ಮುಗ್ಧ ಮನಸ್ಸಿನ ಕನಸಿನ ಸರಣಿ Unorthodox

Date: 23-06-2022

Location: ಬೆಂಗಳೂರು


ಎಲ್ಲಿಯವರೆಗೆ ಹುಸಿನಂಬಿಕೆಗಳನ್ನು ವಿರೋಧಿಸುವವರು ಹುಟ್ಟಿಕೊಳ್ಳುವುದಿಲ್ಲವೋ ಅಲ್ಲಿಯವರೆಗೂ ಧರ್ಮ-ಸಮಾಜಗಳ ಹೆಸರಿನಲ್ಲಿ ತಪ್ಪುಗಳನ್ನೆಲ್ಲ ಒಪ್ಪಗೊಳಿಸುವ ಜಾಣತನದ ಕೆಲಸವೂ ನಡೆಯುತ್ತಿರುತ್ತದೆ ಎನ್ನುತ್ತಾರೆ ಲೇಖಕಿ ಅಂಜನಾ ಹೆಗಡೆ. ಅವರು ತಮ್ಮ ಬೆಳ್ಳಕ್ಕಿ ಸಾಲು ಅಂಕಣದಲ್ಲಿ ಈ ಸಲ Unorthodox ಎಂಬ German-American Drama ಕುರಿತು ಬರೆದಿದ್ದಾರೆ.

ಮುಗ್ಧತೆಯೆನ್ನುವುದು ವರವೋ ಶಾಪವೋ ಎನ್ನುವ ಜಿಜ್ಞಾಸೆ ಇಂದು-ನಿನ್ನೆಯದಲ್ಲ. ಮುಗ್ಧತೆಗೂ ದಡ್ಡತನಕ್ಕೂ ಇರುವ ಸೂಕ್ಷ್ಮ ವ್ಯತ್ಯಾಸಗಳನ್ನು ಅರ್ಥೈಸಿಕೊಳ್ಳುವುದೂ ಸುಲಭವೇನಲ್ಲ. ಪ್ರಪಂಚಕ್ಕೆ ಮುಗ್ಧನಂತೆ ಕಾಣಿಸುವವ ನಿಜದಲ್ಲಿ ಏನನ್ನೂ ಅರಿತುಕೊಳ್ಳುವ ಸಾಮರ್ಥ್ಯವಿಲ್ಲದ ದಡ್ಡನಾಗಿದ್ದಿರಬಹುದು ಅಥವಾ ಜನರ ಕಣ್ಣಿಗೆ ದಡ್ಡನಂತೆ ಕಾಣಿಸುವವನ ಮುಗ್ಧತೆಯೇ ಆತನ ನಿಜವಾದ ಸಾಮರ್ಥ್ಯವಾಗಿದ್ದಿರಲೂಬಹುದು. ಈ ಕ್ಷಣಕ್ಕೆ ದೌರ್ಬಲ್ಯದಂತೆ ಭಾಸವಾಗುವ ಮುಗ್ಧತೆಯೇ ಮುಂದೊಂದು ದಿನ ಅನುಭವಗಳಿಗೆ ಅನುಗುಣವಾಗಿ ಅಗತ್ಯವಿರುವ ಬದಲಾವಣೆಗಳೊಂದಿಗೆ ಪ್ರಕಟಗೊಂಡು ಸುಂದರವಾದ ವ್ಯಕ್ತಿತ್ವವೊಂದನ್ನು ರೂಪಿಸಿಕೊಳ್ಳಲು ನೆರವಾಗಬಹುದು. ಆದರೆ ದಡ್ಡತನದ ಜಾಡ್ಯವನ್ನು ಸುಲಭವಾಗಿ ವಾಸಿ ಮಾಡುವಂತಹ ಯಾವ ಮದ್ದೂ ಇಲ್ಲ. ಅದರಲ್ಲೂ ಆ ಜಾಡ್ಯ ತಾನು ಪುರುಷನೆಂಬ ಅಹಂಕಾರದಿಂದಲೋ, ಧಾರ್ಮಿಕ ನಿಲುವುಗಳು ತನ್ನ ಬೆಂಬಲಕ್ಕಿವೆಯೆನ್ನುವ ಹುಂಬತನದಿಂದಲೋ ಅಥವಾ ಮದುವೆಯ ಕಟ್ಟುಪಾಡುಗಳೇ ಸಂಬಂಧವನ್ನು ನಿರ್ದೇಶಿಸುತ್ತವೆಯೆನ್ನುವ ಹುಸಿನಂಬಿಕೆಯಿಂದಲೋ ಹುಟ್ಟಿಕೊಂಡಿದ್ದಾದರೆ ಅದಕ್ಕೊಂದು ಪರಿಹಾರವನ್ನು ಹುಡುಕುವುದು ಕಷ್ಟಸಾಧ್ಯ.

ವೈವಾಹಿಕ ಸಂಬಂಧವನ್ನು ಹಗುರವಾಗಿ ಪರಿಗಣಿಸುವ, ಅದಕ್ಕೊಂದು ಚೌಕಟ್ಟನ್ನು ಹಾಕಿ ಜಟಿಲಗೊಳಿಸುವ ಕೆಲಸ ಮಾಡುವ ಪುರುಷನನ್ನು ಯಾವ ಹೆಣ್ಣೂ ಹೃದಯದೊಳಗೆ ಬಿಟ್ಟುಕೊಂಡಿಲ್ಲ. ಅಂತಹ ಮದುವೆಗಳೇನಿದ್ದರೂ ಸಮಾಜವನ್ನು ಮೆಚ್ಚಿಸುವ ಕಾರಣಕ್ಕಾಗಿ ಮಾತ್ರ ಊರ್ಜಿತವಾಗಿರುವಂಥವುಗಳು. ಕಾಲ, ದೇಶ, ಜಾತಿ, ಧರ್ಮಗಳೆನ್ನುವಂತಹ ಯಾವ ವಿನಾಯಿತಿಯೂ ಇಂತಹ ಸಂಬಂಧಗಳಿಗೆ ಅನ್ವಯವಾಗುವುದೇ ಇಲ್ಲ. ತಾವು ಅನುಸರಿಸಿಕೊಂಡು ಬಂದಿರುವ ಸಂಬಂಧಗಳ ನೆರಳಿನಲ್ಲಿಯೇ ತಮ್ಮ ಮುಂದಿನ ತಲೆಮಾರಿನ ಹೆಣ್ಣುಮಕ್ಕಳೂ ನೆಲೆ ಕಂಡುಕೊಳ್ಳಬೇಕೆಂದು ಅಪೇಕ್ಷಿಸುವ ಹೆಂಗಸರ ಸಹನೆ ಮತ್ತು ಮದುವೆ-ಸಂಬಂಧಗಳೆಡೆಗಿನ ತಮ್ಮ ಅಭಿಪ್ರಾಯಗಳನ್ನೇ ಪಾರಂಪರ‍್ಯವಾದ ಹಕ್ಕೆನ್ನುವಂತೆ ಚಲಾಯಿಸಿಕೊಂಡು ಬಂದಿರುವ ಗಂಡಸಿನ ಅಹಂಕಾರಗಳ ನಡುವೆ ನಿತ್ಯ ಹೆಣಗಾಡಬೇಕಾದ ಮದುವೆಗಳು ತಮ್ಮ ಸೌಂದರ್ಯವನ್ನು ಕಳೆದುಕೊಳ್ಳಲು ಜಾಸ್ತಿ ಸಮಯವೂ ಹಿಡಿಯುವುದಿಲ್ಲ. ಹಾಗೆಯೇ ಮದುವೆಯೆನ್ನುವುದೇ ಒಂದು ಒಪ್ಪಂದವೆನ್ನುವುದನ್ನು ಮರೆತು ಹೊರಲಾರದಷ್ಟು ಕನಸುಗಳನ್ನು ಹೊತ್ತು ನಿರಾಶೆಯನ್ನು ಅನುಭವಿಸುವ ಮುಗ್ಧ ಮನಸ್ಸುಗಳಿಗೆ ಪ್ರತಿನಿತ್ಯ ಹೊಸಹೊಸ ಕನಸುಗಳನ್ನು ಒದಗಿಸುವಷ್ಟು ಶ್ರೀಮಂತಿಕೆ ಕೂಡಾ ಯಾವ ಮದುವೆಗೂ ಲಭ್ಯವಾಗಿಲ್ಲ. ಯಾವ ಮದುವೆ ತನ್ನ ಸೌಂದರ್ಯವನ್ನು ಉಳಿಸಿಕೊಂಡಿದೆಯೋ ಅಲ್ಲೊಂದು ಹೊಂದಾಣಿಕೆ ಕಾಣಿಸಿದರೆ, ಯಾವ ಮದುವೆ ತನ್ನ ಅಸ್ತಿತ್ವವನ್ನು ಉಳಿಸಿಕೊಳ್ಳಲು ವಿಫಲವಾಗುತ್ತದೆಯೋ ಅಲ್ಲೊಂದು ಅಗೋಚರ ನೋವು! ಹಾಗೊಂದು ಕಣ್ಣಿಗೆ ಕಾಣಿಸದ ಖಾಸಗಿಯಾದ ನೋವಿನ ಕಥೆಯೇ Unorthodox.

ಅವಳಿನ್ನೂ ಹತ್ತೊಂಬತ್ತರ ಯುವತಿ. ಮದುವೆಯನ್ನು ಹೇಗೆ ನಿಭಾಯಿಸಬೇಕೆಂದು ಅವಳಿಗೆ ಕೊಡಲಾದ ತರಬೇತಿಯಲ್ಲಿಯೂ ಯಾವ ರೀತಿಯಲ್ಲಿ ಗಂಡನನ್ನು ದೈಹಿಕವಾಗಿ ಸ್ವೀಕರಿಸಿ ಮಕ್ಕಳನ್ನು ಹೊಂದಬೇಕೆಂಬ ಮಾಹಿತಿಯಿತ್ತೇ ಹೊರತು ಭಾವನಾತ್ಮಕ ಒಡನಾಟದ ಉಲ್ಲೇಖವಿಲ್ಲ. ತನ್ನ ಸುತ್ತ ಇರುವ ಹೆಂಗಸರೆಲ್ಲ ಮದುವೆಯಾಗಿ ಒಂದೇ ವರ್ಷದಲ್ಲಿ ಮಗುವನ್ನು ಹೊಂದಲು ಸಮರ್ಥರಾಗಿರುವಾಗ ತಾನು ಮಾತ್ರ ಎಲ್ಲರಂತಿಲ್ಲ ಎನ್ನುವ ಅವಳ ಕೊರಗು, ನೋವನ್ನು ಅನುಭವಿಸಿಯಾದರೂ ಸರಿ ಗಂಡನೊಂದಿಗೆ ದೈಹಿಕ ಸಂಪರ್ಕವನ್ನು ಹೊಂದಲೇಬೇಕೆನ್ನುವ ನಿರ್ಧಾರವನ್ನು ತೆಗೆದುಕೊಳ್ಳುವಂತೆ ಮಾಡಿದೆ. ಹೃದಯಗಳನ್ನು ಒಂದುಮಾಡದ, ಪ್ರೀತಿಯ ಮಾತುಗಳೇ ಇಲ್ಲದ ಆ ಮದುವೆಯನ್ನು ಮಗುವಿನ ಮೂಲಕ ಊರ್ಜಿತಗೊಳಿಸಲು ಹೊರಟಿರುವ ಅವಳ ನೋವು-ಸಂಕಟಗಳನ್ನು ಅರ್ಥಮಾಡಿಕೊಳ್ಳಬಲ್ಲಂಥವರು ಅಲ್ಲೆಲ್ಲಿಯೂ ಇಲ್ಲ. ಅವಳ ನೋವು ಕೇವಲ ಶರೀರದ್ದಲ್ಲ; ಶರೀರದ ಮೂಲಕ ಅನುಭವಕ್ಕೆ ಬಂದು ಇಷ್ಟೂ ಕಾಲ ಒಗ್ಗೂಡಿಸಿಕೊಂಡ ಚೈತನ್ಯವನ್ನೆಲ್ಲ ಹೀರಿಬಿಡಬಲ್ಲ ಯಾತನೆ. ಅದನ್ನು ಪ್ರಪಂಚದೆದುರು ತೆರೆದಿಡಲು ಸೂಕ್ತವಾದ ಶಬ್ದಗಳಿಲ್ಲ; ಕೇಳಿಸಿಕೊಳ್ಳುವವರೂ ಇಲ್ಲ. ಅವನು ಇತರ ಧಾರ್ಮಿಕ ಆಚರಣೆಗಳಂತೆಯೇ ಮದುವೆಯನ್ನೂ ನಿಭಾಯಿಸಲು ಹೊರಟವನು. ಮಕ್ಕಳನ್ನು ಹೊಂದುವ ಉದ್ದೇಶದ ಹೊರತಾಗಿ ಅವನಿಗೆ ಮದುವೆಯ ಕುರಿತು ಯಾವುದೇ ಕನಸುಗಳಿಲ್ಲ. ದೈಹಿಕವಾಗಿ ಹೆಂಡತಿಯನ್ನು ಸೇರಲು ಪ್ರಯಾಸಪಡುವ ಅವನಿಗೆ ತನ್ನ ಮದುವೆಯೇ ನಿರುಪಯುಕ್ತವೆನ್ನಿಸಿದಾಗ, ಮಾತು ಬಂದು ನಿಲ್ಲುವುದು ವಿಚ್ಛೇದನಕ್ಕೆ.

ಧಾರ್ಮಿಕ ವಿಧಿಗಳ ಪ್ರಕಾರ ನೆರವೇರಿದೆಯೆನ್ನುವುದರ ಹೊರತಾಗಿ ಮದುವೆಯೇ ಅಲ್ಲದ ಆ ಸಂಬಂಧಕ್ಕೆ ವಿಚ್ಛೇದನದ ಒಪ್ಪಂದ ಒಗ್ಗುವುದಾದರೂ ಹೇಗೆ? ತಾನು ಮದುವೆಯಾಗಿದ್ದೇನೆ ಎನ್ನುವುದಕ್ಕೆ ಹತ್ತಿಪ್ಪತ್ತು ಜನರ ಅನುಮತಿ, ಬೇರೆಯಾಗಿದ್ದೇನೆ ಎನ್ನುವುದಕ್ಕೆ ನಾಲ್ಕಾರು ಜನರ ಉಪಸ್ಥಿತಿ ಇಷ್ಟರಲ್ಲಿಯೇ ಆರಂಭವಾಗಿ ಮುಗಿದುಹೋಗಲಿರುವ ಸಂಬಂಧ ಅವಳಲ್ಲಿ ಹುಟ್ಟಿಸಿದ್ದ ಕನಸುಗಳನ್ನು ಸಾಯಿಸುವುದು ಹೇಗೆ? ಮುಗಿದುಹೋದ ಮುಗ್ಧ ಕನಸುಗಳ ಜಾಗವನ್ನು ಆವರಿಸಿಕೊಳ್ಳುವ ಹತಾಶೆಯನ್ನು ಸಂಭಾಳಿಸುವುದು ಹೇಗೆ? ಇನ್ನೂ ಆರಂಭವಾಗಬೇಕಿರುವ ಬದುಕಿನ ಕಸುವನ್ನೇ ಕಸಿದುಕೊಂಡುಬಿಡಬಲ್ಲ ಆ ಹತಾಶೆಯ ಭಾವನೆಯಿಂದ ಬಿಡುಗಡೆ ಹೇಗೆ? ತಾನು ಗರ್ಭಿಣಿಯೆನ್ನುವ ವಿಷಯವನ್ನು ಗಂಡನಿಗೂ ತಿಳಿಸದೆ ಆಭರಣಗಳನ್ನು ಮಾರಿದ ಹಣದೊಂದಿಗೆ ದೇಶ ಬಿಡುವ ಅವಳಿಗೆ, ಧರ್ಮವೆನ್ನುವುದು ತನ್ನ ಸುತ್ತ ಕಟ್ಟಿದ ಬೇಲಿಯನ್ನು ದಾಟಿಹೋಗುವುದೇ ತನ್ನನ್ನು ತಾನು ಕಾಪಾಡಿಕೊಳ್ಳುವ ಮಾರ್ಗವಾಗಿ ಗೋಚರಿಸಿರಬಹುದೇ? ಧರ್ಮದ ಚೌಕಟ್ಟಿನಾಚೆ ಅಸ್ತಿತ್ವ ಕಂಡುಕೊಳ್ಳಲು ಸಾಧ್ಯವಾದಾಗ ಮಾತ್ರ ವೈವಾಹಿಕ ಸಂಬಂಧಗಳು ಸುರಕ್ಷಿತವಾಗಿರಬಹುದೇ? ಮನುಷ್ಯನ ಮುಗ್ಧತೆಯನ್ನು ದೌರ್ಬಲ್ಯದಂತೆ ಬಳಸಿಕೊಳ್ಳುವ ಧಾರ್ಮಿಕ ನಂಬಿಕೆಗಳನ್ನು ಕಳೆದುಕೊಳ್ಳುವುದೊಂದೇ ತನ್ನನ್ನು ತಾನು ಕಂಡುಕೊಳ್ಳುವ ವಿಮೋಚನೆಯ ಏಕೈಕ ಮಾರ್ಗವಾಗಿರಬಹುದೇ? ಹೀಗೆ ಹಲವಾರು ಪ್ರಶ್ನೆಗಳನ್ನು ಹುಟ್ಟಿಸುವ ಈ ಸರಣಿಯ ಒಂದೊಂದು ಪಾತ್ರಗಳಿಗೂ ತಮ್ಮದಲ್ಲದ ಬದುಕನ್ನು ತಮ್ಮದಾಗಿಸಿಕೊಳ್ಳಬೇಕಾದ ಅನಿವಾರ್ಯತೆಯಿದೆ; ತಮ್ಮ ಬದುಕಿನ ನಡೆ-ನುಡಿಗಳೆಲ್ಲವನ್ನೂ ಇನ್ನೆಲ್ಲೋ ಕುಳಿತ ಇನ್ಯಾರೋ ನಿರ್ದೇಶಿಸುತ್ತಿರುವ ಅರಿವಿದ್ದರೂ ವಿರೋಧಿಸಲಾಗದ ಅಸಹಾಯಕತೆಯಿದೆ.

ಖಾಸಗಿಯಾದ ಸಂಬಂಧಗಳು, ಸಾಮಾಜಿಕ ಒಡನಾಟಗಳು, ಧಾರ್ಮಿಕ ಆಚರಣೆಗಳೆಲ್ಲವೂ ಸರಳವಾಗಿದ್ದಷ್ಟೂ ಸುಂದರ. ಯಾರೋ ನಿರ್ಧರಿಸಿದ ರೀತಿ-ನೀತಿಗಳನ್ನು ಇನ್ಯಾರೋ ತಲೆಯ ಮೇಲೆ ಹೊತ್ತು ತಿರುಗುವ ಅನಿವಾರ್ಯತೆ ಉಂಟಾದರೆ ಅಲ್ಲೊಂದು ಅಸಹನೆ ತಲೆದೋರುವುದು ಸಹಜ ಪ್ರಕ್ರಿಯೆ. ಅಷ್ಟೇನೂ ಗಂಭೀರವಲ್ಲದ ಧಾರ್ಮಿಕ ಆಚರಣೆಯೊಂದು ಬಹುದೊಡ್ಡ ಸಾಮಾಜಿಕ ಸಮಸ್ಯೆಯೆನ್ನುವಂತೆ ಚರ್ಚೆಗೊಳಗಾಗಿರಬಹುದಾದರೂ ಅದಕ್ಕಿಂತಲೂ ಗಂಭೀರ ಸ್ವರೂಪದ, ಸಂಬಂಧಗಳ ಸೌಂದರ್ಯವನ್ನು ಕೆಡಿಸಬಲ್ಲ ಅವೆಷ್ಟೋ ನಂಬಿಕೆಗಳು ಎಲ್ಲ ಧರ್ಮಗಳಲ್ಲಿಯೂ ಚಾಲ್ತಿಯಲ್ಲಿರಬಹುದು. ಮೇಲ್ನೋಟಕ್ಕೆ ಗೋಚರಿಸದ ಅವುಗಳನ್ನು ಕಾಲಕಾಲಕ್ಕೆ ಸೋಸುವ ಸೂಕ್ಷ್ಮ ಕೆಲಸವನ್ನು ಮಾಡಬೇಕಾದವರು ಯಾರು? ಗಂಡ ಕೇಳಿದ ವಿಚ್ಛೇದನಕ್ಕೆ ಪ್ರತಿಕ್ರಿಯೆಯೆನ್ನುವಂತೆ ತನ್ನ ಕೃತಕ ತಲೆಗೂದಲನ್ನು ಕಿತ್ತು ಕೊಳದಲ್ಲಿ ತೇಲಿಬಿಡುವ ಅವಳ ಆ ಕ್ಷಣದ ಸ್ವಾತಂತ್ರ್ಯವನ್ನು ಕಿತ್ತುಕೊಳ್ಳುವ ಧರ್ಮ ಪ್ರಪಂಚದ ಯಾವ ಮೂಲೆಯಲ್ಲಾದರೂ ಅಸ್ತಿತ್ವದಲ್ಲಿರಬಹುದೇ? ಹುಟ್ಟಲಿರುವ ತನ್ನ ಮಗು ಮುಕ್ತ ವಾತಾವರಣದಲ್ಲಿ ಬೆಳೆಯಬೇಕೆನ್ನುವ ಅವಳ ಕನಸನ್ನು ಕಿತ್ತುಕೊಳ್ಳಲು ಯತ್ನಿಸುವ ಧರ್ಮವೊಂದರ ಭಾಗವಾಗುವ ಹಂಬಲ ಆ ಮಗುವಿನಲ್ಲಿ ಹುಟ್ಟಿಕೊಳ್ಳಲು ಸಾಧ್ಯವಿದೆಯೇ? ಹೀಗೆ ಸರಣಿಯುದ್ದಕ್ಕೂ ಹುಟ್ಟಿಕೊಳ್ಳುವ ಪ್ರಶ್ನೆಗಳಿಗೆ ಅವಳು ತನ್ನನ್ನು ತಾನು ಬಿಡುಗಡೆಗೊಳಿಸಿಕೊಳ್ಳಲು ಮಾಡುವ ಪ್ರಯತ್ನಗಳೇ ಉತ್ತರಗಳ ರೂಪದಲ್ಲಿ ಎದುರಾಗುತ್ತ ಹೋಗುತ್ತವೆ.

ಹುಟ್ಟಿನಿಂದ ಬಂದ ಧರ್ಮವನ್ನು ನಮ್ಮದಾಗಿಸಿಕೊಳ್ಳುವುದು ಮಾಮೂಲು. ನಮ್ಮ ಧರ್ಮ ನಮ್ಮಿಚ್ಛೆಗೆ ಅನುಗುಣವಾಗಿಲ್ಲದಿದ್ದರೆ ಬೇರೆ ಧರ್ಮವನ್ನು ನಮ್ಮದಾಗಿಸಿಕೊಳ್ಳುವುದೂ ಮಾಮೂಲು. ಇಷ್ಟವಿದ್ದೋ ಇಲ್ಲದೆಯೋ ವೈವಾಹಿಕ ಜೀವನವನ್ನು ನಮ್ಮದಾಗಿಸಿಕೊಳ್ಳುವುದು ಕೂಡಾ ಮಾಮೂಲು ಸಂಗತಿಯೇ. ಸಾಮಾಜಿಕ, ಧಾರ್ಮಿಕ ನಂಬಿಕೆಗಳೆಲ್ಲವೂ ಯಾವುದೋ ಒಂದು ಒಳ್ಳೆಯ ಉದ್ದೇಶವನ್ನಿಟ್ಟುಕೊಂಡೇ ಹುಟ್ಟಿಕೊಂಡಂಥವುಗಳು. ಅವುಗಳ ಬೆನ್ನಲ್ಲಿಯೇ ಸಮಸ್ಯೆಯೂ ಹುಟ್ಟಿಕೊಳ್ಳುವುದು ಅಥವಾ ಸಮಸ್ಯೆಯನ್ನು ಸೃಷ್ಟಿಸಿಕೊಳ್ಳುವುದು ಮಾತ್ರ ಮನುಷ್ಯ ತಲೆತಲಾಂತರದಿಂದ ಮಾಡಿಕೊಂಡು ಬಂದಿರುವ ತಪ್ಪು. ಯಾವ ನಂಬಿಕೆ, ಆಚರಣೆಗಳು ಬದುಕುಗಳನ್ನು ಚೆಂದವಾಗಿಸುವ ದಾರಿಯಲ್ಲಿ ಕೊಂಡೊಯ್ಯಬಲ್ಲವೋ ಅವುಗಳನ್ನು ಮಾತ್ರ ಉಳಿಸಿಕೊಂಡು ಉಳಿದಿದ್ದನ್ನು ತ್ಯಜಿಸುತ್ತ ಬಂದಾಗ ಮಾತ್ರ ಅಲ್ಲಿ ಶ್ರದ್ಧೆ-ವಿಶ್ವಾಸಗಳು ಉಳಿದುಕೊಂಡಿರಲು ಸಾಧ್ಯ. ನಮ್ಮದೆನ್ನುವ ಒಂದೇ ಕಾರಣಕ್ಕೆ ಅಲ್ಲಿರುವ ತಪ್ಪು-ಹುಳುಕುಗಳನ್ನೆಲ್ಲ ಮುಚ್ಚಿಡುತ್ತ ಬಂದಾಗಲೇ ಅಲ್ಲೊಂದು ಅಸಹನೆಯ ಭಾವ ಕಾಣಿಸಿಕೊಳ್ಳುವುದು. ಮುಂದಿನ ಜನಾಂಗವನ್ನು ತಿದ್ದಬೇಕಾಗಿದ್ದ ತಲೆಮಾರೊಂದು ಅನಿವಾರ್ಯವಾಗಿಯೋ, ಅಹಂಭಾವದಿಂದಲೋ ತನ್ನ ತಪ್ಪುಗಳನ್ನು ಒಪ್ಪಿಕೊಳ್ಳದೇ ದಿನಗಳನ್ನು ಕಳೆದಾಗಿದೆ. ಎಲ್ಲಿಯವರೆಗೆ ಹುಸಿನಂಬಿಕೆಗಳನ್ನು ವಿರೋಧಿಸುವವರು ಹುಟ್ಟಿಕೊಳ್ಳುವುದಿಲ್ಲವೋ ಅಲ್ಲಿಯವರೆಗೂ ಧರ್ಮ-ಸಮಾಜಗಳ ಹೆಸರಿನಲ್ಲಿ ತಪ್ಪುಗಳನ್ನೆಲ್ಲ ಒಪ್ಪಗೊಳಿಸುವ ಜಾಣತನದ ಕೆಲಸವೂ ನಡೆಯುತ್ತಿರುತ್ತದೆ. ಯಾವ ನಂಬಿಕೆ-ಆಚರಣೆಗಳು ನೋವು-ಹಿಂಸೆಗಳನ್ನು ದೂರವಾಗಿಸುವ ಕೆಲಸ ಮಾಡುವುದಿಲ್ಲವೋ ಅಲ್ಲಿ ಕಾರ್ಯಗತವಾಗಿರುವ ಜಾಣತನದ ನಡೆಗಳು ಬಹುಕಾಲ ಬಾಳಲಾರವು. ತಮ್ಮನ್ನು ತಾವು ಜಾಣರೆಂದುಕೊಂಡು ಭ್ರಮೆಯನ್ನೇ ಬದುಕುತ್ತಿರುವವರ ದಡ್ಡತನವನ್ನು ಎದುರಿಗಿರುವವನು ಎಲ್ಲಿಯವರೆಗೆ ಸಹಿಸಿಕೊಳ್ಳಲಾದೀತು! ಮುಗ್ಧರನ್ನು ಮುಗ್ಧರಾಗಿಯೇ ಬದುಕಲು ಬಿಟ್ಟಾಗ ಮಾತ್ರ ಅಲ್ಲೊಂದು ಕನಸಿನ ಕೂಸಿನ ಜನನವಾದೀತು!

ಈ ಅಂಕಣದ ಹಿಂದಿನ ಬರಹಗಳು:
ವಿಮೋಚನೆಯ ಸಂದಿಗ್ಧ ಅಧ್ಯಾಯಗಳು MY LIBERATION NOTES

ಅಗೋಚರ ಕತೆಗಳ ಅಂತ್ಯವಿಲ್ಲದ ಸ್ವಗತಗಳು AGE OF YOUTH
ಅವಶೇಷಗಳ ಅನ್ವೇಷಣೆ RAIN OR SHINE
ಗೆಲುವಿನ ಹಂಬಲದ ನೋವಿನ ಹಗರಣ SCAM 1992
ಅಂತ್ಯವಿಲ್ಲದ ಸಂಘರ್ಷಗಳ ಪೂರ್ವಚರಿತ್ರೆ ROCKET BOYS
ಏಕಾಂತದೊಂದಿಗೆ ಸರಳ ಸಂಭಾಷಣೆ STORIES BY RABINDRANATH TAGORE
ಬಂಧನಕ್ಕೂ ಬಿಡುಗಡೆಗೂ ಏಕೈಕ ರಹದಾರಿ MODERN LOVE
ಕೆಂಪು ಕೂದಲಿನ ರಾಜಕುಮಾರಿಯ ಕತೆ ANNE WITH AN E
https://www.bookbrahma.com/news/asahayaka-gadirekheya-kanasina-payana-crash-landing-on-you
ಮುಗುಳ್ನಗೆಯ ಆಲಿಂಗನ SOMETHING IN THE RAIN (KOREAN ROMANTIC DRAMA)
ಒಳತಾರಸಿಯ ಒಂಟಿ ಚೌಕಗಳು THE QUEEN'S GAMBIT
ಅನುರಾಗದ ಮಧುರ ಆಲಾಪ BANDISH BANDITS (INDIAN ROMANTIC DRAMA)
ಆಧುನಿಕ ಲೋಕದ ಆತ್ಮಾವಲೋಕನ MADE IN HEAVEN (INDIAN ROMANTIC DRAMA)
ನೋವು-ನಲಿವುಗಳ ಪಂಚಾಯಿತಿ PANCHAYAT (HINDI COMEDY-DRAMA)
ಬಿಡುಗಡೆಯ ಹಾದಿಯ ಪಿಸುಮಾತು IT'S OKAY TO NOT BE OKAY(KOREAN DRAMA)

MORE NEWS

ಪರಿಘಾಸನ ಮತ್ತು ಅರ್ಧ ಚಕ್ರಾಸನ 

16-04-2024 ಬೆಂಗಳೂರು

"ಪರಿಘಾಸನ ಆಸನವು ) ಪಿತ್ತ ಜನಕಾಂಗ ಮತ್ತು ಮೇದೋಜೀರಕ ಚೈತನ್ಯಗೊಳ್ಳುವಂತೆ ಮಾಡುತ್ತದೆ. ಹಾಗೆಯೇ ‘ಅರ್ಧ ಚಕ್...

ಲೋಕಸಭಾ ಚುನಾವಣೆಗಳ ಸುತ್ತಮುತ್ತ ಒಂದು ಸುತ್ತು

15-04-2024 ಬೆಂಗಳೂರು

"ಪರಸ್ಪರ ರೋಚಕ ನಿಂದನೆಗಳು. ಕ್ಷೇತ್ರವಾರು ಚಕ್ಕರಗುಳ್ಳಿ ಇಡುವ ಚತುರ ವಿವರಗಳು. ಹೊಸ ಹೊಸ ಬೈಗುಳಗಳು. ಮಾಧ್ಯಮಗಳಿಗ...

ಉಪವಿಷ್ಟಕೋನಾಸನ ಮತ್ತು ಪವನಮುಕ್ತಾಸನ

09-04-2024 ಬೆಂಗಳೂರು

"ಉಪವಿಷ್ಟಕೋನಾಸನ ಯೋಗಾಸನವು ಮನಸ್ಸನ್ನು ಶಾಂತಗೊಳಿಸುತ್ತದೆ ಮತ್ತು ಮಾಂಸಗಳ ತೂಕವನ್ನು ಕಡಿಮೆಗೊಳಿಸುತ್ತದೆ. ಪವನಮು...