ನಂಬಿಕೆಗಳ ಪರಿಭಾಷೆಗಳನ್ನೇ ಮೀರಿ ಬೆಳೆದ ಕತೆಗಳಿವು


''ಕರುಣಾರಸ ಓದುಗರನ್ನು ಕಲಕುವಂತೆ, ಕಾಡುವಂತೆ ಬೇರಾವ ಭಾವವೂ ಕಾಡುವುದಿಲ್ಲ ಎನ್ನುವುದು ಈ ಕತೆಗಳ ಓದಿನ ನಂತರ ನನಗೆ ಮತ್ತೆ ಮನದಟ್ಟಾಗಿದೆ. ಗೋಳಿನ ಕಥೆಗಳ ಸಹವಾಸವೇ ಬೇಡ ಎಂದು ಎಷ್ಟೇ ಸಿನಿಮಾಗಳಿಂದ, ಪುಸ್ತಕಗಳಿಂದ ದೂರ ಓಡಿದರೂ ಅವುಗಳನ್ನು ಸಂಪೂರ್ಣವಾಗಿ ದೂರವಿಡಲು ಸಾಧ್ಯವೇ ಇಲ್ಲ,'' ಎನ್ನುತ್ತಾರೆ ಪೂರ್ಣಿಮಾ ಮಾಳಗಿಮನಿ. ಅವರು ಶಶಿ ತರೀಕೆರೆ ಅವರ ‘ತಿರಾಮಿಸು’ ಕಥಾಸಂಕಲನಕ್ಕೆ ಬರೆದ ವಿಮರ್ಶೆ ನಿಮ್ಮ ಓದಿಗಾಗಿ.

ನಡುಮನೆಯಲ್ಲಿ ತನ್ನೆಲ್ಲಾ ಆಟಿಕೆಗಳನ್ನು ಗುಡ್ಡೆ ಹಾಕಿಕೊಂಡು ಆಟವಾಡುತ್ತಿರುವ ಪುಟ್ಟ ಮಗುವಿಗೆ, ಅರೆ ತೆರೆದ ಕೋಣೆಯ ಬಾಗಿಲ ಹಿಂದೆ ಕಾದಾಡಿ, ಕಿತ್ತಾಡಿ ಸಾಯುತ್ತಿರುವ ಅಪ್ಪ ಅಮ್ಮನ ಮಾತುಗಳ ಸದ್ದು, ಅವರು ನನ್ನೊಂದಿಗೇ ಇದ್ದಾರೆ ಎನ್ನುವ ನಂಬಿಕೆ, ವಿಶ್ವಾಸಗಳಷ್ಟೇ! ನಾಳೆಯೂ ಹೀಗೆಯೇ ಆಟವಾಡಿಕೊಂಡಿರುತ್ತೇನೆನ್ನುವ ಯಾವ ಭರವಸೆಯ ಅಗತ್ಯವೇ ಇರದೆ, ತನ್ನ ಸುತ್ತ ನಡೆಯುತ್ತಿರುವ ಅಹಿತಕರವಾದ ಘಟನೆಗಳತ್ತ ಗಮನವನ್ನೇ ಹರಿಸದೆ, ನಿರಾಳವಾಗಿರುವಾಗಲೇ ಮಸುಕು ಮಸುಕಾಗಿ ಅದರ ತಲೆಯಲ್ಲಿ ದಾಖಲಾಗುತ್ತಿರುವ ಸಂಗತಿಗಳನ್ನು ಹೆಕ್ಕಿ ತೆಗೆದು ಕಥೆಗಳನ್ನು ಬರೆದರೆ ಇಂಥದ್ದೊಂದು ಪ್ರಪಂಚದ ಆಸುಪಾಸಿನಲ್ಲೇ ನಾವೂ ನೆಲೆಸಿದ್ದೇವೆಯೇ ಎಂದು ಅಚ್ಚರಿಯಾಗುವಂತಿದೆ 'ತಿರಾಮಿಸು' ಕಥಾ ಸಂಕಲನ.

ಇಲ್ಲಿ ಬರುವ ಬಾವ್ಲಾ, ಭುಜಕೀರ್ತಿ, ಇಂಗ್ಲಿ, ಜೋಗುಳ ಕಡಮೆ, ಕಾಂತಾಬಾಯಿ, ಗಿರಿಜಾ, ಪಕಡು, ಜೀವದಾನಿ ಮುಂತಾದ ಪಾತ್ರಗಳು ಗಮನ ಸೆಳೆಯುವುದು ವಿಶಿಷ್ಟವಾದ ಹೆಸರಿನಿಂದಷ್ಟೇ ಅಲ್ಲ; ನಮ್ಮ ಜೀವನದ ಪಯಣದಲ್ಲಿ ಎಲ್ಲೋ ನೋಡಿದಂತೆ, ಪಕ್ಕದಲ್ಲೇ ಹಾದು ಹೋಗಿದ್ದಂತೆ, ಗಾಳಿಮಾತುಗಳಂತೆ, ದಂತಕಥೆಗಳಂತೆ ಮನಸ್ಸಿನಲ್ಲಿ ಮೂಡಿ ಬೆರಗು ಹುಟ್ಟಿಸುತ್ತಾರೆ. ಆದರೂ ಅಷ್ಟೇ ಆಗಂತುಕರು ಅಂತಲೂ ಅನಿಸುತ್ತಾರೆ. ಇದ್ದುದ್ದರಲ್ಲೇ ಜೀವನದ ಸವಿಯನ್ನು ಹೀರಿಬಿಡಲು ಇನ್ನಿಲ್ಲದ ಪ್ರಯತ್ನಗಳನ್ನು ಮಾಡುವ ಈ ಪಾತ್ರಗಳು ಅದೆಷ್ಟು ಜೀವನ್ಮುಖಿ ಎನಿಸುತ್ತವೆ. ದುಃಖ ಅಥವಾ ಸಮಸ್ಯೆಗಳನ್ನು ನಿರ್ಧಿಷ್ಟವಾಗಿ ದೊಡ್ಡವು ಸಣ್ಣವು ಎಂದು ಹೇಳಲು ಸಾಧ್ಯವೇ ಇಲ್ಲದಂತಹ ಪರಿಸರ ಕಟ್ಟಿಕೊಟ್ಟಿರುವುದು ಮತ್ತು ಬದುಕಿನ ಹೋರಾಟದಲ್ಲಿ ಈ ಪಾತ್ರಗಳ ಪ್ರತಿಯೊಂದು ಕ್ರಿಯೆಯೂ ಸರಿ ತಪ್ಪುಗಳ, ಮೌಲ್ಯಗಳ, ನಂಬಿಕೆಗಳ ಪರಿಭಾಷೆಗಳನ್ನೇ ಮೀರಿ ಬೆಳೆದು, ಅದೆಷ್ಟು ಸ್ವಾಭಾವಿಕ ಅನಿಸುವಂತೆ ಪ್ರತಿಪಾದಿಸಿರುವುದು ಕತೆಗಾರನ ಶಕ್ತಿ.

ಕರುಣಾರಸ ಓದುಗರನ್ನು ಕಲಕುವಂತೆ, ಕಾಡುವಂತೆ ಬೇರಾವ ಭಾವವೂ ಕಾಡುವುದಿಲ್ಲ ಎನ್ನುವುದು ಈ ಕತೆಗಳ ಓದಿನ ನಂತರ ನನಗೆ ಮತ್ತೆ ಮನದಟ್ಟಾಗಿದೆ. ಗೋಳಿನ ಕಥೆಗಳ ಸಹವಾಸವೇ ಬೇಡ ಎಂದು ಎಷ್ಟೇ ಸಿನಿಮಾಗಳಿಂದ, ಪುಸ್ತಕಗಳಿಂದ ದೂರ ಓಡಿದರೂ ಅವುಗಳನ್ನು ಸಂಪೂರ್ಣವಾಗಿ ದೂರವಿಡಲು ಸಾಧ್ಯವೇ ಇಲ್ಲ. ಅವು ಹುಟ್ಟಿಸುವ ನೂರು ಪ್ರಶ್ನೆಗಳಿಂದ, ಏನನ್ನೋ ಕದ್ದು ಸುಮ್ಮನಿದ್ದು ಬಿಟ್ಟಂತಹ ಠಕ್ಕತನದಿಂದ ತಪ್ಪಿಸಿಕೊಳ್ಳುವುದು ಸುಲಭವಲ್ಲ. ಇಲ್ಲಿನ ಕಥೆಗಳು ವಿಷಾದದಲ್ಲಿ ಅದ್ದಿ ತೆಗೆದಂತಿದ್ದರೂ, ಅಲ್ಲಲ್ಲಿ ಕಾಣಸಿಗುವ ಸೋಜಿಗ, ವಿನೋದ, ವ್ಯಂಗ್ಯ, ವಿಡಂಬನೆ, ವೈರುಧ್ಯಗಳ ಚಿತ್ರಣಗಳಿಂದ ವಿಶಿಷ್ಟವಾದ ಓದಿನ ಅನುಭವ ಕೊಡುತ್ತವೆ.

'ಕಂಟ್ರಿ ಪಿಸ್ತೂಲ್' ಎನ್ನುವ ಕಥೆ 'ಡುಮಿಂಗ' ಸಂಕಲನದಲ್ಲಿರುವ 'ಮುಗಿಲ ಕರೆ' ಎನ್ನುವ ಕಥೆಯಲ್ಲಿ ಬರುವ ಭುಜಕೀರ್ತಿ ಮತ್ತು ಧಾವಂತ, ಎನ್ನುವ ಅಪ್ಪ ಮಗನ ಕಥೆಯ prequel ಆಗಿರುವುದು ವಿಶೇಷ ಪ್ರಯೋಗ.

ಕೆಲವು ಕತೆಗಳನ್ನು ಬರೆದಿರುವ ನನಗೂ ಉಪಮೆಗಳನ್ನು ಬಳಸುವುದು ಇಷ್ಟವೇ; ಗದ್ಯವಾದರೇನು ಸಾಧ್ಯವಾದಲ್ಲೆಲ್ಲಾ ತುರುಕೋಣ ಅನಿಸುತ್ತದೆ. ಆದರೆ ಒಬ್ಬ ಓದುಗಳಾಗಿ ನೋಡಿದಾಗ ಮೊದಲ ಬಾರಿಗೆ ನನಗೆ ಈ ಕಥೆಗಳಲ್ಲಿ ಯಥೇಚ್ಛವಾಗಿ ಬಳಸಿರುವ ಉಪಮೆಗಳು ಕೊಡುವ ಉಪದ್ರವಗಳ ಅನುಭವವಾಯಿತು. ಇಲ್ಲಿ ಬಳಸಿರುವ ಹಲವಾರು ಉಪಮೆಗಳನ್ನು ಕತೆಗಳಿಂದ ಬೇರ್ಪಡಿಸಿ ಹಾಗೆಯೇ ನೋಡಿದಾಗ ಚೆನ್ನಾಗಿವೆ ಅನಿಸಿದರೂ ಇಲ್ಲಿನ ಹಲವು ಸನ್ನಿವೇಶಗಳಲ್ಲಿ ಅವು ಅಪ್ರಸ್ತುತ ಅಥವಾ ಅಸಂಗತವಾಗಿವೆ ಅನಿಸಿತು. ಇವು ಓದುಗರನ್ನು distract ಮಾಡುತ್ತವೇನೋ ಅನಿಸಿತು.

ಒಟ್ಟು ಏಳು ಕತೆಗಳಿರುವ ಈ ಸಂಕಲನದ ಮುಖಪುಟ (ಕಿರಣ್ ಮಾಡಾಳು) ಸರಳವಾಗಿದ್ದರೂ ಅರ್ಥಪೂರ್ಣವಾಗಿದೆ. ಈ ಚೆಂದದ ಕತೆಗಳನ್ನು ಬರೆದ ಲೇಖಕರಿಗೂ, ಪ್ರಕಟಿಸಿದ ಛಂದ ಪ್ರಕಾಶನಕ್ಕೂ ಅಭಿನಂದನೆಗಳು.

-ಪೂರ್ಣಿಮಾ ಮಾಳಗಿಮನಿ

MORE FEATURES

ಇಲ್ಲಿ ಇರುವ ಎಲ್ಲರ ತಲೆಯೊಳಗೂ ಒಂದೊಂದು ಕತೆ ಇದೆ

19-04-2024 ಬೆಂಗಳೂರು

'ಹಲವರ ಬದುಕಿನ ಅಕ್ಷಯ ಅನುಭವಗಳಲ್ಲಿ ಕೆಲವು ಮಾತ್ರ ಇಲ್ಲಿ ಅಕ್ಷರವಾಗಿದೆ. ಇಲ್ಲಿ ಇರುವ ಎಲ್ಲರ ತಲೆಯೊಳಗೂ ಒಂದೊಂದು ...

ಓದಿದಷ್ಟೂ ವಾಚಕರ ಅಭಿರುಚಿಯನ್ನು ಕೆರಳಿಸುತ್ತ ಹೋಗುವ ಕೃತಿ ಪ್ರಕೃತಿಯ ನಿಗೂಢಗಳು

19-04-2024 ಬೆಂಗಳೂರು

‘ಇನ್ನೂ ಹೆಚ್ಚಿನ ಪ್ರಕೃತಿಯ ನಿಗೂಢಗಳನ್ನು ಮಲಗಿರುವ ಬುದ್ಧನ ಆಕೃತಿಯ ಬೆಟ್ಟಗಳು, ಗಂಡು ಹೆಣ್ಣಾಗುವ ಹೆಣ್ಣು ಗಂಡಾ...

ಒಲವಿನ ಬದುಕಿನ ಆಶಯದಂತೆ ಅಥವಾ ಗುರಿಯಂತೆ ನಲ್ಲೆಯ ಬದುಕು ಚಿತ್ರಿತವಾಗಿದೆ

19-04-2024 ಬೆಂಗಳೂರು

‘ಒಲವಿನ ಬದುಕಿನ ಆಶಯದಂತೆ ಅಥವಾ ಗುರಿಯಂತೆ ನಲ್ಲೆಯ ಬದುಕು ಚಿತ್ರಿತವಾಗಿದೆ. ಹೀಗಾಗಿ ನಾಟಕ ಭಿನ್ನ ನೆಲೆಗಳ ಕಥೆಯನ...