"ಮುಖವಾಡ"ದಿಂದ "ಮುಖಾಮುಖಿ" ತನಕ ಕೆ.ವಿ.ತಿರುಮಲೇಶ್

Date: 30-01-2023

Location: ಬೆಂಗಳೂರು


ಕೆ.ವಿ.ತಿರುಮಲೇಶ ಅವರು ದೇಶ - ವಿದೇಶಗಳಲ್ಲಿ ಸಂದರ್ಭಾನುಸಾರ ಅನಿಸಿಕೆಗಳನ್ನು ಹಂಚಿಕೊಂಡಿದ್ದು...

“ಸಾಹಿತ್ಯವೆಂದರೆ ನಮಗೆ ಅನಗತ್ಯ ಎಂಬ ವರ್ಗದ ಹಿನ್ನೆಲೆಯಿಂದ ಬಂದವನು ನಾನು. ಪಠ್ಯ ಪುಸ್ತಕದ ಹೊರತಾದ ಪುಸ್ತಕಗಳನ್ನು ಓದಬಾರದು ,ಅವು ಮಕ್ಕಳನ್ನು ಪುಂಡರನ್ನಾಗಿ ಮಾಡುತ್ತವೆ ಎಂಬ ಭಾವನೆಯಿತ್ತು ನಮ್ಮ ಹಿರಿಯರಲ್ಲಿ. ನಾನು ಹಟ ಹಿಡಿದು ಹೆಚ್ಚಿನ ವಿದ್ಯಾಭ್ಯಾಸ ಗಳಿಸಿದುದು. ಕದ್ದು ಮುಚ್ಚಿ ಕತೆ ಕವಿತೆ ಬರೆದುದು. ಈಗಲೂ ನನ್ನ ಬರಹಗಳ ಕುರಿತು ಲಜ್ಜೆಯಿದೆ. ಪ್ರದರ್ಶನ ಎಂದರೆ ನನಗೆ ಗಾಬರಿ. ನನ್ನನ್ನು ನೀವು ಎಲ್ಲೂ ಕಾಣಲಾರಿರಿ. ನಮ್ಮ ಶಾಲೆಗೆ ಕಾರಂತ, ಬೇಂದ್ರೆ ಮುಂತಾದವರು ಬಂದು ಹೋಗುತ್ತಿದ್ದರು. ಆದರೆ ಅವರೆಂದೂ ನಮ್ಮನ್ನು ಮಾತನಾಡಿಸಿದ್ದಿಲ್ಲ.ಅವರು ನಮಗೆ ನಿಲುಕದವರಾಗಿಯೆ ಉಳಿದರು.ಈಗಲೂ ಹಾಗೇ ಇದ್ದಾರೆ. ನಾನಿನ್ನೂ ಶಾಲಾ ಬಾಲಕನಿದ್ದಾಗ, ಒಂದು ರವಿವಾರ ಅಪರಾಹ್ನ ನಮ್ಮ ಮನೆ ಪಕ್ಕದ ಪೇಟೆಯ ಸ್ಕೂಲಿನಲ್ಲಿ ಬಿ.ಎಚ್.ಶ್ರೀಧರರ ಭಾಷಣವಿದೆಯೆಂದು ಗೊತ್ತಾಗಿ ಬಿಸಿಲಲ್ಲಿ ಐದು ಮೈಲಿ ನಡೆದುಕೊಂಡು ಅಲ್ಲಿಗೆ ಹೋದೆ. ಅವರೇನು ಬರೆದಿದ್ದಾರೆಂದು ನನಗೆ ಗೊತ್ತಿರಲಿಲ್ಲ. ಆದರೆ ಸಾಹಿತಿಯೊಬ್ಬರನ್ನು ನೋಡುವ ಉತ್ಸಾಹ ನನ್ನದು.ನಾನಲ್ಲಿ ತಲುಪಿದಾಗ ಅವರ ಭಾಷಣ ಮುಗಿಯುವುದರಲ್ಲಿತ್ತು. ನನಗೀಗ ನೆನಪಿಗೆ ಬರುವುದು ಜಾಯ್ಸನ ಕತೆ 'ಅರಬಿ'. ಅದರಲ್ಲಿ ಬಾಲಕನೊಬ್ಬ ಏನಾದರೂ ಉಡುಗುರೆ ಕೊಳ್ಳಬೇಕೆಂದು ಸಂತೆ ತಲುಪಿದಾಗ ಅದು ಮುಚ್ಚತೊಡಗಿರುತ್ತದೆ.

ವಿದೇಶದ ಮಕ್ಕಳು ಕನ್ನಡ ಕಲಿಯಲಿ

"ಪ್ರಪಂಚದ ಸುಮಾರು ಆರು ಸಾವಿರ ಭಾಷೆಗಳಲ್ಲಿ ಅರ್ಧದಷ್ಟು ಅವನತಿಯ ಅಂಚಿನಲ್ಲಿವೆ. ಇನ್ನೂ ಶೇ.40 ರಷ್ಟು ಭಾಷೆಗಳು ಆ ಸ್ಥಿತಿಗೆ ಜಾರುತ್ತಿವೆ. ಏಕೆಂದರೆ ಇವುಗಳನ್ನು ಬಳಸುವವರು ವಯಸ್ಕರು ಮಾತ್ರ. ಆದರೂ ಆ ಭಾಷೆ ಬಳಸುವ ಮಕ್ಕಳ ಸಂಖ್ಯೆ ಗಣನೀಯ ಪ್ರಮಾಣದಲ್ಲಿ ಕಡಿಮೆಯಾಗುತ್ತಿವೆ. ವಿದೇಶದಲ್ಲಿ ನೆಲೆಸಿರುವವರು ತಮ್ಮ ಮಕ್ಕಳಿಗೆ ಕನ್ನಡವನ್ನು ಕಲಿಸಬೇಕು. ಕನ್ನಡವನ್ನು ಅವನತಿಯ ಅಂಚಿಗೆ ತಳ್ಳದಿರಿ" ಎಂದು ಹ್ಯೂಸ್ಟನ್‌ ನಲ್ಲಿ ಹೇಳಿದ ಮಾತು.

ಕನ್ನಡಕ್ಕಾಗಿ ಡಬ್ಬಿಂಗ್‌ ಬೇಕು

"ಭಾಷೆ ಯಾವುದೇ ಇರಲಿ,ನಮ್ಮಲ್ಲಿ ಹಲವರಿಗೆ ಕನ್ನಡದ ಜತೆ ಇಂಗ್ಲಿಷ್, ಹಿಂದಿ ಮುಂತಾದ ಭಾಷೆಗಳು ಬರ್ತವೆ. ಆದ್ದರಿಂದ ಅಮೀರ್ ಖಾನನ ಪ್ರೋಗ್ರಾಮನ್ನ ಅಥವಾ ಡಿಸ್ಕವರಿ ಚಾನಲಿನ ಪ್ರೋಗ್ರಾಮನ್ನ ಆಯಾ ಭಾಷೆಗಳಲ್ಲಿ ಕೇಳಿ ಅರ್ಥಮಾಡಿಕೊಳ್ಳುವುದು ಸಾಧ್ಯ. ಆದರೆ ಕರ್ನಾಟಕದಲ್ಲಿ ಕನ್ನಡ ಮಾತ್ರವೇ ಗೊತ್ತಿರುವ ಬಹುಸಂಖ್ಯೆಯ ಜನರಿದ್ದಾರೆ. ಅವರಿಗೆ ಈ ಪ್ರೋಗ್ರಾಮುಗಳು ಕನ್ನಡದಲ್ಲಿ ಸಿಗಬೇಕು. ಸದ್ಯ ಅದಕ್ಕಿರುವ ಮಾರ್ಗ ಡಬ್ಬಿಂಗ್ ಒಂದೇ. ಅದಲ್ಲ ಎಂದಾದರೆ ಇದನ್ನು ವಿರೋಧಿಸುವ ಜನರು ಮೂಲ ಕನ್ನಡದಲ್ಲೇ ಇಂಥ ಪ್ರೋಗ್ರಾಮುಗಳನ್ನು ಕೊಡಬೇಕು. ಹಾಗೆ ಕೊಡುವುದು ಸಾಧ್ಯವಿಲ್ಲ ಎಂದಾದರೆ ತೆಪ್ಪಗಿರಬೇಕು".

 

"ಕರ್ನಾಟಕವೊಂದು ದೇಶವಲ್ಲ, ಅದಕ್ಕೊಂದು ರಾಜಕೀಯ ಶಕ್ತಿಯಿಲ್ಲ. ಇಚ್ಛಾಶಕ್ತಿಯಂತೂ ಮೊದಲೇ ಇಲ್ಲ. ಬೆಂಗಳೂರು ಹೊರ ರಾಜ್ಯದವರಿಂದ ಆಕ್ರಮಿಸಲ್ಪಟ್ಟಿದೆ ಎಂದು ಕೂಗಾಡುತ್ತೇವೆ. ಅವರಿಗೆ ಕನ್ನಡ ಕಲಿಸಿ ಅವರನ್ನು ಕನ್ಕಡಿಗರನ್ನಾಗಿಸಿಕೊಳ್ಳುವ ವ್ಯಾಪಕ ಪ್ರಯತ್ನವನ್ನು ಮಾತ್ರ ಮಾಡುವುದಿಲ್ಲ. ಬೆಂಗಳೂರಿಂದ ಮೈಸೂರಿಗೆ ವರ್ಗವಾದರೇ ಅದರಿಂದ ತಪ್ಪಿಸಿಕೊಳ್ಳುವುದು ಹೇಗೆಂದು ಶತಪ್ರಯತ್ನ ನಡೆಸುವವರು ಕನ್ನಡಿಗರು; ಜಂಗಮಾವಸ್ಥೆಗಿಂತ ಸ್ಥಾವರಾವಸ್ಥೆಯನ್ನೇ ಹೆಚ್ಚು ಇಷ್ಟಪಡುವವರು"

ಮಕ್ಕಳ ಕವನ ಸಂಕಲನ

"ಅಮೆರಿಕದಲ್ಲಿ ನಾನೊಬ್ಬನೇ ಇರಬೇಕಾದ ಸಂದರ್ಭದಲ್ಲಿ ನನ್ನ ಅಸ್ಮಿತೆಯನ್ನು ಕಾಪಾಡಿದ್ದು ಕನ್ನಡ ಭಾಷೆ. ಹೀಗಾಗಿ, ಕನ್ನಡ ಭಾಷೆಯ ಬಗೆಗೆ ಯೋಚಿಸಿದ್ದು, ಚಿಂತಿಸಿದ್ದು, ಕನಸಿದ್ದು, ʼಆದಿಕಾವ್ಯʼ ರೂಪುಗೊಂಡಿವೆ. ಈ ಕವಿತೆಗಳನ್ನು ಓದುವವರಿಗೆ ಅಹ್ಲಾದತೆ ಉಂಟಾದರೆ, ಮನಸ್ಸು ಪ್ರಪುಲ್ಲವಾದರೆ ನನಗೆ ಸಂತೋಷ" ಎಂದು ತಮ್ಮ 81ನೇ ವಯಸ್ಸಿನಲ್ಲೂ ಬರೆದ ಮಕ್ಕಳ ಕವನ ಸಂಕಲನದಲ್ಲಿ ಹೇಳಿಕೊಂಡಿದ್ದಾರೆ.

MORE NEWS

ಕುವೆಂಪು ಪರಿಸರದಲ್ಲಿ ದೇವರನ್ನ ಕಂಡರೆ, ರಾಜ್‌ಕುಮಾರ್‌ ಅಭಿಮಾನಿಗಳಲ್ಲಿ ದೇವರನ್ನ ಕಂಡರು: ಬರಗೂರು

18-04-2024 ಬೆಂಗಳೂರು

ಬೆಂಗಳೂರು: ರಾಷ್ಟ್ರಕವಿ ಕುವೆಂಪು ಅವರೇ ನನ್ನ ವಿಶ್ವ ಮಾನವ ಸಂದೇಶವನ್ನು ಜನರಿಗೆ ತಲುಪಿಸುವ ಶಕ್ತಿ ಇರುವುದು ರಾಜ್&zwnj...

ಹಾಸನ ಸಂಸ್ಕೃತ ಭವನದಲ್ಲಿ ವಿಶ್ವ ಕಲಾ ದಿನಾಚರಣೆ, ಚಿತ್ರಕಲಾ ಪ್ರದರ್ಶನ ಸ್ಫರ್ಧೆ

18-04-2024 ಬೆಂಗಳೂರು

ಕಲೆಗೆ ಗೌರವವನ್ನು ವ್ಯಕ್ತಪಡಿಸಲು ವಿಶ್ವ ಕಲಾ ದಿನವನ್ನು ಆಚರಿಸಲಾಗುತ್ತಿದೆ. ವಿಶ್ವ ಕಲಾ ದಿನವು ಸಮಾಜದಲ್ಲಿ ಕಲೆಯ ಪ್ರಾ...

ತನುಶ್ರೀ ಸಾಹಿತ್ಯ ವೇದಿಕೆಯಿಂದ ಕವಿಗೋಷ್ಠಿಗೆ ಕವನಗಳ ಆಹ್ವಾನ

16-04-2024 ಬೆಂಗಳೂರು

ಚಿತ್ರದುರ್ಗ: ತನುಶ್ರೀ ಸಾಹಿತ್ಯ, ಸಾಂಸ್ಕೃತಿಕ ಕಲಾ ವೇದಿಕೆಯಿಂದ ರಾಜ್ಯ ಮಟ್ಟದ ಕವಿಗೋಷ್ಠಿಗೆ ಕವನಗಳನ್ನು ಆಹ್ವಾನಿಸಲಾಗ...