ಮುಗ್ಧತೆ ಹಾಗೂ ಮೌಢ್ಯಗಳೆರಡನ್ನೂ ಒರೆಗೆ ಹಚ್ಚುವ 'ಮಾತಂಗಿ'


`ಪರಂಪರೆ ಮತ್ತು ಸಂಪ್ರದಾಯದ ನೆಪದಲ್ಲಿ ನಡೆಯುವ ಮೂಢನಂಬಿಕೆ ಹಾಗೂ ಕುರುಡು ನಡೆಯಿಂದ ವಿಶೇಷವಾಗಿ ಒಂದು ಸಮುದಾಯದ ಮಹಿಳೆಯರ ಮೇಲಾಗುವ ಲೈಂಗಿಕ ದೌರ್ಜನ್ಯ ಹಾಗೂ ಅದು ನಡೆದು ಬಂದ ದಾರಿಯ ಕುರಿತಾಗಿ ಈ ಕೃತಿ ಬೆಳಕು ಚೆಲ್ಲುವದಲ್ಲದೇ, ಇಲ್ಲಿ ಭಕ್ತಿ ಹಾಗೂ ಅದರ ಹೆಸರಿನಲ್ಲಿ ನಡೆಯುವ ಢಾಂಬಿಕತೆ ಈ ಎರಡೂ ಸ್ತರಗಳ ಕುರಿತು ಕಾದಂಬರಿ ಚರ್ಚಿಸುತ್ತದೆ’ ಎಂದು ಆನಂದ ಬೋವಿ ಅವರ ‘ಮಾತಂಗಿ’ ಕೃತಿಯ ಮುನ್ನುಡಿಯಲ್ಲಿ ಲೇಖಕಿ ಸುನಂದಾ ಕಡಮೆ ಬರೆದಿದ್ದಾರೆ.

ವೈಯಕ್ತಿಕವಾಗಿ ನನಗೆ ತುಂಬ ಇಷ್ಟವಾಗುವ ಕತೆಗಳನ್ನು ಬರೆದ ಆನಂದ ಭೋವಿಯವರು ಇದೀಗ 'ಮಾತಂಗಿ' ಎಂಬ ಈ ಕೃತಿಯೊಂದಿಗೆ ಕಾದಂಬರಿ ಲೋಕಕ್ಕೂ ಪ್ರವೇಶ ಪಡೆದಿದ್ದಾರೆ. ಸ್ವಾರ್ಥವೇ ಮೈವೆತ್ತಂತಹ ಒಂದು ದಾರುಣವಾದ ಸಾಮಾಜಿಕತೆಯು ಹೇಗೆ ಹೆಣ್ಣುಮಕ್ಕಳ ಲೈಂಗಿಕ ಬದುಕನ್ನು ನರಕ ಸದೃಶ ಮಾಡುತ್ತದೆ ಎಂಬುದನ್ನು ಹೇಳುವ ಈ ಕೃತಿಯು, ಸ್ತ್ರೀ ಪ್ರಧಾನವಾದ ಭೂಮಿಕೆಯುಳ್ಳದ್ದು. ಪ್ರಮುಖವಾಗಿ ಸವದತ್ತಿಯ ಎಲ್ಲಮ್ಮನ ಸಂಪ್ರದಾಯಕ್ಕೆ ಸಂಬಂಧಿಸಿದಂತೆ ವಾಡಿಕೆಯಲ್ಲಿರುವ ದೇವದಾಸಿ ಪದ್ದತಿಯ ಹಿನ್ನೆಲೆಯಲ್ಲಿ, ಮೋಸ ವಂಚನೆಯಿಂದ ಎಳೆಯ ಹೆಣ್ಣುಮಕ್ಕಳು ಪಡುವ ವೇದನೆಯನ್ನು ಹಸಿಹಸಿಯಾಗಿ ಕಾದಂಬರಿಕಾರರು ಹೃದಯಂಗಮವಾಗಿ ಇಲ್ಲಿ ಚಿತ್ರಿಸಿದ್ದಾರೆ. ದೇವದಾಸಿಯರ ಕರುಣಾಜನಕ ಸ್ಥಿತಿಗತಿಯೊಂದಿಗೆ ಕಥಾ ನಾಯಕಿ ಸುಮಾಳ ಹುಟ್ಟಿನ ಕತೆಯನ್ನು ಮತ್ತು ತೃತೀಯಲಿಂಗಿಗಳ ತ್ರಿಶಂಕು ಬದುಕನ್ನು ಹಾಗೂ ರೇಣುಕೆಯ ಪೌರಾಣಿಕ ಕಥನವನ್ನು ಸಾದರಪಡಿಸುತ್ತಲೇ, ಇನ್ನೊಂದೆಡೆಯಲ್ಲಿ ಈ ಕೃತಿ ಜಾತಿಪದ್ದತಿಯನ್ನೂ ತೀವ್ರವಾಗಿ ಖಂಡಿಸುತ್ತದೆ.

ಪರಂಪರೆ ಮತ್ತು ಸಂಪ್ರದಾಯದ ನೆಪದಲ್ಲಿ ನಡೆಯುವ ಮೂಢನಂಬಿಕೆ ಹಾಗೂ ಕುರುಡು ನಡೆಯಿಂದ ವಿಶೇಷವಾಗಿ ಒಂದು ಸಮುದಾಯದ ಮಹಿಳೆಯರ ಮೇಲಾಗುವ ಲೈಂಗಿಕ ದೌರ್ಜನ್ಯ ಹಾಗೂ ಅದು ನಡೆದು ಬಂದ ದಾರಿಯ ಕುರಿತಾಗಿ ಈ ಕೃತಿ ಬೆಳಕು ಚೆಲ್ಲುವದಲ್ಲದೇ, ಇಲ್ಲಿ ಭಕ್ತಿ ಹಾಗೂ ಅದರ ಹೆಸರಿನಲ್ಲಿ ನಡೆಯುವ ಢಾಂಬಿಕತೆ ಈ ಎರಡೂ ಸ್ತರಗಳ ಕುರಿತು ಕಾದಂಬರಿ ಚರ್ಚಿಸುತ್ತದೆ. ಜನರ ಮುಗ್ಧತೆಯನ್ನು ಬಳಸಿಕೊಂಡು ಅವರಲ್ಲಿ ಮೌಢ್ಯತೆಯನ್ನು ಬಿತ್ತಿ ಬಲಿಪಶುವನ್ನಾಗಿಸಿ ನಂತರ ಅದರಿಂದ ತಾವು ಅನುಭವಿಸುವ ಸುಖ ಮತ್ತು ಸ್ವಾರ್ಥದ ರಾಜಕಾರಣವು ಇಲ್ಲಿ ಸಾಧ್ಯಂತವಾಗಿ ಕಾಣುತ್ತದೆ. ಹೆಣ್ಣು ಎಷ್ಟೇ ಸ್ವತಂತ್ರ, ಸುಶಿಕ್ಷಿತಳಾಗಿದ್ದರೂ ಅವಳನ್ನು ಕಡೆಗಣಿಸುವ ವಾತಾವರಣ ಇಂದಿಗೂ ಸಮಾಜದಲ್ಲಿದ್ದು, ಜಾತಿ-ಧರ್ಮದ ಶ್ರೇಷ್ಠತೆಯ ವ್ಯಸನಗಳಿರುವ ಪಾತ್ರಗಳು ಕಾದಂಬರಿಯುದ್ದಕ್ಕೂ ತಮ್ಮ ಕ್ರೌರ್ಯವನ್ನು ಮೆರೆಯುವುದು ಸ್ತ್ರೀ ಸಮಾನತೆಯ ಕುರಿತಾದ ಚಿಂತನೆಗೆ ಇನ್ನಷ್ಟು ಸಾಣೆ ಹಿಡಿಯುವಂತಿದೆ.

ಜರ್ನಲಿಸಂ ಓದಿರುವ ಕಾದಂಬರಿಯ ನಾಯಕಿ ಸುಮಾ, ನಿರ್ದೇಶಕ ವೆಂಕಟೇಶ, ಕ್ಯಾಮರಾಮನ್ ಮಲ್ಲಿಕ್ ಮೂವರೂ ಸವದತ್ತಿ ಎಲ್ಲಮ್ಮನ ಗುಡ್ಡಕ್ಕೆ 'ಜೋಗತಿ ಸಂಪ್ರದಾಯ ಮತ್ತು ಅದರ ಮೌಢ್ಯಗಳು' ಎಂಬ ವಿಷಯದ ಕುರಿತು ಡಾಕ್ಯುಮೆಂಟರಿಯ ಶೂಟಿಂಗಿಗೆಂದು ಆಗಮಿಸುವುದರ ಮೂಲಕ ಆರಂಭಗೊಳ್ಳುವ ಈ
ಕಥನವು ಸಾಂಕೇತಿಕವಾಗಿ ಮನುಷ್ಯನ ಹುಟ್ಟಿನ ಮೂಲವನ್ನು ಅರಸುವ ಎಳೆಯನ್ನು ಹಿಡಿದು ಮುಂದುವರೆಯುತ್ತದೆ. ಸಂಸ್ಕೃತಿ ಪರಂಪರೆ ಇತಿಹಾಸ ಎಂತೆಲ್ಲ ಮಾತಾಡುವ ಡಾಕ್ಯೂಮೆಂಟರಿಯ ನಿರ್ದೇಶಕ ವೆಂಕಟೇಶ, ಮೊದಮೊದಲಿಗೆ ಸುಮಾಳಿಗೆ ಅತ್ಯಂತ ಆಪ್ತನಾಗಿರುತ್ತಾನೆ ಅಥವಾ ಅವಳು ಹಾಗೆಂದು ಭ್ರಮಿಸುತ್ತಾಳೆ, ಇಬ್ಬರ ನಡುವಿನ ನೈಸರ್ಗಿಕ ಸಂಬಂಧವನ್ನೂ ಮೀರಿದ ಭಾವವು ಜಾತಿಭೇದದ ಕೊಳಕು ಮನಸ್ಥಿತಿಯಿಂದ ಪರ್ಯವಸಾನಗೊಳ್ಳುವುದು, ಪುನರ್ ರಚನೆಗೊಳ್ಳಬೇಕಾಗಿರುವ ಸಾಮಾಜಿಕತೆಯನ್ನು ಎತ್ತಿ ತೋರಿಸುತ್ತದೆ.

ದೇವದಾಸಿಯಂಥ ಆಚರಣೆ ಮತ್ತು ನಂಬಿಕೆಗಳಿಗೆ ಸಾಂಸ್ಕೃತಿಕ ಆಯಾಮದ ಲೇಪ ಕೊಟ್ಟು ಅದನ್ನು ಉಳಿಸಿಕೊಂಡು ಹೋಗಬೇಕೆನ್ನುವ ಒಂದು ಗುಂಪು ಮೇಲುಗೈ ಸಾಧಿಸುತ್ತಿರುವುದು ಮತ್ತು ಈಗಲೂ ಅದು ಅಲ್ಲಲ್ಲಿ ಕಾನೂನು ಬಾಹಿರವಾಗಿ ನಡೆಯುತ್ತಿರುವುದು ಒಂದು ವಿಪರ್ಯಾಸವೇ ಸರಿ. ಜೋಗತಿಯರದು ಬರೀ ವೇಷಗಳೇ ಅಥವಾ ಅವು ನಿಜವಾಗಿ ಭಕ್ತಿಯನ್ನು ನಂಬಿರುವ ಮನಸ್ಸುಗಳೇ? ಇಲ್ಲಿ ಒಂದೆಡೆ ಬರುವ ಈ ತರ್ಕವೂ ಸಹ ಕೃತಿಯನ್ನು ಇನ್ನೊಂದು ಮುಖದಲ್ಲಿ ಯೋಚಿಸಲು ಹಚ್ಚುತ್ತದೆ. ಆದರೆ, ಆಧುನಿಕ ಶಿಕ್ಷಣ ಪಡೆದ ಸುಮಾ, ತಲೆಯಲ್ಲಿ ಅದು ಕೇವಲ ವೇಷ ಮಾತ್ರ, ಅವರದು ಹೊಟ್ಟೆಪಾಡಿಗಾಗಿ ಕಂಡುಕೊಂಡ ದಾರಿಗಳು ಎಂಬೆಲ್ಲ ಅವಳ ಯೋಚನೆಗಳು ಪ್ರಗತಿಪರ ವಾಗಿರುವುದರಿಂದಲೇ ಕೊನೆಯಲ್ಲಿ ಹೆತ್ತವ್ವನನ್ನು ಆಕೆ ಒಪ್ಪಲು ಮನಸ್ಸು ಸಹಕರಿಸುತ್ತದೆ. ಮತ್ತು ಆ ಕಾರಣದಿಂದಲೇ ಅವಳ ತಂದೆ ಈ ಸಾಕ್ಷ್ಯಚಿತ್ರದ ಕೆಲಸಕ್ಕೆ ಹೋಗಲು ಒಪ್ಪಿರುತ್ತಾರೆ. ಸುಮಾಗೆ ಮೊದಮೊದಲು ಇವೆಲ್ಲ ಒಂದು ಮುಗ್ಧ ಹುಡುಕಾಟವೇ. ಇದನ್ನು ಕೊನೆಯಲ್ಲಿ ಲೇಖಕ ವ್ಯಕ್ತಪಡಿಸುವ ರೀತಿಯಲ್ಲೇ ಕೃತಿಯು ಒಂದು ಕುತೂಹಲವನ್ನು ಕಾಪಿಟ್ಟುಕೊಳ್ಳುತ್ತದೆ.

ಕೃತಿಯ ಮಧ್ಯೆಯೇ, ರೇಣುಕೆಯ ಪೌರಾಣಿಕ ಕತೆಯ ಅಧ್ಯಾಯವೊಂದು ಹದವಾಗಿ ಇಲ್ಲಿ ಸೇರಿಕೊಳ್ಳುವ ವಿಧಾನ ಅರ್ಥಪೂರ್ಣವಾಗಿದೆ. ರೇಣುಕಾ ಜಮದಗ್ನಿಯರ ದಾಂಪತ್ಯ ಹಾಗೂ ಮರಳಿನ ಮಡಿಕೆಯಲ್ಲಿ ನೀರು ತರಲಾಗದ ಸಂದಿಗ್ದತೆ, ಜಮದಗ್ನಿ ತಾಳುವ ಸಂಶಯ ಹಾಗೂ ತಂದೆಯ ಮಾತಿನಂತೆ ತಾಯಿಯ ಕತ್ತು ತೆಗೆವ ಪರಶುರಾಮ, ರೇಣುಕೆ ಓಡಿ ಮಾದರ -ಮಾತಂಗಿಯ ಆಸರೆ ಪಡೆಯುವ ಸನ್ನಿವೇಶ, ನಂತರ ತಾಯಿಗಾಗಿ ಹುಡುಕಿ ಅಲೆವ ಪರಶು, ತಾಯಿಯ ಆಸರೆಗೆ ನಿಂತ ಮಾತಂಗಿಯ ತಲೆಯನ್ನು ಮೊದಲು ತೆಗೆದು, ನಂತರ ತಾಯಿ ರೇಣುಕೆಯ ತಲೆಯನ್ನು ಉರುಳಿಸುವ ಪರಶು ತಂದೆಯಿಂದ ವರಪಡೆದು ಇಬ್ಬರನ್ನೂ ಬದುಕಿಸಿದರೂ ಇಬ್ಬರ ರುಂಡ ಜೋಡಿಸುವಾಗ ಮಾತಂಗಿಯ ರುಂಡವನ್ನು ರೇಣುಕೆಗೂ, ರೇಣುಕೆಯ ರುಂಡವನ್ನು ಮಾತಂಗಿಗೂ ಜೋಡಿಸಿ, ಇಬ್ಬರೂ ಪರಶುರಾಮ ತಾಯಿಯಂತೆ ಕಾಣುವ ಹಾಗಾಗುತ್ತದೆ, ಹಾಗಾಗಿ ನಾವೆಲ್ಲ ಎಲ್ಲಮ್ಮನನ್ನು ಬರಿಯ ರುಂಡದಲ್ಲೇ ನೋಡಿ ಪೂಜಿಸುತ್ತೇವೆ, ಈ ವಿಷಯ ನನಗೆ ಹೊಸದು. ಎಲ್ಲಮ್ಮನ ವರದಂತೆ ಗುಡ್ಡದಲ್ಲಿ ಎಲ್ಲಮ್ಮನ ಪೂಜೆಗಿಂತ ಮೊದಲು ಮಾತಂಗಿಗೆ ಭಕ್ತರ ಪೂಜೆ ಸಲ್ಲುವ ಬಗೆಯಲ್ಲಿ ಸುಮಾ ತಾಯಿ ಮಾತಂಗಿಯ ಘನತೆಯೂ ಅನಾವರಣಗೊಳ್ಳುತ್ತದೆ, ಜೀವಂತ ಮಾತಂಗಿಯ ಇಡಿಯಾದ ವ್ಯಕ್ತಿತ್ವ ರೇಣುಕೆಯ ಕಥಾ ಹಂದರದಿಂದ ಇಂಚಿಂಚಾಗಿ ಅನಾವರಣಗೊಳ್ಳುವ ಬಗೆ ಸೂಕ್ಷ್ಮವಾಗಿ ದರ್ಶಿತವಾಗಿದೆ. ಹಾಗಾಗಿ ನಿರೂಪಣೆಯೂ ಪರಿಣಾಮಕಾರಿಯಾಗಿದೆ.

ಸಾಕ್ಷ್ಯಚಿತ್ರದಲ್ಲಿ ಸುಮಾ ಜೋಗತಿ ಪಾತ್ರ ಮಾಡಬೇಕಿರುತ್ತದೆ. ಆದರೆ ನಂತರದಲ್ಲಿ ಆಕಸ್ಮಿಕವಾಗಿ ಅಲ್ಲಿ ಸಿಗುವ ನಿಜ ಜೀವನದ ದೇವದಾಸಿಯೊಬ್ಬಳ ಜೀವನದ ಅನುಭವಗಳನ್ನೇ ಚಿತ್ರೀಕರಿಸಿಕೊಳ್ಳಲಾಗುತ್ತದೆ. ಹಾಗಾಗಿ, ನಾಲ್ಕನೇ ಅಧ್ಯಾಯವು ದೇವದಾಸಿಯರ ಆತ್ಮಕಥನದಂತೆ ನಿರೂಪಿತವಾಗಿದೆ, ದೇವದಾಸಿಯ ಮಗಳೊಬ್ಬಳನ್ನು ಒತ್ತಾಯಪೂರ್ವಕ ದೇವದಾಸಿ ಮಾಡಿದ ಮಾನಗೆಟ್ಟ ಸಮಾಜದ ಕ್ರೌರ್ಯ ಇಲ್ಲಿದೆ. ನಂತರ ಅಪ್ಪ ಎನ್ನಿಸಿಕೊಳ್ಳುವ ಮುದುಕನೇ ಮಗಳ ಮೈಯನ್ನು ಮುಟ್ಟುವ ದಾಷ್ರ್ಯದ ಚಿತ್ರಣಗಳೂ ಮನಕಲಕುತ್ತವೆ. ತಾಯಿಯಿಂದಲೇ ಮಗಳಿಗೆ ಕಟ್ಟಿಸುವ ಎಂಜಲ ಮುತ್ತು, 'ಬೇವಿನ ಮರ ಇದ್ದಂಗ ನೀನು, ಮೈತುಂಬ ನೋವು ಇದ್ದರೂ ದಣಿದು ಬಂದವರ ನೆತ್ತಿಗೆ ತಂಪು ನೆರಳ ನೀಡು' ಎಂದು ದೇವದಾಸಿ ತಾಯಿಯೇ ತನ್ನ ಮಗಳಿಗೂ ಹೇಳುವ ಅನಿವಾರ್ಯತೆಯನ್ನು ತಂದಿಡುವ ದುಷ್ಟ ಪದ್ದತಿಯು ಮಹಿಳೆಯರ ಅದಮ್ಯ ಅಸಹಾಯಕತೆಯನ್ನು ತೆರೆದಿಟ್ಟಿದೆ. ಊರಿಗೆ ಮಳೆ ಬಾರದಿದ್ದರೆ, ಓಕುಳಿ ನೀರು ಗೊಜ್ಜಿಸಿಕೊಳ್ಳುತ್ತ ಈ ಜೀವಗಳು ಊರ ಜನರ ಎದಿರು ಎದೆ ಬಿಟ್ಟುಕೊಂಡು ಯಾಕೆ ಕುಣಿಯಬೇಕು? ಭವಿಷ್ಯತ್ತಿನಲ್ಲಿ ಅವಳ ಮಗನೂ ಸೂಳೆಯ ಮಗ ಅನ್ನಿಸಿಕೊಳ್ಳಲಾರದೇ ಊರು ಬಿಡುವಂಥ ಪ್ರಸಂಗ ಯಾಕೆ ಒದಗಿಬರುತ್ತದೆ ? ಊರಿನ ಕಾಮುಕರಿಗೆ ನೀಡುವ ಲೈಂಗಿಕ ಸಂಬಂಧವನ್ನು ಸೇವೆಯೆಂಬ ಹೆಸರಲ್ಲಿ ಜನಜನಿತ ಮಾಡಿದ ಆ ಹೊಂಚು ಯಾವುದಿದ್ದೀತು? ಎಂಬ ಹಲವಾರು ತಳಮಳದ ಪ್ರಶ್ನೆಗಳನ್ನು ಈ ಕಾದಂಬರಿ ಎತ್ತುತ್ತದೆ. ನಿಸರ್ಗದತ್ತವಾದ ತಮ್ಮ ಜೈವಿಕ ಹುಟ್ಟಿನ ಸಹಜತೆಯಲ್ಲೂ ಹಲವಾರು ಮೌಢ್ಯಗಳಿಂದ ನರಳುವ ಹಾಗೂ ಅವರನ್ನು ನರಳಿಸುವ ಸಮಾಜವು ಆ ನರಳಿಕೆಯ ಹೊಣೆಯನ್ನು ಹೊರಲು ತಯಾರಾಗಿರುವುದಿಲ್ಲ, ಇದಕ್ಕೆ ಕನ್ನಡಿ ಹಿಡಿದಂತೆ 'ಹೆಣ್ಣೂ ಅಲ್ಲದ ಗಂಡೂ ಅಲ್ಲದ ನಾವು ದೇವರ ಮಕ್ಕಳು' ಎಂಬ ತೃತೀಯ ಲಿಂಗಿಗಳ ಕುರಿತಾದ ಅಂತಃಕರಣ ಕಲಕುವ ಕುತಿಬ್ಯಾ ಮತ್ತು ಫಾತಿಮಾಳ ಅನುಭವಗಳೂ ಇಲ್ಲಿ ದಾಖಲಾಗಿವೆ, ಇವರ ಬದುಕು ಕೂಡ ಸಮಾಜದ ಅಸಮಾನತೆಯ ನಾಣ್ಯದ ಇನ್ನೊಂದು ಮುಖವೇ ಸರಿ.

ಇನ್ನು ಕೃತಿಯ ಗುಂಟ ಹೆಣೆದುಕೊಂಡಿರುವ ಜೀವಂತ ಪಾತ್ರಗಳ ಕತೆಯ ವಿಚಾರಕ್ಕೆ ಬಂದರೆ, ಬಹು ಹಿಂದೆ ಮಾತಂಗಿ ಎಂಬ ಜೋಗಮ್ಮಳಿಗೆ ತನ್ನ ಹಿರಿಮಗನ ಕಾಯಿಲೆಯನ್ನು ಗುಣಪಡಿಸಲು ಆಸ್ಪತ್ರೆಯ ಖರ್ಚಿಗೆ ದುಡ್ಡಿನ ಅಗತ್ಯ ತಲೆದೋರುತ್ತದೆ. ಸುಮಾ ತಂದೆಯ ವೀರ್ಯಾಣುವನ್ನು ತೆಗೆದು ತನ್ನ ಗರ್ಭದಲ್ಲಿ ಸೇರಿಸುವ ಕೃತಕ ವಿಧಾನದಿಂದ ಮಾತಂಗಿ ಬಾಡಿಗೆ ತಾಯಾಗಲು ಒಪ್ಪಿಕೊಂಡಿರುತ್ತಾಳೆ. ಒಂದು ಪೂರ್ತಿ ಮಗುವನ್ನು ಹೆತ್ತುಕೊಟ್ಟು ಅಲ್ಲಿಂದ ನಿರ್ಗಮಿಸಿರುತ್ತಾಳೆ ಕೂಡ. ತನ್ನ ಮಗಳು ವಾಸ್ತವ ಬದುಕನ್ನು ವಿಶ್ಲೇಷಿಸುವ ಸಾಮರ್ಥ್ಯ ಪಡೆದ ನಂತರ ಈ ಸಂಗತಿಯನ್ನು ಮಗಳಿಗೆ ಅರುಹಬೇಕೆಂದು ತಂದೆ ಸಂಯಮದಿಂದ ಕಾಯುತ್ತಾನೆ. ತಮ್ಮ ಕುಟುಂಬಕ್ಕೆ ಬೇಕಾದ ಮಾತಂಗಿ ಎಂಬ ಹೆಣ್ಣುಮಗಳನ್ನು ತಾನು ಹುಡುಕುತ್ತಿರುವುದಾಗಿಯೂ ಸವದತ್ತಿಯ ಭಾಗದಲ್ಲಿ ಸಾಕ್ಷ್ಯಚಿತ್ರಕ್ಕಾಗಿ ಓಡಾಡುವಾಗ ‘ಮಾತಂಗಿ ಸಿಕ್ಕರೆ ನೋಡು’ ಎಂದು ತಂದೆ ಸುಮಾಳಿಗೆ ಹೇಳಿ ಕಳಿಸಿರುತ್ತಾನೆ. ಮಾತಂಗಿಯ ಎಡಗೈನಲ್ಲಿ ಅವಳ ಮಾತಂಗಿ ಎಂಬ ಹೆಸರಿನ ಹಚ್ಚೆ ಇರುವ ಗುರುತನ್ನೂ ಹೇಳಿರುತ್ತಾನೆ, ಹಾಗಾಗಿ ಉಧೋ ಉಧೋ ಎಲ್ಲಮ್ಮನ ಹಾಡು ಸುಮಾಳ ಮನಸ್ಸಿನ ಯಾವುದೋ ಒಂದು ಮೂಲೆಯಲ್ಲಿ ಮೀಟಿದಂತೆ ಗುಂಗು ಹತ್ತಿಸುತ್ತಿರುತ್ತದೆ. ಮಾತಂಗಿ ಎಂಬ ಹೆಸರೇ ಸುಮಾಗೆ ಯಾಕೆ ಒಂದು ರೀತಿಯ ಉನ್ಮಾದ ತಂದು ಕೊಡುತ್ತಿತ್ತು ಎಂಬುದನ್ನು ಕಾದಂಬರಿಕಾರ ಕುತೂಹಲವನ್ನು ಉಳಿಸಿಕೊಂಡು ಹೋಗಿ, ಕೊನೆಯಲ್ಲಿ ಪ್ರಚುರಪಡಿಸುವ ರೀತಿ ಸೊಗಸಾಗಿದೆ. ಸುಮಾಳ ತಂದೆಯೂ ಬಹುವರ್ಷಗಳಿಂದ ಮಾತಂಗಿಯನ್ನು ಹುಡುಕುತ್ತಿರುವುದರಿಂದ ಕೊನೆಗೂ ಅವಳು ಸಿಗುತ್ತಾಳೆ. ಸುಮಾಗೆ ಎಲ್ಲವನ್ನೂ ಭರಿಸುವ ಮನಸ್ಥಿತಿ ಸಿದ್ಧಗೊಂಡಿದ್ದರಿಂದ ಅವಳ ತಂದೆ ಹುಟ್ಟಿನ ರಹಸ್ಯವನ್ನು ಅರುಹುತ್ತಾನೆ. ತನ್ನನ್ನು ಹೆತ್ತ ತಾಯಿಯನ್ನು ನೋಡಲು ಹೋಗುವಾಗ ಅವಳಲ್ಲಿ ಕಿಲುಬಿಲ್ಲದ ಅತ್ಯಂತ ಶ್ರೇಷ್ಠ ಭಾವನಾತ್ಮಕ ಕೊಂಡಿಯೊಂದು ಜಾಗ್ರತವಾಗಿರುತ್ತದೆ. ಹಾಗಾಗಿ ಮಾತಂಗಿಯ ಗುಡಿಸಲನ್ನು ಪ್ರವೇಶಿಸುವಾಗ ಸುಮಾ ಸೋಜಿಗದಿಂದ 'ಶೀ ಇಸ್ ಮೈ ಜೆನೆಟಿಕ ಮದರ್' ಎಂದು ಹೇಳುತ್ತಾ ತೀವ್ರವಾಗಿ ಸ್ಪಂದಿಸುತ್ತಾಳೆ. ಮಾತಂಗಿ ಬೆಳೆದು ನಿಂತ ತನ್ನ ಮಗಳನ್ನು ನೋಡಿ ಒಮ್ಮೆಲೇ ಹರ್ಷಚಿತ್ತಳಾಗುತ್ತಾಳೆ. ಈ ಮುಖಾಮುಖಿಯು ಕರುಳ ಬಳ್ಳಿಯನ್ನೇ ಒಂದು ವಿಚಿತ್ರ ತಲ್ಲಣಕ್ಕೆ ಒಡ್ಡುವುದು ಮನೋಜ್ಞವಾಗಿದೆ. 'ಮಕ್ಕಳಿಲ್ಲದವರಿಗೆ ಮಕ್ಕಳನ್ನು ಕೊಡುವ ದೇವತೆಯಾ ನೀನು?' ಅಂತ ಸುಮಾ ಕೇಳಿದ್ದಕ್ಕೆ, ಮಾತಂಗಿ 'ಅದೂ ಒಂದು ಸೇವೆ' ಅನ್ನುತ್ತಾಳೆ. ಇದ್ದಕ್ಕಿದ್ದಂತೆ ತನ್ನ ಹುಟ್ಟಿನ ನಿಗೂಢತೆಯು ಸುಮಾಳಿಗೆ ಅವಳ ತಂದೆಯಿಂದ ತಿಳಿದಾಗ ಅವಳಲ್ಲಿ ತಾಯಿಯನ್ನು ಕಾಣುವ ಕುತೂಹಲವಿರುತ್ತದೆಯೇ ಹೊರತು, ಆ ತಾಯಿಯ ಜಾತಿ ಪಂಗಡಗಳು ಅವಳಿಗೆ ಮುಖ್ಯವಾಗುವುದಿಲ್ಲ ಆದರೆ ಸುಮಾ ಮಾದರ ಮಾತಂಗಿ ಹೆತ್ತ ಮಗು ಎಂದು ತಿಳಿದದ್ದೇ ವೆಂಕಟೇಶ, ಸುಮಾ ಜೊತೆಗಿನ ಸಂಬಂಧವನ್ನು ತೊರೆದು ದೂರ ಸರಿಯುತ್ತಾನೆ. ಆ ಸಂದರ್ಭದಲ್ಲಿ ಆತ 'ನನ್ನ ರಕ್ತ ಶ್ರೇಷ್ಠ, ನಿನ್ನ ರಕ್ತ ಕೀಳು' ಎಂದು ಹೇಳುವ ಸನ್ನಿವೇಶವು ಅತ್ಯಂತ ಕ್ರೌರ್ಯದ ಕ್ಷಣವನ್ನು ಹಿಡಿದಿಡುತ್ತದೆ. ಅವಳಿಗೆ ಕೇವಲ ಹುಟ್ಟು ಇಷ್ಟೆಲ್ಲ ಬೆರಗು ಮೂಡಿಸುವ ಕುರಿತು ವಿಚಿತ್ರ ಅನ್ನಿಸಿ, ಈ ಸತ್ಯದ ಅರಿವು ಸುಮಾಳನ್ನು ಇನ್ನಷ್ಟು ಗಟ್ಟಿಯಾಗಿಸುತ್ತದೆ. ವೆಂಕಟೇಶನ ಆ ಮೊದಲ ಸಂಬಂಧದಿಂದಲೇ ಸುಮಾ ಗರ್ಭಿಣಿಯಾಗಿರುತ್ತಾಳೆ. ಆದರೂ ಅವಳು ವೆಂಕಟೇಶನೊಂದಿಗಿನ ಮದುವೆಯೇ ನರಕ ಎಂಬ ತೀರ್ಮಾನಕ್ಕೆ ಬರುತ್ತಾಳೆ. ಮುಂದೆ ಮಗ ಭಾರ್ಗವ ಹುಟ್ಟಿ ಅವರಜ್ಜನ ಹೆಗಲೇರಿ ಕುಣಿಯುತ್ತಾನೆ, ನಂತರ ಅಜ್ಜನೇ ಅವನನ್ನು ತನ್ನ ಸಾಕುಮಗನಾಗಿಸಿಕೊಳ್ಳುತ್ತಾನೆ. ಕಾದಂಬರಿಯ ಕೊನೆಯಲ್ಲಿ, ತನ್ನ ಅವ್ವ ಮಾತಂಗಿಯೊಡನೆ ಸುಮಾ ಎಲ್ಲಮ್ಮನ ಜಾತ್ರೆಗೆ ಹೋಗುತ್ತಾಳೆ. ಮಗು ಭಾರ್ಗವ ತನ್ನ ಅಜ್ಜಿ ಮಾತಂಗಿಯ ಹತ್ತಿರ ಉಣ್ಣುತ್ತಾನೆ. ಸುಮಾ ಆಯ್ಕೆ ಅತ್ಯಂತ ಮಾನವೀಯವಾಗಿ ಅಂತಃಕರಣವಾಗಿ ಬೆಸೆಯುತ್ತದೆ. ಇದು ಕಾದಂಬರಿಯ ಯಶಸ್ಸಿಗೂ ಕಾರಣವಾಗಬಹುದು ಅಂದುಕೊಂಡಿದ್ದೇನೆ.

ಚಿಂತನಶೀಲ ಹಾಗೂ ಆದರ್ಶವಾದೀ ವ್ಯಕ್ತಿತ್ವದವನಂತೆ ಸೋಗು ಹಾಕಿಕೊಂಡ, ವಿದ್ಯಾವಂತ ಮತ್ತು ಪ್ರಗತಿಪರ ವಿಚಾರಧಾರೆಯುಳ್ಳವನಂತೆಯೇ ಮೇಲ್ನೋಟಕ್ಕೆ ಕಾಣುವ ವೆಂಕಟೇಶನ ಬಣ್ಣ ಬಯಲಾಗುವ ಸಂದರ್ಭವು ಕಾದಂಬರಿಯ ಕೊನೆಯನ್ನು ವಾಸ್ತವದ ನೆಲೆಯಲ್ಲಿ ಬಿಂಬಿಸಿದೆ. ಜಾತಿ ಮತ ಮೇಲು ಕೀಳು ಎಂಬ ಭಾವನೆಯನ್ನು ಮನಸ್ಸಿನಲ್ಲಿರಿಸಿಕೊಂಡ ವೆಂಕಟೇಶ, ದೇವದಾಸಿಯರ ಕುರಿತಾಗಿ ಡಾಕ್ಯುಮೆಂಟರಿ ಮಾಡಲು ಬಂದು ಒಬ್ಬ ಸುಡೋ ಪ್ರಗತಿಪರನಂತೆ ಕಾದಂಬರಿಯಲ್ಲಿ ಚಿತ್ರಿತನಾಗಿದ್ದಾನೆ. ಮಾಡುವ ಕೆಲಸ ಬರಿಯ ಕ್ರಿಯೆಯಷ್ಟೇ ಆಗಿ ಉಳಿಯುತ್ತದೆಯೇ ವಿನಃ ವೆಂಕಟೇಶ ಇಲ್ಲಿ ಅಂತರಂಗದಿಂದ ಏನನ್ನೂ ಪ್ರೀತಿಸುತ್ತಿಲ್ಲವೆಂಬುದು ಸ್ಪಷ್ಟ ಮತ್ತು ವೆಂಕಟೇಶನದು ಕಲೆಗಾಗಿ ಕಲೆ ಅಷ್ಟೇ ಎಂಬುದನ್ನು ಕಾದಂಬರಿ ಸೂಕ್ಷ್ಮವಾಗಿ ಹೇಳುತ್ತದೆ. ಇನ್ನೊಂದೆಡೆಯಲ್ಲಿ, ಸತ್ಯವತಿಗೆ ಪರಾಶರರಲ್ಲಿ ವ್ಯಾಸನನ್ನು ಪಡೆದ ಕತೆ ಹೇಳುತ್ತಲೇ ತನ್ನ ಹುಟ್ಟನ್ನೇ ವ್ಯಾಸ ಸುಂದರವಾಗಿ ಹೆಮ್ಮೆಯಿಂದ ವರ್ಣಿಸಿದ್ದನ್ನು ಕೃತಿಕಾರರು ದಾಖಲಿಸುವದು ಇಲ್ಲಿಯ ವರ್ಣಭೇದ ಸಂಸ್ಕೃತಿಯ ಸಂದರ್ಭಕ್ಕೆ ಪೂರಕವಾದ ನೀತಿಯೊಂದನ್ನು ಎತ್ತಿ ತೋರುವಂತಿದೆ. ವೆಂಕಟೇಶನೊಡನೆಯ ಒಡನಾಟವನ್ನು ಸುಮಾ ತನ್ನ ಮನಸ್ಸಿನ ಚಂಚಲತೆ ಎಂಬುದನ್ನು ಮನಗಂಡ ಕಾರಣ ಕೊನೆಯಲ್ಲಿ ಅವಳಿಗೆ ಸ್ವತಂತ್ರ ಬಾಳು ಇಷ್ಟವಾಗುತ್ತದೆ. ಸುಮಾ ಮತ್ತು ವೆಂಕಟೇಶರಲ್ಲಿ ಮೋಹ ವಿಜೃಂಭಿಸುತ್ತಿದ್ದಾಗಲೂ ಆತ ತಾನು ಪರಿಪೂರ್ಣವೆಂಬ ಭ್ರಮೆಯಲ್ಲಿ 'ವಾಸ್ತವದಲ್ಲಿ ಇರು, ಕಲ್ಪನೆಯಲ್ಲಿ ಬೇಡ' ಎನ್ನುತ್ತಿರುತ್ತಾನೆ. ತಾಯಿಯಿಲ್ಲದ ಮಗಳು ಸುಮಾಗೆ ತಂದೆಯೇ ಎಲ್ಲವೂ ಆಗಿರುವುದರಿಂದ, ವೆಂಕಟೇಶನೊಡನೆಯ ಸಂಪರ್ಕ ಕಂಡು ಆತ ಹೇಳಿದ ಒಂದು ಮಾತು 'ನಿನ್ನ ಆಯ್ಕೆ ನಿನಗೆ ನೋವು ಕೊಡದಿರಲಿ' ಎಂಬುದು ಒಬ್ಬ ಜವಾಬ್ದಾರಿಯುತ ಅಪ್ಪನ ಮನಸ್ಸಿನ ಸೂಕ್ಷ್ಮ ಸ್ಪಂದನವಾಗಿಯೂ ತೋರುತ್ತದೆ. ಹೀಗೆ ಒಂದು ಸ್ವಸ್ಥ ಮನಸ್ಸು ಮಾನವೀಯವಾಗಿ ಸದಾ ತುಡಿಯುತ್ತಿರುವುದು ಸುಮಾ ತಂದೆಯ ರೂಪದಲ್ಲೇ ನಮಗೆ ಅನುಭವಕ್ಕೆ ಬರುತ್ತದೆ. ಮಗಳು ಸುಮಾಳ ಮನಸ್ಸಿನಲ್ಲಿ ನೈತಿಕತೆಯ ಬೀಜ ಬಿತ್ತುವ ಅವಳ ತಂದೆಯ ಪಾತ್ರ ಇಲ್ಲಿ ಗಹನವಾದದ್ದು. ಕೊನೆಯಲ್ಲಿ ಕಥಾನಾಯಕಿ ತನ್ನ ಓದು, ತಿಳಿವಳಿಕೆಯ ಮೂಸೆಯಲ್ಲಿ ಸಾಂಪ್ರದಾಯಿಕ ಮೌಢ್ಯಗಳನ್ನು ಸಾರಾಸಗಟಾಗಿ ತಿರಸ್ಕರಿಸಿ ತಾನು ಹಾಗೂ ತನ್ನ ತಂದೆ ನಂಬಿದ ಸಿದ್ಧಾಂತಗಳಿಗೆ ಕಟಿಬದ್ಧಳಾಗುವುದು ಕಾದಂಬರಿಯ ಮುಖ್ಯ ತಿರುವು.

ಹೀಗೆ ಈ ಕೃತಿಯನ್ನು ಆನಂದ್ ತಮ್ಮ ಸರಳ ಶೈಲಿಯಲ್ಲಿ ಸಮರ್ಥವಾಗಿ ನಿರೂಪಿಸಿದ್ದಾರೆ. ಕಾದಂಬರಿಗೆ ಕುತೂಹಲಕವಾಗಿ ಓದಿಸಿಕೊಂಡು ಹೋಗುವ ಗುಣ ಸಿದ್ದಿಸಿದೆ, ಇಲ್ಲಿ ಒಂದೆಡೆ ಬರುವ 'ಹೆಣ್ಣು ಅಂದರೆ ಸೇವಕಿ' ಎಂಬ ಸಾಲು ಮತ್ತೆ ಮತ್ತೆ ಕಾಡುತ್ತದೆ. 'ಭಾರತೀಯರು ಮಂಗಳ ಗ್ರಹದ ಹೊಸ ಜೀವಿಗಳೊಂದಿಗೆ ಬೇಕಾದರೆ ಸಂಸಾರ ಮಾಡುತ್ತಾರೆ, ಆದರೆ ತಮ್ಮದೇ ಊರಿನ ಕೀಳ್ಜಾತಿಯವರು ಅಂಗಳ ಮುಟ್ಟಿದರೂ ನೀರು ಗೊಜ್ಜಿ ಮಡಿ ಮಾಡುತ್ತಾರೆ' ಈ ಸಾಲು ಇಡೀ ಕಾದಂಬರಿಯ ಉದ್ದೇಶವನ್ನು ಅನಾವರಣಗೊಳಿಸುತ್ತದೆ. ಅದರ ಜೊತೆಯಲ್ಲೇ , ಇಂದಿನ ಸೋಕಾಲ್ಡ್ ಭಾರತೀಯ ಸಂಸ್ಕೃತಿಯು ದಲಿತರನ್ನು ಹಾಗೂ ಮಹಿಳೆಯರನ್ನು ಇಂದಿಗೂ ನಡೆಸಿಕೊಳ್ಳುತ್ತಿರುವ ಕರಾಳ ಚಿತ್ರಗಳನ್ನು ಬಿಚ್ಚಿಡುತ್ತದೆ. ಅಷ್ಟರಮಟ್ಟಿಗೆ ಈ ಕೃತಿ ಸಾರ್ಥಕವಾಗಿದೆ ಎಂದು ನಾನು ಭಾವಿಸಿದ್ದೇನೆ, ಕೃತಿಗೂ ಕೃತಿಕಾರನಿಗೂ ಜಯವಾಗಲಿ.

*

MORE FEATURES

ಚರಿತ್ರೆಯ ನೆಪ-ವರ್ತಮಾನದ ತಾಪ...

31-10-2020 ಬೆಂಗಳೂರು

ಮೊಘಲ್ ಸಾಮ್ರಾಜ್ಯದ ಚಕ್ರಾಧಿಪತಿ ಜಹಾಂಗೀರನ ಪ್ರಿಯ ರಾಣಿ ಎಂದೇ ಖ್ಯಾತಿಯ ನೂರ್ ಜಹಾನ್ ಅವಳ ಜನಪರ ಕೆಲಸ-ಕಾರ್ಯಗಳ ನ್ನೇ ಕ...

ನಗರೀಕರಣ:ಅಮಾಯಕರ ಬವಣೆಯ ಪರಿಣಾಮಕಾರ...

31-10-2020 ಬೆಂಗಳೂರು

ಕೃಷ್ಣಮೂರ್ತಿ ಹನೂರು ಅವರ ಹೊಸ ಕಾದಂಬರಿ ‘ಕಾಲಯಾತ್ರೆ’. ನಗರೀಕರಣದ ಪರಿಣಾಮ ಮಹಾನಗರಗಳಲ್ಲಿರುವ ಅಮಾಯಕ ಜನರ...

ಕಾಲ ದೇಶಗಳನ್ನು ಮೀರಿ ಪಸರಿಸಿದ ಕಾವ...

30-10-2020 ಬೆಂಗಳೂರು

ಲೇಖಕ, ಅನುವಾದಕ ವಿಜಯ್ ನಾಗ್ ಜಿ ಅವರು ವಿವಿಧ ರಾಷ್ಟ್ರಗಳ ಗಮನಾರ್ಹ ಕವಿಗಳ ಕವಿತೆಗಳನ್ನು ಕನ್ನಡಕ್ಕೆ ಅನುವಾದಿಸಿ &lsqu...

Comments