ಮೊಮ್ಮಕ್ಕಳ ಪೋಷಣೆಗಾಗಿ ಬೆಂಗಳೂರಿಗೆ ಬಂದ ಯಾದಗಿರಿ ಹೆಣ್ಣುಮಗಳ ಕತೆ

Date: 16-05-2025

Location: ಬೆಂಗಳೂರು


"ಹೊಟ್ಟೆ ಪಾಡಿಗಾಗಿ ಬೆಂಗಳೂರಿಗೆ ಬಂದ ಉತ್ತರ ಕರ್ನಾಟಕದ ನಿಮಗೆಲ್ಲ " ಬೆಂಗಳೂರು ಹೊಟ್ಟೆಯ ಹಸಿವು ನೀಗಿಸುತ್ತದಲ್ಲ"? ಮತ್ತೇನಾಗಬೇಕೆಂಬ ಬೆಂಗಳೂರು ಮೂಲದ ಕೆಲವು ಸಂಜ್ಞಾತರ್ಕಿಗರಿಗೆ ನನ್ನ ಬಳಿಯೂ ಕಠೋರ ಉತ್ತರಗಳಿವೆ. ಹೇಳಲೇಬೇಕಾದ ಕಾಲ ಬಂದಾಗ ಮುಲಾಜಿಲ್ಲದೇ ಮುಖಕ್ಕೆ ಹೊಡೆದಂತೆ ಹೇಳಿ ಬಿಡುವೆ. ಹೋಗಲಿ ಬಿಡಿ, ಸಧ್ಯಕ್ಕೆ ಅದೆಲ್ಲ ಬೇಡವೆನಿಸುತ್ತದೆ," ಎನ್ನುತ್ತಾರೆ ಮಲ್ಲಿಕಾರ್ಜುನ ಕಡಕೋಳ. ಅವರು ತಮ್ಮ ರೊಟ್ಟಿ ಬುತ್ತಿ ಅಂಕಣಕ್ಕೆ ಬರೆದ ಅವರ ‘ಮೊಮ್ಮಕ್ಕಳ ಪೋಷಣೆಗಾಗಿ ಬೆಂಗಳೂರಿಗೆ ಬಂದ ಯಾದಗಿರಿ ಹೆಣ್ಣುಮಗಳ ಕತೆ' ಕುರಿತು ಬರೆದ ಲೇಖನ.

ಹೌದು ಬೆಂಗಳೂರು ಎಂದರೆ ನನಗೆ ಮಾತ್ರವಲ್ಲ ನನ್ನಂಥ ಅನೇಕರ ಪಾಲಿಗೆ ಕಲರ್ಫುಲ್ ನರಕವೇ ಆಗಿದೆ. ಅದರಲ್ಲೂ ನಮ್ಮ ಹೈದರಾಬಾದ್ ಕರ್ನಾಟಕದ ಕಡೆಯಿಂದ ಹೊಟ್ಟೆ ತಿಪ್ಪಲಿಗಾಗಿ ಬೆಂಗಳೂರಿಗೆ ಬಂದಿರುವ ಅನೇಕರ ನೋವು ತುಂಬಿದ ಬದುಕಿನ ಸೋಳಾಣೆ ಅನುಭವ ಕಥನಗಳು ಸಹಿತ ಅದಕೆ ಹೊರತಲ್ಲ. ಹೊಟ್ಟೆ ತಿಪ್ಪಲು ಅಂದರೆ ಕೇವಲ ಒಪ್ಪತ್ತಿನ ಊಟದ ಅಗತ್ಯವೇ ಅದಲ್ಲ. ಅಷ್ಟಕ್ಕೂ ಅಂತಹ ಹೊಟ್ಟೆಯ ಹಸಿವು ನಿವಾರಣೆಗಾಗಿ ಬಂದ ದಿನನಿತ್ಯದ ಬಿಲ್ಕುಲ್ ಹಸಿವಿನ ಕತೆ ಅದಲ್ಲ. ಹಾಗೆಯೇ ನಮ್ಮವರ ಅದರಲ್ಲೂ ಕೂಲಿ ಕೆಲಸಗಾರರ ಸಂಕಟದ ಬದುಕಿನ ಕತೆ ಮಾತ್ರ ಅದಲ್ಲ. ಇನ್ಫೋಸಿಸ್ ನಂತಹ ಮಲ್ಟಿ ನ್ಯಾಷನಲ್ ಲೆವೆಲ್ಲಿನ ದೊಡ್ಡ ಪ್ರಮಾಣದ ಐಟಿ ಬೀಟಿ ಕಂಪನಿಗಳ ಎಂಜಿನಿಯರ್ ಮಕ್ಕಳ ತಂದೆ ತಾಯಿಗಳ ನೋವು ಅಕ್ಷರಶಃ ಅಕ್ಷರಗಳಲ್ಲಿ ಬರೆದು ಹೇಳಲಾಗದು. ಅದರಲ್ಲೂ ಹಿಂದುಳಿದ ಕಲ್ಯಾಣ ಕರ್ನಾಟಕವೆಂಬ ಹಳೆಯ ಹೈದರಾಬಾದ್ ಕರ್ನಾಟಕದ ಹಿಂದುಳಿದ ಹಿರೀಕ ಪೋಷಕರು ಮಾತ್ರವಲ್ಲ ಬಹುತೇಕ ಹಿರಿಯ ಜೀವಗಳು ಬೆಂಗಳೂರಲಿ ಅನುಭವಿಸುತ್ತಿರುವ ನೋವಿನ ಸಂಗತಿಗಳನು ಅಕ್ಷರಶಃ ಹೇಳಲಾಗದು. ಅದೇನು ಅಂತಹ ಘನಂಧಾರಿ ಸಂಕಟದ ಸಮಾಚಾರ ಎಂದು ಹುಬ್ಬೇರಿಸ ಬೇಡಿರಿ.

ಹೊಟ್ಟೆ ಪಾಡಿಗಾಗಿ ಬೆಂಗಳೂರಿಗೆ ಬಂದ ಉತ್ತರ ಕರ್ನಾಟಕದ ನಿಮಗೆಲ್ಲ " ಬೆಂಗಳೂರು ಹೊಟ್ಟೆಯ ಹಸಿವು ನೀಗಿಸುತ್ತದಲ್ಲ"? ಮತ್ತೇನಾಗಬೇಕೆಂಬ ಬೆಂಗಳೂರು ಮೂಲದ ಕೆಲವು ಸಂಜ್ಞಾತರ್ಕಿಗರಿಗೆ ನನ್ನ ಬಳಿಯೂ ಕಠೋರ ಉತ್ತರಗಳಿವೆ. ಹೇಳಲೇಬೇಕಾದ ಕಾಲ ಬಂದಾಗ ಮುಲಾಜಿಲ್ಲದೇ ಮುಖಕ್ಕೆ ಹೊಡೆದಂತೆ ಹೇಳಿ ಬಿಡುವೆ. ಹೋಗಲಿ ಬಿಡಿ, ಸಧ್ಯಕ್ಕೆ ಅದೆಲ್ಲ ಬೇಡವೆನಿಸುತ್ತದೆ. ದೂರದೂರಿನ ನಮ್ಮದು ಬಿಟ್ಟುಬಿಡ್ರಿ. ಬಾಜೂಕಿನ ಕೋಲಾರದಂತಹ ಬಯಲು ಸೀಮಿಗರ ಅನುಭವ ಇದಕ್ಕೆ ಹೊರತಾಗಿ ಉಳಿದಿಲ್ಲವೆಂದರೆ ನೀವೇ ಯೋಚಿಸಿರಿ.

ಅಂತೆಯೇ ಹೊಟ್ಟೆ ಹಸಿವು ನೀಗಿಸಿಕೊಳ್ಳಲು ಇಲ್ಲವೇ ಕೈತುಂಬ ಹಣ ಸಂಪಾದಿಸಲು ನಾವೇಕೆ ಬೆಂಗಳೂರಿಗೆ ಬಂದು ಏಗಬೇಕೆಂಬ ಸಂಕೋಲೆಯ ಸಂಕಟ ಬೆಂಗಳೂರು ಶಹರ ಅರಿಯದೆ ಹೋಗಿದೆ. ಮತ್ತು ಅದೆಲ್ಲವನ್ನು ನಮ್ಮ ಕಲ್ಯಾಣ ಕರ್ನಾಟಕ ಮತ್ತು ಕಿತ್ತೂರು ಕರ್ನಾಟಕ ಸಹಿತ ಅರಿಯದೇ ಹೋದುದು ಬೃಹತ್ ದುರಂತವೇ ಸೈ. ನೆನಪಿರಲಿ ಇನ್ಫೋಸಿಸ್ ನಂತಹ ಸಂಸ್ಥೆ ಸ್ಥಾಪಿಸಿದವರು ನಮ್ಮವರೆಂಬ ನೆನಪು ಕೂಡಾ ನಮಗಿರದಂತಾಗಿದೆ. ಏಕೆಂದರೆ ವಿಶ್ವವೇ ಒಂದು ಹಳ್ಳಿ ಎಂಬ ವ್ಯಾಪಾರಿ ಕಲ್ಪನೆ ನಮ್ಮ ಗ್ರಾಮ್ಯಜನ್ಯ ಮನುಷ್ಯ ಸಂಬಂಧಗಳಿಗೆ ಧಕ್ಕೆ ತಂದು ಬಹಳೇ ವರುಷಗಳಾಗಿವೆ. ತನ್ಮೂಲಕ ಮಾನಸಿಕ ಗುಲಾಮಗಿರಿ ಬೆಳೆಸುತ್ತಲಿವೆ. ಬುದ್ದಿವಂತ ಮನುಷ್ಯರ ಜೀವಸಂವೇದನೆಯ ಜ್ಞಾನದ ಬೇರುಗಳು ನಿರ್ಜೀವಗೊಳ್ಳುತ್ತಲಿವೆ.

ಅಂದರೆ ಇನ್ಫೋಸಿಸ್ ನಂತಹ ಮಲ್ಟಿನ್ಯಾಷನಲ್ ಲೆವೆಲ್ಲಿನ ದೊಡ್ಡ ಪ್ರಮಾಣದ ಐಟಿ ಬೀಟಿ ಕಂಪನಿಗಳ ಎಂಜಿನಿಯರ್ಸ್ ಮತ್ತಿತರೆ ಉದ್ಯೋಗಿಗಳು ಜೀವಬದುಕಿಗೆ ವಿಮುಖರಾಗುತ್ತಿರುವ ಭಯದ ಅಂಚಿನಲ್ಲಿದ್ದಾರೆ. ತಮ್ಮ ಮಕ್ಕಳು ಮನುಷ್ಯ ಸಂಬಂಧಗಳಿಂದ ದೂರ ಸರಿಯುವ 'ಘೋರಭಯ' ಅವರನ್ನು ಕಾಡದಿರದು. ಅದಕ್ಕೆಂತಲೇ ತಮ್ಮ ಪುಟ್ಟಪುಟ್ಟ ಮಕ್ಕಳ ಪಾಲನೆ, ಪೋಷಣೆಗಾಗಿ ದೂರದೂರಿನ ವಯಸ್ಸಾದ ತಮ್ಮ ಅಪ್ಪ ಅಮ್ಮಂದಿರನ್ನು ಬೆಂಗಳೂರಿಗೆ ಕರೆ ತರುತ್ತಾರೆ. ಅವರು ತಮ್ಮ ಮಕ್ಕಳಲ್ಲಿ ಕುಟುಂಬ ಬದುಕಿನ ಜೀವಪ್ರೀತಿ ಬಿತ್ತಿ ಬೆಳೆಯಬೇಕೆಂಬ ಮತ್ತು ಜೈವಿಕ ಸಂಬಂಧ ಹುಟ್ಟುಹಾಕುವ, ನೈಸರ್ಗಿಕ ವಾತ್ಸಲ್ಯ ಉಳಿಸಲೆಂಬ ಉತ್ಕಟ ಹಂಬಲ. ಆದರೆ ಬಹುದೂರದ ಊರುಗಳಿಂದ ಬೆಂಗಳೂರಿಗೆ ಬಂದಿರುವ ಅಂತಹ ಪೋಷಕರ ಸೆರೆಮನೆ ವಾಸದ ಬಗ್ಗೆ ಬರೆದು ಹೇಳಲಾಗದ; ಅಕ್ಷರಶಃ ಕೇಳಿಯೇ ತಿಳಿದುಕೊಳ್ಳುವ ಸಂಕಟ.

ಅವೆಲ್ಲ ಕಾರ್ಪೋರೆಟ್ ಲೋಕೋತ್ಪನ್ನದ ಕತೆಗಳು. ಖರೇಖರೇ ಮನುಷ್ಯ ಸಂಬಂಧಗಳು ನಿರ್ನಾಮ ಆಗುತ್ತಿರುವ ಮತ್ತೊಂದೆಡೆ ಕೃತಕ ಕಳ್ಳುಬಳ್ಳಿ ಸಂಬಂಧಗಳನ್ನೆ ಸೃಷ್ಟಿಸುತ್ತಿರುವ ಕುಬೇರ ಲೋಕದ ಕತೆಗಳು. ಅವೆಲ್ಲವೂ ಬಹುಪಾಲು ಬೆಂಗಳೂರೇತರ ಕುಟುಂಬಗಳ ಕತೆಗಳು. ಅದರಲ್ಲೂ ಉತ್ತರ ಕರ್ನಾಟಕ, ಹಿಂದುಳಿದ ಕಲ್ಯಾಣ ಕರ್ನಾಟಕ ಎಂಬ ಹಳೆಯ ಹೈದರಾಬಾದ್ ಕರ್ನಾಟಕದ ಹಿರೀಕ ಪೋಷಕರ ನೋವಿನ ಸಂಗತಿಗಳು. ಅದೇನು ಘನಂಧಾರಿ ಸಂಕಟದ ಸಮಾಚಾರ ಎಂದು ಮತ್ತೆ ಹುಬ್ಬೇರಿಸಬೇಡಿರಿ ಪ್ಲೀಸ್.

ಇವು ಕೇವಲ ಕಲ್ಯಾಣ ಕರ್ನಾಟಕದ ಕತೆಗಳು ಮಾತ್ರವಾಗಿ ಉಳಿದಿಲ್ಲ. ಒಟ್ಟಾರೆ ಕರ್ನಾಟಕದ ಮಲ್ಟಿನ್ಯಾಷನಲ್ ಕಂಪನಿಗಳಲ್ಲಿ ಕೆಲಸ ಮಾಡುತ್ತಿರುವ ಎಂಜಿನಿಯರ್ ಮತ್ತಿತರೆ ನೌಕರರ ಅಪ್ಪ ಅವ್ವಂದಿರ ಸಂಕಟದ ಕಥೆಗಳಿವು. ಅವರ ಬದುಕೊಂದು ಸುಸಜ್ಜಿತ ಸೆರೆಮನೆ. ಕೆಲವರಿಗೆ ಹಣಕಾಸಿನ ತೊಂದರೆ ಇಲ್ಲದಿರಬಹುದು. ಆದರೆ ವೃದ್ಧಾಪ್ಯದ ವಯೋಸಹಜ ವ್ಯಸನಗಳಿಗೆ ದೊರಕಬೇಕಾದ ಅಗತ್ಯ ಪ್ರೀತಿಯ ಉಪಚಾರಗಳಿಂದ ವಂಚಿತರು. ಮತ್ತೆ ಕೆಲವರಿಗೆ ತಾವು ಹುಟ್ಟಿ ಬೆಳೆದು ಬಾಳಿದ ತನ್ನೂರು, ತನ್ನವರು, ನನ್ನವರೆಂಬ ಕೌಟುಂಬಿಕ ಮತ್ತು ವಠಾರದ ವಾಂಛಲ್ಯಗಳಿಂದ ದೂರಾದ ತಬ್ಬಲಿತನ. ಹೀಗೆ‌ ಹುಡುಕುತ್ತಾ ಹೋದರೆ ಇಂತಹ ನೂರಾರು ಸುಡು ಸುಡುವ ಅನಾಥ ಪ್ರಜ್ಞೆಯ ಹಸಿ ಹಸಿ ಕಾರಣಗಳು‌ ಸಿಕ್ಕಾವು.

ಈಗ್ಗೆ ಕೆಲವು ತಿಂಗಳುಗಳ ಹಿಂದೆ ನಾನು ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ ಸಂಜೆಹೊತ್ತು ವಾಕಿಂಗ್ ಮಾಡುತ್ತಿದ್ದೆ. ನಮ್ಮ ಭಾಗದ ಮಸಬಿನ ಕಡೆಯ ಸೀರೆಯುಟ್ಟ ನಡುವಯಸಿನ ಹೆಣ್ಣುಮಗಳು ಒಣಗಿದ ಸಣ್ಣ ಸಣ್ಣ ಪುಡಿ ಕಟ್ಟಿಗೆ ತುಂಡುಗಳನ್ನು ಆಯ್ದು ಸಿವುಡು ಕಟ್ಟುತ್ತಿದ್ದಳು. ನಮ್ಮಕಡೆಯ ಜವಾರಿ ಉಡುಪಿನ ಜನರನ್ನು ನೋಡುತ್ತಿದ್ದರೆ ಮಾತಾಡಿಸುವ ಯಥೇಚ್ಛ ಹಂಬಲ. ಕಚ್ಚೆ ಧೋತರ ಉಟ್ಟ, ರುಮಾಲು ಸುತ್ತಿದವರನ್ನು ಮತ್ತು ಇಲಕಲ್ ಸೀರೆಯುಟ್ಟ ವಯಸ್ಸಾದ ಹೆಣ್ಣುಮಕ್ಕಳನ್ನು ಬೆಂಗಳೂರಲ್ಲಿ ನೋಡಿದೊಡನೆ ಅಡರಾಸಿ ಬಿದ್ದು ಅವರನ್ನು ಮಾತಾಡಿಸಿ ಯಾವೂರು ಹೆಸರೇನು ಇತ್ಯಾದಿ ವಿವರ ಪಡೆಯುವ ಭಯಂಕರ ಕುತೂಹಲ ನನ್ನದು.

ಮಸಬಿನ ಕಡೆಯ ಆ ಹೆಣ್ಣುಮಗಳ ಬಳಿ ಹೋಗಿ ಯಾವೂರಮ್ಮ‌ ನಿಮ್ದು ಕೇಳುತ್ತಿದ್ದಂತೆ "ಯಾತಗಿರಿ ಕಡೆ, ಮಲಕವ್ವ" ಅಂದಳು. ವಿಶ್ವಾಸದ ಆಕೆಯ ದನಿಯಲ್ಲಿ ಅದೇನೋ ಆಪ್ತತೆ. " ನಮ್ದೂ ಆ ಕಡೆ " ಅಂತ ಆಕೆ ಕೇಳದಿದ್ದರೂ ನಾನೇ ಹೇಳಿಕೊಂಡೆ. ಇಲ್ಲಿಗ್ಯಾಕ ಬಂದೆಮ್ಮ? ನಿಮ್ಮೆಜಮಾನ ಎಲ್ಲಿ? ನಿನ್ನ ಮಕ್ಳು ಮರಿ ಅಂತ ನಾನು ಕೇಳೋದೆ ತಡ, ಮಡುಗಟ್ಟಿ ನಿಂತ ದುಃಖದ ಕಟ್ಟೆಯೊಡೆದು ಕಣ್ಣೀರು ಸುರಿಸತೊಡಗಿದಳು. ಸೆರಗಿನಿಂದ ಕಣ್ಣೀರು ಮತ್ತು ಮೂಗಿನ ನೀರುಸಿಂಬಳ ಒರೆಸಿಕೊಳ್ಳುತ್ತಾ ಎಳೆ ಎಳೆಯಾಗಿ ತನ್ನ ಕತೆ ಹೇಳಿಕೊಂಡಳು.

ನನ್ನ ಒಬ್ಬನೇ ಒಬ್ಬ ಮಗ ಆರು ವರ್ಷದವನಿದ್ದಾಗ ನನ್ನ ಗಂಡ ತೀರಿಕೊಂಡ. ನನ್ ಮಗನ್ನ ಕಾಲಾಗ ಮುಳ್ಳು ನೆಟ್ಟರೆ ನನ್ನ ಕಣ್ಣಾಗ ನೆಟ್ಟಷ್ಟೇ ಸಂಕಟ ಪಡ್ತಿದ್ದೆ. ಕೂಲಿ ನಾಲಿ ಮಾಡಿ ಅವನನ್ನು ಸಾಕಿ ಬೆಳಸಿದೆ. ಕಲಬುರ್ಗಿ ಕಾಲೇಜಿಗೆ ಸೇರಿಸಿ ಇಂಜಿನಿಯರ್ ಸಾಲಿ ಕಲಿಸಿದೆ. ಮಗನೂ ಚೊಲೋ ಓದಿದ. ಇಂಜಿನಿಯರ್ ಪಾಸಾಗಿ ಬೆಂಗಳೂರು ಕಂಪನಿಯಲ್ಲಿ ದೊಡ್ಡ ನೌಕರಿ ಸಿಕ್ತು. ನಾಕೈದು ವರ್ಷ ನನಗ ತಿಂಗ್ಳಾ ತಿಂಗಳಾ ಪಗಾರ ಕೊಟ್ಟಂಗ ರೊಕ್ಕ ಕಳಸ್ತಿದ್ದ. ಅದಾದ ಮ್ಯಾಲ ಯಾಕೋ ರೊಕ್ಕ ಕಳಿಸೋದ ನಿಲ್ಲಿಸಿದ‌. ನನ್ನ ಗಂಡನ ಹೆಸರಿನ ಎರಡೆಕರೆ ಹೊಲ ಇತ್ತು. ಅದರಲ್ಲೇ ನಾನೊಬ್ಬಾಕಿ ನಮ್ಮೂರಾಗ ಜೀವನ ಸಾಗಿಸ್ತಿದ್ದೆ.

ಇದ್ದಕ್ಕಿದ್ದಂತೆ ಒಂದಿನ ನಮ್ಮೂರ ಕುಲಕರ್ಣೇರ ಮನೆಗೆ ಫೋನ್ ಮಾಡಿ ನನ್ನ ಮಗ ನನ್ನ ಸಂಗಾಟ ಮಾತಾಡಿದ. "ನಾನು ಮೇಲ್ಜಾತಿ ಹುಡುಗೀನ ಪ್ರೀತಿ ಮಾಡಿ ಮದುವಿ ಆಗಿರುವೆ. ಅವಳೂ ನನ್ನ ಹಾಂಗ ಇಂಜಿನಿಯರ್ ಅದಾಳ. ನನ್ನ ಹೆಂಡ್ತಿ ಈಗ ದಿನತುಂಬಿದ ಬಸುರಿ. ಅವಳ ಅಪ್ಪ ಅಮ್ಮ' ನನ್ನದು ‌ಕೆಳಜಾತಿ' ಎಂಬ ಕಾರಣಕ್ಕೆ ನನ್ನ ಹೆಂಡತಿಯನ್ನು ನೋಡಿಕೊಳ್ಳಲು ‌ಬರುತ್ತಿಲ್ಲ. ನೀನು ಬಂದು ಬಿಡವ್ವ. ಊರಲ್ಲಿ ಒಬ್ಳೆ ಇದ್ದು ಏನ್ ಮಾಡ್ತೀ." ಅಂತ ಒಂದೇ ಸಮ ಅಲವತ್ತುಗೊಂಡ." ನನಗೆ ಕನಿಕರದ ಕಟ್ಟೆ ಒಡೆದು ಹೋಯಿತು. ಅವತ್ತು ರಾತ್ರೋರಾತ್ರಿಯೇ ಬಸ್ಸು ಹತ್ತಿ ಬೆಂಗಳೂರಿಗೆ ಬಂದುಬಿಟ್ಟೆ. ಕಡ್ಲೀಬ್ಯಾಳಿ ಬಣ್ಣದ ನನ್ನ ಸೊಸೆಯನ್ನು ಕಂಡು ನಾನು ಬಾಳಂದ್ರ ಬಾಳ ಖುಷಿಪಟ್ಟೆ. ಅದೇಕೋ ಆಕೆಗೆ ನನ್ನ ಮ್ಯಾಲ ಹೇಳಿಕೊಳ್ಳುವ ಪ್ರೀತಿ ಹುಟ್ಟಲಿಲ್ಲ. ನಾನು ಸ್ವಚ್ಛ ಇರಲ್ಲ, ಹಾಂಗ ಹೀಂಗ ಅಂತ ತನ್ನ ಗಂಡನ ಮುಂದ ಫಿರಾದಿ ಹೇಳ್ತಿದ್ಳು. ನನ್ನ ಮೈ ಸ್ವಚ್ಛ ಇರ್ಲಿಕ್ಕಿಲ್ಲ. ಆದರ ನನ್ನ ಮನಸು ಮಾತ್ರ ಸ್ವಚ್ಛ, ಕಂಡಾಪಟೆ ಸ್ವಚ್ಛ ಇತ್ತು.

ಆಕಿ ಗಂಡಸ ಮಗನ್ನ ಹಡೆದಳು. " ನಿಮ್ಮಪ್ಪ ಹುಟ್ಟಿಬಂದ " ಅಂತ ಮಗನ ಮುಂದ ಹೇಳಿ ಖುಷಿಪಟ್ಟೆ. ಹೌದು ಹುಟ್ಟಿದ ಕೂಸು ಮೊಮ್ಮಗ; ಥೇಟ್ ತೀರಿಹೋದ ನನ್ನ ಗಂಡನಂತೆ ಇತ್ತು. ನಮ್ಕಡಿ ತರಾನೇ ನಾಕೈದು ತಿಂಗಳು ಸೊಸೆಯ ಬಾಣಂತನ ಮಾಡಿದೆ. ಮೊಮ್ಮಗ ನಾಕೈದು ವರ್ಷ ಆಗೋಮಟ ಹಾಂಗೂ ಹೀಂಗೂ ಮಗನ ಮನೆಯಲ್ಲೇ ಇದ್ದೆ. ನನಗ ಮೊಮ್ಮಗ ಅಂದ್ರ ಪಂಚಪ್ರಾಣ. ಅವನಿಗೂ ನಾನಂದ್ರೆ ಅಷ್ಟೇ ಪ್ರೀತಿ ಕಕುಲಾತಿ.

ಹೀಂಗಿರಬೇಕಾದ್ರೆ ಒಂದಿನ ಮಗ ಸೊಸೆ ಇಬ್ರೂ ತಾವು ಅಮೆರಿಕಾಗೆ ಹೋಗ್ತೀವಂದ್ರು. ಅಲ್ಲಿ ದೊಡ್ಡ ಪಗಾರ. ನಾಕು ವರ್ಷ ಇದ್ದ ಬಂದ್ರೆ ನಮ್ಮ ಜೀವನವೇ ಪಾವನ. ಅಲ್ಲಿಗೆ ಹೋಗಲಾಕ ಒಂದೀಸು ರುಪಾಯಿ ಕಮ್ಮೀ ಬಿದ್ದಾವ ಅಂದ್ರು. ನನ್ನ ಸೊಸೆಯಾದವಳಿಗೆ ಊರಲ್ಲಿದ್ದ ನನ್ನ ಎರಡೆಕರೆ ಆಸ್ತಿ ಮ್ಯಾಲ ಕಣ್ ಬಿತ್ತು. ಹೊಲ, ಮನಿ ಆಸ್ತಿ ಮಾರಿ ಬಂದ ಇಪ್ಪತ್ತು ಲಕ್ಷ ರುಪಾಯಿ ಮಗನ ಕೈಯಾಗ ಕೊಟ್ಟೆ. ಪರ್ಪಂಚದಾಗ ಮಗನಿಗಿಂತ ದೊಡ್ಡದು ನನಗ ಯಾವ್ದೂ ಇರಲಿಲ್ಲ.

ದೊಡ್ಡ ಪಗಾರ. ಇನ್ಮುಂದ ನಮ್ಮಿಬ್ಬರ ನೌಕರಿ ಅಮೆರಿಕದಲ್ಲಿ. ಮೊಮ್ಮಗನ ಕರ್ಕೊಂಡು ಅಮೆರಿಕಕ್ಕೆ ಹೋಗಿಬಿಟ್ರು. ಮೊಮ್ಮಗ ನನ್ನ ಬಿಟ್ಟು ಹೋಗುವಾಗ ದುಕ್ ದುಕ್ಕಿಸಿ ಅಳ್ತಿತ್ತು. ನನಗೂ ದುಕ್ಕ್ ತಡ್ಕೊಳ್ಳಕ್ಕಾಗಲಿಲ್ಲ. ಆದರೂ ತಡಕೊಂಡೆ. ಯಾಕಂದ್ರ ಅವರ ಮನ್ಯಾಗ ಹಾಡ್ಯಾಡಿಕೊಂಡು ಅಳುವ್ಹಾಂಗಿರಲಿಲ್ಲ. ಹೋಗುವಾಗ ನನ್ನ ಕೈಯಾಗ ಮುವತ್ತು ಸಾವಿರ ರುಪಾಯಿ ಕೊಟ್ಟು " ನೀನು ಊರಿಗೆ ಹೋಗು" ಅಂತ ಹೇಳಿದರು.

ಊರಲ್ಲಿದ್ದ ಹೊಲ ಮನಿ ಇಲ್ಲ. ಇದ್ದ ಹೊಲ ಮನಿ ಮಗನಿಗಾಗಿ ಮಾರಿದ್ದೆ. ನನ್ನವರು ಅನ್ನುವವರು ಊರಲ್ಲಿ ಯಾರೂ ಇರಲಿಲ್ಲ. ಹಂಗಾಗಿ ನಾನು ಬೆಂಗಳೂರಲ್ಲೇ ಉಳಕೊಂಡೆ. ಸಂಪಂಗಿರಾಮ ನಗರದಲ್ಲಿ ನಾಕ ಸಾವಿರ ರುಪಾಯಿಗೆ ಸಣ್ಣದೊಂದು ಬಾಡಿಗೆಮನಿ ಹಿಡದೀನಿ. ದಿನಾಲೂ ನಾಕೈದು ಮಾರ್ವಾಡಿ ಮನಿ ಕಸ ಮುಸುರಿ ತೊಳದು ಬದಕ್ತೀನಿ. ಅವಳ ಮಾತುಗಳು ಇನ್ನೂ ಮುಗಿದಿರಲಿಲ್ಲ. ಮತ್ತೆ ಆಕೆಯ ಕಣ್ಣುಗಳು ಎರಡೂ ದಡ ಸೋಸಿ ಹರಿವ ಕೃಷ್ಣೆ ಭೀಮೆಯಾದವು. ಅರಿವಿಗೆ ಬಾರದಂತೆ ಕಣ್ಣುಗಳೂ ಒದ್ದೆಯಾದವು. ಕಂಠೀರವ ಕ್ರೀಡಾಂಗಣದಲ್ಲಿ ಕಾರ್ಗತ್ತಲೆ ಆವರಿಸತೊಡಗಿತು.


 

 

 

MORE NEWS

ತೊಂಬತ್ತೈದರ ಶಾಮನೂರು : ಮುಕ್ಕಾಗದ ಮತ್ತು ಮುಪ್ಪಾಗದ ಚೇತನ

12-06-2025 ಬೆಂಗಳೂರು

“ಇದು ಶಾಮನೂರು ಶಿವಶಂಕರಪ್ಪ ಕುರಿತು ಅವರ ಬಹುಮುಖಿ‌ ವ್ಯಕ್ತಿತ್ವ ದರ್ಶನದ ಪುಟ್ಟ ಪರಿಚಯ. ಅವರು ನಡೆದು ಬಂದ...

ಖೇಡಗಿ ಎಂಬ ಭೀಮಾತೀರದ ರಂಗ ಚಿಂತಕ 

30-05-2025 ಬೆಂಗಳೂರು

“ಮಜಬೂತಾದ ವೃತ್ತಿರಂಗ ಕಂಪನಿ ಕಟ್ಟಲು ಅನೇಕ ಅನುಭವಗಳ ಮಜಕೂರಗಳು ಎಸ್. ಎಮ್. ಖೇಡಗಿಯವರ ಮನೋರಂಗ ಕಣಜದಲ್ಲಿವೆ. ಫು...

ಕಲಿಕೆ ಮತ್ತು ಕಲಿಸುವ ಮಾದ್ಯಮ

18-05-2025 ಬೆಂಗಳೂರು

"ಮಗುವಿನ ಬಾಶೆ ಈ ಮೇಲೆ ಮಾತನಾಡಿದಂತೆ ಮಗುವಿನ ಮಾನಸಿಕತೆಯೂ, ಸಾಮಾಜಿಕ ಸ್ತಿತಿಯೂ ಆಗಿರುತ್ತದೆ. ಆದ್ದರಿಂದ ಮಗುವಿಗ...