ಮುಗುಳ್ನಗೆಯ ಆಲಿಂಗನ Something in the Rain (Korean Romantic Drama)

Date: 15-01-2022

Location: ಬೆಂಗಳೂರು


‘ಸಹಜವಾಗಿ ನಗುವ ಆ ಅವನು, ಆ ನಗುವಿನ ಆಲಿಂಗನದಲ್ಲಿ ನೆಮ್ಮದಿ ಕಂಡುಕೊಳ್ಳುವ ಅವಳು, ಇಬ್ಬರ ನಡುವಿನ ಚೆಂದದ ಪ್ರೀತಿ ಭೂಮಿಯ ಮೇಲೆಯೇ ಇರುವುದು ನಿಜವಾದರೆ ಬೆಳಕಾಗಿ, ಗಾಳಿಯಾಗಿ ಎಲ್ಲೆಲ್ಲಿಯೂ ಆವರಿಸಿಕೊಳ್ಳಲಿ’ ಎನ್ನುತ್ತಾರೆ ಲೇಖಕಿ ಅಂಜನಾ ಹೆಗಡೆ. ಅವರು ತಮ್ಮ ‘ಬೆಳ್ಳಕ್ಕಿ ಸಾಲು’ ಅಂಕಣದಲ್ಲಿ Something in the Rain ಎಂಬ ವೆಬ್ ಸರಣಿಯ ಕುರಿತು ವಿಶ್ಲೇಷಿಸಿದ್ದಾರೆ.

ಮನುಷ್ಯ ಸಂಬಂಧಗಳಲ್ಲಿ ಅತ್ಯಂತ ತೀವ್ರವಾದದ್ದು ಯಾವುದು; ಗಂಡು-ಹೆಣ್ಣುಗಳ ನಡುವಿನ ಪ್ರಣಯ ಪ್ರೀತಿಯೇ, ಪೋಷಕರು-ಮಕ್ಕಳ ನಡುವಿನ ಕೌಟುಂಬಿಕ ಪ್ರೀತಿಯೇ, ಸ್ನೇಹಿತರ ನಡುವಿನ ಸಾತ್ವಿಕ ಪ್ರೀತಿಯೇ ಅಥವಾ ಎಲ್ಲಕ್ಕೂ ಮಿಗಿಲಾದದ್ದು ತನ್ನನ್ನು ತಾನು ಪ್ರೀತಿಸಿಕೊಳ್ಳುವ ಹಂಬಲವೇ! ಪ್ರೀತಿಯೆನ್ನುವುದು ಯಾವ ವ್ಯಾಖ್ಯಾನಕ್ಕೂ ಸಿಗದ ಸಂಗತಿಯೆಂದು ಒಪ್ಪಿಕೊಳ್ಳುವುದಾದರೆ ಅದರ ಸುತ್ತಮುತ್ತ ಜರುಗುವ ಘಟನೆಗಳ ಮೇಲೆಯೂ ನಿಯಂತ್ರಣವೆನ್ನುವುದು ಸಾಧ್ಯವಿಲ್ಲ. ಅಲ್ಲಿ ಸರಿ-ತಪ್ಪುಗಳ ಲೆಕ್ಕಾಚಾರವಾಗಲೀ, ನೀತಿ-ನಿಯಮಗಳ ಕಟ್ಟುಪಾಡುಗಳಾಗಲೀ, ಕಾಲ-ದೇಶಗಳ ಪರಿಮಿತಿಗಳಾಗಲೀ ಗಣನೆಗೆ ಸಿಗುವುದಿಲ್ಲ. ಭಾವನೆಯೆನ್ನುವುದು ಮನಸ್ಸಿಗೆ ಸಂಬಂಧಪಟ್ಟಿದ್ದೆಂದೂ, ಬುದ್ಧಿ-ತಿಳಿವಳಿಕೆಗಳು ಮೆದುಳಿಗೆ ಸಂಬಂಧಿಸಿದ ಸಂಗತಿಗಳೆಂದೂ ವಿಂಗಡಿಸುವುದಾದರೆ ಅವೆರಡರ ನಡುವಿನ ಹೊಂದಾಣಿಕೆ ಪ್ರೀತಿಯ ವಿಷಯದಲ್ಲಿ ಸಾಧ್ಯವಾಗುವುದು ವಿರಳ. ಪ್ರೀತಿಗೆ ಇದ್ದಿರಬಹುದಾದ ಎಲ್ಲ ಮುಖಗಳಿಗೂ ಅವುಗಳದ್ದೇ ಆದ ಸೌಂದರ್ಯ, ಸೊಬಗು, ಗಾಂಭೀರ್ಯಗಳು ಸಹಜವೇ ಆದರೂ ಅರಿವಿಗೆ ನಿಲುಕದ, ನಿಲುಕಿದರೂ ಸರಳವೆನ್ನಿಸದ ಸೂಕ್ಷ್ಮ ಸಂಜ್ಞೆಗಳನ್ನು ನಿಭಾಯಿಸುವ ದಾರಿ ಯಾವುದು! ಇಂತಹ ಹಲವಾರು ಪ್ರಶ್ನೆಗಳನ್ನು ಹುಟ್ಟಿಸುವ, ಸಂಬಂಧಗಳ ಸೂಕ್ಷ್ಮತೆಯನ್ನು ಒಂದೊಂದಾಗಿ ತೆರೆದಿಡುವ ಕಥಾಸರಣಿ Something in the Rain.

"ನಿನಗೇಕೆ ನನ್ನನ್ನು ಪ್ರೀತಿಸುವುದು ಸಾಧ್ಯವಾಗುತ್ತಿಲ್ಲ? ಯಾವ ಕಾರಣಕ್ಕಾಗಿ ನೀನು ನನ್ನನ್ನು ಪ್ರೀತಿಸುವುದನ್ನು ನಿಲ್ಲಿಸಿದೆ?" ಎನ್ನುವಂತಹ ಪ್ರಶ್ನೆಗಳನ್ನು ನೇರವಾಗಿ ಕೇಳುವ ಹೆಣ್ಣಿನ ಹೃದಯದಲ್ಲಿ ಇದ್ದಿರಬಹುದಾದ ನೋವನ್ನು ಯಥಾಸ್ಥಿತಿಯಲ್ಲಿ ಎದುರಿಗಿರುವವನು ಅರ್ಥೈಸಿಕೊಳ್ಳಲು ಸಾಧ್ಯವೇ; ತನ್ನಲ್ಲಿದ್ದಿರಬಹುದಾದ ಎಲ್ಲ ನ್ಯೂನತೆಗಳನ್ನು ಪಟ್ಟಿಮಾಡುತ್ತ, "ನಿನ್ನ ಪ್ರೇಮರಹಿತ ನಿರ್ಭಾವುಕ ಮನಃಸ್ಥಿತಿಯನ್ನು ನಾನು ಒಪ್ಪಿಕೊಳ್ಳಬಹುದಾದಂಥ ಒಂದೇ ಒಂದು ಕಾರಣವನ್ನು ಹೇಳು" ಎನ್ನುವ ಅವಳ ಅಳಲು ಮುಗಿದುಹೋದ ಪ್ರೀತಿಗೆ ಚೈತನ್ಯವನ್ನು ಮರಳಿಸಬಲ್ಲದೇ! "ನಮ್ಮ ಸಂಬಂಧ ನನ್ನಲ್ಲಿ ಯಾವ ಸಂಭ್ರಮವನ್ನೂ ಹುಟ್ಟಿಸುತ್ತಿಲ್ಲ" ಎಂದವನ ಮಾತನ್ನು ಅರಗಿಸಿಕೊಳ್ಳಲಾಗದೇ ನರಳುತ್ತಿರುವವಳ ಬದುಕಿಗೆ ಎಳೆಬಿಸಿಲಿನಂತಹ ಹುಡುಗನೊಬ್ಬನ ಪ್ರವೇಶವಾಗುತ್ತದೆ. ಮೂವತ್ತೈದು ದಾಟಿರುವ, ಕನಸುಗಳೇ ಮುಗಿದುಹೋದಂತಿದ್ದ ಅವಳ ಕೈಹಿಡಿದು ಚೇತೋಹಾರಿಯಾದ ಹೊಸದೊಂದು ಹಾದಿಯಲ್ಲಿ ಹೆಜ್ಜೆಯಿಡಲು ಕಲಿಸುವ ಅವನ ಆಗಮನದಿಂದಾಗಿ ಎಲ್ಲವೂ ಬದಲಾಗುತ್ತವೆ. ಅವನ ತಂಗಾಳಿಯಂಥ ನಗು ಅವಳ ಹೃದಯದಲ್ಲೊಂದು ಪ್ರೀತಿಯ ಅಲೆಯನ್ನು ಉಂಟುಮಾಡುತ್ತದೆ; ಬೆಚ್ಚನೆಯ ಅವನ ಪ್ರೀತಿ ಅವಳ ನಿಟ್ಟುಸಿರಿನ ತಾಪವನ್ನು ತಣ್ಣಗಾಗಿಸುತ್ತದೆ; ಅವಳ ನೋವೆಲ್ಲವನ್ನೂ ತನ್ನದೆಂದುಕೊಂಡು ನುಂಗಿಕೊಳ್ಳುವ ಅವನ ನಿಲುವು ಪ್ರೀತಿಯ ಹೊಸ ಮುಖವೊಂದನ್ನು ಅವಳಿಗೆ ಪರಿಚಯಿಸುತ್ತದೆ.

ತಾನು ಪ್ರೀತಿಸಿದವಳಿಗಾಗಿ ತನ್ನೆಲ್ಲ ಅಹಮಿಕೆಯನ್ನು ತನ್ನೊಳಗೇ ಬಚ್ಚಿಟ್ಟುಕೊಳ್ಳುವ, ತನ್ನತನವನ್ನೇ ಮರೆತವನಂತೆ ಅವಳೊಂದಿಗೆ ನಡೆದುಕೊಳ್ಳುವ ಅವನು ವಯಸ್ಸಿನಲ್ಲಿ ಅವಳಿಗಿಂತ ಚಿಕ್ಕವನು; ತಾಯಿಯನ್ನು ಕಳೆದುಕೊಂಡು, ತಂದೆಯಿಂದ ದೂರವಾಗಿ ಅಕ್ಕನ ಆಸರೆಯಲ್ಲಿ ಬೆಳೆದವನು; ಕಲಾವಿದನಾಗಬೇಕೆಂದುಕೊಂಡಿದ್ದ ಕನಸನ್ನು ತೊರೆದು ತನ್ನದೇ ಆದ ಪುಟ್ಟ ಪ್ರಪಂಚದೊಳಗೆ ಬದುಕನ್ನು ಸಂಭ್ರಮಿಸುವವನು. ಅವನಿಗೆ ತನ್ನ ಬದುಕಿನ ಕುರಿತಾಗಿ ಯಾವ ಖೇದವೂ ಇಲ್ಲ; ಇದ್ದರೂ ಅದು ಅವನ ಬದುಕಿನ ಸುಖ-ಸಂತೋಷಗಳನ್ನು ಬಾಧಿಸುವುದಿಲ್ಲ. ಇಲ್ಲಿ ಎಲ್ಲವೂ ಚೆನ್ನಾಗಿಯೇ ಇವೆ ಎಂದುಕೊಂಡು ಎಲ್ಲರೊಂದಿಗೂ ಮುಗುಳ್ನಗುತ್ತ ವ್ಯವಹರಿಸುವ ಆತನನ್ನು ಯಾರು ಬೇಕಾದರೂ ಪ್ರೀತಿಸಬಲ್ಲರು. ಹೂವಿನಂಥ ಹೃದಯವಿರುವ ಆ ಹುಡುಗನಿಗೆ ಪ್ರೀತಿ ಉಂಟಾಗುವುದು ತನಗಿಂತ ವಯಸ್ಸಿನಲ್ಲಿ ಹಿರಿಯಳಾದ ಅಕ್ಕನ ಏಕೈಕ ಗೆಳತಿಯ ಮೇಲೆ. ಬದುಕಿನ ಎಲ್ಲ ಸಮಸ್ಯೆಗಳನ್ನೂ ನಗುನಗುತ್ತಲೇ ಸ್ವಾಧೀನಕ್ಕೆ ತೆಗೆದುಕೊಳ್ಳುವ ಆತನಿಗೆ ತನ್ನ ಪ್ರೀತಿ ತಂದೊಡ್ಡುವ ಸವಾಲುಗಳನ್ನು ನಿರ್ವಹಿಸುವುದು ಸುಲಭವಲ್ಲವೆನ್ನುವುದು ಗೊತ್ತು. ಆದರೂ ಎಂತಹ ಕಷ್ಟಕರ ಪರಿಸ್ಥಿತಿಯಲ್ಲಿಯೂ ಪ್ರೀತಿಸಿದವಳನ್ನು ಬಿಟ್ಟುಕೊಡಲಾರ! ಅವಳ ಒಂದು ನಗುವಿಗಾಗಿ, ಪ್ರೀತಿಯ ಮಾತಿಗಾಗಿ ಜೀವನಪೂರ್ತಿ ಕಾಯಬಲ್ಲೆ ಎನ್ನುವ ಭರವಸೆ ತನ್ನ ಬದುಕಿನ ನೆಮ್ಮದಿಯನ್ನೇ ಹಾಳುಮಾಡುತ್ತಿರುವುದರ ಕುರಿತಾಗಿಯೂ ಅವನಿಗೆ ಖೇದವಿಲ್ಲ.

ಅವನ ಬೇಸರವೇನಿದ್ದರೂ ಒಂದಲ್ಲ ಒಂದು ಕಾರಣಕ್ಕಾಗಿ ಸಮಸ್ಯೆಗಳನ್ನು ಮೈಮೇಲೆ ಎಳೆದುಕೊಳ್ಳುವ ಅವಳ ಸ್ವಭಾವದ ಮೇಲೆ; ಕೋಪ-ಹತಾಶೆಗಳೇನಿದ್ದರೂ ಅವಳ ಕಷ್ಟಗಳನ್ನು ದೂರಮಾಡಲಾಗದ ತನ್ನ ಅಸಹಾಯಕ ಪರಿಸ್ಥಿತಿಯ ಮೇಲೆ. ತನ್ನ ಬದುಕಿನ ಉದ್ದೇಶವೇ ಅವಳ ಸಂತೋಷ-ನೆಮ್ಮದಿಗಳನ್ನು ಕಾಪಾಡುವುದು ಎಂದುಕೊಂಡಿರುವ ಅವನ ಪ್ರೀತಿಗೆ ನೂರೆಂಟು ಸವಾಲುಗಳು! ಅವನು ಅವಳನ್ನೇ ಯಾವ ಕಾರಣಕ್ಕಾಗಿ ಪ್ರೀತಿಸಬೇಕು ಎನ್ನುವುದಕ್ಕೆ ಅವನ ಹತ್ತಿರವೂ ಉತ್ತರವಿಲ್ಲ. ಅವಳು ಸುಂದರವಾಗಿದ್ದಾಳೆ ಎನ್ನುವ ಕಾರಣವೇ ಅವನನ್ನು ಅವಳೆಡೆಗೆ ಆಕರ್ಷಿಸಿದ್ದಾದರೆ, ಅವಳಿಗಿಂತ ಸುಂದರವಾಗಿರುವ ತನ್ನದೇ ವಯಸ್ಸಿನ, ತನಗೆ ಬೇಕಾದಂತಹ ಹುಡುಗಿಯನ್ನು ಆಯ್ಕೆ ಮಾಡಿಕೊಳ್ಳಬಹುದಾದ ಸಾಮರ್ಥ್ಯವಿರುವವನು ಅವನು. ಅವಳು ತನ್ನನ್ನು ತಾನು ಪ್ರೀತಿಸಿಕೊಳ್ಳುವಷ್ಟೇ ತೀವ್ರವಾಗಿ ಅವಳನ್ನು ಪ್ರೀತಿಸುವ ಅವನ ಪ್ರೀತಿ ತುಂಬಿದ ನಗುವನ್ನು ನೋಡಿದಾಗಲೆಲ್ಲ ಬದುಕಿನ ಎಲ್ಲ ಕಷ್ಟ-ದುಃಖಗಳನ್ನು ದೂರಮಾಡುವ ಶಕ್ತಿ ಪ್ರೀತಿಗೆ ಮಾತ್ರ ಇರಬಹುದೇ ಎನ್ನುವ ಯೋಚನೆ ಆವರಿಸಿಕೊಳ್ಳುವುದು ಸುಳ್ಳಲ್ಲ. ಪುಟ್ಟ ದೇಹಗಾತ್ರದ ಅವಳು ಅವನ ಪ್ರೀತಿಯ ಆಲಿಂಗನದಲ್ಲಿ ಕರಗಿಹೋದಾಗಲೆಲ್ಲ ಪ್ರಪಂಚದ ಆಗುಹೋಗುಗಳೆಲ್ಲವೂ ಪ್ರೀತಿಯ ತೆಕ್ಕೆಯಲ್ಲಿ ಸುರಕ್ಷಿತವಾಗಿರುವ ನಂಬಿಕೆಯೊಂದು ಹೊಸದಾಗಿ ಹುಟ್ಟಿಕೊಂಡ ಭಾವ! ಏಕಕಾಲಕ್ಕೆ ಸುಂದರವೂ, ಸಂಕೀರ್ಣವೂ ಎನ್ನಿಸುವ ಅವರಿಬ್ಬರ ಪ್ರೀತಿಯ ಪ್ರಪಂಚದಲ್ಲಿ ಅವಳು ಅವನಾಗಿ, ಅವನು ತನ್ನ ಒಂದೇ ಒಂದು ನಗುವಿನಿಂದ ಹೃದಯವನ್ನು ಹಗುರ ಮಾಡುವ ಪ್ರೀತಿಯಾಗಿ, ಆ ಪ್ರೀತಿಯೊಂದೇ ಶಾಶ್ವತವೆನ್ನುವ ಅತ್ತ ನಂಬಲೂ ಆಗದ ಇತ್ತ ಬಿಡಲೂ ಆಗದ ವಿಚಿತ್ರವಾದ ಭರವಸೆ ಹೃದಯದ ತುಂಬಾ!

Something in the Rain ಎಂಬ ವೆಬ್ ಸರಣಿಯ ಹಾಡು: 

ಆಶ್ಚರ್ಯವೆಂದರೆ ಆ ಪ್ರೀತಿಯ ಸುಂದರವಾದ ಪ್ರಪಂಚವನ್ನು ತಮ್ಮದೇ ಆದ ಕಾರಣಗಳಿಗಾಗಿ ಜಟಿಲಗೊಳಿಸುವವರೂ ಇಲ್ಲಿ ತಪ್ಪಿತಸ್ಥರೆಂಬ ಭಾವನೆ ಮೂಡುವುದಿಲ್ಲ. ಗೆಳತಿ ಹಾಗೂ ತಮ್ಮನ ಹೊರತಾಗಿ ಬೇರೆ ಜಗತ್ತೇ ಗೊತ್ತಿರದ ಆತನ ಅಕ್ಕನದು ನಿಸ್ವಾರ್ಥ ಪ್ರೀತಿ; ಅಪ್ಪನ ಅತಿರೇಕದ ವರ್ತನೆಗೆ ಬೇಸತ್ತು ಒಬ್ಬಂಟಿಯಾಗಿ ಬದುಕುತ್ತಿರುವ ಅವಳಿಗೆ ತನ್ನ ಕೊನೆಗಾಲದಲ್ಲಿ ತಮ್ಮನಿಗೆ ಭಾರವಾಗಬಾರದೆಂಬ ಸ್ವಾವಲಂಬಿ ಮನೋಭಾವ. ಚಿಕ್ಕ ವಯಸ್ಸಿನಲ್ಲಿಯೇ ತನ್ನನ್ನೂ, ತಮ್ಮನನ್ನೂ ತ್ಯಜಿಸಿದ ಅಪ್ಪನನ್ನು ಪ್ರೀತಿಸಲೂ ಆಗದೇ, ದ್ವೇಷಿಸಲೂ ಆಗದೇ ಸಂಕಟವನ್ನು ಅನುಭವಿಸುತ್ತಿರುವ ಅವಳ ಸಹನೆಯೇ ಪ್ರೀತಿಯ ಇನ್ನೊಂದು ರೂಪವಾಗಿ, ಸುಂದರ ರೂಪಕವಾಗಿ ನಮ್ಮೆದುರು ತೆರೆದುಕೊಳ್ಳುತ್ತದೆ. ಅಪ್ಪನಿಗೆ ಮಕ್ಕಳನ್ನು ದೂರಮಾಡಲು ಅವನದೇ ಆದ ಕಾರಣಗಳು! ಯಾವ ಕಟ್ಟುಪಾಡುಗಳೂ ಇಲ್ಲದೇ ಬದುಕನ್ನು ಅನುಭವಿಸಿಬಿಡಬೇಕು, ಯಾರನ್ನಾದರೂ ದ್ವೇಷಿಸುತ್ತ ಕಾಲ ಕಳೆಯುವಷ್ಟು ಸಮಯಾವಕಾಶವನ್ನು ಬದುಕು ನೀಡುವುದಿಲ್ಲ ಎನ್ನುವ ಅವನ ಸಮರ್ಥನೆಯನ್ನು ಅಲ್ಲಗಳೆಯಲಾಗುವುದಿಲ್ಲ. ತನ್ನನ್ನೇ ನಂಬಿಕೊಂಡವರನ್ನು ಪರಿತ್ಯಜಿಸಿ ಇನ್ನೆಲ್ಲಿಯೋ ಪ್ರೀತಿಯ ಹುಡುಕಾಟದಲ್ಲಿರುವವರ ಬದುಕಿಗೆ ಅದರದೇ ಆದ, ಅರ್ಥವಿವರಣೆಗೆ ಲಭ್ಯವಾಗದಿರುವ ಸಂಕೀರ್ಣ ಮಾರ್ಗ! ಅವರವರ ಬದುಕಿನ ಸಹಜತೆ, ಸರಳತೆ, ಸೌಂದರ್ಯಗಳು ಅವರ ಅನುಭವಕ್ಕೆ ಮಾತ್ರ ಸಿಗಬಹುದಾದ ಖಾಸಗಿ ಸಂಗತಿಗಳು. ಎದುರಿಗಿರುವವನ ಹತ್ತಿರ ಅವುಗಳನ್ನು ಅಳೆದುಬಿಡಬಹುದಾದ ಯಾವುದೇ ಮಾನದಂಡಗಳಿಲ್ಲ. 

ಇಲ್ಲಿ ಇನ್ನೊಬ್ಬ ತಂದೆಯಿದ್ದಾನೆ. ಅವನಿಗೆ ಹೆಂಡತಿ-ಮಕ್ಕಳ ಹೊರತಾಗಿ ಬೇರೆ ಪ್ರಪಂಚವಿಲ್ಲ. ಬದುಕು-ಸಂಬಂಧಗಳ ಕುರಿತಾಗಿ ತನ್ನದೇ ಆದ ದೃಷ್ಟಿಕೋನವನ್ನಿಟ್ಟುಕೊಂಡು ಮಕ್ಕಳ ಬದುಕನ್ನು ರೂಪಿಸಲು ಹೊರಟಿರುವ ಹೆಂಡತಿಯ ಮಾತನ್ನೂ ಅಲ್ಲಗಳೆಯಲಾರ; ನಲವತ್ತು ಸಮೀಪಿಸುತ್ತಿರುವ ಮಗಳಿಗೆ ತನ್ನ ಬದುಕನ್ನು ತಾನೇ ರೂಪಿಸಿಕೊಳ್ಳುವ ಹಕ್ಕು ಮತ್ತು ಸಾಮರ್ಥ್ಯ ಎರಡೂ ಇವೆ ಎನ್ನುವ ನಂಬಿಕೆಯಿಂದ ದೂರ ಸರಿಯಲಾರ. ಮಗಳು ಪ್ರೀತಿಸುತ್ತಿರುವ ಹುಡುಗನನ್ನು ತನ್ನ ಮಗನಂತೆಯೇ ಪ್ರೀತಿಸುವ ಆತನದು ತಪ್ಪು-ಸರಿಗಳ ಆಧಾರದ ಮೇಲೆ ಸಂಬಂಧಗಳನ್ನು ನಿರ್ಧರಿಸದ, ಒಳ್ಳೆಯದನ್ನೆಲ್ಲ ಒಳಗೊಳ್ಳುವ ಮುಕ್ತಮನಸ್ಸು. ಮಕ್ಕಳನ್ನು ಸ್ನೇಹಿತನಾಗಿ ಪ್ರೀತಿಸುವ, ಹೆಂಡತಿಯ ಅತಿರೇಕಗಳನ್ನೂ ಅನಿವಾರ್ಯವಾಗಿ ಒಪ್ಪಿಕೊಳ್ಳುವ ಈ ತಂದೆಯದು ನಿರ್ಮಮ ಪ್ರೀತಿ; ನಿರ್ಲಿಪ್ತ ನಿಲುವು. ಮಗಳ ಸಂತೋಷವನ್ನೇ ತನ್ನ ನೆಮ್ಮದಿಯನ್ನಾಗಿಸಿಕೊಂಡು, ಅವಳ ದುಃಖವನ್ನು ತನ್ನದೆಂದುಕೊಂಡು ಅನುಭವಿಸುವ ಅವನಿಗೆ ಆಸ್ತಿ-ಅಂತಸ್ತುಗಳಿಲ್ಲದ, ಒಳ್ಳೆಯ ಕೌಟುಂಬಿಕ ಹಿನ್ನೆಲೆಯಿಲ್ಲದ ಹುಡುಗನನ್ನು ಮಗಳು ಪ್ರೀತಿಸುತ್ತಿರುವುದು ಅಸಹಜವೆಂದಾಗಲೀ, ಅಪರಾಧವೆಂದಾಗಲೀ ಅನ್ನಿಸಿದ್ದಿಲ್ಲ. ಮಗಳ ಅಳುವಿಗೆ ಜೊತೆಯಾಗುವ, ಅವಳ ನಿರ್ಧಾರಗಳನ್ನು ಗೌರವಿಸುವ ಈ ಅಪ್ಪನಿಗೆ ಪ್ರೀತಿಯನ್ನು ವ್ಯಕ್ತಪಡಿಸಲು ಮಾತುಗಳ ಅಗತ್ಯವೇ ಇಲ್ಲ.          

ಸಂಬಂಧಗಳು ವಿಫಲವಾಗಲು, ಪ್ರೀತಿಯೊಂದು ಮುಗಿದುಹೋಗಲು ನಿರ್ದಿಷ್ಟವಾದ ಕಾರಣಗಳು ಸಿಗುವಂತಿದ್ದರೆ ಎಲ್ಲ ಅನುಬಂಧಗಳೂ ಅಧ್ಯಯನದ ವಿಷಯವಾಗಿಬಿಡುತ್ತಿದ್ದವೇನೋ! ಆಗ ಕ್ರಮೇಣ ನೋವು-ಸಂಕಟಗಳೆಲ್ಲ ಜಗತ್ತಿನಿಂದ ಕಣ್ಮರೆಯಾಗಿ ಎಲ್ಲೆಲ್ಲೂ ಸಮಾಧಾನದ ದಾರಿಗಳು ತೆರೆದುಕೊಂಡು ಸಂಬಂಧಗಳೊಂದಿಗಿನ ಪಯಣವೆನ್ನುವುದು ಸರಾಗವಾದ ಚಲನೆಯಾಗಿಬಿಡುತ್ತಿತ್ತು. ಹಾಗೊಂದು ಉಪಶಮನದ ಮಾರ್ಗವಿನ್ನೂ ಲಭ್ಯವಿರದ ಕಾರಣಕ್ಕಾಗಿಯೇ ಎಡವಿಬೀಳುವ, ಪಾಠ ಕಲಿಯುವ, ತಗ್ಗಿ ನಡೆಯುವ ಪ್ರಕ್ರಿಯೆಗಳೆಲ್ಲವೂ ಜಾರಿಯಲ್ಲಿವೆ. ಇಲ್ಲಿ ಆರಂಭವಾಗಿದ್ದೆಲ್ಲವೂ ಎಲ್ಲೋ ಒಂದು ಕಡೆ ಮುಗಿದುಹೋಗಬೇಕಾಗಿರುವುದು ಸೃಷ್ಟಿಯ ನಿಯಮ. ಆ ಅಂತ್ಯ ಸುಖಕರವಾಗಿರಬೇಕೆನ್ನುವ ಪ್ರಯತ್ನ ಮಾತ್ರ ನಮ್ಮ ಹತೋಟಿಯಲ್ಲಿರುವಂಥದ್ದು. ಉಳಿದಂತೆ ನೆನಪು-ಕನಸುಗಳ ಒಡನಾಟದಲ್ಲಿಯೇ ಸಂಬಂಧಗಳಿಗೊಂದು ಅಸ್ತಿತ್ವ. ಈ ಕ್ಷಣ ಕಣ್ಣೆದುರಿಗೆ ಏನಿದೆಯೋ ಅದರ ಹೊರತಾಗಿ ಬೇರೊಂದು ಸತ್ಯವಿಲ್ಲ. ಸಹಜವಾಗಿ ನಗುವ ಆ ಅವನು, ಆ ನಗುವಿನ ಆಲಿಂಗನದಲ್ಲಿ ನೆಮ್ಮದಿ ಕಂಡುಕೊಳ್ಳುವ ಅವಳು, ಇಬ್ಬರ ನಡುವಿನ ಚೆಂದದ ಪ್ರೀತಿ ಭೂಮಿಯ ಮೇಲೆಯೇ ಇರುವುದು ನಿಜವಾದರೆ ಬೆಳಕಾಗಿ, ಗಾಳಿಯಾಗಿ ಎಲ್ಲೆಲ್ಲಿಯೂ ಆವರಿಸಿಕೊಳ್ಳಲಿ; ಆಕಾಶದಲ್ಲೆಲ್ಲೋ ಇರುವ ಕಣ್ಣಿಗೆ ಕಾಣಿಸದ ಸತ್ಯದ ಪರಿಕಲ್ಪನೆಯಾದರೆ ಆಗಾಗ ಮಳೆಯಾಗಿ ಸುರಿಯುತ್ತಿರಲಿ.
ಈ ಅಂಕಣದ ಹಿಂದಿನ ಬರಹಗಳು:
ಒಳತಾರಸಿಯ ಒಂಟಿ ಚೌಕಗಳು THE QUEEN'S GAMBIT
ಅನುರಾಗದ ಮಧುರ ಆಲಾಪ BANDISH BANDITS (INDIAN ROMANTIC DRAMA)
ಆಧುನಿಕ ಲೋಕದ ಆತ್ಮಾವಲೋಕನ MADE IN HEAVEN (INDIAN ROMANTIC DRAMA)
ನೋವು-ನಲಿವುಗಳ ಪಂಚಾಯಿತಿ PANCHAYAT (HINDI COMEDY-DRAMA)
ಬಿಡುಗಡೆಯ ಹಾದಿಯ ಪಿಸುಮಾತು IT'S OKAY TO NOT BE OKAY(KOREAN DRAMA)

MORE NEWS

ಸಂಶೋಧನೆಯಲ್ಲಿ ಆಕರಗಳ ಸಂಗ್ರಹ, ವಿಂಗಡಣೆ ಮತ್ತು ಪೂರ್ವಾಧ್ಯಯನ ಸಮೀಕ್ಷೆ

23-04-2024 ಬೆಂಗಳೂರು

"ಒಂದನ್ನು ಬಿಟ್ಟು ಇನ್ನೊಂದನ್ನು ಚಿಂತಿಸಲಾಗದು. ಅಲ್ಲದೆ; ಶೀರ್ಷಿಕೆ ಆಖೈರು ಮಾಡಿಕೊಳ್ಳುವುದಕ್ಕೆ ನಾವು ಅವಸರ ಮಾಡ...

ಪರಿಘಾಸನ ಮತ್ತು ಅರ್ಧ ಚಕ್ರಾಸನ 

16-04-2024 ಬೆಂಗಳೂರು

"ಪರಿಘಾಸನ ಆಸನವು ) ಪಿತ್ತ ಜನಕಾಂಗ ಮತ್ತು ಮೇದೋಜೀರಕ ಚೈತನ್ಯಗೊಳ್ಳುವಂತೆ ಮಾಡುತ್ತದೆ. ಹಾಗೆಯೇ ‘ಅರ್ಧ ಚಕ್...

ಲೋಕಸಭಾ ಚುನಾವಣೆಗಳ ಸುತ್ತಮುತ್ತ ಒಂದು ಸುತ್ತು

15-04-2024 ಬೆಂಗಳೂರು

"ಪರಸ್ಪರ ರೋಚಕ ನಿಂದನೆಗಳು. ಕ್ಷೇತ್ರವಾರು ಚಕ್ಕರಗುಳ್ಳಿ ಇಡುವ ಚತುರ ವಿವರಗಳು. ಹೊಸ ಹೊಸ ಬೈಗುಳಗಳು. ಮಾಧ್ಯಮಗಳಿಗ...