‘ನನ್ನೊಳಗಿನ ಅಪ್ಪ’ನ ಒಳಗೂ ಹೊರಗೂ


ಲೇಖಕ ಆತ್ಮಾನಂದ ಅವರ ಆತ್ಮಕಥೆ ‘ನನ್ನೊಳಗಿನ ಅಪ್ಪ. ಮೂರು ತಲೆಮಾರಿನವರ ಬದುಕಿನ ವಿವರಗಳನ್ನು ಕಟ್ಟಿ ಕೊಡುತ್ತದೆ ಎನ್ನುತ್ತಾರೆ ಉಪನ್ಯಾಸಕಿ ವನಿತಾ ಪಿ ವಿಶ್ವನಾಥ್. ತಂದೆಯ ನೆನಪುಗಳೊಂದಿಗೆ ತಮ್ಮ ಆತ್ಮಕಥೆಯನ್ನು ಬೆಸೆದುಕೊಳ್ಳುವ ಈ ಕೃತಿಯ ಕುರಿತು ಅವರ ಅರ್ಥಪೂರ್ಣ ವಿಮರ್ಶೆ ನಿಮ್ಮ ಓದಿಗಾಗಿ

ಯಾರು ಕದಲುವುದಿಲ್ಲವೋ ಅವರಿಗೆ ತಮ್ಮನ್ನು ಬಿಗಿದ ಸರಪಳಿಯ ಅರಿವು ಉಂಟಾಗದು.
- ರೋಜ಼ ಲಕ್ಸೆಂಬರ್ಗ್

ಸರಪಳಿಯಿಂದ ಕಳಚಿಕೊಳ್ಳುವುದಷ್ಟೇ ಬಿಡುಗಡೆಯಲ್ಲ. ಇತರರ ಸ್ವಾತಂತ್ರ್ಯವನ್ನೂ ಹೆಚ್ಚಿಸುತ್ತ, ಗೌರವಿಸುತ್ತ ಬದುಕುವುದೇ ನಿಜವಾದ ಬಿಡುಗಡೆ.
-ನೆಲ್ಸನ್ ಮಂಡೇಲ

ಈಗಾಗಲೇ ಸ್ಥಾಪನೆಗೊಂಡ ತನ್ನ ಸ್ಥಿತಿಯ ಅರಿವು, ಆ ಸ್ಥಿತಿಯಿಂದ ಮತ್ತೊಂದು ಸ್ಥಿತಿಯತ್ತ ಸಾಗಲು ಬೇಕಾದ ಪ್ರೇರಣೆ ಮತ್ತು ಗಮ್ಯ; ಇವು ನಿಚ್ಚಳವಾಗಿದ್ದಾಗ, ಆತ್ಮಾನಂದರ ತಂದೆ ಪುಟ್ಟಸ್ವಾಮಿಯಂಥಾ ವ್ಯಕ್ತಿಗಳು ಮೂಡಿ ಮಹತ್ವದ ಸಾಮಾಜಿಕ ಪಲ್ಲಟಕ್ಕೆ ಜೊತೆಯಾಗುತ್ತಾರೆ. ಅಂಥದ್ದೊಂದು ಚಲನೆ ಪಡೆದ ಕಾಲದ ಕಥನವೇ ಈ ಆತ್ಮಕಥನ.

ದಮನಿತರ ಜೀವನವನ್ನು ಉದ್ದೇಶಪೂರ್ವಕವಾಗಿ ಸಹಜ ಬದುಕಿನ ಲಯದ ವಿಸ್ಮೃತಿಗೆ ತಳ್ಳಿ, ಆ ಸ್ಥಿತಿಯನ್ನೇ ಸಹಜ ಎಂದು ಒಪ್ಪಿಸುವ ಪರಂಪರೆಯ ಒತ್ತಡ ತೀವ್ರವಾಗಿರುವಾಗ, ಈ ಸ್ಥಿತಿಯಿಂದ ತಮ್ಮನ್ನು ತಾವು ಬಿಡಿಸಿಕೊಳ್ಳಬೇಕು ಎಂದು ಆ ದಮನಿತರಿಗೆ ಪ್ರಜ್ಞಾಪೂರ್ವಕವಾಗಿಯೇ ಅನಿಸಲು ಯಾವುದೋ ಒಂದು ಪ್ರೇರಕ ಶಕ್ತಿ ಒದಗಿಬರಬೇಕಾಗುತ್ತದೆ. ಅಂಥದ್ದೊಂದು ದೊಡ್ಡ ಶಕ್ತಿಯಾಗಿ ಅಂಬೇಡ್ಕರರ ವಿಚಾರಧಾರೆಗಳು, ಚಳವಳಿಗಳು ನಮ್ಮ ನಾಡಿನ ದಲಿತ ಪ್ರಜ್ಞೆಯನ್ನು ಎಚ್ಚರಿಸಿತು. ಆ ಪ್ರಜ್ಞೆಯು, ಗ್ರಾಮಭಾರತವನ್ನು ವಸ್ತುನಿಷ್ಠವಾಗಿ ಕಂಡರಿಸಿದೆ. ಗ್ರಾಮಭಾರತದ ಸಂರಚನೆ ಸಂಕೀರ್ಣವಾಗಿದ್ದು ತರತಮದ ಸ್ಥಿರೀಕರಣ ಮತ್ತು ಅದರ ಪ್ರತಿಪಾದನೆ ಇಂದಿಗೂ ದಿಗ್ಭ್ರಮೆ ಮೂಡಿಸುವಂಥದ್ದು. ಹೊರನೋಟಕ್ಕೆ ಹಳ್ಳಿಯು ಒಂದು ರಮ್ಯವಾದ ತಾಣ. ಅಲ್ಲಿ ಭ್ರಾತೃತ್ವಭಾವ, ಮಾನವೀಯ ಅಂತಃಕರಣ ಉಳಿದಿದೆ ಎಂದು ಅನಿಸಬಹುದು. ಆದರೆ, ಅದು ಅಂತರಾಳದಲ್ಲಿ ಜಾತೀಯತೆ, ಕಂದಾಚಾರ, ಅಸ್ಪೃಶ್ಯತೆ, ಕ್ರೌರ್ಯಗಳ ಪೋಷಿಸುವ ಕೊಂಪೆಯೂ ಆಗಿದೆ. ಸಂವಿಧಾನ ರಚನಾ ಸಭೆಯಲ್ಲಿ ಅಂಬೇಡ್ಕರ್ ಹೀಗೆ ಹೇಳಿದ್ದರು – ‘ಹಳ್ಳಿಯೆಂದರೆ ಸ್ಥಳೀಯವಾದದ ಕೂಪ; ಅಜ್ಞಾನ, ಸಂಕುಚಿತ ಮನೋಭಾವ ಹಾಗೂ ಕೋಮುವಾದದ ಗುಹೆ. ಇವಿಷ್ಟಲ್ಲದೆ, ಇನ್ನೇನು ತಾನೇ ಆಗಿರಲು ಸಾಧ್ಯ?’ (ನವೆಂಬರ್ 4, 1948)

ಭಾರತ ಎಂಬ ಆಧುನಿಕ ರಾಷ್ಟ್ರದ ಮೂಲಭೂತ ಘಟಕ ಹಳ್ಳಿಯಲ್ಲ, ಅದು ವ್ಯಕ್ತಿ ಅಂತಾಗಲು, ವ್ಯಕ್ತಿಸ್ವಾತಂತ್ರ್ಯ, ಸಮಾನತೆ ಮುಂತಾದ ಲಿಬರಲ್ ತತ್ವಗಳಿಗೆ ಸ್ಥಾನ ಸಿಗಲು, ಹಳ್ಳಿಯ ಕುರಿತು ಅಂಬೇಡ್ಕರರ ಈ ನೇತ್ಯಾತ್ಮಕ ನಿಲುವೂ ಒಂದು ಕಾರಣವಾಗಿದೆ. ಇನ್ನು, ಹಳ್ಳಿಗಳಿಂದ ಹೊರಬಂದು ಶೈಕ್ಷಣಿಕವಾಗಿ, ಸಾಮಾಜಿಕವಾಗಿ ಮತ್ತು ರಾಜಕೀಯವಾಗಿ ದಲಿತರು ತಮ್ಮ ಅಸ್ಮಿತೆಯನ್ನು ಕಟ್ಟಿಕೊಳ್ಳುವ ಅಗತ್ಯವಿದೆ ಎಂದೂ ಅಂಬೇಡ್ಕರ್ ಪ್ರತಿಪಾದಿಸಿದರು. ಹಳ್ಳಿಯ ಕುರಿತು ಇವರ ವ್ಯಾಖ್ಯಾನವು ಆತ್ಮಾನಂದರ ಆತ್ಮಕಥೆಯಲ್ಲಿ ಕಾಣಿಸಿಕೊಳ್ಳುವ ಕಾಡಕೊತ್ನ ಹಳ್ಳಿಯ ಚಿತ್ರಣಕ್ಕೂ ಅನ್ವಯವಾಗುತ್ತದೆ. ಆದರೆ, ಆ ಹಳ್ಳಿಯಿಂದ ಮಂಡ್ಯವೆಂಬ ಪಟ್ಟಣಕ್ಕೆ ಬಂದಾಗಲೂ ಪುಟ್ಟಸ್ವಾಮಿಯು ಜಾತಿ ತಾರತಮ್ಯ ಅನುಭವಿಸುವ ಪರಿಯನ್ನು ಓದಿದಾಗ, ಜಾತೀಯತೆಯು ಗ್ರಾಮಭಾರತಕ್ಕಷ್ಟೇ ಅಂಟಿಕೊಂಡ ರೋಗವಲ್ಲ ಎನ್ನುವುದು ಸ್ಪಷ್ಟವಾಗುತ್ತದೆ.

ಮೂರು ತಲೆಮಾರಿನವರ ಬದುಕಿನ ವಿವರಗಳನ್ನು ಈ ಕೃತಿ ಕಟ್ಟಿ ಕೊಡುತ್ತದೆ. ದಮನಕಾರಿ ಜಾತೀಯತೆಯನ್ನು ಮೊದಲ ಎರಡು ತಲೆಮಾರಿನವರು ಪ್ರತಿರೋಧಿಸುವ ನಡೆಯೇ ಆ ಕಾಲಕ್ಕೆ ಹಿಡಿದ ಕನ್ನಡಿಯಾಗಿದೆ. ಇವರು ಪ್ರತಿರೋಧದ ಎರಡು ಅವಸ್ಥೆಗಳನ್ನು ಪ್ರತಿನಿಧಿಸುತ್ತಾರೆ ಎಂದು ಹೇಳಬಹುದು. ಮೊದಲನೇ ತಲೆಮಾರಿನ ಸಿದ್ಧ ಹಾಗೂ ಅವನ ಹೆಂಡತಿಯದ್ದು ಪ್ರತಿಕ್ರಿಯೆ ಸ್ವರೂಪದ ಭಾವಪ್ರಧಾನ ಪ್ರತಿರೋಧ. ಆತ್ಮಾನಂದರ ತಂದೆ ಎರಡನೇ ತಲೆಮಾರಿನ ಪುಟ್ಟಸ್ವಾಮಿಯವರದ್ದು ನಿರಂತರ ಕ್ರಿಯಾಶೀಲ ಪ್ರಜ್ಞಾಪೂರ್ವಕ ಪ್ರತಿರೋಧ. ಈ ಅವಸ್ಥಾಂತರಕ್ಕೆ ಕಾರಣ, ಎಚ್ ಎಸ್ ರಾಘವೇಂದ್ರ ರಾವ್ ಅವರು ಈ ಪುಸ್ತಕದ ಪ್ರವೇಶ ನುಡಿಯಲ್ಲಿ ಸರಿಯಾಗಿ ಗುರುತಿಸಿದ ಹಾಗೆ, ಕಳೆದ ಶತಮಾನದ ಏಳು ಎಂಟನೆಯ ದಶಕದವರೆಗೆ ದಲಿತರ ಬದುಕಿನ ಅಂತರ್ಜಲದಂತಿದ್ದ ಅಂಬೇಡ್ಕರ್.

ಸಿದ್ಧ ಮತ್ತು ಅವನ ಹೆಂಡತಿಯು ಜಾತೀಯತೆಯ ಕ್ರೌರ್ಯವನ್ನು ಅನುಭವಿಸುವ ಹಾಗೂ ಪ್ರತಿರೋಧಿಸುವ ಪ್ರಸಂಗಗಳು ಕುತೂಹಲಕಾರಿಯಾಗಿವೆ. ಸಿದ್ಧನ ಹೆಂಡತಿಯೊಮ್ಮೆ ತಮಗೆ ಮುಟ್ಟಲು ನಿಷೇಧವಿದ್ದ ಕೆರೆಯ ನೀರನ್ನು ಸವಾಲಿನ ಮೇರೆಗೆ ತರುತ್ತಾಳೆ. ಆ ಕೃತ್ಯಕ್ಕಾಗಿ ಅವಳನ್ನು ಕಂಬಕ್ಕೆ ಬಿಗಿಯಲಾಗುತ್ತದೆ. ದಂಡ ತೆರುತ್ತಾಳೆ. ಸಿದ್ಧ ಹಠಕ್ಕೆ ಬಿದ್ದವನಂತೆ ಮೇಲ್ಜಾತಿಯವರೊಡನೆ ಜಿದ್ದಿಗೆ ಬೀಳುತ್ತಾನೆ, ಅವರನ್ನು ಎದುರುಹಾಕಿಕೊಳ್ಳುತ್ತಾನೆ. ಇನ್ನು, ಸಿದ್ಧ ಒಮ್ಮೆ, ಭತ್ತ, ತೆಂಗು ಕದ್ದು ತಾನು ಸಿಕ್ಕಿಬೀಳಬಹುದಾದ ಇಕ್ಕಟ್ಟಿನ ಸ್ಥಿತಿಯಲ್ಲಿ ಮಗನಿಂದಲೇ ತನ್ನನ್ನು ಕಂಬಕ್ಕೆ ಬಿಗಿಸಿಕೊಂಡು ಪೊಲೀಸಿನವರು ಬರುವ ಹಾಗೆ ಮಾಡುತ್ತಾನೆ. ಇನ್ನು ಅವನನ್ನು, ಮೇಲ್ಜಾತಿಯವರ ಕುಮ್ಮಕ್ಕಿನಿಂದ ತನ್ನ ಕೇರಿ ಜನಗಳೇ ಮುತ್ತಿಗೆ ಹಾಕಿದಾಗ ಕೈಯನ್ನು ಜಜ್ಜಿಸಿಕೊಂಡ ಪ್ರಸಂಗವು, ಸಿದ್ಧ ಹಾಗೂ ಅವನ ಹೆಂಡತಿಯ ಆವೇಶದ ಅಸಹಾಯಕ ಸೀಮಿತ ನೆಲೆಯನ್ನು ಗ್ರಾಹ್ಯವಾಗಿಸುತ್ತದೆ. ತಮ್ಮ ಬದುಕಿಗೆ ಹಾಗೂ ಆ ಹಳ್ಳಿಗೆ ಯಾವೊಂದು ಬದಲಾವಣೆಯನ್ನೂ ತರಲಾಗದೆ ಇವರು ಅಸಹಾಯಕರಾಗುತ್ತಾರೆ. ಸವರ್ಣೀಯರ ಆಟಾಟೋಪಗಳಿಗೆ ಪ್ರತಿಕ್ರಿಯೆಯಾಗಿ ಪ್ರತಿರೋಧವನ್ನು ಒಡ್ಡುವ ಇವರು, ಹಳ್ಳಿಯ ಜಗತ್ತಿನೊಳಗೇ ಬಂಧಿ. ಹಳ್ಳಿಯೆಂಬ ಜಗತ್ತಿನ ಸೀಮೋಲ್ಲಂಘನೆ ಮಾಡುವ ಅಥವಾ, ಹೊರಗಿನಿಂದ ಬೆಂಬಲವನ್ನೋ, ಪ್ರೇರಣೆಯನ್ನೋ ಪಡೆಯುವ ಅವಕಾಶವೇ ಇವರಿಗೆ ಒದಗುವುದಿಲ್ಲ. ಇವರ ಬದುಕಿನ ಸಂದರ್ಭದಲ್ಲಿ, ಯಥಾಸ್ಥಿತಿಯನ್ನು ಕಾಯ್ದಿರಿಸಿಕೊಳ್ಳುವ ನಿಟ್ಟಿನಲ್ಲಿ ಅಧಿಕಾರ ವ್ಯವಸ್ಥೆಯು ಸಮಾಜದ ಮೇಲಿನ ತನ್ನ ಬಿಗಿ ಹಿಡಿತವನ್ನು ನಿರಾತಂಕವಾಗಿ ಮುಂದುವರಿಸುವುದನ್ನು ನಾವು ಗುರುತಿಸಬಹುದು. ಜಾಯೀಯತೆಯು, ಈ ದೇಶದಲ್ಲಿ ಭದ್ರವಾಗಿ ನೆಲೆನಿಲ್ಲಲು ಒಂದು ರಕ್ಷಣಾತ್ಮಕ ತಂತ್ರವನ್ನು ಅಳವಡಿಸಿಕೊಂಡಿದೆ. ಆ ತಂತ್ರದ ಮೂಲವೇ ಅಸಮಾನತೆ.

ಇನ್ನು, ಎರಡನೇ ತಲೆಮಾರಿನ ಪುಟ್ಟಸ್ವಾಮಿ ಒಬ್ಬ ಗಟ್ಟಿಗ. ಎಳವೆ ಇಂದಲೂ ತಬ್ಬಲಿತನ, ಬಡತನ, ಜಾತಿ ಸಂಬಂಧಿ ಕಲಹಗಳ ನಡುವೆ ತನ್ನ ಬದುಕು ತುಯ್ದಾಡುತ್ತಿದ್ದರೂ ಕಮರದೆ ಬದುಕನ್ನು ಕಟ್ಟಿಕೊಂಡವ. ಆತನಲ್ಲಿ ಬದಲಾವಣೆಯ ತೀವ್ರ ತುಡಿತವನ್ನು ಗುರುತಿಸಬಹುದು. ಆ ತುಡಿತಕ್ಕೆ ಅಂಬೇಡ್ಕರ್ ಚಿಂತನೆಗಳು ಜೊತೆಯಾದವು. ಅವನ್ನು ಆತ ಓದಿ ತಿಳಿದುಕೊಂಡಿದ್ದಲ್ಲ. ಬದಲಿಗೆ, ತಿಳಿದವರ ಒಡನಾಡಿ, ಕೇಳಿ ಅರ್ಥೈಸಿಕೊಂಡಿದ್ದು. ಜೊತೆಗೆ, ಜಾತೀಯ ಶೋಷಣೆಯನ್ನು ಎದುರಿಸುತ್ತಲೇ ಆತ, ಸಾಮಾಜಿಕ ಬದುಕಿನ ಆಳಕ್ಕೆ ಬೇರುಬಿಟ್ಟಿರುವ ಆ ಜಾತೀಯತೆಯ ಸ್ವರೂಪವನ್ನೂ ಅನುಭವದಿಂದ ಅರಿತುಕೊಳ್ಳುತ್ತಾನೆ. ಅಧಿಕಾರವನ್ನು ಸ್ಥಿರಗೊಳಿಸಿಕೊಳ್ಳುವ ಜಾತೀಯತೆಯ ಹುನ್ನಾರಗಳು, ಸಾಮಾಜಿಕ ನ್ಯಾಯ ಒದಗಿಬರಲು ಅಷ್ಟು ಸುಲಭಕ್ಕೆ ಅನುವು ಮಾಡಿಕೊಡವು. ಈ ಕಾರಣಕ್ಕೆ ಪುಟ್ಟಸ್ವಾಮಿ, ಶೈಕ್ಷಣಿಕ ಮತ್ತು ರಾಜಕೀಯವಾಗಿ ದಲಿತರು ಸಜ್ಜುಗೊಳ್ಳಬೇಕೆಂದು ಹೆಜ್ಜೆ ಇಡುತ್ತಾನೆ.

ಬದುಕು ಮತ್ತು ಚಿಂತನೆಯನ್ನು ಬದಲಾಯಿಸಲು ಬೇಕಾದ ಬಾಹ್ಯ ಪ್ರೇರಣೆಗಳು, ಸಿದ್ಧ ಹಾಗೂ ಅವನ ಹೆಂಡತಿಗಿಂತ ಪುಟ್ಟಸ್ವಾಮಿಗೇ ಹೆಚ್ಚು ಒದಗಿಬಂದವು. ಕೃತಿಯ ಆರಂಭ ಭಾಗದಲ್ಲಿಯೇ, ನಾಡಿನ ದಲಿತರಲ್ಲಿ ಸಂಚಲನ ಮೂಡಿಸಿದ್ದ ಬೂಸಾಪ್ರಕರಣದ ಪ್ರಸ್ತಾಪ ಬರುತ್ತದೆ. ಇದರಿಂದ ಪ್ರೇರಣೆ ಪಡೆದ ಪುಟ್ಟಸ್ವಾಮಿ ದೇವರ ಪಟಗಳನ್ನು ತಂದು ನಡುಬೀದಿಯಲ್ಲಿ ಸುಡುತ್ತಾನೆ. ‘ದಾಸೊಕ್ಲು ಆಗಿ, ದೇವ್ರು ಒಡ್ಡಿ, ಪೂಜೆ ಮಾಡಿ ಬರ್ತಿದ್ದ ಪುಟ್ಟಸ್ವಾಮಿ, ಮೈತುಂಬ ವಿಭೂತಿ ಬಳ್ಕೊತಿದ್ದವ ಎಲ್ಲವನ್ನೂ ಕಿತ್ತೊಗೆಯುತ್ತಾನೆ’ (ಪುಟ ಸಂಖ್ಯೆ 22) ಎಂದು ತನ್ನ ತಂದೆಯ ಮನಃಪರಿವರ್ತನೆಯನ್ನು ಆತ್ಮಾನಂದರು ಬಣ್ಣಿಸುತ್ತಾರೆ. ತನ್ನ ಈ ನಡೆಯನ್ನು ಪುಟ್ಟಸ್ವಾಮಿ ಹೀಗೆ ಸಮರ್ಥಿಸಿಕೊಳ್ಳುತ್ತಾನೆ - ತಾವು ಬದುಕುವುದಕ್ಕೊಸ್ಕರ ಅದೇನೋ ಸಂಸ್ಕೃತಿ ಅಂತಾರಲ್ಲಪ್ಪ, ಸಂಸ್ಕೃತಿ, ಸಂಸ್ಕೃತಿ ಅಂತ ಬಣ್ಣ ಕಟ್ಟಿ ಜನಗಳನ್ನ ಮರಳ್ಮಾಡ್ಬಿಟ್ಟವರೆ. ಬುದ್ಧ ಯಾವತ್ತೋ ಹೇಳ್ದ. ನನ್ನಪ್ಪ ಅಂಬೇಡ್ಕರ್ ಬರೆದಿಟ್ಟು ಹೋದ. ಆದ್ರೂ ಯಾರಿಗೂ ಅರ್ಥವಾಗಲಿಲ್ಲ!’ (ಪುಟ ಸಂಖ್ಯೆ 24)

ಮತೀಯ ರಾಜಕಾರಣದ ಮೂಲಕ ಅಧಿಕಾರದ ಚುಕ್ಕಾಣಿ ಹಿಡಿದವರು ಮೂಲಭೂತವಾದಿ ಚಿಂತನೆಗಳನ್ನು ಹೇರುತ್ತಿರುವ ಈಗಿನ ಸನ್ನಿವೇಶದಲ್ಲಿ, ಪುಟ್ಟಸ್ವಾಮಿಯ ಈ ಮೇಲಿನ ಮಾತು, ಆ ಮತೀಯವಾದಿ ಪಾತ್ರಧಾರಿಗಳ ಅಸಲಿಯತ್ತನ್ನು ಬಯಲು ಮಾಡುವಷ್ಟು ಶಕ್ತಿಯನ್ನು ಹೊಂದಿದೆ.

ಒಂದು ನಿರ್ದಿಷ್ಟ ಕ್ರಿಯೆಗೆ ಪ್ರತಿಕ್ರಿಯೆ ನೀಡಲಷ್ಟೇ ಪ್ರತಿರೋಧವು ಸೀಮಿತಗೊಳ್ಳಬಾರದು. ಅದು, ಮೂಲಕ್ರಿಯೆಯೊಂದನ್ನು ಉದ್ದೀಪಿಸಬೇಕು. ಈ ಉದ್ದೀಪನವನ್ನು ನಾವು ಪುಟ್ಟಸ್ವಾಮಿಯಲ್ಲಿ ಕಾಣಬಹುದು. ತನ್ನ ಕಾಲಮಾನದಲ್ಲಿ ದಲಿತರು ರಾಜಕೀಯದಲ್ಲಿ ಪಾಲ್ಗೊಳ್ಳುವುದು, ಅಧಿಕಾರ ಪಡೆಯುವುದು ಎಷ್ಟು ಮುಖ್ಯವೆಂದು ಅರಿತಿದ್ದ ಪುಟ್ಟಸ್ವಾಮಿ, ಹೊನ್ನಣ್ಣನಂಥಾ ರಾಜಕೀಯ ಮುತ್ಸದ್ದಿಯನ್ನು ಬೆಳೆಸುತ್ತಾನೆ. ಮಂಡ್ಯ ನಗರ ಸೇರಿದ್ದ ಕೆಲವು ದಲಿತರನ್ನು ಸ್ವತಂತ್ರಪಾಳ್ಯದಲ್ಲಿ ತಳವೂರಲು ಹೋರಾಡುತ್ತಾನೆ. ತನ್ನನ್ನು ನಂಬಿ ಬಂದ ಅಸಹಾಯಕರ ಎಷ್ಟೋ ಕೆಲಸಗಳನ್ನು ಮಾಡಿಸಿಕೊಡುವಲ್ಲಿ ಮುತ್ಸದ್ದಿತನ ತೋರಿಸುತ್ತಾನೆ. ಇಂಥಾ ಕ್ರಿಯೆಗಳಲ್ಲಿನ ಆಶಯವು, ಕಾಡಕೊತ್ನ ಹಳ್ಳಿಯಲ್ಲಿನ ರಾಕ್ಷಸಮ್ಮನ ದೇವಸ್ಥಾನ ಪ್ರಸಂಗದಲ್ಲಿ ಮತ್ತಷ್ಟು ವಿಸ್ತಾರಗೊಳ್ಳುತ್ತದೆ. ಕೇರಿ ನೆಂಟನೊಬ್ಬ ಗೊತ್ತಿಲ್ಲದೆ ದೇವಸ್ಥಾನ ಪ್ರವೇಶಿಸಿದ್ದಕ್ಕೆ ಊರಿಗೆ ಊರೇ ಕೇರಿ ಜನರನ್ನು ಬಹಿಷ್ಕರಿಸಿದಾಗ ಮರುದಿನ ಹೊತ್ತು ಮೂಡುವ ಮುನ್ನವೇ ದಲಿತನೂ, ನಗರಸಭೆ ಅಧ್ಯಕ್ಷನೂ ಆಗಿದ್ದ ಹೊನ್ನಣ್ಣನ ಜೊತೆ ಸೇರಿ ಸುತ್ತಲೂರಿನ ತನ್ನವರನ್ನೆಲ್ಲ ಒಟ್ಟುಮಾಡುವ ಪುಟ್ಟಸ್ವಾಮಿ, ಒಗ್ಗಟ್ಟಿನಿಂದ ಸಮಸ್ಯೆ ನಿಭಾಯಿಸುತ್ತಾನೆ. ಇಲ್ಲಿ ಅವನ ಆಶಯವು ತನ್ನವರನ್ನು ವಿವೇಕದಿಂದ ಬಿಡಿಸಿಕೊಳ್ಳುವುದಕ್ಕಷ್ಟೇ ನಿಂತಿಲ್ಲ. ಸಾಮಾಜಿಕ ಪರಿವರ್ತನೆ ಕಡೆಗೂ ಅದು, ಬಹಳ ಸುಪ್ತವಾಗಿ ಹಾಗೂ ಅಷ್ಟೇ ತೀವ್ರವಾಗಿ ಚಾಚಿದೆ.

ಅಂಬೇಡ್ಕರ್ ನಂತರದ ರಾಜಕಾರಣದಲ್ಲಿ ದೊಡ್ಡ ಮಟ್ಟಿಗೆ ಯಶಸ್ವಿಯಾದದ್ದು, ಸದ್ದು ಮಾಡಿದ್ದು ದಲಿತ-ಅಲ್ಪಸಂಖ್ಯಾತ ಐಕ್ಯತೆ. ಇದು ಕೇವಲ ರಾಜಕೀಯ ಸಂಕಥನವಾಗಿರಲಿಲ್ಲ, ಮತಬ್ಯಾಂಕ್ ರಾಜಕೀಯವಷ್ಟೇ ಆಗಿರಲಿಲ್ಲ. ನಮ್ಮ ದೇಶದ ಎಷ್ಟೋ ನಗರಗಳಲ್ಲಿ ದಲಿತರೂ, ಬಡ ಧಾರ್ಮಿಕ ಅಲ್ಪಸಂಖ್ಯಾತರೂ ಒಂದೇ ಬಡಾವಣೆಯಲ್ಲಿ ಅಥವಾ, ಅಕ್ಕಪಕ್ಕದ ಬಡಾವಣೆಗಳಲ್ಲಿ ಸೌಹಾರ್ದತೆಯಿಂದ ಬದುಕುತ್ತಿರುವುದನ್ನು ಇಂದಿಗೂ ನಾವು ಕಾಣಬಹುದು. ಇದು, ಆರ್ಥಿಕ ಹಾಗೂ ಬೌತಿಕ ಸ್ಥಿತಿಗತಿಗಳು ಅನಿವಾರ್ಯವಾಗಿಸಿರುವ ಐಕ್ಯತೆ. ಇದರ ಹಿಂದೆ ವರ್ಗಪ್ರಜ್ಞೆಯು ಸೂಕ್ಷ್ಮವಾಗಿ ಕೆಲಸ ಮಾಡುತ್ತದೆ. ಈ ಪ್ರಜ್ಞೆ ಓದಿ ದಕ್ಕುವುದಲ್ಲ, ಅನುಭವಿಸಿ ದಕ್ಕುವುದು. ಮಂಡ್ಯ ಪಟ್ಟಣದಲ್ಲಿ ತನ್ನ ಬದುಕಿನ ಅನುಭವದಿಂದ ಮತ್ತು, ಆ ಕಾಲದಲ್ಲಿ ದಲಿತ ಸಂಘಟನೆಗಳು ನಡೆಸುತ್ತಿದ್ದ ರಾಜಕೀಯದ ಪ್ರಭಾವದಿಂದ ಪುಟ್ಟಸ್ವಾಮಿಯು ದಲಿತ-ಅಲ್ಪಸಂಖ್ಯಾತ ಒಗ್ಗಟ್ಟನ್ನು ಪ್ರತಿಪಾದಿಸುತ್ತಾನೆ. ಅಲ್ಪಸಂಖ್ಯಾತ ಧರ್ಮೀಯರು, ದಲಿತರು ರಾಜಕೀಯ ಪ್ರಾತಿನಿಧ್ಯ ಪಡೆದು, ಆ ಮೂಲಕ ತಮ್ಮ ಬವಣೆಗಳಿಂದ ಬಿಡುಗಡೆಗೊಳ್ಳಬಲ್ಲರು ಎಂದು ನಂಬುತ್ತಾನೆ. ಈ ರಾಜಕೀಯ ಪ್ರಜ್ಞೆಯು ಪುಟ್ಟಸ್ವಾಮಿಯಲ್ಲಿ ಬೆಳೆದು, ಬಲಿತು, ಧರ್ಮದಾಚೆಗೆ ಅರಳಬೇಕಾದ ಮಾನವೀಯ ಸಂಬಂಧವನ್ನು ಕಾಣುತ್ತದೆ. ಅವನ ಆ ಕಾಣ್ಕೆಯ ಮಾತುಗಳು ಹೀಗಿವೆ – ‘ಮನುಷ್ಯ ಮನುಷ್ಯನನ್ನು ಮನುಷ್ಯನನ್ನಾಗಿ ಕಾಣದ ಈ ಧರ್ಮ, ಈ ದೇವ್ರು ಕಟ್ಕಂಡು ಏನು ಪ್ರಯೋಜನ?’ (ಪುಟ ಸಂಖ್ಯೆ 32 )

ಪುಟ್ಟಸ್ವಾಮಿಯ ಈ ಮಾತಿನ ಅರ್ಥವನ್ನೇ ದೇವನೂರು ಮಹಾದೇವ ಅವರ ಈ ಮುಂದಿನ ವಿಷಾದದ ಮಾತು ಬೇರೊಂದು ಶ್ರುತಿಯಲ್ಲಿ ಧ್ವನಿಸುತ್ತದೆ – ‘ಈ ಜಾತಿ ಮತ ಮೇಲು ಕೀಳು ಭಾರತದಲ್ಲಿ ಏನೆಲ್ಲಾ ಆಗಬಹುದು, ಆದರೆ ಕೇವಲ ಮನುಷ್ಯನಾಗುವುದು ಬಲು ಕಷ್ಟ’. (ಎದೆಗೆ ಬಿದ್ದ ಅಕ್ಷರ)

***
02

ಪುಟ್ಟಸ್ವಾಮಿ ಸಮಾಜಮುಖಿಯಾಗಿ ಹಲವು ರೀತಿಗಳಲ್ಲಿ ತೊಡಗಿಸಿಕೊಂಡಿದ್ದರೂ ವೈಯಕ್ತಿಕ ಬದುಕು ಕಿತ್ತುತಿನ್ನುವ ಬಡತನದಿಂದ ಬಸವಳಿದಿತ್ತು. ಏಳು ಮಕ್ಕಳಲ್ಲಿ ಲೇಖಕರನ್ನು ಹೊರತುಪಡಿಸಿ ಉಳಿದವರು ಹೆಣ್ಣು ಮಕ್ಕಳು. ಹಿರಿಯಳಿಗೆ ಬಹಳ ಬೇಗ ಮದುವೆ ಮಾಡುತ್ತಾನಾದರೂ, ಉಳಿದ ಮಕ್ಕಳ ಶಿಕ್ಷಣಕ್ಕಾಗಿ ಊರಗದ್ದೆಯನ್ನೇ ಮಾರುತ್ತಾನೆ. ತನ್ನ ಮಕ್ಕಳು ಶಿಕ್ಷಣ ಪಡೆದು ಹಸನಾದ ಬದುಕು ಕಟ್ಟಿಕೊಳ್ಳಲಿ ಎಂದು ಬಯಸುತ್ತಾನೆ.

“ಅಂಬೇಡ್ಕರ್‍ರು ಚೆನ್ನಾಗಿ ಓದ್ಲಿ ಅಂತ ಅವರ ತಂದೆ ಮಧ್ಯರಾತ್ರೀಲಿ ಅವನನ್ನೆಬ್ಬಿಸಿ, ಇರುದೊಂದು ಕೋಣೇಲೆ ಓದಲು ಕೂರಿಸ್ತಿದ್ದರು, ಎಂದು ಹೇಳಿದ ಮಾತು ನಮ್ಮ ಮನಸ್ಸಿನಲ್ಲಿ ಆಳವಾಗಿ ಕೂತುಬಿಟ್ಟಿತ್ತು. ಅದರಿಂದ್ಲೇ ರಾತ್ರಿ ನಾವು ತಪ್ಪದೆ ಕಯ್ಯಣ್ಣೆ, ಸೊಡ್ಳ ಬೆಳಕಿನ ಸುತ್ತ ಕುಂತು ಓದುತ್ತಿದ್ದೆವು”. (ಪುಟ ಸಂಖ್ಯೆ 28)

ಹೀಗೆ, ಅರಿವಿನೆಡೆಗಿನ ಚಲನೆಯ ಜೊತೆ ಬಡತನದ ತೀವ್ರತೆಯನ್ನೂ ಕಟ್ಟಿಕೊಡುವ ಹಲವು ಘಟನೆಗಳನ್ನು ಈ ಆತ್ಮಕಥನ ಒಳಗೊಂಡಿದೆ. ತಾನು ಅನುಭವಿಸಿದ ಬಡತನ, ಅವಮಾನದ ಯಾತನೆಯನ್ನು ಲೇಖಕರು ಅನುಕಂಪ ಬೇಡುವ ರೀತಿಯಲ್ಲಿಯೂ ಅಥವಾ, ತಣಿಯದ ಆಕ್ರೋಶದಿಂದಲೂ ಚಿತ್ರಿಸುವ ಸಾಧ್ಯತೆ ಇರುತ್ತದೆ. ಆದರೆ, ಆ ಬಡತನ ಹಾಗೂ ಅವಮಾನದಿಂದ ಕೊಂಚಮಟ್ಟಿಗಾದರೂ ಬಿಡುಗಡೆ ಪಡೆದು, ಒಂದು ನೆಮ್ಮದಿಯ ತಾವನ್ನು ಕಂಡ ಲೇಖಕರ ಮನಸ್ಸು, ತನ್ನ ಗತ ಬದುಕನ್ನು ಭಾವಾವೇಶವಿಲ್ಲದೆಯೂ ಚಿತ್ರಿಸಲು ಸಾಧ್ಯ. ಈ ಸಾಧ್ಯತೆಯನ್ನು ಡಿ.ಆರ್.ನಾಗರಾಜ್ ಅವರು ಕವಿ ಡಾ/ಸಿದ್ದಲಿಂಗಯ್ಯನವರ ಆತ್ಮಕಥೆ ‘ಊರುಕೇರಿ’ಯಲ್ಲಿ ಗುರುತಿಸುತ್ತಾರೆ. ಇದರಲ್ಲಿ ಬಡತನ ಮತ್ತು ಹಿಂಸೆಯ ಬಗ್ಗೆ ಭೀತಿಯ ಗೈರು ಹಾಜರಿ ಆಗಿದೆ ಎಂದು ಹೇಳುತ್ತಾರೆ. ಈ ಮಾತು ಆತ್ಮಾನಂದರ ಆತ್ಮಕಥೆಗೂ ಅನ್ವಯವಾಗುತ್ತದೆ. ಆದರೆ, ಈ ಗೈರು ಹಾಜರಿ ಇದ್ದರೂ ಕೂಡ, ಪರಂಪರೆಯೊಂದಿಗೆ ಹಾಗೂ ಬಡತನದೊಂದಿಗೆ ಎರಡು ತಲೆಮಾರುಗಳ ಸಂಘರ್ಷವನ್ನು ವಿವರಿಸುತ್ತ ಕೃತಿಯು, ಅಧಿಕಾರ ಕಾಲಕಾಲಕ್ಕೆ ತನ್ನನ್ನು ನಿರ್ವಚಿಸಿಕೊಂಡು ಬಂದಿರಬಹುದಾದ ಶೋಷಣೆಯ ನಿಡುದಾರಿಯನ್ನು ಕಾಣಿಸುತ್ತದೆ.

ದಲಿತರ ಬದುಕು, ಹೋರಾಟ ಹಾಗೂ ಕಲಾಭಿವ್ಯಕ್ತಿಗಳಲ್ಲಿ ಕೆಲವೊಮ್ಮೆ ಮೂಡುವ ಸಾಂಸ್ಕೃತಿಕ ನಿರ್ವಾತದ ಕುರಿತು ದಲಿತ ಮತ್ತು ದಲಿತೇತರ ಚಿಂತಕರು ಭಾರತಾದ್ಯಂತ ಚರ್ಚಿಸಿದ್ದಾರೆ. ಇದರ ಚರ್ಚೆ ಇಲ್ಲಿಯೂ ಸೂಕ್ತವೆನಿಸುತ್ತದೆ. ತಮ್ಮನ್ನು ಶೋಷಿಸುತ್ತಲೇ ಬಂದ ಸಾಂಸ್ಕೃತಿಕ ಸಂರಚನೆಯನ್ನು ಧಿಕ್ಕರಿಸುತ್ತಲೇ, ತಲೆಮಾರುಗಳಿಂದ ತಮ್ಮ ಬದುಕಿನ ಭಾಗವೇ ಆಗಿದ್ದ ಆಚರಣೆಗಳು, ದೈವಗಳು, ಹಬ್ಬಹರಿದಿನಗಳನ್ನೂ ಧಿಕ್ಕರಿಸಬೇಕೆ? ಇಲ್ಲ, ತಮ್ಮ ಪರಂಪರಾನುಗತ ಆಚರಣೆಗಳಲ್ಲಿರುವ ಶೋಷಕಾಂಶಗಳನ್ನು ಕೈಬಿಟ್ಟು ನವ-ದಲಿತ ಸಂಸ್ಕೃತಿಯನ್ನು ಕಟ್ಟಬೇಕೆ? ಅಥವಾ, ಸಂಪೂರ್ಣವಾಗಿ ಹೊಸ ಸಂರಚನೆಯನ್ನೇ ಕಟ್ಟಿ ಬೆಳೆಸಬೇಕೆ?

ಅಂಬೇಡ್ಕರರ ಸನಾತನ ಹಿಂದೂಧರ್ಮದ ಕಟುವಿರೋಧಿ ನೆಲೆಯನ್ನೇ ತನ್ನದಾಗಿಸಿಕೊಂಡ ಪುಟ್ಟಸ್ವಾಮಿ, ಪರ್ಯಾಯವಾಗಿ ಒಪ್ಪಿದ್ದು ಬೌದ್ಧಧರ್ಮವನ್ನು. ಆದರೆ, ಅದು ಅವನ ಬದುಕಿನಲ್ಲಿ ತಳವೂರಿದ ಬಗ್ಗೆ ಯಾವುದೇ ನಿದರ್ಶನಗಳು ಆತ್ಮಕಥನದಲ್ಲಿ ಕಂಡುಬರುವುದಿಲ್ಲ. ಬುದ್ಧ ಪೂರ್ಣಿಮೆಯ ಆಚರಣೆಯ ಮಟ್ಟಕ್ಕಷ್ಟೇ ಆ ಪರ್ಯಾಯಾಲಿಂಗನ ಸೀಮಿತವಾಗಿದೆ. ಬೌದ್ಧ ಧರ್ಮವು ತನ್ನ ಸಾಂಸ್ಕೃತಿಕ ಪ್ರಜ್ಞೆಯನ್ನು ಆವರಿಸಿದಂತೆ ಕಂಡುಬರುವುದಿಲ್ಲ. ಇನ್ನು, ತಾನು ಅನುಸರಿಸಿಕೊಂಡುಬಂದಿದ್ದ ದಾಸವೃತ್ತಿಯನ್ನೇ ಪುಟ್ಟಸ್ವಾಮಿ ಕೈಬಿಡುತ್ತಾನೆ. ತನ್ನ ನಡುವೆ ಇದ್ದ, ದಲಿತ ಅಸ್ಮಿತೆಯ ದೇಸಿ ಪರಂಪರೆಯ ಸಿದ್ಧಾರೂಢರ ಗದ್ದುಗೆಯ ಶಿಷ್ಯರನ್ನೂ ವಿಡಂಬಿಸುತ್ತಾನೆ. ಇಲ್ಲಿ ಗಮನಿಸಬೇಕಾದ ವಿಚಾರವೆಂದರೆ, ಪ್ರಧಾನ ಸಂಸ್ಕೃತಿಯೊಂದಿಗಿನ ನಂಟು ಬಯಸದ ಪುಟ್ಟಸ್ವಾಮಿ, ಅಧೀನ-ದೇಸಿ ಸಂಸ್ಕೃತಿಯನ್ನು ಕಾಪಿಟ್ಟುಕೊಳ್ಳಬೇಕಾದ ಇಲ್ಲ, ನವೀಕರಿಸಬೇಕಾದ ಮಹತ್ವವನ್ನು ಅರಿಯದಾಗಿದ್ದಾನೆ. ಹಾಗಾಗಿ ಅವನಲ್ಲಿ ಸಾಂಸ್ಕೃತಿಕ ನಿರ್ವಾತ ಆವರಿಸುತ್ತದೆ. ಜೊತೆಯಾಗಿದ್ದ ಆಚರಣೆಗಳನ್ನೂ ಕೈಬಿಡುವ ಮೂಲಕ ತೋರಿದ ಪ್ರತಿರೋಧವು ಪರ್ಯಾಯವನ್ನು ಅರಸದೆ, ಮನುಷ್ಯನ ಸಾಂಸ್ಕೃತಿಕ ಬದುಕನ್ನು ನಿರ್ವಾತ ಸ್ಥಿತಿಗೆ ದೂಡುತ್ತದೆ. ನಂಬಿಕೆ, ಆಚರಣೆ, ಆಹಾರ ಕ್ರಮ ಮುಂತಾದವು ಅಷ್ಟು ಸುಲಭಕ್ಕೆ ಬದಲಾಗುವಂಥವುಗಳಲ್ಲ!

ಪುಟ್ಟಸ್ವಾಮಿ, ಅವನ ಹೆಂಡತಿ ಮತ್ತು ಮಕ್ಕಳ ನಡುವಿನ ಬಾಂಧವ್ಯದಲ್ಲಿನ ಬಿರುಕು ಸಾಂಸ್ಕೃತಿಕ ನಿರ್ವಾತಕ್ಕೆ ನಿದರ್ಶನವಾಗಿದೆ. ಏಕೆಂದರೆ, ಸಂಸ್ಕೃತಿ ವಿವರಣೆಯು ಕೌಟುಂಬಿಕ ಮೌಲ್ಯಗಳನ್ನು ಕೂಡ ಒಳಗೊಂಡಿರುತ್ತದೆ. ಈ ಬಿರುಕಿನ ಚಿತ್ರಣವು, ಸಂಬಂಧಗಳನ್ನು ಒಟ್ಟಾಗಿ ಬೆಸೆಯುವ ಸತ್ವಯುತ ಬೆಸುಗೆ ಯಾವುದೆಂದು ಕಂಡುಕೊಳ್ಳಲು ಓದುಗರನ್ನು ಒತ್ತಾಯಿಸುತ್ತದೆ. ಯಾವ ಮಕ್ಕಳ ವಿದ್ಯಾಭ್ಯಾಸಕ್ಕೆ ಶ್ರಮಪಟ್ಟನೋ, ಆ ಶ್ರಮವು ಗುರಿ ತಲುಪುವ ಪ್ರಗತಿಯ ಬಾಣವೆಂದು ಭಾವಿಸಿ ಯಾರಿಗಾಗಿ ದುಡಿದನೋ, ಅದೇ ಮಕ್ಕಳು ರೆಕ್ಕೆಪುಕ್ಕ ಬಲಿತೊಡನೆ ಅವನಿಂದ ದೂರಾಗುತ್ತಾರೆ, ಪರಸ್ಪರ ಕಚ್ಚಾಡುತ್ತಾರೆ. ಪುಟ್ಟಸ್ವಾಮಿಯನ್ನು ಎಂದೂ ಬಿಟ್ಟಿರದ ಹೆಂಡತಿಯೂ, ಮಕ್ಕಳ ಸಲುವಾಗಿ ಅವನಿಂದ ದೂರಾಗುತ್ತಾಳೆ. ಆತನ ದಾಂಪತ್ಯ, ಮಕ್ಕಳ ಅಂಕೆಗೆ ಸಿಕ್ಕು ಛಿದ್ರವಾಗುತ್ತದೆ. ಕೈಹಿಡಿದ ಮಗನ ಮನೆಯಲ್ಲಿ ತನ್ನ ವೃದ್ಧಾಪ್ಯ ದೂಡುತ್ತಾನೆ.

ಮೂರನೆಯ ತಲೆಮಾರಿನವರಾದ ಲೇಖಕರು ತಮ್ಮ ನೆನಪಿನ ಬುತ್ತಿಯನ್ನು ಬಿಚ್ಚಿಡುತ್ತ ತನ್ನ ಕುಟುಂಬವನ್ನು ಆಪ್ತವಾಗಿ ಚಿತ್ರಿಸುತ್ತಾರೆ. ದೊಡ್ಡಮ್ಮಂದಿರ ನೆನಪುಗಳ ಮೂಸೆಯಿಂದ ಮಾರನೋಮಿ ಹಬ್ಬದ ವಿವರಣೆಯನ್ನು ನೀಡುತ್ತಾರೆ. ಕಿತ್ತು ತಿನ್ನುವ ಬಡತನದ ನಡುವೆಯೂ ಅವ್ವನ ಜೊತೆ ಗುರುಬೋಧನೆಯವರ ಕೂಡಿ ಬೆಳಕು ಹರಿಯುವ ತನಕ ತತ್ವ ಪದಹಾಡಿ ಬರುತ್ತಿದ್ದದ್ದು, ಕೊಮ್ಮೇರಳ್ಳಿ ಹತ್ರದ ನರಸಿಂಹ ಸ್ವಾಮಿ ಬೆಟ್ಟಹತ್ತಿದರೂ ದೇವಾಲಯದ ಗರುಡಗಂಬ ದಾಟದ ಅಮ್ಮ; ಹೀಗೆ ಹಲವು ಘಟನೆಗಳು ಲೇಖಕರ ನೆನಪಲ್ಲಿ ಅಚ್ಚಳಿಯದೆ ಊರಿವೆ. ಕುಟುಂಬದ ಇಂಥಾ ಹಲವು ನೆನಪುಗಳಲ್ಲಿ ಕಾಣಸಿಗುವ ಬಾಂಧವ್ಯವು, ಆನಂತರದಲ್ಲಿ ಕಣ್ಮರೆಯಾದದ್ದಕ್ಕೆ ಏನು ಕಾರಣ?

ಇನ್ನು, ಪುಟ್ಟಸ್ವಾಮಿ ಹಲವರೊಂದಿಗೆ ಧರ್ಮ ಜಿಜ್ಞಾಸೆಯಲ್ಲಿ ತೊಡಗುತ್ತಾನೆ. ದಲಿತರಿಗೆ ಶಾಪವಾಗಿದ್ದ ಪ್ರಧಾನ ಸಂಸ್ಕೃತಿಯನ್ನು ಶೋಧಿಸುತ್ತಾನೆ, ಖಂಡಿಸುತ್ತಾನೆ ಮತ್ತು, ನಿರಾಕರಿಸುತ್ತಾನೆ. ಧರ್ಮದ ಚೌಕಟ್ಟಿನಾಚೆಗೆ ಅವನ ಆಲೋಚನೆಗಳು ಬೆಳೆದಿದ್ದವು. ಅವನ ಈ ಕೆಳಗಿನ ಮಾತುಗಳಲ್ಲದು ಸ್ಪಷ್ಟವಾಗಿದೆ.

“ನಾನು ಸುಳ್ಳು, ನೀನು ಸುಳ್ಳು, ಇಡೀ ಜಗತ್ತೇ ಸುಳ್ಳು.”
“ಅಕ್ಷರ ನನಗೆ ಬಂದಿದ್ರೆ, ಹೊಟ್ಟೆಯೊಳಗಿರುವ ಸತ್ಯವನ್ನೆಲ್ಲ ಬರೆದಿಡುತ್ತಿದ್ದೆ”.
“ಈ ಬಾಡ್ಕ ದೇಹನ ತುಳ್ದು, ಮೂಟೆಕಟ್ಟಿ ಬಿಸಾಡು. ಊದ್ಕಡ್ಡಿನೂ ಹಚ್ಬೇಡ”.
ಆದರೆ ವಾಸ್ತವದಲ್ಲಿ, ಒಂದು ಧರ್ಮದ ಶೋಧನೆ, ಖಂಡನೆಯಷ್ಟೇ ಪರ್ಯಾಯದ ಹವಣಿಕೆಯೂ ಮಹತ್ವದ್ದಾಗಿರುತ್ತದೆ.

ನಗರೀಕರಣ, ಜಾಗತೀಕರಣ ಮತ್ತು ಬಂಡವಾಳಶಾಹಿಯ ಆಟಾಟೋಪದ ಈ ಹೊತ್ತು, ವ್ಯಕ್ತಿಕೇಂದ್ರಿತ, ಸ್ವಾರ್ಥಪ್ರಣೀತ ವರ್ತನೆಗಳಲ್ಲೂ ಇದೇ ರೀತಿಯ ಒಂದು ಸಾಂಸ್ಕೃತಿಕ ನಿರ್ವಾತವನ್ನು ನಾವು ಗುರುತಿಸಬಹುದು. ಈ ಬರಿದನ್ನು ತುಂಬಿಸಿಕೊಳ್ಳಲು, ಸನಾತನ ಸಂಸ್ಕೃತಿಯ ಯಥಾಸ್ಥಿತಿಗೆ ಗಂಟುಬೀಳುವ ಅಪಾಯದ ದಾರಿಗಿಂತ ಭಿನ್ನವಾದದ್ದರ ಶೋಧನೆಯ ಅಗತ್ಯವಿದೆ.

ಉಳಿದಂತೆ ಆತ್ಮಕಥನದಲ್ಲಿ ತೆರೆಮರೆಯಲ್ಲಿ ಉಳಿದ ಹಾಗೆ ಕಾಣಿಸುವ ಸ್ತ್ರೀ ಪಾತ್ರಗಳ ಬವಣೆಯ ಬದುಕಿನ ಚಿತ್ರಗಳು ಹಲವು ಸ್ತರದ ಶೋಷಣೆಯನ್ನು ಬಿಂಬಿಸುತ್ತವೆ. ಆದರೆ, ನುಂಗಿ ನೊಣೆಯುವ ಕಟ್ಟು ಪಾಡುಗಳ ಬಿಗಿತನ ದಲಿತ ಹೆಣ್ಣುಮಕ್ಕಳನ್ನು ಅತಿಯಾಗಿ ಬಾಧಿಸದು. ಅಂದರೆ, ಶಾಸ್ತ್ರೋಕ್ತ ಸಂಪ್ರದಾಯದ ಕಟ್ಟುಪಾಡಿನ ತಿವಿತಕ್ಕೆ ಅವರು ಒಳಪಡರು. ಹೀಗಿದ್ದೂ, ಪುರುಷಾಧಿಕಾರ, ಬಡತನ ಹಾಗೂ ಜಾತಿ ತಾರತಮ್ಯಗಳು ಮುಪ್ಪರಿಗೊಂಡ ಬಹುಸ್ತರೀಯ ಶೋಷಣೆಗೆ ಆ ಸ್ತ್ರೀಪಾತ್ರಗಳು ಒಳಗಾಗುತ್ತವೆ. ನಮ್ಮ ದೇಶದ ಯಾವುದೇ ಜಾತಿಯ ಕುಟುಂಬ ವ್ಯವಸ್ಥೆಯನ್ನು ಸುಸ್ಥಿರವಾಗಿಡುವಲ್ಲಿ ಹೆಣ್ಣಿನ ಪಾತ್ರವೇ ಹೆಚ್ಚು ಮಹತ್ವದ್ದು ಎನ್ನುವ ಅನೂಚಾನ ನಂಬಿಕೆಯನ್ನೇ ಈ ಪಾತ್ರಗಳೂ ಹೊಂದಿವೆ. ಶಿಕ್ಷಣ ಪಡೆದ ಹೊಸ ತಲೆಮಾರಿನ ಹೆಣ್ಣುಮಕ್ಕಳ ಮೂಲಕವಾದರೂ ಮಹತ್ತರ ಬದಲಾವಣೆಯ ನಿರೀಕ್ಷೆಯನ್ನು ಈ ಕೃತಿಯು ಹೊಂದಿದೆ. ಜಾತಿ ಅಸಮಾನತೆಯ ವಿರುದ್ಧದ ಹೋರಾಟದಲ್ಲಿ ಲಿಂಗ ಸಮಾನತೆಯ ಮೌಲ್ಯಗಳು ಬೆರೆಯದೇ ಹೋದರೆ, ಆ ಹೋರಾಟ ಕನಸುವ ಹೊಸ ಸಮಾಜವು ಕೂಡ ಮಹಿಳೆಯರ ಪಾಲಿಗೆ ಶೋಚನೀಯವಾಗೇ ಉಳಿಯುವ ಅಪಾಯವಿದೆ.

ಅಕ್ಷರ ಜ್ಞಾನ ಇಲ್ಲದೆ ಹೋದರೂ ಅರಿವಿನ ನಡಿಗೆಯಲ್ಲೇ ಸಾಗಿದ ಪುಟ್ಟಸ್ವಾಮಿ, ದಮನಿತರ ಉದ್ಧಾರಕ್ಕೆ ಎಲ್ಲ ಶೋಷಿತ ಜನರೂ ರಾಜಕೀಯವಾಗಿ ಒಗ್ಗೂಡಬೇಕು ಎಂದು ಬಯಸಿದ. ಆಧುನಿಕತೆಯ ಸಂಕಥನದಲ್ಲಿ ಅಪಾರ ನಿರೀಕ್ಷೆ ಹೊಂದಿದ್ದ ಇವನು, ಮಕ್ಕಳನ್ನು ಸುಶಿಕ್ಷಿತರನ್ನಾಗಿಸಿ ಸಂಭ್ರವಿಸಿದ. ಮಂಡ್ಯನಗರದ ಸ್ವತಂತ್ರಪಾಳ್ಯ ಬಿಟ್ಟು ಹೊರಡುವಾಗ ಆತ ತನ್ನವರನ್ನು ಉದ್ದೇಶಿಸಿ, “ಸಾಕು ಈ ಬವಣೆ. ಮಕ್ಕಳನ್ನಾದರೂ ಸ್ವಾವಲಂಬಿಗಳನ್ನಾಗಿ ಮಾಡಿ” ಎಂದು ತಿಳಿಹೇಳಿ ಬೀಳ್ಕೊಟ್ಟ. ಮೊಮ್ಮಕ್ಕಳ ಕಾಲಕ್ಕೆ ಸಮಾನತೆ ಸಿಕ್ಕರೆ, ಮೀಸಲಾತಿಯನ್ನು ಬಿಟ್ಟುಕೊಡಬೇಕಾದುದರ ಕುರಿತು ಹರಟಿದ. ಈಗ ಆತ ಬದುಕಿದ್ದಿದ್ದರೆ, ಕೋಮುವಾದಿ ಶಕ್ತಿಗಳು ರಾಜಕೀಯವಾಗಿ ಬಲವರ್ಧನೆಗೊಂಡು ದೇಶವನ್ನು ಹಿನ್ನಡೆಸುತ್ತಿರುವುದರ ಬಗ್ಗೆ ಹಾಗೂ ದಲಿತ-ಅಲ್ಪಸಂಖ್ಯಾತ ಒಗ್ಗಟ್ಟು ಮುರಿಯುತ್ತಿರುವುದರ ಬಗ್ಗೆ ಖಂಡಿತ ಕಳವಳಪಡುತ್ತಿದ್ದ. ತನ್ನ ಪ್ರಜ್ಞೆಯನ್ನು ಬೆಳಗಿಸಿದ್ದ ದಲಿತ ಸಂಘಟನೆಗಳು ಇಂದು ಕಸುವು ಕಳೆದುಕೊಂಡು ನಿಷ್ಕ್ರಿಯವಾಗಿರುವುದನ್ನು ನೋಡಿ ದುಃಖಿಸುತ್ತಿದ್ದ.

ಪುಟ್ಟಸ್ವಾಮಿಯ ಹೊರ-ಒಳಬಾಳನ್ನು ಸುಂದರವಾಗಿ ಕೆತ್ತಿರುವ ಆತ್ಮಾನಂದರು ‘ನನ್ನೊಳಗಿನ ಅಪ್ಪ’ ಎಂದು ಬರೆದದ್ದು ಆತ್ಮಕಥನವನ್ನಲ್ಲ. ಬದಲಿಗೆ, ತನ್ನ ತಂದೆಯ ಜೀವನಚರಿತ್ರೆಯನ್ನೇ. ಆಧುನಿಕತೆಯು ಹಲವು ಇತ್ಯಾತ್ಮಕ ಬದಲಾವಣೆಗಳನ್ನು ತಂದಿದೆಯಾದರೂ ಸ್ತ್ರೀ ಅಸಮಾನತೆ ಹಾಗೂ ಜಾತೀಯತೆಯ ಶೋಷಣೆಗಳನ್ನು ಹೋಗಲಾಡಿಸುವಲ್ಲಿ ಸೋತಿದೆ. ಬಂಡವಾಳಶಾಹಿ ಆಧುನಿಕತೆಯ ಕೂಸಾದ ಜಾಗತೀಕರಣವು, ಜನ ಸಾಮಾನ್ಯರ ಪ್ರತಿಭಟನೆಯನ್ನು ಜಗತ್-ಜಾಹೀರು ಮಾಡಿ, ವಿಶ್ವದ ಗಮನ ಸೆಳೆಯಬಹುದು. ಸೆಳೆದಷ್ಟೇ ವೇಗವಾಗಿ ಗಮನ ಬೇರೆಡೆಗೆ ಹೋಗುವಂತೆಯೂ ಮಾಡಬಹುದು. ಸಾಮಾಜಿಕ ಅನ್ಯಾಯಕ್ಕೊಳಗಾದವರಿಗೆ ನ್ಯಾಯ ಒದಗಿಸುವ ಯಾವ ಖಾತ್ರಿಯನ್ನೂ ಜಾಗತೀಕರಣ ನೀಡುವುದಿಲ್ಲ. ಇನ್ನು, ಯಾವ ಪ್ರತ್ಯೇಕೀಕರಣದಿಂದ ಬಿಡಿಸಿಕೊಳ್ಳಲು ಪುಟ್ಟಸ್ವಾಮಿಯಂಥ ದಲಿತರು ನಗರಗಳಿಗೆ ವಲಸೆ ಬಂದರೋ ಅದೇ ನಗರಗಳಲ್ಲೂ ಮುಂದುವರಿದಿದೆ. ಈ ವಿಷಯದ ಕುರಿತು ಉನ್ನತ ಮಟ್ಟದ ಸಂಶೋಧನೆಗಳು ಇತ್ತೀಚಿಗೆ ನಡೆದಿವೆ. ಹಾಗಾಗಿ, ಸಮಾಜದ ರಚನೆಯನ್ನು ವಿಮರ್ಶಿಸಿದಷ್ಟೇ ತೀವ್ರವಾಗಿ ಅಧಿಕಾರ, ಆರ್ಥಿಕತೆ, ಸಂಸ್ಕೃತಿ, ಆಧುನಿಕತೆ, ಅಧ್ಯಾತ್ಮಗಳನ್ನೂ ಒಳಗೊಂಡ ಬದುಕಿನ ಎಲ್ಲ ಅವಯವಗಳನ್ನು ಬಿಡಿಬಿಡಿಯಾಗಿ ಮತ್ತು ಸಮಗ್ರವಾಗಿ ವಿಶ್ಲೇಷಿಸಬೇಕಾದ ತುರ್ತು ಇಂದು ನಮ್ಮನಿಮ್ಮೆಲ್ಲರ ಮುಂದಿದೆ.

ನನ್ನೊಳಗಿನ ಅಪ್ಪ ಪುಸ್ತಕದ ಕುರಿತ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ

MORE FEATURES

ಎತ್ತಿಕೊಂಡವರ ಕೂಸು 'ದೇವರಿಗೆ ಜ್ವರ ಬಂದಾಗ' ಕಥಾಸಂಕಲನ

18-04-2024 ಬೆಂಗಳೂರು

'ಮಕ್ಕಳ ಕಥೆಯನ್ನು ಹೆಣೆಯುವುದೆಂದರೆ ಅದೊಂದು ತಪಸ್ಸು ಮತ್ತು ಗಿಜುಗನ ನೇಯ್ಗೆ ಕಾರ್ಯದಂತಹ ಕ್ಷಮತೆ ಅವಶ್ಯಕತೆ ಇದ್ದು...

ಇತ್ತೀಚೆಗೆ ಮನುಷ್ಯನು ಬಹಳಷ್ಟು ಸ್ವಾರ್ಥಿಯಾಗುತ್ತಿದ್ದಾನೆ: ಜಿ.ಎಸ್. ಗೋನಾಳ

18-04-2024 ಬೆಂಗಳೂರು

'ಭೂಮಿ, ಆಕಾಶ, ಸೂರ್ಯ, ಚಂದ್ರ, ಗಾಳಿ, ಬೆಳಕು, ನೀರು, ಗಿಡಮರಗಳು, ಪ್ರಾಣಿ, ಪಕ್ಷಿಗಳ ನಿಸ್ವಾರ್ಥದ ಸೇವೆಯನ್ನು ಮರೆ...

'ಮರ ಬರೆದ ರಂಗೋಲಿಯ ರಂಗಿನೋಕುಳಿ'

18-04-2024 ಬೆಂಗಳೂರು

'ಭಾರತದಲ್ಲಿ ಪ್ರಥಮ ಬಾರಿಗೆ ಹೈಕು ಪರಿಚಯಿಸಿದವರು ಡಾ. ರವೀಂದ್ರನಾಥ್ ಟ್ಯಾಗೋರ್ ರವರು. ಜಪಾನಿನ ಪ್ರಸಿದ್ಧ ಹೈಕು ಕವ...