ನಮ್ಮ ಬದುಕಿನ ನಿಜ ನೆಂಟರು..

Date: 20-09-2022

Location: ಬೆಂಗಳೂರು


ಸದಾ ಹರಿದಾಡುವ ಬದುಕಿನ ಬಂಡಿಯಲ್ಲಿ ಅವರು ಇವರು ಎಲ್ಲರೂ ಒಬ್ಬರಿಗೊಬ್ಬರು ಆಸರೆಗೆ ಆಗದೆ ಬೇಸರಕೆ ಮರುಗದೆ ಉಸುರಾಡಲಾದೀತೆ? ಈಗಲೂ ಈ ನನ್ನ ’ನಾಡು' ಸಹೃದಯತೆಯ ಸೌಹಾರ್ದದ ಬೀಡು.. ಬೆಳಗಾದರೆ ನಮ್ಮ ಕನ್ನಡಿಯೊಳಗೆ ತರಹೇವಾರಿ ಮುಖಗಳು ಬಣ್ಣಗಳು ಹಸಿರ ಹೊನ್ನಾಡುಗಳು ದೇವರಗುಡಿಗಳು ಮಸೀದಿಗಳು ತೇರುಗಳು ಜಾತ್ರೆಗಳು ಮಾತುಕತೆಗಳು ಕೂಗು-ಕೇಕೆ-ಹಾಡುಗಳು.. ಒಟ್ಟೂ `ಒಟ್ಟಂದದ ಬಂಧಗಳು' ಕಾಣಸಿಗುತ್ತಿರುವುದು `ಪುರದ ಪುಣ್ಯ'ವೇ ಹೌದು ಎನ್ನುತ್ತಾರೆ ಕವಿ ವಿಜಯಕಾಂತ ಪಾಟೀಲ. ಅವರು ತಮ್ಮ ಹಸಿರು ಬಂಡಿ ಅಂಕಣದಲ್ಲಿ ಸೌಹಾರ್ದ, ಸಾಮರಸ್ಯದ ಮಧುರತೆಯನ್ನು ಚಿತ್ರಿಸಿದ್ದಾರೆ.

ಅರೆಮಲೆನಾಡಾದ ನನ್ನೂರು ಕ್ಯಾಸನೂರು ಹರಿಹರ-ಶಿರಸಿ ರಾಜ್ಯ ಹೆದ್ದಾರಿಗೆ ಹತ್ತಿಕೊಂಡೇ ಇದೆ. ನಮ್ಮ ಹಾನಗಲ್ಲ ತಾಲೂಕಿನ ಗಡಿಹಳ್ಳಿಯೇ ನನ್ನದು. ಸೊರಬ ತಾಲೂಕಿನ ಶಕುನವಳ್ಳಿ, ಬಿಳಗಲಿ, ಶಂಕ್ರಿಕೊಪ್ಪ, ಸಾಬಾರ, ಆರೆತಲಗಡ್ಡಿ, ಬಂಕವಳ್ಳಿ, ಸೂರಣಗಿ ಇತ್ಯಾದಿ ಹಳ್ಳಿಗಳು; ಶಿರಸಿ ತಾಲೂಕಿನ ಸಂತವಳ್ಳಿ, ಕಾಳಂಗಿ, ದಾಸನಕೊಪ್ಪ ಇತ್ಯಾದಿ ಗ್ರಾಮೀಣ ಪ್ರದೇಶಗಳು.. ನಮ್ಮೂರಿನಿಂದ ಒಂದೆರಡು ಮೈಲಿ ದೂರದಷ್ಟೇ ಅಂತರದಲ್ಲಿವೆ. ನಮ್ಮ ಊರು ಸೇರಿದಂತೆ ಈ ಸೊರಬ-ಹಾನಗಲ್-ಶಿರಸಿ ತಾಲೂಕುಗಳ ಸರಿಸುಮಾರು ಇಪ್ಪತ್ತಾರೆಂಟು ಹಳ್ಳಿಗಳಿಗೆ ನಮ್ಮ ಊರಂತೆಯೇ ಇರುವ `ಚಿಕ್ಕಾಂಶಿ-ಹೊಸೂರು @ ಸಂತೆ ಹೊಸೂರು' ಕೇಂದ್ರಸ್ಥಾನ ಅರ್ಥಾತ್ ದಿನನಿತ್ಯದ ಅಗತ್ಯಗಳಿಗೆ ಅನಿವಾರ್ಯವಾಗಿರುವ ಪುಟ್ಟ ಪಟ್ಟಣ. ಗ್ರಾಮ ಪಂಚಾಯತಿ, ಕಾಲೇಜು, ದವಾಖಾನೆ, ಬ್ಯಾಂಕು, ಅಂಚೆಕಚೇರಿ, ಅಂಗಡಿ ಮುಂಗಟ್ಟುಗಳು, ವೈನ್ ಶಾಪ್ ಎಲ್ಲವೂ ಇವೆ. ಏಳೆಂಟು ದಶಕಗಳಿಂದಲೂ ಭತ್ತದ ವ್ಯಾಪಾರದಲ್ಲಿ ಮನೆಮಾತಾದ ಊರು. ಭತ್ತ-ಗೋವಿನಜೋಳದ ಬೆಳೆ ಅಲ್ಲಲ್ಲಿ ಕಂಡರೂ ಅದು ತೋಟ ಮಾಡಲು ಶಕ್ತರಲ್ಲದ ಕೆಲವೇ ರೈತರ ಪಾಡು ಮತ್ತು ಪಾಲು. ಈ ಭಾಗದಲ್ಲಿದ್ದ ಅಸಂಖ್ಯಾತ ರೈಸ್ ಮಿಲ್ಲುಗಳು ಈಗ ಭತ್ತ ಬೆಳೆವವರ ಚಿಂತಾಜನಕ ಪರಿಸ್ಥಿತಿಯಿಂದಾಗಿ ಬಹುತೇಕ ಮಾಯವಾಗಿವೆ. ಭತ್ತದ ಗದ್ದೆಗಳ ಜಾಗದಲ್ಲಿ ಮಾವು-ಅಡಕೆ ತೋಟಗಳು ಈಗೀಗ ತುಸು ಹೆಚ್ಚೇ ಅನ್ನುವಷ್ಟು ಮನೆ ಮಾಡಿಕೊಂಡಿವೆ. ಒಟ್ಟಲ್ಲಿ ಈ ಭಾಗದ ರೈತರ ಬದುಕು ಹೀನಾಯದಿಂದ ಮಾನಮುಚ್ಚಿಕೊಳ್ಳುವಷ್ಟರ ಮಟ್ಟಿಗೆ ಸುಧಾರಣೆ ಕಂಡಿದೆ. ಇಷ್ಟೆಲ್ಲ ಇದ್ದ ಮೇಲೆ, ಯಾವುದೇ ಒಂದು ಕುಲ-ಒಂದು ನೆಲೆಯ ಜನಸಮುದಾಯ ಇಲ್ಲಿ ಇರಲಾದೀತೆ? ಸದಾ ಹರಿದಾಡುವ ಬದುಕಿನ ಬಂಡಿಯಲ್ಲಿ ಅವರು ಇವರು ಎಲ್ಲರೂ ಒಬ್ಬರಿಗೊಬ್ಬರು ಆಸರೆಗೆ ಆಗದೆ ಬೇಸರಕೆ ಮರುಗದೆ ಉಸುರಾಡಲಾದೀತೆ? ಈಗಲೂ ಈ ನನ್ನ ’ನಾಡು' ಸಹೃದಯತೆಯ ಸೌಹಾರ್ದದ ಬೀಡು.. ಬೆಳಗಾದರೆ ನಮ್ಮ ಕನ್ನಡಿಯೊಳಗೆ ತರಹೇವಾರಿ ಮುಖಗಳು ಬಣ್ಣಗಳು ಹಸಿರ ಹೊನ್ನಾಡುಗಳು ದೇವರಗುಡಿಗಳು ಮಸೀದಿಗಳು ತೇರುಗಳು ಜಾತ್ರೆಗಳು ಮಾತುಕತೆಗಳು ಕೂಗು-ಕೇಕೆ-ಹಾಡುಗಳು.. ಒಟ್ಟೂ `ಒಟ್ಟಂದದ ಬಂಧಗಳು' ಕಾಣಸಿಗುತ್ತಿರುವುದು `ಪುರದ ಪುಣ್ಯ'ವೇ ಹೌದು.

*
ಈ ಹೊತ್ತಿನ ನಮ್ಮ ಕನ್ನಡನಾಡು (ದೇಶವಂತೂ ಬಿಡಿ, ’ಮಂಕುಬೂದಿ'ಯ ಘಾಟಿಗೆ ಸಾಕಷ್ಟು ಉಸಿರಾಟದ ತೊಂದರೆಗೊಳಗಾಗಿದೆ; ಭ್ರಮೆಯ ರೋಗವೂ ಸಾರ್ವತ್ರಿಕವಾಗುತ್ತಿದೆ!) ’ಸರ್ವಜನಾಂಗದ ಶಾಂತಿಯ ತೋಟ..!' ಎಂಬ ಹಾಡು ಮತ್ತು ಬಹುಜನಜನಿತ ತತ್ವಕ್ಕೆ ತಿಲಾಂಜಲಿ ಇಡುವ ಹಂತಕ್ಕೆ ಬಂದು ಮುಟ್ಟಿದ್ದು ನಿತ್ಯಸತ್ಯವಾಗುತ್ತಿದೆ. ’ನಾವು ನಾವೇ ಹೌದೇ, ನಮ್ಮ ಮನಸ್ಸು ಹರಿದಾಡುವ ಪರಿಯು ನಮ್ಮದೇ ಹೌದೇ..!' ಅಂತಾ ತಡಕಾಡಿ ಮುಟ್ಟಿಕೊಂಡು ನೋಡುವಂಥಾದ್ದು ಮಾತ್ರ ಭ್ರಮೆಯಾಗಿಲ್ಲ. ಈಗೀಚೆಯಂತೂ ಪರಧರ್ಮಸಹಿಷ್ಣುತೆ ಮಟಾಮಾಯವಾಗಿದೆ. ಜಾತ್ಯಾತೀತ ಅನ್ನುವ ಪದವೂ ನಗೆಪಾಟಲಿಗೀಡಾಗಿದೆ. `ಬುದ್ಧ ಬಸವ ಗಾಂಧಿ ಅಂಬೇಡ್ಕರ..' ಅನ್ನುವ ನಮ್ಮಂಥ ಕೆಲವೇ ಕೆಲವರ ಹೃದಯದ ಮಾತನ್ನು ಲೇವಡಿ ಮಾಡಲಾಗುತ್ತಿದೆ. `ನನ್ನದು ಬಸವಧರ್ಮ ಯಾ ಸಂವಿಧಾನಧರ್ಮ' ಎಂದು ನಾವು ಮುಖಪುಸ್ತಕದಲ್ಲಿ ಸ್ಟೇಟಸ್ ಹಾಕಿದರೆ ಐದಾರು ಲೈಕೂ ಬೀಳುವುದಿಲ್ಲ! ಹಾಗೆಯೇ, ನಮ್ಮ ಚಿಂತನೆಗೆ ಹಚ್ಚುವ ಮತ್ತು ಪ್ರಭುತ್ವದ ಹುಳುಕು ಎತ್ತಿಹಿಡಿದು ಬರೆದ ಕವಿತೆ/ಬರಹಕ್ಕೂ ಇದೇ ಗತಿ.. ಖಾರವಾಗಿ ಬರೆದರೂ ನಮ್ಮ ಹೆಸರು `ಆ ಅವರ ಲೀಸ್ಟ್'ನಲ್ಲಿ ಫಿಕ್ಸ್ ಆಗುವ ಮಟ್ಟಕ್ಕೆ ನಮ್ಮಗಳ ಅಭಿವ್ಯಕ್ತಿ ಸ್ವಾತಂತ್ರ್ಯದ ವಧೆ ನಡೆಯುತ್ತಿದೆ. ನಮ್ಮ ಹಿರಿಯರು ಮತ್ತು ಅಲ್ಪಸ್ವಲ್ಪ ನಾವೂ ಕಂಡ ಹಳೆಯ ಸಾಮರಸ್ಯದ ಜಗತ್ತು, ಸಮರಸದ ಮಾತುಕತೆ ಒಡನಾಟಗಳು ಕಾವಿ ಮತ್ತು ಜಾತಿವಾದಿ/ಕೋಮುವಾದಿಗಳ ನೇರ ಕೈವಾಡದಿಂದಾಗಿ ಎಕ್ಕುಟ್ಟಿ ಹೋಗುತ್ತಿವೆ. ಈ ಮೊಬೈಲ್ ಮತ್ತು ಅಂತರ್ಜಾಲದ ಮಹಿಮೆಯೂ ಸೇರಿದಂತೆ ಸಾಮಾಜಿಕ ಜಾಲತಾಣಗಳ ಮುಕ್ತ ಬಳಕೆಯಿಂದಾಗಿ ಅನುಮಾನ-ಈರ್ಷೇ-ದ್ವೇಷಮನೋಭವವು ತೀವ್ರತರವಾಗಿ ತನ್ನತನವನ್ನು ನಮ್ಮ ಹಳ್ಳಿಗಳಲ್ಲೂ ಪಸರಿಸಿದೆ. ಫೇಕ್ ಮೆಸೇಜ್/ ಸೃಷ್ಟಿಸಲ್ಪಟ್ಟ ಕಟ್ಟುಕತೆಯ ವಿಡಿಯೋ ಆಡಿಯೋಗಳು ಗಾಂಧಿಯನ್ನು ದೇಶಭ್ರಷ್ಟ ಪಟ್ಟಕ್ಕೆ ಏರಿಸಿವೆ. ಗೋಡ್ಸೆಯನ್ನು ಮನೆದೇವರನ್ನಾಗಿಸುವ ಕಾರ್ಯತಂತ್ರವೂ ಬಹುತೇಕವಾಗಿ ಯಶಸ್ಸು ಕಾಣುತ್ತಲಿದೆ. ಮಹಾಮಹಿಮರು ದಾರ್ಶನಿಕರು ಕವಿ ಸಂತ ಕೀರ್ತನಕಾರರು ಶರಣರು ನಿಜಯೋಗಿಗಳನ್ನು ಅರಿಯಲಾರದಂತೆ `ತಡೆ' ಒಡ್ಡುವ ಅನಧಿಕೃತ ಶಿಕ್ಷಣ ಎಲ್ಲ ಕಡೆಯೂ ಪುಕ್ಸಟ್ಟೆಯಾಗಿ ಲಭ್ಯವಾಗುತ್ತಿದೆ. ಇದಕ್ಕೆ ನಮ್ಮ ಘನ ಆಡಳಿತ ಸಹಮತಿ ಸೂಚಿಸುವಂತೆಯೇ ವರ್ತಿಸುತ್ತಿದೆ. ಏನನ್ನು ಈ ನೆಲದ ಸಿದ್ಧಾಂತ ನಿರಾಕರಿಸುತ್ತ ಬಂದಿತ್ತೋ, ಯಾವುದು ಈ ನೆಲದ ತತ್ವಕ್ಕೆ ಹೊದುವುದಿಲ್ಲವೋ `ಅದು' ಪಟ್ಟು ಹಿಡಿದು ಪಟ್ಟಾಭಿಷೇಕ ಮಾಡಿಸಿಕೊಳ್ಳುತ್ತಿದೆ. ಶಿಕ್ಷಕ ಮತ್ತು ವಿದ್ಯಾರ್ಥಿ ನಡುವಣ ಸಂಬಂಧ ಹಳಸಿಹೋದಂತೆಯೇ, ಶಿಕ್ಷಕ ತನ್ನ ನೈತಿಕ ನಿಲುವುಗಳಿಗೆ ಎರವಾಗಿದ್ದರ ಪರಿಣಾಮವಾಗಿ ವಿದ್ಯಾರ್ಥಿಗಳೂ ’ಜಾತಿ/ಕೋಮು ಪ್ರತಿಪಾದಕ'ರಾಗುತ್ತಿದ್ದಾರೆ. ಈ ಹಂತದಲ್ಲಿ ನಮ್ಮ `ಸೌಹಾರ್ಧ ಕರ್ನಾಟಕ'ವು ಕನಸಿನ ಮಾತಾದೀತೇ ಎಂಬ ಅನುಮಾನದ ನಡುವೆ ನಾವು ನೀವೆಲ್ಲ ಈ `ಸೌಹಾರ್ಧ ಕನ್ನಡಗುಡಿ'ಯನ್ನು ಭೂತಗನ್ನಡಿ ಹಿಡಿದು ನೋಡುವಂತಾಗಿದೆ. ಹಾಗೆ ನೋಡಿಯೂ ಕಾಣಸಿಗುವ ಭೂತ ಮತ್ತು ವರ್ತಮಾನದ ಕೆಲವು ವ್ಯಕ್ತಿ-ಸಂಗತಿ-ಜೀವಂತ ಸಾಕ್ಷಿಗಳು ನಮ್ಮ ಭವಿಷ್ಯತ್ತಿನ ನಾಡಿನ ಬಗೆಗೆ ಅಷ್ಟಿಷ್ಟಾದರೂ ಆಶಾಕಿರಣದಂತೆ ಗೋಚರಿಸುತ್ತಿರುವುದು ತಕ್ಕಮಟ್ಟಿಗಿನ ನಮ್ಮ ಸಮಾಧಾನಕ್ಕೂ ಕಾರಣವಾಗಿದ್ದೂ ಖರೆ. ಈ ದಿಸೆಯಲ್ಲಿ ಬಾಲ್ಯದಿಂದ ಈತನಕವೂ ನಾ ಕಂಡುಕೊಂಡ ಸೌಹಾರ್ಧ ಬದುಕಿನ ಮತ್ತು ಗೆಳೆತನವೆಂಬ ಸುವಿಶಾಲ ಆಲದಡಿಯ ತಂಪಿನ ಕೆಲವು ಮಧುರ ಕ್ಷಣಗಳನ್ನು ತುಣುಕು ತುಣುಕಾಗಿಯಾದರೂ ನಾ ಇಲ್ಲಿ ಹಂಚಿಕೊಳ್ಳಲೇಬೇಕಾಗಿದೆ.

*
ಅಂದ ಹಾಗೆ, ನನ್ನ ಬಾಲ್ಯದಿಂದಲೇ ನಾನು ಮತ್ತು ನನ್ನ ಮನೆತನ ಪಾಲಿಸಿಕೊಂಡು ಉಳಿಸಿಕೊಂಡು ಬಂದ ಸಮರಸಜೀವನ ಸಿದ್ಧಾಂತದ ಬಗೆಗೆ ಮೊದಲು ಹೇಳಬೇಕಿದೆ. ಇದು ಸ್ವಯಂಘೋಷಿತ ಬೆನ್ನುತಟ್ಟಿಕೊಳ್ಳುವಿಕೆ ಅಂತಾ ಕೆಲವರು ಭಾವಿಸಿದರೆ ಅದನ್ನೂ ನಸುನಕ್ಕು ಸ್ವಾಗತಿಸುತ್ತೇನೆ..! ಒಂದುಸಾವಿರ ಚಿಲ್ಲರೆ ಜನಸಂಖ್ಯೆ ಪ್ಲಸ್ ಎಂಟನೂರು ಓಟುಗಳಿರುವ ನನ್ನೂರಲ್ಲಿ ಮುಸಲ್ಮಾನ ಮತ್ತು ಬ್ರಾಹ್ಮಣ ಸಮುದಾಯದ ಒಬ್ಬರೂ ಇಲ್ಲ. ಹರಿಜನರು, ತೆಲುಗು ಭಾಷಿಕ ಮಣ್ಣುವಡ್ಡರು, ಊರುವಡ್ಡರು, ಜಾಡರು(ಗಂಗಾಮತ), ಮಲೆನಾಡ ಲಿಂಗಾಯತ(ಮಲೆ)ಗೌಡರು, ಜಂಗಮರು, ಲಿಂಗಾಯತ ಒಳಪಂಗಡದ ಪಂಚಮಸಾಲಿ-ಸಾದರು ಕೆಲವರು, ಹತ್ತರ ಗಡಿದಾಟದ ಮರಾಠರು.. ಇಷ್ಟೇ ನಮ್ಮೂರ ವ್ಯಾಪ್ತಿ ಪ್ರದೇಶದಲ್ಲಿ ಇರುವವರು. ಇನ್ನು ನಮ್ಮೂರಿಗೇ ಅಂಟಿಕೊಂಡಿರುವ `ಚಿಕ್ಕಾಂಶಿ-ಹೊಸೂರು' ಪಟ್ಟಣದಲ್ಲಿ ಮುಸಲ್ಮಾನರೂ ಸೇರಿದಂತೆ ಬಹುತೇಕ ಎಲ್ಲ ಜಾತಿಜನಾಂಗದ ಜನರಿದ್ದಾರೆ. ಪಕ್ಕದ ಬಿಳಗಲಿ, ಶಿರಗೋಡ, ಹಿರೇಕಾಂಶಿ, ಶಕುನವಳ್ಳಿ, ತಲಗಡ್ಡೆಗಳಲ್ಲಿಯೂ ಮುಸಲ್ಮಾನ `ಬಾಂಧವರೇ' ಇದ್ದಾರೆ. ಈ ಭಾಗದಲ್ಲಿ ಬ್ರಾಹ್ಮಣರ ಸಂಖ್ಯೆ ತೀರಾ ಅನ್ನುವಷ್ಟು ಕಮ್ಮಿ ಇದೆ. ಇಲ್ಲಿ ಎಂದಿನಿಂದ ಇಂದಿನವರೆಗೂ ಸೌಹಾರ್ದತೆಯನ್ನು ಕದಡುವ ಒಂದು ಘಟನೆಯೂ ನಡೆದಿಲ್ಲ. ವ್ಯಾಪಾರ ವಹಿವಾಟು, ಹಬ್ಬಹರದಿನಗಳು, ಉರುಸುಗಳು, ತೇರು-ಜಾತ್ರೆಗಳು, ಸಂತೆ, ಮದುವೆ ಮುಂಜೆಗಳು ಎಲ್ಲವೂ ಎಲ್ಲರನ್ನೊಳಗೊಂಡೇ ನೆರವೇರುತ್ತವೆ. ಬಹುತೇಕ ದೊಡ್ಡಜಾತಿಯವರ ಮನೆಯ ಒಳಗೂ ಮುಕ್ತ ಪ್ರವೇಶ ಉಂಟು; ಊಟೋಪಚಾರವೂ..! ನಮ್ಮೂರ ನಡುವೆ ವೀರಭದ್ರೇಶ್ವ ದೇವಸ್ಥಾನವಿದೆ. ಗಣಪತಿ, ಹನುಮಂತ, ಕುಮಾರಪ್ಪ, ಈಶ್ವರ ದೇವಸ್ಥಾನಗಳಿವೆ. ಕೆಲ ಸಮುದಾಯದವರು ಪೂಜಿಸುವ ಸಿಬಾರಕಟ್ಟೆ ಇದೆ. ಈ ಎಲ್ಲ ದೇಗುಲಗಳೂ ಸಕಲಕುಲಭಕ್ತರಿಗೂ ಮುಕ್ತವಾಗಿವೆ. ಇದು ಬಹುತೇಕ ನಮ್ಮ ನಾಡಿನ ಹಲವು ಹಳ್ಳಿಗಾಡಿನ ಸರ್ವೇಸಾಮಾನ್ಯ ಚಿತ್ರಣವಾಗಿದ್ದಾಗ್ಯೂ, ಈಗೀಚೆಯ ಮಾರಕಗಾಳಿಯ ಬೀಸುವಿಕೆಗೆ ಕೆಲವು ಹಳ್ಳಿಗಳೂ ತುತ್ತಾಗಿದ್ದನ್ನು ಕಾಣುತ್ತಿದ್ದೇವೆ.

*
ನಾನು ನಮ್ಮೂರಲ್ಲಿಯೇ ಏಳನೆಯ ತರಗತಿಯವರೆಗೂ ಓದಿದೆ. ಆಗ ಶಾಲೆಗೆ ಬರುವವರು ಹೆಚ್ಚಾಗಿ ಗೌಡರು, ಲಿಂಗಾಯತರ ಮಕ್ಕಳೇ. ಅಲ್ಲೊಬ್ಬ ಇಲ್ಲೊಬ್ಬರು ಒಡ್ಡರ, ಜಾಡರ, ಹರಿಜನರ ಮಕ್ಕಳು ಶಾಲೆಗೆ ಬಂದರೂ ಬಹುವಾಗಿ ಗೈರಾಗುತ್ತಿದ್ದುದೇ ಹೆಚ್ಚು. ಆ ಹೊತ್ತಿನಲ್ಲಿ ನಮ್ಮದೊಂದು ಚಿಕ್ಕ ಕಿರಾಣಿ ಅಂಗಡಿ ಇತ್ತು. ಆಗ ನಾವು ವ್ಯಾಪಾರ ಇಟ್ಟುಕೊಳ್ಳಲು ಉಳಿದ ಗೌಡರಷ್ಟು ಜಮೀನು ನಮಗಿಲ್ಲದಿದ್ದುದೇ ಸಕಾರಣವೂ ಆಗಿತ್ತು. ಮುಂದೆ ಅದೇ ನಮ್ಮ ಕೈಹಿಡಿದು ಬಣಜಿಗರಿಗೆ ಮೀಸಲಾದ ಕಿರಾಣ -ಭತ್ತದ ವ್ಯಾಪಾರವೂ ನಮಗೊಲಿಯಿತು. ಅದೇ ನಮ್ಮ ಸಂತೆಹೊಸೂರಲ್ಲಿ ಕ್ರಮೇಣ ನಾವು ದೊಡ್ಡ ಪ್ರಮಾಣದಲ್ಲಿ ವ್ಯಾಪಾರ ವಹಿವಾಟು ಮಾಡುತ್ತ, ರೈಸ್ ಮಿಲ್ಲು ಕೂಡ ಮಾಡಿದೆವು. ಕೃಷಿ ಸಂಬಂಧೀ ಗೊಬ್ಬರದಂಗಡಿಯನ್ನೂ ತೆರೆದೆವು. ಆ ಮುಖೇನ ತೋಟಗಾರಿಕೆಗೆ ಬಂಡವಾಳ ಲಭಿಸಿ ಅಡಕೆ-ಬಾಳೆ-ಮಾವು ಬೆಳೆಯಲ್ಲಿ ತೃಪ್ತಿಕರ ಆದಾಯವನ್ನು ಈಗಲೂ ಪಡೆದುಕೊಳ್ಲುತ್ತಿದ್ದೇವೆ. ಅವಿಭಕ್ತ ಪರಂಪರೆಯಿಂದ ಈಗ `ಬಿಡಿಬಿಡಿ'ಯಾಗಿದ್ದರೂ..! ಇರಲಿ. ಸ್ವಲ್ಪ ಹಿಂದಕ್ಕೆ ಹೋಗಿ ಹೇಳುವುದಾದರೆ, ನಮ್ಮೂರಲ್ಲಿ ಚಿಕ್ಕ ಕಿರಾಣಿ ಅಂಗಡಿಯಿದ್ದಾಗ ನಮ್ಮಪ್ಪ ರಾಜಕಾರಣದಲ್ಲಿ ಸಕ್ರಿಯರಾಗಿರುತ್ತಿದ್ದರು. ಬೆಂಗಳೂರು-ಧರವಾಡ ಅಂತಾ ಬಹಳಷ್ಟು ಓಡಾಟ ಮಾಡುತ್ತಿದ್ದರು. ನಮ್ಮ ಗ್ರಾಮಪಂಚಾಯತಿಯ ಅಧ್ಯಕ್ಷರೂ ಆಗಿ ಜನತಾಪಕ್ಷದ ತಾಲೂಕು ಮಟ್ಟದ ಲೀಡರೂ ಆಗಿದ್ದರು. ಆಗ ಅವರೊಂದು ಹೊಸ ಬಿಜಿನೆಸ್‍ನ್ನು ನಮ್ಮ ಹಳ್ಳಿಯಲ್ಲಿಯೇ ಮಾಡಲು ತೀರ್ಮಾನ ಮಾಡಿದರು. ಪುಟ್ಟ ಹಿಟ್ಟಿನ ಗಿರಣಿ ಜೊತೆಗೆ ಮಂಡಕ್ಕಿ ಭಟ್ಟಿ ಮತ್ತು ಅವಲಕ್ಕಿ ಮಷೀನ್ ಮೂಲಕ ನಮ್ಮ ಆರ್ಥಿಕ ಶಕ್ತಿ ಹೆಚ್ಚು ಮಾಡಿಕೊಳ್ಳಲು ಶುರುವಿಟ್ಟುಕೊಂಡರು. ಸಾಬರೇ ಇಲ್ಲದ ಊರಲ್ಲಿ ಸಾಬರನ್ನು ಮನೆ ಮಾಡಿಕೊಟ್ಟು ತಂದಿಟ್ಟುಕೊಂಡರು. ಈ ಅವಲಕ್ಕಿ ಮತ್ತು ಮಂಡಕ್ಕಿ ತಯಾರಿಕೆಯಲ್ಲಿ ಯಾವಾಗಿನಿಂದಲೂ ಸಾಬರೇ ಸಿದ್ಧಹಸ್ತ ಕುಶಲಕರ್ಮಿಗಳಲ್ಲವೇ? ನಮ್ಮ ತಾಲೂಕಲ್ಲಂತೂ ಈ ವ್ಯವಹಾರವು ಮುಸಲ್ಮಾನರ ಪಾರುಪತ್ಯದಲ್ಲಿಯೇ ಇದ್ದವು. ಅಂತೂ ಈ ದಂಧೆಯೂ ಆರಂಭವಾಗಿ ಕೆಲ ವರ್ಷಗಳ ಕಾಲ ನಿರಾತಂಕವಾಗಿ ನಡೆಯಿತು. ಲಾಭದಂತೆ ನಷ್ಟವೂ ಆಯಿತು. ಈ ಸಂದರ್ಭದಲ್ಲಿ ನಮ್ಮೂರಲ್ಲಿ ಕೆಲ ಆಗದ ದೊಡ್ಡಜನ `ಈ ಬಿ.ಜಿ.ಪಾಟೀಲ ಸಾಬ್ರನ್ನು ಊರಿಗೆ ತಂದಿಟ್ಟು ಊರನ್ನೇ ಹೊಲಸು ಮಾಡುತ್ತಿದ್ದಾನೆ.. ಸಾಬರ ಕೆಲ್ಸಾನ ಈ ಗೌಡ ನಿಭಾಯಿಸಾಕಾಗಲ್ಲ.. ದಿವಾಳಿ ಆಗೋದು ಪಕ್ಕಾ..!' ಅಂತಾ ಮಾತಾಡಿ ಈ ದಿಶೆಯಲ್ಲಿ ಸಾಬರನ್ನು ಓಡಿಸಲು ಅಂಥವರು ಹಲವು ವಿಘ್ನಗಳನ್ನು ತಂದಿಟ್ಟರು. ನನ್ನಪ್ಪನಿಗೆ ಕಿರುಕುಳ ಕೊಟ್ಟರು. ಆದರೆ, ಇದ್ಯಾವುದಕ್ಕೂ ಸೊಪ್ಪು ಹಾಕದ ಅಪ್ಪಯ್ಯ ಬಹುಕಾಲ ಈ ವ್ಯಾಪಾರ ಮಾಡಿದರು. ನಮ್ಮ ಒಬ್ಬ ಕಾಕಾ ಸಾಬರಷ್ಟೇ ನಿಷ್ಠೆಯಿಂದ ಹಗಲು ರಾತ್ರಿಯೆನ್ನದೇ ಆ ಕಾರ್ಯದಲ್ಲಿ ತಲ್ಲೀನರಾಗಿರುತ್ತಿದ್ದರು. ನಾವೆಲ್ಲ ಆಗ ಚಿಕ್ಕ ಹುಡುಗರು. ನಮ್ಮ ಅಂಗಡಿಯ ಮುಂದೆಯೇ ಇರುವ ಆ ಸಾಬರ ಮನೆಗಳು ನಮ್ಮ ಮನೆಯೇ ಆಗಿದ್ದವು. ನಮ್ಮ ಮನೆಯವರೂ ಅವರನ್ನು ಪರರಂತೆ ಎಂದೂ ಕಾಣಲಿಲ್ಲ. ಅಂಥ ಸಾಮರಸ್ಯ ವಿಶೇಷವಾಗಿ ನಮ್ಮ ಬೇರಿಗೆ ಹತ್ತಿಕೊಂಡ ದಾಯಾದಿಗಳೆಲ್ಲರ ಮನೆಯಲ್ಲಿ ಈಗಲೂ ಮುಂದುವರೆದಿದೆ. ಮುಂದೆ, ನಮ್ಮ ಲಾರಿಗಳಲ್ಲಿ, ರೈಸ್ ಮಿಲ್ಲಿನಲ್ಲಿ ಮುಸಲ್ಮಾನರು ನಮ್ಮ ಮನೆಯವರಷ್ಟೇ ಜವಾಬ್ದಾರಿಯಿಂದ ವರ್ತಿಸಿದರು. ದುಡಿದರು. ಬೆವರು ಬಸಿದರು. ಶ್ರಮಸಂಸ್ಕೃತಿಯ ಪಕ್ಕಾ ಪ್ರತಿಪಾದಕರಾದರು. ಆ ಎಲ್ಲ ಬಿಜಿನೆಸ್‍ಗಳಿಂದ ನಾವೀಗ ದೂರವಾಗಿ ಕಿರಾಣಿ ಅಂಗಡಿ ಮತ್ತು ಗೊಬ್ಬರದ ಅಂಗಡಿಗಳನ್ನು ಮಾತ್ರ ಇಟ್ಟುಕೊಂಡಿದ್ದರೂ ಮನುಷ್ಯಸಂಬಂಧಕ್ಕಿಂತಲೂ ಮಿಗಿಲಾಗಿ ನಮ್ಮ ಕುಟುಂಬದ ಸದಸ್ಯರಂತೆ ಇನ್ನೂ ಅಂಥವರು ನಮ್ಮ ಅಡಕೆ/ಮಾವು/ಬಾಳೆಗಳ ವ್ಯವಹಾರ ಸಂಬಂಧವಾಗಿ ನಮ್ಮೊಂದಿಗೆ ಸಲುಗೆಯಿಂದಲೇ ಪೂರಕವಾಗಿಯೇ ಇದ್ದಾರೆ. ಈ ಹೊತ್ತಿಗೂ ನಮ್ಮ ಅಡಕೆ/ ಮಾವು ಬೆಳೆಗಳು ಅವರಿಗೇ ಮೀಸಲು. ಅಷ್ಟೊಂದು ನಿಯತ್ತಿನಿಂದ ವ್ಯವಹಾರ ಧರ್ಮವನ್ನು ಬಹುವರ್ಷಗಳಿಂದ ಕಾಯ್ದುಕೊಂಡು ಬಂದಿದ್ದಾರೆ. `ಯಾರನ್ನು ನಂಬಿದರೂ ಮುಸಲ್ಮಾನರನ್ನು ನಂಬಬೇಡಿ; ಅವರು ನಡುನೀರಲ್ಲಿ ಮುಳುಗಿಸಿ ಕುತ್ತಿಗೆ ಕೊಯ್ಯುತ್ತಾರೆ..!' ಅಂಬುವ ಕಪೋಲಕಲ್ಪಿತ, ಜಾತಿನಿಷ್ಠರ ಹುಸಿ ಜನಜನಿತ ವಾಡಿಕೆಯ ಮಾತನ್ನು ನಮಗೆ ನಂಬಲು ಈಕ್ಷಣಕ್ಕೂ ಸಾಕ್ಷ್ಯಾಧಾರಗಳು ಲಭಿಸಿಲ್ಲ. `ಅವರು ಖಂಡಿತ ಹಾಗಿಲ್ಲ; ಹಾಗೆಂದು ಹುಸಿ ಹಬ್ಬಿಸುವವರೇ ಅಂಥವರು!' ಎಂಬುದು ಕಂಡುಂಡ ಹತ್ತಾರು ವಿದ್ಯಮಾನಗಳಿಂದ ನಮಗೆ ಮನವರಿಕೆಯಾಗಿದೆ. ವೈಯಕ್ತಿಕವಾಗಿ ನನ್ನ ಜೊತೆಗಂತೂ ಮುಸಲ್ಮಾನರ ಬಾಂಧವ್ಯ ನಿಜಕ್ಕೂ ಮತ್ತೊಬ್ಬರ ಹುಬ್ಬೇರುವಂತೆ ಮಾಡಿದ್ದೂ ಸುಳ್ಳಲ್ಲ. ಕೆಲವು ಅಕ್ಕಪಕ್ಕದ ಹಳ್ಳಿಯ ಹಿರಿಯ ಮುಸಲ್ಮಾನ ಆತ್ಮೀಯರು ನನ್ನ ಮಾತಾಡಿಸಿ ಹೋಗಲೆಂದೇ ನನ್ನ ಹುಡುಕಿಕೊಂಡು ಬರುತ್ತಾರೆ. ನನ್ನ ಜೊತೆ ತಾಸುಗಟ್ಟಲೇ ಹರಟುತ್ತಾರೆ. ಹತ್ತು ಹಲವು ವಿದ್ಯಮಾನಗಳನ್ನು ಚರ್ಚಿಸುತ್ತೇವೆ. ಪರಸ್ಪರ ಮಾತುಕತೆಯಲ್ಲಿ ನನ್ನಿಂದ ಅವರು, ಅವರಿಂದ ನಾನು.. ಬಹಳಷ್ಟು ಸಂಗತಿ-ಸತ್ಯಗಳನ್ನು ಕಂಡುಕೊಂಡಿದ್ದೇವೆ. ನಮ್ಮ ನಡುವಿನ ಸಣ್ಣಪುಟ್ಟ ತಪ್ಪುಗ್ರಹಿಕೆಗಳು ಈ ಮುಖಾಂತರ ಮಾಯವಾಗಿವೆ. ನನಗೆ ಗೊತ್ತಿರುವಷ್ಟು ತಿಳುವಳಿಕೆಯನ್ನು ಅವರಿಗೆ ನಾನು ತುಂಬಿದ್ದೇನೆ. ಅವರ ಅನುಭವದ ವರ್ತನೆ ನನಗೂ ಸಾಕಷ್ಟು ಕಲಿಸಿದೆ. ಅಂಥವರ ಹೆಸರು ಹೇಳುತ್ತ ಹೋದರೆ, ಅದಕ್ಕೆ ಸದ್ಯದ ಪರಿಮಿತಿಯಲ್ಲಿ ಜಾಗ ಸಾಕಾಗದು..! ಇದೇ ಹೊತ್ತಲ್ಲಿ ನನ್ನ ಅಜ್ಜನ ಕಾಲದಲ್ಲಿ ನಮ್ಮ ಮನೆಯ ವ್ಯವಸಾಯ/ಪಶುಸಂಗೋಪನೆಯ ಹೊಣೆ ಹೊತ್ತವರು ಅನ್ಯಜಾತಿಯವರೇ ಅದೂ ಮುಖ್ಯವಾಗಿ ದಲಿತರೇ.. ಈ ನಮ್ಮ ಆಳುಮಕ್ಕಳು (ಆಳುಗಳನ್ನು `ಆಳುಮಕ್ಕಳೆಂದು ಕರೆಯುವುದು; ಶಾಲೆಯನ್ನು `ಶಾಲೆಗುಡಿ'ಯೆಂದು ಕರೆಯುವ ರೂಢಿಯಲ್ಲಿಯೂ ಗೌರವಪೂರ್ವಕತೆ ತುಂಬಿ ತುಳುಕುವುದು ಹಳ್ಳಿಗಾಡ ಸಂಸ್ಕೃತಿ) ಎಂದಿಗೂ ಜೀತದಾಳುಗಳುಗಳಾಗಿರಲಿಲ್ಲ. ಅವರೆಲ್ಲ ಈಗಲೂ ನಮ್ಮ ನೆನಪಿನ ಬುತ್ತಿಗಂಟಿನಲ್ಲಿ ನನ್ನ ಮನೆಯ ಹಿರಿಯರಂತೆಯೇ ಮಧುರ, ಗೌರವಾನ್ವಿತ ಸ್ಥಾನ ಗಳಿಸಿದ್ದು ಈಗ ನೆನಪಿಗೆ ಬರುತ್ತಿದೆ. ಹಾಗೆಯೇ, ಇಬ್ಬರು ಮುಸಲ್ಮಾನರೂ ಇದ್ದರಂತೆ ನಮ್ಮ ಮನೆಯಲ್ಲಿಯೇ ಉಂಡುಟ್ಟು ಉಳಿದುಕೊಂಡು.. ಅದರಲ್ಲಿ ಒಬ್ಬ ಗಿಡ್ಡಹುಸೇನಿ ಇನ್ನೊಬ್ಬ ದೊಡ್ಡ ಹುಸೇನಿಯಂತೆ. ಕಾಕಾ ಅವರಿಬ್ಬರ ಆತ್ಮೀಯ ಒಡನಾಟ, ಅವರ ನಿಯತ್ತಿನ ದುಡಿಮೆ, ಅವರಾಡುವ ಮಾತುಕತೆ, ಅವರ ಆಕಾರ ಆಕೃತಿ ನಡೆಗಳನ್ನು `ಕಾದಂಬರಿ' ಮಾಡಿ ಹೇಳುತ್ತಿದ್ದ. ಅವರೆಲ್ಲ ನಮ್ಮನ್ನು ಎತ್ತಿ ಆಡಿಸಿದ್ದರಂತೆ. ಅವರನ್ನು ನೋಡಿದ ನೆನಪಿಲ್ಲ ನನಗೆ. ಆದರೆ ಅವರು ಹೇಗಿದ್ದರು, ನಮ್ಮ ಗೌಡಾಳಿಕೆಯ ಮನೆಯಲ್ಲಿ ಸಾಬರಾಗಿಯೂ ಹೇಗೆ ಹೊಂದಿಕೊಂಡಿದ್ದರು, ನಾ ನೋಡಬೇಕಿತ್ತು ಅವರನ್ನು.. ಎನ್ನುವ ಕುತೂಹಲ ನನಗೆ ನನ್ನ ಹೈಸ್ಕೂಲುದಿಗಳವರೆಗೂ ಕಾಡಿದ್ದು ಖರೆ.

*
ಆಮೇಲೆ ನಾ ಧಾರವಾಡಕ್ಕೆ ಹೋಗಿ, ನಾ ಪಿಯೂಸಿಗೆ ಕಿಟೆಲ್ ಕಾಲೇಜು ಸೇರಿದಾಗ ನನಗೆ ನಮ್ಮ ಕ್ಲಾಸಿನಲ್ಲಿಯೇ ಮೊದಲು ಸ್ನೇಹಿತನಾಗಿ ನನ್ನ ಜೊತೆಗಾರನಾದವನು ರಸೂಲ್. ರಾಯಚೂರು ಜಿಲ್ಲೆಯ ನೀರಮಾನ್ವಿಯವನು. ನನಗಿಂತ ಆರ್ಥಿಕವಾಗಿ ರಸೂಲ್ ಮನೆಯವರು ಚೆನ್ನಾಗಿದ್ದರೇನೋ. ನಾವು ನಮ್ಮ ಕಡೆಯ ಮೂರು ಜನರು ಒಂದು ಗ್ಯಾರೇಜಿನ ಥರದ ರೂಮನ್ನು ಕಮ್ಮಿ ಬಾಡಿಗೆಗೆ ಹಿಡಿದು ತಿಂಡಿ-ಊಟ ಸ್ವಂತ ಮಾಡಿಕೊಂಡೇ ತಿನ್ನುತ್ತಿದ್ದೆವು. ಒಟ್ಟೂ ನಾವ್ಯಾರೂ ಹೊಟೇಲ್‍ಗೆ ಹೋಗುತ್ತಿರಲಿಲ್ಲ. ಅದಕ್ಕೆ ನಮ್ಮ ಮನೆಯಿಂದ ಬರುತ್ತಿದ್ದ `ತಿಂಗಳ ಪಗಾರ'ದ ಇತಿಮಿತಿಯೂ ಕಾರಣವಾಗಿತ್ತು. ಆಗಾಗ ರಸೂಲ್ಸಾಬ್ ನನ್ನೊಬ್ಬನನ್ನೇ ಹೊಟೇಲ್‍ಗೆ ಕರೆದುಕೊಂಡು ಹೋಗಿ ನಾ ಸಂಕೋಚದಿಂದ ಬೇಡವೆಂದರೂ ಶಿರಾ, ಇಡ್ಲಿವಡೆ, ದೋಸೆ ತಿನ್ನಿಸುತ್ತಿದ್ದ. ಯಾವಾಗಲೂ ನನ್ನ ಹೆಗಲ ಮೇಲೆ ಕೈಹಾಕಿ `ಈತ ನನಗಷ್ಟೇ ಗೆಳೆಯ!' ಅನ್ನುವಂತೆ ವರ್ತಿಸುತ್ತಿದ್ದ. ಹಾಗೆಯೇ ಪಿಯೂಸಿ ಮುಗಿಯುವವರೆಗೂ ಇದ್ದು ಪಾಸಾಗಿ ಹೋದ. ಆಮೇಲೆ ಎಂಎ, ಎಲೆಲ್ಬೀ ತನಕ ನಾ ಓದಿ, ಎರಡು ವರ್ಷ ಲಾ ಪ್ರಾಕ್ಟೀಸ್ ಧಾರವಾಡದಲ್ಲಿಯೇ ಮಡಿ ತದನಂತರದಲ್ಲಿ ಬಂದು ಹಾನಗಲ್ಲು ಸೇರಿಕೊಂಡೆ. ಈ ಹೊತ್ತಿಗೂ ಮತ್ತೆ ನನ್ನ ಅತ್ಯಂತ ಪ್ರೀತಿಯ ಗೆಳೆಯ ರಸೂಲ್‍ನ ದರ್ಶನ ನನಗಾಗಿಲ್ಲ. ಒಂದೆರಡು ವರ್ಷ ಪತ್ರ ಬರೆಯುತ್ತಲಿದ್ದೆವು. ಈಗಲೂ ರಸೂಲ್‍ನ ನೆನಪು ಗೆಳತಿಯ ನೆನಪಂತೆ ಕಾಡುತ್ತಿದೆಯೆಂದರೆ ಸುಳ್ಳಲ್ಲ..!

*
ಇಂಥ ದೂರದಲ್ಲಿರುವ ನೂರಾರು ಅನ್ಯಜಾತಿಯ ಗೆಳೆಯರು, ಅದರಲ್ಲೂ ಶೇಕಡ ತೊಂಬತ್ತರಷ್ಟು ಗೆಳೆಯರು ದಲಿತರು ಮತ್ತು ಸಾಬರು..! ಅಂಥ ಗೆಳೆಯರ ಪ್ರೀತಿಯನ್ನು, ಅವರೊಂದಿಗೆ ಒಡನಾಡಿದ ಮಧುರ ಕ್ಷಣಗಳನ್ನು ನಾ ಇಂದಿಗೂ ಹೃದಯದಲ್ಲಿ ಕಾಪಿಟ್ಟುಕೊಂಡಿದ್ದೇನೆ. ನನ್ನ ಜಾತಿಯವರಿಗಿಂತ ಈಗಲೂ ನನಗೆ ನಾ ಒಡನಾಡುವ ಎಲ್ಲ ಕ್ಷೇತ್ರಗಳಲ್ಲೂ ಇತರ ಜಾತಿಯವರೇ ನಿಜಕ್ಕೂ ಆತ್ಮೀಯರು. ಅವರು ನನ್ನ ಪಾಲಿನ ಸಲಹೆಗಾರರು, ಮಾರ್ಗದರ್ಶಕರು, ಮುಕ್ತವಾಗಿ ಆಪತ್ಕಾಲದಲ್ಲಿ ನನ್ನ ಕೈಹಿಡಿದವರು. ಒಂದು ಅಪವಾದವೆಂದರೆ, ಇತ್ತೀಚೆಗೆ ನಮ್ಮ ಕಡೆಯ ಹಲವರು ಆತ್ಮೀಯರು ನನಗೆ ಭರ್ಜರಿಯಾಗಿಯೇ ಕೈಕೊಟ್ಟಿದ್ದಾರೆ ಜಾತ್ಯಾತೀತವಾಗಿ..! ಇರಲಿ, ನನ್ನ ಬಾಲ್ಯಕಾಲದ ಗೆಳೆಯರು ಬಹುತೇಕ ನನ್ನೂರಿನ ದಲಿತರು. ನಾ ಆಗ ಅವರ ಮನೆಯಲ್ಲಿ ಉಂಡು ಆಡಿದ ಸಂದರ್ಭಗಳು ಹತ್ತು ಹಲವಾರು. ಆಗ ಈ ಮೊದಲೇ ನಾ ಹೇಳಿದಂತೆ ನಮ್ಮೂರಲ್ಲಿ ನಮ್ಮದೊಂದು ಅಂಗಡಿಯಿತ್ತು. ತೀರಾ ಆತ್ಮೀಯರೆನಿಸಿಕೊಂಡ ದಲಿತ ಗೆಳೆಯರಿಗೆ ದುಡ್ಡು ತೆಗೆದುಕೊಳ್ಳದೇ ಪಾಠಿ-ಬಳಪ-ನೋಟು ಬುಕ್ಕುಗಳನ್ನು, ಪೆಪ್ಪರಮೆಂಟು ಪುಟಾಣಿಯನ್ನು ನಮ್ಮ ಅಂಗಡಿಯಿಂದ ಅಪ್ಪಯ್ಯ-ಕಾಕಾ ಇಲ್ಲದ ಹೊತ್ತು ನೋಡಿಕೊಂಡು ಕದ್ದೊಯ್ದು ಕೊಟ್ಟಿದ್ದನ್ನು ಈಗಲೂ ನಾವೆಲ್ಲ ಕುಂತು ಪಂಟುಹೊಡೆಯುವಾಗ ಅವರೇ ನೆನಯಿಸಿಕೊಂಡು ನಗುತ್ತಾರೆ. ಈ ಪ್ರೀತಿ ಇಷ್ಟಕ್ಕೆ ನಿಲ್ಲದೇ ಮನೆಹಿಂದಿನ ಬಾವಿಯ ದಂಡೆಯ ಮರೆಯಲ್ಲಿ ಕುಂದುರಿಸಿ ಬಂದು, ಅಮ್ಮ-ಅಜ್ಜಿಗೆ ಕಣ್ತಪ್ಪಿಸಿ ಅಕ್ಕಿರೊಟ್ಟೆಗೆ ಬೆಣ್ಣೆ ಸವರಿ ಬೆಲ್ಲ ಸೇರಿಸಿ ಸುರುಳಿಯಾಗಿ ಸುತ್ತಿಕೊಂಡು ಹೋಗಿ ಕೊಟ್ಟು, ಅವರು ಖುಷಿಯಿಂದ ತಿನ್ನುವಾಗ ಖರೆ ಸಂತೃಪ್ತನಾಗುತ್ತಿದ್ದೆ.. ಇಂಥ ನೂರೊಂದು ಸಂಗತಿಗಳು ನನ್ನ ಹೃದಯದಲ್ಲಿ ಇಂದಿಗೂ ಜತನದಿಂದಿವೆ. ಬಹುತೇಕ `ಅನ್ಯ' ರು ಎಂದು ಸಮಾಜದಿಂದ ಅನ್ನಿಸಿಕೊಂಡು ಮೂದಲಿಕೆಗೊಳಗಾದ ಜನಸಮುದಾಯಗಳೇ ಇವತ್ತಿಗೂ ನನ್ನ ನಿಜದ ನೆಂಟರು. ಈ ಬರಹ ಬರೆವ ಈ ಕ್ಷಣದಲ್ಲಿಯೂ ನನ್ನ ಅಕ್ಕಪಕ್ಕ ನನ್ನೂರಿನ ಕನ್ನಡಶಾಲಿಯ ದಲಿತರ ಸಣ್ಣ ಹುಡುಗರು ಕುತೂಹಲದಿಂದ ನನ್ನೇ ನೋಡುತ್ತ ಕುಂತಿದ್ದಾರೆ.. ಈ ತೆರನಾಗಿ ನಾನು ಹೇಳಹೊರಟಿರುವುದು ಇಲ್ಲದ ದೇವರ ಆಣೆಗೂ `ನನ್ನ ನಾನು ಬಹುದೊಡ್ಡ ಮನುಷ್ಯ-ಜೀವಪರ ವ್ಯಕ್ತಿಯೆಂದು ಬಿಂಬಿಸಿಕೊಳ್ಳಲು' ಖಂಡಿತ ಅಲ್ಲ; ನನ್ನ ಭಾವುಕತೆ, ಎಲ್ಲರನ್ನೂ ಹಚ್ಚಿಕೊಳ್ಳುವ ಗುಣ ನನ್ನ ಕಡೆಗೆ ಮಕ್ಕಳು ಮುದುಕರನ್ನು ಸೆಳೆಯುತ್ತಿರಬಹುದೇನೋ ಇದು ನನ್ನ ಜೀವನದ ಬಹುದೊಡ್ಡ ಪುಣ್ಯವೆಂದೇ ನಾ ಭಾವಿಸುತ್ತೇನೆ.

*
ಇನ್ನೊಬ್ಬ ನನ್ನ ಹಿರಿಯ ಮುಸಲ್ಮಾನ ಗೆಳೆಯನ ಹಿರಿದಾದ ಮನಸ್ಸಿನ ಸೌಹಾರ್ದ ನಡೆಯನ್ನು ಈ ಹೊತ್ತಲ್ಲಿ ನಾ ಹೇಳಲೇಬೇಕಿದೆ. ನಮ್ಮ ತಾಲೂಕಿನ ಕರಗುದುರಿ ಗ್ರಾಮದ ಆದಮ್ ಮುಲ್ಲಾ ಕನ್ನಡ ಶಾಲೆಯಲ್ಲಿ ಏಳನೇ ಇಯತ್ತೆ ಮಾತ್ರ ಕಲಿತಿದ್ದರೂ ಆಗಾಗ ಕವಿತೆಗಳನ್ನೂ ಬರೆದಿದ್ದಾರೆ. ಸಮಾಜಮುಖೀ ಚಿಂತನೆಯುಳ್ಳ ಅಪರೂಪದ ಜೀವಪರ ಕಾಳಜಿಯ ವ್ಯಕ್ತಿ, ಹೊಟ್ಟೆಪಾಡಿಗೆ ಶಾಮಿಯಾನ-ಮೈಕು ಸೆಟ್ ಇಟ್ಟುಕೊಂಡು ಉಪಜೀವನ ಮಾಡುತ್ತಾ, ಹಿಂದೂ-ಮುಸ್ಲೀಂ ಉಭಯ ಧರ್ಮದ ವಧುವರರ ಆನ್ವೇಷಣೆಯ ಕಾಯಕವೂ ತಮ್ಮ ಜವಾಬ್ದಾರಿಯಂದರಿತು ಆ ನಿಟ್ಟಿನಲ್ಲಿ ಕಾರ್ಯತತ್ಪರಾದವರು. ರಾಜಕೀಯ ಪ್ರಜ್ಞೆಯ ಜೊತೆ ಅಪಾರ ಧಾರ್ಮಿಕ ನಂಬುಗೆಯುಳ್ಳ ಮುಲ್ಲಾ, ನಮ್ಮ ತಾಲೂಕಿನ ಮೂರು ಹಳ್ಳಿಗಳಲ್ಲಿ ಶ್ರೀ ಕರಿಬಸವೇಶ್ವರ ಮಠ ತೆರೆದು ಅವುಗಳ ಉಸ್ತುವಾರಿ ಮಾಡುತ್ತಿದ್ದಾರೆ. ಒಂದೆರಡು ವರ್ಷಗಳ ಹಿಂದೆ ಕ್ಯಾಸನೂರು- ಸಂತೇ ಹೊಸೂರು ಮಧ್ಯಭಾಗದ ಬಯಲಲ್ಲೂ `ಕರಿಬಸಜ್ಜ' ನ ಮಠ ನಿರ್ಮಿಸಿ, ಅದರ ಟ್ರಸ್ಟ್‌ನ ಅಧ್ಯಕ್ಷರಾಗಿ ಜನರ ಮಾನಸಿಕ ಬದುಕಿನ ಬಲವರ್ಧನೆಯ ಕೆಲಸವನ್ನು ಯಾವುದೇ ಪ್ರತಿಫಲಾಪೇಕ್ಷೆಯಿಲ್ಲದೇ ಮಾಡುತ್ತಿದ್ದಾರೆ. ಅಲ್ಲಿ ತಮ್ಮ ಎಲ್ಲ ತರದ ಸಮಸ್ಯೆಗಳನ್ನು ಹೇಳಿಕೊಂಡು ಬರುವವರು ನೂರಕ್ಕೆ ನೂರರಷ್ಟು ಹಿಂದೂ ಬಾಂಧವರೇ ಅಂದರೆ ಅಚ್ಚರಿಪಡಬೇಕಾಗಿಲ್ಲ. ಮೌಢ್ಯರಹಿತ ವೈಜ್ಞಾನಿಕ ಹಿನ್ನೆಲೆಯ `ಚಿಕಿತ್ಸೆ' ನೀಡುವ ಮುಲ್ಲಾ ಸಾಹೇಬರು ನಮ್ಮ ಭಾಗದ ನೊಂದವರ ಪಾಲಿನ ನಿಜಶರಣನಾಗಿ ಕಾಣುತ್ತಿದ್ದಾರೆ. ನಿತ್ಯ ನಾ ಅಲೆದಾಡುವ ಆ ಹಾದಿಯಲ್ಲಿ ಕಾಣಸಿಗುವ ಈ ಸಾಹೇಬನ ಧಾರ್ಮಿಕ ಶ್ರದ್ಧೆಯಂತೆಯೇ ಕಾಯಕ ಶ್ರದ್ಧೆಯೂ ಎದ್ದು ಕಾಣುವಂತದ್ದು. ಮಾನವೀಯತೆಯ ಪಡಿಯಚ್ಚಿನಂತಿರುವ ಆದಮ್ ಮುಲ್ಲಾರನ್ನು ಇವತ್ತಿನ ಆಗುಹೋಗುಗಳ ಬಗ್ಗೆ ಕೇಳಿದರೆ ಪಕ್ಕಾ ಜವಾರೀ ಧಾರವಾಡ ಭಾಷೆಯಲ್ಲಿ ಸಮಾನತೆಯ ಪ್ರವಚನವನ್ನೇ ಕೊಡುತ್ತಾನೆ. ಅದು ಎಷ್ಟೊಂದು ಪ್ರಸ್ತುತ ಇರುತ್ತದೆ ಎಂದರೆ.. ಈ ವ್ಯಕ್ತಿಯ ಜೊತೆ ಬಹುಕಾಲ ಕಳೆಯಬೇಕು..! ಇರಲಿ.

*
ಸಾಮರಸ್ಯದ ಪರಂಪರೆಯುಳ್ಳ ನಮ್ಮ ನಾಡಿನ ನೆಲದ ಗುಣವೇ ವಿಶಿಷ್ಟವಾದದ್ದು. ಹಳ್ಳಿಗಳಂತೂ ಈ ನಿಟ್ಟಿನಲ್ಲಿ ಈ ಹೊತ್ತಿಗೂ ಬಹುಪಾಲು ಬಹುತ್ವಧಾರಿತ ನಡೆಗಳಿಂದಲೇ ತನ್ನತನವನ್ನು ಕಾಪಿಟ್ಟುಕೊಂಡಿವೆ. ಇಲ್ಲಿ ವಾಸಿಸುವ, ಒಡನಾಡುವ ಪ್ರತಿಯೊಬ್ಬ ಮನುಷ್ಯನೂ ನಮ್ಮವನೇ ಅಂಬುವ ಬದ್ಧತೆಗೆ ನಾವು ಅಂಟಿಕೊಂಡರೆ ವಿಷ ಊಡುವ ಉರಗಗಳ ಸಂತತಿ ತಾನೇ ಕಡಿಮೆಯಾಗುತ್ತದೆ. ವಿಷವೃಕ್ಷಗಳ ಬೆಳವಣಿಗೆ ಕುಂಠಿತಗೊಳ್ಳುತ್ತದೆ. ವದಂತಿ-ಅನುಮಾನದ ಮಾತುಗಳಿಗೆ ಕಡಿವಾಣ ಬೀಳುತ್ತದೆ. ಸಹಬಾಳುವೆ ಎನ್ನುವುದು ಮುಸಲ್ಮಾನ ಮತ್ತು ಹಿಂದೂಗಳ ನಡುವೆ ಎಂದಿನಿಂದಲೂ ಇದೆ. ಇದಕ್ಕೆ ಬೇಕಾದಷ್ಟು ಒಟ್ಟಂದದ ದೃಷ್ಟಾಂತಗಳೇ ಇವೆ. ಹಾಗೇ ಹಿಂದೂ ಎಂದು ಹೇಳಿಕೊಳ್ಳುವ ನಾವು ಆ ವ್ಯಾಪ್ತಿಪ್ರದೇಶದಲ್ಲಿ ಹೇಗಿದ್ದೇವೆ, ಕೆಳಜಾತಿ ಜನಸಮುದಾಯದವರ ಜೊತೆ ಪರಿಪೂರ್ಣವಾಗಿ ನಮ್ಮಂತೆಯೇ ಅವರೂ.. ಎಂದುಕೊಂಡಿದ್ದೇವೆಯೇ? ಅಸ್ಪøಷ್ಯತೆಯಿನ್ನೂ ಜೀವಂತವಾಗಿರುವ ಕುಲದ ನೆಲೆಯ ಊರುಗಳೇ ಇಲ್ಲವೇ..? ಈ ಎಲ್ಲ ಹುಳುಕು ಮನಸುಗಳನ್ನು ಒಳಗೊಂಡ ನಮಗೆ ನಾವೇ ನಿಜ ಮಾನವತಾವಾದದ ಬಗೆಗೆ ಪ್ರಶ್ನಿಸಿಕೊಂಡೂ ಆ ದಿಶೆಯತ್ತ ಸಮರಸಭಾವದ ಸೂತ್ರ ಹೆಣೆದುಕೊಂಡು ಬದುಕಲೆತ್ನಿಸಿದರೆ `ಸರ್ವಜನಾಂಗದ ಶಾಂತಿಯ ತೋಟ' ಹಾಗೂ `ಸೌಹಾರ್ದ ಕರ್ನಾಟಕ'ದ ಪರಿಕಲ್ಪನೆಗೆ ಮೆರುಗು ದಕ್ಕೀತು, ಅಲ್ಲವೇ..!?

-ವಿಜಯಕಾಂತ ಪಾಟೀಲ

ಈ ಅಂಕಣದ ಹಿಂದಿನ ಬರಹಗಳು:
ಕಂಬಾರರ ಈ ಕವಿತೆ ನನ್ನೊಳಗೆ ಅವಿತೂ...
ಚಾಲಕನೆಂಬ ದೊಡ್ಡಪ್ಪನೂ..

ಚಂಪಾ ಎಂಬ ಸಾಲಿಯೂ ಮಠವೂ…
ನೆಲ ನೆಲ ನೆಲವೆಂದು…

MORE NEWS

ಪರಿಘಾಸನ ಮತ್ತು ಅರ್ಧ ಚಕ್ರಾಸನ 

16-04-2024 ಬೆಂಗಳೂರು

"ಪರಿಘಾಸನ ಆಸನವು ) ಪಿತ್ತ ಜನಕಾಂಗ ಮತ್ತು ಮೇದೋಜೀರಕ ಚೈತನ್ಯಗೊಳ್ಳುವಂತೆ ಮಾಡುತ್ತದೆ. ಹಾಗೆಯೇ ‘ಅರ್ಧ ಚಕ್...

ಲೋಕಸಭಾ ಚುನಾವಣೆಗಳ ಸುತ್ತಮುತ್ತ ಒಂದು ಸುತ್ತು

15-04-2024 ಬೆಂಗಳೂರು

"ಪರಸ್ಪರ ರೋಚಕ ನಿಂದನೆಗಳು. ಕ್ಷೇತ್ರವಾರು ಚಕ್ಕರಗುಳ್ಳಿ ಇಡುವ ಚತುರ ವಿವರಗಳು. ಹೊಸ ಹೊಸ ಬೈಗುಳಗಳು. ಮಾಧ್ಯಮಗಳಿಗ...

ಉಪವಿಷ್ಟಕೋನಾಸನ ಮತ್ತು ಪವನಮುಕ್ತಾಸನ

09-04-2024 ಬೆಂಗಳೂರು

"ಉಪವಿಷ್ಟಕೋನಾಸನ ಯೋಗಾಸನವು ಮನಸ್ಸನ್ನು ಶಾಂತಗೊಳಿಸುತ್ತದೆ ಮತ್ತು ಮಾಂಸಗಳ ತೂಕವನ್ನು ಕಡಿಮೆಗೊಳಿಸುತ್ತದೆ. ಪವನಮು...