ನಕ್ಷತ್ರಗಳ ನುಂಗಿದ ಮೀನುಗಳು ನಕ್ಷತ್ರಗಳೇ ಆಗುತ್ತವೆ.

Date: 06-06-2023

Location: ಬೆಂಗಳೂರು


“ನನ್ನೊಳಗಿನ ಈ ಕದಲಿಕೆಗೆ ಉತ್ತರ ಯಾರು ಕೊಡುವವರು? ಚಂದ್ರ ನನ್ನ ಕೈಗಳನ್ನು ಹಿಡಿದ ಅವನ ಉಗುರ ತುದಿಯೂ ಪ್ರಸನ್ನವಾದ ಬೆಳಕಿನಂತೆ ಹೊಳೆಯುತ್ತಿತ್ತು. ಇಲ್ಲಿ ಎಲ್ಲರೂ ಎಲ್ಲವೂ ಒಂದೇ. ಮುಚ್ಚಿದ ಕಣ್ಣುಗಳ ಒಳಗೂ ಅದೇ ಬೆಳಕು ಅದೇ ಜುಗಲ್ಬಂದಿ, ಅದೇ ಸಂಯೋಗ,” ಎನ್ನುತ್ತಾರೆ ಅಂಕಣಗಾರ್ತಿ ಪಿ. ಚಂದ್ರಿಕಾ. ಅವರು ತಮ್ಮ ‘ನಡೆಯದ ಬಟ್ಟೆ’ ಅಂಕಣದಲ್ಲಿ ‘ನಕ್ಷತ್ರಗಳ ನುಂಗಿದ ಮೀನುಗಳು ನಕ್ಷತ್ರಗಳೇ ಆಗುತ್ತವೆ’ ಕುರಿತ ವಿಚಾರವನ್ನು ಕಟ್ಟಿಕೊಟ್ಟಿದ್ದಾರೆ.

`ಬೇಕು ಎನ್ನುವುದು ಬೇಡ ಎನ್ನುವುದನ್ನೂ ಹಿಂದಿಟ್ಟುಕೊಂಡೇ ಬರುತ್ತದೆ. ರಕ್ತದಲ್ಲಿ ಸೇರಿಹೋಗಿರುವ ಪ್ರಾರ್ಥನೆ ಚಿಕ್ಕ ಸಂಗತಿಗಳೂ ಪೂರ್ಣವಾಗಲಿ ಎನ್ನುತ್ತದೆ. ಅದಕ್ಕೆ ಜೀವಂತವಾಗುವುದು ಮಾತ್ರ ಬೇಕು. ಅದು ಆಗಬೇಕೆಂದರೆ ನಾವು ಅದಕ್ಕೆ ಅಣಿಯಾಗಬೇಕು. ತೇಜೂ ನಿನ್ನ ಎಚ್ಚರಿಕೆ, ಚಂದ್ರನ ಲೆಕ್ಕಾಚಾರ, ನನ್ನ ಭಾವತೀವ್ರತೆ, ನಿಹಾರಿಕಾಳ ಆಸೆ, ಹನಿಯ ಕೋಪ ಇವುಗಳಲ್ಲಿ ಒಂದಕ್ಕೆ ಒಳಗಣ್ಣಿಲ್ಲ ಇನ್ನೊಂದಕ್ಕೆ ಹೊರಗಣ್ಣಿಲ್ಲ. ಯಾವ ಸಂಬಂಧಗಳು ಆನಂದವಾಗಬೇಕಿತ್ತೋ ಅದು ಗೋಜಲುಗಳನ್ನು ಗೊಂದಲಗಳ ಗೂಡೆೆ. ಯಾವುದನ್ನು ಪೂರ್ಣ ಎಂದುಕೊಳುತ್ತೇವೆಯೋ ಅದು ಒಡೆದು ಹೋಳಾಗಿ ಹೋಗುತ್ತದೆ. ಹೇಳಲಿಕ್ಕೆ ಏನಿದೆ? ಪೂರ್ಣದ ಹಿಂದೆ ಹೊರಟ ನಮಗೆ ಹಿಂದಿನ ನಮ್ಮೆಲ್ಲಾ ಸಂಬಂಧಗಳಲ್ಲಿ ಅದರದ್ದೆ ಹುಡುಕಾಟ. ಎಲ್ಲ ಗಂಡ ಹೆಂಡತಿಯರ ಹಾಗೆ ಚಂದ್ರನಿಗೆ ನಾನೂ ಹೇಳಿದ್ದೆ, `ನಾನು ನಿನ್ನನ್ನು ಮದುವೆಯಾಗದೆ ಇದ್ದಿದ್ದರೆ...’ ನಗು ಬರುತ್ತೆ ತೇಜೂ ಇವನಲ್ಲದೆ ಇನ್ಯಾರೋ ಆಗಿದ್ದಿದ್ದರೂ ಅವನಿಗೂ ಇದೇ ಮಾತನ್ನು ಹೇಳುತ್ತಿದ್ದೆ. ಕಾಣುವುದೆಲ್ಲವೂ ಕಾಣದ್ದರ ಹಿಂದೆ ಓಡುವ ಹಾಗೆ ಮಾಡುತ್ತದೆ. ಯಾವುದು ಯಾವುದರ ಬೇಟೆ! ಹನಿಯ ಅವತ್ತಿನ ಸ್ಥಿತಿ ನನ್ನೊಳಗೆ ಕನಲಿಕೆಯನ್ನು ಹುಟ್ಟು ಹಾಕಿತ್ತು. ಈಗಲೂ ಅನ್ನಿಸುತ್ತೆ ಹನಿಯ ವಯಸ್ಸಿನಲ್ಲಿ ನಾನು ಅವಳಷ್ಟು ಸೂಕ್ಷ್ಮ ಇರಲಿಲ್ಲವಾ ಅಂತ. ಎಂಥಾ ಘಾತಗಳನ್ನು ಎದುರಿಸಿಯೂ ಗಟ್ಟಿಯಾಗಿ ನಿಂತುಬಿಟ್ಟಿದ್ದೆ. ನನ್ನನ್ನು ಕನಿಕರದಿಂದ ನೋಡಿದವರನ್ನು ಕನಿಕರಿಸಿ ನೋಡುವಷ್ಟು. ಪರಮದ್ವೇಷವನ್ನು ಎದುರಿಸಿಯೂ ಹೃದಯದಲ್ಲಿಟ್ಟುಕೊಳ್ಳದಷ್ಟು. ಹನಿ, `ನಾನು ಅಪ್ಪನನ್ನು ಮಾತ್ರವಲ್ಲ ನಿನ್ನನೂ ಕ್ಷಮಿಸಲ್ಲ’ ಎಂದಳಲ್ಲವೇ? ಆದರೆ ಆದದ್ದು ಬೇರೆ ತೇಜೂ ನಮ್ಮಿಬ್ಬರ ಮಗಾಳಾಗಿ ಹುಟ್ಟಿದ್ದಕ್ಕೆ ತನ್ನನ್ನೇ ಕ್ಷಮಿಸಿಕೊಳ್ಳಲಾಗದಷ್ಟು ಮುಂದಕ್ಕೆ ಹೋಗಿಬಿಟ್ಟಿದ್ದಳು.

ಈಗಾಗಲೇ ಎಲ್ಲ ಚಿತ್ರಗಳನ್ನೂ ಬರೆದು ಎಲ್ಲವೂ ಮೂರ್ತವಾದ ಮೇಲೆ ಕ್ಯಾನ್ವಾಸಿನ ಮೇಲೆ ಬರೆಯಲಿಕ್ಕೆ ಏನಿರುತ್ತದೆ ಹೇಳು? ಹೊಸದನ್ನು ಹುಡುಕಿಕೊಳ್ಳಲು ಹೊಸದೇ ಕ್ಯಾನ್ವಾಸ್, ಹೊಸದೇ ಬಣ್ಣ, ಹೊಸದೇ ಭಾವ ಬೇಕು. ಅದೂ ಹೊಸ ಚುಕ್ಕಿ ಹೊಸ ಗೆರೆಯೇ ಆಗಬೇಕು. ಬರೆದಾದ ಮೇಲೆ ಭಾವವೂ ನಮ್ಮದಾಗಿ ಉಳಿಯಲ್ಲ. ಆದರೆ ಸಂಬಂಧ ಮಾತ್ರ ನಮ್ಮ ನಿಲುವುಗಳನ್ನೂ ಮತ್ತಷ್ಟು ನಿಖರಗೊಳಿಸುತ್ತಿರುತ್ತದೆ. ನಿರೀಕ್ಷೆಗಳೇ ಇಲ್ಲದೆ ಬರೆವ ಚಿತ್ರ ಬರೆದಾದ ಮೇಲೆ ಅರ್ಥಗಳನ್ನು ಅಡಗಿಸಿಟ್ಟುಕೊಂಡರೆ, ಸಂಬಂಧ ಬರೆಯುವ ಮುನ್ನವೇ ಫಲಿತಾಂಶದ ನಿಖರತೆಯನ್ನು ಅಭ್ಯಾಸಕ್ಕೆ ಬಿದ್ದಂತೆ ಹೇಳಿಬಿಡುತ್ತದೆ. ಪಾಪ ಹನಿ ತನ್ನ ಬಗ್ಗೆ ತಾನೇ ಕಾಳಜಿಯನ್ನು ತೆಗೆದುಕೊಳ್ಳಬೇಕಾಗಿ ಬಂತು. ಇಷ್ಟೆಲ್ಲಾ ಅನುಭವವಿರುವ ನಾವು ಪಕ್ಕದಲ್ಲಿದ್ದರೂ ಅವಳಿಗೆ ಯಾವ ರೀತಿಯಲ್ಲೂ ಸಹಾಯ ಮಾಡಲಿಕ್ಕೆ ಆಗಲೇ ಇಲ್ಲವಲ್ಲೇ. ಅದು ಕೊರಗಿನ ಹಾಗೆ ಹಿಂಬಾಲಿಸುತ್ತಲೆ ಇದೆ. ಎಲ್ಲೋ ಏನೋ ವ್ಯತ್ಯಾಸವಾಗಿದೆ ಎಂದು ಅರ್ಥ ಆಗುವುದರೊಳಗೆ ಎಲ್ಲವೂ ಕೈ ಮೀರಿ ಹೋಗಿತ್ತು. ನಿಹಾರಿಕಾಳ ಚಿತ್ರವನ್ನು ನೆಲಕ್ಕೆ ಹಾಕಿ ಒಡೆದು ಹಾಕಿದ್ದಳಲ್ಲ. ಅವತ್ತು ರಾತ್ರಿಯಿಡೀ ನಡುಗುತ್ತಲಿದ್ದಳು. ಜ್ವರ ಅವಳನ್ನು ನರಳುವಂತೆ ಮಾಡಿತ್ತಾ? ಭಯವಿದ್ದಿರಬಹುದಾ? ಗೊತ್ತಿಲ್ಲ, ನಮ್ಮ ಯಾರನ್ನೂ ಅವಳು ಹತ್ತಿರಕ್ಕೂ ಬಿಟ್ಟುಕೊಳ್ಳಲಿಲ್ಲ. ಆ ಕ್ಷಣ ವೇದನೆ ಇಲ್ಲದ ಸ್ಥಿತಿಯನ್ನು ಯಾಕೆ ಕೊಡಲಾರೆ ಎಂದು ನಾನು ಯಾರನ್ನೇ ಬೇಡಿಕೊಂಡಿದ್ದು? ಅಂದಿನಿಂದ ಹನಿಯ ವರ್ತನೆಯೇ ಬೇರೆಯಾಗಿಬಿಟ್ಟಿತ್ತು. ತುಂಬ ಮೃದುವಾದ ಹುಡುಗಿ ಅವಳು, ನಿಹಾರಿಕಾಳ ಜೊತೆ ಜಗಳ ಆಡಿದ್ದಳು, ಎಲ್ಲರೆದುರು ಅವಳನ್ನು ಅವಮಾನ ಮಾಡಿ ಕಣ್ಣಲ್ಲಿ ನೀರು ಹಾಕಿಸಿದಳು. ಕೋಪ ಆರಿದ ಮೇಲೆ ಸ್ವತಃ ತನಗೇ ಅವಮಾನವಾಯಿತು ಎನ್ನುವ ಹಾಗೆ ಕುಗ್ಗಿದಳು. ಹಿಂದಿರುಗಿ ಹೋಗಲಾರದ ಸ್ಥಿತಿಯಲ್ಲಿದ್ದ ನಿಹಾರಿಕಾ ಅಸಹಾಯಕಳಂತೆ ಕಂಡರೂ ಒಳಗೇ ಸ್ಟ್ರಾಂಗ್ ಆಗತೊಡಗಿದ್ದಳು. `ನನ್ನ ಕೇಳುವ ಬದಲು, ನಿನ್ನ ಅಪ್ಪನಿಗೆ ಯಾಕೆ ಹೇಳಲ್ಲ’ ಅಂತ ಪ್ರಶ್ನಿಸಿದ್ದಳು.

`ಆಂಟಿ ಹನಿಗೆ ಹೇಳಿ ಇದರಲ್ಲಿ ನನ್ನ ತಪ್ಪೇನಿದೆ? ನಾನು ಸರಿಯಿಲ್ಲ ಎನ್ನುತ್ತಿದ್ದಾಳೆ. ಸರಿಯಿಲ್ಲ ಎಂದರೆ ಅದಕ್ಕೆ ನಾನೊಬ್ಬಳೇ ಕಾರಣ ಅಲ್ಲ ಅಲ್ಲಾವಾ?’ ಎಂದು ಪ್ರಶ್ನಿಸಿ ನನ್ನೊಳಗಿನ ಅಳುಕನ್ನು ಮತ್ತೆ ಮತ್ತೆ ಎಚ್ಚೆತ್ತುಕೊಳ್ಳುವ ಹಾಗೆ ಮಾಡಿಬಿಟ್ಟಿದ್ದಳು. ಊಂದಾಗಿದ್ದ ನಾನು ಚಂದ್ರ ಈಗ ಬೇರೆ ಆಗಿದ್ದೇವೆ. ಹನಿಗೆ ವಾಸ್ತವವನ್ನು ಅರಗಿಸಿಕೊಳ್ಳಲಾಗುತ್ತಿಲ್ಲ. ವಯಸ್ಸು ಸಣ್ಣದು. ಅವಳಿಗೆ ಹೇಳಲಾರೆ, ಚಂದ್ರನಿಗೆ ಹನಿಗೆ ನಿನ್ನಿಂದ ನೋವಾಗುತ್ತೆ ಎಂದು ಮನವರಿಕೆ ಮಾಡಲಾಗದ ಅಸಹಾಯಕತೆ- ಕೈಗಳು ಬರೆದು ಮನಸ್ಸು ಅದನ್ನು ಎತ್ತೊಯ್ಯಲಾಗದೆ ಬಿಟ್ಟು ಬಿಟ್ಟಾಗ ಅನಾಥವಾಗಿ ಬಿದ್ದಿರುತ್ತಲ್ಲ ಆ ಒಂದು ರೇಖೆ ಹಾಗಿತ್ತು ನನ್ನ ಸ್ಥಿತಿ. ಕೋಲು ಹಿಡಿದು ಇಡೀ ಭೂಮಿಯೇ ನನ್ನ ಕ್ಯಾನ್ವಾಸ್ ಎನ್ನುವ ಆತ್ಮವಿಶ್ವಾಸದಿಂದ ಹೊರಟಿದ್ದೆನಲ್ಲಾ! ಆ ಆತ್ಮವಿಶ್ವಾಸ ನನ್ನಲ್ಲಿ ಯಾಕೆ ಮತ್ತೆ ಮೂಡಲಿಲ್ಲ? ಆ ಧ್ಯಾನ ಮತ್ತೆ ನನ್ನೆದೆಯನ್ನು ಯಾಕೆ ಆಶ್ರಯಿಸಲಿಲ್ಲ? ಆಪ್ತವಾಗಿದ್ದು ಅಂತಿಮವೇ ಆಗುವುದಿಲ್ಲವಲ್ಲಾ ತೇಜೂ. ಇದನ್ನು ನಾನು ಹೇಗೆ ಚಂದ್ರನಿಗೆ ಹೇಳಬಲ್ಲವಳಿದ್ದೆ? ಎಲ್ಲವೂ ಒಂದಾಗುವ ಕ್ಷಣವನ್ನು ತೋರಿಸಿಯೂ ಒಡೆದು ತೋರುವ ಭಿನ್ನತೆಯಲ್ಲಿ ಅವನು ಉಳಿದುಬಿಟ್ಟಿದ್ದ. ಅವಲಂಬನೆ ಕಳೆದ ಸ್ಥಿತಿಯನ್ನು ಇರುವುದಾದರೂ ಹೇಗೆ? ಬಣ್ಣಗಳನ್ನು ಕಳಕೊಂಡು ನಿರ್ಮಲವಾಗುವ ಸ್ಥಿತಿಯೇನೂ ಸಾಮಾನ್ಯವಲ್ಲ.

ತೇಜೂ, ಯಾವಾಗಲೂ ಒಂದು ಸಂಗತಿ ಕಾಡುತ್ತಲೇ ಇರುತ್ತದೆ. ನಮ್ಮ ಸುತ್ತ ಒಂದಿಷ್ಟು ನೆನಪು, ಒಂದಿಷ್ಟು ಬದುಕು ಎಲ್ಲರಿಗೂ ಸಮಾನವಾಗೆ ದೊರಕಿರುತ್ತದೆ. ಕಲಾವಿದರು ನಾವೊಬ್ಬರೆ ಕೆಂಡವನ್ನು ಕೈಲಿ ಹಿಡಿದಿದ್ದೇವೆ, ನಮ್ಮ ಹೆಗಲ ಜವಾಬ್ದಾರಿಗಳೆಲ್ಲವನ್ನೂ ಬರೆದೆ ತೀರಿಸುತ್ತೇವೆ. ನಾವು ಬರೆಯುವುದರಿಂದಲೇ ಜಗತ್ತು ಹೀಗಿದೆ ಎಂದು ಹೊರಟುಬಿಡುತ್ತೇವೆ. ನಿಜ ಹೇಳಲಾ ನಮ್ಮ ಎಲ್ಲ ಅಸಹಾಯಕತೆಗಳನ್ನು ಮುಚ್ಚಿಡಲೆ ಪ್ರಯತ್ನಿಸುತ್ತಿರುತ್ತೇವೆ. ಬೇರೆಯವರಿಗಿಂತ ನಾವು ಹೆಚ್ಚು ಮುಖ್ಯ ಎಂದು ವರ್ತಿಸುತ್ತೇವೆ ನಿಜವಾಗಲೂ ಸಾಮಾನ್ಯ ವ್ಯಕ್ತಿ ಎದುರಿಸುವಂತೆ ಸಹಜವಾಗಿ ಸರಳವಾಗಿ ಯಾವುದನ್ನೂ ನಾವು ತೆಗೆದುಕೊಳ್ಳುವುದೇ ಇಲ್ಲ. ಎಲ್ಲವೂ ಅದರ ಪಾಡಿಗೆ ಅವಿರುತ್ತವೆ. ನಾವದನು ಕಲಕಿಬಿಡುತ್ತೇವೆ. ನಿನಗೆ ಹೇಳಿದ್ದೆನಲ್ಲವೇ ತೇಜೂ, ಆ ಬೆಳದಿಂಗಳ ರಾತ್ರಿ ಹಿಮದ ಛಳಿಯಲ್ಲಿ ನಡುಗುತ್ತಾ ಟೆಂಟಿನಲ್ಲಿ ನಡುಗುತ್ತಾ ಮಲಗಿದ್ದೆನಲ್ಲಾ? ಅಂದು ಆದದ್ದನ್ನು. ತೇಜೂ ನನ್ನ ಅನುಭವಗಳಿಗೆ ನಾನು ರೂಪುಕೊಡುವೆ ಎನ್ನುವುದು ಆತ್ಮವಂಚನೆಯ ಮಾತುಗಳು, ಅವು ಆಳದಲ್ಲಿ ಅರ್ಥಹೀನವೆಂದು ಗೊತ್ತಾಗಿದ್ದು ಅವತ್ತೆ. ಹಿಡಿಯಲಾಗದ್ದು ಎನ್ನುವುದು ಲೆಕ್ಕವಿಲ್ಲದಷ್ಟಿವೆ, ಅವುಗಳೊಂದಿಗೆ ಸೆಣಸಾಟ ನಮ್ಮದು ಸದಾಕಾಲಕ್ಕೂ ಇದ್ದೇ ಇರುತ್ತದೆಯೇ. ಸಾಧ್ಯತೆಯ ಬಾಗಿಲುಗಳು ತೆರೆದುಕೊಳ್ಳುವುದು, ಮುಚ್ಚಿಕೊಳ್ಳುವುದು ಎರಡು ಬೇರೆಯೇ.

`ಜನ್ಮದಲ್ಲಿ ತೀರದ ಅನುಭವವೊಂದನ್ನು ನಿನಗೆ ಕೊಡುತ್ತೇನೆ’ ಎಂದು ಸಾಲು ಹಿಮ ಪರ್ವತಗಳ ಅಂಚಿನ ಪುಟ್ಟ ಟೆಂಟೊಂದರಲ್ಲಿ ಆ ಹುಣ್ಣಿಮೆಯ ರಾತ್ರಿಯ ಅನುಭವಕ್ಕಾಗಿ ಕರೆದೊಯ್ದಿದ್ದ ಚಂದ್ರ. ಅದು ನನ್ನ ಯವ್ವನದ ಏರು ದಿನಗಳು. `ನೀನೇ ಒಂದು ತೀರದ ಅನುಭವ ಇನ್ಯಾರು ಬೇಕು ನನಗೆ?’ ಎಂದಿದ್ದೆ. ಚಂದ್ರ ತೆಳುವಾಗಿ ನಕ್ಕಿದ್ದ, `ಹೌದು ಈ ತೀರದ ಅನುಭವ ಇನ್ನೊಂದು ತೀರದ ಅನುಭವವನ್ನು ಸಂಧಿಸುವಂತೆ ಮಾಡುತ್ತದೆ ನೋಡು’ ಎಂದು. ನಮ್ಮ ಹಾಗೆ ಇನ್ನೂ ಒಂದಿಷ್ಟು ಜನ ಅಲ್ಲಿದ್ದರು. ಅಲ್ಲಿ ಸೂರ್ಯ ಮುಳುಗುವುದು ಗೊತ್ತಾಗುವುದು ಕತ್ತಲಾವರಿಸುವಾಗಲೇ. ಪರ್ವತ ಸಾಲುಗಳು ಅಡ್ಡಡ್ದ ಬಂದು ಯಾವಾಗ ಯಾವ ಮರೆಗೆ ಅವನು ಸರಿಯುತ್ತಾನೋ ತಿಳಿಯಾದೇ ಹೋಗುತ್ತದೆ. ಆವನ ಹೊನ್ನ ಬೆಳಕು ಬೆಟ್ಟಗಳ ಸಂದಿಯಿಂದ ಮೇಲಕ್ಕೆ ರಾಚುವಂತೆ ನುಗ್ಗುವಾಗ ಬೆಳಕು ಇನ್ನಷ್ಟು ಹೆಚ್ಚಾಗುತ್ತದೆ. ಸಂಜೆ ಏಳಾದರೂ ಆಕಾಶದ ಹೊಂಬಣ್ಣ ಇನ್ನೂ ಆರದು. `ಇಲ್ಯಾವ ಮ್ಯಾಜಿಕ್ ನಡೆಯುತ್ತೆ?’ ಎಂದು ನಾನು ಕಾಯುತ್ತಿದ್ದೆ. ಮೆಲ್ಲಗೆ ಮೂಡಿದ್ದ ಚಂದ್ರ ತೆರೆಯದ ತನ್ನ ಕಾಂತಿಯ ಶಾಂತತೆಯನ್ನು ಒಡಲಲ್ಲೆ ಉಳಿಸಿಕೊಂಡು ಸೂರ್ಯನೆದುರು ತಾನೂ ಪೇಲವವಾಗಿದ್ದವನು ಪ್ರಸನ್ನವಾಗಲು ಕಾಯುತ್ತಿದ್ದ. ಸೂರ್ಯ ಮುಳುಗಿದ, ನನ್ನ ಕಣ್ಣುಗಳನ್ನು ನಾನು ನಂಬಲೇ ಇಲ್ಲ ತೇಜೂ. ಹಿಮಾಚ್ಚಾದಿತ ಪರ್ವತಗಳ ಶಿಖರದ ಮೇಲೆ ಬೆಳದಿಂಗಳು ನರ್ತಿಸತೊಡಗಿತ್ತು. ಶ್ರುತಗೊಂಡ ಎರಡು ಬೆಳಕುಗಳಂತೆ ಬಿಳಿಯ ಪರ್ವತ ಬೆಳದಿಂಗಳ ತಂಪಿಗೆ ತನ್ನ ತಂಪನ್ನು ಬಿಡುತ್ತಾ ಪ್ರಸನ್ನವಾಗುತ್ತಿದ್ದರೆ, ಕಾರಣಗಳೇ ಇಲ್ಲದೆ ಆನಂದವೊಂದು ಸುಮ್ಮನೆ ಅಂಡಲೆಯುವಂತೆ ಅಲ್ಲಿಂದಿಲ್ಲಿಗೆ ಇಲ್ಲಿಂದಲ್ಲಿಗೆ ಜಿಗಿಯುತ್ತಿತ್ತು. ನನ್ನ ದೇಹ ಮನಸ್ಸುಗಳೊಂದಿಗೆ ಸಂಭವಿಸಿದ ಅದು ನನ್ನನ್ನು ಅನುಭವಿಸಬಲ್ಲೆಯಾ? ಎಂದು ಕೇಳುವಂತೆ ಭಾಸವಾಗುತ್ತಿತ್ತು. ಬಣ್ಣಗಳ ಅನಂತವಾದ ಸಾಧ್ಯತೆಯನ್ನು ಕಂಡ ನನಗೆ ಬಿಳಿಯ ಬಣ್ಣದ ಅಪೂರ್ವತೆ ಕಂಡುಬಿಟ್ಟಿತ್ತು.

ಎಲ್ಲವೂ ಮರೆತಿತ್ತು, ಎಲ್ಲವೂ ವಾಸ್ತವವೇ ಆಗುವ ಸ್ಥಿತಿಯ ಎದುರು ನಿಂತಿದ್ದೆ. ನಾನು ಒಬ್ಬಳೇ. ಅರೆ ನನ್ನ ಸುತ್ತಾ ಎಲ್ಲಾ ಇದ್ದರಲ್ಲಾ? ಮಾತುಗಳು `ವಾವ್’ ಎನ್ನುವ ಉದ್ಗಾರ ಚಂದ್ರನ ತೋಳುಗಳ ಆಸರೆ, ಕಡೆಗೆ ಅಲ್ಲಿದ್ದ ಟೆಂಟುಗಳು ಎಲ್ಲವೂ ಇತ್ತಲ್ಲ ಎಲ್ಲಾ ಎಲ್ಲಿ ಹೋದವು? ಆ ಕ್ಷಣ ನನಗೆ ಅನ್ನಿಸಿತ್ತು, ಜಗತ್ತು ಹುಟ್ಟಿದಾಗಿನಿಂದ ನಾನೊಬ್ಬಳೇ, ಒಬ್ಬಳೇ ಆಗಿ ಇಲ್ಲಿ ನಿಂತಿದ್ದೇನೆ. ಜಗತ್ತು ಹುಟ್ಟಿದೆ ಎಂದು ಮರೆಸುವ ಇನ್ನೊಂದೆ ಐಂದ್ರಜಾಲಿಕತೆ ವಂಚನೆಯಿಲ್ಲದೆ ನನ್ನೆದುರು ತೆರೆದುಕೊಳ್ಳುತ್ತಿದೆ. ನಾನು ನಿಂತಿರುವುದು ಅಂತಿಮ ಸತ್ಯ ಘಟಿಸುವುದಕ್ಕೆ ಸಾಕ್ಷಿಯಾಗಿ ಮಾತ್ರ ಎನ್ನಿಸುತ್ತಿತ್ತು. ಇದೆಲ್ಲಾ ಯಾಕೆ ನಡೆಯುತ್ತಿದೆ? ಹೇಗೆ ನಡೆಯುತ್ತಿದೆ?! ಬೆಳಕು ಪ್ರಸನ್ನವಾಗುತ್ತಾ, ಪ್ರಖರವಾಗುತ್ತಾ, ಭಿನ್ನವೂ ಅಭಿನ್ನವಾಗುವತ್ತ ಸಾಗುವ ಅನಂತ ಸ್ಥಿತಿಯನ್ನು ಅಲ್ಲಿ ಪ್ರಕೃತಿ ಸೃಷ್ಟಿ ಮಾಡಿಬಿಟ್ಟಿತ್ತು. ನಾನು ಅಕಾರಣವಾಗಿ ಹಿಮದ ಹಾಸಿನ ಮೇಲೆ ಮಂಡಿಯೂರಿ ಅತ್ತಿದ್ದೆ. ಪಾದದ ಕೆಳಗಿನ ಹಗುರವಾಗಿ ಹುಡಿಯಾಗಿದ್ದ ಹಿಮ ನನ್ನ ಭಾರಕ್ಕೆ ಒತ್ತಿ ಗಟ್ಟಿಯಾಗುತ್ತಾ, ಹಾಗೆ ಕರಗುತ್ತಾ, ನೀರಾಗಿತ್ತಾ, ಪಾದಕ್ಕೆ ಮತ್ತೆ ತಾಕುತ್ತಾ ವಿಚಿತ್ರ ಅನುಭೂತಿಯನ್ನು ಕೊಡುತ್ತಿತ್ತು. ಗೋಲಗೋಲವಾಗಿ ಬೆಳದಿಂಗಳು ಹಿಮದ ಬೆಟ್ಟದ ಮೇಲೆ ಬಿದ್ದು ಫಲಿಸುತ್ತಿದೆಯೋ ಬೆಳದಿಂಗಳಿಗೇ ಹಿಮ ಬಿಳಿಯ ಪಾಠವನ್ನು ಹೇಳುತ್ತಿದೆಯೋ ಎನ್ನುವಂತೆ ಪೈಪೋಟಿಗೆ ಇಳಿದು ಎಲ್ಲವನ್ನೂ ಬಿಳಿದಾಗಿಸುತ್ತಿತ್ತು. ಕಡೆಗೆ ನನ್ನನೂ ಬಿಡಲಿಲ್ಲ, `ಇಡೀ ಜಗತ್ತೇ ಬಿಳಿದಾಗುವಾಗ, ನೀನ್ಯಾಕೆ ಸುಮ್ಮನಿದ್ದೀಯಾ? ನಿನಗೆ ಬಿಳಿದಾಗುವುದು ಬೇಡವಾ? ನಮ್ಮೊಂದಿಗೆ ಒಂದಾಗು’ ಎಂದದ್ದೆ ತಡ ನಾನೂ ಬಿಳಿಯಬಣ್ಣವಾಗಿ ಅವುಗಳೊಂದಿಗೆ ಸೇರಿಹೋದೆ.

ಎಷ್ಟು ಹೊತ್ತು ಇದೆಲ್ಲಾ! ಚಂದ್ರ ನನ್ನ ಭುಜವನ್ನು ತಾಕಿ, `ಶ್ಯಾಮೂ...’ ಎಂದು ಕಿವಿಯಲ್ಲಿ ಮೆಲ್ಲನುಸಿರಿದಾಗಲೇ ಗಕ್ಕೆಂದು ಆ ಲೋಕ ಮಾಯವಾಗಿದ್ದು. ಹಬೆಯಾಡುತ್ತಿದ್ದ ಚಹಾವನ್ನು ಕೊಡುತ್ತಾ, `ಹೇಗಿದೆ’ ಎಂದ. ಸುತ್ತಾ ಜನ, ಟೆಂಟು, ಮಾತು ಎಲ್ಲವೂ ಮೊದಲಿನ ಹಾಗೆ ಇತ್ತು. ಹಾಗಾದರೆ ಇಷ್ಟು ಹೊತ್ತು ನಾನು ಇಲ್ಲಿರಲಿಲ್ಲವಾ? ಸುತ್ತಲಿದ್ದವರು `ವಾವ್’ ಎನ್ನುತ್ತಿದ್ದರು. ಒಳಗಿನ ಖುಷಿಗೆ ಸಿಗುವ ಪದವೇ ಅದು? ಹೇಗಿದೆ ಎಂದ ಚಂದ್ರನಿಗೆ ಉತ್ತರಿಸುವ ಮೊದಲು ನನ್ನೊಳಗೆ ಒಂದು ಪ್ರಶ್ನೆ÷ಮೂಡಿಬಿಟ್ಟಿತ್ತು. ನಾನು ನೋಡುವ ಮೊದಲು ಇದು ಇತ್ತಾ? ಅಥವಾ ಇರುವು ಎನ್ನುವುದು ನನ್ನ ಗಮನಕ್ಕೆ ಬಂದಾಗ ಮಾತ್ರ ಸಂಭವಿಸುವುದಾ? ನಾನು ಅದು ಸಂಧಿಸಿದಾಗ ಹುಟ್ಟಿದ್ದಾ? ಚಂದ್ರಾ ಹೇಳು ಇದೆಲ್ಲಾ ಏನು? ನನ್ನೊಳಗಿನ ಈ ಕದಲಿಕೆಗೆ ಉತ್ತರ ಯಾರು ಕೊಡುವವರು? ಚಂದ್ರ ನನ್ನ ಕೈಗಳನ್ನು ಹಿಡಿದ ಅವನ ಉಗುರ ತುದಿಯೂ ಪ್ರಸನ್ನವಾದ ಬೆಳಕಿನಂತೆ ಹೊಳೆಯುತ್ತಿತ್ತು. ಇಲ್ಲಿ ಎಲ್ಲರೂ ಎಲ್ಲವೂ ಒಂದೇ. ಮುಚ್ಚಿದ ಕಣ್ಣುಗಳ ಒಳಗೂ ಅದೇ ಬೆಳಕು ಅದೇ ಜುಗಲ್ಬಂದಿ, ಅದೇ ಸಂಯೋಗ.

ಹೀಗೆ ಹೇಳಿಬಿಟ್ಟರೆ ಅನುಭವವನ್ನು ವಿವರಿಸಿದೆ ಅಂತ ಅಲ್ಲ. ಯಾಕೆಂದರೆ ಈ ಪದಗಳೆಲ್ಲವೂ ಆ ಅನುಭವವನ್ನು ಮುಟ್ಟಲಾರದೇ. ನಾನು ಉದ್ವೇಗದಿಂದ ನಡುಗುತ್ತಿದ್ದೆ ನನ್ನ ಭಾವನೆಗಳನ್ನು ಚಂದ್ರ ಅರ್ಥ ಮಾಡಿಕೊಳ್ಳಬಲ್ಲವನಾಗಿದ್ದರೂ, ಉತ್ಕಟತೆಯ ಅನುಭವಕ್ಕೆ ಮಾತುಕೊಡದವನಾಗಿದ್ದ. ನಾನು ಆನಂದ ತಡೆಯಲಾಗದೆ ಅವನಿಗೊರಗಿ ಬಿಕ್ಕಿ ಬಿಕ್ಕಿ ಅತ್ತಿದ್ದೆ.

ಅಂದು ರಾತ್ರಿ ಅಲ್ಲೇ ಟೆಂಟುಗಳಲ್ಲೇ ಮಲಗಿದ್ದೆವು. ಸ್ಲೀಪಿಂಗ್ ಬ್ಯಾಗು, ಥಾರ್ಮಲ್ ವೇರ್, ಉಲ್ಲನ್ ಬಟ್ಟೆಗಳು, ಎರಡೆರಡು ರಗ್ಗುಗಳು ಯಾವುದೂ ಕೆಲಸಕ್ಕೆ ಬರಲಿಲ್ಲ. ಮಧ್ಯ ರಾತ್ರಿಯ ಹೊತ್ತಿಗೆ ಮೈಮೇಲೆ ಚೂರು ಬಟ್ಟೆಯಿಲ್ಲವೇನೋ ಎನ್ನುವಷ್ಟು ನಡುಕ. ಮೂಗು, ಕಿವಿಗಳಿಗೆ ಕೈಗಳನ್ನು ಒತ್ತಿಕೊಂಡು ಬಿಸಿಯೇರಿಸಿಕೊಂಡು ಮಲಗಲು ಯತ್ನಿಸುವಾಗ ಆಡುತ್ತಿದ್ದ ಉಸಿರೂ ಹಿಮಗಟ್ಟಿಬಿಡುತ್ತದೆ ಎನ್ನುವ ಭಯವಾಗಿತ್ತು. ಕಿವಿ ಮೂಗುಗಳನ್ನು ಬೆಚ್ಚಗೆ ಮಾಡಿಕೊಳ್ಳುವಾಗ ಸಮ್ಮೋಹಕ ಎನ್ನುವಂತೆ ನಿದ್ದೆ ಆವರಿಸಿತ್ತು. ಆಗ ಬಿತ್ತು ನೋಡೇ ಆ ಕನಸು- ಜಗತ್ತು ಬಯಸುವ ಕನಸು.

ಪರ್ವತದ ಮೇಲಾಡುತ್ತಿದ್ದ ಬೆಳದಿಂಗಳು ಹಿಮದ ಬಿಳುಪಿನ ಜೊತೆ ಸೇರಿ ಪ್ರಶಾಂತವಾಗಿ ಅಂಡಲೆಯುತ್ತಿತ್ತು ಎಂದೆನಲ್ಲವೇ? ಅವು ಒಂದಾಗಿಬಿಟ್ಟಿದ್ದವು-ಅದರೊಳಗೆ ಇದೋ ಇದರೊಳಗೆ ಅದೋ. ಅಂತೂ ಎರಡು ಸೇರಿ ಬೆಳಕೊಂದು ನೋಡನೋಡುತ್ತಿದ್ದಂತೆ ಧಾರೆಯಾಗಿ ಭೂಮಿಗಿಳಿಯತೊಡಗಿತ್ತು. ಮೂಲದಿಂದ ಉಕ್ಕುವ ನೀರ ಬುಗ್ಗೆಯಾಗಿ ನೆಲದೆದೆಗೆ ಇಳಿದು ಅಲ್ಲಿಂದ ಹರಿಯತೊಡಗಿತ್ತು. ಕೆಲವೇ ಕೆಲವು ಕ್ಷಣಗಳಲ್ಲಿ ಜುಳುಜುಳು ಶಬ್ದ ಮಾಡುತ್ತಾ ನದಿಯಂತೆ ಹಾರಿಯತೊಡಗಿದಾಗ ಲೀಲೆಯಂತೆ ಅವುಗಳೊಳಗಿನಿಂದ ಮೀನುಗಳು ಜಿಗಿಯತೊಡಗಿದವು. ಇಷ್ಟು ಹೊತ್ತೂ ಇವೆಲ್ಲಿದ್ದವು ಎಂದು ನೋಡತೊಡಗಿದೆ. ಆಳಕ್ಕಿಳಿದು ಈಜುತ್ತಿದ್ದುದು ಮೇಲೂ ಕಾಣದಷ್ಟು ಬಿಳಿ ಬಿಳಿ. ನಾನು ಬಗ್ಗಿ ನೋಡಿದೆ, ನನ್ನ ಮನಸ್ಸು ಆಳದ ಮೀನುಗಳ ನೋಡುವ ತವಕದಲ್ಲಿತ್ತು. ಯಾವ ಪ್ರಾರ್ಥನೆಯೋ ನನ್ನ ಆಸೆಯನ್ನು ಆಗುಮಾಡುವಂತೆ ನದಿ ಎದೆಯ ನೀರ ಕನ್ನಡಿಯಾಗಿಸಿಬಿಟ್ಟಿತ್ತು. ಮೇಲೆ ಆಕಾಶದಲ್ಲಿ ಮೂಡಿದ ನಕ್ಷತ್ರಗಳು ತಮ್ಮ ಬಿಂಬವನ್ನು ನೀರಿಗೆ ಬಿಟ್ಟುಕೊಡುತ್ತಿದ್ದರೆ, ಆಕಾಶ ಯಾವುದು ಭೂಮಿ ಯಾವುದು ಎನ್ನುವ ವ್ಯತ್ಯಾಸವೇ ತೋರದಾಗಿಬಿಟ್ಟಿತ್ತು. ಉತ್ಸಾಹದಿಂದ ಎಗುರುತ್ತಿದ್ದ ಮೀನುಗಳು ಇದು ನೆಲ ಎಂದು ಹೇಳುತ್ತಿದ್ದವು. ಅದೆಲ್ಲವೂ ಕ್ಷಣ ಕಾಲವಷ್ಟೇ. ಅವು ನಕ್ಷತ್ರಗಳ ಬಿಂಬಗಳನ್ನು ಖುಷಿಯಲ್ಲಿ ನುಂಗತೊಡಗಿದವು. ಒಂದೊಂದೇ ಮೀನು ಒಂದೊಂದೇ ನಕ್ಷತ್ರವನ್ನು ನುಂಗುತ್ತಾ, ನುಂಗುತ್ತಾ ಪಾರದರ್ಶಕವಾದ ಹೊಟ್ಟೆಯೊಳಗೆ ನಕ್ಷತ್ರದ ಬೆಳಕನ್ನು ಚೆಲ್ಲುತ್ತಾ ಸ್ವತಃ ತಾವೇ ನಕ್ಷತ್ರವನ್ನಾಗಿಬಿಟ್ಟವಲ್ಲೆ. ಆಗಲೇ ವಿಕೇಂದ್ರಗೊಂಡು, ನದಿಯಾಗಿದ ಬೆಳಕು ಮತ್ತೆ ಕೇಂದ್ರಗೊಂಡು ಭೂಮಿ ಆಕಾಶದ ವ್ಯತ್ಯಾಸವನ್ನೇ ಕಳೆದುಬಿಟ್ಟಿತ್ತಲ್ಲೇ. ನಾನು ದಿಗ್ಭ್ರಮೆಗೊಂಡಿದ್ದೆ. ಅವಲಂಬನೆ ಕಳೆದ ಸ್ಥಿತಿ ಹೀಗೆ ಇರುತ್ತದೆ ಅಲ್ಲವೇ. ಇದು ನನ್ನ ಕಾಡಿದ್ದು ಒಂದೆರಡು ರೀತಿಯಲ್ಲಿ ಅಲ್ಲ ಕಣೆ. ಕಾಣಿಸಿದ ಸತ್ಯವೂ ಕೂಡಾ.

ಒಂದರೊಳಗೊಂದನ್ನು ಇರೊಸಿಕೊಳ್ಳುವುದು ಸುಲಭದ ಮಾತಲ್ಲ ಬಿಡು. ನಾನು ಎಲ್ಲಿಯ ವರೆಗೂ ಚಂದ್ರನಲ್ಲಿ ಅವಲಂಬಿತಳಾಗಿದ್ದೆನೂ, ಅಲ್ಲಿಯವರೆಗೂ ಅವನು ನನ್ನನ್ನು ಅವನೊಳಗೆ ಇಟ್ಟುಕೊಂಡಿದ್ದ. ನಾನು ಬೆಳೆದಂತೆಲ್ಲಾ ಮಾನಸಿಕವಾಗಿ ನನ್ನೊಡನೆ ಇರುವುದು ಅವನಿಗೂ ಅಸಾಧ್ಯವಾಗುತ್ತಾ ಬಂದಿತು. ಇದು ಗೊತ್ತಿದ್ದೂ ನಾನು ಅವನಿಂದ ಬೇರೆಯಾಗುತ್ತಾ ಬಂದೆ. ನನಗನ್ನಿಸಿದಂತೆ ಅವನಿಗೂ ಅನ್ನಿಸುತ್ತಿತ್ತು -ಇಲ್ಲಿ ಬೇರೆ ಏನೋ ಆಗಿದೆ ಅದು ಅವನಿಗೆ ಸ್ಪಷ್ಟವಾಗುವ ಹೊತ್ತಿಗೆ ಇನ್ನೊಂದು ಅವಲಂಬಿಸುವ ಜೀವ ಸಿಕ್ಕಿಬಿಟ್ಟಿತ್ತು. ಶರಣಾಗುವುದೆಂದರೆ ಆತ್ಮಾವಲೋಕನವನ್ನು ಮಾಡಿಕೊಳ್ಳದಿರುವುದು ಮಾತ್ರ ಎಂದುಕೊಳ್ಳುವ ಅವನಿಗೆ ಆಶ್ರಯ ಬಯಸುವುದು ಎನ್ನುವ ಅರ್ಥ ಹೊಂದಲಾರದು ಎಂದು ಹೇಳಲು ಯತ್ನಿಸಿದ್ದೆ. ಶರಣಾಗುವುದೆಂದರೆ ಸುಮ್ಮನಿರುವುದು. ಅದು ನನ್ನನ್ನು ಆಳಕ್ಕೆ ಕರೆದೊಯ್ಯುತ್ತಿತ್ತು, ನನ್ನನ್ನು ಅಗಲಗೊಳಿಸುತ್ತಿತ್ತು.

ಯಾವ ಗೆರೆ, ಯಾವ ಬಣ್ಣ, ಯಾವುದನ್ನು ಹೇಗೆ ಹೊಂದಿಸಿಕೊಳ್ಳಬೇಕು ಎನ್ನುವುದನ್ನು ಯಾವ ತಂತ್ರಜ್ಞಾನವೂ ಹೇಳಿಕೊಡುವುದಿಲ್ಲ. ಹಿಮವದ್ ಪರ್ವತದ ಮಹಾ ಶಿಖರಗಳು ಈಗಲೂ ನನ್ನನ್ನು ಅಣಕಿಸುತ್ತವೆ. ನಿನ್ನೆರಡು ಬೆರಳುಗಳ ಮಧ್ಯೆ ಹಿಡಿವ ಕುಂಚ ಮಹತ್ತನ್ನು ಬರೆಯಬಲ್ಲದೇ? ಪ್ರಕೃತಿ ನಿರಹಂಕಾರವಾಗಿ, ನಿರ್ವಿಕಾರವಾಗಿ ನೀರ ಹನಿಗಳು ಜೇಡದ ಬಲೆ ಮೇಲೆ ನಿಂತು ಬರೆದ ಚಿತ್ರ ಅದ್ಭುತ. ನಮ್ಮ ಅಹಂಕಾರಗಳನ್ನು ನೀರ ಹನಿ ಸರದ ಹಾಗೆ ಪೋಣಿಸಬಹುದು, ಆದರೆ ಅದನ್ನು ನಾವು ಧರಿಸಲು ಸಾಧ್ಯವಿಲ್ಲವಲ್ಲ. ಹರಳುಗಳ ಹಾಗೆ ಭ್ರಮೆ ಹುಟ್ಟಿಸುವ ಅವು ಮುಟ್ಟಿದರೆ ಒಡೆದುಹೋಗುತ್ತದೆ. ಎಷ್ಟೋ ವೇಳೆ ನಾವು ನಮ್ಮ ಸುತ್ತಲಿರುವುದು ಭ್ರಮೆಯೆಂದು ಗೊತ್ತಿರುತ್ತದೆ. ಅಂತಿಮ ಫಲಿತಾಂಶ ಗೊತ್ತಿದ್ದರೂ ಇದ್ಯಾವ ಹುಡುಕಾಟವೇ? ಜೀವವನ್ನೇ ಪಣಕ್ಕಿಟ್ಟವರಂತೆ ಹುಡುಕುತ್ತಾ ಸಿಗದಿದ್ದರೆ ಪ್ರಾಣವೇ ಹೋಗಿಬಿಡುತ್ತೆ ಎನ್ನುವ ನರಕಕ್ಕೆ ಬಿದ್ದು ಕುದ್ದು ಹೋಗುತ್ತೇವೆ. ಅನಿಯಮಿತವಾದ ಯಾವ ಸಂಗತಿಗಳಿಗೋ ಎದೆಯೊಡ್ಡಿ ನಿಲ್ಲುವಾಗ ನಮ್ಮ ಮೇಲೆ ಎಲ್ಲವೂ ಆಕ್ರಮಣ ನಡೆಸಿಬಿಡುತ್ತವೆ. ಅದಕ್ಕೆ ನನಗೆ ಯಾವಾಗಲೂ ಅನ್ನಿಸುವುದು ಎಲ್ಲವನ್ನೂ ನಾವೇ ಯಾಕೆ ಬರೆಯಬೇಕು. ಗ್ಯಾಲರಿಯ ತುಂಬಾ ಖಾಲಿ ಕ್ಯಾನ್ವಾಸುಗಳನ್ನು ಇಟ್ಟುಬಿಡಬೇಕು, ನೋಡುಗರೇ ನಿಮಗಿಷ್ಟವಾದ ಚಿತ್ರಗಳನ್ನು ನೀವೇ ಬರೆದುಕೊಳ್ಳಿ ಎಂದು. ಎಲ್ಲಿಂದ ಯಾವ ಮಹಾಕಲಾವಿದ ಹುಟ್ಟುತ್ತಾನೋ ನೋಡಿಬಿಡಬೇಕು. ಒಂದು ಪುಟ್ಟ ಮಗು ಬರೆದ ಚಿತ್ರ ನಮ್ಮ ಅಹಂಕಾರವನ್ನು ಒಡೆಯಬೇಕು, ಇನ್ನೂ ಬಣ್ಣಗಳ ವ್ಯಾಮೋಹಕ್ಕೆ ಬೀಳದ ಅದು ತನ್ನ ನಗ್ನ ಕಣ್ಣುಗಳಿಂದ ಲೋಕವನ್ನು ಗ್ರಹಿಸುವಾಗ ಕಾಣುವ ಆದಿಮ ಬಣ್ಣಗಳು ಅರಿವಾಗಿ ಹೆಜ್ಜೆ ಇಡಬೇಕು. ಇರುವ ಎಲ್ಲ ಗೆರೆಗಳೂ ನಮ್ಮನ್ನು ಆಹ್ವಾನಿಸಿ ನಾನೇ ಅರಿವು, ನಾನೇ ಆದಿ ಎನ್ನುತ್ತಾ ನಮ್ಮೊಳಗಿನ ಖಿನ್ನತೆಯನ್ನು ಹೊಡೆದುರುಳಿಸಿ ಹೊಸ ಫ್ರಫುಲ್ಲತೆಯನ್ನು ಮೂಡುವಂತೆ ಮಾಡಬೇಕು. ಅದಕ್ಕೆ ಗ್ಯಾಲರಿಯಲ್ಲಿಟ್ಟ ಖಾಲಿ ಕ್ಯಾನ್ವಾಸ್ ನಾನೇ ಆಗಬೇಕು’.

ಯಾಕಿಷ್ಟು ಉದ್ವಿಗ್ನತೆಯಲ್ಲಿದ್ದಾಳೆ ಶ್ಯಾಮು? ಗೆರೆ, ಬಣ್ಣ, ಆನಂದ ಎಂದೆಲ್ಲಾ ಮಾತಾಡುತ್ತಿದ್ದವಳು ಅದನ್ನೂ ಮೀರಿ ಒಡಪಿನ ಕಡೆಗೆ ಹೋಗುತ್ತಿದ್ದಾಳೆ. ದೀರ್ಘವಾಗುವ ಶ್ವಾಸ, ಮೇಲುಪದರಗಳನ್ನು ಸ್ಪರ್ಷಿಸುವಾಗ, ಎಲ್ಲವೂ ನಮ್ಮ ಕಣ್ಣೆದುರೇ ಇರುತ್ತದೆ. ನನಗೆ ಗೊತ್ತು ಅವಳಿಗೆ ಘಾತವಾಗಿದ್ದು ಎಲ್ಲಕ್ಕಿಂತ ಹೆಚ್ಚು ಹನಿಯ ಸ್ಥಿತಿ. ತಾನೇ ಖಾಲಿ ಕ್ಯಾನ್ವಾಸ್ ಆಗಬೇಕು ಎನ್ನುವಾಗ ಅವಳ ಬಿಕ್ಕನ್ನು ಮರೆಮಾಚಲು ಸುಳ್ಳಾಗಿಸಲು ಪ್ರಯತ್ನ ಪಡುತ್ತಲೇ ಇದ್ದಳಾ? ಇನ್ನೆಷ್ಟು ಕಾಲ ನೆಪಗಳನ್ನು ಹುಡುಕಬೇಕು ನಗ್ನವಾಗಿ ನಿಲ್ಲುವುದು ಯಾಕೆ ಆಗುವುದಿಲ್ಲ? ಅದು ಅವಮಾನಕರ ಸ್ಥಿತಿ ಯಾಕೆ? ಒಂದು ಅಪವಿತ್ರವಾಗುವ ಮೈತ್ರಿಯು ಅಶಾಂತತೆಗೆ ಕಾರಣವಾಗುವುದನ್ನು ಬಾಲ್ಯದಿಂದಲೂ ಬಲ್ಲ ಶ್ಯಾಮು ಮಗಳ ನೆವದಲ್ಲಿ ಕುಗ್ಗಿಬಿಟ್ಟಳಾ? ಇದ್ದಲ್ಲೇ ಗಾಢವಾಗಿ ಉಳಿದುಬಿಡುವ ಅವಳು ದಾಟಿಕೊಳ್ಳುವ ಮಾರ್ಗಗಳು ತಂತ್ರಗಳು ಕಾಣಲಾಗದ ಮಿತಿಗೆ ಸಿಲುಕಿಬಿಟ್ಟಳಾ? ಷರತ್ತುಗಳೇ ಇಲ್ಲದೆ ಬದುಕುವುದನ್ನು ಒಪ್ಪಿಕೊಂಡ ಅವಳಿಗೆ ಇದು ಎದುರಿಸಲಾಗದ ಸ್ಥಿತಿಯಾಗಿಬಿಟ್ಟಿತ್ತಾ?

`ನಮ್ಮಿಬ್ಬರ ಸಂಬಂಧದ ಸಂಕಟದಲ್ಲಿ ಹನಿ ನರಳಿದ್ದಳು. ನಾನು ಅವಳು ಯಾವ ಸ್ಥಿತಿಗೆ ತಲುಪಿಬಿಡಬಹುದು ಎನ್ನುವ ಆತಂಕಕ್ಕೆ ಒಳಗಾಗಿದ್ದೆ. ಚಂದ್ರ ಕನಲಿ ಹೋಗಿದ್ದ. ಹನಿಯ ಬಗ್ಗೆ ನನಗಿರುವಷ್ಟೇ ಕಾಳಜಿ ಅವನಿಗೂ ಇತ್ತು.. ನಮ್ಮಿಬ್ಬರ ಆಸೆಯ ಕೂಸಲ್ಲವೇ ಅವಳು. ಬೆಳದಿಂಗಳು ಬಿಳಿಯ ಬೆಟ್ಟದ ಮೇಲಾಡಿದಂತೆ ನಾನು ಮತ್ತು ಚಂದ್ರ ಎನ್ನುವ ಎರಡು ಜಗತ್ತುಗಳು ಸೇರಿದ್ದರ ಸಾಕ್ಷಿಯೇ ಆಗಿದ್ದ ಹನಿಯನ್ನು ಇಬ್ಬರೂ ಬೇರೆ ಆದ ತಕ್ಷಣ ಎರಡು ಭಾಗ ಮಾಡಲು ಹೇಗೆ ಸಾಧ್ಯವಾಗುತ್ತದೆ? ಸಂಬಂಧಗಳ ಅತ್ಯಂತ ವಿಚಿತ್ರ ಮತ್ತು ವಿಸ್ಮಯವಾದ ಸಂಗತಿಯೇ ಇದು. ಕಲ್ಪನೆಗಳ ಆಳದಲ್ಲಿ ಮೂಡಬಹುದಾದ ಎಲ್ಲಾ ಸಂಗತಿಗಳೂ ಭಾವನೆಗಳ ಜೊತೆ ಸೇರಿ ಜಗತ್ತನ್ನು ಆಗಿಸುವಾಗ ನಾವಿದನ್ನು ನಮ್ಮದು ಎಂದುಬಿಡುತ್ತೇವೆ. ಬೆಲೆ ಕಟ್ಟುತ್ತೇವೆ, ಸೃಷ್ಟಿಸಿದ ನಮಗೆ ಹೆಚ್ಚು ಅಧಿಕಾರ ಎಂದುಕೊಳ್ಳುತ್ತೇವೆ- ಅದು ಸ್ವತಂತ್ರ ಎನ್ನುವುದನ್ನು ಮರೆತು. ಹನಿಯ ವಿಷಯದಲ್ಲಿ ಆದದ್ದೂ ಅದೇ. ಅವಳು ನಮ್ಮ ಮಗಳಾದ್ದರಿಂದ ನಮ್ಮ ಎಲ್ಲವನ್ನೂ ಅವಳು ಒಪ್ಪಿಕೊಳ್ಳುತ್ತಾಳೆ... ಇಲ್ಲ ನಾವು ಒಪ್ಪಿಸುತ್ತೇವೆ ಎಂದು ನಾನೂ ಚಂದ್ರನೂ ಅಂದುಕೊಂಡಿದ್ದು. ಅವಳ ಅಭಿಪ್ರಾಯವೊಂದು ಇರಬಹುದು ಎನ್ನುವ ಕಲ್ಪನೆಯೂ ಇಲ್ಲದೆ ನಾನು ನಿಹಾರಿಕಾಳನ್ನು ನಮ್ಮದೆ ಮನೆಯ ಹೊಸ ಸದಸ್ಯೆ ಎಂದು ಅಂದುಬಿಟ್ಟಿದ್ದು, ಹನಿಯ ಜೊತೆಗಿನ ಸಂಬಂಧವನ್ನು ನಿಹಾರಿಕಾಳ ಜೊತೆ ಸಂಸಾರ ಮಾಡುತ್ತಾ ಉಳಿಸಿಕೊಳ್ಳಬಹುದೆಂದು ಚಂದ್ರ ಭಾವಿಸಿದ್ದು. ಇಲ್ಲ ತೇಜೂ ಹನಿ ನಮ್ಮ ಸಂಬಂಧದ ಎಚ್ಚರ ಎಂದು ನಾನಾಗಲೀ ಚಂದ್ರನಾಗಲೀ ಅಂದುಕೊಳ್ಳಲೇ ಇಲ್ಲ. ಕಣ್ಮುಚ್ಚಿಕೊಂಡು ಕಲ್ಪನೆ ಮಾಡಿಕೊಳ್ಳುವುದಕ್ಕೂ, ವಾಸ್ತವವಾಗಿ ಕಾಣುವುದಕ್ಕೂ ಎಂಥಾ ದೊಡ್ದ ವ್ಯತ್ಯಾಸವಿದೆ ಎನ್ನುವುದು ಹನಿಯನ್ನು ಉರಿವ ವಾಸ್ತವವಾಗಿ ಕಂಡಾಗ ಗೊತ್ತಾಗಿದ್ದು. ಅಲ್ಲವೇ ನನಗ್ಯಾವ ಮಂಕು ಬಡೆದಿತ್ತು, ಬಿಟ್ಟುಕೊಡುವುದು ನನಗೆ ಸಂತಸವಾದರೆ ಅವಳಿಗೂ ಸಂತಸವಾಗುತ್ತದೆ ಎಂದುಕೊಳ್ಳಲಿಕ್ಕೆ? ನಾನೊಬ್ಬ ಸ್ಯಾಡಿಸ್ಟ್ ಅಂತ ಅನ್ನಿಸಿಬಿಟ್ಟಿತ್ತು. ಆದರೆ ಅವಳು ಆ ಮಾತನ್ನು ಹೇಳಿದಾಗ ಮಾತ್ರ ನನಗೆ ತಡೆಯಲಾಗಲಿಲ್ಲ. ಯಾಕೆಂದರೆ ನಾನು ಅಪ್ಪಟ ಮನುಷ್ಯಳು ಉದಾತ್ತ ಮನುಷ್ಯಳು ಎಂದೆಲ್ಲಾ ಅಂದುಕೊಂಡುಬಿಟ್ಟಿದ್ದೆನಲ್ಲಾ ಅದೊಂದು ಗರ್ವ ಎಂದು ತೋರಿಸಿ ಅದನ್ನು ನನ್ನ ಮಗಳೇ ಒಡೆದುಹಾಕಿದಳಲ್ಲ! ಆ ಕ್ಷಣಗಳು ನಾನು ಆನಂದವನ್ನು ಅನುಭವಿಸಬೇಕೋ ನೋವನ್ನೋ ಅರ್ಥವಾಗದೆ ಒದ್ದಾಡಿಬಿಟ್ಟಿದ್ದೆ- ಸತ್ಯವೊಂದು ಸುಮ್ಮನೆ ನನ್ನ ಸುತ್ತಾ ಸುಳಿದಾಡುತ್ತಾ ಗೇಲಿ ಮಾಡುತ್ತ ನಕ್ಕ ಹಾಗೆ.

ಈ ಅಂಕಣದ ಹಿಂದಿನ ಬರಹಗಳು:
ನಿನ್ನೆದೆಯ ಮೇಲೆ ನಾನೊಂದು ಪುಟ್ಟ ಗೆರೆ ಸರಿ ರಾತ್ರಿಯಲಿ ಕಂಡ ಕನಸೇ
ಚೂರಾದರೂ ಕಾಣಿಸುವ ನಿಷ್ಠೆಯನ್ನು ಕನ್ನಡಿ ಕಳಕೊಳ್ಳದು
ಜಂಗು ಹಿಡಿದ ಹಳೆಯ ಡಬ್ಬ ಗುರುತಿಲ್ಲದಂತೆ ಕರಗುವುದು
ಮಗುವ ತುಟಿಯಿಂದ ಜಾರಿದ ಜೊಲ್ಲು ಹರಳುಗಟ್ಟಿ ವಜ್ರಗಳಾಗಿದ್ದವು
ದಾರ ಕಟ್ಟಿಸಿಕೊಂಡ ಪೇಪರ್ ಹಕ್ಕಿಗಳೂ ಗಾಳಿಗೆದುರು ಹಾರುವವು.
ಮರೆವೆಯೇ ದಂಡೆಯನ್ನು ರೂಪಿಸುತ್ತಿರುತ್ತದೆ.
ಅಂಕೆ ಮೀರುವ ನೆರಳುಗಳು ಕಾಯುವುದು ಬೆಳಕಿಗಾಗೇ
ಕೊಳದ ಮೇಲೆ ಬಿದ್ದ ಬೆಳಕು ಕೊಳವನೆಂದೂ ಕಲಕದು
ತೆರೆದುಹೋದ ಅರಿಯದ ಸಮ್ಮೋಹಕ ಲೋಕ
ತತ್ತಿಯೊಡೆದ ಪುಟ್ಟ ಕೀಟದ ಕಣ್ಣಲ್ಲಿ ಫಲಿಸಿದ ಬೆಳಕು
ಪದದೂಳಿಗೆ ಮುತ್ತಿಟ್ಟವನ ಜೀವದ ಗುರುತು ಎದೆ ಮೇಲೆ
ನೆತ್ತರಲೂ ರತ್ನವಾಗುವ ಗುಣ

ಅಘಟಿತ ಘಟನೆಗಳು
ಪ್ರಪಂಚ ಒಂದು ಸುಂದರ ಕನಸು
ನಮ್ಮನ್ನು ಕಾಣಿಸಲು ನಡುಹಗಲೇ ಬೇಕಿಲ್ಲ!

MORE NEWS

ಬೇಲಿಯ ಗೂಟದ ಮೇಲೊಂದು ಚಿಟ್ಟೆಃ ಅನುದಿನದ ದಂದುಗದೊಂದಿಗೆ ಅನುಸಂಧಾನ

31-12-1899 ಬೆಂಗಳೂರು

"ಲೋಕದ ವಾಸ್ತವವಗಳ ಮುಖವಾಡಗಳೊಂದಿಗೆ ಮುಖಾಮುಖಿಯಾಗುವ ಇವರ ಕವಿತೆಗಳು ದೈನಂದಿನ ಬದುಕಿನ ವಿನ್ಯಾಸವನ್ನೇ ಕಾವ್ಯವನ್ನ...

ಚಕ್ರಾಸನ ಮತ್ತು ಭುಜಂಗಾಸನ

26-03-2024 ಬೆಂಗಳೂರು

"ವ್ಯಕ್ತಿಯು ‘ಚಕ್ರಾಸನ’ ಮಾಡುವಾಗ ಮೊದಲು ಬೆನ್ನಿನ ಮೇಲೆ ಮಲಗಬೇಕು. ಇದು ವ್ಯಕ್ತಿಯನ್ನು ಶಕ್ತಿಯುತವ...

ಹಿಂದಿನ ನಿಲ್ದಾಣದಲ್ಲಿ...

19-03-2024 ಬೆಂಗಳೂರು

'ಪ್ರಯಾಣದ ಭಾಗವಾಗಿ ನಮ್ಮೊಂದಿಗಿದ್ದು ನೆನಪುಗಳ ಬುತ್ತಿ ಕಟ್ಟಿಕೊಡುವ ಈ "ಹಿಂದಿನ ನಿಲ್ದಾಣಗಳೇ" ಬದುಕಲು...