‘ನಮ್ಮ ದೇಹದ ವಿಜ್ಞಾನ' ಕೃತಿ ಕನ್ನಡ ಸಾಹಿತ್ಯಕ್ಕೆ ಉತ್ತಮ ಕೊಡುಗೆ: ಡಾ. ಸಿ.ಎನ್. ಮಂಜುನಾಥ್

Date: 18-09-2021

Location: ಜಯದೇವ ಹೃದ್ರೋಗ ಸಂಸ್ಥೆಯ ಸಭಾಂಗಣ, ಬೆಂಗಳೂರು


ವೈದ್ಯ ವಿಜ್ಞಾನ ಕುರಿತು ಆಂಗ್ಲ ಭಾಷೆಯಲ್ಲಿ ಲಕ್ಷಾಂತರ ಪುಸ್ತಕಗಳಿವೆ. ಆದರೆ, ಕನ್ನಡದಲ್ಲಿ ಈ ಪುಸ್ತಕಗಳ ಸಂಖ್ಯೆ ಕಡಿಮೆ.ಇಂತಹ ಕೊರತೆಯನ್ನು ನೀಗಿಸುವಲ್ಲಿ ನಮ್ಮ ವೈದ್ಯರು ಕೊಡುಗೆ ನೀಡುತ್ತಿದ್ದು ಹಾಗೂ ನವಕರ್ನಾಟಕ ಪ್ರಕಾಶನವು ಈ ನಿಟ್ಟಿನಲ್ಲಿ ಕಾರ್ಯಪ್ರವೃತ್ತವಾಗಿರುವುದು ಖುಷಿಯ ವಿಚಾರ ಎಂದು ಬೆಂಗಳೂರಿನ ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಯ ನಿರ್ದೇಶಕ ಡಾ.ಸಿ. ಎನ್. ಮಂಜುನಾಥ್ ಹೇಳಿದರು.

ನಗರದ ಬನ್ನೇರುಘಟ್ಟ ರಸ್ತೆಯ ಜಯದೇವ ಹೃದ್ರೋಗ ಸಂಸ್ಥೆಯ ಸಭಾಂಗಣದಲ್ಲಿ ನವಕರ್ನಾಟಕ ಪ್ರಕಾಶನದ 60ರ ಸಂಭ್ರಮದ ಅಂಗವಾಗಿ ಶನಿವಾರ ಸಂಜೆ ಆಯೋಜಿಸಿದ ಸಮಾರಂಭದಲ್ಲಿ ಡಾ. ಟಿ.ಆರ್. ಅನಂತರಾಮು ಮತ್ತು ಡಾ.ನಾ. ಸೋಮೇಶ್ವರ ಅವರ 'ನಮ್ಮ ದೇಹದ ವಿಜ್ಞಾನ' ಕೃತಿ ಲೋಕಾರ್ಪಣೆಗೊಳಿಸಿ ಅವರು ಮಾತನಾಡಿದರು.

'ನಮ್ಮ ದೇಹದ ವಿಜ್ಞಾನ' ಕೃತಿ ವೈದ್ಯಕೀಯ ಕ್ಷೇತ್ರಕ್ಕೆ ಕೊಟ್ಟ ಅದ್ಭುತ ಕೊಡುಗೆಯಾಗಿದೆ. ಅಂತಾರಾಷ್ಟ್ರೀಯ ವೈದ್ಯಕೀಯ ವಿಜ್ಞಾನ ಪುಸ್ತಕಗಳಿಗೆ ಸರಿಸಮವಾದ ಈ ಕೃತಿಯಲ್ಲಿ ಮನುಷ್ಯನ ತಲೆಯಿಂದ ಕಾಲಿನ ವರೆಗೆ ದೇಹದ ಪ್ರತಿಯೊಂದು ಭಾಗದ ಬಗ್ಗೆ, ಅದಕ್ಕೆ ಬರುವಂತಹ ರೋಗದ ಬಗ್ಗೆ ಕನ್ನಡದಲ್ಲಿ ಸಂಕ್ಷಿಪ್ತವಾಗಿ ಮಾಹಿತಿ ನೀಡಿದ್ದಾರೆ. ಇದು ವೈದ್ಯಕೀಯ ವಿದ್ಯಾರ್ಥಿಗಳಿಗೆ, ಸ್ಪರ್ಧಾತ್ಮಕ ಪರೀಕ್ಷೆ ಬರೆಯುವ ಅಭ್ಯರ್ಥಿಗಳು ಓದಲೇ ಬೇಕಾದ ಪುಸ್ತಕ. ಎಲ್ಲ ವೈದ್ಯಕೀಯ ಕಾಲೇಜು, ಆಸ್ಪತ್ರೆಗಳಲ್ಲೂಈ ಪುಸ್ತಕ ಇರುವ ಅವಶ್ಯಕತೆ ಇದೆ ಎಂದು ಅಭಿಪ್ರಾಯಪಟ್ಟರು..

ರಾಷ್ಟ್ರೀಯ ಮಾನಸಿಕ ಆರೋಗ್ಯ ಮತ್ತು ನರವಿಜ್ಞಾನ ಸಂಸ್ಥೆ(ನಿಮ್ಹಾನ್ಸ್) ನಿರ್ದೇಶಕರು, ಡಾ. ಪ್ರತಿಮಾ ಮೂರ್ತಿ ಮಾತನಾಡಿ, ದೇಹವನ್ನೂ ಒಂದು ವಿಭಿನ್ನ ಲೋಕದಂತೆ ಚಿತ್ರಿಸಿ, ಸಾಮಾನ್ಯ ಜನರಲ್ಲೂ ಕುತೂಹಲ ಹುಟ್ಟಿಸುವಂತಹ ವಿಶಿಷ್ಟ ಬರಹಗಳು ಈ ಕೃತಿಯಲ್ಲಿವೆ. ಚಿತ್ರಗಳ ಮೂಲಕ ನೀಡಿರುವ ಅನೇಕ ಮಾಹಿತಿಗಳಂತೂ ಮಕ್ಕಳಿಂದ ತೊಡಗಿ ದೊಡ್ಡವರಿಗೂ ಉಪಕಾರಿಯಾಗಲಿವೆ ಎಂದರು.

ಕೃತಿಯ ಯೋಜನೆ ಮತ್ತು ತಯಾರಿಯ ಕುರಿತು ಮಾತನಾಡಿದ ಸಂಪಾದಕ ಡಾ. ಟಿ.ಆರ್. ಅನಂತರಾಮು, ಮೂಲ ವೈದ್ಯ ವಿಜ್ಞಾನಕ್ಕೆ ಒಂದಿಷ್ಟೂ ಧಕ್ಕೆಯಾಗದಂತಹ ರೀತಿಯಲ್ಲಿ ಜನಸಾಮಾನ್ಯರ ಮುಂದೆ ಸರಳವಾಗಿ ತಿಳಿಹೇಳುವ ಪರಿಕಲ್ಪನೆ ನಮ್ಮದಾಗಿತ್ತು. ಅನೇಕ ಕಡೆ ಪಾರಿಭಾಷಿಕ ಶಬ್ದಗಳ ಬಳಕೆ ಮಾಡಬೇಕಾಗಿ ಬಂದಿದ್ದೇ ಕೃತಿ ತಯಾರಿಯ ಹಂತದಲ್ಲಿದ್ದ ಸವಾಲು ಎಂಬುದಾಗಿ ಹೇಳಿದರು.

ಕೃತಿಯ ಸಂಕ್ಷಿಪ್ತ ಪರಿಚಯ ಮಾಡಿದ ಮತ್ತೋರ್ವ ಸಂಪಾದಕ ಡಾ.ನಾ.ಸೋಮೇಶ್ವರ ಅವರು, ಕಳೆದು ಹೋಗಿರುವ ವಿಜ್ಞಾನದ ಸಮಷ್ಟಿ ನೋಟವನ್ನು ಮತ್ತೆ ಪಡೆಯುವ ಪ್ರಯತ್ನದಲ್ಲಿ ನಮ್ಮ ದೇಹದ ವಿಜ್ಞಾನ ಕೃತಿ ಯಶಸ್ವಿಯಾಗಿದೆ ಎಂದರು.

ನವಕರ್ನಾಟಕ ಪ್ರಕಾಶನದ ಕಾರ್ಯನಿರ್ವಾಹಕ ನಿರ್ದೇಶಕ ಎ. ರಮೇಶ್ ಉಡುಪ, ವ್ಯವಸ್ಥಾಪಕ ನಿರ್ದೇಶಕ ಡಾ. ಸಿದ್ದನಗೌಡ ಪಾಟೀಲ್, ಲೇಖಕ ಡಾ. ಸಿ ಆರ್ ಚಂದ್ರಶೇಖರ್, ಡಾ.ಕೆ.ಎಸ್.ಚೈತ್ರ, ಡಾ.ಹೆಚ್.ಆರ್.ಕೃಷ್ಣಮೂರ್ತಿ, ಡಾ.ಕೆ.ಎಸ್.ಪವಿತ್ರ, ಪ್ರೊ.ಕೆ.ಎಸ್. ನಟರಾಜ್, ಡಾ.ಕಿರಣ್ ವಿ.ಎಸ್, ಡಾ.ಕೆ.ಎಸ್.ಶುಭ್ರತಾ ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದರು.ಬಿ.ಕೆ ಸುಮತಿ ನಿರೂಪಿಸಿದರು. ಜನಾರ್ಧನ ಪೂಜಾರಿ ವಂದಿಸಿದರು.

MORE NEWS

ಅಂಭು ಪ್ರಕಾಶನದಿಂದ ಬೇಸಿಗೆ ರಜಾ- ಸಖತ್ ಮಜಾ ‘ಹಾಡಿನ ಬಂಡಿ ಸ್ಪರ್ಧೆ’

29-03-2024 ಬೆಂಗಳೂರು

ಅಂಭು ಪ್ರಕಾಶನದಿಂದ ಬೇಸಿಗೆ ರಜಾ- ಸಖತ್ ಮಜಾ ‘ಹಾಡಿನ ಬಂಡಿ ಸ್ಪರ್ಧೆ’ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ...

ಪ್ರಕಾಶ ಖಾಡೆ ‘ಬಾಳುಕುನ ಪುರಾಣ’ ಕೃತಿಗೆ ಕಸಾಪ ಅರಕೇರಿ ದತ್ತಿ ಪ್ರಶಸ್ತಿ

29-03-2024 ಬೆಂಗಳೂರು

ಬಾಗಲಕೋಟೆ: ಸಾಹಿತಿ ಡಾ.ಪ್ರಕಾಶ ಗ.ಖಾಡೆ ಅವರ ‘ಬಾಳುಕುನ ಪುರಾಣ’ ಕಥಾ ಸಂಕಲನಕ್ಕೆ ಕನ್ನಡ ಸಾಹಿತ್ಯ ಪರಿಷತ್...

2024ನೇ ಸಾಲಿನ ಬುಕ್‌ ಬ್ರಹ್ಮ ಕಥಾ ಸ್ಪರ್ಧೆ - ಕಾದಂಬರಿ ಪುರಸ್ಕಾರಕ್ಕೆ ಆಹ್ವಾನ

29-03-2024 ಬೆಂಗಳೂರು

ʻಬುಕ್‌ ಬ್ರಹ್ಮ ಸ್ವಾತಂತ್ರ್ಯೋತ್ಸವ ಕಥಾ ಸ್ಪರ್ಧೆ 2024 ಮತ್ತು ಕಾದಂಬರಿ ಪುರಸ್ಕಾರ 2024ʼ ರೂ. 2 ಲಕ್ಷ 69 ಸ...