ನಗರ ನಿರ್ಮಾಣ ಕಲೆಯ ಪ್ರಸ್ತುತತೆ

Date: 25-06-2022

Location: ಬೆಂಗಳೂರು


“ಪ್ರಪಂಚದ ಬಹುತೇಕ ಎಲ್ಲ ಸಾಮ್ರಾಜ್ಯಗಳ ಹುಟ್ಟು ನದಿ, ಸಮುದ್ರದ ದಂಡೆಯಲ್ಲಿ ಆಗಿರುವಂತೆ ಅವುಗಳ ವಿನಾಶ ಮಾನವನ ಅತಿಬುದ್ಧಿ ಹಾಗೂ ದುರಾಸೆಯ ಪ್ರವೃತ್ತಿಯಿಂದ ಆಗಿದೆಯೆಂಬುದು ಸತ್ಯ” ಎನ್ನುತ್ತಾರೆ ಲೇಖಕಿ ಡಾ. ವೇದಾವತಿ ಎಸ್. ಬಾಲು. ಅವರು ತಮ್ಮ ಅರಿವಿನ ಹೆಜ್ಜೆಗಳು ಅಂಕಣದಲ್ಲಿ, ನಗರಗಳನ್ನು ರೂಪಿಸುವ ಸಂದರ್ಭದಲ್ಲಿ ಶಾಸ್ತ್ರ ಮತ್ತು ಚರಿತ್ರೆಯ ಪಾಠಗಳನ್ನು ಅನುಸರಿಸಬೇಕಾದ ಅಗತ್ಯವನ್ನು ಚರ್ಚಿಸಿದ್ದಾರೆ.

ಹೆಜ್ಜೆ-1
ಇತಿಹಾಸವೆಂದರೆ ಗತಕಾಲದ ಘಟನೆಗಳ ನೆನಪು, ಕಳೆದ ಸಂಗತಿಗಳನ್ನು ಕಣ್ಣೆದುರು ತರುವ ದೃಶ್ಯಕಾವ್ಯ. ಇತಿಹಾಸ ಬದುಕಿನ ದಿಕ್ಕನ್ನು ಬದಲಿಸುವ ಮಾರ್ಗಸೂಚಿ. ಇತಿಹಾಸವೆಂದರೆ ಕೇವಲ ಇಸವಿ, ತಾರೀಖುಗಳ, ಯುದ್ಧಗಳ ದಾಖಲೆಯsಲ್ಲ. ಮಾನವನ ಬದುಕಿನಲ್ಲಿ ಹೊಸ ಆಲೋಚನೆ, ಹೊಸ ದೃಷ್ಟಿ, ಹೊಸತು-ಹಳತುಗಳ ಸಂಗಮದೊಂದಿಗಿನ ತೌಲನಿಕ ಅಧ್ಯಯನಕ್ಕೆ ದಾರಿ ತೋರುವ ದೀಪ.

ನಾವು ನಿರ್ಮಿಸಿಕೊಂಡಿರುವ ಕಟ್ಟಡ, ಸೇತುವೆ, ಅಣೆಕಟ್ಟು, ಬಡಾವಣೆಗಳ ನಿರ್ಮಾಣ ಹಾಗೂ ಅವುಗಳ ಉನ್ನತೀಕರಣದ ವಿಧಾನವನ್ನು ವೈಜ್ಞಾನಿಕ ಯುಗದಲ್ಲಿ ಪ್ರಶ್ನೆ ಮಾಡಿಕೊಳ್ಳುವ ಸಂದರ್ಭ ಎದುರಾಗಿದೆ.

ಗರುಡಪುರಾಣದ ಪ್ರಕಾರ ಭೂಮಿಯ ಮೇಲೆ ನಿರ್ಮಾಣವಾದ ಕಟ್ಟಡ, ಗೃಹ, ಮಂದಿರಗಳನ್ನು ವಾಸ್ತುವೆಂದು ಕರೆಯುತ್ತೇವೆ. ಕಟ್ಟಡಗಳಂತೆಯೇ ಕಟ್ಟಡದ ನಕ್ಷೆ, ಅಳತೆಗಳನ್ನು ಒಳಗೊಂಡಂತೆ ಗ್ರಾಮ, ನಗರ, ಕೋಟೆ, ಪಟ್ಟಣ ಹಾಗೂ ಮಠಗಳು ನಿರ್ಮಾಣವಾದವು. ಇವು ಕೂಡ ವಾಸ್ತು ಭಾಗವೇ.

ಅಥರ್ವವೇದದಲ್ಲಿನ ಸ್ಥಾಪತ್ಯವೇದವು ನಗರದ ವಿಭಾಗಗಳ ಕುರಿತು ಸ್ಪಷ್ಟಪಡಿಸುತ್ತದೆ. ಕೌಟಲ್ಯನ ಅರ್ಥಶಾಸ್ತ್ರವು ‘ನಗರದಲ್ಲಿ ಪೂರ್ವ ಪಶ್ಚಿಮವಾಗಿ ಮೂರು, ದಕ್ಷಿಣೋತ್ತರವಾಗಿ ಮೂರು ಹೀಗೆ ಆರು ರಾಜಮಾರ್ಗಗಳಿಂದ ಕೂಡಿದ ಆರು ವಾಸ್ತುವಿಭಾಗವನ್ನು ಮಾಡಬೇಕು. ಜೊತೆಗೆ ನೀರಿನ ಆಶ್ರಯಗಳು, ನೀರು ಹರಿಯುವ ಚರಂಡಿಗಳು, ಗುಪ್ತವಾದ ಸುರಂಗಮಾರ್ಗಗಳು, ವೃತ್ತಿಗನುಸಾರವಾಗಿ ಜನರ ನಿವೇಶನಗಳು ಇರಬೇಕು’ ಎಂದಿದೆ. ಮಯಮತ, ಮಾನಸಾರ, ವಾಸ್ತುಶಾಸ್ತ್ರ, ಮಾನಸೋಲ್ಲಾಸ ಮೊದಲಾದ ಗ್ರಂಥಗಳು ನಗರ ಯೋಜನೆ, ವಿನ್ಯಾಸ ಹಾಗೂ ವಾಸ್ತುಗಳ ಕುರಿತು ತಿಳಿಸುತ್ತವೆ.

ಭಾರತದಲ್ಲಿ ಗುಹೆಗಳನ್ನು ಕ್ರಿ.ಪೂ. 3ನೇ ಶತಮಾನದಲ್ಲಿ ಕಾಣಬಹುದು. ಇವು ದೇವಾಗಾರಗಳಾಗಿಯೂ, ಭಿಕ್ಷು-ಸನ್ಯಾಸಿಗಳ ವಾಸಸ್ಥಾನಗಳಾಗಿ ಅಸ್ತಿತ್ವಕ್ಕೆ ಬಂದವು. ಭಾರತದಲ್ಲಿನ ಹಲವು ದೇವಾಲಯಗಳು ಮೂಲತಃ ಸಮಾಧಿ ಮಂದಿರಗಳಾಗಿದ್ದುದು ನಿಜವಾದರೂ ಅವು ಸಂಖ್ಯೆಯಲ್ಲಿ ವಿರಳ.

ಹರಪ್ಪ, ಮೊಹೆಂಜೊದಾರೊದ ಪ್ರದೇಶಗಳಲ್ಲಿ ದೊರಕಿರುವ ರಸ್ತೆ, ಚರಂಡಿ, ಬಾವಿ ಮೊದಲಾದ ವಾಸ್ತು ವಿಶೇಷಗಳಿಂದ ತಿಳಯುವುದು ಬಹಳಷ್ಟಿವೆ. ತಾಳಗುಂದ, ಅಜಂತಾ-ಎಲ್ಲೋರಾ, ಇಟಗಿ, ಡಂಬಳ, ಬಾದಾಮಿ-ಐಹೊಳೆ-ಪಟ್ಟದಕಲ್ಲು, ಹಳೇಬೀಡು, ತಮಿಳುನಾಡಿನ ಬೃಹತ್ ದೇವಾಲಯಗಳು ಇತ್ಯಾದಿ ಸ್ಥಳಗಳಲ್ಲಿನ ದೇವಾಲಯಗಳ ನಿರ್ಮಾಣವಾಗಿರುವುದು ಆಯಾ ಆಳರಸರ ಕಾಲದ ಆರ್ಥಿಕತೆ ಹಾಗೂ ವಿಸ್ತಾರವಾದ ನಗರ ನಿರ್ಮಾಣಕ್ಕೆ ಸಾಕ್ಷಿಯಾಗಿವೆ.

ಕರ್ನಾಟಕದ ಸನ್ನತಿಯಲ್ಲಿನ ಸ್ತೂಪದಿಂದ ಇಂದಿನ ಬೃಹತ್-ಕಟ್ಟಡಗಳವರೆಗೆ ಅವಲೋಕಿಸಿದರೆ ವಾಸ್ತು ನಿರ್ಮಾಣಗಳ ಕುರಿತು ಹೆಚ್ಚಿನ ಅರಿವು ಹಾಗೂ ನಿಯಮ ಪಾಲನೆಯ ಅನಿವಾರ್ಯತೆಯಿದೆ.

ನದಿಗಳಿಗೆ ಅಡ್ಡವಾಗಿ ಕಟ್ಟುವ ಅಣೆಕಟ್ಟುಗಳು ನಗರಗಳ ಬೆಳವಣಿಗೆಯ ಜೊತೆಗೆ ವಿನಾಶಕ್ಕೂ ಕಾರಣವಾಗುತ್ತವೆ. ಪ್ರಾಕೃತಿಕ ಸಂಪನ್ಮೂಲಗಳ ಓಘವನ್ನು ತಡೆಯುವ ಅಥವಾ ಅವುಗಳ ದಿಕ್ಕನ್ನು ಬದಲಿಸುವ ಪ್ರಯತ್ನದ ಸಾಫಲ್ಯತೆ ತಾತ್ಕಾಲಿಕ. ಪ್ರಕೃತಿಯ ಬಲದ ಮುಂದೆ ಮಾನವ ಅಶಕ್ತ. ಪ್ರಪಂಚದ ಬಹುತೇಕ ಎಲ್ಲ ಸಾಮ್ರಾಜ್ಯಗಳ ಹುಟ್ಟು ನದಿ, ಸಮುದ್ರದ ದಂಡೆಯಲ್ಲಿ ಆಗಿರುವಂತೆ ಅವುಗಳ ವಿನಾಶ ಮಾನವನ ಅತಿಬುದ್ಧಿ ಹಾಗೂ ದುರಾಸೆಯ ಪ್ರವೃತ್ತಿಯಿಂದ ಆಗಿದೆಯೆಂಬುದು ಸತ್ಯ. ಮಾನವನ ಈ ಪ್ರವೃತ್ತಿಯನ್ನು ತಲಕಾಡು ಹಾಗೂ ವಿಜಯನಗರದ ರಾಜಧಾನಿಗಳ ಅವನತಿಯಲ್ಲಿ ಗಮನಿಸಬಹುದು.

`ನಗರಗಳು ಆರ್ಥಿಕತೆಯ ಸಾಧ್ಯತೆಗಳಿಗನುಸಾರ ವಿಸ್ತಾರಗೊಳ್ಳುತ್ತಿರುವ ಹಂತಗಳಲ್ಲಿ ರಸ್ತೆಗಳು, ಕಟ್ಟಡಗಳು ಹಿರಿದಾಗುತ್ತವೆ. ಈ ಪ್ರಕ್ರಿಯೆಯಲ್ಲಿ ಅರ್ಥಶಾಸ್ತ್ರವು ಪ್ರಮುಖವಾಗಿ ಹೇಳುವ ಪರಿಸರ ಸಂರಕ್ಷಣೆ ಹಾಗೂ ಸುರಕ್ಷತೆಯತ್ತ ಹೆಚ್ಚು ಗಮನ ಹರಿಸುವ ಅವಶ್ಯಕತೆಯಿದೆ. ಪ್ರಾಕೃತಿಕ ಸಂಪನ್ಮೂಲಗಳನ್ನು ಉಳಿಸುವ ಹಾಗೂ ಜನರಿಗೆ ಅನುಕೂಲಗಳನ್ನು ಒದಗಿಸುವ ಹೊಣೆಯನ್ನು ಶಾಸ್ತ್ರಗ್ರಂಥಗಳಿಂದ ಅರಿತು, ಪಾಲಿಸುವ ಪ್ರಾಮಾಣಿಕ ವಾಸ್ತುತಜ್ಞರ ಸದ್ಬಳಕೆಯಾಗಬೇಕಿದೆ. ಆಳುವ ವರ್ಗದಿಂದ ಆರಂಭಿಸಿ ದುಡಿದು-ತಿನ್ನುವ ವರ್ಗದ ಎಲ್ಲ ಜನರು ತಮ್ಮ ಅಗತ್ಯಾನುಸಾರ ಸಂಪನ್ಮೂಲಗಳನ್ನು ಬಳಸಬೇಕಿದೆ. ಉಳಿದದ್ದನ್ನು ಮುಂದಿನ ಜನಾಂಗಕ್ಕೆ ಕಾಪಿಡಬೇಕಿದೆ. ಚಕ್ರವರ್ತಿ ಅಶೋಕನಂತೆ ಮುಂದಿನ ಜನಾಂಗಕ್ಕೂ ಉತ್ತಮ ಮೌಲ್ಯಗಳನ್ನು ಹೇಳಬೇಕಿದೆ.

MORE NEWS

ಪರಿಘಾಸನ ಮತ್ತು ಅರ್ಧ ಚಕ್ರಾಸನ 

16-04-2024 ಬೆಂಗಳೂರು

"ಪರಿಘಾಸನ ಆಸನವು ) ಪಿತ್ತ ಜನಕಾಂಗ ಮತ್ತು ಮೇದೋಜೀರಕ ಚೈತನ್ಯಗೊಳ್ಳುವಂತೆ ಮಾಡುತ್ತದೆ. ಹಾಗೆಯೇ ‘ಅರ್ಧ ಚಕ್...

ಲೋಕಸಭಾ ಚುನಾವಣೆಗಳ ಸುತ್ತಮುತ್ತ ಒಂದು ಸುತ್ತು

15-04-2024 ಬೆಂಗಳೂರು

"ಪರಸ್ಪರ ರೋಚಕ ನಿಂದನೆಗಳು. ಕ್ಷೇತ್ರವಾರು ಚಕ್ಕರಗುಳ್ಳಿ ಇಡುವ ಚತುರ ವಿವರಗಳು. ಹೊಸ ಹೊಸ ಬೈಗುಳಗಳು. ಮಾಧ್ಯಮಗಳಿಗ...

ಉಪವಿಷ್ಟಕೋನಾಸನ ಮತ್ತು ಪವನಮುಕ್ತಾಸನ

09-04-2024 ಬೆಂಗಳೂರು

"ಉಪವಿಷ್ಟಕೋನಾಸನ ಯೋಗಾಸನವು ಮನಸ್ಸನ್ನು ಶಾಂತಗೊಳಿಸುತ್ತದೆ ಮತ್ತು ಮಾಂಸಗಳ ತೂಕವನ್ನು ಕಡಿಮೆಗೊಳಿಸುತ್ತದೆ. ಪವನಮು...