಳನ್ನು ಕೊಡಲು ಸಾಧ್ಯವಾಗುತ್ತದೆ. ಅಲ್ಲಲ್ಲಿ ಇಣುಕುವ ನವಿರಾದ ಹಾಸ್ಯ, ತನ್ನ ಸೋಲನ್ನೂ ವಿವರಿಸುವ, ತಮ್ಮನ್ನೂ ವಿಮರ್ಶೆಗೆ ಒಡ್ಡಿಕೊಂಡು ಹೃದಯದ ಮಾತು ಹೇಳುವ ಇವರ ಶೈಲಿ ಅನನ್ಯವೇ.

ಮೇಲಿನ ಕಾರಣಗಳಿಗಾಗಿ ಪತ್ರಿಕೋದ್ಯಮ ವಿದ್ಯಾರ್ಥಿಗಳಿಗೂ ಈ ಪುಸ್ತಕ ತುಂಬ ಉಪಯುಕ್ತವಾಗಬಲ್ಲುದು. ಬಹುಶಃ ಹೋಗಿ ಬಂದ ಹೊಸತರಲ್ಲೇ ಬಾಲು ಅವರ ಈ ಕೃಷಿಕಥನಗಳು ಪುಸ್ತಕ ರೂಪದಲ್ಲಿ ಪ್ರಕಟವಾಗಿದ್ದರೆ ಇನ್ನೂ ಚೆನ್ನಾಗುತ್ತಿತ್ತು. ಅವರ ಜತೆಗೇ ತಾನು ಈ ಶಬ್ದಚಿತ್ರಗಳನ್ನು ಬರೆಯಲು ಮಾಡಿದ ತಯಾರಿ, ಅದರಲ್ಲಿ ಅವರು ಪಡೆದ ಸೋಲು-ಗೆಲುವುಗಳ ಇನ್ನೊಂದು ಪುಸ್ತಿಕೆಯೂ ಬಂದಿದ್ದರೆ ಅದು ಪತ್ರಿಕೋದ್ಯಮ ಪ್ರಪಂಚಕ್ಕೆ ಇನ್ನೊಂದು ಅನನ್ಯ ಕೊಡುಗೆ ಆಗುತ್ತಿತ್ತು.

ಅಡಿಕೆ ಪತ್ರಿಕೆಯ ನೆರಳಲ್ಲಿ ಬೆಳೆದ ಪತ್ರಕರ್ತರು ಕೆಲವರಿದ್ದಾರೆ. ಅದರಲ್ಲಿ ಆಯ್ದ ಕೆಲವರ ಬರಹಗಳ ʼಮೇಕಪ್ʼ ಮಾಡುವುದೂ ಬಹಳ ಖುಷಿಯ ಕೆಲಸ. ಇಂಥ ಸಮರ್ಥರಲ್ಲಿ ಬಾಲು ಅವರು ಮುಂಚೂಣಿಯವರು.

ಬಾಲು ನನ್ನ ಆತ್ಮೀಯ ಮಿತ್ರ. ಈ ಬರಹಗಳೆಲ್ಲವೂ ಅಡಿಕೆ ಪತ್ರಿಕೆಯಲ್ಲಿ ಪ್ರಕಟವಾದವು, ಹೀಗಾಗಿ ಇನ್ನಷ್ಟು ಬರೆದು 'ಹೆತ್ತವರಿಗೆ... ಮುದ್ದು' ಎಂಬ ಟೀಕೆಗೆ ಗುರಿಯಾಗುವ ಬದಲು ಇಲ್ಲೇ ನಿಲ್ಲಿಸುತ್ತೇನೆ.

ಇಷ್ಟು ಮಾತ್ರ ಹೇಳಬಲ್ಲೆ: ಬರೇ ಓದುವುದರ ಬದಲು ಓದಿ ಮನಸ್ಸಿಗೆ ತೆಗೆದುಕೊಳ್ಳುವಷ್ಟು ವ್ಯವಧಾನ ಇರುವಾಗ ಈ ಪುಸ್ತಕ ಸವಿಯಿರಿ. ಮೆಲುಕು ಹಾಕಿದಷ್ಟೂ ಹೊಸ ರುಚಿ ಕೊಡುವ ಅಪೂರ್ವ ಕೃತಿಯಿದು.

ಶ್ರೀ ಪಡ್ರೆಯವರ ಲೇಖಕ ಪರಿಚಯಕ್ಕಾಗಿ ಇಲ್ಲಿ ಕ್ಲಿಕ್ಕಿಸಿ..

MORE FEATURES

ಸಾಮಾನ್ಯರ ಹಲವು ಪ್ರಶ್ನೆಗಳಿಗೆ ಇದರಲ್ಲಿ ಉತ್ತರವಿದೆ

25-04-2024 ಬೆಂಗಳೂರು

"ಓದುವ ಗುಣವನ್ನು ಕಳೆದುಕೊಂಡಿರುವ ನಮ್ಮ ನಾಗರಿಕರು ನಿಜಾರ್ಥದಲ್ಲಿ ಸತ್ಯ ಬೇಕಾದರೆ ಈ ಪುಸ್ತಕವನ್ನು ಓದಬೇಕು. ಮುಂದ...

ಬೆಟ್ಟ ಹತ್ತುವುದೆಂದರೆ ಕೇವಲ ಚಾರಣವಲ್ಲ, ಅದೊಂದು ಬದುಕಿನ ಪಯಣ

25-04-2024 ಬೆಂಗಳೂರು

"ಬೆಟ್ಟ ಹತ್ತುವುದೆಂದರೆ ಕೇವಲ ಚಾರಣವಲ್ಲ. ಅದೊಂದು ಬದುಕಿನ ಪಯಣ. ಪ್ರತಿ ಕ್ಷಣ ಎದಿರಾಗುವ ಅಪಾಯಗಳನ್ನು ಸಲೀಸಾಗಿ ಗ...

ನನ್ನ ಪತಿಯ ಪ್ರೋತ್ಸಾಹದಿಂದ ನನಗೆ ಬರೆಯುವ ಗೀಳು ಬಂತು

25-04-2024 ಬೆಂಗಳೂರು

‘ನನ್ನ ಪತಿಯ ಪ್ರೋತ್ಸಾಹದಿಂದ ನನಗೆ ಬರೆಯುವ ಗೀಳು ಬಂತು. ಹಾಗಾಗಿ, ಕೆಲವೊಂದು ಪುಸ್ತಕಗಳನ್ನು ಬರೆದಿದ್ದೇನೆ. 202...