ನಾಗತಿಹಳ್ಳಿಯವರ ಪ್ರವಾಸಕಥನಗಳು ಇಷ್ಟವಾಗುವುದು ಇಂತಹ ಕಾರಣಗಳಿಗಾಗಿಯೇ !!


“ಪ್ರಾಕೃತಿಕವಾಗಿ ಅಗರ್ಭ ಶ್ರೀಮಂತಿಕೆಯನ್ನು ಹೊಂದಿರುವ ದ್ವೀಪರಾಷ್ಟ್ರಗಳಾದ ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್ ಪ್ರವಾಸ ಕಥನವಿದು” ಎನ್ನುತ್ತಾರೆ ನಾಗೇಂದ್ರ ಎ. ಆರ್. ಅವರು ನಾಗತಿಹಳ್ಳಿ ಚಂದ್ರಶೇಖರ್ ಅವರ ‘ದಕ್ಷಿಣ ಧ್ರುವದಿಂ’ ಕೃತಿ ಕುರಿತು ಬರೆದ ವಿಮರ್ಶೆ ನಿಮ್ಮ ಓದಿಗಾಗಿ.

ಕೃತಿ - ದಕ್ಷಿಣ ಧ್ರುವದಿಂ
ಲೇಖಕರು - ನಾಗತಿಹಳ್ಳಿ ಚಂದ್ರಶೇಖರ್
ಪ್ರಕಾಶಕರು - ಅಭಿವ್ಯಕ್ತಿ ಸಾಂಸ್ಕೃತಿಕ ವೇದಿಕೆ, ಬೆಂಗಳೂರು
ಬೆಲೆ - ರೂ. 60/-
ಪ್ರಥಮ ಮುದ್ರಣ - 2004

ಪ್ರವಾಸ ಕಥನದ ಅಭಿಯಾನ ಎಂದಾಕ್ಷಣ, ಕಪಾಟಿನಲ್ಲಿ ಅರಸಿ ಕೈಗೆತ್ತಿಕೊಂಡ ಪುಸ್ತಕ ನಾಗತಿಹಳ್ಳಿಯವರ 'ದಕ್ಷಿಣ ಧ್ರುವದಿಂ'. ಹಿಂದೊಮ್ಮೆ ಓದಿದ್ದ ಈ ಕೃತಿಯನ್ನು ಮತ್ತೆ ಕೂತು ಓದಿದೆ. ನಾಗತಿಹಳ್ಳಿಯವರ 'ಅಲೆಮಾರಿಯ ಹೆಜ್ಜೆಗಳು' ಸರಣಿಯ ಮೂರು ಕೃತಿಗಳನ್ನು ಈವರೆಗೆ ಓದಿದ್ದೇನೆ. 'ದಕ್ಷಿಣ ಧ್ರುವದಿಂ', 'ಅರಿಗಟೋ ಗೊಜಾಯಿಮಸ್', 'ನನ್ನ ಗ್ರಹಿಕೆಯ ಅಮೆರಿಕ'... ಮೂರೂ ಸಹ ಒಂದಕ್ಕಿಂತ ಒಂದು ಚೆಂದದ ಪುಸ್ತಕಗಳು. ಈ ಸರಣಿಯ ಮಿಕ್ಕ ಎಲ್ಲ ಕೃತಿಗಳನ್ನೂ ಶೀಘ್ರದಲ್ಲೇ ಕೊಂಡು ಸಂಗ್ರಹಕ್ಕೆ ಸೇರಿಸಿಕೊಳ್ಳುತ್ತೇನೆ.

'ದಕ್ಷಿಣ ಧ್ರುವದಿಂ' ಈ ಸರಣಿಯಲ್ಲಿ ನಾ ಓದಿದ ಮೊದಲ ಪುಸ್ತಕ. ಪ್ರಾಕೃತಿಕವಾಗಿ ಅಗರ್ಭ ಶ್ರೀಮಂತಿಕೆಯನ್ನು ಹೊಂದಿರುವ ದ್ವೀಪರಾಷ್ಟ್ರಗಳಾದ ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್ ಪ್ರವಾಸ ಕಥನವಿದು. ಕೃತಿಯ ಮೊದಲಾರ್ಧ ಲೇಖಕರ ನ್ಯೂಜಿಲೆಂಡ್ ಪ್ರವಾಸದ ಅನುಭವಗಳನ್ನು, ದ್ವಿತೀಯಾರ್ಧ ಆಸ್ಟ್ರೇಲಿಯಾದ ಅನುಭವಗಳನ್ನೂ ಕಟ್ಟಿಕೊಡುತ್ತದೆ. ಬಾಲ್ಯದಿಂದಲೂ ಕ್ರಿಕೆಟ್ ಹುಚ್ಚಿದ್ದ ನನಗೆ ಈ ಎರಡೂ ದೇಶಗಳ ಪರಿಚಯ ಕ್ರಿಕೆಟ್ ಜಗತ್ತಿಗೆ ಮಾತ್ರವೇ ಸೀಮಿತವಾಗಿತ್ತು. ಕ್ರಿಕೆಟ್ ಆಟದಲ್ಲಿ ನ್ಯೂಜಿಲೆಂಡ್ ಆಟಗಾರರು ಶಾಂತ ಸ್ವಭಾವ ಮತ್ತು ಕ್ರೀಡಾಸ್ಫೂರ್ತಿಗೆ ಹೆಸರಾದವರು. ಅವರನ್ನು ಬಹುತೇಕ ಎಲ್ಲ ದೇಶದ ಕ್ರಿಕೆಟ್ ಅಭಿಮಾನಿಗಳೂ ಪ್ರೀತಿಸುತ್ತಾರೆ. ಆದರೆ ಆಸ್ಟ್ರೇಲಿಯಾ ಆಟಗಾರರು ಕ್ರೀಡಾಂಗಣದಲ್ಲಿ ಅಶಿಸ್ತು ಮತ್ತು ಆಕ್ರಮಣಕಾರಿ ಪ್ರವೃತ್ತಿಯಿಂದಲೇ ಗುರುತಿಸಲ್ಪಟ್ಟವರು. ಇತ್ತೀಚೆಗೆ ಕೆಲ ವರ್ಷಗಳ ಹಿಂದಷ್ಟೇ ಬಾಲ್ ಟ್ಯಾಂಪರಿಂಗ್ ಹಗರಣದಲ್ಲಿ ಸಿಲುಕಿ ಅಪಖ್ಯಾತಿ ಪಡೆದವರು. ಈ ವಿಷಯಗಳನ್ನು ಏಕೆ ಉಲ್ಲೇಖಿಸುತ್ತಿದ್ದೇನೆ ಎಂದರೆ, ಈ ಕೃತಿಯಲ್ಲಿರುವ ಕೆಲವು ಮಾಹಿತಿಗಳನ್ನು ಕಂಡಾಗ ಬಾಲ್ಯದಿಂದಲೂ ನಾ ಕಂಡ ಆಟಗಾರರು ಈ ದೇಶಗಳಿಗೆ ಸೇರಿದವರೇ ಹೌದೇ ಎಂದು ಅಚ್ಚರಿಯಾಯಿತು. ಆದರೆ ಏಕೆ? ಮುಂದಕ್ಕೆ ನೋಡೋಣ.

ಅಂಟಾರ್ಟಿಕಾ ಭೂಭಾಗಕ್ಕೆ ಬಹಳ ಸಮೀಪದಲ್ಲಿರುವ ನ್ಯೂಜಿಲೆಂಡ್, ಪ್ರಾಕೃತಿಕವಾಗಿ ಅತ್ಯಂತ ಶ್ರೀಮಂತವಾದ ದೇಶ. ಅಪೂರ್ವವಾದ ವನ ಸಂಪತ್ತು, ಸ್ವಚ್ಛ ಮತ್ತು ನಿರ್ಮಲವಾದ ಜಲ ಸಂಪನ್ಮೂಲಗಳು, ಸರೋವರಗಳು, ಹಿಮದ ಬೆಟ್ಟಗಳು, ...ಇವುಗಳ ಜೊತೆಗೇ ಅಲ್ಲಲ್ಲಿ ಅಡಗಿರುವ ಬಿಸಿನೀರಿನ ಬುಗ್ಗೆಗಳು ಮತ್ತು ಅಗ್ನಿ ಪರ್ವತಗಳು !! ಕ್ವೀನ್ಸ್ ಟೌನಿನ ಪ್ರಾಕೃತಿಕ ಸೌಂದರ್ಯದ ಬಗ್ಗೆ ನಮ್ಮಲ್ಲಿ ಹಲವು ಮಂದಿ ಕೇಳಿರಬಹುದು. ಈ ಎಲ್ಲದರ ವರ್ಣನೆಯೂ ಈ ಕೃತಿಯಲ್ಲಿ ಅದ್ಭುತವಾಗಿ ಮೂಡಿಬಂದಿದೆ. ನ್ಯೂಜಿಲೆಂಡಿನ ರಾಷ್ಟ್ರೀಯ ಪಕ್ಷಿಯಾದ 'ಕಿವಿ'ಯ ಬಗ್ಗೆ ಪುಸ್ತಕದಲ್ಲಿ ದೊರೆತ ಮಾಹಿತಿಗಳು ಅಚ್ಚರಿಯನ್ನು ಹುಟ್ಟಿಸಿದವು. ಗಾತ್ರವೊಂದನ್ನು ಬಿಟ್ಟರೆ ಈ ಪಕ್ಷಿಯು ಹೆಚ್ಚಾಗಿ ಗೂಬೆಯನ್ನು ಹೋಲುತ್ತದೆ. ಮಂದಮತಿಯ ಈ ಪಕ್ಷಿ ಹಾರಲೊಲ್ಲದು. ಬೆಳಗಿನ ಸಮಯದಲ್ಲಿ ಸರಿಯಾಗಿ ಕಣ್ಣು ಕಾಣದ ಈ ಪಕ್ಷಿಯನ್ನು, ಬೇರೆಡೆಯಲ್ಲೇನಾದರೂ ಇದ್ದಿದ್ದರೆ ಮನುಷ್ಯ ಈ ವೇಳೆಗಾಗಲೇ ಬಡಿದು ಬಾಯಿಗೆ ತುಂಬಿಕೊಂಡಿರುತ್ತಿದ್ದ. ಅದು ಇಷ್ಟರಲ್ಲಾಗಲೇ ಇತಿಹಾಸವನ್ನು ಸೇರಿಕೊಂಡಿರುತ್ತಿತ್ತೇನೋ!! ಡೋಡೋ ಹಕ್ಕಿ ಮತ್ತು ಪ್ಯಾಸೆಂಜರ್ ಪಾರಿವಾಳಗಳ ದುರಂತಮಯವಾದ ಕತೆಯನ್ನು ಕೇಳಿಲ್ಲವೇ....ಆದರೆ ನ್ಯೂಜಿಲೆಂಡ್ ಸರ್ಕಾರ ಈ ಅಪರೂಪದ ಪಕ್ಷಿಗಳನ್ನು ಶ್ರಮವಹಿಸಿ ಅತ್ಯಂತ ಜಾಗರೂಕತೆಯಿಂದ ಕಾಪಾಡಿಕೊಂಡಿದೆ. ಅದಕ್ಕೆ ರಾಷ್ಟ್ರೀಯ ಪಕ್ಷಿಯ ಸ್ಥಾನ ನೀಡಿದೆ.

ನ್ಯೂಜಿಲೆಂಡ್ ದೇಶದ ಮೂಲವಾಸಿಗಳು ಎನ್ನಬಹುದಾದ 'ಮೌರಿ'ಗಳ ಬಗ್ಗೆಯೂ ಲೇಖಕರು ಇಲ್ಲಿ ವಿಸ್ತಾರವಾಗಿ ವಿವರಿಸಿದ್ದಾರೆ. ಅವರ ಜನಪದ, ಸಂಸ್ಕೃತಿ, ಆಚರಣೆಗಳು.... ತಾವೇ ಸ್ವತಃ ಒಂದು ಹಳ್ಳಿಗೆ ಭೇಟಿಯಿತ್ತು ಮೌರಿಗಳ ಜೊತೆಗೆ ಕಳೆದ ಸುಂದರ ಕ್ಷಣಗಳನ್ನು ಮತ್ತು ಕಣ್ಣಾರೆ ಕಂಡ ಅವರ ಜನಪದ ಆಚರಣೆಗಳನ್ನು ಲೇಖಕರು ಈ ಕೃತಿಯಲ್ಲಿ ದಾಖಲಿಸಿದ್ದಾರೆ. ನನಗೆ ನಾಗತಿಹಳ್ಳಿಯವರ ಪ್ರವಾಸಕಥನಗಳು ಇಷ್ಟವಾಗುವುದು ಇಂತಹ ಕಾರಣಗಳಿಗಾಗಿಯೇ !!

ಆದರೆ ಕೇವಲ ಒಳ್ಳೆಯದು ಮಾತ್ರವೇ ಎಲ್ಲಿರಲು ಸಾಧ್ಯ ?? ಒಳ್ಳೆಯದಿದ್ದಲ್ಲಿ ಕೆಡುಕೂ ಇರುತ್ತದೆ. ಬೂದಿ ಮುಚ್ಚಿದ ಕೆಂಡದಂತೆ, ತಣ್ಣಗೆ ಕಾಣುವ ಕ್ರೈಸ್ಟ್ ಚರ್ಚ್ ನಗರದಲ್ಲಿ ಒಳಗೊಳಗೆ ಇರುವ ಜನಾಂಗೀಯ ದ್ವೇಷದ ವಿವರಗಳು ಬೆಚ್ಚಿಬೀಳಿಸುವಂತಿತ್ತು. ವಿದ್ಯಾರ್ಥಿಗಳು, ಮಕ್ಕಳು, ಮಹಿಳೆಯರೆನ್ನದೆ ಏಷ್ಯನ್ನರ ಮೇಲೆ ನಿರಂತರವಾಗಿ ನಡೆಯುತ್ತಿರುವ ಜನಾಂಗೀಯ ದ್ವೇಷ, ದೈಹಿಕವಾದ ಹಲ್ಲೆಗಳು, ಸಾರ್ವಜನಿಕವಾಗಿಯೇ ನ್ಯೂಜಿಲೆಂಡಿನ ಬಿಳಿಯರಿಂದ ನಡೆಯುವ ಹಿಂಸಾಚಾರಗಳು...ಇವೆಲ್ಲವನ್ನೂ ಬೇಕೆಂದೇ ಹೊರಜಗತ್ತಿನಿಂದ ಮರೆಮಾಚುವ ಸರ್ಕಾರ !! ಇದನ್ನು ಕಾಣುವಾಗ, ಧೀರ್ಘಕಾಲದಿಂದಲೂ ಕ್ರಿಕೆಟ್ನ಼ಲ್ಲಿ ಸೌಹಾರ್ದಯುತವಾಗಿ ಇತರರಿಗೆ ಆದರ್ಶಪ್ರಾಯರಾಗಿರುವ ಆಟಗಾರರು ನಿಜಕ್ಕೂ ಈ ದೇಶದವರೇ ಹೌದೇ ಎನಿಸಿತು !! ಅದೇ ಕ್ರೈಸ್ಟ್ ಚರ್ಚಿನಲ್ಲಿ ಒಂದು ಅಂತರರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂ ಇದೆ. ಆ ಮೈದಾನದಲ್ಲಿ ಇಂಡಿಯನ್, ಆಫ್ರಿಕನ್, ಕೆರಿಬಿಯನ್ ಆಟಗಾರರು ಎಷ್ಟೋ ಕ್ರಿಕೆಟ್ ಪಂದ್ಯಗಳನ್ನಾಡಿದ್ದಾರೆ ಮತ್ತು ಆ ಪಂದ್ಯಗಳನ್ನು ನ್ಯೂಜಿಲೆಂಡ್ ಪ್ರೇಕ್ಷಕರು ಆಸ್ವಾದಿಸಿದ್ದಾರೆ. ಆಗ ಅವರ ಈ ಜನಾಂಗೀಯ ಪ್ರಜ್ಞೆ ಎಲ್ಲಿ ಹೋಗಿರುತ್ತದೆ?

ಇನ್ನು ಆಸ್ಟ್ರೇಲಿಯಾ ವಿಚಾರಕ್ಕೆ ಬಂದರೆ, ಇದೊಂದು ತಣ್ಣಗಿನ ದ್ವೀಪರಾಷ್ಟ್ರ. ಆ ದೇಶ ತನ್ನಲ್ಲಿರುವ ಅಪರೂಪದ ಪ್ರಾಣಿಗಳನ್ನು ರಕ್ಷಿಸಿಕೊಂಡಿರುವ ರೀತಿಯೂ ಅದ್ಭುತ. ಅಲ್ಲಿನ ಮೃಗಾಲಯ ಮತ್ತು ಮತ್ಸ್ಯಾಲಯಗಳು ಕೇವಲ ಪ್ರೇಕ್ಷಣೀಯ ಸ್ಥಳಗಳಲ್ಲ, ಬದಲಾಗಿ ಕಲಿಕಾ ಸ್ಥಳಗಳು ಎಂಬುದು ಈ ಕೃತಿಯಿಂದ ಮನವರಿಕೆಯಾಗುತ್ತದೆ. ಆಸ್ಟ್ರೇಲಿಯಾ ಬಗ್ಗೆ ಓದುವಾಗ ನನಗೆ ಬಹಳ ಮುದ ನೀಡಿದ್ದು, ಮೆಲ್ಬೋರ್ನ್ ಸಮೀಪದ ಫಿಲಿಪ್ ಐಲ್ಯಾಂಡಿನಲ್ಲಿ ದಿನವೂ ಕಾಣಸಿಗುವ ಪೆಂಗ್ವಿನ್ ವಾಕ್ !! ಪ್ರತೀ ದಿನವೂ ಮುಸ್ಸಂಜೆ ಸಮುದ್ರದಿಂದ ಎದ್ದು ಬರುವ ಪೆಂಗ್ವಿನ್ಗ಼ಳು, ಮೈಕೊಡವಿ ದಡದಲ್ಲಿ ನಡೆದಾಡುವ ಮೋಹಕ ದೃಶ್ಯದ ವರ್ಣನೆಯನ್ನು ಓದಿದಾಗ ಆ ದೃಶ್ಯ ಕಣ್ಣೆದುರು ನಡೆದಂತೆಯೇ ಭಾಸವಾಯ್ತು. ಅಂತೆಯೇ ಐತಿಹಾಸಿಕ ಮಹತ್ವಿಕೆಯುಳ್ಳ ಬೃಹತ್ ಗಾತ್ರದ ಮೆಲ್ಬೋರ್ನ್ ಕ್ರಿಕೆಟ್ ಗ್ರೌಂಡ್ ಅಥವಾ MCG, ಸಿಡ್ನಿಯ ಅಪೆರಾ ಹೌಸ್ ಕಲಾಭವನ, ದೈತ್ಯ ಗಾತ್ರದ ಹಾರ್ಬರ್ ಬ್ರಿಡ್ಜ್ ಮುಂತಾದ ಕಡೆಗಳಲ್ಲಿ ಓದುಗನನ್ನು ಸುತ್ತಾಡಿಸಿ, ಲೇಖಕರು ಆಸ್ಟ್ರೇಲಿಯಾ ಪ್ರವಾಸ ಮುಗಿಸುತ್ತಾರೆ. ಅಪೆರಾ ಹೌಸ್ ಒಂದು ಅಪೂರ್ವ ಕಲಾಭವನ !! ಕಡಲಂಚಿನಲ್ಲಿ ವೃತ್ತಾಕಾರದ ಕೊಲ್ಲಿಗೆ ಮುಖಮಾಡಿ ನಿಂತ ಈ ಕಲಾಭವನ ಆಕಾಶದತ್ತ ಅರಳಿನಿಂತ ಕಮಲದ ದಳದಂತೆ ಕಾಣುತ್ತದೆ. ಈ ಕಲಾಭವನವನ್ನು ಹೊರಗಿಂದ ನಿಂತು ನೋಡಲೆಂದೇ ಸುಮಾರು ಎರಡೂವರೆ ಲಕ್ಷ ಪ್ರವಾಸಿಗರು ವರ್ಷವೂ ಬರುತ್ತಾರಂತೆ. ಮೆಲ್ಬೋರ್ನ್ ಕ್ರಿಕೆಟ್ ಗ್ರೌಂಡ್ ವಿಶ್ವದ ಅತೀ ದೊಡ್ಡ ಕ್ರಿಕೆಟ್ ಮೈದಾನಗಳಲ್ಲಿ ಒಂದೆಂದು ಗೊತ್ತಿತ್ತು. ಆದರೆ ಅದು ಎರಡನೇ ಮಹಾಯುದ್ಧದ ಸಮಯದಲ್ಲಿ ಸೈನಿಕರಿಗೆ ವಸತಿ ಮತ್ತು ಉಗ್ರಾಣಕ್ಕೆ ಬಳಸಲ್ಪಟ್ಟಿತ್ತೆಂದೂ, ಅದನ್ನು people's ground ಎಂದೂ ಸಹ ಕರೆಯುತ್ತಾರೆಂದು ಈ ಕೃತಿಯ ಮೂಲಕ ತಿಳಿಯಿತು. ಜಗತ್ತಿನಲ್ಲೇ ಬೃಹತ್ ಸ್ಟೀಲ್ ಆರ್ಚ್ ಸೇತುವೆಯಾದ ಹಾರ್ಬರ್ ಬ್ರಿಡ್ಜ್ ಬಗೆಗಿನ ವಿವರಗಳು ದಿಗ್ಭ್ರಮೆಗೊಳಿಸಿದವು. 1,149 ಮೀಟರ್ ಉದ್ದವಿರುವ ಈ ಸೇತುವೆಯನ್ನು ನಿರ್ಮಿಸುವಾಗ ಹದಿನಾರು ಮಂದಿ ತಮ್ಮ ಪ್ರಾಣ ಕಳೆದುಕೊಂಡಿದ್ದಾರಂತೆ. ಇಡೀ ಸೇತುವೆಗೆ ಒಮ್ಮೆ ಪೈಂಟ್ ಮಾಡಬೇಕಾದರೆ 2,72,000 ಲೀಟರ್ ಬಣ್ಣ ಬೇಕಾಗುತ್ತದಂತೆ!!

ಅದೇನೇ ಇರಲಿ... ಮುಂದುವರಿದ ಈ ಹೊರದೇಶಗಳ ಬಗ್ಗೆ ಓದುವಾಗ ನಾವೇಕೆ ಇನ್ನೂ ಹೀಗಿದ್ದೇವೆ ಎಂಬ ಯೋಚನೆ ಭಾದಿಸದಿರದು. ನಾನೂ ಸಹ ದಕ್ಷಿಣ ಅಮೆರಿಕಾದ ಕಡಲ ತೀರದ ಪುಟ್ಟ ರಾಷ್ಟ್ರ ಉರುಗ್ವೆಯಲ್ಲಿ ಇಪ್ಪತ್ತು ತಿಂಗಳು ವಾಸಿಸಿದ್ದೆ. ಅಲ್ಲಿಯ ವ್ಯವಸ್ಥೆಗಳಲ್ಲಿನ ಸರಳತೆಯನ್ನು ಕಂಡಾಗ ನನಗೆ ಆ ಜನರ ಮೇಲೆಯೇ ಒಂದು ಬಗೆಯ ಅಸೂಯೆಯಾಗಿದೆ. ಅವರ ಅತ್ಯಂತ ವೈಜ್ಞಾನಿಕವಾದ ತ್ಯಾಜ್ಯ ನಿರ್ವಹಣೆಯ ಕ್ರಮವನ್ನು ಕಾಣುತ್ತಿದ್ದಾಗೆಲ್ಲಾ, ಬೆಂಗಳೂರಿನ ಪೌರಕಾರ್ಮಿಕರ ಪಾಡನ್ನು ನೆನೆದು ಮರುಗಿದ್ದೇನೆ. ಈ ಕೃತಿಯಲ್ಲೂ ತಮ್ಮ ಸಂಸ್ಕೃತಿ, ಸಂಪತ್ತು, ಸಂಪನ್ಮೂಲಗಳನ್ನು ಕಾಪಾಡಿಕೊಳ್ಳಲು ಆಸ್ಟ್ರೇಲಿಯಾ, ನ್ಯೂಜಿಲೆಂಡ್ ಸರ್ಕಾರಗಳು ಕೈಗೊಂಡಿರುವ ಹಲವು ಶಿಸ್ತಿನ ಕ್ರಮಗಳನ್ನು ಲೇಖಕರು ಅಡಿಗಡಿಗೂ ಉಲ್ಲೇಖಿಸುತ್ತಾರೆ. ಪೆಂಗ್ವಿನ್ ವಾಕ್ ಆಗುವಾಗ ಅಲ್ಲಿ ಯಾರೂ ಸದ್ದು ಗದ್ದಲ ಮಾಡುವಂತಿಲ್ಲ, ಕ್ಯಾಮೆರಾಗಳಿಂದ ಪೋಟೋ ತೆಗೆಯುವಂತಿಲ್ಲ. ಆ ದೇಶಗಳಲ್ಲಿ ಯಾರೂ ಪ್ರಾಣಿಗಳಿಗೆ ಹಾನಿ ಮಾಡುವಂತಿಲ್ಲ. ಅಪೆರಾ ಹೌಸಿನ ಯಾವ ಕಲಾ ಪ್ರದರ್ಶನಕ್ಕೂ ತಡವಾಗಿ ಬಂದರೆ, ಒಮ್ಮಿಂದೊಮ್ಮೆಲೇ ಗೂಳಿಯಂತೆ ಒಳನುಗ್ಗುವಂತಿಲ್ಲ. ಸ್ಕೂಲ್ ಜೋನ್ಗ಼ಳ ಸಮೀಪ ಅನವಶ್ಯಕ ಹಾರ್ನ್ ಮಾಡುವಂತಿಲ್ಲ. ಮಕ್ಕಳ ವಿಷಯದಲ್ಲಿ ಅಪಚಾರಗೈಯ್ಯುವಂತಿಲ್ಲ.

ಆದರೆ ನಾವೇಕೆ ಹಾಗಿಲ್ಲ ??? ನಮ್ಮಲ್ಲಿ ಎಲ್ಲೆಡೆಯೂ ಬೇಲಿಗಳೇ ಎದ್ದು ಹೊಲ ಮೇಯುತ್ತವೆ. ಶಾಲಾ ಸಿಬ್ಬಂದಿಯೇ ಚಿಕ್ಕ ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯವೆಸಗಿದ ಘಟನೆ ಇತ್ತೀಚೆಗೆ ತಾನೇ ನಡೆದಿತ್ತು. ಪುಟ್ಟ ಮಕ್ಕಳಿಗೆ ನೀಡುವ ಸೌಲಭ್ಯಗಳಲ್ಲೂ ಜಾತಿಯಾಧರಿತ ತಾರತಮ್ಯ !! ನಮ್ಮ ಚಿಕ್ಕಮಗಳೂರಿಗೆ ಪ್ರವಾಸಕ್ಕೆಂದು ಬಂದವರು ಕೆಜಿಗಟ್ಟಲೆ ಪ್ಲಾಸ್ಟಿಕ್ ತ್ಯಾಜ್ಯವನ್ನು ಅಲ್ಲಿಯೇ ಬಿಸುಟುಹೋಗುತ್ತಾರೆ. ಒಮ್ಮೆ ಮೇಲುಕೋಟೆಗೆ ಸ್ನೇಹಿತನೊಂದಿಗೆ ಭೇಟಿ ನೀಡಿದ್ದೆ. ಅಲ್ಲಿನ ವಿಶಾಲವಾದ ಮಂಟಪಗಳ ಭಿತ್ತಿಯ ಮೇಲೆಲ್ಲಾ ಬಗೆಬಗೆಯ ಪೋಲಿ ಬರಹಗಳು !! ಆ ಮಂಟಪವನ್ನೇ ತಮ್ಮ ವಾಸಸ್ಥಾನವಾಗಿಸಿಕೊಂಡಿರುವ ಜನಗಳು.... ಅಲ್ಲಿಯೇ ಅವರ ಅಡುಗೆ, ಅಲ್ಲಿಯೇ ತ್ಯಾಜ್ಯ.... ರಾಮ ರಾಮಾ !! ವೃಷಭಾವತಿಯನ್ನು ಈಗಾಗಲೇ ಕೆಂಗೇರಿ ಮೋರಿಯಾಗಿಸಿದ್ದೇವೆ. ಕೆರೆಗಳ ಮೇಲೆಯೇ ಲೇಔಟ್ಗ಼ಳನ್ನು ಕಟ್ಟುತ್ತಿದ್ದೇವೆ, ಬೆಟ್ಟಗಳನ್ನು ಕೊರೆದು ರೆಸಾರ್ಟ್ ಮಾಡುತ್ತಿದ್ದೇವೆ, ಕಾಡಿನ ತುಂಬೆಲ್ಲಾ ಅಕೇಶಿಯಾ ತುಂಬಿಸುತ್ತಿದ್ದೇವೆ, ಮರಳನ್ನು ಕಳ್ಳಸಾಗಣಿಕೆ ಮಾಡುತ್ತಿದ್ದೇವೆ. ಹೀಗೆಯೇ ಮುಂದುವರಿದರೆ ಕೊಡಗು, ವಯ್ನಾಡುಗಳಂತೆ ಇನ್ನೂ ಎಲ್ಲೆಲ್ಲಿ ಏನೇನಾಗುವುದೋ ??!! ಚಿಂತನೆಗೆ ತಳ್ಳುವ ಕೃತಿಯಿದು.

ಸದ್ಯ ನಾಗತಿಹಳ್ಳಿಯವರು ಪೋರ್ಚುಗಲ್ ಪ್ರವಾಸದಲ್ಲಿದ್ದಾರೆ. ಮುದ ನೀಡುವ ಸೊಗಸಾದ ಸಂದೇಶಗಳು, ವಿಡಿಯೋ ತುಣುಕುಗಳು ಅಲ್ಲಿಂದ ಬರುತ್ತಿರುತ್ತವೆ. ಆ ಪ್ರವಾಸದ ಮೂಲಕ ಅವರ ಈ ಸುಂದರ ಸರಣಿಗೆ ಮತ್ತೊಂದು ಹೊಸ ಸೇರ್ಪಡೆಯಾಗಲಿ ಎಂದು ಆಶಿಸುತ್ತೇನೆ.

- ನಾಗೇಂದ್ರ ಎ.ಆರ್.

MORE FEATURES

ಒಂದೇ ನದಿಯ ನೀರನ್ನು ಕುಡಿದರೂ, ಒಬ್ಬರು ಇನ್ನೊಬ್ಬರ ಮೇಲೆ ಆಕ್ರಮಣ ಮಾಡುತ್ತಲೇ ಇರುತ್ತಾರೆ

05-10-2024 ಬೆಂಗಳೂರು

“ರೇಷ್ಮೆ ಬಟ್ಟೆಯ ನುಣುಪಿನ ಕಾರಣಕ್ಕೆ ಸಾವಿರಾರು ಮೈಲುಗಳ ಒರಟು ದಾರಿಯೊಂದು ಯವನದಿಂದ ಚೀನಾದವರೆಗೆ ತೆರೆದುಕೊಂಡು ...

ನವೋದಯ ಲೇಖಕರ ಜೀವನಾಡಿಯಾಗಿಯೇ ಠಾಕೂರರ ಸಾಹಿತ್ಯ ಪ್ರಭಾವಿಸಿದೆ

05-10-2024 ಬೆಂಗಳೂರು

“ಕನ್ನಡ ಸಾಂಸ್ಕೃತಿಕ ಸಂದರ್ಭದಲ್ಲಿ ಠಾಕೂರರ ಕೃತಿಗಳ ಅನುವಾದಗಳು ಅದರ ಹಿಂದಿನ ಸಾಂಸ್ಕೃತಿಕ ರಾಜಕಾರಣ ಹಾಗೂ ಅನುವಾ...

ಹೊಟ್ಟೆ ತುಂಬಿದ ಮೇಲೆಯೇ ಆಚಾರ ವಿಚಾರಗಳು ಹುಟ್ಟುವುದು

05-10-2024 ಬೆಂಗಳೂರು

"“ಅನುಭಾವ ಎನ್ನುವುದು ಅನುಭವವನ್ನು ಮೀರಿದ ಸಂಗತಿ. ತನ್ನದಲ್ಲದ ಜಗತ್ತಿನ ಸತ್ಯಗಳನ್ನು ಸುಲಭವಾಗಿ ತನ್ನದಾಗಿ...