ಮುಕ್ತ, ನಿರ್ಭೀತ ನಿಲುವಿನ ಕತೆಗಾರ ಕುಂಟಿನಿ


ಹಿರಿಯ ಪತ್ರಕರ್ತ, ಕತೆಗಾರ ಗೋಪಾಲಕೃಷ್ಣ ಕುಂಟಿನಿ ಕನ್ನಡ ಕತಾಲೋಕದಲ್ಲಿ ವಿಭಿನ್ನ ಅಸ್ಮಿತೆಯೊಂದನ್ನ ಕಟ್ಟಿಕೊಂಡಿದ್ದಾರೆ. ತಮ್ಮ ಮುಕ್ತ ನಿರ್ಭೀತ ನಿಲುವಿನ ಮೂಲಕ ಕತೆಗಳಲ್ಲಿಯೂ ತಾತ್ವಿಕ ಜಿಜ್ಞಾಸೆ ನಡೆಸುವ ಕುಂಟಿನಿ ಅವರ ಕತಾಲೋಕದ ಕುರಿತಾಗಿ ಮತ್ತೋರ್ವ ಪತ್ರಕರ್ತ, ಲೇಖಕ ಹರೀಶ್ ಕೇರ ಅವರು ಬರೆದ ವಿಶ್ಲೇಷಣೆ ಇಲ್ಲಿದೆ.

ಕುಂಟಿನಿಯ ಕತೆಗಳನ್ನು ನಾನು ಎರಡು ದಶಕದಿಂದ ಓದುತ್ತ ಬಂದಿದ್ದೇನೆ. ಪ್ರತಿ ಐದು ವರ್ಷಕ್ಕೊಮ್ಮೆ ಅವರು ತಮ್ಮ ಕತೆಗಾರಿಕೆಯ ಶೈಲಿಯನ್ನು ಬದಲಿಸುತ್ತಾರೆ; ವಸ್ತುಗಳೂ ಅಷ್ಟೆ. ಆದರೆ ಅವುಗಳ ಹೃದಯದಲ್ಲಿ ಒಂದು ಹರೆಯ ಇದ್ದೇ ಇದೆ. ಮತ್ತೆ ಕುಂಟಿನಿಯಲ್ಲಿ ಒಂದು ಧಾಡಸಿತನವಿದೆ. ಅವರು ಕತೆಯನ್ನು ಓದಿ ಎಂದು ಯಾವ ವಿಮರ್ಶಕನಿಗೂ ದುಂಬಾಲು ಬೀಳುವುದಿಲ್ಲ. ಕನ್ನಡ ಕತಾಲೋಕದಲ್ಲಿ ನನ್ನ ಕತೆಗಳು ಎಲ್ಲಿ ನಿಲ್ಲುತ್ತವೆ ಅಂತ ಯಾವತ್ತೂ ಯೋಚಿಸುವುದಿಲ್ಲ. ಆಯಾ ಕಾಲದ ಜನಪ್ರಿಯ ಸೈದ್ಧಾಂತಿಕ ನಿಲುವುಗಳಿಗೆ ಅಂಟಿಕೊಳ್ಳುವುದಿಲ್ಲ. ಕತೆಗಾರನ ಮುಕ್ತ ನಿರ್ಭೀತ ನಿಲುವಿಗೆ ಇದೆಲ್ಲ ಅಗತ್ಯ. ಕುಂಟಿನಿಯ ಕತೆಗಳು ನನಗೆ ಈ ಕಾಲದ್ದೇ ಆದರೂ ಈ ಕಾಲದ್ದಲ್ಲ ಅಂತಲೇ ಅನ್ನಿಸುತ್ತಿರುತ್ತದೆ. ಅವರ ಕತೆಗಳನ್ನು ಓದುವಾಗ ಕೆಲವೊಮ್ಮೆ ನಾನು ಜಲಾಲುದ್ದೀನ್‌ ರೂಮಿಯ ಕತೆಗಳನ್ನು, ಸೂಫಿ- ಝೆನ್‌ ಕತೆಗಳನ್ನು, ವಡ್ಡಾರಾಧನೆ- ಶುಕಸಪ್ತತೀ ಮುಂತಾದ ಕಥಾಗುಚ್ಛಗಳನ್ನೂ ನೆನಪಿಸಿಕೊಳ್ಳುತ್ತಿರುತ್ತೇನೆ. ಕುಂಟಿನಿಯ ಕತೆಗಳು ಹೀಗೆ ನನ್ನನ್ನು ಕಾಲಯಂತ್ರದಲ್ಲಿ ಹಿಂದಕ್ಕೂ ಮುಂದಕ್ಕೂ ಜೀಕುವಂತೆ ಮಾಡುತ್ತವೆ.

ಅವರ ಇತ್ತೀಚಿನ ಕತೆಗಳಲ್ಲಿ ಪಾತ್ರಗಳಿಗೆ ಹೆಸರು ಇರುವುದು ಕಡಿಮೆ. ಇದು ಅಲ್ಲಿ ಅವನು, ಇವನು, ಇವಳು, ರಾಜ, ರಾಣಿ, ಮಂತ್ರಿ ಇತ್ಯಾದಿಗಳೆಲ್ಲ ಇರುತ್ತಾರೆ. ಇವರೆಲ್ಲ ಯಾವ ಕಾಲಕ್ಕೂ ಎಲ್ಲೆಲ್ಲೂ ಇರುವವರೇ ಆದುದರಿಂದ ಇದು ಎಲ್ಲ ಕಾಲದ ಕತೆಗಳು. ಹಾಗೇ ಇವರೆಲ್ಲ ನಮ್ಮ ನಿಮ್ಮಲ್ಲೂ ಇರುವುದರಿಂದ ಇವು ನಮ್ಮ ನಿಮ್ಮ ಕತೆಗಳೂ ಹೌದು.

ಉದಾಹರಣೆಗೆ ಅವರ ‘ನಿಜದ ರಾಜ’ ಕತೆಯನ್ನು ನೋಡಬಹುದು. ಇಲ್ಲಿ ರಾಜನೊಬ್ಬ ಅಡಗೂಲಜ್ಜಿಯ ಮನೆ ಹೊಕ್ಕು ಸಾಮಾನ್ಯನಾಗುತ್ತಾನೆ; ಠಕ್ಕನೊಬ್ಬ ರಾಜನಾಗಿಬಿಡುತ್ತಾನೆ. ಇದು ಅವರ ಕತೆಗಾರಿಕೆಯ ಪ್ರತಿಭೆ ಮತ್ತು ಕಸುಬುದಾರಿಕೆಯ ಎಲ್ಲ ಸೂಕ್ಷ್ಮಗಳನ್ನು ಕಾಣಿಸುವಂಥ ಒಂದು ಕತೆ. ಅಪರಿಚಿತವೆನಿಸುವ ಕಾಲದೇಶಗಳ ಮೂಲಕ ಪರಿಚಿತವೆನಿಸುವ ಮನೋಲೋಕಕ್ಕೆ ಸುರಂಗ ಕೊರೆಯುವುದು; ಕಣ್ಣಮುಂದೆಯೇ ಓಡುತ್ತಿದೆ ಎಂದೆನಿಸುವಷ್ಟು ತೀವ್ರಗತಿಯ ಕಥನ; ಹಲವಾರು ಅಂಶಗಳನ್ನು ಓದುಗನ ಊಹೆಗೇ ಬಿಡುವ, ಓದುಗನ ಸಹೃದಯತೆಯ ಮೇಲೆ ಅತೀವ ನಂಬಿಕೆ, ಅಸಂಗತ ಹಾಗೂ ಫ್ಯಾಂಟಸಿಗಳ ಮೊರೆ ಹೊಗುವುದರಲ್ಲಿ ಅಂಜಿಕೆಯಿಲ್ಲದಿರುವಿಕೆ; ವಸ್ತುವಿನ ಜತೆಗೆ ಶೈಲಿಯ ಬಗೆಗೂ ಅತೀವ ಶ್ರದ್ಧೆ- ಇಂಥ ಕೆಲವನ್ನು ಇಲ್ಲಿ ಹೆಸರಿಸಬಹುದು.

ಅದರೆ ಇದೆಲ್ಲದರಷ್ಟೇ ಮುಖ್ಯವಾಗಿ ಅವರು ಕತೆಯ ಮೂಲಕ ಎತ್ತಲು ಬಯಸುವ ತಾತ್ವಿಕ ಜಿಜ್ಞಾಸೆಯೂ ಮಹತ್ತರವಾದ್ದು. ಅದು ಈ ಕತೆಯಲ್ಲಿದೆ. ಇಲ್ಲಿ ಬರುವ ಅಡಗೂಲಜ್ಜಿ ಸಾಮಾನ್ಯಳಲ್ಲ; ಅವಳು ಅನ್ನದ ಧರ್ಮ ಮತ್ತು ರಾಜಧರ್ಮದ ಬಗ್ಗೆ ಜಿಜ್ಞಾಸೆ ನಡೆಸುವಷ್ಟು ಜ್ಞಾನಿ. ಈ ರಾಜನ ರಾಜ್ಯ ಒಂದು ಬಗೆಯಲ್ಲಿ ಆದರ್ಶವಾದದ್ದು; ಯಾಕೆಂದರೆ ಇಲ್ಲಿ ರಾಜನನ್ನು ನೋಡುವ ಅಗತ್ಯವೇ ಪ್ರಜೆಗಳಿಗಿಲ್ಲ. ಎಲ್ಲ ಅದರಷ್ಟಕ್ಕೇ ಚೆನ್ನಾಗಿ ನಡೆದುಕೊಂಡು ಹೋಗುತ್ತಿದೆ. ಆದರ್ಶ ರಾಜ್ಯದಲ್ಲಿ, ಮೌಲ್ಯಗಳೇ ಬದುಕನ್ನು ನಡೆಸಿಕೊಂಡು ಹೋಗುತ್ತಿದ್ದರೆ ರಾಜನ ಅಗತ್ಯವೂ ಬೀಳದು. ಆಗ ರಾಜನೂ ಅಪ್ರಸ್ತುತನಾಗುವುದು ಸಾಧ್ಯ. ಇಂಥ ಕಡೆ ನಡೆಯುವ ಸರಣಿ ಅಸಂಗತ ಘಟನೆಗಳಿಂದಾಗಿ ರಾಜನು ಪ್ರಜೆಯಾಗುತ್ತಾನೆ; ಪ್ರಜೆಯು ರಾಜನಾಗುತ್ತಾನೆ. ಇದೆಲ್ಲವನ್ನು ಕಾಲಕಾಲದಿಂದಲೂ, ಕಾಲದ ಸ್ವರೂಪವೇ ಎಂಬಂತೆ ಇಲ್ಲಿರುವ ಅಡಗೂಲಜ್ಜಿಯು ನೋಡುತ್ತಿರುತ್ತಾಳೆ. ತಾನು ರಾಜನಾಗಿ ಕಾಲದ ಯಾವುದೋ ಒಂದು ಕ್ಷಣಕ್ಕಷ್ಟೇ ಬಾಧ್ಯನಾದವನು ಎಂಬ ಜ್ಞಾನೋದಯ ಆತನಿಗೆ ಆಗುವುದು ಅಡಗೂಲಜ್ಜಿಯ ಮನೆಯಲ್ಲಿ ಆಗುವ ವಿಲಕ್ಷಣ ಪ್ರಕರಣದಿಂದ. ಸಾರ್ವಭೌಮನಿಗೆ ಯಾವತ್ತಾದರೂ ಜ್ಞಾನೋದಯ ಆಗಬಹುದು; ಆದರೆ ಪ್ರಭುತ್ವಕ್ಕೆ ಯಾವತ್ತೂ ಜ್ಞಾನೋದಯದ ಭಾಗ್ಯವಿಲ್ಲ. ರಾಜ ಕ್ಷಣಿಕ ಸತ್ಯ; ಪ್ರಭುತ್ವ ನಿರಂತರ ಸತ್ಯ. ಒಳ್ಳೆಯ ಪ್ರಭುತ್ವ ನಿಜಕ್ಕೂ ಇರುವುದೇ, ಇದಕ್ಕೆ ಅದಕ್ಕೆ ಕೊನೆಗೂ ದಕ್ಕುವ ಫಲ ಯಾವುದು, ಜನತೆಯ ಮನದಲ್ಲಿ ಒಂದು ಪ್ರಭುತ್ವವನ್ನು ಸ್ಥಾಯಿಯಾಗಿ ನಿಲ್ಲಿಸುವ ಗುಣ ಯಾವುದು- ಇಂಥವೆಲ್ಲ ಜಿಜ್ಞಾಸೆಗಳನ್ನು ಕುಂಟಿನಿ ಜಟಿಲ ಚರ್ಚೆಯ ಮೊರೆ ಹೋಗದೆ ತಮ್ಮ ನಿರೂಪಣೆಯ ಮೂಲಕವೇ ಎತ್ತುತ್ತಾರೆ. ಅವರ ಗದ್ಯದ ಜಟಿಲವಲ್ಲದ ಸರಳ ಪದಗಳ ಮೋಹಕ ವಿಲಾಸದಲ್ಲಿ ಈ ಪ್ರಶ್ನೆಗಳನ್ನು ಓದುಗ ಮರೆತುಬಿಡುವುದೂ ಸಾಧ್ಯ. ಹೀಗೆ ಒಂದು ಇನ್ನೊಂದಾಗುವ, ಒಬ್ಬ ಇನ್ನೊಬ್ಬನಾಗುವ, ಒಬ್ಬರಿನ್ನೊಬ್ಬರಲ್ಲಿ ಬೆರೆತುಬಿಡುವ, ಇದೇನು ಉಪನಿಷತ್ತಿನ ಕತೆಯೇ ಎಂಬಂತೆ ಭಾಸವಾಗುವ ಹಲವು ಕತೆಗಳನ್ನು ಕುಂಟಿನಿ ಬರೆದಿದ್ದಾರೆ.

ಇನ್ನೊಂದು ಕತೆಯಲ್ಲಿ, ರಾಜ ಗೆಲುವೆಂಬ ಹಕ್ಕಿಯ ಹಿಂದೆ ಬಿದ್ದಿದ್ದಾನೆ. ಗೆಲ್ಲುತ್ತ ಹೋಗುತ್ತಾನೆ. ಆದರೆ ಯಾವ ಗೆಲುವೂ ಅವನಿಗೆ ಪೂರ್ತಿ ದಕ್ಕದು. ಅವನು ಗೆಲ್ಲಬೇಕಾದುದು ಅಂತಃಪುರದಲ್ಲೇ ಇದೆ. ಆದರೆ ಅವನಿಗದು ಗೊತ್ತಿಲ್ಲ. ಅವನು ಊರಿಗೆ ಮರಳಿದರೂ ಮರಳಿದಂತಲ್ಲ. ರಾಣಿ, ಮಾತುಗಾರನೆಂಬ ಹಕ್ಕಿಯ ಹಿಂದೆ ಬಿದ್ದಿದ್ದಾಳೆ. ಆತ ದಕ್ಕಿಯೂ ದಕ್ಕದಂತೆ ನುಣುಚಿದ್ದಾನೆ. ಅವನಿಗೂ ಬೇರೊಂದು ಹಕ್ಕಿಯ ಇರಾದೆ ಇರುವಂತಿದೆ. ಕೈಯಲ್ಲಿರುವ ರಾಣಿಯೆಂಬ ಹಕ್ಕಿಯನ್ನು ಬಿಟ್ಟು ಅವನು ಇನ್ಯಾವುದೋ ಹಕ್ಕಿಯ ಹುಡುಕಾಟದಲ್ಲಿ ಸಾಗಿದ್ದಾನೆ. ಹೀಗೆ ರಾಜ, ರಾಣಿ, ಮಾತುಗಾರ- ಮೂವರೂ ತಮಗೆ ದಕ್ಕದ ಹಕ್ಕಿಗಳ ಹಿಂದೆ ಬಿದ್ದಿದ್ದಾರೆ ಎಂಬಲ್ಲಿಗೆ ಈ ವಿಷಾದವರ್ತುಲ ಪೂರ್ಣವಾಗಿದೆ. ‘ಆ ಹಕ್ಕಿ ಬೇಕಾದರೆ’ ಎಂಬ ಏಕೆಆರ್‌ ಕವಿತೆಯೊಂದು ನೆನಪಾಗುತ್ತದೆ.

ಕುಂಟಿನಿ ಹಲವು ಪ್ರಣಯಕತೆಗಳನ್ನು ಬರೆದಿದ್ದಾರೆ. ಆದರೆ ಎಲ್ಲವೂ ಅಪೂರ್ಣ ಪ್ರಣಯ ಕತೆಗಳು ಎಂದು ನನಗೆ ಅನಿಸಿದೆ. ಇಲ್ಲಿ ಪರಿಪೂರ್ಣ ಪ್ರಣಯವೇ ಮೂರ್ತಿಭವಿಸಿದಂಥ ಚೆಲುವೆಯನ್ನು ಹುಡುಕುತ್ತಿರುವ ಚೆಲುವ, ಅಂಥ ಚೆಲುವನ್ನು ಹುಡುಕುತ್ತಿರುವ ಚೆಲುವೆ- ಬರುತ್ತಾರೆ. ಆದರೆ ಅಂಥವರು ಸಿಕ್ಕಿದರೂ ನಿವಾಳಿಸಿ ಮುಂದುವರಿಯುತ್ತಾರೆ. ಹೀಗೆ ಕುಂಟಿನಿಗೆ ಪ್ರಣಯವೂ ಒಂದು ತುಂಬದ ಕೊಡ.

ಕನ್ನಡದ ಬೇರೆ ಕತೆಗಾರರ ಹಾಗಲ್ಲ ಕುಂಟಿನಿ. ಅವರ ಮೇಲೆ ಬಹುಶಃ ಯಾರ ಪ್ರಭಾವವೂ ಇಲ್ಲ. ಅವರ ಕತೆಗಳು ಇನ್ಯಾರ ಕತೆಗಳನ್ನೂ ಕಾದಂಬರಿಗಳನ್ನೂ ಹೋಲುವುದಿಲ್ಲ. ಅವರಲ್ಲಿ ಒಂದು ಮಾರ್ಕೆಸ್‌ನ ನೂರು ವರ್ಷದ ಏಕಾಂತದಂಥ ಮಾಯಾವಾಸ್ತವದ ಕಾದಂಬರಿ ಇದೆ ಎಂದು ನನಗೆ ಅನಿಸುತ್ತಿರುತ್ತದೆ. ಆದರೆ ಅವರ ಕತೆಗಳೂ ಒಂದು ಬಗೆಯ ಸ್ವಪ್ನವಾಸ್ತವದಲ್ಲಿ ನಡೆಯುತ್ತಿರುತ್ತವೆ. ಅಲ್ಲಿ ಪಂಚತಂತ್ರದ, ಚಂದಮಾಮದ, ಶುಕಸಪ್ತತಿಯ ಕತೆಗಳೆಲ್ಲಾ ಮಿಶ್ರಗೊಂಡು ಹೊಸತೇ ಆದ ಒಂದು ಸ್ವರೂಪದಲ್ಲಿ ಕಾಣಿಸಿಕೊಳ್ಳುತ್ತಿವೆ. ಅವರ ಪಾತ್ರಗಳು ಇದ್ದಕ್ಕಿದ್ದಂತೆ ದ್ರಷ್ಟಾರರ ಶೈಲಿಯಲ್ಲಿ ಮಾತನಾಡುತ್ತವೆ. ಇದ್ದಕ್ಕಿದ್ದಂತೆ ದಿಗಂತದಾಚೆಗೆ ಏನೋ ಮಿಂಚಿದಂತೆ ನಡೆದುಕೊಳ್ಳುತ್ತವೆ. ಆ ಮಿಂಚು ಓದುಗನಲ್ಲೂ ಸಂಚರಿಸುವಂತೆ ಅವರು ನೋಡಿಕೊಳ್ಳುತ್ತಾರೆ. ಅವರ ಕತೆಗಳು ಪರಿವರ್ತನಶೀಲ. ಅವರ ಹಳೆಯ ಕತೆಗಳಿಗೂ ಈಗಿನದಕ್ಕೂ ಅರ್ಥಾರ್ಥ ಸಂಬಂಧವೇ ಇಲ್ಲ. ಹೀಗಾಗಿ ಅವರ ಮುಂದಿನ ಕತೆಗಳ ಬಗ್ಗೆ ನನಗೆ ಸದಾ ಕುತೂಹಲ.

MORE FEATURES

ಸಾಮಾನ್ಯರ ಹಲವು ಪ್ರಶ್ನೆಗಳಿಗೆ ಇದರಲ್ಲಿ ಉತ್ತರವಿದೆ

25-04-2024 ಬೆಂಗಳೂರು

"ಓದುವ ಗುಣವನ್ನು ಕಳೆದುಕೊಂಡಿರುವ ನಮ್ಮ ನಾಗರಿಕರು ನಿಜಾರ್ಥದಲ್ಲಿ ಸತ್ಯ ಬೇಕಾದರೆ ಈ ಪುಸ್ತಕವನ್ನು ಓದಬೇಕು. ಮುಂದ...

ಬೆಟ್ಟ ಹತ್ತುವುದೆಂದರೆ ಕೇವಲ ಚಾರಣವಲ್ಲ, ಅದೊಂದು ಬದುಕಿನ ಪಯಣ

25-04-2024 ಬೆಂಗಳೂರು

"ಬೆಟ್ಟ ಹತ್ತುವುದೆಂದರೆ ಕೇವಲ ಚಾರಣವಲ್ಲ. ಅದೊಂದು ಬದುಕಿನ ಪಯಣ. ಪ್ರತಿ ಕ್ಷಣ ಎದಿರಾಗುವ ಅಪಾಯಗಳನ್ನು ಸಲೀಸಾಗಿ ಗ...

ನನ್ನ ಪತಿಯ ಪ್ರೋತ್ಸಾಹದಿಂದ ನನಗೆ ಬರೆಯುವ ಗೀಳು ಬಂತು

25-04-2024 ಬೆಂಗಳೂರು

‘ನನ್ನ ಪತಿಯ ಪ್ರೋತ್ಸಾಹದಿಂದ ನನಗೆ ಬರೆಯುವ ಗೀಳು ಬಂತು. ಹಾಗಾಗಿ, ಕೆಲವೊಂದು ಪುಸ್ತಕಗಳನ್ನು ಬರೆದಿದ್ದೇನೆ. 202...