ನದಿಗೆ ನೆನಪಿನ ಹಂಗಿಲ್ಲ

Date: 05-01-2022

Location: ಬೆಂಗಳೂರು


'ಮನುಷ್ಯರ ಅಪರಿಪೂರ್ಣತೆಯನ್ನು ತೋರಿಸುತ್ತಲೇ ಪೂರ್ಣಗೊಳ್ಳಲು ತಳಮಳಿಸುವ ಅವರ ಚಿತ್ತ ಸ್ಥಿತಿಯನ್ನು ಕಾರ್ನಾಡರು ತೆರೆದಿಡುತ್ತಾರೆ' ಎನ್ನುತ್ತಾರೆ ಲೇಖಕಿ ಗೀತಾ ವಸಂತ. ಅವರು ತಮ್ಮ ‘ತೆರೆದಷ್ಟೂ ಅರಿವು’ ಅಂಕಣದಲ್ಲಿ ಗಿರೀಶ್ ಕಾರ್ನಾಡರ ಹಯವದನ ನಾಟಕದ ಕುರಿತು ವಿಶ್ಲೇಷಿಸಿದ್ದಾರೆ. 

ಮನುಷ್ಯನ ಮನೋಲೋಕದ ನಿಗೂಢವಾದ ಚಲನೆಗಳನ್ನು ವ್ಯಕ್ತವಾಗಿ ಕಾಣುವಂತೆ ನಾಟಕೀಯಗೊಳಿಸುವುದು ನಾಟಕಗಳ ವಿಶೇಷತೆ. ರಂಗಭೂಮಿಯ ಪರಿಕರಗಳ ಮೂಲಕ ಹಾಗೂ ರಂಗತಂತ್ರಗಳ ಮೂಲಕ ಈ ಪರಿಣಾಮವನ್ನು ಸಾಧಿಸಲಾಗುತ್ತದೆ.  ಆಂಗಿಕಾಭಿನಯ, ಮಾತು, ಸಂಗೀತ, ನೃತ್ಯ ಇವೆಲ್ಲವೂ ಬೆರೆತ ನಾಟಕವು ಒಂದು ಸಶಬ್ದ ಸಚಿತ್ರ ಜಗತ್ತು. ಮನೋರಂಗವನ್ನು ರಂಗಭೂಮಿಯ ಮೂಲಕ ಕಾಣಿಸುವ ಕಲ್ಪನೆಯೇ ಏಕಾಂತ ಹಾಗೂ ಲೋಕಾಂತಗಳ ಸೃಜನಶೀಲ ಬೆಸುಗೆಯಾಗಿ ತೋರುತ್ತದೆ. ನವ್ಯದ ಸಾಹಿತ್ಯ ಸಂದರ್ಭದಲ್ಲಿ ಬರೆದ ಗಿರೀಶ ಕಾರ್ನಾಡರು ಮನುಷ್ಯರ ಅಂತರಂಗದ ತೊಳಲಾಟಗಳನ್ನು, ದ್ವಂದ್ವಗಳನ್ನು ಅಭಿವ್ಯಕ್ತಿಸಲು ನಾಟಕವನ್ನೇ ಮಾಧ್ಯಮವಾಗಿ ಬಳಸಿಕೊಂಡರು ಹಾಗೂ ನಾಟಕ ಸಾಹಿತ್ಯವನ್ನು ಅದರೆಲ್ಲ ಸೂಕ್ಷ್ಮತೆಯೊಂದಿಗೆ ಬೆಳೆಸಿದರು. ಅವರನ್ನು ಆಧುನಿಕ ಸಂವೇದನೆಯ ನಾಟಕಕಾರ ಎಂದು ಗುರುತಿಸುತ್ತೇವೆ. ಆಧುನಿಕತೆ ಎಂದರೆ ಅದು ಬರಿಯ ಕಾಲಕ್ಕೆ ಸಂಬಂಧಿಸಿದ ಸಂಗತಿಯಲ್ಲ. ನಿಶ್ಚಿತ ಚೌಕಟ್ಟುಗಳನ್ನು ತೊರೆದು ಆಳದ ಸತ್ಯಗಳನ್ನು ಶೋಧಿಸುವ ಮನಸ್ಥಿತಿಯೇ ಆಧುನಿಕವಾದುದು. ಬುದ್ದಿ ಪ್ರಧಾನವಾದ ತರ್ಕವು ಏಕಸತ್ಯವನ್ನು ಸ್ಥಾಪಿಸಹೊರಟರೆ, ತರ್ಕದಾಚೆಯ ಮನುಷ್ಯ ಪ್ರವೃತ್ತಿಗಳು ಬಹುಸ್ವರಗಳನ್ನು ಹೊಮ್ಮಿಸುವ ತಮ್ಮ ಅನಿರೀಕ್ಷಿತ ಚಲನೆಯಿಂದ ಅಚ್ಚರಿ ಮೂಡಿಸುತ್ತವೆ. ದೇಹ ಮತ್ತು ಮನಸ್ಸಿನ ಇಂಥ ಸುಪ್ತ ಸ್ವರಗಳನ್ನು ಕಾರ್ನಾಡರ ಹಯವದನ ನಾಟಕವು ಕೇಳಿಸುವ ಬಗೆ ಅನನ್ಯವಾಗಿದೆ. ಮನುಷ್ಯನೊಳಗಿನ ಕಾಮ, ಹಿಂಸೆ, ಅಧಿಕಾರ, ನೈತಿಕತೆ ಮುಂತಾದ ಪ್ರಶ್ನೆಗಳನ್ನು ಎದುರುಗೊಳ್ಳುವಲ್ಲಿ ಕಾರ್ನಾಡರ ಸಂವೇದನೆ ಹೊಸದಾಗಿದೆ. ಕಾಲವು ನಿರ್ಮಿಸುವ ಮಿಥ್ಯೆಗಳನ್ನು ಮೀರುತ್ತ ಕಾಲಾತೀತವಾದ ಮೂಲ ಸಂವೇದನೆಯೊಂದನ್ನು ಪಾತ್ರಗಳ ಮೂಲಕ ಕಟ್ಟುವ ಕಾರ್ನಾಡರು ಇದಕ್ಕಾಗಿ ಪುರಾಣ ಹಾಗೂ ಜನಪದ ಕಥನಗಳ ಭಿತ್ತಿಯನ್ನು ಆಯ್ದುಕೊಳ್ಳುತ್ತಾರೆ. 

ಮನುಷ್ಯರ ಅಪರಿಪೂರ್ಣತೆಯನ್ನು ತೋರಿಸುತ್ತಲೇ ಪೂರ್ಣಗೊಳ್ಳಲು ತಳಮಳಿಸುವ ಅವರ ಚಿತ್ತ ಸ್ಥಿತಿಯನ್ನು ಕಾರ್ನಾಡರು ತೆರೆದಿಡುತ್ತಾರೆ. ಮನುಷ್ಯನ ಅಪರಿಪೂರ್ಣತೆ ಅವನ/ಳ ಪಾರ್ಶ್ವಿಕ ಗ್ರಹಿಕೆಯಲ್ಲಿದೆ. ದೇಹ ಮನಸ್ಸು ಪ್ರಜ್ಞೆ ಎಲ್ಲವನ್ನೂ ಒಟ್ಟಾಗಿ ಪರಿಭಾವಿಸಲಾಗದ ಸೀಳುಗ್ರಹಿಕೆಯು ಸೀಳು ವ್ಯಕ್ತಿತ್ವವನ್ನೂ ರೂಪಿಸುತ್ತದೆ. ಸುಪ್ತ ಪ್ರಜ್ಞೆಯ ಹೊರಳಿವಿಕೆಯು ಬುದ್ದಿಯಾಚೆಗೂ ಕೆಲಸ ಮಾಡುತ್ತಿರುತ್ತದೆ. ಹಯವದನವು ಇಂಥ ದ್ವಂದ್ವಗಳನ್ನು ಸೂಕ್ಷ್ಮವಾಗಿ ಅಭಿವ್ಯಕ್ತಿಸಿದೆ. ಸತ್ಯ ಎಂದರೇನು? ಎಂಬುದು ಎಲ್ಲ ಕಾಲದಲ್ಲೂ ಕಾಡಿದ ತಾತ್ವಿಕ ಪ್ರಶ್ನೆ. ಇದನ್ನು ತಮ್ಮ ಮೊದಲ ನಾಟಕ ಯಯಾತಿಯಲ್ಲೂ ಕಾರ್ನಾಡರು ಎತ್ತಿಕೊಳ್ಳುತ್ತಾರೆ. ಅಲ್ಲಿ ಸೂತ್ರಧಾರನು ಈ ಪ್ರಶ್ನೆಗಳನ್ನೆತ್ತಿದರೆ, ಹಯವದನದಲ್ಲಿ ಭಾಗವತ ಇಂಥ ಪ್ರಶ್ನೆಯನ್ನು ಉದ್ದೀಪಿಸುತ್ತಾನೆ. ಸತ್ಯವನ್ನು ಸ್ಪರ್ಷಿಸುವುದು ಬೆಂಕಿಯನ್ನು ಸ್ಪರ್ಷಿಸಿದಂತೆ. ಅದಕ್ಕೆ ನಮ್ಮ ಕಣ್ಕಟ್ಟುಗಳು ಕಳಚಿಕೊಳ್ಳಬೇಕು. ಇಂದ್ರಿಯದ ಮಿತಿಗಳು ಹಿಗ್ಗಬೇಕು. ಯಯಾತಿ ನಾಟಕದ ಸೂತ್ರಧಾರನೂ ಇದನ್ನು ಪೂರ್ವ ಭಾವಿಯಾಗಿ ಪ್ರಸ್ತಾಪಿಸುತ್ತಾನೆ. ನದಿಯಲ್ಲಿ ಮುಳುಗಿದ ಕಟ್ಟಿಗೆ ವಕ್ರೀಭವನದ ಪರಿಣಾಮದಿಂದ ಡೊಂಕಾಗಿ ತೋರುತ್ತದೆ. ಆದರೆ ಅದು ಸತ್ಯವಲ್ಲ. ತೋರುವುದು ಸತ್ಯವಲ್ಲ. ಸತ್ಯವು  ಕಾಣ್ಕೆಯ ಸಂಗತಿ. ಹಯವದನ ನಾಟಕದಲ್ಲೂ ಇಂಥದೇ ಸಂದರ್ಭವಿದೆ. “ಏನು ನೋಡಿದನೋ ಏನು ತಿಳಿದುಕೊಂಡನೋ. ಸತ್ಯ ಅಂದರೆ ಹೀಗೆ! ಮೃಗಜಲ!”. ಈ ಮಾತುಗಳು ನಾಟಕದ ಸೂತ್ರದಂತಿದ್ದು ಹಯವದನನ ಕಥೆಯಲ್ಲೂ ದೇವದತ್ತ, ಕಪಿಲ ಹಾಗೂ ಪದ್ಮಿನಿಯರ ಕಥೆಯಲ್ಲೂ ವಿಸ್ತರಿಸಿಕೊಂಡಿದೆ.

ವಿಭಜಿತ ನೋಟದಿಂದ ಸತ್ಯವನ್ನು ಅರಿಯಲಾಗದೇ ತೊಳಲಾಡುವ ಮನುಷ್ಯ ಕುಲದ ಸಂಕಟವು ಹಯವದನನ ಪಾತ್ರದ ಮೂಲಕ ನಾಟಕವನ್ನು ಆವರಿಸಿಕೊಂಡಿದೆ. ಮನುಷ್ಯ ದೇಹ ಹಾಗೂ ಕುದುರೆಯ ತಲೆಯನ್ನು ಹೊಂದಿದ ಅರ್ಧಪ್ರಾಣಿ ಹಾಗೂ ಅರ್ಧಮನುಷ್ಯ ಸ್ಥಿತಿಯ ಸಂಕಟವನ್ನು ಈ ಪಾತ್ರವು ಸಂಕೇತಿಸುತ್ತದೆ. ಆಧುನಿಕ ಮನುಷ್ಯನ ಈ ಸೀಳು ವ್ಯಕ್ತಿತ್ವದ ಸಮಸ್ಯೆಯನ್ನು ಅಭಿವ್ಯಕ್ತಿಸಲು ಕಾರ್ನಾಡರು ಜನಪದ ಕತೆಯ ಪರಿಕಲ್ಪನೆಯನ್ನು ಬಳಸಿಕೊಂಡಿದ್ದಾರೆ. ಕಾರ್ನಾಡರಿಗೆ ಹೊಸ ಕತೆಯನ್ನು ಹೇಳುವುದಕ್ಕಿಂತ ಈಗಾಗಲೇ ಜನಮಾನಸದಲ್ಲಿ ಇರುವ ಕತೆಯ ಹೊರಮೈಯನ್ನು ಬಳಸಿಕೊಂಡು ತನ್ನ ಕಾಲದ ತಲ್ಲಣಗಳನ್ನು ಅಭಿವ್ಯಕ್ತಿಸುವಲ್ಲಿ ಹೆಚಿನ ಆಸ್ಥೆಯಿದೆ. ಇದು ಅವರ ನಾಟಕಗಳ ತಂತ್ರವೂ ಹೌದು. ಕಾಂಬಾರರಲ್ಲಿಯೂ ಇಂಥದೇ ಪ್ರಯೋಗಶೀಲತೆಯನ್ನು ಕಾಣುತ್ತೇವೆ. ಸಿರಿಸಂಪಿಗೆ ಹಾಗೂ ನಾಗಮಂಡಲ ನಾಟಕಗಳಲ್ಲಿಯೂ ದೇಹ ಮನಸ್ಸುಗಳ ದ್ವಂದ್ವ, ಸೀಳು ವ್ಯಕ್ತಿತ್ವದ ತಲ್ಲಣಗಳಿವೆ. ವಾಸ್ತವದಿಂದ ಬಿಡುಗಡೆ ಪಡೆದ ಕಥನ ತಂತ್ರದ ರೂಪಕ ಜಗತ್ತಿನ ಮೂಲಕ ಎಲ್ಲ ಕಾಲದೇಶಗಳ ಮನುಷ್ಯರ ಆದಿಮ ಸ್ಥಿತಿಯ ತಲ್ಲಣಗಳನ್ನು ಇಲ್ಲಿ ನಿರೂಪಿಸಲಾಗಿದೆ. ಮನುಷ್ಯ ಹಾಗೂ ಪ್ರಾಣ ಜಗತ್ತಿನ ಕಾಲ್ಪನಿಕ ಬೆರೆಯುವಿಕೆಯ ಮೂಲಕ ಕಥನವು ಇನ್ನೇನನ್ನೋ ಸೂಚಿಸುವ ತಂತ್ರವನ್ನು ಪಂಚತಂತ್ರದಂತಹ ಕಥನಗಳಲ್ಲೂ ಕಾಣುತ್ತೇವೆ. ಇಲ್ಲಿನ ದೇಸಿ ರಂಗಭೂಮಿಯಿಂದ ಈ ತಂತ್ರವನ್ನು ಕಂಬಾರರು ಹಾಗೂ ಕಾರ್ನಾಡರು ಕಸಿಕಟ್ಟಿಕೊಂಡಿದ್ದಾರೆ.

ಗಜಮುಖನ ಸ್ತುತಿಯಿಂದ ಆರಂಭವಾಗುವ ನಾಟಕವು ದೈವದ ಕಲ್ಪನೆಯಲ್ಲೇ ಇರುವ ಈ ಅರ್ಧಮಾನವ ಅರ್ಧಪ್ರಾಣಿ ಸ್ಥಿತಿಯನ್ನು ಸಾಂಕೇತಿಕವಾಗಿ ಬಳಸಿಕೊಂಡಿದೆ. ಪೂರ್ಣತ್ವ ಎಂದರೇನು? ಅದು ಮನುಷ್ಯರ ಸ್ಥಿತಿಯಲ್ಲಿ ಸಿದ್ದಿಸಿಕೊಳ್ಳಲು ಸಾಧ್ಯವೇ ಇಲ್ಲವೇ? ಎಂಬ ಪ್ರಶ್ನೆ ಇಲ್ಲಿ ಸುಳಿದು ಹೋಗುತ್ತದೆ. ‘ದೇವರಪೂರ್ಣತ್ವ ಮನುಷ್ಯ ಕಲ್ಪನೆಗೇ ಒಗ್ಗಲಾರದಂಥದ್ದು ಎಂಬುದನ್ನೇ ಆ ಮಂಗಳ ಮೂರ್ತಿಯ ರೂಪ ಸಂಕೇತಿಸುತ್ತಿರಬಹುದು’ ಎಂಬ ಮಾತು ಆದಿಯಲ್ಲಿ ಬರುತ್ತದೆ. ಮನುಷ್ಯ ರೂಪದೊಳಗೂ ಇರುವ ಪ್ರಾಣಿಯ ಮೂಲಸತ್ವ ಅಥವಾ ಸ್ವಭಾವವನ್ನು ಇದು ಸಂಕೇತಿಸುತ್ತಿರಬಹುದು. ದೇಹ, ಮನಸ್ಸು, ಬುದ್ದಿ ಎಲ್ಲವೂ ಒಂದನ್ನೊಂದು ನಿಯಂತ್ರಿಸುತ್ತ ಮನುಷ್ಯನ ಒಟ್ಟೂ ಅಸ್ತಿತ್ವವನ್ನು ಹುಟ್ಟುಹಾಕುತ್ತದೆ. ಇಂಥ ದ್ವಂದ್ವಗಳೇ ಇಲ್ಲದ ದೈವತ್ವದ ಸ್ಥಿತಿಯಲ್ಲಿ ಪೂರ್ಣತೆಯ ಅನುಭವ ಸಹಜವಾಗಿಯೇ ಸಂಭವಿಸಬಹುದು. ಈ ರಹಸ್ಯ ಬಿಡಿಸುವುದು ನಮ್ಮ ಅಳವಿಗೆ ಮೀರಿದ್ದು ಎನ್ನುತ್ತಲೇ ಇಲ್ಲಿ ರಂಗಕ್ರಿಯೆ ಆರಂಭವಾಗುತ್ತದೆ. ನಮ್ಮ ಅನುಭವಗಳನ್ನು ಶೋಧಿಸಿಕೊಳ್ಳುತ್ತ ನಡೆಯುವುದೊಂದೇ ನಮ್ಮ ವಿಧಿ. ಹಾಗಾಗಿ ನಾಟಕವು ಅಸ್ತಿತ್ವದ ತಳಮಳಗಳನ್ನು ದೇಹದ ಜೊತೆಯಾಗಿಯೇ ನೋಡುತ್ತಹೋಗುತ್ತದೆ.

ಕನ್ನಡಿಯ ಮುಂದೆ ಕನ್ನಡಿಯನ್ನು ಹಿಡಿದಾಗ ಒಳಗೊಳಗೆ ಅಸಂಖ್ಯ ಕನ್ನಡಿಗಳು ಕಾಣುತ್ತ ಭ್ರಮೆಹುಟ್ಟಿಸುವಂತೆ, ವ್ಯಕ್ತಿಯೋಳಗಿನ ಹಲವು ವ್ಯಕ್ತಿತ್ವಗಳನ್ನು ಈ ನಾಟಕವು ತೆರೆದು ತೋರುತ್ತದೆ. ಹಾಗೆ ಮಾಡಲು ಇಲ್ಲಿ ನಾಟಕದೊಳಗೊಂದು ನಾಟಕವನ್ನು ಆಡುವ ತಂತ್ರವಿದೆ. ಕಪಿಲ ದೇವದತ್ತ ಪದ್ಮಿನಿಯರ ಕತೆಯನ್ನು ನಾಟಕವಾಗಿ ಪ್ರದರ್ಶಿಸಬೇಕಗಿರುವಾಗ ನಟನೊಬ್ಬನಿಗೆ ವಾಸ್ತವದಲ್ಲಿ ಈ ಕುದುರೆಯ ತಲೆಯ ವ್ಯಕ್ತಿ ಎದುರಾಗುತ್ತಾನೆ. ಆದರೆ ಈ ಸತ್ಯವನ್ನು ಯಾರೂ ಒಪ್ಪದೇ ನಟನ ಭ್ರಮಿತ ಸ್ಥಿತಿಯ ಕುರಿತು ಲೇವಡಿ ಮಾಡುತ್ತಾರೆ. ಸತ್ಯವನ್ನು ಸಿದ್ದಮಾದರಿಯಲ್ಲಿ ಒಪ್ಪಿಕೊಂಡಿರುವಾಗ ಈ ವೈಚಿತ್ರ್ಯವನ್ನು ಒಪ್ಪಿಕೊಳ್ಳುವುದು ಕಷ್ಟವಾಗುತ್ತದೆ. ನಮ್ಮ ಸಿದ್ದ ತರ್ಕಗಳನ್ನು ಮೀರಿ ಹರಿಯುತ್ತಿರುವುದೇ ಪ್ರಕೃತಿ. ಅದರ ರಹಸ್ಯಗರ್ಭದಲ್ಲಿರುವ ವೈಚಿತ್ರ್ಯಗಳಿಗೆ ಕೊನೆಯೇ ಇಲ್ಲ. ಹಯವದನಿಗೆ ಈ ವಿಚಿತ್ರ ಸ್ಥಿತಿ ಪ್ರಾಪ್ತವಾಗುವುದರ ಹಿಂದೆ ಒಂದು ಕಥೆಯಿದೆ. ಅಪ್ರತಿಮ ಸುಂದರಿಯಾದ ಕರ್ನಾಟಕ ದೇಶದ ರಾಜಕುಮಾರಿ ತನ್ನ ಸ್ವಯಂವರದಲ್ಲಿ ರಾಜಪುತ್ರರನ್ನೆಲ್ಲ ನಿರಾಕರಿಸಿ ಕುದುರೆಯೊಂದರ ಮೇಲೆ ಮೋಹಗೊಳ್ಳುತ್ತಾಳೆ. ಅದನ್ನೇ ಮದುವೆಯಾಗಲು ಹಠಹಿಡಿಯುತ್ತಾಳೆ. ಈ ಮದುವೆಯಿಂದ ಜನಿಸಿದವನೇ ಹಯವದನ. ಹದಿನೈದುವರ್ಷ ಸಂಸಾರಮಾಡಿದ ನಂತರ ಕುಬೇರನ ಶಾಪದಿಂದ ಕುದುರೆಯಾಗಿ ಹುಟ್ಟಿದ್ದ ಗಂಧರ್ವ ಮತ್ತೆ ಸ್ವಸ್ಥಿತಿಗೆ ಮರಳುತ್ತಾನೆ. ಈ ದೀರ್ಘಕಾಲದ ಮನುಷ್ಯ ಪ್ರೀತಿಯೇ ಅವನನ್ನು ಮುಕ್ತಗೊಳಿಸಿದ್ದು. ಆದರೆ ಗಂಧರ್ವನಾಗಿ ರೂಪಾಂತರ ಹೊಂದಿದವನ ಜೊತೆ ಇಂದ್ರಲೋಕಕ್ಕೆ ಹೋಗಲು ರಾಜಕುಮಾರಿ ಒಪ್ಪಲೇ ಇಲ್ಲ. ಕೋಪಗೊಂಡ ಗಂಧರ್ವ ಅವಳನ್ನು ಕುದುರೆಯಾಗೆಂದು ಶಪಿಸಿ ಹೊರಟುಹೋದ. ಅವರಿಬ್ಬರ ನಡುವೆ ಅತ್ತ ಮನುಷ್ಯನೂ ಅಲ್ಲದ ಕುದುರೆಯೂ ಅಲ್ಲದ ದ್ವಂದ್ವಲಿದ್ಲ ಈತ ಉಳಿದುಹೋದ. ಈ ಅಪೂರ್ಣತೆಯ ತಳಮಳಕ್ಕೀಡಾದ ಹಯವದನನಿಗೆ ಹೇಗಾದರೂ ಪೂರ್ಣಗೊಳ್ಳುವ ತಹತಹ. ಆದರೆ ಮನುಷ್ಯನಾಗಿಯೋ? ಪ್ರಾಣಿ ಯಾಗಿಯೋ?. ಕೊನೆಗೂ ಅವನಿಗೆ ಕುದುರೆಯಾಗುವುದೇ ಲೇಸೆಂದು ಅನಿಸುವುದಾದರೂ ಏಕೆ?. ಇಲ್ಲಿ ಪೂರ್ಣತೆಗಾಗಿ ತನ್ನ ವ್ಯಕ್ತಿತ್ವದ ಒಳಗೂ ಹೊರಗೂ ಅಲೆದಾಡಿದ ಹಯವದನನ ಒಳತೋಟಿ ಕಾಣುತ್ತದೆ. ಮನುಷ್ಯನಾಗುವ ಪ್ರಯತ್ನದಲ್ಲಿ ಸಾರ್ವಜನಿಕ ಜೀವನದಲ್ಲಿ ತೊಡಗಿಕೊಂಡ ಆತ ಪೌರನೀತಿ, ರಾಷ್ಟ್ರಭಕ್ತಿ, ರಾಷ್ಟ್ರೀಯತೆ, ಭಾರತೀಕರಣ, ಸಮಾಜವಾದ ಎಲ್ಲದರ ಒಳಹೊಗುತ್ತಾನೆ. ಆದರೆ ಇದ್ಯಾವುದೂ ಅವನನ್ನು ಪೂರ್ಣಾಂಗನನ್ನಾಗಿ ಮಾಡಲೇ ಇಲ್ಲ!. ಮನುಷ್ಯನ ಸಾಮಾಜಿಕ ಚಿಂತನೆ, ರಾಜಕೀಯ ಸರಿತನ, ವಿವಿಧ ಸಿದ್ಧಾಂತಗಳು ಯಾವುದೂ ಪರಿಪೂರ್ಣ ಸ್ಥಿತಿಯನ್ನು ದರ್ಶಿಸುವುದಿಲ್ಲ ಎಂಬ ವ್ಯಂಗ್ಯ  ಸಮಕಾಲೀನ ಜಗತ್ತಿನ ವ್ಯಂಗ್ಯವೂ ಹೌದು. ಹಾಗೆಯೇ ಧರ್ಮವೂ ಬರಿ ಆಚರಣೆಯಾಗಿ ಪೂರ್ಣತ್ವವನ್ನು ಸಾಕಾರ ಗೊಳಿಸಲಾಗದೇ ಸೋಲುತ್ತದೆ. ತೀರ್ಥಕ್ಷೇತ್ರಗಳು, ದರ್ಗಾ, ಇಗರ್ಜಿ, ಸಾಧು ಸಂತರು, ಬಾಬಾಗಳು, ಬತ್ತಲೆಯವರು, ಲಂಗೋಟಿಯವರು, ಮುಳುಗಿದವರು, ತೇಲುವವರು.. ಹೀಗೆ ಎಲ್ಲಿ ಹುಡುಕಿ ಹೋದರೂ ಪೂರ್ಣಾಂಗನಾಗುವುದು ಸಾಧ್ಯವಾಗುವುದಿಲ್ಲ. ಮನುಷ್ಯನ ಎಲ್ಲ ಹೋರಾಟ ಅಲೆದಾಟಗಳೂ ದ್ವಂದ್ವ ಕಳಚಿಕೊಳ್ಳಲು ನೆರವಾಗದ ತೀಕ್ಷ್ಣವ್ಯಂಗ್ಯವು ಇಲ್ಲಿದೆ. ನಾಟಕದಲ್ಲಿ ಇಂಥ ಅನೇಕ ಸೂಕ್ಷ್ಮ ಸ್ಥಳಗಳಿವೆ. 

ಹಯವದನನ ಕತೆಗೆ ಸಮಾನಾಂತರವಾಗಿ ಸಾಗುವ ಇನ್ನೊಂದು ಕತೆ ಮೈಮನಗಳ ಸುಳಿಯಲ್ಲಿ ಅಲೆದಾಡಿಸುತ್ತದೆ. ಪದ್ಮಿನಿ ಎಂಬ ಹೆಣ್ಣಿಗಾಗಿ ಪ್ರಾಣಸ್ನೇಹಿತರಾದ ದೇವದತ್ತ ಹಾಗೂ ಕಪಿಲರ ಸಂಬಂಧ ಮುರಿದು ಬೀಳುತ್ತದೆ. ಕಾಮ ಹಾಗೂ ಹಿಂಸೆಯ ಸುಪ್ತಚಹರೆಗಳು ಅನಾವರಣಗೊಳ್ಳುತ್ತ ಹೋಗುತ್ತವೆ. ಹೆಣ್ಣುಗಂಡಿನ ಆದಿಮ ಆಕರ್ಷಣೆಯ ಲೋಕ ತೆರೆದುಕೊಳ್ಳುತ್ತ ಹೋಗುತ್ತದೆ. ಹೆಣ್ಣುಗಂಡಿನ ಸಂಬಂಧದ ವಿವಿಧ ಮಗ್ಗಲುಗಳೇ ನಮ್ಮ ಕಾವ್ಯ, ಪುರಾಣ, ತತ್ವಜ್ಞಾನಗಳಲ್ಲಿ ನಿರೂಪಣೆಗೊಂಡಿವೆ. ಅದೊಂದು ಕೊನೆಯಿರದ ಸೆಳೆತಗಳ ಲೋಕ. ರೂಪದ ಆಕರ್ಷಣೆಯಿಂದ ಆರಂಭವಾಗುವ ಈ ಸಂಬಂಧ ಅಧಿಕಾರ ಸಂಬಂಧವಾಗಿ ಮಾರ್ಪಡುತ್ತ ಸಿಕ್ಕುಗಳೇರ್ಪಡುತ್ತವೆ. ಇದು ಪ್ರಕೃತಿ ಹಾಗೂ ಸಂಸ್ಕೃತಿಯ ಘರ್ಷಣೆಯೂ ಹೌದು. ನಮ್ಮಲ್ಲಿ ಗಂಡು ಹೆಣ್ಣಿನ ಸಂಬಂಧವು ಅಧಿಕೃತಗೊಳ್ಳುವುದು ಅಥವಾ ಅದಕ್ಕೆ ನೈತಿಕತೆಯ ಮೊಹರು ಬೀಳುವುದು ಮದುವೆಯ ಮೂಲಕ. ಮದುವೆಯು ದಾಂಪತ್ಯ ನಿಷ್ಠೆಯನ್ನು ಬೇಡುತ್ತದೆ. ಆದರೆ ಪ್ರಕೃತಿಯ ಚಲನಶೀಲ ಸ್ವಭಾವವು ಅಧಿಕಾರಕ್ಕೆ ಅತೀತವಾದುದು. ವಿಪ್ರ ವಿದ್ಯಾಸಾಗರನ ಮಗ ದೇವದತ್ತ ಪದ್ಮಿನಿಯ ಮೋಹದಲ್ಲಿ ಮತ್ತನಾಗುತ್ತಾನೆ. ತನ್ನ ವ್ಯಕ್ತಿತ್ವವೇ ಕಣ್ಣಾಗಿ ಅವಳನ್ನು ಹುಡುಕುತ್ತಾನೆ. ಬಯಸುತ್ತಾನೆ. ಅವಳನ್ನು ಪಡೆಯಲು ಸ್ನೇಹಿತ ಕಪಿಲ ನಿಷ್ಕಲ್ಮಷ ಭಾವದಿಂದ ನೆರವಾಗುತ್ತಾನೆ. ಕಪಿಲ ಕಮ್ಮಾರಸಾಲೆಯ ರಾಹುಲನ ಮಗ. ದೇವದತ್ತ ಕವಿ ಹಾಗೂ ಪಂಡಿತನಾಗಿದ್ದರೆ, ಕಪಿಲ ದೇಹದ ಕಸುವುಳ್ಳವನು. ಕುಸ್ತಿಯಲ್ಲಿ ಮೈಮಣಿಸುವುದನ್ನು ಬಲ್ಲವನು. ಹುಂಬ, ಕಾಡುಕುರುಬ. ನಾಜೂಕಿಲ್ಲದವನು. ಪದ್ಮಿನಿಯನ್ನು ಮದುವೆಯಾದ ದೇವದತ್ತ ಅವಳೊಂದಿಗಿನ ಏಕಾಂತವನ್ನು ಗೆಳೆಯನೊಂದಿಗೆ ಹಂಚಿಕೊಳ್ಳಲಾರ. ಪದ್ಮಿನಿ ತನ್ನವಳು ಮಾತ್ರ ಎಂಬ ವಾಂಛೆ ನಿಧಾನಕ್ಕೆ ಅಧಿಕಾರವಾಗಿ ಹೊರಳುತ್ತದೆ. ಕಪಿಲನಿಗೆ ಮಾತ್ರ ಇದರ ಅರಿವಾಗುವುದಿಲ್ಲ. ಪದ್ಮಿನಿ ಶುದ್ದ ಪ್ರಕೃತಿಯಂಥವಳು. ಅವಳು ಮುಕ್ತ ಹಾಗೂ ಚಲನಶೀಲಳು. ಇವರು ಮೂವರೂ ಸೇರಿ ಹೊರಸಂಚಾರ ಹೊರಟಾಗ ಕಾಡಿನ ನಡುವಿನ ಆ ಸ್ವಚ್ಛಂದ ಪರಿಸರದಲ್ಲಿ ಅವಳ ಮನದ ರಾಗಗಳು ಕಲಕಲನೆ ಹರಿಯುತ್ತವೆ. ದೇಹಭಾವ ಎಚ್ಚರಗೊಳ್ಳುತ್ತದೆ. ಅವಳು ಮುತ್ತೈದೆ ಹೂವನ್ನು ಬಯಸಿದಾಗ ಥಟ್ಟನೆ ಮರವೇರಿ ಅದನ್ನು ತಂದುಕೊಡುವ ಕಪಿಲನ ಕಸುವು ಅವಳನ್ನು ಸೆಳೆಯುತ್ತದೆ. ಪದ್ಮಿನಿಯು ಕಪಿಲನನ್ನು ಹೀಗೆ ಗ್ರಹಿಸುತ್ತಾಳೆ. “ಚೈತನ್ಯದ ಜಲಪಾತ! ಮೈಮಾತ್ರ ಎಂಥ ಮೈ! ಬೆನ್ನಲ್ಲಿ ಸರೋವರದ ತರಂಗಗಳ ಹಾಗೆ ಸ್ನಾಯು ಕುಣೀತವೆ, ಇಷ್ಟು ಹರವಾದ ಬೆನ್ನಿಗೆ ಎಷ್ಟು ತೆಳುವಾದ ಸೊಂಟ, ನೋಡಿದರೆ ಮೈ ನವಿರೇಳತದೆ... ನೋಡುವವರ ಕಣ್ಣನ್ನೇ ಅಂಟಿಕೊಳ್ಳುವ ಮೈ, ಯಾವ ಹೆಣ್ಣಾದರೂ ಮಾರುಹೋಗಬೇಕು..” ಪದ್ಮಿನಿಯು ಕಪಿಲನ ಮೈಯಲ್ಲೇ ಕಣ್ಣಾಗಿದ್ದು ದೇವದತ್ತನಿಗೂ ಅರಿವಾಗುತ್ತದೆ. “ಕುಮಾರಿಯಾದರೇನು? ಮುತ್ತೈದೆಯಾದರೇನು? ಎಂಥ ಮೂರ್ಖ ನಾನು! ...ನೋಡು ದೇವದತ್ತ ಸರಿಯಾಗಿ ನೋಡು. ಅಲ್ಲಿ ಏಳೋ ಅರಿಷಿಣ ನೇರಿಲ ಜ್ವಾಲೆ ನೋಡು. ಇಡಿಯ ಅಂತರಂಗ ಕರಗಿಸಿ ಅವನ ಮಸಿಯಲ್ಲಿ ಎರಕ ಹೊಯ್ದು ಪುಟ ಇಡತಿದ್ದಾಳೆ ನೋಡು. ನಿನ್ನ ಕರುಳು ಸುಡಲಿ..ಪುಪ್ಪಸ ಬೂದಿಯಾಗಲಿ..ಆದರೆ ಹೆದರದೇ ನೋಡು..ನಿನ್ನ ಕುರುಡುತನ ಸುಟ್ಟುಹೋಗಿ ಮತ್ತೆ ಬಾಧಿಸದಹಾಗೆ ನೋಡು..” ದೇವದತ್ತ ಈ ಭಯ ಸಂಶಯ ಸೋಲುಗಳನ್ನು ಗೆಲ್ಲಲಾಗದೇ ಮಹಾಕಾಲಿಯೆದುರು ಶಿರಚ್ಛೇದ ಮಾಡಿಕೊಳ್ಳುತ್ತಾನೆ. ಗೆಳೆಯನ ಸಾವನ್ನು ಕಂಡ ಕಪಿಲನೂ ಶಿರಚ್ಛೇದ ಮಾಡಿಕೊಳ್ಳುತ್ತಾನೆ. ಪದ್ಮಿನಿ ಅವಾಕ್ಕಾಗುತ್ತಾಳೆ.

ಇಬ್ಬರಲ್ಲಿ ಒಬ್ಬರನ್ನಾದರೂ ಉಳಿಸಿದರೆ ಸಾಕಿತ್ತು ಎಂದು ಹಲುಬುವ ಪದ್ಮಿನಿಗೆ ಕಾಳಿ ಇಬ್ಬರನ್ನೂ ಕರುಣಿಸುತ್ತಾಳೆ ಕತ್ತಲು ಹಾಗೂ ಗಡಿಬಿಡಿಯಲ್ಲಿ ರುಂಡ ಮುಂಡಗಳನ್ನು ಜೋಡಿಸುವಾಗ ಪದ್ಮಿನಿಯು ಒಬ್ಬರ ದೇಹಕ್ಕೆ ಇನ್ನೊಬ್ಬರ ತಲೆಯನ್ನು ಜೋಡಿಸಿಬಿಡುತ್ತಾಳೆ. ಅಪರಿಪೂರ್ಣತೆಯ ದ್ವಂದ್ವ ಇಲ್ಲಿಂದಲೇ ತೀವ್ರವಾಗುತ್ತ ನಾಟಕೀಯಗೊಳ್ಳುತ್ತದೆ. ದೇಹ ಮತ್ತು ಬುದ್ದಿಯನ್ನು ಛಿದ್ರಗೊಳಿಸಿ ಪ್ರತ್ಯೇಕಿಸಿದಾಗ ತಳಮಳ ಹಾಗೂ ಹಿಂಸೆಯ ಲೋಕ ಹುಟ್ಟಿಕೊಳ್ಳುತ್ತದೆ. ಗರ್ಭಿಣಿಯಾಗಿದ್ದ ಪದ್ಮಿನಿ ಈಗ ಯಾರ ಹೆಂಡತಿ? ಈಗ ದೇವದತ್ತನಿಗೆ ಕಪಿಲನ ಮೈಯಿದೆ. ಹಾಗಾದರೆ ಅವಳ ಗರ್ಭ ಯಾರದು? ಕಪಿಲ ಪಡೆದ ದೇವದತ್ತನ ಮೈಯದಾ? ಪತಿಯೊಂದಿಗೆ ಅವಳು ವಾಪಸಾಗಬೇಕಾದುದೇ ನ್ಯಾಯವೆಂದಾದರೆ ಮೈ ದೇವದತ್ತನೋ, ಅಥವಾ ಶಿರಸ್ಸೋ? ನಮ್ಮ ಅಸ್ತಿತ್ವ ಎಲ್ಲಿದೆ? ಅಲ್ಲಿ ದೇವದತ್ತ ಹಾಗೂ ಕಪಿಲರ ಮಧ್ಯೆ ವಾಗ್ಯುದ್ಧವೇ ನಡೆಯುತ್ತದೆ. ಶಾಸ್ತ್ರಗಳ ಪ್ರಕಾರ ಶಿರಸ್ಸೇ ಪುರುಷನ ಸಂಜ್ಞೆಯೆಂದು ಪಂಡಿತನಾದ ದೇವದತ್ತ ವಾದಿಸುತ್ತಾನೆ. ‘ಶಾಸ್ತ್ರಗಳನ್ನು ತೋರಿಸಿ ಏನು ಬೇಕಾದರೂ ಹೊರಳಿಸಬಹುದೇ?’ ಎಂದು ಕಪಿಲ ಪ್ರಶ್ನಿಸುತ್ತಾನೆ. 

ನಿಜವಾಗಿಯೂ ಪದ್ಮಿನಿ ಕತ್ತಲಲ್ಲಿ ಗೊಂದಲಗೊಂಡಳೇ? ಅಥವಾ ಬೇಕೆಂದೇ ತನಗಿಷ್ಟವಾದ ದೇಹವನ್ನು ದೇವದತ್ತನ ತಲೆಯೊಂದಿಗೆ ಜೋಡಿಸಿದಳೇ? ಎಂಬುದು ಸೂಕ್ಷ್ಮಸತ್ಯ. ಅದನ್ನು ನಾಟಕ ಗುಟ್ಟೊಡೆಯುವುದಿಲ್ಲ. ಆದರೆ ಕಪಿಲ ಅದನ್ನು ಪದ್ಮಿನಿಗೆ ಹೇಳುತ್ತಾನೆ. “ನಿನ್ನ ಮನಸ್ಸು ತಿಳೀತದೆ ನನಗೆ. ನಿನಗೆ ದೇವದತ್ತನ ಬುದ್ದಿವಂತ ತಲೆಬೇಕು. ಕಪಿಲನ ಶಕ್ತಿವಂತ ಮೈಬೇಕು..”. ಕೊನೆಗೂ ಶಾಸ್ತ್ರ ಗೆಲ್ಲುತ್ತದೆ. ಪದ್ಮಿನಿ ದೇವದತ್ತನ ತಲೆಯಿರುವ ಕಪಿಲನ ದೇಹದೊಂದಿಗೆ ಸಂಸಾರ ಮಾಡುತ್ತಾಳೆ. ಅಲ್ಲಿ ದ್ವಂದ್ವವೇಳುತ್ತಲೇ ಇರುತ್ತದೆ. ದೇವದತ್ತ ಕಪಿಲನ ಮೈಯ ಸ್ಮೃತಿಯಿಂದಾಗಿ ಗರಡಿಮನೆಗೆ ಹೋಗುವುದು, ಕುಸ್ತಿಯ ಪಟ್ಟುಗಳನ್ನು ಪ್ರಯೋಗಿಸುವುದು..ಹಾಗೆಯೇ ದೇವದತ್ತ ತನ್ನ ರೂಢಿಯಂತೆ ಮೈಗೆ ಚಂದನವನ್ನು ಪೂಸಿಕೊಳ್ಳುವುದು ಎರಡೂ ದ್ವಂದ್ವಗಳೇ. ಕಪಿಲನ ಮೈಯನ್ನು ಮೋಹಿಸುವ ಪದ್ಮಿನಿಗೆ ಅವನ ಮೈಬೆವರಿನ ವಾಸನೆ ಇಷ್ಟ. ಇವ ಹಚ್ಚಿಕೊಳ್ಳುವ ಗಂಧವಲ್ಲ. ದೇಹದ ಸತ್ಯ ಹಾಗೂ ಬುದ್ದಿಯ ನೋಟಗಳು ಬೆರೆಯದೇ ಉಳಿದುಬಿಡುತ್ತವೆ. ಕೆಲವು ವರ್ಷಗಳ ತರುವಾಯ ತಲೆಯಂತೆಯೇ ಮೈ ಬದಲಾಗುತ್ತದೆ. ದೇವದತ್ತನಿಗೆ ಅವನದೇ ಸುಕೋಮಲ ಮೈ ಸಿಗುತ್ತದೆ. ಹಾಗೆಯೇ ಕಾಡಲ್ಲಿದ್ದ ಕಪಿಲನಿಗೂ ದೇವದತ್ತನ ಮೈ ಹೋಗಿ ಅವನು ತನ್ನನ್ನು ತಾನು ಪಡೆದುಕೊಳ್ಳತ್ತಾನೆ. ಆದರೆ ಎರಡು ಮೈಮನಗಳ ಹೆಂಡತಿಯಾದ ಪದ್ಮಿನಿ ಅಸ್ಪಷ್ಟತೆಯಲ್ಲಿ ನರಳುತ್ತಾಳೆ.

ಅಸ್ತಿತ್ವ ಎಂಬುದು ಎಲ್ಲಿದೆ? ತೊಗಲಿನಲ್ಲಾ ಅಥವಾ ನೆನಪುಗಳಲ್ಲಾ? ಮೆದುಳಿಗೆ ನೆನಪು ಇದ್ದ ಹಾಗೆ ತೊಗಲಿನಲ್ಲೂ ನೆನಪು ಇರುತ್ತದೆಯಾ? ಮೈಯ ಬಯಕೆಗಳು ತಲೆಗೆ ಅರ್ಥವಾಗುವುದಿಲ್ಲ. ತಲೆಯ ಸೂಚನೆಗಳನ್ನು ಕೆಲವೊಮ್ಮೆ ಮೈ ಧಿಕ್ಕರಿಸುತ್ತದೆ. ಈ ಕೋಲಾಹಲ ಇಬ್ಬರಲ್ಲೂ ನಡೆಯುತ್ತದೆ. ಸ್ಪರ್ಷಕ್ಕೆ ಅರಳುವ ದೇಹ ಹಾಗೂ ಅದನ್ನು ಅರಿಯದೇ ನೋಡುವ ತಲೆ.. ಈ ಗೊಂದಲದಲ್ಲಿ ಮುಳುಗಿದ ಕಪಿಲನನ್ನು ಪದ್ಮಿನಿ ಹುಡುಕಿ ಬರುತ್ತಾಳೆ. “ನಿನ್ನ ಮೈ ಯಾವದೋ ನದಿಯಲ್ಲಿ ಮಿಂದು, ನಲಿದು ಸುಖಪಟ್ಟಿತು. ಆ ನದಿ ಯಾವುದು? ಆ ಈಸುಯಾವುದು? ತಿಳಿಯೋದು ಬೇಡೇನು? ನಿನ್ನ ತಲೆ ಆ ನದಿಯಲ್ಲಿ ಮುಳುಗಬೇಕು. ಆಪ್ರವಾಹ ನಿನ್ನ ಕೂದಲನ್ನು ಆಡಿಸಬೇಕು. ಕಿವಿಮೂಗಿನಲ್ಲಿ ನಾಲಿಗೆ ಓಡಿಸಬೇಕು. ಮುಖವನ್ನು ತನ್ನೆದೆಗೆ ಅದುಮಿ ಹಿಡಿಯಬೇಕು. ಅಲ್ಲಿಯವರೆಗೆ ಅಪೂರ್ಣ ನೀನು.” 

ನೀರಿನ ಮೇಲೆ
ಚಿತ್ರ ಕೆತ್ತಲಿಕ್ಕಾಗೋದಿಲ್ಲ
ಕತ್ತಿಯ ಗಾಯ ಮಾಡಲಿಕ್ಕಾಗೋದಿಲ್ಲ
ಅದಕ್ಕೆ ನದಿಗೆ
ನೆನಪಿನ ಹಂಗಿಲ್ಲ

ಮೈಯ ನೆನಪುಗಳನ್ನು ಅಳಿಸಲಾಗದೇ ಅಪೂರ್ಣತೆಯಲ್ಲಿ, ಪರಕೀಯತೆಯಲ್ಲಿ ಮೂವರೂ ತೊಳಲುತ್ತಾರೆ. ದೇವದತ್ತ ಕಪಿಲ ಇಬ್ಬರೂ ಪರಸ್ಪರ ಕಾದಾಡಿ ಸಾಯುವ ಮೂಲಕ ಅಪೂರ್ಣತೆಗೆ ಪರಿಹಾರ ಕಾಣುತ್ತಾರೆ. ಇನ್ನೊಬ್ಬರ ಮೈಯಲ್ಲಿ ಬದುಕಲಾಗದೇ ಹೋಗುತ್ತಾರೆ. ಇಬ್ಬರ ಜೊತೆಗೂ ತನ್ನನ್ನು ಹಂಚಿಕೊಂಡಿದ್ದರೆ ಅವರಿಬ್ಬರೂ ಬದುಕುತ್ತಿದ್ದರೇ? ಎಂದು ಪದ್ಮಿನಿ ಯೋಚಿಸುತ್ತಾಳೆ.  ಆದರೆ ಅವರು ತಮ್ಮನ್ನೂ ಪರಸ್ಪರ ಪಾಲುಮಾಡಿಕೊಳ್ಳಬೇಕಿತ್ತು!. ಕೊನೆಗೆ ಮಗುವನ್ನು ಶಬರನಿಗೊಪ್ಪಿಸಿ ಪದ್ಮಿನಿಯೂ ಸತಿಹೋಗುತ್ತಾಳೆ. ಮುತ್ತೈದೆ ಹೂವಿನ ಗಿಡವಾಗುತ್ತಾಳೆ. ಸಾವಿನಲ್ಲಿ ದ್ವಂದ್ವಗಳು ಕರಗುತ್ತವೆ. ಅಲ್ಲಿಗೆ ನಾಟಕದೊಳಗಿನ ನಾಟಕ ಮುಗಿಯುತ್ತದೆ. ಇತ್ತ ಕಾಳಿಯ ಅನುಗ್ರಹದಿಂದ ಹಯವದನನಿಗೂ ಕುದುರೆಯ ಮೈ ಪ್ರಾಪ್ತವಾಗಿ ಕುದುರೆಯೇ ಆಗುತ್ತಾನೆ. ಆದರೆ ಮನುಷ್ಯ ಭಾಷೆ, ಮಾತು ಉಳಿದುಬಿಡುತ್ತದೆ. ಭಾಷೆಯ ದ್ವಂದ್ವದಿಂದಾಗಿ  ಅವನು ಮತ್ತೆ ಅಪೂರ್ಣ!. ಅಷ್ಟರಲ್ಲಿ ಅಲ್ಲಿ ಬರುವ ಪದ್ಮಿನಿಯ ಮಗ ಆ ಕುದುರೆಯನ್ನು ಸವಾರಿ ಮಾಡಿದಾಗ ಅವನ ಭಾಷೆಯಳಿದು ಹೇಷಾರವ ಹೊರ ಬರುತ್ತದೆ. ಬುದ್ದಿ ಭಾಷೆ ಮೈಗಳೊಂದಾಗಿ ಹಯವದನ ಪೂರ್ಣಗೊಳ್ಳುತ್ತಾನೆ. ಎರಡೂ ಕತೆಗಳು ಹೀಗೆ ಬೆಸೆದುಕೊಳ್ಳುವ ಮೂಲಕ ನಾಟಕವೂ ಪೂರ್ಣಗೊಳ್ಳುತ್ತದೆ.  

ಗೆಳೆಯರಿಬ್ಬರೂ ಹೆಣ್ಣೊಬ್ಬಳನ್ನು ಪ್ರೀತಿಸಿದ ಕತೆ ಮೇಲ್ನೋಟಕ್ಕೆ ಸರಳವೆನಿಸಿದರೂ ಮೈಮನಸ್ಸುಗಳ ಸಂಕೀರ್ಣ ಸುಳಿಯನ್ನು ಸುತ್ತಿಸಿ ತಂದು ನಿಲ್ಲಿಸುತ್ತದೆ. ಹೆಣ್ಣು ಮನದ ರಾಗವನ್ನು, ಅವಳ ಹಾಡಿನ ಅರ್ಥವನ್ನೂ ತಿಳಿಯದೇ ಇಬ್ಬರೂ ಕಾದಾಡಿ ಸಾಯುತ್ತಾರೆ. ಒಂದು ಮೈಗೆ ಅಂಟದ ಹೆಣ್ಣಿನ ಹರಿವನ್ನು ಅರಿಯದೇ ಹೋಗುತ್ತಾರೆ. ಮೇಳದವರ ಹಾಡಿನಲ್ಲಿ ಪರೋಕ್ಷವಾಗಿ ಆ ಅರಿವು ನಿನದಿಸುತ್ತದೆ.

ಪ್ರೀತಿಯೇಕೆ ಅಂಟಬೇಕು
ಒಂದೆ ಮೈಯ ಅಂಟಿಗೆ
ಹೇಸಿ ಹೂವ ಹಡೆಯಬಲ್ಲ
ಮರ್ಪ ಮದದ ದಂಟಿಗೆ
ಒಂದು ಮೊಲೆಗೆ ಒಂದು ತಲೆ
ಗೊಂಬೆಯೊಂದು ಕಣ್ಣಿಗೆ 
ತೋಳಿಗೊಂದು ತೆಕ್ಕೆ ನನಗೆ
ಇಲ್ಲ ಕೊರಗು ನಾಚಿಕೆ
ಬಸಿದ ತೊರೆಯ ಬಿಸಿಗೆ ಬಿರಿದು
ಹಾಡೊಡೆಯಿತು ಮಣ್ಣಿಗೆ

ಅಧಿಕಾರಕ್ಕೆ ಬಗ್ಗದ ಸೃಷ್ಟಿಯ ಸ್ವಯಂ ಪೂರ್ಣತೆ ಹಾಗೂ ಮನುಷ್ಯ ಲೋಕದ ದ್ವಂದ್ವಗಳನ್ನು ನಾಟಕವು ಮುಖಾಮುಖಿಯಾಗಿಸಿದೆ. ದೇಹದ ಬಯಕೆಗಳನ್ನು ಕಟ್ಟಿಹಾಕುವುದು, ಅದಕ್ಕೊಂದು ತರ್ಕವನ್ನು ರೂಪಿಸುವುದು ಎಲ್ಲವೂ ಪೇಲವವಾಗಿ ಕಾಣುತ್ತದೆ. ಪ್ರಜ್ಞೆಯು ಹರಿವ ನದಿ. ದೇಹ ಅದಕ್ಕೊಂದು ಬಂಧನ. ಕಟ್ಟಿ ಹಾಕುವ ನೆನಪುಗಳ ಹಂಗಿನಿಂದ ಹೊರಚಾಚಿ ಹರಿವ ನದಿಯಂಥ ಪದ್ಮಿನಿಯನ್ನು ನಾಟಕ ಅಪೂರ್ವ ಬೆಳಕಿನಲ್ಲಿ ಕಾಣಿಸಿದೆ. 

ಈ ಅಂಕಣದ ಹಿಂದಿನ ಬರೆಹಗಳು:
ಶಬ್ದದೊಳಗಿನ ನಿಶ್ಯಬ್ದವನ್ನು ಸ್ಫೋಟಿಸುವ ಕಥನ
ಮೊಲೆ ಮುಡಿಗಳ ಹಂಗು
ನೆಲದಕಣ್ಣಿನ ಕಾರುಣ್ಯ: ನೋವೂ ಒಂದು ಹೃದ್ಯ ಕಾವ್ಯ
ಫಣಿಯಮ್ಮ ಎಂಬ ಹೊಸ ಪುರಾಣ:
‘ಹಾರುವ ಹಕ್ಕಿ ಮತ್ತು ಇರುವೆ...’ ಅನನ್ಯ ನೋಟ
ಹೊತ್ತು ಗೊತ್ತಿಲ್ಲದ ಕಥೆಗಳು
ಹೊಳೆಮಕ್ಕಳು : ಅರಿವಿನ ಅಖಂಡತೆಗೆ ತೆಕ್ಕೆಹಾಯುವ ಕಥನ
ಕನ್ನಡ ಚಿಂತನೆಯ ಸ್ವರೂಪ ಹಾಗೂ ಮಹಿಳಾ ಸಂವೇದನೆಗಳು
ಸಾಹಿತ್ಯ ಸರಸ್ವತಿ ಬದುಕಿನ ‘ಮುಂತಾದ ಕೆಲ ಪುಟಗಳು’...
ಹೋದವರು ಹಿಂದಿರುಗಿ ಬರಲು ಹಾದಿಗಳಿಲ್ಲ
ನಿಗೂಢ ಮನುಷ್ಯರು: ತೇಜಸ್ವಿಯವರ ವಿಶ್ವರೂಪ ದರ್ಶನ
ಕನಕನ ಕಿಂಡಿಯಲ್ಲಿ ಮೂಡಿದ ಲೋಕದೃಷ್ಟಿ
ವಿಶ್ವಮೈತ್ರಿಯ ಅನುಭೂತಿ : ಬೇಂದ್ರೆ ಕಾವ್ಯ
ಕಾರ್ನಾಡರ ಯಯಾತಿ- ಕಾಲನದಿಯ ತಳದಲ್ಲಿ ಅಸ್ತಿತ್ವದ ಬಿಂಬಗಳ ಹುಡುಕಾಟ
ಹರಿವ ನದಿಯಂಥ ಅರಿವು : ಚಂದ್ರಿಕಾರ ಚಿಟ್ಟಿ
ಕಾಲುದಾರಿಯ ಕವಿಯ ಅ_ರಾಜಕೀಯ ಕಾವ್ಯ

MORE NEWS

ಕಲಬುರ್ಗಿ ಜಿಲ್ಲಾ ಪ್ರಥಮ ತತ್ವಪದ ಸಾಹಿತ್ಯ ಸಮ್ಮೇಳನ

24-04-2024 ಬೆಂಗಳೂರು

"ಕಡಕೋಳ ಮಠಾಧೀಶರು ಮತ್ತು ತತ್ವಪದಗಳ ಮಹಾ ಪೋಷಕರಾದ ಷ. ಬ್ರ. ಡಾ. ರುದ್ರಮುನಿ ಶಿವಾಚಾರ್ಯರು ಸಮ್ಮೇಳನದ ಸರ್ವಾಧ್ಯಕ...

ಸಂಶೋಧನೆಯಲ್ಲಿ ಆಕರಗಳ ಸಂಗ್ರಹ, ವಿಂಗಡಣೆ ಮತ್ತು ಪೂರ್ವಾಧ್ಯಯನ ಸಮೀಕ್ಷೆ

23-04-2024 ಬೆಂಗಳೂರು

"ಒಂದನ್ನು ಬಿಟ್ಟು ಇನ್ನೊಂದನ್ನು ಚಿಂತಿಸಲಾಗದು. ಅಲ್ಲದೆ; ಶೀರ್ಷಿಕೆ ಆಖೈರು ಮಾಡಿಕೊಳ್ಳುವುದಕ್ಕೆ ನಾವು ಅವಸರ ಮಾಡ...

ಪರಿಘಾಸನ ಮತ್ತು ಅರ್ಧ ಚಕ್ರಾಸನ 

16-04-2024 ಬೆಂಗಳೂರು

"ಪರಿಘಾಸನ ಆಸನವು ) ಪಿತ್ತ ಜನಕಾಂಗ ಮತ್ತು ಮೇದೋಜೀರಕ ಚೈತನ್ಯಗೊಳ್ಳುವಂತೆ ಮಾಡುತ್ತದೆ. ಹಾಗೆಯೇ ‘ಅರ್ಧ ಚಕ್...