ನನ್ನನ್ನು ಕೊಂದರೂ ಪರವಾಗಿಲ್ಲ; ಪುಸ್ತಕಗಳಿಗೆ ಬೆಂಕಿ ಇಟ್ಟರಲ್ಲಾ…..!  

Date: 10-04-2021

Location: ಬೆಂಗಳೂರು


‘ನನ್ನನ್ನು ಕೊಂದರೂ ನೋವಾಗುತ್ತಿರಲಿಲ್ಲ. ಆದರೆ, ನಾನು ನನ್ನ ಕನಸನ್ನು ನನಸು ಮಾಡಿಕೊಳ್ಳುವ ಗ್ರಂಥಾಲಯಕ್ಕೇ ಬೆಂಕಿ ಇಟ್ಟಿದ್ದು ತೀವ್ರ ನೋವಾಗುತ್ತಿದೆ’

ಸುಮಾರು 11 ಸಾವಿರಕ್ಕೂ ಆಧಿಕ ಪುಸ್ತಕಗಳ ಸಂಗ್ರಹದೊಂದಿಗೆ ಬೃಹತ್ ಗ್ರಂಥಾಲಯದ ಕನಸು ನನಸಾಗಿಸಿಕೊಳ್ಳುವ ಮೂಲಕ ಬದುಕಿನ ಖುಷಿಗೆ ಹಂಬಲಿಸುತ್ತಿದ್ದ ಸೈಯದ್ ಇಸಾಕ್ ಅವರ ಅಳಲಿದು.

ಹೌದು! ಸೈಯದ್ ಇಸಾಕನ ಕನಸು ಭಗ್ನಗೊಂಡಿದೆ. ಅಕ್ಷರ ದ್ವೇಷಿಗಳಿಂದ ಪುಸ್ತಕಗಳಿಗೆ ಬೆಂಕಿ ಇಟ್ಟ ಅಲ್ಲಲ್ಲ...ಪುಸ್ತಕ ಪ್ರೇಮಿಯೊಬ್ಬನ ಕನಸುಗಳಿಗೆ ಕೊಳ್ಳಿ ಇಟ್ಟ ಅಮಾನವೀಯ ಘಟನೆ ಸಾಂಸ್ಕೃತಿಕ ನಗರ ಎಂದೇ ಖ್ಯಾತಿಯ ಮೈಸೂರಿನಲ್ಲಿ ನಡೆದಿದೆ. ನಾಗರಿಕ ಸಮಾಜ ತಲೆತಗ್ಗಿಸುವಂತಾಗಿದೆ.

ಬಡತನದ ಮಧ್ಯೆಯೂ ಪುಸ್ತಕಗಳನ್ನು ಖರೀದಿಸಿ, ಜನಮಾನಸದಲ್ಲಿ ಓದುವ ಪ್ರವೃತ್ತಿಯನ್ನು ಬೆಳೆಸಲು ತನ್ನ ಸಾಮಾನ್ಯ ಮನೆಯಲ್ಲಿ ಗ್ರಂಥಾಲಯ ಎನ್ನಬಹುದಾದ ಓದುವ ವ್ಯವಸ್ಥೆ ಮಾಡಿದ್ದ. ತಾನಂತೂ ಓದು-ಬರಹ ಕಲಿತಿಲ್ಲ. ಆದರೆ, ಓದು ಬರಹ ಗೊತ್ತಿಲ್ಲದೇ ಮೂಂದಿನ ಪೀಳಿಗೆ ಇರಬಾರದು ಎಂಬ ಮಹತ್ ಉದ್ದೇಶದೊಂದಿಗೆ ಬದುಕಿನ ಬಹುಭಾಗದ ಲಾಭವನ್ನು -ಶ್ರಮವನ್ನು, ಸಮಯವನ್ನು ಪುಸ್ತಕ ಖರೀದಿಸುವಲ್ಲಿ ಮೀಸಲಿಟ್ಟಿದ್ದವನ ಬದುಕು ಈಗ ಅಕ್ಷರಶಃ ಪುಸ್ತಕಗಳೊಂದಿಗೆ ಬೂದಿಯಾಗಿವೆ. ಸುಮಾರು 11 ಸಾವಿರ ಪುಸ್ತಕಗಳು ಬೆಂಕಿಗೆ ಆಹುತಿಯಾಗಿದೆ. ಈ ಪುಸ್ತಕಗಳ ಸಂಗ್ರಹಣೆಯಲ್ಲಿ ದಾನಿಗಳ ಪುಸ್ತಕಗಳೂ ಸೇರಿದ್ದವು.

ಏನಿದು ಘಟನೆ?

ಮೈಸೂರಿನ ರಾಜೀವ್ ನಗರದ ಎರಡನೇ ಹಂತದಲ್ಲಿ ಕಟ್ಟಿಕೊಂಡ ಗುಡಿಸಲು ನಿವಾಸಿ; ಹೆಸರು-ಸೈಯದ್‌ ಇಸಾಕ್. ಮನೆಗಳ ಶೌಚಾಲಯ ವ್ಯವಸ್ಥೆ ಶುಚಿಗೊಳಿಸುವ, ದುರಸ್ತಿಗೊಳಿಸುವ ಕೆಲಸ ಆತನದು. ಇಂತಹ ಕೆಲಸ ಮಾಡುತ್ತಿದ್ದರೂ ತನ್ನ ಮನೆಯೊಂದು ದೊಡ್ಡ ಗ್ರಂಥಾಲಯವಾಗಬೇಕು. ಅಲ್ಲಿ ಎಲ್ಲ ರೀತಿಯ ಪುಸ್ತಕಗಳಿರಬೇಕು, ಜನರು ಅಲ್ಲಿಗೆ ಬಂದು ಓದಬೇಕು ಎಂಬ ಕನಸು ಕಂಡವರು. ಇದನ್ನು ಸಾಕಾರಗೊಳಿಸಲು 2011 ರಿಂದಲೇ ಕಾರ್ಯೋನ್ಮುಖರಾಗಿದ್ದರು.

ತಾನು ಶಾಲೆಗೆ ಹೋದವನೇ ಅಲ್ಲ; ಅಕ್ಷರ ಗೊತ್ತಿಲ್ಲ. ಆದರೆ, ತಮ್ಮ ಹಾಗೆ ಜನ ಇರಬಾರದು. ಜನರಲ್ಲಿ ಓದಿನ ಹವ್ಯಾಸ ಬೆಳೆಸಲು ತನ್ನಂದಾದ ಸೇವೆ ಮಾಡಬೇಕು ಎಂಬ ಅದಮ್ಯ ಪ್ರೀತಿಯೇ ಅವರನ್ನು ಈ ಪುಸ್ತಕ ಸಂಗ್ರಹಣೆ ಕಾರ್ಯಕ್ಕೆ ಪ್ರೇರೇಪಿಸಿತ್ತು. ತಾನು ದುಡಿದ ಲಾಭದ ದುಡ್ಡಿನಲ್ಲಿ ಪುಸ್ತಕ ಖರೀದಿ ಕಾರ್ಯವೂ ನಡೆದೇ ಇತ್ತು.

ಹೆಸರಿರದ ಗ್ರಂಥಾಲಯ, ಭಗವದ್ಗೀತೆ, ಬೈಬಲ್ ಭಸ್ಮ: ಭಾವನಾತ್ಮಕವಾಗಿಯಾದರೂ ತನ್ನ ಮನೆಯ ಗುಡಿಸಿಲಿನ ಈ ಗ್ರಂಥಾಲಯಕ್ಕೆ ಯಾವ ಧರ್ಮದ ಹೆಸರೂ ಇಟ್ಟಿರಲಿಲ್ಲ. ಮಹಾತ್ಮಗಾಂಧಿ, ಡಾ. ಬಿ.ಆರ್. ಅಂಬೇಡ್ಕರ್, ಕುವೆಂಪು, ಡಾ. ರಾಜಕುಮಾರ ಸೇರಿದಂತೆ ಸಮಾಜ ಸುಧಾರಕರ, ಕನ್ನಡ ಪ್ರೇಮಿಗಳ ಭಾವಚಿತ್ರಗಳಿದ್ದವು. ಅಷ್ಟೇಕೆ? ಭಗವದ್ಗೀತೆ, ಕುರಾನ್, ಬೈಬಲ್ ಗ್ರಂಥಗಳೂ ಇದ್ದವು. ಸರ್ವಧರ್ಮಕ್ಕೆ ಸಂಬಂಧಿಸಿದ ಪುಸ್ತಕಗಳು ಇದ್ದವು. ಜಾತಿ-ಧರ್ಮ ಮೀರಿ ಕಟ್ಟಿದ ಗ್ರಂಥಾಲಯವೊಂದು ಈಗ ಅಕ್ಷರ ದ್ವೇಷಿ-ಮೂಲಭೂತವಾದಿ ಮನಸ್ಸುಗಳಿಂದ ಭಸ್ಮವಾಗಿದೆ.

7 ವರ್ಷದ ಹಿಂದೆಯೂ ದಾಳಿ: ಘಟನೆ ಕುರಿತು ಪ್ರತಿಕ್ರಿಯಿಸಿದ ಸೈಯದ್ ಇಸಾಕ್, ‘ನನಗೀಗ 63 ವರ್ಷ, 2014ರಲ್ಲಿ ನನಗೆ ಡೆಂಗ್ಯೂ ಜ್ವರ ಬಂದಿತ್ತು. ಆಸ್ಪತ್ರೆಗೆ ದಾಖಲಾಗಿದ್ದ ಸಂದರ್ಭ ದಲ್ಲಿ ನನ್ನ ಗುಡಿಸಲಿನ ಮೇಲೆ ಎರಡು ಬಾರಿ ದಾಳಿ ಮಾಡಲಾಗಿತ್ತು. ಈಗ ಗ್ರಂಥಾಲಯವನ್ನೆ ಸುಟ್ಟು ಹಾಕಿದ್ದಾರೆ. ಪುಸ್ತಕ ಸಂಸ್ಕೃತಿ ಬೆಳೆಸುವ ನನ್ನ ಪ್ರವೃತ್ತಿಯನ್ನು ಇವರು ಸಹಿಸುತ್ತಿಲ್ಲ. ಕಳೆದ ಮೂರ್ನಾಲ್ಕು ವರ್ಷದಿಂದ ಕೆಲವರು ನನ್ನ ಮೇಲಿನ ದಾಳಿಗೆ ಸಂಚು ನಡೆಸುತ್ತಿದ್ದರು ಎಂದಷ್ಟೇ ಹೇಳುತ್ತಾರೆ.

‘ನನ್ನನ್ನು ಕೊಂದರು ನನಗಷ್ಟು ನೋವಾಗುತ್ತಿರಲಿಲ್ಲ ಅಷ್ಟು ಪ್ರೀತಿಯಿಂದ ತುಂಬಾ ಕಷ್ಟಪಟ್ಟು ಕಟ್ಟಿದ ಗ್ರಂಥಾಲಯವನ್ನ ಸುಟ್ಟು ಹಾಕಿದ್ದು ನನ್ನಿಂದ ಸಹಿಸಲಾಗುತ್ತಿಲ್ಲ’ ಎನ್ನುವುದು ಮಾತ್ರ ಆತನ ನಿರಂತರ ನೋವು.

ನೆಟ್ಟಿಗರ ಬೆಂಬಲ: ಸೈಯದ್ ಇಸಾಕ್ ಅವರ ಗುಡಿಸಿಲಿನ ಗ್ರಂಥಾಲಯಕ್ಕೆ ಬೆಂಕಿ ಹಚ್ಚಿದ ಕಿಡಿಗೇಡಿಗಳ ದುಷ್ಕೃತ್ಯಕ್ಕೆ ನೆಟ್ಟಿಗರಿಂದ ಆಕ್ರೋಶ ವ್ಯಕ್ತವಾಗುತ್ತಿದೆ. ಮತ್ತೇ ಅದೇ ಗುಡಿಸಲಿನಲ್ಲಿ ಗ್ರಂಥಾಲಯ ನಳನಳಿಸಲು ಮಾಡುವಂತೆ ಸಹಾಯದ ಭರವಸೆ ಸಿಗುತ್ತಿದೆ. ಕರ್ನಾಟಕ ರಾಜ್ಯ ಸಚಿವ ಎಸ್. ಸುರೇಶಕುಮಾರ ಫೇಸ್ ಬುಕ್ ನಲ್ಲಿ ಪ್ರತಿಕ್ರಿಯಿಸಿ ‘ ಸೈಯದ್ ಇಸಾಕ್ ರಿಗೆ ಅಗತ್ಯ ನೆರವಿನ ಭರವಸೆ ನೀಡಿದ್ದರೆ, ಈಗ ಸುಟ್ಟು ಹೋದ ಪುಸ್ತಕಗಳಿಗಿಂತ ಹೆಚ್ಚು ಪುಸ್ತಕ ನೀಡಲು ಸಿದ್ಧ, ಅಲ್ಲಿಯೇ ಗ್ರಂಥಾಲಯ ನಿರ್ಮಾಣವಾಗಲಿ ಎಂಬ ಆಶಯ ಬಹುತೇಕ ಪ್ರಕಾಶಕರದ್ದು. ಶೀಘ್ರವೇ ಈ ಎಲ್ಲ ಭರವಸೆ ಸಾಕಾರಗೊಳ್ಳಲಿ ಎಂಬುದೇ ನಮ್ಮ ಹಾರೈಕೆ.

ಸಯ್ಯದ್ ಇಸಾಕ್ ವಿಳಾಸ: ಮನೆ ನಂ. 304/2, 4ನೇ ಕ್ರಾಸ್, ಅಮ್ಮರ್ ಮಸೀದಿ ಹತ್ತಿರ, ಶಾಂತಿನಗರ, ಮೈಸೂರು- 570019 , (ಮೊ.) 9901266487

MORE NEWS

ಎಸ್.ಜ್ಯೋತಿ ಅವರ ‘ಅತ್ತೆ ನಿಮಗೊಂದು ಪ್ರಶ್ನೆ’ ಪುಸ್ತಕ ಬಿಡುಗಡೆ ಸಮಾರಂಭ

19-03-2024 ಬೆಂಗಳೂರು

ತುಮಕೂರು: ಪುರಾಣ ಕಾವ್ಯ ಬೇರೆ, ಪುರಾಣ ಶಾಸ್ತ್ರ ಬೇರೆ. ಪುರಾಣ ಶಾಸ್ತ್ರಗಳು ವಾಚ್ಯಾರ್ಥವಾದರೆ, ಪುರಾಣ ಕಾವ್ಯಗಳು ಧ್ವನ್...

ಕನ್ನಡ-ಕರ್‍ನಾಟಕಗಳಿಗೆ ಸಂಬಂದಿಸಿದ ಸಂಶೋದನಾ ಪ್ರಬಂದಗಳಿಗೆ ಆಹ್ವಾನ

17-12-2023 ಬೆಂಗಳೂರು

ಮಸ್ಕಿ: ಬಂಡಾರ ಪ್ರಕಾಶನವು `ಕನ್ನಡ ಆರಯ್ಪು-2023' ಸಲುವಾಗಿ ಕನ್ನಡ-ಕರ್‍ನಾಟಕಗಳಿಗೆ ಸಂಬಂದಿಸಿದ ಸಂಶೋದನಾ ಪ್ರ...

ಸಾಂಸ್ಕೃತಿಕ ಸಂವಿಧಾನದ ಅರಿವು ಅಗತ್ಯ : ಪ್ರೊ.ನಟರಾಜ ಬೂದಾಳು

06-12-2023 ಬೆಂಗಳೂರು

ಕಲಬುರಗಿ: ಗುಲಬರ್ಗಾ ವಿಶ್ವವಿದ್ಯಾಲಯ ಕನ್ನಡ ಅಧ್ಯಯನ ಸಂಸ್ಥೆ, ಶ್ರೀ ಸಿದ್ಧಲಿಂಗೇಶ್ವರ ಪ್ರಕಾಶನ ಕಲಬುರಗಿ ಮತ್ತು ಜನ ಪ್...