ಮೊಲೆ ಮುಡಿಗಳ ಹಂಗು

Date: 03-11-2021

Location: ಬೆಂಗಳೂರು


‘ಜಗತ್ತಿನ ತಾಯಿಯ ಭವ್ಯ ಕಲ್ಪನೆಯೊಂದು ಸ್ತ್ರೀ ದೇಹಸೌಷ್ಠವದ ಮೂಲಕ ಅಭಿವ್ಯಕ್ತಿಸಲ್ಪಡುವಾಗ ಅಲ್ಲಿ ಮನಸ್ಸು ಹಾಗೂ ಕಣ್ಣಿಗಂಟಿದ ಕಾಮವು ಭಕ್ತಿ ಹಾಗೂ ಪ್ರೇಮದಲ್ಲಿ ಕರಗುತ್ತಿರುತ್ತದೆ’ ಎನ್ನುತ್ತಾರೆ ಲೇಖಕಿ ಗೀತಾ ವಸಂತ. ಅವರು ತಮ್ಮ ತೆರೆದಷ್ಟೂ ಅರಿವು ಅಂಕಣದಲ್ಲಿ ದೇಹರಾಜಕಾರಣದ ಕುರಿತು ವಿಶ್ಲೇಷಿಸಿದ್ದಾರೆ. 

ಹಿಂದೆ ಹಳ್ಳಿ ಹೆಂಗಸರು ಬ್ರಾ ಧರಿಸುವುದೇ ಒಂದು ಕ್ರಾಂತಿಯಾಗಿತ್ತು. ಮನೆಯ ಹಿರಿಯರಿಗೆ ಅಂಥ ಒಂದು ಹಂಬಲವು ತನ್ನೊಳಗೆ ಮೊಳೆಯುತ್ತಿರುವುದರ ಗುಟ್ಟು ಬಿಟ್ಟುಕೊಡದಂತೆ ಕದ್ದುಮುಚ್ಚಿ ಯಾರಿಂದಲೋ ತರಿಸಿ ಧರಿಸಬೇಕಿತ್ತು. ಆದರೆ ಅದನ್ನು ಒಣಹಾಕುವುದು ಹೇಗೆ? ಯಾರೂ ಕಾಣದ ತಾಣವೊಂದನ್ನು ಶೋಧಿಸುವುದೆಂದರೆ ಕನಕದಾಸರು ದೇವರಿಲ್ಲದ ತಾವನ್ನು ಶೋಧಿಸಿದ್ದಕ್ಕಿಂತಲೂ ಬಲು ಕಷ್ಟವಾಗಿತ್ತು. ದೇವರಿಗೇನೋ ಆಕಾರವಿಲ್ಲ. ಅದರಿಂದ ಅವನಿಗೆ ನಾಚಿಕೆಯೂ ಇಲ್ಲ!. ಆದರೆ ಈ ಮೊಲೆಗಳಿಗೂ ಮೊಲೆಕಟ್ಟಿಗೂ ಆಕಾರವಿರುವುದರಿಂದ ಅದನ್ನು ಅಡಗಿಸುವುದೇ ಪರಮ ಹಿಂಸೆ. ಇನ್ನು ಆಗಲೇ ಮೊಲೆ ಮೂಡತೊಡಗಿದ ಷೋಡಶಿಯರಂತೂ ತಮ್ಮ ಕುಪ್ಪಸವನ್ನು ಎಳೆದೆಳೆದು ಉಬ್ಬಿದ ಭಾಗ ತೋರದಂತೆ ಮಾಡಲು ಹೆಣಗುತ್ತಾ ನಗೆಗೀಡಾಗುತ್ತಿದ್ದರು. ಆಟವಾಡಲು, ಜಿಗಿಯಲು, ಕುಣಿಯಲು ಮುಜುಗರಪಡುತ್ತಾ ಒಳಮನೆ ಸೇರಿ ಬದುಕನ್ನು ಅದುಮಿಡುವ ತಾಲೀಮಿಗೆ ಒಳಪಡುತ್ತಿದ್ದರು. ಎಲ್ಲೋ ಬಾಗಿದಾಗ ಎದೆಸೀಳು ಕಾಣದಂತೆ ಸದಾ ಮೈಯೆಲ್ಲ ಕಣ್ಣಾಗಿರಬೇಕಿತ್ತು. ಹಾಗೇನಾದರೂ ಕಂಡರೆ ಮಹಾಪರಾಧವೊಂದು ಸಂಭವಿಸಿದಂತೆ ತಳಮಳಗೊಳ್ಳಬೇಕಿತ್ತು. ಕೊನೆಗೊಮ್ಮೆ ಹಿಂದೆಂದೂಕಂಡಿರದ ಅಪರಿಚಿತ ಪುರುಷನೊಬ್ಬನ ಮುಂದೆ ಅವಳು ಬೆತ್ತಲಾಗಬೇಕಿತ್ತು. ಈ ಕತ್ತಲ ಬದುಕಿನ ಮರ್ಮರಗಳೇನಿರುತ್ತಿದ್ದವೋ ಆ ಕಾಣದ ದೇವರೇ ಬಲ್ಲ!. ಯಾಕೆಂದರೆ ಮದುವೆಯೆಂಬುದು ಪವಿತ್ರ ಅಧಿಕಾರ. ಅಲ್ಲಿ ಒಪ್ಪಿಸಿಕೊಳ್ಳುವುದೊಂದೇ ವಿಧಿವಿಧಾನ!.

ಇದು ಅಜ್ಜಿ, ಅಮ್ಮಂದಿರ ತಲೆಮಾರಿನ ಕತೆಯಾದರೆ, ಆಗತಾನೇ ಕಾಲೇಜು ಮೆಟ್ಟಿಲು ಹತ್ತತೊಡಗಿದ ಹುಡುಗಿಯರ ಮುಜುಗರಗಳು ಸಾರ್ವಜನಿಕ ಸ್ವರೂಪ ಪಡೆದವು. ಅಂಗಡಿಯಾತನ ಮುಂದೆ ಬ್ರಾ ಬೇಕೆಂದು ಹೇಗೆ ಕೇಳುವುದೆಂದೇ ತಿಳಿಯದೇ ಮಾತು ತೊದಲಿ ಕಸಿವಿಸಿಗೊಳ್ಳದೇ ವಿಧಿಯಿರಲಿಲ್ಲ. ಸೈಜೆಷ್ಟು? ಎಂಬ ಐತಿಹಾಸಿಕ ಪ್ರಶ್ನೆಯೊಂದು ಧುತ್ತನೇ ಎದುರಾದಾಗಲಂತೂ ಎದೆಯೆಂಬುದು ಥೇಟ್ ಹೊಡೆದುಕೊಳ್ಳುವ ನಗಾರಿಯೇ!. ಚಿಕ್ಕದು ದೊಡ್ಡದು ಎಂಬ ಮುಜುಗರಗಳ ಮಧ್ಯೆ ಐಡಿಯಲ್ ಸೈಜ್ ಎಂಬುದು ಇದೆಯಾ? ಎಂಬ ಸೌಂದರ್ಯ ಮೀಮಾಂಸೆಯ ಪ್ರಶ್ನೆ. ಈ ಮೊಲೆಗಳೆಂಬ ಎರಡು ಮಾಂಸದ ಮುದ್ದೆಗಳು ಪುರುಷನ ಕಾಮೋದ್ರೇಕದ ವಿಷಯಗಳು ಎಂಬ ಅರಿವು ಅವರನ್ನು ಅರಳಿಸಿದ್ದಕ್ಕಿಂತ ನರಳಿಸಿದ್ದೇ ಜಾಸ್ತಿ. 

ರಶ್ಶಿನಲ್ಲಿ ಬಸ್ಸುಹತ್ತುವಾಗಲೋ, ಜಾತ್ರೆ ತೇರುಗಳ ಸಂಭ್ರಮದಲ್ಲಿ ಮೈಮರೆತಾಗಲೋ ಅನಿರೀಕ್ಷಿತವಾಗಿ ಎದೆಹಿಂಡುವವರ  ವಿಕೃತಾನಂದಕ್ಕೆ ಆಘಾತಗೊಳ್ಳತ್ತಾ ಪರಮ ಅಸಹ್ಯದಲ್ಲಿ ಅದ್ದಿಹೋಗುವ ಅವಳು ತುಂಬ ಸಂಭಾವಿತರ ಸೋಗಿನಲ್ಲಿಯೂ ಕಣ್ಣಲ್ಲೇ ಸ್ಪರ್ಷಿಸುವ ಮಹನೀಯರ ಕುರಿತೂ ರೇಜಿಗೆಪಡುತ್ತಲೇ ಬೆಳೆದಳು. ಇನ್ನು ಅತ್ಯಾಚಾರಗಳೆಂಬ ಘೋರಗಳಂತೂ ಇಡೀ ಮುಕುಲವೇ ನಾಚಿ ತಲೆತಗ್ಗಿಸುವ ಘಟನೆಗಳು. ಇದೆಲ್ಲದರ ಹಿಂದೆ ಹೆಣ್ಣಿನ ದೇಹವನ್ನು ಹೇಗೆ ನೋಡಬೇಕೆಂಬ ನೋಟಕ್ರಮವೇ ನಮ್ಮಲ್ಲಿ ಮೂಡಿಲ್ಲವೆಂಬುದು ಇನ್ನೂ ತಲೆತಗ್ಗಿಸಬೇಕಾದ ಸಂಗತಿ.

ಹೆಣ್ಣಿನ ದೇಹವನ್ನು ಆಳುವ ಈ ಅಧಿಕಾರಕ್ಕೆ ನಾನಾ ವಿಕೃತ ಮುಖಗಳಿವೆ. ಹತ್ತೊಂಭತ್ತನೇ ಶತಮಾನದ ಆದಿಭಾಗದ ಕೇರಳದಲ್ಲಿ ಮೊಲೆಗಳಮೇಲೆ ವಿಧಿಸಲಾಗುತ್ತಿದ್ದ ತೆರಿಗೆಯ ವಿಚಿತ್ರ ಕತೆ ನಮ್ಮಲ್ಲಿನ ಜಾತಿಸಮಾಜದ ಕ್ರೂರಮುಖವೊಂದನ್ನು ಪರಿಚಯಿಸುತ್ತದೆ. ತಿರುವಾಂಕೂರಿನ ರಾಜನೊಬ್ಬ ವಿಧಿಸಿದ್ದ ಶಾಸನವೇನೆಂದರೆ ಅಲ್ಲಿನ ಕೆಳಜಾತಿಯ ಸ್ತ್ರೀಯರು ತೆರೆದೆದೆಯಲ್ಲಿ ಇರಬೇಕಾಗಿತ್ತು. ಎದೆಮುಚ್ಚುವ ಬಟ್ಟೆ ಧರಿಸಬೇಕಾದರೆ ಮೊಲೆತೆರಿಗೆಯನ್ನು ಕಟ್ಟಬೇಕಾಗಿತ್ತು. ಬಟ್ಟೆಯಿಂದ ಅವರ ಜಾತಿಯನ್ನು ಗುರುತಿಸುವ ಕ್ರೌರ್ಯ ಒಂದುಬಗೆಯದಾದರೆ,  ಕೆಳಜಾತಿಯ ಹೆಣ್ಣಿನ ದೇಹವು ಸದಾ ಭೋಗಯೋಗ್ಯವೆಂಬ ಪುರುಷಾಧಿಕಾರದ ಅಹಂಕಾರ ಮತ್ತೊಂದು ಕ್ರೌರ್ಯ. ಈ ಎರಡೂ ಬಗೆಯ ಅವಮಾನಗಳಲ್ಲಿ ನೊಂದ ನಂಗೇಲಿ ಎಂಬ ಹೆಣ್ಣು ತನ್ನ ಮೊಲೆಗಳನ್ನೇ ಕತ್ತರಿಸಿಕೊಡುವ ಮೂಲಕ ಪ್ರಭುತ್ವಕ್ಕೊಡ್ಡಿದ ಪ್ರತಿರೋಧ ಯಾತನಾದಾಯಕವಾದುದು. ಇಂದಿನ ಬಂಡವಾಳಶಾಹಿ ಜಗತ್ತು ಈ ಕ್ರೌರ್ಯವನ್ನು ನಾಜೂಕಾಗಿ ಎಸಗುತ್ತಿದೆ. ಇಂದು ತೆರೆದೆದೆಯ ನಂಗೇಲಿಯರು ತಮ್ಮ ದೇಹದ ಮೇಲಿನ ಅಧಿಕಾರವನ್ನು ಪ್ರಶ್ನಿಸುತ್ತಿಲ್ಲ. ಬದಲಿಗೆ ದೇಹವನ್ನೇ ಬಂಡವಾಳವಾಗಿಸಿಕೊಂಡರೆ ತಪ್ಪೇನು? ಎಂಬ ಪ್ರಶ್ನೆಗಳನ್ನು ಕೇಳುತ್ತಿದ್ದಾರೆ. ಕಮರ್ಶಿಯಲ್ ಸಿನಿಮಾಗಳ ಸಿದ್ದಸೂತ್ರಗಳಲ್ಲಿ ಈ ಅಂಗಾಂಗ ಪ್ರದರ್ಶನವೂ ಒಂದು ಎಂಬುದನ್ನು ವ್ಯಾಪಾರೀ ಜಗತ್ತು ಒಪ್ಪಿಕೊಂಡುಬಿಟ್ಟಿದೆ. ಮತ್ತು ಅದು ನಟಿಯರ ಬೋಲ್ಡ್ ವ್ಯಕ್ತಿತ್ವವನ್ನು ತೋರಿಸುತ್ತದೆಯೆಂಬ ಹುಸಿಭ್ರಮೆಗಳೂ ಸೃಷ್ಟಿಯಾಗಿವೆ. ಅವಳನ್ನು ಐಟಂ ನಂಬರ್ ಆಗಿಸಿ ಹಣದೋಚುವ ನಿರ್ಮಾಪಕರ ಲೋಭವೂ ಅಲ್ಲಿ ಬಿಕರಿಯಾಗುತ್ತಿರುವ ಅವಳ ಖಾಸಗಿತನವೂ ಲಜ್ಜೆಯನ್ನು ಮೀರಿ ಮೌನತಾಳಿವೆ. ಹೆಣ್ಣನ್ನು ಇಡೀಜಗತ್ತಿನ ಮುಂದೆ ಬೆತ್ತಲೆ ನಿಲ್ಲಿಸುವ ಸೌಂದರ್ಯ ಸ್ಪರ್ಧೆಗಳು ಹಾಗೂ ಅದಕ್ಕಂಟಿಕೊಂಡ ಮಾಡೆಲಿಂಗ್ ಜಗತ್ತು ಒಂದು ನಿರ್ದಿಷ್ಟ ಸೌಂದರ್ಯ ಮೀಮಾಂಸೆಯನ್ನೇ ನಿರ್ಮಿಸಿಬಿಟ್ಟಿವೆ. ಈಗ ಅವಳು ಅಂಥ ಪ್ರಮಾಣಬದ್ಧ ದೇಹಕ್ಕಾಗಿ ತನ್ನನ್ನೇ ಪ್ರಯೋಗಕ್ಕೆ ಒಡ್ಡಿಕೊಂಡಾಗಿದೆ. ಇದೆಲ್ಲ ಅವರವರ ವೈಯಕ್ತಿಕ ಆಯ್ಕೆಯೆಂದು ಮೇಲ್ನೋಟಕ್ಕೆ ಅನಿಸಿದರೂ ಇದರ ಹಿಂದೆ ಪುರುಷ ನಿರ್ಮಿತ ಸೌಂದರ್ಯ ಮೀಮಾಂಸೆಯೊಂದು ಅಮೂರ್ತವಾಗಿ ಅಧಿಕಾರ ಸ್ಥಾಪಿಸಿರುವುದು ಸತ್ಯ. 

ಈ ಮೊಲೆಯ ಸುತ್ತಲೂ ಸುತ್ತಿಕೊಂಡ ಸೌಂದರ್ಯ ರಾಜಕಾರಣವು ಇಲ್ಲಿಗೇ ನಿಲ್ಲುವುದಿಲ್ಲ. ಇದು ಸಂಸಾರಿಕ ಆವರಣವನ್ನೂ ಸಾಮಾಜಿಕ ಆವರಣವನ್ನೂ ವ್ಯಾಪಿಸಿಕೊಂಡಿದೆ. ಅತ್ಯಂತ ಪ್ರತಿಭಾವಂತ ಹಾಗೂ ಯಶಸ್ವೀ ಮಹಿಳೆಯೊಬ್ಬಳು ತನ್ನ ಚಿಕ್ಕ ಮೊಲೆಗಳ ಕಾರಣದಿಂದ ಈಗಲೂ ಅವಮಾನಕ್ಕೊಳಗಾಗಬೇಕಾಗುತ್ತದೆ. ಕೊನೆಗೂ ಅವಳು ಪುರುಷನನ್ನು ಸದಾ ಹಿಡಿದಿಟ್ಟುಕೊಳ್ಳುವಂಥ ಮೈಮಾಟವನ್ನು ಹೊಂದಿರುವುದೇ ಮುಖ್ಯ ಎಂಬ ಮಿಥ್ಯೆಗಳು ಇನ್ನೂ ಕೆಲವು ಅಪಕ್ವ ಹೆಂಗಸರಲ್ಲಿ ಉಳಿದುಹೋಗಿವೆ. ಇತ್ತೀಚೆಗೆ ಅತ್ತೆಯೊಬ್ಬಳು ತನ್ನ ಸೊಸೆಯನ್ನು ಅವಳ ಚಿಕ್ಕಮೊಲೆಗಳನ್ನು ಉಲ್ಲೇಖಿಸಿ ಹಂಗಿಸುವುದನ್ನು ಕಂಡು ಅಚ್ಚರಿಯಾಯಿತು. ದೊಡ್ಡ ಮೊಲೆಯಿರುವ ಹೆಣ್ಣು ಚಿಕ್ಕ ಮೊಲೆಯಿರುವ ಹೆಣ್ಣಿಗಿಂತ ತಾನು ಶ್ರೇಷ್ಠಳೆಂಬುದನ್ನು ಸ್ಥಾಪಿಸಹೊರಟ ಈ ಘಟನೆ ಮೇಲ್ನೋಟಕ್ಕೆ ಹಾಸ್ಯಾಸ್ಪದವಾಗಿ ತೋರಿದರೂ ಆಳವಾಗಿ ಬೇರೂರಿದ ದೇಹಕೇಂದ್ರಿತ ಮಿಥ್ಯೆಯೊಂದನ್ನು ಇದು ದರ್ಶನ ಮಾಡಿಸಿತು. ಸೊಸೆಯೇನೋ ಆ ಮಾತನ್ನು ಮೌನವಾಗಿ ನುಂಗಿ ನಕ್ಕು ಮುನ್ನಡೆದಳು. ಆದರೆ ಮೊಲೆ ಮುಡಿಗಳ ಹಂಗಿಲ್ಲದ ಆಂತರ್ಯದ ಸೌಂದರ್ಯವನ್ನು, ಸ್ವಂತಿಕೆಯ ಸೊಬಗನ್ನು, ಅದಮ್ಯ ಆತ್ಮವಿಶ್ವಾಸದ ಮುಪ್ಪಿಲ್ಲದ ಮೆರಗನ್ನು ಅತ್ತೆಯ ತಲೆಮಾರಿಗೆ ಅರಿವಾಗಿಸುವುದು ಹೇಗೆ?. ತನ್ನ ಸ್ವಂತದ ಸೌಂದರ್ಯ ಮೀಮಾಂಸೆಯೊಂದನ್ನು ಹೆಣ್ಣು ತಾನೇ ಕಟ್ಟಿಕೊಳ್ಳುವ ಮೂಲಕ ಬೌದ್ಧಿಕವಾಗಿಯೂ ಮುಕ್ತಳಾಗುವ ಅಗತ್ಯವಿದೆ ಎಂಬುದನ್ನು ಈ ಘಟನೆ ಮತ್ತೆಮತ್ತೆ ಮನವರಿಕೆ ಮಾಡಿಸಿತು. 

ತೆರೆದೆದೆಯಲ್ಲಿ ಓಡಾಡುವ ಆದಿವಾಸಿ ಮಹಿಳೆಯರಿಗೆ ಮೊಲೆಯೊಂದು ಲಜ್ಜೆಯ ವಸ್ತುವಲ್ಲ. ಅದು ಜೋತುಬೀಳುವುದು ಆತಂಕದ ಸಂಗತಿಯೂ ಅಲ್ಲ.  ಅದು ಮೊಲೆಯೂಡಿಸುವ ಮೂಲಕ ಜೀವವನ್ನು ಪೊರೆಯುವ ಜೈವಿಕ ಅಂಗ ಅಷ್ಟೇ. ಅದಕ್ಕಾಗಿ ವಿಶೇಷ ಹೆಮ್ಮೆಯೋ ಕೀಳರಿಮೆಯೋ ಎರಡೂ ಅಲ್ಲಿಲ್ಲ.  ಮೈಕಟ್ಟು ಹಾಳಾಗುವುದೆಂದು ಮೊಲೆ ಬಿಡಿಸಲ್ಪಟ್ಟ ಫೆರೆಕ್ಸ್ ಬೇಬಿಗಳೂ ಅಲ್ಲಿರುವುದಿಲ್ಲ. ‘ಮೊಲೆಗಳ ಅಳತೆಯನ್ನು ಹೆಚ್ಚಿಸಿಕೊಳ್ಳಿ, ಆಕಾರವನ್ನು ತಿದ್ದಿತೀಡಿ ರೂಪಿಸಿಕೊಳ್ಳಿ’ ಎಂಬ ಜಾಹೀರಾತುಗಳು ಹುಟ್ಟಿಕೊಳ್ಳುವುದಿಲ್ಲ.

ಉತ್ತರಕನ್ನಡದ ಹಾಲಕ್ಕಿ ಮಹಿಳೆಯರು ಕುಪ್ಪಸವಿಲ್ಲದ ತೆರೆದ ತೋಳುಗಳು ಹಾಗೂ ಬೆತ್ತಲೆ ಬೆನ್ನನ್ನು ಸಹಜ ಅಂಗಭಂಗಿಯಾಗಿ ಹೊಂದಿದ್ದಾರೆ. ಎದೆಮುಚ್ಚುವ ಅವರ ಮಣಿಸರಗಳು ಅವರಿಗೊಂದು ಅಪೂರ್ವ ಮೆರಗನ್ನೇ ನೀಡುತ್ತವೆ. ಅವರ ಕಲಾವಂತಿಕೆಗೆ ಸಾಕ್ಷಿಯಾಗುತ್ತವೆ. ಮೀನುಪೇಟೆಯಲ್ಲೋ ಸಂತೆಯಲ್ಲೋ ಬಸ್ಸಿನಲ್ಲೋ ಕಾಣಸಿಗುವ ಅವರು ಯಾವ ಮುಜುಗರವನ್ನೂ ಮೂಡಿಸುವುದಿಲ್ಲ. ಅವರ ದೈಹಿಕ ಶ್ರಮವೇ ಅವರಿಗೊಂದು ಅಪೂರ್ವ ಚೆಲುವನ್ನು ನೀಡಿದೆ. ಅವರ ಶ್ರಮ ಹಾಗೂ ಸೃಜನಶೀಲತೆಗಳು ಒಂದನ್ನೊಂದು ಸಜವಾಗಿ ಅಪ್ಪಿ ಹಿಡಿದಿವೆ. ಸಂಸ್ಕೃತಿ ಸಭ್ಯತೆ ಎನ್ನುವುದಕ್ಕೆ ಹೊಸ ಅರ್ಥಗಳನ್ನೇ ಅವರು ಹೊಳೆಯಿಸುತ್ತಾರೆ. ದೇಹವನ್ನು ನಮ್ಮ ಸೊಕಾಲ್ಡ್ ನೈತಿಕ ಪರಿಕ್ಪನೆಯಿಂದಯಿಂದ ಮುಕ್ತಗೊಳಿಸಲು ನಾವು ನಮ್ಮ ನೋಟದ ಮಿತಿಗಳನ್ನು ಹಿಗ್ಗಿಸಿಕೊಳ್ಳುವ ಜರೂರಿದೆ. ಹಿಂದೆ ಸಂಪ್ರದಾಯಸ್ಥರ ಮನೆಯಹೆಣ್ಣುಮಕ್ಕಳಿಗೆ ಬ್ರಾ ತೊಡುವದೇ ಒಂದು ಕ್ರಾಂತಿಯಾಗಿದ್ದರೆ, ಆಧುನಿಕ ಮುಕ್ತ ಸಮಾಜದ ಮಹಿಳೆಯರಿಗೆ ಅದನ್ನು ಕಿತ್ತೆಸೆಯುವುದೂ ಒಂದು ಕ್ರಾಂತಿ. ತಮ್ಮ ದೇಹದ ಲಜ್ಜೆಯಿಂದ ಲಿಬರೇಟ್ ಆಗಬಯಸುವ ಹಂಬಲವಂತೂ ಎಲ್ಲ ಕಾಲದಲ್ಲೂ ಕಾಡಿದೆ. ಅಂದು ಮೊಲೆಮುಚ್ಚಿ ಬದುಕುವುದು ನಂಗೇಲಿಯಂಥ ಕೆಳಜಾತಿಯ ಹೆಣ್ಣಿಗೆ ಅಪರಾಧವಾಗಿದ್ದರೆ, ಮೊಲೆಬಿಚ್ಚಿ ಇರುವುದು ಸುಸಂಸ್ಕೃತಳೆನಿಸಿಕೊಂಡ ಹೆಣ್ಣಿಗೆ ಅಪರಾಧ. ಇವೆರಡರ ಹಿಂದೆಯೂ ಇರುವ ಲಿಂಗರಾಜಕಾರಣವನ್ನು ಭೇದಿಸಿದಾಗ ಮಾತ್ರ  ಮುಕ್ತಗೊಳ್ಳುವುದು ಸಾಧ್ಯ. ನಡುವೆ ಸುಳಿವಾತ್ಮ ಗಂಡೂ ಅಲ್ಲ ಹೆಣ್ಣೂ ಅಲ್ಲವೆಂಬ ಅರಿವಿಗೆ ಕಣ್ತೆರೆದರೆ ವಿಕಾಸಕ್ಕೆ ದೇಹವೊಂದು ಬಂಧನವಾಗುವುದಿಲ್ಲ.

ಹೆಣ್ಣಿನ ದೇಹ ಸೌಷ್ಠವವನ್ನು ಕಾಮದ ಕಣ್ಣಿನಿಂದ ಮುಕ್ತಗೊಳಿಸಿದಾಗಲೆಲ್ಲ ನಮ್ಮ ಸಂಸ್ಕೃತಿಯಲ್ಲಿ ಅದು ಆರಾಧನೆಯ ಸಂಗತಿಯಾಗಿದೆ. ಯೋನಿ ಪೂಜೆಯು ಫಲವತ್ತತೆಯ ಸಂಕೇತವಾಗಿದೆ. ನಮ್ಮಲ್ಲಿ ಸಿಗುವ ತೆರೆದ ಯೋನಿಯ ಲಜ್ಜಾಗೌರಿಯ ವಿಗ್ರಹಗಳು ಇದನ್ನು ದೃಢಪಡಿಸುತ್ತವೆ. ದೇವಿ ಲಲಿತೆಯನ್ನು ಮೊಲೆಯ ಆಕೃತಿಯಲ್ಲಿ ಪೂಜಿಸುವ ಸಂಪ್ರದಾಯವೂ ನಮ್ಮಲ್ಲಿದೆ. ಹೆಣ್ಣಿನ ದೇಹವು ಜಗತ್ತನ್ನು ಸೃಷ್ಟಿಸುವ ಹಾಗೂ ಪೊರೆಯುವ ಬೃಹತ್ ಸಂಜ್ಞೆಗಳಾಗಿ ಇಲ್ಲಿತೋರುತ್ತವೆ. ಜನಪದರ ಬದುಕಿನಲ್ಲಿ ಇಂಥ ಆಚರಣೆಗಳು ವಿಫುಲವಾಗಿವೆ. ಶಂಕರಾಚಾರ್ಯರ ಸೌಂದರ್ಯಲಹರೀ ಹಾಗೂ ಲಲಿತಾಸಹಸ್ರಗಳಲ್ಲಿ ಸ್ತ್ರೀದೇಹ ಸೌಷ್ಠವವು ಸ್ತುತಿಸಲ್ಪಟ್ಟಿದೆ. ತಾಯಿಯ ತೊಡೆ, ನಾಭಿ, ಮೊಲೆಗಳು ಶಿಶುವನ್ನು ಹೆರುವ ಪೋಷಿಸುವ ಕ್ರಿಯೆಗಳಲ್ಲಿ ಸಹಜಾಭಿವ್ಯಕ್ತಿ ಪಡೆದಿವೆ. ಜಗತ್ತಿನ ತಾಯಿಯ ಭವ್ಯ ಕಲ್ಪನೆಯೊಂದು ಸ್ತ್ರೀ ದೇಹಸೌಷ್ಠವದ ಮೂಲಕ ಅಭಿವ್ಯಕ್ತಿಸಲ್ಪಡುವಾಗ ಅಲ್ಲಿ ಮನಸ್ಸು ಹಾಗೂ ಕಣ್ಣಿಗಂಟಿದ ಕಾಮವು ಭಕ್ತಿ ಹಾಗೂ ಪ್ರೇಮದಲ್ಲಿ ಕರಗುತ್ತಿರುತ್ತದೆ. ಮೊಲೆಹಾಲು ನಂಜಾದರೆ ಜೀವಕ್ಕೆ ತಾವು ಇನ್ನೆಲ್ಲಿದೆ?. ದೇಹದ ಘನತೆಯನ್ನು ಕುಗ್ಗಿಸದಿರೋಣ.

ಈ ಅಂಕಣದ ಹಿಂದಿನ ಬರೆಹಗಳು:
ನೆಲದಕಣ್ಣಿನ ಕಾರುಣ್ಯ: ನೋವೂ ಒಂದು ಹೃದ್ಯ ಕಾವ್ಯ

ಫಣಿಯಮ್ಮ ಎಂಬ ಹೊಸ ಪುರಾಣ:
‘ಹಾರುವ ಹಕ್ಕಿ ಮತ್ತು ಇರುವೆ...’ ಅನನ್ಯ ನೋಟ
ಹೊತ್ತು ಗೊತ್ತಿಲ್ಲದ ಕಥೆಗಳು
ಹೊಳೆಮಕ್ಕಳು : ಅರಿವಿನ ಅಖಂಡತೆಗೆ ತೆಕ್ಕೆಹಾಯುವ ಕಥನ
ಕನ್ನಡ ಚಿಂತನೆಯ ಸ್ವರೂಪ ಹಾಗೂ ಮಹಿಳಾ ಸಂವೇದನೆಗಳು
ಸಾಹಿತ್ಯ ಸರಸ್ವತಿ ಬದುಕಿನ ‘ಮುಂತಾದ ಕೆಲ ಪುಟಗಳು’...
ಹೋದವರು ಹಿಂದಿರುಗಿ ಬರಲು ಹಾದಿಗಳಿಲ್ಲ
ನಿಗೂಢ ಮನುಷ್ಯರು: ತೇಜಸ್ವಿಯವರ ವಿಶ್ವರೂಪ ದರ್ಶನ
ಕನಕನ ಕಿಂಡಿಯಲ್ಲಿ ಮೂಡಿದ ಲೋಕದೃಷ್ಟಿ
ವಿಶ್ವಮೈತ್ರಿಯ ಅನುಭೂತಿ : ಬೇಂದ್ರೆ ಕಾವ್ಯ
ಕಾರ್ನಾಡರ ಯಯಾತಿ- ಕಾಲನದಿಯ ತಳದಲ್ಲಿ ಅಸ್ತಿತ್ವದ ಬಿಂಬಗಳ ಹುಡುಕಾಟ
ಹರಿವ ನದಿಯಂಥ ಅರಿವು : ಚಂದ್ರಿಕಾರ ಚಿಟ್ಟಿ
ಕಾಲುದಾರಿಯ ಕವಿಯ ಅ_ರಾಜಕೀಯ ಕಾವ್ಯ

 

MORE NEWS

ಪರಿಘಾಸನ ಮತ್ತು ಅರ್ಧ ಚಕ್ರಾಸನ 

16-04-2024 ಬೆಂಗಳೂರು

"ಪರಿಘಾಸನ ಆಸನವು ) ಪಿತ್ತ ಜನಕಾಂಗ ಮತ್ತು ಮೇದೋಜೀರಕ ಚೈತನ್ಯಗೊಳ್ಳುವಂತೆ ಮಾಡುತ್ತದೆ. ಹಾಗೆಯೇ ‘ಅರ್ಧ ಚಕ್...

ಲೋಕಸಭಾ ಚುನಾವಣೆಗಳ ಸುತ್ತಮುತ್ತ ಒಂದು ಸುತ್ತು

15-04-2024 ಬೆಂಗಳೂರು

"ಪರಸ್ಪರ ರೋಚಕ ನಿಂದನೆಗಳು. ಕ್ಷೇತ್ರವಾರು ಚಕ್ಕರಗುಳ್ಳಿ ಇಡುವ ಚತುರ ವಿವರಗಳು. ಹೊಸ ಹೊಸ ಬೈಗುಳಗಳು. ಮಾಧ್ಯಮಗಳಿಗ...

ಉಪವಿಷ್ಟಕೋನಾಸನ ಮತ್ತು ಪವನಮುಕ್ತಾಸನ

09-04-2024 ಬೆಂಗಳೂರು

"ಉಪವಿಷ್ಟಕೋನಾಸನ ಯೋಗಾಸನವು ಮನಸ್ಸನ್ನು ಶಾಂತಗೊಳಿಸುತ್ತದೆ ಮತ್ತು ಮಾಂಸಗಳ ತೂಕವನ್ನು ಕಡಿಮೆಗೊಳಿಸುತ್ತದೆ. ಪವನಮು...