ಮುಚ್ಚಿದ ಬಾಗಿಲುಗಳ ಹಿಂದೆ… ತ್ರಿವೇಣಿ  ಕಥನ

Date: 03-08-2022

Location: ಬೆಂಗಳೂರು


“ಸ್ತ್ರೀ ಸಂವೇದನೆಯ ದಾಖಲಾತಿಗೆ ಮಾರ್ಗವನ್ನು ಹಾಕಿಕೊಟ್ಟವರು ತ್ರಿವೇಣಿ. ಒಂದು ಪರಂಪರೆಯನ್ನು ಹುಟ್ಟುಹಾಕಿದ್ದಕ್ಕಾಗಿ ಅವರು ಸದಾ ನೆನಪಿನಲ್ಲಿ ಉಳಿಯುತ್ತಾರೆ. ಅದೊಂದು ಮಾನವೀಯ ದಾಖಲಾತಿಯೂ ಆಗಿರುವುದರಿಂದ ಕನ್ನಡದ ಕಥನ ಜಗತ್ತು ಅವರಿಗೆ ಕೃತಜ್ಞ” ಎನ್ನುತ್ತಾರೆ ಲೇಖಕಿ ಗೀತಾ ವಸಂತ. ಅವರು ತಮ್ಮ ತೆರೆದಷ್ಟೂ ಅರಿವು ಅಂಕಣದಲ್ಲಿ ಕನ್ನಡ ಕಥನ ಲೋಕದಲ್ಲಿನ ತ್ರಿವೇಣಿಯವರ ಗುರುತನ್ನು ಚರ್ಚಿಸಿದ್ದಾರೆ.

ಕನ್ನಡ ಕಥನ ಜಗತ್ತಿನಲ್ಲಿ ಸಂಚಲನ ಮೂಡಿಸಿದ ಹೆಸರು ತ್ರಿವೇಣಿ. ಅಪಾರವಾದ ಓದುಗ ಬಳಗವನ್ನು ಗಳಿಸಿ, ಅರ್ಧ ಬದುಕಿನಿಂದ ನಿರ್ಗಮಿಸಿದ ಅವರು ಕಾದಂಬರಿ ಪ್ರಕಾರದಲ್ಲಿ ಪ್ರಯೋಗಶೀಲತೆಯನ್ನು ಮೂಡಿಸಿದವರು. ಹೆಣ್ಣು ಮನಸ್ಸಿನ ಒಳಲೋಕದ ಕತ್ತಲ ಛಾಯೆಗಳನ್ನು ಅವರಂತೆ ನಿರೂಪಿಸಿದ ಲೇಖಕಿ ಇನ್ನೊಬ್ಬರಿಲ್ಲ. ಸಂಪ್ರದಾಯ ಜಡವಾದ ಪುರುಷ ಪ್ರಧಾನ ಸಮಾಜದಲ್ಲಿ ಹೆಣ್ಣಿನ ಬದುಕು ಎಂಥ ಸಂಕೀರ್ಣ ಸ್ಥಿತಿಗಳನ್ನು ದಾಟಬೇಕು ಎಂಬ ನಿಷ್ಠುರ ಸತ್ಯವನ್ನು ಅವರು ತಮ್ಮ ಪಾತ್ರಗಳ ಮೂಲಕ ದಾಖಲಿಸಿದವರು. ಮನಸ್ಸಿನ ಮುಚ್ಚಿದ ಬಾಗಿಲುಗಳನ್ನು ತೆರೆಯುತ್ತ ಘಾಸಿಗೊಂಡ ಸುಪ್ತ ಪ್ರಜ್ಞಾಲೋಕದ ಮೇಲೆ ಬೆಳಕು ಚೆಲ್ಲಿದರು.

ತ್ರಿವೇಣಿ ಭಾರತೀಯ ಸಮಾಜದ ಸ್ಥಿತ್ಯಂತರದ ಸಂಧಿಕಾಲದಲ್ಲಿ ರೂಪುಗೊಂಡ ಲೇಖಕಿ. ಇಂಗ್ಲಿಶ್ ವಿದ್ಯಾಭ್ಯಾಸದ ಮೂಲಕ ದೊರೆತ ಹೊಸ ಆಲೋಚನಾ ವಿಧಾನಕ್ಕೆ ತೆರೆದುಕೊಂಡು ಸ್ತ್ರೀ ಜಗತ್ತಿನ ಪರ್ಯಾಯ ಹುಡುಕಾಟವನ್ನು ಅವರು ತಮ್ಮ ಕಥನದ ಮೂಲಕ ನಡೆಸಿದರು. ಭಾರತೀಯ ಸ್ವಾತಂತ್ರ್ಯ ಹೋರಾಟದ ಸಂದರ್ಭದಲ್ಲಿ ಸುಧಾರಣಾವಾದಿ ಚಳುವಳಿಗಳ ಫಲವಾಗಿ ಸ್ತ್ರೀಯರ ಕುರಿತಾಗಿ ಹೊಸ ಜಾಗೃತಿಯೊಂದು ಮೂಡಿದ್ದು ಇತಿಹಾಸ. ಸ್ತ್ರೀ ಶಿಕ್ಷಣ, ವಿಧವಾ ವಿವಾಹ ಮುಂತಾದವುಗಳ ಅಗತ್ಯವನ್ನು ಪ್ರಬಲವಾಗಿ ಪ್ರತಿಪಾದಿಸಿದ ಚಿಂತಕರು ಸ್ವಾತಂತ್ರ್ಯ ಹೋರಾಟದಲ್ಲಿ ಸ್ತ್ರೀಯರನ್ನು ತೊಡಗಿಸುವ ಮೂಲಕ ಅವರಿಗೆ ರಾಜಕೀಯ ಅಸ್ಮಿತೆಯನ್ನೂ ತಂದುಕೊಟ್ಟರು. ಸಾಮಾಜಿಕ ಸುಧಾರಣೆಯ ಭಾಗವಾಗಿ ಸ್ತ್ರೀಯರ ಸಮಸ್ಯೆಗಳೂ ಚರ್ಚಿಸಲ್ಪಟ್ಟವು. ಸಂಸ್ಕೃತಿ ಪುನರುಜ್ಜೀವನದ ಚಿಂತನೆಗಳೂ ಈ ಸಮಯದಲ್ಲಿ ಮುನ್ನೆಲೆಗೆ ಬರುತ್ತಾ, ಹೆಣ್ಣನ್ನು ಮಾತೆಯಾಗಿ, ಭಾರತಮಾತೆಯಾಗಿ ವೈಭವೀಕರಿಸುವ ಪ್ರಯತ್ನವೂ ನಡೆಯಿತು. ತಿರುಮಲಾಂಬಾ, ಆರ್.ಕಲ್ಯಾಣಮ್ಮ ಮೊದಲಾದ ನವೋದಯದ ಮೊದಲ ಹಂತದ ಲೇಖಕಿಯರು ಇಂಥ ಆಶಯಗಳಿಗೆ ಬದ್ಧರಾಗಿ, ಆ ಆಶಯಗಳನ್ನು ವಿಸ್ತರಿಸುತ್ತಾ ಬರೆದರು. ಮುಂದೆ ಪ್ರಗತಿಶೀಲ ಕಾಲಘಟ್ಟದಲ್ಲೂ ಸ್ತ್ರೀ ಸಂಬಂಧಿತ ಸಮಸ್ಯೆ, ಶೋಷಣೆಗಳ ಅನಾವರಣ ನಡೆಯಿತು. ಎಂ.ಕೆ.ಇಂದಿರಾ, ಕೊಡಗಿನ ಗೌರಮ್ಮ, ವಾಣಿ, ಎಚ್.ವಿ.ಸಾವಿತ್ರಮ್ಮ ಮುಂತಾದವರಲ್ಲಿ ಈ ಆಶಯಗಳು ವಿಭಿನ್ನ ಆಯಾಮಗಳಲ್ಲಿ ಅಭಿವ್ಯಕ್ತಗೊಂಡವು. ಸುಶಿಕ್ಷಿತ ಮಧ್ಯಮವರ್ಗದ ಉದಯದೊಂದಿಗೆ ಓದುಗರ ವರ್ಗವೂ ಬೆಳೆಯಿತು. ಜನಪ್ರಿಯ ಮಾದರಿಯಲ್ಲಿ ಕಾದಂಬರಿಗಳನ್ನು ಬರೆಯುವ ಮೂಲಕ ಅನಕೃ, ತರಾಸು, ಮುಂತಾದ ಲೇಖಕರು ಟ್ರೆಂಡ್ ಒಂದನ್ನು ರೂಪಿಸಿದ್ದರು. ಇಲ್ಲಿಯೂ ಹೆಣ್ಣು ಬದುಕು ಪದೆಪದೇ ವಸ್ತುವಾಗುತ್ತಲಿತ್ತು.

ಇಂಥ ಸಾಮಾಜಿಕ ಹೊರ ಚಲನೆಗಳಾಚೆ ಹೆಣ್ಣಿನ ಒಳ ಚಲನೆಯನ್ನು ಸೂಕ್ಷ್ಮವಾಗಿ ಗ್ರಹಿಸುವ ಹೊಸ ನೋಟವೊಂದರ ಅಗತ್ಯವಿತ್ತು. ಇಂಥ ಕಾಲದ ಅಗತ್ಯಕ್ಕೆ ಉತ್ತರವಾಗಿ ರೂಪುಗೊಂಡವರು ತ್ರಿವೇಣಿ. ಹೆಣ್ಣಿನ ಅಂತರಂಗದ ಆಳಕ್ಕೆ ಪಯಣ ಬೆಳೆಸಿದ ತ್ರಿವೇಣಿ ಹೆಣ್ತನದ ಸಿಕ್ಕುಗಳನ್ನು ಬಿಡಿಸಲು ಮಾಡಿದ ಪ್ರಯತ್ನಕ್ಕಾಗಿ ಅಭಿನಂದನಾರ್ಹರು. ಭಾವಪೂರ್ಣ ನಿರೂಪಣೆ, ಹೃದ್ಯವಾದ ಶೈಲಿ, ಮನಸ್ಸಿನ ಒಳಸುಳಿಗಳ ಸೂಕ್ಷ್ಮ ಗ್ರಹಿಕೆ ಹಾಗೂ ಅಭಿವ್ಯಕ್ತಿಗಳು ಅವರನ್ನು ಅನನ್ಯ ಲೇಖಕಿಯಾಗಿ ರೂಪಿಸಿವೆ. ಬರಹದಿಂದ ಬರಹಕ್ಕೆ ಬೆಳೆಯುತ್ತ ಹೋದ ತ್ರಿವೇಣಿ ಅಲ್ಪಾಯುಷಿಯಾದದ್ದು ಕನ್ನಡ ಸಾರಸ್ವತ ಲೋಕಕ್ಕಾದ ನಷ್ಟವೇ ಸರಿ. ಮೊದಲ ಹಂತದಲ್ಲಿ ಜನಪ್ರಿಯತೆಯ ಒತ್ತಡದತ್ತ ವಾಲಿದರೂ, ಆ ಹಂತ ದಾಟಿ ಶ್ರೇಷ್ಠ ಕೃತಿಗಳನ್ನು ನೀಡಬಲ್ಲರು ಎಂಬ ದೊಡ್ಡ ನಿರೀಕ್ಷೆಯನ್ನು ಹುಟ್ಟಿಸಿ ನಿರ್ಗಮಿಸಿ ಬಿಟ್ಟರು. ಮನಃಶಾಸ್ತ್ರ ಹಾಗೂ ಇಂಗ್ಲಿಶ್ ಸಾಹಿತ್ಯವನ್ನು ಓದಿಕೊಂಡಿದ್ದ ತ್ರಿವೇಣಿ ಬರವಣಿಗೆಯನ್ನು ಗಂಭೀರ ಮಾಧ್ಯಮವಾಗಿ ಪರಿಗಣಿಸಿ ಪ್ರಯೋಗಶೀಲರಾಗುತ್ತ ನಡೆದ ಹೆಜ್ಜೆಯನ್ನು ಗಮನಿಸಬಹುದು. “ಭೋರ್ಗರೆಯಲಿಲ್ಲ, ಧುಮ್ಮಿಕ್ಕಲಿಲ್ಲ, ಊರನ್ನು ಕೊಚ್ಚಲಿಲ್ಲ, ದಾರಿಯಲ್ಲಿನ ಕಲ್ಮಶಗಳನ್ನು ಸದ್ದಿಲ್ಲದೆ ತೊಳೆದು ನಿರ್ಮಲಗೊಳಿಸುವ ಗಂಗಾಪ್ರವಾಹದಂತೆ ಶಾಂತ, ಗಂಭೀರವಾಗಿ ಕನ್ನಡ ಜನಮನದಲ್ಲಿ ಹರಿದು ಭೌತಿಕ ಶರೀರವನ್ನು ಕಳಚಿದರು” ಎಂದು ಡಾ.ವಿಜಯಮ್ಮ ಹೇಳುವ ಮಾತು ಅಕ್ಷರಶಃ ಸತ್ಯ.

ಕನ್ನಡದಲ್ಲಿ ಸುಧಾರಣಾವಾದಿ ಆಶಯಗಳನ್ನು ದಾಟಿಬಂದ ಮಹಿಳೆಯ ಅಭಿವ್ಯಕ್ತಿಗೆ ತನ್ನ ಅಸ್ಮಿತೆಯನ್ನು ಕಾಣುವ ಹಾಗೂ ಕಟ್ಟುವ ದೊಡ್ಡ ಸವಾಲು ಮುಂದಿತ್ತು. ‘ಸ್ತ್ರೀ ಸಂವೇದನೆ’ ಎಂಬ ಪದ 70ರ ದಶಕದಿಂದೀಚೆಗೆ ಚಾಲ್ತಿಯಲ್ಲಿದೆ. ಆದರೆ ಅದಕ್ಕೂ ಮೊದಲು ತ್ರಿವೇಣಿಯವರ ಬರವಣಿಗೆಯಲ್ಲಿ ಅಂಥ ಸಂವೇದನೆಯು ಕನ್ನಡಕ್ಕೆ ಪರಿಚಯವಾಯಿತು. ಬಸಿರು, ಪ್ರಸವ, ತಾಯ್ತನ ಮುಂತಾದ ಹೆಣ್ಣು ಅನುಭವಗಳ ಸಂಕೀರ್ಣತೆಯನ್ನೂ, ಅದರ ಸುತ್ತಲಿನ ಸಮಾಜೋ-ಸಾಂಸ್ಕೃತಿಕ ಒತ್ತಡಗಳನ್ನು, ಅವು ಸುಪ್ತಪ್ರಜ್ಞೆಯೊಂದಿಗೆ ಘರ್ಷಿಸುತ್ತ ಹೆಣ್ಣಿನ ಭಾವಲೋಕದ ಮೇಲೆ ಉಂಟುಮಾಡುವ ಆಘಾತಗಳನ್ನು ಅವರು ಮನೋಜ್ಞವಾಗಿ ಚಿತ್ರಿಸಿದರು. ಹೆಣ್ಣುದೇಹ, ಆ ಮನಸ್ಸಿನ ಭಾಷೆ, ಅದರ ಚಲನೆಗಳನ್ನು ನಿರೂಪಿಸುವಲ್ಲಿ, ವಿಶ್ಲೇಷಿಸುವಲ್ಲಿ ತ್ರಿವೇಣಿ ಅವರಿಗೆ ಅವರೇ ಸಾಟಿ ಎಂಬಂತೆ ಬೆಳೆದು ನಿಂತರು. ದೇಹ-ಮನಸ್ಸುಗಳ ಮರ್ಮರಗಳನ್ನು ಸೂಕ್ಷ್ಮವಾಗಿ ನಿರ್ವಹಿಸುವ ರೀತಿಯಿಂದಾಗಿ ಕನ್ನಡದ ಓದುಗರು ತ್ರಿವೇಣಿಯವರ ಕುರಿತು ಅಪಾರ ನಿರೀಕ್ಷೆಗಳನ್ನಿರಿಸಿಕೊಂಡರು. ಅಂದು ಹೊಸ ಅರಿವಿನೊಂದಿಗೆ ಸೂಕ್ಷ್ಮಗೊಳ್ಳತೊಡಗಿದ್ದ ಹೆಣ್ಣುಜಗತ್ತು ಕೂಡ ಅವರ ಬರವಣಿಗೆಯಲ್ಲಿ ತಮ್ಮತನ ಕಾಣತೊಡಗಿತು. ಪುರುಷ ಪ್ರಧಾನ ಸಮಾಜದಲ್ಲಿ ಸ್ತ್ರೀಯ ಸ್ಥಾನಮಾನಗಳನ್ನು ಗುರುತಿಸುವ ಹಾಗೂ ದಾಖಲಿಸುವ ಸೂಕ್ಷ್ಮ ಸಂವೇದನೆಯ ಲೇಖಕಿಯ ಅಗತ್ಯವನ್ನು ತ್ರಿವೇಣಿ ಅಂದು ಪೂರೈಸಿದ್ದರು. ಸ್ತ್ರೀಯ ಸಂವೇದನೆಗೆ ಕುರುಡಾಗಿದ್ದ ಜಡಸಮಾಜದ ಕಣ್ಣುತೆರೆಸಿದರು.

ಸ್ತ್ರೀಯರ ಬರವಣಿಗೆಯೆಂದರೆ ಪ್ರೇಮ, ಮದುವೆ, ಕುಟುಂಬ, ತಾಯ್ತನ ಇವುಗಳ ಸುತ್ತಲೇ ಸುತ್ತುತ್ತವೆಂದೂ, ಅದು ಮುಟ್ಟಾದವರ ಸಾಹಿತ್ಯವೆಂದೂ(!) ಮೂಗು ಮುರಿಯುವ ಕಾಲವೊಂದಿತ್ತು. ಅನುದಿನದ ದಂದುಗಗಳನ್ನು ದಾಟದೇ ಅವಳ ಜಗತ್ತು ವಿಸ್ತರಿಸುವ ಸಾಧ್ಯತೆ ಇಂದಿಗೂ ಕ್ಷೀಣವಾಗಿರುವಾಗ, ಅಂಥ ‘ದಾಟು’ವಿಕೆಯನ್ನು ನಿಭಾಯಿಸುವುದು ಆ ಕಾಲದಲ್ಲಿ ಅಷ್ಟು ಸುಲಭವೇನಾಗಿರಲಿಲ್ಲ. “ಅಮೆಜಾನ್ ದಾಟಬಹುದು. ಅನುದಿನದ ಅಂತರಗಂಗೆಯನ್ನು ದಾಟುವುದು ಹೇಗೆ?” ಎಂದು ಎ.ಕೆ.ರಾಮಾನುಜನ್ ಕೇಳುವಂತೆ, ಹೆಣ್ತನದ ಕುರಿತ ಅಮೂರ್ತ ಪರಿಕಲ್ಪನಾತ್ಮಕ ಚೌಕಟ್ಟುಗಳನ್ನು ಕಳಚಿಕೊಳ್ಳದೇ ಅವಳ ಜಗತ್ತಿನ ವಿಸ್ತರಣೆ ಸಾಧ್ಯವಿಲ್ಲವೆಂಬ ಸತ್ಯವನ್ನು ತ್ರಿವೇಣಿ ದಿಟ್ಟವಾಗಿ ಎದುರಿಸಿದರು ಎನ್ನಬಹುದು.

ಕುಟುಂಬ, ವಿವಾಹಗಳೆಂಬ ಸಂಸ್ಥೆಗಳ ಹಿಂದಿರುವ ಪಿತೃಪ್ರಧಾನ ಚಿಂತನೆಯು ಅಲ್ಲಿ ಗಂಡು-ಹೆಣ್ಣಿನ ಸಂಬಂಧವನ್ನು ಸಹಜವಾಗಿ ಅರಳಗೊಡದೆ, ಅಧಿಕಾರ ಸಂಬಂಧವನ್ನು ಸ್ಥಾಪಿಸುತ್ತದೆ. ಆಗ ಸಂಬಂಧಗಳು ಹಿಂಸ್ರಗೊಳ್ಳುತ್ತವೆ. ಈ ಹಿಂಸೆಯ ಸ್ವರೂಪ ಸದಾ ದೈಹಿಕ ಸ್ವರೂಪದ್ದೋ, ಭೌತಿಕವಾಗಿ ವ್ಯಕ್ತಗೊಳ್ಳುವುದೋ ಆಗಬೇಕಿಲ್ಲ. ಅವ್ಯಕ್ತ ಒತ್ತಡಗಳನ್ನು ನಿರ್ಮಿಸುವ ತಣ್ಣಗಿನ ಕ್ರೌರ್ಯದ ಹಿಂದೆಯೂ ಅಧಿಕಾರ ಸಂಬಂಧ, ಆರ್ಥಿಕ ಸಂರಚನೆಯ ಸ್ವರೂಪ, ಸಂಸ್ಕೃತಿ ರಾಜಕಾರಣಗಳು ನಾಜೂಕಾಗಿ ಕೆಲಸಮಾಡುತ್ತವೆ. ಇಂಥ ಸೂಕ್ಷ್ಮ ತಿಳಿವನ್ನು ಹೊಂದಿದ್ದ ತ್ರಿವೇಣಿ ತಮ್ಮ ಕತೆ, ಕಾದಂಬರಿಗಳಲ್ಲಿ ಅವುಗಳನ್ನು ದಾಖಲಿಸುವ ಪ್ರಯತ್ನ ಮಾಡಿದರು. ಆದ್ದರಿಂದ ಅವರ ಕಾದಂಬರಿಗಳನ್ನು ‘ಪ್ರಮೇಯ ಕಾದಂಬರಿ’ (ಥಿಸಿಸ್ ನಾವೆಲ್) ಎಂದು ವಿಮರ್ಶಕರು ಗುರುತಿಸಿದ್ದಿದೆ. ಪ್ರಮೇಯಗಳನ್ನು ಜೀವಂತ ವಿವರಗಳಲ್ಲಿ ಸೃಜನಶೀಲಗೊಳಿಸುವ ಕಲೆ ತ್ರಿವೇಣಿಯವರಿಗೆ ಸಿದ್ಧಿಸಿತ್ತು. ಆದ್ದರಿಂದಲೇ ಪ್ರಮೇಯಗಳಾಚೆಯೂ ಬೆಳೆಯುವ ಸಾಧ್ಯತೆಗಳೆಡೆ ಅವು ಬೆರಳು ಮಾಡಿದವು. ಭಾರತೀಯ ವಿವಾಹ, ಕುಟುಂಬ ವ್ಯವಸ್ಥೆಯ ಶಿಥಿಲತೆಯನ್ನು ಕಾಣಿಸಿದ ಅವರು ವಿಷಮ ದಾಂಪತ್ಯದ ಸಮಸ್ಯೆಗಳನ್ನು ತಮ್ಮ ‘ಅಪಸ್ವರ’, ‘ಅಪಜಯ’, ‘ಕಂಕಣ’ ‘ಮುಕ್ತಿ’ ಮೊದಲಾದ ಕಾದಂಬರಿಗಳಲ್ಲಿ ತೆರೆದಿಟ್ಟರು. ಆಧುನಿಕ ವಿದ್ಯಾಭ್ಯಾಸದ ಫಲವಾಗಿ ಬದಲಾದ ಹೆಣ್ಣಿನ ಮನಸ್ಥಿತಿಯನ್ನು ಎದುರಿಸಲು ಪುರುಷ ಪ್ರಧಾನ ಸಮಾಜ ಮಾನಸಿಕವಾಗಿ ಸಿದ್ಧಗೊಂಡಿರುವುದಿಲ್ಲ. ಹೆಣ್ಣು ಬಯಸುವ ಬೌದ್ಧಿಕ ಸಾಂಗತ್ಯ-ಸಮಾನತೆಗಳು ದೊರೆಯದೆ ದಾಂಪತ್ಯದಲ್ಲಿ ಆಳವಾದ ಕಂದಕ ನಿರ್ಮಾಣವಾಗುವ ಸ್ಥಿತಿಯನ್ನು ಅವರ ಮೊದಲ ಕಾದಂಬರಿ ‘ಅಪಸ್ವರ’ ನಿರೂಪಿಸುತ್ತದೆ. ಎಲ್ಲ ಹೆಂಗಸರೂ ತಾಯಿಯಾಗಲು ಹಾತೊರೆಯುತ್ತಾರೆಂಬ ಸಿದ್ಧಚಿಂತನೆ ಹೊಂದಿದ ಶಾಮು, ಮೀರಾಳ ಭಿನ್ನತೆಯನ್ನು ಅರಗಿಸಿಕೊಳ್ಳಲಾರದೆ ಹೋಗುತ್ತಾನೆ. ಸ್ಥಿತ್ಯಂತರ ಕಾಲದ ಹೆಣ್ಣಿನ ಒಳತೋಟಿಗಳನ್ನು ಚಿತ್ರಿಸುವ ಕಾದಂಬರಿ ಗಂಡಸನ್ನು ಖಳನಾಯಕನಾಗಿ ಚಿತ್ರಿಸುವುದಿಲ್ಲ. ವಿಷಮ ದಾಂಪತ್ಯದಿಂದಾಗಿ ಇಬ್ಬರ ಜೀವನವೂ ನಾಶವಾಗುವ ವಿಷಾದವನ್ನು ಸಂಯಮದಿಂದ ಚಿತ್ರಿಸುತ್ತ ಹೋಗುತ್ತದೆ. ಶಾಮು ತನ್ನ ಕೃಷಿ ಕೆಲಸಗಳಲ್ಲಿ, ಭೂಮಿತಾಯಿಯ ನಂಟಿನಲ್ಲಿ ಮಗ್ನನಾದವನು. ಮೀರಾ ಪುಸ್ತಕಗಳಲ್ಲಿ ದೊರೆತ ಅರಿವಿನ ಸಾಂಗತ್ಯದಲ್ಲಿ ಮಗ್ನಳು. ಹೊಟ್ಟೆ ಹಸಿವಿಗೆ ಅನ್ನ ಬೇಕಾದಂತೆ ಹೃದಯದ ಹಸಿವು ನೀಗಿಸಲು ಪುಸ್ತಕ ಬೇಕು ಎಂಬುದು ಅವಳ ನಿಲುವು. ಇಲ್ಲಿ ಯಾರೂ ತಪ್ಪಿತಸ್ಥರಲ್ಲ. ಆದರೆ, ಮನಸ್ಸುಗಳು ಅರಿವಿನಲ್ಲಿ ಒಂದಾಗಲಾರದ ಸ್ಥಿತಿ ನಿರ್ಮಾಣವಾದ ಕಾಲಘಟ್ಟವದು. ಕೊನೆಗೂ ಸಾಮರಸ್ಯದ ಕೊರತೆಯಿಂದ ಶಾಮು-ಮೀರಾರ ವಿವಾಹ ಮುರಿಯುತ್ತದೆ. ಹೆಣ್ಣು ತನ್ನ ಆದಿಮ ಪ್ರತೀಕಗಳಿಂದ ಆಚೆಬರಲು ಹಾತೊರೆಯುವ ಸ್ಥಿತಿಯನ್ನು ತ್ರಿವೇಣಿಯವರ ಹಲವು ಕಾದಂಬರಿಗಳು ಮಾರ್ಮಿಕವಾಗಿ ಪ್ರತಿಫಲಿಸಿವೆ.

ಪಾರಂಪರಿಕ ವಿವಾಹದ ಚೌಕಟ್ಟಿನಲ್ಲಿರುವ ಕ್ರೌರ್ಯದ ಹಲವು ಮಗ್ಗಲುಗಳನ್ನು ಅವರ ‘ಕೀಲುಗೊಂಬೆ’ ಕಾದಂಬರಿ ದಾಖಲಿಸುತ್ತದೆ. 1955ರಲ್ಲಿ ಪ್ರಕಟವಾದ ಈ ಕಾದಂಬರಿ ತೀವ್ರ ಸ್ತ್ರೀವಾದಿ ನಿಲುವನ್ನು ಪ್ರಕಟಿಸಿದ ಕಾದಂಬರಿಯೆನ್ನಬಹುದು. ಸಂಸ್ಕೃತಿ, ಸಮಾಜ, ಧರ್ಮ, ಕುಟುಂಬ, ವಿವಾಹ ಹೀಗೆ ಎಲ್ಲೆಡೆಯೂ ‘ರೂಪಿಸಲ್ಪಟ್ಟ’ ಸ್ತ್ರೀಯರೇ ಕಾಣುತ್ತಾರೆ ಎಂಬುದು ಇಲ್ಲಿನ ಗ್ರಹಿಕೆ. ಹೆಣ್ತನವು ಸಹಜವಾಗಿ ಅರಳದೆ, ಸಿದ್ಧಮಾದರಿಗಳನ್ನು ಆವಾಹಿಸಿಕೊಂಡು ಆ ಕೃತಕ ಸ್ಥಿತಿಯ ಹಿಂಸೆಯಲ್ಲೇ ಉಸಿರುಗಟ್ಟುವ ಸ್ಥಿತಿಯನ್ನು ಇದು ಕಾಣಿಸುತ್ತದೆ. ಲೈಂಗಿಕ ಆಕ್ರಮಣವನ್ನು ಅಪಾರ ಸಹನೆಯಿಂದ ಕರ್ತವ್ಯವೆಂಬಂತೆ ಸಹಿಸಿಕೊಳ್ಳುವ ಪತಿವ್ರತಾ ಮಾದರಿಯ ಪಡಿಯಚ್ಚುಗಳನ್ನು ಚಿಕಿತ್ಸಕವಾಗಿ ತ್ರಿವೇಣಿ ನೋಡುತ್ತಾರೆ. ತನ್ನ ದೇಹ-ಮನಸ್ಸುಗಳ ಮೇಲೆ ಎಂದಿಗೂ ತನ್ನ ನಿಯಂತ್ರಣ ಹೊಂದದಂತೆ ಹದಿಬದೆಯ ಧರ್ಮದ ಉಪದೇಶವನ್ನು ರಕ್ತಗತವಾಗಿಸಿಕೊಂಡ ಹೆಂಗಸರ ಹೆಪ್ಪುಗಟ್ಟಿದ ಸ್ಥಿತಿಯನ್ನು ತ್ರಿವೇಣಿ ಹಲವು ಹೆಂಗಳೆಯ ಬದುಕುಗಳ ಮೂಲಕ ಕಟ್ಟುತ್ತ ಹೋಗುತ್ತಾರೆ. ಹೆಣ್ಣು ಹೆತ್ತಿದ್ದಕ್ಕಾಗಿ ಕ್ರೂರವಾಗಿ ಶಿಕ್ಷಿಸಲ್ಪಡುವ ಹೆಂಗಳೆಯರು ಒಂದೆಡೆಯಾದರೆ, ಯಜಮಾನನ ಕಾಮತೃಷೆಗೆ ಬಲಿಯಾಗಿ ಗರ್ಭಧರಿಸುವ ಮೂಲಕ ಅದರ ನೋವು-ಅವಮಾನಗಳನ್ನು ಒಂಟಿಯಾಗಿ ಅನುಭವಿಸುವ ಬಾಲವಿಧವೆ ಒಂದೆಡೆ. ಒಂಭತ್ತು ಹೆತ್ತರೂ ಮುಗಿಯದ ಬವಣೆ ನೀಗಿಸಲು ಸಂತಾನ ನಿಯಂತ್ರಣ ಆಪರೇಶನ್ ಮಾಡಿಸಿಕೊಳ್ಳಲು ಹೆಣಗುವ ಮಹಿಳೆ ಇನ್ನೊಂದೆಡೆ. ಹೀಗೆ ಹಲವು ಸಿಕ್ಕುಗಳಲ್ಲಿ ಸಿಕ್ಕಿಕೊಂಡ ಹೆಣ್ಣು ದೇಹ-ಮನಸ್ಸಿನ ಮಿಡಿತಗಳನ್ನು ತ್ರಿವೇಣಿ 50ರ ದಶಕದಲ್ಲಿಯೇ ಕಟ್ಟಿಕೊಟ್ಟಿದ್ದು ಐತಿಹಾಸಿಕ ಹೆಜ್ಜೆ.

ವಿವಾಹದ ಮೂಲಕವೇ ತನ್ನ ಅಸ್ತಿತ್ವವನ್ನು ಕಟ್ಟಿಕೊಳ್ಳುವ ಅನಿವಾರ್ಯ ಸ್ಥಿತಿಯನ್ನು ಪಾರಂಪರಿಕ ವ್ಯವಸ್ಥೆ ನಿರ್ಮಿಸಿರುವಾಗ ತಾಯಿ, ಹೆಂಡತಿ, ಮಗಳು.... ಈ ಸಿದ್ಧ ಪಡಿಯಚ್ಚಿನಾಚೆ ತಾವೇನು? ತಮಗೇನು ಬೇಕಾಗಿದೆ? ಎಂದು ಶೋಧಿಸಿಕೊಳ್ಳಲು ಹೊರಟ ಪಾತ್ರಗಳು ತ್ರಿವೇಣಿಯವರ ಕಥನದ ಶಕ್ತಿಶಾಲಿ ನಿರ್ಮಿತಿಗಳು. ವಧೂ ಪರೀಕ್ಷೆಗಾಗಿ ಸರಕಿನಂತೆ ಸಿದ್ಧಗೊಳ್ಳುವ, ಬಣ್ಣ, ರೂಪ, ಇತ್ಯಾದಿ ಕಾರಣಗಳಿಗಾಗಿ ನಿರಾಕರಿಸಲ್ಪಡುವ, ಅದರಿಂದ ಘಾಸಿಗೊಳ್ಳುವ ಅಬಲೆಯರ ಬದುಕಲ್ಲಿ ಶಿಕ್ಷಣ, ಆರ್ಥಿಕ ಸ್ವಾವಲಂಬನೆಗಳು ಹೊಸ ಚೈತನ್ಯ ಮೂಡಿಸಬಲ್ಲವೇ? ಎಂಬುದು ಪ್ರಶ್ನೆ. ಅಂತಹ ಸಫಲ-ವಿಫಲ ಉದಾಹರಣೆಗಳೆರಡನ್ನೂ ಮುಂದಿಡುತ್ತಾ ಚಿಂತನಕ್ರಮದಲ್ಲಿ ಬದಲಾವಣೆ ಮಾಡದ ಹೊರತೂ, ಸಂವೇದನೆ ಹಿಗ್ಗದ ಹೊರತೂ ಸಾಮರಸ್ಯ ಮೂಡದು ಎಂಬ ಅರಿವನ್ನು ಮುಂದಿಡುತ್ತಾರೆ. ಕೌಟುಂಬಿಕ ಕಥನದ ಚೌಕಟ್ಟಿನಲ್ಲಿಯೇ ಮನುಷ್ಯ ಸ್ವಭಾವದ ಕತ್ತಲ ಮೂಲೆಗಳನ್ನು ಹುಡುಕುವ ಭಿನ್ನ ನೋಟದಿಂದಾಗಿ ತ್ರಿವೇಣಿ ಆ ಕಾಲದ ಸ್ತ್ರೀ ಬರಹದಲ್ಲಿ ಅಪಾರ ನಿರೀಕ್ಷೆ ಮೂಡಿಸಿದ್ದರು.

ಮುಂದಿನ ಹಂತದಲ್ಲಿ ತ್ರಿವೇಣಿ ಮನೋವೈಜ್ಞಾನಿಕ ಕಥನದಲ್ಲಿ ಆಸಕ್ತಿ ತಳೆದರು. ಮನಸ್ಸಿನ ಮುಚ್ಚಿದ ಬಾಗಿಲುಗಳನ್ನು ತೆರೆಯುವ ಅವರ ಸಂಕಲ್ಪಕ್ಕೆ ಮನೋವಿಜ್ಞಾನದ ತಿಳಿವು ಹೊಸ ನೆಲೆಯನ್ನು ಒದಗಿಸಿತು. ತ್ರಿವೇಣಿ ತಮ್ಮ ಬಿ.ಎ. ತರಗತಿಗಳಲ್ಲಿ ಮನೋವಿಜ್ಞಾನ ಹಾಗೂ ಇಂಗ್ಲಿಶ್ ಸಾಹಿತ್ಯಗಳ ಪ್ರತಿಭಾನ್ವಿತ ವಿದ್ಯಾರ್ಥಿಯಾಗಿದ್ದವರು. ತಮ್ಮ ಸೂಕ್ಷ್ಮ ದೇಹಸ್ಥಿತಿಯಿಂದಾಗಿ ಆಟ, ಪಾಠ, ಸಂಭ್ರಮಗಳಿಂದ ಹೊರತಾಗಿ ಒಂಟಿಯಾಗಿ ಬದುಕನ್ನು ನಿರೀಕ್ಷಿಸುವ ಪರಿಪಾಠ ಅವರಲ್ಲಿ ಬೆಳೆಯುತ್ತಾ, ಸಂವೇದನಾಶೀಲ ನೋಟವೊಂದು ಮೊಳೆಯಿತು. ತೀವ್ರ ಅಸ್ತಮಾಕ್ಕೆ ತುತ್ತಾದ ಅವರು ತಮ್ಮ ಅನಾರೋಗ್ಯದಿಂದ ಉಂಟಾದ ಒಂಟಿತನವನ್ನು ನೀಗಲು ಪುಸ್ತಕಗಳ ಸಹವಾಸ ಬೆಳೆಸಿದರು. ಇಂಥ ‘ಹೊರಗಾಗು’ವಿಕೆ, ‘ಒಂಟಿತನ’ಗಳೇ ಅವರಿಗೆ ಎಲ್ಲವನ್ನೂ ಹೊರಗೆ ನಿಂತು ಅರಿಯುವ ನೋಟವನ್ನು ನೀಡಿರಬಹುದು. ಒಳಗಿನ ಮರ್ಮರಗಳಿಗೆ ಕಿವಿಯಾಗುವ ಸೂಕ್ಷ್ಮತೆಗೂ ಕಾರಣವಾಗಿರಬಹುದು. ಬೆಕ್ಕಿನಕಣ್ಣು, ದೂರದ ಬೆಟ್ಟ, ಮುಚ್ಚಿದ ಬಾಗಿಲು, ಶರಪಂಹರ ಇವು ಅವರ ಮನೋವೈಜ್ಞಾನಿಕ ಹಿನ್ನೆಲೆಯ ಕಾದಂಬರಿಗಳು. ಆಸ್ಪತ್ರೆಯ ಕೇಸ್ ಹಿಸ್ಟರಿಯಂತೆ ತೋರುತ್ತಲೇ ಹೃದಯಸ್ಪರ್ಷೀ ಮಾನವೀಯ ದಾಖಲೆಗಳಾಗುವ ಸಾಧ್ಯತೆಯಿಂದಾಗಿ ಇವು ಮುಖ್ಯವಾಗುತ್ತವೆ. ಈ ಕಥನಗಳಲ್ಲಿ ತ್ರಿವೇಣಿಯವರು ವೈಯಕ್ತಿಕ ಅನುಭವಗಳ ಮೂಲಕವೇ ಸಾಮೂಹಿಕ ಅನುಭವಗಳಿಗೆ ದಾಟುತ್ತಾರೆ. ಹೆಣ್ಣಿನ ಹೆಪ್ಪುಗಟ್ಟಿದ ಮೂಕಸ್ಥಿತಿಯನ್ನು ಒಳಹೊಕ್ಕು ಅಲುಗಾಡಿಸುತ್ತಾರೆ. ಮಾನಸಿಕ ಚಿಕಿತ್ಸಾಲಯದ ಸನ್ನಿವೇಶಗಳನ್ನು, ಮಾನಸಿಕ ಸಮಸ್ಯೆಗಳ ಆಳ, ವೈವಿಧ್ಯಗಳನ್ನು ಅಭ್ಯಸಿಸಿ ಬರೆದ ಅವರು ಅದಕ್ಕಾಗಿ ಮನೋಚಿಕಿತ್ಸಕರ ಸಲಹೆಗಳನ್ನು ಪಡೆಯುತ್ತಿದ್ದರು.

ವ್ಯವಸ್ಥೆ ನೀಡಿದ ಭಯ ಮತ್ತು ಹಿಂಸೆಗಳಿಂದ ಘಾಸಿಗೊಂಡ ಸುಪ್ತ ಮನಸ್ಸು ಅದಕ್ಕೆ ವಿಕ್ಷಿಪ್ತವಾಗಿ ಪ್ರತಿಕ್ರಿಯಿಸುವ, ಮೇಲ್ನೋಟಕ್ಕೆ ಅತಾರ್ಕಿಕವಾಗಿ ಕಾಣುತ್ತಲೇ, ಒಳಗೊಂದು ಸಂವೇದನೆಯ ಕೊಂಡಿಯನ್ನು ರೂಪಿಸುತ್ತ ಹೋಗುವ ದಟ್ಟ ಅನುಭವ ಜಗತ್ತನ್ನು ಕಟ್ಟುವಲ್ಲಿ ತ್ರಿವೇಣಿ ಸಫಲರಾಗುತ್ತಾರೆ. ಮಲತಾಯಿಯ ಹಿಂಸ್ರವಾದ ಹಸಿರು ಕಣ್ಣುಗಳು ಚಿತ್ತಭಿತ್ತಿಯಲ್ಲಿ ಭಯವಾಗಿ ನೆಟ್ಟ ಸ್ಥಿತಿ ಬೆಕ್ಕಿನ ಕಣ್ಣು ಕಾದಂಬರಿಯಲ್ಲಿ ರೂಪಕಾತ್ಮಕವಾಗಿ ಮೂಡಿದೆ. ಅವರ ಅತ್ಯಂತ ಜನಪ್ರಿಯ ಕಾದಂಬರಿ ಹಾಗೂ ನಂತರ ಜನಪ್ರಿಯ ಚಲನಚಿತ್ರವೂ ಆದ ಶರಪಂಜರ ನೈತಿಕತೆಯ ಕುರಿತ ಸೂಕ್ಷ್ಮ ತಲ್ಲಣಗಳನ್ನು ಹೊರಹಾಕುವ ಪರಿ ಹೃದಯಸ್ಪರ್ಷಿಯಾಗಿದೆ. ಕಾವೇರಿಯ ಬದುಕಿನಲ್ಲಿ ಯಾವುದೇ ಕೊರತೆಗಳಿಲ್ಲ ಎಂಬ ಸ್ಥಿತಿ ಮೇಲ್ನೋಟದ್ದು. ವಿವಾಹ ಪೂರ್ವದ ಘಟನೆಯೊಂದರ ಸ್ಮೃತಿಯಲ್ಲಿ ಅವಳ ನರಳಾಟ ಅತ್ಯಂತ ಸೂಕ್ಷ್ಮವಾದುದು. ಪಾವಿತ್ರ್ಯ, ಪಾತಿವೃತ್ಯದ ಮೌಲ್ಯಗಳು ಹೆಂಗಸನ್ನು ಮಾತ್ರ ಆಳುತ್ತಾ ಘಾಸಿಗೊಳಿಸುವ ಸ್ಥಿತಿ ನಮ್ಮ ಮೌಲ್ಯಪ್ರಜ್ಞೆಯ ದುರಂತ. ಹೆರಿಗೆಯ ಸಮಯದಲ್ಲಿ ಹೆಣ್ಣಿನ ದೇಹ-ಮನಸ್ಸುಗಳು ದುರ್ಬಲವಾಗುವ ಘಳಿಗೆಯಲ್ಲಿ ಅವಳ ಸುಪ್ತಪ್ರಜ್ಞೆ ಅವಳನ್ನು ಮೀರಿ ಹೊರಬರುತ್ತದೆ. ಸಮಾಜ ಅವಳನ್ನು ‘ಹುಚ್ಚಿ’ಯನ್ನಾಗಿಸುತ್ತದೆ. ಚಿಕಿತ್ಸೆ ಪಡೆದು ಗುಣಮುಖಳಾಗಿ ಬಂದಮೇಲೂ ಕುಟುಂಬ, ಗಂಡ, ಮಕ್ಕಳು ಯಾರೂ ಅವಳನ್ನು ಸಹಜವಾಗಿ ಸ್ವೀಕರಿಸುವುದೇ ಇಲ್ಲ ಎಂಬುದು ಪರಿಸ್ಥಿತಿಯ ವ್ಯಂಗ್ಯ. ತಿರಸ್ಕಾರ, ನಿರಾಕರಣೆ, ಅಪನಂಬಿಕೆಗಳಲ್ಲಿ ನಲುಗುವ ಕಾವೇರಿ ಮತ್ತೆ ಹುಚ್ಚಾಸ್ಪತ್ರೆ ಸೇರುವ ದುರಂತ ಅಂತ್ಯದಲ್ಲಿ ಕಾದಂಬರಿ ಕೊನೆಯಾಗುತ್ತದೆ.

ಆಸ್ಪತ್ರೆ, ಜೈಲು, ಮಾನಸಿಕ ಚಿಕಿತ್ಸಾ ಕೇಂದ್ರಗಳು ತ್ರಿವೇಣಿಯವರನ್ನು ಯಾಕೆ ಕಾಡುತ್ತವೆ? ಎಂಬ ಪ್ರಶ್ನೆ ಕೊನೆಯಲ್ಲಿ ಉಳಿಯುತ್ತದೆ. ಸಮಾಜದ ಅಸ್ವಾಸ್ಥ್ಯದಲ್ಲಿಯೇ ವೈಯಕ್ತಿಕ ಅಸ್ವಾಸ್ಥ್ಯದ ಮೂಲವಿದೆ ಎಂಬುದು ಅವರ ಸರಿಯಾದ ಗ್ರಹಿಕೆ. ವ್ಯವಸ್ಥೆಯ ರೂಕ್ಷತೆಯಲ್ಲಿ ಗಾಯಗೊಂಡ ಮನಸ್ಸುಗಳನ್ನು ಚಿತ್ರಿಸುತ್ತ ಅವರಿಗೆ ಬದುಕುವ ಅವಕಾಶ ಕೊಡುವ ಸಂವೇದನಾಶೀಲತೆಯನ್ನು ಸಮಾಜ ಬೆಳೆಸಿಕೊಳ್ಳಬೇಕು ಎಂಬ ಅರಿವಿಗೆ ತ್ರಿವೇಣಿ ಕಣ್ತೆರೆಸುತ್ತಾರೆ. ಮುಂದೆ ವೈದೇಹಿ, ವೀಣಾ ಶಾಂತೇಶ್ವರ, ನೇಮಿಚಂದ್ರ, ಮುಂತಾದವರ ಬರವಣಿಗೆಯಲ್ಲಿ ಹೆಣ್ಣಿನ ಒಳಜಗತ್ತು ಮೂಡುತ್ತ ಹೋಯಿತು. ಅಂಥ ಸ್ತ್ರೀ ಸಂವೇದನೆಯ ದಾಖಲಾತಿಗೆ ಮಾರ್ಗವನ್ನು ಹಾಕಿಕೊಟ್ಟವರು ತ್ರಿವೇಣಿ. ಒಂದು ಪರಂಪರೆಯನ್ನು ಹುಟ್ಟುಹಾಕಿದ್ದಕ್ಕಾಗಿ ಅವರು ಸದಾ ನೆನಪಿನಲ್ಲಿ ಉಳಿಯುತ್ತಾರೆ. ಅದೊಂದು ಮಾನವೀಯ ದಾಖಲಾತಿಯೂ ಆಗಿರುವುದರಿಂದ ಕನ್ನಡದ ಕಥನ ಜಗತ್ತು ಅವರಿಗೆ ಕೃತಜ್ಞ.

-ಗೀತಾ ವಸಂತ

ಈ ಅಂಕಣದ ಹಿಂದಿನ ಬರೆಹಗಳು:
ಜಗದ ಜ್ವರಕ್ಕೆ ಎದೆಹಾಲ ಔಷಧ: ‘ಸಮಗಾರ ಭೀಮವ್ವ’

ಆಳವಾಗಿ ಕದಲಿಸುವ ‘ಬೀಜ’ಪ್ರಶ್ನೆಗಳು
ಸ್ತ್ರೀಲೋಕ
ಮಹಿಳಾ ಆತ್ಮಕಥೆಗಳೆಂಬ ಅಂತರಂಗದ ಪುಟಗಳು
ನಾದದ ನದಿಯೊಂದು ನಡೆದ್ಹಾಂಗ
ನದಿಗೆ ನೆನಪಿನ ಹಂಗಿಲ್ಲ
ಶಬ್ದದೊಳಗಿನ ನಿಶ್ಯಬ್ದವನ್ನು ಸ್ಫೋಟಿಸುವ ಕಥನ
ಮೊಲೆ ಮುಡಿಗಳ ಹಂಗು
ನೆಲದಕಣ್ಣಿನ ಕಾರುಣ್ಯ: ನೋವೂ ಒಂದು ಹೃದ್ಯ ಕಾವ್ಯ
ಫಣಿಯಮ್ಮ ಎಂಬ ಹೊಸ ಪುರಾಣ:
‘ಹಾರುವ ಹಕ್ಕಿ ಮತ್ತು ಇರುವೆ...’ ಅನನ್ಯ ನೋಟ
ಹೊತ್ತು ಗೊತ್ತಿಲ್ಲದ ಕಥೆಗಳು
ಹೊಳೆಮಕ್ಕಳು : ಅರಿವಿನ ಅಖಂಡತೆಗೆ ತೆಕ್ಕೆಹಾಯುವ ಕಥನ
ಕನ್ನಡ ಚಿಂತನೆಯ ಸ್ವರೂಪ ಹಾಗೂ ಮಹಿಳಾ ಸಂವೇದನೆಗಳು
ಸಾಹಿತ್ಯ ಸರಸ್ವತಿ ಬದುಕಿನ ‘ಮುಂತಾದ ಕೆಲ ಪುಟಗಳು’...
ಹೋದವರು ಹಿಂದಿರುಗಿ ಬರಲು ಹಾದಿಗಳಿಲ್ಲ
ನಿಗೂಢ ಮನುಷ್ಯರು: ತೇಜಸ್ವಿಯವರ ವಿಶ್ವರೂಪ ದರ್ಶನ
ಕನಕನ ಕಿಂಡಿಯಲ್ಲಿ ಮೂಡಿದ ಲೋಕದೃಷ್ಟಿ
ವಿಶ್ವಮೈತ್ರಿಯ ಅನುಭೂತಿ : ಬೇಂದ್ರೆ ಕಾವ್ಯ
ಕಾರ್ನಾಡರ ಯಯಾತಿ- ಕಾಲನದಿಯ ತಳದಲ್ಲಿ ಅಸ್ತಿತ್ವದ ಬಿಂಬಗಳ ಹುಡುಕಾಟ
ಹರಿವ ನದಿಯಂಥ ಅರಿವು : ಚಂದ್ರಿಕಾರ ಚಿಟ್ಟಿ
ಕಾಲುದಾರಿಯ ಕವಿಯ ಅ_ರಾಜಕೀಯ ಕಾವ್ಯ

MORE NEWS

ಪರಿಘಾಸನ ಮತ್ತು ಅರ್ಧ ಚಕ್ರಾಸನ 

16-04-2024 ಬೆಂಗಳೂರು

"ಪರಿಘಾಸನ ಆಸನವು ) ಪಿತ್ತ ಜನಕಾಂಗ ಮತ್ತು ಮೇದೋಜೀರಕ ಚೈತನ್ಯಗೊಳ್ಳುವಂತೆ ಮಾಡುತ್ತದೆ. ಹಾಗೆಯೇ ‘ಅರ್ಧ ಚಕ್...

ಲೋಕಸಭಾ ಚುನಾವಣೆಗಳ ಸುತ್ತಮುತ್ತ ಒಂದು ಸುತ್ತು

15-04-2024 ಬೆಂಗಳೂರು

"ಪರಸ್ಪರ ರೋಚಕ ನಿಂದನೆಗಳು. ಕ್ಷೇತ್ರವಾರು ಚಕ್ಕರಗುಳ್ಳಿ ಇಡುವ ಚತುರ ವಿವರಗಳು. ಹೊಸ ಹೊಸ ಬೈಗುಳಗಳು. ಮಾಧ್ಯಮಗಳಿಗ...

ಉಪವಿಷ್ಟಕೋನಾಸನ ಮತ್ತು ಪವನಮುಕ್ತಾಸನ

09-04-2024 ಬೆಂಗಳೂರು

"ಉಪವಿಷ್ಟಕೋನಾಸನ ಯೋಗಾಸನವು ಮನಸ್ಸನ್ನು ಶಾಂತಗೊಳಿಸುತ್ತದೆ ಮತ್ತು ಮಾಂಸಗಳ ತೂಕವನ್ನು ಕಡಿಮೆಗೊಳಿಸುತ್ತದೆ. ಪವನಮು...