`ನಾಗರ ನುಂಗಿದ ನವಿಲುʼ ಸಂಕಲನದ 54 ಕವಿತೆಗಳೂ ಭಾಷೆಯನ್ನು ಹೊಸದುಗೊಳಿಸಿವೆ: ಪುರುಷೋತ್ತಮ ಬಿಳಿಮಲೆ


`ನಾಗರ ನುಂಗಿದ ನವಿಲುʼ ಸಂಕಲನದ 54 ಕವಿತೆಗಳೂ ಭಾಷೆಯನ್ನು ಹೊಸದುಗೊಳಿಸಿವೆ. ರೂಪಕಗಳನ್ನು ಮರುರೂಪಿಸಿವೆ. ಸಮಕಾಲೀನ ಬದುಕಿನ ಅನೇಕ ಬಿಕ್ಕಟ್ಟುಗಳಿಗೆ ಧ್ವನಿಯಾಗಿವೆ. ಭಾವುಕತೆ ಮತ್ತು ವೈಚಾರಿಕತೆಗಳು ಇಲ್ಲಿ ಹದವಾಗಿ ಮೇಳೈಸಿವೆ ಎನ್ನುತ್ತಾರೆ ಪುರುಷೋತ್ತಮ ಬಿಳಿಮಲೆ. ಅವರು ವೀರಣ್ಣ ಮಡಿವಾಳ ‘ನಾಗರ ನುಂಗಿದ ನವಿಲು’ ಕೃತಿಗೆ ಬರೆದ ಮುನ್ನುಡಿ ನಿಮ್ಮ ಓದಿಗಾಗಿ.

ವೀರಣ್ಣ ಮಡಿವಾಳರ ಬಹಳ ತೀವ್ರತೆಯಿಂದ ಬರೆಯುತ್ತಿರುವ ಕವಿ. ಅವರಿಗೆ ಬರವಣಿಗೆ ಎಂಬುದು ಬದುಕಲು ಬೇಕಾದ ಒಂದು ಉತ್ಕೃಷ್ಟ ಬದ್ಧತೆ. ಉಸಿರಾಡಲು ಬೇಕಾದ ಗಾಳಿ ಮತ್ತು ಸಂಭ್ರಮಿಸಲು ಬೇಕಾದ ಒಂದು ವಸ್ತು. ಹಾಗಾಗಿ ಎಲ್ಲಿಯೂ ಅವರ ಅಕ್ಷರಗಳು ಲೋಲುಪತೆಯಿಂದ ನರಳುವುದಿಲ್ಲ. ಕೆಲವು ತಿಂಗಳುಗಳ ಹಿಂದೆ ಸರಕಾರೀ ಶಾಲೆಗಳ ವಿಲೀನ ಕ್ರಮ ವಿರೋಧಿಸಿ ವೀರಣ್ಣನವರು ಬಹಳ ದಿಟ್ಟವಾಗಿ ವಾಸ್ತವದ ಬಗ್ಗೆ ಬರೆದಿದ್ದರು. ಸರಕಾರವು ಶಿಸ್ತುಕ್ರಮಕ್ಕೆ ಮುಂದಾಯಿತು. ನೊಟೀಸ್ ಪ್ರತಿಯನ್ನೂ ವೀರಣ್ಣ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡರು. `ಸರಕಾರೀ ಶಾಲೆ ಮುಚ್ಚಿದರೆ ಯಾರಿಗಾದರೂ ಸಂತೋಷವಾಗುತ್ತದೆಯೇ? ಎಂದು ಅವರು ಕೇಳಿದರು'. ಸರಕಾರಿ ಶಾಲೆಯೊಂದರ ಶಿಸ್ತು ಸೌಂದರ್ಯ ಮತ್ತು ಅರ್ಥವಂತಿಕೆ ಹೇಗಿರುತ್ತದೆ ಎಂದು ತೋರಿಸಿಕೊಟ್ಟವರು ನಾವು. ಈಗ ನನ್ನ ಮೇಲೆಯೇ ಶಿಸ್ತುಕ್ರಮ ಜರುಗಿಸುವುದಾದರೆ, ಅದೂ ಕೂಡ ನಡೆಯಲಿ. ಬರವಣಿಗೆ ನನ್ನ ಉಸಿರು, ಬರವಣಿಗೆ ಮತ್ತು ಕೃತಿ ನನ್ನ ಜೀವಂತಿಕೆ. ನನ್ನೊಳಗಿರುವುದು ಆತ್ಮಪೂರ್ವಕ ಶ್ರದ್ಧೆ, ಶುದ್ಧ ಪ್ರಾಮಾಣಿಕತೆ. ಶಿಸ್ತುಕ್ರಮ ಜರುಗಿದರೆ ಜರುಗಲಿ. ಈಗಾಗಲೇ ಒಂದು ಪೂರ್ಣ ಬದುಕಿನ ಅನುಭವ ನನ್ನ ಜೀವರಕ್ತದ ಕಣಕಣದಲ್ಲಿದೆ. ಇನ್ನೆಷ್ಟು ದಿನ ಬದುಕೇನು? ಬದುಕಿರುವವರೆಗೆ ಇಸ್ತ್ರಿ ಅಂಗಡಿ ಇಟ್ಟುಕೊಂಡು ಬದುಕುವೆ, ಬರವಣಿಗೆ ಬಿಡಲಾರೆ’ ಎಂದು ಅವರು ಪ್ರಖರವಾಗಿ ಬರೆದರು. ಹೀಗೆ ಬರೆಯಲು ಅವರಿಗೆ ಸಾಧ್ಯ ಆದದ್ದು ಅವರೇ ಮಾಡಿದ ಗುಣಾತ್ಮಕ ಕೆಲಸಗಳಿಂದ. ರಾಯಭಾಗದ ನಿಡಗುಂದಿ ಗ್ರಾಮದ ಕನ್ನಡ ಶಾಲೆಯನ್ನು ಅವರು ಬೆಳೆಸಿದ ರೀತಿಯೇ ಐತಿಹಾಸಿಕವಾದುದು. ಹೀಗೆ ಬದುಕಿದವರ ಭಾಷೆ ಕೃತಕವಾಗಿರಲು ಸಾಧ್ಯವಿಲ್ಲ.

ಉತ್ತರ ಕರ್ನಾಟಕವನ್ನು ಆವರಿಸಿದ್ದ ಅವರು ಬರದ ಬಗ್ಗೆ ಬರೆಯುತ್ತಾ ಹೇಳಿದ ಮಾತುಗಳು ಇಂತಿವೆ - 'ಈ ಬಾರಿಯ ಬರ ಬಹಳಷ್ಟು ಕಲಿಸಿದೆ. ಬಡವರ ಬದುಕಿನ ಬವಣೆಗಳಿಗೆ ಹೊಸ ಚಿತ್ರಗಳನ್ನು ಸೇರಿಸಿದೆ. ಪ್ರತಿ ಬಾರಿ ಚುನಾವಣೆಯಲ್ಲಿ ಹಣ ಹೆಂಡ ಬಟ್ಟೆಯ ಆಮಿಷ ತೋರಿಸಿ ವಂಚಿಸಿದ ಪರಂಪರೆಗೆ ಈಗ ಬರವೂ ಬಂಡವಾಳವಾದದ್ದು ಸೋಜಿಗವೇನು ಅಲ್ಲ. ಕೆಲವರಿಗೆ ನೀರು ಕೊಟ್ಟಂತೆ ಮಾಡಿ ಊರಿಗೆ ಕೊಟ್ಟೆವೆಂದು ಪತ್ರಿಕೆಗಳಲ್ಲಿ ನಗು ಮುಖ ಮೂಡಿಸಿಕೊಂಡವರು ತುಂಬ ಜನ. ಒಂದು ಕಾಲವಿತ್ತು ಮನೆಯಲ್ಲಿ ಹಿಟ್ಟಿಲ್ಲದಿದ್ದರೆ ಪಕ್ಕದ ಮನೆಯವರು ಕೇಳದೆಯೆ ಕೊಡುವಷ್ಟು ಉದಾರಿಯಾಗಿದ್ದರು. ಪಡೆದುಕೊಂಡವರು ಇದು `ಕಡ’ ಮಾತ್ರ ಮರಳಿ ಪಡೆಯಬೇಕೆಂಬ ಶರತ್ತಿನೊಂದಿಗೆ ಪಡೆದು, ತಮ್ಮ ಕಾಲ ಬಂದಾಗ ಒಂದು ಹಿಡಿಯೂ ಕಡಿಮೆಯಿಲ್ಲದಂತೆ ಹಿಂತಿರುಗಿಸುವ ಪ್ರಾಮಾಣಿಕತೆ ಇತ್ತು ಚರಿತ್ರೆಯ ಗತಿಗಳನ್ನು ಹೀಗೆ ತೀವ್ರವಾಗಿ ಹಿಡಿಯುವುದೇ ವೀರಣ್ಣವರ ದೊಡ್ಡ ಶಕ್ತಿ. ಅದು ಅವರ ಗದ್ಯ ಮತ್ತು ಪದ್ಯಗಳಲ್ಲಿ ಸಮಾನವಾಗಿ ಗೋಚರಿಸುತ್ತದೆ.

2010ರಷ್ಟು ಹಿಂದೆಯೇ ಪ್ರಕಟವಾಗಿದ್ದ ಅವರ 'ನೆಲದ ಕರುಣೆಯ ದನಿ' ಕವನ ಸಂಕಲನದ ಕೆಲವು ಕವಿತೆಗಳನ್ನು ಓದಿ ನಾವು ಹಲವರು ಬೆಚ್ಚಿಬಿದ್ದುದೂ ಉಂಟು. ಅವರು ಲೇಖನ ಬರೆಯಲಿ, ಚಿತ್ರ ಬರೆಯಲಿ ಅಥವಾ ಸುಮ್ಮನೆ ಮಾತಾಡಲಿ, ಅದರಲ್ಲೊಂದು ತೀವ್ರತೆ ಮತ್ತು ಆರ್ತತೆ ಇರುತ್ತದೆ. `ಎಲ್ಲೋ ಹಾಳಾಗಿ ಹೋಗಿದ್ದಾನೆ ವಸಂತʼ (2014) ಎಂಬ ಸಂಕಲನದ ಶೀರ್ಷಿಕೆಯನ್ನೇ ಗಮನಿಸಿದರೆ ಸಾಕು, ನಾನು ಹೇಳಿದ್ದು ಇನ್ನಷ್ಟು ಸ್ಪಷ್ಟವಾಗುತ್ತದೆ. `ಈ ಹಾಳು ಮಣ್ಣಿನಲ್ಲಿ ಶತಶತಮಾನದಿಂದಲೂ ನಗುಬೆಳೆಯುತ್ತಿಲ್ಲʼ ಎಂದು ಗೊಣಗುತ್ತಾ ನಗುವನ್ನು ಹುಡುಕಿ ಹೊರಟ ಅವರು ಹಾದಿಯಲ್ಲಿ `ಬಿಸಿಲಿನ ಬೇಗೆಗೆ ಅಳುವ ಭಿಕ್ಷಾಪಾತ್ರೆʼ ಯನ್ನು ಕಂಡು ಮಮ್ಮಲ ಮರುಗಿದವರು.

ಪ್ರಸ್ತುತ ಕವನ ಸಂಕಲನವಾದ `ನಾಗರ ನುಂಗಿದ ನವಿಲುʼ ವಿನಲ್ಲಿ ಒಟ್ಟು 54 ಕವಿತೆಗಳಿವೆ. ಈ ಎಲ್ಲಾ ಕವಿತೆಗಳ ಬಗ್ಗೆ ಇಲ್ಲಿ ವಿವರವಾಗಿ ಬರೆಯುವ ಅಗತ್ಯವಿಲ್ಲ. ಓದುಗರಿಗೆ ಸುಲಭವಾಗಿ ದಕ್ಕುವ ಕವನಗಳಿವು. ಹೀಗೆ ಮುಂದುವರೆದರೆ, ಹಡೆದವಳು, ಮಾರಾಟಕ್ಕಿರುವ ಹುಡುಗಿಯರ ಭಕ್ತಿಗೀತೆ, ಕಾಣಿಸದ ಕವಿತೆ, ಗಾಯಗೊಂಡ ಪತಂಗವೊಂದರ ಪತ್ರ, ಬೀದಿ ಮಗು, ಪುಟ್ಟ ಕಪ್ಪು ಪುಸ್ತಕ, ಬರಗಾಲ ಬರೆದ ಪತ್ರ, ಕೇಳಿಸದ ಕವಿತೆ, ಕೆಂಪು ದೀಪದ ಕೆಳಗೆ, ಕಾಗದದ ದೋಣಿ, ಹರಿಯುವ ನದಿಗೆ ಹಾದಿಯೇ ಇಲ್ಲ, ಕಣ್ಣಹನಿ ಒಡೆದು ಚೂರಾದ ಸದ್ದು, ಹುಟ್ಟಿದ ದಿನ, ತಂಪು ತಂಪಾದ ಸುಡುಮಾತು, ಮೊದಲಾದ ಕವನಗಳು ನಾನು ಆರಂಭದಲ್ಲಿ ವಿವರಿಸಿದ ತೀವ್ರ ಭಾವಾಭಿವ್ಯಕ್ತಿಯಿಂದಲೇ ಮುಖ್ಯವಾಗಿವೆ. ಜೊತೆಗೆ ವೀರಣ್ಣರಿಗೆ ಕವಿತೆಯ ಭಾಷೆ ಗೊತ್ತಿದೆ. ʼ ಹುಟ್ಟಿದ ದಿನʼ ಕವಿತೆಯಲ್ಲಿ ಅವರು ಬರೆಯುವುದು ಹೀಗೆ-ʼ

`ಇಂದು ನಾನು ಹುಟ್ಟಿದ ದಿನ, ಬದುಕಿದ್ದೇನೆಂದು
ರುಜುವಾತುಪಡಿಸಲು ನನ್ನ ಬಳಿ ಯಾವ ಪುರಾವೆಗಳೂ ಇಲ್ಲ
ಇದ್ದ ಸಾಕ್ಷಿಗಳನೆಲ್ಲ ಯಾರೊ ಕದ್ದು ಬಿಟ್ಟರು, ಇಲ್ಲ ಕಳೆದುಕೊಂಡದ್ದು ನನ್ನ ತಪ್ಪು
ಯಾರ ಬದುಕಿನಲ್ಲಿಯೂ ತಮಗೆ ತಾವು ಮಾತ್ರ
ಹೇಳಿಕೊಳ್ಳಬಹುದಾದ ಸತ್ಯ ಹುಟ್ಟಬಾರದು,
ನನ್ನ ಬದುಕಿನಲ್ಲಿ
ನನಗೆ ನಾನು ಕೂಡ ಹೇಳಿಕೊಳ್ಳಲಾಗದ ನಿಜ ಉದ್ಭವಿಸಿದ್ದಕ್ಕೆ
ಉಸಿರು ನಿಲ್ಲುವವರೆಗಿನ ಪರದಾಟ ತಪ್ಪಿದ್ದಲ್ಲʼ

ಇಲ್ಲಿ ಭಾಷೆ ತೀರ ನವನವೀನವಾಗಿದೆ. ʼಹಡೆದವಳುʼಕವಿತೆಯ ಭಾಷೆಯೂ ಬಹಳ ಚೇತೋಹಾರಿಯಾಗಿದೆ-

`ಹಡೆದವಳು
ಮೋಡಗಳ ಮೆಟ್ಟಿಲು ಮಾಡಿ
ಇಳಿದು ಬಂದಳು ಮೆಲ್ಲಗೆ ಶುಭ್ರ ನೀಲ ಗಗನದಿಂದ
ಉಸಿರಾಟಕ್ಕೆ ಮಾತ್ರ ಸಾಕ್ಸಿಯಂತಿದ್ದ ಈ ಕೊರಡಿನೆಡೆಗೆ
ಮೇಘದ ಎದೆಯ ಮೇಲೆ ಹೆಜ್ಜೆಯೂರಿ ನಡೆದುಬರುತಿರಲು
ಸಂತಸದ ಮಳೆ ಸುರಿಯಿತು
ಹಾಗೆ ಬಿದ್ದ ಒಂದು ಹನಿ ನನಗೂ ತಾಗಿ ಜೀವ ಬಂತುʼ

`ಮೋಡಗಳ ಮೆಟ್ಟಲು ಮಾಡಿ ಇಳಿದು ಬಂದವಳುʼ ಎಂಬ ಸಾಲಿನ ಕಲ್ಪನೆಯೇ ಅಮೋಘವಾದುದು. ಇನ್ನೊಂದು ಕವಿತೆಯ ಶೀರ್ಷಿಕೆಯೇ ʼ ತಂಪು ತಂಪಾದ ಸುಡುಮಾತುʼ ಭಾಷೆಯನ್ನು ಮುರಿದು ಕಟ್ಟುವ ವೀರಣ್ಣನವರ ಪ್ರಯತ್ನಕ್ಕೊಂದು ಒಳ್ಳೆಯ ಉದಾಹರಣೆ. ಈ ಕವನದಲ್ಲಿ ಅವರು ಬರೆಯುವುದು ಹೀಗೆ-

`ಹೊರಗೆ
ಬಿಟ್ಟು ಬಿಡದೆ ಮೋಡಗಳು ಅಳುತ್ತಿವೆ
ಇಂಥ ತಂಪಾದ ಹೊತ್ತಿನಲಿ
ನೀನು ನಾನಷ್ಟೇ ಇದ್ದ ಕ್ಷಣಗಳಲ್ಲಿ ನನ್ನ ಕಿವಿಯ ಹಗೇವಿನಲ್ಲಿ
ನೀನು ಮೆಲ್ಲಗೆ ಸುರಿದ ಪಿಸುಮಾತಿನ ಸುಡುಸುಡು ಕೆಂಡಗಳು ನೆನಪಿಗೆ ಬಂದು
ಗದ್ದಲ ಎಬ್ಬಿಸುತಿವೆ ನನ್ನೆದೆಯ ಶಾಂತ ಸಂತೆಯಲ್ಲಿ ದಿವ್ಯ ಮಂತ್ರಗಳು ನಾಚುತಿವೆ ಏನು ಮಾಡಲಿ
ಬೆಲ್ಲ ಬೇಡುತಿವೆ ಈ ಜಗದ ಕೆನ್ನೆ
ಒಂದು ಕ್ಷಣ ಆ ಯಕ್ಷ ಲೋಕದಲ್ಲಿ ಹಾಡುತ್ತ ದೇವತೆಗಳ ರಂಜಿಸುತಿರುವ
ನಿನ್ನ ತುಟಿಗಳ ಕಳುಹಿಸಿಕೊಡಬಾರದೆ ಈ ಲೋಕ ತಾನಿರುವವರೆಗೂ ನಿನ್ನ ನೆನಪಿಟ್ಟುಕೊಳ್ಳಬಹುದು
ನೀನೊಂದು ಹೂಮರ
ಶಿವನ ಮೂರನೇ ಕಣ್ಣಿನಿಂದ ಜಾರಿದ
ಅಮೃತದ ಹನಿ ನೀನು
ನೀನು ಮಾತ್ರ ಈ ಹಾಲಾಹಲವ ಎದಿರುಗೊಳ್ಳಬಲ್ಲೆ
ಕಡುಕಗ್ಗತ್ತಲ ಕಾಡಿನ ನಡುವೆ ಸಿಕ್ಕ ಹನಿ ಬೆಳಕು ನೀನುʼ

ಕವನದುದ್ದಕ್ಕೂ ಕಾಣಸಿಗುವ, ಕಿವಿಯ ಹಗೇವು, ಪಿಸುಮಾತಿನ ಕೆಂಡ, ಶಾಂತ ಸಂತೆ, ಮೊದಲಾದ ರೂಪಕಗಳು ತೀವ್ರ ಪರಿಣಾಮ ಬೀರುತ್ತವೆ.

ಪ್ರಸ್ತುತ ಸಂಕಲನದಲ್ಲಿ ವೀರಣ್ಣವರು ವ್ಯಂಗ್ಯ ಮತ್ತು ಸಿಟ್ಟನ್ನು ಬಳಸಿದ್ದು ಕಡಿಮೆಯೆಂದೇ ಹೇಳಬಹುದು. ಆದರೆ ಎಲ್ಲೆಲ್ಲಿ ಬಳಸಿದ್ದಾರೋ ಅಲ್ಲಿ ಅವು ನಿರೀಕ್ಷಿತ ಪರಿಣಾಮ ಬೀರುವಲ್ಲಿ ಯಶಸ್ವಿಯಾಗಿವೆ. ಉದಾಹರಣೆಗೆ ಸಂಕಲನದ ಮೊದಲ ಕವಿತೆ, ಹೀಗೆ ಮುಂದುವರೆದರೆʼಯಲ್ಲಿ ಅವರ ವ್ಯಂಗ್ಯ ಬಹಳ ಮೊನಚಾಗಿ ತಾಗುತ್ತದೆ-

`ಕನಸು ಕಾಣಲು ಇರುವುದೆರಡು ಕಣ್ಣು
ಧಣಿಯರ ಕಾಲಧೂಳು ಬಿದ್ದು ನೋಡಲಾಗುತ್ತಿಲ್ಲ ಏನನ್ನೂ
ಎಲ್ಲ ಬಡ ಭಿಕಾರಿಗಳ ಹಾಡಿನ ಸ್ಪರ್ಧೆ ನಡೆಸಿದ್ದಾರೆ ನಾಡಪ್ರಭುಗಳು
ನನ್ನ ಸರದಿ ಬರುವ ಮೊದಲೆ ಇಂಗಿಹೋಯಿತು ಬಾಯಿ
ಅಳುವಿನ ಅಂತಃಸ್ವರ ಕೇಳಲಾಗದೆ
ಇದು ಇಂದಿನ ಮಾತಲ್ಲ ಬಿಡಿ
ಹೀಗೆ ಮುಂದುವರೆದರೆ...ʼ

ಇನ್ನೊಂದು ಮುಖ್ಯ ಕವನ ʼಗಾಯಗೊಂಡ ಪತಂಗವೊಂದರ ಪತ್ರʼ ದಲ್ಲಿ ಹೀಗಿದೆ-

ಕಾಡುವ ಕವಿತೆಗಳು:

`ಪುಟ್ಟ ಕಪ್ಪು ಪುಸ್ತಕʼ ಕವಿತೆಯಲ್ಲಿ ಮತ್ತೆ ಕಾಡುವ ರೂಪಕಗಳಿವೆ-
ನೀರ ಹಾಳೆಯ ಮೇಲೆ
ಕಣ್ಣ ಹನಿಗಳ ಅಕ್ಷರ
ಎದೆಯ ದನಿ ಹುದುಗಿವೆ ಪದಪದಗಳಲ್ಲಿ
ಕಟುಕತನ ಕರಗಿಸುವ ಕರುಣೆ
ಪ್ರತಿ ಹನಿಯ ಶಾಯಿಯಲ್ಲಿ
ಈ ಕಪ್ಪು ಪುಸ್ತಕವ
ಹುಡುಕದವರಿಲ್ಲ
ಸಿಕ್ಕಿರುವ ಬಗ್ಗೆ ವರದಿ ಇನ್ನೂ ಬಂದಿಲ್ಲ
ಒಂದೊಂದು
ಸಾಲಿಗೂ ನೂರೊಂದು ಐತಿಹ್ಯ
ದೇವಗ್ರಂಥವೇನಲ್ಲ
ಪೂಜೆಯ ಕೇಡು ತಾಕಿಲ್ಲ
ಕೇಳಿದವರಿಗೆಲ್ಲ ಈಗೀಗ
ಕಪ್ಪಿನ ಮೇಲೂ ಬಲುಪ್ರೀತಿ

ಈ ಮುನ್ನುಡಿಯ ಆರಂಭದಲ್ಲಿ ಹೇಳಿರುವಂತೆ ವೀರಣ್ಣರು ಬರಗಾಲವನ್ನು ಬಹಳ ಹತ್ತಿರದಿಂದ ಕಂಡವರು. ನೀರಿಲ್ಲದ ಒದ್ದಾಟಗಳು, ಗುಳೇ ಹೋಗುವ ಪರಿಸ್ಥಿತಿಗಳನ್ನು ಅವರು ಹೃದಯಂಗಮವಾಗಿ ಗದ್ಯದಲ್ಲಿ ದಾಖಲಿಸಿದ್ದಾರೆ. ಇಲ್ಲಿ ಅದರ ಕುರಿತೇ ʼ ಬರಗಾಲ ಬರೆದ ಚಿತ್ರʼ ಒಂದಿದೆ-

`ಯಾವ ಸುದ್ದಿ
ಯಾರು ತಂದರೋ ತಿಳಿದಿಲ್ಲ
ಬತ್ತಿದ ಕೆರೆಯ ಬಿರಿದೆದೆಯ ಶೋಕಸಭೆಗೆ
ನಾವಿಂದು ಕರೆಯದೇ ಬಂದ ಅತಿಥಿ
ನೆತ್ತಿಯ ಮೇಲೆ ಹಾರುತಿದೆ
ಯಾರದೋ ನಗು ತುಂಬಿದ ವಿಮಾನ
ಬರದ ನೆಲದ ಬೆಂಕಿ ಹೂ
ಹೇಗೆ ಮುಡಿಯುವುದು
ಖಾಲಿ ಹೊಟ್ಟೆ ಉರಿವ ಕೊಂಡ
ನೀರು ಬತ್ತಿದ ಕಣ್ಣು ಯಾರೋ ಬಿಟ್ಟ ಬಾಣ
ಕಂಡ ಮೋಡಗಳೆಲ್ಲ ಕೆಂಡದುಂಡೆಗಳೇ
ಈ ಬೇಗೆಯೂ ಬೇಕು ಬಿಡು ನಿನ್ನಂತೆ

ಹೀಗೆ `ನಾಗರ ನುಂಗಿದ ನವಿಲುʼ ಸಂಕಲನದ 54 ಕವಿತೆಗಳೂ ಭಾಷೆಯನ್ನು ಹೊಸದುಗೊಳಿಸಿವೆ. ರೂಪಕಗಳನ್ನು ಮರುರೂಪಿಸಿವೆ. ಸಮಕಾಲೀನ ಬದುಕಿನ ಅನೇಕ ಬಿಕ್ಕಟ್ಟುಗಳಿಗೆ ಧ್ವನಿಯಾಗಿವೆ. ಭಾವುಕತೆ ಮತ್ತು ವೈಚಾರಿಕತೆಗಳು ಇಲ್ಲಿ ಹದವಾಗಿ ಮೇಳೈಸಿವೆ. ದಿಕ್ಕೆಟ್ಟು ಹೋಗುತ್ತಿರುವ ಜನರ ನೈತಿಕತೆಯನ್ನು ಹೆಚ್ಚಿಸಲು, ಸಮಾಜದ ಸ್ವಾಸ್ಥ್ಯವನ್ನು ಕಾಪಾಡಲು, ಪ್ರಜಾಪ್ರಭುತ್ವದ ಬೇರುಗಳನ್ನು ಬಲಗೊಳಿಸಲು ಮತ್ತು ಜೊತೆಗಿರುವ ಜನರ ಯೋಚನಾ ಶಕ್ತಿಯನ್ನು ಹೆಚ್ಚಿಸಲು ಕವಿಗಳು ಇಂಥ ಕವನಗಳನ್ನು ಬರೆಯಬೇಕು. ನಾವು ಅವುಗಳನ್ನು ತಪ್ಪದೆ ಓದಬೇಕು.

MORE FEATURES

'ಪ್ರೇಮಾಯತನ' ಒಲವ ಕವಿತೆಗಳ ಹೂಗುಚ್ಛವಾಗಿದೆ

24-04-2024 ಬೆಂಗಳೂರು

"ಇತ್ತೀಚಿನ ದಿನಗಳಲ್ಲಿ ನಮ್ಮ ಯುವಜನತೆ 'ಪ್ರೀತಿ' ಯನ್ನು ಅರ್ಥೈಸಿಕೊಳ್ಳುವಲ್ಲಿ ವಿಫಲರಾಗುತಿದ್ದಾರೆ. ಪ್...

ತುಳುನಾಡಿನ ದೈವಾರಾಧನೆಯ ಒಳ, ಹೊರಗಿನ ವಿಚಾರಗಳನ್ನು ಈ ಕೃತಿ ದಾಖಲಿಸಿದೆ

24-04-2024 ಬೆಂಗಳೂರು

"ಇದನ್ನು ಪುಸ್ತಕ ಅನ್ನುದಕ್ಕಿಂತಲೂ ದೈವಗಳ ಬಗ್ಗೆ ಭಕ್ತಿ , ಪ್ರೀತಿ ಇರುವವರ ಮನೆಯಲ್ಲಿರಲೆಬೇಕಾದ ಅಧ್ಬುತವಾದ ಗ್ರಂ...

ಸಾಮಾಜಿಕ ನ್ಯಾಯದ ಪ್ರಜ್ಞೆಯಾಗಿ ಡಾ. ರಾಜ್ ಕುಮಾರ್

24-04-2024 ಬೆಂಗಳೂರು

ಕನ್ನಡ ರಂಗಭೂಮಿ ಮತ್ತು ಚಿತ್ರರಂಗ ಕಂಡ ಮೇರು ಕಲಾವಿದ ಡಾ.ರಾಜ್ ಕುಮಾರ್. ನಟಸಾರ್ವಭೌಮ, ವರನಟ ಡಾ.ರಾಜ್ ಕುಮಾರ್ ತಮ್ಮ ಚಿ...