ಮೂಲಭೂತವಾದವನ್ನು ಜಿಕೆಜಿ ಅದರ ಎಲ್ಲ ಮೂರ್ತ ಅಮೂರ್ತ ರೂಪಗಳಲ್ಲಿ ವಿರೋಧಿಸಿದರು: ಎಂ.ಎಸ್. ಆಶಾದೇವಿ


‘ಜಿಕೆಜಿ ಸಾರ್ವಜನಿಕ ಬುದ್ಧಿಜೀವಿಯಾದವರು ಹೇಗಿರಬೇಕು ಎನ್ನುವುದರ ಬಗ್ಗೆ ಆಳವಾಗಿ ಯೋಚಿಸಿ, ತಮ್ಮದೇ ಆದ ನಿಲುವನ್ನೂ ಆ ಬಗ್ಗೆ ರೂಢಿಸಿಕೊಂಡಿದ್ದರು, ಅದಕ್ಕೆ ಕೊನೆಯವರೆಗೂ ಬದ್ಧವಾಗಿಯೇ ಬದುಕಿದರು’ ಎನ್ನುತ್ತಾರೆ ವಿಮರ್ಶಕಿ ಎಂ.ಎಸ್. ಆಶಾದೇವಿ. ಅಗಲಿದ ಮಹಾನ್ ಚೇತನ ಜಿ.ಕೆ.ಗೋವಿಂದರಾವ್ ಅವರ ಕುರಿತು ಆಶಾದೇವಿಯವರ ಮನದಾಳದ ಮಾತು ಇಲ್ಲಿವೆ.

ಜಿಕೆಜಿ ಸಾರ್ವಜನಿಕ ಬುದ್ಧಿಜೀವಿಯಾದವರು ಹೇಗಿರಬೇಕು ಎನ್ನುವುದರ ಬಗ್ಗೆ ಆಳವಾಗಿ ಯೋಚಿಸಿ, ತಮ್ಮದೇ ಆದ ನಿಲುವನ್ನೂ ಆ ಬಗ್ಗೆ ರೂಢಿಸಿಕೊಂಡಿದ್ದರು, ಅದಕ್ಕೆ ಕೊನೆಯವರೆಗೂ ಬದ್ಧವಾಗಿಯೇ ಬದುಕಿದರು. ಅವರ ವ್ಯಕ್ತಿತ್ವದ ಇತರ ಮೂಲಧಾತುಗಳಾದ ರಂಗಭೂಮಿ, ಸಾಹಿತ್ಯ , ಅಧ್ಯಾಪನ ಎಲ್ಲದರಲ್ಲಿಯೂ ಅವರು ಸಾಮಾಜಿಕ ಹೊಣೆಗಾರಿಕೆಯನ್ನೇ ಅಡಿಪಾಯವಾಗಿ ಮಾಡಿಕೊಂಡರು . ಆದ್ದರಿಂದಲೇ ಅವರು ಅಪರೂಪದ ವ್ಯಕ್ತಿ. ವ್ಯಕ್ತಿಗತವಾದ ಲಾಭ, ಸುರಕ್ಷತೆ, ಈ ಯಾವುದೂ ಅವರ ಆದ್ಯತೆಯಾಗಲೀ ಆಯ್ಕೆಯಾಗಲೀ ಆಗಲೇ ಇಲ್ಲ. ತಮ್ಮದು ತಪ್ಪೇನೋ ಎನಿಸಿದ ಕ್ಷಣ ಅವರು ಅದನ್ನು ಒಪ್ಪಿ, ಅದಕ್ಕೆ ಪ್ರಾಯಶ್ಚಿತ್ತ ಮಾಡಿಕೊಳ್ಳಬಲ್ಲಧೀರರಾಗಿದ್ದರು. ತಾವು ಅಭಿನಯಿಸಿದ ಯಾವುದೋ ಸಿನೆಮಾಡಬ್ಬಿಂಗ್ ಎಂದು ತಿಳಿದದ್ದೇ ಅವರು ಸಾರ್ವಜನಿಕವಾಗಿ, ಇದು ತಮಗೆ ತಿಳಿಯದೇ ಆದ ಅಪರಾಧ ಎಂದು ಒಪ್ಪಿದರು. ನನಗೆ ನೆನಪಿದ್ದಂತೆ, ಅವರು ಈ ಕಾರಣಕ್ಕಾಗಿ ಒಂದು ವರ್ಷದ ತನಕ ಸಿನೆಮಾಗಳಿಗೆ ಸಂಭಾವನೆ ತೆಗೆದುಕೊಳ್ಳದೇ ಇರುವುದೋ ಅಥವಾ ಮತ್ತಾವುದೋ ಒಂದು ನಿರ್ಧಾರವನ್ನು ತೆಗೆದುಕೊಂಡರು ಇದಕ್ಕೆ ಪ್ರಾಯಶ್ಚಿತ್ತವೋ ಎಂಬಂತೆ!

ಮೂಲಭೂತವಾದವನ್ನು ಜಿಕೆಜಿ ಅದರ ಎಲ್ಲ ಮೂರ್ತ ಅಮೂರ್ತ ರೂಪಗಳಲ್ಲಿ ವಿರೋಧಿಸಿದರು. ಅದು ಈ ದೇಶದ ನಿಜವಾದ ಶತ್ರು ಎನ್ನುವುದನ್ನು ಅರ್ಥ ಮಾಡಿಸಬಹುದಾದ ಎಲ್ಲ ದಾರಿಗಳಲ್ಲೂ ಜಿಕೆಜಿ ಪ್ರಯತ್ನಿಸಿದರು. ಅದಕ್ಕಾಗಿ ಎಂತೆಂತೆಹವರನ್ನೂ ಇವರು ಎದುರು ಹಾಕಿಕೊಂಡರು ನಿರ್ಭಯವಾಗಿ. ಪೇಜಾವರರನ್ನೂ ಒಳಗೊಂಡಂತೆ. ಹಾಗೆಯೇ ಅಘೋಷಿತ ಮನುವಾದಿಗಳನ್ನೂ ಅವರು ಕೆಣಕಿ ಅವರನ್ನು ಯುದ್ಧಕ್ಕೆ ಆಹ್ವಾನಿಸುತ್ತಿದ್ದರು. ಎಂತಹ ಸಾರ್ವಜನಿಕ ವಾಗ್ವಾದಕ್ಕೂ ಅವರು ತಯಾರಿರುತ್ತಿದ್ದರು. ಆದರೆ ಜಿಕೆಜಿ ಬಗೆಗೆ ನಮಗೆ ಗೌರವ ಹುಟ್ಟುವುದು ಅದಕ್ಕಾಗಿ ಅವರು ನಡೆಸುತ್ತಿದ್ದ ತಯಾರಿಗಳ ಕಾರಣಕ್ಕಾಗಿ. ಆಳವಾದ ಓದು, ಅಧ್ಯಯನ, ಸಮಾನ ಮನಸ್ಕರ ಜೊತೆಗಿನ ಚರ್ಚೆಗಳ ಮೂಲಕ ಅವರು ತಮ್ಮನ್ನು ತಾವು ಸಜ್ಜು ಮಾಡಿಕೊಂಡಿರುತ್ತಿದ್ದರು. ಆದ್ದರಿಂದಲೇ ಅವರಿಗೆ ಸದಾ ಪಂಥಾಹ್ವಾನದ ಮನಸ್ಥಿತಿಯಿರುತ್ತಿತ್ತು ಅನ್ನಿಸುತ್ತದೆ. ಇಷ್ಟೇ ಮುಖ್ಯವಾದ ಇನ್ನೊಂದು ಕಾರಣವೆಂದರೆ, ಭಾರತದ ಬಹುತ್ವವನ್ನು ಕುರಿತ ಅವರ ಗಾಢವಾದ ನಂಬಿಕೆ. ಬಹುತ್ವವನ್ನು ಎಲ್ಲರೂ ಸಕಾರಣವಾಗಿ ಒಪ್ಪುವಂತೆ ಮಾಡಬೇಕು ಎನ್ನುವುದು ಇವರಲ್ಲಿನ ಕುಂದದ ಉತ್ಸಾಹವಾಗಿತ್ತು. ಅದು ಇವರ ಜೀವನದ ಮಹತ್ ಗುರಿಯಾಗಿತ್ತು. ಈ ಉದ್ದೇಶದ ಸಲುವಾಗಿ ಅವರು ಎಷ್ಟು ಹೊತ್ತಿಗೆ, ಎಲ್ಲಿಗೆ ಬೇಕಾದರೂ ಹೋಗಬಲ್ಲವರಾಗಿದ್ದರು. ಸೆಕ್ಯುಲರ್ ಮತ್ತು ಸಹಿಷ್ಣು ಭಾರತದ ತಮ್ಮ ಕನಸನ್ನು ನನಸಾಗಿಸಿಕೊಳ್ಳುವುದು ಇವರ ಜೀವನದ ಪರಮ ಧ್ಯೇಯವಾಗಿತ್ತು.

ಅಲ್ಪಸಂಖ್ಯಾತರನ್ನು ಕುರಿತ ತಮ್ಮ ಒಲವನ್ನು ಅನೇಕ ಪ್ರಕಾರಗಳಲ್ಲಿ ವ್ಯಕ್ತಪಡಿಸುತ್ತಿದ್ದರು. ಭೈರಪ್ಪನವರ ಆವರಣ ಕಾದಂಬರಿ ಪ್ರಕಟವಾದಾಗ ಅದರ ಕೋಮುವಾದಿ ನಿಲುವುಗಳನ್ನು ವಿರೋಧಿಸಿ ಹಲವು ಲೇಖಕರನ್ನು ಬರೆಯಲು ಕೇಳಿ, ಅದನ್ನು ಒಂದು ಪುಸ್ತಕವಾಗಿ ಪ್ರಕಟಿಸಬೇಕೆಂದು ಹೊರಟಾಗ ಮೊದಲು ಜಿಕೆಜಿ ವಿರೋಧಿಸಿದರು. ಅವರ ವಾದವೆಂದರೆ, ಆ ಕೃತಿಗೆ ಅಷ್ಟಾದರೂ ಬೆಲೆಯನ್ನು ಯಾಕೆ ಕೊಡಬೇಕೆನ್ನುವುದು ಅವರ ವಾದವಾಗಿತ್ತು. ಆದರೆ ಎಲ್ಲರೂ ಮಾತನಾಡಿದ ಮೇಲೆ ನಮ್ಮ ವಾದವನ್ನು ಅವರು ಒಪ್ಪಿದರು ಮಾತ್ರವಲ್ಲ ನಮಗೆ ತಾವೊಂದು ಲೇಖನವನ್ನೂ ಕೊಟ್ಟದ್ದಲ್ಲದೆ ಆ ಕೃತಿ ಪ್ರಕಟವಾಗುವ ತನಕವೂ ನಮ್ಮ ಬೆನ್ನಿಗೆ ನಿಂತರು. ಮುಂದೆ ಯಾವುದೋ ಕಾರಣಕ್ಕಾಗಿ ಅವರಿಗೂ ಗೌರಿಗೂ ತುಸು ಭಿನ್ನಾಭಿಪ್ರಾಯ ಬಂತು. ಅದಾದ ಕೆಲವು ದಿನಗಳಲ್ಲೇ ಶಿವಮೊಗ್ಗದಲ್ಲಿ ಸಾಹಿತ್ಯ ಸಮ್ಮೇಳನ ಆಯಿತು ಗೌರಿಯನ್ನು ಒಂದು ಗೋಷ್ಠಿಗೆ ಕರೆದಿದ್ದರು. ಆದರೆ ಅವಳು ಬರಬಾರದೆಂದು ಬೆದರಿಕೆ ಕರೆಗಳು ಬರತೊಡಗಿದವು. ಜಿಕೆಜಿ ನನಗೆ ಫೋನ್ ಮಾಡಿ, ಅವಳಿಗೆ ಹುಷಾರಿಗಿರೋಕೆ ಹೇಳು, ನನಗೆ ನೀನು ವಿಷಯ ತಿಳಿಸ್ತಾನೇ ಇರಬೇಕು ಅಂತ ತಾಕೀತು ಮಾಡಿದ್ದರು. ಅವಳು ಶಿವಮೊಗ್ಗ ಬಿಟ್ಟು ಹೋಗುವ ತನಕವೂ ಅವರಿಗೆ ವಿಷಯ ಹೋಗುತ್ತಿತ್ತು. ಇದು ಅವರ ಅಂತಃಕರಣದ ಒಂದು ರೂಪಕ. ವ್ಯಕ್ತಿಗತವಾಗಿ ಅವರು ಅಪಾರ ಅಂತಃಕರುಣಿ. ಆದರೆ, ಜನಪರ ನಿಲುವುಗಳ ವಿಷಯ ಬಂದಾಗ ಅವರಷ್ಟು ನಿಷ್ಠುರಿಯೂ ಮತ್ತಾರೂ ಇರುತ್ತಿರಲಿಲ್ಲ. ಅದೇನು ವ್ಯಂಗ್ಯದ ಮಾತುಗಳು ಅವರ ಬಾಯಿಂದ ಬರುತ್ತಿದ್ದವು ಎಂದರೆ, ಆ ಮಾತುಗಳನ್ನು ಕೇಳುವುದೇ ಒಂದು ಅನುಭವವಾಗುತ್ತಿತ್ತು ! ಆ ದೈತ್ಯರು, ಆ ಮಹಾನುಭಾವರು, ...ಒಃಹೋಹೋ ಘನಮಾನವರು...ಲೋಕೋಪಕಾರಿಗಳು..ಹೀಗೆ ಪಟ್ಟಿ ಮುಂದುವರಿಯುತ್ತಿತ್ತು.

ಆದರೆ ಅವರದು ತೆರೆದ ಮನಸ್ಸೇ ಆಗಿರುತ್ತಿತ್ತು, ಜನಪರ ವಿಷಯಗಳು ಬಂದಾಗ. ಯಾರ ಮಾತನ್ನಾದರೂ ತಾಳ್ಮೆಯಿಂದ ಅವರು ಕೇಳುತ್ತಿದ್ದರು. ಅವಶ್ಯವಿದ್ದಲ್ಲಿ ತಮ್ಮ ಅಭಿಪ್ರಾಯಗಳನ್ನು ಅವರು ಬದಲಿಸಿಕೊಳ್ಳುತ್ತಿದ್ದರು. ಎಲ್ಲರ ಜೊತೆ ಚರ್ಚೆ ಮಾಡಿದ್ದಾದ ಮೇಲೆಯೇ ಅವರು ಬರವಣಿಗೆ ಮಾಡುತ್ತಿದ್ದುದ್ದು ಸಾಮಾನ್ಯವಾಗಿತ್ತು. ಅವರ ಕೊನೆಯ ಕೃತಿ ಗಾಂಧಿಯನು ಕುರಿತದ್ದು. ಅದಕ್ಕೂ ಅವರು ಅದೆಷ್ಟು ಅಭ್ಯಾಸ ಮಾಡಿದ್ದರು ಎನ್ನುವುದು ನನಗೆ ಗೊತ್ತು. ಅಕ್ಷರಶಃ ನೂರಾರು ಪುಸ್ತಕಗಳನ್ನು ಅವರು ಓದಿ ನೋಟ್ಸ್ ಮಾಡಿಕೊಂಡಿದ್ದರು. ಅದರಲ್ಲಿನ ಅವರ ವಿಚಾರಗಳ ಜೊತೆ ನನಗೆ ಭಿನ್ನಾಭಿಪ್ರಾಯವಿದ್ದರೂ ನನ್ನಿಂದಲೇ ಮುನ್ನುಡಿ ಬರೆಸಿದರು. ಇದು ಅವರ ವ್ಯಕ್ತಿತ್ವವನ್ನು ಸರಿಯಾಗಿ ಪರಿಚಯಿಸುತ್ತದೆ.

ನನ್ನನ್ನು ಸಾಕುಮಗಳೆಂದು ಘೋಷಿಸಿದ ಜಿಕೆಜಿ ಬಗ್ಗೆ ಬರೆಯಲು ನೂರಾರು ವಿಷಯಗಳಿವೆ, ಬರೆಯುವೆ ಇನ್ನೊಮ್ಮೆ...

MORE FEATURES

ಅಕ್ಷರಗಳ ಬ್ರಹ್ಮಾಂಡವ ಕಾಣಿಸಿದ ಅರಿವಿನ ಗುರು ‘ಗೀತಾ ವಸಂತ’

20-04-2024 ಬೆಂಗಳೂರು

“ಕಲ್ಪತರು ನಾಡಿನ ಹೆಮ್ಮೆಯ ಸಾಹಿತಿ” ಎಂಬ ಗೌರವ ಪಡೆದ ಡಾ. ಗೀತಾ ವಸಂತ ಮೂಲತಃ ಶಿರಸಿಯವರು. ಎಕ್ಕಂಬಿಯ ಕಾಡ...

ಇಲ್ಲಿ ಇರುವ ಎಲ್ಲರ ತಲೆಯೊಳಗೂ ಒಂದೊಂದು ಕತೆ ಇದೆ

19-04-2024 ಬೆಂಗಳೂರು

'ಹಲವರ ಬದುಕಿನ ಅಕ್ಷಯ ಅನುಭವಗಳಲ್ಲಿ ಕೆಲವು ಮಾತ್ರ ಇಲ್ಲಿ ಅಕ್ಷರವಾಗಿದೆ. ಇಲ್ಲಿ ಇರುವ ಎಲ್ಲರ ತಲೆಯೊಳಗೂ ಒಂದೊಂದು ...

ಓದಿದಷ್ಟೂ ವಾಚಕರ ಅಭಿರುಚಿಯನ್ನು ಕೆರಳಿಸುತ್ತ ಹೋಗುವ ಕೃತಿ ಪ್ರಕೃತಿಯ ನಿಗೂಢಗಳು

19-04-2024 ಬೆಂಗಳೂರು

‘ಇನ್ನೂ ಹೆಚ್ಚಿನ ಪ್ರಕೃತಿಯ ನಿಗೂಢಗಳನ್ನು ಮಲಗಿರುವ ಬುದ್ಧನ ಆಕೃತಿಯ ಬೆಟ್ಟಗಳು, ಗಂಡು ಹೆಣ್ಣಾಗುವ ಹೆಣ್ಣು ಗಂಡಾ...