ನಮ್ಮ ಕಾಲದಲ್ಲಿ ಓದಲೇಬೇಕಾದ ಎರಡು ಕೃತಿಗಳು

Date: 01-01-2021

Location: .


ಇಂಗ್ಲಿಷ್ ಬರಹಗಾರ ಜಾರ್ಜ್ ಆರ್‍ವೆಲ್ ತನ್ನ ಅಲೆಮಾರಿ ಬದುಕಿನಲ್ಲಿ ಕಂಡುಂಡ ಅನುಭವ, ಘಟನಾವಳಿಗಳ ಹಿನ್ನೆಲೆಯಲ್ಲಿ ರಚಿಸಿದ ಮಹತ್ವದ ಕೃತಿ `1984'. ತನ್ನ ಕೊನೆಯ ದಿನಗಳಲ್ಲಿ ಬರೆದಿದ್ದು, 20ನೇ ಶತಮಾನದ ಮೊದಲ ಭಾಗದ ಪ್ರಕ್ಷುಬ್ಧ ರಾಜಕೀಯ ಹಾಗೂ ಯುದ್ಧಗಳ ಸಾಕ್ಷಿಪ್ರಜ್ಞೆಯಾಗಿ ನಿಲ್ಲುವ ಕಾದಂಬರಿ. ಇದರೊಂದಿಗೆ ಹನಾ ಆರೆಂಟ್ ಅವರ ಕಾದಂಬರಿ ಕುರಿತು ಹಿರಿಯ ವಿಮರ್ಶಕ ಡಾ. ರಾಜೇಂದ್ರ ಚೆನ್ನಿ ಅವರು ವಿಶ್ಲೇಷಿಸಿದ್ದು ಇಲ್ಲಿದೆ.

1984 ಎನ್ನುವ ಕಾದಂಬರಿಯು ಜಗತ್ತಿನ ಬಹು ಚರ್ಚಿತ ಕಾದಂಬರಿಗಳಲ್ಲಿ ಒಂದು. ಇದನ್ನು ಇಂಗ್ಲಿಷ್ ಬರಹಗಾರ ಜಾರ್ಜ್ ಆರ್‍ವೆಲ್ ತನ್ನ ಬದುಕಿನ ಕೊನೆಯ ತಿಂಗಳುಗಳಲ್ಲಿ ಬರೆದ. ಜಾರ್ಜ್ ಆರ್‍ವೆಲ್ ಎನ್ನುವುದು ಎರಿಕ್ ಆರ್ಥರ್ ಬ್ಲೇರ್ ಎನ್ನುವ ಬರಹಗಾರನ ಕಾವ್ಯನಾಮ. ಭಾರತದಲ್ಲಿ ಹುಟ್ಟಿ, ಇಂಗ್ಲೆಂಡ್‍ನ ಉಚ್ಛ ಮಧ್ಯಮ ವರ್ಗದ ಕುಟುಂಬದಲ್ಲಿ ಬೆಳೆದು, ಅಲ್ಲಿಯ ಶ್ರೀಮಂತ ಹಾಗೂ ಪ್ರತಿಷ್ಠಿತ ಸ್ಕೂಲು-ಕಾಲೇಜುಗಳಲ್ಲಿ ಒಳ್ಳೆಯ ವಿದ್ಯಾರ್ಥಿಯಾಗಿ ಕಲಿಯದೇ, ಬದುಕಿನ ಉದ್ದಕ್ಕೂ ಒಂದು ಕಡೆ ನೆಲೆ ಊರದೇ ಅಲೆಮಾರಿಯ ಹಾಗಿದ್ದ ಆರ್‍ವೆಲ್ ತನ್ನ ಜೀವನವನ್ನೇ ಒಂದು ಪ್ರಯೋಗವನ್ನಾಗಿಸಿದ್ದ. ಕೊಳೆಗೇರಿಗಳಲ್ಲಿ ಬದುಕುವ ಬಡಜನರ ಜೀವನವನ್ನು ಅನುಭವಿಸಿ ನೋಡಲು ಲಂಡನ್ ಮತ್ತು ಪ್ಯಾರಿಸ್‍ನ ಸ್ಲಮ್‍ಗಳಲ್ಲಿ ವಾಸಿಸಿದ. ಗಣಿ ಕೆಲಸಗಾರರ ಮಧ್ಯ ಅವರಂತೆ ಬದುಕಿ ಅನುಭವಿಸಿದ. ಸ್ಪೇನ್‍ನಲ್ಲಿ ಸರ್ವಾಧಿಕಾರಿ ಫ್ರಾಂಕೋನ ವಿರುದ್ಧ ನಡೆದ ಆಂತರಿಕ ಯುದ್ಧದಲ್ಲಿ ಭಾಗಿಯಾಗಿ ಕೊರಳಿಗೆ ಗುಂಡು ತಾಕಿಸಿಕೊಂಡು ಬದುಕುಳಿದದ್ದೇ ಆಶ್ಚರ್ಯವೆನ್ನುವಂತೆ ಉಳಿದು ಬಂದ. ಬ್ರಿಟಿಷರ ಸಾಮ್ರಾಜ್ಯಶಾಹಿಯನ್ನು ಒಬ್ಬ ಪೋಲೀಸ್ ಅಧಿಕಾರಿಯಾಗಿ ಬರ್ಮಾನಲ್ಲಿ ಕೆಲಸ ಮಾಡಿದ ಆರ್‍ವೆಲ್ ಇನ್ನಿಲ್ಲದಂತೆ ವಿಮರ್ಶಿಸಿ ಬರೆದಿದ್ದ. ಇಂಥ ಅಲೆಮಾರಿ ಬದುಕಿನಲ್ಲಿ 20 ಸಾವಿರ ಪುಟಗಳಷ್ಟು ಗದ್ಯವನ್ನು ಬರೆದು ಇಂದಿಗೂ ಇಂಗ್ಲಿಷ್ ಭಾಷೆಯ ಗದ್ಯ ಬರಹಗಾರರಲ್ಲಿ ಆರ್‍ವೆಲ್ ಶ್ರೇಷ್ಠರಲ್ಲಿ ಒಬ್ಬನು. ಇಪ್ಪತ್ತನೆ ಶತಮಾನದ ಮೊದಲ ಭಾಗದ ಪ್ರಕ್ಷುಬ್ಧ ರಾಜಕೀಯ ಹಾಗೂ ಯುದ್ಧಗಳ ಸಾಕ್ಷಿಪ್ರಜ್ಞೆಯಾಗಿದ್ದ ಆರ್‍ವೆಲ್, ಆ ಶತಮಾನದ ಶ್ರೇಷ್ಠ ರಾಜಕೀಯ ಚಿಂತಕರಲ್ಲಿ ಒಬ್ಬನಾಗಿದ್ದ. ಆ ಕಾಲವೂ ಹೇಗಿತ್ತು? ಇಟಲಿಯಲ್ಲಿ ಮುಸೋಲಿನಿಯ ಫ್ಯಾಸಿಸಮ್, ರಶಿಯಾದಲ್ಲಿ ಜೋಸೆಫ್ ಸ್ಟಾಲಿನ್‍ನ ಸರ್ವಾಧಿಕಾರ, ಜರ್ಮನಿಯಲ್ಲಿ ಹಿಟ್ಲರ್‍ನ ನಾಝಿಸಮ್ - ಈ ಸಿದ್ಧಾಂತಗಳು ಸರ್ವಾಧಿಕಾರಿ ಸಮಾಜಗಳನ್ನು, ಜನಾಂಗೀಯ ಕಗ್ಗೊಲೆಗಳನ್ನು, ಜಗತ್ತು ಕಂಡ ಅತಿಭೀಕರ ಮಹಾಯುದ್ಧವನ್ನು ಸೃಷ್ಟಿಸಿದವು. ಅವು ಅನುಷ್ಠಾನಕ್ಕೆ ತಂದ ಸರ್ವಾಧಿಕಾರಿ ಸಮಾಜಗಳು ಅದೆಷ್ಟು ದೈಹಿಕ ಹಿಂಸೆ, ಸೆರೆಮನೆವಾಸ, ದೇಶ ಭ್ರಷ್ಠತೆ, ಕಗ್ಗೊಲೆಗಳನ್ನು ಉಂಟುಮಾಡಿದವೆಂದರೆ ಅವುಗಳನ್ನು ಒಟ್ಟಾಗಿ ಗ್ರಹಿಸುವುದು ಮನುಷ್ಯರ ಅರಿವಿನ ಶಕ್ತಿಯನ್ನು ಮೀರಿರುವ ವಿದ್ಯಮಾನವಾಗಿದೆ. ಸರ್ವಾಧಿಕಾರಿ ರಾಜಕೀಯದ ವಾಸ್ತವಗಳಾಗಿದ್ದರೂ ಅತಿವಾಸ್ತವ ಕಲ್ಪನೆಯ ಆಕೃತಿಗಳೆಂದು ತೋರುವ ನಾಜಿಗಳು ಸೃಷ್ಟಿಸಿದ concentration campಗಳು ಮತ್ತು ಸ್ಟಾಲಿನ್ ಕಾಲದ labour campಗಳು ಮನುಷ್ಯ ಚರಿತ್ರೆಯಲ್ಲಿಯೇ ಹಿಂಸೆಯ ಪರಾಕಾಷ್ಠೆಯಾಗಿದ್ದವು. 60 ಲಕ್ಷ ಯಹೂದಿಗಳನ್ನು ನಾಜಿಗಳು ಮಾರಣಹೋಮದಲ್ಲಿ (Holocaust) ಕೊಂದರು. ಸ್ಟಾಲಿನ್ ಕಾಲದಲ್ಲಿ ಅಂದಾಜು 30 ಲಕ್ಷ ಜನರು ಸೈಬೀರಿಯಾದ ಕ್ಯಾಂಪ್‍ಗಳಲ್ಲಿ ಗತಿಸಿದರು. ಜರ್ಮನಿಯಲ್ಲಿ S.S. ಸಂಸ್ಥೆಯ ಸದಸ್ಯರಿಂದ ಮತ್ತು ಪೋಲೀಸ್‍ರಿಂದ ಕೊಲೆಯಾದವರ ಸಂಖ್ಯೆ, ಸ್ಟಾಲಿನ್‍ನ ರಶಿಯಾದಲ್ಲಿ ಆಳುವ ರಾಜಕೀಯ ಪಕ್ಷದ ದ್ರೋಹಿಗಳೆಂದು ಕೊಲೆಯಾದವರ ಸಂಖ್ಯೆ ಈಗಲೂ ಖಚಿತವಾಗಿ ತಿಳಿಯದು. ಹೀಗೆ ಕೊಲೆಯಾದವರು “ಪುಣ್ಯವಂತರು”. ಕ್ಯಾಂಪ್‍ಗಳಲ್ಲಿ ಸೆರೆಯಾಳುಗಳಾಗಿ ಸೇರಿದವರು ಅನುಭವಿಸಿದ ಹಿಂಸೆಯ ವೈವಿಧ್ಯವನ್ನು ದಾಖಲೆ ಮಾಡುವುದೂ ಬಹು ಕಷ್ಟದ ಕೆಲಸ. ಈ ಸರ್ವಾಧಿಕಾರಿ ಸಮಾಜಗಳು ಅಂತ್ಯವಾದ ಮೇಲೆ ಕೋಟಿಗಟ್ಟಲೇ ಪುಟಗಳಷ್ಟು ದಾಖಲೆಗಳು ಲಭ್ಯವಾಗಿವೆ. ಅಸಂಖ್ಯಾತ ಪರಾಮರ್ಶೆಗಳು, ಸಂಶೋಧನೆಗಳು ಲಭ್ಯವಿವೆ. ಒಂದು ಕಾಲದಲ್ಲಿ ಚರಿತ್ರೆಯ ಈ ಕರಾಳ ಸಂಗತಿಗಳು ಇನ್ನು ಮರುಕಳಿಸುವುದಿಲ್ಲ ಎನ್ನುವ ನಂಬಿಕೆಯಲ್ಲಿ ಇಂಥ ಅಧ್ಯಯನಗಳು ನಡೆದವು. ಆದರೆ ದುರಂತವೆಂದರೆ ಈಗ ವಿಶ್ವದ ಬಹುಭಾಗದಲ್ಲಿ ಬಲಪಂಥೀಯ ರಾಜಕೀಯ ಸಿದ್ಧಾಂತಗಳು ಬಲಗೊಂಡಿದ್ದು, ಪ್ರಜಾಪ್ರಭುತ್ವಗಳು ನಾಶವಾಗಿ ಸರ್ವಾಧಿಕಾರವು ವಿವಿಧ ರೂಪದಲ್ಲಿ ಮತ್ತೆ ಪ್ರತಿಷ್ಠಾಪನೆಗೊಂಡಿದೆ. ಹೀಗಾಗಿ ಮತ್ತೆ ಆ ಕಾಲದ ಕೃತಿಗಳನ್ನು ಅಸಂಖ್ಯಾತ ಜನ ಓದುತ್ತಿದ್ದಾರೆ. ಅವುಗಳಲ್ಲಿ ಪ್ರಮುಖವಾದ ಎರಡು ಕೃತಿಗಳೆಂದರೆ ಜಾರ್ಜ್ ಆರ್‍ವೆಲ್‍ನ 1984 ಮತ್ತು ಜರ್ಮನ್ ವಿದ್ವಾಂಸೆ ಹನಾ ಆರೆಂಟ್‍ಳ The Origins of Totalitarianism. ಆರ್‍ವೆಲ್ ತನ್ನ ಕಾದಂಬರಿಯನ್ನು 1947-48ರಲ್ಲಿ ಅವನು ಸ್ವತಃ ಕಂಡಿದ್ದ ರಾಜಕೀಯ ಪ್ರವೃತ್ತಿಗಳು ಭವಿಷ್ಯದಲ್ಲಿ ಯಾವ ತಾರ್ಕಿಕ ಅಂತ್ಯವನ್ನು ತಲುಪಬಹುದೆಂದು ಕಲ್ಪಿಸಿ ಕರಾಳ ಭವಿಷ್ಯ ಕಥನದ (dystopia) ರೂಪದಲ್ಲಿ ಅದನ್ನು ನಿರೂಪಿಸಿದ. ಹನಾ ಆರೆಂಟ್ 1951ರಲ್ಲಿ ವಿಸ್ತಾರವಾದ, ವಿದ್ವತ್‍ಪೂರ್ಣವಾದ ಮತ್ತು ಅವಳು ಆ ಕೃತಿಯನ್ನು ಬರೆಯುವ ಹೊತ್ತಿಗೆ “ಗತ”ವಾಗಿದ್ದ ಚರಿತ್ರೆಯನ್ನು ವಿಶ್ಲೇಷಿಸಿ ಬರೆದಳು. ಅವಳು ವಿಶ್ಲೇಷಿಸಿದ “ಗತ”, ಆರ್‍ವೆಲ್ ನಿರೂಪಿಸಿದ ‘ಭವಿಷ್ಯ’ ಇವೆರಡೂ ಇಂದು ನಮ್ಮ “ಸದ್ಯ”ವಾಗಿವೆ. ಇವರಿಬ್ಬರೂ ನಮ್ಮ ಸಮಕಾಲೀನರಾಗಿಬಿಟ್ಟಿದ್ದಾರೆ.

ಆರ್‍ವೆಲ್‍ನ 1984 ಕಾದಂಬರಿಯ ಕೆಲವು ಸನ್ನಿವೇಶಗಳು ಹೀಗಿವೆ. ಕಥೆ ನಡೆಯುವುದು Oceania ಎನ್ನುವ ಕಾಲ್ಪನಿಕ ಸೂಪರ್ ರಾಷ್ಟ್ರವೊಂದರಲ್ಲಿ. ಎರಡೂ ಅಮೇರಿಕಾ ಖಂಡಗಳು (ಉತ್ತರ ಮತ್ತು ದಕ್ಷಿಣ) ಮತ್ತು ಇಂಗ್ಲೆಂಡ್ ಸೇರಿಕೊಂಡು ಈ ರಾಷ್ಟ್ರವು ಸೃಷ್ಠಿಯಾಗಿದೆ. ಲಂಡನ್ ಈಗೆ AIRSTRIP ONE ಎನ್ನುವ ಹೆಸರಿನಲ್ಲಿ ರಾಜಕೀಯ ರಾಜಧಾನಿಯಾಗಿದೆ. ಆಳುವ ಪಕ್ಷದ ಸಿದ್ಧಾಂತವನ್ನು INGSOC (English Socialism)ಎಂದು ಕರೆಯಲಾಗುತ್ತದೆ. ಥೇಟು ಸ್ಟಾಲಿನ್ ಯುಗBig Brother ಹಾಗೆ ಇಲ್ಲಿಯ ಆಳುವ ಪಕ್ಷಕ್ಕೆ Big Brother ಎನ್ನುವವನು ನಾಯಕನಾಗಿದ್ದಾನೆ. ಎಲ್ಲಾ ರಸ್ತೆಗಳಲ್ಲಿ, ಎಲ್ಲಾ ಕಟ್ಟಡಗಳಲ್ಲಿ ಅವನ ಮುಖದ ದೊಡ್ಡ ಚಿತ್ರವು ರಾರಾಜಿಸುತ್ತಿದೆ. ಅವನ ಕಣ್ಣುಗಳು ನೋಡುವವರ ಎದೆಯನ್ನೇ ಹೊಕ್ಕು ಬಿಡುವ ಸಂಮೋಹನ ಶಕ್ತಿ ಹೊಂದಿವೆ. ಚಿತ್ರದ ಕೆಳಗೆ “Big Brother is watching you” ಎನ್ನುವ ಘೋಷಣೆ ಇದೆ. ಇದು ಈ ಸರ್ವಾಧಿಕಾರಿ ರಾಜಕೀಯ ವ್ಯವಸ್ಥೆಯ ಮೂಲ ಸೂತ್ರವೂ ಆಗಿದೆ. ಇದು ಇಂದು ಚರ್ಚಿತವಾಗುತ್ತಿರುವ Surveillance society ಅಂದರೆ ಪ್ರಜೆಗಳ ಮೇಲೆ ಸದಾಕಾಲ, ಅವರು ಎಲ್ಲಿದ್ದರೂ ನಿಗಾ ಇಡುವ ವ್ಯವಸ್ಥೆ ಇದಾಗಿದೆ. ಈ ವ್ಯವಸ್ಥೆಯ ಪ್ರಮುಖ ಸಾಧನವೆಂದರೆ ಮನೆ, ಕಚೇರಿ, ರಸ್ತೆಗಳು ಎಲ್ಲಾ ಕಡೆಗೂ ಇಡಲಾಗಿರುವ telescreenಗಳು. ಇವು ಇಮ್ಮುಖ ಕೆಲಸ ಮಾಡುತ್ತವೆ. ನೋಡುತ್ತಿರುವವರಿಗೆ ಆ ಕಡೆಯಿಂದ ಅಂದರೆ ಅಧಿಕಾರ ಕೇಂದ್ರದಿಂದ ನಿರಂತರವಾದ ಪ್ರಚಾರ, ಸುಳ್ಳು ಸುದ್ಧಿ, ಬಿಗ್ ಬ್ರದರ್‍ನ ಪ್ರಶಂಸೆ, ಶತ್ರು ದೇಶದ ಸೋಲಿನ ವಾರ್ತೆಗಳು ಇವುಗಳನ್ನು ನಿರಂತರವಾಗಿ ಪ್ರಸಾರ ಮಾಡಲಾಗುತ್ತದೆ. ಅದನ್ನು ಸ್ವಿಚ್ ಆಫ್ ಮಾಡುವ ಸ್ವಾತಂತ್ರ್ಯ ಯಾರಿಗೂ ಇಲ್ಲ. ಇದೇ ಟೆಲಿಪರದೆಯು ನೋಡುವ ಪ್ರಜೆಯ ಪ್ರತಿಯೊಂದು ಹಾವಭಾವ, ಚಲನೆ, ಮಾತು ಎಲ್ಲವನ್ನೂ ನಿರಂತರವಾಗಿ ಸೂಕ್ಷ್ಮವಾಗಿ ಸಂಗ್ರಹ ಮಾಡುತ್ತದೆ. ಅದು ಈ ವ್ಯವಸ್ಥೆಯ ಅತ್ಯಂತ ಬಲಶಾಲಿ ಘಟಕವಾದ Thought Policeರಿಗೆ ತಲುಪುತ್ತದೆ.

ಆರ್‍ವೆಲ್‍ನ ಕಾದಂಬರಿಯ ಜನಪ್ರಿಯತೆಗೆ ಒಂದು ಕಾರಣವೆಂದರೆ ಅವನು ಈ ವ್ಯವಸ್ಥೆಯು ರಚಿಸಿದ ಹೊಸ ಭಾಷೆ (Newspeak) ಯನ್ನು ಪರಿಚಯಿಸಿದ್ದು. ಇದರ ಪ್ರಕಾರ ನೀವು ನಿಮ್ಮ ಮನಸ್ಸಿನ ಅಂತರಾಳದಲ್ಲಿ ಬಿಗ್ ಬ್ರದರ್ ಅಥವಾ ಪಕ್ಷದ ವಿರುದ್ಧ ಚಿಂತಿಸಿದರೆ ಅದು Thought Crime ಆಗುತ್ತದೆ. ಇದಕ್ಕೆ ಶಿಕ್ಷೆಯೆಂದರೆ ಹಿಂಸೆ, ಸೆರೆಮನೆವಾಸ ಮತ್ತು ಸಾವು. ಇದು ಹೇಗೆ ಅಭಿವ್ಯಕ್ತವಾಗುತ್ತದೆ? ಒಂದು ಸರಳ ವಿಧಾನವೆಂದರೆ ಟೆಲಿ ಪರದೆಯ ಮೇಲೆ ಹಠಾತ್ತನೆ ಬಿಗ್ ಬ್ರದರ್‍ನ ಚಿತ್ರ ಬಂದಾಗ ಒಂದು ಅರೆಕ್ಷಣದಲ್ಲಿ ನಿಮ್ಮ ಮುಖ ಹಾಗೂ ದೇಹದ ಎಲ್ಲಾ ಭಾಗಗಳು ಸಮರ್ಪಕವಾದ ಪ್ರತಿಕ್ರಿಯೆ ತೋರಿಸದಿದ್ದರೆ ಅದು Face Crime ಆಗುತ್ತದೆ. ಇನ್ನು ಮಾತನಾಡಿದರೆ, ಬರೆಯಲು ಪ್ರಯತ್ನಿಸಿದರೆ ಬಿಡಿ ನಿಮ್ಮ ಕತೆ ಮುಗಿಯಿತು. ಇನ್ನು ನೀವು Thought Crime ಮಾಡಿದ್ದೀರೆಂದು ಯಾರು ಫಿರ್ಯಾದು ಮಾಡುತ್ತಾರೆ? ನಿಮ್ಮ ಸ್ನೇಹಿತರು, ಸಹೋದ್ಯೋಗಿಗಳು, ನೆರೆಯವರು ಮತ್ತು ನಿಮ್ಮ ಮಕ್ಕಳು. ಏಕೆಂದರೆ ಪ್ರಭುತ್ವವು ಇವರೆಲ್ಲರಿಗೆ ತರಬೇತಿ ನೀಡಿ “ದ್ರೋಹಿಗಳನ್ನು” ಹುಡುಕುವುದು ಕರ್ತವ್ಯವೆಂದು ಮಿದುಳು ಮಾರ್ಜನ ಮಾಡಿರುತ್ತದೆ.

ಇನ್ನೊಂದು ದೃಶ್ಯ, ಕಾದಂಬರಿಯ ನಾಯಕನಾದ ವಿನ್‍ಸ್ಟನ್ ಸ್ಮಿತ್ ಮತ್ತು ಅನೇಕ ಸಹೋದ್ಯೋಗಿಗಳು ಒಂದು ಕೊಠಡಿಯಲ್ಲಿದ್ದಾರೆ. ಎದುರಿಗೆ ಇರುವ ಟೆಲಿಪರದೆಯನ್ನು ನೋಡುತ್ತ “Two Minutes Hate”ಗಾಗಿ ಕಾಯುತ್ತಿದ್ದಾರೆ. ಇದೇನಿದು? ಎರಡು ನಿಮಿಷಗಳ ಕಾಲ ಪರದೆಯ ಮೇಲೆ ರಾಷ್ಟ್ರದ ಶತ್ರುವಾದ ಗೋಲ್ಡ್‍ಸ್ಟೆನ್‍ನ ಚಿತ್ರ ಹಾಗೂ ಮಾತುಗಳನ್ನು ಪ್ರಸಾರ ಮಾಡಲಾಗುತ್ತದೆ. ಆಗ ಪ್ರತಿಯೊಬ್ಬ ಪ್ರಜೆಯೂ ಈ ಶತ್ರುವಿನ ವಿರುದ್ಧ ತನ್ನ ದ್ವೇಷವನ್ನು ಪ್ರಾಣಿಗಳ ಹಾಗೆ ಹೂಂಕರಿಸಿ, ಬೈಗಳು ಬೈದು, ಕ್ಯಾಕರಿಸಿ, ಕಾಲು ಅಪ್ಪಳಿಸಿ ತೋರಿಸಲೇಬೇಕು. ಅದು ಮುಗಿಯುವ ಮೊದಲು ಬಿಗ್ ಬ್ರದರ್ ಚಿತ್ರ ಬಂದರೆ “ರಕ್ಷಕನೇ, ಪಾಲಕನೆ” ಎಂದು ಮಹಿಳೆಯರು ಕಂಬನಿ ಸುರಿಸಿ ಪ್ರಾರ್ಥಿಸುತ್ತಾರೆ. ಗೋಲ್ಡ್‍ಸ್ಟೆನ್ ದೇಶದ ಆಂತರಿಕ ಶತ್ರುವಾದರೆ, ವಿಶ್ವದಲ್ಲಿರುವ ಇನ್ನೆರಡು ಮಹಾ ರಾಷ್ಟ್ರಗಳಲ್ಲಿ ಒಂದು ರಾಷ್ಟ್ರದೊಂದಿಗೆ ಶತ್ರುತ್ವವಿದೆ. ಆದ್ದರಿಂದ ಆ ಶತ್ರು ರಾಷ್ಟ್ರದ ಸೆರೆಯಾಳು ಸೈನಿಕರನ್ನು ಪರದೆಯಲ್ಲಿ ಕಂಡರೆ ಅದೇ ದ್ವೇಷವನ್ನು ಕಡ್ಡಾಯವಾಗಿ ತೋರಿಸಬೇಕು! ಇಲ್ಲದಿದ್ದರೆ Thought Police ಇದ್ದಾರೆ!

ಎಳೆಯಸಿರಿ ಮೊಳಕೆಯಲ್ಲಿ ನೋಡಬೇಕಾದುದರಿಂದ ಚಿಕ್ಕ ಮಕ್ಕಳನ್ನು Junior Spies (ಪುಟಾಣಿ ಗುಪ್ತಚಾರರು) ಎನ್ನುವ ಸಂಸ್ಥೆಗೆ ಸೇರಿಸಿ ಸೈದ್ಧಾಂತೀಕರಣೊಳಿಸಲಾಗುತ್ತದೆ. ನಾಯಕ ವಿನ್‍ಸ್ಟನ್‍ನ ನೆರೆಮನೆಯ ಪಾರ್ಸನ್ಸ್‍ನ 7 ವರ್ಷದ ಮಗಳು ಅವನ ವಿರುದ್ಧ Thought Police ಗೆ ವರದಿ ಮಾಡಿ ಅವನನ್ನು ಭೀಕರ ಹಿಂಸೆಗೆ ಒಡ್ಡಲು ಸಹಾಯವಾಗುತ್ತಾಳೆ. ಇನ್ನು ಹದಿಹರೆಯದ ಹುಡುಗಿಯರು Anti Sex Leagueಗೆ ಸದಸ್ಯರಾಗಿ ಸೇರುತ್ತಾರೆ. ಇದರ ಉದ್ದೇಶವೆಂದರೆ ಪ್ರೀತಿ, ಪ್ರೇಮ ಮುಂತಾದ ವ್ಯಕ್ತಿನಿಷ್ಠ ಅಪರಾಧಗಳನ್ನು ಮಾಡದೇ ಇರುವಂತೆ ಹಾಗೂ ಸಂಭೋಗವನ್ನು ಭಾವನಾರಹಿತ ಕೇವಲ ಭವಿಷ್ಯದ ಪ್ರಜೆಗಳನ್ನು ಉತ್ಪಾದಿಸುವ ಅನಿವಾರ್ಯ ಕ್ರಿಯೆಯೆಂದು ಮಿದುಳಿನಲ್ಲಿ ಕಟೆಯುವುದು.

ಈ ರಾಜಧಾನಿಯ ಬಹು ಜನಪ್ರಿಯ ಮನೋರಂಜನೆಗಳೆಂದರೆ ಶತ್ರುದೇಶದ ಹಾಗೂ ಆಂತರಿಕ ಶತ್ರುಗಳ ಸಾರ್ವಜನಿಕ ಮರಣದಂಡನೆ. (ಇದರ ಅತ್ಯಂತ ಉತ್ಸಾಹಿ ಪ್ರೇಕ್ಷಕರೆಂದರೆ ಪುಟ್ಟ ಮಕ್ಕಳು ಮತ್ತು ಮಹಿಳೆಯರು). ಇಷ್ಟೆಲ್ಲ ತೈಯಾರಿಯ ನಂತರವೂ ನೀವು ದಾರಿತಪ್ಪಿದರೆ ನಿಮ್ಮನ್ನು vaporise ಮಾಡಲಾಗುತ್ತದೆ. ಅಂದರೆ ನೀವು ಇಲ್ಲದಂತೆ ಮಾಡಲಾಗುತ್ತದೆ. ನಿಮ್ಮನ್ನು ರಿಪೇರಿ ಮಾಡಲು ಬೃಹತ್ತಾದ ಒಂದು ಸಚಿವಾಲಯವೇ ಇದೆ. ಅದರ ಹೆಸರು Ministry of Love!! ಇಲ್ಲಿಯ ವಿವರಗಳನ್ನು ಓದಿದ ಅನೇಕ ರಶಿಯನ್ ಕ್ಯಾಂಪ್‍ಗಳ ಸದಸ್ಯರು ‘ಇದೆಲ್ಲ ಈ ಆರ್‍ವೆಲ್‍ಗೆ ಹೇಗೆ ಗೊತ್ತಿತ್ತು’ ಎಂದು ಉದ್ಗರಿಸಿದರಂತೆ.

ಅಂದರೆ ಆ ಮಹಾ ಪ್ರಕ್ಷುಬ್ಧ ಕಾಲದಲ್ಲಿ ಬರಹಗಾರನ ಕಲ್ಪನೆಯನ್ನೂ ಮೀರಿದ ಅಸಾಧಾರಣ ಘಟನೆಗಳು ನಡೆಯುತ್ತಿದ್ದವು. ಕೇವಲ ಯಹೂದಿಗಳನ್ನು ದುಡಿಸಿ ಕೊಲ್ಲುವುದಕ್ಕಾಗಿ ರಾಕ್ಷಸಗಾತ್ರದ ಕ್ಯಾಂಪ್‍ಗಳನ್ನು, ಕಾರಖಾನೆಗಳನ್ನು ಆರಂಭಿಸುವುದು ಅಸಂಗತವಲ್ಲವೆ? ಸ್ಟಾಲಿನ್‍ನ ರಶಿಯಾದಲ್ಲಿ ಕವಿಗಳನ್ನು, ಬರಹಗಾರರನ್ನು ದೂರದ ಸೈಬೀರಿಯಾದ ಅಮಾನುಷ ಚಳಿಯಲ್ಲಿನ labour campಗಳಿಗೆ ಕಳಿಸಲು ಮಾಡಿದ ವ್ಯವಸ್ಥೆಗಳೂ ಅಸಂಗತವಲ್ಲವೆ? ಲಕ್ಷಾನುಗಟ್ಟಲೇ ಗುಪ್ತಚಾರರು, S.S. ಸೈನಿಕರು, ಇಟಲಿಯ ಕಪ್ಪು ಅಂಗಿಯ ಫ್ಯಾಸಿಸ್ಟ್‍ರು ಇಂಥ ವ್ಯವಸ್ಥೆಗಳಿಗಾಗಿ ದುಡಿಯಬೇಕಾಯಿತಲ್ಲವೆ? ಅಂದರೆ ಆ ಕಾಲದ ವಾಸ್ತವಗಳೇ ಅವಾಸ್ತವಿಕವಾಗಿ ಇದ್ದವು. ಇವುಗಳನ್ನು ನಿರೂಪಿಸಲು ಕಾದಂಬರಿಕಾರರು ಹೊಸ ಮಾರ್ಗಗಳನ್ನೇ ಹುಡುಕಿಕೊಳ್ಳಬೇಕಾಯಿತು. ಆರ್‍ವೆಲ್ Animal Farmಎನ್ನುವ ಅನ್ಯೋಕ್ತಿ (allegory) ಕ್ರಮದಲ್ಲಿ ಬರೆದ ಕಾದಂಬರಿಯಲ್ಲಿ ಅತಿಶಯೋಕ್ತಿ ಎನ್ನಿಸಬಹುದಾದ ಘಟನೆಗಳನ್ನು ವರ್ಣಿಸುತ್ತಾನೆ. 1984 ಕಾದಂಬರಿ ನಾಯಕನಾದ ವಿನ್‍ಸ್ಟನ್ ಸ್ಮಿತ್‍ನ ಸುದೀರ್ಘ ಆಂತರಿಕ ಸ್ವಗತದಂತಿದೆ. ಅಂದರೆ ಆರ್‍ವೆಲ್ ಸರ್ವಸಾಕ್ಷಿ ನಿರೂಪಕನಾಗಿ ಇದನ್ನು ಬರೆದಿದ್ದರೂ ನಾವು ಎಲ್ಲವನ್ನೂ ಅವನ ಮೂಲಕ ಅವನ ಕಣ್ಣಿಂದ ನೋಡುತ್ತೇವೆ. Ministry of Truthನಲ್ಲಿ ಅವನ ಕೆಲಸವೆಂದರೆ ಹಳೆಯ ದಿನಪತ್ರಿಕೆಗಳಲ್ಲಿ ಪ್ರಕಟವಾಗಿದ್ದ ಆದರೆ ಈಗ ಪಕ್ಷ ನಿಲುವಿಗೆ ವಿರುದ್ಧವಾದ ಸಂಗತಿಗಳನ್ನು ತಿದ್ದಿ ಮತ್ತೆ ಬರೆಯುವುದು, ಅವನು ಬರೆದ ಮೇಲೆ ಆ ಪತ್ರಿಕೆಯ ಪುಟವು ಮರುಮುದ್ರಣವಾಗುತ್ತದೆ! ಅಂದರೆ ಇದು ಗತಕಾಲವನ್ನು ತಿದ್ದುವ ಕೆಲಸ. ಈಗ ಒಪ್ಪಿಗೆಯಾಗದ ಗತದ ಯಾವ ದಾಖಲೆಯೂ ಉಳಿಯಬಾರದು. ಒಮ್ಮೆ ತಿದ್ದಿ ಬರೆದ ಮೇಲೆ ಹಳೆ ದಾಖಲೆಗಳನ್ನು memory holeಗಳಲ್ಲಿ ಹಾಕಲಾಗುತ್ತದೆ. ಅವು ಸಚಿವಾಲಯದ ನೆಲಮಾಳಿಗೆಯಲ್ಲಿರುವ ಕುಲುಮೆಗಳಲ್ಲಿ ಬೂದಿಯಾಗುತ್ತವೆ. ಹೀಗಾಗಿ ಸದ್ಯವು ಮಾತ್ರವಲ್ಲ, ಗತಕಾಲವೂ ಮತ್ತೆ ನಿರೂಪಿತವಾಗುತ್ತದೆ. ಸತ್ಯ, ಅಸತ್ಯ, ವಾಸ್ತವ, ಕಲ್ಪಿತ ಇವುಗಳ ಗೆರೆಯ ಅಳಿಸಿಹೋಗುತ್ತದೆ.

ಇಲ್ಲಿ ನೆನಪಾಗುವುದು ಹನಾ ಆರೆಂಟ್‍ಳ ವಿಶ್ಲೇಷಣೆ. ಅವಳ ಪ್ರಕಾರ ಇಂಥ ಸಮಾಜಗಳ ಪ್ರಜೆಗಳಿಗೆ ವಾಸ್ತವ ಅಥವಾ ಸತ್ಯಗಳು ಬೇಕೇ ಇಲ್ಲ, ಇದು ಸುಳ್ಳು ಎಂದು ದಾಖಲೆ ತೋರಿಸಿ ಹೇಳಿದರೂ ಅವರು ತಮ್ಮ ಅಭಿಪ್ರಾಯ ಬದಲಿಸಿಕೊಳ್ಳುವುದಿಲ್ಲ. ಏಕೆಂದರೆ ವ್ಯವಸ್ಥೆಯು ಅವರನ್ನು ಸಿದ್ಧಾಂತಕ್ಕೆ ಒಗ್ಗಿಸಿಬಿಟ್ಟಿರುತ್ತದೆ; ನಾಯಕನ ಬಗ್ಗೆ ಕುರುಡು ನಂಬಿಕೆ ಹುಟ್ಟಿಸಿಬಿಟ್ಟಿರುತ್ತದೆ. ಒಂದು ಹಂತದ ನಂತರ ಇಂಥ ವ್ಯವಸ್ಥೆಗಳಿಗೆ ಹಿಂಸೆ, ಭಯೋತ್ಪಾದನೆಗಳು ಕೂಡಾ ಬೇಕಾಗುವುದಿಲ್ಲ. ಆ ಪರಿಯ ವಿಧೇಯ ಹಿಂಬಾಲಕರಾಗಿ ಎಲ್ಲರೂ ಪರಿವರ್ತನೆಗೊಂಡಿರುತ್ತಾರೆ. ವಿನ್‍ಸ್ಟನ್ ಸ್ಮಿತ್‍ನ ಕಳವಳವೆಂದರೆ ಅವನ ಕೆಲಸದಿಂದಾಗಿ ಪ್ರಭುತ್ವ/ಪಕ್ಷವು ಉತ್ಪಾದನೆ ಮಾಡುತ್ತಿರುವ ಸುಳ್ಳುಗಳ ಬಗ್ಗೆ ನಿಖರವಾಗಿ ಗೊತ್ತಿದೆ. ಆದರೆ ಗೊತ್ತಿರುವ ಸತ್ಯವನ್ನು ಯಾರಿಗೆ ಹೇಳುವುದು? ನಂಬುವರು ಯಾರು? ನಾವಿರುವ ಇಂದಿನ Post-truth ಯುಗದ ಮುಖ್ಯ ಪ್ರಶ್ನೆಗಳೂ ಇವೇ ಅಲ್ಲವೆ? ಆದ್ದರಿಂದಲೇ ಅಮೇರಿಕದ ಟ್ರಂಪ್‍ನ ಅಧಿಕಾರಿಗಳು alternate facts (ಪರ್ಯಾಯ ವಾಸ್ತವಗಳು) ಎನ್ನುವ ಪದವನ್ನೇ ಸೃಷ್ಟಿಮಾಡಿದ್ದಾರೆ.

ಆರ್‍ವೆಲ್‍ನಿಗೆ ಸಿದ್ಧಾಂತಗಳು, ರಾಜಕೀಯ ಇವು ಸತತವಾಗಿ ಭಾಷೆಯನ್ನು ಬಲಿ ಹಾಕುವ ಪ್ರಯತ್ನದಲ್ಲಿರುತ್ತವೆ ಎನ್ನುವ ಸತ್ಯವು ಬಹಳ ಕಾಲದಿಂದ ಕಾಡಿತ್ತು. ಅವನ ಪ್ರಸಿದ್ಧ ಲೇಖನ “Politics and the English Language” ದಲ್ಲಿ ಅನೈತಿಕ ರಾಜಕೀಯವು ಭಾಷೆಯ ಮೇಲೆ ಹೇರುವ ಅಸ್ಪಷ್ಟತೆ, ದ್ವಂದ್ವ, ವಿರೋಧಾಭಾಸಗಳ ವಿಶ್ಲೇಷಣೆ ಇಂದಿಗೂ ಶ್ರೇಷ್ಠವಾಗಿವೆ. 1984 ರಲ್ಲಿ ವ್ಯವಸ್ಥೆಯು ಒಂದು ಹೊಸ ಭಾಷೆಯನ್ನೇ ಸೃಷ್ಟಿಸುತ್ತದೆ. ಇದರ ಹೆಸರು newspeak. ಅದನ್ನು ಮತ್ತೆ ಪರಿಷ್ಕರಣೆ ಮಾಡುತ್ತಿದ್ದಾರೆ. ಉದ್ದೇಶವೆಂದರೆ ಭಾಷೆಯಲ್ಲಿರುವ “ಅನವಶ್ಯಕ” ಪದಗಳನ್ನೆಲ್ಲಾ ತೆಗೆದು ಹಾಕಿ ಯಾವ ನಾಗರೀಕನೂ ಪ್ರತಿಭಟನೆ, ಸ್ವಂತ ಯೋಚನೆ ಮಾಡಲು ಬೇಕಾದ ಭಾಷಿಕ ಪರಿಕರವೇ ಇಲ್ಲದಂತೆ ಮಾಡುವುದು. ಕಾದಂಬರಿಯ ಕೊನೆಗೆ ಒಂದು ಅನುಬಂಧದಲ್ಲಿ ಆರ್‍ವೆಲ್ ಈ newspeakನ ಸೂತ್ರಗಳನ್ನು ವಿವರಿಸುತ್ತಾನೆ. ಅಲ್ಲದೆ ಕಾದಂಬರಿಯ ನಡುವಿನಲ್ಲಿ ನಾಯಕನಾದ ವಿನ್‍ಸ್ಟನ್‍ಗೆ ದೊರೆಯುವ ಪುಸ್ತಕದಲ್ಲಿ (ಇದು ಪಕ್ಷದ ಸಿದ್ಧಾಂತವನ್ನೂ ವಿವರಿಸುವ ಪುಸ್ತಕ ಕೂಡ) ಒಂದು ಪ್ರಶ್ನೆಗೆ ಉತ್ತರವಿದೆ. ಪ್ರಭುತ್ವಕ್ಕೆ ಬೇಕಾಗಿರುವಾದರೂ ಏನು? ಉತ್ತರವೆಂದರೆ ಏನೂ ಇಲ್ಲ, ಅಧಿಕಾರವೇ ಅಧಿಕಾರದ ಅಂತಿಮ ಗುರಿ. Power is an end in itself.. ಇದು ನನಗೆ ನಮ್ಮ ಕಾಲದ ಪ್ರಭುತ್ವಗಳ ಸರಿಯಾದ ವ್ಯಾಖ್ಯಾನವಾಗಿ ಕಂಡಿದೆ. ಅದು ಅನೇಕ ಸರ್ವಾಧಿಕಾರಿಗಳ ವ್ಯಾಖ್ಯಾನವೂ ಹೌದು. ತನ್ನ ಎಲ್ಲಾ ಸಹಭಾಗಿಗಳನ್ನು ಸಂಶಯದಿಂದ ನೋಡಿ ಅವರನ್ನು ಕೊಲ್ಲಿಸುವ ಸರ್ವಾಧಿಕಾರಿಗೆ ಅಧಿಕಾರದ ಆಚೆಗೆ ಏನಾದರೂ ಬೇಕೆ? ಸಿದ್ಧಾಂತಗಳು ಅಧಿಕಾರ ಪಡೆಯುವ ಸಾಧನ ಮಾತ್ರಗಳಾಗಿರುವುದರಿಂದ ಅವುಗಳು ಅಧಿಕಾರದ ಗುರಿಗಳಲ್ಲ, ಆರ್‍ವೆಲ್ ಅವನ ಕಾಲದ ವ್ಯವಸ್ಥೆಗಳ ಬಗ್ಗೆ ಇದನ್ನು ಅನ್ವಯಿಸಿ ನೋಡಿದ್ದ. 1984ರಲ್ಲಿ ಈ ರಾಜಕೀಯ ಸೂತ್ರದ ತಾರ್ಕಿಕ ಅಂತ್ಯವನ್ನು ನಾವು ನೋಡುತ್ತೇವೆ. ಬಿಗ್ ಬ್ರದರ್ ಯಾರು? ಅವನು ನಿಜವಾಗಿಯೂ ಇದ್ದಾನೆಯೆ? ಪಕ್ಷದ ಮಹಾವೈರಿ ಗೋಲ್ಡ್‍ಸ್ಟೆನ್ ಎಲ್ಲಿದ್ದಾನೆ? ಇದ್ದಾನೆಯೆ? ಅಧಿಕಾರದಲ್ಲಿರುವವರು ಯಾರು? ಯಾಕೆ ಸ್ಮಿತ್ ಕೆಲಸ ಮಾಡುವ ಸಚಿವಾಲಯದಲ್ಲಿ 3000 ಕೊಠಡಿಗಳಿವೆ? ಅಲ್ಲಿ ಏನು ನಡೆಯುತ್ತದೆ? ಇವುಗಳಿಗೆ ಒಂದು ಮಟ್ಟದ ಉತ್ತರಗಳಿವೆ. ಆದರೆ ಇದೊಂದು ಕ್ರೂರವಾದರೂ ಭ್ರಾಮಕವಾದ ಜಗತ್ತು.

ಇದು ಮಾತ್ರಲ್ಲ, 1984 ಕಾದಂಬರಿಯಲ್ಲಿ ಮನುಷ್ಯ ವ್ಯಕ್ತಿಗಳು ಬಯಸುವ ನಂಬಿಕೆ, ಪ್ರೀತಿ, ಗೆಳೆತನ ಇವೆಲ್ಲ ಇವೆ. ಸ್ಮಿತ್ ಹಾಗೂ ಜೂಲಿಯಾರ ಅಲ್ಪಾಯುಶಿಯಾದ ಪ್ರೀತಿಯೂ ಇದೆ. ನನ್ನ ಅನುಮಾನವೆಂದರೆ 1984 ನ ಇಂದಿನ ಓದು ಇದೆಲ್ಲವನ್ನು ಗಮನಿಸದಿರಬಹುದು. ಪರವಾಗಿಲ್ಲ. ನಮ್ಮ ಯುಗದ ಅಪಸವ್ಯಗಳ ವ್ಯಾಖ್ಯಾನವಾಗಿಯಾದರೂ ಈ ಕಾದಂಬರಿಯನ್ನು ಓದಬೇಕು.

ಹನಾ ಆರೆಂಟ್ ಒಬ್ಬ ಅಪ್ರತಿಮ ಚಿಂತಕಿ. ಅವಳ ಕೃತಿ ನನಗೆ 1984 ನ ವೈಚಾರಿಕ ಸಂಗಾತಿಯಾಗಿ ಕಂಡಿದೆ. ಅದರ ಬಗ್ಗೆ ಬರೆಯುತ್ತೇನೆ. ಮುಂದಿನ ಭಾಗದಲ್ಲಿ.

ಈ ಅಂಕಣದ ಹಿಂದಿನ ಬರೆಹಗಳು

ಅನೇಕ ಶಕುಂತಲೆಯರು

ಕ್ಯಾಲಿಬನ್‍ನ ದಶಾವತಾರಗಳು

ಪಾಶ್ಚಾತ್ಯ ಸಾಹಿತ್ಯ ಮತ್ತು ಜೆಂಡರ್‌ ನ್ಯಾಯದ ಪರಿಭಾಷೆ

ಬದುಕು-ಸಾವುಗಳ ಸಹಜ ಲಯ ತಪ್ಪಿಸುವ ಅಸಂಗತ-ಅರ್ಥಶೂನ್ಯ

MORE NEWS

ಬೇಲಿಯ ಗೂಟದ ಮೇಲೊಂದು ಚಿಟ್ಟೆಃ ಅನುದಿನದ ದಂದುಗದೊಂದಿಗೆ ಅನುಸಂಧಾನ

31-12-1899 ಬೆಂಗಳೂರು

"ಲೋಕದ ವಾಸ್ತವವಗಳ ಮುಖವಾಡಗಳೊಂದಿಗೆ ಮುಖಾಮುಖಿಯಾಗುವ ಇವರ ಕವಿತೆಗಳು ದೈನಂದಿನ ಬದುಕಿನ ವಿನ್ಯಾಸವನ್ನೇ ಕಾವ್ಯವನ್ನ...

ಚಕ್ರಾಸನ ಮತ್ತು ಭುಜಂಗಾಸನ

26-03-2024 ಬೆಂಗಳೂರು

"ವ್ಯಕ್ತಿಯು ‘ಚಕ್ರಾಸನ’ ಮಾಡುವಾಗ ಮೊದಲು ಬೆನ್ನಿನ ಮೇಲೆ ಮಲಗಬೇಕು. ಇದು ವ್ಯಕ್ತಿಯನ್ನು ಶಕ್ತಿಯುತವ...

ಹಿಂದಿನ ನಿಲ್ದಾಣದಲ್ಲಿ...

19-03-2024 ಬೆಂಗಳೂರು

'ಪ್ರಯಾಣದ ಭಾಗವಾಗಿ ನಮ್ಮೊಂದಿಗಿದ್ದು ನೆನಪುಗಳ ಬುತ್ತಿ ಕಟ್ಟಿಕೊಡುವ ಈ "ಹಿಂದಿನ ನಿಲ್ದಾಣಗಳೇ" ಬದುಕಲು...