ನಾದದ ಇಂಪು ಅಡುಗೆಯ ಕಂಪು- ರಾಗ ಎನ್ ಜೋಶ್

Date: 12-05-2021

Location: ಬೆಂಗಳೂರು


ಖ್ಯಾತ ಗಾಯಕಿ, ಲೇಖಕಿ ಹಾಗೂ ಕಿರಾನಾ ಘರಾನೆಯ ಗಾಯಕಿ ಶೀಲಾ ಧರ್ ಅವರ ಆತ್ಮಕಥೆ ‘ರಾಗ ಎನ್ ಜೋಶ್’. ಒಬ್ಬ ವ್ಯಕ್ತಿಯ ವೈಯಕ್ತಿಕ ಕತೆಯಾಗದೇ ಒಂದು ಕಾಲಘಟ್ಟದ ವಿದ್ವತ್ ಮತ್ತು ಸಂಗೀತಕ್ಷೇತ್ರದ ವಿವಿಧ ಮಜಲುಗಳನ್ನು ದಾಖಲಿಸಿರುವ ಈ ಕೃತಿಯ ಕುರಿತು ಲೇಖಕರಾದ ಶೈಲಜ ಹಾಗೂ ವೇಣುಗೋಪಾಲ್ ಅವರು ತಮ್ಮ 'ಸ್ಪರಲಿಪಿ' ಅಂಕಣದಲ್ಲಿ ವಿಶ್ಲೇಷಿಸಿದ್ದಾರೆ.

ಶೀಲಾ ಧರ್ ಕಿರಾನಾ ಘರಾನೆಯ ಗಾಯಕಿ ಮತ್ತು ನಮ್ಮ ನಡುವಿನ ಅಪರೂಪದ ಲೇಖಕಿ. ದೆಹಲಿ ವಿಶ್ವವಿದ್ಯಾನಿಲಯದಲ್ಲಿ ಆಂಗ್ಲಭಾಷೆ ಮತ್ತು ಸಾಹಿತ್ಯವನ್ನು ಬೋಧಿಸುತ್ತಿದ್ದರು. ನಂತರ ಸರ್ಕಾರದ ಪಬ್ಲಿಕೇಷನ್ ಡಿವಿಷನ್ನಿನಲ್ಲಿ ಸಂಪಾದಕರಾಗಿ ಕೆಲಸ ಮಾಡಿದರು. ಇಂದಿರಾ ಗಾಂಧಿಯವರಿಗೆ ಸಲಹೆಗಾರರಾಗಿದ್ದ ಅರ್ಥಶಾಸ್ತ್ರಜ್ಞ ಪಿ. ಎನ್. ಧರ್ ಅವರ ಪತ್ನಿ. ಈಗ ಕೆಲವು ವರ್ಷಗಳ ಹಿಂದೆ ಓದಿದ ಅವರ ಆತ್ಮಕಥೆ ‘ರಾಗ ಎನ್ ಜೋಶ್’ ತೀರಾ ವಿಶಿಷ್ಟವಾದ ಕೃತಿ. ಅದು ಸರಳ ರೇಖಾತ್ಮಕವಾಗಿ ಸಾಗದೆ ಅವರ ನೆನಪುಗಳ ಗಲ್ಲಿಗಳಲ್ಲಿ, ಅಡ್ಡರಸ್ತೆಗಳಲ್ಲಿ ಸಾಗುತ್ತಾ, ಎಲ್ಲಿಂದ ಎಲ್ಲಿಗೋ ನೆಗೆಯುತ್ತಾ, ನಾವು ನಿರೀಕ್ಷಿಸದೆಯೇ ಇರುವ ನೆನಪುಗಳನ್ನು ಬೆಸೆಯುತ್ತಾ, ತುಂಬಾ ವಿಚಿತ್ರವಾದ ಅನುಭವ ನೀಡಿ ಕಚಗುಳಿ ಇಡುತ್ತದೆ. ಅವರ ನೆನಪುಗಳು ಹೆಚ್ಚಿನ ಬಾರಿ ಸ್ವತಃ ಅವರ ಬಗ್ಗೆಯೇ ಅಲ್ಲ. ಅವರು ಅದಕ್ಕೆ ಕೇಂದ್ರವೇ ಆಗಿಲ್ಲ. ಅವರ ಪ್ರಜ್ಞೆ ಮಾತ್ರ ಅಲ್ಲಿ ಕೇಂದ್ರವಾಗಿದೆ. ಅವರು ತಮ್ಮ ನೆನಪುಗಳನ್ನು ಹೆಣೆದಿರುವ ರೀತಿಯೇ ಅನನ್ಯ.

ಅವರ ಆತ್ಮಕಥೆಯಲ್ಲಿ ಸಂಗೀತ, ಸಂಗೀತಗಾರರು, ದೊಡ್ಡ ಅಧಿಕಾರಿಗಳು, ಅವರ ಪತ್ನಿಯರು, ಹೀಗೆ ಒಂದಕ್ಕೊಂದು ಸಂಬಂಧವೇ ಇಲ್ಲದ ಹಲವು ಲೋಕಗಳು ನಮ್ಮ ಮುಂದೆ ತೆರೆದುಕೊಳ್ಳುತ್ತವೆ. ಅದೇ ಕಾರಣಕ್ಕೇ ಅದು ವಿಶಿಷ್ಟವಾಗಿಯೂ ಕಾಣುತ್ತದೆ. ಇದು ಸಂಗೀತವನ್ನು ಕುರಿತ ಒಂದು ಅಪರೂಪದ, ಸೊಗಸಾದ ಪುಸ್ತಕ. ಸ್ವತಃ ತಾವೇ ಸಂಗೀತ ಕಲಿಯಲು ಪಟ್ಟ ಪಾಡು, ಸಂಗೀತಗಾರರ ಸರಳತೆ, ಮುಗ್ಧತೆ, ಪೆದ್ದುತನ, ಅತಿಗಳು ಮತ್ತು ಅವುಗಳ ನಡುವೆಯೇ ರೂಪುಗೊಳ್ಳುವ ಅಗಾಧ ಸೃಜನಶೀಲತೆ, ಅವರ ಸಂಗೀತದ ರಸಾನುಭವಕ್ಕೂ ನಾಲಗೆಯ ರಸಾನುಭವಕ್ಕೂ ಇರುವ ಬಿಡಿಸಲಾಗದ ನಂಟು ಇವೆಲ್ಲವನ್ನೂ ಸೊಗಸಾದ ಭಾಷೆ, ಗಂಭೀರವಾದ ಒಳನೋಟಗಳು, ಸ್ವಲ್ಪವೂ ಕಹಿ ಮತ್ತು ತಿರಸ್ಕಾರಗಳಿಲ್ಲದ ಮಧುರಹಾಸ್ಯದ ಮೂಲಕ ಈ ಕೃತಿ ದಾಖಲಿಸುತ್ತದೆ. ಹಾಗಾಗಿ ಸಂಗೀತದ ಜೊತೆಗೇ ಪುಸ್ತಕದುದ್ದಕ್ಕೂ ಓದುಗರ ಅನುಭವಕ್ಕೆ ಬರುವ ಅಡುಗೆಯ ರುಚಿ, ಪರಿಮಳ, ಹದ, ಸೊಗಸು, ವೈವಿಧ್ಯತೆಯಂತೂ ಸರಿಸಾಟಿಯಿಲ್ಲದ್ದು. ಉಳಿದಂತೆ ಮೂರ್ಖರಾಗಿ, ದಡ್ಡರಾಗಿ, ಮುಗ್ಧರಾಗಿ ಕಾಣುವ ಸಂಗೀತಗಾರರು ತಮ್ಮ ಕ್ಷೇತ್ರವನ್ನು ಕುರಿತು ಮಾತನಾಡುವಾಗ, ಅನುಭವವನ್ನು ಹಂಚಿಕೊಳ್ಳುವಾಗ ಕಾಣುವ ಅವರ ಬೌದ್ಧಿಕತೆಯ ಆಳ ಎತ್ತರಗಳು ಬೆರಗು ಹುಟ್ಟಿಸುತ್ತದೆ. ಇಂತಹ ವೈರುಧ್ಯ ಸಾಧ್ಯವೇ ಎನಿಸುತ್ತದೆ. ಸಂಗೀತವನ್ನು ಕುರಿತ ಶೀಲಾ ಧರ್ ಬರವಣಿಗೆ ದೊಡ್ಡ ದೊಡ್ಡ ಭಾರವಾದ ಪದಗಳನ್ನು ಬಳಸದೆಯೇ ನಮ್ಮನ್ನು ಮುಟ್ಟುತ್ತದೆ ಮತ್ತು ನಮ್ಮ ಚಿಂತನೆಗೂ ಕಚಗುಳಿಯಿಡುತ್ತದೆ.

ಶೀಲಾ ಧರ್ ಸಂಗೀತವನ್ನು ಗ್ರಹಿಸಿಕೊಂಡ ರೀತಿಯೂ ಬೇರೆ. “ಸಂಗೀತ ಎನ್ನುವುದು ನಮ್ಮ ಬದುಕಿಗಿಂತ ಬೇರೆಯಾದುದಲ್ಲ. ಮತ್ತು ಇದರಿಂದ ಕಳಚಿಕೊಂಡು ಒಂದು ಶೂನ್ಯದಲ್ಲಿ ಆಗುವ ಪ್ರಕ್ರಿಯೆಯಲ್ಲ. ಅದು ಒಬ್ಬ ಕಲಾವಿದನ ಇಡೀ ಬದುಕಿನ ಎಲ್ಲಾ ಬಗೆಯ ಅನುಭವಗಳ ಒಂದು ಸಮಗ್ರ ಅಭಿವ್ಯಕ್ತಿ. ನನ್ನ ಬದುಕಿನ ಪ್ರತಿಯೊಂದು ರುಚಿ, ವಾಸನೆ, ಸ್ಪರ್ಶದ ಅನುಭವ ನನ್ನ ಸಂಗೀತದಲ್ಲಿದೆ. ನನ್ನೆಲ್ಲಾ ಭಾವನೆಗಳ ನಕ್ಷೆ ಅದರಲ್ಲಿದೆ. ಬಾಲ್ಯದಲ್ಲಿ ನನ್ನ ತಾತನ ಗಡ್ಡದ ಸ್ಪರ್ಶ, ಬಾಲ್ಯದಲ್ಲಿ ನಾವು ಆಟವಾಡುತ್ತಿದ್ದ ನೆಲಮಾಳಿಗೆಯ ಮುಗ್ಗುಲು ವಾಸನೆ, ನಮ್ಮ ಉಸ್ತಾದರ ಮನೆಯ ಅಡುಗೆಯ ಘಮ, ಹಸಿಮೆಣಸಿನಕಾಯಿ, ಮೆಣಸಿನ ವಾಸನೆ, ಸಿದ್ದೇಶ್ವರೀ ದೇವಿಯ ಸಂಗೀತ, ಅವರ ಹೊಟ್ಟೆಯೊಳಗಿನಿಂದ ಚಿಮ್ಮಿ ಬರುತ್ತಿದ್ದ ನಗೆಯ ಬುಗ್ಗೆ, ಮತ್ತೆ ಹಲವು ಸಂಗೀತಗಾರರ ವಿಚಿತ್ರ ತಿಕ್ಕಲುತನಗಳು, ಆ ತಿಕ್ಕಲುತನದ ಹಿಂದಿದ್ದ ಸರಳತೆ ಇವೆಲ್ಲವೂ ನನ್ನ ಸಂಗೀತದ ದೇಹ.”

ತಮ್ಮ ಆತ್ಮಕಥೆಯನ್ನು ಎರಡು ಭಾಗವಾಗಿ ಮಾಡಿ, ಅವುಗಳಿಗೆ ‘ನೋಡಿ, ನೀವಿವರನ್ನು ಭೇಟಿ ಮಾಡಲೇಬೇಕು,’ ‘ಸಂಗೀತವನ್ನು ಪಾಕ ಮಾಡುವುದು ಮತ್ತು ಇತರ ಪ್ರಬಂಧಗಳು’ ಎನ್ನುವ ಕುತೂಹಲಕರ ಶೀರ್ಷಿಕೆಗಳನ್ನು ನೀಡಿದ್ದಾರೆ. ಮೊದಲ ಭಾಗದಲ್ಲಿ ತಮ್ಮ ಬಾಲ್ಯ, ತಾವು ಒಡನಾಡಿದ ಸಂಗೀತಗಾರರು ಮತ್ತು ಇತರ ವ್ಯಕ್ತಿಗಳ ಬಗ್ಗೆ ತುಂಬಾ ಆಪ್ತವಾದ, ಸೂಕ್ಷ್ಮವಾದ ಚಿತ್ರಣ ನೀಡುತ್ತಾರೆ. ಇಡೀ ಬರವಣಿಗೆಯಲ್ಲಿ ಎದ್ದು ಕಾಣುವ ಅಂಶವೆಂದರೆ ಎಲ್ಲಾ ಬಗೆಯ ವಿಚಿತ್ರ ವ್ಯಕ್ತಿತ್ವಗಳನ್ನು ಅತ್ಯಂತ ಪ್ರೀತಿಯಿಂದ, ಯಾವುದೇ ಮೌಲ್ಯಗಳನ್ನು ಅವರ ಮೇಲೆ ಹೇರದೆ, ಸ್ವಲ್ಪವೂ ಜಡ್ಜ್‍ಮೆಂಟಲ್ ಆಗದೆ, ಅವರಿರುವಂತೆಯೇ ಅವರನ್ನು ಸ್ವೀಕರಿಸಿರುವುದು. ಮಹಾಕಾವ್ಯದ ರಚನಕಾರರಿಗೆ ಇರುವಂತಹ ಸಮತೋಲನ ಮತ್ತು ನಾಯಕ-ಖಳನಾಯಕರ ಜಾಲಕ್ಕೆ ಸಿಲುಕಿಕೊಳ್ಳದಂತಹ ಮನಃಸ್ಥಿತಿ ಶೀಲಾ ಅವರಲ್ಲಿ ಎದ್ದು ಕಾಣುತ್ತದೆ. ನಮಗೆ ನೇರವಾಗಿ ಸಂಬಂಧಪಡದ ವ್ಯಕ್ತಿಗಳ ವಿಷಯದಲ್ಲಿ ಹೀಗೆ ನಿಷ್ಪಕ್ಷಪಾತವಾಗಿ, ನಿರುದ್ವಿಗ್ನವಾಗಿ ಇರುವುದು ಸುಲಭ. ಆದರೆ ಶೀಲ ಅವರಿಗೆ ತಮ್ಮ ಬದುಕಿಗೆ ಅತ್ಯಂತ ಆಪ್ತರಾದ ತಮ್ಮ ತಂದೆ, ತಾಯಿ, ಗಂಡನ ಬಗ್ಗೆಯೂ ಹೀಗೆ ಯೋಚಿಸುವುದಕ್ಕೆ ಸಾಧ್ಯವಾಗಿದೆ.

ಮೊದಲ ಭಾಗದಲ್ಲಿ ತಮ್ಮ ಬಾಲ್ಯ, ತಾವು ಬೆಳೆದ ಪರಿಸರ, ವಸಾಹಾತಶಾಹಿಯ ಶಿಕ್ಷಣ, ಸಂಸ್ಕೃತಿ, ಭಾಷೆ, ಇರುಸರಿಕೆ, ಇವುಗಳ ಪ್ರಭಾವದಿಂದ ಬದಲಾಗುತ್ತಿದ್ದ ಕುಲೀನ ಶ್ರೀಮಂತ ವರ್ಗದ ಜೀವನಕ್ರಮವನ್ನು ಕುರಿತು ಸೂಕ್ಷ್ಮ ಹಾಗೂ ಗಂಭೀರವಾದ ಒಳನೋಟಗಳನ್ನು ಶೀಲಾ ನೀಡುತ್ತಾರೆ. ಅವರು ದಿಲ್ಲಿಯ ಘನವೆತ್ತ, ಶ್ರೀಮಂತ, ಮಾಥುರ್ ಕಾಯಸ್ಥ ಕುಟುಂಬಕ್ಕೆ ಸೇರಿದವರು. ಅದು ಬ್ರಿಟಿಷ್ ಪ್ರಭಾವಕ್ಕೆ ಸಂಪೂರ್ಣ ಪಕ್ಕಾಗಿದ್ದ, 60 ಜನಗಳಿದ್ದ ದೊಡ್ಡ ಒಟ್ಟುಕುಟುಂಬ. ಅಂದಿನ ಪರಿಸರದಲ್ಲಿ ಕುಲೀನರು, ಸುಸಂಸ್ಕೃತರು ಎನಿಸಿಕೊಳ್ಳಲು ಬೇಕಾದ ಪ್ರತಿಯೊಂದೂ ಆ ಕುಟುಂಬದಲ್ಲಿತ್ತು. ಹೆಚ್ಚಿನವರಿಗೆ ಕಾವ್ಯ, ಸಾಹಿತ್ಯ ಮತ್ತು ಸಂಗೀತದಲ್ಲಿ ಉತ್ಕೃಷ್ಟ ಮಟ್ಟದ ಅಭಿರುಚಿಯಿತ್ತು. ಇಂತಹ ವಾತಾವರಣದಲ್ಲಿ ಬೆಳೆದ ಶೀಲಾರಿಗೆ ಸಾಹಿತ್ಯ, ಸಂಗೀತಗಳೆರಡರಲ್ಲೂ ಆಳವಾದ ಆಸಕ್ತಿ ಸಹಜವಾಗಿಯೇ ಮೂಡಿತ್ತು. ಸ್ವತಃ ಶೀಲಾರ ತಂದೆಗೆ ಸಂಗೀತ ಸಾಹಿತ್ಯದಲ್ಲಿ ತುಂಬಾ ರುಚಿಯಿತ್ತು. ಅವರು ಸಂಗೀತ ಸಭೆಗಳು ಮತ್ತು ಹಲವು ಸಾಂಸ್ಕೃತಿಕ ಸಂಘಟನೆಗಳ ಪೋಷಕರಾಗಿದ್ದರು. ಹಾಗಾಗಿ ಅಂದಿನ ಶ್ರೇಷ್ಠ ಸಂಗೀತಗಾರರೆಲ್ಲರೂ ಬೇರೆ ಬೇರೆ ಸಂದರ್ಭಗಳಲ್ಲಿ ಇವರ ಮನೆಯಲ್ಲಿ ಬಂದು ಉಳಿಯುತ್ತಿದ್ದರು. ಆದರೆ ಇವು ಯಾವುವೂ ಕುಟುಂಬದೊಳಗಿನ ಪಿತೃಪ್ರಧಾನ ಮೌಲ್ಯಗಳನ್ನು, ಲಿಂಗಾಧಾರಿತ ಸಂಬಂಧಗಳನ್ನು, ಕೂಡು ಕುಟುಂಬದೊಳಗಿನ ಶ್ರೇಣೀಕರಣ, ಅಸಮಾನತೆ ಇವುಗಳನ್ನು ತೊಡೆದುಹಾಕುವುದಿಲ್ಲ ಎನ್ನುವುದನ್ನು ಶೀಲ ನಿರ್ಲಿಪ್ತವಾಗಿ, ಆದರೆ ತುಂಬಾ ಶಕ್ತಿಯುತವಾಗಿ, ಯಾವುದೇ ಕಹಿಯಿಲ್ಲದೆ ಚಿತ್ರಿಸುತ್ತಾರೆ. ಅತ್ಯಂತ ಸುಸಂಸ್ಕೃತರೂ, ಕಲಾಪ್ರೇಮಿಯೂ, ಸುಶಿಕ್ಷಿತರೂ ಆಗಿದ್ದ ಶೀಲಾಳ ತಂದೆ ಶೀಲಾಳ ತಾಯಿಯೊಂದಿಗೆ ಮಾತನಾಡುತ್ತಲೇ ಇರಲಿಲ್ಲ. ಅವರನ್ನು ತನ್ನ ಸಹೋದರಿಯರು ಮತ್ತು ಮನೆಯಲ್ಲಿನ ಉಳಿದ ಸದಸ್ಯರ ಮುಂದೆ ಅತ್ಯಂತ ಕೀಳಾಗಿ, ನಿಕೃಷ್ಟವಾಗಿ ಕಂಡು ಅವಮಾನಿಸುತ್ತಿದ್ದರು. ಉಳಿದವರೂ ಅವರನ್ನು ಅವಮಾನಿಸಲು ಅನುವು ಮಾಡಿಕೊಡುತ್ತಿದ್ದರು. ಹಾಗೆಯೇ ತನ್ನದೇ ಒಡಲಿನ ಕುಡಿಗಳಾದ ಶೀಲ ಮತ್ತವಳ ಸಹೋದರರನ್ನು ಒಮ್ಮೆಯೂ ಪ್ರೀತಿಯಿಂದ ಎತ್ತಿ ಮುದ್ದಾಡದೆ, ಉಳಿದ ಮಕ್ಕಳನ್ನು ಮುದ್ದಾಡಿ, ಅವರು ಬಯಸಿದ್ದನ್ನೆಲ್ಲಾ ಕೊಡಿಸಿ, ಅವರನ್ನು ಹೊರಗೆ ಸುತ್ತಾಡಲು ಕರೆದೊಯ್ಯುತ್ತಿದ್ದರು. ಇದರಿಂದ ಉಳಿದ ಮಕ್ಕಳಿಗೆ ಇವರನ್ನು ಅವಮಾನಿಸಿ, ಖುಷಿ ಪಡಲು ಸಾಧ್ಯವಾಗುತ್ತಿತ್ತು. ಹೀಗೆ ತಾಯಿಯನ್ನೇ ಆತುಕೊಂಡು ಅವಳ ಮಮತೆಯ ಕಾವಿನಲ್ಲಿ ಅರಳುವ ಶೀಲಾ ಬದುಕಿಡೀ ತನ್ನ ತಾಯಿಗೆ ಒತ್ತಾಸೆಯಾಗಿ ಉಳಿಯುತ್ತಾರೆ, ತಂದೆಯನ್ನು ಮುಖಾಮುಖಿ ನೇರವಾಗಿ ಪ್ರಶ್ನಿಸುತ್ತಾರೆ. ಆದರೆ ಅದೇ ಹೊತ್ತಿಗೆ ತಂದೆಯಲ್ಲಿರುವ ಉಳಿದ ಒಳ್ಳೆಯದನ್ನು ಮರೆಮಾಚುವುದಿಲ್ಲ. ಕಹಿ, ದ್ವೇಷಗಳಿಲ್ಲದೆ ಅವುಗಳನ್ನೂ ಹೇಳುತ್ತಾರೆ.

ಮದುವೆಯಾಗಿ ಇಂತಹುದೇ ಇನ್ನೊಂದು ಕುಲೀನ ಕುಟುಂಬ ಸೇರುವ ಶೀಲಾರಿಗೆ ಅಲ್ಲಿ ಕೂಡ ಶತಮಾನಗಳಿಂದ ಸಾಗುತ್ತಾ ಬಂದಿರುವ ಲಿಂಗಾಧಾರಿತ ಪಾತ್ರವನ್ನು ನಿರ್ವಹಿಸುವ ತುರ್ತು ಎದುರಾಗುತ್ತದೆ. ಉನ್ನತ ಹುದ್ದೆಯಲ್ಲಿರುವ ಪಿ.ಎನ್. ಧರ್ ಅವರನ್ನು ಭೇಟಿಯಾಗಲು ಬರುವ ವಿದೇಶೀ ಗಣ್ಯರ ಪತ್ನಿಯರನ್ನು ರಂಜಿಸುವ ಕೆಲಸ ಅವರ ಪಾಲಿಗೆ ಬರುತ್ತದೆ. ಆದರೆ ಬದುಕಿನುದ್ದಕ್ಕೂ ತನ್ನ ಆತ್ಮಸಾಕ್ಷಿಗೆ ಸರಿಯೆನಿಸದ ಕೆಲಸವನ್ನು ಮಾಡದ ಶೀಲಾ ಅದನ್ನು ವಿರೋಧಿಸಿ, ತನ್ನ ನಿಲುವನ್ನು ಪತಿಗೆ ಮನವರಿಕೆ ಮಾಡಿಕೊಡುತ್ತಾರೆ. ಆ ಸಂದರ್ಭದಲ್ಲಿ ಹೊರಗೆ ದುಡಿಯುವ ಮಹಿಳೆ ಆ ದುಡಿಮೆಯ ಜೊತೆಗೆ ಸಂಗೀತದಂತಹ ಒಂದು ಗಂಭೀರವಾದ ಆಸಕ್ತಿಯನ್ನು ಸಾಧಿಸಿಕೊಳ್ಳಬೇಕಾದಾಗ ಎದುರಿಸುವ ಎಡರುತೊಡರುಗಳನ್ನು ಯಾರ ವಿರುದ್ಧವೂ ಒಂದಿಷ್ಟೂ ಕಹಿ ಕಾರದೆ ವಿವರಿಸುತ್ತಾರೆ. ಆ ಅಡ್ಡಿಆತಂಕಗಳನ್ನು ಮೀರಿಕೊಳ್ಳಲು ಪ್ರಯತ್ನಿಸುತ್ತಾರೆ.

ಪಾಶ್ಚಾತ್ಯ ಪ್ರಭಾವಕ್ಕೆ, ಸಂಸ್ಕೃತಿಗೆ, ಶಿಕ್ಷಣಕ್ಕೆ ಮತ್ತು ಆ ಭಾಷೆಗೆ ತೆರೆದುಕೊಂಡಂತೆಲ್ಲಾ ಅಪ್ರಜ್ಞಾಪೂರ್ವಕವಾಗಿ ನಾವು ನಮ್ಮ ಭಾಷೆಯನ್ನು ಉಚ್ಚರಿಸುವ ಕ್ರಮ, ಪದಗಳಿಗೆ ನೀಡುವ ಒತ್ತು ಕೂಡ ಬದಲಾಗುತ್ತದೆ. ಇದು ಆ ಭಾಷೆಯ ಸಹಜ ಉಲಿ, ಲಯ, ಏರಿಳಿತಗಳ ಮೇಲೆ ಪ್ರಭಾವ ಬೀರುತ್ತದೆ. ಒಂದು ಭಾಷೆಗೂ ಮತ್ತು ಅದರ ಹುಟ್ಟಿಗೆ ಕಾರಣವಾಗುವ ಸಂಸ್ಕೃತಿಗೂ ಕರುಳುಬಳ್ಳಿಯ ಸಂಬಂಧವಿದೆ. ಹಾಗೆಯೇ ಭಾಷೆ, ಸಂಸ್ಕೃತಿ ಮತ್ತು ಅದರೊಳಗಿಂದ ಹುಟ್ಟುವ ಸಂಗೀತ ಈ ಮೂರಕ್ಕೂ ಅಂತಹುದೇ ಸಂಬಂಧವಿದೆ. ಇಷ್ಟು ಗಂಭೀರವಾದ ಸೈದ್ಧಾಂತಿಕ ವಿಚಾರವನ್ನು ಶೀಲಳಿಗೆ ಅತ್ಯಂತ ಮನೋಜ್ಞವಾಗಿ ಮನವರಿಕೆ ಮಾಡಿಕೊಡುವುದು ಅವರ ಗುರು ಕಿರಾಣಾ ಘರಾನೆಯ ಉಸ್ತಾದ್ ಫೈಯಾಜ್ ಅಹಮದ್.

ಅವರು ಶೀಲಾಳಿಗೆ ಸಂಗೀತ ಕಲಿಸಲು ಬಿಲ್‍ಕುಲ್ ಒಪ್ಪದೆ, ತುಂಬಾ ಹಿಂದೇಟು ಹಾಕುತ್ತಾರೆ. ಆದರೆ ಬೇಗಂ ಅಖ್ತರ್ ಅವರ ಒತ್ತಾಯದ ಮೇರೆಗೆ ನಂತರ ಕಲಿಸಲು ಒಪ್ಪುತ್ತಾರೆ. ಗುರುಗಳ ಬಳಿ ಸಲಿಗೆ ಬೆಳೆದ ನಂತರ ಆರಂಭದಲ್ಲಿ ತನಗೆ ಸಂಗೀತ ಕಲಿಸಲು ಒಪ್ಪದಿರುವ ಕಾರಣವನ್ನು ಶೀಲಾ ಕೇಳುತ್ತಾರೆ. “ನೀನು ತುಂಬಾ ಇಂಗ್ಲಿಷ್ ಮಾತನಾಡುತೀಯೆ. ಇಂಗ್ಲೆಂಡು, ಅಮೆರಿಕೆಯಲ್ಲಿ ಇದ್ದು ಅಭ್ಯಾಸ ಮಾಡಿದ್ದೀಯೆ. ನಿನ್ನ ಕೆಲಸದಲ್ಲಿ ಕೂಡ ನೀನು ಆಲೋಚಿಸುವುದು ಮತ್ತು ಬರೆಯುವುದು ಇಂಗ್ಲಿಷಿನಲ್ಲಿಯೇ. ಇದು ಒಂದು ಭಾಷೆಯ ಸಹಜವಾದ ಲಯ ಮತ್ತು ಉಲಿ ಎಂದು ನಾವು ಯಾವುದನ್ನು ಭಾವಿಸುತ್ತೇವೆಯೋ ಅದರ ಮೇಲೆ ಗಂಭೀರವಾದ ಪರಿಣಾಮ ಬೀರುತ್ತದೆ. ಇಂಗ್ಲಿಷ್ ತನ್ನ ಭಾಷೆಗೆ ಸಹಜ ಎಂದು ಭಾವಿಸುವ ಮೊನುಚು, ನುಲಿತದ ಸೊಲ್ಲು, ಮತ್ತು ಏರಿಳಿತ ನಮ್ಮ ಭಾಷೆಗಿಂತ ತುಂಬಾ ಬೇರೆ. ನಾನು ನನ್ನ ಪೂರ್ವಿಕರು ಅಂತಹ ಹರಿತವಾದ ಅಂಚುಗಳನ್ನೆಲ್ಲಾ ನಯಗೊಳಿಸಿ, ಅಡಗಿಸಿದ್ದೆವು. ನಮ್ಮ ಶೈಲಿಯಲ್ಲಿ ರಾಗದ ಪ್ರತಿಯೊಂದು ಬಾಗು ಬಳುಕು ಕೂಡ ಒಂದಕ್ಕೊಂದು ಬೆಸೆದುಕೊಂಡು ಅವಿಚ್ಛಿನ್ನವಾಗಿರುತ್ತದೆ. ಇಂತಹ ಅವಿಚ್ಛಿನ್ನವಾದ ಬಾಗು ಬಳುಕುಗಳನ್ನು ಆಂಗ್ಲಭಾಷೆಯ ಉಲಿ ಮತ್ತು ಸೊಲ್ಲುಗಳಿಂದ ಕಟ್ಟಲು ಸಾಧ್ಯವಿಲ್ಲ. ಸಂಗೀತ ಎನ್ನುವುದು ಉತ್ಕೃಷ್ಟ ರೀತಿಯಲ್ಲಿ ಪರಿಷ್ಕೃತಗೊಂಡಿರುವ ಮಾತು ಅಥವಾ ಭಾಷೆಯಲ್ಲದೆ ಮತ್ತೇನಲ್ಲ. ಅದು ಆಯಾ ಪ್ರಾಂತ್ಯದ ಉಲಿಯನ್ನು, ಉಚ್ಚಾರವನ್ನು ಮೈಗೂಡಿಸಿಕೊಳ್ಳಬೇಕು. ಸಂಗೀತವೇ ಒಂದು ವಿಶ್ವವ್ಯಾಪಿ ಭಾಷೆ ಎಂದೆಲ್ಲಾ ಹೇಳುವುದು ಕೇವಲ ಹುಚ್ಚು ಭಾವುಕತೆ ಅಷ್ಟೆ.” ಎನ್ನುತ್ತಾರೆ. ಅವರ ಮಾತಿನ ಹಿಂದಿದ್ದ ಅನುಭವದ ಪಾಕ ಅರಿವಾದ ಶೀಲ ತಮ್ಮ ಪಬ್ಲಿಕೇಷನ್ ಡಿವಿಷನ್ನಿನ ಕೆಲಸಕ್ಕೆ ರಾಜೀನಾಮೆ ನೀಡುತ್ತಾರೆ. ಭಾಷೆಯ ಸಹಜ ಲಯವನ್ನು ಮೈಗೂಡಿಸಿಕೊಳ್ಳಲು ಪ್ರಯತ್ನಿಸುತ್ತಾರೆ.

ಹಾಗೆಯೇ ರಾಷ್ಟ್ರೀಯ ಸಂಗೀತ ಕಾರ್ಯಕ್ರಮದಲ್ಲಿ ಹಾಡಬೇಕಾಗಿದ್ದ ಸಂದರ್ಭದಲ್ಲಿ ಶೀಲಾ ತುಂಬಾ ಆತಂಕಗೊಂಡಿರುತ್ತಾರೆ. ಆಗ ಅವರ ಗುರುಗಳು ಹೇಳುವ ಮಾತು ಕೂಡ ಮನೋಜ್ಞವಾಗಿದೆ. “ಸಂಗೀತ ಎನ್ನುವುದು ನಿನಗಿಂತ ತುಂಬಾ ದೊಡ್ಡದು. ನೀನು ದೇವರನ್ನು ಪಾರ್ಥಿಸುವಾಗ ಜನ ನಿನ್ನ ಬಗ್ಗೆ ಏನು ಯೋಚಿಸುತ್ತಾರೆ ಎನ್ನುವುದನ್ನು ಕುರಿತು ನೀನು ಚಿಂತಿಸುತ್ತೀಯಾ? ಹಾಗೊಂದು ವೇಳೆ ಚಿಂತಿಸುವೆಯಾದರೆ ನೀನು ಸರಿಯಾದ ಮನಃಸ್ಥಿತಿಯಲ್ಲಿ ಇಲ್ಲ ಎಂದೇ ಅರ್ಥ.” ಈ ಮಾತುಗಳು ಶೀಲಾರ ಕಣ್ತೆರೆಸುತ್ತವೆ.

ಸಂಗೀತವನ್ನು ಕುರಿತು ಇಷ್ಟು ಬೌದ್ಧಿಕವಾಗಿ, ತಾರ್ಕಿಕವಾಗಿ ವಿಚಾರ ಮಂಡಿಸಬಲ್ಲ ಸಂಗೀತಗಾರರು ಪ್ರಾಪಂಚಿಕ ವಿಚಾರಗಳಲ್ಲಿ ದಿಗ್ಭ್ರಮೆಯಾಗುವಷ್ಟು ಮುಗ್ಧರೂ, ಪೆದ್ದರೂ ಮತ್ತು ಮೂಢನಂಬಿಕೆಯವರೂ ಆಗಿರುತ್ತಾರೆ. ಲೋಕಜ್ಞಾನವೆನ್ನುವುದು ಅವರಿಗೆ ಸೊನ್ನೆ. ಬೃಹದ್ದೇಹಿ ಉಸ್ತಾದ್ ಬಡೇ ಗುಲಾಂ ಅಲಿ ಖಾನ್ ನಾಲ್ಕು ಕೋಳಿಗಳನ್ನು ಹಾಕಿ ಮಾಡಿದ ಬಿರಿಯಾನಿಯನ್ನು ಹೊಟ್ಟೆ ಭರ್ತಿ ತಿಂದು ಕಚೇರಿಯಲ್ಲಿ ಐದು ಆರು ಗಂಟೆ ಹಾಡುವ ಬಲಭೀಮ. ಆದರೆ ಅವರಿಗೆ ಆಕಾಶವಾಣಿಯಲ್ಲಿ ಹಾಡಲು ಸಿಕ್ಕಾಪಟ್ಟೆ ಭಯ. ಶೀಲಾರ ತಂದೆ ಅವರನ್ನು ಬಲವಂತವಾಗಿ ಒಪ್ಪಿಸಲು ಪ್ರಯತ್ನಿಸಿದರೆ, ಅವರು ಹೆದರಿದ ಮಗುವಿನಂತೆ ಗದ್ಗದ ದನಿಯಲ್ಲಿ ಬೇಡಿಕೊಳ್ಳುತ್ತಾರೆ, “ನನ್ನ ಕಂಠವನ್ನು ಕಳೆದುಕೊಳ್ಳಲು ನನಗೆ ಇಷ್ಟವಿಲ್ಲ. ರೇಡಿಯೋ ಯಾವುದೋ ಒಂದು ಬಗೆಯ ವಿದ್ಯುಚ್ಛಕ್ತಿಯ ತಂತಿಯ ಮೇಲೆ ಧ್ವನಿಮುದ್ರಣವನ್ನು ಮಾಡುತ್ತದೆ. ಅದು ಹಾಡುವವರ ಕಂಠದ ಚೈತನ್ಯ ಮತ್ತು ಉತ್ಕೃಷ್ಟತೆಯನ್ನು ಹೀರಿಕೊಂಡು ಬಿಡುತ್ತದಂತಲ್ಲ. ಸೂಪ್ ಮಾಡಲು ಬಳಸಿದ ಕೋಳಿ ಹೇಗಿರುತ್ತದೆ ನೋಡಿದ್ದೀರಾ? ನನ್ನ ಕಂಠ ಹಾಗಾಗುವುದು ನನಗೆ ಇಷ್ಟವಿಲ್ಲ. ಇಂತಹ ಕಂಠವನ್ನು ಬೆಳೆಸಿಕೊಳ್ಳಲು ನಾನು ಅದೆಷ್ಟು ವರ್ಷಗಳು ಕಷ್ಟಪಟ್ಟಿದ್ದೀನಿ ಗೊತ್ತಾ?”

ಇವರ ಮನೆಗೆ ಬರುತ್ತಿದ್ದ ಖ್ಯಾತ ಸಾರಂಗಿವಾದಕ ಬಂಡೂಖಾನ್ ಅವರದ್ದು ಇನ್ನೊಂದು ಕಥೆ. ಅವರನ್ನು ಕಚೇರಿಗೆ ಆಹ್ವಾನಿಸಿ ಅಲಹಾಬಾದಿನ ಖ್ಯಾತ ಸಂಗೀತ ಸಭೆಯಿಂದ ಪತ್ರವೊಂದು ಬರುತ್ತದೆ. ಅದರಲ್ಲಿ ಪ್ರಯಾಣ ಮತ್ತು ತಂಗುವ ವೆಚ್ಚದ ಜೊತೆಗೆ ಕಾರ್ಯಕ್ರಮಕ್ಕೆ 1000 ರೂಗಳನ್ನು ಸಂಭಾವನೆಯಾಗಿ ನೀಡುತ್ತೇವೆ ಎಂದಿರುತ್ತದೆ. ಆಗ ಬಂಡೂಖಾನರು ಮಾರುತ್ತರವಾಗಿ ನಯವಾದ ಉರ್ದು ಭಾಷೆಯಲ್ಲಿ “ನನಗೆ 500 ರೂಗಳು ಮತ್ತು ಮಗ ಉಮ್ರಾವ್ ಖಾನನಿಗೆ 200 ರೂಗಳನ್ನು ಸಂಭಾವನೆಯಾಗಿ ನೀಡದಿದ್ದರೆ ಕಚೇರಿಗೆ ಬರಲಾಗುವುದಿಲ್ಲ ಎಂದು ಉತ್ತರ ಬರೆಸಿ” ಅದನ್ನೊಮ್ಮೆ ತಿದ್ದಿಕೊಡಲು ಶೀಲಾರ ತಂದೆಗೆ ತಂದು ಕೊಡುತ್ತಾರೆ. ಅದನ್ನು ನೋಡಿ ಅವರ ತಂದೆ ಸುಸ್ತು. ಇವರು ಕೇಳುತ್ತಿರುವುದಕ್ಕಿಂತ ಹೆಚ್ಚಿನ ಸಂಭಾವನೆಯನ್ನು ಸಭೆಯವರು ನೀಡುತ್ತಿದ್ದಾರೆ ಎಂದು ಬಂಡೂಖಾನರಿಗೆ ಮನವರಿಕೆ ಮಾಡಲು ಅವರು ತಮ್ಮ ಇದ್ದಬದ್ದ ಬುದ್ಧಿಯನ್ನೆಲ್ಲಾ ಖರ್ಚುಮಾಡಬೇಕಾಗುತ್ತದೆ.

ಠುಮ್ರಿಯ ಸಾಮ್ರಾಜ್ಞಿ ಎಂದೇ ಹೆಸರಾಗಿದ್ದ ಸಿದ್ಧೇಶ್ವರೀ ದೇವಿಗೆ ಎಲ್ಲರೂ ವಿದೇಶಕ್ಕೆ ಹೋಗಿ ಬರುತ್ತಾರೆ ಆದರೆ ತಮ್ಮನ್ನು ಮಾತ್ರ ಯಾರೂ ಆಹ್ವಾನಿಸಿಯೇ ಇಲ್ಲವಲ್ಲ ಎಂಬ ಕೊರಗು ಸದಾ ಕಾಡುತ್ತಿತ್ತು. ಅದನ್ನು ಕೆಲವು ಬಾರಿ ಶೀಲಾರ ಬಳಿ ಹೇಳಿಕೊಂಡಿದ್ದರು ಕೂಡ. ಅವರ ಸಂಕಟ ನೋಡಲಾರದೆ ಶೀಲಾ ಅವರನ್ನು ಇಂಗ್ಲೆಂಡಿಗೆ ಕಳಿಸುವ ವ್ಯವಸ್ಥೆ ಮಾಡುತ್ತಾರೆ. ಒಂದು ತಿಂಗಳ ಅವಧಿಗೆ ಕಾರ್ಯಕ್ರಮಗಳು ಏರ್ಪಾಡಾಗಿರುತ್ತವೆ. ಹೋದ ಒಂದೇ ವಾರದಲ್ಲಿ ಸಿದ್ಧೇಶ್ವರೀದೇವಿ ವಾಪಸ್ಸು ಬಂದು, ಇವರಿಗೆ ಫೋನ್ ಮಾಡುತ್ತಾರೆ. ಗಾಬರಿಯಾಗಿ ಶೀಲಾ ಅಲ್ಲಿಗೆ ಓಡಿಹೋದರೆ, ಸಿದ್ಧೇಶ್ವರಿಯವರು ಆರಾಮಾಗಿ ಕುಳಿತಿದ್ದಾರೆ. ಏನಾಯಿತೆಂದು ವಿಚಾರಿಸಿದಾಗ, “ನೋಡು ಅಲ್ಲಿ ಸ್ನಾನ ಮಾಡಲು ಬಕೆಟ್ಟುಗಳು ಇಲ್ಲ. ಅದೇನೋ ತೊಟ್ಟಿಯಲ್ಲಿ ಕುಳಿತು ಕೊಳೆ ನೀರನ್ನೇ ಮತ್ತೆ ಮತ್ತೆ ಮೈಗೆ ಎರಚಿಕೊಳ್ಳಬೇಕು. ಅದಕ್ಕೆ ನಾನು ಬಚ್ಚಲುಮನೆಯಲ್ಲಿ ಹಾಕಿದ್ದ ಕಾರ್ಪೆಟ್ ತೆಗೆದು, ಟಬ್ಬಿನಲ್ಲಿ ನೀರು ತುಂಬಿಸಿ ಅಲ್ಲಿದ್ದ ಒಂದು ಮಗ್ಗಿನಿಂದ ನೀರು ಹುಯ್ದುಕೊಂಡು ಚೆನ್ನಾಗಿ ಸ್ನಾನ ಮಾಡಿದೆ. ಆ ಸ್ನಾನದ ನೀರೆಲ್ಲಾ ಸೀದಾ ಮನೆಯ ಮಾಲಿಕಳ ಅಡುಗೆ ಮನೆಗೆ ಹರಿದು, ಅವರ ಸೂಪ್ ಒಳಕ್ಕೇ ಬಿತ್ತಂತೆ. ಅವರು ಬಂದು ತುಂಬಾ ರೇಗಾಡಿದರು. ಇನ್ನೂ ಭಯಂಕರವೆಂದರೆ ಸ್ನಾನಕ್ಕೆ ಬಳಸುವ ಮಗ್ಗನ್ನೇ ಕಕ್ಕಸ್ಸು ತೊಳೆದುಕೊಳ್ಳಲು ಬಳಸಬೇಕಂತೆ. ಜೊತೆಗೆ ಅಲ್ಲೆಲ್ಲಾ ನೀರು ಬಳಸುವುದಿಲ್ಲವಂತೆ. ಪೇಪರ್ ಬಳಸುತ್ತಾರಂತೆ. ನನಗೆ ಹುಚ್ಚು ಹಿಡಿದಂತಾಯಿತು. ಆವತ್ತು ಕಚೇರಿಯಲ್ಲಿ ಹಾಡಲು ಕುಳಿತರೆ ಪೇಪರಿನಲ್ಲಿ ಒರೆಸಿಕೊಳ್ಳುವ ಚಿತ್ರವೇ ಕಣ್ಣ ಮುಂದೆ ಬರುತ್ತಿತ್ತು. ಪಂಚಮವನ್ನು ಕೂಡ ಸರಿಯಾಗಿ ಹಿಡಿಯಲು ಸಾಧ್ಯವಾಗಲಿಲ್ಲ. ನಾನು ಎಲ್ಲಾ ಕಚೇರಿಗಳನ್ನೂ ರದ್ದು ಪಡಿಸಿ ವಾಪಸ್ಸು ಬಂದುಬಿಟ್ಟೆ. ನನಗಿನ್ನು ಈ ವಿಲಾಯತಿಯ ಸಹವಾಸವೇ ಬೇಡಪ್ಪ. ಟಿಕೇಟಿನ ದುಡ್ಡು ಕೊಡಬೇಕಂತೆ. ಅದನ್ನು ಹೇಗಾದರೂ ತೀರಿಸಿಬಿಡ್ತೀನಿ. ಶೀಲಾ, ಏನೇ ಹೇಳು, ಏರೋಪ್ಲೇನ್ ಪ್ರಯಾಣ ಮಾತ್ರ ತುಂಬಾ ಮಜವಾಗಿತ್ತು!”

ಅಭಿಜಾತ ಕಲೆಗಳನ್ನು ಆಸ್ವಾದಿಸಲು ಯಾರಿಗೂ ಏಕಾಏಕಿ ಸಾಧ್ಯವಾಗುವುದಿಲ್ಲ. ಅದನ್ನು ಅತ್ಯಂತ ಜಾಗರೂಕತೆಯಿಂದ, ರೂಢಿ ಮಾಡಿಸಬೇಕು. ಅದಕ್ಕೆ ಕಿವಿ, ಮನಸ್ಸು ಮತ್ತು ಬುದ್ಧಿಗಳನ್ನು ಒಗ್ಗಿಸಬೇಕು, ಅದನ್ನು ಸವಿಯುವ ಅಭಿರುಚಿಯನ್ನು ಬೆಳೆಸಬೇಕು. ಈ ಇಡೀ ಪ್ರಕ್ರಿಯೆಯನ್ನು ಅವರು ಪಂಜಾಬಿನ ಹರವಲ್ಲಭ ಸಮಾರೋಹವನ್ನು ಉದಾಹರಿಸಿ ಹೇಳುತ್ತಾರೆ. ಹರವಲ್ಲಭ ಸಮಾರೋಹದಲ್ಲಿ ಲಘುಶಾಸ್ತ್ರೀಯ ಸಂಗೀತಕ್ಕೆ ಅವಕಾಶವೇ ಇರಲಿಲ್ಲ. ಸ್ಥಳೀಯ ಹಾಗೂ ಹೊರಗಿನಿಂದ ಬರುವ ಕೇಳುಗರನ್ನು ಅತ್ಯಂತ ಶುದ್ಧವಾದ ಮತ್ತು ಸೂಕ್ಷ್ಮವಾದ ಸಂಗೀತಕ್ಕೆ ವರ್ಷಗಳ ಕಾಲ ಒಡ್ಡಿ, ಖಯಾಲ್ ಮತ್ತು ಧ್ರುಪದ್ ಕುರಿತು ಅವರಲ್ಲೊಂದು ರುಚಿ ಹುಟ್ಟಿಸಿದ್ದರು. ಅಷ್ಟೇ ಅಲ್ಲದೆ ಆ ಊರಿನ ಟ್ರಕ್ ಚಾಲಕರು, ಹಣ್ಣು ಮಾರುವವರು ಕೂಡ ಆ ಸಮಾರೋಹಕ್ಕೆ ಬರುವ ಕಲಾವಿದರನ್ನು ಗುರುತಿಸಬಲ್ಲವರಾಗಿದ್ದರು. ಜೊತೆಗೆ ಅವರ ಬಗ್ಗೆ ಅಪಾರ ಪ್ರೀತಿ ಗೌರವಗನ್ನು ತೋರುತ್ತಿದ್ದರು. ಹರವಲ್ಲಭ ಸಮಾರೋಹಕ್ಕೆ ಹಾಡಲು ಹೋದ ಶೀಲಾರ ಬಳಿ ಕಿತ್ತಳೆಹಣ್ಣಿನ ವ್ಯಾಪಾರಿ ಹಣ ತೆಗೆದುಕೊಳ್ಳಲು ಸಿದ್ಧವಿರುವುದಿಲ್ಲ. ಅವರು ಜುಲುಮೆ ಮಾಡಿದಾಗ ಅವರ ಕಾಲು ಮುಟ್ಟಿ, ದಯವಿಟ್ಟು ಬಲವಂತ ಮಾಡಿ ನನಗೆ ಅವಮಾನ ಮಾಡಬೇಡಿ ಎಂದು ಬೇಡಿಕೊಳ್ಳುತ್ತಾನೆ.

ತನ್ನ ತಲೆಮಾರಿನ ಅತ್ಯಂತ ಪ್ರಾತಿನಿಧಿಕ ಮತ್ತು ಪ್ರಮುಖ ಕಲಾವಿದರ ಸಂಗೀತ ಕುರಿತು ಶೀಲಾ ಅತ್ಯಂತ ಸೂಕ್ಷ್ಮವಾದ ಅದರೆ ಅಷ್ಟೇ ಪಾಂಡಿತ್ಯಪೂರ್ಣವಾದ ಒಳನೋಟಗಳನ್ನು ನೀಡುತ್ತಾರೆ. ಹಾಗೆಯೇ ಅವರ ಸ್ವಭಾವದಲ್ಲಿನ ಕೆಲವು ವಿಶಿಷ್ಟತೆಗಳನ್ನೂ ದಾಖಲಿಸುತ್ತಾರೆ. ಸಿದ್ಧೇಶ್ವರೀದೇವಿಯ ಸಂಗೀತದಲ್ಲಿ ಕೇಳುಗರಿಗೆ ಮೊತ್ತಮೊದಲು ತಟ್ಟುವುದು ಅವರ ಕಂಠದ ಇಂಪು, ಬೆಚ್ಚನೆಯ ಪ್ರೇಮಪೂರ್ಣ ಭಾವ, ಮನಕರಗಿಸುವಂತಹ ಕಕ್ಕುಲಾತಿ, ಮತ್ತವರ ಮುಗ್ಧ ನಿಷ್ಕಲ್ಮಶ ನಗು. ಸಂಗೀತದ ಅರ್ಥಪೂರ್ಣ ಸಂವಹನಕ್ಕೆ ಕಲಾವಿದರು ಯಾವ ಪ್ರಕಾರದ ರಚನೆ ಹಾಡುತ್ತಿದ್ದಾರೆ ಎನ್ನುವುದು ಮುಖ್ಯವಾಗುವುದೇ ಇಲ್ಲ. ಧ್ರುಪದ್, ಖಯಾಲ್ ಅಥವಾ ಠುಮ್ರಿ ಯಾವುದೇ ಇರಲಿ ಆ ಸಂಗೀತವನ್ನು ಸೃಷ್ಟಿಸುತ್ತಿರುವವರು ಯಾರು ಎನ್ನುವುದೇ ಮುಖ್ಯವಾಗುತ್ತದೆ ಎನ್ನುವುದು ಸಿದ್ಧೇಶ್ವರಿಯವರ ಸಂಗೀತ ಕೇಳುವಾಗ ಚೆನ್ನಾಗಿ ಮನವರಿಕೆಯಾಗುತ್ತದೆ ಎನ್ನುತ್ತಾರೆ. ಸಿದ್ಧೇಶ್ವರಿಯವರ ಸಂಗೀತದಲ್ಲಿ ಯಾರನ್ನಾದರೂ ಮೆಚ್ಚಿಸಬೇಕೆಂಬ ಮನೋಭಾವ ಎಳ್ಳಷ್ಟೂ ಕಾಣುವುದಿಲ್ಲ. ತನ್ನೊಳಗಿರುವ ಸಂಗೀತದ ಅಮಲನ್ನು ತುಂಬಾ ಪ್ರೀತಿಯಿಂದ ಉಳಿದವರೊಂದಿಗೆ ಹಂಚಿಕೊಳ್ಳಬೇಕೆಂಬ ಆಸೆಯಷ್ಟೇ ಅವರಲ್ಲಿ ಕಾಣುತ್ತದೆ.

ಆಗ ಸಂಗೀತಲೋಕದ ತಾರೆ ಎನಿಸಿಕೊಂಡಿದ್ದ ಕೇಸರ್‍ಬಾಯಿಯವರ ಖಾಸಗಿ ನಡವಳಿಕೆಗೂ ಮತ್ತು ಸಾರ್ವಜನಿಕ ನಡವಳಿಕೆಗೂ ಅಜಗಜಾಂತರ ವ್ಯತ್ಯಾಸವಿತ್ತು. ಸಾರ್ವಜನಿಕವಾಗಿ ಅವರು ಯಾವ ಪ್ರಚೋದನೆಯೂ ಇಲ್ಲದೆ ದುರಹಂಕಾರದಿಂದ ಕಿರಿಕಿರಿಯಾಗುವಂತೆ ವರ್ತಿಸುತ್ತಿದ್ದರು. ಇಡೀ ದೇಶದಲ್ಲಿ ತಾನೇ ಅತ್ಯುತ್ಕೃಷವಾದ ಖಯಾಲ್ ಗಾಯಕಿ ಮತ್ತು ತನಗ್ಯಾರೂ ಸಾಟಿಯಿಲ್ಲ ಎಂಬ ಭಾವನೆ ಅವರಲ್ಲಿ ಗಾಢವಾಗಿತ್ತು. ಅದು ಸತ್ಯವೂ ಕೂಡ. ಹಾಗಿದ್ದರೂ ಅವರನ್ನು ಒಂದು ಬಗೆಯ ಅಭದ್ರತೆ ಕಾಡುತ್ತಿತ್ತು. ಅದರಿಂದ ಅವರು ನಿಜವಾಗಿಯೂ ಅರ್ಹರಾದವರಿಗೆ ಸಲ್ಲಬೇಕಾದ ಗೌರವವನ್ನು ಸಲ್ಲಿಸದೆ, ಎಷ್ಟೋ ಸಲ ತುಂಬಾ ಅವಮಾನ ಮಾಡಿಬಿಡುತ್ತಿದ್ದರು. ಒಮ್ಮೆ ಖ್ಯಾತ ಠುಮ್ರಿ ಗಾಯಕಿ ರಸೂಲನ್ ಬಾಯಿಗೆ ಅವಮಾನ ಮಾಡುವುದನ್ನು ಶೀಲಾ ಕಣ್ಣಾರೆ ಕಂಡಿದ್ದರು. ಆದರೆ ಶೀಲಾರ ಮನೆಯಂತಹ ಖಾಸಗಿ ವಲಯಗಳಲ್ಲಿ ಅವರ ನಡವಳಿಕೆ ತೀರಾ ವಿಭಿನ್ನವಾಗಿರುತ್ತಿತ್ತು. ಅತ್ಯಂತ ಸ್ನೇಹಮಯಿಯಾಗಿ ಇರುತ್ತಿದ್ದರು. ತುಂಬಾ ವಯಸ್ಸಾದ ಅಜ್ಜಿ ಇದ್ದರೆ ಅವರಿಗಾಗಿ ಮೊದಲು ಒಂದು ಭಜನ್ ಹಾಡುತ್ತಿದ್ದರು. ವಾಸ್ತವವಾಗಿ ಅವರ ಶೈಲಿ ಭಜನ್‍ಗೆ ಸ್ವಲ್ಪವೂ ಒಗ್ಗುತ್ತಿರಲಿಲ್ಲ. ನಂತರ ತುಂಬಾ ಜಾಗರೂಕತೆಯಿಂದ ಸಂಗೀತದ ಗಂಧಗಾಳಿ ಇಲ್ಲದವರ ಮನಸ್ಸಿಗೂ ಮುದವಾಗುವಂತಹ ರಚನೆಗಳನ್ನು ಆಯ್ಕೆಮಾಡಿ ಹಾಡುತ್ತಿದ್ದರು. ಅವರು ತುಂಬಾ ಸೂಕ್ಷ್ಮ ಪರಿಜ್ಞಾನವುಳ್ಳ ಜಾಣ ಹೆಣ್ಣುಮಗಳು. ಅದೆಲ್ಲಕ್ಕೂ ಮಿಗಿಲಾದ ಒಂದು ವಿಶಿಷ್ಟ ಗುಣ ಕೇಸರ್‍ಬಾಯಿಯವರ ವ್ಯಕ್ತಿತ್ವದಲ್ಲಿತ್ತು. ಅವರಲ್ಲೊಂದು ಸಿಪಾಯಿಯ ಮನಸ್ಸಿತ್ತು. ಯಾವುದು ಅಸಾಧ್ಯ ಎಂದು ಎಲ್ಲರೂ ಭಾವಿಸುತ್ತಾರೆಯೋ ಅದನ್ನು ಹೋರಾಡಿ ಗೆದ್ದು ವಶ ಮಾಡಿಕೊಳ್ಳಬೇಕು ಎನ್ನುವ ಸೈನಿಕನ ಛಲ ಮತ್ತು ದೃಢನಿರ್ಧಾರವಿತ್ತು.

ಸಂಗೀತಗಾರರಲ್ಲದೆ ತಮ್ಮ ವೃತ್ತಿಬದುಕಿನಲ್ಲಿ ತಾವು ಒಡನಾಡಿದ, ಮೆಚ್ಚಿದ ಹಲವು ವ್ಯಕ್ತಿಗಳನ್ನು ನವಿರಾದ ಹಾಸ್ಯ, ಮೆಚ್ಚುಗೆ, ಗೌರವಗಳಿಂದ ಚಿತ್ರಿಸಿದ್ದಾರೆ. ಕೇಂದ್ರ ಸರ್ಕಾರದ ಪಬ್ಲಿಕೇಷನ್ ವಿಭಾಗದ ನಿರ್ದೇಶಕರಾಗಿದ್ದ ನೇರ ನಡೆನುಡಿಯ, ಸರಳ, ಶುದ್ಧ ಮನಸ್ಸಿನ, ಗಾಂಧಿ ತತ್ವವನ್ನೇ ತನ್ನ ಬದುಕಿನ ಮಾದರಿ ಮಾಡಿಕೊಂಡಿದ್ದ ಮತ್ತು ವಿವೇಚನೆ ಮತ್ತು ತನ್ನ ಅಂತರ್ಬೋಧೆಯನ್ನು ಅನುಸರಿಸಿ ತೀಮಾನಗಳನ್ನು ತೆಗೆದುಕೊಳ್ಳುವ ಮೋಹನ್ ರಾವ್ ಮತ್ತು ಇಂದಿರಾ ಗಾಂಧಿಯವರನ್ನು ಕುರಿತ ಅವರ ಮಾತುಗಳು ಕೂಡ ಒಬ್ಬ ವ್ಯಕ್ತಿಯನ್ನು ಅವರು ಎಷ್ಟು ಚೆನ್ನಾಗಿ ಅರ್ಥಮಾಡಿಕೊಳ್ಳಬಲ್ಲರು ಎನ್ನುವುದನ್ನು ಎತ್ತಿ ತೋರುತ್ತದೆ. ಅಂತೆಯೇ ತೀರಾ ಗಣ್ಯ ಪುರುಷರ ಪತ್ನಿಯರಾಗಿ ವರ ಪ್ರಭಾವ ಮತ್ತು ನೆರಳಿನಲ್ಲಿಯೇ ಇರುವ ಹೆಂಗಸರು ಸ್ವತಂತ್ರ ವ್ಯಕ್ತಿತ್ವವನ್ನು ರೂಪಿಸಿ, ಬೆಳಸಿಕೊಳ್ಳದೆ ತಮ್ಮದಲ್ಲದ್ದನ್ನು ತಮಗೆ ಆರೋಪಿಸಿಕೊಂಡು, ಸುಳ್ಳು ಪ್ರತಿಷ್ಠೆಯಲ್ಲಿ ಬದುಕುವ ದುರಂತವನ್ನೂ ಲಘುಹಾಸ್ಯದ ಮೂಲಕವೇ ಬಿಚ್ಚಿಡುತ್ತಾರೆ.

ಎರಡನೆಯ ಭಾಗ “ಸಂಗೀತ ಪಾಕ ಮತ್ತು ಇತರ ಪ್ರಬಂಧಗಳು” ಸಂಗೀತದ ವಿಭಿನ್ನ ಅಂಶಗಳಾದ, ನಾದ, ರಾಗ, ಘರಾನೆಗಳು, ಹಾರ್ಮೋನಿಯಂ, ಸಂಗೀತಗಾರರು ಮತ್ತು ಅಡುಗೆಯ ಸಂಬಂಧ ಇವುಗಳನ್ನು ಕುರಿತ ಗಂಭೀರವಾದ ಬರಹಗಳನ್ನು ಒಳಗೊಂಡಿದೆ. ಭಾರತೀಯ ಸಂಗೀತದ ಆತ್ಮವೇ ಆಗಿರುವ ರಾಗದ ತಾಂತ್ರಿಕ ಮತ್ತು ಕಲಾತ್ಮಕ ಅಂಶಗಳನ್ನು ಕುರಿತು ಗಂಭೀರವಾದ ವಿವರಣೆಗಳಿವೆ. ರಾಗದ ಕಲ್ಪನೆ ಇಡೀ ಭಾರತೀಯ ಸಂಗೀತವನ್ನು ವಿಶ್ವದ ಬೇರೆಲ್ಲಾ ಸಂಗೀತಕ್ಕಿಂತ ವಿಶಿಷ್ಟವಾಗಿಸುತ್ತದೆ.

ಶೀಲಾ ಸಂಗೀತಗಾರರೊಂದಿಗಿನ ಹಲವು ವರ್ಷಗಳ ಒಡನಾಟದಲ್ಲಿ ಒಂದು ಕುತೂಹಲಕರ ಅಂಶವನ್ನು ಗಮನಿಸಿದ್ದರು. ಅದು ಸಂಗೀತಗಾರರು ಮತ್ತು ಅಡುಗೆಯ ಸಂಬಂಧ. ಇದನ್ನು ಅವರು ತಾವು ಹೆಚ್ಚಾಗಿ ಒಡನಾಡಿದ್ದ ಹಿಂದುಸ್ತಾನಿ ಸಂಗೀತಗಾರರನ್ನು ಕುರಿತು ಹೇಳುತ್ತಾರೆ. ಅವರೆಲ್ಲರೂ ತಮ್ಮ ಸಂಗೀತಕ್ಕೂ ಮತ್ತು ತಾವು ಬಯಸಿ ತಿನ್ನುವ ಅಡುಗೆಗೂ ಬಿಡಿಸಲಾರದ ಬಂಧವಿದೆಯೆಂದು ಭಾವಿಸಿದ್ದರು. ಹೆಚ್ಚಿನವರು ಅಡುಗೆ ಮಾಡುವ ಪ್ರಕ್ರಿಯೆಯನ್ನೇ ಸುಖಿಸುತ್ತಿದ್ದರು. “ಯಾರಿಗೆ ಚೆನ್ನಾಗಿ ಅಡುಗೆ ಮಾಡಲು ಬರುತ್ತದೋ ಅವರಿಗೇ ಚೆನ್ನಾಗಿ ಹಾಡಲು ಬರುವುದು” ಎನ್ನುತ್ತಿದ್ದರು ಬೇಗಂ ಅಖ್ತರ್. ಸಿದ್ಧೇಶ್ವರಿದೇವಿ, ಕೇಸರಬಾಯಿ ಕೇರ್ಕರ್ ಕೂಡ ಹಾಗೇ ಇದ್ದರು. ಇದು ಮಹಿಳೆಯರ ವಿಷಯದಲ್ಲಿ ಮಾತ್ರವಲ್ಲ ಪುರುಷ ಕಲಾವಿದರ ವಿಷಯದಲ್ಲಿಯೂ ನಿಜ. ಜಿಯಾ ಮೊಯಿಯುದ್ದೀನ್ ಡಾಗರ್ ನ್ಯೂ ಯಾರ್ಕ್‍ಗೆ ಹೋದ ಕೂಡಲೆ ತಮ್ಮ ಶಿಷ್ಯನ ಮನೆಯಲ್ಲಿ ಮಾಡಿದ ಮೊದಲ ಕೆಲಸವೆಂದರೆ ಅಡುಗೆ ಕೋಣೆಗೆ ಹೋಗಿ ಕುರಿ ಮಾಂಸದ ಕುರ್ಮಾ ಮಾಡಿ ಕಚೇರಿಗೆ ಹೋಗುವ ಮೊದಲು ಅದನ್ನು ತಿಂದಿದ್ದು. ಬಡೇ ಗುಲಾ ಅಲಿ ಖಾನ್ ಕೂಡ ಹಾಗೇ ಮಾಡುತ್ತಿದ್ದರು. ತಬಲಾ ಮಾಂತ್ರಿಕ ಎನಿಸಿಕೊಂಡಿದ್ದ ಉಸ್ತಾದ್ ಅಲ್ಲಾ ರಖ್ಖಾ ಸ್ವತಃ ತಾವೇ ನಿಂತು ಸೊಗಸಾದ ಬಿರಿಯಾನಿ ಮಾಡುತ್ತಿದ್ದರು ಎಂದು ಪಂಡಿತ್ ರಾಜೀವ್ ತಾರಾನಾಥ್ ಸಂದರ್ಶನವೊಂದರಲ್ಲಿ ದಾಖಲಿಸಿದ್ದಾರೆ. ಉಸ್ತಾದ್ ಫೈಯಾಜ್ ಖಾನ್ ಸಂಗೀತ ಬಿಟ್ಟರೆ ಮಾತನಾಡುತ್ತಿದ್ದುದು ಅಡುಗೆಯ ಬಗ್ಗೆಯೇ. ಹಾಗೆ ಬಾಲಸರಸ್ವತಿ ಮತ್ತು ಎಂ ಎಲ್ ವಸಂತಕುಮಾರಿ ಕೂಡ ತುಂಬಾ ಚೆನ್ನಾಗಿ ಅಡುಗೆ ಮಾಡುತ್ತಿದ್ದರು ಎಂದು ಎಲ್ಲರೂ ಹೇಳುತ್ತಿದ್ದರು. ಹೆಚ್ಚಿನವರು ಅಡುಗೆ ಮತ್ತು ಸಂಗೀತ “ಏಕ್ ಹೀ ಬಾತ್ ಹೈ” ಎನ್ನುತ್ತಿದ್ದರು. ಎರಡರ ಉದ್ದೇಶವೂ ಉತ್ಕೃಷ್ಟತೆ, ಶ್ರೇಷ್ಠತೆ, ಮಾಧುರ್ಯ, ರುಚಿ ಇವುಗಳ ಮೂಲಕ ನಮ್ಮ ಇಂದ್ರಿಯಗಳನ್ನು ಸಂತೋಷಪಡಿಸುವುದು. ಎರಡೂ ಕೂಡ ರುಚಿ, ಘಮ, ನಾದ ಮಾಧುರ್ಯ ಇವುಗಳ ಮೂಲಕ ಸಂತೃಪ್ತಿಯನ್ನು ಉಂಟುಮಾಡುತ್ತವೆ. ಇದರಲ್ಲಿ ಶೀಲಾ ಬಹುಮುಖ್ಯವಾದ ಅಂಶವೊಂದನ್ನು ಗುರುತಿಸುತ್ತಾರೆ. ಒಂದು ಶ್ರೇಷ್ಠ ಅಭಿಜಾತ ಕಲೆ ಕೇವಲ ಸರಳವಾದ ಸಿಹಿಯಾದ ರಸಗುಲ್ಲವನ್ನು ಮಾತ್ರ ರುಚಿಸುವಂತೆ ಮಾಡುವುದಿಲ್ಲ. ಬದಲಾಗಿ ವಿಕಟವಾದುದನ್ನು, ಕಹಿಯಾದ ಹಾಗಲಕಾಯಿಯನ್ನು, ಡಾರ್ಕ್ ಚಾಕೊಲೇಟನ್ನು ಕೂಡ ರುಚಿಯಾಗಿಸಿ, ಸುಖಿಸುವಂತೆ ಮಾಡುತ್ತದೆ. ಹಾಗಾಗಿಯೇ ಅದು ತುಂಬಾ ಸಂಕೀರ್ಣ. ಹೀಗೆ ಹೇಳುತ್ತಲೇ ಹೋಗಬಹುದು. ಆದರೆ ಪುಸ್ತಕದ ಜೋಶ್ ಸಿಗಬೇಕಾದರೆ ಅದನ್ನು ಓದಲೇ ಬೇಕು. ಬಿರಿಯಾನಿ ತಿಂದರಲ್ಲವೇ ಅದರ ರುಚಿ ತಿಳಿಯುವುದು?

ಈ ಅಂಕಣದ ಹಿಂದಿಗೆ ಬರೆಹಗಳು:
ಸಂಪ್ರದಾಯದ ನವೀಕರಣ ಮತ್ತು ತ್ಯಾಗರಾಜ ಎಂಬ ಸಂತ

ಇಂದು ನಮಗೆ ಬೇಕಾದ ಹಿಂದುಸ್ತಾನ

ಈಜಿಪ್ಟಿನ ನಾಲ್ಕನೆಯ ಪಿರಮಿಡ್ ‘ಉಮ್ ಕುಲ್ಸುಂ’

ಒಂದು ಸಂಜೆಗಣ್ಣಿನ ಹಿನ್ನೋಟ...!

ಮೃದಂಗದ ಜಾಡು ಹಿಡಿದು ಹೊರಟ 'ವರ್ಗೀಕರಣ' ಮೀರಿದ ಕೃತಿ

ಬದುಕೇ ಹಾಡಾದ ಮಮ್ಮಾ ಆಫ್ರಿಕಾ ಮೀರಿಯಂ ಮಕೇಬಾ

 

MORE NEWS

ಬೇಲಿಯ ಗೂಟದ ಮೇಲೊಂದು ಚಿಟ್ಟೆಃ ಅನುದಿನದ ದಂದುಗದೊಂದಿಗೆ ಅನುಸಂಧಾನ

31-12-1899 ಬೆಂಗಳೂರು

"ಲೋಕದ ವಾಸ್ತವವಗಳ ಮುಖವಾಡಗಳೊಂದಿಗೆ ಮುಖಾಮುಖಿಯಾಗುವ ಇವರ ಕವಿತೆಗಳು ದೈನಂದಿನ ಬದುಕಿನ ವಿನ್ಯಾಸವನ್ನೇ ಕಾವ್ಯವನ್ನ...

ಚಕ್ರಾಸನ ಮತ್ತು ಭುಜಂಗಾಸನ

26-03-2024 ಬೆಂಗಳೂರು

"ವ್ಯಕ್ತಿಯು ‘ಚಕ್ರಾಸನ’ ಮಾಡುವಾಗ ಮೊದಲು ಬೆನ್ನಿನ ಮೇಲೆ ಮಲಗಬೇಕು. ಇದು ವ್ಯಕ್ತಿಯನ್ನು ಶಕ್ತಿಯುತವ...

ಹಿಂದಿನ ನಿಲ್ದಾಣದಲ್ಲಿ...

19-03-2024 ಬೆಂಗಳೂರು

'ಪ್ರಯಾಣದ ಭಾಗವಾಗಿ ನಮ್ಮೊಂದಿಗಿದ್ದು ನೆನಪುಗಳ ಬುತ್ತಿ ಕಟ್ಟಿಕೊಡುವ ಈ "ಹಿಂದಿನ ನಿಲ್ದಾಣಗಳೇ" ಬದುಕಲು...