ನನ್ನ ಕೆಲವು ಸ್ತ್ರೀ ಪಾತ್ರಗಳು : ಸಾರಾ ಅಬೂಬಕ್ಕರ್


"ನನ್ನ ಸ್ತ್ರೀಪಾತ್ರಗಳು ಸಮಾಜವನ್ನು ಪ್ರಶ್ನಿಸಬೇಕು; ಅರ್ಥವಿಲ್ಲದ ನಿಯಮಗಳನ್ನು ತಲೆ ತಗ್ಗಿಸಿ ಒಪ್ಪಿಕೊಳ್ಳದೆ ಅವುಗಳ ಕುರಿತು ವಿವರಣೆ ಕೇಳಬೇಕು: ನನ್ನ ಸಮಾಜದ ನೊಂದ ಹೆಣ್ಣುಮಕ್ಕಳಿಗೆ ನಾನು ಧ್ವನಿಯಾಗಬೇಕು" ಎಂದೇ ಬರೆದೆ ಎನ್ನುತ್ತಾರೆ ಲೇಖಕಿ ಸಾರಾ ಅಬೂಬಕ್ಕರ್. ಇಂದು (ಜೂನ್ 30) ಅವರ ಜನ್ಮದಿನದ ಹಿನ್ನೆಲೆಯಲ್ಲಿ ಅವರ ಬರಹವೊಂದರ ಭಾಗ ಇಲ್ಲಿ ನಿಮ್ಮ ಓದಿಗಾಗಿ.

ಎಲ್ಲ ಮಕ್ಕಳಂತೆಯೇ ಚಿಕ್ಕಂದಿನಲ್ಲಿ, ನನಗೂ ಕತೆಗಳನ್ನು ಕೇಳುವುದರಲ್ಲಿ ತುಂಬಾ ಆಸಕ್ತಿ ಇತ್ತು. ಆಗ ನಮ್ಮ ಮನೆಯಲ್ಲಿದ್ದ ಕೆಲಸದವಳೋರ್ವಳು ಹೇಳುತ್ತಿದ್ದ ರಾಜ ರಾಣಿಯರ ಕತೆಗಳನ್ನು ಕೇಳಲು ನಾನು ರಾತ್ರಿಯೆಲ್ಲ ನಿದ್ದೆ ಬಿಟ್ಟು ಆಕೆಯ ಬಳಿ ಕುಳಿತುಕೊಳ್ಳುತ್ತಿದ್ದೆ. ಈ ರೀತಿ ಪ್ರಾರಂಭವಾದ ಸಾಹಿತ್ಯದ ಒಲವು ಪಠ್ಯ ಪುಸ್ತಕದ ಕತೆಗಳಿಂದ ಚಂದಮಾಮದ ಕತೆಗಳೆಡೆಗೆ ಹರಿದು ಅಲ್ಲಿಂದ ಕತೆ ಕಾದಂಬರಿಗಳ ಈ ಓದು ಸರಾಗವಾಗಿ ಮುಂದುವರಿಯಿತು.

ಈ ರೀತಿ ಓದಿನ ಚಟ ಮುಂದುವರಿದಂತೆ ತ್ರಿವೇಣಿಯವರ ಕತೆ, ಕಾದಂಬರಿಗಳು ಪ್ರಕಟವಾಗತೊಡಗಿದ್ದವು. ಮಾನಸಿಕ ಖಾಯಿಲೆಗಳ ಕುರಿತು ಇವರು ಬರೆಯುತ್ತಿದ್ದ ಕತೆ, ಕಾದಂಬರಿಗಳು ವಿಶೇಷವಾಗಿ ನನ್ನನ್ನಾಕರ್ಷಿಸಿದವು. ಯಾಕೆಂದರೆ ಇಂತಹ ಮಾನಸಿಕ ಖಾಯಿಲೆಗಳಿಂದ ಬಳಲುತ್ತಿದ್ದರೂ ಅದು ಒಂದು ಖಾಯಿಲೆಯೆಂದು ತಿಳಿಯದೆ ತಮ್ಮ ಮೈಯ್ಯಲ್ಲಿ ‘ಜಿನ್ನ್’ ಎಂಬ ಅದೃಶ್ಯ ಶಕ್ತಿಯೊಂದು ಹೊಕ್ಕಿದೆಯೆಂದು ಭಾವಿಸಿ ಅದಕ್ಕಾಗಿ ಮದ್ದು, ಮಾಟ ಮಾಡಿಸುತ್ತಾ ತಮ್ಮ ತೀವ್ರ ಬಡತನದಲ್ಲೂ ಹೊಟ್ಟೆ ತುಂಬಾ ಉಣ್ಣದೆ ಕೈಯ್ಯಲ್ಲಿರುವ ಹಣವನ್ನೆಲ್ಲ ಈ ಮದ್ದು, ಮಾಟಗಳಿಗಾಗಿ ವ್ಯಯಿಸುವವರು ನಮ್ಮ ಸಮಾಜದಲ್ಲಿ ಇಂದಿಗೂ ಕಾಣಸಿಗುತ್ತಾರೆ. ಅಂತೆಯೇ ಈ ಭೂತ ಪ್ರೇತಗಳ ಅವಾಸ್ತವಿಕತೆಯ ಕುರಿತು ನನ್ನಲ್ಲಿ ತಿಳಿವು ಮೂಡಿಸಿದವರು ಶ್ರೀಮತಿ ತ್ರಿವೇಣಿ ಎಂದರೆ ತಪ್ಪಾಗದು: ಮಾತ್ರವಲ್ಲ ತ್ರಿವೇಣಿಯವರ ಕೃತಿಗಳಿಂದಾಗಿ ನನ್ನ ಎದೆಯಾಳದಲ್ಲಿ ಸಣ್ಣಗೆ ಜಿನುಗುತ್ತಿದ್ದ. ಸಾಹಿತ್ಯದ ಒರತೆಯೊಂದು ಇನ್ನಷ್ಟು ಮೈದುಂಬಿ ಹರಿಯತೊಡಗಿತು. ಶರತ್ ಚಂದ್ರ, ರವೀಂದ್ರನಾಥ ಠಾಕೂರ್, ಕಾರಂತ ಮುಂತಾದವರ ಕೃತಿಗಳೂ ನನ್ನ ಬಾಗಿದ್ದ ಲೇಖಕಿಯನ್ನು ಎಚ್ಚರಿಸಿತೊಡಗಿದ್ದವು. ನಮ್ಮ ಸಮಾಜದ ಸ್ತ್ರೀ ಪುರುಷರಲ್ಲಿ ವಿಶೇಷವಾಗಿ ಸ್ತ್ರೀಯರಲ್ಲಿ ಅಡಗಿಕೊಂಡಿರುವ ಮೂಢ ನಂಬಿಕೆಗಳನ್ನು, ಅದರಿಂದಾಗಿ ಅವರು ಹಲವು ವಿಧಗಳಲ್ಲಿ ಶೋಷಣೆಗೊಳಗಾಗುತ್ತಿರುವುದನ್ನು ಕತೆ, ಕಾದಂಬರಿಗಳ ಮೂಲಕ ನಾನೂ ಯಾಕೆ ಪ್ರತಿಬಿಂಬಿಸಬಾರದು? ಈ ಮಹಾನ್ ಲೇಖಕರಂತೆ ಪರಿಣಾಮಕಾರಿಯಾದ ಮಹೋನ್ನತ ಕೃತಿಗಳನ್ನು ರಚಿಸಲು ಸನ್ನಿಂದ ಸಾಧ್ಯವಾಗದಾದರೂ ಕೊನೆ ಪಕ್ಷ ನಮ್ಮ ಸಮಾಜದ ಮಹಿಳೆಯರು ಯಾವ ರೀತಿ ತಮ್ಮ ಮೇಲಾಗುತ್ತಿರುವ ದಬ್ಬಾಳಿಕೆ ಮತ್ತು ಅನ್ಯಾಯವನ್ನು ತಲೆ ತಗ್ಗಿಸಿ ಸಹಿಸಿಕೊಳ್ಳುತ್ತಿದ್ದಾರೆ ಎಂಬುದರ ಕಡೆಗೆ ನಮ್ಮ ಸಮಾಜದ ಗಮನ ಸೆಳೆಯಲಾದರೂ ನಾನು ಪ್ರಯತ್ನಿಸಬಹುದೇನೋ ಎಂಬ ಒಂದು ಆಶಯ ನನ್ನ ಮನದಾಳದಲ್ಲಿ ಬೇರೂರಿ ನಿಂತಿತು, ಇಷ್ಟು ಮಾತ್ರವಲ್ಲ, ನನ್ನ ಸ್ತ್ರೀಪಾತ್ರಗಳು ಸಮಾಜವನ್ನು ಪ್ರಶ್ನಿಸಬೇಕು; ಅರ್ಥವಿಲ್ಲದ ನಿಯಮಗಳನ್ನು ತಲೆ ತಗ್ಗಿಸಿ ಒಪ್ಪಿಕೊಳ್ಳದೆ ಅವುಗಳ ಕುರಿತು ವಿವರಣೆ ಕೇಳಬೇಕು: ನನ್ನ ಸಮಾಜದ ನೊಂದ ಹೆಣ್ಣುಮಕ್ಕಳಿಗೆ ನಾನು ಧ್ವನಿಯಾಗಬೇಕು ಎಂದೆಲ್ಲಾ ಅನಿಸುತ್ತಿತ್ತು.

ನನ್ನ 'ಚಂದ್ರಗಿರಿ ತೀರದಲ್ಲಿ' ಕೃತಿಯಲ್ಲಿ ಕಥಾ ನಾಯಕಿ ನಾದಿರಾ ಎದುರಿಸಿದ ಸಮಸ್ಯೆಯನ್ನು ನಮ್ಮ ಸಮಾಜದ ಕೆಲವು ಹೆಣ್ಣು ಮಕ್ಕಳಾದರೂ ಎದುರಿಸಿದ್ದಾರೆ. ಈ ನಿಯಮವನ್ನು ಒಪ್ಪಿಕೊಳ್ಳಲಾಗದೆ ಕೊನೆಯ ತನಕವೂ ಗಂಡನಿಂದ ಅಗಲಿಯೇ ಬದುಕಿದ ಮಹಿಳೆಯರೂ ಇದ್ದಾರೆ. ಆದರೆ ಯಾವ ಹೆಣ್ಣೂ ಈ ನಿಯಮವನ್ನು ಒಪ್ಪಿಕೊಳ್ಳಲಾಗದ ಕೊನೆಯ ತನಕವೂ ಗಂಡನಿಂದ ಅಗಲಿಯೇ ಬದುಕಿದ ಮಹಿಳೆಯರೂ ಇದ್ದಾರೆ. ಆದರೆ ಯಾರೂ ಈ ನಿಯಮದ ಔಚಿತ್ಯದ ಕುರಿತು ಪ್ರಶ್ನಿಸಲಿಲ್ಲ, ವ್ಯವಸ್ಥೆಯ ವಿರುದ್ಧ ದಂಗೆಯೇಳಲಿಲ್ಲ: ದಂಗೆಯೇಳುವುದು ಸಾಧ್ಯವೇ ಇರಲಿಲ್ಲ. ಏಕೆಂದರೆ ಧರ್ಮದ ನಿಯಮಗಳು ಪ್ರಶ್ನಾತೀತವಾಗಿವೆ ಎಂಬುದನ್ನು ಚಿಕ್ಕಂದಿನಿಂದಲೂ ಅರೆದು ಕುಡಿಸಲಾಗಿರುತ್ತದೆ. ಗಂಡು ಹೇಳುವುದನ್ನು ಹೆಣ್ಣು ಕೇಳಬೇಕೆ ಹೊರತು, ಗಂಡು ವಿಧಿಸುವುದನ್ನು ಹೆಣ್ಣು ತಲೆ ಬಾಗಿ ಸ್ವಾಗತಿಸಬೇಕೆ ಹೊರತು 'ಹೀಗೇಕೆ' ಎಂದು ಪ್ರಶ್ನಿಸುವ ಅಧಿಕಾರ ಹೆಣ್ಣಿಗೆ ಇಲ್ಲವೇ ಇಲ್ಲ.. ಮುಸ್ಲಿಂ ಹೆಣ್ಣಿಗೆ ಧ್ವನಿಯೇ ಇಲ್ಲ!

ನನ್ನ ಕಾದಂಬರಿಯ ಕಥಾ ನಾಯಕಿ ನಾದಿರಾಗೆ ತನ್ನ ತಂದೆಯ ಮೂರ್ಖತನ ಮತ್ತು ಗಂಡನ ದುಡುಕುತನದಿಂದಾಗಿ ವಿವಾಹ ವಿಚ್ಛೇದನವಾದರೂ ಆಕೆ ಅದೇ ಗಂಡನನ್ನು ಪುನರ್ವಿವಾಹವಾಗಬೇಕಾದರೆ ಶಿಕ್ಷೆಯನ್ನನುಭವಿಸಬೇಕಾಗಿ ಬಂದದ್ದು ಆಕೆಯೇ. ತನ್ನ ಸಮಸ್ಯೆಗೆ ಪರಿಹಾರದ ಯಾವ ಹಾದಿಯೂ ಆಕೆಗೆ ಕಾಣದಾಗುತ್ತದೆ. ತನ್ನ ಮಗುವಿಗಾಗಿ, ತನ್ನ ಪ್ರಿಯ ಪತಿ ತನ್ನ ಒಡೆದ ಸಂಸಾರವನ್ನು ಒಂದುಗೂಡಿಸಲು ಎಷ್ಟು ದೊಡ್ಡ ತ್ಯಾಗಕ್ಕಾದರೂ ಆಕೆ ಸಿದ್ಧಳಾಗುತ್ತಾಳೆ. ಆದರೆ ಕೊನೆಯ ಗಳಿಗೆಯಲ್ಲಿ ಕೂಡಾ ಆಕೆ ವಂಚಿಸಲ್ಪಡುತ್ತಾಳೆ. ಆ ನಿಮಿಷದಲ್ಲಿ ಆಕೆ ತನ್ನೆಲ್ಲ ಆಸೆ, ಆಕಾಂಕ್ಷೆಗಳನ್ನು ಬದುಕಿನ ಕುರಿತ ಎಲ್ಲ ಸೆಳೆತ, ವ್ಯಾಮೋಹಗಳನ್ನು ಬದಿಗೊತ್ತಿ, ಕೊನೆಯ ನಿರ್ಧಾರ ಕೈಗೊಳ್ಳುತ್ತಾಳೆ. ತನ್ನ ನಿರ್ಧಾರವನ್ನು ಕಾರ್ಯರೂಪಕ್ಕೆ ತರಲು ಆ ಧರ್ಮದ ಸಂಕೇತವಾದ ಮಸೀದಿಯ ಕೊಳವನ್ನೆ ಆಯ್ಕೆ ಮಾಡಿಕೊಳ್ಳುತ್ತಾಳೆ. ‘ಹೀಗೇಕೆ?' ಎಂದು ಪ್ರಶ್ನೆ ಕೇಳದೆ ಹೋದರೂ, ನಿಯಮವನ್ನು ಮೀರಿ ಗಂಡನೊಡನೆ ಹೊರಡದೆ ಇದ್ದರೂ ಆ ನಿಯಮವನ್ನೊಪ್ಪಿಕೊಳ್ಳುವುದೂ ಆಕೆಯಿಂದ ಸಾಧ್ಯವಾಗುವುದಿಲ್ಲ. ಬದುಕಿನೊಡನೆ ಒಪ್ಪಂದ ಮಾಡಿಕೊಳ್ಳಲಾಗದೆ ಆಕೆ ಕಾಣದ ಲೋಕವನ್ನರಸಿ ಹೊರಡುವ ಕಠಿಣ ನಿರ್ಧಾರ ಕೈಗೊಳ್ಳುತ್ತಾಳೆ. ಕೊನೆಯ ಗಳಿಗೆಯಲ್ಲಿ ಮನದಲ್ಲಿ ಮೂಡಿ ನಿಂತ ಪತಿಯ ಚಿತ್ರ ದೊಡನೆ, ನ್ಯಾಯ ತೀರ್ಮಾನದ ದಿನ ನಾವು ಭೇಟಿಯಾಗೋಣ" ಎನ್ನುತ್ತಾ ಮಸೀದಿಯ ಕೊಳದಲ್ಲಿ ಪ್ರಾಣವನ್ನರ್ಪಿಸುತ್ತಾಳೆ. ಈ ಒಂದು ವಾಕ್ಯ ಮತ್ತು ಈ ಪ್ರಾಣಾರ್ಪಣೆಯಲ್ಲಿ ಆಧಾರವಾದ ಯಾತನೆ ಮತ್ತು ಅಸಹಾಯಕತೆಯ ಒಂದು ಮಹಾ ಗ್ರಂಥವೇ ಅಡಗಿದೆಯೆನ್ನಿಸುವುದಿಲ್ಲವೆ?

ನನ್ನ ಈ ಕೃತಿ ಮಲಯಾಳ ಭಾಷೆಗೆ ಅನುವಾದಗೊಂಡು ಪತ್ರಿಕೆಯೊಂದರಲ್ಲಿ ಧಾರಾವಾಹಿಯಾಗಿ ಪ್ರಕಟಗೊಂಡಿತು. ಆದರೆ ಅದರ ಕೊನೆಯನ್ನು ಭಾಷಾಂತರಕಾರರು ಮತ್ತು ಪತ್ರಿಕಾ ಸಂಪಾದಕರು ಬದಲಾಯಿಸಿ, ಆಕೆ ಚಂದ್ರಗಿರಿ ನದಿಯಲ್ಲಿ ಬಿದ್ದು ಪ್ರಾಣ ಕಳೆದುಕೊಂಡಳೆಂದು ಚಿತ್ರಿಸಿದರು. ಆಕೆ ಮಸೀದಿಯ ಕೊಳದಲ್ಲಿ ಪ್ರಾಣಾರ್ಪಣೆ ಮಾಡುವುದೂ ಕೂಡಾ ಈ ಪುರುಷರಿಗೆ ಸಹ್ಯವಾಗಲಿಲ್ಲವೇನೋ! ‘ನನ್ನ ಕಥಾ ನಾಯಕಿ ಮಸೀದಿಯ ಕೊಳದಲ್ಲೇ ಆತ್ಮಹತ್ಯೆ ಮಾಡಿಕೊಳ್ಳಬೇಕು. ಈ ತಪ್ಪನ್ನು ತಿದ್ದಿ ಪ್ರಕಟಿಸಿ’ ಎಂದು ಸಂಪಾದಕರಿಗೆ ನಾನು ಪತ್ರ ಬರೆದೆ. ಆದರೆ ಅಷ್ಟರಲ್ಲಿ ಆ ಪತ್ರಿಕೆ ನಿಂತು ಹೋಗಿತ್ತು! ಪುರುಷ ಪ್ರಧಾನ ಸಮಾಜ ಹೆಣ್ಣನ್ನು ತುಳಿಯಲು ಎಂತೆಂತಹ ಸಂಚುಗಳನ್ನು ಹೂಡುತ್ತವೆ ಎಂಬುದಕ್ಕೆ ಇಂದೊಂದು ಉದಾಹರಣೆಯಷ್ಟೆ! ಇರಲಿ ಆ ವಿಷಯ.

ನನ್ನ ಮನದಾಳದಲ್ಲಿ ಮುವತ್ತು ವರ್ಷಗಳವರೆಗೆ ತಂಗಿ ನಿಂತ ಈ ಕಥಾ ವಸ್ತು ಕೊನೆಗೂ ಕೃತಿರೂಪದಲ್ಲಿ ಹೊರಬಿದ್ದದ್ದು 30 ವರ್ಷಗಳ ನಂತರ. ಮೂವ್ವತ್ತು ವರ್ಷಗಳಷ್ಟು ದೀರ್ಘವಾದ ಗಜ ಗರ್ಭ ಹೆಚ್ಚು ದಿನ ನನ್ನನ್ನು ಕಾಡಲಿಲ್ಲ. ಎಂಟೇ ಎಂಟು ದಿನಗಳಲ್ಲಿ ಈ ಕಾದಂಬರಿ ಬರೆದು ಮುಗಿಸಿದೆ. ಈ ಕಾದಂಬರಿಯಿಂದ ನಾನು ಬಯಸಿದ ಒಂದು ಪರಿಣಾಮವಂತೂ ಆಗಿದೆ. ಪ್ರಶ್ನಿಸುವುದೇ ಮಹಾಪರಾಧವೆಂದು ತಿಳಿದಿದ್ದ ಒಂದು ಸಮಾಜದ ಮಹಿಳಾ ಸಮುದಾಯದಲ್ಲಿ ಕೆಲವು ಮಹಿಳೆಯರಾದರೂ ಧರ್ಮದ ಹೆಸರಿನಲ್ಲಿ ನಡೆಯುವ ಈ ಪದ್ಧತಿಯ ಔಚಿತ್ಯವೇನೆಂದು ಯೋಚಿಸಲಾರಂಭಿಸಿದ್ದಾರೆ. ಸುಲಭದ ವಿವಾಹ ವಿಚ್ಛೇದನ ಪದ್ದತಿಯಿಂದ ನಮ್ಮ ಮಹಿಳೆಯರಿಗೆ ಅನ್ಯಾಯವಾಗುತ್ತಿದೆ. ಎಂದು ಕೆಲವು ಪ್ರಗತಿಪರ ಮನೋಭಾವದ ಪುರುಷರು ಒಪ್ಪಿಕೊಳ್ಳತೊಡಗಿದ್ದಾರೆ. ಸಾಹಿತ್ಯದ ಮೂಲಕ ಸಾಮಾಜಿಕ ಬದಲಾವಣೆಗೆ ಪ್ರಯತ್ನಿಸುವಲ್ಲಿ ನಾನೊಂದು ಪುಟ್ಟ ಹೆಜ್ಜೆಯಿಟ್ಟಿದ್ದೇನೆ ಎಂಬ ತೃಪ್ತಿ ನನಗಿದೆ.

ನನ್ನ ಎರಡನೆಯ ಕೃತಿ ಸಹನಾ. ನಮ್ಮ ಸಮಾಜದಲ್ಲಿ ಹರಡಿಕೊಂಡಿರುವ ಬಹುಪತ್ನಿತ್ವದಿಂದಾಗಿ ನಮ್ಮ ಮಹಿಳೆಯರು ಶೋಷಣೆಗೊಳಗಾಗುತ್ತಿದ್ದಾರೆ ಎಂಬುದನ್ನು ಎತ್ತಿ ತೋರಿಸುವಂತಹದ್ದು.

ಸಹನಾದ ನಾಯಕಿ ನಸೀಮಾ ಕ್ಷಮಯಾ ಧರಿತ್ರಿಯೇ ಆಗಿದ್ದವಳು. ಗಂಡು, ಹೆಣ್ಣಿನ ಸಂಬಂಧವಾಗಲಿ, ಸಂಸಾರದ ಕುರಿತ ತಿಳುವಳಿಕೆಯಾಗಲಿ ಇಲ್ಲದೆ ವೈವಾಹಿಕ ಬದುಕಿನಲ್ಲಿ ಕಾಲಿಟ್ಟ ಆಕೆ ವರ್ಷಕ್ಕೊಮ್ಮೆ ಗರ್ಭಿಣಿಯಾಗುತ್ತಾ ಸಮನಾದ ಪೌಷ್ಟಿಕಾಹಾರವಿಲ್ಲದೆ ಆಗಾಗ್ಗೆ ಗರ್ಭಪಾತಕ್ಕೊಳಗಾಗಿ, ಅನಾರೋಗ್ಯಕ್ಕೀಡಾಗಿ ಇಪ್ಪತ್ತು ವರ್ಷಕ್ಕೆಲ್ಲಾ ಬದುಕಿನ ಎಲ್ಲ ಕಹಿಯನ್ನು ಅನುಭವಿಸಿ ಕ್ಷಯರೋಗಕ್ಕೆ ತುತ್ತಾಗುತ್ತಾಳೆ. ವಿದ್ಯಾಭ್ಯಾಸದ ಗಂಧವೂ ಇಲ್ಲದ ಗಂಡನ ಗಂಡು ಬುದ್ದಿ ಮತ್ತು ಎಲ್ಲ ರೀತಿಯ ಮೂಢ ನಂಬಿಕೆಗಳನ್ನು ಮೈಗೂಡಿಸಿಕೊಂಡ ಅಶ್ರಯ ದಬ್ಬಾಳಿಕೆಯ ನಡುವೆ ಆಕೆ ಸೋತು ಸುಣ್ಣವಾಗುತ್ತಾಳೆ. ಸೊಸೆಯ ಖಾಯಿಲೆಗೆ ಚಿಕಿತ್ಸೆಗಾಗಿ ವೈದ್ಯರ ಬಳಿ ಹೋಗದೆ ಮೌಲ್ವಿಗಳ ಬಳಿ ಹೋಗಿ ಮಂತ್ರಿಸಿದ ನೀರು ತಂದು ಸೊಸೆಗೆ ಕುಡಿಸುತ್ತಾಳೆ ಅತ್ತೆ. ಕೊನೆಗೂ ನಸೀಮಾ ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದಾಗ ಗಂಡನಾದವನು ತನ್ನ ಸುಖಕ್ಕಾಗಿ ಮಕ್ಕಳ ನೆಪವನ್ನು ಮುಂದೊಡ್ಡಿ ನಿರಾಂತಕವಾಗಿ ಇನ್ನೋರ್ವಳನ್ನು ವಿವಾಹವಾಗಿ ಮನೆಗೆ ಕರೆತರುತ್ತಾನೆ. ಆಕೆ ಕೊನೆಯುಸಿರೆಳೆಯುವವರೆಗೆ ಕಾಯುವ ತಾಳ್ಮೆಯೂ ಇಲ್ಲದೆ ಆಕೆಯ ಕಣ್ಣ ಮುಂದೆಯೇ ಹೊಸ ಹೆಂಡತಿಯೊಡನೆ ಸುಖಿಸುತ್ತಾನೆ. ಇದು ಒಂದು ನೈಜ ಘಟನೆಯನ್ನಾಧರಿಸಿ ಬರೆದ ಕಾದಂಬರಿಯಾಗಿದ್ದು, ನಿಜ ಜೀವನದಲ್ಲಿ ಆಕೆ ಬದುಕುಳಿಯಲಿಲ್ಲ... ದೈಹಿಕವಾಗಿಯೂ ಮಾನಸಿಕವಾಗಿಯೂ ಯಾತನೆಯನ್ನನುಭವಿಸುತ್ತ ಹಾಸಿಗೆ ಹಿಡಿದಿದ್ದು, ಆಕೆ ತನ್ನ ಮನೆಯಲ್ಲಿಯೇ ಪರಕೀಯಳಾಗಿ ಕೊನೆಯುಸಿರೆಳೆಯುತ್ತಾಳೆ.

ಆದರೆ, ನನ್ನ ಕಾದಂಬರಿಯ ಪಾತ್ರಗಳನ್ನು ಪ್ರಶ್ನೆ ಕೇಳುವ ಸಲುವಾಗಿಯೇ ಸೃಷ್ಟಿಸಿದ್ದೆನಾದುದರಿಂದ ನಸೀಮಾ ಬದುಕುಳಿದು ಪ್ರಶ್ನೆ ಕೇಳುತ್ತಾಳೆ, “ನೀನು ಮೂರು ಬಾರಿ 'ತಲಾಖ್' ಎಂದು ಹೇಳದಿದ್ದರೂ ಪರವಾಗಿಲ್ಲ: ನನಗಿಷ್ಟ ಬಂದವರೊಡನೆ, ನನ್ನನ್ನು ಅರ್ಥ ಮಾಡಿಕೊಂಡವರೊಡನೆ ನಾನು ಬಾಳುವೆ" ಎಂಬ ಉತ್ತರವನ್ನು ಈವರೆಗೆ ಯಾವ ಮುಸ್ಲಿಂ ಹೆಣ್ಣು ತನ್ನ ಗಂಡನಿಗೆ ನೀಡಿರಲಾರಳು. ತನ್ನ ಗಂಡನಿಂದ ಕೊನೆಯಿಲ್ಲದೆ ಶೋಷಣೆಗೊಳಗಾಗಿದ್ದರೂ ಎಂತಹ ತಿರಸ್ಕಾರ ಮತ್ತು ಅವಹೇಳನಕ್ಕೆ ಗುರಿಯಾಗಿದ್ದರೂ ಆತ ಬಂದು ಕರೆದಾಗ ಕುರಿಯಂತೆ ತಲೆ ತಗ್ಗಿಸಿ ಆತನ ಹಿಂದೆ ನಡೆಯುವುದೇ ರೂಡಿ. ಒಮ್ಮೆಯಾದರೂ ಒಬ್ಬರಾದರೂ ಇಂತಹ ಪ್ರತಿಭಟನೆ ತೋರಬೇಕೆಂಬುದು ನನ್ನ ಅಪೇಕ್ಷೆಯಾಗಿತ್ತು. “ನೀನು ಮಾಡಿದಂತೆಯೇ, ನಿನ್ಗೆ ಖಾಯಿಲೆಯಾದಾಗ ನಾನು ಇನ್ನೊಬ್ಬನೊಡನೆ ಹೊರಟು ಹೋದರೆ ನಿನಗೇನನ್ನಿಸುವುದು? ನಿನ್ನ ಪ್ರತಿಕ್ರಿಯೆ ಏನು?" ಎಂದು ಕೇಳಿದವರಾರೂ ಇರಲಾರರು. ಹೆಚ್ಚೆಂದರೆ ಮಾನಸಿಕ ಸಮತೋಲನ ಕಳೆದುಕೊಂಡು ಭೂತ, ಯಕ್ಷಿಗಳ ಮೊರೆ ಹೊಕ್ಕು ತಮ್ಮ ಮನದಾಳದಲ್ಲಿ ಕುದಿಯುತ್ತಿದ್ದ ಭಾವನೆಗಳನ್ನು ಮಾತಿನ ರೂಪದಲ್ಲಿ ಹೊರ ಹಾಕಲು ಪ್ರಯತ್ನಿಸಬಹುದಷ್ಟೆ. ಆದರೆ ನಸೀಮ ಗಂಡನೊಡನೆ ಈ ಪ್ರಶ್ನೆಯನ್ನೂ ಕೇಳುತ್ತಾಳೆ.

ನನ್ನ ಈ ಎರಡು ಕಾದಂಬರಿಗಳು ಬೆಳಕು ಕಂಡಾಗ ನಮ್ಮ ಸಮಾಜದ ಪುರುಷರ ನಡವಳಿಕೆ ಹೇಗಿತ್ತು ಎಂಬುದರ ಕುರಿತು ನಾನು ಮತ್ತೊಮ್ಮೆ ವಿವರಣೆ ನೀಡಬೇಕಾಗಿಲ್ಲವೆಂದುಕೊಂಡಿದ್ದೇನೆ. ಸರ್ವಾಧಿಕಾರಿಗಳಾಗಿದ್ದು ಪ್ರತಿಭಟನೆ ಏನೆಂದೇ ತಿಳಿಯದ ನಮ್ಮ ಪುರುಷರು ನನ್ನ ಕೃತಿಗಳ ಮೂಲಕ ಹೊರಹೊಮ್ಮಿದ ಪ್ರತಿಭಟನೆಯನ್ನು ಕಂಡು ಆಘಾತಗೊಂಡರು. ತಮ್ಮ ಸಮಾಜದ ಮಹಿಳೆಯೋರ್ವಳು ತಮ್ಮನ್ನು ಈ ರೀತಿ ಪ್ರಶ್ನಿಸುತ್ತಾಳೆಂಬ ವಾಸ್ತವತೆಗೆ ಹೊಂದಿಕೊಳ್ಳುವುದು ಈ ಜನರಿಗೆ ಸುಲಭ ಸಾಧ್ಯವಲ್ಲ. ಆದರೂ ನಿಧಾನವಾಗಿ ಇವರು ಈ ಆಘಾತವನ್ನು ಜೀರ್ಣಿಸಿಕೊಳ್ಳುತ್ತಿದ್ದಾರೆ.

ನಮ್ಮ ಸಮಾಜದಲ್ಲಿ, ಅದರಲ್ಲೂ ಅನಕ್ಷರಸ್ಥರಿಂದ ತುಂಬಿದ ಹಳ್ಳಿಗಳಲ್ಲಿ ನಾದಿರಾ, ನಸೀಮ, ನಫೀಸರುಗಳು ಮೂಡಿ ನೆಸರುಗಳು ಮೂಡಿ ಮರೆಯಾಗುತ್ತಲೇ ಇದ್ದಾರೆ..

(ಕೃಪೆ: ಸಂವಾದ, ಕನ್ನಡ ಮಹಿಳಾ ಸಾಹಿತ್ಯ ವಿಶೇಷಾಂಕ. ಸಂಪಾದಕ: ರಾಘವೇಂದ್ರ ಪಾಟೀಲ)

MORE FEATURES

'ಪ್ರೇಮಾಯತನ' ಒಲವ ಕವಿತೆಗಳ ಹೂಗುಚ್ಛವಾಗಿದೆ

24-04-2024 ಬೆಂಗಳೂರು

"ಇತ್ತೀಚಿನ ದಿನಗಳಲ್ಲಿ ನಮ್ಮ ಯುವಜನತೆ 'ಪ್ರೀತಿ' ಯನ್ನು ಅರ್ಥೈಸಿಕೊಳ್ಳುವಲ್ಲಿ ವಿಫಲರಾಗುತಿದ್ದಾರೆ. ಪ್...

ತುಳುನಾಡಿನ ದೈವಾರಾಧನೆಯ ಒಳ, ಹೊರಗಿನ ವಿಚಾರಗಳನ್ನು ಈ ಕೃತಿ ದಾಖಲಿಸಿದೆ

24-04-2024 ಬೆಂಗಳೂರು

"ಇದನ್ನು ಪುಸ್ತಕ ಅನ್ನುದಕ್ಕಿಂತಲೂ ದೈವಗಳ ಬಗ್ಗೆ ಭಕ್ತಿ , ಪ್ರೀತಿ ಇರುವವರ ಮನೆಯಲ್ಲಿರಲೆಬೇಕಾದ ಅಧ್ಬುತವಾದ ಗ್ರಂ...

ಸಾಮಾಜಿಕ ನ್ಯಾಯದ ಪ್ರಜ್ಞೆಯಾಗಿ ಡಾ. ರಾಜ್ ಕುಮಾರ್

24-04-2024 ಬೆಂಗಳೂರು

ಕನ್ನಡ ರಂಗಭೂಮಿ ಮತ್ತು ಚಿತ್ರರಂಗ ಕಂಡ ಮೇರು ಕಲಾವಿದ ಡಾ.ರಾಜ್ ಕುಮಾರ್. ನಟಸಾರ್ವಭೌಮ, ವರನಟ ಡಾ.ರಾಜ್ ಕುಮಾರ್ ತಮ್ಮ ಚಿ...