ಮುಸುಕು ನುಡಿ ಮತ್ತು ಆಹಾರದಲ್ಲಿ ಹಾಲಾಹಲ  

Date: 19-12-2020

Location: .


ಆಹಾರವು ಪ್ರತಿ ದಿನದ ಜೀವದ್ರವ್ಯ. ಆದರೆ , ತಂತ್ರಜ್ಞಾನ-ವಿಜ್ಞಾನ,ದ ಆವಿಷ್ಕಾರಗಳು ನಡೆದಂತೆಲ್ಲ ದಿನನಿತ್ಯದ ಆಹಾರವು ಕಲುಷಿತಗೊಳ್ಳುತ್ತಿದೆ. ಇದಕ್ಕೆ ಪೂರಕವಾಗಿ ಜಾಗತಿಕ ಜಾಹೀರಾತಿನ ಕೊಡುಗೆ ಹೆಚ್ಚಿದ್ದು ಜಾಹೀರಾತಿನ ಆಹಾರ ಭಾಷೆ ಕುರಿತು ವಿಮರ್ಶಕ- ಲೇಖಕ ಡಾ. ರಂಗನಾಥ ಕಂಟನಕುಂಟೆ ಅವರು ತಮ್ಮ `ಮಾತಿನ ಮರೆ’ ಅಂಕಣದಲ್ಲಿ ಚರ್ಚಿಸಿದ್ದಾರೆ.

‘ಅಮೃತ’ದಲ್ಲಿಯೂ ಹಾಲಾಹಲ ಬೆರೆತಿರುವ ಕಾಲವಿದು ಅಥವಾ ‘ಹಾಲಾಹಲ’ವನ್ನೇ ಅಮೃತವೆಂದು ಮಾರುವ ಕಾಲವಿದು ಎನ್ನುವುದೇ ಸರಿಯೆನ್ನಿಸುತ್ತದೆ. ಯಾವ ‘ಹಂಸದೃಶ್ಟಿ’ ಗೂ ಇದನ್ನು ಶೋಧಿಸಿ ಕುಡಿಯಲಾಗದಷ್ಟು ಪ್ರಮಾಣದಲ್ಲಿ ಆಹಾರದಲ್ಲಿ ‘ಹಾಲಾಹಲ’ ಬೆರಕೆಯಾಗಿದೆ. ಇದು ಅಚಾನಕ್ಕಾಗಿ, ಕಣ್ತಪ್ಪಿನಿಂದ ಗೊತ್ತಿಲ್ಲದೆ ಸಂಭವಿಸುತ್ತಿರುವ ಅವಘಡವಲ್ಲ. ಬಹಳ ವ್ಯವಸ್ಥಿತವಾಗಿ ಮತ್ತು ಉದ್ದೇಶಪೂರಕವಾಗಿ ‘ಹಾಲಾಹಲ’ವನ್ನು ಆಹಾರದಲ್ಲಿ ಬೆರೆಸಲಾಗುತ್ತಿದೆ. ಹೀಗೆ ಬೆರೆಸಿರುವುದನ್ನು ‘ಆಹಾರೋದ್ಯಮ’ ಎಂದು ಕರೆಯಲಾಗುತ್ತದೆ. ಇದನ್ನು ನಾಗರಿಕತೆಯ, ಶ್ರೇಶ್ಟತೆಯ ಹೆಸರಿನಲ್ಲಿ ಮಾರಲಾಗುತ್ತದೆ. ಆದರೆ ಸ್ಥಳೀಯ ಮಟ್ಟದಿಂದ ಜಾಗತಿಕ ಮಟ್ಟದವರೆಗೆ ಬೆಳೆದಿರುವ ಈ ಉದ್ಯಮವು ‘ಅಮೃತದಲ್ಲಿ ಹಾಲಾಹಲವಿದೆ’ ಎಂದು ಯಾವತ್ತೂ ಹೇಳುವುದಿಲ್ಲ. ಬದಲಿಗೆ ‘ಹಾಲಾಹಲ’ದ ರುಚಿಗೆ ಜನರ ನಾಲಿಗೆಗಳನ್ನು, ಬದುಕನ್ನು ಸಿದ್ದಪಡಿಸಲಾಗುತ್ತಿದೆ. ಆ ಮೂಲಕ ಲಾಭದ ಮಹಲುಗಳನ್ನು ಕಟ್ಟಲಾಗುತ್ತಿದೆ.
ಈ ನಡುವೆ ಮನೆಗಳಲ್ಲಿ ಅಡಿಗೆ ಮಾಡಿ ತಿನ್ನುವುದು ಸಮಯ ಹಾನಿಯ ಕೆಲಸವೆಂದು ಭಾವಿಸುತ್ತಾ ಸಿದ್ಧ ಆಹಾರ ಪದಾರ್ಥಗಳನ್ನು ತಂದು ತಿನ್ನುವುದನ್ನು ಶೋಕಿಯನ್ನಾಗಿ ಬಿಂಬಿಸಲಾಗುತ್ತಿದೆ. ಜೀವನದ ಅತ್ಯಂತ ಮಹತ್ವದ ಕೌಶಲ ಅಡಿಗೆ ಮಾಡುವುದು. ಆದರೆ ಇಂದು ಜನರು ಅಂತಹ ಕೌಶಲಗಳಿಂದ ನಿಧಾನವಾಗಿ ದೂರ ಸರಿಯುತ್ತಿದ್ದಾರೆ. ಆಹಾರೋದ್ಯಮಗಳು ತಯಾರಿಸುವ ಪದಾರ್ಥಗಳ ಮೇಲೆ ಜನರ ಅವಲಂಬನೆ ಹೆಚ್ಚುತ್ತಿದೆ. ಜನರು ತಮ್ಮ ಆಹಾರದ ಸ್ವಾವಲಂಬನೆಯ ಸಾಧ್ಯತೆಗಳನ್ನು ಬಿಟ್ಟು ಕೊಡುತ್ತಿದ್ದಾರೆ. ಕಚ್ಚಾ ಆಹಾರ ಪದಾರ್ಥಗಳ ಉತ್ಪಾದನೆ ಮತ್ತು ಸಿದ್ಧ ಆಹಾರ ಪದಾರ್ಥಗಳ ಉತ್ಪಾದನೆಗಳೆರಡೂ ಉದ್ಯಮಿಗಳ ಪಾಲಾಗುತ್ತಿದೆ. ಇದು ಜನರನ್ನು ಇನ್ನಿಲ್ಲದಂತೆ ಹೀರಲು ಕ್ರೂರ ಅವಕಾಶವನ್ನೇ ಸೃಶ್ಟಿಸಿಕೊಳ್ಳುತ್ತಿದೆ. ಮೆಕ್ಡೊನಾಲ್ಡ್, ಡೊಮಿನೊಸ್‍ನಂತಹ ಸಿದ್ದ ಆಹಾರದ ಉತ್ಪನ್ನಗಳನ್ನು ಮಾರುವ ಉದ್ಯಮಗಳು ತಮ್ಮ ಪದಾರ್ಥಗಳಿಗೆ ಎಶ್ಟೆಶ್ಟು ಹಣವನ್ನು ಕೀಳುತ್ತಾರೆ ಎಂಬುದನ್ನು ಗಮನಿಸಿದರೆ ಇದು ತಿಳಿಯುತ್ತದೆ. ಇವುಗಳ ಆಹಾರದ ಗುಣಮಟ್ಟವನ್ನು ಖಚಿತಪಡಿಸುವವರು ಯಾರು? ಗುಣಮಟ್ಟವನ್ನು ಕಾಪಾಡಬೇಕಾದ ಸಂಸ್ಥೆಗಳ ಅಧಿಕಾರಿಗಳು ಉದ್ಯಮಗಳ ದಾಸರಾಗಿ ಬದಲಾಗಿರುವ ಹೊತ್ತಿನಲ್ಲಿ ಇದನ್ನು ನಿರೀಕ್ಶಿಸುವುದು ದುಬಾರಿ ಕನಸಾಗುತ್ತದೆ. ಇದು ಇಂದಿನ ಒಟ್ಟು ಜಗತ್ತಿನ ಆಹಾರ ಉದ್ಯಮದ ಸ್ಥಿತಿ. ಇರಲಿ. ಇಲ್ಲಿ ಯಾವ ಪದಾರ್ಥಗಳು ಎಶ್ಟೆಶ್ಟು ಕಲಬೆರಕೆಯಾಗಿದೆ ಎಂಬುದನ್ನು ವಿವರಿಸುವುದು ಈ ಬರೆಹದ ಉದ್ದೇಶವಲ್ಲ. ಬದಲಿಗೆ ಯಾವುದೇ ಆಹಾರ ಪದಾರ್ಥಗಳನ್ನು ಮಾರುವ ಹೊತ್ತಿನಲ್ಲಿ ಬಳಸುವ ಭಾಶೆ ಹೇಗೆ ಜನರನ್ನು ವಂಚಿಸುತ್ತಿದೆ? ಭಾಶೆ ಹೇಗೆ ಮುಸುಕನ್ನು ಧರಿಸಿದೆ? ಎಂಬುದನ್ನು ಅರಿಯುವ ಒಂದು ಚಿಕ್ಕ ಪ್ರಯತ್ನವಶ್ಟೇ.
ಸಾಮಾನ್ಯವಾಗಿ ಆಹಾರೋದ್ಯಮಿಗಳು ತಾವು ಮಾರುವ ಪದಾರ್ಥಗಳನ್ನು ಗುಣಮಟ್ಟ(ಕ್ವಾಲಿಟಿ), ‘ಶುದ್ಧತೆ’(ಪ್ಯೂರಿಟಿ), ಶ್ರೇಶ್ಟತೆ, ಪರಂಪರೆ ಮತ್ತು ರುಚಿಗಳ ಹೆಸರಿನಲ್ಲಿ ಮಾರುತ್ತಾರೆ. ವಿಶೇಶಣಗಳ ಮತ್ತು ಉತ್ಪ್ರೇಕ್ಶೆಯ ಭಾಶೆಯನ್ನು ಬಳಸಿ ವಾಣಿಜ್ಯ ಜಾಹೀರಾತುಗಳ ರೂಪದಲ್ಲಿ ತಮ್ಮ ಸರಕುಗಳ ಬಗೆಗೆ ವ್ಯಾಪಕ ಪ್ರಚಾರ ಮಾಡುತ್ತಾರೆ. ಇದನ್ನು ಜನರ ಮನಸ್ಸಿನ ಮೇಲೆ ಉದ್ಯಮಗಳು ನಡೆಸುವ ಸರ್ಜಿಕಲ್ ದಾಳಿ ಎಂದೇ ಕರೆಯಬಹುದು. ಯಾಕೆಂದರೆ ವಾಸ್ತವದಲ್ಲಿ ಉದ್ಯಮಗಳು ಮಾಡಿದ ಪ್ರಚಾರದ ಭಾಶೆಗೂ, ಸರಕುಗಳ ಗುಣಮಟ್ಟಕ್ಕೂ ಸಂಬಂಧವೇ ಇರುವುದಿಲ್ಲ. ಇಲ್ಲವೇ ತಮ್ಮ ಮಾತಿಗೆ ತಾವೇ ವಿರುದ್ಧವಾಗಿ ಉದ್ಯಮಗಳು ವರ್ತಿಸುತ್ತವೆ. ಜನರನ್ನು ನಂಬಿಸಿ ವಂಚಿಸುವ ಉದ್ದೇಶದಿಂದ ಮಾಧ್ಯಮಗಳ ಮೂಲಕ ಪ್ರಯತ್ನಿಸುತ್ತವೆ. ಅಂದರೆ ಉದ್ಯಮಗಳು ವ್ಯಾಪಾರೀ ಉದ್ದೇಶದಿಂದ ಮಾಡುವ ಪ್ರಚಾರದಲ್ಲಿ ಏನೂ ಮೋಸವಿದೆ ಎಂದು ಸಂಶಯಿಸುವ ಸನ್ನಿವೇಶ ಸೃಶ್ಟಿಯಾಗಿದೆ. ಅಲ್ಲಿ ಯಾವುದೂ ನಂಬಿಕೆಗೆ ಅರ್ಹವಲ್ಲ. ಆದರೆ ಅದನ್ನು ಸಂಶಯಿಸದೆ ನಂಬುವಂತೆ ನಿರಂತರವಾಗಿ ಒತ್ತಾಯಿಸಲಾಗುತ್ತದೆ. ಇಂತಹ ಒತ್ತಾಯಕ್ಕೆ ಬಳಕೆಯಾಗುವುದೇ ‘ಮುಸುಕಿನ ಭಾಶೆ’ಯಾಗಿರುತ್ತದೆ. ಇದಕ್ಕೆ ಕೆಲವು ಉದಾಹರಣೆಗಳನ್ನು ಇಲ್ಲಿ ಗಮನಿಸಬಹುದಾಗಿದೆ.

“Take a step with dabar honey and feel the difference.”

“Healthy is delicious- purity guaranteed” dabar honey

“Did you know your honey contains upto 30% added sugar?- zandu pure honey no added sugar”

“Natural energy booster”patanjali

“It’s the real thing”-coke

“Have a coke and a smile”

“Sign of good taste”-coke

“Open coke open happiness”

“Drink it and believe it, yeh dil maange more”-pepsi

“Pepsi, the choice of new generation”

“Sunpure-with natural vitamins”


ಮೇಲೆ ಉಲ್ಲೇಖಿಸಿರುವುದು ವಿವಿಧ ದೇಶೀಯ ಮತ್ತು ಬಹುರಾಶ್ಟ್ರೀಯ ಉದ್ಯಮಗಳ ಕೆಲವು ಜನಪ್ರಿಯ ಉತ್ಪನ್ನಗಳ ಪ್ರಚಾರದಲ್ಲಿ ಬಳಕೆಯಾಗಿರುವ ಟ್ಯಾಗ್‍ಲೈನ್ ಭಾಶೆ. ಇಲ್ಲಿ ಭಾಶೆಯನ್ನು ಬಹಳ ಬಿಗಿಯಾಗಿ ರೂಪಕಾತ್ಮಕವಾಗಿ ಪಂಚಿಂಗ್ ಆಗಿ ಬಳಸಿರುವುದನ್ನು ಕಾಣಬಹುದು. ಆದರೆ ಈ ಭಾಶೆಯೇ ಒಂದು ಮುಸುಕಿನ ನುಡಿ ಮತ್ತು ವಂಚನೆಯ ನುಡಿ ಎಂಬುದು ಗಮನಾರ್ಹ ಸಂಗತಿ.
ಯಾಕೆಂದರೆ ಇಂತಹ ಮುಸುಕಿನ ನುಡಿಯನ್ನು ಜನರು ‘ಮುಗ್ಧ’ವಾಗಿ ನಂಬುತ್ತಾರೆ. ಆದರೆ ವಾಣಿಜ್ಯದ ಉದ್ದೇಶವುಳ್ಳ ಜಾಹೀರಾತುಗಳಲ್ಲಿ ಬಳಕೆಯಾಗುವ ಭಾಶೆ ಸತ್ಯವನ್ನು ಮರೆಮಾಚುವ ನಾಜೂಕಿನಿಂದ ಸುಳ್ಳನ್ನು ನಂಬಿಸುವ ಭಾಶೆಯಾಗಿರುತ್ತದೆ. ಈ ಭಾಶೆಯ ಬಗೆಗೆ ಜನರಿಗೆ ಎಚ್ಚರವೇ ಇರುವುದಿಲ್ಲ. ಉದ್ಯಮಗಳ ಜಾಹೀರಾತುಗಳದು ಮನೋದಾಳಿಯ ಭಾಶೆ. ಸಿಹಿಯೊಳಗೆ ‘ಕಹಿ’ ಇಲ್ಲವೇ ‘ನಂಜು’ ಬೆರೆಸಿ ತಿನ್ನಿಸಿದಂತೆಯೇ ಇರುತ್ತದೆ. ತಿಂದವರಿಗೆ ಸಿಹಿ ತಿನ್ನುತ್ತಿದ್ದೇವೆಂಬ ಭ್ರಮೆ ಇರುತ್ತದೆ. ಆದರೆ ತಿಂದದ್ದು ಮಾತ್ರ ‘ನಂಜು’ ಎಂಬುದು ಗಮನಕ್ಕೆ ಬರುವುದೇ ಇಲ್ಲ. ಅದು ಅರಿವಿಗೆ ಬರುವ ಹೊತ್ತಿಗೆ ಬದುಕಿನ ಅಂತಿಮ ಹಂತಕ್ಕೆ ಬಂದು ಮುಟ್ಟಿರುವುದೇ ಹೆಚ್ಚು. ಇಲ್ಲವೇ ‘ಹೇಗಿದ್ದರೂ ಒಂದು ದಿನ ಸಾಯುವುದೇ, ಏನೋ ಒಂದನ್ನು ತಿಂದು ಜೀವಿಸೋಣ’ ಎಂಬ ಧೋರಣೆಯಿರುತ್ತದೆ. ಅಂದರೆ ಅಂತಹ ನುಡಿಯಿಂದ ಜನರ ಒಟ್ಟು ಆಲೋಚನೆಯ ಕ್ರಮವೇ ಪಲ್ಲಟವಾಗಿರುತ್ತದೆ. ಈ ನಡುವೆ ಜನರಿಗೆ ‘ಶುದ್ಧ’ವಾದುದನ್ನು ಉಳಿಸದೆ ಅದನ್ನು ವ್ಯವಸ್ಥಿತವಾಗಿ ನಾಶ ಮಾಡಲಾಗಿರುತ್ತದೆ. ಹೀಗೆ ನಾಶ ಮಾಡುವುದಕ್ಕೆ ಬಳಕೆಯಾಗುವುದೇ ವಾಣಿಜ್ಯದ ಭಾಶೆ. ಈ ಬಗೆಗೆ ಹೆಚ್ಚು ಜನರು ತಲೆ ಕೆಡಿಸಿಕೊಳ್ಳುವುದೇ ಇಲ್ಲ. ಹೀಗಿದ್ದರೂ ಮೇಲೆ ಹೇಳಿದಂತೆ ಇಲ್ಲಿ ಎಲ್ಲವೂ ಉತ್ತಮ, ಶುದ್ಧ, ಆರೋಗ್ಯಕರ ಮತ್ತು ಶ್ರೇಷ್ಟತೆಯ ಹಾಗೂ ಹೊಸತನದ ಹೆಸರಿಲ್ಲಿನಲ್ಲಿಯೇ ಮಾರಾಟವಾಗುತ್ತಿರುತ್ತದೆ. ಆದರೆ ಯಾವುದೇ ವಸ್ತುವಿನ ಪ್ರಚಾರದಲ್ಲಿ ಬಳಕೆಯಾಗಿರುವ ನುಡಿಗೆ ವಿರುದ್ಧವಾಗಿ ವಸ್ತುಸ್ಥಿತಿ ಇರುತ್ತದೆ ಎಂಬಹುದು ಗಮನಿಬೇಕಾದ ಸಂಗತಿ. ಲಾಭಕ್ಕಾಗಿ ನಯವಾಗಿ ಜನರನ್ನು ಕೊಲ್ಲುವುದೂ ಇಲ್ಲಿ ಉತ್ತಮ ಕೆಲಸವೇ! ಆದರೆ ಅದನ್ನು ಕೊಲೆಯೆಂದು ಯಾರೂ ಕರೆಯುವುದಿಲ್ಲವಶ್ಟೇ.
ಮೇಲೆ ಉಲ್ಲೇಖಿಸಿದ ಜಾಹೀರಾತುಗಳ ಭಾಶೆಯನ್ನು ಇಲ್ಲಿ ಕೊಂಚ ವಿವರಿಸಿಕೊಳ್ಳಬಹುದು. ಮೊದಲಿಗೆ ಜೇನುತುಪ್ಪಕ್ಕೆ ಸಂಬಂಧಿಸಿದ ಡಾಬರ್, ಪತಂಜಲಿ ಮತ್ತು ಜಂಡು ಕಂಪನಿಗಳು ಮಾರುವ ಜೇನುತುಪ್ಪಕ್ಕೆ ಸಂಬಂಧಿಸಿದ ಜಾಹೀರಾತುಗಳಲ್ಲಿ ಬಳಸಿರುವ ಭಾಶೆಯನ್ನು ಗಮನಿಸಬೇಕಿದೆ. ಅವು ಶುದ್ಧತೆ, ನೈಸರ್ಗಿಕವಾದ ಮತ್ತು ಆರೋಗ್ಯದ ಹೆಸರಿನಲ್ಲಿ ಪ್ರಚಾರ ಮಾಡಿವೆ. ಆದರೆ ಇಡೀ ದೇಶದಲ್ಲಿ ಮಾರಾಟವಾಗುತ್ತಿರುವ ಜೇನುತುಪ್ಪದಲ್ಲಿ ಶೇ. 80 ರಶ್ಟು ಸಕ್ಕರೆ ಪಾಕ ಬೆರಕೆಯಾಗಿದೆ ಎಂಬುದನ್ನು ಸೆಂಟರ್ ಫಾರ್ ಸೈನ್ಸ್ ಅಂಡ್ ಎನ್ವಿರಾನ್ಮೆಂಟ್(ಸಿಎಸ್‍ಸಿ) ಎಂಬ ಸಂಶೋಧನಾ ಸಂಸ್ಥೆ ಈಚಗೆ ಬಹಿರಂಗಪಡಿಸಿದೆ. ಕಲಬೆರಕೆಯಲ್ಲಿ ಡಾಬರ್, ಪತಂಜಲಿ ಮತ್ತು ಜಂಡು ಕಂಪನಿಗಳ ಪದಾರ್ಥಗಳೂ ಸೇರಿವೆ ಎಂಬುದನ್ನು ವರದಿ ತಿಳಿಸಿದೆ. ಇವುಗಳಂತೆ ಭಾರತದಲ್ಲಿ ಬಳಕೆಯಲ್ಲಿರುವ ಎಲ್ಲ ಪ್ರಮುಖ ಕಂಪನಿಗಳು ಮಾರಾಟ ಮಾಡುತ್ತಿರುವ ಜೇನುತುಪ್ಪದ ಸ್ಯಾಂಪಲ್‌ಗಳನ್ನು ಪರೀಕ್ಶೆ ಮಾಡಿರುವುದಾಗಿ ಸಂಸ್ಥೆ ತಿಳಿಸಿದೆ. ಅದರಲ್ಲಿ ಎಲ್ಲ ಪ್ರಮುಖ ಕಂಪನಿಗಳ ಪದಾರ್ಥಗಳಲ್ಲಿ ಸಕ್ಕರೆಯ ಸಿರಫ್ ಬೆರಕೆಯಾಗಿರುವುದನ್ನು ಖಚಿತಪಡಿಸಿದೆ. ಇದು ಇದುವರೆಗೂ ಗಾಳಿಮಾತಿನಂತೆ ಕೇಳಿಬರುತ್ತಿದ್ದರೂ ಅದನ್ನು ಯಾವ ಸಂಶೋಧನೆಯೂ ಅಧಿಕೃತವಾಗಿ ದೃಢಪಡಿಸಿರಲಿಲ್ಲ. ಈಗ ಸಿಎಸ್ಸಿ ಸಂಸ್ಥೆ ದೇಶದಲ್ಲಿ ಮಾರಾಟವಾಗುತ್ತಿರುವ ಎಲ್ಲ ಪ್ರಮುಖ ಉದ್ಯಮಗಳ ಜೇನು ಉತ್ಪನ್ನಗಳೂ ಬೆರಕೆಯಾಗಿವೆ ಎಂಬುದನ್ನು ಖಚಿತಪಡಿಸಿದೆ. ಹಾಗೆಯೇ ಸನ್‍ಪ್ಯೂರ್, ಫಾರ್ಚೂನ್ ಸಂಸ್ಥೆಗಳು ಅಡಿಗೆ ಎಣ್ಣೆಯನ್ನು ಶುದ್ಧತೆಯ ಹೆಸರಿನಲ್ಲಿಯೇ ಮಾರುತ್ತಿವೆ. ಆದರೆ ಅವರು ಒಂದು ಕೆಜಿ ‘ಎಣ್ಣೆ’ಯನ್ನು ಇಂದು ನೂರು ರೂಪಾಯಿಗೆ ಮಾರುತ್ತಿದ್ದಾರೆ. ಆದರೆ ಯಾವುದೇ ಶುದ್ಧ ಎಣ್ಣೆಯನ್ನು ಇಂದು ನೂರು ರೂಪಾಯಿಗಳಿಗೆ ಮಾರಲು ಸಾಧ್ಯವೇ ಇಲ್ಲ. ಯಾವ ಯಾವುದೋ ರಾಸಾಯನಿಕ ಪದಾರ್ಥಗಳನ್ನು ಸೇರಿಸಿ ಕಲಬೆರಕೆ ಮಾಡಿ ‘ಶುದ್ಧತೆ’ ಹೆಸರಿನಲ್ಲಿ ಮಾರಾಟ ಮಾಡಿ ಜನರನ್ನು ವಂಚಿಸುತ್ತಿದ್ದಾರೆ. ಇದನ್ನು ಯಾರು ಬೇಕಾದರೂ ಪರಿಶೀಲಿಸಿ ನೋಡಬಹುದಾಗಿದೆ. ಅಂದರೆ ಬಹುತೇಕ ಕಂಪನಿಗಳು ಕಲಬೆರಕೆಯ ಪದಾರ್ಥಗಳನ್ನು ‘ಶುದ್ಧತೆ’ ಹೆಸರಿನಲ್ಲಿ ಮಾರುತ್ತಿರುವುದು ಇದರಿಂದ ತಿಳಿದು ಬರುತ್ತದೆ. ಇದು ಉದ್ಯಮಗಳು ಹೇಳುವ ಮಾತಿಗೂ ಅವು ನಡೆದುಕೊಳ್ಳುವ ರೀತಿಗೂ ಯಾವುದೇ ಸಂಬಂಧವಿಲ್ಲ ಎಂಬುದನ್ನು ಸಮರ್ಥಿಸುತ್ತದೆ. ನಡೆನುಡಿಗಳು ಇಲ್ಲಿ ಬೇರೆ ಬೇರೆಯಾಗಿರುವುದು ಗೋಚರಿಸುತ್ತದೆ. ಇಲ್ಲಿ ನುಡಿ ವಂಚಿಸಲು ಬಳಕೆಯಾಗುತ್ತಿರುವುದು ಗೊತ್ತಾಗುತ್ತದೆ. ಇಂತಹ ಇಬ್ಬಂದಿತನದಿಂದ ಭಾಶೆ ಭ್ರಶ್ಟಗೊಳ್ಳುತ್ತದೆ. ಕಲುಶಿತಗೊಳ್ಳುವ ಇಲ್ಲವೇ ಮಲಿನವಾಗುತ್ತದೆ. ಇಂತಹ ಕಲುಶಿತ ಭಾಶೆಯಿಂದ ರೂಪುಗೊಳ್ಳುವ ಜನಾಂಗಗಳು, ನಾಗರಿಕತೆಗಳು ಇಲ್ಲವೇ ವ್ಯಕ್ತಿಗಳು ಬಹಳ ಅಪಾಯಕಾರಿಗಳೂ ಆಗುವ ಸಾಧ್ಯತೆಗಳೇ ಹೆಚ್ಚು. ವಚನಕಾರರ ‘ಸೂಳ್ನುಡಿ’ಯ ಹುಡುಕಾಟದ ಮಹತ್ವವನ್ನು ಈ ಹಿನ್ನೆಲೆಯಲ್ಲಿಯೇ ಅರ್ಥ ಮಾಡಿಕೊಳ್ಳಬೇಕು.
ಇಲ್ಲಿ ಗಮನಿಸಬೇಕಾದ ಸಂಗತಿಯೆಂದರೆ, ಜೇನಿನಂತೆ ನುಡಿಯೂ ಸಮೂಹ ಸೃಶ್ಟಿ. ಅಸಂಖ್ಯ ದುಂಬಿಗಳೂ ನಾನಾ ಬಗೆಯ ಹೂವುಗಳ ಮಕರಂಧ ಹೀರಿ ಜೇನನ್ನು ಕೂಡಿ ಕಟ್ಟುತ್ತವೆ. ಅದರಂತೆಯೇ ಅಸಂಖ್ಯ ಜನರ ಕೂಡು ಅಭಿವ್ಯಕ್ತಿಯಾಗಿ ನುಡಿ ಸೃಶ್ಟಿಯಾಗಿರುತ್ತದೆ. ಅಂತಹ ನುಡಿ ಸವಿನುಡಿಯಾಗಿರಬಹುದು. ಇಲ್ಲವೇ ಅದರೊಳಗೆ ಜೇನಿನಂತೆ ನಂಜನ್ನೂ ಬೆರೆಸಿರಬಹುದು. ಅಂದರೆ ಜೇನನ್ನು ನಿಜದ ಜೇನಾಗಿಯೂ ಬಳಸಬಹುದು. ಇಲ್ಲವೇ ಅದರೊಳಗೆ ನಂಜು ಬೆರೆಸಿ ತಿನ್ನಿಸಬಹುದು. ನುಡಿಯನ್ನೂ ಜೇನಿನಂತೆಯೇ ಬಳಸಬಹುದು. ನುಡಿಯೊಳಗೆ ವಂಚನೆಯನ್ನು ಹುದುಗಿಸಿಟ್ಟಿರಬಹುದು. ಹೀಗೆ ಹುದುಗಿಸಿಟ್ಟಿರುವ ನಂಜಿನ ಮತ್ತು ವಂಚನೆಯ ಸಂಗತಿಗಳು ತಿಳಿಯದೇ ಹೋದರೆ ದುರಂತ ತಪ್ಪಿದ್ದಲ್ಲ.
ಇಲ್ಲಿನ ದುರಂತವೆಂದರೆ ನುಡಿಯಲ್ಲಿ ಹುದುಗಿಸಿರುವ ವಂಚನೆ ಮತ್ತು ನಂಜಿನ ವಿಚಾರಗಳು ಅರಿವಿಗೆ ಬಾರದಂತೆ ಜನರನ್ನು ನಿರಂತರ ಪ್ರಚಾರದ ದಾಳಿಯಿಂದ ಸಮ್ಮೋಹನಗೊಳಿಸಲಾಗುತ್ತದೆ. ಸದ್ಯ ಅಂತಹ ಸಮ್ಮೋಹನದ ಜಾಲದಲ್ಲಿ ಇಡೀ ದೇಶದ ಜನರು ಸಿಕ್ಕಿಕೊಂಡಿದ್ದಾರೆ. ಮತ್ತು ಅಂತಹ ಸಮ್ಮೋಹನನದ ಸ್ಥಿತಿಯೇ ನಾಗರಿಕತೆ, ಶ್ರೇಷ್ಟತೆ, ಸಾಮಾಜಿಕ ಅಂತಸ್ತಾಗಿಬಿಟ್ಟಿದೆ. ಅಂತಹ ಸಮ್ಮೋಹನದ ಮೂಲಕ ಇಡೀ ದೇಶಕ್ಕೆ ಮತ್ತು ತಮಗೆ ವಂಚಿಸಲಾಗುತ್ತಿದೆ ಎಂಬುದು ಜನರ ಅರಿವಿಗೆ ಬರುವುದೇ ಇಲ್ಲ. ಹಾಗೆ ಬರದಂತೆ ಮಾಡುವಲ್ಲಿ ಶಕ್ತಿಯುತವಾಗಿ ಬಳಕೆಯಾಗುವ ಅಸ್ತ್ರವೇ ಭಾಶೆ. ಈ ಭಾಶೆಯನ್ನು ಬಳಸಲು ತಮ್ಮದೇ ಆದ ಮಾಧ್ಯಮಗಳನ್ನು ಉದ್ಯಮಗಳು ಸ್ಥಾಪಿಸಿಕೊಂಡಿವೆ. ಅವುಗಳ ಮೂಲಕ ನಿರಂತರವಾಗಿ ದಾಳಿ ನಡೆಸುತ್ತವೆ. ಇದೊಂದು ಬಗೆಯಲ್ಲಿ ಜನರ ಮೇಲೆ ಉದ್ಯಮಗಳು ನಡೆಸುವ ಸರ್ಜಿಕಲ್ ದಾಳಿಯೇ ಆಗಿರುತ್ತದೆ. ಅದು ತನ್ನ ಮಾಂತ್ರಿಕ ಶಕ್ತಿಯಿಂದ ಜನರನ್ನು ಬಹಳ ಬೇಗ ಸಮ್ಮೋಹನದ ಜಾಲಕ್ಕೆ ಬೀಳುವಂತೆ ಮಾಡುತ್ತದೆ. ಅಂತಹ ಆಕರ್ಶಕ ಶಕ್ತಿ ಅದಕ್ಕಿದೆ. ಭಾಶೆಯ ಈ ಶಕ್ತಿಯನ್ನು ಉದ್ಯಮಗಳು ಸಮರ್ಥವಾಗಿ ಬಳಸಿಕೊಳ್ಳುತ್ತಿವೆ.
ಇಂತಹ ಸಮ್ಮೋಹನದ ಭಾಶೆಯನ್ನು ನಿತ್ಯವೂ ಕೇಳುವ ಜನರು ಅದರಿಂದ ಪ್ರಭಾವಿತರಾಗುವುದು ಸಹಜವಾಗಿದೆ. ಹಾಗಾಗಿಯೇ ರಾಜಕೀಯ ಪಕ್ಶಗಳು ಮತ್ತು ಉದ್ಯಮದಾರರು ತಮ್ಮ ಮಾರುಕಟ್ಟೆಯ ವಿಸ್ತರಣೆಗೆ ಜಾಹೀರಾತುಗಳನ್ನು ನೀಡುತ್ತಾರೆ. ಅಂತಹ ಜಾಹೀರಾತುಗಳಲ್ಲಿ ಭಾಶೆಯನ್ನು ಪರಿಣಾಮಕಾರಿಯಾಗಿ ಬಳಕೆಯಾಗಿರುತ್ತದೆ. ಇಲ್ಲಿ ಎರಡು ಬಗೆಯ ಭಾಶೆ ಬಳಕೆಯಾಗಿರುತ್ತದೆ. ಒಂದು ಅಕ್ಶರರೂಪಿ ಇಲ್ಲವೇ ಮೌಖಿಕ ನುಡಿ. ಮತ್ತೊಂದು ದೃಶ್ಯದ ಭಾಶೆ. ಇಲ್ಲಿ ಆಡುನುಡಿಗಿಂತಲೂ ಹೆಚ್ಚು ಪರಿಣಾಮಕಾರಿಯಾದುದು ದೃಶ್ಯಭಾಶೆ. ಜನರು ಓದುವುದಕ್ಕಿಂತ ಹೆಚ್ಚು ನೋಡುವುದಕ್ಕೆ ದೃಶ್ಯಕ್ಕೆ ಹೆಚ್ಚು ಮಹತ್ವ ನೀಡುತ್ತಾರೆ. ಹಾಗಾಗಿ ಜಾಹೀರಾತುಗಳಲ್ಲಿ ಅಕ್ಶರಗಳಿಗಿಂತ ಹೆಚ್ಚು ದೃಶ್ಯಭಾಶೆಗೆ ಆದ್ಯತೆ ನೀಡಿರುತ್ತಾರೆ. ಇದು ಯಾವುದೇ ವಾಣಿಜ್ಯ ಜಾಹೀರಾತುಗಳಲ್ಲಿ ಎದ್ದು ಕಾಣಿಸುವ ಅಂಶ. ಇಲ್ಲಿ ದೇಹ ಮತ್ತು ಇತರೆ ಇಮೇಜುಗಳಿಗೆ ಮಹತ್ವ ನೀಡಲಾಗುತ್ತದೆ. ಅಕ್ಶರಗಳಿಗೆ ನಂತರ ಸ್ಥಾನ ನೀಡಲಾಗುತ್ತದೆ. ಅಂದರೆ ಜನರು ಅಕ್ಶರಗಳಿಗಿಂತ ಹೆಚ್ಚು ದೃಶ್ಯಗಳಿಗೆ ಹೆಚ್ಚು ಮಹತ್ವ ನೀಡುತ್ತಾರೆ. ಅಲ್ಲದೆ ಓದುವವರು ಮತ್ತು ಓದಲು ಬಾರದವರಿಬ್ಬರಿಗೂ ದೃಶ್ಯಗಳು ಸುಲಭವಾಗಿ ಮತ್ತು ಸಮಾನವಾಗಿ ಸಂವಹನಗೊಳ್ಳುವ ಕಾರಣ ದೃಶ್ಯಭಾಶೆಗೆ ಹೆಚ್ಚು ಆದ್ಯತೆ ನೀಡಲಾಗಿರುತ್ತದೆ.
ಈ ಎಲ್ಲ ಕಸರತ್ತನ್ನು ನಡೆಸುವುದು ಜನರ ಮನಸ್ಸಿನ ಮೇಲೆ ಆಳವಾದ ಪರಿಣಾಮವನ್ನು ಬೀರಿ ಅವರ ಮನಸ್ಸನ್ನು ವಶಪಡಿಸಿಕೊಳ್ಳುವುದೇ ಆಗಿದೆ. ಒಮ್ಮೆ ವಶಪಡಿಸಿಕೊಂಡರೆ ಇಲ್ಲವೇ ಜನರ ಸ್ವಂತ ಆಲೋಚನೆ ಶಕ್ತಿಯನ್ನು ನಾಶ ಮಾಡಿದರೆ ನಂತರ ಜನರು ನಿರಂತರ ಮನೋದಾಸ್ಯದಲ್ಲಿರುತ್ತಾರೆ. ಮನೋದಾಸ್ಯಕ್ಕೆ ಒಳಪಡಿಸುವುದೇ ಎಲ್ಲ ಉದ್ಯಮಗಳ, ರಾಜಕೀಯ ಪಕ್ಶಗಳು ಹುನ್ನಾರವಾಗಿರುತ್ತದೆ. ಇದನ್ನು ಅರಿಯದೇ ಹೋದರೆ ನೈಜವಾದ ಸ್ವತಂತ್ರವನ್ನು ಮತ್ತು ‘ಆತ್ಮಶ್ರೀ’ಯನ್ನು ಸಾಧಿಸಲು ಸಾಧ್ಯವಿಲ್ಲ. ಹಾಗಾಗಿ ಮುಸುಕಿನ ನುಡಿಗಳ ಮರ್ಮವನ್ನು ಅರಿತು ಜನರು ಸ್ವತಂತ್ರರಾಗಬೇಕಿದೆ. ವಂಚನೆಯಿಂದ ಮುಕ್ತಗೊಳ್ಳಬೇಕಿದೆ.

ಈ ಅಂಕಣದ ಹಿಂದಿನ ಬರೆಹಗಳು

ಸುಳ್ಳಿನ ಕೈಗಾರಿಕೆಗಳಲ್ಲಿ ಅರಿವಿನ ಹತ್ಯೆ

ಟ್ರಂಪಣ್ಣನ ಅಮೆರಿಕದಲ್ಲಿ ಸುಳ್ಳುಗಳ ಸುನಾಮಿ!

ಕೇಳ್ವಿಯೆಂಬ ಕೂರಲಗು ಮತ್ತು ಪ್ರಭುತ್ವ

ಹೊಸ ಶಿಕ್ಶಣ ನೀತಿ ಮತ್ತು ತಾಯ್ನುಡಿ ಕಲಿಕೆ

MORE NEWS

ಪರಿಘಾಸನ ಮತ್ತು ಅರ್ಧ ಚಕ್ರಾಸನ 

16-04-2024 ಬೆಂಗಳೂರು

"ಪರಿಘಾಸನ ಆಸನವು ) ಪಿತ್ತ ಜನಕಾಂಗ ಮತ್ತು ಮೇದೋಜೀರಕ ಚೈತನ್ಯಗೊಳ್ಳುವಂತೆ ಮಾಡುತ್ತದೆ. ಹಾಗೆಯೇ ‘ಅರ್ಧ ಚಕ್...

ಲೋಕಸಭಾ ಚುನಾವಣೆಗಳ ಸುತ್ತಮುತ್ತ ಒಂದು ಸುತ್ತು

15-04-2024 ಬೆಂಗಳೂರು

"ಪರಸ್ಪರ ರೋಚಕ ನಿಂದನೆಗಳು. ಕ್ಷೇತ್ರವಾರು ಚಕ್ಕರಗುಳ್ಳಿ ಇಡುವ ಚತುರ ವಿವರಗಳು. ಹೊಸ ಹೊಸ ಬೈಗುಳಗಳು. ಮಾಧ್ಯಮಗಳಿಗ...

ಉಪವಿಷ್ಟಕೋನಾಸನ ಮತ್ತು ಪವನಮುಕ್ತಾಸನ

09-04-2024 ಬೆಂಗಳೂರು

"ಉಪವಿಷ್ಟಕೋನಾಸನ ಯೋಗಾಸನವು ಮನಸ್ಸನ್ನು ಶಾಂತಗೊಳಿಸುತ್ತದೆ ಮತ್ತು ಮಾಂಸಗಳ ತೂಕವನ್ನು ಕಡಿಮೆಗೊಳಿಸುತ್ತದೆ. ಪವನಮು...