ಮೂಲ ಸ್ವರೂಪದಿಂದ ವಿಮುಖವಾಯಿತೇ ಯಕ್ಷಗಾನ?

Date: 25-11-2021

Location: ಬೆಂಗಳೂರು


‘ರಂಗದ ಮೇಲೆ ಗಂಧರ್ವ ಲೋಕವನ್ನು ಸೃಷ್ಟಿಸಿ ಕಲ್ಪನಾ ಪದರುಗಳನ್ನು ಒಂದೊಂದಾಗಿ ಸೃಜಿಸಲು ತಾಕತ್ತಿರುವ ಕಲೆ ಯಕ್ಷಗಾನ. ಭಾವ ಶಕ್ತಿಯ ವಿಸ್ತಾರ ಮತ್ತು ಆಳಕ್ಕೆ ಸಾಥ್ ನೀಡುವ ಜಗತ್ತೊಂದರ ನಿರ್ಮಾಣವನ್ನು ಯಕ್ಷಗಾನವು ಕಟ್ಟಿಕೊಡುತ್ತದೆ’ ಎನ್ನುತ್ತಾರೆ ಲೇಖಕ ಸಂತೋಷ್ ಅನಂತಪುರ.  ಅವರು ತಮ್ಮ ‘ಅನಂತಯಾನ’ ಅಂಕಣದಲ್ಲಿ ಯಕ್ಷಗಾನ ಮತ್ತು ಅದರೊಂದಿಗಿನ ಬಾಲ್ಯದ ಸೆಳೆತದ ಜೊತೆ ಸದ್ಯದ ಸ್ವರೂಪಗಳ ಬಗ್ಗೆ ಚರ್ಚಿಸಿದ್ದಾರೆ.  

ದೊಂದಿ, ಪೆಟ್ರೋಮ್ಯಾಕ್ಸಿನ ಬೆಳಕಲ್ಲಿ ಮಿಂದ ರಂಗಸ್ಥಳದ ಮೇಲೆ ಮಿಂಚುವ ಪಾತ್ರಗಳನ್ನು ಬಾಲ್ಯದಲ್ಲಿ ಕಣ್ ಬಾಯಿ ಬಿಟ್ಟು ನೋಡಿ ಆಸ್ವಾದಿಸಿದ್ದೆ. ಅಕ್ಕಪಕ್ಕದ ಊರಲ್ಲಿ ಯಕ್ಷಗಾನ ಬಯಲಾಟ ಇತ್ತೆಂದರೆ ರಾತ್ರಿಯ ಊಟವನ್ನು ಬೇಗನೆ ಮುಗಿಸಿ ನನ್ನನ್ನು ಕರೆದುಕೊಂಡು ಹೋಗಲು ಬರುವ ಮನೆಯಾಳು 'ಕಮಲಾ-ಕು೦ಞಮ್ಮಾರ್' ರಿಗಾಗಿ ಅಮ್ಮನ ಮಡಿಲಲ್ಲಿ ಕುಳಿತು ಕಾಯುತ್ತಿರುತ್ತಿದ್ದೆ. ಮಂದ ಬೆಳಕಿನ ಟಾರ್ಚ್ ಲೈಟ್ ಅಂಗಳವನ್ನು ಮುತ್ತಿಕ್ಕಲು-"ಕು೦ಞ.."ಎನ್ನುವ ಶಬ್ದ ಕಿವಿಗೆ ಬಡಿದದ್ದೇ ಅಪ್ಪ-ಅಮ್ಮನೊಂದಿಗೆ ಉಯ್ಯಾಲೆಯಲ್ಲಿ ಕುಳಿತಿರುತ್ತಿದ್ದ ನಾನು ಛಕ್ಕನೆದ್ದು, 'ಕಮಲಾ-ಕು೦ಞಮ್ಮಾ' ಎಂದು  ಕೂಗುತ್ತಾ ಅಂಗಳದ ಮೆಟ್ಟಿಲನ್ನು ತುಳಿದು ಬಿಡುತ್ತಿದ್ದೆ. ಹಾಗೊಂದಿಷ್ಟು ಯಕ್ಷಗಾನ ಬಯಲಾಟಗಳನ್ನು 'ಕಮಲಾ-ಕು೦ಞಮ್ಮಾರ್'ರ ಮಡಿಲಲ್ಲಿ ಕುಳಿತು ಎಳವೆಯಲ್ಲಿ ನೋಡಿ ಖುಷಿಪಟ್ಟಿದ್ದೇನೆ. ಬೆಳೆದಂತೆ ಜಾತ್ರೆ-ಮಹೋತ್ಸವಗಳಲ್ಲಿ ನಿದ್ದೆಗೆಟ್ಟು ಬಯಲಾಟಗಳನ್ನು ಸವಿದಿದ್ದೇನೆ. ಬಲಿತು ಮಾಗಿದಂತೆ ತಾಳಮದ್ದಳೆಯ ಕ್ಯಾಸ್ಸೆಟ್ ಗಳಿಗೆಂದು ದೊಡ್ಡಪ್ಪನಿಗಾಗಿ ವಾರಾಂತ್ಯದಲ್ಲಿ ಕಾಯುತ್ತಲಿದ್ದೆ. 

ಕ್ಯಾಸೆಟ್ಟುಗಳ ಮೂಲಕ ಮತ್ತು ದೊಡ್ಡಪ್ಪ-ಅಪ್ಪಂದಿರ ಮಾತುಕತೆಯಲ್ಲಿ ಹೊರಳಿಕೊಂಡ ಹೆಸರುಗಳನ್ನು ಕೇಳಿ ಪರಿಚಿತಗೊಂಡವರು-ಶೇಣಿ-ಸಾಮಗ, ಪೆರ್ಲ-ಕುಂಬ್ಳೆ-ಜೋಶಿ, ಈಶ್ವರ ಭಟ್, ಕೆ. ಗೋವಿಂದ ಭಟ್, ಪಾತಾಳ ವೆಂಕಟರಮಣ, ಅಳಿಕೆ ರಾಮಯ್ಯ ರೈ, ಚಂದ್ರಗಿರಿ ಅಂಬು, ಬಣ್ಣದ ಮಾಲಿಂಗ, ಸಂಪಾಜೆ ಶೀನಪ್ಪ ರೈ, ಕೆರೆಮನೆ ಶಿವರಾಮ ಹೆಗಡೆ, ಮಹಾಬಲ ಹೆಗಡೆ, ಶಂಭು ಹೆಗಡೆ, ಗಜಾನನ ಹೆಗಡೆ, ಚಿಟ್ಟಾಣಿ, ಮಂಟಪ, ಗೋಡೆ, ಯಾಜಿ, ಜಲವಳ್ಳಿ, ಕಣ್ಣಿಮನೆ, ಕೊಂಡದಕುಳಿ  ಮುಂತಾದ ಹಿರಿಯ ಕಲಾ ಚೇತನರ ಜೊತೆಗೆ ಬಲಿಪ, ನಾವುಡ, ಉಪ್ಪೂರ, ಕಡತೋಕ, ಮಂಡೆಚ್ಚ, ಹೊಸ್ತೋಟ, ಪದ್ಯಾಣ, ಹೊಳ್ಳರ ಅದ್ಭುತ ಕಂಠ ಸಿರಿಯ ಕೇಳ್ಮೆಯೂ  ನನ್ನದಾಗಿತ್ತು.  'ಯಕ್ಷಗಾನ' ಕ್ಕಾಗಿಯೇ  ದೊಡ್ಡಪ್ಪ ಈಶ್ವರಯ್ಯ 'ಉದಯವಾಣಿ'ಯಲ್ಲಿ ಪುಟವನ್ನು ಮೀಸಲಿಟ್ಟು ಕಲಾವಿದರನ್ನು, ವಿಮರ್ಶಕರನ್ನು ಪ್ರೋತ್ಸಾಹಿಸಿದ್ದರಲ್ಲದೆ ಯಕ್ಷಲೋಕವನ್ನು ಸಮರ್ಥವಾಗಿ ವಿಮರ್ಶಿಸಿ ಮುನ್ನಡೆಸಿಯೂ ಇದ್ದರು. ಮುಂದುವರಿದು ವಿಮರ್ಶಕ-ಕಲಾವಿದರ ನಡುವೊಂದು ಆಪ್ತ ಸೇತುವನ್ನೂ ನಿರ್ಮಿಸಿಕೊಟ್ಟರು. ಪರಿಣಾಮ ಅಲ್ಲಿಯವರೆಗೆ ಆಡು ಮಾತಿನಲ್ಲಿ ಕೇಳಿ ಬರುತ್ತಿದ್ದ ಯಕ್ಷದಿಗ್ಗಜರ ಹೆಸರುಗಳು ಪತ್ರಿಕೆಯಲ್ಲಿ ಮಿನುಗಿ ಪ್ರಾಮುಖ್ಯತೆಯನ್ನು ಪಡೆಯ ತೊಡಗಿತು. ಸಮಾಜ ಕಾಣದ, ಮಂದಿ ಅರಿಯದ ಅದೆಷ್ಟೋ ಯಕ್ಷಕಲಾವಿದ-ವಿಮರ್ಶಕರು ಮುನ್ನೆಲೆಗೆ ಬಂದು ಬೆಳಗಿದರು. ಅಂತಹ ಅದೆಷ್ಟೋ ಮಂದಿಯನ್ನು ದೊಡ್ಡಪ್ಪ ಪ್ರೋತ್ಸಾಹಿಸಿ ಬೆಳೆಸಿಯೂ ಇದ್ದರು. ಆ ನಿಟ್ಟಿನಲ್ಲಿ ಯಕ್ಷಗಾನಕ್ಕೆ 'ಉದಯವಾಣಿ'ಯ ಕೊಡುಗೆ  ಸರ್ವತ್ರ ಶ್ಲಾಘನೀಯ. 

ಅಷ್ಟಕ್ಕೂ ಯಕ್ಷಗಾನದ ಮೇಲಿನ ನನ್ನೊಲವು ರಕ್ತಗತವಾದದ್ದು. ನನ್ನಜ್ಜನಿಗೆ ಹಿರಿಯ ಬಲಿಪರು ಭಾಗವತಿಕೆ ಹೇಳಿಕೊಡಲು ಮನೆಗೇ ಬರುತ್ತಿದ್ದರು. ಹಾಗೆ ಬಂದವರ  ವಾಸ್ತವ್ಯವು  ತಿಂಗಳುಗಳ ಕಾಲ ನಮ್ಮಲ್ಲಿಯೇ. ಅಷ್ಟೇ ಯಾಕೆ ನನ್ನ ಪಿಜ್ಜನಿಂದ ಸ್ಥಾಪಿಸಲ್ಪಟ್ಟ  'ಕುತ್ಯಾಳ ಶ್ರೀ ಗೋಪಾಲಕೃಷ್ಣ ಯಕ್ಷಗಾನ ಸಭಾ (ರಿ) (ಕೂಡ್ಲು ಮೇಳ)ವೂ ಇತ್ತು. ಜೊತೆಗೆ ನಾ ಬೆಳೆದ ಪರಿಸರವೂ ಕಲೆ-ಸಾಹಿತ್ಯ-ಸಂಗೀತ-ಯಕ್ಷಗಾನಕ್ಕೆ ಪೂರಕವಾಗಿಯೂ ಇತ್ತೆನ್ನಿ. ಹೀಗೆಲ್ಲಾ ಇರಲು-ಒಬ್ಬ ಯಕ್ಷಗಾನ ಕಲಾಸ್ವಾದಕನಾಗಿ ಯಕ್ಷಲೋಕದೊಳಗೊಂದು ಸಣ್ಣ ಕುಣಿತ-ಧೀಂಗಿಣಗಳನ್ನು ಅಕ್ಷರರೂಪಿ ಇಲ್ಲಿ ಹಾಕಿರುವೆನಷ್ಟೇ.

ರಂಗದ ಮೇಲೆ ಗಂಧರ್ವ ಲೋಕವನ್ನು ಸೃಷ್ಟಿಸಿ ಕಲ್ಪನಾ ಪದರುಗಳನ್ನು ಒಂದೊಂದಾಗಿ ಸೃಜಿಸಲು ತಾಕತ್ತಿರುವ ಕಲೆ ಯಕ್ಷಗಾನ. ಭಾವ ಶಕ್ತಿಯ ವಿಸ್ತಾರ ಮತ್ತು ಆಳಕ್ಕೆ ಸಾಥ್ ನೀಡುವ ಜಗತ್ತೊಂದರ ನಿರ್ಮಾಣವನ್ನು ಯಕ್ಷಗಾನವು  ಕಟ್ಟಿಕೊಡುತ್ತದೆ. ಅಂತಹ ಸನ್ನಿವೇಶಗಳಲ್ಲಿ ಭಾವಯಾನಕ್ಕೆ ಕಲ್ಪನೆಗಳು ತಯಾರಾಗಿ ನಿಂತು ಬಿಟ್ಟಿರುತ್ತವೆ. 

ನೃತ್ಯ, ಹಾಡುಗಾರಿಕೆ, ಮಾತುಗಾರಿಕೆ, ವೇಷ-ಭೂಷಣಗಳನ್ನೊಳಗೊಂಡ ಶಾಸ್ತ್ರೀಯ ಜನಪದ ಕಲೆ ಯಕ್ಷಗಾನ. ಕರ್ನಾಟಕದ ಕರಾವಳಿಯುದ್ದಕ್ಕೂ ಬಣ್ಣ ಹೊದ್ದು ಮಲಗಿ ಸೊಬಗನ್ನೇ ಚೆಲ್ಲುವ ಯಕ್ಷಗಾನವು ಸಮ್ಮಿಶ್ರ ಕಲೆಯೂ ಹೌದು. ಕಾರಣ ಇದರಲ್ಲಿ ಸಂಗೀತ, ಸಾಹಿತ್ಯ, ನೃತ್ಯ ಮತ್ತು ಚಿತ್ರ ಎಂಬ ಪ್ರಮುಖ ನಾಲ್ಕು ಕಲಾ ಪ್ರಕಾರಗಳ  ಔಚಿತ್ಯಪೂರ್ಣವಾದ ಸಾಮರಸ್ಯವಿದೆ. ಪ್ರದರ್ಶನಕ್ಕೆ ಸಂಬಂಧಿಸಿದಂತೆ ಇದರಲ್ಲಿ ಎರಡು ಭಾಗಗಳು-ಪೂರ್ವರಂಗ ಅಥವಾ ಸಭಾಲಕ್ಷಣ. ಎರಡನೇಯದ್ದು ಆರಿಸಿಕೊಂಡ ಕಥಾಭಾಗ. ತೆಂಕು-ಬಡಗು ಎಂಬೆರಡು ತಿಟ್ಟುಗಳು. ಪ್ರಸಂಗ-ಪಾತ್ರಧಾರಿ-ವೇಷಭೂಷಣ-ಭಾಗವತಿಕೆ-ಮಾತುಗಾರಿಕೆ ಎಂಬ ಪಂಚದ್ರವ್ಯಗಳಿಂದ ಕೂಡಿದ ರಸವತ್ತಾದ ರುಚಿಗವಳ ಯಕ್ಷಗಾನದ ಪ್ರಧಾನ ತಿರುಳು. 

ಪ್ರಾಜ್ಞರು ಹೇಳುವಂತೆ ಸಾವಿರ ವರ್ಷಗಳ ಇತಿಹಾಸವಿರುವ ಕಲೆ ಯಕ್ಷಗಾನ. ಪೌರಾಣಿಕ ಪ್ರಧಾನ ಪ್ರಸಂಗಗಳೇ ಯಕ್ಷಗಾನದ ಜೀವಾಳ. ಇದೀಗ ಚಾರಿತ್ರಿಕ, ಸಾಮಾಜಿಕ ಅಂಶಗಳೂ ಪ್ರಸಂಗಗಳಾಗಿ ರಂಗಸ್ಥಳವನ್ನೇರಿವೆ. ಹಾಗಂತ ಏರಿದ ಮಾತ್ರಕ್ಕೆ ಯಕ್ಷಗಾನದ ಚೌಕಟ್ಟನ್ನು ಮೀರಿ ವರ್ತಿಸಿ ನರ್ತಿಸುವುದು ಸಹಜವೆನಿಸುವುದಿಲ್ಲವಷ್ಟೆ. ಆಯಾ ಕಲೆಗೆ ಇರುವ ಮಹತ್ತನ್ನು ಅರಿತು ಕಲಾವಿದ-ಪ್ರೇಕ್ಷಕ ಜೊತೆಯಲ್ಲಿ ಸಾಗಿದರೆ ಕಲಾ ಪ್ರಕಾರಕ್ಕೇ ಒಳ್ಳೆಯದು. ಯಾವುದೇ ಕಲೆಯು ಇದ್ದಂತೆಯೇ ಇರುವುದಿಲ್ಲ ನಿಜ. ಕಲೆಯು ಚಲನಶೀಲತೆಯಿಂದ ಕೂಡಿರುವುದರಿಂದ ಮಾರ್ಪಾಟುಗಳು, ಸ್ವೀಕಾರ-ತಿರಸ್ಕಾರಗಳು ಆಯಾ ಕಾಲದೊಳಗೆ ಜರಗುವ ಒಂದು ಸಹಜ ಪ್ರಕ್ರಿಯೆ ಎನಿಸಿ ಬಿಡುತ್ತದೆ.

ಕಾಲಾನುಕಾಲದಲ್ಲಿ ಕೈಗೊಳ್ಳಬೇಕಾದ ಪರಿಷ್ಕಾರಗಳು, ಮಾಡಬೇಕಾದ ಬದಲಾವಣೆಗಳನ್ನು ಕಲಾ ಮಾಧ್ಯಮದ ಚೌಕಟ್ಟಿನೊಳಗೆ ಮಾಡಿಕೊಳ್ಳುವ ಸ್ವಾತಂತ್ರ್ಯ ಕಲಾವಿದನಿಗೂ ಮತ್ತದನ್ನು ಜೀರ್ಣಿಸಿಕೊಳ್ಳುವ ಶಕ್ತಿ ಕಲೆಗೂ ಇದೆ. ಆದರೆ ಅವೆಲ್ಲವೂ ಕೂಡ ಕಲೆಯ ಶಾಸ್ತ್ರೀಯತೆಗೆ ಬದ್ಧವಾಗಿದ್ದುಕೊಂಡೇ ಇರಬೇಕಾದುದು ಕಾಲಧರ್ಮವೂ ಹೌದು. ಹಾಗಂತ ಕರ್ಮಠವಾಗಿರಬೇಕು ಎಂದರ್ಥವಲ್ಲ. ಕಲೆಯ ಮೂಲ ಸ್ವರೂಪದತ್ತ ತೋರುವ ಬದ್ಧತೆಯು ಅದರ  ಅಳಿವು-ಉಳಿವಿನಲ್ಲಿ, ಬೆಳವಣಿಗೆಯಲ್ಲಿ ಪ್ರಮುಖವಾಗಿರುತ್ತದೆ. 

ಎಲ್ಲವನ್ನೂ ಸೇರಿಸಿ ಕಲಸಿ ಒಂದೇ ಗುಕ್ಕಿಗೆ ತಿನ್ನುವ ಹವ್ಯಾಸ ಯಾವಾಗ ಹುಟ್ಟಿಕೊಂಡಿತೋ ಅಂದಿನಿಂದ ಪ್ರತಿಯೊಂದು ಕಲೆಯೊಳಗೂ ಇತರ ಕಲಾ ಪ್ರಕಾರಗಳ ಒಂದಷ್ಟು ರುಚಿಗಳನ್ನು ಕಾಣಬಹುದು. ಸ್ವಲ್ಪ ಸ್ವಲ್ಪವೇ ಇಂಜೆಕ್ಟ್ ಮಾಡುತ್ತಾ, ರುಚಿಯನ್ನು ಹತ್ತಿಸಿ  ಕಲೆಯನ್ನು ಅನುಭವಿಸುವ ಇಂದ್ರಿಯಗಳಿಗೆ ಕಲೆ ಹಾಗೂ ಕಲಾ ಪ್ರಕಾರವೆಂದರೆ ಹೀಗೆಯೇ ಎಂದೆನಿಸಿ ಬಿಡುವಷ್ಟು ಏರು ಪಾಕಕ್ಕೆ ರುಚಿಯನ್ನು ತಲುಪಿಸಿ ಬಿಡಲಾದ ದೋಷವು ಸಮಯದ್ದೋ? ಅಥವಾ ಮನುಷ್ಯನದ್ದೋ?   

ಆಧುನಿಕ ಬದುಕಲ್ಲಿ ಒದಗಿ ಬರುವ ಸೌಲಭ್ಯಗಳು ಕಲೆಯು ತನ್ನ ಸಾಧ್ಯತೆಯನ್ನು ವಿಸ್ತರಿಸಿಕೊಳ್ಳಲು ಸಹಾಯ ಮಾಡುತ್ತಿರುವುದೇನೋ ನಿಜ. ಹಾಗಂತ ಅದೆಲ್ಲವನ್ನೂ ರಂಗದಲ್ಲಿ ಅಳವಡಿಸಿತೆಂದಾದರೆ ಕಲೆಯೊಂದು ತನ್ನ ಮೂಲ ಸತ್ವವನ್ನು ಕಳೆದುಕೊಂಡು ಇನ್ನೇನೋ ಆಗಿ ಬಿಡುವ ಅಪಾಯವಿದೆ. ಅಂತಹ ಆಧುನಿಕ ಸೌಲಭ್ಯಗಳಲ್ಲಿ ಬೆಳಕು ಮತ್ತು ಶಬ್ದವೂ ಒಂದು. ಇವೆರಡರ ಉಪಯೋಗವನ್ನು ಯಕ್ಷರಂಗದಲ್ಲಿ ಎಷ್ಟರಮಟ್ಟಿಗೆ ಅಳವಡಿಸಿಕೊಳ್ಳಬೇಕು ಎನ್ನುವ ಜಿಜ್ಞಾಸೆ ನಡೆಯುತ್ತಲೇ ಇದೆ. ಯಕ್ಷಗಾನದ ಮೂಲ ಸ್ವರೂಪಕ್ಕೆ ಧಕ್ಕೆಯೆನಿಸುವಂತೆ ಈ ಎರಡು ಅಂಶಗಳನ್ನು ಬಳಸಿಕೊಳ್ಳುತ್ತಿರುವುದನ್ನು ಢಾಳಾಗಿ ಕಾಣಬಹುದು. ಅಂತೇ ಪಾತ್ರಗಳ ವೇಷ-ಭೂಷಣಗಳಲ್ಲಿ ತೋರುವ ಬದಲಾವಣೆಯೂ ಸಹ ಆಧುನಿಕ ಭರಾಟೆಯ ಕೊಡುಗೆಯೇ ಸರಿ. ಹೀಗಿರಲು ಯಕ್ಷಗಾನವು- ನಾಟಕ, ಸಿನೆಮಾ, ಭೂತಕೋಲಗಳಾಗದೆ ಯಕ್ಷಗಾನವಾಗಿಯೇ ಉಳಿವ ಸಾಧ್ಯತೆ  ಕ್ಷೀಣ ಎಂದೆನಿಸುವುದಿಲ್ಲವೇ?  

ರಂಗದ ಮೇಲಿನ ಪ್ರದರ್ಶನದಲ್ಲಿ ಆಯಾ ಪಾತ್ರಕ್ಕೆ ಅದರದ್ದೇ ಆದ ಮಹತ್ತು ಮತ್ತು ಅವಕಾಶಗಳಿವೆ. ಅದಷ್ಟನ್ನೇ ಸ್ವೀಕರಿಸಿ ನಡೆದರೆ ಕಲೆಯ ಉಳಿವಿನ ಸಾಧ್ಯತೆ ಹೆಚ್ಚು. ಅದು ಬಿಟ್ಟು ಪರಸ್ಪರ ಜಿದ್ದಿಗೆ ಬಿದ್ದು ತಾ ಮೇಲು.. ತಾ ಮೇಲು… ಎನ್ನುವಂತೆ ರಂಗದ ಮೇಲೂ, ಕೆಳಗೂ ನಡೆಸುವ ಆಟೋಪಗಳು ಯಕ್ಷ ಭವಿಷ್ಯವನ್ನು ಮಂಕಾಗಿಸಿ ಬಿಡುತ್ತದೆ. ಕಲಾವಿದನನ್ನು ಮೀರಿಸಿ ಚಿಮ್ಮಲು ಯತ್ನಿಸುವ ಭಾಗವತರು, ಭಾಗವತರನ್ನು ಮೀರಿಸಿ ಹಾರಿ ಕುಣಿಯಲು ಯತ್ನಿಸುವ ಕಲಾವಿದರು, ಮೇಳದ ಯಜಮಾನರ ವಾಣಿಜ್ಯ ಉದ್ದೇಶ ಜೊತೆಗೆ ಮೇಳದ  ಜನಪ್ರಿಯತೆಗಾಗಿ ಅಳವಡಿಸಿಕೊಳ್ಳುವ ಹಲವಾರು ಇತರೆ ಅಂಶಗಳು ಯಕ್ಷಗಾನದ ಮೂಲ ಉದ್ದೇಶವನ್ನು ಮರೆಮಾಚಿ ಬಿಡುತ್ತವೆ. ಪರಿಣಾಮ ರಂಗದಲ್ಲಿ 'ಮುಂಗಾರು ಮಳೆ' ಹನಿಯಲು ತೊಡಗಿ 'ಆಪ್ತಮಿತ್ರ'ನೂ ಧೀಂಗಿಣ ಹಾಕಲು ಕಾಯುತ್ತಿರುತ್ತಾನೆ. ಅತ್ತ ಚೌಕಿಯಲ್ಲಿ ‘ನಾಳಿಕ್ಕ್ ದುರ್ಗಾಷ್ಟಮಿ...’ಎಂದು ಕೂಗಲು ‘ನಾಗವಲ್ಲಿ' ಬಣ್ಣ ಹಚ್ಚಿಕೊಳ್ಳುತ್ತಿದ್ದರೆ, ಇತ್ತ ರಂಗದಲ್ಲಿ 'ಲಕಲಕ ಲಕಲಕ' ಎಂದು ವಿಚಿತ್ರವಾಗಿ ಅರಚಿ ಬಾಯಿ ಬಡಿದುಕೊಳ್ಳುವ ಪಾತ್ರದ ಆಗಮನವೂ ನಡೆದು ಹೋಗುತ್ತದೆ. ಈ ತೆರನಾದ ಆಮದು ಪ್ರಯತ್ನಗಳು ಕಲೆಗೆ ಎಸಗುವ ಅಪಚಾರ ಎನ್ನದಿರಲಾದೀತೇ? ಹಾಗಾದರೆ ಬದಲಾಗುತ್ತಿರುವ ಕಾಲಘಟ್ಟದಲ್ಲಿ ಯಕ್ಷಗಾನವು ತನ್ನ ಮೂಲ ಸ್ವರೂಪದೊಂದಿಗೆ ಹೇಗೆ ಮತ್ತು ಎಷ್ಟರಮಟ್ಟಿಗಿನ ರಾಜಿ ಮತ್ತು ಹೊಂದಾಣಿಕೆಯನ್ನು ಮಾಡಿಕೊಳ್ಳಬೇಕಿದೆ? ಎಂಬುದೊಂದು ಗಂಭೀರ ಪ್ರಶ್ನೆ. ಕಾಲಕ್ಕೆ ತಕ್ಕಂತೆ ಕೋಲ ಕಟ್ಟಬೇಕು ಎನ್ನುವುದೇನೋ ನಿಜ. ಹಾಗಂತಿರಲು ಎಂತಹ ಕೋಲವನ್ನು ಕಟ್ಟಬೇಕೆಂಬ ವಿವೇಚನೆ ಇರಬೇಡವೇ? ರಂಗದ ಮೇಲೆ ತೋರುವ ಸಮನ್ವಯ-ಸಾಮರಸ್ಯಗಳು ಯಕ್ಷಗಾನದ ಭವಿಷ್ಯಕ್ಕೆ ಎಲ್ಲಾ ರೀತಿಯಲ್ಲೂ ಒಳ್ಳೆಯದೇ. 

ಕಲೆ ಮತ್ತು ಕಲಾವಿದ ತನ್ನ ಸಾರ್ಥಕ್ಯವನ್ನು ಕಂಡು ಪಡೆಯುವುದು ಪ್ರೇಕ್ಷಕನ ಇಂದ್ರಿಯಗಳಿಂದ. ಕಲಾರಸಿಕನ ರುಚಿಯು ಕೆಟ್ಟಿತೆಂದರೆ ಕಲೆಯೂ ಕೆಟ್ಟು, ಕಲಾವಿದನೂ ಕೆಟ್ಟನೆಂದೇ ಅರ್ಥ. ಹಾಗೆ ನೋಡಿದರೆ ಯಾವುದೇ ಕಲಾ ಪ್ರಕಾರವೊಂದರ ಅಳಿವು-ಉಳಿವಿನ ಮುಖ್ಯ ರೂವಾರಿ ಪ್ರೇಕ್ಷಕ. ಅದಕ್ಕೆ ಯಕ್ಷಗಾನವೂ ಹೊರತಲ್ಲ. ಯಕ್ಷಗಾನದ ವಿಚಾರಕ್ಕೆ ಬಂದರೆ; ಅದರ ಅಳಿವು ಅವಲಂಬಿಸಿರುವುದು ಕಲಾವಿದ-ಪ್ರೇಕ್ಷಕ-ಮೇಳಕರ್ತ-ಭಾಗವತರ ಮೇಲೆಯೇ. ಕಲಾವಿದ ರಂಗದಲ್ಲಿ ಬೆಳೆದು ಬೆಳಗಲು ಇಚ್ಚಿಸುವ ಶ್ರಮಜೀವಿ. ಜನಪ್ರಿಯತೆಯ ಹಿಂದೆ ಬಿದ್ದರೆ ಆತ ಆಭಾಸಗಳನ್ನು ಸೃಷ್ಠಿಸುವುದೂ ಉಂಟು. ಕಂಚಿನ ಕಂಠದಿಂದ ರಂಗಸ್ಥಳವನ್ನು ಕಂಟ್ರೋಲ್ ಮಾಡುವ, ಡ್ರೈವಿಂಗ್ ಸೀಟಿನಲ್ಲಿರುವವರು ಭಾಗವತರು. ಹಾಡುಗಾರಿಕೆಯಲ್ಲಿ ಹೊಸತನವನ್ನು ತರಲು ಹಪಹಪಿಸುವ ಮನಸ್ಸು ಚಿತ್ರಗೀತೆಗಳ ಅಂಶಗಳನ್ನು ಹರಿಸಿ ಸಿನಿ ರಂಜನೆಯನ್ನೂ ಕೊಡುವುದೂ ಉಂಟು. ಪ್ರಸಂಗಗಳ ಆಯ್ಕೆಯಲ್ಲಿ, ಕಲಾವಿದನ ಪೋಷಣೆಯಲ್ಲಿ, ರಂಗದ ಮೇಲೆ ಮೂಡಿಸುವ ನವ ಭಿನ್ನ ರುಚಿಗಳ ಹಿಂದೆ ಸಾಂಪತ್ತಿಕ ವಹಿವಾಟಿನ ಕಮರ್ಷಿಯಲ್ ಚಿಂತನೆಯೂ ಇಲ್ಲದಿಲ್ಲ. ಇಲ್ಲಿ ಮೇಳದ ಯಜಮಾನರ ಪಾತ್ರವೂ ಮುಖ್ಯವಾಗಿರುತ್ತದೆ. ಆಧುನಿಕತೆಗೆ ಕಲೆಯು  ಬಾಗಿ ತನ್ನ ಮೂಲ ಗುಣಗಳಿಂದ ಸ್ವಲ್ಪ ಸ್ವಲ್ಪವೇ ಕಳಚಿಕೊಳ್ಳುತ್ತಾ  ವಾಣಿಜ್ಯಗೊಳ್ಳುವುದು ಎಂದರೆ ಹೀಗೆಯೇ  ಇರಬೇಕು.   

ಹಾಲಿವುಡ್, ಬಾಲಿವುಡ್ ಸಹಿತ ಎಲ್ಲಾ ವುಡ್ ಗಳೂ ತೋಪೆದ್ದು ಹೋಗುತ್ತಿರುವಾಗ ಶಾಸ್ತ್ರೀಯ ಕಲೆಗಳು ಮಾತ್ರ ಸ್ವಲ್ಪ ಮಟ್ಟಿಗೆ ಕಾಲಕ್ಕೆ ತಕ್ಕಂತೆ ಮೂಡುವ ಅಪಸವ್ಯಗಳನ್ನು ಎದುರಿಸಿ ನಿಂತು ತಮ್ಮತನವನ್ನು ತಕ್ಕಮಟ್ಟಿಗಾದರೂ ಉಳಿಸಿಕೊಂಡಿವೆ ಎನ್ನಬಹುದು. ಕಾಲಾನುಕಾಲಕ್ಕೆ ನಡೆಯುವ ಇಂತಹ ಕ್ರಿಯೆಗಳಿಂದ ಯಕ್ಷಗಾನವು ಇತರ ಕಲಾ ಪ್ರಕಾರಗಳಿಗಿಂತ ತುಸು ಹೆಚ್ಚೇ ಸೊರಗಿದೆ ಎಂದರೆ ತಪ್ಪಾಗಲಾರದು. ಯಕ್ಷಗಾನದ ತೆಂಕು-ಬಡಗು ತಿಟ್ಟುಗಳು, ಪಾರಿಜಾತ, ಘಟ್ಟದ ಕೋರೆ, ದೊಡ್ಡಾಟ-ಸಣ್ಣಾಟವೆಲ್ಲಾ ತನ್ನದೇ ಆದ ವೈಶಿಷ್ಟ್ಯತೆಗಳನ್ನು ಹೊಂದಿರುವ ಪ್ರಕಾರಗಳು. ಕಾಲಕ್ರಮೇಣ ಇವುಗಳು ತಮ್ಮ ಮೂಲ ಸ್ವರೂಪದಿಂದ ಸಡಿಲುಗೊಳ್ಳುತ್ತಾ ಬಂದಿವೆ ಎನ್ನುವ ಪರಿಜ್ಞಾನವಿದ್ದರೂ ಜೊತೆಯಲ್ಲಿ ಜಾಣ ಕಿವುಡು-ಕುರುಡನ್ನೂ ಅಪ್ಪಿಕೊಂಡು ಬಿಟ್ಟಿದ್ದೆವೆ. 

ಪೀಳಿಗೆಯೊಂದಕ್ಕೆ ಯಕ್ಷಗಾನವು ‘ಆಪ್ತಮಿತ್ರ'ನಾಗಿ..‘ಮುಂಗಾರು ಮಳೆ'ಯ ಹನಿಗಳ ಲೀಲೆಯಲ್ಲಿ  ತೋಯ್ದು ಹೋಗಿದೆ.  ಶಾಸ್ತ್ರೀಯ ಜನಪದ ಕಲೆಯಾದ ಯಕ್ಷಗಾನದ ಚೌಕಟ್ಟಿನಲ್ಲಿ ಬದಲಾವಣೆ ನಡೆದರೇನೇ ಅದಕ್ಕೊಂದು ಅಂದ-ಚಂದ ಇರಲು, ಗೌರವವೂ ಸಿಗಲು ಸಾಧ್ಯ. ಯಕ್ಷಗಾನವನ್ನು ವಾಣಿಜ್ಯೀಕರಣ ಗೊಳಿಸುವುದರಿಂದ ಯಕ್ಷಕಲೆಯ ಮೂಲ ಸ್ವರೂಪಕ್ಕೆ ಧಕ್ಕೆಯಾಗುವುದು ಮಾತ್ರವಲ್ಲ; ಶ್ರೇಷ್ಠತಮ ಕಲಾ ಸ್ವರೂಪವೊಂದರಿಂದ ವಂಚಿತರಾಗಿ ಬಿಡುತ್ತೇವೆ.    

ಯಕ್ಷಗಾನದ ಶಾಸ್ತ್ರೀಯತೆಯ ಅಡಿಯಲ್ಲಿ ತೆಂಕು-ಬಡಗು ತಿಟ್ಟು ಮೇಳಗಳದ್ದೇ ಆದ ಮಟ್ಟು ಅಥವಾ ಶೈಲಿ ಇದೆ.  ಇದು ಮೇಳ ಮತ್ತು ತಿಟ್ಟುಗಳಲ್ಲಿ ಕಾಣುವ ಒಂದು ವೈಶಿಷ್ಟ್ಯವೂ ಹೌದು. ಕಲೆಯ ಉಳಿವಿಗೆ, ಸಾರ್ವತ್ರಿಕ ಸ್ವೀಕಾರಕ್ಕೆ ಮತ್ತು ಅದು ವ್ಯಾಪಿಸಿಕೊಳ್ಳಬೇಕಾದ ವಿಸ್ತಾರಕ್ಕೆ ಅನುಗುಣವಾಗಿ ಕೆಲವೊಂದಿಷ್ಟು ಬದಲಾವಣೆಗಳು ಸಮಯಾನುಸಮಯಕ್ಕೆ ನಡೆದಿವೆ. ಶೈಲಿಯಲ್ಲಿ, ಅಭಿವ್ಯಕ್ತಿಸುವ ರೀತಿಯಲ್ಲಿ, ಕುಣಿಯುವ ಭಂಗಿಯಲ್ಲಿ, ಮುಖವರ್ಣಿಕೆಯಲ್ಲಿ, ವೇಷ-ಭೂಷಣಗಳಲ್ಲಿ  ಕಂಡು ಬಂದ ಹೊಸತನಗಳು  ಯಕ್ಷಗಾನದ ಚೌಕಟ್ಟನ್ನು ಮೀರಿ ಎಂದಿಗೂ ಹೋಗಿಲ್ಲ. ತೆಂಕು-ಬಡಗು ತಿಟ್ಟಿನ ಬಹುಮಂದಿ ಹಿರಿಯ ಕಲಾವಿದರು ಯಕ್ಷಗಾನದ ಮೂಲ ಸ್ವರೂಪಕ್ಕೆ ಕುಂದು ಉಂಟಾಗದಂತೆ ವಿವಿಧ ನೆಲೆಗಳಲ್ಲಿ ಮಾರ್ಪಾಟುಗಳನ್ನು ಮಾಡಿರುತ್ತಾರೆ. ಅದನ್ನು ಯಕ್ಷರಸಿಕರು ನೆಚ್ಚಿ ಒಪ್ಪಿಕೊಂಡೂ ಇದ್ದಾರೆ. ಶಿವರಾಮ ಕಾರಂತ-ಶಂಭು ಹೆಗಡೆಯವರಂತೆ ಯಕ್ಷಕಲೆಯ ಮೂಲ ಸ್ವರೂಪಕ್ಕೆ ಧಕ್ಕೆ ಬಾರದ ರೀತಿಯಲ್ಲಿ ಪರಿಷ್ಕಾರ, ಬದಲಾವಣೆಗಳನ್ನು ಮಾಡಿದ್ದಲ್ಲಿ ಅದು ಕಲೆಯ ಸಾರ್ಥ್ಯಕ್ಯವೂ ಆಗಿ ಬರುವುದಲ್ಲದೆ ಯಕ್ಷಪ್ರಿಯರ  ಸೌಭಾಗ್ಯವೂ ಆಗಿ ಬಿಡುತ್ತದೆ. 

ಕಾಲದ ನಡಿಗೆಯಲ್ಲಿ ನೇತ್ರಾವತಿ-ಶರಾವತಿಗಳಲ್ಲಿ ಹರಿದು ಹೋದ ನೀರಿಗೆ ಲೆಕ್ಕವಿಲ್ಲ. ಪರಿಣಾಮ ಹೊಸ ಹೊಸ ಸಂಸ್ಕಾರ-ಸಂಪ್ರದಾಯಗಳು, ರೀತಿ-ನೀತಿ-ರಿವಾಜುಗಳು, ಒಲುಮೆ-ನಿಲುಮೆಗಳು ಯಕ್ಷ ಪ್ರಪಂಚವನ್ನು ಮುತ್ತಿಕೊಂಡಿವೆ. ಪರಿಣಾಮ ರಂಗಸ್ಥಳದಲ್ಲಿ ಪೌರಾಣಿಕ, ಚಾರಿತ್ರಿಕ, ಸಾಮಾಜಿಕ  ಪಾತ್ರಗಳ ಆಭಾಸವೆನಿಸುವಷ್ಟರ ಮಟ್ಟಿಗಿನ ಮಾತು ಕುಣಿತ. ಪ್ರತಿಯಾಗಿ ಪ್ರೇಕ್ಷಕನ  ಶಿಳ್ಳೆ-ಕೇಕೆ-ಚಪ್ಪಾಳೆಗಳ ಸದ್ದೇನು!  ಕಂಚಿನ ಕಂಠದಿಂದ ಚಿತ್ರಗೀತೆ-ಭಾವಗೀತೆ ಹೊಮ್ಮಿದ್ದೇ ಪ್ರೇಕ್ಷಕರೂ ಹುಚ್ಚೆದ್ದು ಕುಣಿಯಲು ತೊಡಗುತ್ತಾರೆ.  ಹಾಗೆ ತೊಡಗಿದ್ದೇ ಭಾಗವತರ ಮುಖದಲ್ಲಿ ಸುಖದ ಭಾವ ಹೊಮ್ಮಿ- ಇನ್ನಷ್ಟು, ಮಗುದಷ್ಟು ಗಿಮಿಕ್ ಗಳು ಕಂಠದಿಂದ ತೂರಿಕೊಂಡು ಬರುತ್ತವೆ. ಈ ತೆರನಾದ ಕ್ಷಣಿಕ ಸೌಖ್ಯವನ್ನು ಅನುಭವಿಸುವ ಕಲಾವಿದ ಮತ್ತು ಭಾಗವತರಿಗೆ ತಾವು ತಮ್ಮ ಕರ್ತವ್ಯಗಳಿಂದ ವಿಮುಖರಾಗಿ ಬಿಟ್ಟಿದ್ದೇವೆ ಎಂಬ ಯೋಚನೆಯು ಆ ಹೊತ್ತಲ್ಲಿ ಅವರತ್ತ ಸುಳಿದಿರುವುದಿಲ್ಲ. ಮುಂದುವರಿದು ರಂಗಸ್ಥಳದಲ್ಲಿ ಪರಸ್ಪರ ಜಿದ್ದಿಗೆ ಬಿದ್ದವರಂತೆ ಪಾತ್ರ-ಪಾತ್ರಗಳು, ಪಾತ್ರ-ಭಾಗವತರ ಮಧ್ಯೆ ಸೆಣಸಾಟಗಳು ತೊಡಗುತ್ತವೆ. ಪರಿಣಾಮ ರಾವಣ ರಾಮನನ್ನು.. ಕೌರವ ಕೃಷ್ಣನನ್ನು ದಮನಿಸುವ ವೈಪರೀತ್ಯಗಳೂ ನಡೆದು ಹೋಗುತ್ತವೆ. ಕುಣಿದು ನರ್ತಿಸಲು ಇಚ್ಚಿಸುವ ಪಾತ್ರಗಳಿಗೆ ಭಾಗವತರು ಹೆಚ್ಚಿನ ಆಸ್ಪದ ಕೊಡದೆ ಕಟ್ಟಿ ಹಾಕುವ ಪ್ರಸಂಗವೂ ನಡೆಯುತ್ತದೆ. ಅಷ್ಟೇ ಯಾಕೆ ಆಧುನಿಕ ಯುಗದ ಇಷ್ಟಾನಿಷ್ಟಗಳು, ರಾಜಕೀಯ ನಿಲುವುಗಳು, ಬಣ್ಣಗಳಾದಿಯಾಗಿ ರಂಗಸ್ಥಳದಲ್ಲಿ ಹೊಮ್ಮುವ ಧರ್ಮ ನೀತಿಗಳು ಒಂದೋ ಎರಡೊ! 

ಅವೆಲ್ಲವನ್ನೂ ರಂಗಸ್ಥಳದಲ್ಲಿ ಆಡಿ-ಪಾಡಿ ಕುಣಿದು ಧೀಂಗಿಣ ಹಾಕಿ “ಬಲ್ಲಿರೇನಯ್ಯ?” ಎಂದು ಕೇಳುವವರಿಗೂ ಮತ್ತು ಟಿ.ವಿಯೊಳಗೆ  ಪ್ಯಾನೆಲ್ ಡಿಸ್ಕಶನ್ ನಲ್ಲಿ ಕಾಣುವ ಮಂದಿಗೂ ಇರುವ ವ್ಯತ್ಯಾಸ ಬರೀ ತೆಳು ಗೆರೆಯಷ್ಟೇ. ಬಣ್ಣ ಹಚ್ಚಿ, ವೇಷ ಹಾಕಿ ಪಾತ್ರಗಳ ಮೂಲಕ ಮನದೊಳಗಿನದ್ದನ್ನು ಆಡಿಸುವ ಚಮತ್ಕಾರಿಕೆ ರಂಗಸ್ಥಳದಲ್ಲಿ ನಡೆದರೆ; ಇತ್ತ ಬಣ್ಣ-ವೇಷಗಳನ್ನು  ಕಳಚಿಟ್ಟು ಕಣ್ಣಗುಡ್ಡೆಗಳನ್ನು ಉರುಳುರುಳಿಸಿ, ಗಂಟಲರಚಿ ಆಡುವ ಪಾಡು ಬಣ್ಣದಲ್ಲಿ ಮರೆಮಾಚಿ ಹೋಗದ ಜೀವಂತ ಪಾತ್ರಗಳದ್ದು.  ಎರಡರದ್ದೂ ಒಂದೇ ಆರ್ಭಟ. ಹಿಮ್ಮೇಳ ಮುಮ್ಮೇಳಗಳಲ್ಲಿ ಒಂದಷ್ಟು ಅಂತರಗಳನ್ನು ಬಿಟ್ಟರೆ, ಮಿಕ್ಕಂತೆ ಯಾರಿಗೆ ಯಾರೂ ಕಮ್ಮಿಯಿಲ್ಲ  ಎಂದೆನಿಸುವಂತಹ  ಅದ್ಭುತ ಪರ್ಫಾರ್ಮೆನ್ಸ್! ಇಬ್ಬರೂ ಕಲಾವಿದರೇ. ಬಣ್ಣ ತೊಟ್ಟ, ಬಣ್ಣ ಕಳಚಿದ ಎನ್ನುವುದಷ್ಟೇ  ಇರುವ ವ್ಯತ್ಯಾಸ. 

ಈಗಿನ ಪೀಳಿಗೆಗೆ ಯಕ್ಷಗಾನ-ಸಿನಿಮಾ ಅಂದ್ರೂ ಒಂದೇ. ನಾಟಕ-ಭೂತಕೋಲಗಳೂ ಒಂದೇ. ಒಟ್ಟು ಬಣ್ಣದ ಗೀಳು ಅಷ್ಟೆ.   ಹಾಗಂತ ಅವುಗಳೆಲ್ಲ ಅಷ್ಟೇ ಪರಿಚಿತವೂ ಕೂಡ. ನಿಜವಾದ ಸ್ವರೂಪ ಮಾತ್ರ ಅಕ್ಷರಶಃ ಅಪರಿಚಿತವಾಗಿರುತ್ತದೆ ಎನ್ನುವುದಷ್ಟೇ ನಿಜ. ತಲತಲಾಂತರಗಳಿಂದ ಕಾಪಿಟ್ಟುಕೊಂಡು ಬಂದ ಪರಂಪರೆಯೊಂದು ದಿನ ಬೆಳಗಾಗುವುದರೊಳಗೆ ತನ್ನತನವನ್ನು ಕಳೆದುಕೊಂಡು ದುರಂತಕ್ಕೀಡಾಗುವ ಕಾಲವಿದು. ಹಾಗಿದ್ದೂ ಸಾಮಾಜಿಕ, ಆರ್ಥಿಕ ಮತ್ತು ಸಾಂಸ್ಕೃತಿಕ ಸ್ಥಿತ್ಯಂತರಗಳನ್ನು ಎದುರಿಸಿ ತನ್ನ ಅಸ್ತಿತ್ವವನ್ನು ಯಕ್ಷಗಾನವು  ಉಳಿಸಿಕೊಂಡಿದೆ ಎನ್ನುವುದು ಹೆಮ್ಮೆಯ ವಿಚಾರ.  ಬದಲಾವಣೆಗೆ ಒಗ್ಗಿ ಹಿಗ್ಗಿಕೊಳ್ಳುವ ಗುಣ ಯಕ್ಷಗಾನದ ದೊಡ್ಡ ಶಕ್ತಿಯೂ ಹೌದು. ಬದಲಾದ ರುಚಿಗಳ ನಡುವೆಯೂ ಹೆಚ್ಚಿನ ಸಂಖ್ಯೆಯಲ್ಲಿ ಯಕ್ಷಗಾನ ಮೇಳಗಳು  ಸಕ್ರಿಯವಾಗಿವೆ.  ಹರಕೆ ಮೇಳಗಳು, ವ್ಯವಸಾಯೀ ಮೇಳಗಳು ಜತೆ ಜತೆಯಾಗಿ ನಡೆಯುತ್ತಿರುವುದು  ಇದರ ಮತ್ತೊಂದು ವೈಶಿಷ್ಟ್ಯ. ಇಂತಹದ್ದೊಂದು ಸಿನರ್ಜಿ ಕಲಾತ್ಮಕ ಹಾಗೂ ಸೃಜನಶೀಲ ಬದಲಾವಣೆಗಳಿಗೆ  ಪೂರಕವಾಗಬೇಕಿತ್ತು. ಹಾಗಾಗದೆ ಯಕ್ಷಗಾನದ ಮೂಲ ಸ್ವರೂಪಕ್ಕೆ ಕೆಡುಕಾಗುವ ಘಟನೆಗಳು ಯಕ್ಷಲೋಕಕ್ಕೆ ಸವಾಲಾಗಿ ನಿಂತು- ಸೊಂಟಕ್ಕೆ ಕೈ ಹಚ್ಚಿ ಖಡ್ಗವನ್ನು  ಝಳಪಿಸುತ್ತಾ, “ಬಲ್ಲಿರೇನಯ್ಯ ಚಪ್ಪನೈವತ್ತಾರು ದೇಶಕ್ಕೆ?” ಎಂದು ಕೇಳುತ್ತಿದೆ.   

ಆಧುನಿಕತೆಯ ಅತಿ ವೇಗವು ಸಾಂಪ್ರದಾಯಿಕ ಕಲಾ ಪ್ರಕಾರಗಳಲ್ಲಿ ವಿಚಿತ್ರವಾದ ಕಂಪನವನ್ನು ಹುಟ್ಟಿಸಿ ಹೊಸ ಸಾಧ್ಯತೆ, ಅವಕಾಶಗಳನ್ನು ನಿರ್ಮಿಸಿದೆ. ಜೊತೆಗೆ ಪುರಾತನ ಕಲೆಗಳು ಚದುರಿ ಹೋಗಿಬಿಡುವ ವಿಪತ್ತನ್ನೂ ತೆರೆದಿಟ್ಟಿದೆ.  ನಮ್ಮದಲ್ಲದ್ದನ್ನು ಆಹ್ವಾನಿಸುವುದು; ಯಾವುದೋ ರೋಗಕ್ಕೆ ಯಾವುದೋ ಮದ್ದು ಕೊಟ್ಟಂತೆ ಅಲ್ಲವೇ? ಯಕ್ಷಲೋಕದಲ್ಲಿ ಸುಧಾರಣೆಗಳು ಆಗಬೇಕಿರುವುದೇನೋ ನಿಜ. ಆದರೆ ಅವೆಂತಹದ್ದಾಗಿರಬೇಕು ಎನ್ನುವುದರ ಆಳವಾದ ಅರಿವು ಇರಬೇಕಾದುದೂ ಅಷ್ಟೇ ಮುಖ್ಯ. ಮೇಳದ ಯಜಮಾನ-ಪ್ರಸಂಗಕರ್ತ-ಭಾಗವತ-ಕಲಾವಿದ-ಪ್ರೇಕ್ಷಕ-ವಿಮರ್ಶಕರ  ನಡುವಿನ ಉತ್ತಮ ಬೆಸುಗೆಯು ಆರೋಗ್ಯಕರ ಸಂವಾದಕ್ಕೆ ನಾಂದಿ ಹಾಡಿತೆಂದಾದರೆ ಪ್ರಸಕ್ತ ಗೊಂದಲಗಳನ್ನು ಯಶಸ್ವಿಯಾಗಿ ಪರಿಹರಿಸಿಕೊಳ್ಳಬಹುದು. ಈ ನಿಟ್ಟಿನಲ್ಲಿ ಸಮಾನ ಮನಸ್ಕ ಯಕ್ಷರಸಿಕ ವೃಂದವು ಕಾರ್ಯಪ್ರವೃತ್ತರಾಗಬೇಕು. 

ಯಕ್ಷಗಾನದ ಮೂಲ ಸ್ವರೂಪವನ್ನು ಕದಡಿ ರಾಡಿ ಮಾಡಿ ಅದರಲ್ಲಿ ಓಕುಳಿ ಆಡುವುದಿದೆಯೆಲ್ಲ- ಅದು ಕಲೆಗೆ ಎಸಗುವ ಬಹುದೊಡ್ಡ ಅಪಚಾರ. ‘ಯಕ್ಷಸಿನಿಮಾ-ಯಕ್ಷನಾಟಕ-ಯಕ್ಷಕೋಲ’ ಎಂದು ರೂಪಾಂತರ ಹೊಂದಿದ ಹೈಬ್ರೀಡ್ ತಳಿಯ ಕಲಾ ಪ್ರಕಾರಕ್ಕೆ 'ಯಕ್ಷಗಾನ' ಎಂದು ಕರೆದು  ಅವಮಾನಗೊಳಿಸುವುದು ಎಷ್ಟಕ್ಕೂ ಸಲ್ಲದ ವಿಚಾರ.

ಈ ಅಂಕಣದ ಹಿಂದಿನ ಬರೆಹಗಳು:
ಮಲೆಯಾಳಂ ಸಿನಿಮಾವೆಂಬ ಸುಂದರಿ ಕುಟ್ಟಿ..
ಮತ್ತೇರಿಸಿ ಕಾಡುವ ಕಾಡ ಸುಮ
ಜಾಗತೀಕರಣ: ವೃದ್ಧಾಶ್ರಮಗಳಾಗುತ್ತಿರುವ ಹಳ್ಳಿಗಳು
ಆಧುನಿಕ ತಂತ್ರಜ್ಞಾನ ಮತ್ತು ಹರಕು-ಮುರುಕು ಬಂಧಗಳು
ಪ್ರಜಾಪ್ರಭುತ್ವದ ಮೂಲ ಅಂಗಗಳು ವಿಕಲಗೊಂಡಿವೆಯೇ?
ದಾಸ್ಯವೂ..ಸ್ವಾತಂತ್ರ್ಯವೂ..
ಮುಸ್ಸಂಜೆಯ ಒಳಗೊಂದು ಅರ್ಥ
ಧಮ್ಮ ಗುಮ್ಮನ ನಂಬಿ ಕೆಟ್ಟರೆ ಎಲ್ಲರೂ ?
ಭರವಸೆಯ ಜೊತೆ ಹೆಜ್ಜೆ ಹಾಕೋಣ..
ಚಾದರದೊಳಗಿನ ಕಥೆ, ವ್ಯಥೆ...
'ಚಂದ್ರಗಿರಿ ತೀರದಲ್ಲಿ' ತೀರದ ಬವಣೆ..
‘ಬಯಲರಸಿ ಹೊರಟವಳು’- ಇಟ್ಟ ಹೆಜ್ಜೆಯ ಜಾಡು
ಬೆಳಕ ದಾಟಿಸುವ ಹಣತೆ- ಎಸ್.ದಿವಾಕರ್
ಅನುಭವಿಸಿ ಬರೆಯುವ ಜಯಂತ ಕಾಯ್ಕಿಣಿ
ಜೀವ ಜೀವಗಳ ಅಳು…
ಹನಿ ಹನಿಸಿದ ಚೊಕ್ಕಾಡಿ
ಶಾಂತ ಕಡಲೊಳು ಬೀಸಿದ ಬಿರುಗಾಳಿ
ರಂಗದ ಮೇಲಿನ ಬಣ್ಣದ ಭಾವಗಳು
ಬೆಳಕ ದಾಟಿಸುವ ಹಣತೆಯೂ...ಒಳ್ಳೆಯವರಾಗುವ ವ್ಯಸನವೂ...
ಟ್ಯಾಗ್ ಹಾಕಿ ನೋಡುವ ಮನಸ್ಸುಗಳ ನಡುವೆ
ಸಖನೂ ಸುಖವೂ ಒಂದೇ ಆಗುವ ಕ್ಷಣ

 

 

MORE NEWS

ಶಬ್ದದೊಳಗಿನ ನಿಶ್ಯಬ್ದವನ್ನು ಸ್ಫೋಟ...

02-12-2021 ಬೆಂಗಳೂರು

‘ವೈದೇಹಿಯವರ ಕತೆಗಳು ಮಾತು-ಮೌನಗಳ ಮಧ್ಯೆ ಜೀಕಾಡುತ್ತ, ನೆರಳು-ಬೆಳಕಿನ ಆಟವಾಡುತ್ತ ಅನುಭವದ ಸಂಕೀರ್ಣತೆಯನ್ನು ನಿರ...

ಹಿರಿಯರ ವಿಮರ್ಶಾತ್ಮಕ ಪತ್ರಗಳಿಂದ ಓ...

02-12-2021 ಬೆಂಗಳೂರು

‘ಹಿರಿಕಿರಿಯರ ಅನೇಕ ವಿಮರ್ಶಾತ್ಮಕ ಪತ್ರಗಳಿಂದ ನನಗೆ ಓದುಗರ ಅಪೇಕ್ಷೆ, ರಸಾನುಭೂತಿ ಮತ್ತು ರಸಾನುಭವದ ಮಟ್ಟ ತಿಳಿಯ...

ಹೇಗೆ ದಿಲ್ಲಿಯೇ ಭಾರತ ಅಲ್ಲವೋ ಹಾಗೇ...

30-11-2021 ಬೆಂಗಳೂರು

‘ಕರ್ನಾಟಕದ ಸಂದರ್ಭದಲ್ಲಿ ಉತ್ತರ ದಕ್ಷಿಣದ ತಾರತಮ್ಯ ಅಧಿಕ.‌ ಬಲಾಢ್ಯ ದಕ್ಷಿಣವು ಉತ್ತರವನ್ನು ಎಲ್ಲ ಬಗೆಯಲ್...