ಮೌನಕಣಿವೆಯ ದಟ್ಟ ಕಾನನದೊಳಗೆ...

Date: 02-09-2022

Location: ಬೆಂಗಳೂರು


ಇಡೀ ಕಾಡು, ಬಿದ್ದ ನೀರಿನ ಸದ್ದನ್ನು ಪ್ರತಿಧ್ವನಿಗೊಳಿಸುತ್ತಾ ಕಾನನದ ಜೀವಗಳಿಗೆ ನೀರಿನ ಮೂಲಗಳ ಗುಟ್ಟನ್ನು ಬಿಟ್ಟುಕೊಡುತ್ತದೆ‌. ಸಂಜೆ ಏರಿ ಬರುವಾಗ ಗೂಡು ಸೇರಿಕೊಳ್ಳುವ ಪಕ್ಷಿಗಳ ಸದ್ದು ಇಡೀ ಕಾಡಿನ ಮೌನವನ್ನು ತಮ್ಮ ಸುಪರ್ದಿಗೆ ತೆಗೆದುಕೊಂಡು ಗದ್ದಲೆಬ್ಬಿಸುತ್ತವೆ ಎನ್ನುತ್ತಾರೆ ಲೇಖಕ ಮೌನೇಶ ಕನಸುಗಾರ. ಅವರು ತಮ್ಮ ಅಲೆಮಾರಿಯ ಅನುಭವಗಳು ಅಂಕಣದಲ್ಲಿ ಮಲೆನಾಡಿನ ಕಾಡ ರಮಣೀಯತೆಯನ್ನೂ ನಿಗೂಢವನ್ನೂ ಚಿತ್ರಿಸಿದ್ದಾರೆ.

ಬ್ರಿಟೀಷ್ ಆಡಳಿತಾವಧಿಯಲ್ಲಿ ಕಾಡು ಕಡಿದು ಕಾಫಿ ತೋಟಗಳನು ಹುಟ್ಟು ಹಾಕುವುದರಿಂದ ಹಿಡಿದು ಈ ವರೆಗೂ ಸಾಕಷ್ಟು ಸಲ ನಿರ್ಜನ ನೀಲಗಿರಿಯ ಮೇಲೆ ನಿರಂತರ ದೌರ್ಜನ್ಯ ಎಸಗಿದ ನಂತರ ವಿಫಲವಾಗಿ ಮಾನವನ ಆಕ್ರಮಣಕ್ಕೆ ಹೊರತಾಗಿರುವ ಅಂತ ನಾವೇ ಅಂದಾಜಿಸಿದ ಕಟ್ಟಕಡೆಯ ಸದಾಹಸಿರಿನ ಉಷ್ಣವಲಯದ ಮಳೆಕಾಡುಗಳಲ್ಲಿ ಒಂದಾದ ಮೌನ ಕಣಿವೆಯ ದಟ್ಟ ಕಾನನದ ಜಾಡು ಹಿಡಿದು ಒಳಹೊರಟಷ್ಟು ದುರ್ಗಮ ಎನ್ನಿಸುವ ಪ್ರಪಾತಗಳು ಕತ್ತಿಯಂಚಿನ ನಡಿಗೆಯ ಅನುಭವ ಕೊಡುತ್ತವೆ. ಅಂತಹ ಒಂದು ಚಾರಣದ ಹೆಜ್ಜೆ ಕಿತ್ತಿಟ್ಟು ಎತ್ತರೆತ್ತರಕ್ಕೆ ಏರಿದಷ್ಟು ಮಲೆಯ ಮೇಲೆ ಶ್ವೇತ ಶಾಲಿನಂತಹ ಮಂಜು ಮುಸುಕಿನ ಸೆರಗು ಇಡೀ ಹಸಿರ ಪಶ್ಚಿಮಘಟ್ಟವನ್ನು ಹಸಿಬೆಚ್ಚಗೆ ಹೊದ್ದಿರುತ್ತೆ! ಎಷ್ಟು ಚೆಂದದ ಮಲೆಯ ನಾಡದು. ಒಂದಕ್ಕಿಂತ ಒಂದು ಭಯಂಕರ ಸುಂದರ ಸರತಿಯಲ್ಲಿ ಒಂದರ ಬೆನ್ನಲ್ಲಿ ಒಂದು ನಿಂತು ನಮ್ಮನ್ನು ತಮ್ಮ ತೆಕ್ಕೆಗೆ ಎಳೆದುಕೊಳ್ಳುತ್ತವೆ.

ಕಾಡ ಒಳಹೊಕ್ಕು ಹೊರಟರೆ ಕಾಡು ಕಲ್ಲು ಹಾಸಿದ ಹಾದಿಯಲಿ ಕಪ್ಪೆ ಪಾಚಿಗಟ್ಟಿ ಹಸಿರು ಮೆತ್ತಿದ ಕಲ್ಲು ದಾರಿಯದು. ಬಣ್ಣ ಬಣ್ಣದ ತಪ್ಪಲು ತನ್ನ ಮೈಮೆತ್ತಿಕೊಂಡ ಲಕ್ಷಾಂತರ ವೃಕ್ಷಗಳು ವರ್ಣರಂಜಿತವಾಗಿ ಮಾರುಹೋಗುವಂತೆ ಮೋಹಿಸುತ್ತವೆ. ಅಚ್ಚುಕಟ್ಟಾಗಿ ಹೆಣೆದ ಜೇಡರ ಬಲೆಯೊಳಗೆ ಎಂಥದೋ ಕೀಟ ಸಿಕ್ಕು ಒದ್ದಾಡುವಾಗ ಧೋ ಎಂದು ಮಳೆ ಸುರಿದರೆ ಸಾವು ಒಂದು ಬಂದು ತೊಳೆದುಕೊಳ್ಳುತ್ತದೇನೊ ಅನ್ನಿಸಿಬಿಡುತ್ತದೆ‌.‌ ಮುರುಕಲು ಕಟ್ಟಿಗೆಯ ಪುಟ್ಟ ಪೊಟರೆಯೊಳಗಿಂದ ಎದ್ದು ಬರುವ ಇಂಬಳಗಳು ಆಗಷ್ಟೆ ಸೂರ್ಯೋದಯವಾಯಿತು ಎನ್ನುವಂತೆ ಎದ್ದು ಮೈಸೆಟೆಸಿ ತಮ್ಮ ಅಂಟು ಮೆತ್ತಿಸಿ ಕಿತ್ತಿಡುವ ಹೆಜ್ಜೆ ಹಾಕುತ್ತೇವೆ. ಮಳೆ ಗಾಳಿಯ ಸುಳಿವು ಅತಿಯಾಗಿ ತಾಕದ ಕಲ್ಲು ಇಕ್ಕೆಲಗಳಲ್ಲಿ ಕಟ್ಟಿದ ಜೇನುಗೂಡಿನಲಿ ರಾಣಿಯರದೆ ದರ್ಬಾರು. ಷಡ್ಭುಜಾಕೃತಿಯ ಒಂದೊಂದು ಕೊಣೆಯೊಳಗೂ ತುಂಬಿಡುವ ಅನಂತ ಹೂವಿನ ಗಂಧವನು ಯಾವ ಗಾಳಿಯೂ ದೋಚದಂತೆ ಹೊತ್ತು ತರುವ ಗಂಡು ಜೇನಿನ ಪೀಕಲಾಟ ಎಷ್ಟು ಮಜವಾಗಿರುತ್ತದಲ್ಲವಾ? ಸಾಲು ಸಾಲು ಇರುವೆಗಳು, ಕೆಂಪಿರುವೆಗಳು ದೊಡ್ಡ ಸೈನ್ಯದೊಡನೆ ಯುದ್ಧಸನ್ನದ್ದವಾಗಿ ಹೊರಟಂತೆ ದುಬುದುಬು ಅಂತ ಸಾಲುಗಟ್ಟಿ ಸರಿದಾಡುವುದು ಮಳೆಕಾಡಿನ ನಡುವೆ ಅನನ್ಯ ಅನ್ನಿಸಲೂಬಹುದು. ತಮ್ಮ ಆಹಾರ ಸಂಗ್ರಹಣೆಗೆ ಅವುಗಳು ಪರದಾಡುವ ಪರಿ ತುಂಬಾ ರೋಚಕವಾಗಿರುತ್ತೆ. ಬಾಯಿಂದ ಬಾಯಿಗೆ ವರ್ಗಾಯಿಸುತ್ತಲೆ ತಮ್ಮದೆ ಬಿಲದೊಳಗೆ ಆಹಾರವನ್ನು ಬೆಚ್ಚಗೆ ತುಂಬಿಟ್ಟುಕೊಳ್ಳುವ ಸೂಕ್ಷ್ಮತೆಯನ್ನು ಗಮನಿಸಿದಾಗ ಅನ್ನಿಸೋದು ಹಸಿವೊಂದೆ ಎಲ್ಲದಕ್ಕೂ ಕಾರಣ ಅಂತ! ಅಳಿಲು, ಉಡಾ, ಸಿಂಗಳಿಕ, ಮರಕುಟಿಗ, ಹಾರ್ನಬಿಲ್ ಗಳು ಆಗಾಗ ಕಣ್ಣಿಗೆ ಬೀಳುತ್ತವೆ. ನೂರಾರು ತರಹದ ಪಕ್ಷಿಗಳು ಹಲವಾರು ತರಹದ ಹಾವುಗಳು, ಕಪ್ಪೆಗಳು, ನೂರಾರು ತರಹದ ಚಿಟ್ಟೆಗಳು ಇಡೀ ಕಾಡಿನ ಮೌನದೊಂದಿಗೆ ಬದುಕನ್ನು ಸಮೃದ್ಧವಾಗಿಸಿಕೊಂಡಿವೆ.

ಮಾನ್ಸೂನ್ ಮಾರುತಗಳು ತಂದು ಸುರಿವ ನಿರಂತರ ಮಳೆಯಿಂದಾಗಿ ನೀಲಗಿರಿಗಳ ಮೈ ಸದಾ ಹಸಿಹಸಿಯಾಗಿ ನಡುಗುತ್ತಲೆ ಇರುತ್ತದೆ. ಉದುರಿದ ಕೋಟ್ಯಾಂತರ ಎಲೆಗಳೆ ಕಾಡಿಗೆ ಗೊಬ್ಬರವಾಗಿ ರೂಪಾಂತರಗೊಂಡು ಕಾಡು ಮತ್ತಷ್ಟು ಹದಗೊಳ್ಳುತ್ತಲೆ ಇರುತ್ತದೆ. ಸಾವಿರ ಸಾವಿರ ತರಹದ ಅನಂತ ಹೂವುಗಳನು ಒಟ್ಟಿಗೆ ಅರಳಿಸಿ ನಗು ಚೆಲ್ಲಿ ಮಾಯವಾಗುವ ಪರಿಗೆ ಬೆರಗುಗಣ್ಣುಗಳು ಎವೆ ಬಿಚ್ಚಿ ಆನಂದಿಸುತ್ತವೆ. ಕಾಡು ಬಸಿದುಕೊಟ್ಟ ನೀರನ್ನೆಲ್ಲಾ ಒಟ್ಟಿಗೆ ತನ್ನ ಇಕ್ಕೆಲಗಳಲ್ಲಿ ಬಿಟ್ಟುಕೊಂಡು ಮೈದುಂಬಿ ಹರಿಸುವ ತಗ್ಗು ಪ್ರದೇಶಗಳು ತಮ್ಮನ್ನು ತಾವು ಸದಾ ಹಸಿಯಾಗಿಟ್ಟುಕೊಳ್ಳುವಲ್ಲಿ ಸದಾ ಯಶಸ್ವಿಯಾಗುತ್ತವೆ. ಮಟ್ಟಸವಾಗಿ ಹರಿವ ನದಿ ಒಟ್ಟಿಗೆ ಯಾವುದೊ ಪ್ರಪಾತ ಒಂದಕ್ಕೆ ದೊಪ್ಪನೆ ಬೀಳುವಾಗ ಜಲ-ಪಾತವಾಗುತ್ತದೆ! ಮಾರುತದ ಹೊಡೆತಕ್ಕೆ ಬೀಳುತ್ತಿರುವ ಜಲಧಾರೆಯ ಒಟ್ಟು ಅರ್ಭಟ ಸಡಿಲಗೊಂಡು ನೀರ ತುಂತುರು ಗಾಳಿಯ ಬಲೆಯೊಳಗೆ ಬಿದ್ದು ಹರಿದಾಡುತ್ತವೆ. ತಂಪಾದ ತೇವಾಂಶವೆಲ್ಲಾ ಗಾಳಿಯ ಮೈ ಸವರುವಾಗ ಇಡೀ ಕಾಡೊಳಗೆ ಹಸಿಕಂಪನ ಒಂದು ತಣ್ಣಗೆ ತಲೆದೂಗುತ್ತದೆ‌. ಇಡೀ ಕಾಡು, ಬಿದ್ದ ನೀರಿನ ಸದ್ದನ್ನು ಪ್ರತಿಧ್ವನಿಗೊಳಿಸುತ್ತಾ ಕಾನನದ ಜೀವಗಳಿಗೆ ನೀರಿನ ಮೂಲಗಳ ಗುಟ್ಟನ್ನು ಬಿಟ್ಟುಕೊಡುತ್ತದೆ‌. ಸಂಜೆ ಏರಿ ಬರುವಾಗ ಗೂಡು ಸೇರಿಕೊಳ್ಳುವ ಪಕ್ಷಿಗಳ ಸದ್ದು ಇಡೀ ಕಾಡಿನ ಮೌನವನ್ನು ತಮ್ಮ ಸುಪರ್ದಿಗೆ ತೆಗೆದುಕೊಂಡು ಗದ್ದಲೆಬ್ಬಿಸುತ್ತವೆ. ಕತ್ತಲು ಕವಿದಾಗ ಕಾಡಿನ ಮಧ್ಯೆ ಮತ್ತೆಂತದೊ ಜೀವವೊಂದು ತನ್ನ ಮೈಯಿಂದ ಬೆಳಕನ್ನು ಚೆಲ್ಲುತ್ತದೆ. ಕಾಡು ಮತ್ತಷ್ಟು ಸುಂದರವಾಗಿ ಸಿಂಗಾರಗೊಳ್ಳುತ್ತೆ. ತಮವೆಲ್ಲಾ ತೋಯ್ದ ಕಾಡೊಳಗೆ ಸಣ್ಣ ಬೇಟೆಯ ಕ್ರೌರ್ಯ ತಣ್ಣಗೆ ನಡೆದಿರುತ್ತೆ! ಕಾಡು ಯಾವತ್ತಿಗೂ ಸುಮ್ಮನಿರದ, ನಿರಂತರ ಉಸಿರಾಟದ ಸೆಲೆ ಹೊತ್ತ ನಿರಂತರವಾಗಿ ನಿಗೂಢ ಅಚ್ಚರಿಗಳನು ಸುರಿವ ದೊಡ್ಡ ಮಾಯಾಜಾಲ!

- ಮೌನೇಶ ಕನಸುಗಾರ
mouneshkanasugara01@gmail.com

ಈ ಅಂಕಣದ ಹಿಂದಿನ ಬರೆಹಗಳು:
ಸಾವನದುರ್ಗದ ನೆತ್ತಿಯ ಮೇಲೆ…
ಕುಮಾರಪರ್ವತದ ಚಾರಣ
ವಿಭೂತಿ ಜಲಪಾತದ ವೈಭವ
ಸಿರಿಮನೆ ಜಲಪಾತದ ಸಿರಿಯಲ್ಲಿ ನೆನೆದು…
ಪಶ್ಚಿಮಘಟ್ಟದ ನಿಗೂಢಗಳೊಳಗೆ ಬೆರಗುಗೊಳ್ಳುತ್ತಾ…
ಕೊಡಚಾದ್ರಿಯ ಕುತೂಹಲಗಳ ಕೆದಕುತ್ತಾ…
ಗ್ರೀನ್ ವ್ಯಾಲಿ ಮತ್ತು ಜಲಪಾತಗಳು
ಕವಲೇದುರ್ಗದ ಕೌತುಕಗಳು
ಕಾನನದ ಒಳಹೊಕ್ಕಷ್ಟು ಮೈ ಪುಳಕಿತಗೊಳ್ಳುತ್ತದೆ
ನಿತ್ಯ ವಿನೂತನ ಅಚ್ಚರಿಗಳ ಮಡಿಲಿನಲ್ಲಿ
ಹಸಿ ಕಾಡುಗಳ ಹಾದಿಯಲ್ಲಿ ಅನಂತ ಸುಖವನ್ನರಸಿ…
ಅಲೆಮಾರಿಯ ಅನುಭವಗಳು

MORE NEWS

ಕಲಬುರ್ಗಿ ಜಿಲ್ಲಾ ಪ್ರಥಮ ತತ್ವಪದ ಸಾಹಿತ್ಯ ಸಮ್ಮೇಳನ

24-04-2024 ಬೆಂಗಳೂರು

"ಕಡಕೋಳ ಮಠಾಧೀಶರು ಮತ್ತು ತತ್ವಪದಗಳ ಮಹಾ ಪೋಷಕರಾದ ಷ. ಬ್ರ. ಡಾ. ರುದ್ರಮುನಿ ಶಿವಾಚಾರ್ಯರು ಸಮ್ಮೇಳನದ ಸರ್ವಾಧ್ಯಕ...

ಸಂಶೋಧನೆಯಲ್ಲಿ ಆಕರಗಳ ಸಂಗ್ರಹ, ವಿಂಗಡಣೆ ಮತ್ತು ಪೂರ್ವಾಧ್ಯಯನ ಸಮೀಕ್ಷೆ

23-04-2024 ಬೆಂಗಳೂರು

"ಒಂದನ್ನು ಬಿಟ್ಟು ಇನ್ನೊಂದನ್ನು ಚಿಂತಿಸಲಾಗದು. ಅಲ್ಲದೆ; ಶೀರ್ಷಿಕೆ ಆಖೈರು ಮಾಡಿಕೊಳ್ಳುವುದಕ್ಕೆ ನಾವು ಅವಸರ ಮಾಡ...

ಪರಿಘಾಸನ ಮತ್ತು ಅರ್ಧ ಚಕ್ರಾಸನ 

16-04-2024 ಬೆಂಗಳೂರು

"ಪರಿಘಾಸನ ಆಸನವು ) ಪಿತ್ತ ಜನಕಾಂಗ ಮತ್ತು ಮೇದೋಜೀರಕ ಚೈತನ್ಯಗೊಳ್ಳುವಂತೆ ಮಾಡುತ್ತದೆ. ಹಾಗೆಯೇ ‘ಅರ್ಧ ಚಕ್...