ನಡೆಯದ ಬಟ್ಟೆ

Date: 02-02-2023

Location: ಬೆಂಗಳೂರು


“ನನಗೆ ಗೊತ್ತು ದಿನಗಳು ಜಾರಿಹೋಗುತ್ತವೆ. ನಾಳೆಗಳಿಗೆ ಇವತ್ತು ನೆನ್ನೆಯಾಗುತ್ತದೆ. ನೆನಪಾಗುತ್ತದೆ. ಶ್ಯಾಮು ನನ್ನ ಜೀವನಕ್ಕೆ ಏನು? ಕಾಲದ ಸುಕ್ಕುಗಳು ಮುಖದ ಮೇಲೆ ಹರಡುವ ಕನಸೂ ಇಲ್ಲದಿರುವ ಗಳಿಗೆಗಳಿಗಿಂತ ಬಹು ಮುಂಚಿನಿಂದಲೂ ನಾವಿಬ್ಬರೂ ಸ್ನೇಹಿತೆಯರು. ಒಬ್ಬ ಗೆಳತಿಯ ಬಗ್ಗೆ ಇರುವ ಎಲ್ಲಾ ಆಸಕ್ತಿಯೂ ನನಗೆ ಅವಳಲ್ಲಿದೆ. `ನನ್ನ ಬಗ್ಗೆ ನೀನೇ ಜೀವನ ಚರಿತ್ರೆ ಬರೆದುಬಿಡು ಮಾರಾಯ್ತಿ’ ಎಂದು ಅವಳು ನಕ್ಕದ್ದು ಇದೆ” ಎನ್ನುತ್ತಾರೆ ಲೇಖಕಿ ಪಿ. ಚಂದ್ರಿಕಾ. ಅವರು ತಮ್ಮ ತೇಲುವ ಪಾದಗಳು ಅಂಕಣದಲ್ಲಿ `ಪ್ರಪಂಚ ಒಂದು ಸುಂದರ ಕನಸು' ಅನ್ನು ಕಟ್ಟಿಕೊಟ್ಟಿದ್ದಾರೆ.

1. ಪ್ರಪಂಚ ಒಂದು ಸುಂದರ ಕನಸು:
`ಎಲ್ಲಿಂದ ಆರಂಭಿಸಲಿ? ಇದು ಕಷ್ಟದ ಕೆಲಸ. ಯಾಕೆಂದರೆ ಮಾತುಗಳು ಹೀಗೆ, ಯಾವುದನ್ನೂ ಬಹುದೂರ ಹೊತ್ತೊಯ್ಯುವ ಶಕ್ತಿ ಅವುಕ್ಕಿಲ್ಲ. ಆದರೆ ನಮ್ಮ ಮಿತಿ ಎಂದರೆ ಮಾತುಗಳಿಲ್ಲದೆ ನಾವು ಬದುಕಲಾರೆವು. ನೆನಪುಗಳೂ ಹೀಗೆ ಯಾವ ಯಾವಾಗಲೋ ಎದ್ದು ಕುಳಿತು ನಮ್ಮನ್ನು ಅಣಕಿಸಲಿಕ್ಕೆ ಆರಂಭಿಸುತ್ತವೆ. ಆಶ್ಚರ್ಯ ಎಂದರೆ ಹೆಸರನ್ನು ತೆಗೆದುಬಿಟ್ಟರೆ ಬರೆದದ್ದು ನಾನಲ್ಲ, ನಾನಲ್ಲ ಅಂದ ಮೇಲೆ ನಾನು ಎನ್ನುವ ರೂಪಕ್ಕೆ ಬೆಲೆಯೇ ಇಲ್ಲ. ಇದು ವಿಚಿತ್ರ. ಇದನ್ನೆಲ್ಲಾ ನಾನು ಬರೆದೆ ಎಂದು ಅಂದುಕೊಳ್ಳುವುದಾದರೂ ಹೇಗೆ?’ ಎಂದಳು ಶ್ಯಾಮು. ಇಷ್ಟು ವಿಸಂಗತವಾಗಿ ಮಾತಾಡುವ ವ್ಯಕ್ತಿಯನ್ನು ನಾನು ನೋಡೇ ಇಲ್ಲ. ಯಾರದೋ ಸಾಲುಗಳನ್ನು ನನ್ನದೆಂದು ಹೇಳುತ್ತಲೆ ನಂಬಿಸುವ ಈ ಕಾಲಮಾನದ ತುರ್ತುಗಳಿಗೆ ಇದೆಂಥಾ ಮಾತುಗಳು?! `ನಿಜ ತೇಜೂ ನನ್ನ ಮಾತುಗಳಲ್ಲಿ ನಿನಗೆ ನಂಬಿಕೆ ಬರೋದಿಲ್ಲ ಅಲ್ಲವಾ?’ ಅವಳ ಉಸಿರು ನನ್ನ ತಾಕುತ್ತಿತ್ತು ಅಷ್ಟು ಹತ್ತಿರದಲ್ಲಿದ್ದೆವು. ಯಾಕೋ ಅವಳು ಎಂದಿನ ಹಾಗೆ ಇರಲಿಲ್ಲ- ಬಹುಶಃ ಸ್ವಲ್ಪ ಹೊತ್ತಿನ ಹಿಂದೆ ನಡೆದ ಘಟನೆ ಅವಳನ್ನು ವಿಚಲಿತ ಗೊಳಿಸಿರಲಿಕ್ಕೂ ಸಾಧ್ಯವಿದೆ. ಅವಳು ನನ್ನೊಳಗಿನ ಭಾವಕ್ಕೆ ಮಾತಿನ ರೂಪ ಕೊಡುವವಳಂತೆ ಹೇಳುತ್ತಲೇ ಇದ್ದಳು. `ಗೊತ್ತಾ ನಿನಗೆ ಕನ್ನಡಿಯಲ್ಲಿ ನಾನು ನನ್ನನ್ನು ನೋಡಿಕೊಳ್ಳುವಾಗ ಅದು ನನಗಿಂತ ಭಿನ್ನ ಅನ್ನಿಸುತ್ತೆ. ನನ್ನದೇ ಬಿಂಬ ಆದರೂ ಅದು ರೂಪಾಂತರ ಹೊಂದಿರುತ್ತದೆ, ಆ ಮೂಲಕ ಬೇರೆಯದೇ ಏನೋ ಬಿಚ್ಚಿಕೊಳ್ಳುತ್ತಾ ಹೋಗುತ್ತದೆ. ಕನ್ನಡಿಯಲ್ಲಿ ಕಂಡ ನಾನು ಎನ್ನುವ ಆ ಬಿಂಬವನ್ನು ಸ್ವಚ್ಚವಾದ ತಿಳಿ ಬೆಳಕು ಒಂದು ಬಗೆಯಲ್ಲೂ, ಮಬ್ಬು ಬೆಳಕು ಇನ್ನೊಂದೆ ಬಗೆಯಲ್ಲೂ ಕಾಣಲಿಕ್ಕೆ ಸಾಧ್ಯವಾಗುತ್ತದೆ ಅಲ್ಲವಾ?’ ಎಂದು.

`ಇನ್ನು ನೀನು ನನಗೆ ಬೇಡ’ ಎಂದು ಚಂದ್ರ ಶ್ಯಾಮುವನ್ನು ಬಿಟ್ಟು ಹೊರಟ ಆ ಗಳಿಗೆಯನ್ನು ಅವಳು ತಡೆದುಕೊಳ್ಳಲಾರಳು ಎಂದುಕೊಂಡಿದ್ದೆ. ಆದರೆ ಶ್ಯಾಮುವಿನ ಒಳ ಜಗತ್ತು ಅಷ್ಟು ಗಟ್ಟಿಯಾಗಿದ್ದಿರಬಹುದು ಎಂದು ಅಂದುಕೊಂಡಿರಲಿಲ್ಲ. `ನಾನು ಚಂದ್ರನನ್ನು ಎಂದೂ ಬೈಯ್ಯುವುದಿಲ್ಲ. ಅವನಿಗೆ ದಕ್ಕಿದ ನಾನು ಅಷ್ಟೇ. ಅವನಿಗೆ ನಾನು ಇಡಿಯಾಗಿ ದಕ್ಕಬೇಕೆಂದು ಬಯಸಿದರೆ ಅದು ನನ್ನದೇ ತಪ್ಪು. ದಕ್ಕಿಸಿಕೊಳ್ಳುವುದು, ದಕ್ಕುವುದು ಎರಡೂ ಒಂದು ಥರದ ಆಟ. ಹಾಗೆ ದಕ್ಕಿದ ಅಸ್ತಿತ್ವಗಳು ನೈಜವಾದದ್ದು ಎನ್ನುವುದನ್ನು ಒಪ್ಪುವುದು, ಬಿಡುವುದು ಅವರವರಿಗೆ ಬಿಟ್ಟಿದ್ದು. ಆದರೆ ತಾಕದೇ ಉಳಿದ ಎಷ್ಟೋ ಸಂಗತಿಗಳು ಮಾತ್ರ ನಿಶ್ಚಿತವಾಗಿ ಕತ್ತಲಿನಲ್ಲಿ ಅಬೇಧವಾಗಿ ಉಳಿದೇ ಇವೆ. ಗೊತ್ತಾ? ಮನಸ್ಸಿನ ಒಳಗಿನ ಎಷ್ಟೋ ಕಂಪಾರ್ಟ್ಮೆಂಟ್‌ಗಳು ಇವಕ್ಕಾಗೇ ಇವೆ. ಹೇಳಿಕೊಳ್ಳಲು ಬಾರದ ಸಂಗತಿಗಳನ್ನು ನಾವೇ ಪ್ರಯತ್ನಪೂರ್ವಕವಾಗಿ ಅಲ್ಲಿ ಒಗೆದಿರುತ್ತೇವೆ. ಅಂಥಾ ಒಂದು ಸಂಗತಿ ನಾನೂ ಆಗಿರಬಹುದು’ ಎಂದಳು. ಶ್ಯಾಮುವಿನ ಬಿಗಿಯಾದ ಮುಖದಲ್ಲಿ ಅಲ್ಲಲ್ಲಿ ಸಡಿಲಿಕೆ ಕೂಡಾ ಕಾಣತೊಡಗಿತು. ಹೀಗೆ ಹಿಡಿದು ಬಿಡುವ ಅವಳ

ಮುಖದ ಸ್ನಾಯುಗಳು ಅವಳ ಒಳಗಿನ ಭಾವೋದ್ವೇಗದ ಮೇಲೆ ನಿಯಂತ್ರಣ ಸಾಧಿಸುತ್ತಿದ್ದುದನ್ನು ಸ್ವಷ್ಟವಾಗಿ ಹೇಳುತ್ತಿತ್ತು. `ಶ್ಯಾಮು ಪ್ಲೀಸ್ ಕಂಟ್ರೋಲ್ ಯುವರ್ ಸೆಲ್ಫ್’ ಎಂದೆ. ಉತ್ತರಿಸದೆ ನಕ್ಕಳು. ಕಿವಿಗೆ ಇಯರ್ ಫೋನ್ ಹಾಕಿಕೊಂಡ ವ್ಯಕ್ತಿಯೊಬ್ಬ ಜಗತ್ತಿನ ಆನಂದವೆಲ್ಲಾ ತನ್ನ ಮುಖದಲ್ಲೇ ಇದೆ ಎನ್ನುವ ಹಾಗೆ ತನ್ನ ಪಾಡಿಗೆ ತಾನು ಹಾಡು ಹೇಳುತ್ತಾ ಹೊರಟ. `ಜಗತ್ತಿಗೆ ಕಿವಿ ಮುಚ್ಚು ಒಳಗಿನ ನಿನ್ನ ಜಗತ್ತು ಸುಕ್ಷೇಮವಾಗಿರುತ್ತೆ’ ಎಂದಳು ಶ್ಯಾಮು. ಅವಳು ಹೇಳಿದ್ದು ನನಗೋ ಆ ವ್ಯಕ್ತಿಗೋ ಗೊತ್ತಾಗಲಿಲ್ಲ. ಆದರೆ ಅವಳ ಮಾತು ನನ್ನೊಳಗೆ ನೋವನ್ನೇ ಮೊಳಕೆಯೊಡೆಸಿತು.

ನನಗೆ ಗೊತ್ತು ದಿನಗಳು ಜಾರಿಹೋಗುತ್ತವೆ. ನಾಳೆಗಳಿಗೆ ಇವತ್ತು ನೆನ್ನೆಯಾಗುತ್ತದೆ. ನೆನಪಾಗುತ್ತದೆ. ಶ್ಯಾಮು ನನ್ನ ಜೀವನಕ್ಕೆ ಏನು? ಕಾಲದ ಸುಕ್ಕುಗಳು ಮುಖದ ಮೇಲೆ ಹರಡುವ ಕನಸೂ ಇಲ್ಲದಿರುವ ಗಳಿಗೆಗಳಿಗಿಂತ ಬಹು ಮುಂಚಿನಿಂದಲೂ ನಾವಿಬ್ಬರೂ ಸ್ನೇಹಿತೆಯರು. ಒಬ್ಬ ಗೆಳತಿಯ ಬಗ್ಗೆ ಇರುವ ಎಲ್ಲಾ ಆಸಕ್ತಿಯೂ ನನಗೆ ಅವಳಲ್ಲಿದೆ. `ನನ್ನ ಬಗ್ಗೆ ನೀನೇ ಜೀವನ ಚರಿತ್ರೆ ಬರೆದುಬಿಡು ಮಾರಾಯ್ತಿ’ ಎಂದು ಅವಳು ನಕ್ಕದ್ದು ಇದೆ. ಮಾಮೂಲಿನಂತೆ ಅವಳ ಕೆನ್ನೆಯ ಗುಳಿಯನ್ನು ಮುಟ್ಟಿ ಚಂದ ಎಂದಾಗ ಮುಖದಲ್ಲಿ ಹರಡಿದ ನೋವಿನ ಗೆರೆಗಳ ಮದ್ಯೆಯೇ ನಗು ಹರಡಿತು, `ಮೊನ್ನೆ ಮೊನ್ನೆಯ ವರೆಗೂ, ಇದು ಚಂದ್ರನಿಗೆ ಕಂಡೆ ಇರಲಿಲ್ಲ. ನಮಗೆ ಡಿವೋರ್ಸ್ ಆಯ್ತಲ್ಲಾ, ಅವತ್ತು ಕೊನೆಯ ಕಾಫಿಗಾಗಿ ಇಬ್ಬರೂ ರೆಸ್ಟೋರೆಂಟ್ ಗೆ ಹೋದಾಗ ಮೊದಲ ಬಾರಿಗೆನ್ನುವಂತೆ, `ನಿನ್ನ ಕೆನ್ನೆಯ ಮೇಲೆ ಗುಳಿ ಬೀಳುತ್ತಿದೆ’ ಎಂದ. ಇಪ್ಪತ್ತು ವರ್ಷಗಳ ದಾಂಪತ್ಯ ನನ್ನ ಕೆನ್ನೆಗ ಗುಳಿಯನ್ನು ತೋರದೆ ಡಿವೋರ್ಸ್ ಹಂತದಲ್ಲಿ ತೋರಿದ್ದಕ್ಕೆ ನನಗೆ ಬೇಸರವಾಯಿತು. ನನ್ನ ಕಣ್ಣುಗಳು ತುಂಬಿ ಬಂದವು. ಅವನಿಗೆ ಅರ್ಥವಾಯಿತು ತೇಜೂ, `ಸಾರಿ’ ಎಂದ. ಅದನ್ನು ತೆಗೆದುಕೊಂಡು ಏನು ಮಾಡಲಿ?’ ಎಂದಳು ಶ್ಯಾಮು. ಈಗಲೂ ಅವಳ ಕಣ್ಣುಗಳಲ್ಲಿ ನೀರು ತುಂಬಿದೆಯಾ? ಎಂದು ನೋಡಿದೆ. ಇಲ್ಲ ಕಣ್ಣ ಹನಿ ಇಣುಕುವ ಯಾವ ಲಕ್ಷಣವೂ ಕಾಣಲಿಲ್ಲ.

ಬರೆಯಬೇಕು ಮನಸ್ಸನ್ನು ಹಿಂದೆ ಚಲಿಸುವಂತೆ ಮಾಡುತ್ತಾ, ನನಗೆ ಗೊತ್ತು ಶ್ಯಾಮುವಿನಂಥಾ ಹೆಣ್ಣು ಜಗತ್ತಿನಲ್ಲಿ ಸಿಗುವುದು ಕಷ್ಟ. ಅವಳ ಪ್ರಯತ್ನಗಳು, ವಿನಮ್ರತೆ, ಹೊರಳುವ ವ್ಯಗ್ರತೆ ಎಲ್ಲವನ್ನೂ ಕಂಡಿದ್ದೇನೆ. ಚಂದ್ರ ಹೇಳುತ್ತಿದ್ದ, `ಇಂಥಾ ವಿಕ್ಷಿಪ್ತರ ಜೊತೆ ಬದುಕುವುದು ಕಷ್ಟ. ಅವಳ ಕಲ್ಪನೆ, ಅವಳ ಜೀವನ, ಅವಳ ಭಾವನೆಗಳ ಅನಂತತೆ ನನಗೆ ಗೊತ್ತು. ನನಗೆ ಅವಳ ಕ್ರಿಯೇಟಿವಿಟಿಯಲ್ಲಿ ದೊಡ್ಡ ನಂಬಿಕೆಯೂ ಇದೆ. ಎಷ್ಟೋ ಸಲ ನಾನಲ್ಲದೆ ಅವಳಿಗೆ ಬೇರೆ ಯಾರಾದರೂ ಸಿಕ್ಕಿದ್ದಿದ್ದರೆ ಒಳ್ಳೆಯದಿತ್ತು ಅನ್ನಿಸಿಯೂ ಇದೆ. ನನ್ನ ವಾಸ್ತವ ಪ್ರಜ್ಞೆ ಶ್ಯಾಮುವನ್ನು ಸಹಿಸುತ್ತಿಲ್ಲ. ಆದರೆ ನನಗೆ ಗೊತ್ತು ಅವಳು ನನ್ನನ್ನು ತುಂಬಾ ಪ್ರೀತಿಸುತ್ತಾಳೆ-ಅವಳನ್ನೂ ಮೀರಿ-ನನಗೆ ಭಯ ಆಗುವಷ್ಟು. ಇನ್ನು ಚಿಂತನೆಯಲ್ಲಿ ಬರವಣಿಗೆಯಲ್ಲಿ ಅವಳು ನಮ್ಮ ಕಾಲದ ಬೆಸ್ಟ್ ಮೈಂಡ್’ ಎಂದು. `ಪ್ಲೀಸ್ ಅವಳ ಮನಸ್ಸಿಗೆ ಆಘಾತ ಕೊಡಬೇಡ’ ಎಂದು ಚಂದ್ರನಲ್ಲಿ ನಾನೂ ಬೇಡಿಕೊಂಡಿದ್ದೆ. `ನನಗೆ ಅವಳಷ್ಟು ಗಾಢವಾಗಿ ಬದುಕುವುದು ಸಾಧ್ಯವಿಲ್ಲ. ಆ ಉತ್ಕಟತೆ ತ್ಡೆದುಕೊಳ್ಳುವುದು ಕಷ್ಟವೇ. ಆದರೆ ಅವಳನ್ನು ಪ್ರೀತಿಸದೆ ಇರಲಾರೆ’ ಎಂದಿದ್ದ. ಹಾಗಾದ್ರೆ ಪ್ರೀತಿ ಎನ್ನುವುದಕ್ಕೆ ಅರ್ಥವೇನು? ನನ್ನೇ ಕೇಳಿಕೊಂಡಿದ್ದೆ. ಬಾಲ್ಯವನ್ನು ಇವತ್ತಿಗೆ ತೆಗೆದುಕೊಂಡು ಬಾ ಇವತ್ತಿನಿಂದ ಹಿಂದಕ್ಕೆ ಹೋಗುವುದು ಬೇಡ ಎಂದಿದ್ದ ಯಾರದೋ ಮಾತು ತಟ್ಟೆಂದು ನೆನಪಾಯಿತು. ಹೇಳಿದ್ದು ಯಾರು? ಎಂದು ನೆನಪಿಸಿಕೊಂಡೆ. ನೆನಪಾಗಲಿಲ್ಲ. ಜೀವ ಸೌಖ್ಯವಾಗುವ ಸಂಗತಿಗಳು ಮುನ್ನೆಲೆಗೆ ಬರತೊಡಗಿದವು. ಅಕ್ಷರಗಳು ನನ್ನ ಅಣಕಿಸಿವೆ ನೀನು ಅವಳ ಬಗ್ಗೆ ಬರೆಯ ಬಲ್ಲೆಯಾ? ಗೊತ್ತು ನಾನೀಗ ಬರೆಯುವುದು ಶ್ಯಾಮುವಿನ ಕಥೆಯಲ್ಲ, ಶ್ಯಾಮು ನನ್ನೊಳಗೆ ರೂಪುಗೊಂಡಿದ್ದನ್ನು ಮಾತ್ರ ಎನ್ನಿಸತೊಡಗಿತು. ಅವಳು ನಿಜಕ್ಕೂ ವ್ವಿಕ್ಷಿಪ್ತಳಾ ಪ್ರಶ್ನೆ ಕೇಳಿಕೊಳ್ಳುತ್ತಿದ್ದಂತೆ, ಆಳಕ್ಕಿಳಿದಂತೆ ದೇಹದಿಂದ ಮನಸ್ಸಿಗೂ ಮನಸ್ಸಿನಿಂದ ದೇಹಕ್ಕೂ ಲಾಳಿಯಾಡುವ ಅನೇಕ ಸಂಗತಿಗಳಿಗೆ ನಾನು ಸಾಕ್ಷಿಯಾಗಿದ್ದು ಕಾಡತೊಡಗಿತು.

ಶ್ಯಾಮು ಎನ್ನುವುದು ರೂಪವೇ, ಭಾವವೇ ಅಥವಾ ಅನುಭವವೇ? ಚೌಕಟ್ಟುಗಳು ತನಗೆ ತಾನೆ ಮುರಿಯ ತೊಡಗಿದವು. ಚಿತ್ರವೊಂದು ಆ ಮುರಿದ ಚೌಕಟ್ಟಿನಿಂದ ಹೊರಗೆ ಹಾರಿ ಗಾಳಿಯಲ್ಲಿ ಸ್ವತಂತ್ರವಾಗಿ ತೇಲತೊಡಗಿತು.

***
ಗ್ರೀಷ್ಮದ ಗಾಳಿಗೆ ಹಳದಿಯಾದ ಎಲೆ ಅಲುಗುತ್ತಾ ನೆಲಕ್ಕೆ ಬೀಳತೊಡಗಿತ್ತು. ಶ್ಯಾಮುಗೆ ಭಾನು ಹೇಳಿದ್ದ ಮಾತು ತಟ್ಟನೆ ನೆನಪಾಯಿತು. ನೆಲಕ್ಕೆ ಬೀಳುವ ಮುನ್ನ ಎಲೆಯನ್ನು ಕೈಲಿ ಹಿಡಿದರೆ ಎಲ್ಲಾ ಅಕ್ಷರಗಳೂ ನಮ್ಮ ವಶಕ್ಕೆ ಬರುತ್ತೆ ಅಂತ. ಭಾನು ಅತ್ಯಂತ ಹೆಚ್ಚು ಮಾರ್ಕ್ಸ್ ತೆಗೆದುಕೊಂಡು ಪಾಸಾಗುತ್ತಿದ್ದಳು. ಮೇಷ್ಟ್ರು ಅವಳ ಕಾಲ ಕೆಲಗೆ ನುಸಿಯುವಂತೆ ಹೇಳುತ್ತಿದ್ದರೆ ಶ್ಯಾಮುವಿನ ಕಣ್ಣಂಚು ಒದ್ದೆಯಾಗುತ್ತಿತ್ತು. ಅತ್ಯಂತ ಕಡಿಮೆ ಮಾರ್ಕ್ಸ್ ತೆಗೆದುಕೊಂಡು ಫೇಲಾಗಿದ್ದ ಅವಳಿಗೆ ಶಾಲೆ, ಮನೆಯಲ್ಲಾದ ಅವಮಾನ ಒಳಗೆ ನೋವನ್ನುಂಟು ಮಾಡಿತ್ತು. ಬಲಿಯದ ಮಾವಿನ ಓಟೆಯಿಂದ ಲೆಕ್ಕದಲ್ಲಿ ಸೊನ್ನೆ ಎಂದು ಗೋಡೆಯ ಮೇಲೆ ಯಾರೋ ಬರೆದದ್ದು ಅಳಿಸಲಾಗದೆ ಅವಳನ್ನು ಅಣಕಿಸುತ್ತಲೇ ಇತ್ತು. `ಓದಲಿಕ್ಕೆ ಬರಲಿಲ್ಲ ಕಡಿಮೆ ಮಾರ್ಕ್ಸ್ ಬಂತೂಂದ್ರೆ ಹಾಳಾಗಿ ಹೋಗಬೇಕಾ? ನಾನೇನು ಮಾಡಲಿ ನನಗೆ ಅಕ್ಷರ ಬರಿ ಎಂದರೆ ಚಿತ್ರ ಬರೆಯಬೇಕೆನ್ನಿಸುತ್ತದೆ. ಅಕ್ಷರ ನನಗೊಂದು ಚಿತ್ರದ ಹಾಗೆ ಅದು ಭಾಸವಾದರೆ ನನ್ನ ತಪ್ಪಾ?’ ಎನ್ನುತ್ತಿದ್ದಳು. ಚಿತ್ರ ಎಂದು ನೆನಪಾದ ತಕ್ಷಣ ಅವಳಲ್ಲಿ ಉಲ್ಲಾಸ ಮೂಡಿತು. ಬಣ್ಣವೊಂದು ತಾನೆ ಮುಂಗೈಯ ಮೇಲೆ ಮೂಡಿದಂತಾಗಿ ಪಟ್ಟೆಂದು ಗಾಳಿಯಲ್ಲಿ ಹಾರಾಡುತ್ತಾ ನಿಧಾನಕ್ಕೆ ನೆಲಕ್ಕಿಳಿಯುತ್ತಿದ್ದ ಎಲೆಯನ್ನು ಹಿಡಿದೇ ಬಿಟ್ಟಳು. ಆ ಕ್ಷಣಕ್ಕೆ ಅವಳಿಗೆ ಅನ್ನಿಸಿದ್ದು, `ಈಗ ಎಲ್ಲ ಅಕ್ಷರಗಳೂ ನನ್ನ ಕೈಲೇ’. ಒಂದೇ ಕ್ಷಣ ಅಷ್ಟೇ ಅದೂ ಮರೆತು ಹೋಗಿ ಒಳಗೇ ಇಳಿಯುತ್ತಿದ್ದ ಬಣ್ಣಗಳು ನೂಲಾಗುತ್ತಾ ನೇತಾಡತೊಡಗಿತ್ತು.

ಆಕಾಶದ ನೀಲಿ, ಗಿಡದ ಹಸಿರು, ನೆಲದ ಜೀವರಸವನ್ನೇ ಬಣ್ಣವಾಗಿಸಿಕೊಂಡಂತೆ ಅರಳುತ್ತಿದ್ದ ಹೂವುಗಳು. ಜೀವ ಜಗತ್ತಿನ ವೈರುಧ್ಯ ವೈಪರೀತ್ಯಕ್ಕೆ ತೆರೆದುಕೊಂಡಂತೆ ಕಾಣುತಿದ್ದ ಎಲ್ಲದರಲ್ಲೂ ಮನನೆಟ್ಟು ನಿಂತ ಶ್ಯಾಮು ತನ್ನನ್ನೆ ಮರೆತಿದ್ದಳು. ಮರೆಯುವುದೆಂದರೆ ನೆನಪನ್ನು ಕಳಕೊಳ್ಳುವುದಲ್ಲ. ಮಲಗೆದ್ದ ನಾಯಿ ಮರಿಯೊಂದು ಪಟಪಟನೆ ತನ್ನ ತಲೆ ಕೊಡವಿ ನಿದ್ದೆಯನ್ನು ದೂರ ತಳ್ಳಿದ ಹಾಗೆ. ಇನ್ಯಾವುದೋ ಎಚ್ಚರವೊಂದು ನಮ್ಮನ್ನು ಆವರಿಸಲು ಕಾಯುತ್ತಿದ್ದ ಹಾಗೆ. ತನ್ನ ರೆಕ್ಕೆಯನ್ನು ಪಟ್ಟೆಂದು ಅಗಲಿಸಿ ಪತಂಗವೊಂದು ತನ್ನ ಹೆಗಲ ಮರೆಯಲ್ಲಿ ಅಡಗಿದ್ದ ಬಣ್ಣವ ತಟ್ಟೆಂದು ತೋರಿದ ಹಾಗೆ. ಹಿಡಿಯ ಹೋದ ಕೈಗಳಲ್ಲಿ ಜಾರಿಹೋದ ರೆಕ್ಕೆಯ ಹುಡಿ ಅಂಟಿ ಬೆರಳುಗಳನ್ನೂ ರಂಗುಗೊಳಿಸಿದ ಹಾಗೆ.

ಮರ ತನ್ನ ಮೈ ನಡುಗಿಸಿ ತೇಲಿಬಿಟ್ಟ ಹಸಿರಾದ ಎಲೆ ಹಳದಿಯಾಗುವ ವಿಸ್ಮಯಕ್ಕೆ ತೆರೆದುಕೊಂಡವಳಂತೆ ಅಚ್ಚರಿಯಿಂದ ನೋಡುತ್ತಾ ನಿಂತಳು ಶ್ಯಾಮು. ಋತುಗಳೇ ಹೀಗೆ ಒಂದೊಂದಕ್ಕೂ ಒಂದೊಂದು ಹದ. ಅವು ಯಾಕೆ ಹೀಗೆ ಸೆಳೆಯುತ್ತದೋ ತಿಳಿಯದು. ಆರ್ದ್ರವಾದ ಕೈಗಳಿಂದ ಎತ್ತಿಕೊಂಡ ಎಲೆಯ ನಿರುಕಿಸುತ್ತಾ ನಿಂತ ಅವಳ ಕಣ್ಣುಗಳಲ್ಲಿ ತೇಲಿದ್ದು ಅಚ್ಚರಿಯೇ. ಹಸಿರಿದ್ದದ್ದು ಕೆಂಪಾಗಿ ನಂತರ ಹಳದಿ ಬಣ್ಣಕ್ಕೆ ತಿರುಗಿ, ನೆಲಕ್ಕೆ ಬಿದ್ದು, ಮಣ್ಣ ಬಣ್ಣ ಪಡೆದು ನಂತರ ಕೊಳೆತು ಬರಿಯ ಬಲೆಯಂಥಾ ಜಾಲಾರ ಉಳಿಯುವ ಆಟ ಹೇಗೆ ಸಾಧ್ಯವಾಗುತ್ತದೋ ಎನ್ನುತ್ತಾ ತನ್ನ ಕೈಯ ಹಣ್ಣಾದ ಎಲೆಯಲ್ಲಿ ನಿರುಕಿಸುತ್ತಾ ಯಾವ ಯಾವ ಬಣ್ಣಗಳು ಇದರಲ್ಲಿ ಅಡಕವಾಗಿದೆ ಎಂದು ನೋಡುತ್ತಾ ನಿಂತಳು. ಅವಳ ಕೈಲಿದ್ದ ಆ ಎಲೆಯಲ್ಲಿ ಕೆಂಪು ಹಳದಿ ತುಸುವೇ ಉಳಿದ ಹಸಿರು ಎಲ್ಲವೂ ಅವಳ ಸುತ್ತಾ ಗಿರಕಿ ಹೊಡೆಯತೊಡಗಿದವು.

ಏಯ್ ಶ್ಯಾಮೂ ಅಮ್ಮ ಕೂಗಿದ್ದು ಅವಳನ್ನು ಕಂಗೆಡಿಸಿತು. ತನ್ನ ಭಾವ ಪ್ರಪಂಚವನ್ನು ಅಲುಗಿಸುವ ಯಾವುದೂ ಅವಳಿಗೆ ಬೇಡ. ಅಮ್ಮಾ ವಿನಾ ಕಾರಣ ನನ್ನನ್ನು ಯಾಕೆ ಕರೆಯುತ್ತಾಳೆ? ಅವಳ ಕಣ್ಣ ತುದಿಯ ಅಸಹನೆಗೆ ಉತ್ತರವನ್ನು ಹುಡುಕುವಂತೆ ಓ ಎಂದು ಕೂಗಿದಳು. ಈ ಹುಡುಗಿಗೆ ಯಾವ ಯೋಚನೆಯೋ ತಲೆ ಮೇಲೆ ಏನೋ ಬಿದ್ದವಳಂತೆ ಯಾವಾಗಲೂ ಯೋಚಿಸುತ್ತಲೆ ಇರುತ್ತಾಳೆ. ಅಜ್ಜಿ ಅಡುಗೆ ಮನೆಯಲ್ಲಿ ಕುಳಿತು ಶ್ಯಾವಿಗೆ ಹೊಸೆಯುತ್ತಾ ಶನಿವಾರದ ಹಾಡನ್ನು ಹಾಡುತ್ತಿದ್ದಳು ಹಣ್ಣೂ ಕಾಯಿ ಬಣ್ಣದೆಲೆ ಬಾಡಿದವೇ ಬಣ್ಣಬಣ್ಣದಾಲಿ ಅಡುಗೇನ ಅಟ್ಟಿನ್ನು ಉಣ್ಣೇಳಿರೆಂದು ಪುರುಷಾನಾ ... ಹಾಡನ್ನು ಹಾಡುತ್ತಿದ್ದವಳಿಗೆ ಶ್ಯಾಮು ಕುತೂಹಲದಿಂದ ಅಜ್ಜಿ ಬಣ್ಣಬಣ್ಣದಲಿ ಅಡುಗೇನಾ ಮಾಡುವುದು ಹೇಗೆ ಎಂದಳು. ಸಾರೊಂದು ಬಣ್ಣ, ಅನ್ನವೊಂದು ಬಣ್ಣ, ಪಲ್ಯ ಇನ್ನೊಂದು ಬಣ್ಣ... ನಾಲಿಗೆ ರುಚಿ ಅನುಭವಿಸೋಕ್ಕೂ ಮುಂಚೆ ಕಣ್ಣು ನೋಡುತ್ತೆ. ಆಮೇಲೆ ಕೈಗಳು ಸ್ಪರ್ಷಿಸುತ್ತೆ, ಕೊನೇದಾಗಿ ನಾಲಿಗೆ ರುಚಿ ನೋಡೋದು. ಅದಕ್ಕೆ ಬಣ್ಣ ಬಣ್ಣದಲಿ ಅಡುಗೇನ ಕಾಣೋಕ್ಕೆ ಸಾಧ್ಯ ಇರೋದು ಎಂದಳು.

ಹೌದಲ್ವಾ?! ಬಣ್ಣ ಎಷ್ಟು ಮುಖ್ಯ. ಜಿಲೇಬಿ ನೋಡಿದ ತಕ್ಷಣ ತಿನ್ನ ಬೇಕೂಂತ ಅನ್ನಿಸೋದೇ ಅದರ ಬಣ್ಣದಿಂದ ಆಮೇಲೆ ಸಿಹಿ ನಾಲಿಗೆ ತಾಕೋದು. ಅಮ್ಮ ಉಟ್ಟುಕೊಳ್ಳುವ ಸೀರೆಯ ಬಣ್ಣ ತನಗಿಷ್ಟ ಅಂತಲೇ ತಾನೆ ತೆಗೆದುಕೊಳ್ಳುವುದು, ಅಪ್ಪನಿಗೆ ಕಪ್ಪು ಇಷ್ಟವಿಲ್ಲ, ಅಮ್ಮನಿಗೆ ವಿಪರೀತ ಇಷ್ಟ. ಅಮ್ಮನ ಬಿಳಿಯದಾದ ಮೈಗೆ ಕಪ್ಪು ಚೆನ್ನಾಗೂ ಒಪ್ಪುತ್ತೆ. ಆದರೆ ಉಟ್ಟ ದಿನವೆಲ್ಲಾ ಜಗಳ ತಪ್ಪಿದ್ದಲ್ಲ. ಅಮ್ಮ ಈಚೆಗೆ ಕಪ್ಪನ್ನ ಅನಿಷ್ಟ ಅನ್ನಲಿಕ್ಕೆ ಆರಂಭಿಸಿದ್ದಳು. ಆದರೆ ಶ್ಯಾಮುಗೆ ಮಾತ್ರ ಕಪ್ಪಿನಲ್ಲಿ ಕರಗಿಹೋದ ಹಗಲ ಬಣ್ಣಗಳು ಕಣ್ಣ ಮುಂದೆ ನಲಿದಾಡುತ್ತಿದ್ದವು. ಈಚೆಗೆ ಅವಳಿಗೆ ವಸ್ತುವನ್ನು ಇಡಿಯಾಗಿ ನೋಡಲಿಕ್ಕಾಗುತ್ತಿರಲಿಲ್ಲ. ಅವುಗಳಲ್ಲಿ ಸ್ಪಷ್ಟವಾಗಿ ಗೆರೆಗಳು ರೇಖೆಗಳು, ಬಣ್ಣಗಳು ಎಲ್ಲವೂ ಬಿಡಿಬಿಡಿಯಾಗಿ ಕಾಣತೊಡಗಿದ್ದವು. ಮಣಿಯೊಂದನ್ನು ತೋರಿಸಿ ಇದೇನಿದು ಹೇಳು ಅಂದರೆ, ಅವಳು ಅದನ್ನು ಮಣಿ ಎಂದು ಯಾವತ್ತು ಹೇಳುತ್ತಿರಲಿಲ್ಲ. ಬದಲಿಗೆ ಅದರ ಬಣ್ಣ ಅಥವಾ ಆಕಾರ ಹೀಗೆ ತೋಚಿದ್ದನ್ನು ಹೇಳುತ್ತಿದ್ದಳು. ಈ ಹುಡುಗೀಗೆ ಏನೋ ಸಮಸ್ಯೆ ಇದೆ ಎನ್ನುತ್ತಿದ್ದ ಅಮ್ಮ, ದಿನ ಕಳೆದಂತೆ ಸರಿ ಹೋಗುತ್ತೆ ಅದನ್ನು ದೊಡ್ಡದು ಆಡಬೇಡ ಅನ್ನುತ್ತಿದ್ದ ಅಪ್ಪ. ಎಲ್ಲವೂ ಅವಳ ಕಿವಿಯನ್ನೂ ತಲುಪುತ್ತಿತ್ತು.

ಅಮ್ಮ ಮನೆಯ ಮುಂದೆ ಕಸ ಗೂಡಿಸು ಎಂದರೆ ಅಲ್ಲಿ ಮಣ್ಣ ನೆಲದ ಮೇಲೆ ಮೂಡುವ ಗೆರೆಗಳಲ್ಲಿನ ಆಕೃತಿಯನ್ನು ಹಿಡಿಯಲಿಕ್ಕೆ ಪ್ರಯತ್ನಿಸುತ್ತಿದ್ದಳು. ಕೆಲಸ ಮಾಡÀದೆ ಏನೇ ಮಾಡ್ತಾ ಇದೀಯಾ? ಎನ್ನುವ ಅಮ್ಮನಿಗೆ ಹೇಗೆ ಹೇಳುವುದು ಪರಕೆಯ ತುದಿ ಬರೆಯುತ್ತಿರುವ ರೇಖಾ ಚಿತ್ರಗಳ ಕುರಿತು? ಗೊಂದಲ ಶುರುವಾಗುತ್ತಿತ್ತು.

ಹರಿದ ಹಾವಿನ ಗುರುತು, ಕೋಳಿ ಓಡಾಡಿದ ಹೆಜ್ಜೆಗಳು, ನೀರು ಹರಿದ ಗುರುತು ಬೊಡ್ಡೆಗೆ ಆತು ಕುಳಿತು, ಕುಳಿತ ಕಡೆ ಮೂಡುವ ಎಲ್ಲ ಗುರುತುಗಳಲ್ಲೂ ಏನನ್ನೋ ಹುಡುಕುವ ಶ್ಯಾಮುಗೆ ಎಲ್ಲವೂ ಚಿತ್ರಗಳೇ. ಎಲ್ಲವೂ ಚಿತ್ರವೇ ಆದರೆ ಜೀವಂತವಾಗುವುದಾದರೂ ಯಾವುದು? ಹುಡುಕಾಟವನ್ನು ಮಾತ್ರ ಅವಳ ಕಣ್ಣುಗಳು ನಡೆಸುತ್ತಲೇ ಇರುತ್ತಿದ್ದವು.

ಬೆಳ್ಳಿ ಒಣಗಿದ ಕಡ್ಡಿಯನ್ನು ತನ್ನೆರಡೂ ಕಾಲುಗಳ ಮಧ್ಯೆ ಸಿಕ್ಕಿಸಿಕೊಂಡು ಹೈ ಹೈ ಎನ್ನುತ್ತಾ ಕುದುರೆಯಾಟ ಆಡುತ್ತಿದ್ದ. ಅವನ ಹಿಂದೆ ಓಡಿದ ಸಾಮಿ ಕುದುರೆ ಹೊಡೆಯುವವನಾಗಿದ್ದ. ಶ್ಯಾಮು ಮಾತ್ರ ಆ ಕೋಲು ಎಳೆದುಕೊಂಡು ಹೋದ ಗೆರೆಯನ್ನೇ ನಿರುಕಿಸುತ್ತಿದ್ದಳು. ಶ್ಯಾಮುಗೆ ಏನೆಲ್ಲಾ ಬೆರಗುಗಳಿದ್ದವು. ಒಂದು ದಿನ ದೊಡ್ಡ ಕಡ್ಡಿಯನ್ನು ಹಿಡಿದು ನೆಲದ ಮೇಲೆ ಒಂದೇ ಸಮನೆ ಬಿಡದೆ ಹಾಕುವ ಗೆರೆಯ ಆಟವನ್ನು ಆಡುವಾಗಲೂ ಅವಳನ್ನು ಕಾಡುವ ಬೆರಗು ಇದೇ. ಮುರಿಯದೇ ಗೆರೆಯನ್ನು ಎಷ್ಟು ದೂರ ಬೇಕಾದರೂ ಎಳೆಯಬಹುದಾದರೆ, ಚಿಕ್ಕ ಹಾಳೆಯ ಮೇಲೆ ಎಳೆದ ಗೆರೆಗೂ ನೆಲದ ಮೇಲೆ ಅಷ್ಟುದ್ದ ಬರೆದ ಗೆರೆಗೂ ಮಧ್ಯ ಇರುವ ವ್ಯತ್ಯಾಸವಾದರೂ ಏನು? ಕಣ್ಣಗಲಕ್ಕೆ ಕಾಣುವ ಗೆರೆಯನ್ನು ನೋಡುವಾಗ ಕಣ್ಣು ಕಿರಿದಾಗುತ್ತದೆಯಾ ಅಥವಾ ದೊಡ್ಡದನ್ನು ನೋಡುವಾಗ ಹಿರಿದಾಗುತ್ತದೆಯಾ? ಚಿಕ್ಕ

ಗೆರೆಯನ್ನು ನೋಡುವಾಗ ಸಿಕ್ಕ ನೋಟ ದೊಡ್ಡ ಗೆರೆಯನ್ನು ನೋಡುವಾಗ ಯಾಕೆ ಸಿಗಲಿಲ್ಲ. ಪ್ರಶ್ನೆ ಗೆರೆಯದ್ದೋ ಕಣ್ಣಿನದ್ದೋ ಒಳಗೆ ಭಾವಿಸುವ ಮನಸ್ಸಿನದ್ದೋ?! ಗೆರೆ... ಗೆರೆ... ಬೇರೆ ಮಾಡುವುದೂ, ಆಕಾರ ಕೊಡುವುದೂ, ಸಾಕಾರಗೊಳಿಸುವುದೂ ಅದೇ. ಅದು ಮನೋ ಲೋಕದ ವ್ಯಾಪಾರವನ್ನು ವಿಶಾಲಗೊಳಿಸುತ್ತಾ, ಹರಹನ್ನು ಸಂಪೂರ್ಣವಾಗಿ ಹಿಡಿಯುವತ್ತ ಸಾಗುತ್ತದೆ. ಒಂದು ಗೆರೆ ಎಳೆದು ಆಚೆ ಬದಿ ಈಚೆ ಬದಿಗಳನ್ನು ಕೆರೆ-ದಡ ಮಾಡಬಹುದಾದರೆ ಅಳಿಸಿದ ತಕ್ಷಣ ಆ ಭಿನ್ನತೆಯೇ ಮಾಯವಾಗಿಬಿಡುತ್ತದೆ. ಶ್ಯಾಮುವಿನ ಕನಸಿನಲ್ಲಿ ದೊಡ್ಡ ಕೋಲೊಂದನ್ನು ಹಿಡಿದು ಹೋ ಎಂದು ಕೂಗುತ್ತಾ ಎಲ್ಲ ಮಕ್ಕಳೂ ಗೆರೆ ಎಳೆಯುತ್ತಿದ್ದಾರೆ. ಅದು ಯಾವುದರ ಸಂಕೇತವೋ ಸಾಕ್ಷಿಯೋ ತಿಳಿಯದು. ಗೆರೆ ಎಳೆಯುತ್ತಾ ಎಳೆಯುತ್ತಾ ಇಡೀ ಭೂಮಿಯನ್ನೇ ಸುತ್ತಿ ಮತ್ತೆ ಆರಂಭಿಸಿದ ಜಾಗಕ್ಕೆ ಬರುತ್ತಿದ್ದಾರೆ. ಅದರಲ್ಲು ಯಾರು ಮೊದಲು ಯಾರು ನಂತರ ಎನ್ನುವ ಪೈಪೋಟಿ. ಎದ್ದು ಬಿದ್ದವರು, ಮತ್ತೊಬ್ಬರನ್ನು ನೂಕಿ ನಡೆವವರು, ಶಿವ ಶಿವಾ ಅಲ್ಲೊಂದು ಹಾವು ಹರಿದು ಕೋಲು ಮೂಡಿಸಿದ ಹಾದಿಗಳನ್ನು ಸ್ಪಷ್ಟ ಮಾಡುತ್ತಿದ್ದರೆ, ಕಚ್ಚಬಹುದು ಎಂದು ಭಾಸವಾಗದ ಭಾವವೊಂದು ಹೇಳುತ್ತಿದ್ದಂತೆ, ಆ ಹಾವು ಅವಳನ್ನು ಕಚ್ಚೇ ಬಿಟ್ಟಿತು. ನೋವು ಉರಿ... ಹೋ ಎಂದು ಎದ್ದು ನೋಡುವಾಗ ಕೆಳಗೆ ಬಿದ್ದ ಅವಳ ಕಾಲ ಮೇಲೆ ರಕ್ತದ ಗೆರೆಯೊಂದು ಮೂಡಿತ್ತು. ಇಲ್ಲೇ ಇಲ್ಲೆ ನೀನೊಂದು ನೆನಪಾಗುತ್ತೀಯ ಎಂದು ಹೇಳುತ್ತಾ ಎದ್ದ ನಂತರ ಕೋಲೊಂದನ್ನು ಹಿಡಿದು ಒಂದರ ಕೆಳಗೊಂದರಂತೆ ಸ್ವಲ್ಪ ಸ್ವಲ್ಪವೇ ದೊಡ್ಡದು ಮಾಡುತ್ತಾ ಗೆರೆಗಳನ್ನು ಎಳೆಯುತ್ತಾ ಎಳೆಯುತ್ತಾ ರಾಶಿ ಮಾಡುವಾಗ ಅವಳಲ್ಲೇನೋ ಉತ್ಸಾಹ. ಕನಸಲ್ಲಿ ಕಂಡ ಗೆರೆಗಳು ನಿಜದಲ್ಲಿ ಸಾಕಾರವಾಗುವಾಗ, ಅಲ್ಲೊಬ್ಬ ಹುಡುಗ ಸೈಕಲ್ ತುಳಿದು ಹೊರಟ. ಮಣ್ಣ ನೆಲದ ಮೇಲೆ ಅದು ಹಾಕಿದ ಗೆರೆಗೂ ತಾನು ಕೋಲಿಂದ ಎಳೆದ ಗೆರೆಗೂ ಇರುವ ವ್ಯತ್ಯಾಸ ನಿರುಕಿಸಿದಾಗ ಅವಳ ಮುಖದಲ್ಲಿ ಮಂದಹಾಸವೊಂದು ತೇಲಿತು. ಸೈಕಲ್ ಟೈರ್ ಬಿಟ್ಟು ಹೋದ ಗೆರೆಗಳು ಅವಳೆಳೆದ ಗೆರೆಗಳ ಜೊತೆ ಸೇರಿ ನಲಿಯುವ ಹಾಗೆ ಕಂಡಿತು. ಅವುಗಳನ್ನೇ ನೋಡುತ್ತಾ ನಿಂತ ಶ್ಯಾಮುವನ್ನು ನೋಡುತ್ತಾ ಗೆರೆಗಳೆಲ್ಲವೂ ನಲಿದಾಡುತ್ತಾ ಹಾಡೇಬಿಟ್ಟವು, `ಪ್ರಪಂಚವೊಂದು ಸುಂದರ ಕನಸು, ಕಂಡದ್ದು ಸ್ವಲ್ಪ ಕಾಣಲಿಕ್ಕಿರುವುದು ಅಪಾರ ಥೇಟ್ ನಮ್ಮ ಹಾಗೆ’ ಎಂದು.

ಈ ಅಂಕಣದ ಹಿಂದಿನ ಬರೆಹಗಳು:
ಕಾಲು ಜಾರಿ ಬಿದ್ದವನು ಹಲವರಿಗೆ ದಾರಿ ತೋರುವನು
ಕಂದನಂತೆ ಚಂದಿರನ ಬಾನು ಎತ್ತಿ ಆಡಿಸುತಲಿಹುದು
ತೇಲಿಸು ಇಲ್ಲ ಮುಳುಗಿಸು
ಭಾವಶುದ್ಧಿಯೇ ಆಧ್ಯಾತ್ಮ
ಕಿರಿದನ್ನು ಕಿರಿದರಲ್ಲೇ ನೋಡು
ಅನುಭವದಲ್ಲಿ ಘನೀಭವಿಸುವ ವಿಶ್ವದ ರಹಸ್ಯಮಯ ಸಂಗತಿಗಳು

ಬಿಟ್ಟುಬಿಡುವುದೆಂದರೂ ಕಟ್ಟಿಕೊಳ್ಳುವುದೇ
ಗಾಳದ ದಾರ ದೂರಕ್ಕೆ ಬಿಡುವುದು ಮೀನಿನ ಆಸೆಗೆ
ಕಳಚಿಕೊಳ್ಳುವುದೂ ಆಟದ ಭಾಗವೇ.
ಸರಿದ ಸೆರಗಿನಲ್ಲಿ ಅಡಗಿದ್ದು ಸೂರ್ಯ ಚಂದ್ರ
ಪ್ರಾರ್ಥನೆ; ಪದಾರ್ಥವಲ್ಲ, ಪರಾರ್ಥ
ಜಗತ್ತಿನ ಮೇರು ತಾಯಿ
ನಿಧಿಯ ಕನವರಿಕೆ
ಅವಳ ಧ್ಯಾನಕ್ಕೆ ಒಳಿತೇ ಗುರಿ
ಅನುಬಂಧಗಳ ಲೀಲೆ
ಕನಸಿನೊಳಗಿನ ನನಸು
ನೀಲಿ ಕಣ್ಣುಗಳ ಮುತ್ತಜ್ಜಿ ಮತ್ತು ನಾನು

 

MORE NEWS

ಪರಿಘಾಸನ ಮತ್ತು ಅರ್ಧ ಚಕ್ರಾಸನ 

16-04-2024 ಬೆಂಗಳೂರು

"ಪರಿಘಾಸನ ಆಸನವು ) ಪಿತ್ತ ಜನಕಾಂಗ ಮತ್ತು ಮೇದೋಜೀರಕ ಚೈತನ್ಯಗೊಳ್ಳುವಂತೆ ಮಾಡುತ್ತದೆ. ಹಾಗೆಯೇ ‘ಅರ್ಧ ಚಕ್...

ಲೋಕಸಭಾ ಚುನಾವಣೆಗಳ ಸುತ್ತಮುತ್ತ ಒಂದು ಸುತ್ತು

15-04-2024 ಬೆಂಗಳೂರು

"ಪರಸ್ಪರ ರೋಚಕ ನಿಂದನೆಗಳು. ಕ್ಷೇತ್ರವಾರು ಚಕ್ಕರಗುಳ್ಳಿ ಇಡುವ ಚತುರ ವಿವರಗಳು. ಹೊಸ ಹೊಸ ಬೈಗುಳಗಳು. ಮಾಧ್ಯಮಗಳಿಗ...

ಉಪವಿಷ್ಟಕೋನಾಸನ ಮತ್ತು ಪವನಮುಕ್ತಾಸನ

09-04-2024 ಬೆಂಗಳೂರು

"ಉಪವಿಷ್ಟಕೋನಾಸನ ಯೋಗಾಸನವು ಮನಸ್ಸನ್ನು ಶಾಂತಗೊಳಿಸುತ್ತದೆ ಮತ್ತು ಮಾಂಸಗಳ ತೂಕವನ್ನು ಕಡಿಮೆಗೊಳಿಸುತ್ತದೆ. ಪವನಮು...